ನಾ ಮೆಚ್ಚಿದ ಕೃತಿ(ಒಳಗೊಂದು ಕಿರುನೋಟ) ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಾ ಮೆಚ್ಚಿದ ಕೃತಿ(ಒಳಗೊಂದು ಕಿರುನೋಟ) ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜುಲೈ 11, 2026

ಮೃಗಶಿರ : ಹಲವು ಕಥೆಗಳ ಒಂದು ಸುಂದರ ಗುಚ್ಛ

ಯಾವುದೇ ಪುಸ್ತಕವನ್ನು ಅದರ ಮುಖಪುಟವನ್ನು ನೋಡಿ ಅಳೆಯದಿರು ಎಂದು ಹೇಳುತ್ತಾರೆ. ಅಂತೆಯೇ ಓರ್ವ ವ್ಯಕ್ತಿಯ ಬದುಕನ್ನು ಅರಿಯುವಾಗ, ಕೇವಲ ಆತನ ಏಕಪಕ್ಷೀಯ ಮಾತುಗಳನ್ನು, ಅವರಿವರು ಹೇಳಿದ್ದನ್ನು ಕೇಳಿಯೋ ಮೇಲ್ನೋಟಕ್ಕೆ ಇದಮಿತ್ಥಂ ಎಂದು ತೀರ್ಪು ನೀಡುವುದು ಸಲ್ಲ. ಅದರ ಬದಲು ಆತನ ಬದುಕಲ್ಲಿ ಬಂದವರ ಅನಿಸಿಕೆಗಳನ್ನು, ಅನುಭವಗಳನ್ನು ಅವರದೇ ಮುಖೇನ ಅರಿತಾಗ, ಬಹುರೂಪದಲ್ಲಿ ಕಂಡಾಗ  ಅದೆಷ್ಟೋ ಜಟಿಲತೆಗಳು ಸರಳಗೊಳ್ಳುತ್ತವೆ. ಕಾಣದ ಕೊಂಡಿಗಳು ಎದ್ದು ಬರುತ್ತವೆ, ಸುಳ್ಳಿನ ಪರದೆಗಳೂ ತೆರೆದುಕೊಳ್ಳುತ್ತವೆ. ಅಂತಹದೇ ಒಂದು ಪ್ರಯತ್ನವನ್ನು ಲೇಖಕ ಶ್ರೀಧರ ಬಳಗಾರ ಅವರ ‘ಮೃಗಶಿರ’ ಕಾದಂಬರಿಯು ಮಾಡುತ್ತದೆ. 

ಕಾದಂಬರಿಯ ಶೀರ್ಷಿಕೆ ಮತ್ತು ಪಾತ್ರಗಳ ವೈಶಿಷ್ಟ್ಯ:

ಇದು ಮೇಲ್ನೋಟಕ್ಕೆ ಕಾದಂಬರಿ ಎಂದೆನಿಸಿದರೂ, ಬೆಟ್ಟದ ತುದಿಯಿಂದ ಕವಲಾಗಿ ಹರಿವ ತೊರೆಗಳು ಅಲ್ಲಲ್ಲಿ ಜೊತೆ ಸೇರಿ ಹೊಳೆಯಾಗಿ, ಕೊನೆಗೊಂದು ದೊಡ್ಡ ನದಿಯಾಗಿ ಸಾಗರ ಸೇರುವಂತೇ,  ಹಲವು ಪಾತ್ರಗಳು ತಮ್ಮ ಕಥೆಗಳನ್ನು ಹರವಿ, ಮುಂದಿನ ಪಾತ್ರಕ್ಕೆ ಖೋ ಕೊಟ್ಟು ಬೆಳೆಯುತ್ತ ಸಾಗುವ ಕಾದಂಬರಿ. ಹೀಗಾಗಿ ಈ ಕಾದಂಬರಿಯನ್ನು ಪರಸ್ಪರ ಬೆಸುಗೆ ಹಾಕಿಕೊಂಡಿರುವ ಹಲವು ಕಥೆಗಳ ಒಂದು ಗುಚ್ಛ ಎಂದೂ ಹೇಳಬಹುದು. ಗಡಿಮನೆಯ ಸುಬ್ರಾಯಪ್ಪ, ಅವನ ಪತ್ನಿ ಅನಸೂಯ (ಅಂತತ್ತೆ), ಹೊಸ್ಮನೆಯ ಪುಟ್ಟಣ್ಣ, ತಂಗಕ್ಕ, ಶಂಕ್ರ, ಗಪ್ಪತಿ - ಹೀಗೆ ಬರುವ ಪ್ರತಿ ಪಾತ್ರವೂ ತಮ್ಮ ಕಥೆಯನ್ನು ತೆರೆದಿಡುತ್ತವೆ. ಆ ಮೂಲಕ ತಾವು ತಮ್ಮ ಪಾಪಪ್ರಜ್ಞೆಯಿಂದ ಬಿಡುಗಡೆ ಹೊಂದಲು ಬಯಸುತ್ತಿವೆಯೇನೋ ಎಂಬಂತಿವೆ.

ನನ್ನ ಪ್ರಕಾರ ಮುಖ್ಯ ಪಾತ್ರಧಾರಿ ಇಲ್ಲಿ ನಿರೂಪಕ. ಆತ ಇಲ್ಲದೇ ಹೋದರೆ, ಸುಬ್ರಾಯಪ್ಪನ ಆತ್ಮಕಥನ ಹುಟ್ಟುತ್ತಿರಲಿಲ್ಲ. ಅಂತತ್ತೆಯಂತಹ ಪಾತ್ರವೊಂದು ದೇಶ, ಕಾಲವನ್ನು ಮೀರಿ ಇಂದಿನ ಅದೆಷ್ಟೋ ಅಂತತ್ತೆಗಳನ್ನು ನಮಗೆ ನೆನಪಿಗೆ ತರುತ್ತಿರಲಿಲ್ಲ. ಸುಬ್ರಾಯಪ್ಪನ ಗತಚರಿತ್ರೆಯ ಬೆನ್ನು ಹಿಡಿದು ಅವನಿಗೆ ಸಂಬಂಧ ಪಡುವ ಅನೇಕಾನೇಕರ ಕಥೆಗಳು, ಉಪಕಥೆಗಳು ಎಲ್ಲವೂ ಎಲ್ಲೂ ನಿಮಗೆ ಬೋರು ಹೊಡೆಸದೇ ಕಥೆ ಬೆಳೆಯುವ ಪರಿಸರದೊಳಗೆ ಹದವಾಗಿ ಹುದುಗಿ ಓದಿನ ಸುಖ ಕೊಡುತ್ತ ಸಾಗುತ್ತವೆ. ಅಲ್ಲದೇ,

ಜ್ಯೋತಿಷ್ಯದಲ್ಲಿ ಉಲ್ಲೇಖಿಸಿರುವ ಮೃಗಶಿರ ನಕ್ಷತ್ರದ ವಿಶೇಷತೆಗೂ ಕಾದಂಬರಿಯ ನಿರೂಪಕನಿಗೂ ಬಹಳ ಸಾಮ್ಯವಿದೆ. ಇಲ್ಲಿ ಬರುವ ನಿರೂಪಕನು ಬಹಳ ಕುತೂಹಲಿ, ಸದಾ ಕಥೆಯ ಅನ್ವೇಷಣೆಯಲ್ಲೇ ತೊಡಗಿರುವವನು, ಸೌಮ್ಯವಾಗಿ ಎಲ್ಲವನ್ನೂ, ಎಲ್ಲರನ್ನೂ ಅಳೆದು ತೂಗುವವನು, ಯಾವುದೇ ನಿರ್ಣಯಕ್ಕೆ ದಿಢೀರನೆ ಬರದೆ ಎಲ್ಲ ಕೋನಗಳಿಂದಲೂ ಕಥೆಗಳನ್ನು ಇದ್ದ ಹಾಗೇ ಹರಹಿ ಇಡುವ ಮನೋಭಾವ. ಅಲ್ಲಲ್ಲಿ ಜಿಜ್ಞಾಸೆಯನ್ನೂ ಮಾಡುತ್ತಾನೆ. ಒಂದೆರಡು ಕಡೆ ಪಾತ್ರಗಳು ನುಡಿವ ಕೆಲವು ತೂಕ ಭರಿತ ಮಾತುಗಳು ಆ ಪಾತ್ರದ ಮಿತಿಯನ್ನೂ ಮೀರಿ ನಿರೂಪಕನದೇ ಚಿಂತನೆಗಳೇನೋ ಎಂಬಷ್ಟು ಗಾಢವಾಗಿ ತಾಗಿದ್ದೂ ಇದೆ. ಆದರೆ ಕಾದಂಬರಿಯಲ್ಲಿ ಎಲ್ಲೂ ತೀರ್ಪು ನೀಡುವ ಆತುರತೆ ಕಾಣುವುದಿಲ್ಲ, ಬದುಕನ್ನು ಆಪ್ತವಾಗಿ ನೋಡುವ, ತಿಳಿಯುವ ಹಂಬಲವನ್ನಷ್ಟೇ ನೋಡಬಹುದು. ಅಂತ್ಯದಲ್ಲಿ ತಾನು ಹುಡುಕುತ್ತಿರುವುದು ದೊರೆತ ತೃಪ್ತಿಯ ಭಾವವನ್ನು ಶಂಕ್ರನ ಮನೆಯ ಗೇಟಿನ ರೂಪಕದಲ್ಲಿ ಕಾಣಿಸಲಾಗಿದೆ.

ಕಥೆಯ ಕೇಂದ್ರಬಿಂದು ಸುಬ್ರಾಯಪ್ಪನ ಆತ್ಮಚರಿತ್ರೆಯಾಗಿದ್ದರೂ, ಆ ಬಿಂದುವಿನ ಸುತ್ತಲ್ಲೂ ಗಿರಗಿರನೆ ತಿರುಗುವ ಉಳಿದೆಲ್ಲ ಪಾತ್ರಗಳ ಕಥನಗಳು ಕಡೆಗೆ ಅವನ ಕಥೆಯೊಳಗೇ ಐಕ್ಯವಾದಂತೆ ಕಂಡರೂ ಭಿನ್ನವಾಗಿಯೇ ಉಳಿಯುತ್ತವೆ. ಪ್ರತಿಯೊಂದು ಅಧ್ಯಾಯವೂ ಒಂದು ಕುತೂಹಲವನ್ನು ಉಳಿಸಿಕೊಂಡು ಸಾಗಿದರೂ ಈ ಕಾದಂಬರಿ ಕೇವಲ ಅದಕ್ಕಷ್ಟೇ ಸೀಮಿತವಾಗಿಲ್ಲ. ಕಥೆ ಹುಟ್ಟುವ, ಬೆಳೆವ, ಬಲಿಯುವ ಕಡೆಗೊಂದು ತಿರುವಲ್ಲಿ ಕೊನೆಗೊಳ್ಳುವ ಪರಿಸರ, ಊರು, ಕೇರಿ, ಕಾಡು, ತೋಟ, ವನ್ಯಜೀವಿಗಳು - ಇವೆಲ್ಲವನ್ನೂ ನಮ್ಮ ಕಣ್ಣಿಗೆ ಕಟ್ಟಿಕೊಡುತ್ತವೆ. ನಾವೂ ನಿರೂಪಕನ ಪಕ್ಕದಲ್ಲೇ ಕುಳಿತು, ತಿರುಗಿ ಕಥೆಯನ್ನು ಸಂಗ್ರಹಿಸಿ ಕೇಳುತ್ತಿರುವಂತೆ ಭಾಸವಾಗುತ್ತದೆ. 

ಕಥೆಯ ಚೌಕಟ್ಟು, ಶೈಲಿ:-

ಕಾದಂಬರಿಯ ನಿರೂಪಣೆಯು ಬಹಳ ಸೊಗಸಾಗಿದೆ. ಮಾಮೂಲಿ ಸಾಮಾಜಿಕ ಕಥನ ಶೈಲಿಯಲ್ಲಿರದೇ ನಮ್ಮೊಳಗೊಂದು ಚಿಂತನೆಯನ್ನು ಹುಟ್ಟುಹಾಕುವಂತಿದೆ. ಅಂತತ್ತೆಯಂತೇ ಸಾಮಾಜಿಕ ಕಟ್ಟುಪಾಡಿಗೆ, ಪುರುಷಪ್ರಧಾನ ವ್ಯವಸ್ಥೆಗೆ ಸಿಲುಕಿ, ಒದ್ದಾಡಿ, ನಲುಗುವ ಜೀವಗಳು ಇಂದಿಗೂ ನಮ್ಮ ಸುತ್ತ ಕಾಣುತ್ತಿರುತ್ತವೆ. ಗಂಡನಿಂದ/ಗಂಡಿನಿಂದ ಎಂತಹ ದುರ್ಗತಿ ಎದುರಾದರೂ ಅವಳದೇ ತಪ್ಪು, ಆಕೆ ತನಗೆ ಹಾಕಿರುವ ಚೌಕಟ್ಟನ್ನು ಮೀರಬಾರದು, ಗಂಡನ ದುಸ್ಥಿತಿಗೆ ಹೆಂಡತಿಯೇ ಪ್ರಮುಖ ಕಾರಣ ಎಂಬಿತ್ಯಾದಿ  ಮನಃಸ್ಥಿತಿಯು ಆ ಕಾಲದ್ದು ಮಾತ್ರವಲ್ಲ ಈಗಲೂ ಚಾಲ್ತಿಯಲ್ಲಿರುವಂಥದ್ದು. ಅದೇ ರೀತಿ ಹೆಣ್ಣಿಗೆ ರಕ್ಷಣೆಯಾಗಿ ಓರ್ವ ಗಂಡ ಬೇಕು, ಅವನ ಆಸರೆಯಿಲ್ಲದ ಹೆಣ್ಣು ಸದಾ ತನಗೆ ಲಭ್ಯಳು, ಅವಳನ್ನು ಹೇಗೂ ಬಳಸಿಕೊಳ್ಳಬಹುದೆಂಬ ಮನಸ್ಥಿತಿಯೂ ಯಾವ ಕಾಲಕ್ಕೂ ಎದ್ದು ಕಾಣುವಂಥದ್ದು. 

ಅಂದು ಅಸಂಖ್ಯಾತರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಮನೆ-ಹೊಲಗಳನ್ನು ಬಿಟ್ಟು ಒದ್ದಾಡಿ ಕೊನೆಗೂ ಅದನ್ನು ದೊರಕಿಸಿಕೊಂಡರು. ಆದರೆ ಅನೇಕರು ಅವರೊಳಗಿನ ಅಹಂ, ಸ್ವಾರ್ಥ, ಸಿಟ್ಟು, ಸಂಕುಚಿತತೆ, ಮನೋ ದೌರ್ಬಲ್ಯದ ದಾಸ್ಯಗಳಿಂದ ಬಿಡುಗಡೆ ಹೊಂದುವ ಬಗೆ ಅರಿಯದೇ ತಮ್ಮ ಮನೆಯೊಳಗಿನ ಹೆತ್ತವರು, ಪತ್ನಿ-ಮಕ್ಕಳನ್ನು ಬಂಧನಕ್ಕೆ ಸಿಲುಕಿಸಿಬಿಟ್ಟರು. ಇದೆಲ್ಲವೂ ಇಂದೂ ಪ್ರಸ್ತುತವೇ. ಕಾದಂಬರಿಯಲ್ಲಿ ಬರುವ ಈ ಕೆಳಗಿನ ಸಾಲುಗಳು ಸಾರ್ವಕಾಲಿಕ ಕಟು ಸತ್ಯವನ್ನು ಸಾರುವಂಥವು!

*ಚರಿತ್ರೆಯ ಪುಸ್ತಕಗಳಲ್ಲಿ ಬೀದಿಯಲ್ಲಿ ಘೋಷಣೆ ಕೂಗಿದವರ ಹೆಸರಿರುತ್ತದೆಯೆ ವಿನಃ ಹೊಗೆಯ ಒಲೆ ಊದಿ ಹಿತ್ತಲ ಪ್ರಪಂಚದಲ್ಲೆ ಆಯುಷ್ಯ ಕಳೆದವರ ನೆನಪಿರುವುದಿಲ್ಲ.

* ದೇಶದ ದೊಡ್ಡ ಕಥೆಗಳಲ್ಲಿ ಕೋಟೆಯ ಬಾಗಿಲನ್ನು ಕಾದವರಿಗೆ ಜಾಗವೇ ಇರುವುದಿಲ್ಲ.

ಇಂದೂ ಗಡಿಗಾಗಿ ವರ್ಷಗಟ್ಟಲೇ ಎಲ್ಲೋ ಹೋಗಿ ಕಾಯುವ ಸೈನಿಕ ತನ್ನವರನ್ನು ಯಾವುದೋ ಹಳ್ಳಿಯ ಮೂಲೆಯಲ್ಲಿ ಬಿಟ್ಟು ಹೋಗುವಾಗ ಅವರ ಪರಿಸ್ಥಿತಿ, ಮನಃಸ್ಥಿತಿಯು ಅಂತತ್ತೆ, ಸುಬ್ರಾಯಪ್ಪನ ಹೆತ್ತವರಿಗಿಂತ ಭಿನ್ನವಾಗಿರದೇನೋ! ಲೈಂಗಿಕ ವಾಂಛೆ ಕೇವಲ ಗಂಡಿನ ಸ್ವತ್ತು, ಸ್ವಭಾವ ಎಂಬ ಮೌಢ್ಯ ಅಂದಿನಿಂದಲೂ ಹರಿದು ಬಂದ ಕಣಕು ನೀರು. ಆದರೆ ಹೆಣ್ಣು-ಗಂಡಿನ ನಡುವಿನ ಸೂಕ್ಷ್ಮ ವ್ಯವಹಾರಗಳನ್ನು ಬಹಳ ನಾಜೂಕಾಗಿ ನೇಯ್ದ ಪಾತ್ರಗಳೂ ಇಲ್ಲಿವೆ. ಉದಾಹರಣೆಗೆ ಕಾದಂಬರಿಯ ನಡುವೆ ಬರುವ ಕನ್ನಡಗಲ್ ಲಚ್ಚಿ ಚಿಕ್ಕಿಯ ಕಥೆ. ಕೆಲವೇ ಪುಟಗಳಲ್ಲಿ ಬಂದು ಹೋಗುವ ಈ ಪಾತ್ರ ಬಿತ್ತರಿಸುವ ದೃಶ್ಯ ಕಾವ್ಯ ಬಹಳ ಸುಂದರವಾಗಿದೆ. 

ಬಹಳ ಹಿಂದೆ ಎಲ್ಲೋ ಒಂದೆಡೆ ಈ ಒಂದು ಕಥೆ ಓದಿದ್ದೆ:- 

ಇಬ್ಬರು ಸಹೋದರರು ದೇವಸ್ಥಾನಕ್ಕೆಂದು ಕಾಡಿನಲ್ಲಿ ಸಾಗುತ್ತಿರುತ್ತಾರೆ. ನಡುವೆ ಜೋರಾದ ಗಾಳಿ ಮಳೆ ಬಂದು ದಿಕ್ಕು ತಪ್ಪಿ ಬೇರ್ಪಡುತ್ತಾರೆ. ತಮ್ಮನು ದಾರಿ ತಪ್ಪಿ ವೇಶ್ಯೆಯೋರ್ವಳ ಮನೆಗೆ ಹೋದರೆ ಅಣ್ಣ ಹೇಗೋ ಆ ದೇವಸ್ಥಾನವನ್ನು ಹೋಗಿ ಸೇರುತ್ತಾನೆ. ಆದರೆ ಅಲ್ಲಿ ಆತನಿಗೆ ಯಾರಿಂದಲೋ ತಿಳಿಯುತ್ತದೆ ತನ್ನ ತಮ್ಮ ಅಂಥವಳ ಮನೆಗೆ ಹೋಗಿಬಿಟ್ಟಿರುವನು ಎಂದು. ಇತ್ತ ರಾತ್ರಿ ಬೆಳಗಾಗುವವರೆಗೂ ವೇಶ್ಯೆಯ ಮನೆಯ ಜಗುಲಿಯ ಮೂಲೆಯಲ್ಲೆಲ್ಲೋ ಕುಳಿತ ತಮ್ಮ ದೇವಸ್ಥಾನದ ಧ್ಯಾನದಲ್ಲೇ ಇದ್ದು ಬೆಳಗಾಗಿದ್ದೇ ಅಲ್ಲಿಂದ ಹೊರಟುಬಿಟ್ಟರೆ, ಅತ್ತ ಅಣ್ಣನು ತನ್ನ ತಮ್ಮ ಅದೆಷ್ಟು ಸುಖದಲ್ಲಿದ್ದಾನೋ ಎಂದು ಕಲ್ಪನೆಮಾಡಿಕೊಂಡು, ಅಸಹನೆಯಿಂದ ಕುದಿಯುತ್ತಲೇ ದೇವಸ್ಥಾನದಲ್ಲಿ ಕುಳಿತು ಬೆಳಗುಮಾಡಿರುತ್ತಾನೆ. ಇವರಿಬ್ಬರೂ ಈ ಕಾದಂಬರಿಯಲ್ಲಿ ಬರುವ ಅಂತತ್ತೆ, ಸುಬ್ರಾಯಪ್ಪ, ಪುಟ್ಟಣ್ಣ - ಹೀಗೆ ಹಲವು ಪಾತ್ರಗಳಲ್ಲಿ ಕಂಡರು.

ಕುತೂಹಲಕರ ಕಥನ, ಸ್ವಾತಂತ್ರ್ಯಪೂರ್ವದ ಮಲೆನಾಡಿನ ಪರಿಸರ, ಕಾಡು, ಜನಜೀವನ, ಬೇಸಾಯ ಪದ್ಧತಿಗಳ ವಿವರಣೆ, ಯಾವ ಕಾಲಕ್ಕೂ ಸಲ್ಲಬಹುದಾದ ಹೆಣ್ಣು-ಗಂಡಿನ ಮನೋವ್ಯಾಪಾರ, ಎದುರಾಗುವ ಅಸಂಖ್ಯ ಆಪತ್ತುಗಳನ್ನು ಪ್ರತಿಕೂಲ ವಾತಾವರಣದಲ್ಲೂ ಕೇವಲ ಮನೋಬಲದಿಂದ ಎದುರಿಸುವುದು ಹೇಗೆಂಬುದಕ್ಕೆ ಸಿಗುವ ನಿದರ್ಶನಗಳು, ನಿರೂಪಕನ ಸಮಚಿತ್ತತೆ - ಇವೆಲ್ಲವುಗಳನ್ನೂ "ಮೃಗಶಿರ" ಕಾದಂಬರಿಯನ್ನೋದಿ ಆಸ್ವಾದಿಸಬಹುದು. 

~ತೇಜಸ್ವಿನಿ ಹೆಗಡೆ


ಭಾನುವಾರ, ಜುಲೈ 5, 2026

ಅವ್ವರಸಿಯ ಸಾರ್ಥಕ ಬದುಕಿನ ಅನಾವರಣ

 

ಬಾಲ್ಯದಲ್ಲಿ ಶಾಲಾದಿನಗಳಲ್ಲಿ ನಡೆಯುತ್ತಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಹಲವು ಹೆಣ್ಮಕ್ಕಳು ಹಾಕುತ್ತಿದ್ದುದು ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದ ಅಬ್ಬಕ್ಕ ರಾಣಿ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ - ಇವರುಗಳ ವೇಷವನ್ನೇ. ಹೀಗಾಗಿ ನಮಗೆಲ್ಲ ಕೆಚ್ಚೆದೆಯ ರಾಣಿಯರೆಂದರ ತಕ್ಷಣ ನೆನಪಿಗೆ ಬರುತ್ತಿದ್ದುದೇ ಇವರೆಲ್ಲರು. ಆದರೆ ಯುರೋಪಿನ ಕೆಲವು ಕುತ್ಸಿತ ಬುದ್ಧಿಯ ಇತಿಹಾಸಕಾರರು ಮತ್ತು ಓರ್ವ ಹೆಣ್ಣಿನ ಚಾರಿತ್ರ್ಯವನ್ನು ಪ್ರಶ್ನಿಸಿದ ತಕ್ಷಣ ಅದನ್ನೇ ಶಿರಸಾ ನಂಬಿ ಮೂಲೆಗುಂಪಾಗಿಸುವ ಪುರುಷಪ್ರಧಾನ ವ್ಯವಸ್ಥೆಯ ದೆಸಿಯಿಂದಾಗಿ ಮೇಲೆ ಉಲ್ಲಾಖಿಸಿದ ಎಲ್ಲ ಮಹಾನ್ ರಾಣಿಯರ ಸಾಲಿಗೆ ನಿಲ್ಲುವ, ಅದಕ್ಕಿಂತಲೂ ತುಸು ಹೆಚ್ಚೇ ಸ್ಥಾನ ಪಡೆಯಬಹುದಾದ ಸಾಧ್ಯತೆಯಿದ್ದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಯಶೋಗಾಥೆಯನ್ನು ಕರುನಾಡಿನ ಜನತೆಯಿಂದಲೇ ಮುಚ್ಚಿಡಲಾಯಿತು! ಮಕ್ಕಳ ಪಠ್ಯದಲ್ಲಿ, ಕಥೆ-ನಾಟಕ-ಲೇಖನಗಳಲ್ಲಿ ರಾಜಾಜಿಸಬೇಕಾಗಿದ್ದ ಧೀರ, ಧೀಮಂತ, ಜನರಿಗಾಗಿಯೇ ತನ್ನ ಸುದೀರ್ಘ ಬದುಕನ್ನೇ ಮುಡಿಪಾಗಿಟ್ಟ ನಗಿರೆಯ ರಾಣಿಯನ್ನು ದುಷ್ಟ ಬುದ್ಧಿಯೋರ್ವನ ಅಪಪ್ರಚಾರದ ಕಾರಣದಿಂದ ಮೂಲೆಗುಂಪಾಗಿಸಿಬಿಟ್ಟರು. ಇದಕ್ಕೆ ಕಾರಣ ಹಲವು. ವೈವಾಹಿಕ ಬದುಕನ್ನಪ್ಪದೇ, ಯಾವುದೇ ಸಂತಾನ ಹೊಂದದೇ ವಿರಕ್ತಿಯನ್ನೇ ಹೊದ್ದು, ಕೇವಲ ತನ್ನ ರಾಜ್ಯ, ಪ್ರಜೆಗಳ ಹಿತಾಸಕ್ತಿಗಾಗಿ ದುಡಿದು ಹಣ್ಣಾದ ಆ ಜೀವವನ್ನು ಗೌರವಿಸಲು ಕಾರಣ ಸಿಕ್ಕಿರಲಿಕ್ಕಿಲ್ಲ! ಯಾವುದೇ ಶಾಸನ ಬರೆಸದೇ, ತಾನು ಕೊಟ್ಟ ದಾನ-ದತ್ತಿ, ಮಾಡಿಸಿದ ಅಭಿವೃದ್ಧಿಗೆ ಯಾವ ಪುರಾವೆಯನ್ನಿಡಲು ಹೋಗದೇ ಎಲ್ಲವೂ ದೇವರ ಇಚ್ಛೆ ಎಂದು ನಿರ್ಲಿಪ್ತಳಾಗಿ ಬದುಕಿನ ಸಾಳುವ ವಂಶದ ಕೊನೆಯ ಕೊಂಡಿಯಾದ ಈ ರಾಣಿಯ ಕುರಿತು ಅಸಡ್ಡೆ ಬೆಳೆದಿರಬಹುದು! ಆದರೆ ತಡವಾಗಿಯಾದರೂ ಸರಿ, ಇಂದು ಈ ಒಂದು ಸಮಗ್ರ ಕಥನವನ್ನೋದಿದ ಮುಗಿಸಿದಾಗ ನನ್ನ ಮನಸ್ಸು ಆರ್ದ್ರಗೊಂಡಿತು. ಹೀಗಾಗಿ, ‘ಚೆನ್ನಭೈರಾದೇವಿ’ ಎಂಬ ಈ ಒಂದು ಅಪೂರ್ವ ಕೃತಿಯನ್ನು ರಚಿಸಿ, ಆ ಮೂಲಕ ನಮಗೆ ಮತ್ತು ಮುಂಬರುವ ಪೀಳಿಗೆಗೆ ಒಂದು ಮಹಾನ್ ವ್ಯಕ್ತಿಯನ್ನು ಸಶಕ್ತವಾಗಿ ಪರಿಚಿಯಿಸಿದ್ದಕ್ಕೆ ಲೇಖಕರಾದ ಡಾ. ಗನಾನ ಶರ್ಮ ಅವರಿಗೆ ಅನಂತ ಧನ್ಯವಾದಗಳು. ಅವರೇ ಹೇಳಿರುವಂತೆ ಇದು ಕೇವಲ ಓರ್ವ ರಾಣಿಯ ಕಥೆ ಮಾತ್ರವಲ್ಲ, ಹೆಣ್ಣೋರ್ವಳ ಬದುಕಿನ ಹಲವು ಮಗ್ಗಲುಗಳನ್ನು ಪರಿಚಯಿಸುವ ಕಾದಂಬರಿ.   

ಯಾರು ಈ ಚೆನ್ನಭೈರಾದೇವಿ?

 1552ರ ಸುಮಾರಿಗೆ ಪಟ್ಟವನ್ನೇರಿ, ಸುಮಾರು ಐವತ್ತಾರು ವರ್ಷಗಳ ಕಾಲ ಹೈವ, ಕೊಂಕಣ ತುಳುನಾಡುಗಳ ಮಹಾಮಂಡಳೇಶ್ವರಿಯಾಗಿ ಮೆರೆದವಳು. ಪೋರ್ಚುಗೀಸರಿಂದಲೇ ‘ರೈನಾ ದ ಪಿಮೆಂಟಾ’ ಎಂದು ಕರೆಸಿಕೊಂಡು, ತನ್ನ ಮುತ್ಸದ್ದಿತನ, ಚತುರತೆ, ಕುಶಾಗ್ರಮತಿ, ಧೈರ್ಯದಿಂದ ಪೋರ್ಚುಗೀಸರನ್ನೇ ಹಿಮ್ಮೆಟ್ಟಿಸಿದವಳು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ತನ್ನ ಆದರ್ಶ, ನಿಷ್ಠೆಯನ್ನು ಬಿಟ್ಟವಳಲ್ಲ. ಬದುಕು ಅವಳಿಗೆ ಕಲ್ಲು-ಮುಳ್ಳಿನ ಹಾಸಿಗೆಯಷ್ಟೇ ಕಠಿಣವಾಗಿತ್ತು. ಆದರೆ ಆಕೆ ಅದನ್ನೇ ಬಗ್ಗಿಸಿ ಪ್ರಜೆಗಳಿಗೆ ಬದುಕನ್ನು ಸರಳಗೊಳಿಸಿದವಳು. "ಬದುಕು ಚೆನ್ನಭೈರಾದೇವಿಗೆ ಅತ್ಯುತ್ತಮವಾದದ್ದನ್ನು ಕೊಟ್ಟಿತ್ತೋ ಇಲ್ಲವೋ ಆದರೆ ಅವಳಂತೂ ಪ್ರಜೆಗಳಿಗೆ ಅತ್ಯುತ್ತಮ ಬದುಕನ್ನು ಕಟ್ಟಿಕೊಟ್ಟಿದ್ದಳು" - ಕಾದಂಬರಿಯಲ್ಲೊಂದೆಡೆ ಬರುವ ಈ ಸಾಲು ಅಕ್ಷರಶಃ ಅವಳಿಗೊಪ್ಪುವಂಥದ್ದು. ಅಂತಹ ಧೀಮಂತ ವ್ಯಕ್ತಿತ್ವಕ್ಕೆ ಅವಳದೇ ಸೋದರಮಾವ ಕೃಷ್ಣದೇವರಸ ತನ್ನ ಸ್ವಾರ್ಥಕ್ಕಾಗಿ, ಮತ್ಸರದಿಂದ ಅವಳ ಬೆಂಗಾವಲಿನ ಗೊಂಡನಾಯಕನ ಜೊತೆಗೆ ಅವಳ ಅನೈತಿಕ ಸಂಬಂಧದ ಪುಕಾರನ್ನು ಹಬ್ಬಿಸಿದ. ಮುಂದೆ ಅವಳಿಂದ ಸೋತು ಸುಣ್ಣವಾಗಿದ್ದ  ಪೋರ್ಚುಗೀಸರ ಸೇಡನ್ನು ತೀರಿಸಲೋ ಎಂಬಂತೆ ಯುರೋಪಿನ ಕೆಲವು ಇತಿಹಾಸಕರರು ಅದನ್ನೇ ಎತ್ತಿಹಿಡಿದರು! ವಿದೇಶಿ ಇತಿಹಾಸ ತಜ್ಞರು ಹೇಳಿದ್ದೆ ಪರಮ ಐತಿಹಾಸಿಕ ಸತ್ಯವೆಂದು ಬಗೆವ ನಮ್ಮವರೂ ಅದನ್ನೇ ನಂಬಿ ಅವಳ ಅಪಾರ ಕೊಡುಗೆ, ಹೋರಾಟ, ಹೃದಯ ವೈಶಾಲ್ಯತೆ, ರಾಜನೀತಿಯ ಮುತ್ಸದ್ದಿತನ ಎಲ್ಲವನ್ನೂ ಬದಿಗೆ ತಳ್ಳಿ, ಭವಿಷ್ಯದಲ್ಲಿ ಎಲ್ಲರೂ ವಿಶೇಷವಾಗಿ ಕರ್ನಾಟಕದವರು ಸದಾ ನೆನಪಿನಲ್ಲಿಡಬೇಕಾದಂಥ ಅದ್ಭುತ ವ್ಯಕ್ತಿಯನ್ನು ಸಂಪೂರ್ಣ ಕತ್ತಲಿಗೆ ನೂಕಿಬಿಟ್ಟರು!

ಬಂಗಾಲದ ಮೈತ್ರಾದೇವಿ ಅವರ ‘ನ ಹನ್ಯತೆ’ ಎಂಬ ಆತ್ಮಚರಿತ್ರೆಯಲ್ಲೊಂದು ಸಾಲು ಬರುತ್ತದೆ... "ಅಪ್ರಿಯವಾದ ಸತ್ಯವನ್ನು ಒಪ್ಪಿಕೊಳ್ಳಲು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದು. ಆದರೆ ಅಪ್ರಿಯವಾದ ಸುಳ್ಳನ್ನು ಎದುರಿಸುವ ಬಗೆಯಾದರೂ ಹೇಗೆ?" - ಇದು ಅಕ್ಷರಶಃ ಗೇರುಸೊಪ್ಪೆಯ ಈ ರಾಣಿಗೂ ಅನ್ವಯಿಸುತ್ತದೆ. ತಾನಾಗೇ ಎಂದೂ ಯಾರ ಮೇಲೂ ದಂಡೆತ್ತಿ ಹೋಗದ ಈ ರಾಣಿ, ತನ್ನ ಮೇಲೆರಿಗಿದ ಯಾರನ್ನೂ ಸುಮ್ಮನೆ ಬಿಟ್ಟಿಲ್ಲ, ಸೋತಿಲ್ಲ ಎನ್ನುವುದನ್ನು ಈ ಕಾದಂಬರಿ ಎತ್ತಿ ತೋರಿದೆ.

ಇಷ್ಟಕ್ಕೂ ಹೆಣ್ಣನ್ನು ಹಣಿಯ ಬೇಕೆಂದರೆ ಯುದ್ಧದಲ್ಲಿ ಸೋಲಿಸಲೇಬೇಕೆಂದಿಲ್ಲವಲ್ಲ. ಒಂದು ಚಾರಿತ್ರ್ಯಹನನದ ಸುಳ್ಳಿನ ಕಿಡಿ ಸಾಕು! ಹಾಗೆ ನೋಡಿದರೆ ರಾಣಿ ಇಲ್ಲೂ ಸೋಲು ಕಂಡಿಲ್ಲ ಎಂದೇ ಹೇಳಬಹುದು. ತನ್ನ ಮೇಲೆ ಹೊರೆಸಿದ ಆಪಾದನೆಯನ್ನು ಮೆಟ್ಟಿ ಸೆಟೆದು ನಿಂತು ಬಾಯಿ ಮುಚ್ಚಿಸಿದವಳು.

ಆದರೆ ಕೊನೆಗೆ 75ರ ಹರೆಯದ (1606) ತನ್ನ ಮುಪ್ಪಿನಗಾಲದಲ್ಲಿ  ತನ್ನದೇ ನಿರ್ಲಿಪ್ತ, ಅಲಕ್ ನಿರಂಜನ್ ಭಾವನೆಯಿಂದ ಕೆಳದಿಯ ವೆಂಕಟಪ್ಪ ನಾಯಕನಿಗೆ ಸ್ವಯಂ ಶರಣಾಗಿ ಕೊನೆಗೆ ಸಲ್ಲೇಖನ ವೃತದ ಮೂಲಕ ದೇಹ ತ್ಯಜಿಸಿದ್ದು ಬಿಟ್ಟರೆ ಬಿಜಾಪುರ, ಪೋರ್ಚುಗೀಸ್, ಕೆಳದಿ - ಹೀಗೆ ಎಲ್ಲರನ್ನೂ ಹಿಮ್ಮೆಟ್ಟಿಸಿದ್ದ ಸಾಹಸಿ! 

ಭೈರಾದೇವಿಯ ಧರ್ಮ ಸಹಿಷ್ಣುತೆ

ತಾನು ನಂಬಿದ ಧರ್ಮ, ದೇವರ ಮೇಲೆ ನಿಶ್ಕಾಮ ಪ್ರೇಮ, ಶರಣಾಗತ ಭಾವ ಇದ್ದಾಗ ಇತರ ಎಲ್ಲ ಸಂಪ್ರದಾಯ, ಆಚಾರ, ವಿಚಾರ, ನಂಬಿಕೆಗಳ ಮೇಲೂ ಅದೇ ಅಭಿಮಾನ, ಶ್ರದ್ಧೆ ಇರುತ್ತದೆ ಎನ್ನುವುದಕ್ಕೇ ಈಕೆಯ ಎಲ್ಲ ಧಾರ್ಮಿಕ ಜೀರ್ಣೋದ್ಧಾರಗಳೇ ಸಾಕ್ಷಿ. ಜಿನ ಬಸದಿಗಳಷ್ಟೇ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದವಳು. ಆದರೆ ಎಲ್ಲೂ ಇದು ತನ್ನ ಕೊಡುಗೆ ಎಂಬ ಲಿಪಿ, ಶಾಸನಗಳನ್ನು ಬರೆಸುವ ಕೊಡವೆಗೂ ಹೋಗದೇ ಇದೆಲ್ಲ ದೇವರ ದೇಣಿಗೆ ಎಂದುಬಿಟ್ಟಳು. ಬಹುಶಃ ಇದಕ್ಕೇ ಚರಿತ್ರೆಯೂ ಅವಳನ್ನು ಮರೆತುಬಿಟ್ಟಿತೇನೋ! ಕೇವಲ ಧರ್ಮೋದ್ಧಾರ ಮಾತ್ರವಲ್ಲ, ಪ್ರಜೆಗಳಿಗಾಗಿ ರಸ್ತೆ, ಕುಡಿವ ನೀರಿನ ಸರಬರಾಜು, ಸುಭದ್ರ ನೆಲೆ, ಆಯಾ ಕಾಲಕ್ಕೆ ತಕ್ಕುದಾದ ಬೆಳೆಯ ವ್ಯಾಪಾರಕ್ಕೆ ಪ್ರೋತ್ಸಾಹ - ಹೀಗೆ ಸಕಲ ರೀತಿಯಲ್ಲೂ ಏಳಿಗೆಗೆ ಶ್ರಮಿಸಿದವಳು.

ತನ್ನ ರಾಜ್ಯದ ಶಕ್ತಿ ಮತ್ತು ಬಲಹೀನತೆಯನ್ನು ಚೆನ್ನಾಗಿ ಅರಿತಿದ್ದ ಚೆನ್ನಭೈರಾದೇವಿ ಕಾಳುಮೆಣಸಿನ ವ್ಯಾಪಾರದ ಮೂಲಕ ಬೊಕ್ಕಸಕ್ಕೆ ಅಪಾರ ಧನರಾಶಿ ತುಂಬಿದರೆ, ಶಬಲೆಯಂತಹ ಗೂಢಚರ್ಯೆಯರನ್ನು ನಿರ್ಮಿಸಿ ದೇಶದೊಳಗಿನ ಗೆದ್ದಲುಗಳನ್ನು ಮಟ್ಟ ಹಾಕಿದವಳು. ಇವಳಂತಹ ರಾಣಿ ನನ್ನ ಕರ್ನಾಟಕವನ್ನಾಳಿದ್ದಳು ಅದೂ ನನ್ನ ಹುಟೂರಾದ ಉತ್ತನ ಕನ್ನಡದಲ್ಲೇ ಇದ್ದಳು ಎಂಬ ಭಾವವೇ ರೋಮಾಂಚನ ತರುವಂಥದ್ದು.

    
     ಪೂರ್ಚುಗೀಸರ ಕ್ರೌರ್ಯದ ಅನಾವರಣ

ವಲಸೆ ಎಂದರೆ ಕೇವಲ ಒಂದು ಸಮುದಾಯದ ಗುಳೆ ಅಲ್ಲ. ಒಂದು ಬೃಹತ್ ವೃಕ್ಷವನ್ನು ಬೇರು ಸಮೇತ ಕಿತ್ತು ಅದು ಬೆಳೆಯಲು ಅನುಕೂಲ ವಾತಾವರಣವಿರುವ ಪ್ರದೇಶದಿಂದ ಬಲವಂತದಿಂದ ತೆಗೆದು, ಪ್ರತಕೂಲ ಜಾಗವೊಂದಕ್ಕೆ ತಂದು ಹುಗಿವ ಪ್ರಯತ್ನ! ‘ಸ್ವಪ್ನ ಸಾರಸ್ವತ’ದಂಥ ಅದ್ಭುತ ಕಾದಂಬರಿಗಳು ಸಾರಸ್ವತರ ಕರುಣಾಜನಕ ವಲಸೆಯ ಕಥೆಯನ್ನು ಸ್ಪಷ್ಟವಾಗಿ ತೆರೆದಿಟ್ಟಿವೆ.

"ನಮ್ಮ ಮತಾಂತರ ಪ್ರಯತ್ನಗಳ ಹಿಂದಿರುವುದೂ ಇದೇ ಮನಃಸ್ಥಿತಿ. ನಾವು "ಇವ್ಯಾಂಜುಲಿಕ್" ಪಾದ್ರಿಗಳು ಕ್ರಿಸ್ತನಿಗಾಗಿ ಜೀವ ಮುಡಿಪಿಡುತ್ತೇವೋ ಇಲ್ಲವೋ, ಕ್ರಿಶ್ಚಿಯಾನಿಟಿಗಾಗಿ ಮುಡಿಪಿಡುತ್ತೇವೆ. ಕ್ರಿಶ್ಚಿಯಾನಿಟಿಗಾಗಿ ಯಾವ ಸಾಹಸಕ್ಕೂ ಸಿದ್ಧರಾಗುತ್ತೇವೆ. ನಮಗೆ ಮುಖ್ಯವಾಗಿರುವುದು ದೈವ ಶ್ರದ್ಧೆಯಲ್ಲ, ಧರ್ಮಶ್ರದ್ಧೆ. ಅದಕ್ಕಿಂತ ಮುಖ್ಯವಾಗಿರುವುದು ಸ್ವಾರ್ಥ. ನಾಳೆ ವಿಶ್ವವೆಲ್ಲ ಕ್ರಿಶ್ಚಯನ್ ಧರ್ಮವನ್ನಪ್ಪಿಕೊಂಡರೆ ನಮ್ಮ ಬದುಕಿಗೆ ಪೂರ್ಣ ಭದ್ರತೆ ದೊರೆಯುವುದೆಂಬ ಲೋಭ. ನನ್ನ ದೃಷ್ಟಿಯಲ್ಲಿ ಧರ್ಮವಿಸ್ತರಣೆಯ ಹಿಂದಿರುವುದೂ ನಮ್ಮ ದೇವರೇ ಮೇಲು ಎಂಬ ನಿರೂಪಿಸುವ ಹಠ. ಇದು ಏಕದೇವೋಪಾಸನೆಯ ದೌರ್ಬಲ್ಯ. ನಮಗೆ ಇರುವೊಬ್ಬ ದೇವರರೂ ಶ್ರೇಷ್ಠನೆಲ್ಲವೆಂದರೆ ನಾವು ಯಾರನ್ನು ಪೂಜಿಸಬೇಕು? ನಿಮ್ಮ ಜಿಂಟುಗಳಿಗೆ ಹಾಗಲ್ಲ. ಬಹುದೇವೋಪಾಸಕರಾದ ನಿಮಗೆ ದೇವರು ಒಬ್ಬನಲ್ಲ: ಕೋಟಿ ದೇವರನ್ನು ಸೃಷ್ಟಿಸಿಕೊಂಡು, ಸುಖವಾಗಿದ್ದೀರಿ. ನಿಮಗೆ ನೀರು ನೆಲ ಬಾನು ಬೆಟ್ಟ ಎಲ್ಲವೂ ದೇವರೇ. ಹಾಗಾಗಿ ನಿಮಗೆ ಒಬ್ಬ ದೇವರನ್ನು ಬಿಟ್ಟರೆ ಪೂಜಿಸಲು ಇನ್ನೊಬ್ಬನಿದ್ದಾನೆ. ನಿಮ್ಮದಲ್ಲದ ದೇವರನ್ನು ಒಪ್ಪಿಕೊಳ್ಳುವುದನ್ನೂ ಅಭ್ಯಾಸ ಮಾಡಿಕೊಂಡಿದ್ದೀರಿ." -ಕಾದಂಬರಿಯಲ್ಲಿ ಬರುವ ಬ್ರೂನೋ ಪಾದ್ರಿಯ ಈ ಮಾತುಗಳು ಎಲ್ಲ ಕಾಲಕ್ಕೂ ಎಲ್ಲ ಮತಗಳಿಗೂ ಅನ್ವಯಿಸುವಂತಿದೆ. ಇತಿಹಾಸದ ತಿಳಿವು ನಮ್ಮನ್ನು ರೊಚ್ಚಿಗೆಬ್ಬಿಸಬಾರದು ನಿಜ. ಆದರೆ ಅದು ಮತ್ತೆಮತ್ತೆ ಮರುಕಳಿಸದಿರುವ ಎಚ್ಚರಿಕೆಯನ್ನು ಹುಟ್ಟಿಸುವಂತಿರಬೇಕು. ಈ ನಿಟ್ಟಿನಲ್ಲಿ ಪರಕೀಯರ ದಾಳಿಗೆ ತುತ್ತಾಗುವವರ ಬವಣೆಯನ್ನು ಹಸಿಹಸಿಯಾಗಿ ಹರಡಿರುವ ಈ  ಕೃತಿ ಸಶಕ್ತವಾಗಿದೆ ಎನ್ನಬಹುದು. ಇನ್ನು, ಸರಿಸುಮಾರು ಅದೇ ಸಮಯದಲ್ಲಿ ಉತ್ತರ ಕನ್ನಡದ ಬಹುತೇಕ ಭಾಗವನ್ನು ಆಳುತ್ತಿದ್ದ ಗೇರುಸೊಪ್ಪೆ ರಾಣಿ ಚೆನ್ನಭೈರಾದೇವಿ ಹೇಗೆ ಆ ಗೋವೆಯ ಸಾರಸ್ವತ ವಲಸಿಗರಿಗೊಂದು ಘನತೆಯ ಬದುಕನ್ನು, ಸುಭದ್ರ ನೆಲೆಯನ್ನು ಒದಗಿಸದಳು ಎಂಬುದನ್ನೂ ಈ ಕಾದಂಬರಿ ತೆರೆದಿಡುತ್ತದೆ.

  ನಿಷ್ಕಾಮ ಪ್ರೀತಿಗೆ ವ್ಯಾಖ್ಯಾನ ಬರೆವ ಭೈರಾದೇವಿಯ ಗುರುಪುತ್ರ ಜಿನದತ್ತ

ಒಂದೆಡೆ ಕಾಮ, ಕ್ರೋಧ, ಮದ, ಮತ್ಸರಕ್ಕೊಳಗಾಗಿ ಸ್ವಂತ ಅಕ್ಕನ ಮಗಳ ಚಾರಿತ್ರ್ಯವನ್ನೇ ಹನನಗೊಳಿಸುವ ಸಾಳುವ ವಂಶದ ಕೃಷ್ಣದೇವರಸ, ಇನ್ನೊಂದೆಡೆ ದೇಹ ವಾಂಛೆ, ಮೋಹ, ಕಾಮ - ಇವೆಲ್ಲವುಗಳ ಗೊಡವೆಯಿಲ್ಲದೇ ಭೈರಾದೇವಿಯ ಅಕಳಂಕ ಮನಸ್ಸನ್ನು ಪ್ರೀತಿಸಿ ಅವಳ ಮತ್ತು ರಾಜ್ಯದ ಹಿತಾಸಕ್ತಿಗಾಗಿ ತನ್ನನ್ನೇ ಮುಡಿಪಾಗಿಟ್ಟ ಜಿನದತ್ತ! ಎರಡೂ ವೈರುಧ್ಯಗಳ ಮೂಲಕ ಮನುಷ್ಯನ ಮನೋ ವ್ಯಾಪಾರ ಮತ್ತು ಅವುಗಳಿಂದಾಗುವ ವಿನಾಶ ಮತ್ತು ಒಳಿತನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.

"ಸ್ವಂತದ್ದನ್ನಷ್ಟೇ ಪ್ರೀತಿಸಬೇಕು ಅಥವಾ ಪ್ರೀತಿಸುವುದೆಲ್ಲ ಸ್ವಂತವಾಗಬೇಕು ಎಂಬ ಸ್ವಾರ್ಥ ನನ್ನದಲ್ಲ. ಪ್ರೀತಿಯ ಅರ್ಥ ಬಯಸುವುದರಲ್ಲಿಲ್ಲ, ಪ್ರೀತಿಸುವುದರಲ್ಲಿದೆ, ಅಷ್ಟೇ. ಪ್ರೀತಿಯೊಂದು ಅನುಭವ. ಅದು ವ್ಯಾಖ್ಯಾನಕ್ಕೆ ಸಿಗುವ ಸಂಗತಿಯಲ್ಲ" ಎಂದಿರುವ ಜಿನದತ್ತನ ವೈಶಾಲ್ಯತೆ, ನಿಷ್ಕಾಮ ಮನಸ್ಸು ರಾಣಿಯಲ್ಲೂ ಇತ್ತು ಎಂಬುದು ಮನದಟ್ಟಾಗುತ್ತದೆ. ಅವಳು ತನ್ನ ರಾಜ್ಯವನ್ನು, ಪ್ರಜೆಗಳನ್ನು ಯಾವುದೇ ಪ್ರತಿಫಲನದ ಅಪೇಕ್ಷೆ, ನಿರೀಕ್ಷೆಗಳಿಲ್ಲದೇ ಪ್ರೀತಿಸಿದಳು. ಎಷ್ಟು ವೈರಾಗ್ಯಪೂರ್ಣ ಪ್ರೀತಿ ಅವಳದಾಗಿತ್ತೆಂದರೆ ತಾನು ಕೊಟ್ಟಿದ್ದು ತನ್ನ ದೇಣಿಗೆ ಅಲ್ಲ ಅವರ ಹಕ್ಕು ಎಂಬುದು ಅವಳ ನಿಲುವಾಗಿತ್ತು. ಬಹುಶಃ ಅವಳು ಪ್ರಜೆಗಳಿಂದ ಅದರಲ್ಲೂ ಕೆಲವು ಸೈನಾಧಿಕಾರಿಗಳಿಂದ ನಿಯತ್ತನ್ನೂ ನಿರೀಕ್ಷಿಸದೇ ಹೋಗಿದ್ದೇ ಅವಳ ಮೊದಲ ಹಾಗೂ ಅಂತಿಮ ಸೋಲಿಗೆ ಕಾರಣವಾಯ್ತೇನೋ.

ಜ್ವಾಲಾಮಾನಿಯ ಪ್ರಸ್ತಾಪ

ರಾಣಿ ಪ್ರತಿ ದಿವಸ ತನ್ನ ನಿವಾಸದಲ್ಲಿದ್ದ ಜ್ವಾಲಾಮಾಲಿನಿ ಮೂರ್ತಿಗೆ ನಮಸ್ಕರಿಸುತ್ತಿದ್ದಳೆಂಬುದನ್ನು ಕಾದಂಬರಿಯಲ್ಲಿ ಓದಿ ಬಹಳ ಕುತೂಹಲವಾಯ್ತು. ಹುಡುಕಿದಾಗ ಆಸಕ್ತಿಕರ ವಿಷಯಗಳು ದೊರಕಿದವು. ಜ್ವಾಲಾಮಾಲಿನಿ ಜೈನ ಧರ್ಮದ ಎಂಟನೇ ತೀರ್ಥಂಕರರಾದ ಚಂದ್ರಪ್ರಭ ಅವರ ರಕ್ಷಕ ದೇವತೆಯಾಗಿದ್ದವಳು. ಆರಂಭಿಕ ಮಧ್ಯಕಾಲೀನ ಕರ್ನಾಟಕದಲ್ಲಿ ಅತ್ಯಂತ ವ್ಯಾಪಕವಾಗಿ ಆರಾಧಿಸಲ್ಪಟ್ಟ ಯಕ್ಷಿಣಿಯರಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಳು ಎಂಬ ಮಾಹಿತಿ ದೊರಕಿತು. ಜೈನಧರ್ಮದ ಆಚಾರ, ಸಂಪ್ರದಾಯ, ವೃತ-ನೇಮಗಳ ಅರ್ಥ, ಅವುಗಳ ಆಚರಣೆಯ ವಿಧಾನಗಳು, ಸಲ್ಲೇಖನ ವ್ರತದ ಮೂಲೋದ್ದೇಶ ಮತ್ತು ಅದನ್ನು ಪಡೆಯಲು ಇರಬೇಕಾದ ಅರ್ಹತೆಗಳು - ಹೀಗೆ ನಮಗೆ ಗೊತ್ತಿಲ್ಲದ ಒಂದು ಧರ್ಮಾಚರಣೆಯ ಸಮಗ್ರ ವಿವರಣೆಗಳನ್ನು  ಸಂಶೋಧಿಸಿ ಒದಗಿಸಿರುವ ಮಾಹಿತಿಪೂರ್ಣ ಕಾದಂಬರಿ ಇದು.

ಲೇಖಕರ ಅಗಾಧ ಸಂಶೋಧನಾತ್ಮಕ ವಿವರಣೆ:

ಕಾದಂಬರಿಯುದ್ದಕ್ಕೂ ಶ್ರೀಯುತ ಗಜಾನನ ಶರ್ಮ ಅವರು ಈ ಒಂದು ಐತಿಹಾಸಿಕ, ಜನಮಾನಸದಲ್ಲಿ ಜಾಗ ಪಡೆಯದಿರುವ ಕಥಾವಸ್ತುವನ್ನು ನಿರೂಪಿಸಲು ಎಷ್ಟೆಲ್ಲ ಸಂಶೋಧನೆ, ಅಧ್ಯಯಯನಗಳನ್ನು ಮಾಡಿದ್ದಾರೆ ಎಂಬುದಕ್ಕೆ ಕೊನೆಯಲ್ಲಿ ಕೊಟ್ಟ ಆಕರ ಗ್ರಂಥಗಳು ಮತ್ತು ಮೂಲಗಳ ವಿವರಣೆಯೇ ಸಾಕ್ಷಿ. ಅಲ್ಲದೇ ಆ ಕಾಲದ ಉಡುಪು, ಆಚಾರ-ವಿಚಾರ, ನೇಮ-ನಿಷ್ಠೆಗಳು, ಆಹಾರ-ವಿಹಾರ, ಮುಖ್ಯವಾಗಿ ಜಿನ ಪದ್ಧತಿಗಳನ್ನು ಆಮೂಲಾಗ್ರಹವಾಗಿ ಸಂಗ್ರಹಿಸಿ ನೀಡಲಾಗಿದೆ. ದಟ್ಟಕಾಡಿನಲ್ಲಿ ಚತುರತೆಯಿಂದ ಮಾಡುವ ಯುದ್ಧಗಳು, ಗೇರುಸೊಪ್ಪೆಯ ಘಾಟನ್ನು ಏರಲಾಗದೇ ಬುಸುಗುಡುವ ಕತ್ತೆಗಳನ್ನು ವೈರಿಗಳ, ದಾಳಿಕೋರರ ಬಾಣದಿಂದ ಪಾರುಮಾಡಲು ರಾಣಿ ಮಾಡುತ್ತಿದ್ದ ಚಾಣಾಕ್ಷ ಉಪಾಯಗಳನ್ನೋದಿ ಬೆರಗು ಮೂಡಿತು.  ಕರಿಮೆಣಸು, ಬಿಳಿಕಾಳು ಮೆಣಸಿನ ವ್ಯಾಪಾರದ ಚತುರತೆ, ಅದಕ್ಕಾಗಿ ಆಕೆ ಯಾವೆಲ್ಲ ಸೌಕರ್ಯ, ಸವಲತ್ತುಗಳನ್ನು ಜನರಿಗೆ ಹೇಗೆಲ್ಲ ಏರ್ಪಡಿಸಿದಳು ಎಂಬುದರ ಸ್ಪಷ್ಟ ನಿದರ್ಶನ ಸಿಗುತ್ತದೆ. ಮಧ್ಯಕಾಲದಲ್ಲಿ ಕರ್ನಾಟಕ ಅದರಲ್ಲೂ ಕರಾವಳಿ, ಮಲೆನಾಡಿನ ಜನಜೀವನ, ಮನೋವ್ಯಾಪಾರಗಳ ಅನಾವರಣ ನಮಗಾಗುತ್ತದೆ. ಪ್ರತಿ ಅಧ್ಯಾಯದಲ್ಲೂ ಲೇಖಕರ ಸಂಶೋಧನೆ, ಸೂಕ್ಷ್ಮ ನಿರ್ವಹಣೆ ಎದ್ದುಕಂಡು ಕಥೆಯ ಗಟ್ಟಿತನಕ್ಕೆ, ನೈಜತೆಗೆ ಇಂಬುಕೊಡುತ್ತದೆ.

ತನ್ನ ನಿಸ್ವಾರ್ಥ ಪ್ರಜಾಸೇವೆ, ಧೀಮಂತ ವ್ಯಕ್ತಿತ್ವದಿಂದ ಪ್ರಜೆಗಳಿಂದ ಪ್ರೀತಿಪೂರ್ವಕವಾಗಿ ‘ಅವ್ವರಸಿ’ ಎಂದು ಕರೆಸಿಕೊಂಡ ಚೆನ್ನಭೈರಾದೇವಿ, ಪಟ್ಟದಲ್ಲಿದ್ದರೂ ಪೀಠಕ್ಕಂಟಿಕೊಳ್ಳದೇ, ಅಕ್ಷರಶಃ ಪದ್ಮಪತ್ರದ ಮೇಲಿನ ಹನಿಬಿಂದುವಿನಂತೆ ಹೇಗೆ ಬದುಕಿದಳು. ಮಹಾಮಂಡಳೇಶ್ವರಿಯಾಗಿ, ಪಂಚಾಣುವ್ರತದ ಉಪದೇಶಪಡೆದು ಜಿನಪಾದ ಪೂಜಪರಳಾದ ಶ್ರಾವಕಿಯಾಗಿ, ಯಾರ ಹಂಗಿಗೂ ಒಳಗಾಗದೇ, ಯಾರಿಗೂ ಬಗ್ಗದೇ ಕೇವಲ ಪ್ರಜೆಗಳ ಪ್ರೀತ್ಯಾದರಗಳಿಗೆ ತಲೆಬಾಗಿ, ಸಲ್ಲೇಖನ ವ್ರತ ಕೈಗೊಂಡು ಜಿನಪಾದ ಸೇರಿದ ಓರ್ವ ಅಪೂರ್ವ ಜೀವಿಯ ಆತ್ಮಕಥನವಿದು. ಕಳಂಕದ ಸುಳ್ಳು ಎಷ್ಟೇ ಕಾಡ್ಗಿಚ್ಚಿನಂತೆ ಹಬ್ಬಿದರೂ, ಸತ್ಯದ ನಂದಾದೀಪ ಸದಾ ಬೆಳಗಿ ನಿಜದ ಪ್ರಭೆ ಎಂದಾದರೊಂದು ದಿನ ಹೊರಹೊಮ್ಮುತ್ತದೆ ಎಂಬುದಕ್ಕೆ "ಚೆನ್ನಭೈರಾದೇವಿ"ಯಂತಹ ಕಾದಂಬರಿಗಳು, ಅಳಿದುಳಿದ  ಐತಿಹಾಸಿಕ ಸಾಕ್ಷಿಗಳು ಇಂದು ಬೆಳಕಿಗೆ ಬರುತ್ತಿರುವುದೇ ಸಾಕ್ಷಿ.

ಕಾದಂಬರಿಯನ್ನೋದಿದ ಮೇಲೆ ಮನದಲ್ಲಿ ಅಚ್ಚೊತ್ತುವ ಕೆಲವು ಅಪೂರ್ವ ಸಾಲುಗಳು:

*  ಸಮಾಜದ ದೃಷ್ಟಿಯಲ್ಲಿ ಬೀಜ ಎಲ್ಲಿ ಉದುರಿ ಬಿದ್ದು ಮೊಳೆತರೂ ಅದಕ್ಕೆ ಮಾಲಿನ್ಯದ ಹಂಗಿಲ್ಲ. ಶುದ್ಧತೆಯ ಬದ್ಧತೆಯಿಲ್ಲದ ಅದಕ್ಕೆ ಸಂಸ್ಕಾರದ ಹಂಗೂ ಇಲ್ಲ. ಹೇಗೆ ಮೊಳೆಯಿತು ಎಂಬುದಕ್ಕಿಂತ, ಮೊಳೆಯುವುದೇ ಅದರ ಹೆಚ್ಚುಗಾರಿಕೆ. ಆದರೆ ಕ್ಷೇತ್ರಕ್ಕೆ ಮಾತ್ರ ಪಾವಿತ್ರ್ಯದ ಪಾಗಾರ, ನೇಮಗಳ ಬೇಲಿ. ಸದಾ ಶುದ್ಧವಾಗಿರುವುದೇ ಅದರ ಮೌಲ್ಯ. ಹಾಗೆಂದೇ ಅದಕ್ಕೆ ಹಲವು ಕಟ್ಟುಕಟ್ಟಳೆಗಳು. ಇದಲ್ಲವೇ ಹೆಣ್ಣುಗಂಡುಗಳ ನಡುವಿನ ಶುದ್ಧಾಶುದ್ಧತೆಗೆ ಜಗತ್ತು ಅನುಸರಿಸುತ್ತಿರುವ ಮಾನದಂಡ!?

* ಪಾತ್ರ ಮುಗಿದ ಮೇಲೂ ರಂಗದಲ್ಲಿ ಉಳಿದರೆ ಪ್ರದರ್ಶನ ಹೇಗೆ ಸ್ವಾರಸ್ಯ ಕಳೆದು ಕೊಳ್ಳುವುದೋ ಹಾಗೇ ಅವಧಿ ಮುಗಿದ ಮೇಲೆ ಪದವಿಯಲ್ಲಿ ಮುಂದುವರಿಯುವುದೂ ಆಭಾಸ. ಇಲ್ಲಿ ಯಾರೂ ಅನಿವಾರ್ಯರಲ್ಲ.

*ಒಳ್ಳೆಯವರಾಗಿರುವುದಷ್ಟೇ ಮುಖ್ಯವಲ್ಲ, ಒಳ್ಳೆಯವರೆಂದು ತೋರ್ಪಡಿಸಿಕೊಳ್ಳುವುದೂ ಅಷ್ಟೇ ಮುಖ್ಯ.

*ಗೆದ್ದು ಬೀಗುವ ಸಾಮ್ರಾಜ್ಯಗಳ ರಾಜಬೀದಿಗಳಲ್ಲಿ ಬಳ್ಳದಲ್ಲಿ ಅಳೆದು ಮಾರುವ ಮುತ್ತುರತ್ನಗಳಲ್ಲಿ ವಿಧವೆಯರ ತಾಳಿ ಓಲೆಗಳ ಪಾಲಿಲ್ಲವೇನು? ಹೋರಾಡಿ ಮಡಿದ ಯೋಧರಿಗೆ ವೀರ ಸ್ವರ್ಗ ಎಂದು ಬರೆದ ಚರಿತ್ರೆ, ಬದುಕಿರುವ ಅವರ ಪತ್ನಿಯರಿಗೆ ರೌರವ ನರಕವೆಂದು ಬರೆಯಿತೇನು?

*ಯುದ್ಧಕ್ಕಾಗಿ ಎಷ್ಟೇ ವೆಚ್ಚ ಮಾಡಿದರೂ ಚಕ್ರವರ್ತಿಗಳು ಶ್ರೀಮಂತರಾಗಿ ಉಳಿಯುವುದು ಸೋತವರನ್ನು ಸುಲಿದು ತಾನೇ?

*ಬದುಕೆಂದರೆ ತೆರೆಯೊಂದು ಬಂದರೆ ಹೆಜ್ಜೆಯ ಗುರುತೆಲ್ಲ ತೊಳೆದು ಹೋಗುವ ಮರಳು ತೀರದ ಪಯಣವಾಗಬೇಕು.

 

~ತೇಜಸ್ವಿನಿ ಹೆಗಡೆ.

*********

 

 

ಭಾನುವಾರ, ಏಪ್ರಿಲ್ 11, 2021

ಬೆಟ್ಟವೇರಿದ ಮೇಲೆ ಹನಿದ ಕಾಲದೊಂದೊಂದೇ ಹನಿಗಳು...

"ಆತ್ಮಕಥೆ ಎನ್ನುವುದು ತುಂಬಾ ದೊಡ್ಡ ಅರ್ಥವ್ಯಾಪ್ತಿಯನ್ನು ಹೊಂದಿರುವಂಥದ್ದು. ಆ ಅರ್ಥವ್ಯಾಪ್ತಿಗೆ ಅನುಗುಣವಾಗುವಂತಹ ವಿಷಯ ನನ್ನಲ್ಲಿ ಇದೆ ಎನ್ನುವುದರ ಬಗ್ಗೆ ನನಗೆ ನಂಬಿಕೆಯಿಲ್ಲ. ಯಾವ ಆತ್ಮಕಥೆಯೂ ಕೂಡಾ ಪರಿಪೂರ್ಣವಲ್ಲ; ಹೇಳಬಹುದಾದಂಥದ್ದು ಅಥವಾ ಹೇಳುವುದಕ್ಕಿಂತ, ಹೇಳದೆ ಇರುವುದೇ ಜಾಸ್ತಿ ಇರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಪ್ರತಿಯೊಂದು ಆತ್ಮಕಥೆಯೂ ಒಂದೋ ತನ್ನನ್ನು ತಾನು ವೈಭವಿಸಿಕೊಳ್ಳುವಂತಹ ರೀತಿಯದ್ದು ಅಥವಾ ತನ್ನನ್ನು ತಾನು ಹೀನಯಿಸಿಕೊಳ್ಳುವ ರೀತಿಯದ್ದು ಆಗಿರುವಂತಹ ಸಾಧ್ಯತೆ ಇದೆ" - ಎಂದು ವಿವರಿಸುತ್ತಾ, ಹೇಗೆ ‘ಕಾಲದೊಂದೊಂದೇ ಹನಿ...’ ತಮ್ಮ ಆತ್ಮಕಥೆಯಲ್ಲ ಎನ್ನುವುದನ್ನು ‘ಶ್ರೀಯುತ ಸುಬ್ರಾಯ ಚೊಕ್ಕಾಡಿ’ಯವರು ಹೇಳಿಬಿಡುತ್ತಾರೆ. ಮುಂದೆ, "ನನಗೆ ವೈಯಕ್ತಿಕವಾಗಿ ಆದಂತಹ ಅನುಭವ, ನನ್ನ ಮತ್ತು ಸುತ್ತಲಿನ ಸಮಾಜದ ಮುಖಾಮುಖಿಯಾಗಿ ಅರಿವಿಗೆ ಸಿಕ್ಕಿದಂತಹ ಅನುಭವಗಳು, ನಾನು ಕೇಳಿದ-ನೋಡಿದ ವಿಚಾರಗಳಿಂದ ನನಗೆ ದೊರಕಿದ ಅನುಭವಗಳು ಈ ಎಲ್ಲವೂ ಸೇರಿ ಇದೊಂದು ಅನುಭವ ಕಥನವಾಗಿದೆ" ಎಂದು ಮೊದಲ ಅಧ್ಯಾಯದಲ್ಲೇ ಸ್ಪಷ್ಟಪಡಿಸುತ್ತಾರೆ. ಹೀಗಾಗಿ ಆರಂಭದಲ್ಲೇ ನಮ್ಮ ಓದಿಗೆ ಒಂದು ಸ್ಪಷ್ಟ ಪರಿಕಲ್ಪನೆಯನ್ನೊದಗಿಸುತ್ತಾ, ಆತ್ಮಕಥೆಯ ನಿಟ್ಟಿನಲ್ಲಿ ನಾವು ಓದಲು ಹೋಗದೇ ಅವರ ಅನುಭವಗಳನ್ನು ಒಳಗೆಳೆದುಕೊಳ್ಳುವ, ಆ ಮೂಲಕ ನಮ್ಮ ಬದುಕು ನಮಗೆ ಕಲಿಸಿದ ಪಾಠ, ಅನುಭವಗಳಿಗೆ ಒಂದು ಸೇತುವನ್ನೇರ್ಪಡಿಸಿಕೊಂಡು ಸಾಗುವ ಪಯಣವಾಗಿಬಿಡುತ್ತದೆ.

‘ನಾನೇರಿದೆತ್ತರಕೆ ನೀನೇರಬಲ್ಲೆಯ’ ಎಂದು ಸವಾಲು ಹಾಕುವಂತಹ ಬಂಟಮಲೆ ಬೆಟ್ಟದ ತಪ್ಪಲಿನಲ್ಲಿರುವ ‘ಚೊಕ್ಕಾಡಿ’ ಎಂಬ ಪುಟ್ಟ ಸುಂದರ ಊರು ಹೇಗೆ ಅಂತಹ ಮಹತ್ವದ ಸ್ಥಳವಲ್ಲದೆಯೂ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು, ಮಹತ್ವವನ್ನು ಪಡೆದುಕೊಂಡಿದೆ ಎಂಬುದನ್ನು ವಿವರಿಸಿದ ರೀತಿ ನಮಗೂ ಆ ಊರನ್ನು ಬಹಳ ಆಪ್ತಗೊಳಿಸಿಬಿಡುತ್ತದೆ. ಇಲ್ಲಿ ಲೇಖಕರು ತಮ್ಮ ಬದುಕು ಹೇಗೆ ತಾವಿದ್ದ ತಾವಿನಿಂದಲೇ ಹದಗೊಂಡು ಗಟ್ಟಿಯಾಗುತ್ತಾ ಸಾಗಿತು, ಯಾವ ರೀತಿ ಚೊಕ್ಕಾಡಿ ತಮ್ಮ ಜೀವನ ಸಂಘರ್ಷದಲ್ಲಿ ಮಹತ್ವದ ಪಾತ್ರವನ್ನು ವಹಿಸಿತು ಎನ್ನುವುದನ್ನು ವಿವರಿಸುತ್ತಾ ಹೋದಂತೇ ಅದು ನಮ್ಮನ್ನು ನಮ್ಮ ಬಾಲ್ಯ, ಓದು, ಆರಂಭದ ಹೋರಾಟ ದಿನಗಳು - ಇವೆಲ್ಲಾ ಜರುಗಿದ ನಮ್ಮ ಪರಿಸರದ ಕಡೆಗೆ ಎಳೆದುಕೊಂಡು ಹೋಗಿಬಿಡುತ್ತದೆ.
ತಮ್ಮ ಊರಿನ ಮೇಲೆ ಅವರಿಟ್ಟಿರುವ ಅಭಿಮಾನ, ಪ್ರೀತಿಯನ್ನು ಅಕ್ಷರಗಳಲ್ಲಿ ಸಶಕ್ತವಾಗಿ ಪ್ರಾಮಾಣಿಕವಾಗಿ ಕಟ್ಟಿಕೊಡುವಾಗ ಓದುಗನೂ ಅವನ ಮನದಲ್ಲಿ ಬಲವಾಗಿ ಬೇರೂರಿದ, ನೋವು-ನಲಿವು ಕಂಡು-ಉಂಡು ಬೆಳೆದ ಊರು, ಪರಿಸರಕ್ಕೆ ಹಾರಿಬಿಡುತ್ತಾನೆ.

ಅಮರಪಡ್ನೂರಿನ ಅಜ್ಜನಗದ್ದೆಯಿಂದ ಆರಂಭವಾಗುವ ಜೀವನದ ಪಯಣದ ಬೀಜವು ಚೊಕ್ಕಾಡಿಯಲ್ಲಿ ಸ್ಥಿರಗೊಂಡು, ಅಲ್ಲೇ ಬೇರೂರಿ ಎಲ್ಲೆಡೆ ಹಬ್ಬಿಬೆಳೆದು, ಎದುರಾದ ಅಸಂಖ್ಯಾತ ಎಡರುತೊಡರುಗಳು, ನೋವು-ನಲಿವುಗಳು, ಕಹಿ ಘಟನೆಗಳು, ಸಂಕಷ್ಟದ ದಿನಗಳು ಎಲ್ಲವನ್ನೂ ಹೀರಿಕೊಂಡು ಈ ಅನುಭವ ಕಥನದಲ್ಲಿ ದಟ್ಟ ಹೆಬ್ಬಲಸಿನ ಮರವಾಗಿ ಹಬ್ಬಿ ಬೆಳೆದಿದೆ. 355 ಪುಟಗಳ (ಮೊದಲ ಓದಿನ ಸ್ಪಂದನಗಳನ್ನು ಬಿಟ್ಟು) ಈ ಸುದೀರ್ಘ ಅನುಭವ ಕಥನದಲ್ಲಿ ಹಲವು ಘಟನೆಗಳನ್ನು ಈಗಾಗಲೇ ನಾನು ಚೊಕ್ಕಾಡಿಯವರಿಂದಲೇ ಮುಖತಃ ಒಂದೆರಡು ಬಾರಿ ಕೇಳಿದ್ದರೂ, ಅವನ್ನೆಲ್ಲಾ ಸಮಗ್ರವಾಗಿ ಅನುಕ್ರಮದಲ್ಲಿ ಜೋಡಿಸಿ ಕೊಟ್ಟಾಗ ಒಂದೇ ಕಡೆ ಓದಿಕೊಳ್ಳುವಾಗ ಸಿಗುವ ಸಮಾಧಾನವೇ ಬೇರೆ. ಇಲ್ಲಿಯ ಪ್ರಸಂಗಗಳು, ಅನುಭವಗಳು ನಮ್ಮೊಳಗಿನ ಸೂಕ್ಷ್ಮ ಭಾವಗಳನ್ನು, ದುಃಖ-ದುಮ್ಮಾನಗಳನ್ನು ನೇವರಿಸುತ್ತಾ, ಸಂತೈಸುತ್ತಾ, ಸಾಂತ್ವನವನ್ನೂ ನೀಡುತ್ತವೆ. ಹೀಗಾಗಿ ಈ ಕಥನ ಒಂದು ತರಹ ಕೊಡುಕೊಳ್ಳುವ ರೀತಿಯದ್ದು ಅನ್ನಬಹುದು.

‘ದೊಡ್ಡವರು ನೀವು ಕುಬ್ಜರು ನಾವಲ್ಲ’(ಅಡಿಗರು), ‘ಇದ್ದಲ್ಲೇ ಇಡು ದೇವರೆ’ ಹಾಗೂ ‘ಈಸಬೇಕು ಇದ್ದು ಜಯಿಸಬೇಕು’ – ನಾನು ಸದಾ ಸ್ಮರಿಸುವ ಈ ಮೂರು ವಾಕ್ಯಗಳು ಈ ಅನುಭವ ಕಥನದ ಆಧಾರ ಸ್ತಂಭಗಳಾಗಿವೆ ಎಂಬುದು ನನ್ನ ಅನಿಸಿಕೆ.

1.ದೊಡ್ಡವರು ನೀವು, ಕುಬ್ಜರು ನಾವಲ್ಲ
ನಮ್ಮ ಅಭಿಮಾನ, ಸ್ವಾಭಿಮಾನ, ಪ್ರಾಮಾಣಿಕತೆಗೆ ಧಕ್ಕೆ ಬಂದಾಗ, ನಾವು ಸತ್ಯ ಪಥದಲ್ಲಿದ್ದಾಗ, ಎದುರಿನವರು ಎಂತಹ ದೊಡ್ಡ ಹುದ್ದೆಯಲ್ಲಿರುವ, ಪ್ರಸಿದ್ಧ ವ್ಯಕ್ತಿಯೇ ಆಗಿದ್ದರೂ ಬಾಗಬೇಕಾಗಿಲ್ಲ. ಇದರಿಂದ ನಮ್ಮೊಳಗೆ ದೃಢತೆ, ಛಲ ಗಟ್ಟಿಯಾಗತ್ತಲೇ ಹೋಗುತ್ತದೆ. ಆ ಕ್ಷಣಕ್ಕೆ ಬೇಸರ, ಸಮಸ್ಯೆಗಳು ಎದುರಾದರೂ ಅದು ಬದುಕಲ್ಲಿ ಬೆಳೆಸುವ ಧೈರ್ಯ, ಕೊಡುವ ಧೈರ್ಯ ಅನನ್ಯ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇಲ್ಲಿ ದೊರಕುತ್ತವೆ. ಎಂತಹ ಕಷ್ಟಕರ ಸಮಯದಲ್ಲೂ ತಮ್ಮ ಸ್ವಾಭಿಮಾನ, ಆತ್ಮವಿಶ್ವಾಸವನ್ನು ಅಡವಿಡದ, ಯಾವ ಬೆದರಿಕೆಗೂ ಬೆದರದೇ ಎದುರಾದ ಸವಾಲುಗಳನ್ನು ಸ್ವೀಕರಿಸಿದ ರೀತಿಯನ್ನು ಲೇಖಕರು ಹಲವು ಪ್ರಸಂಗಗಳ ಮೂಲಕ ನಮ್ಮೆದುರು ತೆರೆದಿಟ್ಟಿದ್ದು ಮಾದರಿಯಾಗಿದೆ.

2.ಇದ್ದಲ್ಲೇ ಇಡು ದೇವ್ರೆ
ಹಲವು ಒಳ್ಳೊಳ್ಳೆಯ ಅವಕಾಶಗಳು ಬದುಕಲ್ಲಿ ಮುಂದೆ ದೊರತಾಗಲೂ ತಮ್ಮ ಗ್ರಾಮ, ಊರಿನ ಜನ, ಶಾಲೆಯ ಮಕ್ಕಳನ್ನು ತೊರದು ಹೋಗದದಿದ್ದು, ಅನ್ಯಾಯ, ಸಂಕಷ್ಟಗಳು ಧುತ್ತನೆ ಎದುರಾದಾಗ, ಅಪಮಾನಗಳು ಹಲವು ಬಗೆಯಲ್ಲಿ ಸಮಾಜದಿಂದ ಹಾಗೂ ಕುಟುಂಬದೊಳಗಿನಿಂದಲೂ ಹೊಡೆತ ನೀಡಿದಾಗಲೂ ಧೃತಿಗೆಡದೇ, ಊರು, ಮನೆ ಬಿಟ್ಟು ಹೋಗದೇ, ಅಲ್ಲೇ ಬೇರೂರಿ ನಿಂತು ಸಡ್ಡು ಹೊಡೆದದ್ದು - ಹೀಗೆ ಇರುವಲ್ಲಿಯೇ ಲೋಕ ಜ್ಞಾನವನ್ನು ಪಡೆಯಲು ನಿರ್ಧರಿಸಿದ್ದು, ಸುಖ ಮತ್ತು ನೆಮ್ಮದಿಯಲ್ಲಿ ನೆಮ್ಮದಿಯನ್ನು ಆಯ್ದುಕೊಂಡು ಹೊರಟಿದ್ದು ಎಲ್ಲವೂ ಹೊಸ ಹೊಳಹನ್ನು ನೀಡಿ ಮಾರ್ಗದರ್ಶನವನ್ನು ಮಾಡುತ್ತವೆ.

3.ಈಸಬೇಕು ಇದ್ದು ಜಯಿಸಬೇಕು
ಎಲ್ಲಕ್ಕಿಂತ ಮುಖ್ಯ ಬದುಕು ಮತ್ತು ಅದನ್ನು ಘನತಯಿಂದ ಬದುಕುವುದರಲ್ಲಿರುವುದು ಎಂಬುದು ಇಲ್ಲಿ ನಿಚ್ಚಳವಾಗಿ ತೋರುತ್ತದೆ. ಜೀವನಕ್ಕೆ ವಿಮುಖನಾಗಿಬಿಡುವುದು ಸುಲಭ, ಅದಕ್ಕೆ ಮನಸ್ಸು ಹಾಗೂ ಪ್ರಸಂಗಗಳು ಹಲವಾರು ಕಾರಣಗಳನ್ನು ನೀಡುತ್ತವೆ. ಆದರೆ ಅವುಗಳಿಗೆ ಶರಣಾಗದೇ ಸ್ಪಷ್ಟ ಗುರಿಯೊಡನೆ, ಸಂಕಲ್ಪದೊಂದಿಗೆ ಮುನ್ನುಗ್ಗಿದಾಗ ಕಾಲವೂ ಶರಣಾಗುತ್ತದೆ ಎನ್ನುವ ಒಳ್ಳೆಯ ಸಂದೇಶವನ್ನೂ ನೀಡುತ್ತದೆ.

ಶ್ರೀಯುತ ಚೊಕ್ಕಾಡಿಯವರ ಸಮಗ್ರ ಕಾವ್ಯದಲ್ಲಿರುವ "ಧಾನಸ್ಥ’ ಎನ್ನುವ ಕವಿತೆಯನ್ನು ಆಗಾಗ ಓದುತ್ತಿರುತ್ತೇನೆ. ಇದು ಅವರ ಈ ಅನುಭವ ಕಥನದ ಸಾರವನ್ನೇ ಹಿಂಡಿ ಕೊಡುತ್ತದೆ ಎಂದು ಈಗ ನನಗನ್ನಿಸುತ್ತಿದೆ.

-ಎಲ್ಲ ಗತ ಇತಿಹಾಸವಾಗುವ ಹಾಗೆ
ಇದಲ್ಲ ಇದಲ್ಲ ಎಂದು ಸಾರುವ ಹಾಗೆ
ಎದುರು ನಿಂತಿದೆ ಇಲ್ಲಿ ತ್ರಿಭಂಗಿ ನಿಲುವಲ್ಲಿ ಧ್ಯಾನಸ್ಥ
ಆಕಾಶಕ್ಕೆ ಲಗ್ಗೆಯಿಟ್ಟಂಥ ಪಾರಿಜಾತ.
....
ಕಾಣ್ಕೆ-ಕಣ್ಕಟ್ಟುಗಳ ನಡುವೆ ತೆಳುಗೆರೆ ಹರಿದು
ಆಚೆಗೆ ಚಾಚಿಕೊಳ್ಳುವ ಸಿದ್ಧಿಯಾಕಾಂಕ್ಷೆಯಲಿ
ಎದುರು ನಿಂತಿದೆ ಇಲ್ಲಿ ತ್ರಿಭಂಗಿ ನಿಲುವಲ್ಲಿ ಧಾನ್ಯಸ್ಥ
ಆಕಾಶಕ್ಕೆ ಲಗ್ಗೆಯಿಟ್ಟಂಥ ಪಾರಿಜಾತ.

ಅಲ್ಲದೇ, ಈ ಅನುಭವ ಕಥನವನ್ನು ಓದುತ್ತಿರುವಾಗ ಪದೇಪದೇ ಜಿ.ಎಸ್.ಶಿವರುದ್ರಪ್ಪನವರ ನನ್ನಚ್ಚುಮೆಚ್ಚಿನ ‘ಶಕ್ತಿಯ ಕೊಡು ಹೇ ಪ್ರಭು..’ ಕವಿತೆ ನೆನಪಿಗೆ ಬರುತ್ತಿತ್ತು.
ಎಡರ ಕಡಲ ತೆರೆಹೆಡೆಗಳು
ಭೋರ್ಗರೆಯುತ ಬಂದರೂ
ತಡೆದು ನಿಲುವ ಮಳಲ ತಡಿಯ
ಛಲವ ನೀಡು ಶ್ರೀಗುರು- ಎಂಬ ಸಾಲುಗಳು ಹಲವು ಅಧ್ಯಾಯಗಳನ್ನೋದುವಾಗ ನೆನಪಾಗಿ ಆರ್ದ್ರಗೊಂಡಿದ್ದಿದೆ.
ಅಲ್ಲದೇ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವಿತೆಯೊಂದರ,
ಜೀವ ಭಾವ ಕಾವು ನಿಂತು
ಬೆರಗು ಮುಳ್ಳು ಕಲ್ಲಿಗೂ
ಕವಿತೆ ಬೆಳೆದ ಕಂಪು ಬಂತು,
ಅಲ್ಲಿ ಇಲ್ಲಿ ಎಲ್ಲಿಗೂ.. - ಈ ಸಾಲುಗಳೂ ನೆನಪಾಗಿ ಬಹಳ ಸಮಾಧಾನವನ್ನೂ ನೀಡಿದೆ.

ಇದು ಲೇಖಕರ ವೈಯಕ್ತಿಕ ಕಥನ ಮಾತ್ರವಲ್ಲ.
ಈ ಅನುಭವ ಕಥನ ಓರ್ವ ವ್ಯಕ್ತಿಯ ಸುದೀರ್ಘ ಎಂಭತ್ತು ವರುಷಗಳ ಸಾಹಿತ್ಯಿಕ ಹಾಗೂ ಸಾಮಾಜಿಕ ಬದುಕಿನ ಕಥೆ ಮಾತ್ರ ಎಂದೆನ್ನಿಸುವುದಿಲ್ಲ. ಆ ಕಾಲಘಟ್ಟದ ಸಮಗ್ರ ಚಿತ್ರಣವನ್ನು ಕಾಣಿಸುವಂಥದ್ದೂ ಹೌದು ಎನ್ನಬಹುದು. ಈ ಒಂದು ಓದಿನ ಪಯಣದಲ್ಲಿ ಅಂದಿನ ದಕ್ಷಿಣ ಕನ್ನಡದ ಜನಜೀವನ, ಸಮಾಜಿಕ ಚಿತ್ರಣ, ಸಾಂಸ್ಕೃತಿಕ-ಸಾಹಿತ್ಯಿಕ ವಲಯಗಳಲ್ಲಿ ಆಗುತ್ತಿದ್ದ ವಿಪ್ಲವಗಳು, ರಾಜ್ಯದ ರಾಜಕೀಯಗಳು, ಅದರ ಹಳವಂಡಗಳು ಹಾಗೂ ಗುದ್ದಾಟಗಳು... ಅಡಿಗರು, ಕಾರಂತರು, ಚಿತ್ತಾಲರು - ಮುಂತಾದ ಹಿರಿಯ ಸಾಹಿತಿಗಳೊಡನೆ ಅವರ ಒಡನಾಟ, ಅನುಭವಗಳು - ಇವೆಲ್ಲದರ ಮಾಹಿತಿಗಳನ್ನು ನೀಡುತ್ತಾ ಹೋಗುತ್ತದೆ. ಅಂತೆಯೇ, ಅಂದಿನ ಶಾಲೆಗಳ ಕಾರ್ಯವೈಖರಿ, ಶಿಕ್ಷಣ ಪದ್ಧತಿ, ಶಿಕ್ಷಕರಿಗೆ ನೀಡುತ್ತಿದ್ದ ತರಬೇತಿ, ಅಂದಿನ ರಾಜಕೀಯ ನಿಲುವುಗಳು, ಸೈದ್ಧಾಂತಿಕ ಗುದ್ದಾಟಗಳು... ಇನ್ನು, ಕವಿತೆ ಎಂದರೆ ಏನು? ಕಾವ್ಯ ಪ್ರಕಾರ ಹೇಗೆ ವಿಶಿಷ್ಟವಾಗಿದೆ, ಕವಿತೆ ಬರೆಯಲು ಯಾವೆಲ್ಲಾ ಪೂರ್ವ ತಯಾರಿಗಳು ಅತ್ಯಗತ್ಯ, ಕವಿ ಮತ್ತು ಕಾವ್ಯ ಹೇಗೆ ಭಿನ್ನ, ಕಾವ್ಯವನ್ನು ಏಕೆ ಬರೆಯುತ್ತಾರೆ/ಬರೆಯಬೇಕು - ಹೀಗೆ ಈ ಎಲ್ಲಾ ಅಂಶಗಳನ್ನೊಳಗೊಂಡ ಒಂದು ಅಪರೂಪದ ಮಾಹಿತಿಪೂರ್ಣ ಪುಸ್ತಕವೂ ಹೌದು. ಇವೆಲ್ಲಾ ಕಥನ ಶೈಲಿಯಲ್ಲಿರುವುದರಿಂದ ಅಕೆಡಮಿಕ್ ನಿರೂಪಣೆಯ ಕ್ಲಿಷ್ಟತೆಯಿಲ್ಲದೇ ಸರಾಗವಾಗಿ ಓದಿಸಿಕೊಳ್ಳುತ್ತವೆ. ಆ ಕಾಲದ ಶಿಕ್ಷಣ ಪದ್ಧತಿಯು ಮಕ್ಕಳಲ್ಲಿ ಬಾಲ್ಯದಿಂದಲೇ ಬದುಕನ್ನು ಹತ್ತಿರದಿಂದ ನೋಡುವ, ಸಂಪೂರ್ಣವಾಗಿ ಜೀವಿಸುವ, ಸೋಲನ್ನು ಎದುರಿಸುವ ಶಿಕ್ಷಣವನ್ನು ಕಲಿಸುತ್ತಿತ್ತು. ಬಹುಮುಖ್ಯವಾಗಿ ನಮ್ಮ ಪರಿಸರ, ಸಹಜೀವಿಗಳನ್ನು ಗೌರವಿಸುವ, ಪ್ರೀತಿಸುವ ಬಗೆಯನ್ನು ಕಲಿಸುತ್ತಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಇಂದು ನಾವು, ನಮ್ಮ ಮಕ್ಕಳು ಎಂತಹ ಶಿಕ್ಷಣವನ್ನು ಪಡೆದಿದ್ದೇವೆ/ಪಡೆಯುತ್ತಿದ್ದೇವೆ ಎಂಬ ಕಟು ವಾಸ್ತವಿಕತೆಯೂ ಅರಿವಾಗುತ್ತದೆ. ಬೇರನ್ನೂರಿ ಆಗಸಕ್ಕೆ ಜಿಗಿವ ಶಿಕ್ಷಣವು ಅಂದಿನದ್ದಾಗಿದ್ದರೆ, ಇಂದೋ ಬೇರನ್ನೇ ಕತ್ತರಿಸಿ ಗಾಳಿಯಲ್ಲಿ ತೇಲುವ, ಮತ್ತೆಲ್ಲೋ ಹಾರಿ ಬಿದ್ದರೂ ತೆವಳಲೂ ಗೊತ್ತಿರದಂತಹ ಕಲಿಕೆಯ ಮಟ್ಟದಲ್ಲಿದ್ದೇವೆಯೇನೋ ಎಂದೆನಿಸಿ ಕಳವಳವಾಗುತ್ತದೆ!

‘ದೊಡ್ಡ ಹೊಟ್ಟೆಯವನ ಹಸಿವು ಗೊತ್ತಾಗುವುದಿಲ್ಲ, ಉಬ್ಬು ಹಲ್ಲಿನವನ ದುಃಖ ಗೊತ್ತಾಗುವುದಿಲ್ಲ ’ - ಎಂಬ ಗಾದೆಯ ಮಾತೊಂದು ಇಲ್ಲಿ ಉಲ್ಲೇಖವಾಗಿದ್ದು, ಅದು ಬಹಳ ಕಾಡುತ್ತದೆ. ಇದು ಹೇಗೆ ಈ ಅನುಭವ ಕಥನದುದ್ದಕ್ಕೂ ಹಾಸುಹೊಕ್ಕಾಗಿದೆ ಎಂಬುದನ್ನು ಅರಿತಾಗ ಮನಸು ಆರ್ದ್ರಗೊಳ್ಳುತ್ತದೆ. ಹಸಿವು ಮತ್ತು ದುಃಖವನ್ನು ಅಡಗಿಸಿ ಬದುಕುವ ಕಲೆ ಸಿದ್ಧಿಸಿದರೆ ಮತ್ತೇನೂ ಅಷ್ಟು ಕಾಡದೇನೋ ಅನ್ನಿಸಿಬಿಡುತ್ತದೆ. ಎಷ್ಟೋ ಸಲ ನಾವು ನಮ್ಮ ಸಂಕಟಗಳನ್ನು, ಎದುರಿಸಿದ ಸವಾಲುಗಳನ್ನು, ಅವಮಾನ, ನೋವುಗಳನ್ನು ಕುಟುಂಬದವರೊಡನೆ ಹಂಚಿಕೊಳ್ಳುತ್ತಾ ಹೋಗದಿದ್ದರೆ ಅದರ ಪರಿಣಾಮ ಯಾವ ರೀತಿಯ ವೈಪರಿತ್ಯಕ್ಕೂ ಕಾರಣವಾಗಿಬಿಡುವುದು ಎಂಬುದರ ಸ್ಥೂಲ ಪರಿಕಲ್ಪನೆ ಸಿಗುತ್ತದೆ. ಸುಖವನ್ನು ಹಂಚುವುದು ಮಾತ್ರವಲ್ಲ, ಅದನ್ನು ಪಡೆಯಲು ಸವೆಸಿದ ಕಷ್ಟದ ಹಾದಿಯ ಗುರುತನ್ನೂ ನಮ್ಮ ಸಹಜೀವಿಗಳಿಗೆ ನೀಡುತ್ತಿರಬೇಕೆಂಬ ಪಾಠವೂ ದೊರಕುತ್ತದೆ.

ಆದರೆ ಈ ಸುದೀರ್ಘ ಅನುಭವ ಕಥನವನ್ನೋದಿ ಮುಗಿಸಿದಾಗ ಅಲ್ಲಲ್ಲಿ ಕೆಲವೊಂದು ಪ್ರಸಂಗಗಳನ್ನು ಮತ್ತೂ ಸಂಕ್ಷಿಪ್ತವಾಗಿ ತರಬಹುದಿತ್ತು, ಕೆಲವೊಂದು ವಿವರಗಳನ್ನು ಕ್ಲುಪ್ತವಾಗಿಸಿದ್ದರೆ ಓದಿನ ಓಘಕ್ಕೆ ಅದು ಮತ್ತಷ್ಟು ಸಹಕಾರಿಯಾಗುತ್ತಿತ್ತು ಎಂದೂ ಅನ್ನಿಸಿತು. ಅದೇನೇ ಇದ್ದರೂ ಇದು ಅನುಭವ ಕಥನವಾಗಿರುವುದರಿಂದ ಹೇಳಬೇಕಾದ್ದಷ್ಟನ್ನು ಹೇಳುವ ರೀತಿಯಲ್ಲಿ ಹನಿಸುವ ಹಕ್ಕು ಲೇಖಕರದ್ದೇ ಎನ್ನುವುದೂ ಸತ್ಯವೇ.

ಇಷ್ಟು ದೊಡ್ಡ ಕಥನವನ್ನು ರೆಕಾರ್ಡ್ ಮಾಡಿಕೊಂಡು ಚಾಚೂ ತಪ್ಪದೇ ಬಹಳ ಸಹನೆಯಿಂದ ನಿಷ್ಠೆಯಿಂದ ಎಲ್ಲವನ್ನೂ ಅಕ್ಷರಗಳಲ್ಲಿ ಹಿಡಿದು ಚೆನ್ನಾಗಿ ನಿರೂಪಿಸಿದ ಲೇಖಕಿ ಅಂಜನಾ ಹೆಗಡೆ ಅವರ ಕೊಡುಗೆ ನಿಜಕ್ಕೂ ಶ್ಲಾಘನೀಯ. ಸ್ವತಃ ಚೊಕ್ಕಾಡಿಯವರೇ ಬರೆದಿದ್ದರೆ ಇದರ ಶೈಲಿ ಹೇಗಿರುತ್ತಿತ್ತೋ ಗೊತ್ತಿಲ್ಲ. ಆದರೆ ಅನುಭವ ಕಥನಕ್ಕೆ ಶೈಲಿಯ ಹಂಗಿಲ್ಲ, ಅಲ್ಲಿ ಕಥೆ ಮತ್ತು ಅದು ಓದುಗನಿಗೆ ದಾಟಿಸಲು ಸುಲಭವಾಗುವಂತಹ ಒಂದು ಸಹಜ ಶೈಲಿ ಇದ್ದರೆ ಸಾಕಾಗುತ್ತದೆ. ಹೀಗಾಗಿ ಇದು ನಿರೂಪಕನ ಶೈಲಿ ಎಂದು ಅನ್ನಿಸದೇ ಲೇಖಕರೇ ಮೌಖಿಕವಾಗಿ ಹೇಳುತ್ತಾ ಸಾಗಿದಂತೆ ಭಾಸವಾಗಿಬಿಡುತ್ತದೆ. ಆ ಮಟ್ಟಿಗೆ ಇದು ಯಶಸ್ವಿಯಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ನನಗೆ ತಲೆಬಾಗಬೇಕು ಅನ್ನಿಸಿದ್ದು ಶ್ರೀಯುತ ಚೊಕ್ಕಾಡಿಯವರ ಜೋಡಿ ಹಕ್ಕಿಯಾದ, ಬಂಟಮಲೆಯ ಅಗೋಚರ ಶಿಖರದಂತಿರುವ ಶ್ರೀಮತಿ ಲಕ್ಷ್ಮೀ ಚೊಕ್ಕಾಡಿಯವರಿಗೆ!
ಪುಸ್ತಕದ ಹಲವೆಡೆ ಅವರ ಸಹಕಾರ, ತ್ಯಾಗ, ಸಹನೆ, ಸಜ್ಜನಿಕೆಯನ್ನು ಕೆಲವು ಘಟನೆಗಳ ಮೂಲಕ ಲೇಖಕರು ಸ್ಮರಿಸಿಕೊಂಡಿದ್ದಾರೆ. ಆದರೆ ಇಡೀ ಪಯಣದುದ್ದಕ್ಕೂ ಅವರು ಶ್ರೀಯುತ ಸುಬ್ರಾಯ ಚೊಕ್ಕಾಡಿಯವರ ಗುರಿಯಿಟ್ಟ ಸಾಧನೆಯ ಬಾಣದ ಹಿಂಭಾಗದ ಗರಿಯಂತೇ ಭಾಸವಾದರು! ಇಷ್ಟೆಲ್ಲಾ ಸಾಮಾಜಿಕ, ಸಾಹಿತ್ಯಕ ವೈವಿಧ್ಯಮ ಚಟುವಟಿಕೆಗಳನ್ನು ನಡೆಸುವಾಗ ಅವರು ಮನೆಯೊಳಗೆ ಏನೆಲ್ಲಾ ಪರಿಸ್ಥಿತಿ ಎದುರಿಸಿದರು, ಆ ಸಂಕಷ್ಟಗಳನ್ನು ನಿವಾರಿಸಿಕೊಂಡು ಉತ್ಸಾಹದಿಂದ ಸಂಗಾತಿಯ ಬದುಕಿಗೆ ಬಲವಾಗಲು ಅದ್ಯಾವ ಶಕ್ತಿಮಂತ್ರವನ್ನು ವಶಪಡಿಸಿಕೊಂಡಿದ್ದರು, ಎಲ್ಲವೂ ಆಗಿಯೂ ಎದುರಿಗೆ ಕಾಣಿಸಿಕೊಳ್ಳದೇ ನಿಜಾರ್ಥದಲ್ಲಿ ಶಿವನ ಶಕ್ತಿಯಂತೇ ಪ್ರವಹಿಸಿದ ಆ ಅಮ್ಮನ ಜೀವನಗಾಥೆಯನ್ನು, ಅನುಭವ ಕಥನವನ್ನು ಕೇಳುವ ಅತೀವ ಆಸಕ್ತಿ, ಉತ್ಸಾಹ, ನಿರೀಕ್ಷೆ ಮೂಡಿಬಿಟ್ಟಿತು. ಎಂದಾದರೊಂದು ದಿನ ಬಂಟಮಲೆಯ ತಪ್ಪಲಿಗೆ ಹೋದಲ್ಲಿ, ಅದಕ್ಕೆದುರಾಗಿ ಕೂತು ಅವರ ಅನುಭಾವಮೃತದ ಹನಿಗಳನ್ನು ಹೀರಿ ಬರುವ ಸಂಕಲ್ಪ ನನ್ನದಾಗಿದೆ.

ಲೇಖಕರೇ ಒಂದೆಡೆ ಬರೆದುಕೊಂಡಿರುವಂತೇ ‘I am free as the rooted tree is free’ ಎಂಬ ಲಾರೆನ್ಸಿನ ಸಾಲಿನಂತೇ ನಿಂತ ಕಡೆಯೇ ಬೇರನೂರಿ ಆಳ ಅಗಲ ಹರಡಿ ಶಾಪ ವಿಮೋಚನೆಗೆ ಧಾನ್ಯಸ್ಥರಾದ ಈ ಪಾರಿಜಾತದ ಮರದ ಕಥೆಯನ್ನು ಓದುವಾಗ ಹೊರಹೊಮ್ಮುವ ಭಾವಗಳು ಅನೇಕ ಮತ್ತು ಅನನ್ಯ.
ಅಂದು ಬಂಟಮಲೆ ಹೇಗೆ ಚೊಕ್ಕಾಡಿಯವರಿಗೆ ಮೇಲೇರಲು, ಒಳಗಣ ಬೇಗುದಿಯನ್ನು ಅಕ್ಷರಗಳ ಮೂಲಕ ಹೊರಹಾಕಿ ನಿರುಮ್ಮಳರಾಗಲು ಪ್ರೋತ್ಸಾಹಿಸಿತೋ, ಪ್ರೇರಣೆ ನೀಡಿತೋ, ಅಂತೆಯೇ ತಮ್ಮ ಮೇರು ವ್ಯಕ್ತಿತ್ವದ ಮೂಲಕ ಶ್ರೀಯುತ ಚೊಕ್ಕಾಡಿಯವರೂ ಸಹ ಕಿರಿಯ ಬರಹಗಾರರನ್ನು ಮುಲಾಜಿಲ್ಲದೇ ತಮಗೆ ಕಂಡ ತಪ್ಪನ್ನು ತಿದ್ದುತ್ತಿದ್ದಾರೆ. ಉತ್ಸಾಹದಿಂದ ಬರೆಯಲು ಹೊರಟವರಿಗೆ ಮತ್ತಷ್ಟು ಪ್ರೇರೇಪಿಸುತ್ತಾ, ಸಹನೆಯಿಂದ ತಮ್ಮೊಳಗಿನ ಜ್ಞಾನವನ್ನು ಧಾರೆಯೆರೆಯುತ್ತಿದ್ದಾರೆ. ಈ ಹನಿಗಳು ಹನಿಯುವ ಪಯಣವು ನಿರಂತರವಾಗಿರಲಿ ಎಂದು ಪ್ರಾರ್ಥನೆ.

#ಪುಸ್ತಕ_ಪರಿಚಯ #ಅನಿಸಿಕೆ

ಪುಸ್ತಕ: ಕಾಲದೊಂದೊಂದೇ_ಹನಿ...
(Subraya Chokkady ಅನುಭವ ಕಥನ)
ನಿರೂಪಣೆ : ಅಂಜನಾ ಹೆಗಡೆ
ಪ್ರಕಾಶನ : ವಿಕಾಸ ಪ್ರಕಾಶನ, ಬೆಂಗಳೂರು
ಪುಟಗಳು : 16+384
ಬೆಲೆ : 350/-

~ತೇಜಸ್ವಿನಿ ಹೆಗಡೆ.