ಭಾನುವಾರ, ಜೂನ್ 1, 2008

ಹುಡುಕಾಟ

ಹುಡುಕಾಟ

ಇರುವೆ ಜೊತೆಗೆ ಮನದ ಭಾವದೊಳಗೂಡಿ,
ಬರುವೆ ನಿನ್ನಂತರಂಗದಮಾತುಗಳೇ ನಾನಾಗಿ,
ಎಂದೆಲ್ಲಾ ಹೇಳಿ, ಮನ ಸೇರಿ,
ಬರಿಯ ಮೌನವಾದನಲ್ಲಾ...!
ನಲ್ಲ- ಬರಿಯ ಮೌನವಾಗಿಹನಲ್ಲಾ?!

ಕಣ್ಣೀರ ಹನಿಗೆಲ್ಲಾ ಕರಗಿ ನೀರಾದವನು,
ಪನ್ನೀರನಿತ್ತು ಮುಖವ ಬೆಳಗಿ,
ಕೆಸರಾದ ಮನದೊಳಗಿಳಿದು,
ಹಸಿರ ಬಿತ್ತಿ ಉಸಿರಾಡಿಸಿದ
ಉಸಿರೊಳಗೆ ಬೆರೆಯದೆ,
ಕರಗಿಹೋದನಲ್ಲಾ!
ನಲ್ಲ-ಕರಗಿಹೋದನಲ್ಲಾ..?!

ನನ್ನ ಕಣ್ಣ ಬಿಂಬಕೆ
ಹಸನಾದ ಕನಸ ತಂದು
ನನಸಾಗಿ ನಾ ಬರುವೆನೆಂದ,
ಇಂದು ಕನ್ನಡಿಯೊಳಗೆ
ಕಣ್ಣಬಿಂಬವ ನೋಡೆ
ಮಬ್ಬಾಗಿಹೋದನಲ್ಲಾ...!
ನಲ್ಲ-ಮಬ್ಬಾಗಿಹೋಗಿಹನಲ್ಲಾ..?!

ಭ್ರಮೆ - ನನ್ನದೆನ್ನುವುದೆಲ್ಲಾ
ಎಂದು ಹೇಳಿ ನಕ್ಕು, ಆ ನಗು
ನನ್ನೆದೆಯೊಳಗಿಳಿದು ತುಟಿಗೆಬರುವ ಮೊದಲೇ...
ಕಳೆದುಹೋದನಲ್ಲಾ..!
ನಲ್ಲ-ಕಳೆದುಹೋಗಿಹನಲ್ಲಾ....?!