ಬುಧವಾರ, ಜೂನ್ 29, 2011

ವಿಲಾಪ

ಕೆಲವೊಂದು ಹಾಡುಗಳೇ ಹಾಗೇ... ಮನಸೊಳಗೆ ಒಮ್ಮೆ ಹೊಕ್ಕರೆ ಅಲ್ಲೇ ಗುನುಗುತ್ತಿರುತ್ತವೆ.. ಕಣ್ಣಂಚಿನ ಹನಿಯೊಡನೆ ಜಿನುಗುತ್ತಿರುತ್ತವೆ... ಮನದಾಳವ ಹೊಕ್ಕು ಎದೆಯೊಳು ಮನೆಮಾಡಿ ಸದಾಕಾಲ ಹಾಡುತ್ತಲೇ ಇರುತ್ತವೆ. ಇಂತಹ ಒಂದು ಸುಂದರ, ಸುಶ್ರಾವ್ಯ ಹಾಡನ್ನು ಕೇಳುವ ಭಾಗ್ಯ ಎರಡು ದಿನಗಳ ಹಿಂದೆ ನನಗೊಲಿಯಿತು. ಹೀಗೇ ಚಾನಲ್‌ಗಳನ್ನು ಬದಲಾಯಿಸುತ್ತಿರುವಾಗ ಹಿಂದಿ ಧಾರಾವಾಹಿಯೊಂದರಲ್ಲಿ ಆಗಷ್ಟೇ ಆರಂಭವಾಗಿದ್ದ ಹಾಡಿನ ಪ್ರಾರಂಭ ನನ್ನ ಅಲ್ಲೇ ನಿಲ್ಲುವಂತೆ ಮಾಡಿತು. 

ಪಾತ್ರ ಚಿತ್ರಣ : ನಾಯಕಿಯ ಪತಿ ಅವಳನ್ನು ತೊರೆದು ಬೇರೋರ್ವಳನ್ನು ಮೆಚ್ಚಿ ಮದುವೆಯಾಗಿ ಅವಳ ಮುಂದೆಯೇ ಎರಡನೇ ಪತ್ನಿಯನ್ನು ಕರೆದುಕೊಂಡು ಹೊರಡುತ್ತಾನೆ. ಹಾಗೆ ಹೋಗುವಾಗ ಮುಗ್ಧ, ಸೌಮ್ಯ ನಾಯಕಿ ತನ್ನ ಮನದಳಲನ್ನು ತೋಡಿಕೊಳ್ಳುವಾಗ ಹಿನ್ನಲೆಯಾಗಿ ಬಂದ ಹಾಡಿದು. ನನ್ನ ಪ್ರಕಾರ ಈ ಹಾಡನ್ನು ನನ್ನ ಅಚ್ಚುಮೆಚ್ಚಿನ ಶ್ರೇಯಾ ಘೋಶಾಲ್ ಹಾಡಿರಬೇಕು. ಆ ಹಾಡು ನನ್ನ ಅದೆಷ್ಟು ಕಾಡಿತೆಂದರೆ ಅದೇ ಹಾಡಿನ ಸೊಲ್ಲುಗಳು ಕನಸಲೂ ಗುನುಗುನಿಸುತ್ತಿದ್ದವು.

ಬೆಳಗೆದ್ದು ಗೂಗಲ್‌ನಲ್ಲೆಲ್ಲಾ ಜಾಲಾಡಿದರೂ ಹಾಡು ಸಿಗಲಿಲ್ಲ. ಕಾರಣ ಅದು ಯಾವುದೇ ಚಲನಚಿತ್ರ ಅಥವಾ ಆಲ್ಬಮ್‌ನ ಹಾಡಾಗಿರಲಿಲ್ಲ. ಕೇವಲ ಆ ಧಾರಾವಾಹಿಗಾಗಿ ರಚಿಸಿದ್ದಾಗಿತ್ತು. ಅಂತೂ ಕೊನೆಗೆ ಯೂಟ್ಯೂಬ್‍ನಲ್ಲಿ ಧಾರಾವಾಹಿಯ ತುಣುಕು ಸಿಕ್ಕಿತು. ನನ್ನವರ ಸಹಾಯದಿಂದ ಅಲ್ಲಿನ ವಿಡಿಯೋ ತುಣುಕನ್ನು Mp3 Formateಗೆ ಭಟ್ಟಿ ಇಳಿಸಿಕೊಂಡೆ. 

ಅದೇಕೋ ಎಂತೋ ಹಾಡಿನ ರಾಗ, ಸ್ವರ, ಲಯ ಬಹು ಇಷ್ಟವಾಯಿತು. ಸಾಹಿತ್ಯವೂ ತುಂಬಾ ಚೆನ್ನಾಗಿದೆ. ಹಾಡು ಸ್ವಲ್ಪ ಕನ್ನಡದ "ನೀನಿಲ್ಲದೇ ನನಗೇನಿದೆ.." ಹಾಡಿನ ಭಾವವನೇ ಸ್ಪುರಿಸುತ್ತದೆ.

ಮೂಲ ಹಾಡನ್ನು ಮೈಲ್ ಮಾಡಲಾಗದು. ಕಾರಣ ಅದು 10MB ಗಿಂತ ಜಾಸ್ತಿ ಇದೆ. ಮೊದಲು ಬರುವ ಮಾತುಗಳನ್ನು ಕತ್ತರಿಸಿ ಕೇವಲ ಹಾಡಿನ ತುಣುಕನ್ನಷ್ಟೇ ತಯಾರಿಸುತ್ತಿದ್ದೇನೆ. Editing ಆದ ಮೇಲಷ್ಟೇ ಎಲ್ಲರಿಗೂ ಕೇಳಿಸಬಹುದು. 

 ಕನ್ನಡಕ್ಕೆ ಅನುವಾದಿಸಬೇಕೆಂದು ಅನ್ನಿಸಿತು. ಪ್ರತಿ ಪದಗಳನ್ನೂ ಇದ್ದ ಹಾಗೇ ಅನುವಾದಿಸಲಾಗದು. ಆದಷ್ಟು ಹಾಡು ಇದ್ದಹಾಗೇ, ಮೂಲ ಹಿಂದಿ ಹಾಡಿನ ರಾಗದಲ್ಲೇ ಹಾಡಿಕೊಳ್ಳಲು ಅನುಕೂಲವಾಗುವಂತೇ ಅನುವಾದಿಸಲು ಯತ್ನಿಸಿದ್ದೇನೆ. 

ಆ ಹಿಂದಿ ಹಾಡಿನ ಕನ್ನಡಾನುವಾದ ಹೀಗಿದೆ :

ಇನಿಯಾ ಹೇಗೆ ಕಳೆಯಲಿ ನೀನಿರದ ನಿಶೆಯ.. 
ಈ ನಿಶೆ ತಂದಿದೆ ಶೂನ್ಯ ಭಾವ...
ಹೇಗೆಂದು ಹೇಳಲಿ ಈ ನೋವ...
ಇನಿಯಾ ಹೇಗೆ ಕಳೆಯಲಿ ನೀನಿರದ ನಿಶೆಯ..

ಯುಗವೊಂದು ಕಳೆಯಿತು ಪ್ರತಿ ಕ್ಷಣ ವಿರಹದಿ, ನೀ ಬರದೆ ಬಳಿ ನೋಡ...
ಯಾವ ಮೋಹಿನಿಯೋ, ಕಾಮಿನಿಯೋ ನಿನ್ನ, ಸೆಳೆದಿಹಳೋ ಬಲು ದೂರ..
ಇನಿಯಾ ಹೇಗೆ ಕಳೆಯಲಿ ನೀನಿರದ ನಿಶೆಯ..

ನೀನಿರದೇ ಬಳಿ ಸುಳಿಯದಯ್ಯ ನಿದಿರೆಯ ಸುಳಿವೂ ಸನಿಹ
http://enchantingkerala.org
ಕಾಲದ ಕೈಯೊಳು ಘಮಘಮಿಸುವುದು ನಿನ್ನದೇ ಕನಸಿನ ಮೋಹ
ಇನಿಯಾ ಹೇಗೆಕಳೆಯಲಿ ನೀನಿರದ ನಿಶೆಯ
ಈ ನಿಶೆ ತಂದಿದೆ ಶೂನ್ಯ ಭಾವ...
ಹೇಗೆಂದು ಹೇಳಲಿ ಈ ನೋವ...
ಇನಿಯಾ ಹೇಗೆಕಳೆಯಲಿ ನೀನಿರದ ನಿಶೆಯ


ಹಿಂದಿ ಹಾಡಿನ ಸಾಹಿತ್ಯ:

ಸಜನಾ ಕೈಸೆ ಕಟಿ ತೇರೆ ಬಿನ್ ರತಿಯಾ...
ಮೆರಿ ರತಿಯಾ ಹಾಯ್ ಸೂನಿ ರತಿಯಾ...
ಕಬ್ ಕಾಸೆ ಬತಿಯಾ...

ಯುಗಪೆಹೆಲೆ ಪರದೇಸಗಯಾ ತೂ ಲೌಟಕೆ ಫಿರ ನಾ ಆಯಾ
ಕಿಸ್ ಬೇರನ್ ನೆ ಕಿಸ್ ಸೌತನ್ ನೆ ಹೈ ತುಝ್ ಕೊ ಭರಮಾಯಾ
ಸಜನಾ ಕೈಸೆ ಕಟಿ ತೇರೆ ಬಿನ್ ರತಿಯಾ...

ನಾ ತೂ ಆಯಾ ನಾ ಆಯಿ ಹೈ ನಿಂದಿಯಾ ನೈನನ ದ್ವಾರೆ
ಪಲ ಪಲ ಕಿ ಗಲಿಯನ ಮೆ ಮೆಹೆಕೆ ಮೇರೆ ಖ್ವಾಬ್ ತುಮ್ಹಾರೆ..

ಸಜನಾ ಕೈಸೆ ಕಟಿ ತೇರೆ ಬಿನ್ ರತಿಯಾ...
ಮೆರಿ ರತಿಯಾ ಹಾಯ್ ಸೂನಿ ರತಿಯಾ...
ಕಬ್ ಕಾಸೆ ಬತಿಯಾ...

ಸೂಚನೆ : ಹಾಡನ್ನು ಈ ಲಿಂಕ್‌ನಲ್ಲಿ ಕೇಳಬಹುದು. ಆದರೆ ಮೊದಲ 3.2 ನಿಮಿಷ ಬರುವ ಧಾರಾವಾಹಿ ಸಂಭಾಷಣೆಗಳನ್ನು ಮುಂದೋಡಿಸಿದ ಮೇಲಷ್ಟೇ ಹಾಡು ಆರಂಭವಾಗುವುದು. 


-ತೇಜಸ್ವಿನಿ.

ಶುಕ್ರವಾರ, ಜೂನ್ 24, 2011

ತುಣುಕುಗಳು...

ಆಸೆ

ಮತ್ತೆ ಮತ್ತೆ ದಡವ ಬಡಿದು
ನುಗ್ಗಿ ನುಗ್ಗಿ ಸುಸ್ತಾಗಿ, ಸೋತರೂ
ಸೋಲೊಪ್ಪದೇ, ಹೊಸ ಹುರುಪಿಂದ
ಮತ್ತೆ ಮತ್ತೆ ತೆರಳಿ, ಹೊರಳಿ
ಮರಳುವ ಮರುಳು ತೆರೆಗಳಂತೆ


ನಿರಾಸೆ

ನಾಜೂಕಾಗಿ ನೇಯ್ದ ನುಣ್ಣನೆಯ
ಗೂಡೊಳಗೆ ಮೊಟ್ಟೆಯಿಟ್ಟು
ಹಗಲಿರುಳು ಕಾವುಕೊಟ್ಟು
ಇನ್ನೇನು ಮರಿ ಹೊರಬರುವಾಗ
ಮೊಟ್ಟೆ ಹಾವಿನ ಹೊಟ್ಟೆಸೇರಿದಂತೆ

ನಿರೀಕ್ಷೆ

ಅಂತಿಮ ಪರೀಕ್ಷೆಯ
ಕೊನೆಯ ಪ್ರಶ್ನೆಗೆ ಉತ್ತರಿಸಿದವ
ಹೊರಬಂದು, ಬರೆದ ಉತ್ತರ
ಸರಿಯೋ ತಪ್ಪೋ ಎಂದು ಚಡಪಡಿಸಿ
ಪುಸ್ತಕದ ಪ್ರತಿ ಹಾಳೆಯನ್ನೂ
ತೆರೆತೆರೆದು ಹುಡುಕಾಡಿದಂತೆ


ಕೆಲವು ಹಳೆಯ ತುಣುಕುಗಳು....

-ತೇಜಸ್ವಿನಿ ಹೆಗಡೆ.

ಭಾನುವಾರ, ಜೂನ್ 19, 2011

‘ನೀಲ ಕಡಲ ಬಾನು’

ಮಂಗಳತ್ತೆಯ ಪಾತ್ರದಲ್ಲಿ ಗಮನಸೆಳೆದು ಯಶಸ್ವಿಯಾಗಿರುವ ‘ಜಯಲಕ್ಷ್ಮಿ ಪಾಟೀಲ್’ ಅವರು ಓರ್ವ ಉತ್ತಮ ಕವಯಿತ್ರಿಯೂ ಆಗಿರುವರೆಂದು ನನಗೆ ಅರಿವಾದದ್ದೇ ಅಂದು ಇದ್ದಕಿದ್ದಂತೇ ಅವರು ಕಳುಹಿಸಿದ, ಅವರದೇ ಕವನಸಂಕಲನವನ್ನೊಳಗೊಂಡ ಮಿಂಚoಚೆಯಿಂದ!

"ನೀಲ ಕಡಲ ಬಾನು"- ಆಹ್.. ನನ್ನ ಅಚ್ಚುಮೆಚ್ಚಿನ ಕಡಲಿನ ಜೊತೆ ಅತಿ ಮೆಚ್ಚಿನ ನೀಲಬಣ್ಣದ ಮಿಶ್ರಣ! ಸಂಕಲನದ ಶೀರ್ಷಿಕೆಯೇ ಒಮ್ಮೆ ನನ್ನ ಸೆಳೆಯಿತು. ಮಿಂಚಿಂಚೆಯಿಂದ ಕವನ ಸಂಗ್ರಹವನ್ನು ಭಟ್ಟಿಯಿಳಿಸಿ ನಿಧಾನವಾಗಿ ತಲೆಯೊಳಗೆ ಹೀರಿಕೊಳ್ಳುತ್ತಿರುವಾಗಲೇ ಅನಿಸಿದ್ದು... ಕೆಲವೊಂದು ಕವಿತೆಯ ಸಾಲುಗಳು ಅದೆಷ್ಟು ಚೆನ್ನಾಗಿ ನನ್ನ ಭಾವಗಳನ್ನೇ ಸ್ಪುರಿಸುತ್ತಿವೆಯಲ್ಲಾ...! ಇಲ್ಲಾ ಹೆಚ್ಚಿನ ಹೆಣ್ಮಕ್ಕಳ ಭಾವನೆಗಳೆಲ್ಲಾ ಹೀಗೇ ಇರುತ್ತವೋ ಎಂತೋ... ಎನ್ನುವಷ್ಟು ಆಪ್ತವಾದವು... ಹೃದ್ಯವಾದವು. 

ಈ ಕವನ ಸಂಕಲನವು ೨೦೦೮ರಲ್ಲಿ "ಸಿವಿಜಿ" ಪಬ್ಲಿಕೇಷನ್ ಅವರಿಂದ ಪ್ರಕಟಣೆಗೊಂಡಿದೆ. ಈ ಕವನಸಂಕಲನದಲ್ಲಿ ಒಟ್ಟೂ ೮೪ ಪುಟಗಳಿದ್ದು ಒಟ್ಟೂ ೫೧ ಕವನಗಳನ್ನೊಳಗೊಂಡಿದೆ. ಡಾ.ಎಚ್.ಎಲ್ ಪುಷ್ಪ ಅವರು ಮುನ್ನುಡಿ ಬರೆದಿದ್ದಾರೆ.

ಆದರೆ ಈ ಪುಸ್ತಕದ ಪ್ರತಿಗಳು ಈಗ ಅವರಲ್ಲಿಲ್ಲವಂತೆ. ಬಹು ಹಿಂದೆ ಪ್ರಕಟವಾಗಿ.. ತದನಂತರ ಪ್ರಕಟನೆಗೆ ಪ್ರಕಾಶಕರು ಸಿಗದೇ ಹಾಗೇ ಉಳಿದಿದೆ. 

ಈ ಕವನಸಂಗ್ರಹದಲ್ಲಿ ನನಗಿಷ್ಟವಾದ ಕವನಗಳಿಷ್ಟು - 
ಅರಿಕೆ, ತಾಯಿಮತ್ತು ಮಗಳಿಗೆ, ರೂಪಕ, ಬತ್ತಲಾಗುವುದೆಂದರೆ..., ಸೆಲೆ, ನಾನು Vs ನೀನು, ವಿಲಾಸಿ, ಅಂತರಂಗ, ಬಿಂಬ, ಗಾಯ, ಸಮುದ್ರ, ವಾಚಾಳಿ, ಅನುಭವ್ಸು, ವಿರಹ, ಹೂ ಹಾಸು ನಾ ಹಾಗೂ ದಿನ(ಕರ)ಚರಿ.

ನಾನು Vs ನೀನು ಕವನದ ಕೊನೆಯಲ್ಲಿ ಬರುವ ಈ ಸಾಲುಗಳು ನನಗೆ ಬಹು ಇಷ್ಟವಾದವು. 
"ಒಂಟಿ, ವಿರಹಿ ನದಿ ನಾನು
ನೀನೋ ಸಮುದ್ರ!" - ಈ ಎರಡು ಸಾಲುಗಳಲ್ಲಿ ಅಡಕವಾಗಿರುವ ವ್ಯಂಗ್ಯ, ನೊವು, ಹತಾಶೆ ಮನತಟ್ಟಿದವು. ಎರಡೇಸಾಲುಗಳು ಸಂಪೂರ್ಣಕವಿತೆಯ ಅಂದವನ್ನು ಎತ್ತಿಹಿಡಿವಂತೆ, ನೂರು ಭಾವಗಳನ್ನು ಸ್ಫುರಿವಂತೆ ಭಾಸವಾದವು.

‘ನೀಲ ಕಡಲ ಬಾನು’ವಿನಿಂದ ಇಳಿದು ಬಂದ ಕೆಲವು ಹನಿಗಳಿವು... - (Click on the Photo to read)






ತಮ್ಮ ಈ ಸುಂದರ ಕವನಸಂಗ್ರಹವನ್ನು ನನಗೆ ಕಳುಹಿಸಿ ಓದಲು ಅವಕಾಶವನ್ನಿತ್ತ ಜಯಲಕ್ಷ್ಮೀ ಅವರಿಗೆ ತುಂಬಾ ಧನ್ಯವಾದಗಳು. ಈ ಪುಸ್ತಕ ಮತ್ತೆ ಪ್ರಕಟಣೆಗೊಳ್ಳುವಂತಾಗಲಿ ಎಂದು ಹಾರೈಸುವೆ.

-ತೇಜಸ್ವಿನಿ ಹೆಗಡೆ.

ಸೋಮವಾರ, ಜೂನ್ 13, 2011

ಆರದಿರಲಿ ಬೆಳಕು...

Courtesy:http://en.wikipedia.org/wiki/File:Karthigai_Deepam.jpg

ಪುಟ್ಟ ಹಾಸಿಗೆಯ ಮೇಲೆ ಚೊಕ್ಕ ಬಿಳಿ ಬಟ್ಟೆ
ಹಚ್ಚಗಾಗಲು ಮೆತ್ತನೆಯ ಚಾದರ, ದಿಂಬು
ಅಕ್ಕ ಪಕ್ಕ ನಿಂತು ಪಿಳಿಗುಡಿಸುತ್ತಿರುವ
ನಾಲ್ಕು ಜೋಡಿ ಪುಟ್ಟ ಕಣ್ಗಳು
ತುಸು ದೂರ ನಿಂತು ಕೈಕಟ್ಟಿದವನ
ಕಣ್ಗಳ ತುಂಬಾ ಅವಳದೇ ನೋವು

ನಾವಿಬ್ಬರು, ನಮಗಿಬ್ಬರೆಂದವರ
ಜೊತೆಗೂಡಲು ಬಂದಿತೊಂದು ಹೆಮ್ಮಾರಿ
‘ಅರ್ಬುದದ’ ರೂಪದಲಿ ಒಳಹೊಕ್ಕು,
ಕೊರೆಯತೊಡಗಿತ್ತವಳ ಬಳಿಸಾರಿ

ಹುಟ್ಟಿದಮೇಲೆ ಸಾವಿಗೆ ಅಂಜಿದೊಡೆಂತಯ್ಯಾ-
ಎಂಬಂತೆ ಸೆಟೆದು ನಿಂತವಳ
ಜೊತೆಯಾದರು ಆ ಮೂವರು...
ವಿಧಿಗೆಲ್ಲೋ ಸಣ್ಣ ನಡುಕ, ಯಮನೂ ಅಯೋಮಯ

ಭೂತದ ಸವಿ ನೆನಪುಗಳನೆಲ್ಲಾ
ಕಟ್ಟಿ ಗಂಟ, ಗಟ್ಟಿಯಾಗಿ ತಳವೂರಲು
ಇಂದಿನ ನೋವಿಗೆ ತುಸು ಅಲ್ಪ-ವಿರಾಮ,
ಜೊತೆಯಾದವರ ಪ್ರೀತಿಯು ಭವಿಷ್ಯತ್ತಿಗಿರಲು
ಹೆಮ್ಮಾರಿಗೂ ಬೀಳಬಹುದು ಪೂರ್ಣವಿರಾಮ.
........
[ಕ್ಯಾನ್ಸರ್ ರೋಗದೊಂದಿಗೆ ಛಲದಿಂದ ಹೋರಾಡಿತ್ತಿರುವ ಸಣ್ಣವಯಸಿನ, ಇಬ್ಬರು ಪುಟ್ಟ ಮಕ್ಕಳ ತಾಯಿಯೋರ್ವಳಿಗೆ ಈ ಕವನ ಅರ್ಪಿತ. ಸಾವಿಗಂಜದೇ, ಸಾವನ್ನೇ ಬೆದರಿಸುತ್ತಿರುವ ಅವಳ ಛಲಕ್ಕೆ, ಸ್ಥೈರ್ಯಕ್ಕೆ ಮನಃಪೂರ್ವಕ ನಮನಗಳು. ಆಕೆಯ ಹಾಗೂ ಆಕೆಯ ಪುಟ್ಟ ಸಂಸಾರದ ಉತ್ತಮ ಭವಿಷ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.]

- ತೇಜಸ್ವಿನಿ ಹೆಗಡೆ