ಸಾಗರದೊಳಗಿನ ಮಾತು..
ಮುಸ್ಸಂಜೆಯ ಹೊತ್ತು. ತಂಪುಗಾಳಿ ಸುಯ್ಯೆಂದು ಬೀಸುತಿದೆ. ರವಿ ತನ್ನ ದಿನದ ಕೆಲಸಗಳನ್ನು ಮುಗಿಸಿ ವಿಶ್ರಾಂತಿಸಲು ಹೋಗುತ್ತಿರುವೆನೋ ಎಂಬಂತೆ ಪಡುವಣದ ಕಡೆ ಓಡುತ್ತಿರುವನು. ತಿಳಿನೀಲಿ ಸೀರೆಯುಟ್ಟ ಬಾನು ಕಡು ನೀಲನಾಗಿರುವ ಸಾಗರನಕಡೆ ಬಾಗಿ ರಂಗಾಗಿ ನಗುವಂತಿದೆ. ನೋಟ ಚಾಚಿದಷ್ಟೂ ಮುಗಿಯದ ಮರಳರಾಶಿಗಳ ಹೊಂಬಣ್ಣ. ನಿರಂತರ ಕಿವಿಗಪ್ಪಳಿಸುತ್ತಿದ್ದ ಮೊರೆತಗಳ ರಿಂಗಣ. ಇಂತಹ ಆಹ್ಲಾದಕರ ವಾತಾವರಣದಲ್ಲಿ ಮೈಮರೆತಿದ್ದ ನನಗೆ ಬೇಂದ್ರೆಯವರ ಸುಂದರ ಕವನದ ಸಾಲೊಂದು ನೆನಪಾಯಿತು.
ಬಂಗಾರತೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ..
ಕೋಲ್ಮಿಂಚು ಬಳಗ ತೆರೆ ತೆರೆಗಳಾಗಿ ಹರಿಯುವುದು ಪುಟ್ಟ ಪೂರ....
ಬಾಲ್ಯದಿಂದಲೂ ಕಡಲೆಂದರೆ ಅದೇನೋ ಸೆಳೆತ, ಅರಿಯದ ಮೋಹ. ನನ್ನೊಳಗಿನ ನೋವು-ನಲಿವು, ಸುಖ-ದುಃಖ ಗಳಿಗೆ ಮೂಕಸಾಕ್ಷಿಯೋ ಎಂಬಂತೆ, ಸದಾ ಸ್ವಾಗತಕೋರುತ್ತದೆ ನೊರೆಗಳ ನಗೆಯುಕ್ಕಿಸಿ . ಹಾಗಾಗಿಯೇ ಎಂದು ಬಂದರೂ ನನಗೆ ನವ ನವೀನ, ನೂತನ ಈ ಸಾಗರ. ಆದರೆ ಅದೇಕೋ ನಾನೆಂದೂ ನೀರೊಳಗೆ ಇಳಿದಿಲ್ಲ. ಭಯವೆಂದು ಅಲ್ಲ. ಅದಕ್ಕೂ ಜೀವವಿದೆ ಎಂಬ ಭಾವ. ಮೆಟ್ಟಿದರೆ ಅದೆಲ್ಲಿ ನೋಯುವುದೋ ಎಂಬ ಹುಚ್ಚು ಅಂಜಿಕೆ. ದೂರದಿಂದಲೇ ಆರಾಧಿಸುವ ಬಯಕೆ. ಹಾಗೆ ನೋಡಿದರೆ ನಾನು ಎಷ್ಟೋ ಸಲ ಅಂದು ಕೊಂಡದ್ದಿದೆ.. ಆಹಾ! ನಾನು ಸಾಗರವಾಗ ಬೇಕಿತ್ತೆಂದು.. ಈ ಬದುಕಿನ ಜಂಜಾಟಗಳಾವುವೂ ಅದಕ್ಕಿಲ್ಲವಲ್ಲವೆಂದು.
ಎಲ್ಲಾ ಕಡಲು ತಡಿಗಳೂ ಸುಂದರವೇ. ಆದರೆ ಸಸಿಹಿತ್ಲು ವಿನಲ್ಲಿರುವ ಕಡಲತಡಿ ನನಗೆ ಸದಾ ಮುದನೀಡಿದೆ. ಮುಕ್ಕದಿಂದ ಸುಮಾರು ಒಂದೂವರೆ ಕಿ.ಮೀ. ದೂರ ಸಾಗಿದರೆ ಸಿಗುವುದು ಈ ತಾಣ. ತಣ್ಣರು ಬಾವಿ, ಪೆಣಂಬೂರು ಮುಂತಾದ ಕಡೆಯೆಲ್ಲಾ ಅಪಾರ ಜನಜಂಗುಳಿ. ಇಲ್ಲಿಯಾದರೋ ಒಂಟಿಯಾಗಿ ಕುಳಿತುಕೊಳ್ಳಲು ತಾಣ ಹುಡುಕಿದರೆ ಸಿಕ್ಕುವುದು. ಹಾಗಾಗಿಯೇ ಇಲ್ಲಿಗೆ ಅದಾಗಲೆಲ್ಲಾ ಭೇಟಿ ನೀಡುತ್ತಿರುತ್ತೇನೆ. ಅಂದೂ ಹಾಗೆಯೇ ಥಟ್ಟೆಂದು ಹೊರೆಟೇ ಬಿಟ್ಟೆ ನನ್ನ ಪ್ರಿಯ ಸಾಗರನ ಕಾಣಲು. ಒಂಟಿಯಾಗಿರಲು ಬೇಕಾದ ಸೂಕ್ತ ಜಾಗವೊಂದನ್ನು ಆರಿಸಿ ಕುಳಿತೆ. ಕಣ್ಮುಂದಿನ ಅಪಾರ ಜಲರಾಶಿಯನ್ನು ಹಾಗೆಯೇ ಕಣ್ತುಂಬಿಕೊಂಡು ಮೈಮರೆತಿರಲು ಕೇಳಿಬಂತು ಆ ಕರೆ...
"ಗೆಳತಿ.. ಕುಶಲವೇ?" ಚಕಿತಳಾಗಿ ನಾನು ಕಣ್ತೆರೆದು ನೋಡಿದರೆ ಹತ್ತಿರದಲ್ಲೆಲ್ಲೂ ಯಾರ ಸುಳಿವೂ ಕಾಣದು. ಎಲ್ಲೋ ನನ್ನ ಭ್ರಮೆಯಿರಬೇಕೆಂದು ಮತ್ತೆ ಕಣ್ಮುಚ್ಚಿದರೆ ಅದೇ ಕರೆ ಮತ್ತೆ ಕೇಳಿ ಬಂತು."ಗೆಳತಿ... ಸೌಖ್ಯವೇ? ನನ್ನ ಗುರುತೇ ಸಿಗಲಿಲ್ಲವೇ?!" ಈಗ ಮಾತ್ರ ನಿಜಕ್ಕೂ ಸ್ವಲ್ಪ ಭಯವಾಗತೊಡಗಿತು. ಪ್ರೇತಚೇಷ್ಟೆಯೇ ಎಂದು. ಆದರೂ ವೈದಿಕ ಮನೆತನದವಳಾದ ನಾನು ತುಸು ಧೈರ್ಯಮಾಡಿಕೊಂಡು ಗಟ್ಟಿಯಾಗಿ ಕೇಳಿದೆ.. ಯಾರದು?! ಯಾರು ಕರೆಯುತ್ತಿರುವುದು?! ಎಂದು ಅತ್ತಿತ್ತ ನೋಡತೊಡಗಿದೆ."ಸಖಿ ಹೆದರದಿರು..ನಾನು ನಿನ್ನ ಪ್ರಿಯ ಸಾಗರ. ಅದೆಷ್ಟೋ ವರುಷಗಳಿಂದ ನೀನು ನನ್ನ ಆರಾಧಿಸಿರುವೆ, ನಿನ್ನ ನಲಿವು-ನೋವುಗಳನ್ನು ನನ್ನೊಡನೆ ಹಂಚಿಕೊಂಡಿರುವೆ, ನಿನ್ನೊಳಗೆ ನನ್ನ ತುಂಬಿಕೊಂಡು ಸಂತಸ ಪಟ್ಟಿರುವೆ, ನನ್ನ ಕವನ-ಕತೆಯನ್ನಾಗಿಸಿ ಕೊಂಡಾಡಿರುವೆ. ಅದಕ್ಕೆಂದೇ ನಾನು ಇಂದು ನಿನ್ನ ಬಳಿ ಕೆಲಹೊತ್ತು ಕಳೆದು ಕುಶಲೋಪಚರಿ ಮಾತಾಡಲು ಬಂದೆ..ಗುರುತಾಯ್ತೇ ಈಗ" ಎಂಬ ಮೃದುವಾಣಿಯೊಂದು ನೀರಲೆಗಳ ಜೊತೆ ತೇಲಿ ಬರಲು ಖಾತ್ರಿಯಾಯಿತು, ಇದು ಸಾಗರದೊಳಗಿನ ಮಾತೆಂದು!"ಸಂತೋಷ ಸಾಗರ ..ಸ್ವಾಗತವಿದೆ ನಿನಗೆ. ನಾನು ಕ್ಷೇಮ. ನಿನ್ನ ಕುರಿತು ಹೇಳು? ಹೇಗಿರುವೆ?" ಎಂದೆ."ಇತ್ತಿಚಿನ ಮಾಲಿನ್ಯಗಳಿಂದಾಗಿ ತುಸು ಸೊರಗಿರುವೆ, ಬಿಟ್ಟರೆ ನಾನದೇ ಸಾಗರ, ಸದಾ ನಿರುಮ್ಮಳ, ವಿಶಾಲ ಹಾಗೂ ಗಂಭೀರ". ಸಾಗರನ ಮಾತುಕೇಳಿ ನಗು ಬಂತು.
----
"ಸಾಗರ ನಿನ್ನ ನೋಡಿದರೆ ನನಗೆ ಕೆಲವೊಮ್ಮೆ ಹೊಟ್ಟಯುರಿಯುತ್ತದೆ. ಅದೆಷ್ಟು ಜನ ನಿನ್ನ ನೋಡ ಬಯಸುವರು, ನಿನಗಾಗಿ ದೂರದೂರುಗಳಿಂದ ಓಡಿ ಬರುವರು, ನಿನ್ನೊಡನೆ ಆಡುವರು! ನೀನೇ ಧನ್ಯ ಬಿಡು. ಪರಮ ಸುಖಿ. ಒಮ್ಮೊಮ್ಮೆ ನಾನು ನೀನೇ ಆಗಬಾರದಿತ್ತೇ ಎಂದೆನಿಸುತ್ತದೆ. ಆಗ ಈ ಬದುಕು ಬವಣೆಯಿಲ್ಲದೆ ನಿನ್ನಂತೆ ಹಾಯಾಗಿರಬಹುದು" ಎಂದೆ. "ನಿಜ ಹುಡುಗಿ, ಜನಸಾಗರವೇ ಬರುತ್ತದೆ ನನ್ನ ದರ್ಶನಕ್ಕೆ, ನನ್ನೊಳಗೆ ಮುಳುಗೇಳುವುದಕ್ಕೆ, ನನ್ನೊಡನೆ ಕುಣಿದಾಡುವುದಕ್ಕೆ, ಮುಂದೆ ಕುಳಿತು ಅಳುವುದಕ್ಕೆ, ಬಿದ್ದು ಸಾಯುವುದಕ್ಕೆ..ಎಲ್ಲಾ ರೀತಿಯ ಜನ ಬರುತ್ತಲೇ ಇರುತ್ತಾರೆ. ಆದರೆ ಮನುಷ್ಯನ ಬದುಕು ನನ್ನ ಬದುಕಿಗಿಂತ ಭಿನ್ನವೇನಲ್ಲ. ನನ್ನ ಕಾಣಲು ಬರುವವರಾರೂ ನನ್ನ ನಿಗೂಢತೆಯನ್ನರಿಯುವುದಿಲ್ಲ. ನನ್ನಿಂದೇನೂ ಕಲಿಯುವುದಿಲ್ಲ. ಈ ಸಾಗರನಿಂದ ಪಾಠವ ಕಲಿತು ತಿದ್ದಿಕೊಂಡವರೆಷ್ಟು ಹೇಳು?ಅದೇ ಬಲು ಬೇಸರ" ನನಗೆ ಎಂದ ಸಾಗರದ ಮಾತು ಕೇಳಿ ನನಗೆ ಬಲು ಆಶ್ಚರ್ಯವಾಯಿತು.
----
"ಎಲೇ ಸಾಗರ ನಿನ್ನ ಮಾತು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬುದ್ಧಿವಂತರಾದ ನಾವು ನಿನ್ನಿಂದೇನು ಕಲಿಯಬೇಕಾಗಿದೆ? ಅಂತಹ ವಿಶೇಷವೇನಿದೆ ನಿನ್ನಲಿ? ಮನುಷ್ಯನಿಗಿರುವ ಯಾವ ಕಷ್ಟ-ಕಾರ್ಪಣ್ಯಗಳಿವೆಯಪ್ಪಾ ನಿನಗೆ? ನಮ್ಮ ಬದುಕಿಗೆ ನಿನ್ನ ಹೋಲಿಸಲು ಹೇಗೆ ಸಾಧ್ಯ?" ನನ್ನೊಳಗಿನ ‘ಅಹಂ’ ಪ್ರೆಶ್ನೆ ಮಾಡಿತು.
----
"ಅಯ್ಯೋ ಹುಚ್ಚಿ ನಿನಗೂ ನಾನು ಅರಿವಾಗಲಿಲ್ಲವೆ? ಒಮ್ಮೆ ನಿನ್ನ ಮನಸ್ಸನ್ನು ವಿಶಾಲವಾಗಿಸಿ ನೋಡು. ..ನಿನಗೇ ತಿಳಿಯುವುದು ನನ್ನೊಳಗೂ ದು:ಖ-ದುಮ್ಮಾನಗಳಿವೆಯೆಂದು. ನೀವೇ ನೀಡಿದ ಮಾಲಿನ್ಯದ ರೋಗವಿದೆ, ಅದರ ನೋವು ಕಣ್ಣೀರಾಗಿ ಹರಿಯುತ್ತಿದೆ. ಕಾಣುವುದಿಲ್ಲವೇ ಉಕ್ಕಿಹರಿಯುತ್ತಿರುವುದು ನನ್ನ ನೀರು ಉಪ್ಪಾಗಿ ನಿನ್ನ ಕಣ್ಣರಿನಂತೆ?ಆದರೂ ನಗುತ್ತಿರುವೆ ಬಿಳಿ ನೊರೆಗಳನ್ನು ಚೆಲ್ಲುತ್ತಾ, ಕಪ್ಪು ತೆರೆಗಳನ್ನು ಮರಳಿಸಿ. ತೀರಸೇರಲು ಅದೆಷ್ಟೋ ವರುಷಗಳಿಂದ ಪ್ರಯತ್ನಿಸುತ್ತಲೇ ಇದ್ದೇನೆ. ಆದರೂ ಸೋಲೊಪ್ಪಿಕೊಳ್ಳದೇ ತೀರ ಸೇರುವ ಯತ್ನವನ್ನೇನೂ ಬಿಟ್ಟಿಲ್ಲ ! ನಿಮ್ಮಂತೆ ನನ್ನ ಬದುಕಿನಲ್ಲೂ ಒಳಿತು-ಕೆಡುಕುಗಳಿವೆ. ನನ್ನ ಗರ್ಭದೊಳಗಡಗಿರುವ ಅಸಂಖ್ಯಾತ ವಿಷಜಂತುಗಳು, ಶಾರ್ಕ್ ಗಳ ಜೊತೆಗೆ ಸುಂದರ ಮುತ್ತು, ಹವಳಗಳಿಲ್ಲವೇ? ನಾನೆಂದೂ ಕೇವಲ ಮುತ್ತು-ಹವಳಗಳನ್ನು ಮಾತ್ರ ಬಯಸಿಲ್ಲ. ಹಾಗೆಯೇ ವಿಷಜಂತುಗಳಿಂದ ನನಗೇನೂ ಅಪಾಯವಾಗದಂತೆಯೂ ನೋಡಿಕೊಳ್ಳುತ್ತಿರುವೆ. ಸುನಾಮಿ, ಚಂಡಮಾರುತ, ಸುಳಿಗಳಿಂದಾಗಿ ಅದೆಷ್ಟು ಹಡಗುಗಳು, ದೋಣಿಗಳು ಮುಳಿಗಿಲ್ಲ. ಆ ದುಃಖಗಳನ್ನೆಲ್ಲಾ ಮೆಟ್ಟಿಯೂ ನಾನು ಭೋರ್ಗರೆಯುವುದಿಲ್ಲವೆ? ಹಲವಾರು ನದಿಗಳು ನನ್ನ ಸೇರಿ ಬೆರೆವಂತೆ, ಹತ್ತು ಹಲವು ಭಾವನೆಗಳು ನಿನ್ನ ಮನ ಮುಟ್ಟಿ ಒಳಸೇರುವುದಿಲ್ಲವೇ? ಒಮ್ಮೆ ನಿನ್ನ ಮನಸ್ಸಿನ ನಿಗೂಢತೆಯನ್ನು, ಪ್ರಶಾಂತತೆಯನ್ನು, ಬಿರುಗಾಳಿಯನ್ನು ನನ್ನೊಡಲಿಗೆ ಹೋಲಿಸಿ ನೋಡು, ಆಗ ನೀನೇ ಹೇಳುವೆ ನಾನು-ನೀನು ಬೇರೆಯಲ್ಲಾ. ಆದರೆ ಪ್ರಿಯ ಸಖಿ ನೀನು ನಿನ್ನೊಳಗಿನ ಭಾವನೆಗಳೊಳಗೆ ಮುಳುಗಿ ಕಳೆದುಹೋಗುವೆ, ನಾನಾದರೋ ಎಲ್ಲವನ್ನೂ ನನ್ನೊಳಗೆ ಎಳೆದುಕೊಂಡೂ ನಾನಾಗಿಯೇ ಉಳಿಯುವೆ. ನನಗೆ ಕೊನೆಯೂ ಇಲ್ಲ, ಮೊದಲೂ ಇಲ್ಲ. ಆದ್ಯಂತ ರಹಿತ ನಾನು ನಿನ್ನೊಳಗಿನ ಆತ್ಮದಂತೆ. ಕಾಲ ಚಕ್ರ ನಿಮ್ಮಂತೆ ನನಗೂ ಬಾಧಿತ.ಆದರೆ ನಾನು ಆತನ ಬಂಧಿಯಲ್ಲ. ನಿನಗೇಕೆ ಕಾಲನಗೊಡವೆ? ಇಂದಿನ ದಿನ ನಿನ್ನದು. ನಾಳೆಯನ್ನು ಯಾರೂ ಬಲ್ಲವರಲ್ಲ.
----
ಗೆಳತಿ ನೀನೂ ನನ್ನಂತೆ ನೀನು ನೀನಾಗಿಯೇ ಯಾಕಿರಬಾರದು? ನಾನಾವ ಬೇಡದ ವಸ್ತುಗಳನ್ನೂ ಇಟ್ಟುಕೊಳ್ಳುವುದಿಲ್ಲ. ನನ್ನದಲ್ಲದ ತ್ಯಾಜ್ಯವಸ್ತುಗಳನ್ನೆಲ್ಲಾ ತತ್ ಕ್ಷಣ ವರ್ಜಿಸಿ ಬಿಡುವೆ ಸದಾ ಅಣಕಿಸಿ ನಗುವ ಈ ತೀರಕ್ಕೆ. ನಿರಾಳನಾಗುವೆ, ಪ್ರಶಾಂತನಾಗುವೆ, ಗಂಭೀರತೆಯಿಂದ ಹಿಂತಿರುಗಿವೆ ಮತ್ತೆ ನನ್ನ ಬದುಕಿಗೆ. ನೀವೇಕೆ ನಿಮಗೆ ಸೇರದ, ನಿಮ್ಮ ಸುಡುವ ಕಾಮನೆ, ಭಾವನೆ, ಆಕಾಂಕ್ಷೆಗಳನ್ನೆಲ್ಲಾ ಹೊರದೂಡಿ ನನ್ನಂತೆ ಆಗಬಾರದು? ಒಮ್ಮೆ ಹಾಗೆ ಮಾಡಿನೋಡಿ ನೀವೂ ಆಗುವಿರೆ ನನ್ನಂತೆ ಸುಂದರ, ವಿಶಾಲ. ಅಗೋ ಅಲ್ಲಿ ಕಾಯುತಿದೆ ನಿನಗಾಗಿ ನಿನ್ನ ಪ್ರಪಂಚ.. ಸಂತೋಷದಿಂದ ಅಪ್ಪಿಕೋ ಅದನ್ನ. ಹಿಂತಿರುಗಿ ನೋಡದಿರು, ಕರುಬದಿರು ನನ್ನ ನೋಡಿ ಇನ್ನೆಂದೂ. ನೀನು ನೀನೇ ಆಗಿರು. ನಾನು ನಾನೇ ಆಗಿರುವೆ. ಇನ್ನಾದರೂ ನಾನು ತೋರಿದ ಈ ಪಾಠವನ್ನು ಮನಗಂಡು ಅಳವಡಿಸಿಕೋ. ಆಗ ನನಗೂ ತೃಪ್ತಿ . ಸರಿ ಸಖಿ ಹೋಗಿಬರುವೆ" ಎಂದು ಹೊರಟೇ ಬಿಟ್ಟ ಸಾಗರದೊಳಗಿನ ಮಾತು ಅಲೆಗಳೊಂದಿಗೆ ಮಾಯವಾಯಿತು.
----
‘ಹೌದಲ್ಲಾ? ನಾವು ನಮ್ಮ ಅಹಂ ನ ಬಿಟ್ಟು ಪ್ರಕೃತಿಯೋಳಗಿರುವ ಬಾಹ್ಯಸೌಂದರ್ಯವನ್ನೊಂದೇ ಕಾಣದೇ, ಅದರೊಳಗಿರುವ ಹೊಸ ಅರ್ಥ,ನೀತಿ-ರೀತಿಗಳನ್ನೂ ಅರಿತು ಅಳವಡಿಸಿಕೊಂಡರೆ ನಮ್ಮ ಬದುಕೆಷ್ಟು ಸರಳ-ಸುಗಮವಾಗುವುದು, ಸಹನೀಯವೆನಿಸುವುದು’ ! ಎಂದೆನಿಸಿತು. ಈಗ ಸಾಗರದ ಕಡೆ ನಾನು ನೋಡುವ ದೃಷ್ಟಿಕೋನವೇ ಬದಲಾಯಿತು. ಥಟ್ಟನೆದ್ದು ವಂದಿಸಿದೆ..ನಾಳೆಬರುವೆನೆಂದು ಹೇಳುತ್ತಿದ್ದ ದಿನಕರನಿಗೆ ಇಂದು ವಿದಾಯ ಹೇಳಲು.
10 ಕಾಮೆಂಟ್ಗಳು:
‘ಹೌದಲ್ಲಾ? ನಾವು ನಮ್ಮ ಅಹಂ ನ ಬಿಟ್ಟು ಪ್ರಕೃತಿಯೋಳಗಿರುವ ಬಾಹ್ಯಸೌಂದರ್ಯವನ್ನೊಂದೇ ಕಾಣದೇ, ಅದರೊಳಗಿರುವ ಹೊಸ ಅರ್ಥ,ನೀತಿ-ರೀತಿಗಳನ್ನೂ ಅರಿತು ಅಳವಡಿಸಿಕೊಂಡರೆ ನಮ್ಮ ಬದುಕೆಷ್ಟು ಸರಳ-ಸುಗಮವಾಗುವುದು, ಸಹನೀಯವೆನಿಸುವುದು’ !
ಇನ್ನೊಮ್ಮೆ ನಮ್ಮೊಳಗೇ ಆಲೊಚಿಸಿಕೊಳ್ಳುವಂತೆ ಮಾಡಿತು..ತುಂಬಾ ಚೆಂದದ ಕಲ್ಪನೆ..:-)
ಸಾಗರಕ್ಕೂ ಜೀವವಿದೆ ಎಂಬ ನಿಮ್ಮ ಕಲ್ಪನೆ ನನಗೆ ಇಷ್ಟವಾಯಿತು. ಸಾಗರದಿಂದ ನಾವು ಏನು ಕಲಿಬಹುದು ಅಂತ ನಿಮ್ಮ ಈ ಸಣ್ಣ ಕಥೆಯಲ್ಲಿ ಹೇಳಿದ್ದೀರ.
ನಿತ್ಯ ನನ್ನ ಕೆಲಸದ ನೆಲೆಯಿ೦ದ ಕಾಣುವ ಸಾಗರನ ಅಲೆಗಳ ನೋಟಕ್ಕ ಇನ್ನು ಹೊಸ ದೃಷ್ಟಿ. ನಿಮ್ಮ ಭಾವನೆಗಳಲೆಯಲಿ ಮಿ೦ದ ಪ್ರಭಾವ!
ಅರುಣ್ ಅವರೆ.. ತುಂಬಾ ಧನ್ಯವಾದಗಳು. ಆಗಾಗ ಬರುತ್ತಿರಿ.
ಜಯಶಂಕರ್ ಅವರೆ ಧನ್ಯವಾದಗಳು ಅಂತೂ ನಿಮಗೊಂದು ಸಣ್ಣಕತೆ ಕೊಟ್ಟ ಖುಶಿ ನನ್ನದಾಯಿತು.:)
ಪಯಣಿಗರೆ..ಧನ್ಯವಾದಗಳು ಇನ್ನೊಮ್ಮೆ ಸಾಗರದ ಕಡೆ ಹೋದಾಗ ಅದನ್ನೊಮ್ಮೆ ಮಾತನಾಡಿಸಿ ನೋಡಿ :)
ಆಹಾ! ಬ್ಲಾಗು ಚೊಲೋ ಆಯ್ದು ಈಗ! ಹೊಸ ವೇಷದೊಡನೆ!:) ಬರಹ ಸೂಪರ್!
ಧನ್ಯವಾದಗಳು ಶ್ರೀನಿಧಿ.. ಸಮಯ ಸಿಕ್ಕಾಗೆಲ್ಲಾ ಬರ್ತಾ ಇರು.
blogalli kathe nodidi. chennagiddu. vimarshe madlu nanage battille asvadhanege addiyilla.kavanagalu best.
ತಮ್ಮ ಪ್ರೋತ್ಸಾಹಕ್ಕೆ...ಧನ್ಯವಾದಗಳು ನಾಗರಾಜ್.
ಭೂಮಿಯ ಬಹು ಪಾಲು ಆವರಿಸಿಹ ಸಾಗರನು ನಮ್ಮ ಅರಿವಿಗೆ ನಿಲುಕದ ವಿಸ್ಮಯನೆ, ನಿಮ್ಮ ಕಲ್ಪನಾ ಲಹರಿ ಚಲೋ ಇದೆ... ಅದರಲ್ಲೂ ಮನಸ್ಸಿನ ಭಾವನೆಗಳ ಜೊತೆಗಿನ ಪರಿಸರ ಮಾಲಿನ್ಯದಂದ ಗಂಭೀರ ವಿಚಾರ. ನನಗೆ ನೆನಪಾದದ್ದು ಕೆ ಎಸ್ ನ ಅವರ ಸಾಲು "ಕಣ್ಣು ಕಪ್ಪೆ ಚಿಪ್ಪಿನಗಲದ ದೋಣಿ ಅದಕೆ ಕಂಡ ನೋಟ ಸಮುದ್ರದಂತ ಪ್ರಾಣಿ".
ಬೆಳಗು!
ನಿಜ, ಸಾಗರ ಯಾರ ಆರಿವಿಗೂ ನಿಲುಕದ ಒಂದು ವಿಸ್ಮಯ ಪ್ರಪಂಚ. ನಿರಂತರ ಮಾಲಿನ್ಯದ ಕೊಡುಗೆಯ ಮೂಲಕ ಭೂಮಿಯ ಸಹನೆಯನ್ನು ಪರೀಕ್ಷಿಸಿ ಬೇಸತ್ತ ಮನುಜ ಈಗ ಸಾಗರದ ತಾಳ್ಮೆಗೆ ಕೈ ಹಕಿರುವ..ಭೂಮಿ ಹೆಣ್ಣು ಹಾಗಾಗಿ ಸಹಿಸಿದಳು, ಸಹಿಸುತ್ತಿರುವಳು... ಆದರೆ ಸಾಗರ?!!!
ಕಾಮೆಂಟ್ ಪೋಸ್ಟ್ ಮಾಡಿ