ಗೋಧೋಳಿ ಸಮಯ ದಾಟಿ ಅದಾಗಲೇ ಮೂರು ತಾಸು ಕಳೆದಿರಬೇಕು. ಎಷ್ಟು ಸಮಯವಾಯಿತೆಂದು ಸ್ವತಃ ಕಾಲನಿಗೂ ಅರಿವಾಗಿರದು. ಮುಂಜಾವು, ನಡು ಮಧ್ಯಾಹ್ನ, ಮುಸ್ಸಂಜೆಯ ಪರಿವಿಲ್ಲದೇ ಅದೆಷ್ಟೋ ಹೊತ್ತಿನಿಂದ ಉತ್ತರಾಭಿಮುಖವಾಗಿದ್ದ ಕಿಟಕಿಯೊಂದಕ್ಕೆ ಆತುಕೊಂಡು ದೂರ ದಿಗಂತದುದ್ದಕ್ಕೂ ದೃಷ್ಟಿ ಹಾಯಿಸುತ್ತಿದ್ದ ಅವನಿಗೆ ಕಾಲನ ಹಂಗೂ ಇರಲಿಲ್ಲ. ಯುಗಗಳನ್ನೆಲ್ಲಾ ಒಂದು ದಿನದೊಳಗೇ ಹಿಡಿದಿಡುವ ಶತಃಪ್ರಯತ್ನದಲ್ಲಿರುವವನಂತೆ, ಮನದೊಳಗೆ ಮೂಡುತ್ತಿರುವ ಸಾವಿರಾರು ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರಿಸಲೇಬೇಕೆಂಬ ಪಣ ತೊಟ್ಟವನಂತೇ, ಸಜೀವ ಶಿಲ್ಪವಾಗಿ ನಿಂತಿದ್ದ. ಅವನ ಚಿತ್ತವೆಲ್ಲಾ ಹಿಂದಿನ ಭೂತ ಹಾಗೂ ಮುಂದಿನ ಭವಿಷ್ಯತ್ತಿನ ಸುತ್ತಲೇ ಸುತ್ತುತ್ತಿತ್ತು. ಸುವಿಶಾಲ ಆ ವಿಶ್ರಾಂತಿ ಭವನದೊಳಗೆ ಆಗೊಮ್ಮೆ ಈಗೊಮ್ಮೆ ಗಾಳಿಯ ರಭಸಕ್ಕೆ ತಟ ಪಟವೆನ್ನುವ ರೇಶಿಮೆ ಪರದೆಗಳ ಸದ್ದೊಂದನ್ನು ಬಿಟ್ಟರೆ ಬೇರೇನೂ ಕೇಳಿಸುತ್ತಿಲ್ಲ. ಒಂದೊಮ್ಮೆ ಕೇಳಿಸಿದ್ದರೂ ಅದು ಅವನ ಯೋಚನಾ ಲಹರಿಯನ್ನು ತುಂಡರಿಸುವಂತಿರಲಿಲ್ಲ!
"ಪ್ರಭು... ದೀಪಗಳನು ಹಚ್ಚುವ ಸಮಯವಾಯಿತು.. ಹಚ್ಚಿಡಲೇ.." ಎಂದು ಸೇವಕನೊಬ್ಬ ತಲೆತಗ್ಗಿಸಿ ತಾಸುಗಟ್ಟಲೇ ಅಪ್ಪಣೆಗೆ ಕಾದಿದ್ದಾಗಲೀ... ಪ್ರಭುಗಳ ಮೌನವನ್ನೇ ಸಮ್ಮತಿ ಎಂದೇ ಭಾವಿಸಿ ಆ ದೊಡ್ಡ ಭವನದ ಕತ್ತಲೆಯನ್ನು ಹೊಡೆದೋಡಿಸಲು ಸಾವಿರ ಹಣತೆ ದೀಪಗಳನ್ನುರಿಸಿ ನಿಶಃಬ್ದವಾಗಿ ಸರಿದದ್ದಾಗಲೀ... ಒಂದೊಂದು ಹಣತೆಯೊಳಗಿಂದೆದ್ದು ಬಂದ ಪ್ರಭೆ ನಿಧಾನವಾಗಿ ತನ್ನ ಗೆಳತಿಯಾದ ನಿಶೆಯನ್ನಪ್ಪಿ ತನ್ನೊಳಗೆ ಸೆಳೆದದ್ದಾಗಲೀ.. ಆಗಾಗ ಪರಿಚಾರಕಿಯರು ಬಂದು ದೀಪಗಳಿಗೆ ಎಣ್ಣೆ ಉಣಬಡಿಸಿದ್ದಾಗಲೀ.... ಊಹೂಂ.. ಒಂದೂ ಆತನ ಅರಿವಿಗೇ ಬಂದಿಲ್ಲ. ತುಂಬಿರುವ ಮನಸಿನಿಂದಾಗಿ ಹೊಟ್ಟೆಯೂ ತುಂಬಿರಬೇಕು... ಬೆಳಗಿನ ಉಪಾಹಾರ, ಮಧ್ಯಾಹ್ನದ ಮೃಷ್ಟಾನ್ನ ಭೋಜನ, ರಾತ್ರಿಯ ಊಟ ಎಲ್ಲವೂ ಅವನಿಗಾಗಿ ಕಾದು ಕಾದು ತಂಪಾಗಿ ಹೋಗಿವೆ. ಚಂದ್ರಮ ಕರಗಿ, ದಿನಕರ ಮೇಲೇರಿ ಬಂದರೂ ಅಲ್ಲೇ ನಿಂತಿರುತ್ತಿದ್ದನೋ ಏನೋ... ಆದರೆ ಅವನ ಏಕಾಗ್ರತೆಯನ್ನೇ ಅದೆಷ್ಟೋ ಹೊತ್ತಿನಿಂದ ವೀಕ್ಷಿಸುತ್ತಿದ್ದ ಉದ್ಯಾನವನದ ಸಾಕು ನವಿಲೊಂದು ಇನ್ನು ತಡೆಯಲಾರೆನೋ ಎಂಬಂತೆ ಹಾರಿ ಬಳಿ ಬಂದು ತನ್ನ ನವಿರಾದ ಗರಿಗಳಿಂದ ಅವನ ಕೆನ್ನೆ ನೇವರಿಸಲು ಒಮ್ಮೆ ಎಚ್ಚೆತ್ತ ಸೌಮಿತ್ರಿ.
ಮುಂಜಾನೆ ಕಿಟಕಿಯ ಬಳಿ ನಿಂತಾಗ ಎಲ್ಲೋ ಒಂದು ಕ್ಷಣ ಗಮನಕ್ಕೆ ಬಂದಿದ್ದ ಶುಭ್ರ ನೀಲಾಗಸದ ಜಾಗದಲ್ಲೀಗ ಬರೀ ಕಗ್ಗತ್ತಲ ಸಾಮ್ರಾಜ್ಯ.... ಅಲ್ಲೊಂದು ಇಲ್ಲೊಂದು ಮಿನುಗುತ್ತಿದ್ದ ಚುಕ್ಕಿಗಳಿಗೆ ಮೋಡದ ಮುಸುಕು ಹೊದ್ದು ಮಲಗಿರುವ ಚಂದಿರನದೇ ನಿರೀಕ್ಷೆ... ತೂಕಡಿಸುವವಗೆ ಜೋಗುಳ ಹಾಡುತ್ತಿದ್ದ ಜೀರುಂಡೆಗಳು.... ಸೋರ್ಯೋದಯದಿಂದ ಸೂರ್ಯಾಸ್ತದವರೆಗೆ ಕಡೆದಿಟ್ಟ ಶಿಲ್ಪದಂತಿದ್ದವಗೆ ನವಿಲ ನೇವರಿಕೆಯಿಂದ ನಿಧಾನವಗಾಗಿ ತನ್ನ ಸುತ್ತಲಿನ ಪರಿಸರದ ಅರಿವುಂಟಾಗತೊಡಗಿತು. ಆವರೆಗಿನ ಮನದೊಳಗಿನ ಹೊಯ್ದಾಟದ ಆಯಾಸ ಅವನ ಮೊಗದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಮುಂದಿದ್ದ ಉದ್ಯಾನವನದೊಳಗಿಂದ ಹೊರಟ ರಾತ್ರಿ ರಾಣಿಯ ಕಂಪು ಕ್ರಮೇಣ ಅವನ ಅನುಭೂತಿಗೆ ಬರಲು, ಮನಸು ತುಸು ಮೆದುವಾದಂತಾಯಿತು. ನಿಟ್ಟುಸಿರೊಂದನ್ನು ಹೊರ ಚೆಲ್ಲಿ, ಪಕ್ಕದಲ್ಲೇ ಕುಳಿತು ತನ್ನ ನೀಳ ಕುತ್ತಿಗೆಯನ್ನಾಡಿಸುತ್ತಿದ್ದ ನವಿಲನ್ನೊಮ್ಮೆ ಪ್ರೀತಿಯಿಂದ ಸವರಿದ. ಅವನ ಸ್ಪರ್ಶಾನುಭೂತಿಯಿಂದ ಕೃತಾರ್ಥನಾದೆ ಎಂಬಂತೆ ಅದೂ ತನ್ನ ಗೂಡಿನೆಡೆ ಹಾರಿತು. ಹಾರಿ ಹೋದ ನವಿಲನ್ನೇ ನೋಡುತ್ತಾ ಮೆಲ್ಲನೆ ತಿರುಗಿದ ಸೌಮಿತ್ರಿಗೆ ಕಂಡಿದ್ದು ನಿರಾಳತೆಯಿಂದ ಬೆಳಗುತ್ತಿರುವ ಸಾವಿರ ಹಣತೆಗಳು. ಅವುಗಳನ್ನು ಹಾಗೇ ಕಣ್ತುಂಬಿಕೊಳ್ಳುತ್ತಿರಲು, ಭವನದ ಬಲ ಮೂಲೆಯ ಹಣತೆಯೊಳಗೆ ಏನೋ ವಿಶಿಷ್ಟತೆ ಕಾಣಲು ಕೂತೂಹಲಿಯಾಗಿ ಅತ್ತ ಸಾಗಿದ. ನೋಡು ನೋಡುತ್ತಿದ್ದಂತೇ ಆ ದೀಪದ ಹಿಂದಿನಿಂದ ಆಕಾರವೊಂದು ಕಾಣಿಸಿದಂತಾಯಿತು. ಕ್ರಮೇಣ ಅದು ಉದ್ದವಾಗಿ ಎದ್ದು ನಿಲ್ಲಲು, ಸಹಜವಾಗಿ ಅವನ ಬಲಗೈ ತನ್ನ ಸೊಂಟದ ಕತ್ತಿಯೆಡೆ ಸಾಗಿತು. ತತ್‌ಕ್ಷಣ ‘ವೀರನಿಗೆ ಆತುರತೆ ಸಲ್ಲ’ ಎಂದು ವಿವೇಕ ಎಚ್ಚರಿಸಲು ನಿಧಾನಿಸಿದ. "ಯಾರಲ್ಲಿ?! ಕತ್ತಲೆಯ ಬಳಸಿ ನನ್ನೊಡನೆ ಆಟವನ್ನಾಡುತ್ತಿರುವವರು? ಶೂರನಿಗೆ ಹೇಡಿತನ ಸಾವಿಗೆ ಸಮಾನ... ಹೇಡಿಯೊಡನೆ ಹೋರಾಡುವುದೂ ಎನಗೆ ಅಪಮಾನ... ನಿಜದಲ್ಲಿ ಧೀರನಾಗಿದ್ದರೆ ಬೆಳಕಿಗೆ ಬರುವಂತವನಾಗು.." ಎಂದು ಅಬ್ಬರಿಸಲು ಆ ಆಕಾರ ನಿಧಾನ ಹೆಜ್ಜೆಯನ್ನಿಡುತ್ತಾ, ಮೆಲ್ಲನೆ ಹೊರಬರಲು ಸೌಮಿತ್ರಿಯೇ ಬೆರಗಾದ.
"ನೀನು.. ನೀನು... ನನ್ನಂತೆಯೇ ಇರುವೆಯಲ್ಲಾ..." ಎಂದವನ ಮಾತನ್ನಲ್ಲೇ ತುಂಡರಿಸಿದ ಆ ಆಕೃತಿ "ಹೌದು ಮಿತ್ರಾ.. ನಾನೇ... ನಿನ್ನೊಳಗಿನ ‘ನಾನು’ ನಿನಗಾಗಿ ಬಂದಿರುವೆ... ಬೆಳಗಿನಿಂದ ನಿನ್ನ ಚಿತ್ತ ಮಾಡಿದ ತಪಸ್ಸಿನ ಫಲ ‘ನಾನು’... ನನ್ನನ್ನು ನಿನ್ನೊಳಗಿನ ಅಂತರಾತ್ಮವೆಂದುಕೋ... ಇಲ್ಲಾ ನಿನ್ನ ಪ್ರತಿಬಿಂಬವೆಂದೇ ಕರೆದುಕೋ... ಪ್ರತಿರೂಪಿ ಎಂದು ಕರೆದರೂ ಸರಿಯೇ... ಆದರೆ ನಾನು ಮಾತ್ರ ನಿನ್ನೊಳಗಿಂದಲೇ ಆವಿರ್ಭವಿಸಿದವನು..." ಎಂದು ನಸುನಗಲು ಸೌಮಿತ್ರಿಯ ಹುಬ್ಬುಗಳು ಗಂಟಾದವು. "ತಮ್ಮನ್ನು ಇಲ್ಲಿ ಕರೆದವರಾರೋ...! ತಮ್ಮ ಆಗಮನದ ಹಿಂದಿನ ಉದ್ದೇಶ?" ಎಂದು ವ್ಯಂಗ್ಯವಾಗಿ, ತುಸು ಗಡುಸಾಗಿ ಕೇಳಲು ಗಹಿ ಗಹಿಸಿ ನಕ್ಕಿತು ಅವನ ಪ್ರತಿರೂಪಿ. "ಅಯ್ಯಾ ಲಕ್ಷ್ಮಣ... ಚೆನ್ನಾಗಿದೆ ನಿನ್ನ ಈ ವರೆಸೆ. ಕಾಲನ ಹಂಗಿಲ್ಲದೇ ನಿಂತಲ್ಲೇ ಶಿಲೆಯಾದ ನೀನು ಈವರೆಗೂ ಮಾಡಿದ್ದೇನು? ಪ್ರತಿ ಉಸಿರಿಗೂಮ್ಮೆ ನನ್ನ ಕರೆದೆ... ನಿನ್ನ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರ ಬಗೆದೆ.... ನಿನ್ನ ಈ ಬೇಗುದಿಯ ನೋಡಲಾಗದೇ ಇದೋ... ನಾನೇ ಸ್ವತಃ ಹೊರ ಬಂದಿರುವೆ... ಹೇಳಿಕೋ ಗೆಳೆಯ ನಿನ್ನ ನೋವಿನ ಕಥೆಯ... ಹಗಲಿರುಳು ಕೊರೆಯುತಿಹ ನಿನ್ನ ಬದುಕಿನ ವ್ಯಥೆಯ.." ಎಂದು ಅಪ್ಯಾಯಮಾನವಗಿ ನುಡಿಯಲು, ಮನದ ಭಾರವನ್ನು ಇನ್ನು ತಡೆಯಲಾರೆನೋ ಎಂಬಂತೇ, ಸೋತು ಅಲ್ಲೇ ಇದ್ದ ಸುಖಾಸೀನದ ಮೇಲೆ ಒರಗಿದ ಲಕ್ಷ್ಮಣ.
"ಬಿಂಬಿ... ಪ್ರತಿಬಿಂಬ.. ಅಂತರಾತ್ಮ.... ಏನೆಂದು ಸಂಬೋಧಿಸಲಿ ನಾನು ನಿನ್ನ? ಅದೇನೇ ಇರಲಿ..ಈ ಹೊತ್ತಿನಲ್ಲಿ ಓರ್ವ ಆಪ್ತನ ಸಾಮೀಪ್ಯದ ಆವಶ್ಯಕತೆಯಿತ್ತು ಎನಗೆ. ಹೋಗಲಿ ಬಿಡು... ಕರೆಯುವುದರಲ್ಲೇನಿದೆ ಅಲ್ಲವೇ? ನನ್ನನ್ನೂ ಅಯೋದ್ಯೆಯ ಪ್ರಜೆಗಳು, ಬಂಧು ಬಾಂಧವರು ಹಲವು ನಾಮಗಳಿಂದ ಕರೆದರು. ಸುಮಿತ್ರೆಯ ಮಗ ಸೌಮಿತ್ರಿಯಾಗಿ, ಲಕ್ಷ್ಮೀ ಸಂಪನ್ನನಾದ ಲಕ್ಷ್ಮಣನಾಗಿ, ಆದಿ ಪುರುಷ ಶ್ರೀರಾಮಚಂದ್ರನ ಪ್ರಿಯ ಸಹೋದರ ಆದಿಶೇಷನಾಗಿ ಎಲ್ಲರಿಗೂ ಚಿರಪರಿಚಿತನಾದೆ... ಆದರೆ..ಆದರೆ... ಅವಳ ಪತಿಯಾಗಿ...ಹಾಂ.... ಇಲ್ಲೇ ಎಲ್ಲೋ ಸೋತೆನೇ?!! ಎಂದವನೊಳಗೆ ಮತ್ತೆ ಅದೇ ಯಾತನೆ.
"ಮಿತ್ರಾ... ಇದರಲ್ಲೇಕೆ ಸಂಶಯ ನಿನಗೆ? ಜಿಜ್ಞಾಸೆಗೆ ಅವಕಶಾವೇ ಇಲ್ಲ ಇಲ್ಲಿ... ನೀನು ಸೌಮಿತ್ರಿ, ಲಕ್ಷ್ಮಣ, ರಾಮನ ಪ್ರಿಯ ಸಹೋದರ ಮಾತ್ರನಲ್ಲ... ಊರ್ಮಿಳೆಯ ಪತಿಯೂ ಹೌದು. ಅದು ದೇವ ನಿರ್ಮಿತ ಬಂಧನ... ಗುರು ಹಿರಿಯರಿಂದ, ಋಷಿ ಮುನಿಗಳಿಂದ ಆರ್ಶೀವಾದ ಪಡೆದು ಕೈ ಹಿಡಿದ ಆಕೆ ನಿನ್ನ ಧರ್ಮಪತ್ನಿಯೆನ್ನುವುದು ಮೂರು ಲೋಕಗಳಿಗೇ ತಿಳಿದಿದೆ. ಅಂತಹುದರಲ್ಲಿ.. ನಿನ್ನೊಳಗೇಕೆ ಈ ಅಪಸಂಶಯವೋ ಕಾಣೆ" ಎನ್ನಲು ಅವನ ಧ್ವನಿಯೊಳಗೆ ಕುಹಕತೆಯನ್ನರಸಿ ಸೋತ ಸೌಮಿತ್ರಿ.
"ಹೂಂ.. ನಿಜ ಆಕೆ ನನ್ನ ಧರ್ಮಪತ್ನಿ. ನಾನು ಊರ್ಮಿಳೆಯ ಪತಿ.. ಆದರೆ ಪತ್ನಿ ಧರ್ಮವನ್ನಾಚರಿಸಿ ಅವಳು ಗೆದ್ದಳೆನ್ನುತ್ತಿರುವ ಈ ಲೋಕ ಪತಿಧರ್ಮವನ್ನು ನಿರ್ವಹಿಸುವಲ್ಲಿ ಸೋತ ನನ್ನ ಸುಮ್ಮನೇ ಬಿಡುವುದೇ? ಊಹೂಂ.... ಈ ನನ್ನ ನೋವಿಗೆ ಮುಕ್ತಿ ಸಿಗಲು ಇನ್ನೆಷ್ಟು ವನವಾಸಗಳನ್ನು ನಾನು ಮಾಡಬೇಕಾಗುವುದೋ ಎಂಬುದೇ ದೊಡ್ಡ ಚಿಂತೆ... ಹೌದು.. ಈಗ ನಿನ್ನ ನಾನೇನೆಂದು ಸಂಬೋಂಧಿಸಲಯ್ಯ? ನಿನ್ನನ್ನು ‘ಸಖ’ ಎಂದೇ ಕರೆದುಬಿಡುವೆನು. ಹಾಂ... ಈ ಹೊತ್ತಿನಲ್ಲೂ ನನ್ನ ಜೊತೆಗಾರನಾಗಿರುವ ನೀನು ನಿಜವಾದ ಸಖನೇ ಅಹುದು.." ಎಂದು ಮತ್ತೆ ಮೌನಿಯಾದನು ಲಕ್ಷ್ಮಣ.
"ಏಕೆ ಮಿತ್ರ ಈ ಮೌನ? ನನ್ನೊಂದಿಗೇಕೆ ಈ ಸಂಕೋಚ? ಹೊತ್ತು ಮೀರಿದರೆ, ಮುತ್ತು ಒಡೆದರೆ ಮತ್ತೆ ಬಾರದಯ್ಯ... ಈ ಒಂದು ಸುಸಮಯದಲ್ಲಿ ನೀನಿರಬೇಕಾಗಿದ್ದ ಜಾಗ ಇದಾಗಿರಲಿಲ್ಲ ಅಲ್ಲವೇ?" ಎಂದವನನ್ನೇ ಪೆಚ್ಚಾಗಿ ನೋಡಿದನು ಲಕ್ಷ್ಮಣ.
"ಹೂಂ.... ಹಾಗೆ ನೋಡ ಹೋದರೆ ನಾನು ಯಾವತ್ತು ಸರಿಯಾದ ಹೊತ್ತಿನಲ್ಲಿ ಸರಿಯಾದ ಜಾಗದಲ್ಲಿದ್ದೆ ಎನ್ನುವುದೇ ಅತಿ ಮಹತ್ವದ ಪ್ರಶ್ನೆ ಸಖ! ಹದಿನಾಲ್ಕು ವರುಷದ ಹಿಂದಿನ ಕಾಲವನ್ನು ನೆನೆಸಿದಾಗಲೆಲ್ಲಾ ಸವೆಸಿದ ಕಾಲದ ಪ್ರತಿ ಎಳ್ಳಷ್ಟೂ ಬೇಸರವಿಲ್ಲ.. ನೋವಿಲ್ಲ.. ಅಣ್ಣಯ್ಯನ ಆಶ್ರಯದಲ್ಲಿ, ಅಭಯದಡಿ, ವಾತ್ಯಲ್ಯದೊಳಗೆ ನಾನು ಸುಖಿಯೇ ಆಗಿದ್ದೆ. ಅತ್ತಿಗಮ್ಮನ ಸ್ನೇಹ, ಮಮತೆಯನ್ನು ಮರೆಯುವುದುಂಟೇ? ಆದರೂ ಸಖ ಇಂದು.... ಈ ದಿನ... ಈ ಕ್ಷಣ ಮಾತ್ರ ಅದೇಕೋ ಎಂತೋ ನನ್ನ ನಿಶ್ಚಲನನ್ನಾಗಿಸಿದೆ... ನಿರುತ್ಸಾಹಿಯನ್ನಾಗಿಸಿದೆ... ಕಾರಣ ಮಾತ್ರ ಅಸ್ಪಷ್ಟ!" ಎಂದವನನ್ನೇ ನೋಡುತ್ತಾ... ಗಹಗಹಿಸಿ ನಗತೊಡಗಿತು ಅವನ ಪ್ರತಿರೂಪ.
"ಏನು? ಕಾರಣ ತಿಳಿಯಲಾರದಷ್ಟು ದಡ್ಡನೇ ನೀನು ಮಿತ್ರ? ಎಲ್ಲವನ್ನೂ ಅರಿತಿರುವ.... ಎಲ್ಲವನೂ ಕಂಡಿರುವ... ನಿನ್ನೊಳಗಿನ ನನಗೇ ಕಪಟವನ್ನಾಡದಿರು... ನಿನ್ನ ಈ ಹೊಯ್ದಾಟಕ್ಕೆ, ತಳಮಳಗಳಿಗೆ, ವಿಮುಖತೆಗೆ ಮೂಲಕಾರಣ ಏನೆಂದು ಬಲ್ಲದಿಹೆಯಾ? ಈ ವಿಶ್ರಾಂತಿ ಭವನದ ಕೆಳ ಅಂತಿಸ್ತಿನಲ್ಲಿರುವ ನಿನ್ನ ಅಂತಃಪುರದಲ್ಲಿ ನಿನಗಾಗಿ ಕಾಯುತ್ತಿರುವ ಅವಳಿಂದಾಗಿ ತಾನೇ ಮುಂಜಾನೆಯಿಂದ ನಿನ್ನ ಮನಸು ವಿಪ್ಲವಕ್ಕೆ ಒಳಗಾಗಿರುವುದು?! ಎಂದಾಕ್ಷಣ ಲಕ್ಷ್ಮಣನಿಗೆ ಸಿಲುಕಿಬಿದ್ದಂತಾಯಿತು. "ಹಾಂ... ಅವಳೇ... ಅಹುದು... ಅವಳ ದೆಸೆಯಿಂದಲೇ ಮನದೊಳಗೆ ನೂರು ಭಾವನೆಗಳ ತಾಂಡವ ನೃತ್ಯವಾಗುತ್ತಿದೆ.... ಊರ್ಮಿಳೆ, ನನಗಾಗಿ ಹದಿನಾಲ್ಕು ವರುಷ ತಪಸ್ಸುಗೈದವಳು... ಈಗಲೂ ಕಾಯುತ್ತಲೇ ಇದ್ದಾಳೆ... ನನಗಾಗಿ... ತನ್ನಿನಿಯನ ಸ್ಪರ್ಶಕ್ಕಾಗಿ.. ನನ್ನ ಸಹಧರ್ಮಿಣಿ... ಊರ್ಮಿಳೆ!"
"ಕಾಯಿಸುವುದು ಉತ್ತಮವಲ್ಲ ಮಿತ್ರ.... ಇಷ್ಟು ವರುಷ ಕಾದು ಕಾದು ಹದವಾಗಿಹಳು ಆಕೆ. ಹದಿನಾಲ್ಕು ವರುಷದ ಹಿಂದೆ ನಿಯತಿ ವಿನಾಕಾರಣ ಅವಳನ್ನು ನಿಷ್ಕರುಣೆಯಿಂದ ಶಪಿಸಿತು. ಆಂದಿನಿಂದ ಇಂದಿನವರೆಗೂ ಆಕೆ ನಿನ್ನ ಒಂದು ಸ್ಪರ್ಶಕ್ಕಾಗಿ ಕಾದು ಕಾದು ತಪಸ್ವಿನಿಯೇ ಆಗಿಹಳು. ಅಹಲ್ಯೆಗಾದರೋ ತಾನು ಪಡೆದ್ದ ಶಾಪಕ್ಕೆ ಕಾರಣ ತಿಳಿದಿತ್ತು. ಆದರೆ ಈ ಮುಗುದೆಗೆ ಅದೂ ತಿಳಯದು. ಅಹಲ್ಯೆಯನ್ನೇನೋ ಶ್ರೀರಾಮ ಎಂದೋ ವಿಮೋಚನೆಗೈದ. ಆದರೆ ಈ ಅಭಾಗಿನಿಗೆ ದೊರಕಿದ ಈ ವಿರಹದ ಶಾಪಕ್ಕೆ ಇಂದಿಗಾದರೂ ಮುಕ್ತಿ ಬೇಡವೇ?" ಎನ್ನಲು ಸೌಮಿತ್ರಿಗೆ ಎದೆಯೊಳಗೆ ನೂರು ಈಟಿಗಳು ನೆಟ್ಟಿದಂತಹ ಅನುಭವವಾಯಿತು. ತನ್ನ ಪ್ರತಿರೂಪವನ್ನೆದುರಿಸುವ ಸಾಹಸವಾಗದೇ ಮೊಗ ತಿರುಗಿಸಿಕೊಂಡವನ ಕಣ್ಣಂಚು ತುಸುವೇ ನೆನೆದಿತ್ತು. ಏನೋ ನೆನಪಾದವನಂತೆ.. ಮತ್ತೇನನ್ನೋ ಮರೆತವನಂತೇ.. ಎಲ್ಲವೂ ಅಯೋಮಯವೆನಿಸಲು ಕತ್ತಲನ್ನು ಬೆಳಗುತಿದ್ದ ಆಗಸವನ್ನೇ ದಿಟ್ಟಿಸತೊಡಗಿದ. ಮನಸು ಊರ್ಮಿಳೆಯ ಸುತ್ತಲೇ ಗಿರಕಿಹೊಡೆಯುತ್ತಿತ್ತು.
"ಎಲೈ ನನ್ನ ಏಕ ಮಾತ್ರ ಸಖನೇ... ಊರ್ಮಿಳೆ ಕಾದು ಕಾದು ಹದವಾಗಿಹಳೋ ಇಲ್ಲಾ ಸುಡುವ ಕೆಂಡವಾಗಿಹಳೋ ಯಾರು ಬಲ್ಲರು? ಹೆಣ್ಣಿನ ಮನಸನು ಅರಿತವರು ಯಾರಿಹರು ಹೇಳಯ್ಯ? ಅದೇನು ವಿಧಿ ಲಿಖತವೋ ಎಂತೋ.... ಅಣ್ಣಯ್ಯನಿಗೆ ಜನಕಮಾವಯ್ಯನವರ ದತ್ತು ಪುತ್ರಿ ಸೀತಮ್ಮ ಸಿಕ್ಕರೆ, ನನ್ನ ವರಿಸಿದ್ದು ಅವರ ಸ್ವಂತ ಪುತ್ರಿಯಾದ ಊರ್ಮಿಳೆ! ಇದು ಊರ್ಮಿಳೆಯ ದೌರ್ಭಾಗ್ಯವೋ ಇಲ್ಲಾ ಸೌಭಾಗ್ಯವೋ ತಿಳಿಯದು. ಆದರೆ ಒಂದಂತೂ ಸತ್ಯ, ಅವಳಿಗೆ ನನ್ನಿಂದ ಸರಿಯಾದ ನ್ಯಾಯ ಸಿಗಲಿಲ್ಲವೆಂಬ ಕೊರಗು ಕೊನೆಯವರೆಗೂ ಎನ್ನ ಕಾಡದಿರದು. ಹೂಂ.... ಅಣ್ಣಯ್ಯನೇನೋ ಮಣಭಾರದ ಬಿಲ್ಲನ್ನು ಮುರಿದು ಅತ್ತಿಗಮ್ಮನ ಪಡೆದ.... ಆದರೆ ಅದೇ ಅತ್ತಿಗಮ್ಮನ ಮನಃಸ್ಥಿತಿಯನ್ನು ಚೆನ್ನಾಗಿ ಅರಿತನೇ? ಹಾಗೆ ಅರಿತಿದ್ದರೆ ಅಗ್ನಿಪರೀಕ್ಷೆ ಎಂಬ ನೋವಿನ ಪ್ರಸಂಗವೇ ಎದುರಾಗುತ್ತಿರಲಿಲ್ಲವೇನೊ! ಹೋಗಲಿ.. ಅತ್ತಿಗಮ್ಮನೆಂದರೆ ನನಗೆಷ್ಟು ಆದರ, ಅಭಿಮಾನ... ವಯಸ್ಸಿನ ಅಂತರ ಅಷಿಲ್ಲದಿದ್ದರೂ ಸಂಬಂಧದ ಅಂತರ ಚೆನ್ನಾಗಿ ಅರಿತವನು ನಾನು. ಸೀತಮ್ಮನನ್ನು ಮಾತೃಸ್ವರೂಪಿಯೆಂದೇ ತಿಳಿದವನು.. ಇದು ಅಣ್ಣಯ್ಯನಾಣೆಗೂ ಸತ್ಯ. ಇಂತಿರುವಾಗ.. ಅಂದು ಆ ನೀಚ ಮಾರೀಚನ ದೆಸೆಯಿಂದಾಗಿ ಪುತ್ರ ಸಮಾನನಾಗಿರುವ ನನ್ನ ಚಾರಿತ್ರ್ಯವನ್ನೇ ಪ್ರಶ್ನಿಸಿದಳಲ್ಲಾ! ಮಾಯಾಮೃಗದ ಬೆನ್ನಟ್ಟಲು ಅಣ್ಣಯ್ಯನನ್ನೂ ಅಟ್ಟಿದಳು... ಅವಳಿಗಾಗಿ ಕಾದುನಿಂತ ನನ್ನ ಅವನ ರಕ್ಷೆಗಾಗಿ ದೂಡಿದಳು. ಒಂಟಿಯಾಗಿ ಬಿಟ್ಟು ಹೋಗಲೊಲ್ಲದ ನನ್ನ ಉದ್ದೇಶವನ್ನೇ ಕೆಡುಕಾಗಿ ಕಂಡಳು....‘ಒಬ್ಬಂಟಿಯಾಗಿರುವ ನನ್ನ ಚೆಲುವಿಗೆ ಮಾರುಹೋಗಿ, ಅಣ್ಣಯ್ಯನ ರಕ್ಷಣೆಗೆ ಹಿಂದೇಟು ಹಾಕುತ್ತಿರೆವೆಯಾ?!" ಎಂದಾಗ ನನಗಾದ ಅಪಮಾನ, ಯಾತನೆ, ನೋವಿನ ಅರಿವು ಯಾರಿಗಾಗಿತ್ತು? ಅಂದು ನಾನೆಷ್ಟು ನೊಂದು ಬೆಂದೆ ಎಂದು ಹೇಗೆ ಹೇಳಲಿ ಈಗ? ಕ್ಷಣಿಕ ಕಾಲನ ಮಾಯೆಯಿಂದಾಗಿಯೋ, ಆ ಕ್ಷಣದ ಕೆಟ್ಟ ಘಳಿಗೆಯಿಂದಾಗಿಯೋ, ಪತಿಯ ಪ್ರಾಣಕ್ಕೆ ಎರಗಿರಬಹುದಾದ ಅಪಾಯದ ಶಂಕೆಯ ಭಾವೋದ್ವೇಗದಿಂದಾಗಿಯೋ... ಚಿಕ್ಕ ವಯಸಿನ ಸೀತಮ್ಮ ಸಣ್ಣ ಮಾತನ್ನಡಿಬಿಟ್ಟಳು. ಆದರೆ ‘ಬಿಟ್ಟ ಬಾಣ ಹಾಗೂ ಹೊರಟ ಮಾತು ಮತ್ತೆ ಹಿಂಬಾರದು’ ಎಂಬುದನ್ನೇ ಮರೆತಳಯ್ಯ. ಇರಲಿ ಬಿಡು... ವಿನಾಕಾರಣ, ಸತ್ಯವನ್ನರಿಯದೇ ತಾಯಿ ಮಗನಿಗೆ ಎರಡೇಟು ಹಾಕಿ ನೋಯಿಸಿದಂತೇ ಎಂದು ತಿಳಿದು ಸುಮ್ಮನಾದೆ ನಾನು. ಅಣ್ಣಯ್ಯನಿಗೇನೂ ಹೇಳಹೋಗಲಿಲ್ಲ.... ಆದರೆ ನಮ್ಮಣ್ಣನೇನು ಸಾಮಾನ್ಯನೇ! ಅಂತರ್ಯಾಮಿಯಲ್ಲವೇ ನಮ್ಮ ಶ್ರೀರಾಮಚಂದ್ರ! ಎಲ್ಲವನ್ನೂ ತಿಳಿದಿರಬೇಕು.... ಹಾಗೆಂದೇ ಪತ್ನಿಗೆ ಅಗ್ನಿಪರೀಕ್ಷೆಯನ್ನೊಡ್ಡಿದನೇ? ಅರಿಯದೆಯೇ ಸರಿ, ವಿನಾಕಾರಣ ನನ್ನ ನೈತಿಕತೆಯನ್ನು ಪ್ರಶ್ನಿಸಿ ತನ್ನ ಪ್ರಿಯ ಸಹೋದರನನ್ನು ಅಪಮಾನಿಸಿದ್ದರ ಅರಿವು ಅವನಿಗಾಗಿತ್ತೆ? ಅಂತೆಯೇ ಅದರ ಅರಿವನ್ನು ತನ್ನ ಪ್ರಿಯ ಪತ್ನಿಗೆ ಮೂಡಿಸಲು ಆ ಪರೀಕ್ಷೆಯನ್ನೊಡ್ಡಿದನೇ? ಊಹೂಂ... ಅವನೇ ಆ ನಿಜವನು ಬಲ್ಲ."
ತುಸುಕಾಲ ಹಾಗೇ ತನ್ನ ಮೌನ ಸಾಮ್ರಾಜ್ಯದೊಳಗೆ ಕಳೆದು ಹೋದ ಸೌಮಿತ್ರಿ. ಮತ್ತೆ ಇದ್ದಕಿದ್ದಂತೇ ಎನೋ ಹೊಳೆದಂತಾಗಿ ಗಹಗಹಿಸಿ ನಗತೊಡಗಿದ. ನಗುತಿದ್ದ ತುಟಿಗಳಿಗೆ ಕೆಂಪಡರಿದ್ದ ಕಣ್ಗಳು ಕಾಣಿಸುವಂತಿರಲಿಲ್ಲ.
"ನೀನು ಬಲ್ಲೆಯೇನು ಸಖ...ಯಾವ ಹುತ್ತದೊಳಗೆ ಯಾವ ಹಾವಿಹುದೆಂದು?! ಊಹೂಂ... ಹೆಣ್ಣನ್ನರಿಯುವುದು ವ್ಯರ್ಥ ಪ್ರಯತ್ನವೇ ಸೈ!! ಆ ವಿಧಿಯ ಆಟದ ಮುಂದೆ ದೈವಾಂಶ ಸಂಭೂತರಾದ ನಾವೂ ತಲೆಬಾಗಲೇ ಬೇಕು. ಇಲ್ಲದಿರೆ, ‘ರಾಮಯ್ಯ.. ನನ್ನ ಕಂದ.. ಚೆಲುವ... ಜೋಕುಮಾರ’ ಎಂದೆಲ್ಲಾ ಕೊಂಡಾಡುತ್ತಿದ್ದ ಕೈಕೇಯಿ ಚಿಕ್ಕಮ್ಮನೇ ಸುಕೋಮಲನಾಗಿ ಬೆಳೆದಿದ್ದ ಹದಿನಾರರ ಅಣ್ಣಯ್ಯನನ್ನು, ಇನ್ನೂ ಹದಿನಾಲ್ಕರ ಹರೆಯದಲ್ಲಿದ್ದ ಪುಟ್ಟ ಅತ್ತಿಗಮ್ಮನನ್ನೂ ಕಾಡಿಗೆ ಅಟ್ಟಿಸುತ್ತಿದ್ದಳೇ? ಅದೂ ನಮ್ಮ ತಂದೆಯವರೇ ಆಜ್ಞೆ ಹೊರಡಿಸುವಂತೆ ವರ ಬೇಡಿ! ಚಿಕ್ಕಮ್ಮ ಕೇಳಿದ ಆ ಎರಡು ವರಗಳಿಂದ ಅದೆಷ್ಟೋ ಮುಗುದ ಜೀವಿಗಳಿಗೆ ಅನ್ಯಾಯವಾಗಿ ಶಾಪದೊರಕಿತು. ಚಿಕ್ಕಮ್ಮನ ವಾಕ್ಪ್ರಹಾರದಿಂದ ಅದೆಷ್ಟು ನೊಂದಿರಬೇಡ ನನ್ನಣ್ಣಯ್ಯನ ಮೃದು ಮನಸು. ಪ್ರತಿನುಡಿಯದೇ ಆಶೀರ್ವಾದ ಪಡೆದು ಹಸನ್ಮುಖರಾಗಿ ಹೊರಟ ಅವರೊಂದಿಗೇ ಹಠಮಾಡಿ ಹೊರಟುನಿಂತ ನನ್ನನ್ನು ತಡೆಯಲು ಆ ಮಂಥರೆ ಮಾಡಿದ್ದ ಕುಟಿಲೋಪಾಯಗಳು ಒಂದೇ ಎರಡೇ! ‘ಭರತನ ಪ್ರಿಯ ಸಹೋದರನೇ... ನಿನಗಿದು ಉಚಿತವಲ್ಲ... ಅವರವರ ಪ್ರಾರಾಬ್ಧ ಅವರಿಗೆ... ನಿನಗೇಕೆ ಈ ವನವಾಸದ ನಂಟು? ಚಿಕ್ಕ ವಯಸಿನ ಊರ್ಮಿಳೆಯ ನೋಡಯ್ಯ... ಬೇಡ ಹೆತ್ತ ತಾಯಿ ಸುಮಿತ್ರೆಯ ಪ್ರೀತಿಯೂ ತಡೆಯುತ್ತಿಲ್ಲವೇ ನಿನ್ನ? ಕೌಸಲ್ಯೆ ಮಹಾರಾಜರ ಪಟ್ಟದರಸಿ, ಕೈಕೆ ಪ್ರಿಯ ಪತ್ನಿ... ನಡುವಿನ ಪಾಪದ ಸುಮಿತ್ರೆಗೆ ಮಾತ್ರ ಸದಾ ದಕ್ಕಿದ್ದು ಅಳಿದುಳಿದದ್ದೇ ತಾನೆ? ನಿನ್ನ ಸಹೋದರ ಶತೃಘ್ನನೂ ಕೈಕೇಯಿ ನಂದನ ಭರತನೊಡನೆ ಅಜ್ಜನ ಮನೆಯಾದ ಕೇಕೇಯ ರಾಜ್ಯಕ್ಕೆ ಹೋಗಿರುವನು. ಇಂತಿರುವಾಗ ಅವಳ ಏಕೈಕ ಕನಸಾಗಿರುವ ನೀನೂ ಹೀಗೆ ಹೊರಟರೆ ಅವಳ ಮಾತೃ ಹೃದಯ ಅದೆಷ್ಟು ನೊಂದೀತು?" ಎಂದೆಲ್ಲಾ ಅದೆಷ್ಟು ಪರಿಪರಿಯಾಗಿ ಉಪದೇಶಿಸಿದ್ದಳು! ಮಂಥರೆ ಬಾಹ್ಯವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಅದೆಷ್ಟು ಕುರೂಪಳೆಂದು ನನಗಂದೇ ತಿಳಿದದ್ದಯ್ಯ. ತಂದೆಯವರಿಗೆ ನನ್ನ ಜನ್ಮವಿತ್ತವಳ ಮೇಲೆ ಇನಿತೂ ಪ್ರೇಮವಿಲ್ಲದಿದ್ದಲ್ಲಿ, ಮಹಾರಾಜರು ಪುತ್ರಕಾಮೇಷ್ಟಿಯಾಗದ ಸಮಯದಲ್ಲಿ ಪೂರ್ಣಾಹುತಿಯಾನಂತರ ಅಗ್ನಿ ಸಂತುಷ್ಟನಾಗಿ ನೀಡಿದ್ದ ಪಾಯಸದಲ್ಲಿ ದೊಡ್ಡಮ್ಮ ಹಾಗೂ ಚಿಕ್ಕಮ್ಮರಿಗೆ ಒಂದೇ ಪಾಲನ್ನಿತ್ತು ನಡುವಿನ ರಾಣಿಯಾದ ನನ್ನಮ್ಮ ಸುಮಿತ್ರೆಗೆ ಮಾತ್ರ ಎರಡು ಪಾಲನ್ನು ನೀಡುತ್ತಿದ್ದರೇ? ತಂದೆಯವರ ಅಪಾರ ಪ್ರೀತಿಗೆ ಇನ್ನೇನು ಸಾಕ್ಷಿ ಬೇಕು? ಅವರೊಮ್ಮೆ ಎರಡು ಪಾಲನ್ನು ಅಮ್ಮನಿಗೇ ನೀಡದಿದ್ದಲ್ಲಿ, ಲಕ್ಷ್ಮಣನೊಡನೆ ಶತೃಘ್ನನ ಜನವಾಗಲು ಸಾಧ್ಯವಿತ್ತೇ? ತಂದೆಯವರಿಗೂ ನನ್ನಮ್ಮನ ನಿಷ್ಕಲ್ಮಶ ಮನಸಿನ ಸುಂದರತೆಯ ಅರಿವು ಮೊದಲೇ ಆಗಿದ್ದಿರಬೇಕು. ಅಂತೆಯೇ ಈ ಸೌಭಾಗ್ಯ ಅವಳ ಪಾಲಿಗೊದಗಿದ್ದು. ಅವಳೂ ಅಷ್ಟೇ... ಅಣ್ಣನ ಹಿಂಬಾಲಕನಾಗಿ ಹೊರಟ ನನ್ನನ್ನು ಸಂತೋಷದಿಂದ ಬೀಳ್ಕೊಟ್ಟಳು.. ಹನಿ ಕಣ್ಣೀರು ಉದುರಿದ್ದರೆ ನನ್ನ ಅಣ್ಣಯ್ಯನ ಮೇಲಾಣೆ. ಹೆತ್ತತಾಯಿಯ ಮನಃಪೂರ್ವಕ ಆಶೀರ್ವಾದ, ಅಣ್ಣಯ್ಯನ ನಿರ್ವಾಜ್ಯ ಪ್ರೇಮ, ಊರ್ಮಿಳೆಯ ಅಪ್ರತಿಮ ಸಹನೆಯಿಂದ ತಾನೇ ನಾನಿಂದು ಸರ್ವರ ಆದರಕ್ಕೆ ಪಾತ್ರನಾಗಿರುವುದು!
ನೀನೇ ನೋಡಿಲ್ಲವೆ ಸಖ? ನಿನ್ನೆ ವನವಾಸದಿಂದ ಹಿಂತಿರುಗಿದ ನಮ್ಮನ್ನು ಅದೆಷ್ಟು ಅದ್ಧೂರಿಯಾಗಿ ಪರಿಜನರೆಲ್ಲಾ ಎದುರುಗೊಂಡರು... ಭರತ, ಶತ್ರುಘ್ನ, ದೊಡ್ಡಮ್ಮ, ಅಮ್ಮ ಎಲ್ಲರೂ ಅಪ್ಪಿ ಕಣ್ಣೀರುಗರೆದರು. ಆದರೆ ಊರ್ಮಿಳೆಯ ಕಣ್ಣೊಳಗಿನ ಭಾವವನ್ನು ಮಾತ್ರ ತಿಳಿಯಲಾರದೇ ಹೋದೆ. ಹೂವು ಹಾಕಿ, ಸುಗಂಧವನು ಪೂಸಿ, ತಿಲಕವನ್ನಿಟ್ಟು ಬರಮಾಡಿಕೊಂಡರೂ, ಆಕೆಯ ಮೊಗದೊಳಗಿದ್ದ ನಿರ್ಭಾವುಕತೆ ನನ್ನ ಕದಡಿಹಾಕಿತು. ನಿನ್ನೆಯ ದಿನ ಆ ಕ್ಷಣ ಅವಳ ಮೊಗವನ್ನು ಕಂಡಾಗಿನಿಂದ, ನಾನು ಈವರೆಗೂ ಅರಿಯದಿದ್ದ ಸಣ್ಣ ಭಯವೊಂದು ನನ್ನೊಳಗೆ ಮನೆ ಮಾಡಿಕೊಂಡಿದೆ. ಹೇಗೆ ಎದುರಿಸಲಿ ಅವಳ? ಅವಳು ಕೇಳಬಹುದಾದ ಪ್ರಶ್ನೆಗಳ? ಆದಿನ... ಆ ದುರ್ದಿನ... ಅಣ್ಣಯ್ಯ, ಅತ್ತಿಗಮ್ಮರನೊಡಗೂಡಿ ನಾನು ವನವಾಸಕ್ಕೆಂದು ಹೊರಟಾಗ ಅವಳಿಗೆ ಸರಿಯಾಗಿ ತಿಳಿಹೇಳಲೂ ಸಮಯಾವಕಾಶ ಸಿಕ್ಕಿರಲಿಲ್ಲ. ಹಾಗೆ ನೋಡ ಹೋದರೆ ಆಕೆಯನ್ನು ಕೈಹಿಡಿದಾಗಿನಿಂದ ಸರಿಯಾಗಿ ಅವಳ ಮೊಗವನ್ನೂ ನೋಡದಿದ್ದ ನನಗೆ ಅಂದು ಅವಳನ್ನು ಏಕಾಂತದಲ್ಲಾದರೂ ಒಮ್ಮೆ ಸಂಧಿಸಿ ತೆರಳಬೇಕೆಂಬ ಪರಿಜ್ಞಾನವೇ ಬರಲಿಲ್ಲವಲ್ಲ! ಕ್ಷತ್ರೀಯ ಪತ್ನಿಯರ ಕರ್ತವ್ಯವನ್ನಷ್ಟೇ ನೆನಪಿಸಿ ಹೊರಟುಬಿಟ್ಟಿದ್ದೆ.
ಪ್ರಿಯ ಪ್ರತಿರೂಪಿ ಸಖನೇ ಕೇಳುವಂತವನಾಗು... ಅಂದು ನಾನು ಹಾಗೆ ವನವಾಸಕ್ಕೆ ತೆರಳಿದ್ದು ಘೋರ ಅಪರಾಧ ಎಂದು ನನಗೆ ಅನಿಸಲೇ ಇಲ್ಲ... ಅನಿಸುತ್ತಲೂ ಇಲ್ಲ.. ಅದು ನನ್ನ ನಿಷ್ಠೆ ಹಾಗೂ ಭ್ರಾತೃ ಪ್ರೇಮದ ಉತ್ಕಟತೆಯಾಗಿತ್ತು. ವಿಷ್ಣುವಿನ ಅಂಶವನ್ನೇ ಹೊತ್ತು ಭುವಿಗಿಳಿದ ಆ ಶ್ರೀರಾಮನ ಅದೆಂತು ಒಂಟಿಯಾಗಿ ಕಳುಹಿಸಲು ಸಾಧ್ಯವಿತ್ತು?! ನನ್ನ ಜನ್ಮದ ಮೂಲವನ್ನು, ಉದ್ದೇಶವನ್ನು ಸವಿವರವಾಗಿ ತಿಳಿ ಹೇಳಿದ್ದ ವಸಿಷ್ಠರ ಉಪದೇಶವನ್ನು ಊರ್ಮಿಳೆಗಾಗಿ ಪರಿತ್ಯಜಿಸಲು ಸಾದ್ಯವಿತ್ತೆ? ಹಾಗೇನಾದರೂ ನನ್ನಿಂದ ಆಗಿದ್ದರೆ, ಅದೇ ಅಕ್ಷಮ್ಯ ಅಪರಾಧವಾಗಿರುತ್ತಿತ್ತಲ್ಲವೇ? ಹೀಗಿರುವಾಗ ನನ್ನ ಅಪರಾಧಿ ಎನ್ನಲು ಅವಳಿಗೆ ಏನೊಂದೂ ಕಾರಣ ಸಿಗದು ಎಂದೇ ಭಾವಿಸುವೆ. ಅಣ್ಣ ಶ್ರೀರಾಮನಿಗೆ ಪಟ್ಟ ಕಟ್ಟುವುದೆಂದು ತಂದೆಯವರು ಹೇಳಿದಾಗ ಅದೆಷ್ಟು ಸಂಭ್ರಮಿಸಿದ್ದೆ.. ಜೀವಕ್ಕೆ ಜೀವವಾಗಿದ್ದ, ಗೆಳೆಯನಂತೆ, ತಂದೆಯಂತೆ, ಹಿರಿಯಣ್ಣನಂತೇ ನನ್ನೊಡನಾಡಿ ಬೆಳೆದವ... ನನ್ನನ್ನು ಅಪ್ಪಿ "ರಾಜ್ಯಾಭಿಷೇಕ ನನಗಾದರೇನು ತಮ್ಮಯ್ಯ.. ಇಬ್ಬರೂ ಕೂಡಿ ಬಾಳಿ ರಾಜ್ಯವನ್ನಾಳುವ.. ಎಲ್ಲವುದರಲ್ಲೂ ನಿನಗೆ ಸಮಪಾಲಿದೆ.." ಎಂದಿದ್ದ. ಹಾಗೆಂದ ಕೆಲವೇ ಸಮಯದಲ್ಲೇ ವನವಾಸಯೋಗ ಅವನಿಗೆರಗಿತ್ತು. ಆಗ ನಾನು ಅವನ್ನು ಹಿಂಬಾಲಿಸದಿದ್ದಲ್ಲಿ ನನ್ನೊಳಗಿನ ‘ನೀನು’ ಸುಮ್ಮನಿರುತ್ತಿದ್ದೆಯಾ ಹೇಳು? ರಾಜಭೋಗದ ಪಾಲಿಗೆ ತಯಾರಿದ್ದ ನನ್ನ ಮನಸು ವನವಾಸಕ್ಕೆ ಹಿಂಜರಿಯುತ್ತಿತ್ತೆ? ಊಹೂಂ... ಲಕ್ಷ್ಮಣ ರಾಮನ ಶೇಷ... ಅವನ ನೆರಳಿದ್ದಂತೆ. ಗುರು ಹಿರಿಯ ಆಶೀರ್ವಚನ, ಮಾತೃ ಆದೇಶವನ್ನು ಉಲ್ಲಂಘಿಸಿ ಪತ್ನಿಗಾಗಿ ಹಿಂಜರಿದಿದ್ದರೆ ಭವಿಷ್ಯತ್ತಿನಲ್ಲಿ ಸ್ವತಃ ಊರ್ಮಿಳೆಯೇ ನನ್ನ ಹಂಗಿಸದಿರುತ್ತಿದ್ದಳೆ?! ವಿಧಿಯ ಸೂತ್ರದೊಳಗೆ ಕುಣಿವ ಗೊಂಬೆಯಾಗಿ, ವಿರಹದ ತಾಪವನ್ನು ಅವಳಿಗೆ ನಾನಿತ್ತರೂ, ನನ್ನ ನಂಬಿ ಬಂದ ಊರ್ಮಿಳೆಗೆ ನಾನೆಂದೂ ಕನಸಿನೊಳಗೂ ದ್ರೋಹ ಮಾಡಲಿಲ್ಲ.... ಇದು ನಿನಗೂ ಬಹು ಚೆನ್ನಾಗಿಯೇ ತಿಳಿದಿದೆ ಅಲ್ಲವೇ?
ಹೂಂ.... ನೆನಪಿದೆಯೆ ನಿನಗೆ? ಅಂದು ಸುಗ್ರೀವನ ಗುಹೆಗೆ ಹೋದಾಗ ಅದೆಷ್ಟು ಚೆಲುವೆಯರು ಸರಸ ಸಲ್ಲಾಪದಲ್ಲಿ ತೊಡಗಿದ್ದರು... ರತಿಕ್ರೀಡೆ ಎಲ್ಲೆಡೆ ತುಂಬಿತ್ತು... ಆದರೆ ಅರೆಕ್ಷಣವೂ ನನ್ನ ಮನಸು ಲಂಪಟವಾಗಲಿಲ್ಲ. ಹೇಮಕೂಟದಲ್ಲಿ ಅಣ್ಣಯ್ಯ ಅತ್ತಿಗಮ್ಮನೊಂದಿಗೆ ಸರಸ ಸಂಭಾಷಣೆಯಲ್ಲಿದ್ದಾಗಲೂ ನನ್ನ ಮನಸು ಇಲ್ಲಿರುವ ಊರ್ಮಿಳೆಯನ್ನೇ ನೆನೆದು ನೀರಾಗಿತ್ತು. ವನವಸಾದ ದೀರ್ಘಾವಧಿಯಲ್ಲೆಲ್ಲೂ.... ಬೇರಾವ ಹೆಣ್ಣನ್ನೂ ಅವಳ ಸ್ಥಾನದಲ್ಲಿ ಕಲ್ಪಿಸಲೂ ಇಲ್ಲ. ವನವಾಸದ ಕೊನೆಯ ವರುಷದ ಆದಿನ... ಲಂಕಾದಹನಕ್ಕೆ ಮುಹೂರ್ತವಿಟ್ಟ ಆ ರಾಕ್ಷಸಿಯ ನೆನಪಿದೆಯೇ? ಅಣ್ಣಯ್ಯನ ಹೊಂದಲು ಬಯಸಿ, ಆ ಕಾರ್ಯದಲ್ಲಿ ವಿಫಲಳಾದ ಆ ಶೂರ್ಪನಖಿ ಅಪ್ರತಿಮ ಸುಂದರಿಯಂತೇ ವೇಷ ಧರಿಸಿ ಬಂದು, ಕಾಮಾತುರಳಾಗಿ, ಲಜ್ಜೆಗೆಟ್ಟು ನನ್ನ ಬಯಸಿ ಅಂಗಲಾಚಿದಾಗಲೂ ಮನಸು ಅರೆಕ್ಷಣವೂ ಅವಳ ಅಂದವನ್ನು ಬಯಸಲಿಲ್ಲ. ಬಲ್ಲೆ... ಮಾನಸಿಕವಾಗಿ ಹತ್ತಿರವಿದ್ದರೂ ಊರ್ಮಿಳೆಯನ್ನು ನನ್ನ ಸ್ಪರ್ಶಸುಖದಿಂದ ವಿಮುಖಳನ್ನಾಗಿಸಿದೆ. ಹೋಗುವ ಮುನ್ನ ಒಮ್ಮೆಯೂ ‘ನಿನಗೆ ಬೇಸರವೆ? ನಿನ್ನ ಒಪ್ಪಿಗೆ ಇದೆಯೆ? ಜೊತೆಗೆ ನೀನೂ ಬರುವೆಯಾ?’ ಏನೊಂದೂ ಕೇಳಲಿಲ್ಲ. ಕರ್ತವ್ಯಕ್ಕಾಗಿ, ಧರ್ಮ ಪರಿಪಾಲನೆಗಾಗಿ, ನನ್ನ ಹುಟ್ಟಿನ ಹಿಂದಿನ ಉದ್ದೇಶದ ಸಾಫಲ್ಯಕ್ಕಾಗಿ, ಊರ್ಮಿಳೆಯಂತಹ ಸಾಧ್ವಿಗೆ ಈ ಕಷ್ಟವನ್ನು ನೀಡಲೇಬೇಕಾಯಿತು. ಅವಳ ನೋವಿನ ಅರಿವು ಸಂಪೂರ್ಣನನಗಾಗದಿರಬಹುದು. ಆದರೆ ಅದೇ ಉರಿಯಲ್ಲಿ ಸ್ವಲ್ಪವಾದರೂ ನಾನೂ ಬೆಂದಿರುವೆನೆಂದರೆ ನೀನಾದರೂ ನಂಬಬೇಕು. ನಿನಗೂ ತಿಳಿದಿದೆಯಲ್ಲಾ... ಬಹುಪತ್ನಿತ್ವ ಕ್ಷತ್ರೀಯರಿಗೆ ಸಹಜ. ಮಹಾರಾಜರೂ ಇದನ್ನು ಪರಿಪಾಲಿಸಿದವರೇ. ಆದರೆ ಇದನ್ನು ಒಪ್ಪದ ಅಣ್ಣಯ್ಯ ‘ಏಕಪತಿವೃತಸ್ಥನಾಗಿರುವೆ’ ಎಂದು ಘೋಷಿಸಿಕೊಂಡ....ಅದನ್ನೇ ಪಾಲಿಸಿದ. ಆದರೆ ಅವನ ಪ್ರತಿಜ್ಞೆಯೊಡನೆಯೇ ನಾನೂ ನನ್ನ ಮನದೊಳಗೇ ನಿರ್ಧರಿಸಿದ್ದೆ. ‘ಈ ಲಕ್ಷ್ಮಣನಿಗೆ... ಸುಮಿತ್ರೆಯ ಪುತ್ರ ಸೌಮಿತ್ರಿಗೆ ಈ ಜನ್ಮದಲ್ಲೊಂದೇ ಅಲ್ಲ.... ಮುಂದೆನ ಎಲ್ಲಾ ಜನ್ಮದಲ್ಲೂ ಊರ್ಮಿಳೆಯೇ ಧರ್ಮಪತ್ನಿ.. ಇಂದೂ, ಮುಂದೂ ಅವಳೇ ನನ್ನ ಸಹಧರ್ಮಿಣಿ’ ಎಂದು ಪ್ರತಿಜ್ಞೆಗೈದಿದ್ದೆ. ನನ್ನ ಈ ಅಘೋಷಿತ ಪ್ರತಿಜ್ಞೆಯನ್ನು ಅವಳ ಬಳಿ ಸಾರಿ ಅರುಹಿದರೆ ಊರ್ಮಿಳೆಗೆ ಮಹದಾನಂದವಾಗಬಹುದು ಅಲ್ಲವೇ?
ಬಲ್ಲೆನಯ್ಯ.... ಹದಿನಾಲ್ಕು ವರುಷದ ಸುದೀರ್ಘ ಅಗಲಿಕೆಯ ನಂತರ ಇಂದು ಈ ರಾತ್ರಿ ನಮಗಾಗಿ ಬಂದಿದೆ. ಆದರೆ ಹತ್ತು ಹೆಜ್ಜೆ ದೂರದಲ್ಲಿರುವ ಆ ಅಂತಃಪುರದಲ್ಲಿ ನನಗಾಗಿ ಕಾಯುತ್ತಿರುವ ಅವಳನ್ನು ಎದುರಿಸಲು ನನ್ನ ಗಂಡೆದೆಯೂ ನಡುಗುತ್ತಿದೆ. ಲಂಕೆಯಲ್ಲಿ ಅಸುರರನ್ನೆಲ್ಲಾ ದಮನಿಸುವಾಗ ಇದ್ದ ಕೆಚ್ಚು ಈಗ ಎಲ್ಲೋ ಅಡಗಿ ಕುಳಿತಂತಹ ಭಾಸ! ಗೊತ್ತು ಸಖ... ಎಲ್ಲವನೂ ತಿಳಿದಿರುವೆ ನಾನು... ಇತಿಹಾಸದ ಪುಟದಲ್ಲಿ ಊರ್ಮಿಳೆಯ ತ್ಯಾಗಕ್ಕೆ ಯೋಗ್ಯ ಬೆಲೆ ದೊರಕುವುದು. ನನ್ನನ್ನು ಶ್ರೀರಾಮನ ತಮ್ಮ, ಊರ್ಮಿಳೆಯ ಪತಿ, ಸುಮಿತ್ರೆಯ ಪುತ್ರ ಎಂದಷ್ಟೇ ಕರೆದರೂ ಬೇಸರ ಇನಿತೂ ಇಲ್ಲಯ್ಯ. ಆದರೆ ಆದರ್ಶಪ್ರಾಯ ಸಹೋದರ, ಸುಸಂಸ್ಕೃತ ಪುತ್ರ ಎಂದು ಅನಿಸಿಕೊಂಡರೂ, ಯೋಗ್ಯ ಪತಿ ಎಂದು ಮಾತ್ರ ಅನಿಸಿಕೊಳ್ಳದಿರುವೆನೇನೋ ಎಂಬ ಸಣ್ಣ ಶಂಕೆ ಕಾಡುತ್ತಿದೆ. ಅದಕ್ಕೂ ಬೇಸರವಿಲ್ಲ ಬಿಡು... ಭವಿಷ್ಯತ್ತಿನಲ್ಲಿ ನನ್ನ ಊರ್ಮಿಳೆಯ ಮನಕೆ ಎಂದಾದರೂ ನನ್ನ ನೋವಿನ, ಯಾತನೆಯ, ಪ್ರಾಮಾಣಿಕ ನಿಷ್ಠೆಯ ಅರಿವಾಗಿ, ನನ್ನ ನಿರ್ಮಲ ಪ್ರೇಮದ ಅನುಭೂತಿ ಅವಳನ್ನೂ ತಟ್ಟಿ, ಹಿಡಿಯಷ್ಟಾದರೂ ಸರಿ... ಅವಳ ಪ್ರೀತಿ ನನಗೆ ದೊರಕಿದರೆ ನಾನೂ ಸಂಪೂರ್ಣನಾಗುವೆ. ಇಂದು ಅವಳ ಮನಸು ನೊಂದು ಬೆಂದಿರಬಹುದು... ಆದರೆ ಇಂದಿನಿಂದ ಅದರೊಳಗೆ ಪ್ರೀತಿ, ಸ್ನೇಹ, ಆದರಗಳ ಹೊಳೆ ಹರಿಸಿ ತಿಳಿಯಾಗಿಸಬೇಕಿದೆ. ಅದಕ್ಕಾಗಿ ನನ್ನೊಳಗಿನ ‘ನೀನು’ ತುಸು ಗಟ್ಟಿಯಾಗಿ, ಮೆದುವಾಗಿ ಅವಳ ಎದುರುಗೊಳ್ಳಬೇಕಿತ್ತು. ಅಂತೆಯೇ ಇಂದೆಲ್ಲಾ ನಿನ್ನನೇ ಧ್ಯಾನಿಸಿದೆ ಸಖ... ಈ ನನ್ನ ಅಳಲಿಗೆ ನೀನೇನು ಉತ್ತರಿಸುವೆ ಹೇಳು? ನನ್ನ ಊರ್ಮಿಳೆ ನನಗೆ ದೊರಕುವಳೇ?" ಎಂದು ಅವನೆಡೆ ತಿರುಗಿದರೆ ಮತ್ತೆ ಅಚ್ಚರಿಯೊಂದು ಕಾದಿತ್ತು.
ಅದಾವ ಮಾಯದಲೋ ಎಂತೋ ಆ ‘ಪ್ರತಿರೂಪಿ’ ಕಾಣೆಯಾಗಿ ಹೋಗಿದ್ದ. ಹುಡುಕಿದರೆ ಎಲ್ಲಿರುವನೆಂದು ಚೆನ್ನಾಗಿ ಅರಿತಿದ್ದ ಸೌಮಿತ್ರಿ.. ನಿಧಾನವಾಗಿ ವಿಶ್ರಾಂತಿ ಭವನದಿಂದ ಹೊರಬಿದ್ದ. ಒಂದೊಂದು ಹೆಜ್ಜೆಯನೂ ಒಂದೊಂದು ವರುಷ ಕಳೆದಂತೆ ಹಾಕುತ್ತಾ, ಊರ್ಮಿಳೆಯಿದ್ದ ಅಂತಃಪುರದೆಡೆ ಮೆಲ್ಲ ಮೆಲ್ಲನೆ ಹೊರಟವನನ್ನು ಕಂಡು ನಿಯತಿಗೂ ಕರುಣೆಯುಕ್ಕಿತು.
["ಉತ್ಥಾನ" ವಾರ್ಷಿಕ ಕಥಾಸ್ಪರ್ಧೆ-೨೦೧೨ರಲ್ಲಿ ತೃತೀಯ ಬಹುಮಾನ ಪಡೆದ ಕಥೆ. ಮಾರ್ಚ್ ತಿಂಗಳ "ಉತ್ಥಾನ"ದಲ್ಲಿ ಪ್ರಕಟಿತ.]
-ತೇಜಸ್ವಿನಿ ಹೆಗಡೆ
-----***-----