ಬುಧವಾರ, ಏಪ್ರಿಲ್ 23, 2014

ಮಕ್ಕಳ ಜೊತೆಯಲಿ ಸುಂದರ ಪಯಣ.....

ಮರೆಯಲಾಗದ ಅನುಭವಗಳು, ಕೆಲವು ಸಲಹೆಗಳು....

ಅದಿತಿಗೆ ಆಗ ಏಳು ತಿಂಗಳಾಗಿತ್ತಷ್ಟೇ. ಪ್ರಪಂಚವನ್ನು ತನ್ನ ಪುಟ್ಟ ಪುಟ್ಟ ಕಣ್ಗಳಲ್ಲಿ ತುಂಬಿಕೊಳ್ಳಲು ಆಗಷ್ಟೇ ಶುರುವಿಟ್ಟುಕೊಂಡಿದ್ದಳು ಪುಟ್ಟಿ. ಆವರೆಗೂ  ಅವಳು ಜನ್ಮಿಸಿದ ಮಂಗಳೂರಿನ ಆಸು ಪಾಸಿಗಷ್ಟೇ ಅವಳ ವಿಹಾರ ಸೀಮಿತವಾಗಿತ್ತು. ಮೊತ್ತ ಮೊದಲ ಬಾರಿ ತನ್ನ ಅಜ್ಜನ ಮನೆಯಾದ ಶಿರಸಿಯೆಡೆಗೆ ಪಯಣ ಬೆಳೆಸಲು ಹೊರಟಿದ್ದಳು. ಮನದೊಳಗೆ ಏನೋ ಆತಂಕ. ರಾತ್ರಿ ಸ್ಲೀಪಿಂಗ್ ಬಸ್ಸ್‌ನಲ್ಲಿ ಪ್ರಯಾಣಿಸುವಾಗ ಹೇಗಾದರೂ ಮಾಡಿ ಮಲಗಿಸಿ ಪಯಣ ಸಾಗಿಸಬಹುದೇನೋ! ಆದರೆ ಕಾರಿನಲ್ಲಿ ಹಗಲು ಪಯಣದಲ್ಲಿ ಪುಟ್ಟ ಮಕ್ಕಳನ್ನು ದೂರದೂರಿಗೆ ಕರೆದೊಯ್ಯುವುದು ಬಲು ಪ್ರಯಾಸ ಅನ್ನೋದು ಹಲವರ ಅನುಭವ, ಅಂಬೋಣ. ನನ್ನದೇ ಅನಿವಾರ್ಯ ಕಾರಣಗಳಿಂದ, ಈ ದೇಶದಲ್ಲಿ ವಿಶಿಷ್ಟ ಚೇತನರಿಗಿರುವ (ಅ)ವ್ಯವಸ್ಥೆಯಿಂದ ಬಸ್ಸಿನಲ್ಲಿ ಸುಲಭ ಪಯಾಣ ನನ್ನ ಮಟ್ಟಿಗೆ ಅಸಾಧ್ಯವೇ! ಹಾಗಾಗಿ ಸದಾಕಾಲ ಕಾರಿನಲ್ಲೇ ಪಯಣಿಸುವುದು ನನ್ನ ಹಣೆಯಲ್ಲಿ ಬರೆದಿರುವ ರಾಜಯೋಗವೇ ಅನ್ನಿ :) ಆಗ ನಾನೋ ತಾಯ್ತನದ ಹೊಸತನದಲ್ಲಿ ಹೊಸ ಹೊಸ ಅನುಭವಗಳನ್ನು ಅವಳಷ್ಟೇ ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಅವಳಪ್ಪನಿಗಂತೂ ಮಗಳ ಮುಂದೆ ಏನೂ ಕಾಣದು. ಎಲ್ಲಿ ಅವಳು ಅತ್ತು, ಕರೆದು ರಂಪ ಮಾಡಿ, ಗಲಾಟೆ ಎಬ್ಬಿಸುವಳೋ, ನಾನೆಂತು ಸಂಭಾಳಿಸಲಿ ಎಂದು ಚಿಂತಿಸುವಾಗ ಅನುಭವಿ ಹಸ್ತಗಳೆರಡು ನನ್ನ ಜೊತೆ ಸೇರಿದ್ದವು. ಅದೇ ಅವಳಜ್ಜಿ ಅಂದರೆ ನನ್ನಮ್ಮನ ಸಾಥ್! ಆದರೂ ಸ್ವತಃ ನನ್ನಮ್ಮನೇ ಹಲವು ಸಲಹೆಗಳನ್ನು ನೀಡಿದ್ದರೂ, ಏನೂ ಆಗೊಲ್ಲಾ ಎನ್ನುತ್ತಾ ಜೊತೆಗೂಡಿದ್ದರೂ, ಈ ತಾಯಿಯ ಮನಸಿಗೆ ಸಮಾಧಾನವಿಲ್ಲ. "ಬೆಳಗ್ಗೆ ಬೇಗ ಹೊರಡನ, ಆಗ ಪಾಪುಗೆ ಅಷ್ಟು ತ್ರಾಸ್ ಆಗದಿಲ್ಲೆ.." ಎಂದು ಅಮ್ಮ ಹೇಳಿದಾಗ, ಚೆನ್ನಾಗಿ ನಿದ್ದೆಯಾಗೆದ್ದ ಮೇಲೇ ಹೊರಟರೆ ಸುಮ್ಮನಿದ್ದಾಳೆಂದು ನಾನೇ ಭಾವಿಸಿ ಆರಾಮಾಗೇ ಪಯಣ ಆರಂಭಿಸಿದ್ದಾಗಿತ್ತು. ಮೊದಲೊಂದು ತಾಸು ಪುಟ್ಟಿ ಬೆರಗುಗಣ್ಣಿಂದ ಹಿಂದೆ ಸಾಗುವ ದೃಶ್ಯಗಳನ್ನೇ ದಿಟ್ಟಿಸುತ್ತಾ ಸುಮ್ಮನೆ ಬೆಚ್ಚಾಗಿ ಕೂತಿದ್ದರೂ, ಆಮೇಲೆ ಎಲ್ಲಾ ಕಿತಾಪತಿಗಳೂ ಶುರುವಾಗಿಹೋಗಿದ್ದವು. ಎದುರಿಗೆ ನನ್ನ ಜೊತೆ ಕೂರಿಸಿಕೊಂಡಾಗ, ಕಿರುಗಾಲಲ್ಲೆ ಕೈಯಲ್ಲೇ ಡ್ರೈವ್ ಮಾಡುತ್ತಿದ್ದ ಅವಳಪ್ಪನ ಎಳೆಯುವುದು, ಕಾರಿನ ಗ್ಲಾಸ್ ಹಾಕಿದರೆ ಬಡಿದು ಒಡೆದೇ ಬಿಡುವಳೇನೋ ಎಂಬಂತೆ ಭೀತಿ ಹುಟ್ಟಿಸುವುದು, ಹಿಂಬದಿಯಲ್ಲಿ ಕುಳಿತಿದ್ದ ಅಜ್ಜಿಯಲ್ಲಿ ಬಿಟ್ಟರೆ ಸಣ್ಣ ದನಿಯಲ್ಲೇ ಕುಂಯ್ಯ್‌ಗುಡುತ್ತಾ ಎದೆಯೊಳಗೆ ಅವಲಕ್ಕಿ ಕೂಟ್ಟಿದಂತೇ ಇನ್ನೇನು ಕಾದಿದೆಯಪ್ಪಾ, ಇನ್ನೆಷ್ಟು ದೂರವಿದೆಯಪ್ಪಾ.. ಇವಳು ಯಾವಾಗ ಮಲಗುತ್ತಾಳೋ ಎಂದು ಪರಿತಪಿಸುವಂತೇ ಮಾಡಿಬಿಟ್ಟಿದ್ದಳು. ಅಂತಹ ದೊಡ್ಡ ಗಲಾಟೆ ಏನೂ ಮಾಡದಿದ್ದರೂ, ಪಯಣದ ಮೊದಲು ಅಮ್ಮ ಹೇಳಿದ್ದ ಹಲವು ಉಪಾಯಗಳನ್ನು ಮರೆತಿದ್ದು, ಕೆಲವು ಸುಲಭ ಪರಿಹಾರಗಳಿಗೆ ನಾವು ಗಮನ ಹರಿಸದ್ದು ನಮ್ಮ ಸಮಸ್ಯೆಗಳನ್ನು ಹೆಚ್ಚಿಸಿದ್ದಂತೂ ಹೌದು. ಮಂಗಳೂರಿನಿಂದ ಶಿರಸಿಯಕಡೆ ಹೊರಡುವಾಗ ಕುಮಟಾದ ನಂತರ ದೇವಿಮನೆ ಘಟ್ಟ ಸಿಗುತ್ತದೆ. ಶಿರಾಡಿ ಘಾಟ್, ಚಾರ್ಮಾಡಿ ಘಾಟ್‌ನಷ್ಟು ದೊಡ್ಡ ಘಟ್ಟವಲ್ಲದಿದ್ದರೂ, ಸಣ್ಣದೂ ಅಲ್ಲ. ಘಟ್ಟ ಹತ್ತುವಾಗ ಹಾಲೂಡಿಸುವುದು ಕಷ್ಟವೆಂದು ಕುಮಟಾದ ಹತ್ತಿರವೇ ಹಾಲು ಕೊಟ್ಟು ಬಿಟ್ಟೆ "ಈಗ ಕೊಡಡ, ಮಣ್ಣಿ ಹಾಕ್ತೆ, ಹಣ್ಣೆಂತಾರು ಚೀಪಲೆ ಕೊಡನ... ಘಟ್ಟದಲ್ಲಿ ಹಾಲು ಕೊಡ್ತು ವಾಂತಿ ಆಗ್ತು.." ಎಂದು ಅಮ್ಮಾ ಹೇಳಿದ್ದಳು. ಆದರೆ ಆಗ ನಾನೇ ಮಹಾತಾಯಿ ಎಂಬಂತೆ, ಮಗಳ ಕಿರಿಕಿರಿಗೆ, ಹಾಲು ಕೊಟ್ಟರೆ ತೆಪ್ಪಗೆ ಮಲಗಿಯಾಳು.. ಘಟ್ಟ ಹತ್ತುವುದು ಸುಲಭವಾಗುವುದೆಂದು ಬಗೆದು ಅಮ್ಮನನ್ನೂ ಸುಮ್ಮನಿರಿಸಿ ಹಾಲುಕೊಟ್ಟುಬಿಟ್ಟೆ. ಘಟ್ಟ ಹತ್ತಲು ಶುರುವಾಗಿ ೧೦ ನಿಮಿಷವಾಗಿತ್ತೋ ಇಲ್ಲವೋ.... ಕುಡಿದಿದ್ದ ಹಾಲೆಲ್ಲಾ ನನ್ನಮ್ಮನ ಸೀರೆಯ ಮೇಲೆ ಹರಡಿದ್ದವು. ವಾಂತಿ ನಿಲ್ಲಿಸಲೂ ಅಸಾಧ್ಯವಾದಂತಾಗಿ, ದಿಕ್ಕು ದೋಚದೇ ಬದಿಯಲ್ಲಿ ಕಾರು ನಿಲ್ಲಿಸಿಬಿಟ್ಟೆವು. ಅಮ್ಮ ಮುಂದಾಲೋಚನೆಯಿಂದ ಮಕ್ಕಳಿಗೆ ಸಾಮಾನ್ಯವಾಗಿ ಕೊಡುವ (ಡಾಕ್ಷರ್ ಸಲಹೆ ಕೊಟ್ಟಿದ್ದ) ‘ಡೊಮ್‌ಸ್ಟೇಲ್’ ಸಿರಪ್ ತಂದಿದ್ದರಿಂದ ಮಗಳು ಚೇರಸಿಕೊಂಡು ಪಯಣ ನಿಧಾನವಾಗಿ ಮುಂದುವರಿಯಿತು. ನನ್ನೊಳಗೆ ಅಪರಾಧಿ ಪ್ರಜ್ಞೆ. ಮುಂದೆಂದೂ ಅಮ್ಮನ ಎಚ್ಚರಿಕೆಯನ್ನು ಕಡೆಗಣಿಸುವ ಸಾಹಸಕ್ಕೆ ಕೈ ಹಾಕಲೇ ಇಲ್ಲ. ಮುಂದಿನ ತಿಂಗಳೇ ಪಯಣ ಬೆಂಗಳೂರಿನತ್ತ. ಈ ಸಲ ಮಂಗಳೂರಿನಿಂದ ಹೊರಡುವಾಗಲೇ ಎಲ್ಲಾ ಮುಂಜಾಗ್ರತೆ ತೆಗೆದುಕೊಂಡಿದ್ದರಿಂದ ಶಿರಾಡಿ ರಾಡಿಯೆಬ್ಬಿಸಲಿಲ್ಲ. ಅಲ್ಲಿಂದ ಎಡೆಬಿಡದೇ ಮಗಳೊಡನೆಯೇ ಸಾಗಿದ ನಮ್ಮ ದೂರದೂರಿನ ಪಯಣಗಳು ಹಲವಾರು ಅನುಭವಗಳನ್ನು ಕಟ್ಟಿಕೊಟ್ಟಿವೆ. ಈಗ ಅದಿತಿಗೆ ೭ ವರ್ಷಗಳು ನಡೆಯುತ್ತಿದ್ದು, ಈ ವಯಸ್ಸಿನ ಮಕ್ಕಳನ್ನು ಹಲಗಲು ದೂರದ ಪಯಣಗಳಿಗೆ ಸಜ್ಜಾಗಿಸುವಷ್ಟೂ ಅನುಭವ ನನ್ನನ್ನು ಗಟ್ಟಿಯಾಗಿಸಿದೆ. ನಾನು ಎಡವಿ ಕಲಿತ, ಕಲಿತು ನುರಿತ ಅನುಭವಗಳಿಂದ, ಈಗಿನ್ನೂ ಪುಟ್ಟ ಕಂದಮ್ಮಗಳ ಜೊತೆ ವಾಹನದಲ್ಲಿ ಹಗಲು ಪಯಣಿಸುವವರಿಗೆ ಸಣ್ಣ ಪುಟ್ಟ ಸಹೆಗಳನ್ನಿತ್ತರೆ, ಅವುಗಳಿಂದ ಅವರಿಗೆಲ್ಲಾ ಏನಾದರೂ ಒಂದು ಸಣ್ಣ ಸಹಾಯವಾದರೂ ಸರಿಯೇ... ನನಗೆಷ್ಟೂ ನೆಮ್ಮದಿಯೆನಿಸಿತು. ಹಾಗಾಗಿ ನನ್ನ ಅನುಭವಕ್ಕೆ ಬಂದ ಕೆಲವು ಸರಳ ಸುಲಭ ಟಿಪ್ಸ್‌ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ... ನಿಮಗೆ ಇಷ್ಟವಾದರೆ, ನೀವೂ ಇತರರೊಂದಿಗೆ ಹಂಚಿಕೊಳ್ಳಿರಿ.

(ವಿ.ಸೂ. :- ಮಗುವಿನಿಂದ ಮಗುವಿಗೆ ಸ್ವಭಾವ ಭಿನ್ನವಾಗಿರುತ್ತದೆ. ಹಾಗಾಗಿ ನಾನು ಕಂಡುಕಂಡ ಅನುಭವವೇ ಪರಮಸತ್ಯ, ಸಾರ್ವಕಾಲಿಕ ಮಾನ್ಯ ಎಂದು ಖಂಡಿತ ಹೇಳುತ್ತಿಲ್ಲ. ಸಾಮಾನ್ಯವಾಗಿ ಇಂತಹ ಅನುಭವಗಳು ಎಲ್ಲರಿಗೂ ಆಗುವಂಥದ್ದು... ಆಗ ಹೀಗಿದ್ದರೆ ಚೆನ್ನ ಎಂದಷ್ಟೇ ಹೇಳುವುದು ನನ್ನ ಉದ್ದೇಶ. ಅವರವರ ಮಕ್ಕಳ ಮನೋಭಿಲಾಷೆ, ವರ್ತನೆ ಹೆತ್ತವರಿಗೇ ಚೆನ್ನಾಗಿ ತಿಳಿದಿರತ್ತದೆ. ಅದನ್ನವಲಂಬಿಸಿ ಮಾರ್ಪಾಡುಗಳನ್ನು ಮಾಡಿಕೊಳ್ಲಬೇಕಾಗುತ್ತದೆ.)


೧. ಚಿಕ್ಕ ಮಕ್ಕಳಿದ್ದಾಗ ಮಾತ್ರವಲ್ಲ, ದೊಡ್ಡವರಿಗೂ ಕೂಡ ಬೆಳಗ್ಗೆ ಬೇಗನೆದ್ದು ಪಯಾಣ ಆರಂಭಿಸಿದರೆ ಆಯಾಸ ಅಷ್ಟು ಬಾಧಿಸದು. ಇನ್ನು ಪುಟ್ಟ ಮಕ್ಕಳಿದ್ದರೆ ಅದು ಮತ್ತಷ್ಟು ಅನುಕೂಲ. ಹೇಗಿನ್ನುವಿರಾ? ನೋಡಿ... ಬೇಗನೆಬ್ಬಿಸಿ, ಹೊರಡಿಸುವ ಉತ್ಸಾಹ ತೋರಿದಾಗ ಅವರೂ ಹೊರಗೆಲ್ಲೋ, ಅಷ್ಟು ಮುಂಜಾನೆಯೇ ಹೋಗುವ, ಹೊಸಬಟ್ಟೆ ಧರಿಸುವ ಖುಶಿಯಲ್ಲಿ ಬಹು ಬೇಗ ತಯಾರಾಗುತ್ತಾರೆ. ಬಿಸಿಲೇರುವ ಮುನ್ನ ನೀವು ಸಾಕಷ್ಟು ದೂರ ಸಾಗುವಿರಿ. ನಡುವೆ ಆಹಾರವನ್ನಿತ್ತರೆ, ಅರ್ಧ ದಾರಿ ಕ್ರಮಿಸುವಷ್ಟರಲ್ಲೇ ಬೇಗನೆದ್ದುದರಿಂದ ಕಣ್ಣು ಕೂರಲು ಶುರುವಾಗಿ ನಿದ್ದೆಗೆ ತೊಡಗುತ್ತಾರೆ. ಪಯಣದ ಬಹಳಷ್ಟು ಸಮಯ ನಿದ್ದೆಯಲ್ಲೇ ಅವರು ಕಳೆವಂತಾಗುತ್ತದೆ. ಸಂಭಾಳಿಸುವುದು ಸುಲಭ! (ಹಾಂ. ಡ್ರೈವ್ ಮಾಡುವವರು ಮಾತ್ರ ಬೆಳಗ್ಗೆ ಬೇಗನೆ ಹೊರಡಲು, ರಾತ್ರಿ ಬೇಗ ನಿದ್ದೆ ಮಾಡುವುದು ಕಡ್ಡಾಯ :))

೨. ಪುಟ್ಟ ಕಂದಮ್ಮಗಳನ್ನು ಕೊಂಡೊಯ್ಯುವಾಗ, ಹಾಲು, ಪೇಯಗಳನ್ನು ಘಟ್ಟಹತ್ತುವ ತುಂಬಾ ಮೊದಲು ಅಥವಾ ಘಟ್ಟ ಹತ್ತಿದಾನಂತರವಷ್ಟೇ ನೀಡಿ. ಘಟ್ಟ ಹತ್ತುವಾಗ ಆದಷ್ಟು ಆಹಾರ ಕೊಡುವುದನ್ನು ತಪ್ಪಿಸಿ. ಒಂದೊಮ್ಮೆ ತೀರಾ ಹಠ ಮಾಡಿದರೆ ಚೀಪಲು ಸಿಪ್ಪೆ ತೆಗೆದ ಮೃದು ಆಪ್ಪಲ್ ಹೋಳು, ಮೇಲಿನ ಸಿಪ್ಪೆ ತೆಗೆದಿಟ್ಟ ಕ್ಯಾರೆಟ್ ತುಂಡು ಇಂಥದ್ದೇನಾದರೂ ಕೊಟ್ಟಿರಿ (ಇವುಗಳನ್ನು ಹೊರಡುವ ಮೊದಲೇ ಸಿದ್ಧವಿಟ್ಟುಕೊಂಡಿರಿ). ಅವರಿಷ್ಟದ ಬಣ್ಣ ಬಣ್ಣದ ಆಟಿಕೆಗಳನ್ನು ಡಿಕ್ಕಿಗೆ ಹಾಕದೇ ಪಕ್ಕದಲ್ಲೇ ಇಟ್ಟುಕೊಂಡಿರಿ. ಬೇಸರವಾದಾಗ ಆಡಿಸಲು, ಅವರ ಮನಸ್ಸನ್ನು ತಿರುಗಿಸಲು ಇದು ಬಹಳ ಉಪಯುಕ್ತ. ಬಣ್ಣ ಬಣ್ಣದ, ದೊಡ್ಡ ಚಿತ್ರಗಳಿರುವ ಪುಸ್ತಗಳೂ ಜೊತೆಗಿರಲಿ. ಕಾರಿನಲ್ಲಿ ನಿಮಗಿಷ್ಟವಾದ ಹಾಡಿನ ಬದಲು ಅವರಿಷ್ಟದ ರೈಮ್ಸ್, ಜೋಗುಳದ ಹಾಡು, ಸುಮಧುರ ವಾದನಗಳ ಸಿ.ಡಿ ಹಾಕಿರಲಿ. ಅವರ ಕಿವಿಗಳಿಗೆ ಇಂಪಾಗುವ ಮೆಲು ಹಾಡಿಗಳಿದ್ದರೆ ಚೆನ್ನ. 

೩. ಕಾರಿನ ಹಿಂಬದಿಯ ಸೀಟಿಗೆ ಕಡುಬಣ್ಣದ ಶಾಲ್ ಅಥವಾ ಇನ್ನಿತರ ಬಟ್ಟೆಯ ತುಂಡನ್ನು ಕಟ್ಟಿ, ಗೂಡಿನಂತೇ ಮಾಡಿ ಅದರೊಳಗೆ ಅವರನ್ನು ಕೂಡಿಸಿದರೆ ಅವರಿಗೆ ಇನ್ನಿಲ್ಲದ ಖುಶಿಯಾಗುತ್ತದೆ. (ಹೊಸ ಹೊಸ ವರಸೆಗಳನ್ನು ನೀವೂ ಸ್ವತಃ ಮಾಡಿ ನೋಡಿ ಕಲಿಯಬಹುದು :)). ಎರಡು ವರುಷಗಳಾದ ಕಂದಮ್ಮಗಳಿಗೆ ಹೊರಗಿನ ಪ್ರಪಂಚದ ಪರಿಚಯ ಮಾಡುತ್ತಾ, ಪ್ರಾಣಿ, ಮರಗಳ ತೋರಿಸುತ್ತಾ, ಕಥೆ ಹೇಳಿತ್ತಾ ತುಸು ಸಾಗಿದರೆ ಅಲ್ಲೇ ನಿದ್ದೆ ಹೋಗುವ ಸಂಭವ ಬಲು ಹೆಚ್ಚು. ಸೆಖೆ ಜಾಸ್ತಿ ಆದಾಗ ತೆಳು ಬಟ್ಟೆಗಳನ್ನು ಹಾಕಿಡಿ. ಅವರಿಗೆ ಇರಿಸು ಮುರಿಸುವಾಗುವಂತಹ ಬಟ್ಟೆಗಳನ್ನು, ಬಿಗಿ ಉಡುಗೆಗಳನ್ನು ಪಯಣ ಕಾಲದಲ್ಲೇ ಹಾಕಲೇ ಹೋಗಬೇಡಿ. ಮೂರು ಜೊತೆ ಬಟ್ಟೆಗಳನ್ನು ಹೆಚ್ಚುವರಿಯಾಗಿ ನಿಮ್ಮ ಜೊತೆಗಿರುವ ಚೀಲದಲ್ಲೇ ಇಟ್ಟುಕೊಂಡಿರಿ.

೪. ಹೋಟೇಲಿನ ತಿಂಡಿ ತಿನ್ನಲಾಗದ ಮಕ್ಕಳಿಗೆ ಮನೆಯಿಂದ ಚಪಾತಿ, ದೋಸೆ, ಇಡ್ಲಿ ಏನಾದರೂ ಮಾಡಿ ಕೊಂಡೊಯ್ದರೆ ಉತ್ತಮ. ದಾರಿಯ ಮಧ್ಯೆ ಪೀಡಿಯಾಶ್ಯೂರ್, ಹಾರ್ಲಿಕ್ಸ್ ಮುಂತಾದ ಪೇಯ ಕೊಡಬೇಡಿ. ಹೊಟ್ಟೆ ತೊಳೆಸಿ, ವಾಂತಿಯಾಗುವ ಸಂಭವ ಇವುಗಳಿಂದ ಹೆಚ್ಚಿರುತ್ತದೆ. (ತಾಯಿಯ ಹಾಲಿಗೆ ತೊಂದರೆಯಿಲ್ಲ).

೫. ಮೂರುವರ್ಷದ ನಂತರ ಮಕ್ಕಳನ್ನು ಸಂಭಾಳಿಸಲು ಅವರಿಗಿಷ್ಟದ ತಿಂಡಿಗಳು, ಕಾರಿನಲ್ಲಿ ವಿಡಿಯೋ ಪ್ಲೇಯರ್ ಇದ್ದರೆ, ಅವರಿಷ್ಟ ಕಾರ್ಟೂನ್ ಹಾಗೂ ರೈಮಿಂಗ್ ಸಿ.ಡಿ.ಗಳು, ಕಥೆ ಪುಸ್ತಕಗಳು, ಇವೆಲ್ಲಾ ಬಲು ಪ್ರಯೋಜನಕಾರಿಯಾಗಿವೆ.

೬. ೫ ವರ್ಷದ ನಂತರ ಕಾರಿನಲ್ಲಿ ನಾವು ಅವರೊಂದಿಗೆ ಸಣ್ಣ ಪುಟ್ಟ ಆಟಗಳನ್ನಾಡುವುದರ ಮೂಲಕ ಸ್ವತಃ ನಾವೂ ಪಯಣವನ್ನು ಆಹ್ಲಾದಿಸಬಹುದು. ೬ ವರ್ಷದ ಮೇಲಿನ ಮಕ್ಕಳು ಹಗಲು ನಿದ್ದೆ ಕಡಿಮೆ ಮಾಡುವುದರಿಂದ ತುಸು ವಿಭಿನ್ನ ರೀತಿಯಲ್ಲಿ ಅವರನ್ನು ಸಂಭಾಳಿಸಬೇಕಾಗುತ್ತದೆ. ಅವರ ಜೊತೆಗೆ ನಾವೂ ಮಗ್ಗಿ (ಟೇಬಲ್ಸ್) ಹೇಳುವುದರ ಮೂಲಕ, ಕನ್ನಡ/ ಇಂಗ್ಲಿಷ್ ಪದಗಳನ್ನು ಹೇಳುವುದು/ಹೇಳಿಸುವುದು, ಬಂಡಿಯಾಟ, ಪುಟ್ಟ ಪುಸ್ತಕದಲ್ಲಿ ಪದಬಂಧ ಹಾಕಿ ಹುಡುಕಲು ಹೇಳುವುದು, ಗಮ್ಯ ತಲುಪಿದ ಮೇಲೆ ಏನೆನು ಮಾಡಬೇಕೆಂಬುದನ್ನೆಲ್ಲಾ ಅವರೊಂದಿಗೆ ಚರ್ಚಿಸುತ್ತಾ ಆನಂದದಿಂದ ಪಯಣ ಸಾಗಬಲ್ಲೆವು. ೭-೮ ವರ್ಷಗಳವರೆಗಷ್ಟೇ... ಆಮೇಲೆ ಅವರು ಅವರದ್ದೇ ಲೋಕದಲ್ಲಿ, ಅವರದ್ದೇ ಆದ ರೀತಿಯಲ್ಲಿ ನಮ್ಮೊಂದಿಗಿದ್ದೂ, ಇಲ್ಲದಂತೇ, ಪುಸ್ತಕ ಹಿಡಿದೋ, ಸಂಗೀತವನ್ನು ಆಹ್ಲಾದಿಸುತ್ತಾ ಸಾಗಿಬಿಡುತ್ತಾರೆ ಎನ್ನುವುದು ಆದಿತಿಗಿಂತ ದೊಡ್ಡ ಮಕ್ಕಳಿರುವ ನನ್ನ ಸ್ನೇಹಿತೆಯರ ಅನುಭವದ ಮಾತು.

ಗುರಿಗಿಂತ ಪಯಣದ ದಾರಿಯೇ ಸುಂದರ ಎನ್ನುವ ಒಂದು ನಾಣ್ನುಡಿಯಿದೆ. ಆ ದಾರಿಯ ಸುಂದರತೆಯನ್ನು ನಾವು, ನಮ್ಮ ಜೊತೆ ನಮ್ಮ ಕಂದಮ್ಮಗಳಿಗೆ ಮನಗಾಣಿಸುವುದು ನಮ್ಮ ಕರ್ತವ್ಯ. ಮುಂದೆ ಅವರೇ ಪ್ರತಿ ದಾರಿಯೊಳಗಿರುವ ವಿಭಿನ್ನ ಸೌಂದರ್ಯವನ್ನು ಅವರೇ ಕಂಡುಕೊಳ್ಳಲು ನಮ್ಮ ಈ ಪುಟ್ಟ ಪರಿಚಯವೇ ನಾಂದಿಯಾಗಿರುತ್ತದೆ.

Aditi Hegde :)
"ಶುಭ ಪ್ರಯಾಣ" :) :)

-ತೇಜಸ್ವಿನಿ.