ಗುರುವಾರ, ಜೂನ್ 17, 2010

ಗೂಡಿನಿಂದ ಗೂಡಿಗೆ ಕನಸು ತೇಲಿ ಸಾಗಿದೆ....

ಹಲವು ವರುಷಗಳ ಹಿಂದಿನ ಮಾತು. ಆಗ ಈ ವಿವಿಧ ಚಾನಲ್‌ಗಳ ಹಾವಳಿ ಇರಲಿಲ್ಲ. ಇದ್ದುದೊಂದೇ ಚಾನಲ್ ಅದೇ ದೂರದರ್ಶನ. ಆ ಕಾಲದಲ್ಲಿ ಬರುತ್ತಿದ್ದ ಕನ್ನಡ ಧಾರಾವಾಹಿಗಳು, ಚಿತ್ರಗೀತೆಗಳು, ವಿವಿಧ ಕಾರ್ಯಕ್ರಮಗಳ ನೆನಪುಗಳು ಇನ್ನೂ ಹಸಿರಾಗಿದೆ. ಅಂತಹ ಧಾರಾವಾಹಿಗಳಲ್ಲೊಂದು "ಗೂಡಿನಿಂದ ಬಾನಿಗೆ". ಸುಧಾ ನರಸಿಂಹರಾಜು ಅವರ ಪ್ರೌಢ ಅಭಿನಯದ ಜೊತೆಗೆ ಬಿ.ಆರ್. ಛಾಯಾ ಕಂಠದಲ್ಲಿ ಹೊಮ್ಮುತ್ತಿದ್ದ ಸುಶ್ರಾವ್ಯವಾದ ಶೀರ್ಷಿಕೆ ಗೀತೆಯಾದ "ಗೂಡಿನಿಂದ ಬಾನಿಗೆ ಕನಸು ತೇಲಿ ಸಾಗಿದೆ......" ಇನ್ನೂ ಮನದತುಂಬೆಲ್ಲಾ ಗುನಗುನಿಸುತ್ತಿರುತ್ತದೆ. ಅದೇಕೋ ಏನೋ ಇತ್ತೀಚಿಗೆ ನನ್ನ ಬಾಡಿಗೆ ಮನೆಯನ್ನು ಮತ್ತೊಂದು ಕಡೆ ಸ್ಥಳಾಂತರಿಸುವಾಗಲೂ ಇದೇ ಹಾಡು ಮತ್ತೆ ಮತ್ತೆ ರಿಂಗಣಿಸುತ್ತಿತ್ತು. ಆದರೆ ಇಲ್ಲಿ ಒಂದು ಸಣ್ಣ(!?)ಬದಲಾವಣೆ ಅಷ್ಟೇ.....ಇದು ಗೂಡಿನಿಂದ ಬಾನಿನತ್ತ ಪಯಣವಲ್ಲ....ಒಂದು ಗೂಡಿನಿಂದ ಇನ್ನೊಂದು ಗೂಡಿಗೆ ಸ್ಥಳಾಂತರ. ಹಳೆಯ ಕನಸುಗಳ ಜೊತೆ ಹೊಸ ಕನಸುಗಳ ಪಯಣ ಕೂಡ. ಅದೇ ಗಡಿಯಾರ, ಟಿ.ವಿ. ಮೇಜು, ಕುರ್ಚಿ ಇತ್ಯಾದಿ ವಸ್ತುಗಳು. ಆದರೆ ಅವುಗಳನ್ನಿಡುವ ಜಾಗ ಮಾತ್ರ ಹೊಸತು.

ಒಂದೊಂದಾಗಿ ಹಳೆಯ ವಸ್ತುಗಳನ್ನೆಲ್ಲಾ ಅವುಗಳಿಗಾಗಿ ಮೀಸಲಿಟ್ಟ ಹೊಸ ಜಾಗಗಳಲ್ಲಿಡುವಾಗ ಕಣ್ಸೆಳೆದದ್ದು ಆ ನೇರಳೆ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದ್ದ ಪುಟ್ಟ ಪ್ಲಾಸ್ಟಿಕ್ ಹೂದಾನಿ. ಕಲವು ಸಮಯದ ಹಿಂದೆ ಇದನ್ನು ನನಗೆ ಕೊಟ್ಟಿದ್ದ ಆ ವ್ಯಕ್ತಿಯ ಹಿಂದಿನ ಭಾವ ಅಂದು ಬಹು ನವಿರಾಗಿತ್ತು, ನನ್ನೊಳಗೂ ಅದೇ ಭಾವವಂದು ಪ್ರತಿಫಲಿಸಿತ್ತು. ಆದರೆ ಕಾಲಕ್ರಮೇಣ ಈ ಹೂದಾನಿಯನ್ನು ಪಡೆಯುವಾಗಿದ್ದ ನನ್ನ ಹಾಗೂ ಕೊಟ್ಟಿದ್ದ ಆ ವ್ಯಕ್ತಿಯ ಸುಂದರ ಬಂಧವೂ ಈ ಪ್ಲಾಸ್ಟಿಕ್ ಹೂವಿನ ನಿರ್ಭಾವುಕತೆಯಂತೇ ಬಣ್ಣಗೆಟ್ಟಿತು..... ಹಳತಾಯಿತು... ಮನದೊಳಗಿಂದಲೂ ಮರೆಯಾಗಿ ಮೂಲೆ ಸೇರಿತು. ಕಾರಣ ಅಸ್ಪಷ್ಟವಾದರೂ, ಬಿರುಕು ಮಾತ್ರ ಸ್ಪಷ್ಟವಾಗಿದೆ.

ಅದು ಹೇಗೋ ಏನೋ, ಹೊಸ ಗೂಡಿಗೆ ಬಂದಾಕ್ಷಣ ಹಳೆ ಹೂದಾನಿ ಮತ್ತೆ ಹೊರಬಂದಿದೆ....ನನ್ನೆಡೆ ನೋಡುತ್ತಾ, ಒಳಗಿನ ಭಾವನೆಗಳತ್ತ ಇಣುಕು ನೋಟವನ್ನೆಸೆಯುವಂತಿದ್ದರೂ......ಮೊದಲಿನಂತೆ ನೋಯಿಸುತ್ತಿಲ್ಲ.....ಕಣ್ಗಳನ್ನು ತೋಯಿಸುತ್ತಿಲ್ಲ. ಭಾವನೆಗಳು ಬಣ್ಣಗೆಟ್ಟು, ಮಾಸಲಾಗಿ ಸತ್ತಮೇಲೆ ಪ್ಲಾಸ್ಟಿಕ್‌ನಂತೇ ಅಲ್ಲವೇ? ಆದರೆ ಪ್ಲಾಸ್ಟಿಕ್ ಅನ್ನು ಸುಟ್ಟರೂ ನಶಿಸದು, ಅಂತೆಯೇ ಈ ಹೂದಾನಿಯನ್ನಿತ್ತ ವ್ಯಕ್ತಿಯ ನೋವು ನಲಿವಿನ ನೆನಪುಗಳೂ ಕೂಡ. ನಿಜ... ಎಲ್ಲಕ್ಕಿಂತ ದೊಡ್ಡದು ಬಂಧವೇ....ಅದು ರಕ್ತ ಸಂಬಂಧವೇ ಆಗಿರಬೇಕೆಂದಿಲ್ಲ. ಆದರೆ ಎಲ್ಲಾ ನೋವು ನಲಿವಿಗೂ ಮೂಲ ಇದೇ ಬಂಧ ಎನ್ನುವುದೂ ಅಷ್ಟೇ ಸತ್ಯ. ಆದರೆ ಭಾವರೂಪದಲ್ಲಿ ಬಣ್ಣಗೆಟ್ಟು ಬಾಹ್ಯರೂಪದಲ್ಲಿನ್ನೂ ಕಂಗೊಳಿಸುತ್ತಿರುವ ಈ ಪ್ಲಾಸ್ಟಿಕ್ ಹೂದಾನಿಯೀಗ ಮೊದಲಿನಂತೇ ಹಿಂಸಿಸುತ್ತಿಲ್ಲ ನನ್ನ. ಎಷ್ಟೆಂದರೂ ಇದು ಪ್ಲಾಸ್ಟಿಕ್.... ಕೊಟ್ಟವರೂ ಸವಿನೆನಪನ್ನಿತ್ತಿಲ್ಲ.... ಇದೂ ಅಷ್ಟೇ ಎಂದೂ ಸುಗಂಧವನ್ನು ಬೀರದು. ಎಷ್ಟೇ ಗೂಡು ಬದಲಾಗಲಿ, ಈ ಹೂದಾನಿಯೂ ಜೊತೆಯಲ್ಲೇ ಪಯಣಿಸುವುದು ಮಾತ್ರ ಇನ್ನು ನಿಶ್ಚಿತ. ನನ್ನೊಳಗಿನ ಈ ಸ್ಥಿತಪ್ರಜ್ಞತೆಗೆ ದ್ಯೋತಕವಾಗಿ, ನಿರ್ಭಾವುಕತೆಗೆ ಕನ್ನಡಿಯಾಗಿ, ಧನಾತ್ಮಕತೆಯ ಪ್ರತೀಕವಾಗಿ, ಹೊಸ ಭಾವಗಳಾಗಮನದ ಮುನ್ಸೂಚನೆಯಾಗಿ....ಕಣ್ಣೆದುರಿಗೇ ಇರಿಸಿಕೊಂಡಿರುವೆ ಈಗ ಕೇವಲವೊಂದು ಪ್ಲಾಸ್ಟಿಕ್ ಹೂದಾನಿಯಾಗಿ.

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ
ಕರೆಯುವೆ ಕೈ ಬೀಸೀ...
ಬತ್ತಿದೆದೆಯಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ...

[- "ಭಾವನೆಗಳ" ಮಾತು ಹೊರಡುವಾಗ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವನ ನೆನಪಾಗದಿರುವುದುಂಟೇ? :)]

-ತೇಜಸ್ವಿನಿ ಹೆಗಡೆ.

ಗುರುವಾರ, ಜೂನ್ 3, 2010

ನಿರೀಕ್ಷೆ

ಕತ್ತಲೆಯ ಹೊದ್ದ ರಾಹು, ಪೂರ್ಣ ಚಂದಿರನ ನುಂಗಿ
ಇಂಚಿಂಚಾಗಿ ತಿಂದು ತೇಗಿ ಉಗುಳಿಹೋದ,
ಅರ್ಧ ಚಂದ್ರನಂತೆ, ನೀನಿಲ್ಲದ ಹೊತ್ತು.....

ಮಿನುಗುವ ತಾರೆಗಳಿಗೆ ಮಂಕುಬೂದಿಯನೆರಚಿ
ತನ್ನೊಳಗೆ ಮರೆಮಾಚಿ ಬೀಗಿ ನಗುವ,
ಕರಿಮೋಡದಂತೆ, ನೀನಿಲ್ಲದ ಹೊತ್ತು....

ಅದೆಲ್ಲೋ ಇಹುದಂತೆ ಸತ್ತ ಸಾಗರವೊಂದು
ಆ ಕಡಲನ್ನೇ ಕಣ್ಗಳೊಳಗೆ ತುಂಬಿ,
ಜೀವರಸ ಹೀರಿದಂತೆ, ನೀನಿಲ್ಲದ ಹೊತ್ತು....

ಕೊರೆವ ಚಳಿಗೆ ಮರಗಟ್ಟಿದ್ದ ಕೈಗಳಿಗೆ
ಮಂಜುಗಡ್ಡೆಯನುಜ್ಜಿ, ತೀಡಿ
ಬಿಸಿಯನೆಬ್ಬಿಸಲೆತ್ನಿಸಿದಂತೆ, ನೀನಿಲ್ಲದ ಹೊತ್ತು....

ಹೊತ್ತಲ್ಲದ ಹೊತ್ತಿನಲಿ, ಧುತ್ತೆಂದು ನುಗ್ಗುವ
ಒಲ್ಲದ ಯೋಚನೆಗಳಿಗೆ, ಸಲ್ಲದ ಸ್ಥಾನವ ಕೊಟ್ಟು
ಹಗಲಿರುಳೂ ಕೊರಗುತಿಹೆ, ನೀನಿಲ್ಲದ ಹೊತ್ತು....

ಆ ಸೂರ್ಯ, ಚಂದ್ರರರನೇ ಕೈಗಿತ್ತರೂ
ಮಿನುಗು ತಾರೆಗಳನೇ ಮುಡಿಗಿಟ್ಟರೂ
ಬೆಳಕಿಲ್ಲ ಮನದೊಳಗೆ, ನೀನಿಲ್ಲದ ಹೊತ್ತು....

ಚಿತ್ರಕೃಪೆ : [www.tabathayeatts.com/artthursday.htm]

 

- ತೇಜಸ್ವಿನಿ ಹೆಗಡೆ