ಸೋಮವಾರ, ಮೇ 29, 2017

ವೇಣೀಸಂಹಾರ


‘ವೇಣೀಸಂಹಾರ’ - ಈ ಅಪರೂಪದ ಪುಸ್ತಕದ ಕುರಿತು ಮೊತ್ತ ಮೊದಲು ಮಾಹಿತಿ ಕೊಟ್ಟವರು ಶ್ರೀ ವಿಘ್ನೇಶ್ವರ ಭಟ್  ಅವರು. ಕೆಲವು ದಿನಗಳ ಹಿಂದೆ ಕೋರಿಕೆಯ ಮೇರೆಗೆ ಆ ಪುಸ್ತಕವನ್ನು ಓದಲೂ ಕೊಟ್ಟರು. ಕಥೆಗಳ ಮುನ್ನ ಬರುವ ಸುದೀರ್ಘ ಪೀಠಿಕೆಯೇ ಒಂದು ಮಿನಿ ಕಾದಂಬರಿಯಂತಿದ್ದು.. ಲೇಖಕಿಯ ಪ್ರಬುದ್ಧತೆಗೆ, ವಿಶಿಷ್ಟ ವ್ಯಕ್ತಿತ್ವಕ್ಕೆ ಸ್ಪಷ್ಟ ಕನ್ನಡಿಯನ್ನು ಹಿಡಿದಿದೆ.

ಈ ಪುಸ್ತಕದ ವಿಶಿಷ್ಟತೆ ಏನೆಂದರೆ..

೧೯೨೫ರಲ್ಲಿ ಗೋಕರ್ಣದಲ್ಲಿ ಹುಟ್ಟಿದ ದೇವಾಂಗನಾ ಶಾಸ್ತ್ರಿಯವರು ಬದುಕಿದ್ದು ಕೇವಲ ೨೫ ವರುಷಗಳು ಮಾತ್ರ. ೧೯೫೧ರಲ್ಲಿ ಅವರ ಬದುಕಿನಲ್ಲಿ ನಡೆದ ಒಂದು ದುರ್ಘಟನೆಯಿಂದಾಗಿ ಅವರು ತೀರಿಕೊಂಡಾಗ ಅವರಿಗೆ ಮೂರುವರುಷದ ಓರ್ವ ಮಗಳಿದ್ದಳು. ಮುಂದೆ ಅವರ ಮಗಳು ಉಷಾ ಹೆಗಡೆ, ಅಳಿಯ ಎಸ್.ವ್ಹಿ.ಹೆಗಡೆ ಹಾಗೂ ಆಪ್ತೇಷ್ಟರು ಸೇರಿ ಅಂದಿನ ಪ್ರಸಿದ್ಧ ಸಹಿತ್ಯ ಪತ್ರಿಕೆಗಳಲ್ಲಿ ಪಕಟಗೊಂಡಿದ್ದ ಲಭ್ಯ ಕಥೆಗಳನ್ನು ಮತ್ತು ಲೇಖನಗಳನ್ನು ಒಗ್ಗೂಡಿಸಿ, ‘ವೇಣಿಸಂಹಾರ’ ಪುಸ್ತಕದ ರೂಪದಲ್ಲಿ ೨೦೦೫ರಂದು ಹೊರ ತಂದಿದ್ದಾರೆ. ಇದರಲ್ಲಿ ದೇವಾಂಗನಾ ಅವರ ಎಂಟು ಲಭ್ಯ ಕಥೆಗಳಲ್ಲದೇ, ಐದು ಪ್ರಬಂಧಗಳು, ಅವರನ್ನು ಅತ್ಯಂತ ಸಮೀಪದಿಂದ ನೋಡಿದ, ಬಲ್ಲ ಆಪ್ತರ ಬೆಚ್ಚನೆಯ ಅನಿಸಿಕೆಗಳು ಎಲ್ಲವೂ ಪ್ರಕಟಗೊಂಡಿವೆ.


ಪ್ರಸ್ತುತ ಪುಸ್ತಕದಲ್ಲಿ ಲೇಖಕಿ ದೇವಂಗನಾ ಶಾಸ್ತ್ರಿಯವರು ತಮಗೆ ಅಂದು ಲಭ್ಯವಾಗಿದ್ದ ಅತ್ಯಲ್ಪ ಸ್ವಾತಂತ್ರ್ಯದಲ್ಲೇ  ತೋರಿದ ಪ್ರೌಢ, ಪ್ರಬುದ್ಧ ಚಿಂತನೆಗಳು, ದಿಟ್ಟ ಕ್ರಾಂತಿಕಾರಿ ಆಲೋಚನೆಗಳು, ಪೆನ್ನಿನ ಖಡ್ಗದಿಂದಲೇ ಹೋರಾಡಿದ ಕೆಚ್ಚು ಎಲ್ಲವೂ ತುಸು ಬೆಚ್ಚುವಂತೆ ಮಾಡಿ, ಹೆಚ್ಚು ಅಚ್ಚುಮೆಚ್ಚೂ ಆಗುತ್ತಾರೆ. ಅಂದಿನ ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರಲ್ಲಿ ಹಾಸು ಹೊಕ್ಕಾಗಿದ್ದ ವೈಧವ್ಯ.. ಅದರಾನಂತರ ಹೆಣ್ಣಿನ ಮೈ-ಮನಗಳ ಮೇಲೆ ನಡೆಯುವ ದೌರ್ಜನ್ಯ (ಕೇಶ ಮುಂಡನೆ, ಸಕಲ ಶುಭ ಕಾರ್ಯಗಳಿಗೆ ಬಹಿಷ್ಕಾರ ಇತ್ಯಾದಿ..), ವರದಕ್ಷಿಣೆ (ಇದು ಈಗಲೂ ಎಲ್ಲಾ ಜಾತಿಗಳಲ್ಲೂ ಹಾಸು ಹೊಕ್ಕಾಗಿದೆ..), ಬಾಲ್ಯವಿವಾಹ, ಗಂಡನ ಮನೆಯಲ್ಲಿ ಆಕೆಗೆ ಲಭ್ಯವಗುತಿದ್ದ ನಾನ ವಿಧದ ಪೀಡನೆ.. ಇವೆಲ್ಲವನ್ನೂ ಸಶಕ್ತವಾಗಿ ಎಂಟೇ ಕಥೆಗಳಲ್ಲೇ ಹಿಡಿದಿಟ್ಟಿದ್ದಾರೆ. ಎಂಟು ಕಥೆಗಳು ಪುಟ್ಟ ಪುಟ್ಟ ಕಥೆಗಳೇ! ಆದರೆ ಅವುಗಳೊಳಗೆ ಹೊಕ್ಕಿರುವ ಪಾತ್ರಗಳು ತೆರೆದಿಡುವ ಭಾವ ಪ್ರಪಂಚ ಮಾತ್ರ ಅದ್ಭುತ! ಅಂದಿನ ಪಿಡುಗಗಳನ್ನೆಲ್ಲಾ ಅವರು ತಮ್ಮ ಕಥೆಗಳ ಮೂಲಕ, ಕಥಾ ಪಾತ್ರಗಳ ಮೂಲಕ ಅದೆಷ್ಟು ಗಟಿ ಧ್ವನಿಯಲ್ಲಿ ಎತ್ತಿ ಹಿಡಿದು ರಾಚಿದಾರೆಂದರೆ.. ಅಂದಿನ ಸಮಾಜ ಇದನ್ನೆಲ್ಲಾ ಅರಗಿಸಿಕೊಂಡಿತ್ತೇ? ಎಂಬ ಅನುಮಾನವೂ ಮೂಡುತ್ತದೆ. ಅದೆಷ್ಟು ಅವಹೇಳನ, ಮೂದಲಿಕೆಗಳನ್ನು ಇವರು ಅಂದು ತನ್ನ ಇಂಥ ಬರಹಗಳಿಗಾಗಿ ಎದುರಿಸಿದ್ದಿರಬಹುದು ಎಂದೂ ಅನಿಸುತ್ತದೆ. ಅದೇನೇ ಇದ್ದರೂ ಕತೆಯಿಂದ ಕತೆಗೆ ಲೇಖಕಿ ಇನ್ನಷ್ಟು ಗಟ್ಟಿಯಾಗಿ, ಸ್ಪಷ್ಟ ಧ್ವನಿಯಲ್ಲಿ ತನ್ನೊಳಗಿನ ಬೇಗುದಿ, ಸುತ್ತ ಮುತ್ತಲೂ ಆಗುತ್ತಿದ್ದ ಅನಾಚಾರಗಳಿಂದ ತಪ್ತವಾದ ಮನಸ್ಸಿನ ನೋವುಗಳು - ಇವೆಲ್ಲವನ್ನೂ ಬಿಡಿ ಬಿಡಿಯಾಗಿ ಹರಹಿದ್ದಾರೆ. ಹೆಣ್ಣೆಂದ ಕೂಡಲೇ ಆಕೆ ಭೋಗವಸ್ತು ಅಥವಾ ದೌರ್ಜನ್ಯಕ್ಕೆ ಹೇಳಿ ಮಾಡಿಸಿದವಳು.. ಎಂದಷ್ಟೇ ಬಗೆದು ನಡೆಸಿಕೊಳ್ಳುತ್ತಿದ್ದ ಅಂಥ ಸಮಾಜವನ್ನು ತುಂಬಾ ಸತ್ವಯುತವಾಗಿ ತುದಿ ಬೆರಳಲ್ಲೆತ್ತಿ ತಿದಿಯೊತ್ತಿದ ರೀತಿಗೆ, ಆ ಶೈಲಿಗೆ ಶರಣು.

ಕಥೆಗಳ ಕುರಿತು ಹೆಚ್ಚೇನೂ ಹೇಳೆನು.. ಆ ಸೂಕ್ಷ್ಮ ನೇಯ್ಗೆ.. ಇರಿವ ಪ್ರಶ್ನಾವಳಿಗಳು, ಸ್ತ್ರೀಯರ ಮೇಲೆ ನಡೆವ ನಾನಾ ವಿಧದ ದೌರ್ಜನ್ಯಗಳನ್ನು ಸರ್ವೇಸಾಮಾನ್ಯವೆಂದೇ ಪರಿಗಣಿಸಿದ್ದ ಅಂದಿನ ಆ ಸಮಾಜವನ್ನು ಆ ಕಾಲದಲ್ಲೇ ಎಳೆ ಎಳೆಯಾಗಿ ಹರವಿ ಕೊಡವಿದ ರೀತಿ.. ದಿಟ್ಟತನ ಎಲ್ಲವೂ ನಿಬ್ಬೆರಗಾಗಿಸುತ್ತದೆ. ಜಯಂತಿ ಪತ್ರಿಕೆ ನಡೆಸಿದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ ವೇಣೀಸಂಹಾರ (ಅಕ್ಟೋಬರ್ ೧೯೪೧)ಕಥೆಯಂತೂ ಮನಮಿಡಿವಂತಿದೆ. ಜೊತೆಗೆ ಆಣೆ ಪಾವಲಿ, ಅಡ-ಕತ್ತರಿ, ಹಾರೇಗೋಲು ಬಹಳ ಹಿಡಿದಿಟ್ಟ ಕಥೆಗಳು.

ಬಾಲ ವೈಧವ್ಯ, ಕೇಶಮುಂಡನೆ - ಇವೆರಡು ಈಗ ಎಷ್ಟೋ ಕಡಿಮೆಯಾಗಿವೆ.. (ಅಂದಿನ ಕಾಲಘಟ್ಟವನ್ನು ತೆಗೆದುಕೊಂಡರೆ..) ಆದರೂ ಅಂದು ಆಳದಲ್ಲಿ ಬೇರೋರಿದ್ದ ಅದೆಷ್ಟೋ ಸಾಮಾಜಿಕ ಹುಳುಕುಗಳು ಇನ್ನೂ ಹಾಗೇ ಇವೆ. ತಮ್ಮ ಪ್ರಬಂಧದಲ್ಲಿ ದೇವಾಂಗನಾ ಅವರು ಮಂಡಿಸುವ ಚಿಂತನಾ ಲಹರಿಯನ್ನೋದುತ್ತಾ ಮಂತ್ರಮುಗ್ಧಳಾಗಿ ಹೋದೆ. ಆದರೆ ಅವರ ಕೆಲವೊಂದು ಚಿಂತನೆಗಳು ಇಂದಿನ ಕಾಲಘಟ್ಟಕ್ಕೆ ತುಸು ಸಾಂಪ್ರದಾಯಿಕ ಎಂದೆನಿಸಿದರೂ, ಅವರು ಬದುಕಿದ್ದ ಕಾಲಘಟ್ಟ, ಆ ಪರಿಸರವನ್ನು ಗಣನೆಗೆ ತೆಗೆದುಕೊಂಡಾಗ ಅಲ್ಲಗಳೆಯಲಾಗದು.
ಓದುಗರಿಗಾಗಿ ಅವರ ಲೇಖನವೊಂದರ (‘ಇಂದಿನ ಸ್ತ್ರೀಯರ ಕರ್ತವ್ಯ’) ಆಯ್ದ ಈ ಭಾಗದ ಫೋಟೋವನ್ನು ಹಾಕುತ್ತಿರುವೆ.ಈ ಪುಸ್ತಕದ ಕುರಿತು ಮಾಹಿತಿಯನ್ನಿತ್ತು, ಓದಲೂ ಒದಗಿಸಿದ ವಿಘ್ನೇಶ್ವರ ಭಟ್ ಅವರಿಗೆ ತುಂಬಾ ಕೃತಜ್ಞತೆಗಳು.

~ತೇಜಸ್ವಿನಿ ಹೆಗಡೆ.