ಗುರುವಾರ, ಮೇ 27, 2010

ಅರ್ಥವಾಗಿಯೂ ಅರ್ಥವಾಗದಿರುವ ಪ್ರಶ್ನೋತ್ತರಗಳಿವು....


ಕೆಲವು ಪ್ರಶ್ನೆಗಳು ಸದಾ ಎಚ್ಚರದಿಂದಿರುತ್ತವೆ
ಆದರೆ ಅವುಗಳ ಉತ್ತರಗಳೆಲ್ಲಾ ಸದಾ ನಿದ್ದೆಯಲ್ಲೇ...
ಒಮ್ಮೊಮ್ಮೆ, ಒಂದೊಮ್ಮೆ ಒಂದುತ್ತರ ಎಚ್ಚೆತ್ತರೂ,
ಆ ಉತ್ತರದ ಪ್ರಶ್ನೆ ಮಾತ್ರ ಮರೆತೇಹೋಗಿರುತ್ತದೆ!

ಕೆಲವೊಮ್ಮೆ ಪ್ರಶ್ನೆಗಳಿಗೆ, ಪ್ರಶ್ನೆಗಳೇ ಉತ್ತರವಾಗಿದ್ದರೆ,
ಮಗದೊಮ್ಮೆ ಉತ್ತರವೇ ಒಂದು ಪ್ರಶ್ನೆಯಾಗಿಬಿಡುತ್ತದೆ
ಕಾಡುವ ಪ್ರಶ್ನೆಗಳಿಗೆ ಒಂದಂತ್ಯವನ್ನು ಕಾಣಿಸ ಹೊರಟರೆ,
ಅವುಗಳುತ್ತರವೇ ಮೇಲೆದ್ದು ಬುಸುಗುಡತೊಡಗುತ್ತದೆ...

ಪ್ರಶ್ನೆಗಳೆಚ್ಚೆತ್ತೇ ಇರಲಿ, ಅವುಗಳುತ್ತರ ನಿದ್ದೆಯೊಳಗೇ ಬಿದ್ದಿರಲಿ...
ನನ್ನೊಳಗಿನ ನೀನು, ನಿನ್ನೊಳಗಿನ ನಾನು ಮಾತ್ರ
ಒಬ್ಬರಿಗೊಬ್ಬರು ಪ್ರಶ್ನೆಯಾಗಿ ಕಾಡದಿದ್ದರೆ ಸಾಕು!!!!

ಚಿತ್ರಕೃಪೆ [https://www.boucheron.com/]


-ತೇಜಸ್ವಿನಿ ಹೆಗಡೆ

ಮಂಗಳವಾರ, ಮೇ 18, 2010

ಕೆಟ್ಟ ಕಾಲವನ್ನು ಕ್ಷಣವಾದರೂ ಹಿಂತಿರುಗಿಸುವಂತಿದ್ದ‘ರೆ’.....

ಬಾಣಲೆಯೊಳಗಿನ ಒಗ್ಗರಣೆ ಚಟ ಚಟ ಎಂದು ಸಿಡಿಯುವಾಗಲೇ ಪುಟ್ಟಿ "ಅಮ್ಮಾ ಮಿಕಿ ಬಾರು ಬೇಕು..." ಎಂದಾಗ, ನನ್ನ ತಲೆಯೂ ಸಣ್ಣಗೆಲ್ಲೋ ಸಿಡಿದಂತಾಯಿತು. ಬೆಳಗಿನಿಂದ ಈ ಹಾಡು ಕೇಳುತ್ತಿರುವುದು ಎಷ್ಟನೇಬಾರಿಯೋ... ಸಹನೆಯಿಂದ ಕೋರಿಕೆಯ ಮುಂದೂಡಿ ಸಾಕಾಗಿಹೋಗಿತ್ತು. ಈ ಮಿಲ್ಕಿ ಬಾರನ್ನು ಕಂಡು ಹಿಡಿದ ಮಹಾನ್ ವಿಜ್ಞಾನಿಯನ್ನೂ ಮನದಲ್ಲೇ ಬೈದುಕೊಂಡಾಗಿತ್ತು. "ನಿನ್ನೆಯಷ್ಟೇ ನಿಂಗೆ ಕೊಟ್ಟಿದ್ನಲೆ.... ರಾಶಿ ತಿನ್ನಲಾಗ ಚೊಕಲೇಟ್... ಈಗ ಊಟಕ್ಕಾತು.... ಊಟ ಆಗಿ ದದ್ದಿ ಆದ್ಮೇಲೆ ಕೊಡ್ತೆ... ಮತ್ತೆ ಹಟಾ ಮಾಡಿದ್ರೆ ಒಂದು ಪೆಟ್ಟು ಬೀಳ್ತು ನೋಡು...." ಎಂದು ಗದರಿ ಆಚೆ ಸಾಗ ಹಾಕಿ, ಪಲ್ಯ ಬೇಯಿಸಲಿಟ್ಟಿದ್ದೆನೋ ಇಲ್ಲವೋ... ಮತ್ತೆ ಅದೇ ರಾಗ ಅದೇ ತಾಳಹೊಂದಿದ ಹಡೇ ಹಾಳು ಟ್ಯೂನ್ ಆಗಿತ್ತು...."ಅಮ್ಮಾ ಮಿಕಿ ಬಾರು....." ಥತ್... ಒಂದು ಕೆಲ್ಸವನ್ನೂ ಸರಿಯಾಗಿ ಮಾಡಲಾಗುತ್ತಿಲ್ಲ ಇವತ್ತು... ಮೇಲಿಂದ ಮಗಳ ಕಿರಿಕಿರಿ ಬೇರೆ...ಇವಳ ಊಟದ ಸಮಯ ಮೀರುತ್ತಿದೆಯೇ ಎಂದು ಹಾಲಿನಲ್ಲಿದ್ದ ಗಡಿಯಾರದೆಡೆ ನೋಡಿದರೆ ಸಮಯ ಆರುಗಂಟೆಗೇ ನಿಂತಿತ್ತು! ಅಲ್ಲೇ ಇದ್ದ ನನ್ನ ಮೊಬೈಲ್‌ನಲ್ಲಾದರೂ ಸಮಯ ನೋಡೋಣವೆಂದು ಹೊರಟರೆ ಅಲ್ಲಿಯೂ ಸಮಯ ಅದಲಾಬದಲಿ! ದೇವ್ರೆ ಇವತ್ತೇಕೋ ನನ್ನ ಟೈಮೇ ಸರಿ ಇಲ್ಲೆ... ಎಂದು ಮನದಲ್ಲೆಲ್ಲೋ ಅಶಂಕೆಯಾಗಿ ಸುಸ್ತಾದಂತೆನಿಸಿತು. ಈ ಎಲ್ಲಾ ಗಡಿಬಿಡಿಯಲ್ಲಿ ಬೇಯಲು ಸಾಕಷ್ಟು ನೀರು ಹಾಕದೇ, ದೊಡ್ಡ ಉರಿಯಲ್ಲಿ ಬೇಯಿಸಲಿಟ್ಟಿದ್ದರಿಂದ ಪಲ್ಯ ಸೀದ ವಾಸನೆ ಬಡಿದು, ನೋಡಲೂ ಹೋಗದೇ ಹಾಗೇ ಗ್ಯಾಸ್ ನಂದಿಸಿಬಂದು ಬಿಟ್ಟೆ. ಆದರೆ ಬಿಂಬಡದ ರಾಗ ಮಾತ್ರ ನಿಲ್ಲದೇ ನನ್ನ ಹಿಂಬಾಲಿಸಿ ಬರುತಿತ್ತು. ಉಕ್ಕಿ ಬರುತ್ತಿದ್ದ ಸಿಟ್ಟನ್ನು ತಡೆಹಿಡಿಯಲು ಕ್ಷಿಪ್ರ ಪ್ರಾಣಾಯಾಮ ಮಾಡಿಕೊಂಡು ಸುಮ್ಮನೇ ಕಣ್ಮುಚ್ಚಿದವಳೇ "ಡಾಕ್ಟ್ರೆ ನಂಗ್ಯಾಕೋ ತಲೆನೋವು... ಚೂರು ಔಷಧಿ ಕೊಡ್ತೀರಾ.."ಎಂದು ಕೇಳಿದ್ದೇ ತಡ ಮಿಲ್ಕಿ ಬಾರ್ ಮಾಯ... ಡಾ.ಅದಿತಿ ಹೆಗಡೆ ಪ್ರತ್ಯಕ್ಷ! "ಹೌದಾ... ತರ್ತೀನಿ.... ಎಷ್ಟು ಬೇಕು ಗುಳ್ಗೆ?" ಎಂದು ಸಿದ್ಧಳಾದ ಅವಳ ಗಂಭೀರತೆ ನೋಡಿ ನಗು ಬಂದರೂ, ನಕ್ಕರೆ ಬರುವ ಮಿಲ್ಕಿ ಬಾರ್ ಭೂತ ಎಣಿಸಿ ಸುಮ್ಮನಾದೆ. "ಒಂದು ಸಾಕು ಡಾಕ್ಟ್ರೆ... ಹಾಗೇ ಸ್ವಲ್ಪ ಕಾಫೀನೂ ಮಾಡ್ಕೊಂಡು ಬನ್ನಿ..."ಎಂದು ಅವಳನ್ನು ಆಟಿಕೆಯ ಸಾಮಾನುಗಳೆಡೆ ಸಾಗ ಹಾಕಿದವಳೇ ಮೊಬೈಲ್ ಸಮಯದ ರಿಪೇರಿಗೆ ಕುಳಿತೆ.

ಹೊಸ ಮೊಬೈಲ್ ಸೆಟ್ ಆಗಿದ್ದರಿಂದ ಸ್ವಲ್ಪ ಕಿರಿ ಕಿರಿ ಅಗತೊಡಗಿತು. ಡೇಟ್ ಆಂಡ್ ಟೈಮ್ ಸೆಟ್ಟೆಂಗ್ಸ್ ಎಲ್ಲೂ ಸಿಗದೇ ತುಸು ಸಿಟ್ಟು ಬಂತು. ಅಷ್ಟರಲ್ಲಿ ನನ್ನವರ ಫೋನ್ ಅದೇ ಮೊಬೈಲ್‌ಗೆ ಬರಲು ಅದರ ಸಿಟ್ಟೆಲ್ಲಾ ಅಲ್ಲಿಗೆ ಟ್ರಾನ್ಸ್‌ಫರ್ ಆಯಿತು. ಅಂತೂ ಆ ಕಡೆಯಿಂದ ಸರಿಯಾದ ಡಾಟಾ ಟ್ರಾನ್ಸ್‌ಫರ್ ಮಾಡಿಕೊಂಡು ಮೊಬೈಲ್ ಟೈಮಿಂಗ್ಸ್ ಸರಿಪಡಿಸಿದಾಗ ಏನೋ ಅವ್ಯಕ್ತ ಸಮಾಧಾನ. ಇಲ್ಲಿ ಕೆಟ್ಟು ನಿಂತಿರುವ ಸಮಯವನ್ನು ನಾವೇ ಸರಿಪಡಿಸುವಂತೇ ನಮ್ಮ ಕೆಟ್ಟ ಕಾಲವನ್ನೂ ನಾವೇ ಸರಿಪಡಿಸುವಂತಿದ್ದರೆ, ಹಾಳಾದ ಪಲ್ಯದ ಸಮಯವನ್ನು ಹಿಂತಿರುಗಿಸಿ ಘಮಘಮಿಸುವಂತಾಗಿದ್ದರೆ, ಮಸಾಲೆಯನ್ನು ರುಬ್ಬುವಾಗ ಅರ್ಧದಲ್ಲೇ ಕೈಕೊಟ್ಟ ಕರೆಂಟಿನ ಸಮಯವನ್ನು ಅಲ್ಲೇ ನಿಲ್ಲಿಸುವಂತಾಗಿದ್ದರೆ....ಆರು ತಿಂಗಳ ಕಡಿಮೆ ಊರಿಗೆ ಹೋಗೆನು ಎಂದು ಹೇಳಿಬಂದ ಕಲಸದ ಹುಡುಗಿ ವಾರದೊಳಗೇ ಓಡಿಹೋಗುವಂತಾದ ಕಾಲವನಲ್ಲೇ ತಡೆಹಿಡಿವಂತಾಗಿದ್ದರೆ,....‘ರೆ’ ಸಾಮ್ರಾಜ್ಯದೊಳಗಿನ ಮಜಾವೇ ಬೇ‘ರೆ’. ಛೇ ಇದೆಲ್ಲಾ ಸಣ್ಣ ಸಣ್ಣ ಯೋಚನೆಯಾಯಿತು, ಕಲ್ಪಿಸುವುದಾದರೆ ದೊಡ್ಡದೇಕಾಗಬಾರದು.?ಎಂದು ಮನದಲ್ಲೇ ಸಮಯದ ಅದಲಿ ಬದಲಿ ಮಾಡಿ ಬೇಕಾದ ರೀತಿಯಲ್ಲಿ ಫಿಕ್ಸ್ ಮಾಡಿ, ಮಂಡಿಗೆತಿನ್ನುವಾಗಲೇ ಕಲ್ಪನೆಯ ಕಹಿ ಗುಳಿಗೆಯನ್ನು ಹಿಡಿದು ಡಾ.ಅದಿತಿ ನಿಂತಿದ್ದಳು. "ಹೂಂ... ತಗ ಬೇಗ... ನಂಗೆ ಬೇರೆ ಕೆಲ್ಸ ಇದ್ದು ಗೊತ್ತಾತಾ? ಬೇಗ ಔಚದಿ ತಗಳವು... ಥೂ ಮಾಡಡಾ... ಇಲ್ದೇ ಹೋದ್ರೆ ಚುಚ್ಚಿ ಚುಚ್ಚಿ ಮಾಡಕಾಗ್ತು...." ಎಂದು ಹೇಳಿದವಳೇ ಸುಮ್ಮನೇ ಏನನ್ನೋ ಕೈಯೊಳಗಿಟ್ಟು ಆಟಿಗೆಯ ಲೋಟವನ್ನೂ ಕೊಟ್ಟು ಮತ್ತೆ ಸುಳ್ಳೆ ಪುಳ್ಳೆ ಕಾಫಿ ಮಾಡಿ ತರಲು ಹೋದಳು. ಹೋಗಿದ್ದ ಕರೆಂಟ್ ಮತ್ತೆ ಬರಲು ಅರ್ಧ ರುಬ್ಬಿದ್ದ ಮಸಾಲೆಯ ನೆನಪಾಗಿ ಘಮಘಮಿಸುವ ಸಾಂಬಾರಿನ ಸಮಯವನ್ನಾದರೂ ಫಿಕ್ಸ್ ಮಾಡಲು ಮುಂದಾದರೆ ಅದೇ ಹಳೆ ರಾಗವೂ ನನ್ನ ಹಿಂಬಾಲಿಸತೊಡಗಿತು.

ಚಿತ್ರಕೃಪೆ : [http://blogs.discovermagazine.com/cosmicvariance/files/2008/11/time-flies-clock-10-11-2006.gif]

-ತೇಜಸ್ವಿನಿ ಹೆಗಡೆ

ಶುಕ್ರವಾರ, ಮೇ 7, 2010

ನೀನಾರ ಅರಿವಿಗೆ ನಿಲುಕಿಹೆ ಹೇಳು?


ಆತ ನಿನಗೊಲಿದಿಲ್ಲ, ನೀನವನ ಒಲವಲ್ಲ,
ನಿನ್ನ ಪ್ರೀತಿ ಏಕ ಮುಖ, ಆತ ಸಕಲ ವಲ್ಲಭ
ನಿನ್ನೆದೆಯ ತುಂಬ ಅವನದೇ ನಿನಾದ,
ಗಾರುಡಿಗನ ನೃತ್ಯಕೆ ವಿಶ್ವವೆಲ್ಲಾ ಸ್ತಬ್ಧ
ನಿನ್ನ ಉಸಿರೊಳಗೋ ಅವನದೇ ಹೆಸರು
ಇರುವರವಗೆ ಸಾಸಿರ ನಾರಿಮಣಿಯರು
ಪ್ರೇಮ ವಂಚಿತ ಅಭಾಗಿನಿ, ಸದಾ ವಿರಹಣಿ ನೀ-
ಎಂದು ಗೀಚಿದನೊಬ್ಬ ಕವಿ,
ದೈವ ಲಿಖಿತ ತಪಸ್ವಿನಿ, ಅನನ್ಯ ಪ್ರೇಮ ಸಂಜೀವಿನಿ-
ಹೊಗಳಿ ಹಾಡಿದ ಮಗದೊಬ್ಬ.....

ಒಮ್ಮೆ ಕನಿಕರಿಸಿ, ಮಗದೊಮ್ಮೆ ಮೇಲಿರಿಸಿ
ಚುಚ್ಚಿ, ಕೆಣಕಿ, ಹೊಗಳಿ, ನರಳಿ - ನಿನ್ನ ಮೇಲೆ
ಬರೆದರೆಷ್ಟೋ ಕಥೆ, ಕವನ - ಮೇಲಿಂದ ಮೇಲೆ
ಕೇಳಲಿಲ್ಲ, ನೋಡಲಿಲ್ಲ, ಇವರಾರೂ ನಿನ್ನ ಬದುಕ ವ್ಯಥೆ
ಅದೆಷ್ಟು ಕಾಲ ನೀ ಹೀಗೆ ಕುಣಿಯಬೇಕೋ ಇವರ ಜೊತೆ!
ನೋಟದಾಚೆಯ ಭಾವ ಕಂಡಷ್ಟೂ ಕಾಣದು,
ಶೂನ್ಯದೊಳೂ ಬಹು ದೊಡ್ಡ ಸಂಪತ್ತಿಹುದು
ಅಸ್ತಿತ್ವರಹಿತ ಪ್ರೀತಿಯಾನುಭೂತಿ
ಸಾವಿನಾನಂತರದ ಬದುಕಿಗೂ ಹಾದಿ
ಇದನರಿಯದ ಮೂಢರ ನೋಡಿ....
ಆಗೊಮ್ಮೆ ಈಗೊಮ್ಮೆ ನಗುತಿಹಳು ಆಕೆ

- ತೇಜಸ್ವಿನಿ ಹೆಗಡೆ
[ಚಿತ್ರ ಕೃಪೆ : http://harekrishnabooks.com.au/index.php?main_page=index&cPath=10]