ಸೋಮವಾರ, ಜನವರಿ 31, 2011

ಮಹಾತ್ಮ

ಅಂದೊಮ್ಮೆ ಆತ ಎಲ್ಲರಿಗೂ ದೇವರಾಗಿದ್ದ
ಕ್ರಮೇಣ ಹಲವರಿಗೆ ದೇವದೂತನಾಗಿ ಕಂಡ
ಮತ್ತೆ ಕೆಲವರು ಶಾಂತಿದೂತನೆಂದು ಕರೆದರೆ...
ಖಳನಾಯಕನೇ ಆದ ಒಂದು ಗುಂಪಿಗೆ!
ಒಮ್ಮೆ ಪ್ರಶ್ನೆಯಾಗಿ, ಮಗದೊಮ್ಮೆ ಉತ್ತರವಾಗಿ,
ಒಮ್ಮೆ ಸಂಕೀರ್ಣ, ಮಗದೊಮ್ಮೆ ಅತಿ ಸರಳ
ಒಮ್ಮೆ ಅಸಹಾಯಕ, ಮಗದೊಮ್ಮೆ ಜನನಾಯಕ
ಸಾಬರಮತಿಯ ಸಂತನಾದ, ಅಹಿಂಸೆಯ ಪ್ರವಾದಿಯಾದ
ಜನ್ಮಭೂಮಿಯ ಇಬ್ಭಾಗಕೆ ಮಾತ್ರ
ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು,
ಮೌನದ ಸಹಿ ಹಾಕಿ ಬಿಟ್ಟ!!

ಸಂತನೆಂದರೂ ಸೈ, ಧೂರ್ತನೆಂದರೂ ಸೈ
ನಾನಾರೆಂದು ನಾ ಮಾತ್ರ ಬಲ್ಲೆ ಎಂಬಂತೆ
ಅರವತ್ಮೂರು ವರುಷಗಳಿಂದಲೂ,
ಆತ ಮುಗುಳು ನಗುತಲೇ ಇರುವ-
ಹೂದೋಟದ ನಡುವೆ, ಕಟ್ಟಡಗಳ ಮುಂದೆ,
ಪೋಸ್ಟರ್‌ಗಳಲ್ಲಿ, ಆಫೀಸಿನ ಫೋಟೋದೊಳಗೆ,
ನೋಟಿನಲ್ಲಿ, ನೋಟ್ ಪುಸ್ತಕದೊಳಗೆ...
ತುಂಡು ಪಂಚೆಯನುಟ್ಟು, ಊರುಗೋಲನು ಹಿಡಿದು
ಕನ್ನಡಕದಂಚಿನಿಂದಲೇ ಎಲ್ಲಾ ಅಧರ್ಮಗಳ ಕಾಣುತ್ತಾ,
ರಘುಪತಿ, ರಾಘವ, ಈಶ್ವರ, ಅಲ್ಲಾರನ್ನು ಕರೆಯುತ್ತಿರುವ....
ಆತನೋರ್ವ ಮಹಾತ್ಮನೇ ಸರಿ!

-ತೇಜಸ್ವಿನಿ
(ಫೋಟೋ ಕೃಪೆ : http://photos.merinews.com/newPhotoLanding.jsp?imageID=12116)

ಗುರುವಾರ, ಜನವರಿ 27, 2011

ಪದ್ಮಪಾಣಿಯೂ.... ನೀಲಿ ಸೋಡಾಗೋಲಿಯೂ..

Courtesy - http://www.flickr.com/photos/21644167@N04/4335305312/galleries/
ಆರಂಭಕ್ಕೂ ಮುನ್ನ : ಇದೇ ಜನವರಿ ೧೩ ರಂದು ನನ್ನ ಮಾನಸ, ಸ್ವತಃ ಮಾನಸದೊಡತಿಯ ಗಮನಕ್ಕೂ ಬಾರದಂತೆ, ಮೂರು ವರುಷಗಳನ್ನು ಪೂರೈಸಿಕೊಂಡು ತಣ್ಣಗೆ ನಾಲ್ಕನೆಯ ವರುಷಕ್ಕೆ ಕಾಲಿಟ್ಟಿತು. ಈ  ಸಂಭ್ರಮವನ್ನು ನಾನು, ಇತ್ತೀಚಿಗೆ ಓದಿದ ಎರಡು ಉತ್ತಮ ಪುಸ್ತಕಗಳ ಕಿರು ಪರಿಚಯ ಹಾಗೂ ಪುಟ್ಟ ವಿಮರ್ಶೆಯ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳ ಬಯಸಿದೆ. ಈ ಪುಸ್ತಕಗಳನ್ನು ನೀವೂ ಓದಿ... ಇತರರಿಗೂ ಓದಿಸಿ.

ಪದ್ಮಪಾಣಿ
(ಕಥಾ ಸಂಕಲನ)
ಲೇ : ಡಾ.ಕೆ.ಎನ್. ಗಣೇಶಯ್ಯ

Courtesy -  http://sushumnakannan.weebly.com
"ಪದ್ಮಪಾಣಿ", "ಕೆರಳಿದ ಕರುಳು", "ಮರಳ ತೆರೆಗಳೊಳಗೆ", "ಕಿತ್ತೂರ ರಂಜಿನಿ", "ಕಲೆಯ ಬಲೆಯಲ್ಲಿ", "ಉಗ್ರಬಂಧ", "ಮಲಬಾರ್" ಹಾಗೂ "ಧರ್ಮಸ್ತಂಭ" - ಒಟ್ಟೂ ೮ ಕಥೆಗಳನ್ನೊಳಗೊಂಡ ಈ ಕಥಾಸಂಕಲನ ಓದುಗರಲ್ಲಿ ಹೊಸ ಬಗೆಯ ಚಿಂತನೆಗೆ, ಆಲೋಚನೆಗೆ ಮಂಥನಕ್ಕೆ ಎಡೆಮಾಡಿಕೊಡುವುದರಲ್ಲಿ ಯಶಸ್ವಿಯಾಗಿದೆ.

ಯಶೋಧರೆ ಮೊದಲಿನಿಂದಲೂ ನನ್ನ ಬಹುವಾಗಿ ಕಾಡಿದ, ಕಾಡುತ್ತಿರುವ ಪಾತ್ರ. ಸಿದ್ಧಾರ್ಥ ನನಗೆ ಹೆಚ್ಚು ಮೆಚ್ಚುಗೆಯಾಗಿ ಹಾಗೂ ಅದಕ್ಕಿಂತ ಹೆಚ್ಚಾಗಿ ಪ್ರಶ್ನೆಯಾಗಿ ಕಾಡಿದ್ದೇ ಹೆಚ್ಚು. ಯಶೋಧರೆಯ ಮೇಲೆ ಕವನ, ಕಥೆ ಬರೆಯ ಹೋದಂತೆಲ್ಲಾ ಅವಳಿಗೆ ಸಲ್ಲಬೇಕಾದ್ದ ನ್ಯಾಯವನ್ನು ನಾನೂ ಕೊಟ್ಟಿಲ್ಲವೇನೋ ಎಂಬ ಭಾವ ತಾಗಿದಂತಾಗಿ ಅರ್ಧದಲ್ಲೇ ನಿಲ್ಲಿಸಿಬಿಟ್ಟೆ. ಆದರೆ "ಪದ್ಮಪಾಣಿ" ಕಥೆಯನ್ನು ಓದಿದ ಮೇಲೆ ಆಕೆಯ ಮೇಲೆ ಮತ್ತಷ್ಟು ವಿಷಾದ, ಅನುಕಂಪ ಮೂಡಿತು. ಹೆಣ್ಣಿನ ಭಾವನೆಗಳಿಗೆ ಮೊದಲಿನಿಂದಲೂ ಸಮಾಜ ತೋರುತ್ತಿದ್ದ ಅಸಡ್ಡೆ, ತಿರಸ್ಕಾರಗಳು ಮತ್ತಷ್ಟು ಹತ್ತಿರದಿಂದ ನೋಡುವಂತಾಯಿತು. ಈ ಕಥೆಯನ್ನೋದಿದ ಮೇಲೆ ಅಂತಿಮದಲ್ಲಿ ತನ್ನಿಂದ ತಾನೇ ಒಂದು ನಿಟ್ಟುಸಿರು ಹೊರಬರದಿರದು. ಇದೇ ರೀತಿಯ ಕಥಾವಸ್ತುವನ್ನೊಳಗೊಂಡ ಇನ್ನೊಂದು ಕಥೆ "ಧರ್ಮಸ್ತಂಭ".

"ಕೆರಳಿದ ಕರಳು" ಕಥೆಯ ಶೀರ್ಷಿಕೆ ಸ್ವಲ್ಪ ಸಿನಿಮೀಯ ಎಂದೆನಿಸಿದರೂ ಕಥೆಯೊಳಗೆ ಹಣೆದ ಪಾತ್ರದ ಚಿತ್ರಣಗಳು ಮಾತ್ರ ವಾಸ್ತವಿಕವಾಗಿವೆ. ತನ್ನ ಮಗುವನ್ನು ಕಳೆದುಕೊಂಡರೂ ಇನ್ನೋರ್ವಳ ಮಗುವಿಗಾಗಿ ಹೋರಾಡುವ ತಾಯಿಯ ಚಿತ್ರಣ ಮನಮುಟ್ಟುವಂತಿದೆ. ಹಾಗೇ ಜನಪದದಲ್ಲಿ ಹಾಸು ಹೊಕ್ಕಾಗಿರುವ ಕೆಲವು ಕಥೆಗಳು ಕಾಲಕ್ಕೆ ತಕ್ಕಂತೇ ರೂಪಾಂತರಗೊಳ್ಳುವುದನ್ನೂ ಲೇಖಕರು ಕಾಣಿಸಿದ್ದಾರೆ. ಇದೇರೀತಿಯ ಕಥಾವಸ್ತುವನ್ನೊಳಗಂಡ ಇನ್ನೊಂದು ಕಥೆ "ಮರಳ ತೆರೆಗಳೊಳಗೆ". ಇಲ್ಲಿ ಜಾನಪದದಲ್ಲಿರುವ ಕಥೆಗೆ ಭಿನ್ನವಾದ, ವಾಸ್ತವಿಕತೆಗೆ ಹತ್ತಿರವಾದ ಕಥೆಯೊಂದನ್ನು ಅರಸಿ, ಅದನ್ನು ಪದರ ಪದರವಾಗಿ ಬಿಡಿಸಿಡುವ ಲೇಖಕರ ನಿರೂಪಣಾ ಶೈಲಿ ಮಾತ್ರ ಅದ್ಭುತ.  

ಈವರೆಗೂ ನಾನು ಕೇಳಿರದ ಕಥಾವಸ್ತುವೇ "ಕಿತ್ತೂರ ರಂಜನಿ". ರಾಣಿ ಚೆನ್ನಮ್ಮಳ ಬದುಕಿನಲ್ಲಿ ನಡೆದ ಈ ಘೋರ ಘಟನೆಯ ಸತ್ಯ ತಿಳಿದವರೇ ಅತ್ಯಲ್ಪ. ಇದನ್ನು ಕಥಾವಸ್ತುವನ್ನಾಗಿಸಿ, ಅದನ್ನು ಹಣೆದ ರೀತಿ ಮಾತ್ರ ಬಹು ಶ್ಲಾಘನೀಯ. ಅತ್ಯಂತ ಕುತೂಹಲಭರಿತ ಹಾಗೂ ಅಚ್ಚರಿಗೀಡು ಮಾಡುವಂತಹ ಕಥೆಯಿದು. ಕಲೆಯ ಆಕರ್ಷಣೆಯಿಂದ, ಮೋಹದ ಬಲೆಯಿಂದ, ಅದರೊಳಗೆ ತನ್ನನ್ನು ತಾನೇ ಬಿಂಬಿಸಿಕೊಳ್ಳುವ ಅದಮ್ಯ ಆಶೆಯ ಹುಚ್ಚಿನಿಂದ ರಾಜ, ರಾಣಿಯರೂ ಪಾರಾಗಿಲ್ಲ ಎನ್ನುವುದನ್ನು "ಕಲೆಯ ಬಲೆಯಲ್ಲಿ" ಕಥೆಯೊಳಗೆ ಕಾಣಬಹುದು. ಶಾಂತಲೆಯ ಕಲೆಯ ಮೋಹ, ಇದರಿಂದ ಪ್ರಾಣ ತೆತ್ತುವ ಕಲಾವಿದ, ಚರಿತ್ರೆಯಲ್ಲಿ ನಾವು ಕಾಣದ ರಾಜ ವಿಷ್ಣುವರ್ಧನನ ಇನ್ನೊಂದು ಮುಖ - ಎಲ್ಲವೂ ಇಲ್ಲಿ ಬಹು ಚೆನ್ನಾಗಿ ಪ್ರಕಟಿತ. 

ಇಡೀ ಕಥಾ ಸಂಕಲನದಲ್ಲಿ ನನಗೆ ಅಷ್ಟು ಇಷ್ಟವಾಗದಿದ್ದ ಕಥೆಯೆಂದರೆ "ಉಗ್ರಬಂಧ". ಇದಕ್ಕೆ ಕಾರಣ ಮುಖ್ಯವಾಗಿ ಎರಡು. ಕೇವಲ ಮುಖ್ಯ ಕಥೆಯನ್ನು ತಿಳಿಸಲೋಸುಗ ಮಾತ್ರ, ಕಥೆಯಾರಂಭ ಹಾಗೂ ಅಂತ್ಯದಲ್ಲಿ ಹಣೆದಿರುವ ಅವಾಸ್ತವಿಕ ಪಾತ್ರಗಳು ಹಾಗೂ ಕಥೆಯೊಳಗೆ ಅಲ್ಲಲ್ಲಿ ಕಾಣುವ ದಂದ್ವ. ತನ್ನ ಮಗಳನ್ನೇ ಕೊಂದವನ ಮಗಳನ್ನು ಯಾವುದೇ ಹಿಂಜರಿಕೆ ಇಲ್ಲದೇ ಒಪ್ಪಿಕೊಳ್ಳುವ ಓರ್ವ ಆದರ್ಶವಾದಿ, ತನ್ನ ಅಪ್ಪ ಕಟ್ಟಾ ಉಗ್ರಗಾಮಿಯಾಗಿದ್ದರೂ ಆತನ ಮಗಳು ಮಾತ್ರ ಅಪ್ಪಟ ದೇಶಪ್ರೇಮಿಯಾಗುವುದು ಅಲ್ಲದೇ ಆತ ಕೊಂದ ಮನೆಯವರನ್ನೇ ತನ್ನವರೆಂದು ಪರಿಗಣಿಸುವುದು... ಈ ಎಲ್ಲಾ ಅಂಶಗಳಿಂದ ಈ ಕಥೆ ಮಾತ್ರ ನನಗೆ ಅಷ್ಟು ಹಿತ ನೀಡಲಿಲ್ಲ. ಆದರೆ ಅದನ್ನು ಮರೆಸುವಂತೆ ನಂತರ ಬರುವ "ಮಲಬಾರ್" ಹಾಗೂ "ಧರ್ಮಸ್ತಂಭ" ಕಥೆಗಳು ನಮ್ಮನ್ನು ಮತ್ತೆ ಮೈಮರೆಸುತ್ತವೆ.

ಗಣೇಶಯ್ಯನವರ "ಶಾಲಭಂಜಿಕೆ, "ಕನಕ ಮುಸುಕು" "ಕರಿಸಿರಿಯಾನ" - ಮುಂತಾದ ಪುಸ್ತಕಗಳನ್ನು ಮೊದಲೇ ಓದಿದ್ದೇನೆ. ಅವರ ಶೈಲಿಯೊಳಗಿನ ಹಿಡಿತ, ಒಂದು ತರಹದ ಹೊಸತನ, ಹೊಸ ಹೊಸ ವಿಷಯಗಳನ್ನು ಪ್ರಸ್ತುತಪಡಿಸುವ ಪರಿ, ವಾಸ್ತವಿಕತೆಗೆಳನ್ನು ತೆರೆದಿಡುವ ರೀತಿ ಎಲ್ಲವೂ ತುಂಬಾ ಇಷ್ಟವಾಗುತ್ತವೆ.ಹೀಗಾಗಿರಲು ಸಾಧ್ಯವಿಲ್ಲ ಎಂಬಲ್ಲಿಂದ ಆರಂಭಿಸಿ, ಹೀಗೂ ಆಗಿರಬಹುದಲ್ಲವೇ ಎಂದು ತೋರಿಸುತ್ತಲೇ..... ಹೀಗೇ ಆಗಿರಬೇಕು ಎಂಬಲ್ಲಿಗೆ ನಮ್ಮನ್ನು ಮುಟ್ಟಿಸುವ ಅವರ ನಿರೂಪಣಾ ಶೈಲಿ ಬಹು ಅಚ್ಚರಿ ಮೂಡಿಸುತ್ತದೆ. ಐತಿಹಾಸಿಕ ಪಾತ್ರ, ವಸ್ತು, ವಿಷಯಗಳ ಹಿಂದಿನ ಕಹಿ, ಕಟು ಸತ್ಯಗಳನ್ನು ಬಿಡಿಸಿಡುವ ಅವರ "ಪದ್ಮಪಾಣಿ" ಒಂದು ಉತ್ತಮ ಕಥಾಸಂಕಲನ ಎನ್ನುವುದರಲ್ಲಿ ಸಂದೇಹವಿಲ್ಲ.
-------&&&-------

ಮಿಥುನ
(ಐದು ಅನನ್ಯ ತೆಲುಗು ಕತೆಗಳು)
ಮೂಲ : ಶ್ರೀರಮಣ
ಕನ್ನಡಕ್ಕೆ : ವಸುಧೇಂದ್ರ


"ಮಿಥುನ", "ಬಂಗಾರದ ಕಡಗ", "ಮದುವೆ", "ಧನಲಕ್ಷ್ಮಿ", "ಸೋಡಾಗೋಲಿ" - ಈ ಐದು ಸುಂದರ ಕಥೆಗಳನ್ನೊಳಗೊಂಡ "ಮಿಥುನ", ಹಲವು ಕಾರಣಗಳಿಂದಾಗಿ ನನಗೆ ಬಹು ಮೆಚ್ಚುಗೆಯಾಯಿತು.

ಈ ಐದು ಕಥೆಗಳಲ್ಲಿ ನನಗೆ ಅತ್ಯಂತ ಇಷ್ಟವಾದವುಗಳೆಂದರೆ - "ಮಿಥುನ", "ಬಂಗಾರದ ಕಡಗ" ಹಾಗೂ "ಸೋಡಾಗೋಲಿ".

ದಾಂಪತ್ಯದ ಚೆಲುವು, ಸವಿ ವರುಷಗಳೆದಂತೇ ಹೆಚ್ಚಾಗುವುದೆನ್ನುತ್ತಾರೆ ಹಲವರು.. ತಿಳಿದವರು. ಆದರೆ ಅದು ಹಾಗಾಗುವುದಾರೆ ಹೇಗಾಗಬಹುದೆನ್ನುವುದನ್ನು ಲೇಖಕರು "ಮಿಥುನದಲ್ಲಿ" ಬಹು ಸುಂದರವಾಗಿ ಕಾಣಿಸಿದ್ದಾರೆ. ಬುಚ್ಚಿಲಕ್ಷ್ಮಿ ಹಾಗೂ ಅಪ್ಪದಾಸು ವೃದ್ಧ ದಂಪತಿಗಳ ನಡುವಿನ ನವನವೀನ ಪ್ರೇಮವನ್ನು, ದಾಂಪತ್ಯ ಸಾರವನ್ನು, ಅದರೊಳಗಿನ ಸ್ವಾರಸ್ಯವನ್ನು- ನವಿರಾದ ಹಾಸ್ಯ, ಕಣ್ಣಂಚು ಒದ್ದೆಮಾಡುವಂತಹ ಭಾವ ಹಾಗೂ ಇಲ್ಲೇ ಪಕ್ಕದಲ್ಲೇ ಎಲ್ಲೋ ಇವರು ಇರಬಹುದೇನೋ ಎಂಬಷ್ಟು ಆಪ್ತತೆಯನ್ನು ತುಂಬುವುದರ ಮೂಲಕ ಕಾಣಿಸಿದ್ದಾರೆ. ಈ ದಂಪತಿಗಳೊಳಗಿನ ಪ್ರೀತಿ ತುಂಬಿದ ಜಗಳಾಟ, ಕಟಿಪಿಟಿ, ಹಸಿಮುನಿಸು, ಸಾಂಗತ್ಯ ಎಲ್ಲವನ್ನೂ ಅವರ ದೂರದ ಸಂಬಂಧಿಯೋರ್ವ ಅಡಗಿಕೊಂಡು, ಒಮ್ಮೊಮ್ಮೆ ಎದುರು ಬಂದು ನೋಡಿ ಸವಿಯುವಾಗ ಒಳಗೆಲ್ಲೋ ಸಣ್ಣ ಹೊಟ್ಟೆಯುರಿ ನಮ್ಮೊಳಗೆ ಉಂಟಾಗದಿದ್ದರೆ ಹೇಳಿ. ನಾನೇ ಅಲ್ಲಿರಬಾರದಿತ್ತೆ... ಆ ಪರಿಸರದಲ್ಲಿ, ಆ ಮನೆಯಲ್ಲಿ, ಆ ದಂಪತಿಗಳ ಸರಸ-ವಿರಸಗಳನ್ನು ಸವಿಯುತ್ತಾ ನಾನೇ ಅಲ್ಲಿರಬಾರದಿತ್ತೆ.... ಎಂದು ಕಥೆಯನ್ನು ಓದುತ್ತಿರುವಾಗ/ಓದಿದ ಮೇಲೂ ಹಲವು ಬಾರಿ ನನ್ನ ಮನ ಬಯಸಿತ್ತು. ಅಷ್ಟರ ಮಟ್ಟಿಗೆ ತಾದಾತ್ಮ್ಯತೆಯನ್ನು ಸಾಧಿಸಿದ್ದಾರೆ ಲೇಖಕರು. ವಿಶಿಷ್ಟ ರೀತಿಯ ಶೈಲಿ ಹಾಗೂ ನಿರೂಪಣೆಯನ್ನೊಳಗೊಂಡ ಕಥೆ ಬಹುಕಾಲ ನಮ್ಮನ್ನು ಕಾಡದಿರದು.

"ಬಂಗಾರದ ಕಡಗ"  ಕಥೆಯನ್ನು ಬಹು ಹಾಸ್ಯಮಯವಾಗಿ ಬರೆದಿದ್ದರೂ ಅದರೊಳಗಿನ ವಾಸ್ತವಿಕತೆ ಮಾತ್ರ ಇಂದಿಗೂ ಪ್ರಸ್ತುತ. ಅಜ್ಜಿ, ಮೊಮ್ಮಗನ ಪ್ರೇಮ, ಕುರುಡು ಆಚಾರ-ವಿಚಾರಗಳನ್ನು... ಮೂಢನಂಬಿಕೆಗಳನ್ನು ತಿರಸ್ಕರಿಸುವ ಆ ಹಳೆ ತಲೆಮಾರು.. ಎಲ್ಲವನ್ನೂ ಹಾಸ್ಯದಹೊನಲಿನಲ್ಲೇ ಚಿತ್ರಿಸಿದ್ದಾರೆ. ಓದುತ್ತಿದ್ದಂತೇ ನಗು ತನ್ನಿಂದ ತಾನೇ ಉಕ್ಕಿಬರದಿರದು. ಹಾಗೇ ಅಂತಹ ಓರ್ವ ಅಜ್ಜಿಯ ಕೊರತೆಯನ್ನೂ ಮನಸು ನೆನೆದು ಒದ್ದೆಯಾಗುವುದೂ ಸಹಜ.

"ಸೋಡಾಗೋಲಿ" - ಇದು ಮಾತ್ರ ನನಗೆ ಬಹು ಅಪೂರ್ವ, ಹಾಗೂ ಅನೂಹ್ಯ ಅನುಭವವನಿತ್ತ ಕಥೆ. ಇದಕ್ಕೆ ಕಾರಣ ನನ್ನ ಬಾಲ್ಯ. ಮೊದಲಿನಿಂದಲೂ ನನಗೆ ಈ ಮಣಿಗಳನ್ನು ಒಟ್ಟು ಹಾಕುವ ಹುಚ್ಚು. ಅದಕ್ಕಾಗಿ ಹಿಂದೆ ನಾನು ಪಟ್ಟ ಪರಿಪಾಟಲು ನನ್ನ ಅಪ್ಪನಿಗೆ ಹಾಗೂ ಆ ದೇವರಿಗೆ ಮಾತ್ರ ಗೊತ್ತು :) ಅದರಲ್ಲೂ ನನಗೆ ನೀಲಿ ಸೋಡಾಗೋಲಿಯ ಹುಚ್ಚು ತುಂಬಾ ಇತ್ತು (ಸ್ವಲ್ಪ ಈಗಲೂ ಇದೆ...:)). ಅವರಿವರನ್ನು ಕಾಡಿ ಬೇಡಿ... ಅಪ್ಪನಿಗೂ ಇದರ ಬಗ್ಗೆ ಕೊರೆದೂ ಕಾಡಿ, ಎಲ್ಲಿಂದಲೋ ಒಂದೇ ಒಂದು ನೀಲಿ ಸೋಡಾಗೋಲಿ ಸಂಪಾದಿಸಿದ್ದನ್ನು ಅದು ಹೇಗೋ ಕಳೆದುಕೊಂಡು ಬಿಟ್ಟಿದ್ದೆ. ಅದಕ್ಕಾಗಿ ತುಂಬಾ ಪರಿತಪಿಸಿದ್ದೆ. ಅದೇಕೋ ಏನೋ ಆಮೇಲೆ ನನಗೆ ಬೇರೆ ನೀಲಿ ಸೋಡಾಗೋಲಿ ಸಿಗಲೇ ಇಲ್ಲ. ನನ್ನ ಆ ಅನುಭವವೇ ಈ ಕಥೆಯೊಳಗಿನ ಹುಡುಗನೊಂದಿಗೆ ಎದ್ದು ಬಂದಂತೆ ಆಯಿತು. ಒಂದು ರೀತಿಯ ಕುತೂಹಲ, ಭಾವೋದ್ವೇಗ ಉಂಟಾದದ್ದೂ ಸತ್ಯ. ಅಂತಿಮದಲ್ಲಿ ಆತನಿಗೆ ಹಲವು ನೀಲಿ ಗೋಲಿಗಳು ಸಿಕ್ಕಾಗ, ನನಗೇ ಅವು ಸಿಕ್ಕಷ್ಟು ಆನಂದ ಹಾಗೂ ತೃಪ್ತಿ ಮೂಡಿತ್ತು. ಸದಾ ಕಾಡುವ ಈ ಕಥೆಯ ನೀಲಿ ಪ್ರಿಂಟ್ ಮನದೊಳಗೆ ಚೆನ್ನಾಗಿ ಅಚ್ಚಾಗಿದೆ.

"ಧನಲಕ್ಷ್ಮಿ", "ಮದುವೆ" - ಈ ಕಥೆಗಳೂ ಚೆನ್ನಾಗಿವೆ. ವಿಡಂಬನಾತ್ಮಕವಾಗಿದ್ದು ಹೆಚ್ಚು ವಾಸ್ತವಿಕತೆಯಿಂದ ಕೂಡಿವೆ. ಒಟ್ಟಿನಲ್ಲಿ "ಮಿಥುನ" ಬದುಕಿನ ಸುಮಧುರ ಕ್ಷಣಗಳನ್ನು, ಅವಗಳೊಳಗೆ ಬೆಸೆದಿರುವ ನೆನಪಿನ ಹಂದರಗಳನ್ನು ತೆರೆದಿಡುವ ಜೊತೆಗೆ ನಮ್ಮ ಹಳೆಯ ನೆನಪುಗಳನ್ನು ಹೊರಗೆಳೆವ ಕಥಾಸಂಕಲನ. ಮೂಲ ನಾನು ಓದಿಲ್ಲ. ಆದರೆ ಅನುವಾದ ತುಂಬಾ ಇಷ್ಟವಾಯಿತು.

ಕೊನೆಯಲ್ಲಿ :  "ತೇಜಕ್ಕ ಈ ಪುಸ್ತಕ ಓದಿ.. ಮೂಡ್ ಫ್ರೆಶ್ ಆಗೊತ್ತೆ ನೋಡಿ.." ಎಂದು, "ಮಿಥುನ" ಪುಸ್ತಕವನ್ನು ಓದಲು ಕೊಟ್ಟು, ಆ ಮೂಲಕ ನನ್ನೊಳಗೆ "ನೀಲಿ ಸೋಡಾಗೋಲಿ"ಯ ಕನಸನ್ನು ಮತ್ತೆ ಎಚ್ಚರಿಸಲು ಹಾಗೂ ಇದರೊಂದಿಗೆ ಬೆಸೆದಿರುವ ಸವಿ ನೆನಪುಗಳನ್ನು ಮರುಕಳಿಸಲು ಕಾರಣಳಾದ ಮಾನಸ ಸಹೋದರಿ "ಲಕ್ಷ್ಮಿ"ಗೆ ತುಂಬಾ ಧನ್ಯವಾದಗಳು :)


ನೀಲಿ ಸೋಡಾಗೋಲಿಗಾಗಿ ನಾನು ಇನ್ನೂ ಪ್ರಯತ್ನಿಸುತ್ತಲೇ ಇದ್ದೇನೆ. ತಾಯಿಯಂತೇ ಮಗಳು ಎಂಬಂತೆ "ಅದಿತಿಗೂ" ಈ ಗೀಳು ಹತ್ತಿದೆ. ಎಲ್ಲಿ ಸೋಡಾ ಬಾಟ್ಲಿ ಕಂಡರೂ ಒಂದನ್ನಾದರೂ ಒಡೆದು ನೀಲಿಗೋಲಿ ತೆಗೆದು ಒಮ್ಮೆ ಸವರಿ ಅವಳ ಪುಟ್ಟ ಕೈಗಳೊಳಗೆ ಇಡುವ ಹುಚ್ಚು ಆಸೆ ಆಗಾಗ ಕಾಡುತ್ತಿರುವುದು ಮಾತ್ರ ಈ ನೀಲಿ ಸೋಡಾಗೋಲಿಯಾಣೆಗೂ ಸತ್ಯ! (ನೀಲಿ ಸೋಡಾಗೋಲಿ ಇದ್ದವರು ಕೊಟ್ಟರೆ ತುಂಬಾ ಸಂತೋಷ..:))

----

ನಿಮ್ಮೆಲ್ಲರ ಹಾರೈಕೆ, ಪ್ರೋತ್ಸಾಹ, ಬೆಂಬಲ ಹೀಗೇ ಸದಾ ಮಾನಸದೊಂದಿಗಿರಲೆಂದು ಹಾರೈಸುತ್ತಾ...

- ತೇಜಸ್ವಿನಿ ಹೆಗಡೆ.

ಗುರುವಾರ, ಜನವರಿ 20, 2011

ಹಳೆ ನೆನಪು.... ಹೊಸ ಕನಸು

ಒಮ್ಮೊಮ್ಮೆ ಈ ನೆನಪುಗಳೇ ಹೀಗೆ-
ನವಿರಾದ ರೇಶ್ಮೆಯ ತುಣುಕೊಂದು
courtesy - http://vi.sualize.us 
ಮೆಲುಮೆಲ್ಲನೆ ಕಿರುಬೆರಳ ಸ್ಪರ್ಶಿಸಿದಂತೆ
ಭೋರ್ಗರೆವ ಜಲಪಾತವೊಂದು ಧುಮ್ಮಿಕ್ಕಿ,
ತಣ್ಣನೆ ಹರಿದು ಜುಳು ಜುಳು ನಿನಾದಗೈವಂತೆ..
ಇಳೆಯ ಮೇಲೆ ಚಲ್ಲಿರುವ ಮಲ್ಲೆಮೊಗ್ಗುಗಳೆಲ್ಲಾ
ಆಗಸಕೆ ಚಿಮ್ಮಿ ಅಂಟಿ, ಮಿಣುಕಾಡುವಂತೆ...
ಕೊಳದೊಳಗೆ ಹರಿದಾಡುವ ಕಿರು ಮೀನುಗಳು
ಕಾಲ್ಬೆರಳುಗಳ ಕಚ್ಚಿ ಹಿತವಾದ ನೋವನೀವಂತೆ...

ಒಮ್ಮೊಮ್ಮೆ ಈ ನೆನಪುಗಳೂ ಹೀಗೆ-
ಕಾದ ಬಾಣಲೆಯೊಳಗಿನ ಎಣ್ಣೆಗೆ
ಹನಿ ನೀರು ಬಿದ್ದು ಸಿಡಿವಂತೆ...
ಮಾಗಿರುವ ಹಳೆಯ ಗಾಯದೊಳಗೆ
ಕಾಸರ್ಕದ ಮುಳ್ಳೊಂದು ಹೊಕ್ಕಂತೆ..
ಬಿಳಿಬಟ್ಟೆಯ ಮೇಲೆ ಬಿದ್ದ ಕರಿಶಾಯಿಯೊಂದು
ತೊಳೆದರೂ ಹೋಗದ ಕಲೆಯೊಂದ ಬಿಟ್ಟಂತೆ..
ನೊರೆಯುಕ್ಕಿ ಹೊರ ಚೆಲ್ಲುತಿರುವ ಹಾಲಿನೊಳು
ಹನಿ ಹುಳಿ ಹಿಂಡಿ, ಕ್ಷಣದೊಳಗೆ ಒಡೆವಂತೆ...

ಈ ನೆನಪುಗಳೊಳಗಿನ ಜೊಳ್ಳುಗಳನ್ನಾರಿಸಿ
ಉಸಿರನೀವ ಹಳೆ ನೆನಪುಗಳ ಬೀಜ ಬಿತ್ತಿ,
ಹಸಿರಾಗುವ ಹೊಸ ಕನಸುಗಳ ಸಸಿಯ ಬೆಳೆಸಿ,
ನನಸಾಗುವ ಫಲಗಳ ಸವಿಯ ಮೆಲ್ಲಲು,
ಒಮ್ಮೊಮ್ಮೆ ಮರೆವೆಂಬ ಗೊಬ್ಬರವ
ಮನದಾಳದೊಳಗೆ ಸುರಿಯಬೇಕಿದೆ...

-ತೇಜಸ್ವಿನಿ

ಸೋಮವಾರ, ಜನವರಿ 17, 2011

ಅಸಾಧಾರಣ ವ್ಯಕ್ತಿಯ ಅಪ್ರತಿಮ ಸಾಧನೆ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ॥
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು — ಮಂಕುತಿಮ್ಮ ॥

ತಾನು, ತನ್ನವರು, ತನ್ನ ಸುಖ, ತನ್ನವರ ಏಳಿಗೆ - ಈ ಸಂಕುಚಿತ ವರ್ತುಲದೊಳಗೇ ಸುತ್ತು ಹಾಕುವ ಮನುಷ್ಯ ನಿಃಸ್ವಾರ್ಥವಾಗಿ ಇತರರಿಗೆ ಸಹಾಯ ಮಾಡುವುದು, ಪರರ ಏಳಿಗೆಗಾಗಿ ಅವಿರತವಾಗಿ ಶ್ರಮಿಸುವುದು ತೀರಾ ಕಡಿಮೆಯೇ! ಅಂತಹ ಒಂದು ಅಪರೂಪದ ವ್ಯಕ್ತಿಯ, ಅನೂಹ್ಯ ವ್ಯಕ್ತಿತ್ವದ ಸ್ಥೂಲ ಚಿತ್ರಣವನ್ನು ಇಲ್ಲಿ ಕಾಣಿಸಲೆತ್ನಿಸಿದ್ದೇನೆ. 

ಏನೇ ಆದರೂ ಏನೇ ಹೋದರೂ, ಎಷ್ಟೇ ಕಷ್ಟ ಬಂದರೂ, ದುಃಖದೊಳು ಮುಳುಗಿದರೂ, ತನ್ನ ಅಸ್ತಿತ್ವವನ್ನು ಛಾಪಿಸಿ, ಜೊತೆಗೆ ತನ್ನಂತವರ ಅಸ್ತಿತ್ವಕ್ಕಾಗಿ, ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಹೋರಾಟಗಾರು, ಛಲಗಾರರು ತೀರಾ ವಿರಳ. ಹೀಗಿರುವಾಗ ತನ್ನೊಳಗಿನ ದೈಹಿಕ ಅಶಕ್ತತೆಯನ್ನು ಸಂಪೂರ್ಣ ದೂರವಿಟ್ಟು, ಆತ್ಮಶಕ್ತಿಯನ್ನು, ಮನದೊಳಗಿನ ಧೀಃಶಕ್ತಿಯನ್ನು ಕೇಂದ್ರೀಕರಿಸಿಕೊಂಡು, ಅಂತರಾಷ್ಟ್ರೀಯ ಮಟ್ಟದ ಶ್ರೇಷ್ಠ ಕೀಡಾಪಟುವೆನಿಸಿಕೊಂಡಿದ್ದಲ್ಲದೇ, ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ - ಹೀಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ತನ್ನ ಕೀರ್ತಿಯ ಕಿರೀಟಕ್ಕೆ ಗರಿಗಳಾಗಿಸಿಕೊಂಡು ಅದಮ್ಯ ಉತ್ಸಾಹದಿಂದ ಮುನ್ನೆಡೆಯುತ್ತಿರುವ "ಮಾಲತಿ ಹೊಳ್ಳ"

ಇವರ ಬಗ್ಗೆ ಬರೆದಷ್ಟೂ ಸಾಲದು... ಓದಿದಷ್ಟೂ ಮುಗಿಯದು. ಇವರ ಸ್ಥೂಲ ಪರಿಚಯ ಪಡೆಯಲು, ಅವರ ಯಶೋಗಾಥೆಯನ್ನು ತಿಳಿಯಲು ದಯವಿಟ್ಟು ಈ ತಾಣಗಳಿಗೆ ಭೇಟಿ ಕೊಡಿ.

http://archives.chennaionline.com/health/hopeislife/07life08.asp

http://www.blog.sourishdey.com/2009/07/malathi-holla-a-story-of-will-power/

AND

http://webcache.googleusercontent.com/search?q=cache:Xm0m1mfCgzIJ:www.indiatogether.org/2003/sep/hlt-padmashri.htm+Malathi+Krishnamurthy+Holla&hl=en&ct=clnk&cd=1&gl=nz



ಆ ಕ್ಷಣ... ಆ ದಿನ... - ಅಗಸ್ಟ್ ತಿಂಗಳಲ್ಲಿ ನನಗೊಂದು ಅಚ್ಚರಿ ಕಾದಿತ್ತು. ಕನ್ನಡ ವಾಹಿನಿಯೊಂದು ತನ್ನ ವಿಶೇಷ ಕಾರ್ಯಕ್ರಮಕ್ಕಾಗಿ ನನ್ನ ಸಂದರ್ಶನವನ್ನು ಕೇಳಿತ್ತು. ನಾನು ಒಪ್ಪಿ ಹೋದಾಗ ನನಗೆ ಕಾದಿದ್ದು ಮತ್ತೊಂದು ಬಹು ದೊಡ್ಡ ಅಚ್ಚರಿ. ಅದೇ ಕಾರ್ಯಕ್ರಮದ ಇನ್ನೊಂದು ಸಂಚಿಕೆಗಾಗಿ "ಮಾಲತಿ ಹೊಳ್ಳರನ್ನೂ" ಕರೆಸಿದ್ದರು. ಅಂದೇ, ಆ ದಿನವೇ, ಆ ಹೊತ್ತೇ ನಾನು ಅವರನ್ನು ಪ್ರಥಮ ಬಾರಿ ನೋಡಿದ್ದು. ಎಲ್ಲರನ್ನೂ ಮಾತನಾಡಿಸುತ್ತಾ, ನಗು ನಗುತ್ತಾ, ಒಳ ಬಂದ ಅವರನ್ನು ಕಂಡಾಗ ಒಳಗೊಳಗೇ ನಾನು ಅಧೀರಳಾಗಿದ್ದೆ. ಕಾರಣ ಅವರ ಅನುಪಮ ವ್ಯಕ್ತಿತ್ವ ಹಾಗೂ ಅಪ್ರತಿಮ ಸಾಧನೆ! ನನ್ನೊಡನೆ ತುಂಬಾ ಸಹಜವಾಗಿ, ಹಲವು ವರುಷಗಳ ಪರಿಚಯವಿದ್ದಂತೇ ಓರ್ವ ಸ್ನೇಹಿತೆಯಂತೇ, ಹಿರಿಯಕ್ಕನಂತೇ ಹರಟಿದ ಅವರ ಸರಳತೆಗೆ, ವಿನಮ್ರತೆಗೆ ಮಾತ್ರ ನಾನು ಮಾರು ಹೋದೆ. ಶೂಟಿಂಗ್‌ನಲ್ಲಿದ್ದ ಲೈಟ್ ಬಾಯ್‌ನಿಂದ ಹಿಡಿದು, ಸಂದರ್ಶಕಿಯವರೆಗೂ ಅವರು ತೋರಿದ ಸ್ನೇಹ, ಸರಳತೆ, ಸಹಜತೆ ತುಂಬಾ ಸಂತೋಷವನ್ನುಂಟುಮಾಡಿತ್ತು. ಅಲ್ಲಿಂದ ಶುರುವಾದ ನಮ್ಮಿಬ್ಬರ ಸ್ನೇಹ, ಪರಿಚಯ ನನ್ನನ್ನು ಅವರ "ಮಾತೃ ಪ್ರತಿಷ್ಠಾನಕ್ಕೂ" ಎಳೆದೊಯ್ದಿತು.


ಏನಿದು ಮಾತೃಪ್ರತಿಷ್ಠಾನ? (Matru Foundation)

ಮಾತೃ ಪ್ರತಿಷ್ಠಾನದ ವೆಬ್‌ಸೈಟ್‍ನಲ್ಲಿರುವಂತೇ - "Paraplegic brave heart, Arjuna Awardee and Padmasree Malathi K. Holla, afflicted by polio at infancy, stands tall in the world of paraplegic sports in India by sheer grit and determination and has won medals around the world

The 45 year old Bank Manager has launched the "Mathru Foundation" to serve the physically challenged with motherly care

Lending her a helping hand are the former International sprinter Ashwini Nachappa, International Cricketer Venkatesh Prasad, Krishna Reddy H.T, and Dr.Sridhar. M.K., both physically challenged and Anantha Bhat M, a leading advocate" 
Malathi Holla 

ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಭೇಟಿಕೊಡಿ. - http://www.mathrufoundation.org/ 

ಮೊದಲ ಭೇಟಿಯಲ್ಲೇ ಅವರು ಅವರ ಈ ಸಂಸ್ಥೆಯ ಬಗ್ಗೆ ಕಿರು ಪರಿಚಯ ತಿಳಿಸಿದ್ದರೂ ನನಗೆ ಭೇಟಿಕೊಡಲಾಗಿರಲಿಲ್ಲ. ಅಂತೂ ಇಂತೂ ಅದಕ್ಕೆ ಕಾಲ ನಿನ್ನೆ ಕೂಡಿ ಬಂತು. "ನನ್ಗೆ ಬರೋಬ್ಬರಿ ೧೭ ಮಕ್ಕಳು.. ಬನ್ನಿ ನನ್ನ ಮಕ್ಕಳನ್ನ ನೋಡಲು.." ಎಂದು ಆಹ್ವಾನಿಸಿದ್ದ ಆ ಪ್ರೀತಿಯ ಕರೆಯೇ ನನ್ನೊಳಗೆ ಸದಾ ರಿಂಗುಣಿಸುತ್ತಿತ್ತು. ಅವರ ಮಕ್ಕಳನ್ನು ನೋಡಲು, ನನ್ನ ಮಗಳಾದ ಅದಿತಿ ಹಾಗೂ ನನ್ನ ತಂಗಿ, ಅವಳ ಮಗನಾದ ಆದಿತ್ಯನೊಡಗೂಡಿ ನನ್ನವರೊಂದಿಗೆ ಭೇಟಿಕೊಟ್ಟೆ. ಅಲ್ಲಿಗೆ ಹೋದ ಮೇಲೆಯೇ ತಿಳಿದಿದ್ದು.. ಮಾಲತಿಯವರ ಸಾಧನೆ, ಛಲ, ಪ್ರೇರಣಾ ಶಕ್ತಿ, ಹೋರಾಟ - ಇವೆಲ್ಲಾ ಯಾವುದೇ ಪರಿಮಿತಿಗೆ ಒಳಪಡದಂಥವು ಎಂದು! ಹಿಮಾಲಯದ ಕೆಳಗೆ ನಿಂತು, ಅದರ ತುತ್ತತುದಿಯನ್ನು ವೀಕ್ಷಿಸಲು ಹೆಣಗಾಡುವ ಮನುಷ್ಯನ ಪಾಡು ನನ್ನದಾಯಿತು.

ಈ ಪ್ರತಿಷ್ಠಾನವಿರುವುದು ಎಚ್.ಎ.ಎಲ್‌ನಲ್ಲಿ. ಎಚ್.ಎ.ಎಲ್. ಪೋಲಿಸ್ ಸ್ಟೇಷನ್ ದಾಟಿ ಎರಡನೇ ಎಡ ರಸ್ತೆಗೆ ತಿರುಗಿ (Opp. Petrol bunk), ಸುಮಾರು ೩೦೦ ಮೀಟರ್ ಸಾಗಿದ ಕೂಡಲೇ ಬಲಬದಿಗೆ ಒಂದು ದೊಡ್ಡ ಗೇಟ್ ಕಾಣುವುದು. ಗೇಟಿನ ಒಳ ಪ್ರವೇಶಿಸಿದ ಕೂಡಲೇ "ಮಾತೃ ಪ್ರತಿಷ್ಠಾನ" ಬೋರ್ಡ್ ನಿಮಗೆ ಕಾಣುವುದು. ಎಚ್.ಎ.ಎಲ್‌ನವರ ಕ್ವಾಟ್ರಸ್ ಒಂದನ್ನೇ ಬಾಡಿಗೆಗೆ ಪಡೆದು ಸುಮಾರು ೧೭ ವಿಶಿಷ್ಟ ಚೇತನವುಳ್ಳ ಮಕ್ಕಳನ್ನು ಸಾಕುತ್ತಿದ್ದಾರೆ. ಈ ಮಕ್ಕಳೆಲ್ಲಾ ಅನಾಥರಲ್ಲ. ದೂರದೂರುಗಳಿಂದ ಇಲ್ಲಿಗೆ ಬಂದಿದ್ದಾರೆ. ಮನೆಯಲ್ಲಿನ ಕಷ್ಟ, ಅಸೌಕರ್ಯಗಳನ್ನೆಲ್ಲಾ ಹಿಂದಿಕ್ಕಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಂದಿದ್ದಾರೆ. ಇಲ್ಲಿ ಅವರ ತಾಯಿ ಮಾಲತಿಯವರೇ. ಅವರೊಂದಿಗಿದ್ದು, ಅವರಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುವ ಯಶೋದಮ್ಮನೂ ಅವರಿಗೆ ಮತ್ತೊಬ್ಬ ತಾಯಿಯೇ. ವರ್ಷಕ್ಕೊಮ್ಮೆ ಶಾಲೆಗಳಿಗೆ ರಜೆ ಸಿಕ್ಕಿದಮೇಲೆ ತಮ್ಮ ತಮ್ಮ ಮನೆಗಳಿಗೆ ತೆರಳುವ ಅವರು, ವಾರಕ್ಕೊಮ್ಮೆ ತಮ್ಮ ಮನೆಯವರೊಂದಿಗೆ ದೂರವಾಣಿಯ ಮೂಲಕ ಸಂಭಾಷಿಸುತ್ತಾರೆ. 

ನಾವು ಹೋದಾಗ ಮಾಲತಿಯವರು ಇರಲಿಲ್ಲ. ಮೀಟಿಂಗ್ ಒಂದನ್ನು ನಿರ್ವಹಿಸಲು ಜಯನಗರದ ಕಡೆ ಹೋಗಿದ್ದರು. ಆದರೂ  ಸತತವಾಗಿ ನಮ್ಮೊಂದಿಗೆ ಫೋನ್‌ ಸಂಪರ್ಕದಲ್ಲಿದ್ದರು. ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಹೋದಾಗ ಅಲ್ಲಿಯ ಮಕ್ಕಳಿಗಾಗಿ ಉಚಿತವಾಗಿ ಇಂಗ್ಲಿಷ್ ಕಲಿಸಲು "ನೀನಾ" ಅನ್ನುವವರು ಬಂದಿದ್ದರು. ಅವರ ತರಗತಿಗೆ ತೊಂದರೆ ಆಗದಂತೇ ಹುಡುಗರಿಗೆ ವಿಶ್ ಮಾಡಿ ಹೊರಗೆ ಬಂದ ನಾವು, ತುಸು ಕಾಲ ಅಲ್ಲೇ ಕಾಯ ತೊಡಗಿದೆವು. 

ಒಟ್ಟೂ ೧೭ ಮಕ್ಕಳಿರುವ ಈ ಪ್ರತಿಷ್ಠಾನದಲ್ಲಿ ಗುಲ್ಬರ್ಗಾ, ರಾಯಚೂರು, ಕಾರವಾರ - ಇತ್ಯಾದಿ ಕಡೆಗಳಿಂದ ೧೦ ವರ್ಷದಿಂದ ೨೩ ವರ್ಷದವರೆಗಿನ ವಿಶಿಷ್ಟ ಚೇತನರಿದ್ದಾರೆ. ಅವರಿಗೆ ಸರಿಯಾದ ಸೌಲಭ್ಯ, ಇಷ್ಟಪಟ್ಟ ವಿದ್ಯಾಭ್ಯಾಸ, ಕಾಲ ಕಾಲಕ್ಕೆ ವೈದ್ಯಕೀಯ ತಪಾಸಣೆ, ಓಡಾಟಕ್ಕೆ ಗಾಲಿ ಕುರ್ಚಿ, ಎಲ್ಲವನ್ನೂ ನೋಡಿಕೊಳ್ಳುವುದು "ಮಾಲತಿ ಹೊಳ್ಳರೇ"! ಇವರನ್ನು ತಮ್ಮ ಸ್ವಂತ ಮಕ್ಕಳಂತೇ ಕಾಪಾಡುತ್ತಿರುವ ಈ ಮಹಾತಾಯಿ, ಪ್ರತಿಯೊಬ್ಬರಿಗೂ ವಿದ್ಯಾಭ್ಯಾಸ ನೀಡುತ್ತಿದ್ದಾರೆ, ಅದೂ ಎಲ್ಲರೂ ಕಲಿಯುತ್ತಿರುವ ಶಾಲಿಗಳಿಗೇ ಇವರನ್ನೂ ಕಳುಹಿಸಿ ಓದಿಸುತ್ತಿದ್ದಾರೆ! ಆಮೂಲಕ ಅವರೊಳಗೆ ಸಮಾನತೆಯ ಅರಿವು ತುಂಬಿ, ಅದಮ್ಯ ಆತ್ಮವಿಶ್ವಾಸವನ್ನು ಬೆಳೆಸುತ್ತಿದ್ದಾರೆ. ಇಲ್ಲಿ ಒಂದನೇ ತರಗತಿಯಿಂದ, ಪಿ.ಯು.ಸಿವರೆಗೂ ಓದುತ್ತಿರುವ ಹುಡುಗರಿದ್ದಾರೆ. "ಅನುಕಂಪ ಕೀಳಿರಿಮೆ ತುಂಬಿದರೆ, ಸಮಾನತೆ ಆತ್ಮವಿಶ್ವಾಸವನು ತುಂಬುತ್ತದೆ" ಎನ್ನುವುದಕ್ಕೆ ಇಲ್ಲಿಯ ಮಕ್ಕಳೊಳಗಿನ ನಗು ಮುಖವೇ ಸಾಕ್ಷಿ.

ಈ ಹುಡುಗರ ಉತ್ಸಾಹ, ಧ್ಯೇಯೋದ್ದೇಶ, ಸ್ವಾವಲಂಬನೆ, ಆತ್ಮವಿಶ್ವಾಸ ಇವುಗಳನ್ನೆಲ್ಲಾ ಕಣ್ಣಾರೆ ಕಂಡೇ ಅನುಭೂತಿ ಪಡೆಯಬೇಕೇ ವಿನಃ ಕೇವಲ ಪದಗಳಲ್ಲಿ ಹಿಡಿಯಲಾಗದು!

ತಾನು ಬದುಕಿದ, ಬಾಳುತ್ತಿರುವ ಉದಾತ್ತ, ಧೀರ ಬದುಕನ್ನೇ ಇವರೊಳಗೂ ತುಂಬಿದ್ದಾರೆ, ತನ್ನದೇ ಅನುಭವಗಳ ಮೂಸೆಯಲ್ಲಿ ಇವರ ಭವಿಷ್ಯವನ್ನು ತಿದ್ದುತ್ತಿದ್ದಾರೆ. ೧೭ ಹುಡುಗರಲ್ಲಿ ಇಬ್ಬರಿಗೆ ನೌಕರಿ ಸಿಕ್ಕಿದ್ದು ಈಗ ೧೪ ಹುಡುಗರಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಆಗಿರುವ ಹೊಳ್ಳರು ಅಲ್ಲೇ ಇರಲಾಗದು. ಹಾಗಾಗಿ ಅನುಗಾಲ ಅವರೊಂದಿಗಿದ್ದು ಊಟ, ತಿಂಡಿ ಇನ್ನಿತರ ಸಹಾಯವನ್ನು ಒದಗಿಸಲು "ಯಶೋದಮ್ಮ" ಎಂಬ ಮತ್ತೋರ್ವ ತಾಯಿಯೂ ಅವರೊಂದಿಗಿದ್ದಾರೆ.

ಯಶೋದಮ್ಮರ ಕೆಲವು ಮನದ ಮಾತುಗಳು....
Yashodamma

"ನನ್ನ ಸ್ವಂತ ಮಕ್ಕಳು ನನ್ನ ದೂರ ಮಾಡಿದರೂ ಇವರೆಲ್ಲಾ ನನ್ನ ಮಕ್ಕಳೇ ಮೇಡಂ... ನಾನೇ ಸ್ವತಃ ಅಡುಗೆ ಮಾಡಿ ಬಡಿಸಿದರೇ ನನಗೆ ತೃಪ್ತಿ.. ಅದೇ ಕೆಲಸ ನನಗೆ ಸಿಕ್ಕಿದೆ..ಬೆಳಗ್ಗೆ ಟಿಫಿನ್ ರೆಡಿ ಮಾಡಿ, ಊಟಕ್ಕೆ ಕಟ್ಟಿಕೊಟ್ಟು ಬಿಡ್ತೀನಿ.. ಸ್ಕೂಲಿಗೆ ಹೋಗೋರನ್ನ ಮೊದ್ಲು ಬಿಟ್ಟು ಬಂದು, ಕಾಲೇಜಿಗೆ ಹೋಗೋರನ್ನು ಕರ್ಕೊಂಡು ಹೋಗ್ತಾರೆ.... ಇಲ್ಲಿ ನೆಮ್ಮದಿ ಇದೆ ಮೇಡಂ....ಮಾಲತಿ ಮೇಡಂ ನನಗೆ ಹಾಗೂ ನನ್ನ ಪತಿಗೆ ಆಶ್ರಯ ಕೊಟ್ಟಿದ್ದಲ್ಲದೇ ನಮ್ಮ ಎಲ್ಲಾ ಖರ್ಚನ್ನೂ ಇವರೇ ನೋಡಿಕೊಳ್ಳುತ್ತಿದ್ದಾರೆ.. ನನಗಾಗಿ ತಿಂಗಳು ತಿಂಗಳು ನನ್ನ ಅಕೌಂಟಿಗೆ ಕೂಡ ದುಡ್ಡು ಹಾಕ್ತಿದ್ದಾರೆ... ತುಂಬಾ ಒಳ್ಳೇವ್ರು ನಮ್ಮ ಮಾಲತಿ ಮೇಡಂ... ಈ ಮಕ್ಕಳೆಂದ್ರೆ ಅವ್ರಿಗೆ ಜೀವ..ವರ್ಷಕ್ಕೊಮ್ಮೆ ಟೂರಿಗೆ ಕರ್ಕೊಂಡು ಹೋಗ್ತಾರೆ ಎಲ್ರನ್ನೂ... ನನಗೆ ಈವರೆಗೆ ೨ ಸಲ ಓಪನ್ ಹಾರ್ಟ್ ಸರ್ಜರಿ ಆಯ್ತು.. ಅದರ ಖರ್ಚನ್ನೆಲ್ಲಾ ಇವ್ರೇ ನೋಡ್ಕೊಂಡ್ರು.." ಎಂದು ಕಣ್ತುಂಬಿಕೊಂಡ ೬೦ರ ಆಸುಪಾಸಿನ ಆ ಪ್ರೇಮಮಯಿಯನ್ನು ಕಂಡು, ಅವರ ಮಾತುಗಳನ್ನು ಕೇಳಿ ನಮ್ಮ ಮನದುಂಬಿ ಬಂದಿತ್ತು. 

ಮಕ್ಕಳಿಗಾಗಿ ಒಂದು ಮಾರುತಿ ಕಾರಿದ್ದು, ಓರ್ವ ಡ್ರೈವರ್ ಕಮ್ ಹೆಲ್ಪರ್ ಸಹ ಅವರೊಂದಿಗೇ ಇರುತ್ತಾನೆ.

ನಾವು ಮಕ್ಕಳೊಂದಿಗಿದ್ದಾಗಿನ ಕೆಲವೊಂದು ಭಾವಚಿತ್ರಗಳು ಇಲ್ಲಿವೆ...




ತದನಂತರ ಮಕ್ಕಳೊಂದಿಗೆ ತುಸು ಕಾಲ ಹರಟಿ, ಅವರ ವಿದ್ಯಾಭ್ಯಾಸ, ಆಶೋತ್ತರಗಳು, ಅವರ ಕನಸುಗಳನ್ನು ತುಸು ಹಂಚುಕೊಂಡು ಹಿಂತಿರುಗುವಾಗ ಮಾತ್ರ ಮನಸು ತುಂಬಾ ಹಗುರು, ಸ್ವಲ್ಪ ಭಾರ (ಹೆಚ್ಚು ಸಮಯ ಕಳೆಯಲಾಗದಿರುವುದಕ್ಕಾಗಿ..) "ನಮ್ಗೆಲ್ಲಾ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ ಮೇಡಂ... ಒಬ್ಬೊಬ್ರಿಗೆ ಒಂದೊಂದು ಪ್ಲೇಯರ್ಸ್ ಇಷ್ಟ.. ನಾವೆಲ್ಲಾ ನಮ್ಗೆ ಆದ ಹಾಗೆ ಕ್ರಿಕೆಟ್ ಆಡ್ತೀವಿ.. ನಮ್ಮನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕರ್ಕೊಂಡು ಹೋಗಿದ್ರು.. ಅಲ್ಲಿ ನಾವು ಆಸ್ಟ್ರೇಲಿಯಾ ಹಾಗೂ ಇಂಡಿಯನ್ ಪ್ಲೇಯರ್ಸ್ ಎಲ್ಲಾ ಮೀಟ್ ಮಾಡಿದ್ವಿ..ನಿಮ್ಮನ್ನೆಲ್ಲಾ ನೋಡಿ ತುಂಬಾ ಸಂತೋಷವಾಯ್ತು.. ಮತ್ತೆ ಬನ್ನಿ ಇಲ್ಲಿಗೆ..." - ಈ ರೀತಿ ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು, ಕನಸುಗಳನ್ನು, ಸವಿನೆನಪುಗಳನ್ನು ಹಂಚಿಕೊಂಡಾಗ ಅರಿಯದ ಆನಂದವುಂಟಾಗಿತ್ತು. 

ಬರುವ ಮುನ್ನ ಒಬ್ಬೊಬ್ಬರನ್ನೂ ಮಾತನಾಡಿಸಿ, ಅವರ ಹೆಸರನ್ನೂ, ಓದುತ್ತಿರುವ ತರಗತಿಯನ್ನೂ ಬರೆದುಕೊಂಡು ಬಂದೆ. ನಾವು ಹೋದಾಗ ಅಲ್ಲಿ ೧೨ ಹುಡುಗರಿದ್ದರು... ಅವರ ವಿವರಗಳು ಈ ಕೆಳಗಿನಂತಿದೆ.

ಹೆಸರು             ಓದುತ್ತಿರುವುದು
೧. ಕಾಲೆಬ್ -             4th Std
೨. ಪ್ರಕಾಶ್ -             9th Std
೩. ಪ್ರದೀಪ್ -            5th Std
೪. ಮಧುರಾಜ್ -        4th Std
೫. ಸಂಜಯ್ -           1st Std
೬. ನಾಗೇಶ್ -            4th Std
೭. ರಮೇಶ್ -             10th Std
೮. ಹಾವಣ್ಣ -              2nd P.U.C (Arts) 
೯. ಶಶಿಕುಮಾರ್ -      ITI (Fitter)
೧೦ ಶರೀಫ್ -            Ist P.U.C
೧೧. ಶಿವಕುಮಾರ್ -   2nd P.U.C (Arts) 
೧೨. ಬೀರಪ್ಪ -           2nd P.U.C (Commerce with Computer courses)

ಇವರಲ್ಲೋರ್ವನಾಗಿರುವ ಶಿವಕುಮಾರ್ ಎನ್ನುವವರು(ಫೋಟೋದಲ್ಲಿ ಕೇಸರಿ ಬಣ್ಣದ ಟೀ ಶರ್ಟ್‍ನಲ್ಲಿರುವವರು..) ಕಂಪ್ಯೂಟರ್ ಕೋರ್ಸ್‌ಗಳನ್ನೂ ಮಾಡಿದ್ದಾರೆ. ಡಿ.ಟಿ.ಪಿ., ಫೊಟೋಶಾಪ್ ಓದಿದ್ದಾರೆ. ಅಲ್ಲದೇ ಸುಮಾರು ೨೫ ಕವನಗಳನ್ನೂ, ಒಂದು ಕಿರು ಕಾದಂಬರಿಯನ್ನೂ ಬರೆದಿದ್ದಾರೆ! ಅವರ ಕೆಲವೊಂದು ಕವನಗಳನ್ನು ಫೋಟೋ ತೆಗೆದುಕೊಂಡು ಬಂದೆ.. ಅವುಗಳಲ್ಲಿ ಎರಡು ನಿಮಗಾಗಿ... 


ಇವರ ಪ್ರತಿಭೆ ಎಲೆಮರೆಯ ಕಾಯಂತಿರದೇ ಹೊರ ಬಂದರೆ ಅವರ ಆತ್ಮವಿಶ್ವಾಸಕ್ಕೆ ಮತ್ತಷ್ಟು ಇಂಬು ದೊರಕುವುದು.

ಹೊತ್ತು ಕಳೆಯುತ್ತಿದ್ದಂತೇ ಸ್ವಲ್ಪ ಗಲಾಟೆಗೆ ತೊಡಗಿದ ಅದಿತಿ ಹಾಗೂ ಆದಿತ್ಯರಿಂದಾಗಿ ಅರೆಮನಸಿನಿಂದಲೇ ಅಲ್ಲಿಂದ ಹೊರಡಬೇಕಾಯಿತು. ಎಲ್ಲರಿಗೂ ಶುಭಕೋರಿ, ಅವರೆಲ್ಲರ ಆತ್ಮೀಯತೆ, ಪ್ರೀತಿ, ನಗುಮುಖಗಳನ್ನೇ ತುಂಬಿಕೊಂಡು ಅಲ್ಲಿಂದ ಹೊರಡುವಾಗಿ ಸಂಜೆ ಆರೂವರೆಯಾಗಿತ್ತು.

ವಿನಮ್ರ ವಿನಂತಿ :

ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ತಿಳಿಯಬಾರದಂತೆ. ಆದರೆ ಇತರರಿಗೆ ಉಪದೇಶಿಸುವ ನೀವು ಏನು ಮಾಡಿದ್ದೀರೆಂದು ಕೇಳಬಾರದಲ್ಲಾ.. ಹಾಗಾಗಿ ತಿಳಿಸುತ್ತಿದ್ದೇನೆ.

ನಾವು ಬೇಕಾದ್ದಕ್ಕೆ ಬೇಡದ್ದಕ್ಕೆ ಸಾಕಷ್ಟು ಖರ್ಚು ಮಾಡುತ್ತೇವೆ.  ಹುಟ್ಟಿದ ದಿನ ಅಂದರೆ ಏನು ಎಂದೇ ತಿಳಿಯದ ವರುಷದ ಮಗುವಿನ ಬರ್ತಡೇ‌ಗಾಗಿ ಸಾವಿರಗಟ್ಟಲೇ ಸುರಿಯುತ್ತೇವೆ. ಆದರೆ ಅದೇ ಹಣದಲ್ಲಿ ಅಲ್ಪ ಉಳಿಸಿ ಇಂತಹ ಸಂಸ್ಥೆಗಳಿಗೆ ಕೊಟ್ಟರೆ ಬೆಲೆಗಟ್ಟಲಾಗದ ಹಾರೈಕೆಗಳು ನಮ್ಮೊಂದಿಗಿರುತ್ತವೆ. ಜೊತೆಗೆ ಅನೂಹ್ಯ ತೃಪ್ತಿ, ನೆಮ್ಮದಿ ಅವರೊಂದಿಗೆ ನಮಗೂ ದೊರಕುತ್ತದೆ. ಹಾಗಾಗಿಯೇ ನಾನು "ಅದಿತಿಯ" ಹುಟ್ಟು ಹಬ್ಬವನ್ನು ಪ್ರತಿವರ್ಷ ಈ ರೀತಿ ಆಚರಿಸಲು ನಿರ್ಧರಿಸಿದೆ. ಅವಳ ಮೊದಲ ಹುಟ್ಟು ಹಬ್ಬದಿಂದಲೇ ಈ ಕಾರ್ಯಕ್ಕೆ ಮುನ್ನುಡಿ ಬರೆದೆ. ಮೊದಲ ಎರಡು ವರ್ಷವೂ ಅವಳ ಹುಟ್ಟಿದ ದಿನಾನಂತರ ಬಸವನಗುಡಿಯಲ್ಲಿರುವ "ಅನಾಥ ಶಿಶುವಿಹಾರಕ್ಕೆ" ಅದಿತಿಯೊಂದಿಗೇ ಭೇಟಿಕೊಟ್ಟು, ಮಕ್ಕಳೊಂದಿಗಿದ್ದು, ಅಲ್ಪ ಕಾಣಿಕೆ ನೀಡುವುದರ ಮೂಲಕ ನಮ್ಮ ಸಂತೋಷ ಹಂಚಿಕೊಂಡಿದ್ದೆವು. ಈ ವರ್ಷ "ಮಾತೃ ಪ್ರತಿಷ್ಠಾನಕ್ಕೆ" ಭೇಟಿ ಕೊಟ್ಟೆವು. ಮಕ್ಕಳಿಗೆ ತಮ್ಮ ಸಮಾಜದಲ್ಲಿರುವ ಅಸಮಾನತೆ, ನೋವು, ಕಷ್ಟಗಳ ಅರಿವನ್ನು ಕ್ರಮೇಣ ಮಾಡಿಸಬೇಕಾದ್ದು ಹೆತ್ತವರ ಕರ್ತವ್ಯ. ಸುಖದ ಜೊತೆ ಕಷ್ಟವಿರುವುದರ ತಿಳಿವು ಅತ್ಯಗತ್ಯ. ಪರೋಪಕಾರದ ಅರ್ಥವನ್ನು ನಾವು ಮಾಡುವುದರ ಮೂಲಕ ಅವರಿಗೆ ಅರಿವು ಮಾಡಿಸಬೇಕು. ನೆನಪಿರಲಿ ಇಂದಿನ ಮಗುವೇ ನಾಳಿನ ಪ್ರಜೆ!

ದಯವಿಟ್ಟು ನೀವು ನಿಮ್ಮಲ್ಲಾದಷ್ಟು ಅಲ್ಪ ಸಹಾಯವನ್ನು ಇಂತಹ ಪ್ರತಿಷ್ಠಾನಗಳಿಗೆ ನೀಡಿ. ಮಾತೃ ಪ್ರತಿಷ್ಠಾನಕ್ಕೆ ಸಹಾಯದ ಅಗತ್ಯತೆ ಇದೆ. ಇಷ್ಟೇ ಕೊಡಬೇಕು, ಇದನ್ನೇ ನೀಡಬೇಕೆಂದಿಲ್ಲ. ಅವರು "೧೦ರಿಂದ ೨೩ರ ವಯೋಮಿತಿಯ ಹುಡುಗರ ಹಳೆಯ ಬಟ್ಟೆಗಳನ್ನು ಕೊಟ್ಟರೆ ಉತ್ತಮ... ಅಕ್ಕಿ, ಸಕ್ಕರೆ, ತರಕಾರಿ, ಹಣ್ಣು, ಧವಸ ಧಾನ್ಯಗಳನ್ನಾದರೂ ಸರಿಯೇ.... ಹಣದ ಸಹಾಯ ಮಾಡಲಾಗದಿದ್ದರೂ ತುಸು ಕಾಲ ಅವರೊಂದಿಗೆ ಬೆರೆತು ಸಂತೋಷ ಹಂಚಿಕೊಳ್ಳಿ ಸಾಕು.." ಎಂದಷ್ಟೇ ವಿನಂತಿಸಿದ್ದಾರೆ. ಮಾಲತಿ ಹೊಳ್ಳರ ಸಾಧನೆಗೆ, ಹೋರಾಟಕ್ಕೆ, ಅವರ ಈ ಒಂದು ಅತ್ಯುತ್ತಮ ಕಾರ್ಯಕ್ಕೆ ನೆರವಾಗುವ ಹೊಣೆಗಾರಿಗೆ ಪ್ರತಿಯೊಬ್ಬರ ಹೆಗಲ ಮೇಲೂ ಇದೆ. ಅವರು ಮಾಡುತ್ತಿರುವ ಕಾರ್ಯ ಸಮಾಜಮುಖಿಯಾಗಿದ್ದು, ಆ ಮಹಾನ್ ಸಾಧನೆಗೆ ಎಲ್ಲರ ಅಲ್ಪ ಕೊಡುಗೆಯೂ ಸೇರಿದರೆ ಅವರ ಈ ಕಠಿಣ ಮಾರ್ಗ ಮತ್ತಷ್ಟು ಸುಗಮವಾಗುವುದಲ್ಲದೇ ಇನ್ನೂ ಅನೇಕ ವಿಶಿಷ್ಟ ಚೇತನರಿಗೆ ಬದುಕು ನೀಡುವುದು. ಅದೆಷ್ಟೋ ವಿಶಿಷ್ಟ ಚೇತನರು ಇಂತಹ ಮಾತೃ ಛಾಯಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸ್ಥಳದ ಅವಕಾಶವಿಲ್ಲದೇ, ಸೂಕ್ತ ದೇಣಿಗೆಗಳಿಲ್ಲದೇ ಅವರಿಗೆಲ್ಲಾ ಸ್ಥಳ ಕೊಡುವುದು ಬಹು ಕಷ್ಟಕರವೇ. ಜಾತಿ ಮತ ಬೇಧವಿಲ್ಲದೇ ನಿಃಸ್ವಾರ್ಥತೆಯಿಂದ, ತನ್ನೊಳಗಿನ ದೌರ್ಬಲ್ಯಗಳನ್ನೆಲ್ಲಾ ಮೆಟ್ಟಿ ನಿಂತು, ಅದಮ್ಯ ಶಕ್ತಿಯನ್ನು ಪ್ರದರ್ಶಿಸುತ್ತಿರುವ ಈ ಸ್ಪೂರ್ತಿಯ ಚೇತನಕ್ಕೆ ನಮಸ್ಕರಿಸುತ್ತಾ ಅವರ ಈ ಸತ್ ಕಾರ್ಯಕ್ಕೆ ಯಶಸ್ಸು ಕೋರುವೆ. ಅಲ್ಲಿರುವ ಒಬ್ಬೊಬ್ಬ ವಿಶಿಷ್ಟ ಚೇತನನೊಳಗೂ ನೂರಾರು ಜನರ ಉತ್ಸಾಹವಿದೆ, ಛಲವಿದೆ, ಗುರಿಯಿದೆ, ಸಾಧಿಸುವ ಹುಮ್ಮಸ್ಸಿದೆ. ಈ ಉತ್ಸಾಹ, ಹುಮ್ಮಸ್ಸು ಸದಾ ಅವರೊಂದಿಗೆ ಇರಲೆಂದು ಮನಃಪೂರ್ವಕವಾಗಿ ಪ್ರಾರ್ಥಿಸುವೆ, ಹಾರೈಸುವೆ.

ಇವರ ಬದುಕಿನ ಆಶಾಜ್ಯೋತಿಗಾಗಿ ಎಲ್ಲರಿಂದಲೂ ಬೆಂಬಲ ಹಾಗೂ ಸಹಾಯವನ್ನು ನಿರೀಕ್ಷಿಸುತ್ತಾ....

-ತೇಜಸ್ವಿನಿ ಹೆಗಡೆ.
[note : Please mail me if you want any other details regarding this..]

ಗುರುವಾರ, ಜನವರಿ 13, 2011

ಅಂತರ್ಗಾಮಿ

ಕೃಪೆ : "ತರಂಗ"
"ಅಲ್ಲಾ...ಈ ಅಣ್ಣಯ್ಯಂಗೆ ಎಂತಾ ಆಜು ಹೇಳಿ.... ಬಂಗಾರದಂಥ ಮಾಣಿ....ಮುತ್ತಿನಂಥ ಕೂಸು....ಇಬ್ರೂ ಗೊತ್ತಿದ್ದವೇಯಪಾ... ಆದ್ರೂ ಹೀಂಗೆಲ್ಲಾ ಮಳ್ಳು ಹರೀತಾ ಇದ್ದ ಇಂವ....ಎಂತಾ ಆಯ್ದೋ ಸುಬ್ಬಣ್ಣಂಗೆ ಮಾದೇವಿ.." ಎಂದು ಪಿಸುಗುಟ್ಟಿದ ಕಮಲತ್ತೆಯ ಮಾತು, ತುಸುವೇ ದೂರ ಕುಳಿತು ಹಿಟ್ಟು ರುಬ್ಬುತ್ತಿದ್ದ ಸೀತೆಗೆ ಬೇಡ ಬೇಡವೆಂದರೂ ಕೇಳಲು, ಹೊಟ್ಟೆಯೊಳಗೆ ವಿಚಿತ್ರ ಸಂಕಟವಾಯಿತು. ಎಡಗೈ ಬೀಸುಗುಂಡನ್ನು ಶಕ್ತಿ ಮೀರಿ ರುಬ್ಬುತ್ತಿದ್ದರೆ ಬಲಗೈ ಆಗೀಗ  ಹೊರ ಬರುತ್ತಿದ್ದ ಅಕ್ಕಿ ಉದ್ದನ್ನು ಗುಂಡಿಗೆ ಮರು ದೂಡುತ್ತಿತ್ತು. ಮನಸೆಲ್ಲಾ ಅಷ್ಟು ದೂರ ಕುಳಿತು ಊಟಕ್ಕಾಗಿ ಬಾಳೆ ತೊಳೆಯುತ್ತಿದ್ದ ಮಾದೇವಿ ಚಿಕ್ಕಿ ಹಾಗೂ ಕಮಲತ್ತೆಯ ಮಾತುಗಳೆಡೆಯೇ ಇದ್ದುದರಿಂದಲೋ ಏನೋ..ಅವಳರಿವಿಲ್ಲದಂತೆಯೇ ಬೀಸುತಿದ್ದ ಗುಂಡು ಅಕ್ಕಿ ಉದ್ದು ದೂಡುತ್ತಿದ್ದ ಬಲಗೈ ಕಿರುಬೆರಳಿಗೆ ತುಸು ಸೋಕಲು ಜೀವ ನಿಂತಂತಾಗಿ "ಅಯ್ಯೋ ಅಬ್ಬೇ.." ಎಂಬ ಚೀತ್ಕಾರ ಹೊರ ಬಿತ್ತು. ಅಲ್ಲೇ ಸಮೀಪ ಇದ್ದ ಅವಳ ಚಿಕ್ಕಮ್ಮ ಹಾಗೂ ಅತ್ತೆಯರು ಓಡಿ ಬರಲು, ತನ್ನ ಪೆದ್ದು ತನವ ಮುಚ್ಚಲು, "ಎಂತೂ ಆಯ್ದ್ರಿಲ್ಯೆ....ಅದು ಕೈ ತಪ್ಪಿ ಗುಂಡು ತಾಗೋತು.. ಚೂರು ತಾಗ್ದಾಂಗಾತಪ... ಗ್ಯಾನ ಎಲ್ಲೋ ಇತ್ತು... ಅಂಥದ್ದೆಂತೂ ಆಜಿಲ್ಲೆ .."ಎಂದು ಸಮಜಾಯಿಸುತ್ತಾ ಅಲ್ಲೇ ಹತ್ತಿರದ ತೋಪಿನಲ್ಲಿದ್ದ ತಣ್ಣೀರಿನೊಳಗೆ ಬಲಗೈ ಕಿರುಬೆರಳನ್ನು ಅದ್ದಿ ತೆಗೆದಳು. ಅಷ್ಟೇನೂ ಪೆಟ್ಟಾಗದಿದ್ದರೂ ಅವಳ ಕಣ್ಣಾಲಿಗಳನ್ನು ತುಂಬಿದ್ದ ನೀರನ್ನು ನೋಡಿ ಮಾದೇವಿ ಚಿಕ್ಕಿಗೆ ಕೆಡುಕೆನಿಸಿತು.

"ತಂಗಿ...ನಿನ್ನ ಕಷ್ಟ ಅರ್ಥ ಆಗ್ತು... ಹೆತ್ತಪ್ಪನೇ ಈ ರೀತಿ ಮಾತಾಡಿದ್ರೆ ಯಾರಿಗೂ ಬೇಜಾರಾಗ್ತು. ನೀ ತಲೆ ಕೆಡ್ಸಕಳಡ. ಎಲ್ಲಾ ಸರಿಯಾಗ್ತು.... ನಿಮ್ಮನೆ ತಮ್ಮಂಗೆ ಸ್ವಲ್ಪ ತಾಳ್ಮೆ ತಗಂಬ್ಲೆ ಹೇಳು. ಸುಬ್ಬು ಭಾವನೋರ ಹಠ ಗೊತ್ತಿಲ್ಲದ್ದಲ್ಲ.... ಈಗಂತೂ ಎಪ್ಪತ್ತು ವರ್ಷ ಆತು... ಅನಾರೋಗ್ಯನೂ ಕಾಡ್ತಿದ್ದು.. ಏನೋ ಹಠ ಹಿಡದ್ದ.... ಚಿಂತೆ ಮಾಡಡ..."ಎಂದು ತನಗೆ ತಿಳಿದಷ್ಟು ಸಮಾಧಾನಿಸಿ ಒಳಕೆಲಸದ ನೆಪಮಾಡಿಕೊಂಡು ಕಮಲತ್ತೆಯನ್ನೂ ಕರೆದೊಯ್ದಳು.....ಸೀತೆಗೆ ಬೇಕಾಗಿರುವ ಏಕಾಂತದ ಅರಿವು ಅವಳಿಗೆ ಚೆನ್ನಾಗಿ ಗೊತ್ತಿತ್ತು.

ಹೊನ್ನಗದ್ದೆ ಸುಬ್ಬಯ್ಯ ಭಟ್ಟರ ಸಂಸಾರ ಬಹಳ ದೊಡ್ಡದಲ್ಲದಿದ್ದರೂ ತೀರ ಚಿಕ್ಕದೂ ಆಗಿಲ್ಲ. ಎರಡು ಜನ ತಮ್ಮಂದಿರು, ಓರ್ವ ತಂಗಿಯ ಅಣ್ಣನಾಗಿದ್ದ ಅವರೇ ಮನೆಯ ಯಜಮಾನ. ಹಾಗಾಗಿಯೇ ಸ್ವಭಾವತಃ ತುಸು ದರ್ಪ, ಅಹಂ, ಶಂಠಂ ಎಲ್ಲವೂ ಮೈಗೂಡಿತ್ತು. ಆದರೆ ನಿಷಕ್ಷಪಾತಿ.....ತಪ್ಪು, ಸರಿಯ ಜ್ಞಾನ ಉಳ್ಳುವನು. ತೀರಾ ಮೊಲಕ್ಕೆ ಮೂರೇ ಕಾಲು ಎನ್ನುವವರಲ್ಲದಿದ್ದರೂ ಸಂದರ್ಭ ಬಂದರೆ ನಾಲ್ಕು ಕಾಲೇ ಇರುವುದೆಂಬ ಸತ್ಯವನ್ನೂ ಅಲ್ಲಗಳೆಯುವವರು. ಐವತ್ತು ವರುಷದ ಹಿಂದೆಯೇ ಸಣ್ಣ ಕುಟುಂಬಕ್ಕೆ ಒತ್ತಾಸೆ ಕೊಟ್ಟವರು. ದುಡ್ಡಿದ್ರೆ ದೊಡ್ಡಪ್ಪ... ದುಡ್ಡು ಸದಾ ನಮ್ಜೊತೆ ಇರವು ಅಂದ್ರೆ ಮನೆಲಿ ತಿಂಬವೂ ಕಡ್ಮೆ ಇರವು... ಉಂಬಲೆ ಗತಿ ಇಲ್ಲೆ.. ಮಕ್ಕ ಮಾತ್ರ ಹತ್ತಿಪ್ಪತ್ತು ಅಂತಾದ್ರೆ ಎಂಥಾ ನಾಚ್ಕೆ... ಎಂದು ಸದಾ ಹೇಳುತ್ತಿದ್ದರು. ಅಂತೆಯೇ ಮಗಳು ಸೀತೆ, ಮಗ ನಾರಾಯಣ ಮಾತ್ರ ಅವರ ಕುಡಿಗಳಾಗಿದ್ದರು. ಊರವರೆಲ್ಲಾ "ಭಟ್ರು ಬ್ರಿಟೀಷರ ಪ್ರಭಾವಕ್ಕೆ ಬಿದ್ದು ಮಳ್ಳಾಗೋಜ್ರು... ಸತ್ಮೇಲೆ ಹೊರಲೆ ನಾಲ್ಕು ಜನಬೇಕು... ಅದ್ಕಾದ್ರೂ ನಾಲ್ಕು ಗಂಡ್ಮಕ್ಳಾದ್ರೂ ಬ್ಯಾಡ್ದ? ಇದೆಂಥ ಮಳ್ಳನಪಾ...."ಎಂದು ಗೇಲಿ ಮಾಡಿಕೊಳ್ಳುತ್ತಲೇ..."ಸುಬ್ಬುಮಾವ ಮನೇಲಿ ತಾಪತ್ರಯ ಒಂದು ಹತ್ತು ರೂಪಾಯಿದ್ರೆ ಕೊಟ್ಟೀರು... ಅಡಕೆ ವಕಾರಿ ಆದ್ಕೂಡ್ಲೇ ಕೊಡ್ತಿ.."ಎಂದು ಕೈಗಡ ಪಡೆದು ತಿಂಗಳುಗಟ್ಟಲೇ ತಲೆಮರೆಸಿಕೊಳ್ಳುತ್ತಿದ್ದರು. ಸೀತೆಗೆ ಹತ್ತುವರುಷವಾಗುವಾಗಲೇ ಭಟ್ಟರಿಗೆ ಪತ್ನಿ ವಿಯೋಗ ಉಂಟಾಗಿತ್ತು. ಮಕ್ಕಳ ಮೋಹ ಅವರ ಕಾಮನೆಗಳಿಂಗಿಂತ ಜಾಸ್ತಿಯೇ ಆಗಿತ್ತೆಂದು ಕಾಣುತ್ತದೆ....ಹಾಗಾಗಿ ಮತ್ತೊಂದು ಮದುವೆಗೆ ಮನಸು ಮಾಡಲೇ ಇಲ್ಲ. ಹಳೆ ತಲೆಮಾರಿನವರಾಗಿದ್ದರೂ ಸುಬ್ಬಯ್ಯ ಹೆಗಡೆ ತೀರಾ ಗೊಡ್ಡು ಸಂಪ್ರದಾಯ, ಆಚರಣೆಯನ್ನು ನೆಚ್ಚಿದವರೂ ಅಲ್ಲ. ಊರಿನ ಜಾತ್ರೆಯಲ್ಲಿ ಕಂಡು...ಪರಸ್ಪರ ಮೆಚ್ಚಿ, ಮದುವೆ ಪ್ರಸ್ತಾಪ ತಂದ ನೀಲೇಕಣಿ ಶ್ರೀನಿವಾಸ ಜೋಯಿಸನಿಗೇ ತಮ್ಮ ಮಗಳನ್ನು ಧಾರೆ ಎರೆದು ಕೊಟ್ಟಿದ್ದರು. "ಜಾತ್ಕ, ಪಾತ್ಕ ಎಲ್ಲಾ ನಮ್ಮ ಮನ್ಸಿನ ಮುಂದೆ ಎಂತೂ ಅಲ್ಲ... ಕೂಸು ಮಾಣಿ ಮೆಚ್ಕಂಡಾತಲಿ... ಸಾಕು ಎಲ್ಲಾ ಸರಿ ಆದ ಹಾಂಗೇಯಾ..."ಎಂದು ಸಾರಿ ಹದಿನೈದು ದಿನದೊಳಗೇ ಮದುವೆ ಮಾಡಿ ಮುಗಿಸಿದ್ದರು. ಹಣಕಾಸಿನಲ್ಲಿ ತಮಗಿಂತ ಉತ್ತಮರಾಗಿದ್ದ ಅವರ ಮಗಳನ್ನು ತಮ್ಮ ಮನೆತುಂಬಿಸಿಕೊಂಡಿದ್ದರೂ ಮನದೊಳಗೆ ಮಾತ್ರ ಪ್ರವೇಶ ನೀಡಲಿಲ್ಲ ಶ್ರೀನಿವಾಸನ ತಾಯಿ ಜಗದಂಬಾ. ತನ್ನ ಸೋದರಿಕೆಯ ಸಂಬಂಧ ತರಬೇಕೆಂದು ಆಶಿಸಿದ್ದ ಅವರಿಗೆ ಮಗನ ಆಶಯ ಅಡ್ಡ ಬಂದಿತ್ತು. ಸೀತೆಯೇ ಏನೋ ಮಂಕು ಬೂದಿ ಎರಚಿ ಒಳಹಾಕಿಕೊಂಡು ಮದುವೆಯಾಗಿದ್ದಾಳೆಂದೇ ವಾದಿಸಿದ ತಾಯಿ ಹೃದಯ, ಮೊದಲ ದಿನದಿಂದಲೇ ಅಸಮಾಧಾನ ಪ್ರಕಟಿಸತೊಡಗಿದ್ದಳು. ಇದಕ್ಕೆ ಇಂಬುಕೊಟ್ಟಿದ್ದು ಸೀತೆಯ ಬಂಜೆತನ. ವರುಷ ಹತ್ತಾಗಿದ್ದರೂ ವಂಶಕ್ಕೊಂದು ಕುಡಿ ಕಾಣಿಸಿದ ಆಕೆಯನ್ನು ಮನಸೋ ಇಚ್ಛೆ ಜರೆದ ಜಗದಾಂಬ ಒಂದು ದಿನ ನಿರ್ಧಾರ ತಳೆದವಳಂತೇ ಭಟ್ಟರ ಬಾಗಿಲ ಮುಂದೆ ಮೊಕ್ಕಾಂ ಹೂಡಿಬಿಟ್ಟಿದ್ದಳು.

"ಸುಬ್ಬಣ್ಣ... ನಮ್ಮನೆ ಮಾಣಿ ನಿಮ್ಮನೆ ಕೂಸ್ನ ಇಷ್ಟ ಪಟ್ಟ.... ಆನು ದೂಸರಾ ಮಾತಾಡ್ದೇ ಒಪ್ಪಿ ಮನೆ ತುಂಬ್ಸ್‌ಕಂಡಿ...ನಿನ್ನ್ ಮಗ ನಾರಾಯಣಂಗೋ ಈಗಾಗ್ಲೇ ಒಂದು ಗಂಡು ಮಗು ಆಯ್ದು..... ಹಾಂಗಾಗಿ ನಿಂಗಕಿಗೆ ಈ ಬಿಸಿ ತಾಗಿದ್ದಿಲ್ಲೆ.....ಆದ್ರೆ ನಂಗೂ ಮೊಮ್ಮಕ್ಕಳ ಆಡ್ಸವು ಅನ್ನಿಸ್ತಿಲ್ಯ? ನಂಗೂ ಒಬ್ನೇ ಮಗ....ಬೇರೆ ಮಕ್ಕನೂ ಇಲ್ಲೆ. ನಮ್ಮನೆಯವ್ರಂತೂ ಇದೇ ಕೊರ್ಗಲ್ಲೇ ಸತ್ತು ಸ್ವರ್ಗ ಕಂಡ್ರು. ನನ್ಗೂ ಅದೇ ಗತಿನೇ ಕಾಣ್ತು...ಇನ್ನೊಂದ್ವರ್ಷ ಆನು ಕಾಯ್ತಿ...ಆಮೇಲೆ ನಾನು ನಮ್ಮನೆ ಮಾಣಿಗೆ ಇನ್ನೊಂದು ಮದ್ವೆ ಮಾಡವ್ನೇಯಾ...ಅಂವೇನಾದ್ರೂ ಕೊಂಯ್ ಪಂಯ್ ಅಂದ್ರೆ ಇಲ್ಲೇ... ನಿಮ್ಮನೆ ಮುಂದೇನೇ ವಿಷ ತಗ ಸಾಯ್ತಿ... ಆ ಪಾಪಕ್ಕೆ ನಿಂಗವೇ ಹೊಣೆ ಆಗ್ತ್ರಿ. ಈಗಿಂದನೇ ನಿಮ್ಮ ಮಗ್ಳಿಗೂ ಹೇಳಿಡಿ ಮತ್ತೆ..."ಎಂದವಳೇ ಒಳಗೂ ಬರದೇ ಬಿರ ಬಿರನೆ ಬಿರು ಬಿಸಿಲಿನಲ್ಲೇ ಹೋಗಿದ್ದಳು. ಸೀತೆಯ ಅತ್ತೆ ತುಸು ಒರಟೆಂದು ತಿಳಿದಿದ್ದರೂ ಇಷ್ಟೊಂದೆಂದು ಭಟ್ಟರಿಗೂ ತಿಳಿದಿರಲಿಲ್ಲ. ಹುಟ್ಟಿಕೊಂಡ ದೊಡ್ಡ ಸಮಸ್ಯೆಯ ಪರಿಹಾರಕ್ಕಾಗಿ ಪೂರ್ತಿ ನಂಬದ ದೇವರನ್ನೇ ಮೊರೆ ಹೋಗಿದ್ದರು. ಸೀತೆಯ ಗೋಳಿಗೋ ಇಲ್ಲಾ ಭಟ್ಟರ ಪ್ರಾರ್ಥನೆಗೋ...ಒಲಿದ ದೇವರು ವರುಷದೊಳಗೇ ಸೀತೆಯ ಒಡಲೊಳಗೆ ಜೀವವನ್ನು ತುಂಬಿದ. ಅದೇ ಸಮಯದಲ್ಲೇ ಭಟ್ಟರ ಮಗನಾದ ನಾರಾಯಣನ ಹೆಂಡತಿಗೂ ಎರಡನೆಯ ಮಗುವಾಗುವ ಶುಭ ಸೂಚನೆ ಕಾಣಲು, ಸುಬ್ಬಯ್ಯನವರ ಸಂತೋಷಕ್ಕೆ ಪಾರವೇ ಇರದಂತಾಯಿತು. ಚೊಚ್ಚಿಲ ಹೆರಿಗೆಗಾಗಿ ಮಗಳನ್ನು ಮನೆಗೆ ತಂದ ಭಟ್ಟರು, ಸೊಸೆಯನ್ನು ತವರಿಗೆ ಕಳಿಸಲಿಲ್ಲ. ಸೊಸೆಯ ತವರಲ್ಲಿ ನೋಡುವವರೇ ಇಲ್ಲದುದ್ದರಿಂದ ಅವರೇ ಎಲ್ಲಾ ಏರ್ಪಾಡನ್ನೂ ಮಾಡಿದ್ದರು. ನುರಿತ ಸೊಲಗಿತ್ತಿ, ಮನೆಯ ಒಳ ಹೊರಗಿನ ಕೆಲಸಕ್ಕೆ ಆಳು-ಕಾಳು ಎಲ್ಲವುದನ್ನೂ ಓಡಾಡಿ ಹೊಂದಿಸಿದ್ದರು. ಪತ್ನಿಯ ವಿಯೋಗ ಮೊದಲೇ ಆಗಿದ್ದರೂ ತಮ್ಮಂದಿರ ಹೆಂಡಿರ ಅನುಭವ ಶಿಶುಗಳ ಲಾಲನೆಗೆ ಬಹು ಸಹಾಯವಾಗಿತ್ತು. ಹೆರಿಗೆ ಸಮಯ ಸನಿಹವಾಗಲು...ಒಂದೇ ದಿನ, ಒಂದೇ ಕಡೆ, ಒಂದೇ ಸಮಯದಲ್ಲೇ ಸೀತೆ ಗಂಡು ಮಗುವಿಗೆ ಜನ್ಮವಿತ್ತರೆ, ನಾರಾಯಣನ ಹೆಂಡತಿ ಶಾರದೆ ಹೆಣ್ಣುಮಗುವಿಗೆ ಜನ್ಮವಿತ್ತಳು.

ಮನುಷ್ಯ ಸಮಯದ ಕೈಗೊಂಬೆ. ಒಂದು ಸಮಸ್ಯೆ ಪರಿಹಾರವಾಯಿತೆಂದಲ್ಲಿ, ಇನ್ನೊಂದು ಎದುರಾಗಿರುತ್ತದೆ. ಮಗಳು ಸೀತೆಯ ಬಾಳು ಸುಸ್ಥಿತಿಗೆ ಬಂತೆನ್ನುವಾಗಲೇ ಬೆಳೆದ ಮೊಮ್ಮಕ್ಕಳ ಮೂಲಕ ದೊಡ್ಡ ಸಮಸ್ಯೆಯೊಂದು ವೃದ್ಧ ಭಟ್ಟರೆದುರು ಬಂದು ನಿಂತಿತ್ತು. ಒಂದೇ ಕಡೆ ಹುಟ್ಟಿ, ಬೇರೆ ಬೇರೆ ಕಡೆ ಬೆಳೆದ ಎರಡು ಕುಡಿಗಳು ಕಾಲಕ್ರಮೇಣ ಮನಸನ್ನೂ ಒಂದಾಗಿಸಿದ್ದೇ ಈಗ ಭಟ್ಟರ ಪಾಲಿಗೆ ದೊಡ್ಡ ಪ್ರಮಾದವಾಗಿತ್ತು. ಸೀತೆಯ ಮಗ ವಿನಾಯಕ, ತನ್ನದೇ ಓರಗೆಯವಳಾದ, ಸೋದರ ಮಾವನ ಮಗಳೂ ಆದ ವೀಣಾಳನ್ನು ಮೆಚ್ಚಿ, ಮದುವೆಗೆ ತಯಾರಾಗಿದ್ದ. ಇದನ್ನು ತಿಳಿದದ್ದೇ ಭಟ್ಟರು ಕೆಂಡಾಮಂಡಲರಾಗಿದ್ದರು. "ಈ ಮನೆಹಾಳ ಬುದ್ಧಿ ಅವಂಗೆ ಎಲ್ಲಿಂದ ಬಂತು? ಸೀತೆಗಾದ್ರೂ ಬಿದ್ಧಿ ಇರಡ್ದ? ನಾರಾಯಣ....ನಿನ್ನ ಹೆಂಡ್ತಿಗೆ ಹೇಳು ಸ್ವಲ್ಪ.....ಮಗ್ಳ ಹದ್ದುಬಸ್ತಿನಲ್ಲಿಡದು ಗೊತ್ತಿಲ್ಯ ಅದ್ಕೆ? ಇಂಥ ಅಪಾರ್ಥ ಅಪ್ಪಲೆ ನಾನು ಪ್ರಾಣ ಇಪ್ಪುವರೆಗೂ ಬಿಡ್ತ್ನಿಲ್ಲೆ....ಕೊಲೆಯಾದ್ರೂ ತೊಂದ್ರೆ ಇಲ್ಲೆ ಯನ್ನ ಕೈಲಿ..."ಎಂದೆಲ್ಲಾ ಕೂಗಾಡಿದ್ದ ಅಪ್ಪ ಹೊಸಬನಾಗಿ ಕಂಡಿದ್ದ ಸೀತೆಗೆ. ಹಲವಾರು ವರ್ಷಗಳ ಹಿಂದೆಯೇ ತನ್ನ ಮೆಚ್ಚಿ ಮುಂದೆ ಬಂದ ಶ್ರೀನಿವಾಸನಿಗೆ ತನ್ನ ಕೊಟ್ಟಿದ್ದ ಅಪ್ಪ ಇಂದು ಎಲ್ಲಾ ತಿಳಿದು, ಬಲ್ಲ ತನ್ನ ಮಗನಿಗೆ, ಅವರ ಮೆಚ್ಚಿನ ಮೊಮ್ಮಗನಿಗೆ ತನ್ನ ಮೊಮ್ಮಗಳನ್ನು ಕೊಡಲು ತೀವ್ರ ವಿರೋಧಿಸಿದ್ದು ದೊಡ್ಡ ಆಘಾತವಾಗಿತ್ತು.  ‘ಛೇ...ಎಲ್ಲಾ ಗೊತ್ತಿದ್ದೂ ಈ ಅಪ್ಪಯ್ಯ ಯಾಕೆ ಹೀಗಾಡ್ತಿದ್ದಾನೋ.... ವೀಣಾ, ವಿನಾಯಕ ಒಂದೇ ಓರಗೆಯವ್ರಾಗಿದ್ದೇ ದೊಡ್ಡಾ ಅಪವಾದವೇ? ಪ್ರೀತಿಯ ಮೊಮ್ಮಗನಿಗೇ ಮನೆಯ ಮೊಮ್ಮಗಳನ್ನು ಕೊಡಲೇಕೆ ಅಪ್ಪಯ್ಯ ಹಿಂದೇಟು ಹಾಕ್ತಿದ್ದಾರೋ? ಅವ್ರಿಗೆ ಅವ್ರ ಪ್ರತಿಷ್ಠೆಯೇ ದೊಡ್ಡದಾಯ್ತೇ? ವಿನುವಿನ ನಂತರ ಬೇರೆ ಮಕ್ಕಳ ಭಾಗ್ಯವೂ ನನಗಿಲ್ಲದಾಯ್ತು.... ಈಗ ಇದ್ದೊಬ್ಬ ಮಗನ ಇಚ್ಛೆಯನ್ನಾದರೂ ಪುರೈಸ ಹೊರಟರೆ... ಅಲ್ಲಾ ಎಲ್ಲಾರೂ ಒಪ್ಪಿದ್ರೂ.. ಸ್ವತಃ ನನ್ನ ಅತ್ತೆಯೇ ಒಪ್ಪಿರುವಾಗ... ಯಾಕಾದ್ರೂ ಅಪ್ಪ ತಡೆ ಹಾಕ್ತಿದ್ದಾನೋ..." ಎಂದೆಲ್ಲಾ ಯೋಚಿಸಿ ಹಣ್ಣಾಗಿದ್ದಳು ಸೀತೆ. ತನ್ನ ಮನದ ಇಂಗಿತವನ್ನೆಲ್ಲಾ ಅಪ್ಪನ ಮುಂದೆ ನಿವೇದಿಸಿಕೊಂಡು, ಬೇಡಿಕೊಂಡರೂ ಭಟ್ಟರು ಹಠ ಬಿಟ್ಟಿರಲಿಲ್ಲ. "ನೀ ಎಂತಾ ಗೋಳಾಡಿದ್ರೂ ನನ್ನ ಪ್ರಾಣ ಇಪ್ಪಲ್ಲಿವರೆಗೆ ನಾನು ಒಪ್ಪದಿಲ್ಲೆ. ವೀಣಾನ್ನ ಈಗಾಗಲೇ ನಾನು ನನ್ನ ಗೆಳೆಯ ಶ್ರೀಹರಿ ಮಗಂಗೆ ಮದ್ವೆ ಮಾಡಿ ಕೊಡ್ತಿ ಹೇಳಾಜು....ಆಣೆ ಮಾಡಿಕಿದ್ದಿ ಆ ದೇವ್ರ ಮುಂದೆ....ಹಾಂಗಾಗಿ ದುಸರಾ ಮಾತಿಲ್ಲೆ ಇನ್ನು... ಹೋಗ್ತಾ ಇರು.."ಎಂದು ತೀರಾ ಕಟುವಾಗಿ ನುಡಿದಾಗ ಅಲ್ಲೇ ಇದ್ದ ವಿನಾಯಕ ದುರ್ದಾನ ಪಡೆದವನಂತೇ ತಾಯಿಯನ್ನು ಕರೆದೊಯ್ದಿದ್ದು. ಹೋಗುವ ಮುನ್ನ "ಅಜ್ಜಯ್ಯ.. ನಾನೂ ನಿಂದೇ ಮೊಮ್ಮಗ.. ಅದು ಹೇಂಗೆ ನೀ ಈ ಮದ್ವೆ ತಡೀತೆ ನಾನೂ ನೋಡ್ತಿ.... ಮುಂದಿನ ತಿಂಗ್ಳ ಊರಿಗೆ ಬಂದವ ದೇವಸ್ಥಾನದಲ್ಲಿ ವೀಣಂಗೆ ತಾಳಿಕಟ್ಟೀ ಕರ್ಕಂಡೇ ಹೋಗ್ತಿ.. ನೋಡ್ತಿರು.. ನಿನ್ನ ಹಠ, ಒಣ ಪ್ರತಿಷ್ಠೆ ಎಲ್ಲಾ ನಂಗ್ಳ ಹತ್ರ ನಡೀತಿಲ್ಲೆ..."ಎಂದು ಸವಾಲು ಹಾಕಿಯೇ ಹೋಗಿದ್ದ. ಒಳಮನೆಯೊಳಗೆ ಎಲ್ಲಾ ಕೇಳಿಸಿಕೊಳ್ಳುತ್ತಿದ್ದ ವೀಣಾಳ ಮೊಗದಲ್ಲಿ ನೆಮ್ಮದಿ ಮೂಡಿತ್ತು. ಅವನ ದೃಢ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿದ್ದಳು.

****

ಹಾಗೆ ಹೋದ ಸೀತೆ ಬಂದಿದ್ದು ಇಂದೇ...ಅದೂ ಹಾಸಿಗೆಯಲ್ಲಿ ಆಗೋ ಇಗೋ ಅನ್ನುವಂತಿದ್ದ ಅಪ್ಪನಿಗಾಗಿ ಮಾತ್ರವಲ್ಲ... ಮರುದಿವಸವಿದ್ದ ತಾಯಿಯ ಶ್ರಾದ್ಧಕ್ಕಾಗಿಯೂ ಕೂಡ. ನಡೆದ ರಾದ್ಧಾಂತವೆಲ್ಲಾ ಭಟ್ಟರ ಮನೆಯವರಿಗೆ ತಿಳಿದಿದ್ದರಿಂದ...ಸೀತೆಯ ಮುಖ ಕಂಡೊಡನೇ ಅದೇ ಮಾತು ಹೊರಡುತಿತ್ತು. ಯಾಂತ್ರಿಕವಾಗಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದ ಸೀತೆಯ ಮನಸೆಲ್ಲಾ ಅಪ್ಪನ ಅನಾರೋಗ್ಯದೆಡೆಗೊಮ್ಮೆ ಎಳೆದರೆ, ಮಗದೊಮ್ಮೆ ಮಗನ ಮನದಾಸೆಯೆಡೆಗೆ...ನಡುವೆ ತನ್ನ ಹಿಂದೆ ಮುಂದೆ ಸುಳಿದಾಡುತ್ತಿದ್ದ ಸೋದರ ಸೊಸೆ ವೀಣಾಳ ಪರದಾಟವನ್ನು ನೋಡುವಾಗ ಕಿರುನಗೆಯೂ ಮೂಡುವುದು. ಶ್ರಾದ್ಧದ ಊಟ ಮುಗಿಯುತ್ತಿದ್ದಂತೆಯೇ ಭಟ್ಟರು ಮಗ ನಾರಾಯಣನನ್ನು ತಮ್ಮ ಕೋಣೆಗೆ ಕರೆಸಿಕೊಂಡು ತುರ್ತಾಗಿ ಮೊಮ್ಮಗ ವಿನಾಯಕನನ್ನು ಕರೆಸುವಂತೆ ಹೇಳಲು ಎಲ್ಲರೂ ಗಾಬರಿಬಿದ್ದರು. ನಾಲ್ಕು ತಾಸಿನ ದೂರದಲ್ಲಿದ್ದ ವಿನಾಯಕ ಟ್ಯಾಕ್ಸಿ ಹಿಡಿದು ಊರು ಸೇರುವಾಗ ರಾತ್ರಿ ಒಂಬತ್ತು ಗಂಟೆ. ಆತ ಬರುವವರೆಗೂ ಗಳಿಗೆಗೊಮ್ಮೆ "ವಿನು ಬಂದ್ನನ್ರೇ? ಬಂದ್ಕೂಡ್ಲೇ ಯನ್ನ ಹತ್ರ ಕಳ್ಸಿ.... ನಾ ಹೀಂಗೇ ಸತ್ರೆ ದೇವ್ರು ಮೆಚ್ಚ.... ಸಮಯ ಹತ್ರ ಬತ್ತಿದ್ದು... ತಮ್ಮಾ ವಿನಾಯ್ಕ ಬೇಗ ಬಾರೋ...."ಎಂದು ಹಲುಬುತ್ತಲೇ ಇದ್ದ ಅಜ್ಜನ ಬಳಿ ಮೊಮ್ಮಗನನ್ನು ಬಂದ ಕೂಡಲೇ ಕಳುಹಿಸಿದ್ದರು ಎಲ್ಲಾ. "ವಿನಾಯ್ಕನ್ನ ಒಬ್ನೇ ಕಳ್ಸಿ.. ನಿಂಗವು ಯಾರೂ ಬಪ್ಪದಿಲ್ಲೆ.. ನಂಗೆ ಅವ್ನ ಹತ್ರನೇ ಮಾತಾಡವು..."ಎಂದು ಕ್ಷೀಣವಾದ ದನಿಯಲ್ಲಿ ಒತ್ತಿ ಹೇಳಿದ್ದ ಅವರ ಮಾತಿಗೆ ಒಪ್ಪಿದ ನಾರಾಯಣ, ಅವನೊಬ್ಬನನ್ನೇ ಬಿಟ್ಟು ಬಾಗಿಲೆರೆಸಿಕೊಂಡು ಹೊರಹೋದ. ಆದರೆ ಒಳ ಹೋಗುತ್ತಿದ್ದ ಮಗನ ಬೆನ್ನನ್ನು ನೋಡುತ್ತಿದ್ದ ಸೀತೆಗೆ ವಿಚಿತ್ರ ಸಂಕಟವಾದರೆ, ವೀಣಾಳ ಮನದ ತುಂಬೆಲ್ಲಾ ಆತಂಕ ತುಂಬಿತು. "ಈ ಅಜ್ಜ ಎಲ್ಲಾದರೂ ಕೊನೆಗಳಿಗೆಯಲ್ಲಿ ತನ್ನ ಮದುವೆಯಾಗದಿರಲು ವಿನುವಿನ ಬಳಿ ಮಾತು ತೆಗೆದುಕೊಂಡರೆ ಏನು ಗತಿಯಪ್ಪಾ?" ಎಂದು ಅವಳ ಬುದ್ಧಿ ಯೋಚಿಸುತ್ತಿದ್ದರೆ, ಹೃದಯ ತನ್ನ ವಿನು ಇಂತಹ ಆಣೆ, ಭಾಷೆಗೆ ಸೊಪ್ಪು ಹಾಕುವವನಲ್ಲ ಎನ್ನುವ ಅಭಯ ನೀಡುತಿತ್ತು. ಎಲ್ಲೋ ಒಂದು ಕಡೆ..‘ಛೇ... ಇಷ್ಟು ವರುಷ ಪ್ರೀತಿ ತೋರಿದ ಅಜ್ಜಯ್ಯನ ಕೊನೆಗಳಿಗೆಯಲ್ಲೂ ತಾನು ಸ್ವಾರ್ಥಿಯಂತೇ ಯೋಚಿಸುತ್ತಿದ್ದೆನೇಯೇ?’ ಎಂಬ ಪಾಪಪ್ರಜ್ಞೆಯೂ ತಿವಿಯುತಿತ್ತು. ತಮ್ಮಂದಿರ, ನಾದಿನಿಯರ, ತಂಗಿ ಕಮಲಿಯ, ಎಲ್ಲಕ್ಕಿಂತ ಹೆಚ್ಚಾಗಿ ಮಗಳು ಸೀತೆಯ - ಎಲ್ಲರ ದೃಷ್ಟಿಯೂ ಕೋಣೆಯೆಡೆಗೇ ನೆಟ್ಟಿತ್ತು. 

ತನ್ನ ಬಳಿ ಬಂದ ಮೊಮ್ಮಗನ ಕೈ ಹಿಡಿದ ಭಟ್ಟರು, ತನ್ನ ಕಿವಿಯ ಬಳಿ ಎಳೆದರು ಪ್ರಯಾಸದಿಂದ. ‘ಅಜ್ಜಯ್ಯ ಬಹುಶಃ ಪಶ್ಚಾತ್ತಾಪ ಪಡುತ್ತಿರಬೇಕು....ಮದುವೆಗೆ ಅಸ್ತು ಎನ್ನಲು ಕರೆದಿರಬೇಕು..... ಇಲ್ಲಾ ತನ್ನ ಕೊನೆಯಾಸೆ, ಮಾತು ತಪ್ಪಡ..... ತಾನು ಬೇರೆ ಕಡೆ ಮಾತು ಕೊಟ್ಟಾಜು... ಮಣ್ಣು ಮಸಿ ಎಂದೆಲ್ಲಾ ಕೊರೆದು ತನ್ನ ಮಳ್ಳು ಮಾಡಲೂ ಕರೆಸಿರಬಹುದು. ಹಾಗೇನಾದ್ರೂ ಆಗಿದ್ದರೆ ಅವರ ಸಮಾಧಾನಕ್ಕೆ ಅಸ್ತು ಎಂದು.... ಕೆಲ ತಿಂಗಳು ಬಿಟ್ಟು ಮದುವೆಯಾಗುವುದು ವೀಣಾನ್ನ...’ ಎಂದೆಲ್ಲಾ ಯೋಚಿಸುತ್ತಾ ಬಂದಿದ್ದ ವಿನಾಯಕನಿಗೆ, ಅಜ್ಜ ತನ್ನ ಕಿವಿಯಲ್ಲುಸುರಿದ ಮಾತುಗಳನ್ನು ಕೇಳಿ ತಲೆಕೆಟ್ಟಂತಾಯಿತು. ಗೊರಗುಡುವ ದನಿಯಲ್ಲೂ ನುಡಿದ ನಾಲ್ಕೇ ನಾಲ್ಕು ಮಾತುಗಳು ಸ್ವತಃ ಸುಬ್ಬಯ್ಯ ಭಟ್ಟರಿಗೇ ಕೇಳಿಸಿತೋ ಇಲ್ಲವೋ....ಅವುಗಳನ್ನು ಕೇಳಿದ ವಿನಾಯಕನ ಮುಖದ ಬಣ್ಣ ಆ ಕತ್ತಲೆಯ ಕೋಣೆಯ ಬಣ್ಣಕ್ಕೆ ಸ್ಪರ್ಧಿಯಾಗಿತ್ತು.  "ಅಜ್ಜಯ್ಯ....ನೀನೇ ಪೂರ್ತಿ ಸತ್ಯ ಹೇಳು... ಇಷ್ಟೇ ಹೇಳಿರೆ ನಂಗೆ ಎಂತೂ ಅರ್ಥ ಆಗದಿಲ್ಲೆ... ನಾ ಈಗೆಲ್ಲಿ ಆ ನೀಲವ್ವನ ಹುಡ್ಕಿ ತೆಗೀಲಿ? ಸಿಕ್ರೂ ಎಂತಾ ಹೇಳಿ ಕೇಳ್ಲಿ? ದಯಮಾಡಿ ಅಜ್ಜಯ್ಯ.... ಎಲ್ಲಾ ನೀನೇ ಹೇಳೋ... ಒಂದ್ಸಲ ಎದ್ಕೋ..."ಎಂದು ಅಜ್ಜನ ಕೈ ಎಳೆದೆಬ್ಬಿಸುತ್ತಿದ್ದ ಮೊಮ್ಮಗನ ಮಾತುಗಳು ಕೇಳದಷ್ಟು ದೂರ ಸಾಗಿಯಾಗಿತ್ತು ಅವರ ಪಯಣ. ಅದನ್ನರಿಯಲೇ ಆತನಿಗೆ ಐದು ನಿಮಿಷ ಬೇಕಾಯಿತು. ಸುಮಾರು ಹತ್ತು ನಿಮಿಷದ ನಂತರ ಹೊರ ಬಂದ ಅವನೆಡೆಗೇ ಎಲ್ಲರೂ ನೋಡಲು, "ಎಲ್ಲದೂ ಮುಗತ್ತೂ... ಎಲ್ಲದೂ ಮುಗ್ದೇ ಹೋತು..."ಎನ್ನುತ್ತಾ ಅಲ್ಲೇ ಕುಸಿದು ಗೋಡೆಗೆ ಆತು ಕುಳಿತ. ಮನೆಯೊಳಗೆಲ್ಲಾ ರೋಧನ ತುಸುವೇ ಗತಿಯನ್ನು ಪಡೆಯತೊಡಗಿತು.

ಎಲ್ಲಾ ವಿಧಿಗಳು ಮುಗಿಯುವವರೆಗೂ ಮೌನವಾಗಿದ್ದು, ಯಾವುದೋ ಗುಂಗಿನಲ್ಲಿದ್ದಂತೆ ಕಾಣುತ್ತಿದ್ದ ವಿನಾಯಕನ ಪರಿ ಸೀತೆಗೆ ಹಾಗೂ ವೀಣಾಳಿಗೆ ಅರ್ಥವೇ ಆಗಿರಲಿಲ್ಲ. "ಸುಬ್ಬಯ್ಯ ಒಳಗೆ ಏನು ಹೇಳಿರಬಹುದೆಂಬ ಕುತೂಹಲದ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದ್ದರೂ ಅತೀ ಹೆಚ್ಚು ಹಿಂಸಿಸುತಿದ್ದುದು ವೀಣಾಳನ್ನು. ‘ಅಜ್ಜಯ್ಯ ನಮ್ಮ ಮದುವೆಗೆ ಸಮ್ಮತಿ ಕೊಟ್ಟಿದಿದ್ರೆ ವಿನು ತನ್ನ ಬಳಿ ಈಗಾಗಲೇ ಹೇಳುತ್ತಿದ್ದ.. ಎಲ್ಲರಿಗೂ ತಿಳಿಸಿಯೂ ಆಗುತಿತ್ತು..... ಒಂದೊಮ್ಮೆ ಮದ್ವೆ ಆಗದಿರುವಂತೇ ಆಣೆ-ಭಾಷೆ ತೊಗೊಂಡಿದ್ದ್ರೂ ಹೇಳಬೇಕಾಗಿತ್ತಲ್ಲಾ....ಯಾಕೆ ಇಷ್ಟೊಂದು ಮೌನವಾಗಿದ್ದನೋ ಈ ವಿನು...’ ಎನ್ನುವ ಗೊಂದಲ, ಅಸಹನೆ ಅವಳನ್ನು ಕಾಡುತಿದ್ದರೂ ಸೂಕ್ತ ಸಮಯಾವಕಾಶಕ್ಕಾಗಿ ಕಾಯುತ್ತಿದ್ದಳು. ಆ ಸಮಯ ಅವಳಿಗೆ ದೊರಕಿದ್ದು ನಾಲ್ಕನೆಯ ದಿನ... ಅದೂ ಅತ್ತೆ ಸೀತೆಯ ಜೊತೆ ಹಿತ್ತಲಿನ ತೋಟಕ್ಕೆ ಬಾಳೆ ಎಲೆಗಾಗಿ ಹೋದಾಗ ಅಲ್ಲೇ ಕೆರೆಯ ಬದುವಿನಲ್ಲಿ ಕುಳಿತಿದ್ದ ಭಾವನನ್ನು ಕಂಡು ಅವಳಿಗೆ ಸುಮ್ಮನಿರಲೇ ಆಗಲಿಲ್ಲ. "ಅತ್ತೆ ಅಲ್ನೋಡು... ಒಬ್ನೇ ಹೇಂಗೆ ಕೂತಿದ್ದ... ನಾಲ್ಕು ದಿನದಿಂದ ಯಾರ್ಜೊತೆಗೂ ಮಾತಿಲ್ಲೆ ಕತೆಯಿಲ್ಲೆ... ಊಟ ಅಂತೂ ಮಾಡಿದ್ರೆ ಮಾಡ್ದ... ಇಲ್ಲೆ ಅಂದ್ರೆ ಇಲ್ಲೆ... ನೀನೇ ಒಂದ್ಸಲ ಮಾತಾಡ್ಸು.."ಎಂದು ಕೋರಲು ಅದಕ್ಕಾಗಿಯೆ ತಾನೂ ಕಾಯುತ್ತಿದ್ದ ಸೀತೆ ಮಗನ ಬಳಿ ಬಂದಳು.

"ತಮ್ಮಾ... ಇದೆಂಥ ವೇಶ್ವೋ? ಹೋಪವು ಹೋಗ್ತೋ... ಎಂತ ಮಾಡಲೆ ಬತ್ತು. ಅಪ್ಪಯ್ಯ ಹೋದ ದುಃಖ ಎಲ್ಲರಿಗೂ ಇದ್ದು. ನಾನೂ ನುಂಗಿ ಉಣ್ತಾ ಇಲ್ಯಾ? ನೀನು ನೋಡಿದ್ರೆ ಎಲ್ಲಾ ಬಿಟ್ಟು ಒಂಟಿ ಆಗ್ತಾ ಇದ್ದೆ... ಅಜ್ಜಯ್ಯ ಹೋದ ಬೇಜಾರೊಂದೇಯೋ ಇಲ್ಲಾ ಮತ್ತೇನಾದ್ರೂವೋ.... ಹೌದು ಅಪ್ಪಯ್ಯ ಆವತ್ತು ಎಂತ ಅಂದ ನಿನ್ನ ಹತ್ರ?" ಎಂದು ಕೇಳಲು, ಅಮ್ಮನಿಗೆ ಉತ್ತರಿಸುವ ಬದಲು ಪಕ್ಕದಲ್ಲೇ ಇದ್ದ ದೊಡ್ಡ ಕಲ್ಲೊಂದನ್ನು ಬೀಸಿ ಕೆರೆಗೆಸೆದ ವಿನಾಯಕ, ಗುಳುಂ ಎಂದು ಸದ್ದು ಮಾಡುತ್ತಾ ಮುಳುಗಿದ ಅದು ಮೇಲ್ಗಡೆ ತರಂಗಗಳ ಅಲೆಯನ್ನು ಎಬ್ಬಿಸಿದ್ದನ್ನೇ ತದೇಕವಾಗಿ ನೋಡತೊಡಗಿದ.

"ಅಮ್ಮಾ... ನನ್ನ ಎಂತೂ ಕೇಳಡ.... ನೀ ಎಷ್ಟು ಕೇಳಿದ್ರೂ ಅಷ್ಟೇಯಾ... ಅಂಥದ್ದೇನೂ ಹೇಳಿದ್ನಿಲ್ಲೆ... ಈಗ ಸದ್ಯ ನನ್ನ್ ಪಾಡಿಗೆ ನನ್ನ್ ಬಿಟ್ವುಡು ಪ್ಲೀಸ್..."ಎಂದು ತುಸು ಗಟ್ಟಿಯಾಗಿ ಹೇಳಿದವನೇ ಕೆರೆಯ ಇನ್ನೊಂದು ತುದಿಗೆ ನಡೆದ. ಮಗನ ಸ್ವಭಾವವನ್ನು ಚೆನ್ನಾಗಿ ಅರಿತಿದ್ದ ಸೀತೆ ಕಣ್ಸನ್ನೆಯಲ್ಲೇ ವೀಣಾಳಿಗೆ ಮಾತನಾಡಿಸಲು ತಿಳಿಸಿ ಅಲ್ಲಿಂದ ಮೆಲ್ಲನೆ ಮನೆಯಕಡೆ ನಡೆದಳು. ಹುಟ್ಟಿದಂದಿನಿಂದ ಆಡಿ ಬೆಳೆದು, ನೋವು ನಲಿವು ಹಂಚಿಕೊಂಡು ಈಗ ತನ್ನವನಾಗಲು ಹೊರಟ ಭಾವನ ಈ ಪರಿ ತುಸು ಹೊಸತೆನಿಸಿತು ವೀಣಾಳಿಗೂ. ಆದರೂ ಸಮಾಧಾನ ತಂದುಕೊಂಡು ಮೆಲ್ಲನೆ ಅವನ ಬಳಿ ಬಂದವಳೇ ಮೃದುವಾಗಿ ಅವನ ಕೈ ಅಮುಕಿ ಕುಳಿತಳು. ಆದರೆ ಎಂದಿನಂತೇ ಸ್ಪಂದಿಸದ ವಿನಾಯಕ ಆಕೆಯ ಕೈಯನ್ನು ಬಿಡಿಸಿಕೊಂಡು ತುಸು ದೂರ ಸರಿದವನೇ "ವೀಣಾ ಪ್ಲೀಸ್ ನೀನಾದ್ರೂ ಸುಮ್ನಿರು.... ಅಮ್ಮಂಗೆ ಹೇಳಿದ್ದು ನಿಂಗೂ ಅನ್ವಯಿಸ್ತು ಅಲ್ದಾ? ದಯಮಾಡಿ ಯಾರೂ ನನ್ನ ಎಂತೂ ಕೇಳಡಿ... ಈಗ ನಾನು ಎಂತಾ ಕೇಳೂದಾಗ್ಲೀ.. ಹೇಳೂದಾಗ್ಲೀ ಮಾಡೋ ಪರಿಸ್ಥಿತಿಯಲ್ಲೇ ಇಲ್ಲೆ... ನನ್ನ ಒಬ್ನೇ ಬಿಡಿ..." ಎಂದು ಒರಟಾಗಿ ನುಡಿಯಲು ಅವಳ ಗಲ್ಲ ತೋಯತೊಡಗಿತು. ಅವಮಾನವಾದಂತಾಗಿ, ಧಿಗ್ಗನೆದ್ದು ಹೊರಟವಳನ್ನು "ಒಂದ್ನಿಮ್ಷ ವೀಣಾ..." ಎಂದ ಆತನ ಕರೆಗೆ ಥಟ್ಟನೆ ತಿರುಗಿದವಳ ಕಣ್ಗಳಲ್ಲಿ ಏನೋ ನಿರೀಕ್ಷೆ. "ವೀಣಾ ಸ್ಸಾರಿ....ಬೇಜಾರಾಗಿದ್ರೆ ... ಆದ್ರೆ ಈಗ ನಾನು ನನ್ನ ನಿಯಂತ್ರಣದಲ್ಲೇ ಇಲ್ಲೆ... ಹ್ಮ್ಂ.... ನೋಡು.. ನಾನು ಬೆಳ್ಗೆ ಬೇಗ ಎದ್ದು ಹೊರ್ಡ್ತಾ ಇದ್ದಿ... ಎಲ್ಲಿಗೋ ತುರ್ತಾಗಿ ಹೋಕಗಾಜು.. ಬೇಡ.. ನೀ ಈಗ್ಲೇ ಎಂತೂ ಕೇಳದೇ ಬೇಡ... ನಾನು ಬಪ್ಪಲೆ ಎರಡ್ಮೂರು ದಿನ ಆಗ್ತು... ಅಮ್ಮಂಗೇ ಹೇಳಿರೆ ಹತ್ತೆಂಟು ಪ್ರಶ್ನೆ ಕೇಳ್ತು.. ಅದ್ಕೇ ನಿಂಗೇ ಹೇಳ್ತಾ ಇದ್ದಿ.. ನೀನೇ ಹೇಳ್ವುಡು ಎಲ್ಲವ್ಕೂವಾ.....ಅಮ್ಮನ್ನ ಚೆನ್ನಾಗಿ ನೋಡ್ಕ....ನಾ ಹೋಗಿ...."ಎಂದವನಿಗೆ ಮುಂದೇನೂ ಹೇಳದಂತಾಯಿತು...ಕಣ್ಣೀರು ಉಕ್ಕಿಬರಲು, ಅವಳಿಗೆ ಬೆನ್ನು ಹಾಕಿ ಗುಡ್ಡದೆಡೆ ನಡೆದು ಬಿಟ್ಟ. ಯಾರೋ ತನ್ನ ಅಟ್ಟಿಸಿಕೊಂಡು ಬಂದಂತೇ ಬಿರ ಬಿರನೆ ಹತ್ತಿದ್ದ ಅವನನ್ನೇ ನೋಡುತ್ತಿದ್ದಳು ವೀಣಾ. 

ಬೆಳ್ಳಂ ಬೆಳಗ್ಗೆ ನಾಲ್ಕಕ್ಕೇ ಮನೆಯಿಂದ ಹೊರ ಬಿದ್ದ ವಿನಾಯಕ ಕುಮಟೆಯ ಸಾಲಕೇರಿಯ ಬಸ್ಸು ಹತ್ತುವಾಗ ಸೂರ್ಯ ಎಳೆ ಕಿರಣಗಳನ್ನು ಬೀರುತ್ತಿದ್ದ. ಚುಮು ಚುಮು ಚಳಿಗೆ ಬೆಚ್ಚಗೆ ಹೊದ್ದು ಮಲಗಿದ್ದ ಮನೆಯವರಿಗೆಲ್ಲಾ ಅವನ ನಿರ್ಗಮನ ತಿಳಿಯುವ ಸಾಧ್ಯತೆಯೇ ಇರಲಿಲ್ಲ. ರಾತ್ರಿಯಿಡೀ ಮಗನ ವರ್ತನೆಯನ್ನೇ ಚಿಂತಿಸುತ್ತಿದ್ದ ಸೀತೆಯೂ ಗಾಢ ನಿದ್ರೆಗೆ ಜಾರಿದ್ದರೆ, ವೀಣಾ ಮಾತ್ರ ನಿದ್ದೆಯನ್ನೇ ಮಾಡದೇ ಬಿರುಗಣ್ಣು ಬಿಟ್ಟುಕೊಂಡೇ ಅತ್ತೆಯ ಬಳಿ ಬಿದ್ದುಕೊಂಡಿದ್ದಳು. ಆ ನಿಶ್ಯಃಬ್ದತೆಯಲ್ಲಿ ವಿನುವಿನ ಹೊರಡುವಿಕೆಯ ಸಪ್ಪಳ ಸರಿಯಾಗಿ ಕೇಳುತಿತ್ತು. ಚಪ್ಪಲು ಮೆಟ್ಟಿ, ದಣಪೆ ಸರಿಸಿ ಮಣ್ಣಿನ ರಸ್ತೆಯಲ್ಲಿ ನಡೆದು ದೂರವಾಗುತ್ತಿದ್ದ ತನ್ನವನ ಆಕೃತಿಯನ್ನು ಕಿಟಕಿಯಿಂದ ನೋಡುತ್ತಾ ಅಲ್ಲೇ ಶಿಲೆಯಾದಳು.

****

"ಇಲ್ಲಿ ನೀಲವ್ವ ಅಂತ ಇದ್ದಾರಂತಲ್ರೀ... ಅದೇ ಘಟ್ಟದ ಮೇಲೆ ಕೆಲವರ್ಷದ ಹಿಂದೆ ಬಿಡಾರ ಹೂಡಿದ್ರಲ್ಲ... ಆ ನೀಲವ್ವ.... ಅವ್ರ ಮನೆ ಸ್ವಲ್ಪ ತೋರಿಸ್ತೀರಾ? ಎಂದು ಕೇರಿಯ ಮನೆಯೊಂದರ ಬಳಿ ಬಂದು ಕೇಳಿದವನನ್ನೇ ವಿಚಿತ್ರವಾಗಿ ನೋಡಿದ ಯಜಮಾನ. ಏನು ಎತ್ತ ಎಂದೆಲ್ಲಾ ವಿಚಾರಿಸಿ, ಅವನಿಂದ ಸಂಕ್ಷಿಪ್ತ ಉತ್ತರ ಪಡೆದ ನಂತರ ತನ್ನ ಮಗನ ಜೊತೆ ಮಾಡಿ ಕೇರಿಯ ಆ ತುದಿಯಲ್ಲಿದ್ದ ಹಣ್ಣು ಮುದುಕಿ ನೀಲವ್ವಳ ಮನೆಯ ಬಾಗಿಲಿಗೆ ಬಂದಾಗ ಸೂರ್ಯ ನೆತ್ತಿಯ ನಡುವಿಗೆ ಬಂದಿದ್ದು.

"ನೀಲವ್ವಾ...ಯಾರೋ ಘಟ್ಟದಿಂದ ಬಂದವ್ರೆ ನಿನ್ನ ಕೇಳ್ಕಂಡು ನೋಡು..."ಎಂದು ಕೂಗಿದವ್ನೇ ತನ್ನ ಮನೆಕಡೆ ನಡೆಯಲು ವಿನಾಯಕನ ಎದೆಬಡಿತ ಜೋರಾಯಿತು. ಗೊರಲು ಕೆಮ್ಮಿನ ಸದ್ದು ಒಳಗಿಂದ ಜೋರಾಗಲು ಆಕೆಯ ಆಗಮನದ ಅರಿವಾಯಿತು ವಿನಾಯಕನಿಗೆ. ಹಣ್ಣು ಹಣ್ಣಾದ ತಲೆ, ಸುಕ್ಕುಗಟ್ಟಿ ಪಕ್ಕದ ಚರ್ಮ, ಮಾಸಲು ಬಣ್ಣದ ಸೀರೆಯೊಂದನ್ನು ಸುತ್ತಿಕೊಂಡು, ದೊಣ್ಣೆಯೂರಿ ಮುದುಕಿ ಸಮೀಪವಾಗುತ್ತಿದ್ದಂತೇ ಆವರೆಗೂ ಹೊತ್ತು ತಂದಿದ್ದ ತ್ರಾಣವೆಲ್ಲಾ ಸೋರಿದಂತಾಗಿ, ಅಲ್ಲೇ ಕುಸಿದು ಕುಳಿತ ವಿನಾಯಕ. ಅವನ ಈ ಪರಿಯ ಕಂಡು ಗಾಬರಿ ಬಿದ್ದ ಮುದುಕಿ ತನ್ನ ಸೊಸೆಯನ್ನು ಕೂಗಿ ಗಂಗಾಳದ ತುಂಬಾ ನೀರು ತರಿಸಿ ಕೊಡಲು, ಜೀವರಸವನ್ನೇ ಹನಿ ಹನಿಯಂತೇ ಗಂಟಲಿಗೆ ಸುರಿದುಕೊಂಡ.

"ಎಲ್ಲಾತ್ರ ನಿಮ್ಗೆ? ನಂಗೆ ನಿಮ್ಮ ನೋಡಿದ್ದ್ ನೆಪ್ಪಿಲ್ಲಾ... ದೇಹದ್ ಜೊತೆ ಮನಸೂ ಮುಪ್ಪಾತು ನೋಡಿ... ಘಟದವ್ರಾ ತಾವು? ಅಲ್ಲಿ ಯಾವೂರು? ಯಾರ್ಮನೆ? ಇಲ್ ಬಂದಿದ್ದು?"ಎಂದು ಅಲ್ಲೇ ಕುಳಿತು ಕೇಳಿದಾಗ ಮಾತೇ ಹೊರಡದಂತಾಗಿ ತುಸು ಹೊತ್ತು ಸುಮ್ಮನೇ ಕುಳಿತ. ಅಜ್ಜಿಗೂ ಬೇರೆ ಕೆಲಸವಿಲ್ಲದ್ದರಿಂದ ಅಲ್ಲೇ ಕುಳಿತು ಉತ್ತರಕ್ಕಾಗಿ ಕಾಯತೊಡಗಿತು.

"ನೀಲವ್ವ... ನಾನು ಹೊನ್ನಗದ್ದೆ ಕಡೆಯಿಂದ ಬಂದಿದ್ದು... ಸುಬ್ಬಯ್ಯ ಹೆಗಡೇರ ಮೊಮ್ಮಗ.."ಎಂದಷ್ಟೇ ಹೇಳಿ ಅವಳ ಮೊಗವನ್ನೇ ನಿರೀಕ್ಷಿಸಲು ಅಲ್ಲಿ ನಿರೀಕ್ಷಿಸಿದ್ದ ಬದಲಾವಣೆ ಕಂಡಿತವನಿಗೆ.
 "ಎಂತಾ.. ಹೊನ್ನಗದ್ದೆ ದೊಡ್ಮನೆ ಭಟ್ರ ಮೊಮ್ಮಗನಾ? ಎಸ್ಟು ದೊಡ್ಡ ಕಾಣಿಸ್ತ್ರೀ ಒಡೆಯಾ... ದಿಟ್ಟಿ ಆಗೋವಂಗೆ ಇದ್ದ್ರಿ... ಭಟ್ರು ಹೇಂಗವ್ರೆ? ಇಲ್ಲಿಗೆ ಬಂದ ಇಸ್ಯ?"ಎಂದು ಕೇಳಿದವಳ ಮಾತೊಳಗೆ ಮೊದಲಿನ ನಿರುಮ್ಮಳತೆ, ಜೋರು ಕಾಣದಾಗಲು ಸತ್ಯ ಮತ್ತಷ್ಟು ಬಲವಾಯಿತು.
 "ನೀಲವ್ವ ಅಜ್ಜಯ್ಯ ಈಗಿಲ್ಲ... ಹೋದ್ವಾರಷ್ಟೇ ಹೋಗ್ಬಿಟ್ಟ... ಆದರೆ ಹೋಗೋ ಮುಂಚೆ ನಿಂಗೆ, ಅಜ್ಜಯ್ಯಂಗೆ ಮಾತ್ರ ಗೊತ್ತಿರೋ ಸತ್ಯ ಹೇಳಿದ್ದ ನಂಗೆ... ಆದ್ರೆ ಪೂರ್ತಿ ಅಲ್ಲಾ.... ನಂಗೆ ಸತ್ಯ ಪೂರ್ತಿ ಬೇಕು... ಇದು ನನ್ನ ಜೀವ್ನದ ಪ್ರಶ್ನೆ... ನೀನೇ ಹೇಳ್ಬೇಕು ನಂಗೆ"ಎನ್ನಲು ಮುದುಕಿಯ ಕೈಯೊಳಗಿದ್ದ ದೊಣ್ಣೆ ಅಲುಗಾಡಿತು. ಅವನ ಒತ್ತಾಯ ಜಾಸ್ತಿಯಾದಷ್ಟೂ ಅವಳ ಹಠ ಬಿಗಿಯಾಯಿತು. ಕೊನೆಗೆ ವಿಧಿಯಿಲ್ಲದೇ ಆತ ತಾನು ಸೋದರತ್ತೆ ಮಗಳಾದ ವೀಣಾಳನ್ನು ಮದುವೆಯಾಗುತ್ತಿರುವ ಸತ್ಯ ಹೊರ ಹಾಕಿದ್ದೇ ಅಜ್ಜಯ್ಯನಂತೇ ಹೌಹಾರಿ ಬಿದ್ದಳು.
 "ಈ ಅನರ್ಥ ಮಾಡ್ಬೇಡಿ ಒಡೆಯ... ಇದು ಸಲ್ಲ... ಅವ್ರಂತೂ ಬುದ್ಧಿ ಇಲ್ಲದಂತೇ ಮಾಡಿದ್ದ್ರು ಆಗ... ನೀವೂ ಈಗ.... ಬ್ಯಾಡ... ನಾ ಸತ್ಯ ಹೇಳ್ತೆ... ಎಲ್ಲಾ ಹೇಳ್ತೆ...ಆದ್ರೆ ನೀವು ಮಾತ್ರ ಈ ಕೆಲ್ಸ ಮಾಡ್ಕೂಡ್ದು..."ಎಂದವಳೇ ಸಮಯದ ಒಡಲಲ್ಲಿ ಭೂಗತವಾಗಿದ್ದ ಸತ್ಯವನ್ನು ಹೊರಹಾಕಿದ್ದಳು.

ಸೀತೆಯ ಅತ್ತೆಯ ಬೆದರಿಕೆಯ ಭೂತ ಸದಾಕಾಲ ಬೆಂಬಿಡದೇ ಕಾಡುತಿತ್ತು ಭಟ್ಟರನ್ನು. ಇದ್ದೊಬ್ಬ ಮಗಳಿಗೇ ಹೀಗಾಗಬೇಕೆ? ಸವತಿ ಬಂದು ಅವಳ ಬದುಕು ನರಕವಾದ್ರೆ ಹೇಗೆ ಸಹಿಸಲೆಂದು ಕೊರಗಿದ ಭಟ್ಟರಿಗೆ ಮಗಳು, ಮಗ ಇಬ್ಬರೂ ಸಿಹಿ ಸುದ್ದಿ ಕೊಟ್ಟಾಗ ತುಂಬಾ ನೆಮ್ಮದಿಯಾಗಿತ್ತು. ಆದ್ರೂ ಒಳಗೆಲ್ಲೋ ಅಶಂಕೆ.... ಎಲ್ಲಾ ಸುಸೂತ್ರವಾದರೆ ಸಾಕಪ್ಪಾ.. ಎಂದೇ ಬೇಡುತ್ತಿದ್ದರು. ಸೊಸೆ ಹಾಗೂ ಮಗಳಿಗೆ ಏನೊಂದೂ ಅನಾನುಕೂಲತೆ ಆಗದಂತೆ ಏರ್ಪಾಡಾಗಿತ್ತು. ಹೆರಿಗೆಗೆ ಒಂದು ತಿಂಗಳಿರುವಾಗಲೇ ಸೊಲಗಿತ್ತಿ ನೀಲವ್ವನನ್ನು ಮನೆಯಲ್ಲಿಟ್ಟುಕೊಂಡಿದ್ದರು. ಹೆರಿಗೆಗೆ ಇಪ್ಪತ್ತು ದಿನಗಳು ಬಾಕಿಯಿದ್ದವು...ಹೀಗಿರುವಾಗ ಊರ ಜಾತ್ರೆಯ ಗೌಜು ಎದ್ದಿತ್ತು. ವರುಷಕ್ಕೊಮ್ಮೆ ಬರುವ ಈ ಸಂಭ್ರಮಕ್ಕಾಗಿ ಮನೆ ಮಂದಿಯೆಲ್ಲಾ ಹೊರಟಿದ್ದರು. ಉಳಿದದ್ದು ಸೀತೆ, ಸೊಸೆ ಶಾರದೆ, ನೀಲವ್ವ ಹಾಗೂ ದೊಡ್ಡ ತಮ್ಮನ ಹೆಂಡತಿ. ಮನೆಯ ಭದ್ರತೆಗೆಂದು ಭಟ್ಟರೇ ಸ್ವತಃ ಉಳಿದಿದ್ದರು. ಮನೆಯಲ್ಲಿ ಒಬ್ಬಳೇ ಉಳಿದು ಚಿಕ್ಕ ಮೊಗಮಾಡಿಕೊಂಡಿದ್ದ ತಮ್ಮನ ಹೆಂಡತಿಯ ನೋಡಿ, ಪಾಪವೆನಿಸಿತ್ತು ಭಟ್ಟರಿಗೆ. "ಹೇಂಗಿದ್ರೂ ನೀಲವ್ವ ಇದ್ದು... ಹೆರ್ಗೆ ದಿನ ಇನ್ನೂ ದೂರ ಇದ್ದು... ಆನಂತೂ ಇಲ್ಲೇ ಇರ್ತಿ... ನೀ ಬೇಕಿದ್ರೆ ಪಕ್ಕದ ಹಾಲ್ಕಣಿಲೀ ನಡೀತಾ ಇಪ್ಪು ಆಟಕ್ಕೆ ಹೋಗು... ಚಿಂತೆ ಬ್ಯಾಡ.."ಎಂದು ಯಕ್ಷಗಾನಕ್ಕೆ ಕಳುಹಿಸಿದ್ದರು. ಆದರೆ ಅದ್ರೃಷ್ಟವೋ, ದುರಾದೃಷ್ಟವೋ... ತುಸು ಹೊತ್ತಿನಲ್ಲೇ ಇಬ್ಬರಿಗೂ ನೋವು ಕಾಣಿಸಿಕೊಳ್ಳಲು, ಗಾಭರಿ ಬಿದ್ದಿದ್ದರು. ನೀಲವ್ವ ನುರಿತವಳು... ಗಟ್ಟಿಯಾಗಿದ್ದಳು ಕೂಡ.... ಭಟ್ಟರಿಗೆ ಹಾಗೂ ಸೀತೆ, ಶಾರದೆಯರಿಗೆ ಧೈರ್ಯ ತುಂಬುತ್ತಾ ಒಳಗೆ ಹೊರಗೆ ಓಡಾಡಿ ಹೆರಿಗೆ ಮಾಡಿಸಿಯೇ ಬಿಟ್ಟಳು. ಚೊಚ್ಚಲ ಬಸುರಿ ಸೀತೆ ಹೆದರಿಕೆಯಿಂದ ಮೂರ್ಚೆ ತಪ್ಪಿದ್ದರೆ, ಶಾರದೆ ನೋವಿನ ತೀವ್ರತೆಗೆ ಮೂರ್ಛೆ ಬಿದ್ದಿದ್ದಳು. ಸೀತೆಗೆ ಹುಟ್ಟಿದ್ದ ಗಂಡು ಮಗು ಸತ್ತಿದ್ದರೆ ಶಾರದೆಗೆ ಒಂದು ಗಂಡು, ಒಂದು ಹೆಣ್ಣು! ಸುದ್ದಿ ಕೇಳಿದ ಭಟ್ಟರಿಗೆ ಅಳಬೇಕೋ... ನಗಬೇಕೋ ಎನ್ನುವ ಸ್ಥಿತಿ. ಮಗಳ ಮುಂದಿನ ಭವಿಷ್ಯದ ಚಿಂತೆ ಅವರನ್ನು ನಿಮಿಷ ನಿಮಿಷಕ್ಕೂ ಹಿಂಡಿ ಹಾಕುತಿತ್ತು. ತಾಸೆರಡು ಕಳೆಯಲು ಅವರಿಗೊಂದು ಯೋಚನೆ ಮೂಡಿತು. ಸೀತೆ, ಶಾರದೆಯಿಬ್ಬರಿಗೂ ಪ್ರಜ್ಞೆ ಮರಳಿರಲಿಲ್ಲ. ಶಿಶುಗಳೂ ನೀಲವ್ವ ಕುಡಿಸಿದ ನೀರನ್ನು ಕುಡಿದು ಸುಮ್ಮನೆ ಮಲಗಿದ್ದವು. ಕೋಣೆಯಲ್ಲಿದ್ದ ನೀಲವ್ವಳನ್ನು ಕರೆದ ಭಟ್ಟರು ಅವಳ ಕೈಗೆ ಅವಳು ಜೀವಮಾನದಲ್ಲಿ ಕಂಡಿರದಷ್ಟು ದುಡ್ಡನ್ನು ತುರುಕಲು ಅವಳಿಗೆಲ್ಲಾ ಅಯೋಮಯ. ನೀಲವ್ವಳಿಗೆ ಸೀತೆಯ ವ್ಯಥೆಯ ಕಥೆಯನ್ನು ಅರುಹಿದ ಭಟ್ಟರು ಪರಿಪರಿಯಾಗಿ ಬೇಡಲು, ಒಪ್ಪಿದ ನೀಲವ್ವ ಗಂಡು ಮಗುವನ್ನು ಸೀತೆಯ ಮಗ್ಗುಲಿಗೆ ಹಾಕಿದ್ದಳು. ಆದರೆ ಸಮಯ ಭಟ್ಟರ ಯೋಚನೆಯನ್ನೇ ತಲೆಕೆಳಗು ಮಾಡಿತ್ತು. ಮಗಳ ಭವಿಷ್ಯವನ್ನು ಗಟ್ಟಿಮಾಡುವಾಗ, ಮೊಮ್ಮಕ್ಕಳ ಬದಲಾದ ಸಂಬಂಧದ ಭವಿಷ್ಯತ್ತಿನ ಕುರಿತು ಯೋಚಿಸಿರಲೇ ಇಲ್ಲ. ಒಂದೇ ತಾಯಿಯ ಮಕ್ಕಳಾಗಿದ್ದರೂ ವಿನಾಯಕ, ವೀಣಾ ಹೆಸರಿಗೆ ಬೇರಾದ ಸಂಬಂಧದಿಂದ ಹೊಸ ಬಂಧ ಬೆಳೆಸಲು ಮುಂದಾಗಿದ್ದು ಸುಬ್ಬಯ್ಯ ಭಟ್ಟರಿಗೆ ದೊಡ್ಡ ಆಘಾತವಾಗಿತ್ತು. ಅಂತಿಮದಲ್ಲಿ ಸತ್ಯ ವಿನಾಯಕನಲ್ಲಿ ಹೇಳಬೇಕಾಗಿ ಬಂದು "ವೀಣಾ ನಿನ್ನ ಸ್ವಂತ ತಂಗಿ.... ಇದು ನನ್ಮಗ್ಳು ಸೀತೆ ಆಣೆಗೂ ಸತ್ಯ... ನಾನು ಖಂಡಿತ ಸುಳ್ಳಾಡ್ತಾ ಇಲ್ಲೆ... ಬೇಕಿದ್ರೆ ಸಾಲಿಕೇರಿಯಲ್ಲಿಪ್ಪ ನೀಲವ್ವನ್ನ ಕಾಣು

 ಅದ್ಕೆಲ್ಲಾ ಗೊತ್ತು..."ಎಂದವರೇ ಇಹಲೋಕ ಮುಗಿಸಿಬಿಟ್ಟಿದ್ದರು. ಅಂದಿನಿಂದ ಇಂದಿನವರೆಗೂ ಈ ಸತ್ಯ ಇಂಚಿಂಚಾಗಿ ವಿನಾಯಕನನ್ನು ಇರಿಯುತ್ತಿತ್ತು. ಅತ್ತ ಯಾರಲ್ಲೂ ಹೇಳಲಾಗದೇ ಇತ್ತ ಒಬ್ಬನೇ ಸಹಿಸಲಾಗದೇ ತಲೆ ಕೆಟ್ಟು ಹೋಗತೊಡಗಿತ್ತು. ನಿಜವನ್ನು ಪೂರ್ತಿ ತಿಳಿಯಲು ನೀಲವ್ವನ ಬಳಿ ಓಡಿ ಬಂದಿದ್ದ. 

****

 ನೀಲವ್ವಳಿಂದ ಕಟು ಸತ್ಯ ತಿಳಿದ ವಿನಾಯಕ ಯಾಂತ್ರಿಕವಾಗಿ ಬಸ್ಟಾಪಿಗೆ ಬಂದಾಗ ಸೂರ್ಯ ಅದಾಗಲೇ ಪಶ್ಚಿಮದೆಡೆ ವಾಲಿದ್ದ. ಆತನಿಗೀಗ ತನ್ನ ಅಸ್ತಿತ್ವವೇ ಒಂದು ಪ್ರಶ್ನೆಯಾಗಿ ಕಾಡತೊಡಗಿತು. ಅಮ್ಮನನ್ನು ಅತ್ತೆ ಎಂದು ಕರೆಯುವುದು ಅಸಾಧ್ಯ....ಹುಟ್ಟು ಹೇಗೆ ಆಗಿರಲಿ.... ಬದುಕು ಕಟ್ಟಿ ಕೊಟ್ಟಿದ್ದು ಅವಳೇ. ಆದರೆ ಕನಸು ಕಟ್ಟಿ ಕೊಟ್ಟ ವೀಣಾಳನ್ನು.....!? ‘ಛೇ ಎಂಥ ಕೆಲ್ಸ ಮಾಡಿದೆ ನೀ ಅಜ್ಜಯ್ಯ.....ಒಂದು ಬಾಳನ್ನು ಸರಿಪಡಿಸಲು ಹೋಗಿ ಈಗ ನಾಲ್ವರ ಬದುಕನ್ನೇ ಒಂದು ಪ್ರಶ್ನೆಯಾಗಿಸಿಬಿಟ್ಟೆ....ನಾನೀಗ ಏನ್ ಮಾಡ್ಲಿ? ನೀನೇನೋ ಹೋದೆ... ಹೊಗ್ತಾ ಸುಮ್ಮನೆ ಹೋಗ್ದೇ ಈ ಉರಿ ಸತ್ಯವನ್ನ ನಂಗಾದ್ರೂ ಏಕೆ ಹೇಳ್ದೇ? ಅಮ್ಮನಿಗೆ, ಅತ್ತೆಗೆ, ಮಾವನಿಗೆ, ಸ್ವತಃ ವೀಣಾಳಿಗೂ ಹೇಳಲು ಸಾಧ್ಯವಿದೆಯೇ ನನ್ನಿಂದ ಈ ಸತ್ಯ? ಹೇಳಿದರೂ, ಕೇಳಿದ ಅವರೆಲ್ಲರ ಬದುಕು ಏನಾಗಬಹುದು?! ನಾನೀಗ ಏನ್ ಮಾಡ್ಲಿ ಅಜ್ಜಯ್ಯ? ಸತ್ಯ ಒಪ್ಕೊಂಡು ಹೋಗ್ಲಾ? ಇಲ್ಲಾ ಈಗಿರುವ ನಂಬಿಕೆಯನ್ನೇ ಸತ್ಯವೆಂದು ಸುಮ್ಮನಿದ್ದುಬಿಡ್ಲಾ?" ಇವೇ ಮುಂತಾದ ಆಲೋಚನೆಗಳು, ಅಸಂಖ್ಯಾತ ಚಿಂತೆಗಳು ವಿನಾಯಕನನ್ನು ಮುತ್ತಲು ದಾರಿಗಾಣದಂತಾಗಿ ಬಸ್ಟಾಪಿನಲ್ಲೇ ಎಷ್ಟೋ ಹೊತ್ತಿನವರೆಗೆ ಕುಳಿತಿದ್ದ...ಹೊನ್ನಗೆದ್ದೆಗೆ ಅದೆಷ್ಟೋ ಬಸ್ಸುಗಳು ಅವನ ಮುಂದೇ ಹಾದು ಹೋಗುತ್ತಿದ್ದರೂ...

[@ಜನವರಿ ೬ರ ತರಂಗದಲ್ಲಿ ಪ್ರಕಟಿತ]




ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
courtesy - http://www.zazzle.com

-ತೇಜಸ್ವಿನಿ ಹೆಗಡೆ

ಶುಕ್ರವಾರ, ಜನವರಿ 7, 2011

ಸಪ್ತಮದಲ್ಲಿ.....

http://www.guardian.co.uk

ಆ ಬಲಗೈ ಬೆಸೆದಿದ್ದ ಬೆಸುಗೆಯಿಂದಲೋ
ಭಾವ ಮಂಥನದ ನಡುಕದಿಂದಲೋ
ಬೆವರಿದ ನನ್ನ ಬಲಗೈಯಿಂದೆದ್ದು,
ಹನಿಯುತ್ತಿದ್ದ ಬೆವರಿನಹನಿಗಳನ್ನೇ
ಬಾಗಿ ನೋಡುತ್ತಿದ್ದ ನೊಸಲ ಹನಿಗಳು.....
ಹೊಸ ರೇಶಿಮೆ ಸೀರೆಯ ಸರಪರದ ಸದ್ದು,
ಜೊತೆಗೆ ಮಲ್ಲೆ ಹೂವುಗಳ ಮತ್ತು,
ಅನೂಹ್ಯ ರೋಮಾಂಚನಕೆಳೆಸಿದ ಆ
‘ಸುಲಗ್ನೇ ಸಾವಧಾನ....ಸುಮುಹೂರ್ತೇ ಸಾವಧಾನ..’

ಲಾಜಹೋಮದಲ್ಲಿ ತುಸು ಬಿಸಿಯಾದ
ಕೈ ಸವರಿ ಮೆಲುನಕ್ಕಿದ ಆ ಪರಿ,
ಅರಳು ಹೊಯ್ದು ಮರಳು ಮಾಡಿ
ಕಣ್ಸೆರೆ ಹಿಡಿದು ಕೆಂಪಾಗಿಸಿದಾ ನೋಟ,
ಕೊರಳೊಳಗಿನ ಕರಿ ಮಣಿಗಳ
ಪಿಸುದನಿಗಳ ಕಚಗುಳಿಗಳು,
ಸುಖಾಸುಮ್ಮನೆ ಹೊಡೆದುಕೊಳ್ಳುತ್ತಿದ್ದ
ಎದೆಬಡಿತದ ಸದ್ದು...

ಹನಿಗಣ್ಣಾದ ಅಪ್ಪ, ಕಣ್ತಪ್ಪಿಸುತಿದ್ದ ಅಮ್ಮ
ಅರಳಿದ ತಂಗಿಯರ ಮೊಗ,
ಅಪ್ಪಿದ ಸ್ನೇಹಿತೆಯ ಗುಟ್ಟು-
ತಂದ ಅರಿಯದ ಪುಳಕದ ಹೊತ್ತು,
ಹಳೆ ಬಂಧಗಳ ಜೊತೆ ಜೊತೆಯಲಿ
ಹೊಸ ಬಂಧಗಳಡೆ ನಾ-
ನಿತ್ತ ಆ ಏಳು ಹೆಜ್ಜೆಗಳು,
ಕಿರು ಹುಬ್ಬುಗಳ ನಡುವೆ
ಕುಳಿತ ಕೆಂಪು ಚಂದಿರ ನಗಲು,
ನಡು ಹಗಲಿಗೇ ಹುಣ್ಣಿಮೆಯಾಗಿತ್ತು.

ಈ ಮನೆಯಿಂದ ಆ ಮನೆಯೆಡೆ
ಪಯಣ ಸಾಗಿ ವರುಷಗಳಾರು ಕಳೆದರೂ
‘ನಿಮ್ಮ ಮನೆ’ ನಮ್ಮ ಮನೆಯಾಗಲು
ಅದೆಷ್ಟು ದಶಕಗಳು ಬೇಕೋ!
ಆ ದಿನ, ಆ ಸುಮೂಹರ್ತದಲ್ಲಿ
ಮೆಲು ನುಡಿದಿದ್ದ ಆ ದನಿ-
‘ಇದಿನ್ನು ನಿನ್ನ ಮನೆ’ ಮಾತೇ
ತುಸು ಚುಚ್ಚಿ, ತುಸು ಹೆಚ್ಚಿ
ಹಿಂತಿರುಗಿದಾಗ ಮಾತ್ರ, ನಾ-
ಬಂದಿದ್ದ ಮನೆಯೆಲ್ಲಾ ಮಸಕು ಮುಸುಕು

ತನ್ನ ಮನೆಯಂಗಳದಿ
ಬಿರಿದಿದ್ದ ಹೂವೊಂದನ್ನು
ನಿಮ್ಮ ಮನೆಯಂಗಳಕೆ ಶೋಭಿಸಲು
ದಾನವನ್ನಿತ್ತ ಆ ದಾನಿಯ ನೆನೆ-
ನೆನೆದು, ಮನಸಾರೆ ಒಪ್ಪಿದೆ
ನಮ್ಮಿಬ್ಬರ ಹೊಸ ಗೂಡನು...
ಈಗ ತಾನೇ ಬಿಟ್ಟಿರುವ ಹೊಸ
ಮೊಗ್ಗೊಂದನು, ಅರಳಿಸಿ
ನೀಡಬೇಕಾಗಿದೆ ನಾವು ದಾನ
ಅರಿಯದ ಮನೆಯೊಂದನದು ಶೋಭಿಸಲು

-ತೇಜಸ್ವಿನಿ ಹೆಗಡೆ