ಶನಿವಾರ, ನವೆಂಬರ್ 30, 2013

ಮಿರ್ಚಾನ ಬಂಗಾಲದ ರಾತ್ರಿಗಳಲ್ಲಿ(Bengal Nights) ತುಂಬಿದ್ದ ಹುಸಿಗತ್ತಲ ಕೆಡವಿ, ಆಂತರ್ಯದ ಬೆಳಕಲ್ಲಿ ಮೈತ್ರೇಯಿ ದೇವಿ ಕಾಣಿಸುವ ಪರಮ ಸತ್ಯ.

"ಅಪ್ರಿಯವಾದ ಸತ್ಯವನ್ನು ಒಪ್ಪಿಕೊಳ್ಳಲು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದು. ಆದರೆ ಅಪ್ರಿಯವಾದ ಸುಳ್ಳನ್ನು ಎದುರಿಸುವ ಬಗೆಯಾದರೂ ಹೇಗೆ?" ಎಂದು ಪ್ರಶ್ನಿಸುತ್ತಾ, ಅದನ್ನು ಎದುರಿಸುವ ವಿನೂತನ ಬಗೆಯನ್ನೂ ನಮಗೆ ತೋರುವ ವಿಶಿಷ್ಟ ಕಾದಂಬರಿ ‘ನ ಹನ್ಯತೆ’. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಗೀತಾ ವಿಜಯ ಕುಮಾರ್.


ಕಲ್ಪನೆಗಳಿಂದ, ಭ್ರಮೆಯಲ್ಲಿ ಹುಟ್ಟಿಸಿದ ಅಸತ್ಯದಿಂದ ಚಾರಿತ್ರ್ಯವಧೆಯನ್ನು ಮಾಡಿದಾಗ ಅಪಾರ ಯಾತನೆ, ನೋವು, ಸಂಕಟ, ಆಕ್ರೋಶ ಎಲ್ಲವೂ ನಮ್ಮನ್ನು ಹಿಂಡುತ್ತವೆ. ಸುಳ್ಳಿಗಿರುವ ಸಾಕ್ಷಿಯೆಂದರೆ ಅರೆಬೆಂದ ಸತ್ಯಗಳಿಂದ ಹಣೆದ ಘಟನೆಗಳು ಅಷ್ಟೇ! ಅದು ಬಹುಮುಖವುಳ್ಳದ್ದು. ಆದರೆ ಸತ್ಯ ಏಕ ಮುಖ. ಎಲ್ಲವನ್ನೂ ಕೇವಲ ಘಟನೆಗಳಿಂದ ಅರ್ಥಮಾಡಿಕೊಳ್ಳಲು ಸಾಧ್ಯವೇ? ಕೇವಲ ತರ್ಕಗಳಿಂದ ಸತ್ಯವನ್ನು ಅರಿಯಲು ಸಾಧ್ಯವೇ? ಸತ್ಯ ಕೇವಲ ಸತ್ಯವಾಗಿರುತ್ತದೆ. ‘ನೀನು ನಿರ್ಲಿಪ್ತತೆಯಿಂದ ನಿನ್ನ ಮನಸ್ಸನ್ನು ಬಿಚ್ಚಿ ಕಿವಿಯಾಲಿಸಿದರೆ, ಖಂಡಿತ ನಿನಗೆ ಸತ್ಯದ ಪ್ರತಿಧ್ವನಿ ಕೇಳಿಸುತ್ತದೆ’ ಎನ್ನುತ್ತದೆ ‘ನ ಹನ್ಯತೆ’ ಕಾದಂಬರಿ. ನಿಜ, ಈ ಕಾದಂಬರಿಯುದ್ದಕ್ಕೂ ತುಂಬಿರುವುದು ಸತ್ಯದ ಬೆಳಕೊಂದೇ. ನಾನು ಮಿರ್ಚಾ ಇಲಿಯೇಡ(Mircea Eliade)"Bengal Nights” ಕಾದಂಬರಿಯನ್ನು ಓದಿಲ್ಲ. ಆದರೆ ‘ನ ಹನ್ಯತೆ'ಯನ್ನೋದಿದ ಮೇಲೆ ಅಂತರ್ಜಾಲದ ತುಂಬೆಲ್ಲಾ ಜಾಲಾಡಿದೆ. ತಿಳಿದವರಲ್ಲಿ ಚರ್ಚಿಸಿದೆ. ಯೂ ಟ್ಯೂಬ್‌ನಲ್ಲಿ ಮಿರ್ಚಾನ ಕಾದಂಬರಿಯಾಧಾರಿತ ಬೆಂಗಾಲಿ ನೈಟ್ಸ್ ಎಂಬ ಚಲನಚಿತ್ರವನ್ನೂ ನೋಡಲೆತ್ನಿಸಿದೆ. ಆದರೆ ಸಂಪೂರ್ಣ ಚಿತ್ರವನ್ನು ನೋಡಲು ಆಗದೇ, ಸೋತೆ. ಕಾರಣ ನಾನು `ನ ಹನ್ಯತೆ'ಯನ್ನು ಓದಿದ ನಂತರ ನೋಡತೊಡಗಿದ್ದೆ. ನನಗೆ ಚಲನಚಿತ್ರದ ತುಂಬೆಲ್ಲಾ ಸಂಪೂರ್ಣ ಸುಳ್ಳು, ಭ್ರಮೆಗಳು ತುಂಬಿದ್ದು ಸ್ಪಷ್ಟವಾಗಿತ್ತು. ಸತ್ಯದ ಬೆಳಕನ್ನು ನೋಡಿದ ಮೇಲೆ ಸುಳ್ಳಿನ ಕತ್ತಲು ಅದೆಂತು ಇಷ್ಟವಾಗುವುದು? ‘ನ ಹನ್ಯತೆ’ಯ ಪ್ರಖರತೆ ಅಂತಹದ್ದು!

ಕಥೆಯ ಹಿನ್ನಲೆ :- ಮಿರ್ಚಾ ಇಲಿಯೇಡ ೧೯೨೮-೩೧ರವರೆಗೆ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ತತ್ವಶಾಸ್ತ್ರ ಮತ್ತು ಸಂಸ್ಕೃತ ವಿಷಯಗಳನ್ನು ಅಭ್ಯಸಿಸದವ. ಆ ಸಮಯದಲ್ಲಿ ಕಲ್ಕತ್ತೆಯಲ್ಲಿದ್ದ ತತ್ತ್ವಶಾಸ್ತ್ರ ಪಂಡಿತ ಸುರೇಂದ್ರನಾಥ್ ದಾಸ್‌ಗುಪ್ತ ಎನ್ನುವವರ ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ಈ ಸಮಯದಲ್ಲೇ ಅವರ ಮಗಳಾದ ಮೈತ್ರೇಯಿ ದೇವಿಯವರ ಪರಿಚಯವಾಗಿ, ಸ್ನೇಹವಾಗಿ, ಆಕರ್ಷಣೆ ಸೆಳೆದು, ಪ್ರೀತಿ ಬೆಳೆಯಿತು. ಆದರೆ ಇವರ ಪ್ರೇಮಕ್ಕೆ ತಂದೆಯ ಬೆಂಬಲ ಸಿಗದೇ ಇವರಿಬ್ಬರು ಬೇರ್ಪಡಬೇಕಾಯಿತು. ಅದೇ ನೋವಲ್ಲಿ ಮಿರ್ಚಾ ಹಿಮಾಲಯ, ಉತ್ತರಪ್ರದೇಶಗಳಲ್ಲಿ ತುಸು ಕಾಲ ಅಲೆದು ತಂದನಂತರ ತಾಯ್ನಾಡಿಗೆ ತೆರಳಿ, ತನ್ನ ಭಗ್ನ ಪ್ರೇಮದ ಮೇಲೆ ಒಂದು ಕಾದಂಬರಿ ಬರೆಯುತ್ತಾನೆ. ೧೯೩೩ರಲ್ಲಿ ಮೊದಲ ಬಾರಿ ರೋಮೇನಿಯನ್ ಭಾಷೆಯಲ್ಲಿ ಪ್ರಕಟಗೊಂಡ "ಮೈತ್ರೇಯಿ" ಕಾದಂಬರಿಯು ಮುಂದೆ ಇಟೆಲಿ, ಜರ್ಮನ್, ಫ್ರೆಂಚ್, ಸ್ಪಾನಿಶ್ ಭಾಷೆಗಳಲ್ಲಿ ಭಾಷಾಂತರಗೊಂಡಿತು.

 ಮೈತ್ರೇಯಿ ದೇವಿ
Courtesy : http://mupadhyahiri.blogspot.in
ಈ ನಡುವೆ ಮೈತ್ರೇಯಿ ದೇವಿಯವರು ತಮ್ಮ ಪ್ರೇತಿಯ ವಿರಹದ ನೋವನ್ನು ಸಹಿಸುತ್ತಾ, ಕಾಲನೊಂದಿಗೆ ಮುನ್ನಡೆಯುತ್ತಾ, ತನಗಿಂತ ಹದಿನಾಲ್ಕು ವರ್ಷ ದೊಡ್ಡವರಾಗಿದ್ದ ಮನಮೋಹನ ಸೇನ್‌ರೊಡನೆ ವಿವಾಹವಾಗುತ್ತಾರೆ. ಪತಿಯ ನಿರ್ವಾಜ್ಯ ಪ್ರೇಮ, ಸಹಕಾರ, ಸಾಂತ್ವನದಲ್ಲಿ ನೋವ ಸರಿಸಿ, ಜೀವನ್ಮುಖಿಯಾಗುತ್ತಾರೆ. ಮಕ್ಕಳು, ಮೊಮ್ಮಕ್ಕಳೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದ ಮೈತ್ರೇಯಿ ದೇವಿಯವರಿಗೆ ೪೦ ವರ್ಷಗಳ ತರುವಾಯ, ಮಿರ್ಚಾನ ದೇಶದಿಂದ ಬಂದ ಅವರಿವರಿಂದ, ಭಾರತಕ್ಕೆ ಭೇಟಿ ನೀಡಿದ ಇಲಿಯೇಡ‌ನ ಶಿಷ್ಯರಿಂದ, ತನ್ನ ಮೇಲೆ ಮಿರ್ಚಾ ಬರೆದ ಆತ್ಮ ಚರಿತ್ರೆಯ ಕುರಿತು ಮಾಹಿತಿ ದೊರಕುತ್ತದೆ. ಅವಳನ್ನು ಅತೀವ ಯಾತನೆಗೆ, ಆಘಾತಕ್ಕೆ ಒಳಮಾಡಿದ್ದು, ಆತ ತನ್ನ ಒಪ್ಪಿಗೆಯಿಲ್ಲದೇ, ತನ್ನ ಮೇಲೆ ಕಾದಂಬರಿ ಬರೆದನೆಂದಲ್ಲಾ. ಅದರಲ್ಲಿ ಇಲ್ಲ ಸಲ್ಲದ ಕಪೋಕಲ್ಪಿ ಅತಿ ರಂಜಿತ ಅರ್ಧ ಸತ್ಯವನ್ನು ಬರೆದು ತನ್ನ ಚಾರಿತ್ರ್ಯ ಹರಣ ಮಾಡಿದ್ದು ತಿಳಿದು, ಸುಪ್ತವಾಗೆಲ್ಲೋ ಮನದ ಆಳದಲ್ಲಿ ಗಟ್ಟಿಯಾಗಿದ್ದ ೪೦ ವರ್ಷದ ಹಿಂದಿನ ನೆನಪುಗಳೆಲ್ಲಾ ಸಡಿಲವಾಗಿ, ಕರಗಿ, ನೀರಾಗಿ, ಮೇಲ್ಪದರಕ್ಕೆ ಬಂದು ಅವಳ ದೇಹ ಹಾಗೂ ಮನಸ್ಸನ್ನು ವಿಚ್ಛೇದಿಸಿ, ಆಕೆ ಏಕ ಕಾಲದಲ್ಲೇ ೧೯೭೨ನೇ ಇಸವಿಯಲ್ಲೂ, ೧೯೩೦ನೇ ಇಸವಿಯಲ್ಲೂ ಜೀವಿಸುವಂತೆ ಇಬ್ಭಾಗಿಸಿ ಎಲ್ಲವೂ ಅಕ್ಷರ ರೂಪದಲ್ಲಿ ಹರಿದು ಸತ್ಯವನ್ನು ಪ್ರಕಾಶಿಸುತ್ತಾ ಆ ಮೂಲಕ ವಾಸ್ತವಿಕತೆ ಎದುರಿಟ್ಟು, ಮಿರ್ಚಾನ ಅವಾಸ್ತಿವಿಕತೆಯನ್ನು ತೊಡೆದುಹಾಕತೊಡಗುತ್ತದೆ... ಹಂತ ಹಂತವಾಗಿ, ಸಾಲು ಸಾಲಿನಲ್ಲೂ, ಘಟನೆಯಿಂದ ಘಟನೆಯ ಮೂಲಕ ಪದರ ಪದರವಾಗಿ, ಪ್ರತಿ ಅಕ್ಷರದಲ್ಲೂ ಹರಿದು ಮನಸ್ಸನ್ನು ಆರ್ದ್ರಗೊಳಿಸುತ್ತದೆ. ‘ನ ಹನ್ಯತೆ’ಯಲ್ಲೆಲ್ಲೂ ಅಂಥದ್ದೇನನ್ನು ಮಿರ್ಚಾ ತನ್ನ ಬೆಂಗಾಲಿ ನೈಟ್ಸ್‌ನಲ್ಲಿ ಬರೆದಿದ್ದ? ಅನ್ನೋದನ್ನು ಆಕೆ ಸ್ಪಷ್ಟವಾಗಿ ಹೇಳೊಲ್ಲಾ. ಎಲ್ಲೂ ಆಕೆ ತಾನು ಆ ಪುಸ್ತಕವನ್ನೋದಿದೆ ಎನ್ನುವುದೂ ಓದುಗರಿಗೆ ತಿಳಿಸುವುದಿಲ್ಲ. ಆದರೆ ನಾನು ಮಾಹಿತಿಗಳನ್ನರಸಿ ಹೋದಾಗ, ಆಕೆ ಅದನ್ನೋದಿ, ಸಂಕಟ ಪಟ್ಟು, ನ ಹನ್ಯತೆ ಬರೆದದ್ದಲ್ಲದೇ ಆಮೇಲೆ ಅವನಿದ್ದಲ್ಲಿ ಹೋಗಿ ಮಿರ್ಚಾನನ್ನು ಅನೇಕ ಸಲ ಭೇಟಿಮಾಡಿದ್ದ ದಾಖಲೆಗಳೂ ಸಿಗುತ್ತವೆ. ಆ ಸಮಯದಲ್ಲೇ ಆಕೆ ಮಿರ್ಚಾನಲ್ಲಿ ಮಾತು ತೆಗೆದುಕೊಂಡಿದ್ದಳಂತೆ ಅವನ ಕಾದಂಬರಿ ಅವಳ ಜೀವಿನಾವಧಿಯವರೆಗೂ ಇಂಗ್ಲೀಷಿನಲ್ಲಿ ಭಾಷಾಂತರಗೊಳ್ಳಬಾರದೆಂದು. ಅಂತೆಯೇ ೧೯೯೦ರಲ್ಲಿ ಮೈತ್ರೇಯಿ ದೇವಿಯವರ ದೇಹಾಂತವಾದ ಮೇಲೆ ೧೯೯೫ರಲ್ಲಿ ಚಿಕಾಗೋ ಯುನಿವರ್ಸಿಟಿಯು ಮಿರ್ಚಾನ ಕಾದಂಬರಿ "ಮೈತ್ರೇಯಿ"ಯನೂ ಮತ್ತು ಅದಕ್ಕುತ್ತರವಾಗಿ ಬಂದ ಮೈತ್ರೇಯಿಯವರ "ನ ಹನ್ಯತೆ"ಯನ್ನು ಇಂಗ್ಲೀಷಿನಲ್ಲಿ ಕ್ರಮವಾಗಿ "Bengal Nights" ಮತ್ತು "It Does Not Die" ಕಾದಂಬರಿಗಳಾಗಿ ಪ್ರಕಟಿಸಿತು. ಮಿರ್ಚಾ ಅದೆಷ್ಟು ಕೆಟ್ಟದಾಗಿ ಅವಳನ್ನು ಚಿತ್ರಿಸಿದ್ದ ಎನ್ನುವುದನ್ನು ನೀವು ಅಂತರ್ಜಾಲದಲ್ಲಿ ಮತ್ತು ಸ್ಥೂಲವಾಗಿ ಸುನಾಥ ಕಾಕಾರ "ಸಲ್ಲಾಪ" ಬ್ಲಾಗಿನಲ್ಲಿ ಓದಬಹುದು.

ಕಾದಂಬರಿಯ ಜೀವಾಳ :- ಇಡೀ ಕಾದಂಬರಿಯ ಅಂತಃಸತ್ವವೇ ಕಥಾ ನಾಯಕಿ "ಅಮೃತ". ಹೌದು... ಮೈತ್ರೇಯಿ ದೇವಿಯವರು ತನ್ನ ಕಾದಂಬರಿಯ ನಾಯಕಿಗೆ ಕೊಟ್ಟ ಹೆಸರು ‘ಅಮೃತ‘. ಅಮೃತಳನ್ನು ಮನೆಯವರೆಲ್ಲಾ ‘ರೂ’ ಎಂದು ಕರೆಯುತ್ತಿದ್ದರು. ಮಿರ್ಚಾ ಅವರಲ್ಲಿಗೆ ಬಂದಾಗ ರೂಳಿಗೆ ೧೬ ವರ್ಷ ಹಾಗೂ ಆತನಿಗೆ ೨೩ ವರ್ಷ. ರೂ, ಮಿರ್ಚಾನಿಗೆ ಸಂಸ್ಕೃತವನ್ನೂ, ಆತ ಅವಳಿಗೆ ಪ್ರೆಂಚ್ ಭಾಷೆಯನ್ನೂ ಕಲಿಸುತ್ತಿದ್ದ. ರೂಳಿಗೆ ರವೀಂದ್ರನಾಥರ ಮೇಲೆ ಅಪಾರ ಶ್ರದ್ಧೆ, ಭಕ್ತಿ, ಅಭಿಮಾನ. ಅವಳ ಪ್ರಥಮ ಕವನ ಸಂಕಲನ ಉದಿತಕ್ಕೆ ಮುನ್ನುಡಿಬರೆದವರೂ ರವೀಂದ್ರರೇ. ಷೋಡಶಿ ರೂ, ತರುಣ ಮಿರ್ಚಾನ ಆಕರ್ಷಣೆಗೆ ಒಳಗಾಗಿಯೂ ಮುಳುಗದೇ ಸಂಭಾಳಿಸಿಕೊಂಡು, ಮಿರ್ಚಾನನ್ನೂ ಸಂಭಾಳಿಸುತ್ತಾ, ಅಪ್ಪನ ಪ್ರತಿಷ್ಠೆಯ ದಾಹಕ್ಕೆ ಬಗ್ಗಿಯೂ ಕುಗ್ಗದೇ, ಕವಿ-ಕಾವ್ಯದ ನಡುವೆ ಬದುಕುತ್ತಾ, ಉಸಿರಾಡುತ್ತಾ, ವಿರಹದಲ್ಲಿ ಬೆಂದು, ತಪಸ್ವಿನಿಯಾಗಿ ಹೊರಬಂದು ಅದೆಂತು ಬೆಳೆದು ಬೆಳಕಾಗಿ, ಅಮೃತಳಾದಳು, ಅಮರಳಾದಳು ಎನ್ನುವುದನ್ನು ‘ನ ಹನ್ಯತೆ’ ಕಾಣಿಸುತ್ತದೆ. ಇಡೀ ಕಾದಂಬರಿಯಲ್ಲಿ ಆಕೆ ಎಲ್ಲಿಯೂ ಮಿರ್ಚಾನನ್ನು ದೂಷಿಸುವುದಿಲ್ಲ, ತುಚ್ಛವಾಗಿ ಅವಹೇಳನ ಮಾಡುವುದೂ ಇಲ್ಲ, ಅವನ ಮೇಲೆ ಅಪಾರ ಸಹಾನುಭೂತಿ, ಅನುಕಂಪ ಅದೇ ನಿರ್ಮಲ ಪ್ರೇಮವನ್ನೇ ಪ್ರಕಟಿಸುತ್ತಾಳೆ. ಅವನ ಅಪಾದನೆಗಳನ್ನು ಸೂಕ್ಷ್ಮವಾಗಿ ಪ್ರಕಟಿಸಿ, ತನ್ನೊಳಗಿನ ಯಾತನೆ, ಸಂಕಟ, ಆಘಾತ, ನೋವುಗಳ ಹೊರಹಾಕುತ್ತಾ, ಗತ ಬದುಕಿನ ಜೊತೆ ಜೊತೆಗೆ ವಾಸ್ತವವನ್ನು ಸಮ್ಮಿಳಿಸಿ ಕಥೆ ನಿರೂಪಿಸುವ ಅವಳ ಶೈಲಿಯೊಳಗಿನ ಅಪಾರ ಸಂಯಮ, ಶಿಸ್ತು, ಧೀರತೆಯೇ ಅವನಿಗೆ ಅತಿ ದೊಡ್ಡ ಪೆಟ್ಟನ್ನು ಕೊಡುತ್ತದೆ. ಸುಳ್ಳನ್ನು ತೊಡೆದುಹಾಕಲು ಸತ್ಯಕ್ಕೊಂದೇ ಸಾಧ್ಯ. ಅದಕ್ಕೆ ಸಾವಿಲ್ಲ ಅನ್ನೋದನ್ನು ಸ್ಪಷ್ಟವಾಗಿ, ಖಡಾಖಂಡಿತವಾಗಿ, ನೇರವಾಗಿ ನಿರೂಪಿಸಿದ್ದಾಳೆ. ಎಲ್ಲಾ ಓರೆ, ಕೋರೆಗಳ ನಡುವೆ ನೇರವಾಗಿ, ಅಖಂಡವಾಗಿ ನಿಲ್ಲುವ ಅವಳ ವ್ಯಕ್ತಿತ್ವದ ಛಾಪು, ಆಕೆಯ ಮನದೊಳಗಿನ ನಿರ್ಮಲತೆ, ಅವಳು ಕಾಣಿಸುವ ತತ್ತ್ವದರ್ಶನಗಳು ಎಲ್ಲವೂ ವಿಶಿಷ್ಟ ಅನುಭೂತಿಯನ್ನು ನಮ್ಮೊಳಗೆ ತುಂಬುತ್ತದೆ.

ಅದೇ ಮಿರ್ಚಾ ತನ್ನ "ಮೈತ್ರೇಯಿ’ ಕಾದಂಬರಿಯಲ್ಲಿ ಅತಿ ಕೆಟ್ಟದಾಗಿ ಅವಳನ್ನು ಚಿತ್ರಿಸಿರುವುದು ಕಂಡು ಬರುತ್ತದೆ. ಅಂತರ್ಜಾಲದ ಮೊರೆ ಹೋದಾಗ ಅವನೊಳಗಿನ ವಿಕಾರತೆ ಸ್ಪಷ್ಟವಾಗುತ್ತದೆ. ರವೀಂದ್ರರ ವ್ಯಕ್ತಿತ್ವ, ಪಾಂಡಿತ್ಯ, ಆಸ್ತಿಕತೆಯ ಅರಿವಿದ್ದೂ, ಅಸೂಯಾಪರನಾಗಿದ್ದ ಮಿರ್ಚಾ ಅವಳನ್ನು ಸಂದೇಹಿಸುತ್ತಾನೆ, ಮತ್ತು ತನ್ನ ಆತ್ಮಚರಿತ್ರೆಯಲ್ಲಿ ಅವರಿಬ್ಬರ ನಡುವೆ ಕಲ್ಪನಾತೀತ ಸಂಬಂಧ ಕಲ್ಪಿಸಿ ಮೈತ್ರೇಯಿ ದೇವಿಯನ್ನು ಘಾಸಿಗೊಳಿಸುತ್ತಾನೆ. ಸುಳ್ಳಿನ ಸಾವಿರ ಕೋಲಿಗೆ ಸತ್ಯದ ಒಂದೇ ಕೊಡಲಿ ಸಾಕಾಗುತ್ತದೆ ಮುರಿದುಹಾಕಲು, ಪುಡಿಮಾಡಲು. ಆ ಸತ್ಯದ ಅರಿವು ಈ ಪುಸ್ತಕದಲ್ಲಿ ನಾವು ಮಿರ್ಚಾನ ಬೆಂಗಾಲಿ ನೈಟ್ಸ್ ಓದದೆಯೂ ಅನುಭವವಾಗುತ್ತದೆ. ಇದೇ ಪುಸ್ತಕದಲ್ಲಿ ಒಂದು ಕಡೆ ಯಾಜ್ಞವಲ್ಕ್ಯರ ಮಾತೊಂದು ಉಲ್ಲೇಖಗೊಂಡಿದೆ. ‘ಮನುಷ್ಯ ಬೇರೆಯವರಿಗೆ ಏನನ್ನೂ ಕೊಡಲು ಸಾಧ್ಯವಿಲ್ಲ. ತನಗೆ ತಾನೇ ಎಲ್ಲವನ್ನೂ ಕೊಟ್ಟು ಕೊಳ್ಳುತ್ತಾನೆ.’ - ಇದು ಅಕ್ಷರಶಃ ಸತ್ಯ. ಮಿರ್ಚಾ ಕಟ್ಟಿಕೊಟ್ಟಿದ್ದೆಲ್ಲಾ ಅವನಿಗಾಗಿ, ಅವನೊಳಗಿನ ಕಲ್ಪನೆಗಾಗಿ, ಸಾಫಲ್ಯಗೊಳ್ಳದ ಅವನ ಕಾಮನೆ, ಕನಸುಗಳಿಗಾಗಿ. ಮೈತ್ರೇಯಿ ಕೊಟ್ಟಿದ್ದೆಲ್ಲಾ ಅವಳೊಳಗಿನ ಪ್ರಾಮಾಣಿಕತೆಯ ಪ್ರಮಾಣಕ್ಕಾಗಿ, ಸತ್ಯದ ಪರಿಮಾಣಕ್ಕಾಗಿ. ಇವರ್ಯಾರೂ ಯಾರಿಗೂ ಯಾವುದನ್ನೂ ಬರೆಯಲಿಲ್ಲ.. ತಮಗಾಗಿ ತಾವು ಬೆರೆದುಕೊಂಡಿದ್ದೇನೋ ಎನ್ನಿಸುತ್ತದೆ!

ಕಥೆಯಾರಂಭಿಸುವ ಮುನ್ನ ನಾಯಕಿ ಹೀಗೇ ಹೇಳುತ್ತಾಳೆ "ಪ್ರತಿಯೊಂದನ್ನು ಹಳೆಯದನ್ನಾಗಿಸುವುದೇ ಕಾಲನ ಕೆಲಸವೇ? ಯಾವುದೇ ಆಗಲಿ ಅದು ಹೊಸತಾಗಿಸುವುದಿಲ್ಲವೇ? ನನ್ನ ಮುಖವೇನೋ ಹಳತಾಗಿದೆ, ಆದರೆ ಮನಸ್ಸು? ಮಿರ್ಚಾ ಇಲಿಯೇಡ‍ನ ಬಗ್ಗೆ ತಿಳಿಯಲು ಹಾತೊರೆಯುತ್ತಿರುವ ನನ್ನ ಈ ಮನಸ್ಸೇ ಹೊಸದೆ? ಇದೂ ಕೂಡಾ ಕಾಲನ ಸೃಷ್ಟಿ ತಾನೆ? "He jests at scars that never felt a wound"  ಶೇಕ್ಸ್‌ಪಿಯರ್‌ನ ಈ ಹೇಳಿಕೆಯನ್ನು ಆಕೆ ತನ್ನ ಕಾದಂಬರಿಯಲ್ಲೊಂದು ಕಡೆ ಉಲ್ಲೇಖಿಸಿದ್ದಾಳೆ. ಅದನ್ನು ಆಕೆ ತನ್ನ ವಿಫಲಗೊಂಡ ಪ್ರೇಮಕ್ಕೆ ತಂದೆ ತೋರುವ ಉಡಾಫೆಯನ್ನು, ಸತಿ ಪದ್ಧತಿಗೆ ಸಂತಸಗೊಳ್ಳುವ ತನ್ನಜ್ಜಿಯನ್ನು ಕಂಡು ಆಕ್ರೋಶದಿಂದ ಬರೆದದ್ದು. ಆದರೆ ಈ ಮಾತು ಎಲ್ಲೋ ಮಿರ್ಚಾನಿಗೂ ಅನ್ವಯಿಸುತ್ತದೆ. ಅವನ ಕಂಡ ನೋವಿಗೂ, ಮೈತ್ರೇಯಿ ದೇವಿ ಕಂಡ ನೋವಿಗೂ ಸುಳ್ಳು, ಸತ್ಯದಷ್ಟೇ ಅಂತರವಿದೆ ಎಂದೆನಿಸಿಬಿಡುತ್ತದೆ.

ಮಿರ್ಚಾನ ಕಾದಂಬರಿಯಲ್ಲಿ ಕೇವಲ ಮೈತ್ರೇಯಿ ಮಾತ್ರ ತುಂಬಿಕೊಂಡಿರಬಹುದು, ಮೈತ್ರೇಯಿ ದೇವಿಯವರ ಕಾದಂಬರಿಯಲ್ಲಿ ಸತ್ಯದ ಸೌಂದರ್ಯ ತುಂಬಿದೆ. ತನ್ನ ಮತ್ತು ಮಿರ್ಚಾನ ನಡುವಿದ್ದ ಸಂಬಂಧ ಯಾವಥರದ್ದಾಗಿತ್ತು, ಅದರ ಪಾವಿತ್ರ್ಯತೆ ಎಂಥದ್ದಾಗಿತ್ತು ಎನ್ನುವುದನ್ನು ಆಕೆ ಯಾರೋ ಸ್ಪಷ್ಟ ಪಡಿಸಲೋಸುಗ ಬರೆದಿರುವಂತೆ ಭಾಸವಾಗುವುದಿಲ್ಲ. ಅವರು ಅವಳೊಳಗಿನ ‘ರೂ’ಗಾಗಿ ಮಾತ್ರ ಬರೆದುಕೊಂಡಂತಿದೆ. ಮದುವೆಯಾನಂತರ ಅವಳು ತನ್ನ ಪತಿಯ ಮೇರು ವ್ಯಕ್ತಿತ್ವವನ್ನು ಪರಿಚಯಿಸಿಕೊಡುವ ರೀತಿ, ಅವರ ವಾಸಸ್ಥಳವಾಗಿದ್ದ ಬಂಗಾಲದ ಒಂದು ಗುಡ್ಡಗಾಡಿನ ಕಣಿವೆಯ ಅಪಾರ ಸೌಂದರ್ಯವನ್ನು ಚಿತ್ರಿಸುವ ಪರಿ, ಹಳ್ಳಿಯವರ ಬವಣೆಗಳು, ಬ್ರಿಟೀಷರ ದೌರ್ಜನ್ಯ, ಕುಟಿಲತೆ, ಅವರ ಸ್ವದೇಶಿ ಪ್ರೇಮ, ಮದ್ಯಪಾನದ ವಿರುದ್ಧ ಆ ಕಾಲದಲ್ಲೇ ಆಕೆ ಸಾರುವ ಸಮರ, ಅನ್ಯಾಯಕ್ಕೆ ಬಗ್ಗದೇ, ಅಸತ್ಯಕ್ಕೆ ಕುಗ್ಗದೇ, ಕ್ಷಣಿಕ ಪ್ರಲೋಭನೆಗೆ ಒಳಗಾಗದೇ, ಸೆಟೆದು ನಿಂತು ಮಿನುಗುವ ಮೈತ್ರೇಯಿಯವರ ಪ್ರತಿಬಿಂಬವಾದ ಅಮೃತಾಳ ವ್ಯಕ್ತಿತ್ವಕ್ಕೆ ನಾನು ಮಾರುಹೋದೆ. 

ಗಮನ ಸೆಳೆದು ಕುತೂಹಲಕ್ಕೀಡು ಮಾಡುವ ಒಂದೆರಡು ಮಾಹಿತಿಗಳು :- ‘ತಿತಾಪತಿ’ ಎನ್ನೋ ಎಲೆಯನ್ನು ಕಿತ್ತು ನೀರಿಗೆ ಹಾಕಿದಾಗ, ಅದನ್ನು ತಿಂದ ಮೀನುಗಳು ಉನ್ಮತ್ತಗೊಂಡು ಗಾಳಕ್ಕೆ ಅದೆಂತು ಬೇಗ ಸಿಕ್ಕುವವು ಅನ್ನೋ ಬೆರಗು, ದಟ್ಟಕಾಡಿನಲ್ಲಿರುವ ಕಡುಗಪ್ಪು ಹುಲ್ಲುಗಳು (Moss), ಕಾಡಿನೊಳಗಿರುವ ಬೆಳಕನ್ನು ಹೊರಚೆಲ್ಲುವ ವಿಶಿಷ್ಟವಾದ ‘ಫಸ್‌ಫರಾಸೆಂಟ್’ ಗಿಡಗಳು, ಕಾಡಲ್ಲಿ ಸಿಗುವ ಡೇಲಿಯಾ ಹೂವಿನ ಥರದ್ದೇ ಒಂದು ಕೀಟ, ಕೊನೆಯಲ್ಲಿ ಬರುವ ‘ಪಂಡೋರ’ ಪಟ್ಟಿಗೆ!

ಕೊನೆಯದಾಗಿ :- ಕಾದಂಬರಿಯಲ್ಲೊಂದು ಕಡೆ ಮಿರ್ಚಾ ಅಮೃತಳಲ್ಲಿ ಹೇಳುತ್ತಾನೆ "ನಾನು ನಿನ್ನ ದೇಹವನ್ನಲ್ಲ, ಆತ್ಮವನ್ನು ಕಾಣ ಬಯಸುತ್ತೇನೆ" ಎಂದು. ಆದರೆ ಮಿರ್ಚಾ ತನ್ನ Bengal Nights ಕಾದಂಬರಿಯಲ್ಲಿ ಕಾಣಿಸಿದ್ದು ಅವಳ ದೇಹವನ್ನು ಮಾತ್ರ, ಆದರೆ ಮೈತ್ರೇಯಿ ದೇವಿಯ ಅಮೃತಾ ‘ನ ಹನ್ಯತೆ’ಯ ತುಂಬೆಲ್ಲಾ ತನ್ನ ಆತ್ಮದ ಬೆಳಕನ್ನು ಕಾಣಿಸಿ, ಕೊನೆಯಲ್ಲಿ ಮಿರ್ಚಾನ ಅಂಧತ್ವವನ್ನೂ ತೊಡೆದು ಹಾಕಿದ್ದರ ಸಂಕೇತವನ್ನು ಓದುಗರಿಗೆ ನೀಡುತ್ತಾಳೆ. ‘ಕುರುಡರಿಗೆ ಯಾವ ರೀತಿ ಬೆಳಕಿನ ಬಗ್ಗೆ ತಿಳಿಸೋದಕ್ಕಾಗೋದಿಲ್ವೋ, ಅದೇ ತರಹ ಆತ್ಮನ ಕುರಿತು ಯಾರಿಗೆ ಅರಿವಿಲ್ಲವೋ, ಅವರಿಗೆ ಅದರ ಬಗ್ಗೆ ತಿಳಿಸಿ ಹೇಳುವುದು ಕಷ್ಟ. ಈ ಅನುಭವ ತರ್ಕಕ್ಕೆ ಮೀರಿದ್ದು. ಅದನ್ನು ಮಾತಿನಿಂದ ಬಣ್ಣಿಸಲು ಸಾಧ್ಯವಿಲ್ಲ. ಬುದ್ಧಿಯಿಂದ ಅರ್ಥೈಸಲೂ ಸಾಧ್ಯವಿಲ್ಲ. “ನ ಮೇಧ ಯಾ ಬಹುಧಾನ ಶೃತೇನ". ಎಂದು ‘ನ ಹನ್ಯತೆ’ ಯ ಅಮೃತಾಳ ಮೂಲಕ ಮೈತ್ರೇಯಿ ದೇವಿ ಹೇಳಿಸುತ್ತಾರೆ. ಅದು ನೂರಕ್ಕೆ ನೂರು ಸತ್ಯ. ಅಂತೆಯೇ ಆಕೆ ಹೇಳುವಂತೇ ಪ್ರೇಮದಲ್ಲಿ ಅಮರತ್ವದ ಸಂಕೇತವಿದೆ, ಅದು ಶಾಶ್ವತ. ಪ್ರೇಮವಿದ್ದಲ್ಲಿ ಅತೃಪ್ತಿಯೂ ಇರುತ್ತದೆ. ಅದೇ ಅನಂತರ ಅರಿವನ್ನು ಮೂಡಿಸುತ್ತಿರುತ್ತದೆ. ಆ ಅರಿವನ್ನು ಪಡೆಯಲು ಕಲವೇ ಕೆಲವು ಮೈತ್ರೇಯಿ ದೇವಿಯರಿಗೆ ಸಾಧ್ಯ ಮತ್ತು ಹೆಚ್ಚಿನವರು ಮಿರ್ಚಾನಂತೇ ಕುರುಡರೇ ಆಗುರುತ್ತಾರೆ!?

ಸೂಚನೆ : ಕಾದಂಬರಿಯ ಮೊದಲು ಲೇಖಕಿ, ತುಂಬಾ ಅವಸರದಲ್ಲಿ ಪುಸ್ತಕ ಬರೆದಿರುವರಿಂದ ಮುದ್ರಣ ದೋಷವಾಗಿದೆ... ಅದಕ್ಕೆ ಕಾರಣ ತಾನೇ ಎಂದಿದ್ದಾರೆ. ಆದರೆ ಹಾಗೆ ಲೇಖಕಿ ಹೇಳಿದ್ದು ಬಂಗಾಲಿಯಲ್ಲಿ ಪ್ರಕಟಗೊಂಡ ತನ್ನ ಕಾದಂಬರಿಯಲ್ಲಿ. ಆದರೆ ಅದನ್ನು ಕನ್ನಡಕ್ಕೆ ಅನುವಾದಿಸಿದ ಗೀತಾ ವಿಜಯ ಕುಮಾರ್ ಅವರು ಯಥಾವತ್ತಾಗಿ ಅನುವಾದಿಸಿರುವಂತೆ ಕಾಣಿಸುತ್ತದೆ! ಮುದ್ರಣ ದೋಷಗಳು ಕನ್ನಡಲ್ಲೂ ಯಥೇಚ್ಛವಾಗಿವೆ. ಒಂದೆರಡು ಕಡೆ ಇಸವಿಯನ್ನೂ ತಪ್ಪಾಗಿ ಮುದ್ರಿಸಲಾಗಿದೆ. ಆದರೆ ಕಾದಂಬರಿಯ ಸತ್ಯತೆಯ ಪ್ರಖರ ಬೆಳಕಿನಡಿ ಇಂತಹ ತಪ್ಪುಗಳೂ ಒಪ್ಪುಗಳೇ ಆಗಿ ನಗಣ್ಯವಾಗಿ ಬಿಡುತ್ತವೆ.

 ‘ನ ಹನ್ಯತೆಯನ್ನು ನನ್ನಿಂದ ಸಶಕ್ತವಾಗಿ ಕಟ್ಟಿಕೊಡಲು ಆಗಿದೆ ಎನ್ನಲಾರೆ. ಆದರೆ ಬರೆಯುವ ತುಡಿತಕ್ಕೆ ಪ್ರಾಮಾಣಿಕತೆ ಒದಗಿಸಲು ಯತ್ನಿಸಿರುವೆ. ಕೆಲವು ಅನುಭೂತಿಗಳು ಅವರ್ಣನೀಯವೇ!

-ತೇಜಸ್ವಿನಿ.

ಮಂಗಳವಾರ, ನವೆಂಬರ್ 12, 2013

ಅಡಿಗರ ಅಡಿಗೆ ನಮಿಸುತ್ತಾ...

ಕೆಲವು ಹಾಡುಗಳೇ ಹಾಗೇ.... ಕಾಲ, ದೇಶ, ಸ್ಥಿತಿ ಎಲ್ಲವನ್ನೂ ಮೀರಿ ಜನಮಾನಸದ ಮೇಲೆ ಬೆಳೆಯುತ್ತಲೇ ಹೋಗುತ್ತವೆ. ಕೇಳುತ್ತಿದ್ದಂತೇ ಪ್ರಸ್ತುತ ಮನಃಸ್ಥಿತಿಗೆ ಕನ್ನಡಿ ಹಿಡವಂತಿವೆಯೇನೋ ಎಂಬ ಭಾಸ ಕೇಳುಗರಲ್ಲಿ/ಓದುಗರಲ್ಲಿ ಉಂಟುಮಾಡುತ್ತವೆ. ಬಹು ಹಿಂದೆ ರಚಿತವಾದ ಹಾಡುಗಳದೆಷ್ಟೋ ಇಂದಿಗೂ ಬಹು ಪ್ರಸ್ತುತ ಎಂದೆನಿಸಿಕೊಳ್ಳುತ್ತವೆ. ಕವಿ ರಚಿಸುವಾಗ ಇದ್ದ ಚಿತ್ರಣ, ಅವನ ಕಲ್ಪನೆಗೆ ಆ ಕ್ಷಣಕ್ಕೆ ಹೊಳೆದ ಯಾವುದೋ ದೃಶ್ಯಾನುಭೂತಿ, ತನ್ನೊಳಗೆ ಆವಿರ್ಭವಿಸಿದ್ದ ಹಳೆಯ ಅನುಭವಗಳ ಹೂರಣ - ಇದ್ಯಾವುವೂ ಇದ್ದಹಾಗೇ ಓದುಗರನ್ನು ತಟ್ಟದಿದ್ದರೂ... ಸಾಮಾನ್ಯರಿಂದ ಹಿಡಿದು ಸಾಹಿತ್ಯಪ್ರಿಯ ಓದುಗರನ್ನೆಲ್ಲಾ ಸೆಳೆದು ಹಿಡಿದಿಟ್ಟುಕೊಳ್ಳುವ ಹಾಡುಗಳೇ ಜನಪ್ರಿಯ ಎಂದೆನಿಸಿಕೊಳ್ಳುತ್ತವೆ. 

ಕವಿತೆ ಕಾವ್ಯವಾಗುವುದು ಅದಕ್ಕೊದಗುವ ಇಂಪಾದ ಸಂಗೀತದಿಂದ. ಕಾವ್ಯದೊಳಗಿನ ಗಾಢಾರ್ಥವನ್ನು, ಗೂಢಾರ್ಥವನ್ನು ಕಿವಿಯಮೂಲಕ ಸಮರ್ಥವಾಗಿ ಹೃದಯಕ್ಕೊಯ್ಯಲು ಸಾಹಿತ್ಯದಷ್ಟೇ ಸುಂದರ, ಮೋಹಕ ಸಂಗೀತದ ಆವಶ್ಯಕತೆ ಇರುತ್ತದೆ. ಗೇಯತೆಯಿಂದಕೂಡಿದ ಕವನ ಬಹು ಬೇಗ ಜನರ ಮನಸನ್ನು ತಟ್ಟುತ್ತದೆ, ದೀರ್ಘಕಾಲ ಬಾಳುತ್ತದೆ. ಹಾಗೆ ನೋಡಿದರೆ ಎಲ್ಲಾ ಕವಿತೆಗಳೂ ಸಂಗೀತದ ಚೌಕಟ್ಟಿಗೇ ನಿಲುಕಬೇಕೆಂಬ ನಿಯಮವೇನೂ ಇಲ್ಲ. ಸುಂದರ, ಸರಳ, ಹೃದ್ಯ ಅದೆಷ್ಟೋ ಕವಿತೆಗಳು ನಮ್ಮ ಮುಂದಿವೆ. ಆದರೆ ಹಾಡಾಗುವ ಕವನಗಳೇ ಹೆಚ್ಚು ಹೆಚ್ಚು ನಮ್ಮನ್ನು ಕಾಡುವವು ಎಂಬುದೂ ಅಷ್ಟೇ ಸತ್ಯ.

ಅಂತಹ ಜನಪ್ರಿಯ ಕವಿತೆಯೊಂದರ ಕಿರು ಪರಿಚಯ ಇಲ್ಲಿದೆ. ಶ್ರೀಯುತ ಗೋಪಾಲಕೃಷ್ಣ ಅಡಿಗರ "ಕಟ್ಟುವೆವು ನಾವು" ಕವನ ಸಂಕಲನದಲ್ಲಿರುವ "ಮೋಹನ ಮುರಲಿ" ಎಂಬ ಪ್ರಸಿದ್ಧ ಹಾಡು ಇಂದಿಗೂ ಎಲ್ಲರ ಮನದೊಳಗೆ ಶಾಶ್ವತವಾಗಿ ಮನೆಮಾಡಿದೆ. ಈ ಹಾಡನ್ನು ಗುನುಗಿಕೊಳ್ಳದಿರುವವರೇ ತೀರಾ ಕಡಿಮೆ ಎನ್ನಬಹುದು. ಇದಕ್ಕೆ ಕಾರಣ ಕವಿತೆಯೊಳಗಿರುವ ಕಾವ್ಯಲಯ ಮತ್ತು ಗೇಯತೆ. ಏನೂ ಅರ್ಥ ಆಗದಿರುವವರಿಗೂ ಎನೋ ಒಂದು ಅರ್ಥವನ್ನು ಹೊಳಹಿಸುತ್ತದೆ ಈ ಹಾಡಿನಲ್ಲಿ ಭಾವನೆಯೇ ತುದಿಯಿಂದ ಬುಡದವರೆಗೂ ನಾದವಾಗಿ ಹರಿಯುತ್ತದೆ. 

ಹಾಡಿನ ಶೈಲಿ :-

ಮೊದ ಮೊದಲು ಅಡಿಗರು ನವೋದಯ ಶೈಲಿಯಲ್ಲಿ ಕಾವ್ಯ ರಚಿಸಿದರೂ ಆಮೇಲೆ ನವ್ಯ ಶೈಲಿಯಲ್ಲೇ ಹೆಚ್ಚು ಕವಿತೆಗಳನ್ನು ರಚಿಸಿದರು. ಆದರೆ ಅವರ ಹೆಚ್ಚಿನ ಕವಿತೆಗಳೆಲ್ಲಾ ಪಾರಮಾತ್ಮಿಕ, ಆಧ್ಯಾತ್ಮಿಕ ಚಿಂತನೆಯನ್ನು ಹೊಳಹಿಸುತ್ತವೆ. ಅವರ "ಮೋಹನ ಮುರಲಿ" ಕವನ ನವ್ಯಕಾವ್ಯದ ಛಾಪನ್ನು ಹೊಂದಿರುವ ನವೋದಯ ಕವಿತೆಯಾಗಿದೆ. ನವ್ಯ ಶೈಲಿಯಲ್ಲಿ ಅನೇಕರು ಉತ್ತಮ ಕವಿತೆಗಳು ಬರೆದಿದ್ದಾರೆ. ಆದರೆ ಅಡಿಗರಷ್ಟು ಎತ್ತರಕ್ಕೇರಲು ಯಾರಿಗೂ ಸಾಧ್ಯವಾಗಲಿಲ್ಲ ಎಂದರೆ ಅತಿಶಯೋಕ್ತಿಯಿಲ್ಲ. 

ಕವಿತೆಯ ಪೂರ್ಣ ಸಾಹಿತ್ಯ :

ಮೋಹನ ಮುರಲಿ 

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ; 

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿದ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;
ಎನೊ ತೀಡಲು ಏನೊ ತಾಡಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ? 

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ? 

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?


ಈ ಹಾಡಿಗೆ ಪ್ರಥಮಬಾರಿ ಸಂಗೀತ ಸಂಯೋಜಿಸಿದ್ದು ಶ್ರೀಯುತ ಮೈಸುರು ಅನಂತಸ್ವಾಮಿಯವರು. ಸುಶ್ರಾವ್ಯವಾಗಿ ಹಾಡಿದವರು ಶ್ರೀಮತಿ ರತ್ನಮಾಲಾ ಪ್ರಕಾಶ್. ಕಲ್ಪನಾಲೋಕದಲ್ಲಿ ವಿಹರಿಸುವ ಪ್ರಣಯಿಗಳ, ರಾಧಾಕೃಷ್ಣರನ್ನು ಆರಾಧಿಸುವ ಭಕ್ತರ, ಪ್ರೀತಿಯನ್ನಗಲಿದ ವಿರಹಿಗಳ, ಕಾವ್ಯರಸಿಕರ - ಇವರೆಲ್ಲರ ಬಾಯಲ್ಲಿ ಮೋಹನ ಮುರಳಿ ಈಗಲೂ ನಲಿಯುತ್ತಿದ್ದಾನೆ. ಅಡಿಗರ ಕವನದೊಳಗಿನ ವಿರಹ, ಪ್ರಣಯ, ಆರ್ತನಾದ, ಭಕ್ತನ ಮೊರೆ, ತುಡಿತ, ಬಯಕೆ - ಇವೆಲ್ಲವೂ ಅನಂತಸ್ವಾಮಿಯವರ ಸಂಗೀತ ಹಾಗೂ ರತ್ನಮಾಲಾರ ಕಂಠದಲ್ಲಿ ಹದವಾಗಿ ಮಿಳಿತಗೊಂಡು ಕೇಳುಗರ ಎದೆಯಲ್ಲಿ ಶಾಶ್ವತ ಛಾಪನ್ನು ಮೂಡಿಸಿದೆ.

ಚಲನಚಿತ್ರದಲ್ಲಿ "ಮೋಹನ ಮುರಲಿ" :-

೧೯೯೭ ರಲ್ಲಿ ಬಿಡುಗಡೆಗೊಂಡ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ "ಅಮೇರಿಕಾ ಅಮೇರಿಕಾ" ಚಲನಚಿತ್ರದಲ್ಲಿ ಅಡಿಗರ ಇದೇ ಕವಿತೆಯನ್ನು ಬಹು ಸಮರ್ಥವಾಗಿ ಬಳಸಿಕೊಳ್ಳಲಾಯಿತು. ಸಾಂಪ್ರದಾಯಿಕ ಸಂಗೀತ ಶೈಲಿಗಿಂತ ಭಿನ್ನವಾದ ಸಂಗೀತವನ್ನು ಕೊಟ್ಟವರು ಶ್ರೀ ಮನೋಮೂರ್ತಿಯವರು. ಹಾಡಿದವರು ರಾಜು ಅನಂತಸ್ವಾಮಿ ಹಾಗೂ ಸಂಗೀತ ಅವರು. ಆ ಸಮಯದಲ್ಲಿ ಯಾವುದೋ ಒಂದು ಪತ್ರಿಕೆಯಲ್ಲಿ ಓದಿದ್ದ ನೆನಪು..‘ಈಗಾಗಲೇ ರತ್ನಮಾಲಾರ ಹಾಡಿನಲ್ಲಿ ಜನಪ್ರಿಯಗೊಂಡಿರುವ ಈ ಕವಿತೆಗೆ ಭಿನ್ನವಾದ ಸಂಗೀತವನ್ನಿತ್ತರೆ ಸಫಲರಾಗುವರೇ?? ಚಿತ್ರಕತೆಯಲ್ಲಿ ಈ ಹಾಡಿನ ಬಳಕೆ ಸಮರ್ಪಕವಾಗಿದೆಯೇ??" ಎಂಬಿತ್ಯಾದಿ ಸಂಶಯಗಳು, ಪ್ರಶ್ನೆಗಳು ಹಲವರಲ್ಲಿ ಮೂಡಿತ್ತು. ಆದರೆ ಚಿತ್ರ ಬಿಡುಗಡೆಗೊಂಡಾಗ ಈ ಹಾಡಿಗೆ ಒದಗಿಸಲಾದ ಹೊಸ ಸಂಗೀತ ಅದೆಷ್ಟು ಹೆಸರುಗಳಿಸಿತೆಂದರೆ ಹಳೆಯ ಸಂಗೀತದ ನೆನಪನ್ನೂ ತುಸು ಮಬ್ಬಾಗಿಸಿತೆನ್ನಬಹುದು. ಈ ಕ್ರಾಂತಿಯಾಗಿದ್ದು ಕೇವಲ ಸಂಗೀತಮಾತ್ರದಿಂದ ಎನ್ನಲಾಗದು. ಹಾಡನ್ನು ಚಿತ್ರದಲ್ಲಿ ಬಳಸಿಕೊಂಡ ಸಂದರ್ಭವೂ ಅಷ್ಟೇ ಪ್ರಮುಖ ಪಾತ್ರ ನಿರ್ವಹಿಸಿದೆ ಎಂಬುದು ನನ್ನ ಅಭಿಮತ.

ಹಾಡಿನ ಹಿನ್ನೆಲೆ :-

ಅಡಿಗರು ಈ ಕವಿತೆಯನ್ನು ರಚಿಸಿದ್ದು ಸಿದ್ಧಾರ್ಥ ಗೌತಮಬುದ್ಧನಾಗಲು ಹೊರಟ ಸಂದರ್ಭವನ್ನು ನೆನೆದು ಎನ್ನುವ ಊಹೆ ಕೆಲವು ಕಾವ್ಯ ಪಂಡಿತರದ್ದು. ಇದಕ್ಕೆ ಸಾಕಷ್ಟು ಪುಷ್ಟಿಕೊಡುವಂತಿದೆ ಕವಿತೆಯ ಸಾಹಿತ್ಯ. ಇನ್ನು ಕೆಲವರ ಪ್ರಕಾರ, ಕವನ ಆತ್ಮ-ಪರಮಾತ್ಮನ ನಡುವಿನ ಸೂಕ್ಷ್ಮ ಎಳೆಯನ್ನು, ಜೀವಾತ್ಮ ದೇಹವನ್ನು ತೊರೆದು ಭಗವಂತನಲ್ಲಿ ಲೀನವಾಗಲು ಮೊರೆಯಿಡುತ್ತಿರುವುದನ್ನು, ಬಿಟ್ಟೂ ಬಿಡದ ಮಾಯೆಯೊಳಗೆ ಸಿಲುಕಿ ಮಿಸುಕಾಡುವ ತುಡಿತವನ್ನು ಪ್ರತಿಬಿಂಬಿಸುತ್ತಿದೆ. ಒಟ್ಟಿನಲ್ಲಿ ಹೀಗೇ ಎಂದು ಖಚಿತವಾಗಿ ಅರ್ಥೈಸಿಕೊಳ್ಳಲಾಗದಷ್ಟು ಎತ್ತರಕ್ಕೇರಿರುವ ಈ ಹಾಡು ಕೇಳುಗರಲ್ಲಿ, ಓದುಗರಲ್ಲಿ, ವಿಮರ್ಶಕರಲ್ಲಿ ಬೇರೆ ಬೇರೆ ಅರ್ಥಗಳನ್ನೇ ಹುಟ್ಟುಹಾಕಿದೆ. ಆದ್ಯಾತ್ಮ ಚಿಂತಕರಲ್ಲಿ ಲೌಕಿಕತೆಯಿಂದ ಅಲೌಕಿಕತೆಯೆಡೆಗೆ ಎಳೆಯುವ ಹಾಡು ಎಂದೆನಿಸಿಕೊಂಡರೆ, ಯುವಕರಿಗಿದು ಪ್ರೇಮಗೀತೆ.... ವಿರಹಗೀತೆ! 

"ಅಮೇರಿಕಾ ಅಮೇರಿಕಾ" ಚಿತ್ರದಲ್ಲಿ ಈ ಹಾಡನ್ನು ನಾಯಕ ಹುಟ್ಟಿದ ಊರು, ಮನೆ, ದೇಶವನ್ನು ತೊರೆದು ಪರದೇಶಕ್ಕೆ ಹೊರಟಾಗ ಅವನು ಬಿಟ್ಟು ಹೋಗುವ ಸ್ನೇಹಿತರು, ಆಪ್ತೇಷ್ಟರು, ಹೆತ್ತವರ ಮನಃಸ್ಥಿತಿಯನ್ನು ಬಿಂಬಿಸುವಾಗ ಬಳಸಿಕೊಳ್ಳಲಾಗಿದೆ. ಚಿತ್ರಕಥೆಯ ಕೊನೆಯಲ್ಲಿ ಹುಟ್ಟಿದೂರಿನ ಮಹತ್ವವನ್ನರಿತ ನಾಯಕ ಮರಳಲು ಯತ್ನಿಸಿದರೂ, ಹಿಂತಿರುಗಲಾಗದೇ ಹೊರದೇಶದಲ್ಲೇ ಅಸುನೀಗುವಾಗಿನ ಕ್ಷಣದಲ್ಲಿ.... "ವಿವಶವಾಯಿತು ಪ್ರಾಣ ಹಾ.." ಎಂದು ಹಾಡು ಬರುತ್ತದೆ. ಆಗ ಎಂತಹವರ ಮನಸೂ ದ್ರವಿಸದಿರದು. ಆ ಸಂದರ್ಭದಲ್ಲಿ ಬಳಸಿಕೊಂಡ ಹಾಡಿನ ಸಾಹಿತ್ಯ ಬೇರೇ ಅರ್ಥವನ್ನೇ ಕಲ್ಪಿಸಿಕೊಡುತ್ತದೆ. ದೇಶಾಭಿಮಾನ, ತನ್ನವರ ತೊರೆದು ಬದುಕಲು ಪರದಾಡುವ ಮನವನ್ನು ನೋಡುಗರ ಮನದೊಳಗೆ ಗಾಢವಾಗಿ ಛಾಪಿಸುತ್ತದೆ.

ನಾ ಕಂಡಂತೆ "ಮೋಹನ ಮುರಲಿ" :-

"ಕೃಷ್ಣ" ಸದಾ ನನ್ನ ಕಾಡಿದವ. ಗೀತೆಯಕೃಷ್ಣನ ಮೇರುವ್ಯಕ್ತಿತ್ವ, ವಿಶ್ವರೂಪ ಭಕ್ತಿ, ಗೌರವ ತುಂಬಿದರೆ, ಮೋಹನ್ಮುರಲಿಯನ್ನು ಕಲ್ಪಿಸಿಕೊಂಡರೆ ಸಾಕು- ಅಷ್ಟೇ ಸೂಕ್ಷ್ಮವಾಗಿ, ಸರಳ ಸುಲಭವಾಗಿ ನನ್ನ ಮುಂದೆ ನಿಂತಂತಾಗುತ್ತಾನೆ. ಕೊಳಲಗಾನ ಎಂದರೇ ಏನೋ ತಲ್ಲೀನತೆ, ತನ್ಮಯತೆ. ಓರ್ವ ಅತ್ಯಂತ ಆಪ್ತ ಗೆಳೆಯನಂತೆ, ಹಿತೈಷಿಯಂತೆ, ಸಹೋದರನಂತೆ, ಪ್ರಿಯಕರನಂತೆ - ಎಲ್ಲಾ ರೀತಿಯಲ್ಲೂ, ಎಲ್ಲಾ ರೂಪದಲ್ಲಿ ಸುಳಿದಾಡಿ ಸನಿಹಗೊಳ್ಳುವ ಮೋಹನನ ಕುರಿತಾದ ಪ್ರಸ್ತುತ ಈ ಹಾಡು ಅವನ ಪ್ರತಿಯೊಂದು ಲೀಲೆಯನ್ನೂ, ಅವನ ಕೊಳಲೊಳಗಿಂದ ಹೊರಹೊಮ್ಮುವ ಮಂತ್ರಮುಗ್ಧ ನಾದವನ್ನೂ ಪದಪದದಲ್ಲೂ, ಪ್ರತಿ ಪ್ರಾಸದಲ್ಲೂ ಕಾಣಿಸುತ್ತದೆ ಎಂದೆನಿಸುತ್ತದೆ ನನಗೆ. "ಮೋಹನ ಮುರಲಿ" ಹಾಡನ್ನು ರತ್ನಮಾಲಾಪ್ರಕಾಶ್ ಅವರ ಸಂಗೀತದಲ್ಲಿ ಕೇಳುವಾಗ ಒಂದು ರೀತಿಯ ಅನುಭೂತಿಯಾದರೆ, "ಅಮೇರಿಕಾ ಅಮೇರಿಕಾ" ಚಲನಚಿತ್ರದಲ್ಲಿ ಬಳಸಿಕೊಂಡ ಸಂಗೀತ ಕೇಳಿದಾಗ ಬೇರೆಯದೇ ರೀತಿಯ ಅನುಭೂತಿಯಾಗುವುದು. ಮೂಲ ಸಂಗೀತ ಕೇಳುತ್ತಿದ್ದಂತೆ ಕಣ್ಣು ಅಪ್ರಯತ್ನವಾಗಿ ಅರೆನಿಮೀಲಿತಗೊಂಡು ಬೃಂದಾವನದೆಡೆಗೇ ಹೋದಂತೆ... ಶಾಂತ ರಸ, ಕರುಣ ರಸ ನನ್ನೊಳಗೆ ಪ್ರವಹಿಸಿದಂತೆ ಭಾಸವಾದರೆ, ಮನೋಮೂರ್ತಿಯವರ ಸಂಗೀತದ ತುಂಬೆಲ್ಲಾ ಶೋಕರಸದ ಆವಿರ್ಭಾವವೊಂದೇ ಉಂಟಾಗುತ್ತದೆ.

ಎರಡೂ ಸಂಗೀತಗಳು ನಮ್ಮನ್ನು ತಟ್ಟುತ್ತವೆ, ಕಾಡುತ್ತವೆ, ಬೇರೆಯೆ ಲೋಕಕ್ಕೇ ನಮ್ಮನೆಳೆಸುತ್ತವೆ. ನನಗೆ ಉಂಟಾದಂತಹ ಅನುಭೂತಿಯೇ ಇತರರಿಗೂ ಆಗಬೇಕೆಂದಿಲ್ಲ. ಆದರೆ ಯಾವುದೋ ಒಂದು ಅನುಭವವನ್ನು ಕೇಳುಗರಲ್ಲಿ ಖಚಿತವಾಗಿ ಉಂಟುಮಾಡುವಲ್ಲಿ ಮಾತ್ರ ಸಫಲವಾಗಿದೆ ಅಡಿಗರ ಈ ಪ್ರಸಿದ್ಧ ಹಾಡು. ಅಷ್ಟೊಂದು ಶಕ್ತಿಯಿದೆ ಅವರ ಹಾಡಿನೊಳಗಿನ ಸಾಹಿತ್ಯದಲ್ಲಿ, ಕವಿತೆಯೊಳಡಗಿರುವ ಅರ್ಥಗಳಲ್ಲಿ.

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ? 

ಈ ಸಾಲೊಂದೇ ಸಾಕು ಈ ಕವಿತೆಯೊಳಡಗಿರುವ ಕಾವ್ಯಶಕ್ತಿಯನ್ನು ಕಾಣಲು. ಹಲವರ ಪ್ರಕಾರ ಅಡಿಗರು ಈ ರೀತಿ ಹೇಳಿದ್ದು ಒಂದು ಹೇಳಿಕೆಯ ಹಾಗೆ.... ಅನುಭವದ ನುಡಿಯಂತೇ! ಬದುಕೆಂದರೆ, ವಯೋಮಿತಿಯ ಹಂಗಿಲ್ಲದೇ ಆಬಾಲವೃದ್ಧರಾಗಿ... ನಮ್ಮೊಳಗಿರದ್ದನ್ನು, ನಮಗೆ ಹೊರತಾದದ್ದನ್ನು ಬಯಸುವುದು- ಎಂದೇ ಈ ಸಾಲನ್ನು ಅರ್ಥೈಸಿಕೊಂಡವರು ಹೆಚ್ಚು. ಆದರೆ ನನ್ನ ಪ್ರಕಾರ ಮೂಲ ಕವಿತೆಯನ್ನು ಸರಿಯಾಗಿ ಗಮನಿಸಿದರೆ ಈ ಸಾಲಿನ ಕೊನೆಯಲ್ಲಿರುವ ಪ್ರಶ್ನಾರ್ಥಕ ಚಿಹ್ನೆ ಕವಿಮನಸಿನ ನಿಜ ಭಾವದ ಸುಳಿವೊಂದನ್ನು ನಮಗೆ ತಿಳಿಸುತ್ತದೆ. ನಮ್ಮೊಳಗಿನ ದಾಹಕ್ಕೆ, ಆಶಯಕ್ಕೆ, ಆಕಾಂಕ್ಷೆಗಳಿಗೆ ಎಂದಾದರೂ ಕೊನೆಯಿದೆಯೇ?? ನಿರಂತರ ಹುಡುಕಾಟ, ಕಾಣದ ಗುರಿಯೆಡೆ ಪಯಣವೇ ಬದುಕೇ?? ದೇಹದಿಂದ ಮುಕ್ತಗೊಂಡು ಪರಮಾತ್ಮನನ್ನು ಸೇರುವ ಆತ್ಮದ ತುಡಿತದ ಫಲ ಜೀವನವೇ??? - ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳು ಇದರಲ್ಲಡಗಿದೆಯೇನೋ ಎಂಬ ಭಾಸ ನಮಗಾಗುತ್ತದೆ. ಈ ಸಾಲಿನ ಮುಂದೆ "ಪೂರ್ಣವಿರಾಮ" ಅಥವಾ "ಅಲ್ಪವಿರಾಮ"ವಿದ್ದಿದ್ದರೆ ಅರ್ಥವೇ ಬೇರೆಯಾಗುತ್ತಿತ್ತೇನೋ! ಅಡಿಗರ ಆಶಯ ಏನಾಗಿತ್ತೆಂದು ಯಾರೂ ಹೀಗೇ ಎಂದು ಹೇಳಲಾಗದು. ಸೂಕ್ಷ್ಮಗ್ರಹಿಕೆಯನ್ನಷ್ಟೇ ನೀಡಬಹುದು. ಆದರೆ ಬದುಕನ್ನು ಕೇವಲ ಒಂದು ಸಾಲಿನಲ್ಲಿ ವಿವರಿಸುವ ಶಕ್ತಿ ಅಡಿಗರ ಈ ಕವನಕ್ಕಿದೆ ಎಂದು ಮಾತ್ರ ನಿಖರವಾಗಿ ಹೇಳಬಹುದು.

ಕೊನೆಯಲ್ಲಿ :-

ಕವಿತೆಯೆಂದರೆ "ಅವರವರ ಭಾವಕ್ಕೆ... ಅವರವರ ಭಕುತಿಗೆ" ಬಿಟ್ಟದ್ದೇ. ಒಮ್ಮೆ ಅದು ಕವಿಯಿಂದ ಹೊರಬಂದಮೇಲೆ ಸಾರ್ವತ್ರಿಕವೇ. ಕವಿಯ ಮನದೊಳಗಿನ ಭಾವವನ್ನೇ ಓದುಗನೂ ಹೊಂದಬೇಕೆಂದಿಲ್ಲ. ಹಾಗಾಗಿ ಒಂದು ಕವಿತೆಗೆ ಹಲವು ಅರ್ಥಗಳು. ಆರೋಗ್ಯಕರ ಮನಸು ಮಾತ್ರ ಸುಂದರ ಕವಿತೆಗಳನ್ನು ಓದುವ, ಅಸ್ವಾದಿಸುವ, ಅದು ನೀಡುವ ಅನುಭೂತಿಯನ್ನು ಅನುಭವಿಸುವ ಅವಕಾಶಗಳನ್ನು ಕೊಡುತ್ತದೆ. ಹಾಡನ್ನು ಜೀವಂತವಾಗಿರಿಸುವುದೇ ಅದು ಸ್ಫುರಿಸುವ ಭಾವಗಳು. ಸದಾ ಒಂದು ಸೂತ್ರಕ್ಕೇ ಅಂಟಿಕೊಂಡಿರದ ಸಂಚಾರಿಭಾವಗಳೇ ಒಂದು ಹಾಡಿಗೆ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಿಕೊಡುತ್ತವೆ. ಬಹುಶಃ ಅದಕ್ಕೇ ಇರಬೇಕು ಡಾ.ಜಿ.ಎಸ್.ಶಿವರುದ್ರಪ್ಪನವರು ಹೀಗೆ ಹೇಳಿದ್ದು- "ಹಾಡು ಹಳೆಯದಾದರೇನು ಭಾವ ನವನವೀನ..".

-ತೇಜಸ್ವಿನಿ ಹೆಗಡೆ

(ಕೆಲವು ತಿಂಗಳ ಹಿಂದೆ "ಅವಧಿ"ಯಲ್ಲಿ ಪ್ರಕಟಗೊಂಡಿತ್ತು...)


-----

ಸೂಚನೆ : ಮೂಲ ಹಾಡಿನಲ್ಲಿರುವ ಮೂರನೆಯ, ನಾಲ್ಕನೆಯ ಹಾಗೂ ಐದನೆಯ ಚರಣಗಳು ಚಲನಚಿತ್ರದಲ್ಲಾಗಲೀ, ರತ್ನಮಾಲಾ ಪ್ರಕಾಶ್ ಅವರ ಹಾಡಿನಲ್ಲಾಗಲೀ ಕಾಣಸಿಗವು!

ಶಬ್ದಾರ್ಥ:-

ಬಿಸಿದುಸೋಂಕಿನ = ಜೀವಂತ ಸ್ಪರ್ಶದ ಸೋಂಕು=ಸ್ಪರ್ಶ

ಮಿದುವೆದೆ= ಆರ್ದ್ರ ಎದೆ, ಪ್ರೀತಿ, ಸ್ನೇಹ ತುಂಬಿದ ಹ್ರ್‍ಋದಯ.


ಆಧಾರ :- "ಆಧುನಿಕ ಕನ್ನಡ ಕಾವ್ಯ" - ಡಾ.ಎಚ್. ತಿಪ್ಪೇರುದ್ರಸ್ವಾಮಿ.
             ಅಂತರ್ಜಾಲ



ಮಂಗಳವಾರ, ಅಕ್ಟೋಬರ್ 15, 2013

ಕಲ್ಲೆಂದು ಒಗೆಯದೇ..... ಕಾಪಿಟ್ಟೆ ಕನಸೊಂದ

ಸರಿಸುಮಾರು ಅರ್ಧ ರಾತ್ರಿ ಕಳೆದ ಮೇಲೇ ಇರಬೇಕು.. ಇಂಥದ್ದೊಂದು ಲಹರಿಯೋ, ಕಥೆಯೋ, ಚಿಂತನೆಯೋ, ಆಲೋಚನೆಯೋ, ಹುಚ್ಚು ಕಲ್ಪನೆಯೋ.. ಏನೋ ಒಂದು ತಲೆಯೊಳಗೆ ಮಿಣ ಮಿಣಗೆ ಹೊಳೆದು ಅರೆ ಎಚ್ಚರವಾಗಿದ್ದು. ತಲೆಯ ಮೂಲೆ ಮೂಲೆಯನ್ನೂ ಕೊರೆದು.. ಕೆರೆದು ಬೆಳೆಯ ತೊಡಗಿದಂತೇ... ಇನ್ನು ಅಸಾಧ್ಯ ಎಂದೆನಿಸಿ, ಆ ಅದನ್ನು ಬರೆದೇ ಬಿಡುವುದೆಂದು ನಿರ್ಧರಿಸಿದ್ದು.

ಅದು ಹೀಗಿತ್ತು....

ಇಬ್ಬರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆ ಇಬ್ಬರು ಗಂಡಸರೋ, ಹೆಂಗಸರೋ, ಒಂದು ಗಂಡು, ಒಂದು ಹೆಣ್ಣೋ.. ಸಂಬಂಧಿಗಳೋ, ಸ್ನೇಹಿತರೂ... ಎನ್ನುವುದೂ ಮೊದಲು ತೀರಾ ಅಸ್ಪಷ್ಟವಾಗಿತ್ತು... ಅರೆ ಎಚ್ಚರಗೊಂಡು ಹೊಳೆದದ್ದನ್ನು ಮತ್ತೆ ಮೆಲುಕುಹಾಕತೊಡಗಿದಂತೇ ಆ ಅವರಿಬ್ಬರು ಪರಸ್ಪರ ಪರಿಚಿತ ಗಂಡೇ ಇರಬೇಕೆಂದು ಕಲ್ಪಿಸಿಕೊಂಡೆ. ಹಾಗೇ ಆ ಗಂಡಸರಿಬ್ಬರು ದಾರಿಯಲ್ಲಿ ಸಾಗುತ್ತಿರುವಾಗಲೇ ಅವರಿಗೆ ಕಂಡಿದ್ದು ದೂರ‍ದಲ್ಲೆರಡು ಹೊಳೆವ ಕಲ್ಲುಗಳು(?). ಮುಖ್ಯವಾಗಿ ಅವೆರಡೂ ಕಲ್ಲುಗಳೋ, ಇಲ್ಲಾ ವಜ್ರದ ಹರಳುಗಳೋ, ಇಲ್ಲಾ ಒಂದು ಕಲ್ಲು, ಇನ್ನೊಂದು ವಜ್ರವೋ ಎಂದು ತಿಳಿಯದ ಸಂದಿಗ್ಧತೆ ಅವರಿಬ್ಬರೊಳಗೂ. ಆದರೆ ಸಾಣೆ ಹಿಡಿದು ನೋಡಲು ಅವರು ಜೊಹರಿಗಳಂತೂ ಆಗಿರಲಿಲ್ಲ ಅನ್ನುವುದು ಮಾತ್ರ ನನ್ನೊಳಗೆ ಸುಸ್ಪಷ್ಟ. ಸರಿ... ಹೊಳೆದದ್ದೆಲ್ಲಾ ಚಿನ್ನವಲ್ಲಾ ಎನ್ನುವುದು ಇಲ್ಲಿ ತಾಗಿಸಲಾಗದು. ಕಾರಣ ಅದು ಚಿನ್ನವಂತೂ ಅಲ್ಲವೇ ಅಲ್ಲಾ ಎನ್ನುವುದು ಅವರಿಬ್ಬರಿಗೂ ಗೊತ್ತು. ಕಣ್ಣು ಕೋರೈಸುತ್ತಾ ಹೊಳೆಯುತ್ತಿದ್ದ ಆ ಹರಳುಗಳಲ್ಲಿ ವಜ್ರ ಯಾವುದು? ಬಿಳಿ ಹರಳು ಯಾವುದು? ಇಲ್ಲಾ ಎರಡೂ ವಜ್ರಗಳೋ, ಹರಳುಗಳೋ ಇರಬೇಕೆಂದು ಬಗೆದು.. ಇರಲಿ.. ವಜ್ರಗಳೇ ಆಗಿರಬಾರದೇಕೆ ಎಂದು ಆಶಿಸುತ್ತಾ ಒಂದು ತನಗೆ, ಇನ್ನೊಂದು ನಿನಗೆ ಎಂದು ಎತ್ತಿಕೊಂಡು ಹೊರಟವರು ಮನೆಯ ಪಿಠಾರಿಯೊಳಗಿರುವ ವೆಲ್ವೆಟ್ ಬಟ್ಟೆಯೊಳಗಿಟ್ಟು ಭದ್ರವಾಗಿ ಬೀಗ ಜಡಿದಿದ್ದಾರೆ. 

ಹೊತ್ತು ತಂದಿದ್ದು ಏನೆಂದು ಮೊದಲು ಅರಿಯುವ ತವಕ ಇಬ್ಬರಿಗೂ. ಹಾಗೆ ಅರಿಯಲು ಅವರಿಗಿರುವುದೂ ಎರಡೇ ಎರಡು ದಾರಿ. ಒಂದೋ ವಜ್ರದ ವ್ಯಾಪಾರಿಗೆ ಕೊಡುವುದು... ಆದರೆ ಹಾಗೆ ಕೊಡುವಾತ ತುಂಬಾ ನಂಬಿಗಸ್ಥನಾಗಿದ್ದಿರಬೇಕು. ಇಲ್ಲಾ ಅಂದರೆ ಇವೆರಡನ್ನೂ ಅವನು ಸುಳ್ಳೇ ಪುಳ್ಳೇ ಬಿಳಿಯ ಹರಳೆಂದು ಶರಾ ಬರೆದು, ತಾವು ಬೇಸೆತ್ತು ಹೊರ ಬಿಸುಟಮೇಲೆ, ಕಾದು ಹೊತ್ತೊಯ್ಯಬಾರದೆಂದಿಲ್ಲ! ಎರಡರಲ್ಲಿ ಒಂದು ವಜ್ರವಾದರೂ ಮಾಲು ಅವನ ಜೇಬಿಗೇ ತಾನೆ? ಒಂದೊಮ್ಮೆ ಆತ ಸಾಚಾ ಆಗಿ ಒಂದು ವಜ್ರವೆಂದು ಹೇಳಿದರೂ ಕಷ್ಟವೇ! ಇಬ್ಬರಲ್ಲಿ ಒಬ್ಬರ ಹೆಣ ಯಾರಿಂದಲೂ ಬೀಳಬಹುದು.. ಇಲ್ಲಾ ಬದುಕು ಹೆಣಕ್ಕಿಂತ ಕಡೆಯಾಗಲೂ ಬಹುದು. ಹೀಗಾಗಿ ಮೊದಲ ಸಾಧ್ಯತೆಯೆಡೆ ಸಾಗುವುದು ಅವರಿಬ್ಬರಿಗೂ ಸರಿ ಬರಲಿಲ್ಲ.

ಇನ್ನು ಎರಡನೆಯ ಸಾಧ್ಯತೆ, ಎರಡೂ ಕಲ್ಲುಗಳನ್ನು ಪ್ರಾಣಿಗೋ, ಆಗದ ಹೋಗದ ಯಾರ ಕೈ, ಮೈ, ಕಾಲಿಗಾದರೂ, ಯಾವುದೀ ಮಾಯದಲ್ಲಿ ಗೀರಿಯೋ.. ಇಲ್ಲಾ ಅರೆದು ಕುಡಿಸಿಯೋ ನೋಡುವುದು. ಅದೂ ಕಷ್ಟವೇ.... ತುಸು ಪುಡಿಮಾಡಿದರೂ, ಅದು ವಜ್ರವೇ ಆಗಿಬಿಟ್ಟಲ್ಲಿ ಅಷ್ಟೇ ಚೂರು ಲುಕ್ಸಾನು ಆಗಿಬಿಡುವ ಭಯ! 

ಊಹೂಂ.. ಇವ್ಯಾವುದರ ಉಸಾಬರಿಯೂ ಬೇಡ... ಮಾರದಿದ್ದರೂ ವಜ್ರಕ್ಕೆ ಅದರದ್ದೇ ಬೆಲೆ ಇದ್ದೇ ಇರುವುದು.. ಸಧ್ಯ ತಮ ತಮಗೆ ಸಿಕ್ಕಿದ್ದು ವಜ್ರವೆಂದೇ ಬಗೆದು ಜೀವನ ಪೂರ್ತಿ ವಜ್ರದ ಮಾಲೀಕನಾಗಿ ಬದುಕಿ, ಕೊನೆಗೆ ವಜ್ರವಿರುವ ಸುಳಿಹೂ ಕೊಡದೇ ಸತ್ತುಹೋಗುವುದೆಂದು ನಿರ್ಧರಿಸಿದ ಅವರಿಬ್ಬರೂ ತಮ್ಮ ತಮ್ಮ ಪಿಠಾರಿಯನ್ನು ಮನೆಯ ಹಿತ್ತಲಲ್ಲಿ ಆಳಕ್ಕೆ ಅಗೆದು ಹೂತು ಹಾಕಿ ಬಿಟ್ಟರು.

----

ಹಾಗೆ ಹೂತು ಹಾಕುವಾಗಲೇ ಪೂರ್ತಿ ಎಚ್ಚರವಾದ ನನ್ನ ಕಣ್ಗಳು ಬಿಳಿ ಹರಳಿನ ಹುಡುಕಾಟದಲ್ಲಿ ತೊಡಗಿವೆ. ವಜ್ರಗಳಿಗಿಂತ ಬಿಳಿ ಕಲ್ಲುಗಳೇ ತುಂಬಾ ಲೇಸು.... ಯಾವ ಎಡರು ತೊಡರು, ಸಾಣೆ, ಸಾಕಣೆಯ ಕಷ್ಟಗಳಲಿಲ್ಲದೇ ಹಾಗೇ ಟೇಬಲಿನ ಮೇಲಿಟ್ಟುಕೊಂಡು ಸಪ್ತವರ್ಣಗಳ ಹಾಯಿಸಿಕೊಂಡು ಹಾಯಾಗಿರಬಹುದೆಂದು.

-ತೇಜಸ್ವಿನಿ

ಮಂಗಳವಾರ, ಸೆಪ್ಟೆಂಬರ್ 10, 2013

ಹಬ್ಬ ಮತ್ತು ವ್ರತದ ನಡುವಿನ ವ್ಯತ್ಯಾಸ.

ಹಬ್ಬಕ್ಕೂ ವ್ರತಕ್ಕೂ ವ್ಯತ್ಯಾಸವಿದೆ. ಹಬ್ಬ/ಉತ್ಸವ ಸಾಮೂಹಿಕ, ಸಾರ್ವಜನಿಕ ಆಚರಣೆಯಾಗಿದೆ. ವ್ರತ ವೈಯಕ್ತಿಕ/ಕೌಟುಂಬಿಕ... ಒಮ್ಮೊಮ್ಮೆ ಒಂದು ಸಮುದಾಯಕ್ಕೆ ಸೀಮಿತ.

ಗಣೇಶ ಚತುರ್ಥಿ ಮೂಲತಃ ಶ್ರೀ ಸಿದ್ಧಿವಿನಾಯಕ ವ್ರತವೇ. ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಸಂಘಟನೆಗಾಗಿ, ಎಲ್ಲಾ ಸಮುದಾಯಗಳ ಏಕತೆಗಾಗಿ ಇದಕ್ಕೆ ಒಂದು ಉತ್ಸವದ ಮೆರುಗುಕೊಟ್ಟು ಆಚರಿಸಲು ಕರೆಕೊಟ್ಟಿದ್ದರು. ಅದು ಈಗ ಹಬ್ಬವಾಗಿ, ಸಾಂಸ್ಕೃತಿಕ ಉತ್ಸವವಾಗಿ ಬೆಳೆದಿದೆ.

ನವರಾತ್ರಿ, ಗಣೇಶ ಚತುರ್ಥಿ ಇವೆಲ್ಲಾ ವ್ರತಗಳೇ. ನಾಗರ ಪಂಚಮಿಯೂ ಒಂದು ವ್ರತವೇ. ಆದರೆ ನವರಾತ್ರಿ, ನಾಗರ ಪಂಚಮಿ ಈಗ ಹಬ್ಬಗಳಾಗಿ ಆಚರಿಸಲ್ಪಡುತ್ತಿವೆ. ಕೃಷ್ಣಾಷ್ಟಮಿ, ರಾಮ ನವಮಿ - ಇವು ಕೃಷ್ಣ, ರಾಮರ ಹುಟ್ಟು ಹಬ್ಬಗಳಾಗಿವೆ. ಆದರೆ ಕೆಲವು ಮತಗಳಲ್ಲಿ ಕೃಷ್ಣ ಜಯಂತಿಯನ್ನೂ ವ್ರತವನ್ನಾಗಿ ಆಚರಿಸುತ್ತಾರೆ.

ನಿಜಾರ್ಥದಲ್ಲಿ ಉತ್ಸವವೆಂದು ಪರಿಗಣಿಸಲ್ಪಡುವುದು ದೀಪಾವಳಿಯೇ. ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಒಯ್ಯುವ ಬೆಳಕಿನಹಬ್ಬ ನಿಜವಾಗಿಯೂ ಒಂದು ಸಾಮೂಹಿಕ, ಸಾರ್ವತ್ರಿಕ ಉತ್ಸವ/ಹಬ್ಬವಾಗಿದೆ.

ಆಚರಣೆ ಹಬ್ಬದ ರೀತಿಯಲ್ಲಾಗಿರಲಿ ಅಥವಾ ವ್ರತವಾಗಿರಲಿ... ಅದರ ಆಚರಣೆಯಿಂದ, ಅವರವರು ಆಚರಿಸುವ ರೀತಿ-ನೀತಿಯಿಂದ, ಆಚರಿಸುವವರಿಗೆ ಮತ್ತು ಆ ಆಚರಣೆಯನ್ನು ಹತ್ತಿರದಿಂದಲೋ ಇಲ್ಲಾ ದೂರ ನಿಂತೋ ನೋಡುವವರಿಗೆ ಸಂತಸ, ಸಮಾಧಾನ, ನೆಮ್ಮದಿ ತರುವಂಥದ್ದಾಗಿರಬೇಕು ಅಷ್ಟೇ. ಇಷ್ಟಕ್ಕೂ ಯಾವುದೇ ಹಬ್ಬಗಳಿರಲಿ, ವ್ರತಗಳಿರಲಿ, ಯಾವುದೇ ಆಚರಣೆ, ಸಂಪ್ರದಾಯಗಳಿರಲಿ... ಎಲ್ಲವೂ ಅವರವರ ಭಾವಕ್ಕೆ ಭಕುತಿಗೆ.  ಸಾಮಾಜಿಕ ಏಕತೆಯ ಜೊತೆ, ಸಹಿಷ್ಣುತೆಯೊಂದಿದ್ದರೆ ಎಲ್ಲವೂ ರಮಣೀಯ, ಆದರಣೀಯವೇ. "ಯದ್ಭಾವಂ ತದ್ಭವತಿ" :)

ನನಗಂತೂ "ತತ್ತ್ವಮಸಿ" ಇಷ್ಟ. ಸಮುದ್ರದಲ್ಲಿ ತೆರೆಗಳಿರುವಂತೇ... ಪರಮಾತ್ಮನಲ್ಲಿ ಆತ್ಮ.... ನನ್ನ ಆತ್ಮದಲ್ಲಿ ‘ಅವನ’ ಒಂದು ಅಂಶ.... :)

-ತೇಜಸ್ವಿನಿ.

ಭಾನುವಾರ, ಸೆಪ್ಟೆಂಬರ್ 8, 2013

"ಮದ್ರಾಸ್ ಕೆಫೆ" : ಒಳಗೊಂದು ಕಿರುನೋಟ

Courtesy : http://www.tehelka.com
ಸಾಮಾಜಿಕ ಜಾಲಗಳಲ್ಲಿ ಈ ಚಲನಚಿತ್ರದ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆಯನ್ನು ನೋಡಿದ ಮೇಲೆ ನೋಡಲೇಬೇಕೆಂಬ ತುಡಿತ ಜಾಸ್ತಿಯಾಗಿ "ಮದ್ರಾಸ್ ಕೆಫೆ" ರುಚಿಯನ್ನು ನೋಡಿದ್ದಾಯಿತು. ಕೆಫೆಯ ಪರಿಮಳ ಎಷ್ಟು ಗಾಢವಾಗಿ ಬಂತೋ, ನೋಡಿದ ಮೇಲೆ ಅದರ ಸ್ವಾದ ಓದಿದಷ್ಟು /ಕೇಳಿದಷ್ಟು ಅದ್ಭುತ ಎಂದೆನಿಸಲಿಲ್ಲ! ಏನೋ ಸಂಭವಿಸಲಿದೆ... ಅದೇನೆಂದು ಗೊತ್ತಿದ್ದರೂ, ಅದಕ್ಕಿಂತಲೂ ಭಿನ್ನವಾದದ್ದನ್ನು ಕಥೆ ಹೇಳುತ್ತದೆ ಎಂದು ನಿರೀಕ್ಷಿಸುತ್ತಲೆ, ನಿರೀಕ್ಷೆ ಹುಟ್ಟಿಸುತ್ತಲೇ ಸಾಗುವ ಚಿತ್ರ, ಕೊನೆಯಲ್ಲಿ ನಿರಾಸೆಹುಟ್ಟಿಸಿಬಿಟ್ಟಿತು. ಬಹುಶಃ ಪ್ರತಿಕ್ರಿಯೆಗಳಿಂದ ಒಂದು ಕಲ್ಪನೆಕಟ್ಟಿಕೊಂಡು ಅತಿ ನಿರೀಕ್ಷೆಯಿಂದ ನೊಡಿದ್ದಕ್ಕೇ ಇದ್ದಿರಲೂಬಹುದು.... ತುಸು ಭ್ರಮನಿರಸನವಾಯಿತು. 

 ಆದರೆ ಇದು ಖಂಡಿತ ಒಂದು ಉತ್ತಮ ಚಿತ್ರವೆನ್ನುವುದರಲ್ಲಿ ಸಂಶಯವಿಲ್ಲ. ಕಥೆಯನ್ನು ಕಟ್ಟಿಕೊಟ್ಟ ರೀತಿ, ಓಘ, ಬೆಳವಾಡಿಯವರ ಅದ್ಭುತ ನಟನೆ, ಹಾಗೇ ಜಾನ್ ಅಬ್ರಹಾಂ‌ನಲ್ಲಿನೊಳಗಿನ ನಟನೊಬ್ಬನ ಕಿರು ಪರಿಚಯ, ಆ ಸಮಯದಲ್ಲಿ ಏನೇನು ಒಳಸಂಚುಗಳೆಲ್ಲಾ ಆಗಿದ್ದಿರಬಹುದು ಎಂಬ ಒಂದು ಸ್ಥೂಲ ಚಿತ್ರಣವನ್ನು ಪ್ರೇಕ್ಷರಮುಂದೆ ತಂದ ರೀತಿ, ಎಲ್ಲವೂ ಇಷ್ಟವಾಯಿತು. ಆದರೆ ಕೆಲವು ಅಸಂಗತಗಳು, ಅಸಹಜ ಸಂಗತಿಗಳೂ ಕಂಡುಬಂದವು. (ಇದು ನನಗೆ ಅನಿಸಿದ್ದು.. ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ!). 
ಧನಾತ್ಮಕ ಹಾಗೂ ಋಣಾತ್ಮಕ ಎರಡೂ ಅಂಶಗಳನ್ನು ಹೀಗೇ ಪಟ್ಟಿಮಾಡಬಹುದು.

ಧನಾತ್ಮಕ ಅಂಶಗಳು.... 

೧. ಈ ಮೊದಲೇ ಇಂತಹ ಕಥೆಗಳು ಬಂದಿದ್ದರೂ ನಿರೂಪಿಸಿದ ಶೈಲಿಯಲ್ಲಿ ವಿಭಿನ್ನತೆಯಿದೆ. ಖಳನಾಯಕ ಪಾತ್ರದಲ್ಲಿ ಬಹುಬೇಗ ಮಿಂಚಲು ಅವಕಾಶವಿದ್ದರೂ, ಅತಿಯಾಗದಂತೇ ಆ ಪಾತ್ರವನ್ನು ಸಂಯಮದಿಂದ ನಿರೂಪಿಸುವುದೂ ಅತ್ಯವಶ್ಯಕವಾಗುತ್ತದೆ. ಅದನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಪ್ರಕಾಶ್ ಬೆಳವಾಡಿಯವರು. ಅವರ ನಟನೆ ನಿಜಕ್ಕೂ ತುಂಬಾ ಮೆಚ್ಚುಗೆಯಾಯಿತು. ಫೋರ್ಸ್, ಪಾಪ್, ಝಿಂದಾ, ಟ್ಯಾಕ್ಸಿ ನಂ. ೯೨೧೧, ಕರಮ್ ಮುಂತಾದ ಚಲನಚಿತ್ರಗಳಲ್ಲಿ ಜಾನ್ ಅಬ್ರಾಹಂದು ಗಂಭೀರ ಪಾತ್ರವೇ. ಪ್ರಸ್ತುತ ಚಿತ್ರದಲ್ಲೂ ಆತ ಅದೇ ರೀತಿ ನಟಿಸಿದ್ದಾನೆ. ಅಂತಹ ಹೊಸತನವಿಲ್ಲದಿದ್ದರೂ, ನಟನಾಗುವ ಪ್ರಕ್ರಿಯೆಯಲ್ಲಿ ಪಳಗುತ್ತಿರುವುದು ಕಂಡುಬರುತ್ತದೆ.

೨. ಕಥಾವಸ್ತುವಿಗೊಂದು ಉತ್ತಮ ವೇಗವಿದೆ... ಅಲ್ಲಲ್ಲಿ ಸ್ವಲ್ಪ ಹಿನ್ನಡೆ ಆದಂತೆ ಭಾಸವಾದರೂ, ಕುತೂಹಲ ಉಳಿಸಿಕೊಳ್ಳುತ್ತದೆ. ಹಿನ್ನೆಲೆ ಸಂಗೀತ ಪೂರಕವಾಗಿದೆ. ಕೋಡ್ ವರ್ಡ್‌ಗಳು ಹೇಗೆಲ್ಲಾ ಇರುತ್ತವೆ.. ಎಷ್ಟು ಗೂಢವಾಗಿರುತ್ತವೆ ಎನ್ನುವುದನ್ನು ನೋಡಿದಾಗ ಅಚ್ಚರಿ ಮೂಡುತ್ತದೆ.

೩. ಅಂತರ್ಯುದ್ಧದ ಕರಾಳ ಮುಖ, ಸಾವು, ನೋವು, ಕೊಳಕು ರಾಜಕೀಯವನ್ನು ಕಣ್ಮುಂದೆ ಕಟ್ಟಿಕೊಟ್ಟ ರೀತಿ ಮನಮುಟ್ಟಿತು.

ಕೆಲವು ಅಸಂಗತ, ಅಸಹಜ ಅಂಶಗಳು....

೧. ಕಥೆಯನ್ನು ನೋಡುತ್ತಿದ್ದಂತೇ, ಇಂತಹ ಕಥೆಯನ್ನೇ ಆಧರಿಸಿ ಬಂದಿದ್ದ ಕನ್ನಡ ಚಲನಚಿತ್ರವಾದ "ಸಯನೈಡ್" ಮತ್ತು ಸಂತೋಷ್ ಶಿವನ್ ನಿರ್ದೇಶನದ ತಮಿಳ್ ಚಲನಚಿತ್ರ "ದಿ ಟೆರರಿಸ್ಟ್" ತುಂಬಾ ನೆನಪಿಗೆ ಬಂತು. ನಿಜ ಹೇಳಬೇಕೆಂದರೆ ನನಗೆ ಸಯನೈಡ್ ಮತ್ತು ದಿ ಟೆರರಿಸ್ಟ್ ಚಿತ್ರಗಳ ನಿರ್ದೇಶನ, ಚಿತ್ರಣ ಮತ್ತೂ ಹೆಚ್ಚು ಗಟ್ಟಿಯಾಗಿದೆ ಎಂದೆನಿಸುತ್ತಾ ಹೋಯಿತು. (ಈ ಎರಡೂ ಚಿತ್ರಗಳನ್ನು ನಾನು ಎರಡೆರಡು ಬಾರಿ ನೋಡಿದ್ದೇನೆ.). ಸರಿ ಸುಮಾರು ಒಂದೇ ರೀತಿಯ ಕಥಾವಸ್ತುವನ್ನೊಳಗೊಂಡಿರುವ ಈ ಮೂರೂ ಚಲನಚಿತ್ರಗಳು (ಮದ್ರಾಸ್ ಕೆಫೆ, ದಿ ಟೆರರಿಸ್ಟ್ ಮತ್ತು ಸಯನೈಡ್) ಅಪ್ರಯತ್ನವಾಗಿ ಹೋಲಿಕೆಗೆ ತೊಡಗಿಬಿಡುತ್ತವೆ. 
Courtesy : www.filmlinks4u.net 

೨. ಮದ್ರಾಸ್ ಕೆಫೆಯ ಆದಿ - ಅಂತ್ಯ ಎರಡೂ ಅಷ್ಟು ರುಚಿಸಲಿಲ್ಲ. ಕನ್ಫೆಶನ್ ಮಾಡಿಕೊಳ್ಳುವ ಉದ್ದೇಶವೇ ಕೊನೆಯಲ್ಲಿ ಸ್ಪಷ್ಟವಾಗುವುದಿಲ್ಲ. ಮೊದಲು ಕನ್ಫೆಶನ್ ಮಾಡಿಕೊಳ್ಳುವುದನ್ನು ನೋಡಿದಾಗ ಒಂದೋ ಈತನಿಂದಲೇ ಏನೋ ದೊಡ್ಡ ಅವಘಡ ಸಂಭವಿಸಿದೆ, ಏನೋ ಮಾಡಬಾರದ್ದನ್ನೇ ಮಾಡಿದ್ದಾನೇನೋ ಎಂದೆನಿಸಿ, ಕೊನೆಯಲ್ಲಿ ಏನೂ ಇಲ್ಲ ಅನ್ನೋ ಭಾವ ಮೂಡಿಸಿತು. ಪತ್ನಿ ತೀರಿಹೋದಗಲೂ ಅಲ್ಕೋಹಾಲಿಕ್ ಆಗದ ನಾಯಕ, ಹೋರಾಡಿ, ಗುದ್ದಾಡಿ ಪ್ರಯತ್ನಿಸಿದರೂ ಮಾಜಿ ಪ್ರಧಾನಿಯೋರ್ವರನ್ನು ಉಳಿಸಲಾಗಲಿಲ್ಲವೆಂದೇ ತನ್ನ ಕೆಲಸ, ಬದುಕು ಎಲ್ಲಾ ಬಿಟ್ಟು, ಕುಡಿತಕ್ಕೆ ದಾಸನಾಗಿ ಕೊನೆಯಲ್ಲಿ ಅಪರಾಧಿಯಂತೇ ಕನ್ಫೆಶನ್‌ಗೆ ಬಂದಿದ್ದು ಯಾಕೋ ಅಸಹಜ ಅನ್ನಿಸಿತು. ನಾಯಕನ ನಿರ್ಲಕ್ಷ್ಯ, ಅಸಡ್ಡೆತನದಿಂದಲೇ ಕೊಲೆಯಾಗಿದ್ದರೆ ಬೇರೆ ಮಾತು. ಅವನ ಕೈಮೀರಿದ ಪರಿಸ್ಥಿತಿಯಲ್ಲಾದ ದುರ್ಘಟನೆಯ ಪೂರ್ಣ ಜವಾಬ್ದಾರಿ ತಾನೆಂದು ಆತ ಭಾವಿಸಿದ್ದು ತುಸು ಅತಿರೇಕ ಎಂದೆನಿಸಿತು. 

೩. ಓರ್ವ ವಿದೇಶಿ ಪತ್ರಕರ್ತಳಿಗೆ ಸಿಗುವ ಮಾಹಿತಿಗಳು ಭಾರತದ ‘ರಾ’(ಇಂಟೆಲಿಜೆನ್ಸ್) ಸಂಸ್ಥೆಗೆ ಸಿಗದಿರುವುದು, ತುಂಬಾ ಪ್ರಮುಖ ಮಾಹಿತಿಗಳನ್ನೆಲ್ಲಾ ನಾಯಕ ಆ ಪತ್ರಕರ್ತೆಯಿಂದಲೇ ಪಡೆದುಕೊಳ್ಳಲು ಪರದಾಡುವುದು.. .ಇವೆಲ್ಲಾ ದೇಶದ ಆಂತರಿಕ ಒಳಗುಗುಟ್ಟುಗಳು ಬೇಹುಗಾರರಿಗೆ ಸಿಗದೇ ಪತ್ರಕರ್ತರಿಗೇ ಮೊದಲು ಸಿಗುತ್ತದೆ ಅನ್ನೋ ಸಂದೇಶವನ್ನು ಕೊಡುವಂತಿದೆಯೇನೋ ಅನ್ನಿಸಿತು... ಅಸಂಗತವೆನಿಸಿತು. (ಇದು ಸತ್ಯವೇ ಇರಬಹುದು... ಅದನ್ನೇ ಚಿತ್ರವೂ ತೋರಿಸಿರಬಹುದು. ಸತ್ಯವೇ ಆಗಿದ್ದರೆ ಮಾತ್ರ.....!!) 

"ದಿ ಟೆರರಿಸ್ಟ್" ಚಲನಚಿತ್ರದಲ್ಲಿ ಖಳನಾಯಕಿ ಮತ್ತು ನಾಯಕಿ ಎರಡೂ ಪಾತ್ರವನ್ನು ಅತ್ಯದ್ಭುತವಾಗಿ  ನಟಿಸಿದ್ದಾರೆ ನಟಿ ಆಯೇಷಾ ಧಾರ್ಕರ್. ಆದಿಯಲ್ಲಿ ಕಾರಣಾಂತರಗಳಿಂದ ಕೊಲೆಗಡುಕಿಯಾದವಳು, ಮಾನವ ಬಾಂಬ್ ಆಗಿ ಅತಿ ಗಣ್ಯ ವ್ಯಕ್ತಿಯೋರ್ವರನ್ನು ಕೊಲ್ಲುವ ಸಂಚು ರೂಪಿಸಿ ಬರುವವಳು, ಅಂತ್ಯದಲ್ಲಿ ಜೀವವೊಂದನ್ನು ಉಳಿಸುವ ಹೆಣ್ಣಾಗಿ ಇನ್ನು ಎ.ಎಂ.ಆರ್ ರಮೇಶ್ ನಿರ್ದೇಶನದ ‘ಸಯನೈಡ್’ ಚಲನಚಿತ್ರವನ್ನು ನೋಡದವರೇ ಕಡಿಮೆ ಎಂದೆನ್ನಬಹುದು! ರವಿ ಕಾಳೆ, ತಾರಾ, ಅವಿನಾಶ್, ರಂಗಾಯಣ ರಘು ಇವರುಗಳ ಅಭಿನಯವನ್ನು ಮರೆಯಲೇ ಸಾಧ್ಯವಿಲ್ಲ. 
Courtesy : www.imdb.com
ಪರಿವರ್ತನೆಗೊಳ್ಳುವ(ಆಕೆ ಉಳಿಸುವ ಆ ಜೀವ ಯಾವುದೆನ್ನುವುದೇ ಚಿತ್ರದ ಹೈಲೈಟ್!!) ಅವಳ ಪಾತ್ರ ಚಿತ್ರಣವೇ ಮನಸೂರೆಗೊಳ್ಳುತ್ತದೆ. ಇಲ್ಲೂ ಅದೇ ಮಾಜಿ ಪ್ರಧಾನಿಯನ್ನು ಕೊಲ್ಲುವ ಸಂಚು ಕಥೆಯ ಮೂಲ ವಸ್ತುವಾಗಿರುವುದರಿಂದ ಹೋಲಿಕೆ ಬೇಡ ಬೇಡವೆಂದರೂ, ಕಥಾವಸ್ತು ಒಂದೇ ರೀತಿಯಿದ್ದಾಗ ಚಲನಚಿತ್ರಗಳು, ಪಾತ್ರವರ್ಗಗಳು ತಾವೇ ಕಣ್ಮುಂದೆ ಬಂದು ಹೋಲಿಸಿಕೊಳ್ಳಲು ತೊಡಗಿಬಿಡುತ್ತವೆ.
ಈ ಎರಡೂ ಚಿತ್ರಗಳ ಲಿಂಕ್‌ಗಳು ಈ ಕೆಳಗಿನಂತಿವೆ. ಆಸಕ್ತರು ನೋಡಬಹುದು.



ಒಟ್ಟಿನಲ್ಲಿ ಮದ್ರಾಸ್ ಕೆಫೆ ಅತ್ಯುತ್ತಮವಲ್ಲದಿದ್ದರೂ, ಒಂದು ನೈಜ ಕಥಾವಸ್ತುವನ್ನೊಳ, ಸದಭಿರುಚಿಯ ಚಿತ್ರ. ಒಮ್ಮೆ ನೋಡಲು ಖಂಡಿತ ಅಡ್ಡಿಯಿಲ್ಲ... ಅತಿ ನಿರೀಕ್ಷೆ ಬೇಡ ಎನ್ನುವುದು ನನ್ನ ಅಭಿಮತ.

-ತೇಜಸ್ವಿನಿ.

ಬುಧವಾರ, ಆಗಸ್ಟ್ 14, 2013

ಹೀಗೊಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯಯೋಧನ ಕಥೆ...

ನನ್ನಜ್ಜನ ಹೆಸರು ಶ್ರೀಯುತ ನಾರಾಯಣ ಭಟ್. ಮೂಲ ಹೋಬಳಿ ಗ್ರಾಮದ, ನೆಲಮಾವು ಎಂಬ ಊರು. ಹುಟ್ಟಿದ್ದು ೧೪-೦೩-೧೯೦೧ರಂದು. ಶತಾಯುಷಿಯಾಗಿದ್ದ ಇವರು ಗತಿಸಿದ್ದು ೨೮-೦೪-೨೦೦೩ರಂದು. ಬಾಲ್ಯದಿಂದಲೂ ನಾನು ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಕಥೆಗಳನ್ನು ಅಜ್ಜನಿಂದ ಕೇಳುತ್ತಾ ಬೆಳೆದವಳು. ನನ್ನಜ್ಜ ಉಗ್ರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಕ್ರಾಂತಿಕರಿ ಯೋಧರಾಗಿದ್ದ ಅವರು, ಸೌಮ್ಯ ಕಾಂಗ್ರೆಸ್ಸ್ ಅನ್ನು ಅಷ್ಟು ಮೆಚ್ಚುತ್ತಿರಲಿಲ್ಲ. ಗಾಂಧೀಜಿಯವರ ಕರೆಗೆ ಸ್ಪಂದಿಸಿ ಸಮರಕ್ಕೆ ಧುಮುಕಿದ್ದರೂ, ಅವರ ಆದರ್ಶ ಭಗತ್ ಸಿಂಗ್ ಆಗಿದ್ದ. ೧೯೩೦-೪೦ರ ಆಸುಪಾಸಿರಬೇಕು.... ಅಜ್ಜನ ಮೇಲೆ ಕಣ್ಣಿಟ್ಟಿದ್ದ ಬ್ರಿಟೀಷರು, ಅರೆಸ್ಟ್ ಮಾಡಿ ಮಹಾರಾಷ್ಟ್ರದ ಬಿಸಾಪುರ ಜೈಲಿನಲ್ಲಿ ೧ ವರುಷದವರೆಗೆ ಕಠಿಣ ಶಿಕ್ಷೆಯಲ್ಲಿಟ್ಟಿದ್ದರು. ಆ ಸಮಯದಲ್ಲಿ ಅವರು ತಿಂದ ಪೆಟ್ಟು, ನೋವು, ಯಾತನೆಯನ್ನು ಕೇಳುವಾಗ, ನನಗೇ ಅಪಾರ ನೋವು, ಆಕ್ರೋಶವುಂಟಾಗುತ್ತಿತ್ತು. ಆದರೆ ಅವರ ಮುಖದಲ್ಲೋ ಅಪೂರ್ವ ಕಳೆ, ಹುಮ್ಮಸ್ಸು. 

ಹೊರ ಬಂದ ಮೇಲೂ ಸುಮ್ಮನಿರದ ಅಜ್ಜ, ಹೋರಾಟವನ್ನು ಮುಂದುವರಿಸಿದ್ದರಂತೆ. ಬ್ರಿಟೀಷರ, ಅವರ ಅನುಯಾಯಿಗಳ ಕಣ್ತಪ್ಪಿಸಿ, ಆದಷ್ಟು ತಲೆಮರೆಸಿಕೊಂಡೇ ಮತ್ತೊಂದು ವರುಷ ಕಳೆದಿದ್ದರಂತೆ. ಮನೆಯ ಹಂಚು ತೆಗೆದು, ಒಳಬರುವುದು, ಅಂತೆಯೇ ಹೊರ ಹೋಗುವುದು ಅವರ ಪರಿಪಾಠವಾಗಿ ಹೋಗಿತ್ತು.. ಕಾರಣ, ಬ್ರಿಟೀಷರ ಅನುಯಾಯಿಗಳು ಮನೆಯ ಆಸು ಪಾಸಿನಲ್ಲೇ ಗಸ್ತು ತಿರುಗುತ್ತಿದ್ದರಂತೆ. ಆದರೂ, ಅವರ ಮೇಲಿನ ವೈಷಮ್ಯದಿಂದಲೋ, ಇಲ್ಲಾ ಬ್ರಿಟೀಷರ ಆದೇಶದಿಂದಲೋ, ಅವರ ಮನೆ, ಆಸ್ತಿ, ಗದ್ದೆ, ತೋಟ ಎಲ್ಲವನ್ನೂ ಸುಟ್ಟು ಹಾಕಿದ್ದರಂತೆ. ಕುಗ್ಗದೇ, ಸೋಲದೇ, ಹಠದಿಂದ ಹೊಸತಾಗಿ ಜೀವನ ಆರಂಭಿಸಿ, ಕಲ್ಲೇ ತುಂಬಿದ್ದ ನೆಲವನ್ನು ಕೊಂಡು, ಗುಡ್ಡ ಕಡಿದು, ಕೃಷಿ ಮಾಡಿ ಮೇಲೆ ಬಂದವರು. ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಬೇಕೆಂದು ಹೇಳುತ್ತಿದ್ದರು. ಅಂತೆಯೇ ಅವರು ನಡೆದುಕೊಂಡಿದ್ದರು ಕೂಡ. ಅವರ ಪತ್ನಿ, ನನ್ನಜ್ಜಿ ಶ್ರೀಮತಿ ಸುಬ್ಬಲಕ್ಷ್ಮೀ ಅವರೂ ನನ್ನಜ್ಜನ ಪಥವನ್ನೇ ಹಿಂಬಾಲಿಸಿದವರು.... ಮಹಿಳೆಯರ ಜೊತೆ ಸೇರಿ ಹೋರಾಟ ಮಾಡಿ ಜೈಲುವಾಸ ಅನುಭವಿಸಿದ್ದರು.

ಭಗತ್ ಸಿಂಗ್, ಸುಖದೇವ, ರಾಜಗುರು - ಈ ಮೂವರನ್ನು ಅದೆಷ್ಟು ಹಚ್ಚಿಕೊಂಡಿದ್ದರೆಂದರೆ, ಅವರನ್ನು ಅನ್ಯಾಯವಾಗಿ ಗಲ್ಲಿಗೇರಿಸಿದ ನೋವು, ಸಿಟ್ಟು ಕೊನೆಯವರೆಗೂ ಅವರ ಮಾತಲ್ಲಿ, ಮುಖದಲ್ಲಿ ಸ್ಪಷ್ಟವಾಗಿ ಕಾಣಬಹುದಿತ್ತು. ಈ ಮೂವರನ್ನು ಗಲ್ಲಿಗೇರಿಸಿದಾಗ, ಇವರ ಮೇಲೆ ಲಾವಣಿಗಳನ್ನು ಕಟ್ಟಿ ಊರಲ್ಲಿ ಹಾಡುತ್ತಿದ್ದರಂತೆ. ಊರಿಂದೂರಿಗೆ ಹಾಡುತ್ತಾ ಜನರನ್ನು ಎಬ್ಬಿಸುವ, ದೇಶಕ್ಕಾಗಿ ಹೋರಾಡುಲು ಕರೆಕೊಡುವ ಕೆಲಸವನ್ನೂ ಮಾಡುತ್ತಿದ್ದರಂತೆ. ಅಂತಹ ಒಂದು ಲಾವಣಿಯನ್ನು ಅಜ್ಜ ಆಗಾಗ ಹೇಳುತ್ತಿದ್ದರು. ಹಾಡಿಕೊಳ್ಳುತ್ತಲೇ, ನೆನಪಿನ ಲೋಕಕ್ಕೆ ತೆರಳುತ್ತಿದ್ದರು. ನಡುವೆ ಗದ್ಗದಿತರಾಗಿ ಅವರ ಕಣ್ಗಳು ಒದ್ದೆಯಾಗುತ್ತಿದ್ದವು. ಇದನ್ನೆಲ್ಲಾ ನಾನೇ ಸ್ವತಃ ನೋಡಿದ್ದೇನೆ. ಅವರು ದುಃಖಿತರಾಗಿದ್ದಾಗೆಲ್ಲಾ ಅತೀವ ನೋವು ನನಗೂ ಆಗುತ್ತಿತ್ತು. ಈಗಲೂ ಈ ಹಾಡನ್ನು ನೆನಪಿಸಿಕೊಂಡಾಗೆಲ್ಲಾ... ಹಾಡುತ್ತಾ ಮೈಮರೆತು, ಸಂಕಟಪಡುತ್ತಿದ್ದ ಅಜ್ಜನ ನೆನಪಾಗುತ್ತದೆ.. ನಗು ನಗುತ್ತಾ ಪ್ರಾಣತೆತ್ತ ಆ ಮೂವರು ಮಹಾತ್ಮರೂ ನೆನಪಾಗುತ್ತಾರೆ. ಓರ್ವ ಅಪ್ಪಟ ದೇಶಭಕ್ತ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗಳು ನಾನೆನ್ನಲು ನನಗೆ ಅಪಾರ ಹೆಮ್ಮೆಯಿದೆ. 

ಆ ಲಾವಣಿ ಹೀಗಿದೆ... (ಇನ್ನೂ ಅದೆಷ್ಟೋ ಸೊಲ್ಲುಗಳಿದ್ದವು... ನನ್ನಲ್ಲಿ ಉಳಿದುಕೊಂಡಿದ್ದು ಇವಿಷ್ಟೇ :( )

ಭಗತ್ ಸಿಂಗ, ಸುಖದೇವ,
ರಾಜಗುರು ಮೂವರ ಮರಣ
ಹೇಳಲಾರೆನು ಮಾ ರಮಣ
ಹಿಂದುಸ್ಥಾನದ ಮಾರಣ ದಿನ
ಗೋಳಾಡಿತು ಹಿಂದುಸ್ಥಾನ
ಆಳರಸರ ದಬ್ಬಾಳಿಕೆಯೊಳಗೆ
ಪ್ರಾಣಾಘಾತವೆಷ್ಟಣ್ಣ

ಎಲ್ಲಿ ನೋಡಿದಲ್ಲಿ ನಾಡನೊಳಗ 
ಚಳವಳಿ ಸಂಪ್ರದಾನ
ತಾರೀಕು ಇಪ್ಪತ್ತಮೂರಣ್ಣ
ಗಲ್ಲಾಯಿತು ಸೋಮವಾರ ದಿನ ||ಭಗತ್ ಸಿಂಗ, ಸುಖದೇವ,||


ಹೋದರು ಮೂವರು ಭಾರತ ವೀರರು
ಸ್ವತಂತ್ರದಾ ದೇವಿಯನ 
ಅಗಲಿ ದುಃಖಕ್ಕೀಡು ಮಾಡಿದರು
ಈ ನಮ್ಮ ದೇಶವನ  ||ಭಗತ್ ಸಿಂಗ, ಸುಖದೇವ,||

-----
೧೯೪೭ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಅಜ್ಜನಿಗೆ ಅದೆಷ್ಟು ಸಂತಸವಾಗಿತ್ತೋ ಅಷ್ಟೇ ಆಘಾತ ದೇಶ ಇಬ್ಭಾಗವಾದಾಗ ಉಂಟಾಗಿತ್ತಂತೆ. ಅದಕ್ಕಾಗಿ ಅವರು ಎಂದೂ ಗಾಂಧೀಜಿ, ನೆಹರೂರನ್ನು ಕ್ಷಮಿಸಲೇ ಇಲ್ಲಾ! ತದನಂತರ ಮತ್ತೊಂದು ಆಘಾತವಾಗಿದ್ದು ಎಮರ್ಜೆನ್ಸಿ ಘೋಷಣೆಯಾದಾಗ. ಯಾವ ದೇಶದ, ಜನತೆಯ, ಬಿಡುಗಡೆಗಾಗಿ ಎಲ್ಲರೂ ಹೋರಾಡಿ ಮಡಿದಿದ್ದರೋ, ಆ ದೇಶವನ್ನು, ಅಲ್ಲಿಯ ಪ್ರಜೆಗಳನ್ನು ಮತ್ತೆ ದಬ್ಬಾಳಿಕೆಗೆ ಒಳಪಡಿಸಿದ್ದು ಅಕ್ಷಮ್ಯವಾಗಿತ್ತು ಅವರಂತಹ ಹಿರಿಯರಿಗೆಲ್ಲಾ.

ಹಠ, ಛಲ, ಹೋರಾಟ, ಸ್ಥೈರ್ಯದ ಪ್ರತಿರೂಪವಾಗಿದ್ದರು ನನ್ನಜ್ಜ. ೧೦೦ ವರುಷಗಳಾಗಿದ್ದರೂ ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕೆನ್ನುವ ಹಠ. ಎಂತೆಂತಹ ಸಂಕಷ್ಟಗಳನ್ನು, ವಿರೋಧಗಳನ್ನು, ದಬ್ಬಾಳಿಕೆಗಳನ್ನು ಎದುರಿಸಿ, ಹೋರಾಡಿ, ಸಾಧಿಸಿ ತೋರಿದ ನನ್ನಜ್ಜ, ಹಾಗೂ ಅವರ ದಾರಿಯಲ್ಲೇ ನಡೆದು ಪ್ರಾಮಾಣಿಕತೆ, ಸತ್ಯ, ಸ್ಥೈರ್ಯ, ಧೈರ್ಯಕ್ಕಿರುವ ಶಕ್ತಿ ಎಂತಹುದು ಎಂದು ಮತ್ತೂ ಚೆನ್ನಾಗಿ ತೋರಿಸಿಕೊಟ್ಟ ಅವರ ಹಿರಿಯ ಮಗ ಹಾಗೂ ನನ್ನ ತಂದೆಯಾದ ಗೋಪಾಲಕೃಷ್ಣ ಭಟ್- ಇವರುಗಳು ನನ್ನಲ್ಲಿ ಪ್ರೇರಣೆ ತುಂಬಿದವರು. ನನ್ನ ಬದುಕಿನದ್ದುಕ್ಕೂ ಛಲಕ್ಕೆ, ಆದರ್ಶಕ್ಕೆ, ಸತ್ಯಕ್ಕೆ, ನ್ಯಾಯಯುತ ಹೋರಾಟಕ್ಕೆ ತಡವಾದರೂ ಗೆಲುವು ನಿಶ್ಚಿತ ಎಂದೂ ತೋರಿಸಿಕೊಟ್ಟು ಸ್ಫೂರ್ತಿ ತುಂಬಿದವರು.

ನನ್ನಜ್ಜನಂತಹ ಅದೆಷ್ಟೋ ದೇಶಪ್ರೇಮಿಗಳು, ತ್ಯಾಗಿಗಳು ಈ ದೇಶಕ್ಕಾಗಿ ಹೋರಾಡಿದ್ದಾರೆ, ವೀರ ಮರಣವನ್ನಪ್ಪಿದ್ದಾರೆ... ಅವರೆಲ್ಲರ ಹೋರಾಟದ, ತ್ಯಾಗದ ಫಲ ನಾವಿಂದು ಅನುಭವಿಸುತ್ತಿರುವೀ ಸ್ವಾತಂತ್ರ್ಯ! ಈ ದೇಶ ನಮಗೇನು ಕೊಡುತ್ತಿದೇ ಎನ್ನುವುದನ್ನು ಯೋಚಿಸಲೂ ಹೋಗ ಕೂಡದು. ಬದಲಿಗೆ ನಾವಿದಕ್ಕೆ ಏನು ಕೊಡುತ್ತಿದ್ದೇವೆ? ಎನ್ನುವುದನ್ನಷ್ಟೇ ಪ್ರಶ್ನಿಸಿಕೊಳ್ಳಬೇಕು. ಇಂದು ಅದೆಷ್ಟೋ ವೀರ ಸೈನಿಕರು ನಮ್ಮ ಸ್ವಾತಂತ್ರ್ಯದ ಉಳಿವಿಗಾಗಿ ಹೋರಾಡುತ್ತಿದ್ದಾರೆ... ವೀರಮರಣವನ್ನಪ್ಪುತ್ತಿದ್ದಾರೆ. ಅವರ ತ್ಯಾಗದ ಮುಂದೆ ಎಲ್ಲವೂ ಗೌಣ. ನಮ್ಮ ಪ್ರಾಣಕ್ಕಾಗಿ ತಮ್ಮ ಪ್ರಾಣ ಒತ್ತೆಯಿಟ್ಟಿರುವ ಎಲ್ಲಾ ವೀರಾ ಯೋಧರಿಗೂ ಶತ ಪ್ರಣಾಮ. ಇಂದು ಮತ್ತೆ ದೇಶ ಭಯೋತ್ಪಾದಕರ ಅತ್ಯಾಚಾರದಿಂದ ನಲುಗುತ್ತಿದೆ... ಇಬ್ಭಾಗವಾದ ಭಾಗವೇ ರಣಹದ್ದಾಗಿ ಇಂಚಿಂಚು ಇರಿದು ಕೊಲ್ಲ ಬರುತ್ತಿದೆ... ಇದನ್ನು ಹತ್ತಿಕ್ಕಲು ಇನ್ನೆಷ್ಟು ಬಲಿದಾನಗಳು ಆಗಬೇಕಿದೆಯೋ...??!!! ಮನಸ್ಸು ಪದೇ ಪದೇ ದಿನಕರ ದೇಸಾಯಿಯವರ ಈ ಕವಿತೆಯನ್ನೇ ನೆನಪಿಸಿಕೊಳ್ಳುತ್ತಿರುತ್ತದೆ.

"ಕರಿಯ ಕಲ್ಲುಗಳು ಕೂಡ ಕೂಡಿದವು ಗುಡಿಯ ಕಳಸಕಾಗಿ!
ನರನ ಹೃದಯಗಳು ಒಂದುಗೂಡವೇ ಮಾತೃಭೂಮಿಗಾಗಿ?"

ಜೈ ಹಿಂದ್. ಜೈ ಭಾರತ.

ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.


-ತೇಜಸ್ವಿನಿ.

ಶನಿವಾರ, ಆಗಸ್ಟ್ 3, 2013

ಶ್ರೀಯುತ ಟಿ.ಎನ್.ಎಸ್ ಅವರಲ್ಲೊಂದು ವಿನಮ್ರ ವಿನಂತಿ.

ಗೌರವಾನ್ವಿತ, ಆದರಣೀಯ ಶ್ರೀಯುತ ಟಿ.ಎನ್.ಸೀತಾರಾಮ್ ಅವರಿಗೆ,

ನನ್ನ ಹೆಸರು ತೇಜಸ್ವಿನಿ ಹೆಗಡೆ. ಮೊದಲಿನಿಂದಲೂ ನಿಮ್ಮ ಎಲ್ಲಾ ಧಾರಾವಾಹಿಗಳನ್ನೂ ತಪ್ಪದೇ ವೀಕ್ಷಿಸುತ್ತಾ ಬಂದವಳು ನಾನು. ನನ್ನ ಅಚ್ಚುಮೆಚ್ಚಿನ ಧಾರಾವಾಹಿಗಳೆಲ್ಲಾ ತಮ್ಮ ನಿರ್ದೇಶನದ್ದೇ ಎಂದರೆ ಅದರಲ್ಲೇನೂ ಉತ್ಪ್ರೇಕ್ಷೆಯಿಲ್ಲ. ನೀವು ಪಾತ್ರ ಚಿತ್ರಣವನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಡುವ ರೀತಿ.. ಅವುಗಳನ್ನು ಬೆಳೆಸುವ ರೀತಿ, ಸಂಭಾಷಣೆಗಳಲ್ಲಿನ ಚುರುಕುತನ, ನವೀನತೆ  ಅಷ್ಟೇ ಅಲ್ಲಾ ನಿಮ್ಮ ಧಾರಾವಾಹಿಗಳಲ್ಲಿ ಅಭಿನಯಿಸುವ ನಟ/ನಟಿಯರಿಂದ ನೀವು ಹೊರಹೊಮ್ಮಿಸುವ ನಟನಾಸಾಮರ್ಥ್ಯ, ಎಲ್ಲಕ್ಕಿಂತ ಮುಖ್ಯವಾಗಿ ಶೀರ್ಷಿಕೆ ಗೀತೆಗಳೊಳಗಿನ ಮಾಧುರ್ಯ, ಅರ್ಥವತ್ತಾದ ಸಾಹಿತ್ಯ... ಎಲ್ಲವೂ ನನಗೆ ಬಲು ಮೆಚ್ಚು. ಮನಃಪೂರ್ವಕವಾಗಿ ನಾನು ನಿಮ್ಮ ನಿರ್ದೇಶನದ ಧಾರಾವಾಹಿಗಳನ್ನು ಹೊಗಳಿದ್ದೇನೆ... ಮೆಚ್ಚಿದ್ದೇನೆ.
courtesy : http://www.in.com

ಆದರೆ...... ಅದ್ಯಾಕೋ ಎಂತೋ "ಮಹಾಪರ್ವ" ಧಾರಾವಾಹಿಯಲ್ಲಿನ "ಮಂದಾಕಿನಿ" ಪಾತ್ರ ಮಾತ್ರ ಯಾಕೋ ಸರಿಯಾದ ಸಂದೇಶವನ್ನು ಸಮಾಜಕ್ಕೆ, ಅಂಗವಿಕಲರಿಗೆ ನೀಡುತ್ತಿಲ್ಲ ಎನ್ನುವ ಮನದಾಳದ ಅನಿಸಿಕೆ ನನ್ನದು. ನಾನೂ ಓರ್ವ ಹುಟ್ಟಾ ಅಂಗವಿಕಲೆಯಾಗಿದ್ದು, ವ್ಹೀಲ್ ಚೇರ್ ಉಪಯೋಗಿಸುತ್ತಿರುವ.. ಅದಿಲ್ಲದೇ ಹೊರ/ಹೊಳ ಜಗತ್ತನ್ನು ಸಂಚರಿಸಲಾಗದ, ಆದರೆ ಅದೊಂದು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲೂ ಇತರ ಸಾಮಾನ್ಯರಂತೇ ಬದುಕನ್ನು  ಸಂಪೂರ್ಣವಾಗಿ ಆಸ್ವಾದಿಸುತ್ತಿರುವ ವ್ಯಕ್ತಿ. ಆರು ವರುಷದ ಮಗಳ ತಾಯಿ. ಹಾಗಾಗಿ ವ್ಹೀಲ್‌ಚೇರ್ ಬೌಂಡೆಡ್ ವ್ಯಕ್ತಿಗಳ ಸಮಸ್ಯೆ, ಅವರ ಹೋರಾಟ, ಅವರ ಸವಾಲುಗಳು ಹೇಗೆ ಚೆನ್ನಾಗಿ ಗೊತ್ತೋ ಹಾಗೇ ಅವರಿಂದ ಎಲ್ಲಾ ರೀತಿಯ ಮನೆಗೆಲಸಗಳು, ಉನ್ನತ ವಿದ್ಯಾಭ್ಯಾಸಗಳು, ಹೊರ-ಒಳ ಜಗತ್ತಿನ ಕೆಲಸಕಾರ್ಯಗಳು "ಮನಸ್ಸು ಇದ್ದರೆ.. ಸದೃಢವಾಗಿದ್ದರೆ" ಸಾಧ್ಯ ಅನ್ನೋದನ್ನು ನಂಬಿದವಳು.. ಅಂತೆಯೇ ನಡೆದವಳು.. ಇನ್ನೂ ನಡೆಯುತ್ತಿರುವವಳು. ಬಟ್ಟೆ, ಪಾತ್ರೆ, ಅಡುಗೆ, ಮನೆಯವರ ಬೇಕು ಬೇಡಗಳು, ಎಲ್ಲಾ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸಿದವಳು.. ಈಗಲೂ ನಿರ್ವಹಿಸುತ್ತಿರುವವಳು. ಇದನ್ನೆಲ್ಲಾ ನಾನು ನನ್ನ ಮೆರೆಸುಲೋಸುಗ ಖಂಡಿತ ಹೇಳುತ್ತಿಲ್ಲ. ನನಗೆ ಯಾರ ಅನುಕಂಪ ಅಥವಾ ಅತಿ ಹೊಗಳಿಕೆಯಂತೂ ಖಂಡಿತ ಬೇಕಾಗಿಲ್ಲ. 

ಮೊದಲಿನಿಂದಲೂ ನನಗೆ ಸರಿ ಕಾಣದ್ದು ಮಂದಾಕಿನ ಪಾತ್ರ ಚಿತ್ರಣ. ಓರ್ವ ಅಂಗವೈಕಲ್ಯವುಂಟಾದ ವ್ಯಕ್ತಿಯ ಚಿತ್ರಣ ನಿಮ್ಮಿಂದ ಯಾವ ರೀತಿ ಬರುವುದೆಂದು ಬಹು ಉತ್ಸುಕಳಾಗಿದ್ದೆ ಮೊದಮೊದಲು. ಆದರೆ ಕ್ರಮೇಣ ಅಸಹನೆ ತುಂಬತೊಡಗಿತು. ಮಂದಾಕಿನಿ ಸದಾ ನಿಸ್ಸಾಯಕಳಾಅಗಿ ಕೂತಿರೋದು.... "ನನ್ನಿಂದಂತೂ ಯಾವ ಕೆಲಸವೂ ಮಾಡಿಕೊಡಾಲು ಆಗುತ್ತಿಲ್ಲ...." ಅನ್ನೋ ಮಾತನ್ನೇ ಪದೇ ಪದೇ ಆಗಾಗ ಹೇಳುವುದು... ಅಲ್ಲದೇ, ಅದರಲ್ಲೂ ನಿನ್ನೆಯ ಅಂದರೆ ೦೨-೦೮-೨೦೧೩ ಶುಕ್ರವಾರದ ಕಂತಿನಲ್ಲಿ ಒಂದು ತಪ್ಪು ಸಂದೇಶವನ್ನು ಸಾರುವ ಮಾತನ್ನು ಅವಳ ಸ್ವಂತ ಮಗಳಾದ, ಅತೀವ ಸೂಕ್ಷ್ಮ ಮನಸ್ಸಿನ ಪರಿಣಿತಳ ಬಾಯಿಯಿಂದಲೇ ಹೇಳಿಸಿದ್ದು ಮಾತ್ರ ಒಪ್ಪಿಕೊಳ್ಳಲೇ ಆಗಲಿಲ್ಲ.

"ನೀನು ಯಾವಾಗಲೂ ವ್ಹೀಲ್‌ಚೇರನಲ್ಲೇ ಕೂತಿರ್ತಿಯಲ್ಲಾ.. ಅದ್ಕೇ ನಿಂಗೇ ಅಂತ ಮಾಯಾಮೃಗ ಸಿ.ಡಿ. ತಂದಿದ್ದೀನಿ.." ಅಂತ ಮಗಳು ತಾಯಲ್ಲಿ ಹೇಳಿದ್ದು ನೋಡಿ ಮೊದಲು ಸಿಟ್ಟು ಬಂದರೂ ಮರುಕ್ಷಣ ನಗುವೂ ಬಂತು. ಇಲ್ಲಿ "ನೀನು ಸದಾ ವ್ಹೀಲ್‍ಚೇರ್‌ನಲ್ಲೇ ಕೂತಿರ್ತೀಯಲ್ಲಾ ಅದ್ಕೇ ತಂದೇ" ಅನ್ನೋ ಒಂದು ಪುಟ್ಟ ವಾಕ್ಯದ ಅವಶ್ಯಕತೆ ಇರಲಿಲ್ಲ. ನಿಜ, ಸಾಮಾನ್ಯವಾಗಿ ಸಮಾಜದ, ಜನರ ಎಲ್ಲರ ವಿಚಾರಧಾರೆಯೂ ಇದೇ ಆಗಿದೆ. ಸಮಾಜ ಅಂಗವಿಕಲರು, ವ್ಹೀಲ್‌ಚೇರ್‌ನಲ್ಲಿ ಇರುವವರ ಪ್ರತಿ ಅಪಾರ, ಅನವಶ್ಯಕ ಅನುಕಂಪವನ್ನಷ್ಟೇ ತೋರುತ್ತಿರುತ್ತದೆ. ಅವರಿಂದ ಏನೇನು ಸಾಧ್ಯ ಅನ್ನೋದನ್ನು ಯೋಚಿಸುವುದು ತೀರಾ ಕಡಿಮೆ ಜನ. ಇಲ್ಲಿಯೂ ಅದೇ ಆಗುತ್ತಿರುವುದು. ಮಂದಾಕಿನ ವ್ಹೀಲ್‌ಚೇರ್‌ನಲ್ಲೇ ಕುಳಿತು ಎಷ್ಟೆಲ್ಲಾ ಕೆಲಗಳನ್ನು ಮಾಡಬಹುದು ಯೋಚಿಸಿ? ತರಕಾರಿ ಹೆಚ್ಚೋದು, ಅಡಿಗೆ ಮಾಡೋಡು (ಅಡಿಗೆ ಕಟ್ಟೆಯನ್ನು ತುಸು ತಗ್ಗಿಸಿ.. ಕುಳಿತಲ್ಲೇ...) ಪುಸ್ತಕ ಓದುವ ಹವ್ಯಾಸವಿರೋದನ್ನು ಹೇಳಿದ್ದೀರಿ.. ಬರೆಯೋದು, ಅದರಲ್ಲೇ ಪ್ರಗತಿ ಸಾಧಿಸೋದು... ಗಿಡಗಳಿಗೆ ನೀರುಣಿಸೋದು... ಎಲ್ಲವೂ ಸಾಧ್ಯ. ಹೀಗಿರೋವಾಗ ಅದರಲ್ಲೇ ಕುಳಿತು ಬೋರಾಗೊತ್ತೆ ಹಾಗಾಗಿ ಸಿ.ಡಿ. ಅಂತ ಮಗಳು ಅನ್ನೋದು.. ನನ್ನಿಂದ ಎನೂ ಆಗೊಲ್ಲಾ ಅನ್ನೋ ರೀತಿಯ ಮಾತುಗಳನ್ನು ಮಂದಾಕಿನಿ ಆಡೋದು ತುಂಬಾ ಅಸಹನೆ ತುಂಬುತ್ತದೆ. ಇದು ಇತರೆಲ್ಲಾ ನೋಡುಗರಿಗೆ ಏನೂ ಅನ್ನಿಸದೇ ಇರಬಹುದು.. ಸಾಮಾನ್ಯದಲ್ಲಿ ಸಾಮಾನ್ಯವೆಂದೇ ಹೇಳಬಹುದು ಆದರೆ ಇದರಿಂದ ಸಮಾಜಕ್ಕೆ, ಅಂಗವಿಕಲರಿಗೆ ತಪ್ಪು ಸಂದೇಶ ಹೋಗುವುದು ಎನ್ನುವುದು ನನ್ನ ಅಭಿಪ್ರಾಯ.

ನಿಮ್ಮ ಧಾರಾವಾಹಿ ಎಂದರೆ ಅದಕ್ಕೆ ಅಪಾರ ಪ್ರೇಕ್ಷಕ ವರ್ಗವಿದೆ. ನಿರೀಕ್ಷೆಗಳಿವೆ. ಮೆಚ್ಚುಗೆ ಇದೆ. ಅಭಿಮಾನಿಗಳಿದ್ದಾರೆ (ನನ್ನನ್ನೂ ಸೇರಿಸಿ). ಹೀಗಿರುವಾಗ ಅಂಗವಿಕಲರೆಂದರೆ ನಿಸ್ಸಹಾಯಕರು, ಕೆಲಸ ಮಾಡಲಾಗದವರು.. ಕುಳಿತಲ್ಲೇ ಕುಳಿತು ಬೋರ್ ಹೊಡಿಯುತ್ತಿರುವವರೆಂದು ಜನಸಾಮಾನ್ಯರಿಗೂ... ಅಂತೆಯೇ "ನನ್ನಿಂದ ಏನೂ ಆಗೊಲ್ಲಾ ನಿಜ.. ನನಗೆ ಎಲ್ಲವುದಕ್ಕೂ ಇತರರ ಸಹಾಯ ಅನಿವಾರ್ಯ... ಛೇ.." ಅನ್ನೋ ಸ್ವ-ಅನುಕಂಪ ಪಡೋ ಅಂಗವಿಕಲರಿಗೆ ಪುಷ್ಟಿಕೊಡೋ ರೀತಿ ಇದೆ ಎಂದೆನಿಸಿತು. (ನನಗೆ ಖಂಡಿತ ಅನುಕಂಪ ಮೂಡಿದ್ದು ಹೌದು.. ನನ್ನ ಮೇಲೆ ಅಲ್ಲವೇ ಅಲ್ಲಾ.. ಈ ಆಲೋಚನೆಯ ಮೇಲಷ್ಟೇ.).

ನಿಮ್ಮ ಧಾರಾವಾಹಿಗಳ ಕಟ್ಟಾ ಅಭಿಮಾನಿಯಾಗಿ, ಅಂಗವಿಕಲರ ಸಹಚಾರಿಣಿಯಾಗಿ.... ಮಹಾಪರ್ವವನ್ನು ತಪ್ಪದೇ ವೀಕ್ಷಿಸುತ್ತಿರುವ ಓರ್ವ ವೀಕ್ಷಗಳಾಗಿ, ದಯವಿಟ್ಟು ಇನ್ನಾದರೂ "ಅಂಗವೈಕಲ್ಯತೆ"ಯನ್ನು ಪ್ರೊಜೆಕ್ಟ್ ಮಾಡುತ್ತಿರುವ ಈ ರೀತಿಯ ಋಣಾತ್ಮಕ ಚಿತ್ರಣವನ್ನು ಬಿಟ್ಟು, ಧನಾತ್ಮಕತೆಯನ್ನು ಹೆಚ್ಚು ಕಾಣಿಸುವ ಚಿತ್ರಣ ಮೂಡಿಬರಲೆಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ನೀವು ಆ ಪಾತ್ರವನ್ನು ಅಸಾಮಾನ್ಯಳಂತೇ ಬಿಂಬಿಸಬೇಕೆಂದು ಖಂಡಿತ ಕೇಳುತ್ತಿಲ್ಲ.... ಅತಿ ಯಾವತ್ತೂ ಸಲ್ಲ ಕೂಡ. ಸಾಮಾನ್ಯವನ್ನೇ ತೋರಿಸಿ.. ಏನೆಲ್ಲಾ ಸಾಮಾನ್ಯ, ಸಹಜ, ಸಾಧ್ಯವೆನ್ನುವುದನ್ನಷ್ಟೇ ತೋರಿಸಿ.... ಸಾಮಾನ್ಯರಿಗೆ, ನನ್ನಂಥಹ ಇತರರಿಗೆ. ಆದರೆ ಅಸಹಾಯಕತೆಯ, ಅನುಕಂಪದ ನೆರಳೂ ಸೋಕದಿರಲಿ. ನಿಮ್ಮಂತ ಉತ್ತಮ ನಿರ್ದೇಶಕರು, ಸಹೃದಯ ವ್ಯಕ್ತಿಗಳು ನನ್ನ ಮಾತಿನೊಳಗಿರುವ ನೈಜ ಕಾಳಜಿ, ವಿನಂತಿ, ಕಳಕಳಿಯನ್ನು ಯಾವುದೇ/ಯಾರದೇ ತಪ್ಪು ಗ್ರಹಿಕೆಗೆ ಎಡೆಗೊಡದೇ ತಿಳಿದುಕೊಳ್ಳುತ್ತೀರೆಂದು ನಂಬಿದ್ದೇನೆ.... ಹಾಗೇ ಆಶಿಸುತ್ತೇನೆ. :)

ವಂದನೆಗಳು.

ಆದರಾಭಿಮಾನಗಳೊಂದಿಗೆ,
ತೇಜಸ್ವಿನಿ ರಾಮಕೃಷ್ಣ ಹೆಗಡೆ.

ಸೋಮವಾರ, ಜುಲೈ 22, 2013

ಬಿಚ್ಚಿಡುವೆ ಓ ಗುರುವೆ ಅಂತರಾತ್ಮ....

ಗುರು ನೆನೆಯುವ ನಾ ನಿನ್ನ ನಾಮ
ಇರಲೆನ್ನ ಮೇಲೆ ನಿನ್ನ ಪ್ರೇಮ 

ಬಾಲ್ಯದಲ್ಲಿ ನನ್ನನ್ನು ಹುರಿದುಂಬಿಸಿ... ಸ್ಟೇಜ್ ಹತ್ತಿಸಿ, ಎಲ್ಲರಂತೇ ಎಲ್ಲಾ  ಚಟುವಟಿಕೆಗಳಲ್ಲೂ ಭಾಗವಹಿಸುವಂತೇ ಪ್ರೇರೇಪಿಸಿದ... ಈಕೆ ನರ್ತಿಸಬಲ್ಲಳೇ? ಎಂದು ಅನುಮಾನಿಸಿ ಹಿಂದೇಟು ಹಾಕಿದ ಗುರುಗಳಿಗೂ ಗುರುವಾಗಿ ನಿಂತು ಸ್ವತಃ ತಾನೇ ಹಾಡು ಕಟ್ಟಿ, ಸಂಗೀತ ಸಂಯೋಜಿಸಿ ನನಗೆ ಬೇಕಾದ ರೀತಿಯಲ್ಲೇ, ಕುಳಿತಲ್ಲೇ ಹೇಗೆ ಕೇವಲ ಕೈಗಳನ್ನಷ್ಟೇ ಉಪಯೋಗಿಸಿಯೂ, ಹಾವ ಭಾವಗಳ ಮೂಲಕವೂ ನೃತ್ಯವನ್ನು ಅಭಿವ್ಯಕ್ತಿಸಬಹುದೆಂದು ಎಲ್ಲರಿಗೂ (ನನಗೂ) ತೋರಿಸಿಕೊಟ್ಟ ನನ್ನ ಮೊತ್ತ ಮೊದಲ ಗುರು "ತಾಯಿ"ಗೆ (ಶ್ರೀಮತಿ ಜಯಲಕ್ಷ್ಮೀ ಭಟ್)....

Appa, Ammana naduve... :)
ನನ್ನೊಳಗೇ ಹುದುಗಿ ಅಲ್ಲೇ ಮಣ್ಣಾಗಬಹುದಿದ್ದ ಎಲ್ಲಾ ರೀತಿಯ ಪ್ರತಿಭೆಗಳನ್ನೂ ಆಯ್ದು ಹೊರ ತೆಗೆದು... ಅದಕ್ಕೆ ಸರಿಯಾದ ರೂಪು ರೇಶೆ ಕೊಡುತ್ತಾ..... ಮುಂದೆ ವಿಜ್ಞಾನ ನನ್ನ ಇಚ್ಛೆಯ ವಿಷಯವೆಂದು ಹೇಳಿದಾಗ, ಅಲ್ಲೂ ಅಷ್ಟೇ ಇವಳಿಂದ ವಿಜ್ಞಾನ ಹಾಗೂ ಅಲ್ಲಿ ಒದಗುವ ಪ್ರಾಕ್ಟಿಕಲ್ಸ್‌ಗಳನ್ನು ಮಾಡೋದು ಬಲು ಕಷ್ಟ ಎಂದವರಿಗೆಲ್ಲಾ ಸಹೃದಯ ಗುರುವಾಗಿ ಮಾದರಿಯನ್ನು ತೋರಿ, ನಾನು ಅತ್ಯುತ್ತಮ ಅಂಕದಿಂದ ಮೇಲೇರಲು ಕಾರಣರಾದ, ಸ್ವತಃ ಓರ್ವ ಯಶಸ್ವಿ, ಮಾದರಿ ಹಾಗೂ ಜನಪ್ರಿಯ ಪ್ರಾಧ್ಯಾಪಕರಾಗಿದ್ದು, ನಮಗೂ ಅತ್ಯುತ್ತಮ ಬದುಕಿನ ಪಾಠವನ್ನು ಬೋಧಿಸಿದ ನನ್ನ ಎರಡನೆಯ ಗುರು ನನ್ನ "ತಂದೆ"ಗೆ (ಡಾ.ಜಿ.ಎನ್.ಭಟ್)......  


ಒಂದನೆ ತರೆಗತಿಯಲ್ಲಿ ನನ್ನನ್ನು ಬಲುವಾಗಿ ಪ್ರೀತಿಸಿ ಎಲ್ಲವನ್ನೂ ಅರಿತು ಪ್ರೋತ್ಸಾಹಿಸಿ ನನ್ನ ತಾಯಿಗೆ ಬೆಂಬಲವಾಗಿ ನಿಂತ ನನ್ನ ಕ್ಲಾಸ್ ಟೀಚರ್ ಶ್ರೀಮತಿ "ಲಿಂಗು ಟೀಚರ್"ಗೆ,

ಹೈಸ್ಕೂಲ್‌ನಲ್ಲಿ ಎಲ್ಲೋ ಗೀಚಿ ಅಪ್ಪನಿಗಷ್ಟೇ ತೋರಿಸಿ ಸುಮ್ಮನಾಗಿದ್ದ ನನ್ನ ಕವಿತೆಗಳನ್ನೆಲ್ಲಾ ಹೊರತೆಗೆದು ಓದಿ ತಿದ್ದಿ, ಹತ್ತನೆಯ ತರಗತಿಯಲ್ಲೇ ಮೊದಲ ಕವನಸಂಕಲನ ಪ್ರಕಟಿಸುವಂತೇ ಪ್ರೋತ್ಸಾಹಿಸಿ ಪ್ರೀತಿಯಿಂದ ಮುನ್ನುಡಿಯನ್ನೂ ಬರೆದ ನನ್ನ ಕನ್ನಡ ಪ್ರಾಧ್ಯಾಪಕರೂ ಅತ್ಯುತ್ತಮ ಲೇಖಕರೂ ಆಗಿರುವ ಶ್ರೀಯುತ "ಸುಮುಖಾನಂದ ಜಲವಳ್ಳಿ"ಯವರಿಗೆ....

ಕಾಲೇಜಿನಲ್ಲಿ ಕೆಮಿಸ್ಟ್ರಿ ಎಂದರೆ ಯಾಕಿಷ್ಟು ಮಿಸ್ಟ್ರಿಯಪ್ಪಾ ಎಂದು ತಲೆಬಿಸಿಮಾಡಿಕೊಂಡಾಗ, ಫಾರ್ಮುಲಾಗಳೆಲ್ಲಾ ಹೇಗೆ ಬದುಕೊಳಗೆ ಹಾಸುಹೊಕ್ಕಾಗಿವೆ ಎಂದು ಸರಳವಾಗಿ, ಸುಲಭವಾಗಿ ನನಗೆ ಪರಿಚಯಿಸಿ ಮುಂದೆ ಅದೇ ನನ್ನ ಅಚ್ಚುಮೆಚ್ಚಿನ ವಿಷಯವಾಗಲು ಕಾರಣರಾದ ಶ್ರೀಯುತ ಪ್ರೊಫೆಸರ್ "ಡಾ. ಬಿ.ಎಸ್.ಮೂಡಿತ್ತಾಯ" ಅವರಿಗೆ....

ಬದುಕು ಹೇಗೆ? ಎನು? ಎತ್ತ? ನಾನೆಷ್ಟು ನಿಮಿತ್ತ? ತಿಳಿದಷ್ಟೂ ತಿಳಿಯಲು ಸಾಕಷ್ಟಿದೆ.... ಪ್ರತಿ ದಿವಸವೂ ವಿನೂತನವೇ.... ನಗು ನಗುತ್ತಾ ಸಮಸ್ಯೆಯನ್ನು ಒಮ್ಮೆ ಎದುರಿಸತೊಡಗಿದರೆ ಅದೂ ನಮ್ಮನ್ನು ಮುಂದೆ ಬಿಟ್ಟು ಹಿಂಬಾಲಕನಾಗುತ್ತದೆ ಎನ್ನುವ ಸತ್ಯದರ್ಶನ ಮಾಡಿಸಿದ- ಗೀತೆಯ ಕೃಷ್ಣ, ರಾಮಕೃಷ್ಣ ಪರಮಹಂಸರು, ಶಂಕರಾಚಾರ್ಯರು - ಇಂತಹ ಪರಮಗುರುಗಳ ಪದತಲಕ್ಕೆ.....

ಹತ್ತು ಹಲವು ರೀತಿಯಲ್ಲಿ ನನಗೆ ಮಾದರಿಯಾದ, ಅನುಭವ ಕಲಿಸಿದ, ಪಕ್ವವಾಗುವ ಪ್ರಕ್ರಿಯೆಯಲ್ಲಿ ಸಹಕರಿಸಿದ ಎಲ್ಲಾ ಸ್ನೇಹಿತವರ್ಗಕ್ಕೆ, ಆತ್ಮೀಯರಿಗೆ... -

ಇವರೆಲ್ಲರಿಗೂ ಗುರು ಪೂರ್ಣಿಮೆಯ ಸಹಸ್ರ ನಮನಗಳು.
ಮನಃಪೂರ್ವಕವಾಗಿ ಎದೆದುಂಬಿ ತಲೆಬಾಗುವೆ.

-ತೇಜಸ್ವಿನಿ ಹೆಗಡೆ.

ಗುರುವಾರ, ಜೂನ್ 27, 2013

ಎಲ್ಲಾ ಪ್ರಶ್ನೆಗಳಿಗೂ ಉತ್ತರವಾಗಿರುವ ‘ಉತ್ತರಾಖಂಡ’

ಕೆಲವು ದಿವಸಗಳಿಂದೆ ಹೀಗೇ ಆಗುತ್ತಿದೆ! ಆದಷ್ಟು ಕಡಿಮೆ ನ್ಯೂಸ್ ನೋಡುತ್ತಿದ್ದ ನಾನು ಪದೇ ಪದೇ ವಿವಿಧ ನ್ಯೂಸ್ ಚಾನಲ್‌ಗಳನ್ನು ತುಸು ಹೊತ್ತಾದರೂ ತಡಕಾಡುವ.. ಎಡತಾಕುವ ಹಪಹಪಿಗೆ ಎಳೆಯಲ್ಪುಡುತ್ತಿದ್ದೇನೆ. ಇದಕ್ಕುತ್ತರ "ಉತ್ತರಾಖಂಡ"ದಲ್ಲಿ ನಡೆದ ಮಹಾನ್‌ ಪ್ರಳಯ :( ದಿನೇ ದಿನೇ ಸಾವು ನೋವುಗಳ, ದರೋಡೆ, ಅತ್ಯಾಚಾರಗಳ ವಿವಿಧ ರೀತಿಯ ಸತ್ಯ-ಅಸತ್ಯ ಸುದ್ದಿಗಳು ಬಿತ್ತರಗೊಳ್ಳುವುದು ನೋಡಿ.... ಮನಸ್ಸೊಳಗೆ ಸುನಾಮಿಯ ನಂತರದ ಮೌನ! ನೋವಿನ ಮೇಲೆ ಬರೆ ಎಂಬಂತೇ ಸ್ವಾರ್ಥಪೂರಿತ, ಕಣ್ಣಲ್ಲಿ ನೀರು ಬಿಡಿ, ರಕ್ತವೂ ಇಲ್ಲದ ಕೆಲವು ಕೊಳಕು ರಾಜಕೀಯ ಧುರೀಣರ(?!) ಅಮಾನವೀಯ ನಡೆ-ನುಡಿಗಳು! ಅಪ್ಪ ಸದಾ ಹೇಳುತ್ತಿರುತ್ತಾರೆ.. ಮನುಷ್ಯ ಕೆಟ್ಟವನಿರಬಹುದು ಆದರೆ ಮಾನವತೆಯಲ್ಲಾ ಎಂದು. ಅದು ನಿಜ... ಅಲ್ಲಿ ನಡೆಸುತ್ತಿರುವ ದುರಾಚಾರಿಗಳಲ್ಲಿ ಮನುಷ್ಯತ್ವವಿಲ್ಲ... ಹಾಗಾಗೇ ರಾಕ್ಷಸರಾಗಿದ್ದಾರೆ ಅಷ್ಟೇ! ಎಂದು ಸಮಾಧಾನಪಟ್ಟುಕೊಂಡು ಮನುಷ್ಯಳಾಗೇ ಇರುವಂತೆ ಮಾಡೆನ್ನ ತಂದೆ ಎಂದು ಬೇಡುತ್ತಿರುತ್ತೇನೆ. 
Courtesy: http://vbnewsonline.com

ಅಲ್ಲಿಗೆ ಹೋಗಿ ಸಾಯೋ ಕರ್ಮ ಯಾಕೆ ಬೇಕಿತ್ತು? ಇಲ್ಲಿರುವ ದೇವರು ದೆವ್ವಗಳೇ?  ನಮ್ಮೊಳಗಿರುವ ದೇವ ಸಾಕಾಗನೇ? ಇತ್ಯಾದಿ ಪ್ರಶ್ನೆಗಳನ್ನು ಕೇಳಿದಾಗ ಮಾತ್ರ ಮೈಯುರಿದು ಬಿಡುತ್ತದೆ! ಆದರೆ ಅದೂ ಕ್ಷಣಿಕವೇ. ಕಾರಣ, ಅವರವರ ತಿಳಿವು-ಹರಿವು ಅವರವರದ್ದು ಎಂದು ಸಮಾಧಾನಗೊಳ್ಳುತ್ತೇನೆ. ಸ್ವತಃ ನಾನು ಯಾವ ದೇವನನ್ನೂ ಗುಡಿ  ಗೋಪುರದಲ್ಲಿ ಅಸಿದವಳಲ್ಲ.... ಜಾತ್ರೆ, ಮಹಾಪೂಜೆ, ಮಹಾಯಾಗ ಇವೆಲ್ಲಾ ನಾನಿದ್ದಲ್ಲೇ ಎಂದೇ ನಂಬಿರುವವಳು. ಪ್ರಸಿದ್ಧ ದೇವಸ್ಥಾನ, ಅಲ್ಲಿ ನೆರವ ಜನಸೋತಮ ಎಲ್ಲವೂ ನನ್ನಿಂದ ಬಹು ದೂರ. ಅಲ್ಲಿಗೆ ಹೋದರೆ ತಲೆನೋವು ಹೆಚ್ಚಾಗಿ, ಇರುವ ದೇವನೂ ಮಾಯವಾಗುವುದರಿಂದ ಭೇಟಿಕೊಡುವುದೇ ಇಲ್ಲಾ. ಕಾಡಿನ ಮಧ್ಯ ಇರುವ ಪುಟ್ಟ ಗುಡಿ, ಜನ ಸೇರಿ ಗೌಜಿಯಾಗದ ಸಾಧಾರಣ ದೇವಸ್ಥಾನ - ಇವುಗಳಿಗೆ ಎಲ್ಲಾದರೂ ಎಂದಾದರೂ ಹೀಗೇ ಭೇಟಿ ಕೊಡುತ್ತಿರುತ್ತೇನೆ ಅಷ್ಟೇ! ನನ್ನ ಮನೆಯ ಪುಟ್ಟ ಪೂಜಾಕೋಣೆಯೊಳಗಿರುವ ಪುಟ್ಟ ನಂದಾದೀಪದಲ್ಲೇ ಎಲ್ಲವೂ  ನನಗೆ ದರ್ಶಿತವಾಗುವುದು. ಆದರೆ ಅದು ನನ್ನ ದೇವನ ನಾನು ಕಂಡು ಕೊಂಡು ತೃಪ್ತಳಾಗೋ ನನ್ನ ಭಾವ...ನನ್ನ  ಭಕ್ತಿ! ಆದರೆ ಇದೇ ಎಲ್ಲರಲ್ಲೂ.. ಎಲ್ಲದರಲ್ಲೂ ಕಾಣಬೇಕೆನ್ನುವುದನ್ನು ನಾನು ಖಂಡಿತ ಇಪ್ಪುವುದಿಲ್ಲ. 

ಮುಸ್ಲಿಮ್ ಬಾಂಧವರಿಗೆ ಹೇಗೆ ಮೆಕ್ಕಾ/ಮದೀನ ಪವಿತ್ರವೂ.... ಅಲ್ಲಿಗೆ ಸಾಗರೋಪಾದಿಯಲ್ಲಿ ಸಾಗಿ ಏನೇ ಸಾವು-ನೋವು ತೊಂದರೆ ಆದರೂ ತಮ್ಮ ದೇವನನ್ನು ಕಂಡುಕೊಂಡ, ತೃಪ್ತಿ ಪಡೆಯುತ್ತಾರೋ... ಕ್ರಿಶ್ಚನ್ ಬಾಂಧವರಿಗೆ  ವೆಟಿಕನ್ ಹೇಗೋ.. ಹಾಗೇ ಬೇರೆ ಬೇರೆ ಜಾತಿ-ಧರ್ಮದವರ ಭಕ್ತಿ, ಭಾವ-ಅದಕ್ಕಾಗಿ ಅವರು ನಂಬುವ ತಾಣ, ಎಲ್ಲವೂ ಭಿನ್ನ. ಸಹೃದಯತೆಯ, ಮಾನವೀಯತೆಯ ಪರಿಧಿಯೊಳಗಿದ್ದರೆ ಎಲ್ಲಾ ಭಿನ್ನತೆಯೂ ಸಹನೀಯ... ಸುಂದರ. 

ಹೀಗಿರುವಾಗ ಭಕ್ತಾದಿಗಳು ಅನಾದಿಕಾಲದಿಂದಲೂ ನಂಬಿಕೊಂಡು ಬಂದ ತಮ್ಮ ತಮ್ಮ ಭಕ್ತಿಯ ಮೇಲೆ, ಅವರವರ ಭಾವವ ನಂಬಿ  ಚಾರ್‌ಧಾಮ್  ಯಾತ್ರೆ ಕೈಗೊಳ್ಳುತ್ತಿದ್ದಾರೆ. ಮಾನವ ನಿರ್ಮಿತ ಕಟ್ಟಡಗಳು ನದಿ ಪಾತ್ರಕ್ಕೆ ಅಡ್ಡವಾಗಿ, ಅರಣ್ಯ ಕಡಿತದ ದುಷ್ಪರಣಾಮದಿಂದ ಇಂದು ಇಂತಹ ದೊಡ್ಡ ದುರಂತ ನಮ್ಮ ಮುಂದಿದೆ  ಎನ್ನುತ್ತದೆ ವಿಜ್ಞಾನ. ಇದು ಸತ್ಯಕ್ಕೆ ಸತ್ಯವೂ ಕೂಡ. ಮುಂದಾದರೂ ಎಚ್ಚೆತ್ತ ಸರಕಾರ (ಅದು ಯಾವುದೇ ರಾಜ್ಯದ್ದಿರಲಿ....) ಪ್ರಜೆಗಳ, ತಮ್ಮ ನಾಡಿನ, ಎಲ್ಲಾ ಸಕಲ ಜೀವಿಗಳ ಹಿತ ರಕ್ಷಣೆಯನ್ನು ಚಿಂತಿಸಿ ನಿರ್ಮಾಣ ಮಾಡಬೇಕು. ಪುನರ್ನಿರ್ಮಾಣದಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಲೇಬೇಕು. ಅದ ಬಿಟ್ಟು  ಇದ್ದಲ್ಲೇ ಶಿವನ ಕಂಡರೆ ಆಗದೆ? ಎಂದು ಪ್ರಶ್ನಿಸುವುದು ಯಾಕೋ ಮಾನನೀಯವೆನಿಸುತ್ತಿಲ್ಲ. ಊಟ ಮಾಡಲು ನೆಂಟರ ಮನೆಗೆ ಹೋದರೂ ಅಪಘಾತವಾಗಬಹುದು. ಆಗ ಮನೆಯಲ್ಲೇ ತಿಂದು ಬಿದ್ದಿರಬಾರದೆ? ಎಂದು ಕೇಳಿದರೆ ಹೇಗಿನಿಸುವುದೋ ಹಾಗೇ ಅನಿಸುವುದು ನನಗೂ!

ಸಧ್ಯಕ್ಕೆ ಮಂದಿರ ನಿರ್ಮಾಣ, ಪೂಜಾ ವಿಧಿ-ವಿಧಾನ ಇವೆಲ್ಲವುಗಳಿಗಿಂತ ಬಹು ಮುಖ್ಯ ಅಲ್ಲಿರುವ ಮನುಷ್ಯರ ಹಾಗೂ ಮನುಷ್ಯತ್ವದ ಕಾಪಾಡುವಿಕೆ. ಸಾಯುವುದು-ಬದುಕುವುದು ಅನಿಯಂತ್ರಿತ. ಪ್ಲೇನ್ ಕ್ರಾಶ್, ಹಡಗು ದುರಂತ, ಬಸ್, ಕಾರು, ರೈಲು ದುರಂತದಲ್ಲಿ ವಿಶ್ವದಾದ್ಯಂತ ಪ್ರತಿ ದಿವಸ ಸಾವಿರಾರು ಜನ ಸಾಯುತ್ತಲೇ ಇರುತ್ತಾರೆ. ಅದಕ್ಕೆ  ಪ್ರಮುಖ ಕಾರಣ ಪತ್ತೆ ಹಚ್ಚಿ ಸಾವು-ನೋವು ಹೆಚ್ಚಾಗದಂತೆ ಎಚ್ಚರವಹಿಸುವುದು ನಿಜ ಧರ್ಮ. ಅದು ಬಿಟ್ಟು ಎಲ್ಲಿ ಹೋದ ನೀವು ನಂಬಿರುವ ನಿಮ್ಮ ದೇವರು? ಧರ್ಮ? ಕಾಪಾಡಲು  ಬಂದನೆ? ಎಂದು ಕಟಕಿ ವ್ಯಂಗ್ಯವಾಡುವುದೂ ಒಂದು ತರಹದ ವಿಕೃತಿಯೇ ಎಂದೆನಿಸುತ್ತದೆ. ಅವರವರ ನಂಬಿದ ಅವರವ ದೈವ (ಅವರವರ ಭಾವಕ್ಕೆ ಬಿಟ್ಟ....) ಅವರನ್ನು ಕಾಪಾಡಿಯೇ ಕಾಪಾಡುತ್ತದೆ. ಅದು ನಮ್ಮೊಳಗಿನ ಧೀಃಶಕ್ತಿ, ಆತ್ಮ ಶಕ್ತಿ, ವಿಶ್ವಾಸದೊಳಗೆ ಬೆಸೆದು ಉಸಿರಾಗಿ ಉಸಿರಾಡುತ್ತಲೇ ಇರುತ್ತದೆ. ಕೆಲವರಿಗೆ ಮನೆಯಲ್ಲೇ ದೊರಕಿದರೆ, ಕೆಲವರಿಗೆ ಮಂದಿರ/ಮಸ್ಜಿದ್/ಚರ್ಚ್/ಗುರುದ್ವಾರಗಳಲ್ಲಿ ಸಿಗುತ್ತದೆ ಅಷ್ಟೇ. ಕೊಲ್ಲುವ ದೆವ್ವದ ಜೊತೆಗೇ... ಅದಕ್ಕಿಂತ ಹೆಚ್ಚಿನ ಶಕ್ತಿಶಾಲಿಯಾದ ಕಾಯುವ ದೈವ ಇದ್ದೇ ಇರುತ್ತದೆ. ಅದಕ್ಕೆ ಸಾಕ್ಷಿ ಅಷ್ಟು ದೊಡ್ಡ ವಿಪತ್ತು ಧುತ್ತನೆ ಬಂದರೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬದುಕುಳಿದವರು... ಪಾರಾದವರು.... ಹೋರಾಡಿ ಮನೆ ಸೇರಿದವರು - ಇವರೆಲ್ಲಾ ಸಾಕ್ಷಿಯೇ! ಎಲ್ಲದರಲ್ಲೂ ಧನಾತ್ಮಕತೆ, ಋಣಾತ್ಮಕತೆ ಇದ್ದೇ ಇರುತ್ತದೆ. ಕಾಣುವ ಕಣ್ಣಿಗೆ ಪೂರ್ಣ ಅಥವಾ ಅರ್ಧ ಕುರುಡುತನ ಬರದಿದ್ದರೆ ಎಲ್ಲವೂ ಸುಸ್ಪಷ್ಟ! ಸ್ವತಃ ಶರಣರೇ ಹೇಳಿದ್ದಾರೆ...

ಆವರವರ ಭಾವಕ್ಕೆ ಅವರವರ ಭಕುತಿಗೆ 
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ
ನರರೇನು ಭಾವಿಸುವರದರಂತೆ ಕಾಣುವನು  .... - ಎಲ್ಲರೂ ಅವರವರ ದೇವನನ್ನು ಕಾಣೋ ರೀತಿ, ನೀತಿ, ಆಚಾರ, ಜಾಗ.. ಎಲ್ಲವೂ ಬೇರೆ ಬೇರೆಯೇ ಆಗಿರುವುದು ಸಹಜ. ಇದು ಕೇವಲ ಜಾತಿ/ಧರ್ಮದಿಂದ ಮಾತ್ರ ಭಿನ್ನವಾಗಿರದೇ ಪ್ರತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತಿದೆ. ಪರಸ್ಪರ ಗೌರವ, ಅರ್ಥೈಸುವಿಕೆ ಇದ್ದಾಗ ಭಿನ್ನತೆಯಲ್ಲೂ ಸಹಜತೆ, ಏಕತೆ ಕಂಡು ಬಂದೇ ಬರುತ್ತದೆ.

ಆದ ದುರಂತಕ್ಕೆ ಪ್ರತಿಯೊಬ್ಬ ‘ಮನುಷ್ಯ’ನೂ ಪರಿತಪಿಸಲೇ ಬೇಕಾಗಿದೆ. ಮನುಷ್ಯರಾದವರೆಲ್ಲಾ ಮರುಗುತ್ತಲಿದ್ದಾರೆ ಕೂಡ. ಇಂದು ಉತ್ತಾರಾಖಂಡ.. ನಾಳೆ? ಈ ಪ್ರಶ್ನೆಗೆ ಉತ್ತರವೂ ಉತ್ತರಾಖಂಡದಲ್ಲೇ ಅಡಗಿದೆ. ಒಲಿದರೆ ಖನಿಜವನ್ನೇ ಬಗೆದು ಕೊಡುವ ಪ್ರಕೃತಿ, ಮುನಿದರೆ ತೊಳೆದುಹಾಕಲೂಬಲ್ಲಳೆನ್ನುವುದನ್ನು ತೋರಿದ್ದಾಳೆ. ದುರಾಸೆಯನ್ನು ದೂರ ಮಾಡಿ ಪ್ರಕೃತಿಯ ಜೊತೆಗೆ ಸಾಗಿದರೆ ಮಾತ್ರ ಮಾನವಕುಲ ಉಳಿದೀತು. ಬೆಳೆದೀತು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಒಗ್ಗಟ್ಟಿನಲ್ಲಿ ಸಾಗಬೇಕು. ಯಾವ ದೇವರೂ ಯಾರನ್ನೂ ಕಾಪಾಡಲಾರ ಮರದ ಟೊಂಗೆಯಲ್ಲಿ ಕುಳಿತು ಆ ಮರವನ್ನೇ ಕಡಿವ ಮೂರ್ಖನನ್ನು! ಕಲವರ ನಿರ್ಲಕ್ಷ್ಯದಿಂದಾಗಿ, ಹಲವರ ನಿರ್ಲಿಪ್ತತೆಯಿಂದಾಗ, ಎಲ್ಲರ ಅಜ್ಞಾನದಿಂದಾಗಿ ಇಂತಹ ವಿಪತ್ತುಗಳು ಬರುತ್ತಿರುತ್ತವೆ. ‘ಇದ್ದಲ್ಲೇ ಬಿದ್ದಿರೋದೊಂದೇ’ ಪರಿಹಾರ... ಅನ್ನೋ ಎಡಬಿಡಂಗಿ ವಾದ ಬಿಟ್ಟು.. ಹೋದಲ್ಲಲ್ಲೇ ನಮ್ಮ ಪರಿಸರಕ್ಕೆ, ನಮಗೆ ಸರಿಯಾದ ಸುರಕ್ಷೆಯನ್ನು ನಾವೇ ನಿರ್ಮಿಸಿಕೊಳ್ಳುವತ್ತ ಗಮನ ಹರಿಸಿದರೆ ಉತ್ತಮ. 

ಮನಸು ಸದಾ ಪ್ರತಿ ದಿವಸ ಅಲ್ಲಿರುವ ಜನರೊಳಗೆ (ಎಲ್ಲರಲ್ಲೂ..) ವಿಶ್ವಾಸ, ಪ್ರೀತಿ, ಮಾನವತೆ ತುಂಬಪ್ಪಾ ತಂದೆ ಎಂದು ಕುಳಿತಲ್ಲೇ ಪ್ರಾರ್ಥಿಸುತ್ತಿರುತ್ತದೆ. ‘ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ..." ಎಂಬ ಕನಕದಾಸರ ಪದ ನೆನಪಾಗುತ್ತಲೇ ಇರುತ್ತದೆ.

-ತೇಜಸ್ವಿನಿ ಹೆಗಡೆ.

ಮಂಗಳವಾರ, ಮೇ 21, 2013

ನಿರಂತರ

ಉಸಿರಾಡಬೇಕಿದೆ, ಉಸಿರಾಡಿಸಲೇಬೇಕಿದೆ
ಅಹಲ್ಯೆಯಂತೂ ನಾನಲ್ಲಾ,
ಕಲ್ಲಾಗಿ ಕುಳಿತು ಒಳಗೊಳಗೇ ನರಳಾಡಲು!

ಬದುಕಬೇಕಾಗಿದೆ, ಬದುಕಲೇಬೇಕಿದೆ
ಇಚ್ಚಾಮರಣಿಯಂತೂ ನಾನಲ್ಲಾ,
ಮನಸೋ ಇಚ್ಛೆ ಸತ್ತು ಮುಕ್ತಿ ಪಡೆಯಲು!

ಆತ್ಮಹತ್ಯೆ ಮಹಾಪಾಪ ಎಂದ
ಮಹಾನುಭಾವರಿಗೆ ತಿಳಿದಿತ್ತು
‘ನಾಯಂ ಹಂತಿ ನ ಹನ್ಯತೇ’!

ಆ ಕ್ಷಣದ ವಿರಹ, ಕ್ಲೇಶ
ವೈಶಾಖದ ನದಿಗಳಂತಷ್ಟೇ .....
ವರ್ಷ ಋತುವ ತಡೆಯಲು ಯಾರಿಂದ ಸಾಧ್ಯ?
ತುಸುಗಾಲ ನಿಧಾನಿಸಿದರೂ, ನಿಲ್ಲದು!
ಉರಿವ ತಾಪಕ್ಕೆ ಘನೀಭವಿಸಿದ ಕಾರ್ಮೋಡ
ಸುರಿಯಲೇಬೇಕು, ಸುರಿದು ಹೊಳೆಯಾಗಲೇಬೇಕು
ಬತ್ತಿದ್ದೆಲ್ಲಾ ತುಂಬಿ ಮತ್ತೆ ಚಿಗುರೊಡೆಯಲೇಬೇಕು.

-ತೇಜಸ್ವಿನಿ ಹೆಗಡೆ.

ಮಂಗಳವಾರ, ಮಾರ್ಚ್ 5, 2013

ನೀರ್ಕಡ್ಡಿ


ಕೆಲವು ತಿಂಗಳ ಹಿಂದೆ ಊರಿಗೆ ಹೋದಾಗ ಪುಟ್ಟಿ "ಅಮ್ಮಾ ಇದೆಂಥದೇ ಮಜಾ ಇದ್ದು.. ಹಿಂಡಿದ್ರೆ ನೀರು ಬತ್ತು.. ಇದ್ನ ಕುಡೀಲಕ್ಕಾ?" ಎಂದು ಕೇಳುತ್ತಾ ನೀರುಕಡ್ಡಿ ಗಿಡವನ್ನು ಹಿಡಿದು ಬಂದಳಾ.....ನನಗೆ ನನ್ನ ಬಾಲ್ಯದ ನೆನಪುಗಳೆಲ್ಲಾ ಒಂದೊಂದಾಗಿ ಧಾಳಿಯಿಡತೊಡಗಿದವು. "ತಂಗಿ ಅದು ಕುಡ್ಯ ನೀರಲ್ಲಾ.. ಪಾಟಿ ಒರ್ಸಲೆಲ್ಲಾ ಬಳಸ್ತೊ... ನೀರ್ಕಡ್ಡಿ ಹೇಳ್ತೋ ಇದ್ಕೆ... ನೀ ಆಡಿದ್ಮೇಲೆ ಚೆನ್ನಾಗಿ ಕೈ ತೊಳ್ಕೊ.. ಬಾಯಿಗೆಲ್ಲಾ ಹಾಕಡ..." ಎಂದೆ. ತಿರುಗಿ ಹೊರಟವಳು ಮತ್ತೆ ನಿಂತು... "ಅಮ್ಮಾ ಪಾಟಿ ಒರ್ಸದಾ? ಅಪ್ಪ ಆಡಲೆ ಹೇಳಿ ಚಾಕ್ ಪೀಸ್ ತಗಬಂಜನಲೆ ಅದ್ರಲ್ಲಿ ಬರ್ದು ಒರ್ಸದಾ" ಎಂದು ಕೇಳಿದಾಗ ಒಂದು ಕ್ಷಣ ಅಯ್ಯೋ ಎನಿಸಿತು. ಈಗಿನ ಮಕ್ಕಳು ಅದರಲ್ಲೂ ‘ಸಿಟಿ’ ಮಕ್ಕಳು ಬರೆಯೋದನ್ನು ಆರಂಭಿಸುವುದೇ ಪೆನ್ಸಿಲ್ಲು, ಪುಸ್ತಕದಲ್ಲಿ! ಬಳಪದ ಕಡ್ಡಿ, ರಂಗುರಂಗಿನ ಪ್ಲಾಸ್ಟಿಕ್ ಚೌಕಟ್ಟುಗಳಿಂದ ಕಂಗೊಳಿಸುತ್ತಿದ್ದ ಕರಿ ಸ್ಲೇಟು‌ಗಳನ್ನು ಹೊತ್ತು ಬೀಸುತ್ತಾ ಸಾಗುತ್ತಿದ್ದ ಪಾಟೀಚೀಲ, ಅದರ ಕಿರುಗಿಸೆಯಲ್ಲಿ ತುರುಕಿರುತ್ತಿದ್ದ ನೀರ್ದಂಟು....ಇವೆಲ್ಲಾ ನಮ್ಮ ಕಾಲದಲ್ಲೇ ಮುಗಿದು ಹೋದವು. ಆದರೂ ಅದೇ ಸವಿನೆನಪಿಗಾಗಿಯೇ.. ನನ್ನ ಖುಶೀಗೋಸ್ಕರ ಇವಳಿಗೂ ಒಂದು ಪಾಟಿಯನ್ನು ತಂದು ಕೊಟ್ಟಿದ್ದೇನೆ... ನಮ್ಮ ಕಾಲದಂಥದ್ದಲ್ಲದೇ ಹೋದರೂ ಸರಿಸುಮಾರು ಅಂಥದ್ದೇ... ಇದರಲ್ಲಿ ಬರೆದು ಒರೆಸಲೆಂದೇ ಪುಟ್ಟ ಡಸ್ಟರ್ ಅನ್ನೂ ಸಿಕ್ಕಿಸಿಟ್ಟಿರುತ್ತಾರೆ. ಹಾಗಾಗಿ ನೀರ್ಕಡ್ಡಿ, ಒದ್ದೆ ಬಟ್ಟೆ ಎಲ್ಲಾ ಬೇಕಾಗಿಲ್ಲ.  
Courtesy : http://oppanna.com/?p=1921

ತುಸು ಕಂದು ಮಿಶ್ರಿತ ಕೆಂಪು ದಂಟಿನ ತುದಿಯಲ್ಲಿ ಹಸಿರೆಲೆಗಳಿಂದ ಕಂಗೊಳಿಸುವ ಇದನ್ನು ಕನ್ನಡದಲ್ಲಿ ನೀರು ದಂಟು, ನೀರ್ಕಡ್ಡಿ ಎಂದು ಕರೆದರೆ, ತುಳುವಿನಲ್ಲಿ ನಿರ್ಕಲ್ ಎನ್ನುತ್ತಾರೆ. ಏನೇ ಅನ್ನಿ... ಈ ತೆಳು ಕಡ್ಡಿಯನ್ನು ಹಿಂಡಿ, ಅದರ ರಸವನ್ನು ಪಾಟಿಯ ಮೇಲೆ ಹೊಯ್ದು, ಹರಿದು ಬೊಕ್ಕಣವಾದ ಹಳೇ ಬಟ್ಟೆ ಚೂರಲ್ಲೋ.. ಇಲ್ಲಾ ತೊಟ್ಟಿದ್ದ ಲಂಗದ ಕೊನೆ ತುದಿಯಿಂದಲೋ ಗಸ ಗಸನೆ, ಮೈ ಮೇಲೆ ಶೀತದ ಗುಳ್ಳೆ ಎಳೋ ಹಾಗೇ ಉಜ್ಜುವ ಆ ಮಜವೇ ಬೇರೆ. ನೀರ್ಕಡ್ಡಿಯನ್ನು ಹಿಂಡಿದಾಗ ಬರುವ ವಿಚಿತ್ರ ವಾಸನೆಯ ಕಂಪು ಇನ್ನೂ ನನ್ನ ಮೂಗಿನ ಗೃಂಥಿಯಲ್ಲೆಲ್ಲೋ ಹಾಗೇ ಶಾಶ್ವತವಾಗಿ ಉಳಿದುಕೊಂಡುಬಿಟ್ಟಿದೆ. ಬಸಳೆ ಸೊಪ್ಪನ್ನು ಅರ್ಧಂಬರ್ಧ ಬೇಯಿಸಿದಾಗ ಬರುವ ಒಂಥರಾ ವಾಸನೆಯದು! ಅಂದು... ಯಾರ ಬಳಿ ಎಷ್ಟು ಬಳಪ ಇದೆ? ಅದರಲ್ಲೂ ಬಿಳಿದೆಷ್ಟು? ಕರಿಯದೆಷ್ಟು? ಯಾರ ಬಳಪ ಹೆಚ್ಚು ಉದ್ದವಿದೆ? ನೀರ್ಕಡ್ಡಿಯನ್ನು ಯಾರೆಷ್ಟು ಒಟ್ಟು ಹಾಕಿದ್ದಾರೆ? ಎಂದೆಲ್ಲಾ ಲೆಕ್ಕಾಚಾರ ಹಾಕೊಕೊಳ್ಳುವುದು, ಅದರ ಮೇಲೆ ಕೊಡು-ಕೊಳ್ಳುವಿಕೆಯ ವ್ಯವಹಾರ ಮಾಡುವುದು ಸಾಮಾನ್ಯವಾಗಿತ್ತು. ಬಳಪವೋ, ನೀರ್ಕಡ್ಡಿಯೋ ಕಡಿಮೆ ಇದ್ದವರಿಂದ ಮನೆಯ ರುಚಿ ರುಚಿ ತಿಂಡಿಯನ್ನು ತರಿಸಿಕೊಂಡು, ಅವುಗಳ ಬದಲಾಗಿ ನಮ್ಮ ಒಂದೆರಡು ಬಳವನ್ನೋ ಅಥವಾ ನೀರ್ಕಡ್ಡಿಯನ್ನೋ ವಿನಿಮಯಮಾಡಿಕೊಳ್ಳುವುದು... ಇವೆಲ್ಲಾ ಒಂದು ತರಹದ ಸಂಭ್ರಮವೇ ಆಗಿದ್ದವು. ಮಂಗಳೂರಿನ ಗಾಂಧೀನಗರದ ಆ ಪುಟ್ಟ ಶಾಲೆಯಲ್ಲಿ ಕಲಿಯುತ್ತಿದ್ದ ಪ್ರತಿಮಕ್ಕಳಿಗೂ ನೀರ್ಕಡ್ಡಿಯ ಮಹತ್ವ ಚೆನ್ನಾಗಿ ತಿಳಿದಿತ್ತು. ಒಂದೆರಡು ದಿವಸಗಳಿಗಿಂತ ಜಾಸ್ತಿ ಉಳಿಯದ ಈ ನೀರ್ಕಡ್ಡಿ ಹಾಗೇ ಇಟ್ಟಲ್ಲಿ.. ಅಲ್ಲೇ ಕೊಳೆತು ನಾರುವುದೂ ಇತ್ತು. ಆದರೆ ಇಲ್ಲಿ..... ಬೆಂಗಳೂರಲ್ಲಿ.. ಹಾಗೇ ಈಗೀಗ ಮಂಗಳೂರಿನಲ್ಲೂ ಈ ನೀರೆಯನ್ನು ಕಾಣುವುದೇ ಅಪರೂಪವಾಗಿ ಹೋಗಿದೆ! ಬಹುಶಃ ನಮ್ಮ ಪಾಟೀಚೀಲದ ಜೊತೆ ಅದೂ ಅಸ್ತಂಗತವಾಗಿ ಹೋಗಿದೆಯೇನೋ!

ಓದು, ಬರಹ, ಆಟ, ಪಾಠ ಎಲ್ಲವೂ ಈಗ ಹೈಟೆಕ್! ಈಗಿನ ಮಕ್ಕಳು ಆಡೋದೇನಿದ್ರೂ ವಿಡಿಯೋ ಗೇಮ್, ಮೊಬೈಲ್, ಟ್ಯಾಬ್ಲೆಟ್... ಇತ್ಯಾದಿ. ಇಷ್ಟೆಲ್ಲಾ ಧಾಂ ಧೂಂ ನಡುವೆಯೂ ಇನ್ನೂ ಉಸಿರಾಡುತ್ತಿವೆ ನಮ್ಮ ಮುಟ್ಟಾಟ, ಕಣ್ಣಾ-ಮುಚ್ಚೆ, ಕೆರೆ-ದಡ, ಲಗೋರಿ! ಅವತ್ತೊಂದು ದಿನ ಚಿಕ್ಕಮ್ಮನ ಮಗಳಿಗೆ ನನ್ನ ಬಾಲ್ಯದ ಗುಂಗಿನಲ್ಲೇ... ಕಾಯಿ ತುರ್ದು ಖಾಲಿಯಾಗಿದ್ದ ಗೆರಟೆಯನ್ನು ಕೊಟ್ಟು.. "ನೀನು ಅದಿತಿ ಇದ್ರಲ್ಲಿ ಅಡಿಗೆ ಆಟ ಆಡ್ಕೊಳ್ಳಿ ಹೋಗಿ.." ಎಂದು ತಪ್ಪಿ ಹೇಳಿ ಬಿಟ್ನಾ....? ಅವಳು ತನ್ನ ಮೊಗದಲ್ಲಿ ತೋರಿದ ಆ ವಿಚಿತ್ರ ಭಾವವನ್ನು ಯಾವತ್ತೂ ಮರೆಯೋ ಹಾಗಿಲ್ಲ! "ಅಯ್ಯೋ ಅತ್ತೆ ಇದೂ ಒಂದು ಆಟದ ವಸ್ತುವಾ? ಕಾಯಿ ಜುಬ್ರೆಲ್ಲಾ ಅಲೀತಾ ಇದ್ದು.. ಇಶ್ಯೀ...ನನ್ನ ಹತ್ರ ‘ಕಿಚನ್ ಸೆಟ್’ ಇದೆ ಬಿಡು..." ಎನ್ನುತ್ತಾ ಕಸದಬುಟ್ಟಿಗೆ ಹಾಕಿ ತನಗಾಗಿ ತಂದಿದ್ದ ಕಲರ್ ಕಲರ್ ಅಡಿಗೆ ಮಾಡೋ ಆಟಿಕೆಗಳನ್ನು ಒಟ್ಟು ಹಾಕಿ ಕೂತಳು. ಖಾಲಿ ಗೆರಟೆಗಳಲ್ಲಿ ನೀರು, ಸೊಪ್ಪು, ಮಣ್ಣು ಎಲ್ಲವನ್ನೂ ಕದಡಿ.. ಮೈ-ಮೊಗ-ಮನಗಳ ತುಂಬೆಲ್ಲಾ ರಂಗು ತುಂಬಿಕೊಂಡು ಮಜಾ ಮಾಡುತ್ತಿದ್ದ ಆ ದಿನಗಳ ಭಾಗ್ಯ ಈಗಿನ ಪ್ಲಾಸ್ಟಿಗ್ ಯುಗದ ಮಕ್ಕಳಿಗೆಲ್ಲಿ ತಿಳೀಬೇಕು?! 

ಆದರೆ ಒಂದಂತೂ ಸತ್ಯ.. ಅಂದಿಗೂ ಇಂದಿಗೂ ಅಜ್ಜನ ಮನೆಗೆ ಹೋಗೋ ಸಂಭ್ರಮ ಮಾತ್ರ ಬದಲಾಗಿಲ್ಲ. ನನ್ನ ಪುಟ್ಟಿಗೆ ವರ್ಷಕ್ಕಿರೋದು ಎರಡೇ ತಿಂಗಳು... ಎಪ್ರಿಲ್ ಮತ್ತು ಮೇ! ನಾವೂ ಅಷ್ಟೇ.. ಚಿಕ್ಕೋರಿದ್ದಾಗ, ಊರಿಗೆ ಹೋಗೋ ದಿನಕ್ಕಾಗಿ ಚಾತಕ ಪಕ್ಷಿಗಳಾಗುತ್ತಿದ್ದೆವು. ಪಕ್ಕದ್ಮನೆ ವೀಣ, ಮೂಲೆ ಮನೆ ಸಾತಿ, ಕೆಳ್ಗಿನ್ಮನೆ ಶಾರಿ, ಅತ್ತೆ, ಚಿಕ್ಕಮ್ಮಂದಿರ ಮಕ್ಕಳೆಲ್ಲಾ ಒಟ್ಟಿಗೆ ಸೇರಿ ಹಿತ್ತಲಿನಲ್ಲಿ ಸೇರಿದ್ರೆ ಮನೆಸೇರೋದು ಸೂರ್ಯ ಮುಳ್ಗೋ ಹೊತ್ತಲ್ಲೇ. ಊಟಕ್ಕೆ ಕರೆದು ಕರೆದು ಸುಸ್ತಾದ ಮನೆಯವರು.. ಕೊನೆಗೆ ನಮ್ಮ ಹಠಕ್ಕೆ ಮಣಿದೋ ಇಲ್ಲಾ ಪುಟ್ಟತ್ತೆಯ ಉದಾರತೆಗೆ ಒಪ್ಪಿಯೋ ಅಲ್ಲೇ ಬಾಳೆ ಎಲೆ ಹಾಕಿ ಊಟ ಬಡಿಸಿ ಹೋಗುತ್ತಿದ್ದರು. ತಿಂದಿದ್ದೆಷ್ಟೋ.. ಚೆಲ್ಲಿದ್ದೆಷ್ಟೋ!! ಇರುವೆ, ಹೆಗ್ಗಣ, ಹುಳ-ಹಪ್ಪಟೆಗಳಿಗೂ ಭೂರಿ ಭೋಜನ.

ಹುಣ್ಸೆ ಹಣ್ಣಿಗೆ ಉಪ್ಪು, ಸೂಜಿ ಮೆಣಸು ನುರಿದು, ಚೆನ್ನಾಗಿ ಮೊದಲೇ ತೊಳೆದು ಒಣಗಿಸಿಟ್ಟಿಕೊಂಡಿದ್ದ ತೆಂಗಿನ ಗರಿಗಳ ಕಡ್ಡಿಯ ತುದಿಗೆ ಸಿಕ್ಕಿಸಿ ಗೋಲ ಮಾಡಿ ಚೀಪ್ತಾ ಇದ್ರೆ ಸ್ವರ್ಗ ಅಂದ್ರೆ ಇದೇ ಇರ್ಬೇಕಪ್ಪಾ ಅನಿಸುತ್ತಿತ್ತು. ಹಿತ್ತಲಿನಲ್ಲಿದ್ದ ತೋತಾಪುರಿ ಮಾವಿನ ಕಾಯಿ, ಪುನ್ನೇರ್ಲ ಹಣ್ಣು, ಪೇರಳೆ ಹಣ್ಣು, ಜಾಂಬ್ಳೆ ಹಣ್ಣು, ಕುಸುಮಾಲೆ ಹಣ್ಣು ಎಲ್ಲಾ ನಮ್ಮ ಹೊಟ್ಟೆ ಸೇರಿ ಪಾವನವಾಗುತ್ತಿದ್ದವು. ಆವಾಗೆಲ್ಲಾ ಈ ಮಿಲ್ಕಿ ಬಾರು, ತರಾವರಿ ಲಾಲಿ ಪಾಪ್ಪು, ಕೊಕ್ಕೋ, ಕ್ರೀಂ ಬಿಸ್ಕಿಟ್ಟು ಎಲ್ಲಾ ಎಲ್ಲಿ ಸಿಗುತ್ತಿದ್ದವು? ಹೆಚ್ಚು ಅಂದರೆ ಲಿಂಬೆ ಪೆಪ್ಪರ್‌ಮೆಂಟು, ಪಾರ್ಲೆ ಬಿಸ್ಕಿಟ್ಟು ಮತ್ತು ಹಳದಿ ಬಣ್ಣದ ಲಿಮ್ಚಿ ಬಿಸ್ಕತ್ತುಗಳಷ್ಟೇ ನಮಗೆ ಅಪರೂಪಕ್ಕೊಮ್ಮೆ ದರ್ಶನಕೊಡುತ್ತಿದ್ದವು.

ಆಟದಲ್ಲೂ ಮನೆಯಾಟ ನಮ್ಮ ನೆಚ್ಚಿನ ಆಟವಾಗಿತ್ತು. ಅದರಲ್ಲೂ ರಾಜಕೀಯ ನಡೆಯುವುದು ಸಾಮಾನ್ಯವಾಗಿತ್ತು ಬಿಡಿ. ಯಾರು ಸೊಪ್ಪು, ನೀರು, ಮಣ್ಣು ಎಲ್ಲಾ ಒಟ್ಟು ಹಾಕಿ, ಮಡಲಲ್ಲಿ, ಹರಿದ ಪಂಜೆ, ಸೀರಿಯನ್ನು ಮರದ ರೆಂಭೆ, ಕೊಂಬೆಗಳಿಗೆಲ್ಲಾ ಸಿಕ್ಕಿಸಿ... ಮನೆಯೆಂಬ ಪುಟ್ಟ ಟೆಂಟ್ ಕಟ್ಟಿ ವ್ಯವಸ್ಥೆ ಮಾಡುವರೋ ಅವರೇ ಯಜಮಾನ. ಆ ದಿನವಿಡೀ ಅವರದೇ ಪಾರುಪತ್ಯ. ಅತೀ ಹೆಚ್ಚು ಗರಟೆ ಒಟ್ಟು ಹಾಕಿ ತಂದವಳೇ ಯಜಮಾನ್ತಿ. ಅಡುಗೆ ಮಾಡೋದು.. ಸುಳ್ಳೆ ಪುಳ್ಳೆ ತಿನ್ನೋದು.. ಅದ್ರಲ್ಲೇ ಮಜ ಸೂರೆ ಹೊಡೆದು ತೇಗೋದು. ದಿನಾ ಇದೇ ಆಟ ಆಡಿ ಬೇಜಾರದ ಒಂದು ದಿನ ಮದುವೆ ಆಟಕ್ಕೆ ತೊಡಗಿಕೊಂಡೆವು. ಮೇಕಪ್ ಮಳ್ಳಿ ಸುಬ್ಬಿ, ಮನೆಯಿಂದ ಆಯಿಯ ಪೌಡರ್, ಟಿಕಲಿ, ಲಾಲಿ ಎಲ್ಲಾ ಕದ್ದು ತಂದು.. ತನಗೆ ತಿಳಿದ ರೀತಿಯಲ್ಲಿ ಬಳಿದುಕೊಂಡು ಬಾರದ ನಾಚಿಕೆ ತಂದುಕೊಂಡು ಕೂತರೆ, ಸ್ವಲ್ಪ ಗಂಡುಬೀರಿ ಅನ್ನೋ ಪಟ್ಟ ಹೊತ್ತಿದ್ದ ಶಾಂತಿ ಪಂಜೆಯುಟ್ಟು ಮದುಮಗನಾದಳು. ಮದುವೆ ನಡೆಸುತ್ತಿದ್ದ ಪುರೋಹಿತ(ತಿ) ಶಾಂಭವಿ ತನಗೆ ಗೊತ್ತಿದ್ದ ಏನೋ ಒಂದು ಮಂತ್ರವನ್ನೇ ಹೇಳುತ್ತಿದ್ದಳಾ... ಇದ್ದಕ್ಕಿದ್ದಂತೇ ನಿಲ್ಲಿಸಿ "ಅಲ್ಲಾ ಮದ್ವೆ ಆದ್ಮೇಲೆ ಸಿಹಿ ಊಟ ಹಾಕವಲಿ.. ಖಾರನೂ ತಿಂಬಲೆ ಏನೂ ಇಲ್ಲೆ....... ಈ ಮಳ್ಳು ಮಣ್ಣು, ನೀರು ತಿನ್ನದೆಂತು?" ಎಂದಿದ್ದೇ ತಡ.. ನಾಚುತ್ತಿದ್ದ ಸುಬ್ಬಿ ಛಂಗನೆ ಹಾರಿ.. "ತಡಿ ಮೆತ್ತಿ ಮೇಲೆ ಹೋಳ್ಗೆ ಅಡಗ್ಸಿಟ್ಟಿದ್ದೋ.. ನಾ ನೋಡಿದ್ದಿ.. ತಗ ಬತ್ತಿ.." ಎಂದು ಲಂಗವೆತ್ತಿಕೊಂಡು ಓಡಿದರೆ... ಮದುಮಗ ಅಲ್ಲೇ ಇದ್ದ ಮಾವಿನ ಮರ ಹತ್ತಿ ತೋತಾಪುರಿಗೆ ಕೈ ಹಾಕಿದ್ದ. ಸರಿ ಎಲ್ಲರೂ ಸೇರಿ ತೋತಾಪುರಿಗೆ ಉಪ್ಪು, ಮೆಣಸು ನುರಿದು, ಹೋಳಿಗೆಗೆ ತುಪ್ಪ ಹಚ್ಚಿಟ್ಟು.. ತಿನ್ನಲೆ ಎಲ್ಲವನ್ನೂ ತಯಾರಿಟ್ಟುಕೊಂಡು ಮತ್ತೆ ಮದುವೆ ಮುಂದುವರಿಸಲು... ಎಲ್ಲರ ಹೊಟ್ಟೆಯಲ್ಲೂ ಸುಮೂಹೂರ್ತೇ ಸಾವಧಾನ!.

ಎಲ್ಲವನ್ನೂ ತಿಂದು ತೇಗಿ.. ಮನೆಗೆ ಬಂದಾಗ ಊಟದ ಸಮಯವೂ ಮೀರಿಹೋಗಿತ್ತು. ಹಸಿವಾದರೂ ಎಲ್ಲಿತ್ತು? ಮನೆಯವರ ಬೈಗುಳಕ್ಕೆ ಹೆದರಿ ತಿಂದ ಶಾಸ್ತ್ರ ಮಾಡಿ ಬಿದ್ದವರಿಗೆ ರಾತ್ರಿಯಾಗುತ್ತಿದ್ದಂತೇ ಮಾವಿನಕಾಯಿ, ಉಪ್ಪು, ಹುಳಿ, ಕಡಲೇಬೇಳೇಗಳು ತಮ್ಮ ನರ್ತನವನ್ನು ತೋರಿದ್ದವು. ಹೊಟ್ಟೆಯ ಗುಟ್ಟು ಹೊರಬರಲು ಎಲ್ಲರೂ ಸೇರಿ ಸಮಾ ಬೈದಿದ್ದರು. 

ನಮ್ಮ ಈ ಮದುವೆಯಾಟದ ನೆನಪಾದಾಗೆಲ್ಲಾ ನೆನಪಿಗೆ ಬರೋದು ಮಕ್ಕೀಗದ್ದೆ ಪಾರ್ವತಿ ಮದುವೆಯ ಮಹಾ ಪ್ರಸಂಗ! ಆಗಿದ್ದಿಷ್ಟೇ... ಪಾತಕ್ಕನ ತಾಯಿ ಸೀತತ್ತೆಗೆ ತನ್ನ ಮಗಳನ್ನು ಬೊಂಬಾಯಿಯಲ್ಲಿದ್ದ ವರನಿಗೇ ಕೊಡಬೇಂಬ ಹುಚ್ಚು ಆಸೆ. ಹುಡುಕಿ ಹುಡುಕಿ ಸಾಗಾಗಿ ಕೊನೆಗೆ ಗುರುತಿದ್ದವರೋರ್ವರ ಮುಖಾಂತರ ಬೊಂಬಾಯಿಯಲ್ಲೇ ಕೆಲಸಕ್ಕಿದ್ದ ಗಂಡೇ ಸಿಕ್ಕಿ, ಮದುವೆ ನಿಕ್ಕಿಯಾಗಲು, ಸೀತತ್ತೆಯ ಕಾಲು ಭೂಮಿಯಮೇಲೇ ಇರಲಿಲ್ಲ. ಸ್ವತಃ ಪಾತಕ್ಕನಿಗೂ ಅಷ್ಟು ಖುಶಿಯಾಗಿರಲಿಕ್ಕಿಲ್ಲ. ಆ ಸಂತೋಷದಲ್ಲೇ ಮೈಮರೆತ ಸೀತತ್ತೆ...ತನ್ನ ನಾದನಿಯ ಬಳಿ "ಯಮ್ಮನೆ ಕೂಸಂತೂ ಪಾರಾತೇ ಲಲ್ತೆ... ಈಗೆಲ್ಲಾ ಎಲ್ಲಿ ಸಿಗ್ತು ಇಂಥಾ ಬಂಗಾರದಂಥಾ ಸಂಬಂಧ?" ಎಂದು ಹೇಳಿದ್ದೇ ತಡ ಇನ್ನೂ ಮದುವೆಯಾಗದೇ ಇದ್ದ ತನ್ನ ಮಗಳಿಗೇ ಅತ್ತಿಗೆ ಕೊಂಕಾಡಿದಳೆಂದು ತಿಳಿದ ಲಲಿತೆ ಒಳಗೊಳಗೇ ಕುದ್ದು, ಸರಿಯಾದ ಸಮಯಕ್ಕೆ ಕಾಯುತ್ತಿದ್ದಳು. ಆ ಸುಸಮಯ ಅವಳಿಗೆ ಸಿಕ್ಕಿದ್ದಾದರೂ ಎಂದು.. ಪಾತಿಯ ಮದುವೆಯ ದಿನವೇ! ಗೌರಿ ಪೂಜೆಯಾಗಿ.. ಧಾರೆಯಾಗಿ.. ಲಾಜ ಹೋಮ ಇನ್ನೇನು ಶುರುವಾಗಬೇಕೆನುವಾಗಲೇ.... ಆಚೀಚೆ ತಿರುಗಾಡುತ್ತಾ, ಸೀತತ್ತೆಯ ಬಳಿಯೇ ಸುಳಿದಾಡುತ್ತಾ ಮೆಲ್ಲನೆ ಎಂದೋ ಕೇಳಿದ್ದ ಹಾಡನ್ನು ಹಾಡತೊಡಗಿದಳು ಲಲಿತೆ....

"ಆಚೆ ಮನೆ ಶಣ್ಣು ಭಾವ ಮಗ್ಳ ಮದ್ವೆ ಮಾಡಿದ್ನಡ 
ಮಹಾರಾಷ್ಟ್ರದ್ ಬದಿಗೆಲ್ಲೋ ಕೊಟ್ಟಿದ್ನಡ
ಆ ಬದಿಯ ಬ್ರಾಹ್ಮಣ್ರಡ ದಲ್ಲಾಳಿಂದ ಆಗಿತ್ತಡ
ತಿಂಗ್ಳೊಳ್ಗೆ ಕೂಸಿನ್ ಸುದ್ದಿ ಪತ್ತೆ ಇಲ್ಯಡ.."

ಬೇಕೆಂತಲೇ ತುಸು ಗಟ್ಟಿಯಾಗಿ ಹಾಡಿಕೊಳ್ಳುತ್ತಿದ್ದ ಲಲಿತೆಯ ಹಾಡು ಅಲ್ಲೇ ಇದ್ದ ಸೀತತ್ತೆಗಲ್ಲದೇ, ಈ ಮದುವೆಗೆ ರಾಯಭಾರಿಯಾಗಿದ್ದ ಆ ಸಂಬಂಧಿಕನ ಕಿವಿಗೂ ಬಿದ್ದು... ದೊಡ್ಡ ಗಲಾಟೆಯೇ ಆಗಿ.... ಕೊನೆಗೆ ಎಲ್ಲರೂ ಲಲಿತೆಯನ್ನೇ ದೂರಲು... ಸಿಟ್ಟಾದ ಆಕೆ ಊಟವನ್ನೂ ಮಾಡದೇ ಹೋದವಳು ತನ್ನ ಮಗಳ ಮದುವೆಯ ಕರೆಯೋಲೆಯನ್ನೂ ಕಳುಹಿಸಲಿಲ್ಲವೆಂಬುದೇ ಹಲವು ಕಾಲ ಸುದ್ದಿಯಲ್ಲಿತ್ತು. ಆವಾಗ ನಮಗೆಲ್ಲಾ ಅದೊಂದು ಅತಿ ರಂಜನಾತ್ಮಕ ಕಥೆಯಾಗಿತ್ತು. ಅಜ್ಜಿಯ ಬಾಯಲ್ಲಿ ಕೇಳಿದಷ್ಟೂ ಸಾಕಾಗದೇ ಮತ್ತೆ ಮತ್ತೆ ಕೆದಕಿ ಕೇಳಿ ಬೈಸಿಕೊಳ್ಳುತ್ತಿದ್ದೆವು.

ಮಣ್ಣು, ನೀರು, ಸೊಪ್ಪು, ಗೆರಟೆ ಇಂತಹ ನೈಸರ್ಗಿಕ ವಸ್ತುಗಳ ಜೊತೆಯೇ ಬೆಳೆದ ನಮ್ಮ ಬಾಲ್ಯದ ಆ ಸಂತಸ ತೃಪ್ತಿಯನ್ನೆಲ್ಲಾ ನೆನಸಿದಾಗ ನಮ್ಮ ಮಕ್ಕಳ ಪಾಲಿಗೆ ಇವೆಲ್ಲಾ ಎಂದೂ ಇಲ್ಲವಲ್ಲಾ ಎನ್ನುವ ನೋವು ಕಾಡುತ್ತಿರುತ್ತದೆ. ನಮ್ಮ ಕಪ್ಪು-ಬಿಳುಪು, ರಂಗು ರಂಗಿನ ಇಂದಿನವರಿಗೆ ಎಷ್ಟು ಪ್ರಿಯವಾಗಬಹುದು? "ಕಾಲಕ್ಕೆ ತಕ್ಕಂತೆ ಕೋಲ" ಅನ್ನೋದೊಂದು ಗಾದೆಯಿದೆ. ಅದು ನೂರಕ್ಕೆ ನೂರು ಸತ್ಯವೆನಿಸುತ್ತದೆ. ಆದರೂ... ನನ್ನಜ್ಜಿಯ ರಂಗುರಂಗಿನ ಕಥೆ ಕೇಳುವಾಗ ಹೇಗೆ ನನ್ನ ಕಣ್ಣರಳುತ್ತಿತ್ತೋ.. ಮನಸೊಳಗೆ ಕಲ್ಪನೆ ಮೂಡಿ ಮುದಗೊಳ್ಳುತ್ತಿದ್ದೆನೋ ಹಾಗೇ ನನ್ನ ಮಗಳೂ ಕಣ್ಣು ದೊಡ್ಡದಾಗಿ ಮಾಡಿ ನನ್ನ ಬಾಲ್ಯದ ಪರಾಕ್ರಮವನ್ನು ಕೇಳುವಾಗ, ಮತ್ತೆ ಮತ್ತೆ ಬಯಸಿ "ಹೂಂ...ಹೇಳು.. ನೀ ಚೌಡೀ ಹಿತ್ಲಲ್ಲಿ ಆಡಿದ್ ಕಥೆ ಹೇಳು...." ಎಂದು ಪೀಡಿಸುವಾಗ, ವಂಡರ್‌‍ಲಾ, ಪಿಲಿಕುಳ‌ಗಳಂತಹ ಕೃತಕ ನೀರಿನ ಧಾಮಗಳಿಗಿಂತ, ಊರಿನ ಚಿಕ್ಕ ತೊರೆ, ಹಳ್ಳ, ನದಿ, ಸಮುದ್ರ - ಇವೇ ಚೊಲೋವಾ ಅಮ್ಮಾ.. ಎಂದು ಕುಣಿದಾಡುವಾಗ.... - ಕೃತ್ರ್‍ಇಮತೆಯನ್ನಪ್ಪದ, ಸಹಜತೆಯನ್ನೊಪ್ಪುವ ಆ ಮುಗ್ಧ ಬಾಲ್ಯತನ ಯಾವ ಕಾಲ, ದೇಶ, ಊರಾದರೂ ಒಂದು ಸಾಮ್ಯತೆಯನ್ನು ಕಾಯ್ದುಕೊಂಡಿರುತ್ತದೆಯೇನೋ ಎಂದೆನಿಸುತ್ತದೆ. ತುಸು ಸಮಾಧಾನವಾಗುತ್ತದೆ. ಹಾಗಾಗಿ ಒಳಗೆಲ್ಲೋ ಹೂತು ಹೋಗಿರುವ ನೀರ್ಕಡ್ಡಿಯ ಕಂಪು ಆಗಾಗ ಎದ್ದು ಬಂದು ಉಸಿರಾಡುತ್ತಲೇ ಇರುತ್ತದೆ.

-ತೇಜಸ್ವಿನಿ ಹೆಗಡೆ.

ಬುಧವಾರ, ಫೆಬ್ರವರಿ 20, 2013

ಸೌಮಿತ್ರಿಯ ಸ್ವಗತ

ಗೋಧೋಳಿ ಸಮಯ ದಾಟಿ ಅದಾಗಲೇ ಮೂರು ತಾಸು ಕಳೆದಿರಬೇಕು. ಎಷ್ಟು ಸಮಯವಾಯಿತೆಂದು ಸ್ವತಃ ಕಾಲನಿಗೂ ಅರಿವಾಗಿರದು. ಮುಂಜಾವು, ನಡು ಮಧ್ಯಾಹ್ನ, ಮುಸ್ಸಂಜೆಯ ಪರಿವಿಲ್ಲದೇ ಅದೆಷ್ಟೋ ಹೊತ್ತಿನಿಂದ ಉತ್ತರಾಭಿಮುಖವಾಗಿದ್ದ ಕಿಟಕಿಯೊಂದಕ್ಕೆ ಆತುಕೊಂಡು ದೂರ ದಿಗಂತದುದ್ದಕ್ಕೂ ದೃಷ್ಟಿ ಹಾಯಿಸುತ್ತಿದ್ದ ಅವನಿಗೆ ಕಾಲನ ಹಂಗೂ ಇರಲಿಲ್ಲ. ಯುಗಗಳನ್ನೆಲ್ಲಾ ಒಂದು ದಿನದೊಳಗೇ ಹಿಡಿದಿಡುವ ಶತಃಪ್ರಯತ್ನದಲ್ಲಿರುವವನಂತೆ, ಮನದೊಳಗೆ ಮೂಡುತ್ತಿರುವ ಸಾವಿರಾರು ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರಿಸಲೇಬೇಕೆಂಬ ಪಣ ತೊಟ್ಟವನಂತೇ, ಸಜೀವ ಶಿಲ್ಪವಾಗಿ ನಿಂತಿದ್ದ. ಅವನ ಚಿತ್ತವೆಲ್ಲಾ ಹಿಂದಿನ ಭೂತ ಹಾಗೂ ಮುಂದಿನ ಭವಿಷ್ಯತ್ತಿನ ಸುತ್ತಲೇ ಸುತ್ತುತ್ತಿತ್ತು. ಸುವಿಶಾಲ ಆ ವಿಶ್ರಾಂತಿ ಭವನದೊಳಗೆ ಆಗೊಮ್ಮೆ ಈಗೊಮ್ಮೆ ಗಾಳಿಯ ರಭಸಕ್ಕೆ ತಟ ಪಟವೆನ್ನುವ ರೇಶಿಮೆ ಪರದೆಗಳ ಸದ್ದೊಂದನ್ನು ಬಿಟ್ಟರೆ ಬೇರೇನೂ ಕೇಳಿಸುತ್ತಿಲ್ಲ. ಒಂದೊಮ್ಮೆ ಕೇಳಿಸಿದ್ದರೂ ಅದು ಅವನ ಯೋಚನಾ ಲಹರಿಯನ್ನು ತುಂಡರಿಸುವಂತಿರಲಿಲ್ಲ! 

"ಪ್ರಭು... ದೀಪಗಳನು ಹಚ್ಚುವ ಸಮಯವಾಯಿತು.. ಹಚ್ಚಿಡಲೇ.." ಎಂದು ಸೇವಕನೊಬ್ಬ ತಲೆತಗ್ಗಿಸಿ ತಾಸುಗಟ್ಟಲೇ ಅಪ್ಪಣೆಗೆ ಕಾದಿದ್ದಾಗಲೀ... ಪ್ರಭುಗಳ ಮೌನವನ್ನೇ ಸಮ್ಮತಿ ಎಂದೇ ಭಾವಿಸಿ ಆ ದೊಡ್ಡ ಭವನದ ಕತ್ತಲೆಯನ್ನು ಹೊಡೆದೋಡಿಸಲು ಸಾವಿರ ಹಣತೆ ದೀಪಗಳನ್ನುರಿಸಿ ನಿಶಃಬ್ದವಾಗಿ ಸರಿದದ್ದಾಗಲೀ... ಒಂದೊಂದು ಹಣತೆಯೊಳಗಿಂದೆದ್ದು ಬಂದ ಪ್ರಭೆ ನಿಧಾನವಾಗಿ ತನ್ನ ಗೆಳತಿಯಾದ ನಿಶೆಯನ್ನಪ್ಪಿ ತನ್ನೊಳಗೆ ಸೆಳೆದದ್ದಾಗಲೀ.. ಆಗಾಗ ಪರಿಚಾರಕಿಯರು ಬಂದು ದೀಪಗಳಿಗೆ ಎಣ್ಣೆ ಉಣಬಡಿಸಿದ್ದಾಗಲೀ.... ಊಹೂಂ.. ಒಂದೂ ಆತನ ಅರಿವಿಗೇ ಬಂದಿಲ್ಲ. ತುಂಬಿರುವ ಮನಸಿನಿಂದಾಗಿ ಹೊಟ್ಟೆಯೂ ತುಂಬಿರಬೇಕು... ಬೆಳಗಿನ ಉಪಾಹಾರ, ಮಧ್ಯಾಹ್ನದ ಮೃಷ್ಟಾನ್ನ ಭೋಜನ, ರಾತ್ರಿಯ ಊಟ ಎಲ್ಲವೂ ಅವನಿಗಾಗಿ ಕಾದು ಕಾದು ತಂಪಾಗಿ ಹೋಗಿವೆ. ಚಂದ್ರಮ ಕರಗಿ, ದಿನಕರ ಮೇಲೇರಿ ಬಂದರೂ ಅಲ್ಲೇ ನಿಂತಿರುತ್ತಿದ್ದನೋ ಏನೋ... ಆದರೆ ಅವನ ಏಕಾಗ್ರತೆಯನ್ನೇ ಅದೆಷ್ಟೋ ಹೊತ್ತಿನಿಂದ ವೀಕ್ಷಿಸುತ್ತಿದ್ದ ಉದ್ಯಾನವನದ ಸಾಕು ನವಿಲೊಂದು ಇನ್ನು ತಡೆಯಲಾರೆನೋ ಎಂಬಂತೆ ಹಾರಿ ಬಳಿ ಬಂದು ತನ್ನ ನವಿರಾದ ಗರಿಗಳಿಂದ ಅವನ ಕೆನ್ನೆ ನೇವರಿಸಲು ಒಮ್ಮೆ ಎಚ್ಚೆತ್ತ ಸೌಮಿತ್ರಿ.
ಮುಂಜಾನೆ ಕಿಟಕಿಯ ಬಳಿ ನಿಂತಾಗ ಎಲ್ಲೋ ಒಂದು ಕ್ಷಣ ಗಮನಕ್ಕೆ ಬಂದಿದ್ದ ಶುಭ್ರ ನೀಲಾಗಸದ ಜಾಗದಲ್ಲೀಗ ಬರೀ ಕಗ್ಗತ್ತಲ ಸಾಮ್ರಾಜ್ಯ.... ಅಲ್ಲೊಂದು ಇಲ್ಲೊಂದು ಮಿನುಗುತ್ತಿದ್ದ ಚುಕ್ಕಿಗಳಿಗೆ ಮೋಡದ ಮುಸುಕು ಹೊದ್ದು ಮಲಗಿರುವ ಚಂದಿರನದೇ ನಿರೀಕ್ಷೆ... ತೂಕಡಿಸುವವಗೆ ಜೋಗುಳ ಹಾಡುತ್ತಿದ್ದ ಜೀರುಂಡೆಗಳು.... ಸೋರ್ಯೋದಯದಿಂದ ಸೂರ್ಯಾಸ್ತದವರೆಗೆ ಕಡೆದಿಟ್ಟ ಶಿಲ್ಪದಂತಿದ್ದವಗೆ ನವಿಲ ನೇವರಿಕೆಯಿಂದ ನಿಧಾನವಗಾಗಿ ತನ್ನ ಸುತ್ತಲಿನ ಪರಿಸರದ ಅರಿವುಂಟಾಗತೊಡಗಿತು. ಆವರೆಗಿನ ಮನದೊಳಗಿನ ಹೊಯ್ದಾಟದ ಆಯಾಸ ಅವನ ಮೊಗದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಮುಂದಿದ್ದ ಉದ್ಯಾನವನದೊಳಗಿಂದ ಹೊರಟ ರಾತ್ರಿ ರಾಣಿಯ ಕಂಪು ಕ್ರಮೇಣ ಅವನ ಅನುಭೂತಿಗೆ ಬರಲು, ಮನಸು ತುಸು ಮೆದುವಾದಂತಾಯಿತು. ನಿಟ್ಟುಸಿರೊಂದನ್ನು ಹೊರ ಚೆಲ್ಲಿ, ಪಕ್ಕದಲ್ಲೇ ಕುಳಿತು ತನ್ನ ನೀಳ ಕುತ್ತಿಗೆಯನ್ನಾಡಿಸುತ್ತಿದ್ದ ನವಿಲನ್ನೊಮ್ಮೆ ಪ್ರೀತಿಯಿಂದ ಸವರಿದ. ಅವನ ಸ್ಪರ್ಶಾನುಭೂತಿಯಿಂದ ಕೃತಾರ್ಥನಾದೆ ಎಂಬಂತೆ ಅದೂ ತನ್ನ ಗೂಡಿನೆಡೆ ಹಾರಿತು. ಹಾರಿ ಹೋದ ನವಿಲನ್ನೇ ನೋಡುತ್ತಾ ಮೆಲ್ಲನೆ ತಿರುಗಿದ ಸೌಮಿತ್ರಿಗೆ ಕಂಡಿದ್ದು ನಿರಾಳತೆಯಿಂದ ಬೆಳಗುತ್ತಿರುವ ಸಾವಿರ ಹಣತೆಗಳು. ಅವುಗಳನ್ನು ಹಾಗೇ ಕಣ್ತುಂಬಿಕೊಳ್ಳುತ್ತಿರಲು, ಭವನದ ಬಲ ಮೂಲೆಯ ಹಣತೆಯೊಳಗೆ ಏನೋ ವಿಶಿಷ್ಟತೆ ಕಾಣಲು ಕೂತೂಹಲಿಯಾಗಿ ಅತ್ತ ಸಾಗಿದ. ನೋಡು ನೋಡುತ್ತಿದ್ದಂತೇ ಆ ದೀಪದ ಹಿಂದಿನಿಂದ ಆಕಾರವೊಂದು ಕಾಣಿಸಿದಂತಾಯಿತು. ಕ್ರಮೇಣ ಅದು ಉದ್ದವಾಗಿ ಎದ್ದು ನಿಲ್ಲಲು, ಸಹಜವಾಗಿ ಅವನ ಬಲಗೈ ತನ್ನ ಸೊಂಟದ ಕತ್ತಿಯೆಡೆ ಸಾಗಿತು. ತತ್‌ಕ್ಷಣ ‘ವೀರನಿಗೆ ಆತುರತೆ ಸಲ್ಲ’ ಎಂದು ವಿವೇಕ ಎಚ್ಚರಿಸಲು ನಿಧಾನಿಸಿದ. "ಯಾರಲ್ಲಿ?! ಕತ್ತಲೆಯ ಬಳಸಿ ನನ್ನೊಡನೆ ಆಟವನ್ನಾಡುತ್ತಿರುವವರು? ಶೂರನಿಗೆ ಹೇಡಿತನ ಸಾವಿಗೆ ಸಮಾನ... ಹೇಡಿಯೊಡನೆ ಹೋರಾಡುವುದೂ ಎನಗೆ ಅಪಮಾನ... ನಿಜದಲ್ಲಿ ಧೀರನಾಗಿದ್ದರೆ ಬೆಳಕಿಗೆ ಬರುವಂತವನಾಗು.." ಎಂದು ಅಬ್ಬರಿಸಲು ಆ ಆಕಾರ ನಿಧಾನ ಹೆಜ್ಜೆಯನ್ನಿಡುತ್ತಾ, ಮೆಲ್ಲನೆ ಹೊರಬರಲು ಸೌಮಿತ್ರಿಯೇ ಬೆರಗಾದ.

"ನೀನು.. ನೀನು... ನನ್ನಂತೆಯೇ ಇರುವೆಯಲ್ಲಾ..." ಎಂದವನ ಮಾತನ್ನಲ್ಲೇ ತುಂಡರಿಸಿದ ಆ ಆಕೃತಿ "ಹೌದು ಮಿತ್ರಾ.. ನಾನೇ... ನಿನ್ನೊಳಗಿನ ‘ನಾನು’ ನಿನಗಾಗಿ ಬಂದಿರುವೆ... ಬೆಳಗಿನಿಂದ ನಿನ್ನ ಚಿತ್ತ ಮಾಡಿದ ತಪಸ್ಸಿನ ಫಲ ‘ನಾನು’... ನನ್ನನ್ನು ನಿನ್ನೊಳಗಿನ ಅಂತರಾತ್ಮವೆಂದುಕೋ... ಇಲ್ಲಾ ನಿನ್ನ ಪ್ರತಿಬಿಂಬವೆಂದೇ ಕರೆದುಕೋ... ಪ್ರತಿರೂಪಿ ಎಂದು ಕರೆದರೂ ಸರಿಯೇ... ಆದರೆ ನಾನು ಮಾತ್ರ ನಿನ್ನೊಳಗಿಂದಲೇ ಆವಿರ್ಭವಿಸಿದವನು..." ಎಂದು ನಸುನಗಲು ಸೌಮಿತ್ರಿಯ ಹುಬ್ಬುಗಳು ಗಂಟಾದವು. "ತಮ್ಮನ್ನು ಇಲ್ಲಿ ಕರೆದವರಾರೋ...! ತಮ್ಮ ಆಗಮನದ ಹಿಂದಿನ ಉದ್ದೇಶ?" ಎಂದು ವ್ಯಂಗ್ಯವಾಗಿ, ತುಸು ಗಡುಸಾಗಿ ಕೇಳಲು ಗಹಿ ಗಹಿಸಿ ನಕ್ಕಿತು ಅವನ ಪ್ರತಿರೂಪಿ. "ಅಯ್ಯಾ ಲಕ್ಷ್ಮಣ... ಚೆನ್ನಾಗಿದೆ ನಿನ್ನ ಈ ವರೆಸೆ. ಕಾಲನ ಹಂಗಿಲ್ಲದೇ ನಿಂತಲ್ಲೇ ಶಿಲೆಯಾದ ನೀನು ಈವರೆಗೂ ಮಾಡಿದ್ದೇನು? ಪ್ರತಿ ಉಸಿರಿಗೂಮ್ಮೆ ನನ್ನ ಕರೆದೆ... ನಿನ್ನ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರ ಬಗೆದೆ.... ನಿನ್ನ ಈ ಬೇಗುದಿಯ ನೋಡಲಾಗದೇ ಇದೋ... ನಾನೇ ಸ್ವತಃ ಹೊರ ಬಂದಿರುವೆ... ಹೇಳಿಕೋ ಗೆಳೆಯ ನಿನ್ನ ನೋವಿನ ಕಥೆಯ... ಹಗಲಿರುಳು ಕೊರೆಯುತಿಹ ನಿನ್ನ ಬದುಕಿನ ವ್ಯಥೆಯ.." ಎಂದು ಅಪ್ಯಾಯಮಾನವಗಿ ನುಡಿಯಲು, ಮನದ ಭಾರವನ್ನು ಇನ್ನು ತಡೆಯಲಾರೆನೋ ಎಂಬಂತೇ, ಸೋತು ಅಲ್ಲೇ ಇದ್ದ ಸುಖಾಸೀನದ ಮೇಲೆ ಒರಗಿದ ಲಕ್ಷ್ಮಣ. 

"ಬಿಂಬಿ... ಪ್ರತಿಬಿಂಬ.. ಅಂತರಾತ್ಮ.... ಏನೆಂದು ಸಂಬೋಧಿಸಲಿ ನಾನು ನಿನ್ನ? ಅದೇನೇ ಇರಲಿ..ಈ ಹೊತ್ತಿನಲ್ಲಿ ಓರ್ವ ಆಪ್ತನ ಸಾಮೀಪ್ಯದ ಆವಶ್ಯಕತೆಯಿತ್ತು ಎನಗೆ. ಹೋಗಲಿ ಬಿಡು... ಕರೆಯುವುದರಲ್ಲೇನಿದೆ ಅಲ್ಲವೇ? ನನ್ನನ್ನೂ ಅಯೋದ್ಯೆಯ ಪ್ರಜೆಗಳು, ಬಂಧು ಬಾಂಧವರು ಹಲವು ನಾಮಗಳಿಂದ ಕರೆದರು. ಸುಮಿತ್ರೆಯ ಮಗ ಸೌಮಿತ್ರಿಯಾಗಿ, ಲಕ್ಷ್ಮೀ ಸಂಪನ್ನನಾದ ಲಕ್ಷ್ಮಣನಾಗಿ, ಆದಿ ಪುರುಷ ಶ್ರೀರಾಮಚಂದ್ರನ ಪ್ರಿಯ ಸಹೋದರ ಆದಿಶೇಷನಾಗಿ ಎಲ್ಲರಿಗೂ ಚಿರಪರಿಚಿತನಾದೆ... ಆದರೆ..ಆದರೆ... ಅವಳ ಪತಿಯಾಗಿ...ಹಾಂ.... ಇಲ್ಲೇ ಎಲ್ಲೋ ಸೋತೆನೇ?!! ಎಂದವನೊಳಗೆ ಮತ್ತೆ ಅದೇ ಯಾತನೆ.
"ಮಿತ್ರಾ... ಇದರಲ್ಲೇಕೆ ಸಂಶಯ ನಿನಗೆ? ಜಿಜ್ಞಾಸೆಗೆ ಅವಕಶಾವೇ ಇಲ್ಲ ಇಲ್ಲಿ... ನೀನು ಸೌಮಿತ್ರಿ, ಲಕ್ಷ್ಮಣ, ರಾಮನ ಪ್ರಿಯ ಸಹೋದರ ಮಾತ್ರನಲ್ಲ... ಊರ್ಮಿಳೆಯ ಪತಿಯೂ ಹೌದು. ಅದು ದೇವ ನಿರ್ಮಿತ ಬಂಧನ... ಗುರು ಹಿರಿಯರಿಂದ, ಋಷಿ ಮುನಿಗಳಿಂದ ಆರ್ಶೀವಾದ ಪಡೆದು ಕೈ ಹಿಡಿದ ಆಕೆ ನಿನ್ನ ಧರ್ಮಪತ್ನಿಯೆನ್ನುವುದು ಮೂರು ಲೋಕಗಳಿಗೇ ತಿಳಿದಿದೆ. ಅಂತಹುದರಲ್ಲಿ.. ನಿನ್ನೊಳಗೇಕೆ ಈ ಅಪಸಂಶಯವೋ ಕಾಣೆ" ಎನ್ನಲು ಅವನ ಧ್ವನಿಯೊಳಗೆ ಕುಹಕತೆಯನ್ನರಸಿ ಸೋತ ಸೌಮಿತ್ರಿ.

"ಹೂಂ.. ನಿಜ ಆಕೆ ನನ್ನ ಧರ್ಮಪತ್ನಿ. ನಾನು ಊರ್ಮಿಳೆಯ ಪತಿ.. ಆದರೆ ಪತ್ನಿ ಧರ್ಮವನ್ನಾಚರಿಸಿ ಅವಳು ಗೆದ್ದಳೆನ್ನುತ್ತಿರುವ ಈ ಲೋಕ ಪತಿಧರ್ಮವನ್ನು ನಿರ್ವಹಿಸುವಲ್ಲಿ ಸೋತ ನನ್ನ ಸುಮ್ಮನೇ ಬಿಡುವುದೇ? ಊಹೂಂ.... ಈ ನನ್ನ ನೋವಿಗೆ ಮುಕ್ತಿ ಸಿಗಲು ಇನ್ನೆಷ್ಟು ವನವಾಸಗಳನ್ನು ನಾನು ಮಾಡಬೇಕಾಗುವುದೋ ಎಂಬುದೇ ದೊಡ್ಡ ಚಿಂತೆ... ಹೌದು.. ಈಗ ನಿನ್ನ ನಾನೇನೆಂದು ಸಂಬೋಂಧಿಸಲಯ್ಯ? ನಿನ್ನನ್ನು ‘ಸಖ’ ಎಂದೇ ಕರೆದುಬಿಡುವೆನು. ಹಾಂ... ಈ ಹೊತ್ತಿನಲ್ಲೂ ನನ್ನ ಜೊತೆಗಾರನಾಗಿರುವ ನೀನು ನಿಜವಾದ ಸಖನೇ ಅಹುದು.." ಎಂದು ಮತ್ತೆ ಮೌನಿಯಾದನು ಲಕ್ಷ್ಮಣ.
"ಏಕೆ ಮಿತ್ರ ಈ ಮೌನ? ನನ್ನೊಂದಿಗೇಕೆ ಈ ಸಂಕೋಚ? ಹೊತ್ತು ಮೀರಿದರೆ, ಮುತ್ತು ಒಡೆದರೆ ಮತ್ತೆ ಬಾರದಯ್ಯ... ಈ ಒಂದು ಸುಸಮಯದಲ್ಲಿ ನೀನಿರಬೇಕಾಗಿದ್ದ ಜಾಗ ಇದಾಗಿರಲಿಲ್ಲ ಅಲ್ಲವೇ?" ಎಂದವನನ್ನೇ ಪೆಚ್ಚಾಗಿ ನೋಡಿದನು ಲಕ್ಷ್ಮಣ.
"ಹೂಂ.... ಹಾಗೆ ನೋಡ ಹೋದರೆ ನಾನು ಯಾವತ್ತು ಸರಿಯಾದ ಹೊತ್ತಿನಲ್ಲಿ ಸರಿಯಾದ ಜಾಗದಲ್ಲಿದ್ದೆ ಎನ್ನುವುದೇ ಅತಿ ಮಹತ್ವದ ಪ್ರಶ್ನೆ ಸಖ! ಹದಿನಾಲ್ಕು ವರುಷದ ಹಿಂದಿನ ಕಾಲವನ್ನು ನೆನೆಸಿದಾಗಲೆಲ್ಲಾ ಸವೆಸಿದ ಕಾಲದ ಪ್ರತಿ ಎಳ್ಳಷ್ಟೂ ಬೇಸರವಿಲ್ಲ.. ನೋವಿಲ್ಲ.. ಅಣ್ಣಯ್ಯನ ಆಶ್ರಯದಲ್ಲಿ, ಅಭಯದಡಿ, ವಾತ್ಯಲ್ಯದೊಳಗೆ ನಾನು ಸುಖಿಯೇ ಆಗಿದ್ದೆ. ಅತ್ತಿಗಮ್ಮನ ಸ್ನೇಹ, ಮಮತೆಯನ್ನು  ಮರೆಯುವುದುಂಟೇ? ಆದರೂ ಸಖ ಇಂದು.... ಈ ದಿನ... ಈ ಕ್ಷಣ ಮಾತ್ರ ಅದೇಕೋ ಎಂತೋ ನನ್ನ ನಿಶ್ಚಲನನ್ನಾಗಿಸಿದೆ... ನಿರುತ್ಸಾಹಿಯನ್ನಾಗಿಸಿದೆ... ಕಾರಣ ಮಾತ್ರ ಅಸ್ಪಷ್ಟ!" ಎಂದವನನ್ನೇ ನೋಡುತ್ತಾ... ಗಹಗಹಿಸಿ ನಗತೊಡಗಿತು ಅವನ ಪ್ರತಿರೂಪ. 

"ಏನು? ಕಾರಣ ತಿಳಿಯಲಾರದಷ್ಟು ದಡ್ಡನೇ ನೀನು ಮಿತ್ರ? ಎಲ್ಲವನ್ನೂ ಅರಿತಿರುವ.... ಎಲ್ಲವನೂ ಕಂಡಿರುವ... ನಿನ್ನೊಳಗಿನ ನನಗೇ ಕಪಟವನ್ನಾಡದಿರು... ನಿನ್ನ ಈ ಹೊಯ್ದಾಟಕ್ಕೆ, ತಳಮಳಗಳಿಗೆ, ವಿಮುಖತೆಗೆ ಮೂಲಕಾರಣ ಏನೆಂದು ಬಲ್ಲದಿಹೆಯಾ? ಈ ವಿಶ್ರಾಂತಿ ಭವನದ ಕೆಳ ಅಂತಿಸ್ತಿನಲ್ಲಿರುವ ನಿನ್ನ ಅಂತಃಪುರದಲ್ಲಿ ನಿನಗಾಗಿ ಕಾಯುತ್ತಿರುವ ಅವಳಿಂದಾಗಿ ತಾನೇ ಮುಂಜಾನೆಯಿಂದ ನಿನ್ನ ಮನಸು ವಿಪ್ಲವಕ್ಕೆ ಒಳಗಾಗಿರುವುದು?! ಎಂದಾಕ್ಷಣ ಲಕ್ಷ್ಮಣನಿಗೆ ಸಿಲುಕಿಬಿದ್ದಂತಾಯಿತು. "ಹಾಂ... ಅವಳೇ... ಅಹುದು... ಅವಳ ದೆಸೆಯಿಂದಲೇ ಮನದೊಳಗೆ ನೂರು ಭಾವನೆಗಳ ತಾಂಡವ ನೃತ್ಯವಾಗುತ್ತಿದೆ.... ಊರ್ಮಿಳೆ, ನನಗಾಗಿ ಹದಿನಾಲ್ಕು ವರುಷ ತಪಸ್ಸುಗೈದವಳು... ಈಗಲೂ ಕಾಯುತ್ತಲೇ ಇದ್ದಾಳೆ... ನನಗಾಗಿ... ತನ್ನಿನಿಯನ ಸ್ಪರ್ಶಕ್ಕಾಗಿ.. ನನ್ನ ಸಹಧರ್ಮಿಣಿ... ಊರ್ಮಿಳೆ!"

"ಕಾಯಿಸುವುದು ಉತ್ತಮವಲ್ಲ ಮಿತ್ರ.... ಇಷ್ಟು ವರುಷ ಕಾದು ಕಾದು ಹದವಾಗಿಹಳು ಆಕೆ. ಹದಿನಾಲ್ಕು ವರುಷದ ಹಿಂದೆ ನಿಯತಿ ವಿನಾಕಾರಣ ಅವಳನ್ನು ನಿಷ್ಕರುಣೆಯಿಂದ ಶಪಿಸಿತು. ಆಂದಿನಿಂದ ಇಂದಿನವರೆಗೂ ಆಕೆ  ನಿನ್ನ ಒಂದು ಸ್ಪರ್ಶಕ್ಕಾಗಿ ಕಾದು ಕಾದು ತಪಸ್ವಿನಿಯೇ ಆಗಿಹಳು. ಅಹಲ್ಯೆಗಾದರೋ ತಾನು ಪಡೆದ್ದ ಶಾಪಕ್ಕೆ ಕಾರಣ ತಿಳಿದಿತ್ತು. ಆದರೆ ಈ ಮುಗುದೆಗೆ ಅದೂ ತಿಳಯದು. ಅಹಲ್ಯೆಯನ್ನೇನೋ ಶ್ರೀರಾಮ ಎಂದೋ ವಿಮೋಚನೆಗೈದ. ಆದರೆ ಈ ಅಭಾಗಿನಿಗೆ ದೊರಕಿದ ಈ ವಿರಹದ ಶಾಪಕ್ಕೆ ಇಂದಿಗಾದರೂ ಮುಕ್ತಿ ಬೇಡವೇ?" ಎನ್ನಲು ಸೌಮಿತ್ರಿಗೆ ಎದೆಯೊಳಗೆ ನೂರು ಈಟಿಗಳು ನೆಟ್ಟಿದಂತಹ ಅನುಭವವಾಯಿತು. ತನ್ನ ಪ್ರತಿರೂಪವನ್ನೆದುರಿಸುವ ಸಾಹಸವಾಗದೇ ಮೊಗ ತಿರುಗಿಸಿಕೊಂಡವನ ಕಣ್ಣಂಚು ತುಸುವೇ ನೆನೆದಿತ್ತು. ಏನೋ ನೆನಪಾದವನಂತೆ.. ಮತ್ತೇನನ್ನೋ ಮರೆತವನಂತೇ.. ಎಲ್ಲವೂ ಅಯೋಮಯವೆನಿಸಲು ಕತ್ತಲನ್ನು ಬೆಳಗುತಿದ್ದ ಆಗಸವನ್ನೇ ದಿಟ್ಟಿಸತೊಡಗಿದ. ಮನಸು ಊರ್ಮಿಳೆಯ ಸುತ್ತಲೇ ಗಿರಕಿಹೊಡೆಯುತ್ತಿತ್ತು.

"ಎಲೈ ನನ್ನ ಏಕ ಮಾತ್ರ ಸಖನೇ... ಊರ್ಮಿಳೆ ಕಾದು ಕಾದು ಹದವಾಗಿಹಳೋ ಇಲ್ಲಾ ಸುಡುವ ಕೆಂಡವಾಗಿಹಳೋ ಯಾರು ಬಲ್ಲರು? ಹೆಣ್ಣಿನ ಮನಸನು ಅರಿತವರು ಯಾರಿಹರು ಹೇಳಯ್ಯ? ಅದೇನು ವಿಧಿ ಲಿಖತವೋ ಎಂತೋ.... ಅಣ್ಣಯ್ಯನಿಗೆ ಜನಕಮಾವಯ್ಯನವರ ದತ್ತು ಪುತ್ರಿ ಸೀತಮ್ಮ ಸಿಕ್ಕರೆ, ನನ್ನ ವರಿಸಿದ್ದು ಅವರ ಸ್ವಂತ ಪುತ್ರಿಯಾದ ಊರ್ಮಿಳೆ! ಇದು ಊರ್ಮಿಳೆಯ ದೌರ್ಭಾಗ್ಯವೋ ಇಲ್ಲಾ ಸೌಭಾಗ್ಯವೋ ತಿಳಿಯದು. ಆದರೆ ಒಂದಂತೂ ಸತ್ಯ, ಅವಳಿಗೆ ನನ್ನಿಂದ ಸರಿಯಾದ ನ್ಯಾಯ ಸಿಗಲಿಲ್ಲವೆಂಬ ಕೊರಗು ಕೊನೆಯವರೆಗೂ ಎನ್ನ ಕಾಡದಿರದು. ಹೂಂ.... ಅಣ್ಣಯ್ಯನೇನೋ ಮಣಭಾರದ ಬಿಲ್ಲನ್ನು ಮುರಿದು ಅತ್ತಿಗಮ್ಮನ ಪಡೆದ.... ಆದರೆ ಅದೇ ಅತ್ತಿಗಮ್ಮನ ಮನಃಸ್ಥಿತಿಯನ್ನು ಚೆನ್ನಾಗಿ ಅರಿತನೇ? ಹಾಗೆ ಅರಿತಿದ್ದರೆ ಅಗ್ನಿಪರೀಕ್ಷೆ ಎಂಬ ನೋವಿನ ಪ್ರಸಂಗವೇ ಎದುರಾಗುತ್ತಿರಲಿಲ್ಲವೇನೊ! ಹೋಗಲಿ.. ಅತ್ತಿಗಮ್ಮನೆಂದರೆ ನನಗೆಷ್ಟು ಆದರ, ಅಭಿಮಾನ... ವಯಸ್ಸಿನ ಅಂತರ ಅಷಿಲ್ಲದಿದ್ದರೂ ಸಂಬಂಧದ ಅಂತರ ಚೆನ್ನಾಗಿ ಅರಿತವನು ನಾನು. ಸೀತಮ್ಮನನ್ನು ಮಾತೃಸ್ವರೂಪಿಯೆಂದೇ ತಿಳಿದವನು.. ಇದು ಅಣ್ಣಯ್ಯನಾಣೆಗೂ ಸತ್ಯ. ಇಂತಿರುವಾಗ.. ಅಂದು ಆ ನೀಚ ಮಾರೀಚನ ದೆಸೆಯಿಂದಾಗಿ ಪುತ್ರ ಸಮಾನನಾಗಿರುವ ನನ್ನ ಚಾರಿತ್ರ್ಯವನ್ನೇ ಪ್ರಶ್ನಿಸಿದಳಲ್ಲಾ! ಮಾಯಾಮೃಗದ ಬೆನ್ನಟ್ಟಲು ಅಣ್ಣಯ್ಯನನ್ನೂ ಅಟ್ಟಿದಳು... ಅವಳಿಗಾಗಿ ಕಾದುನಿಂತ ನನ್ನ ಅವನ ರಕ್ಷೆಗಾಗಿ ದೂಡಿದಳು. ಒಂಟಿಯಾಗಿ ಬಿಟ್ಟು ಹೋಗಲೊಲ್ಲದ ನನ್ನ ಉದ್ದೇಶವನ್ನೇ ಕೆಡುಕಾಗಿ ಕಂಡಳು....‘ಒಬ್ಬಂಟಿಯಾಗಿರುವ ನನ್ನ ಚೆಲುವಿಗೆ ಮಾರುಹೋಗಿ, ಅಣ್ಣಯ್ಯನ ರಕ್ಷಣೆಗೆ ಹಿಂದೇಟು ಹಾಕುತ್ತಿರೆವೆಯಾ?!" ಎಂದಾಗ ನನಗಾದ ಅಪಮಾನ, ಯಾತನೆ, ನೋವಿನ ಅರಿವು ಯಾರಿಗಾಗಿತ್ತು? ಅಂದು ನಾನೆಷ್ಟು ನೊಂದು ಬೆಂದೆ ಎಂದು ಹೇಗೆ ಹೇಳಲಿ ಈಗ? ಕ್ಷಣಿಕ ಕಾಲನ ಮಾಯೆಯಿಂದಾಗಿಯೋ, ಆ ಕ್ಷಣದ ಕೆಟ್ಟ ಘಳಿಗೆಯಿಂದಾಗಿಯೋ, ಪತಿಯ ಪ್ರಾಣಕ್ಕೆ ಎರಗಿರಬಹುದಾದ ಅಪಾಯದ ಶಂಕೆಯ ಭಾವೋದ್ವೇಗದಿಂದಾಗಿಯೋ... ಚಿಕ್ಕ ವಯಸಿನ ಸೀತಮ್ಮ ಸಣ್ಣ ಮಾತನ್ನಡಿಬಿಟ್ಟಳು. ಆದರೆ ‘ಬಿಟ್ಟ ಬಾಣ ಹಾಗೂ ಹೊರಟ ಮಾತು ಮತ್ತೆ ಹಿಂಬಾರದು’ ಎಂಬುದನ್ನೇ ಮರೆತಳಯ್ಯ. ಇರಲಿ ಬಿಡು... ವಿನಾಕಾರಣ, ಸತ್ಯವನ್ನರಿಯದೇ ತಾಯಿ ಮಗನಿಗೆ ಎರಡೇಟು ಹಾಕಿ ನೋಯಿಸಿದಂತೇ ಎಂದು ತಿಳಿದು ಸುಮ್ಮನಾದೆ ನಾನು. ಅಣ್ಣಯ್ಯನಿಗೇನೂ ಹೇಳಹೋಗಲಿಲ್ಲ.... ಆದರೆ ನಮ್ಮಣ್ಣನೇನು ಸಾಮಾನ್ಯನೇ! ಅಂತರ್ಯಾಮಿಯಲ್ಲವೇ ನಮ್ಮ ಶ್ರೀರಾಮಚಂದ್ರ! ಎಲ್ಲವನ್ನೂ ತಿಳಿದಿರಬೇಕು.... ಹಾಗೆಂದೇ ಪತ್ನಿಗೆ ಅಗ್ನಿಪರೀಕ್ಷೆಯನ್ನೊಡ್ಡಿದನೇ? ಅರಿಯದೆಯೇ ಸರಿ, ವಿನಾಕಾರಣ ನನ್ನ ನೈತಿಕತೆಯನ್ನು ಪ್ರಶ್ನಿಸಿ ತನ್ನ ಪ್ರಿಯ ಸಹೋದರನನ್ನು ಅಪಮಾನಿಸಿದ್ದರ ಅರಿವು ಅವನಿಗಾಗಿತ್ತೆ? ಅಂತೆಯೇ ಅದರ ಅರಿವನ್ನು ತನ್ನ ಪ್ರಿಯ ಪತ್ನಿಗೆ ಮೂಡಿಸಲು ಆ ಪರೀಕ್ಷೆಯನ್ನೊಡ್ಡಿದನೇ? ಊಹೂಂ... ಅವನೇ ಆ ನಿಜವನು ಬಲ್ಲ."

ತುಸುಕಾಲ ಹಾಗೇ ತನ್ನ ಮೌನ ಸಾಮ್ರಾಜ್ಯದೊಳಗೆ ಕಳೆದು ಹೋದ ಸೌಮಿತ್ರಿ. ಮತ್ತೆ ಇದ್ದಕಿದ್ದಂತೇ ಎನೋ ಹೊಳೆದಂತಾಗಿ ಗಹಗಹಿಸಿ ನಗತೊಡಗಿದ. ನಗುತಿದ್ದ ತುಟಿಗಳಿಗೆ ಕೆಂಪಡರಿದ್ದ ಕಣ್ಗಳು ಕಾಣಿಸುವಂತಿರಲಿಲ್ಲ.

"ನೀನು ಬಲ್ಲೆಯೇನು ಸಖ...ಯಾವ ಹುತ್ತದೊಳಗೆ ಯಾವ ಹಾವಿಹುದೆಂದು?! ಊಹೂಂ... ಹೆಣ್ಣನ್ನರಿಯುವುದು ವ್ಯರ್ಥ ಪ್ರಯತ್ನವೇ ಸೈ!! ಆ ವಿಧಿಯ ಆಟದ ಮುಂದೆ ದೈವಾಂಶ ಸಂಭೂತರಾದ ನಾವೂ ತಲೆಬಾಗಲೇ ಬೇಕು. ಇಲ್ಲದಿರೆ, ‘ರಾಮಯ್ಯ.. ನನ್ನ ಕಂದ.. ಚೆಲುವ... ಜೋಕುಮಾರ’ ಎಂದೆಲ್ಲಾ ಕೊಂಡಾಡುತ್ತಿದ್ದ ಕೈಕೇಯಿ ಚಿಕ್ಕಮ್ಮನೇ ಸುಕೋಮಲನಾಗಿ ಬೆಳೆದಿದ್ದ ಹದಿನಾರರ ಅಣ್ಣಯ್ಯನನ್ನು, ಇನ್ನೂ ಹದಿನಾಲ್ಕರ ಹರೆಯದಲ್ಲಿದ್ದ ಪುಟ್ಟ ಅತ್ತಿಗಮ್ಮನನ್ನೂ ಕಾಡಿಗೆ ಅಟ್ಟಿಸುತ್ತಿದ್ದಳೇ? ಅದೂ ನಮ್ಮ ತಂದೆಯವರೇ ಆಜ್ಞೆ ಹೊರಡಿಸುವಂತೆ ವರ ಬೇಡಿ! ಚಿಕ್ಕಮ್ಮ ಕೇಳಿದ ಆ ಎರಡು ವರಗಳಿಂದ ಅದೆಷ್ಟೋ ಮುಗುದ ಜೀವಿಗಳಿಗೆ ಅನ್ಯಾಯವಾಗಿ ಶಾಪದೊರಕಿತು. ಚಿಕ್ಕಮ್ಮನ ವಾಕ್ಪ್ರಹಾರದಿಂದ ಅದೆಷ್ಟು ನೊಂದಿರಬೇಡ ನನ್ನಣ್ಣಯ್ಯನ ಮೃದು ಮನಸು. ಪ್ರತಿನುಡಿಯದೇ ಆಶೀರ್ವಾದ ಪಡೆದು ಹಸನ್ಮುಖರಾಗಿ ಹೊರಟ ಅವರೊಂದಿಗೇ ಹಠಮಾಡಿ ಹೊರಟುನಿಂತ ನನ್ನನ್ನು ತಡೆಯಲು ಆ ಮಂಥರೆ ಮಾಡಿದ್ದ ಕುಟಿಲೋಪಾಯಗಳು ಒಂದೇ ಎರಡೇ! ‘ಭರತನ ಪ್ರಿಯ ಸಹೋದರನೇ... ನಿನಗಿದು ಉಚಿತವಲ್ಲ... ಅವರವರ ಪ್ರಾರಾಬ್ಧ ಅವರಿಗೆ... ನಿನಗೇಕೆ ಈ ವನವಾಸದ ನಂಟು? ಚಿಕ್ಕ ವಯಸಿನ ಊರ್ಮಿಳೆಯ ನೋಡಯ್ಯ... ಬೇಡ ಹೆತ್ತ ತಾಯಿ ಸುಮಿತ್ರೆಯ ಪ್ರೀತಿಯೂ ತಡೆಯುತ್ತಿಲ್ಲವೇ ನಿನ್ನ? ಕೌಸಲ್ಯೆ ಮಹಾರಾಜರ ಪಟ್ಟದರಸಿ, ಕೈಕೆ ಪ್ರಿಯ ಪತ್ನಿ... ನಡುವಿನ ಪಾಪದ ಸುಮಿತ್ರೆಗೆ ಮಾತ್ರ ಸದಾ ದಕ್ಕಿದ್ದು ಅಳಿದುಳಿದದ್ದೇ ತಾನೆ? ನಿನ್ನ ಸಹೋದರ ಶತೃಘ್ನನೂ ಕೈಕೇಯಿ ನಂದನ ಭರತನೊಡನೆ ಅಜ್ಜನ ಮನೆಯಾದ ಕೇಕೇಯ ರಾಜ್ಯಕ್ಕೆ ಹೋಗಿರುವನು. ಇಂತಿರುವಾಗ ಅವಳ ಏಕೈಕ ಕನಸಾಗಿರುವ ನೀನೂ ಹೀಗೆ ಹೊರಟರೆ ಅವಳ ಮಾತೃ ಹೃದಯ ಅದೆಷ್ಟು ನೊಂದೀತು?" ಎಂದೆಲ್ಲಾ ಅದೆಷ್ಟು ಪರಿಪರಿಯಾಗಿ ಉಪದೇಶಿಸಿದ್ದಳು! ಮಂಥರೆ ಬಾಹ್ಯವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಅದೆಷ್ಟು ಕುರೂಪಳೆಂದು ನನಗಂದೇ ತಿಳಿದದ್ದಯ್ಯ. ತಂದೆಯವರಿಗೆ ನನ್ನ ಜನ್ಮವಿತ್ತವಳ ಮೇಲೆ ಇನಿತೂ ಪ್ರೇಮವಿಲ್ಲದಿದ್ದಲ್ಲಿ, ಮಹಾರಾಜರು ಪುತ್ರಕಾಮೇಷ್ಟಿಯಾಗದ ಸಮಯದಲ್ಲಿ ಪೂರ್ಣಾಹುತಿಯಾನಂತರ ಅಗ್ನಿ ಸಂತುಷ್ಟನಾಗಿ ನೀಡಿದ್ದ ಪಾಯಸದಲ್ಲಿ ದೊಡ್ಡಮ್ಮ ಹಾಗೂ ಚಿಕ್ಕಮ್ಮರಿಗೆ ಒಂದೇ ಪಾಲನ್ನಿತ್ತು ನಡುವಿನ ರಾಣಿಯಾದ ನನ್ನಮ್ಮ ಸುಮಿತ್ರೆಗೆ ಮಾತ್ರ ಎರಡು ಪಾಲನ್ನು ನೀಡುತ್ತಿದ್ದರೇ? ತಂದೆಯವರ ಅಪಾರ ಪ್ರೀತಿಗೆ ಇನ್ನೇನು ಸಾಕ್ಷಿ ಬೇಕು? ಅವರೊಮ್ಮೆ ಎರಡು ಪಾಲನ್ನು ಅಮ್ಮನಿಗೇ ನೀಡದಿದ್ದಲ್ಲಿ, ಲಕ್ಷ್ಮಣನೊಡನೆ ಶತೃಘ್ನನ ಜನವಾಗಲು ಸಾಧ್ಯವಿತ್ತೇ? ತಂದೆಯವರಿಗೂ ನನ್ನಮ್ಮನ ನಿಷ್ಕಲ್ಮಶ ಮನಸಿನ ಸುಂದರತೆಯ ಅರಿವು ಮೊದಲೇ ಆಗಿದ್ದಿರಬೇಕು. ಅಂತೆಯೇ ಈ ಸೌಭಾಗ್ಯ ಅವಳ ಪಾಲಿಗೊದಗಿದ್ದು. ಅವಳೂ ಅಷ್ಟೇ... ಅಣ್ಣನ ಹಿಂಬಾಲಕನಾಗಿ ಹೊರಟ ನನ್ನನ್ನು ಸಂತೋಷದಿಂದ ಬೀಳ್ಕೊಟ್ಟಳು.. ಹನಿ ಕಣ್ಣೀರು ಉದುರಿದ್ದರೆ ನನ್ನ ಅಣ್ಣಯ್ಯನ ಮೇಲಾಣೆ. ಹೆತ್ತತಾಯಿಯ ಮನಃಪೂರ್ವಕ ಆಶೀರ್ವಾದ, ಅಣ್ಣಯ್ಯನ ನಿರ್ವಾಜ್ಯ ಪ್ರೇಮ, ಊರ್ಮಿಳೆಯ ಅಪ್ರತಿಮ ಸಹನೆಯಿಂದ ತಾನೇ ನಾನಿಂದು ಸರ್ವರ ಆದರಕ್ಕೆ ಪಾತ್ರನಾಗಿರುವುದು! 

ನೀನೇ ನೋಡಿಲ್ಲವೆ ಸಖ? ನಿನ್ನೆ ವನವಾಸದಿಂದ ಹಿಂತಿರುಗಿದ ನಮ್ಮನ್ನು ಅದೆಷ್ಟು ಅದ್ಧೂರಿಯಾಗಿ ಪರಿಜನರೆಲ್ಲಾ ಎದುರುಗೊಂಡರು... ಭರತ, ಶತ್ರುಘ್ನ, ದೊಡ್ಡಮ್ಮ, ಅಮ್ಮ ಎಲ್ಲರೂ ಅಪ್ಪಿ ಕಣ್ಣೀರುಗರೆದರು. ಆದರೆ ಊರ್ಮಿಳೆಯ ಕಣ್ಣೊಳಗಿನ ಭಾವವನ್ನು ಮಾತ್ರ ತಿಳಿಯಲಾರದೇ ಹೋದೆ. ಹೂವು ಹಾಕಿ, ಸುಗಂಧವನು ಪೂಸಿ, ತಿಲಕವನ್ನಿಟ್ಟು ಬರಮಾಡಿಕೊಂಡರೂ, ಆಕೆಯ ಮೊಗದೊಳಗಿದ್ದ ನಿರ್ಭಾವುಕತೆ ನನ್ನ ಕದಡಿಹಾಕಿತು. ನಿನ್ನೆಯ ದಿನ ಆ ಕ್ಷಣ ಅವಳ ಮೊಗವನ್ನು ಕಂಡಾಗಿನಿಂದ, ನಾನು ಈವರೆಗೂ ಅರಿಯದಿದ್ದ ಸಣ್ಣ ಭಯವೊಂದು ನನ್ನೊಳಗೆ ಮನೆ ಮಾಡಿಕೊಂಡಿದೆ. ಹೇಗೆ ಎದುರಿಸಲಿ ಅವಳ? ಅವಳು ಕೇಳಬಹುದಾದ ಪ್ರಶ್ನೆಗಳ? ಆದಿನ... ಆ ದುರ್ದಿನ... ಅಣ್ಣಯ್ಯ, ಅತ್ತಿಗಮ್ಮರನೊಡಗೂಡಿ ನಾನು ವನವಾಸಕ್ಕೆಂದು ಹೊರಟಾಗ ಅವಳಿಗೆ ಸರಿಯಾಗಿ ತಿಳಿಹೇಳಲೂ ಸಮಯಾವಕಾಶ ಸಿಕ್ಕಿರಲಿಲ್ಲ. ಹಾಗೆ ನೋಡ ಹೋದರೆ ಆಕೆಯನ್ನು ಕೈಹಿಡಿದಾಗಿನಿಂದ ಸರಿಯಾಗಿ ಅವಳ ಮೊಗವನ್ನೂ ನೋಡದಿದ್ದ ನನಗೆ ಅಂದು ಅವಳನ್ನು ಏಕಾಂತದಲ್ಲಾದರೂ ಒಮ್ಮೆ ಸಂಧಿಸಿ ತೆರಳಬೇಕೆಂಬ ಪರಿಜ್ಞಾನವೇ ಬರಲಿಲ್ಲವಲ್ಲ! ಕ್ಷತ್ರೀಯ ಪತ್ನಿಯರ ಕರ್ತವ್ಯವನ್ನಷ್ಟೇ ನೆನಪಿಸಿ ಹೊರಟುಬಿಟ್ಟಿದ್ದೆ. 

ಪ್ರಿಯ ಪ್ರತಿರೂಪಿ ಸಖನೇ ಕೇಳುವಂತವನಾಗು... ಅಂದು ನಾನು ಹಾಗೆ ವನವಾಸಕ್ಕೆ ತೆರಳಿದ್ದು ಘೋರ ಅಪರಾಧ ಎಂದು ನನಗೆ ಅನಿಸಲೇ ಇಲ್ಲ... ಅನಿಸುತ್ತಲೂ ಇಲ್ಲ.. ಅದು ನನ್ನ ನಿಷ್ಠೆ ಹಾಗೂ ಭ್ರಾತೃ ಪ್ರೇಮದ ಉತ್ಕಟತೆಯಾಗಿತ್ತು. ವಿಷ್ಣುವಿನ ಅಂಶವನ್ನೇ ಹೊತ್ತು ಭುವಿಗಿಳಿದ ಆ ಶ್ರೀರಾಮನ ಅದೆಂತು ಒಂಟಿಯಾಗಿ ಕಳುಹಿಸಲು ಸಾಧ್ಯವಿತ್ತು?! ನನ್ನ ಜನ್ಮದ ಮೂಲವನ್ನು, ಉದ್ದೇಶವನ್ನು ಸವಿವರವಾಗಿ ತಿಳಿ ಹೇಳಿದ್ದ ವಸಿಷ್ಠರ ಉಪದೇಶವನ್ನು ಊರ್ಮಿಳೆಗಾಗಿ ಪರಿತ್ಯಜಿಸಲು ಸಾದ್ಯವಿತ್ತೆ? ಹಾಗೇನಾದರೂ ನನ್ನಿಂದ ಆಗಿದ್ದರೆ, ಅದೇ ಅಕ್ಷಮ್ಯ ಅಪರಾಧವಾಗಿರುತ್ತಿತ್ತಲ್ಲವೇ? ಹೀಗಿರುವಾಗ ನನ್ನ ಅಪರಾಧಿ ಎನ್ನಲು ಅವಳಿಗೆ ಏನೊಂದೂ ಕಾರಣ ಸಿಗದು ಎಂದೇ ಭಾವಿಸುವೆ. ಅಣ್ಣ ಶ್ರೀರಾಮನಿಗೆ ಪಟ್ಟ ಕಟ್ಟುವುದೆಂದು ತಂದೆಯವರು ಹೇಳಿದಾಗ ಅದೆಷ್ಟು ಸಂಭ್ರಮಿಸಿದ್ದೆ.. ಜೀವಕ್ಕೆ ಜೀವವಾಗಿದ್ದ, ಗೆಳೆಯನಂತೆ, ತಂದೆಯಂತೆ, ಹಿರಿಯಣ್ಣನಂತೇ ನನ್ನೊಡನಾಡಿ ಬೆಳೆದವ... ನನ್ನನ್ನು ಅಪ್ಪಿ "ರಾಜ್ಯಾಭಿಷೇಕ ನನಗಾದರೇನು ತಮ್ಮಯ್ಯ.. ಇಬ್ಬರೂ ಕೂಡಿ ಬಾಳಿ ರಾಜ್ಯವನ್ನಾಳುವ.. ಎಲ್ಲವುದರಲ್ಲೂ ನಿನಗೆ ಸಮಪಾಲಿದೆ.." ಎಂದಿದ್ದ. ಹಾಗೆಂದ ಕೆಲವೇ ಸಮಯದಲ್ಲೇ ವನವಾಸಯೋಗ ಅವನಿಗೆರಗಿತ್ತು. ಆಗ ನಾನು ಅವನ್ನು ಹಿಂಬಾಲಿಸದಿದ್ದಲ್ಲಿ ನನ್ನೊಳಗಿನ ‘ನೀನು’ ಸುಮ್ಮನಿರುತ್ತಿದ್ದೆಯಾ ಹೇಳು? ರಾಜಭೋಗದ ಪಾಲಿಗೆ ತಯಾರಿದ್ದ ನನ್ನ ಮನಸು ವನವಾಸಕ್ಕೆ ಹಿಂಜರಿಯುತ್ತಿತ್ತೆ? ಊಹೂಂ... ಲಕ್ಷ್ಮಣ ರಾಮನ ಶೇಷ... ಅವನ ನೆರಳಿದ್ದಂತೆ. ಗುರು ಹಿರಿಯ ಆಶೀರ್ವಚನ, ಮಾತೃ ಆದೇಶವನ್ನು ಉಲ್ಲಂಘಿಸಿ ಪತ್ನಿಗಾಗಿ ಹಿಂಜರಿದಿದ್ದರೆ ಭವಿಷ್ಯತ್ತಿನಲ್ಲಿ ಸ್ವತಃ ಊರ್ಮಿಳೆಯೇ ನನ್ನ ಹಂಗಿಸದಿರುತ್ತಿದ್ದಳೆ?! ವಿಧಿಯ ಸೂತ್ರದೊಳಗೆ ಕುಣಿವ ಗೊಂಬೆಯಾಗಿ, ವಿರಹದ ತಾಪವನ್ನು ಅವಳಿಗೆ ನಾನಿತ್ತರೂ, ನನ್ನ ನಂಬಿ ಬಂದ ಊರ್ಮಿಳೆಗೆ ನಾನೆಂದೂ ಕನಸಿನೊಳಗೂ ದ್ರೋಹ ಮಾಡಲಿಲ್ಲ.... ಇದು ನಿನಗೂ ಬಹು ಚೆನ್ನಾಗಿಯೇ ತಿಳಿದಿದೆ ಅಲ್ಲವೇ? 

ಹೂಂ.... ನೆನಪಿದೆಯೆ ನಿನಗೆ? ಅಂದು ಸುಗ್ರೀವನ ಗುಹೆಗೆ ಹೋದಾಗ ಅದೆಷ್ಟು ಚೆಲುವೆಯರು ಸರಸ ಸಲ್ಲಾಪದಲ್ಲಿ ತೊಡಗಿದ್ದರು... ರತಿಕ್ರೀಡೆ ಎಲ್ಲೆಡೆ ತುಂಬಿತ್ತು... ಆದರೆ ಅರೆಕ್ಷಣವೂ ನನ್ನ ಮನಸು ಲಂಪಟವಾಗಲಿಲ್ಲ. ಹೇಮಕೂಟದಲ್ಲಿ ಅಣ್ಣಯ್ಯ ಅತ್ತಿಗಮ್ಮನೊಂದಿಗೆ ಸರಸ ಸಂಭಾಷಣೆಯಲ್ಲಿದ್ದಾಗಲೂ ನನ್ನ ಮನಸು ಇಲ್ಲಿರುವ ಊರ್ಮಿಳೆಯನ್ನೇ ನೆನೆದು ನೀರಾಗಿತ್ತು. ವನವಸಾದ ದೀರ್ಘಾವಧಿಯಲ್ಲೆಲ್ಲೂ.... ಬೇರಾವ ಹೆಣ್ಣನ್ನೂ ಅವಳ ಸ್ಥಾನದಲ್ಲಿ ಕಲ್ಪಿಸಲೂ ಇಲ್ಲ. ವನವಾಸದ ಕೊನೆಯ ವರುಷದ ಆದಿನ... ಲಂಕಾದಹನಕ್ಕೆ ಮುಹೂರ್ತವಿಟ್ಟ ಆ ರಾಕ್ಷಸಿಯ ನೆನಪಿದೆಯೇ? ಅಣ್ಣಯ್ಯನ ಹೊಂದಲು ಬಯಸಿ, ಆ ಕಾರ್ಯದಲ್ಲಿ ವಿಫಲಳಾದ ಆ ಶೂರ್ಪನಖಿ ಅಪ್ರತಿಮ ಸುಂದರಿಯಂತೇ ವೇಷ ಧರಿಸಿ ಬಂದು, ಕಾಮಾತುರಳಾಗಿ, ಲಜ್ಜೆಗೆಟ್ಟು ನನ್ನ ಬಯಸಿ ಅಂಗಲಾಚಿದಾಗಲೂ ಮನಸು ಅರೆಕ್ಷಣವೂ ಅವಳ ಅಂದವನ್ನು ಬಯಸಲಿಲ್ಲ. ಬಲ್ಲೆ... ಮಾನಸಿಕವಾಗಿ ಹತ್ತಿರವಿದ್ದರೂ ಊರ್ಮಿಳೆಯನ್ನು ನನ್ನ ಸ್ಪರ್ಶಸುಖದಿಂದ ವಿಮುಖಳನ್ನಾಗಿಸಿದೆ. ಹೋಗುವ ಮುನ್ನ ಒಮ್ಮೆಯೂ ‘ನಿನಗೆ ಬೇಸರವೆ? ನಿನ್ನ ಒಪ್ಪಿಗೆ ಇದೆಯೆ? ಜೊತೆಗೆ ನೀನೂ ಬರುವೆಯಾ?’ ಏನೊಂದೂ ಕೇಳಲಿಲ್ಲ. ಕರ್ತವ್ಯಕ್ಕಾಗಿ, ಧರ್ಮ ಪರಿಪಾಲನೆಗಾಗಿ, ನನ್ನ ಹುಟ್ಟಿನ ಹಿಂದಿನ ಉದ್ದೇಶದ ಸಾಫಲ್ಯಕ್ಕಾಗಿ, ಊರ್ಮಿಳೆಯಂತಹ ಸಾಧ್ವಿಗೆ ಈ ಕಷ್ಟವನ್ನು ನೀಡಲೇಬೇಕಾಯಿತು. ಅವಳ ನೋವಿನ ಅರಿವು ಸಂಪೂರ್ಣನನಗಾಗದಿರಬಹುದು. ಆದರೆ ಅದೇ ಉರಿಯಲ್ಲಿ ಸ್ವಲ್ಪವಾದರೂ ನಾನೂ ಬೆಂದಿರುವೆನೆಂದರೆ ನೀನಾದರೂ ನಂಬಬೇಕು. ನಿನಗೂ ತಿಳಿದಿದೆಯಲ್ಲಾ... ಬಹುಪತ್ನಿತ್ವ ಕ್ಷತ್ರೀಯರಿಗೆ ಸಹಜ. ಮಹಾರಾಜರೂ ಇದನ್ನು ಪರಿಪಾಲಿಸಿದವರೇ. ಆದರೆ ಇದನ್ನು ಒಪ್ಪದ ಅಣ್ಣಯ್ಯ ‘ಏಕಪತಿವೃತಸ್ಥನಾಗಿರುವೆ’ ಎಂದು ಘೋಷಿಸಿಕೊಂಡ....ಅದನ್ನೇ ಪಾಲಿಸಿದ. ಆದರೆ ಅವನ ಪ್ರತಿಜ್ಞೆಯೊಡನೆಯೇ ನಾನೂ ನನ್ನ ಮನದೊಳಗೇ ನಿರ್ಧರಿಸಿದ್ದೆ. ‘ಈ ಲಕ್ಷ್ಮಣನಿಗೆ... ಸುಮಿತ್ರೆಯ ಪುತ್ರ ಸೌಮಿತ್ರಿಗೆ ಈ ಜನ್ಮದಲ್ಲೊಂದೇ ಅಲ್ಲ.... ಮುಂದೆನ ಎಲ್ಲಾ ಜನ್ಮದಲ್ಲೂ ಊರ್ಮಿಳೆಯೇ ಧರ್ಮಪತ್ನಿ.. ಇಂದೂ, ಮುಂದೂ ಅವಳೇ ನನ್ನ ಸಹಧರ್ಮಿಣಿ’ ಎಂದು ಪ್ರತಿಜ್ಞೆಗೈದಿದ್ದೆ. ನನ್ನ ಈ ಅಘೋಷಿತ ಪ್ರತಿಜ್ಞೆಯನ್ನು ಅವಳ ಬಳಿ ಸಾರಿ ಅರುಹಿದರೆ ಊರ್ಮಿಳೆಗೆ ಮಹದಾನಂದವಾಗಬಹುದು ಅಲ್ಲವೇ?

ಬಲ್ಲೆನಯ್ಯ.... ಹದಿನಾಲ್ಕು ವರುಷದ ಸುದೀರ್ಘ ಅಗಲಿಕೆಯ ನಂತರ ಇಂದು ಈ ರಾತ್ರಿ ನಮಗಾಗಿ ಬಂದಿದೆ. ಆದರೆ ಹತ್ತು ಹೆಜ್ಜೆ ದೂರದಲ್ಲಿರುವ ಆ ಅಂತಃಪುರದಲ್ಲಿ ನನಗಾಗಿ ಕಾಯುತ್ತಿರುವ ಅವಳನ್ನು ಎದುರಿಸಲು ನನ್ನ ಗಂಡೆದೆಯೂ ನಡುಗುತ್ತಿದೆ. ಲಂಕೆಯಲ್ಲಿ ಅಸುರರನ್ನೆಲ್ಲಾ ದಮನಿಸುವಾಗ ಇದ್ದ ಕೆಚ್ಚು ಈಗ ಎಲ್ಲೋ ಅಡಗಿ ಕುಳಿತಂತಹ ಭಾಸ! ಗೊತ್ತು ಸಖ... ಎಲ್ಲವನೂ ತಿಳಿದಿರುವೆ ನಾನು... ಇತಿಹಾಸದ ಪುಟದಲ್ಲಿ ಊರ್ಮಿಳೆಯ ತ್ಯಾಗಕ್ಕೆ ಯೋಗ್ಯ ಬೆಲೆ ದೊರಕುವುದು. ನನ್ನನ್ನು ಶ್ರೀರಾಮನ ತಮ್ಮ, ಊರ್ಮಿಳೆಯ ಪತಿ, ಸುಮಿತ್ರೆಯ ಪುತ್ರ ಎಂದಷ್ಟೇ ಕರೆದರೂ ಬೇಸರ ಇನಿತೂ ಇಲ್ಲಯ್ಯ. ಆದರೆ ಆದರ್ಶಪ್ರಾಯ ಸಹೋದರ, ಸುಸಂಸ್ಕೃತ ಪುತ್ರ ಎಂದು ಅನಿಸಿಕೊಂಡರೂ, ಯೋಗ್ಯ ಪತಿ ಎಂದು ಮಾತ್ರ ಅನಿಸಿಕೊಳ್ಳದಿರುವೆನೇನೋ ಎಂಬ ಸಣ್ಣ ಶಂಕೆ ಕಾಡುತ್ತಿದೆ. ಅದಕ್ಕೂ ಬೇಸರವಿಲ್ಲ ಬಿಡು... ಭವಿಷ್ಯತ್ತಿನಲ್ಲಿ ನನ್ನ ಊರ್ಮಿಳೆಯ ಮನಕೆ ಎಂದಾದರೂ ನನ್ನ ನೋವಿನ, ಯಾತನೆಯ, ಪ್ರಾಮಾಣಿಕ ನಿಷ್ಠೆಯ ಅರಿವಾಗಿ, ನನ್ನ ನಿರ್ಮಲ ಪ್ರೇಮದ ಅನುಭೂತಿ ಅವಳನ್ನೂ ತಟ್ಟಿ, ಹಿಡಿಯಷ್ಟಾದರೂ ಸರಿ... ಅವಳ ಪ್ರೀತಿ ನನಗೆ ದೊರಕಿದರೆ ನಾನೂ ಸಂಪೂರ್ಣನಾಗುವೆ. ಇಂದು ಅವಳ ಮನಸು ನೊಂದು ಬೆಂದಿರಬಹುದು... ಆದರೆ ಇಂದಿನಿಂದ ಅದರೊಳಗೆ ಪ್ರೀತಿ, ಸ್ನೇಹ, ಆದರಗಳ ಹೊಳೆ ಹರಿಸಿ ತಿಳಿಯಾಗಿಸಬೇಕಿದೆ. ಅದಕ್ಕಾಗಿ ನನ್ನೊಳಗಿನ ‘ನೀನು’ ತುಸು ಗಟ್ಟಿಯಾಗಿ, ಮೆದುವಾಗಿ ಅವಳ ಎದುರುಗೊಳ್ಳಬೇಕಿತ್ತು. ಅಂತೆಯೇ ಇಂದೆಲ್ಲಾ ನಿನ್ನನೇ ಧ್ಯಾನಿಸಿದೆ ಸಖ... ಈ ನನ್ನ ಅಳಲಿಗೆ ನೀನೇನು ಉತ್ತರಿಸುವೆ ಹೇಳು? ನನ್ನ ಊರ್ಮಿಳೆ ನನಗೆ ದೊರಕುವಳೇ?" ಎಂದು ಅವನೆಡೆ ತಿರುಗಿದರೆ ಮತ್ತೆ ಅಚ್ಚರಿಯೊಂದು ಕಾದಿತ್ತು.

ಅದಾವ ಮಾಯದಲೋ ಎಂತೋ ಆ ‘ಪ್ರತಿರೂಪಿ’ ಕಾಣೆಯಾಗಿ ಹೋಗಿದ್ದ. ಹುಡುಕಿದರೆ ಎಲ್ಲಿರುವನೆಂದು ಚೆನ್ನಾಗಿ ಅರಿತಿದ್ದ ಸೌಮಿತ್ರಿ.. ನಿಧಾನವಾಗಿ ವಿಶ್ರಾಂತಿ ಭವನದಿಂದ ಹೊರಬಿದ್ದ. ಒಂದೊಂದು ಹೆಜ್ಜೆಯನೂ ಒಂದೊಂದು ವರುಷ ಕಳೆದಂತೆ ಹಾಕುತ್ತಾ, ಊರ್ಮಿಳೆಯಿದ್ದ ಅಂತಃಪುರದೆಡೆ ಮೆಲ್ಲ ಮೆಲ್ಲನೆ ಹೊರಟವನನ್ನು ಕಂಡು ನಿಯತಿಗೂ ಕರುಣೆಯುಕ್ಕಿತು.

["ಉತ್ಥಾನ" ವಾರ್ಷಿಕ ಕಥಾಸ್ಪರ್ಧೆ-೨೦೧೨ರಲ್ಲಿ ತೃತೀಯ ಬಹುಮಾನ ಪಡೆದ ಕಥೆ. ಮಾರ್ಚ್ ತಿಂಗಳ "ಉತ್ಥಾನ"ದಲ್ಲಿ ಪ್ರಕಟಿತ.]

-ತೇಜಸ್ವಿನಿ ಹೆಗಡೆ 

-----***-----

ಮಂಗಳವಾರ, ಫೆಬ್ರವರಿ 5, 2013

ಕಪ್ಪು-ಬಿಳುಪು

ದಿಟ್ಟಿ ಚಾಚಿದಷ್ಟೂ ಕಾಣೋ ನೋಟವನ್ನೇ ನಂಬಿ
ಅದರಾಚೆಗೂ ಹಬ್ಬಿರುವ ಸತ್ಯವ ಅಲ್ಲಗಳೆದರೆ,
ನಿಜ ಸುಳ್ಳಾಗದು, ಸುಳ್ಳೇ ಸತ್ಯವಾಗದು!

ತಮ್ಮೊಳಗಿನ ಪರಿಮಿತಿಗೆ ವೃತ್ತವನ್ನೆಳೆದು
ವ್ಯಾಸ, ಜ್ಯಾ, ತ್ರಿಜ್ಯಾಕ್ಕೂ ತಮ್ಮದೇ ಸೂತ್ರ ಗೀಚಿ,
ಕೇಂದ್ರದೊಳೇ ಕುಳಿತಾಗ, ಕಣ್ತೆರೆದಿದ್ದರೂ ಮುಚ್ಚಿದಂತೇ!

ಹಣೆಯಲಿ ಕಾಸಗಲ ಕುಂಕುಮವಿಟ್ಟರೇನಂತೇ?
ಮನದೊಳು ನಿಶೆಯ ನಶೆಯಿದ್ದರೆ, ಎಲ್ಲವೂ ಬರಿ ಬೋಳು!
ತಿಳಿವಿನ ನಂದಾದೀಪದಡಿಯಲ್ಲಿ, ಶೂನ್ಯವೂ ಪರಿಪೂರ್ಣವು.

ಮೊಸಳೆಯ ಕಣ್ಣೀರಿಗೆ ಮಿಡಿವ(?) ಹೃದಯಗಳೂ ಅಷ್ಟೇ
ಅಪಧಮನಿ, ಅಭಿಧಮನಿಗಳೆಲ್ಲಾ ಅದಲು ಬದಲು....
ಗೋಸುಂಬೆ ಬದುಕೊಳಗೇ ರಂಗೇರುತಿರುವಾಗ,
ರಕ್ತನಾಳಗಳಲ್ಲೂ ಬಣ್ಣ ಬಿಳುಪು!

ಕಲಿಯುಗದ ತುಂಬೆಲ್ಲಾ ಕರಿಯ ಕಲಿಗಳದೇ ರಾಜ್ಯ!
ಕಲ್ಲು ಹೃದಯದ ಒಳಗೆ ಮಾಟಗಾತಿಯ ಬೇಟ
ಯುಗ ಯುಗ ಕಳೆದರೂ ಯುಗವೆಷ್ಟು ಬೇಕಿಹುದೋ?
ಕಲ್ಲು ಕರಗುವ ಸಮಯಕೆ, ಕರಿಯ ಮನಸುಗಳ ಬಿಳುಪಿಗೆ!!?

-ತೇಜಸ್ವಿನಿ ಹೆಗಡೆ

ಮಂಗಳವಾರ, ಜನವರಿ 15, 2013

ನನ್ನ ಪ್ರತಿಬಿಂಬದ ಮೊದಲ ಕವನ....


ಅದು ಆಗೋದೇ ಹಾಗೆ! ಬರೆಯೋ ಮನಸು ಬಂದಾಗ ಸಮಯವಿರುವುದಿಲ್ಲಾ.. ಇಲ್ಲಾ ಏನಾದರೂ ಅಡೆ ತಡೆ ಇದ್ದೇ ಇರುತ್ತದೆ... ಇನ್ನು ಸಮಯ ಸಿಕ್ಕಾಗ ಬರೆಯೋ ಹುಕ್ಕಿ ಇರೊಲ್ಲಾ.. ಯಾಕೋ ಏನೂ ಬೇಡವೆನ್ನೋ ಉದಾಸೀನತೆ ಆವರಿಸುತ್ತದೆ. ಅವತ್ತೊಂದು ದಿನ ಹೀಗೇ... ಬರೀಲೇ ಬೇಕು ಅಂತಾ ಕೂತಿದ್ದೆ ಅಷ್ಟೇ... ಅದಿತಿ ಬಂದವಳೇ "ಅಮ್ಮಾ.. ನೀ ಲೆಪ್‍ಟಾಪ್ ನಲ್ಲಿ ಎಂತ ಬರೀತಾ ಇರ್ತೆ ಹೇಳು? ನಾನೂ ಬರೀತೆ.." ಎಂದು ಪಕ್ಕದಲ್ಲಿ ಕೂತೇ ಬಿಟ್ಟಳು. ಸರಿ.. ಬರೆದಿದ್ದ ಯಾವುದೋ ಒಂದು ಕವಿತೆಯನ್ನು ತೋರಿಸಿ ಓದಿದೆ. ಅವಳಿಗೆಷ್ಟು ಅರ್ಥವಾಯಿತೋ ಗೊತ್ತಿಲ್ಲ.. ಆಮೇಲೆ ೫-೬ ಬಾರಿ ಕವಿತೆಗಳ ಬಗ್ಗೆ, ಹಾಡನ್ನು ಬರೆಯೋದರ ಬಗ್ಗೆ ಕೇಳಿದ್ದಳು. ನಾನೂ ಅವಳಿಗರ್ಥವಾಗೋ ರೀತಿ ಏನೋ ಒಂದು ಹೇಳಿದ್ದೆ. ಆದರೆ ಇಂದು ಹೀಗೆ ಬಳಿ ಬಂದವಳೇ.. "ಅಮ್ಮಾ ನೀ ಇವತ್ತು ನನ್ನ ಕವಿತೆ ಬರಿ.. ನಾ ಬಸ್ಸಲ್ಲಿ ಬರ್ತಾ ಒಂದು ಕವಿತೆ ಕಟ್ಟಿದ್ದೆ.. ನಾನೇ ಹಾಡ್ತೆ.." ಎಂದು ಹೇಳ್ತಾ ಕೂತಳು. ಹಾಡೋವಾಗ ಒಂದು ಸಾಹಿತ್ಯವಿದ್ದರೆ ಅದನ್ನೇ ಮತ್ತೆ ಅವಳಲ್ಲಿ ಹೇಳಿಸಿ ನಾನು ಇದ್ದದನ್ನು ಇದ್ದ ಹಾಗೇ ಬರೆದುಕೊಳ್ಳುವಾಗ ಸ್ವಲ್ಪ ಬೇರೆ ಆಗಿತ್ತು. ಹಾಡ್ತಾ ಹಾಡ್ತಾ ಅವಳೇ ಅವಳ ಸಾಹಿತ್ಯವನ್ನು ತಿದ್ದುತ್ತಿದ್ದಳು! ಹೀಗೇ ಅವಳು ಹೇಳಿದ್ದನ್ನೇ ಬರೆದುಕೊಂಡು ಅವಳೇ ರಾಗ ಹಾಕಿ ಹಾಡಿದ್ದನ್ನೂ ರೆಕಾರ್ಡ್ ಮಾಡಿದೆ. ರಾಗ, ಸಾಹಿತ್ಯ, ಸಂಗೀತ ಎಲ್ಲವೂ ಅದಿತಿ ಹೆಗಡೆಯದ್ದೇ! :) ಕೇಳುವಾಗ.. ಬರೆದುಕೊಳ್ಳುವಾಗ ನನ್ನೊಳಗೆ ಅರಿಯದ ಪುಳಕ, ಸಂತಸ, ಹೆಮ್ಮ! ಸ್ವತಃ ನಾನು ಮೊದಲ ಸಲ ಬರೆದಾಗಲೂ ನನ್ನೊಳಗೆ ಹೀಗೆಲ್ಲಾ ಅನುಭೂತಿ ಆಗಿತ್ತೋ ಇಲ್ಲವೋ! 

ಅದಿತಿಯ ಆ ಪುಟ್ಟ ಕವನ ಇಲ್ಲಿದೆ :-      

(ಅವಳೇನು ಹೇಳಿದಳೋ.. ಹಾಡಿದಳೋ ಅದನ್ನು ಹಾಗೇ ನಿಮ್ಮ ಮುಂದಿರಿಸಿದ್ದೇನೆ:))


ಕೃಷ್ಣ ಕೃಷ್ಣ ಕೊಳಲು ಹಿಡಿದ ಕೃಷ್ಣ
ಕೃಷ್ಣ ಕೃಷ್ಣ ಕೊಳಲು ಹಿಡ್ಕೊಂಡು ಹಾಡು ಹೇಳ್ತಾನೆ.. 
ಕೃಷ್ಣ ಬರೀ ಬೆಣ್ಣೆ ತಿನ್ನೋದೇಕೆ?
ಕೃಷ್ಣ ನೀನು ಚಂದಮಾಮ ಇದ್ದಲ್ಲಿ ಹೋಗು...
ಕೃಷ್ಣ ಕೃಷ್ಣ ನಿನ್ನ ನವಿಲು ಗರಿ ಚೊಲೋ ಇದೆ
ಕೃಷ್ಣ ಕೃಷ್ಣ ನೀನ್ಯಾಕೆ ನವಿಲುಗರಿ ಹಾಕ್ಕೊಂಡಿದೀಯಾ..
ಕೃಷ್ಣ ಪುಟ್ಟ ಮಗು ಆಗಿ ತೊಟ್ಟಿಲಲ್ಲಿ ಮಲಗಿದ್ದಾನೆ (೨ ಸಲ)
ಕೃಷ್ಣ ಯಾಕೆ ಮಗು ಆಗಿ ತೊಟ್ಟಿಲಲ್ಲಿದ್ದಾನೆ?
ಕೃಷ್ಣ ಬಲರಾಮ್ ಕೃಷ್ಣ ಬಲರಾಮ್ (೨ ಸಲ)
ಬಲರಾಮ್ ಕೃಷ್ಣ ಬಲರಾಮ್ ಕೃಷ್ಣ... (೨ ಸಲ)

-ಅದಿತಿ ಹೆಗಡೆ. 

(ಟಿಪ್ಪಣಿ :- ಚಂದಮಾಮ ಇದ್ದಲ್ಲೇ ಕೃಷ್ಣ ಯಾಕೆ ಹೋಗ್ಬೇಕು? ಎಂದು ನಾನು ಕೇಳಿದ್ದಕ್ಕೆ.. ಅವನು ಇರೋದೇ ಚಂದಮಾಮ ಇರೋ ಕಡೆ ಅಂತಪ್ಪಾ.... ಅಂದರೆ ಆಕಾಶದಲ್ಲಂತೆ...:) ಹಾಗೇ ಕಾರ್ಟೂನ್‍ನಲ್ಲಿ ನೋಡಿದ್ದಾಳಂತೆ ಕೃಷ್ಣ ಇದ್ದಲ್ಲಿ ಬಲರಾಮ್ ಇರ್ಲೇ ಬೇಕಂತೆ.. ಹಾಗಾಗಿ ಕೊನೆಯ ಎರಡು ಸಾಲುಗಳು! )