ಯಾವುದೇ ಪುಸ್ತಕವನ್ನು ಅದರ ಮುಖಪುಟವನ್ನು ನೋಡಿ ಅಳೆಯದಿರು ಎಂದು ಹೇಳುತ್ತಾರೆ. ಅಂತೆಯೇ ಓರ್ವ ವ್ಯಕ್ತಿಯ ಬದುಕನ್ನು ಅರಿಯುವಾಗ, ಕೇವಲ ಆತನ ಏಕಪಕ್ಷೀಯ ಮಾತುಗಳನ್ನು, ಅವರಿವರು ಹೇಳಿದ್ದನ್ನು ಕೇಳಿಯೋ ಮೇಲ್ನೋಟಕ್ಕೆ ಇದಮಿತ್ಥಂ ಎಂದು ತೀರ್ಪು ನೀಡುವುದು ಸಲ್ಲ. ಅದರ ಬದಲು ಆತನ ಬದುಕಲ್ಲಿ ಬಂದವರ ಅನಿಸಿಕೆಗಳನ್ನು, ಅನುಭವಗಳನ್ನು ಅವರದೇ ಮುಖೇನ ಅರಿತಾಗ, ಬಹುರೂಪದಲ್ಲಿ ಕಂಡಾಗ ಅದೆಷ್ಟೋ ಜಟಿಲತೆಗಳು ಸರಳಗೊಳ್ಳುತ್ತವೆ. ಕಾಣದ ಕೊಂಡಿಗಳು ಎದ್ದು ಬರುತ್ತವೆ, ಸುಳ್ಳಿನ ಪರದೆಗಳೂ ತೆರೆದುಕೊಳ್ಳುತ್ತವೆ. ಅಂತಹದೇ ಒಂದು ಪ್ರಯತ್ನವನ್ನು ಲೇಖಕ ಶ್ರೀಧರ ಬಳಗಾರ ಅವರ ‘ಮೃಗಶಿರ’ ಕಾದಂಬರಿಯು ಮಾಡುತ್ತದೆ.
ಕಾದಂಬರಿಯ ಶೀರ್ಷಿಕೆ ಮತ್ತು ಪಾತ್ರಗಳ ವೈಶಿಷ್ಟ್ಯ:
ಇದು ಮೇಲ್ನೋಟಕ್ಕೆ ಕಾದಂಬರಿ ಎಂದೆನಿಸಿದರೂ, ಬೆಟ್ಟದ ತುದಿಯಿಂದ ಕವಲಾಗಿ ಹರಿವ ತೊರೆಗಳು ಅಲ್ಲಲ್ಲಿ ಜೊತೆ ಸೇರಿ ಹೊಳೆಯಾಗಿ, ಕೊನೆಗೊಂದು ದೊಡ್ಡ ನದಿಯಾಗಿ ಸಾಗರ ಸೇರುವಂತೇ, ಹಲವು ಪಾತ್ರಗಳು ತಮ್ಮ ಕಥೆಗಳನ್ನು ಹರವಿ, ಮುಂದಿನ ಪಾತ್ರಕ್ಕೆ ಖೋ ಕೊಟ್ಟು ಬೆಳೆಯುತ್ತ ಸಾಗುವ ಕಾದಂಬರಿ. ಹೀಗಾಗಿ ಈ ಕಾದಂಬರಿಯನ್ನು ಪರಸ್ಪರ ಬೆಸುಗೆ ಹಾಕಿಕೊಂಡಿರುವ ಹಲವು ಕಥೆಗಳ ಒಂದು ಗುಚ್ಛ ಎಂದೂ ಹೇಳಬಹುದು. ಗಡಿಮನೆಯ ಸುಬ್ರಾಯಪ್ಪ, ಅವನ ಪತ್ನಿ ಅನಸೂಯ (ಅಂತತ್ತೆ), ಹೊಸ್ಮನೆಯ ಪುಟ್ಟಣ್ಣ, ತಂಗಕ್ಕ, ಶಂಕ್ರ, ಗಪ್ಪತಿ - ಹೀಗೆ ಬರುವ ಪ್ರತಿ ಪಾತ್ರವೂ ತಮ್ಮ ಕಥೆಯನ್ನು ತೆರೆದಿಡುತ್ತವೆ. ಆ ಮೂಲಕ ತಾವು ತಮ್ಮ ಪಾಪಪ್ರಜ್ಞೆಯಿಂದ ಬಿಡುಗಡೆ ಹೊಂದಲು ಬಯಸುತ್ತಿವೆಯೇನೋ ಎಂಬಂತಿವೆ.
ನನ್ನ ಪ್ರಕಾರ ಮುಖ್ಯ ಪಾತ್ರಧಾರಿ ಇಲ್ಲಿ ನಿರೂಪಕ. ಆತ ಇಲ್ಲದೇ ಹೋದರೆ, ಸುಬ್ರಾಯಪ್ಪನ ಆತ್ಮಕಥನ ಹುಟ್ಟುತ್ತಿರಲಿಲ್ಲ. ಅಂತತ್ತೆಯಂತಹ ಪಾತ್ರವೊಂದು ದೇಶ, ಕಾಲವನ್ನು ಮೀರಿ ಇಂದಿನ ಅದೆಷ್ಟೋ ಅಂತತ್ತೆಗಳನ್ನು ನಮಗೆ ನೆನಪಿಗೆ ತರುತ್ತಿರಲಿಲ್ಲ. ಸುಬ್ರಾಯಪ್ಪನ ಗತಚರಿತ್ರೆಯ ಬೆನ್ನು ಹಿಡಿದು ಅವನಿಗೆ ಸಂಬಂಧ ಪಡುವ ಅನೇಕಾನೇಕರ ಕಥೆಗಳು, ಉಪಕಥೆಗಳು ಎಲ್ಲವೂ ಎಲ್ಲೂ ನಿಮಗೆ ಬೋರು ಹೊಡೆಸದೇ ಕಥೆ ಬೆಳೆಯುವ ಪರಿಸರದೊಳಗೆ ಹದವಾಗಿ ಹುದುಗಿ ಓದಿನ ಸುಖ ಕೊಡುತ್ತ ಸಾಗುತ್ತವೆ. ಅಲ್ಲದೇ,
ಜ್ಯೋತಿಷ್ಯದಲ್ಲಿ ಉಲ್ಲೇಖಿಸಿರುವ ಮೃಗಶಿರ ನಕ್ಷತ್ರದ ವಿಶೇಷತೆಗೂ ಕಾದಂಬರಿಯ ನಿರೂಪಕನಿಗೂ ಬಹಳ ಸಾಮ್ಯವಿದೆ. ಇಲ್ಲಿ ಬರುವ ನಿರೂಪಕನು ಬಹಳ ಕುತೂಹಲಿ, ಸದಾ ಕಥೆಯ ಅನ್ವೇಷಣೆಯಲ್ಲೇ ತೊಡಗಿರುವವನು, ಸೌಮ್ಯವಾಗಿ ಎಲ್ಲವನ್ನೂ, ಎಲ್ಲರನ್ನೂ ಅಳೆದು ತೂಗುವವನು, ಯಾವುದೇ ನಿರ್ಣಯಕ್ಕೆ ದಿಢೀರನೆ ಬರದೆ ಎಲ್ಲ ಕೋನಗಳಿಂದಲೂ ಕಥೆಗಳನ್ನು ಇದ್ದ ಹಾಗೇ ಹರಹಿ ಇಡುವ ಮನೋಭಾವ. ಅಲ್ಲಲ್ಲಿ ಜಿಜ್ಞಾಸೆಯನ್ನೂ ಮಾಡುತ್ತಾನೆ. ಒಂದೆರಡು ಕಡೆ ಪಾತ್ರಗಳು ನುಡಿವ ಕೆಲವು ತೂಕ ಭರಿತ ಮಾತುಗಳು ಆ ಪಾತ್ರದ ಮಿತಿಯನ್ನೂ ಮೀರಿ ನಿರೂಪಕನದೇ ಚಿಂತನೆಗಳೇನೋ ಎಂಬಷ್ಟು ಗಾಢವಾಗಿ ತಾಗಿದ್ದೂ ಇದೆ. ಆದರೆ ಕಾದಂಬರಿಯಲ್ಲಿ ಎಲ್ಲೂ ತೀರ್ಪು ನೀಡುವ ಆತುರತೆ ಕಾಣುವುದಿಲ್ಲ, ಬದುಕನ್ನು ಆಪ್ತವಾಗಿ ನೋಡುವ, ತಿಳಿಯುವ ಹಂಬಲವನ್ನಷ್ಟೇ ನೋಡಬಹುದು. ಅಂತ್ಯದಲ್ಲಿ ತಾನು ಹುಡುಕುತ್ತಿರುವುದು ದೊರೆತ ತೃಪ್ತಿಯ ಭಾವವನ್ನು ಶಂಕ್ರನ ಮನೆಯ ಗೇಟಿನ ರೂಪಕದಲ್ಲಿ ಕಾಣಿಸಲಾಗಿದೆ.
ಕಥೆಯ ಕೇಂದ್ರಬಿಂದು ಸುಬ್ರಾಯಪ್ಪನ ಆತ್ಮಚರಿತ್ರೆಯಾಗಿದ್ದರೂ, ಆ ಬಿಂದುವಿನ ಸುತ್ತಲ್ಲೂ ಗಿರಗಿರನೆ ತಿರುಗುವ ಉಳಿದೆಲ್ಲ ಪಾತ್ರಗಳ ಕಥನಗಳು ಕಡೆಗೆ ಅವನ ಕಥೆಯೊಳಗೇ ಐಕ್ಯವಾದಂತೆ ಕಂಡರೂ ಭಿನ್ನವಾಗಿಯೇ ಉಳಿಯುತ್ತವೆ. ಪ್ರತಿಯೊಂದು ಅಧ್ಯಾಯವೂ ಒಂದು ಕುತೂಹಲವನ್ನು ಉಳಿಸಿಕೊಂಡು ಸಾಗಿದರೂ ಈ ಕಾದಂಬರಿ ಕೇವಲ ಅದಕ್ಕಷ್ಟೇ ಸೀಮಿತವಾಗಿಲ್ಲ. ಕಥೆ ಹುಟ್ಟುವ, ಬೆಳೆವ, ಬಲಿಯುವ ಕಡೆಗೊಂದು ತಿರುವಲ್ಲಿ ಕೊನೆಗೊಳ್ಳುವ ಪರಿಸರ, ಊರು, ಕೇರಿ, ಕಾಡು, ತೋಟ, ವನ್ಯಜೀವಿಗಳು - ಇವೆಲ್ಲವನ್ನೂ ನಮ್ಮ ಕಣ್ಣಿಗೆ ಕಟ್ಟಿಕೊಡುತ್ತವೆ. ನಾವೂ ನಿರೂಪಕನ ಪಕ್ಕದಲ್ಲೇ ಕುಳಿತು, ತಿರುಗಿ ಕಥೆಯನ್ನು ಸಂಗ್ರಹಿಸಿ ಕೇಳುತ್ತಿರುವಂತೆ ಭಾಸವಾಗುತ್ತದೆ.
ಕಥೆಯ ಚೌಕಟ್ಟು, ಶೈಲಿ:-
ಕಾದಂಬರಿಯ ನಿರೂಪಣೆಯು ಬಹಳ ಸೊಗಸಾಗಿದೆ. ಮಾಮೂಲಿ ಸಾಮಾಜಿಕ ಕಥನ ಶೈಲಿಯಲ್ಲಿರದೇ ನಮ್ಮೊಳಗೊಂದು ಚಿಂತನೆಯನ್ನು ಹುಟ್ಟುಹಾಕುವಂತಿದೆ. ಅಂತತ್ತೆಯಂತೇ ಸಾಮಾಜಿಕ ಕಟ್ಟುಪಾಡಿಗೆ, ಪುರುಷಪ್ರಧಾನ ವ್ಯವಸ್ಥೆಗೆ ಸಿಲುಕಿ, ಒದ್ದಾಡಿ, ನಲುಗುವ ಜೀವಗಳು ಇಂದಿಗೂ ನಮ್ಮ ಸುತ್ತ ಕಾಣುತ್ತಿರುತ್ತವೆ. ಗಂಡನಿಂದ/ಗಂಡಿನಿಂದ ಎಂತಹ ದುರ್ಗತಿ ಎದುರಾದರೂ ಅವಳದೇ ತಪ್ಪು, ಆಕೆ ತನಗೆ ಹಾಕಿರುವ ಚೌಕಟ್ಟನ್ನು ಮೀರಬಾರದು, ಗಂಡನ ದುಸ್ಥಿತಿಗೆ ಹೆಂಡತಿಯೇ ಪ್ರಮುಖ ಕಾರಣ ಎಂಬಿತ್ಯಾದಿ ಮನಃಸ್ಥಿತಿಯು ಆ ಕಾಲದ್ದು ಮಾತ್ರವಲ್ಲ ಈಗಲೂ ಚಾಲ್ತಿಯಲ್ಲಿರುವಂಥದ್ದು. ಅದೇ ರೀತಿ ಹೆಣ್ಣಿಗೆ ರಕ್ಷಣೆಯಾಗಿ ಓರ್ವ ಗಂಡ ಬೇಕು, ಅವನ ಆಸರೆಯಿಲ್ಲದ ಹೆಣ್ಣು ಸದಾ ತನಗೆ ಲಭ್ಯಳು, ಅವಳನ್ನು ಹೇಗೂ ಬಳಸಿಕೊಳ್ಳಬಹುದೆಂಬ ಮನಸ್ಥಿತಿಯೂ ಯಾವ ಕಾಲಕ್ಕೂ ಎದ್ದು ಕಾಣುವಂಥದ್ದು.
ಅಂದು ಅಸಂಖ್ಯಾತರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಮನೆ-ಹೊಲಗಳನ್ನು ಬಿಟ್ಟು ಒದ್ದಾಡಿ ಕೊನೆಗೂ ಅದನ್ನು ದೊರಕಿಸಿಕೊಂಡರು. ಆದರೆ ಅನೇಕರು ಅವರೊಳಗಿನ ಅಹಂ, ಸ್ವಾರ್ಥ, ಸಿಟ್ಟು, ಸಂಕುಚಿತತೆ, ಮನೋ ದೌರ್ಬಲ್ಯದ ದಾಸ್ಯಗಳಿಂದ ಬಿಡುಗಡೆ ಹೊಂದುವ ಬಗೆ ಅರಿಯದೇ ತಮ್ಮ ಮನೆಯೊಳಗಿನ ಹೆತ್ತವರು, ಪತ್ನಿ-ಮಕ್ಕಳನ್ನು ಬಂಧನಕ್ಕೆ ಸಿಲುಕಿಸಿಬಿಟ್ಟರು. ಇದೆಲ್ಲವೂ ಇಂದೂ ಪ್ರಸ್ತುತವೇ. ಕಾದಂಬರಿಯಲ್ಲಿ ಬರುವ ಈ ಕೆಳಗಿನ ಸಾಲುಗಳು ಸಾರ್ವಕಾಲಿಕ ಕಟು ಸತ್ಯವನ್ನು ಸಾರುವಂಥವು!
*ಚರಿತ್ರೆಯ ಪುಸ್ತಕಗಳಲ್ಲಿ ಬೀದಿಯಲ್ಲಿ ಘೋಷಣೆ ಕೂಗಿದವರ ಹೆಸರಿರುತ್ತದೆಯೆ ವಿನಃ ಹೊಗೆಯ ಒಲೆ ಊದಿ ಹಿತ್ತಲ ಪ್ರಪಂಚದಲ್ಲೆ ಆಯುಷ್ಯ ಕಳೆದವರ ನೆನಪಿರುವುದಿಲ್ಲ.
* ದೇಶದ ದೊಡ್ಡ ಕಥೆಗಳಲ್ಲಿ ಕೋಟೆಯ ಬಾಗಿಲನ್ನು ಕಾದವರಿಗೆ ಜಾಗವೇ ಇರುವುದಿಲ್ಲ.
ಇಂದೂ ಗಡಿಗಾಗಿ ವರ್ಷಗಟ್ಟಲೇ ಎಲ್ಲೋ ಹೋಗಿ ಕಾಯುವ ಸೈನಿಕ ತನ್ನವರನ್ನು ಯಾವುದೋ ಹಳ್ಳಿಯ ಮೂಲೆಯಲ್ಲಿ ಬಿಟ್ಟು ಹೋಗುವಾಗ ಅವರ ಪರಿಸ್ಥಿತಿ, ಮನಃಸ್ಥಿತಿಯು ಅಂತತ್ತೆ, ಸುಬ್ರಾಯಪ್ಪನ ಹೆತ್ತವರಿಗಿಂತ ಭಿನ್ನವಾಗಿರದೇನೋ! ಲೈಂಗಿಕ ವಾಂಛೆ ಕೇವಲ ಗಂಡಿನ ಸ್ವತ್ತು, ಸ್ವಭಾವ ಎಂಬ ಮೌಢ್ಯ ಅಂದಿನಿಂದಲೂ ಹರಿದು ಬಂದ ಕಣಕು ನೀರು. ಆದರೆ ಹೆಣ್ಣು-ಗಂಡಿನ ನಡುವಿನ ಸೂಕ್ಷ್ಮ ವ್ಯವಹಾರಗಳನ್ನು ಬಹಳ ನಾಜೂಕಾಗಿ ನೇಯ್ದ ಪಾತ್ರಗಳೂ ಇಲ್ಲಿವೆ. ಉದಾಹರಣೆಗೆ ಕಾದಂಬರಿಯ ನಡುವೆ ಬರುವ ಕನ್ನಡಗಲ್ ಲಚ್ಚಿ ಚಿಕ್ಕಿಯ ಕಥೆ. ಕೆಲವೇ ಪುಟಗಳಲ್ಲಿ ಬಂದು ಹೋಗುವ ಈ ಪಾತ್ರ ಬಿತ್ತರಿಸುವ ದೃಶ್ಯ ಕಾವ್ಯ ಬಹಳ ಸುಂದರವಾಗಿದೆ.
ಬಹಳ ಹಿಂದೆ ಎಲ್ಲೋ ಒಂದೆಡೆ ಈ ಒಂದು ಕಥೆ ಓದಿದ್ದೆ:-
ಇಬ್ಬರು ಸಹೋದರರು ದೇವಸ್ಥಾನಕ್ಕೆಂದು ಕಾಡಿನಲ್ಲಿ ಸಾಗುತ್ತಿರುತ್ತಾರೆ. ನಡುವೆ ಜೋರಾದ ಗಾಳಿ ಮಳೆ ಬಂದು ದಿಕ್ಕು ತಪ್ಪಿ ಬೇರ್ಪಡುತ್ತಾರೆ. ತಮ್ಮನು ದಾರಿ ತಪ್ಪಿ ವೇಶ್ಯೆಯೋರ್ವಳ ಮನೆಗೆ ಹೋದರೆ ಅಣ್ಣ ಹೇಗೋ ಆ ದೇವಸ್ಥಾನವನ್ನು ಹೋಗಿ ಸೇರುತ್ತಾನೆ. ಆದರೆ ಅಲ್ಲಿ ಆತನಿಗೆ ಯಾರಿಂದಲೋ ತಿಳಿಯುತ್ತದೆ ತನ್ನ ತಮ್ಮ ಅಂಥವಳ ಮನೆಗೆ ಹೋಗಿಬಿಟ್ಟಿರುವನು ಎಂದು. ಇತ್ತ ರಾತ್ರಿ ಬೆಳಗಾಗುವವರೆಗೂ ವೇಶ್ಯೆಯ ಮನೆಯ ಜಗುಲಿಯ ಮೂಲೆಯಲ್ಲೆಲ್ಲೋ ಕುಳಿತ ತಮ್ಮ ದೇವಸ್ಥಾನದ ಧ್ಯಾನದಲ್ಲೇ ಇದ್ದು ಬೆಳಗಾಗಿದ್ದೇ ಅಲ್ಲಿಂದ ಹೊರಟುಬಿಟ್ಟರೆ, ಅತ್ತ ಅಣ್ಣನು ತನ್ನ ತಮ್ಮ ಅದೆಷ್ಟು ಸುಖದಲ್ಲಿದ್ದಾನೋ ಎಂದು ಕಲ್ಪನೆಮಾಡಿಕೊಂಡು, ಅಸಹನೆಯಿಂದ ಕುದಿಯುತ್ತಲೇ ದೇವಸ್ಥಾನದಲ್ಲಿ ಕುಳಿತು ಬೆಳಗುಮಾಡಿರುತ್ತಾನೆ. ಇವರಿಬ್ಬರೂ ಈ ಕಾದಂಬರಿಯಲ್ಲಿ ಬರುವ ಅಂತತ್ತೆ, ಸುಬ್ರಾಯಪ್ಪ, ಪುಟ್ಟಣ್ಣ - ಹೀಗೆ ಹಲವು ಪಾತ್ರಗಳಲ್ಲಿ ಕಂಡರು.
ಕುತೂಹಲಕರ ಕಥನ, ಸ್ವಾತಂತ್ರ್ಯಪೂರ್ವದ ಮಲೆನಾಡಿನ ಪರಿಸರ, ಕಾಡು, ಜನಜೀವನ, ಬೇಸಾಯ ಪದ್ಧತಿಗಳ ವಿವರಣೆ, ಯಾವ ಕಾಲಕ್ಕೂ ಸಲ್ಲಬಹುದಾದ ಹೆಣ್ಣು-ಗಂಡಿನ ಮನೋವ್ಯಾಪಾರ, ಎದುರಾಗುವ ಅಸಂಖ್ಯ ಆಪತ್ತುಗಳನ್ನು ಪ್ರತಿಕೂಲ ವಾತಾವರಣದಲ್ಲೂ ಕೇವಲ ಮನೋಬಲದಿಂದ ಎದುರಿಸುವುದು ಹೇಗೆಂಬುದಕ್ಕೆ ಸಿಗುವ ನಿದರ್ಶನಗಳು, ನಿರೂಪಕನ ಸಮಚಿತ್ತತೆ - ಇವೆಲ್ಲವುಗಳನ್ನೂ "ಮೃಗಶಿರ" ಕಾದಂಬರಿಯನ್ನೋದಿ ಆಸ್ವಾದಿಸಬಹುದು.
~ತೇಜಸ್ವಿನಿ ಹೆಗಡೆ

