ಶುಕ್ರವಾರ, ನವೆಂಬರ್ 2, 2012

ನಿರಂತರ

ಎದೆಯೊಳಗೆ ನೆನಪುಗಳ ಘನ ಮೋಡಗಳ ಢೀಗೆ
ಆಗಾಗೀಗ ಕೋರೈಸುವ ಯಾತನೆಗಳ ಛಳಕು
ಕೇಳಲಾರರು ಯಾರೂ ಎದೆಯಲ್ಲಾಡಿಸುತಿಹ
ಸಿಡಿಲಿನಾ ಸದ್ದು....

ತುಂಬಿಹ ಕಣ್ಗಳೊಳಗೆ ಬಡಿದಾಡುವ-
ರೆಪ್ಪೆಗಳೇಳಿಸೋ ತರಂಗಗಳು....
ಹನಿಯುತಿವೆ ಹನಿ ಬಿಂದುಗಳ ಸದ್ದಿಲ್ಲದೇ,
ತೋಯುವ ಕೆನ್ನೆಗಳಿಗೆ ತಡೆಯೊಡ್ಡಿ ಚಿಮ್ಮಲು
ಒಲುಮೆಯ ಸ್ಪರ್ಶವಿರದೇ, ನೋಯುತಿದೆ ಮನಸು.

ರವಿಯ ಸ್ಪರ್ಶವಿಲ್ಲದೇ, ಹರಿವ ನೀರು ಕಟ್ಟಿ,
ಹಸಿರು, ಹೂವ ಹೊತ್ತು ಬಸಿರಾಗದು ಧರೆ!
ಅಂಬಿಗನಾಸರೆಯಿಂದಲೇ ದೋಣಿ,
ದಡ ಸೇರುವುದು ಮುಳುಗದೇ...
ಬರಿಯ ನೆನಪುಗಳ ಜೊತೆಗೂಡಿ,
ಬಾಳುವುದೆಂತು ಹೇಳೋ ನರ-ಹರಿಯೆ?

ದಿನಕರನ ಪ್ರಭೆಯಿಂದಲೇ
ಬೆಳ್ಳಿಯ ಕಿರಣ ಸೂಸುವ ಶಶಿ,
ಹಾಯಿ ಹೋಣಿಗಿದ್ದರೊಂದು ಹುಟ್ಟು
ಸೇರಬಲ್ಲೆವು ನಾವೆ ದೂರ ತೀರ!
ನಿನ್ನೆ-ನಾಳೆಗಳ ನಡುವಿರುವ ಇಂದು,
ಸಾಗಲೇ ಬೇಕಿದೆ ಭೂತಕ್ಕೆ ಬೆನ್ನಾಗಿ,
ಭವಿತವ್ಯಕೆ ಮೊಗಮಾಡಿ.

-ತೇಜಸ್ವಿನಿ ಹೆಗಡೆ

ಸೋಮವಾರ, ಅಕ್ಟೋಬರ್ 8, 2012

ಅನುರೂಪ

ಕೊಡಲೇನು ನಿನಗೆ ಉಡುಗೊರೆಯ?
ಎಣಿಸ ಹೊರಟರೆ ಎಲ್ಲವೂ ಪೂರ್ಣ!

ಕಣ್ಗಳ ಹನಿ ಮುತ್ತುಗಳನೇ ಪೋಣಿಸಿ ಕೊಡ ಹೊರಟರೆ,
ನಿನ್ನ ತೋರ್ಬೆರಳುಗಳು ಅಣೆಕಟ್ಟು ಕಟ್ಟಿ,
ಚಿಮ್ಮಿಬಿಟ್ಟವು ಬಾನಂಗಳಕೆ.

ಹೂನಗುವನರಳಿಸಿ ನಿನ್ನಡಿಗಳಿಗಿಡ ಹೊರಟರೆ,
ನಗೆ ಮೊಗ್ಗೊಂದು ನಿನ್ನ ತುಟಿಯಂಚಲರಳಿ,
ನನ್ನೆದೆಯೊಳಿಹ ನಿನ್ನದೇ ಚಿತ್ರವನ್ನೇರಿತು!.

ನಿನ್ನ ನನಸಾಗದ ಕನಸುಗಳ ಕನವರಿಕೆಯಾಲಿಸಲು,
ತಲೆದಿಂಬಿಗೆ ನಾ ಕಿವಿಯಾಗಿ ಕುಳಿತರೆ,
ನಿನ್ನೊಂದೊಂದು ಕನಸೊಳಗೂ 
ನನ್ನಾಶಯಗಳನೇ ಕಂಡೆ.

ನಿನ್ನ ತಡವಿದಲೆಲ್ಲಾ ನನ್ನ ಮೈಯ ರೋಮಗಳು, ರಂಧ್ರಗಳು.
ನನ್ನ ಉಚ್ಛ್ವಾಸದೊಳಗಿನ ಬಿಸಿಯುಸಿರ ತಂಪಾಗಿಸೂ ನಿನ್ನ ನಿಶ್ವಾಸ.
ಒಳಗಿನ ಜೀವ ಸಂಚಲನದೊಳಗೆಲ್ಲಾ ನಿನ್ನದೇ ಪ್ರತಿಫಲನ.
ನಾ-ನೀ 
ಅರ್ಧನಾರೀಶ್ವರ!

~ತೇಜಸ್ವಿನಿ ಹೆಗಡೆ

ಭಾನುವಾರ, ಆಗಸ್ಟ್ 26, 2012

ದೇವರೇ ಅಗಾಧ ನಿನ್ನ ಕರುಣೆಯ ಕಡಲು.....

Courtesy : Vinay Ad

ಹೋಗುವುದೋ ಬೇಡವೋ ಎನ್ನುವ ಆಲೋಚನೆಗಳ ತಾಕಲಾಟ... ಹೋಗದಿರಲಿದ್ದ ನೆವ- ನಾನು ಮತ್ತು ನನ್ನ ಮಗಳು ಮಾತ್ರ. ಆದರೆ ಹೋಗಲು ಕಾರಣಗಳು ಹತ್ತು ಹಲವಾರು ಕಂಡಿದ್ದರಿಂದ ಶನಿವಾರ ನಡೆದ ೫ ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮಕ್ಕೆ ಹೋದೆ. ಈರಣ್ಣ ಅವರ ಶಾಯರಿಯ ಮಾತುಗಳು, ದಿವಾಕರ್ ಹೆಗಡೆಯವರ ಹಾಸ್ಯದ ಚಟಾಕಿ... ಕೊನೆಯಲ್ಲಿ ತೇಲಿ ಬಂದ ಬಿ.ಆರ್. ಲಕ್ಷ್ಮಣ್‌ರಾವ್ ಅವರ ಸುಂದರ, ಸರಳ, ಮನಸೆಳೆದ ಭಾವಗೀತೆ... ಹೋಗಿದ್ದಕ್ಕಾಗಿ ಖುಶಿ ಪಟ್ಟೆ. :) 

ಬಿ.ಆರ್.ಎಲ್ ಅವರ - "ಅಮ್ಮಾ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು.... ಮಿಡುಕಾಡುತಿರುವೆ ನಾನು" ಹಾಡು ಮರೆಯಲಾಗದಂಥದ್ದು. ಸರಳ ಸುಂದರ ಹಲವು ಭಾವಗಳನ್ನು ಸ್ಫುರಿಸುವ ಕವಿತೆಗಳು. ಆದರೆ ಸ್ವತಃ ಅವರೇ ಇಷ್ಟೊಂದು ಭಾವಪೂರ್ಣವಾಗಿ, ರಾಗಬದ್ಧವಾಗಿ ಹಾಡುತ್ತಾರೆಂದೂ ತಿಳಿದದ್ದು ಈ ಕಾರ್ಯಕ್ರಮದಲ್ಲೇ! ಈ ಮೊದಲೆಂದೂ ನಾನವರ ಹಾಡನ್ನು ಕೇಳಿರಲೇ ಇಲ್ಲಾ!. ಸ್ವಲ್ಪ ಹಿಂದೆ ಕುಳಿತಿದ್ದರಿಂದ ಅತಿ ಸ್ಪಷ್ಟವಾಗಿ ರೆಕಾರ್ಡ್ ಮಾಡಲಾಗಲಿಲ್ಲದಿದ್ದರೂ ತಕ್ಕಮಟ್ಟಿಕೆ ರೆಕಾರ್ಡ್ ಮಾಡಿಕೊಂಡೇ ಬಂದೆ. ನನ್ನ ಕಿವಿಗೆ ನಿಲುಕಿದಷ್ಟು.. ಸ್ಪಷ್ಟತೆ ಮೂಡಿದಷ್ಟು ಹಾಡಿನ ಸಾಹಿತ್ಯವನ್ನು ಅಕ್ಷರಕ್ಕಿಳಿಸಿ ನಿಮ್ಮ ಮುಂದಿಟ್ಟಿರುವೆ. ತುಂಬಾ ಇಷ್ಟವಾಯಿತು ಈ ಹಾಡಿನ ಭಾವಾರ್ಥ ಹಾಗೂ ರಾಗ ಸಂಯೋಜನೆ - ಎರಡೂ.

ದಿನಕ್ಕೆ ಹಲವು ಬಾರಿ ಹಾಡನ್ನು ಕೇಳಿ ಕೇಳಿ ಕಲಿಯುತ್ತಿರುವೆ. ಕೇಳಿದಷ್ಟೂ ಹೊಸ ಹೊಸ ಭಾವಗಳು, ಅರ್ಥಗಳು ಮನದಲ್ಲಿ ಮೂಡಿ, ಒಂದು ರೀತಿಯ ತಾದಾತ್ಮ್ಯತೆ ಮೂಡುತ್ತಿದೆ.

ಅನುವಾದ ಮಾಡುವಾಗ ನಡುವಿನ ಕೆಲವು ಪದಗಳು ಹೆಚ್ಚು ಸ್ಪಷ್ಟವಾಗಿ ಕೇಳಿಸದೇ ತಪ್ಪುಗಳಾಗಿರಬಹುದು... ಪದಗಳಲ್ಲಿ ತಪ್ಪಿದ್ದಲ್ಲಿ,  ಹಾಡಿನ ಸಾಹಿತ್ಯ ಸರಿಯಾಗಿ ತಿಳಿದವರು ತಿದ್ದಬೇಕಾಗಿ ಕೋರಿಕೆ.  ಯಾರ ಬಳಿಯಾದರೂ ಸ್ಪಷ್ಟ ಹಾಡು ರೆಕಾರ್ಡ್ ಆಗಿದ್ದರೆ, ದಯವಿಟ್ಟು ಕಳಿಸಬೇಕಾಗಿ ವಿನಂತಿ. 

ಕಾರ್ಯಕ್ರಮದಲ್ಲಿ ಮತ್ತೊಂದು ಅಂಶ ಬಹು ಇಷ್ಟವಾಗಿದ್ದು ಎಂದರೆ ವಸಂತಲಕ್ಷ್ಮಿ ಅವರ ಸೊಗಸಾದ ನಿರೂಪಣೆ. ತುಂಬಾ ಸ್ಪಷ್ಟವಾಗಿ, ಸ್ವಲ್ಪವೂ ತಪ್ಪಿಲ್ಲದೇ, ತಡವರಿಸಿದೇ, ಹೃದ್ಯವಾಗಿ ನಿರೂಪಿಸಿದ ಅವರ ನಿರೂಪಣಾ ಶೈಲಿಗೆ ಮಾರುಹೋದೆ. ಅದಿತಿಯ ಕೀಟಲೆ, ಕಿರಿ ಕಿರಿ ನಡುವೆಯೇ ಕೊನೆಯವರೆಗೂ ಕೂತದ್ದಕ್ಕೆ ಒಂದು ಉತ್ತಮ ಹಾಡು, ಸಾಹಿತ್ಯ ಸಿಕ್ಕಿದ್ದು ಬಹು ತೃಪ್ತಿಯಾಯಿತು. ಕಾರ್ಯಕ್ರಮ ನಡೆಸಿಕೊಟ್ಟವರಿಗೆಲ್ಲಾ ಧನ್ಯವಾದಗಳು.

ತನ್ನನ್ನೇ ಅಲ್ಲಗಳೆಯಲು ಬುದ್ಧಿ ಕೊಟ್ಟ ದೇವರ ಕರುಣೆಯ ಅಗಾಧತೆಯ ಪರಿಕಲ್ಪನೆಯನ್ನು ಸರಳವಾಗಿ ಒಂದು ಸುಂದರ ಕವನದಲ್ಲಿ ಕಾಣಿಸಿದ, ಅಷ್ಟೇ ಸುಂದರವಾಗಿ... ಭಾವಪೂರ್ಣವಾಗಿ ಹಾಡಿದ, ಬಿ.ಆರ್.ಲಕ್ಷ್ಮಣರಾವ್ ಅವರ ಹಾಡಿನ ಸಾಹಿತ್ಯ ಹೀಗಿದೆ :- 
(ಸೂಚನೆ : ಹಾಡು ಬೇಕಿದ್ದವರಿಗೆ ಕಳುಹಿಸಲಾಗುವುದು.. ಆದರೆ ಅದಕ್ಕೆ ಪ್ರತಿಯಾಗಿ ಒಂದು ಸುಂದರ ಕವಿತೆಯ ವಿನಿಮಯತೆಯಿದ್ದಲ್ಲಿ ಮತ್ತೂ ಸಂತೋಷ :))


ದೇವರೇ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳವಳೆಯಲು!

ತೋಳಕೊಂದು ಕುರಿಯ ಕೊಟ್ಟೆ, ಸಿಂಹಕೆಂದು ಜಿಂಕೆಯಿಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು |೨|
ತುಳಿತಕೆ ನೀ ತಿಮಿರು ಕೊಟ್ಟೆ, ದುಡಿತಕೆ ಬರಿ ಬೆಮರು ಕೊಟ್ಟೆ
ಕವಿಗೆ ನುಡಿಯ ಡಮರು ಕೊಟ್ಟೆ ಬಡಿತು ದಣಿಯಲು |೨|
ದೇವರೇ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳವಳೆಯಲು

ನರನಿಗೆಂದೆ ನಗೆಯ ಕೊಟ್ಟೆ, ನಗೆಯೊಳು ಹಲ ಬಗೆಯನಿಟ್ಟೆ
ನೂರು ನೋವ ಬಿಟ್ಟೆ ಒಂದು ನಗೆಯ ಕಾಡಲು |೨|
ಏರಲೊಂದು ಏಣಿ ಕೊಟ್ಟೆ, ಕಚ್ಚಲೊಂದು ಹಾವನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು |೨|
ದೇವರೇ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳವಳೆಯಲು

ತಾಮಸಕ್ಕೆ ಬಲವ ಕೊಟ್ಟೆ, ರಾಜಸಕ್ಕೆ ಫಲವ ಕೊಟ್ಟೆ
ಸತ್ವಕೆ ಷಂಡತ್ವ ಕೊಟ್ಟೆ ತತ್ವ ಗೊಣಗಲು |೨|
ಕೈಯ ಕೊಟ್ಟೆ ಕೆಡವಲೆಂದು, ಕಾಲು ಕೊಟ್ಟೆ ಎಡವಲೆಂದು
ಬುದ್ಧಿ ಕೊಟ್ಟೆ ನಿನ್ನನ್ನೇ ಅಲ್ಲಗಳೆಯಲು |೨|
ದೇವರೇ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳವಳೆಯಲು |೨|

----------

-ತೇಜಸ್ವಿನಿ ಹೆಗಡೆ.

ಸೋಮವಾರ, ಆಗಸ್ಟ್ 6, 2012

ಒಂದಿರುಳು ಕನಸಿನಲಿ...

ಬಿಟ್ಟು ಬಿಡು ಸಖ...
ಒಂದು ರಾತ್ರಿಯ ಸವಿಗನಸ
ನನಗಾಗಿ, ನನ್ನೊಳಗಿನ ಕನಸಿಗಾಗಿ...

ರೆಪ್ಪೆಗಳ ಮೇಲೆ ನಿನ್ನ
ಸವಿನೆನಪುಗಳ ಭಾರ ಬಿದ್ದು,
ಅರೆನಿದ್ರೆಗೆ ನಾ ಜಾರುವ ಮೊದಲೇ...
ಅರೆನಿಮೀಲಿತ ಕಣ್ಣಂಚಿಂದ ಒಳಜಾರಬೇಡ ಕಳ್ಳನಂತೇ...

ಗೋಲಿಗಳು ಸ್ಥಿತ್ಯಂತರಗೊಂಡು
ಸುಷುಪ್ತಿಯೊಳಗೂ ನನ್ನೆಚ್ಚರಿಸಿ,
ಕಚಗುಳಿಯಿಟ್ಟು, ನಿದ್ದೆಯನೇ ಹಗಲಾಗಿಸಿ,
ನನ್ನೊಳಗಿನ ಕನಸುಗಳ ಮಲಗಿಸಬೇಡ ಮಳ್ಳನಂತೇ...

ನಿನ್ನೊಳಗೆ ನಾನು, ನನ್ನೊಳಗೆ ನೀನು
ಎಲ್ಲವನೂ ಒಪ್ಪಿದೆ, ಅಪ್ಪಿದೆ.
ಎಲ್ಲೋ ಒಂದೆಡೆ ಸದಾ ಮಿಡಿವ ನನ್ನೊಳಗಿನ ’ನನ್ನ’
ನನಗಾಗಿ ಒಂದು ದಿನ ಕೊಟ್ಟು ಬಿಡು ಸಖ
ಬಿಟ್ಟು ಬಿಡು ಒಂದು ರಾತ್ರಿಯ
ನನ್ನೊಳಗಿನ ನನ್ನ ಕನಸಿಗಾಗಿ....

--ತೇಜಸ್ವಿನಿ ಹೆಗಡೆ.

ಭಾನುವಾರ, ಜೂನ್ 17, 2012

ಒಂದು ದಿವಸಕ್ಕಲ್ಲಾ.. ಪ್ರತಿ ನಿಮಿಷ...


ಅಪ್ಪಾ...... 
-ಈ ಸುಂದರ, ಅನನ್ಯ, ಅನೂಹ್ಯ  ಬಂಧವನ್ನು ಒಂದು ದಿನದ ಬಂಧಿಯಾಗಿಸಲೇ ಮನಸೊಪ್ಪದು. ಪ್ರತಿ ದಿನ, ಕ್ಷಣ ನನ್ನ ಜೀವನದ ಭಾಗವಾಗಿರುವ ಅಪ್ಪನನ್ನು ನೆನಪುಗಳ ಹಂಗೂ ಬಾಧಿಸದು....ನೆನಪಾಗಲು ಅರೆಕ್ಷಣದ ಮರೆವಾದರೂ ಬೇಕಲ್ಲ!!!  ನಾನು ಇಂದು ನಾನಾಗಿರಲು.. ನನ್ನೊಳಗಿನ ನನ್ನ ಸದಾ ನನ್ನೊಂದಿಗೆ ಜೊತೆಗೂಡಿ ನಡೆಯುವಂತಾಗಿರಲು ನನ್ನ ಅಪ್ಪನೇ ಕಾರಣ. ಕೆಲವೊಂದು ಭಾವಗಳ ಅಕ್ಷರಗಳಲ್ಲಿ ಹಿಡಿಯಲಾಗದು.. ತೆರೆಯಲಾಗದು.  

ಅಪ್ಪಾ ಚಿಕ್ಕವಳಿದ್ದಾಗ ನಮಗೆಲ್ಲಾ ಒಂದು ಶ್ಲೋಕವನ್ನು ಕಲಿಸಿಕೊಟ್ಟಿದ್ದ...

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಮ್
(ಭಗವದ್ಗೀತೆ, ಧ್ಯಾನಶ್ಲೋಕ)
[ಅರ್ಥ:-ಮೂಗನನ್ನು ಮಾತಾಡಿಸುತ್ತಾನೆ, ಕಾಲಿಲ್ಲದವನನ್ನು ಪರ್ವತವನ್ನು ಹತ್ತುವಂತೇ ಮಾಡುತ್ತಾನೆ, ಅಂತಹ ಕೃಪಾಳುವಾಗಿರುವ, ಪರಮಾನಂದವನ್ನು ನೀಡುವ, ಮಾಧವನನ್ನು ನಾನು ವಂದಿಸುವೆ.]

ಇಲ್ಲಿಂದಲೇ ಕೃಷ್ಣ ನನಗೆ ಆಪ್ತನಾಗುತ್ತಾ ಹೋದ. ಇದಕ್ಕೆ ತುಸು ಮಟ್ಟಿಗೆ ಕಾರಣ ನನ್ನಪ್ಪನ ಹೆಸರಾದ "ಗೋಪಾಲಕೃಷ್ಣ". ಈ ಹೆಸರೊಳಗೂ ಅವನೇ ಇದ್ದನಲ್ಲಾ... ಮುಂದೆ ಆಕಸ್ಮಿಕವೋ ಇಲ್ಲಾ ವಿಧಿ ಲಿಖಿತವೋ...ನನ್ನ ಸಂಗಾತಿಯ ಹೆಸರೊಳಗೂ ಕೃಷ್ಣನೇ ದೊರಕಿದ್ದು!!:)

ಆ ನನ್ನ ಬಾಲ್ಯದ ದಿನಗಳಲ್ಲಿ ನನ್ನ ವಯಸ್ಸಿನ ಇತರ ಮಕ್ಕಳು ಓಡಾಡುತ್ತಾ... ಬೇಕಾದಲ್ಲಿ ಹೋಗುತ್ತಾ... ಜಿಗಿಯುತ್ತಾ ಇರುವಾಗ, ಅವರೊಂದಿಗೆ ಹಾರಲಾಗದೇ, ಆಡಲಾಗದೇ, ಓಡಲಾಗದೇ ಕುಳಿತಲ್ಲೇ ಅವನ್ನೆಲ್ಲಾ ಕಣ್ತುಂಬಿಕೊಳ್ಳುತ್ತಾ... ನನ್ನೊಳಗೇಳುತ್ತಿದ್ದ ನೂರಾರು ಸಂದೇಹಗಳಿಗೆ ವಿಪ್ಲವಗಳಿಗೆ, ನೋವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾನಸಿಕವಾಗಿ ನನ್ನ ಬಹು ಎತ್ತರಕ್ಕೇರಿಸಿದವ ನನ್ನಪ್ಪ.

ಆಗ ನನಗೆ ಕೇವಲ ಆರೇಳು ವರುಷಗಳಷ್ಟೇ ಆಗಿರಬಹುದು. ಪ್ರತಿ ದಿವಸ ಹೇಳುತ್ತಿದ್ದ ಹಲವು ಶ್ಲೋಕಗಳಲ್ಲಿ ಒಂದಾಗಿದ್ದ "ಮೂಕಂ ಕರೋತಿ.." ಶ್ಲೋಕದ ಅರ್ಥವನ್ನಂತೂ ಮೊದಲೇ ತಿಳಿದಿದ್ದೆ. ಅಂತೆಯೇ ಒಂದಿ ದಿವಸ ಅಪ್ಪನನ್ನೇ ಕೇಳಿ ಬಿಟ್ಟೆ "ಕಾಲಿಲ್ಲದವಗೆ ಪರ್ವತವನ್ನೇ ಏರುವ ಶಕ್ತಿ ಕೊಡುವ ಈ ಕೃಷ್ಣನನ್ನು ಪ್ರತಿ ದಿವಸ ಪ್ರಾರ್ಥಿಸುವ .. ಪೂಜಿಸುವ ನನಗೇಕೆ ಹೀಗೆ??" ಎಂದು. ಆಗ ಅಪ್ಪನ ಮೊಗದೊಳಗೆ ಮೂಡಿದ್ದ ಪ್ರಶಾಂತ ನಗು ಈಗಲೂ ಚೆನ್ನಾಗಿ ನೆನಪಿದೆ. ಅಷ್ಟೇ ಸುಂದರ ಸರಳ ಅವಿಸ್ಮರಣೀಯ ಉತ್ತರವನ್ನಿತ್ತಿದ್ದ ನನ್ನಪ್ಪ. ಅದೇ ಉತ್ತರ ನನ್ನ ಬದುಕಿನ ಪ್ರತಿ ಹಂತದಲ್ಲೂ ನನ್ನನ್ನು ಹಂತ ಹಂತವಾಗಿ ಮೇಲೇರಿಸಲು ಕಾರಣವಾಯಿತು. 

"ದೈಹಿಕವಾಗಿ ಹಾರಿ ಜಿಗಿಯುವ ಶಕ್ತಿಗಿಂತ ಸಾವಿರಾರು ಪಟ್ಟು ಶಕ್ತಿಶಾಲಿ ನಮ್ಮ ಮಾನಸಿಕ ಶಕ್ತಿ.. ಧೀಃಶಕ್ತಿ! ಅದರ ಪ್ರಾಪ್ತಿಗಾಗಿ ಮನೋಸಂಕಲ್ಪ, ದೃಢತೆ, ಆತ್ಮವಿಶ್ವಾಸ, ಛಲ - ಇವು ಅತ್ಯವಶ್ಯಕ. ಇವುಗಳನ್ನು ಗಳಿಸಲು, ಹೊಂದಲು... ಹೊಂದಿ ನೀನೂ ಮಾನಸಿಕವಾಗಿ ಇತರರಂತೇ.. ಸಾಧ್ಯವಾದರೆ ಇತರರಿಗಿಂತ ಮೇಲೇರಲು ಖಂಡಿತ ಸಾಧ್ಯವಾಗುತ್ತದೆ. ಅದಕ್ಕೊಂದು ಮಾರ್ಗ, ಸಾಧನ ಈ ನಿನ್ನ ಕೃಷ್ಣ". ಅಪ್ಪನ ಈ ಮಾತಿನ ಒಳಗಿದ್ದ ಸಾವಿರ ಅರ್ಥ ಬುದ್ಧಿ ಬೆಳೆದಂತೇ ಒಂದೊಂದಾಗಿ ಅರಿವಾಯಿತು...ಅರಿವಾಗುತ್ತಿದೆ.. ಇನ್ನೂ ತಿಳಿಯಬೇಕಿರುವುದು ನೂರಿವೆ!

ನನ್ನ ನೋವಿಗೆ ಅಪ್ಪ ಸ್ಪಂದಿಸಿದ... ನನ್ನೊಳಗಿನಾ ಆತ್ಮವಿಶ್ವಾಸಕ್ಕೆ ಆತ ನೀರೆರೆದು ಪೋಷಿಸಿದ, ಬದುಕಿನ ಹಲವು ಘಟ್ಟಗಳಲ್ಲಿ, ತಿರುವಿನಲ್ಲಿ.. ಮಹತ್ ಪರೀಕ್ಷೆಗಳಲ್ಲಿ ಹಿಂದೆಯೇ ಇದ್ದು, ನಾನೇ ಸ್ವಯಂ ಮುನ್ನೆಡೆವಂತೇ ಮಾಡಿದ ನನ್ನಪ್ಪನ ಮೇರು ವ್ಯಕ್ತಿತ್ವವನ್ನು ಕೆಲವು ಸಾಲುಗಳಲ್ಲಿ.. ಹಲವು ಪುಟಗಳಲ್ಲಿ.... ಸಾವಿರಾರು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲಾ. "ಅಸಾಧ್ಯ" ಎನ್ನುವುದೊರಳೇ "ಸಾಧ್ಯ"ವಿದೆ ಎನ್ನುವುದು ಮೊಟ್ಟಮೊದಲು ತೋರಿಕೊಟ್ಟದ್ದೇ ಅಪ್ಪ! ಅನುಕಂಪದ ಪ್ರತಿ ಅಸಹಿಷ್ಣುತೆಯನ್ನೂ.. ಸಹಕಾರದ ಮಿತಿಯನ್ನು ಅದೆಷ್ಟು ಚೆನ್ನಾಗಿ ತಿಳಿಹೇಳಿದನೆಂದರೆ ಇಂದು ನಾನು ಯಾರ ಸಹಕಾರವಿಲ್ಲದೆಯೂ ಬದುಕಬಲ್ಲೆ... ಸಹಜ ಜೀವನ ನನಗೊಲಿದಿದೆ. "ಗೀತೆಯ ಕೃಷ್ಣ"- ನನ್ನಪ್ಪನೇ ಬರೆದ ಪುಸ್ತಕ. ನನ್ನ ಅಚ್ಚುಮೆಚ್ಚಿನದ್ದು. ಅದೇ ರೀತಿ ನನ್ನಮ್ಮ ಸದಾ ಹೇಳುವ ಈ ಶ್ಲೋಕದ ಸಾಲು ನನ್ನ ಆತ್ಮಬಲ. "ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" (=ನಿನ್ನನ್ನು ಕುಗ್ಗಿಸುವ ಮನೋ ದೌರ್ಬಲ್ಯಗಳನ್ನು ಹತ್ತಿಕ್ಕಿ.. ಸಬಲನಾಗು.. ಮನೋಬಲವನ್ನು ವೃದ್ಧಿಸಿಕೋ.)

-ತೇಜಸ್ವಿನಿ.

ಮಂಗಳವಾರ, ಜೂನ್ 12, 2012

ನ್ಯಾಯಯುತವಾಗಿ, ಸತ್ಯತೆಯಲ್ಲಿ ನಮಗೆ ಸಿಗಬೇಕಾಗಿರುವ ನಮ್ಮ ಹಕ್ಕಿಗಾಗಿ...


Courtesy : http://disabledpeopleprotest.wordpress.com/   

ರಿಯಾಲಿಟಿ ಶೋ‌ಗಳೆಂದರೆ ಬರಿಯ ಬೂಟಾಟಿಕೆಯ... ನಮ್ಮ ಮನದ ಭಾವನೆಗಳೊಂದಿಗೆ ಆಟವಾಡುವ.. ಸ್ಪರ್ಧಾರ್ಥಿಗಳನ್ನು ಮಾನಸಿಕವಾಗಿ ಹಿಂಸಿಸುವ.. ಸಮಯಕೊಲ್ಲುವ ಕಾರ್ಯಕ್ರಮಗಳೆಂಬುದು ನನ್ನ ಬಲವಾದ ನಂಬಿಕೆ. ಇದು ಬಹುತೇಕ ಸತ್ಯವೆಂದೂ ಸಾಬೀತಾಗಿದೆ. ಆದರೆ ಇತ್ತೀಚಿಗೆ ಬರುತ್ತಿರುವ ಆಮೀರ್ ಖಾನ್‌ರ "ಸತ್ಯಮೇವ ಜಯತೇ" ಕಾರ್ಯಕ್ರಮ ಮಾತ್ರ ವಿಭಿನ್ನವಾಗಿ ನಿಲ್ಲುತ್ತಿರುವುದು (ಸಧ್ಯ ಹೀಗಿದೆ ಮುಂದೆ ಹೇಗೋ....!) ಸ್ವಲ್ಪ ಸಂತಸವಾಗಿತಿದೆ. ನೋಡುಗರು ಕಾತುರದ ನಿರೀಕ್ಷೆಯನ್ನು ವಾರಾಂತ್ಯದವರೆಗೂ ಹಿಡಿದಿಟ್ಟಿಕೊಳ್ಳುವಂತೆ ಮಾಡುತ್ತಿದೆ "ಸತ್ಯಮೇವ ಜಯತೇ". 


ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು, ವೈದ್ಯಕೀಯ ಕ್ಷೇತ್ರದೊಳಗಿನ ಅವ್ಯವಾಹಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ವಿಶೇಷ ಚೇತನರೊಳಡಗಿರುವ ಅಗಾಧ ಚೈತನ್ಯದ ಪರಿಚಯ - ಇವು ಈವರೆಗೆ ಈ ಕಾರ್ಯಕ್ರಮದಲ್ಲಿ ಪರಿಚಯವಾದ, ಚರ್ಚೆಗೊಳಗಾದ, ವಿಷದವಾಗಿ ವಿವೇಚಿಸಿ ಚಿಂತಿಸಲಾದ ವಿಷಯಗಳು. ಉದ್ರೇಕ ವರ್ತನೆಗಲಿಲ್ಲದ, ಅವಾಚ್ಯ ಬೈಗಳುಗಳಿಲ್ಲದ, ಏರು ಧ್ವನಿಗಳಲ್ಲಿ ಕಿರುಚಾಟ, ಅಳು, ಗೋಳಾಟಗಳಿಲ್ಲದ ಕೇವಲ ವಿಷಯದ ಮಂಡನೆ, ಅದರ ಹಿನ್ನಲೆ, ಅಂಕಿ-ಅಂಶಗಳಮೂಲಕ ನೀಡುವ ಪುರಾವೆ, ಇವೆಲ್ಲವುಗಳ ಜೊತೆಗೇ.. ಸಮಸ್ಯೆಗಳ ನಿವಾರಣೆಗೆ ಸಾಧ್ಯವಿರುವ ಪರಿಹಾರ- ಇವುಗಳನ್ನೊಳಗೊಂಡ ಸಂಯಮದಿಂದ ಕೂಡಿದ ನಿರೂಪಣೆ ಮೆಚ್ಚುವಂಥದ್ದು. ಕೆಲದೊಂದು ಘಟನಾವಳಿಗಳು ನಮ್ಮೆಲ್ಲರ ಊಹೆಗೂ ನಿಲುಕದ್ದಾಗಿರುತ್ತವೆ. ತುಂಬಾ ಸರಳವಾಗಿ, ನೇರವಾಗಿ ನಮ್ಮ ಮುಂದೆ ಅವುಗಳನ್ನು ಇಟ್ಟರೂ... ಒಮ್ಮೊಮ್ಮೆ ಪರಯತ್ನವಾಗಿ ನೋಡುಗರ ಕಣ್ಣಂಚು ಒದ್ದೆಯಾಗದಿರದು. ಯಾವುದೇ ಸಮಸ್ಯೆಯಾಗಲಿ.. ಅದರೊಳಗಿನ ಸತ್ಯತೆ ಮೇಲ್ನೋಟಕ್ಕೆ ಕಾಣಸಿಗದಿದ್ದರೂ, ಅದನ್ನು ಸೂಕ್ಷ್ಮವಾಗಿ ಗ್ರಹಿಸಿದರೆ, ಸಂವೇದಿಸಿದರೆ ವಸ್ತುಸ್ಥಿತಿಯೊಳಗಿನ ನಿಜತ್ವ ಸಭ್ಯ ಹೃದಯವನ್ನು ತಟ್ಟದಿರದು. ಇದರಿಂದಾಗಿಯೇ "ಸತ್ಯಮೇವ ಜತಯೇ"ಯಲ್ಲಿ ಪ್ರಸಾರವಾದ ಈ ವರೆಗಿನ ಬಾಗಗಳೆಲ್ಲಾ ನನಗೆ ಬಲು ಇಷ್ಟವಾದವು.

ಅದರಲ್ಲೂ ವಿಶೇಷವಾಗಿ ಕಳೆದ ಆದಿತ್ಯವಾರದ "ಸತ್ಯಮೇವ ಜಯತೆ" ನನಗೆ ತುಂಬಾ ಮೆಚ್ಚುಗೆಯಾಯಿತು. (http://www.youtube.com/watch?v=xv80kfLURlc&feature=youtu.be
ಸ್ವತಃ ನಾನೂ ಅವರಲ್ಲೋರ್ವಳಾಗಿರುವುದರಿಂದಲೋ ಇಲ್ಲಾ.. ಅವರೆಲ್ಲಾ ಅನುಭವಿಸಿದ/ಅನುಭವಿಸುತ್ತಿರುವ ಸಾಧಕ-ಬಾಧಕಗಳು, ಮಾನಸಿಕ ತೊಳಲಾಟ, ಹಿಂಸೆ, ಸಮಾಜದೊಳಗಿನ ಅಸಮಾನತೆಗಳು ನನ್ನನ್ನೂ ಅಷ್ಟೇ ಪ್ರಮಾಣದಲ್ಲಿ ತಾಗಿದ್ದರಿಂದಲೋ ಏನೋ.... ನಾನೂ ಆ ಕಾರ್ಯಕ್ರಮದೊಳಗಿನವರಲ್ಲೋರ್ವಳಾಗಿ  ಅದರೊಳಗೇ ಬಂಧಿಯಾದೆ. ಅಲ್ಲಿಯ ವಿಶೇಷ ಚೇತನರ ಮನದ ಮಾತುಗಳು ಪ್ರತಿಯೊಬ್ಬ ವಿಶೇಷ ಚೇತನ ವ್ಯಕ್ತಿಯ ಮನದಾಳದ ಮಾತಿನಂತಿತ್ತು. ಸಮಾಜದೊಳಗಿತ ಅಸಮಾನತೆ, ಕ್ರೌರ್ಯ, ಮೌಢ್ಯ,... ಅಂತೆಯೇ ಇದೇ ಸಮಾಜದೊಳಗಿನ ಕೆಲವರ(ಕಲವೇ ಕೆಲವರ) ಸ್ನೇಹಪರತೆ, ಸಹಜತೆ, ವಿಶ್ವಾಸ, ಸಹಕಾರ- ಇವೆಲ್ಲವುಗಳ ಪರಿಚಯ ಅಲ್ಲಿತ್ತು. ವಿಶೇಷ ಚೇತನರು ಹಲವು ಬಾಧಕಗಳನ್ನು ದಾಟಿ ಸಾಧಿಸಿದ ಅಸಾಮಾನ್ಯ ಸಾಧನೆಗಳ ಪರಿಚಯ ಬಹು ಸ್ಪೂರ್ತಿದಾಯಕವಾಗಿತ್ತು. "ವಿಕಲತೆ ಇರುವುದು ನೋಡುಗರ ನೋಟದಲ್ಲಿ, ಯೋಚಿಸುವ ಯೋಚನೆಯಲ್ಲಿ... ದೇಹದಲ್ಲಿ ಅಲ್ಲಾ.." ಎನ್ನುವ ಸಂದೇಶವನ್ನು ಬಹು ಸುಂದರವಾಗಿ, ಸಮರ್ಥವಾಗಿ "ಸತ್ಯಮೇವ ಜಯತೇ" ತೋರಿಸಿದೆ.

ಆದರೆ ಈ ಕಾರ್ಯಕ್ರಮ ನೋಡುತ್ತಿದ್ದಂತೇ ನನಗೆ ತುಂಬಾ ನೆನಪಾದವರು ಸ್ನೇಹಮಯಿ ಮಾಲತಿ ಹೊಳ್ಳರವರು. ಅವರನ್ನು ಭೇಟಿಯಾಗಿದ್ದು ಒಂದೆರಡು ಬಾರಿಯಾಗಿದ್ದರೂ.. ಮಾತಾಡಿದ್ದು ಹಲವು ಬಾರಿ. ಅವರ ಜೀವನೋತ್ಸಾಹ, ಆತ್ಮವಿಶ್ವಾಸ, ಛಲ ನನಗೆ...ನನ್ನಂತಹವರಿಗೆ... ಸರ್ವರಿಗೂ ಮಾದರಿಯಾಗಿದೆ. ಅವರು ನಡೆಸುತ್ತಿರುವ "ಮಾತೃ ಛಾಯಾ" ಯಾರ ಯಾವ ಸಾಧನೆಗೂ ಕಡಿಮೆಯದ್ದಲ್ಲ. ಅವರನ್ನೂ ಅಲ್ಲಿ ಪರಿಚಯಿಸಬಹುದಿತ್ತೆಂಬ ಪುಟ್ಟ ಕೊರಗು ಮಾತ್ರ ಹಾಗೇ ಉಳಿಯಿತು.


ಬಹು ಹಿಂದೆ ನನ್ನದೇ ಬ್ಲಾಗ್‌ನಲ್ಲಿ ವಿಶೇಷ ಚೇತನರ ಸಮಸ್ಯೆಗಳು ಹಾಗೂ ಇದಕ್ಕಿರುವ ಸುಲಭ ಸರಳ ಪರಿಹಾರಮಾರ್ಗದ ಬಗ್ಗೆ ನಾನೊಂದು ಲೇಖನ ಬರೆದಿದ್ದೆ. ಹಾಗೆಯೇ ಮಾಲತಿಹೊಳ್ಳರ ಸಾಧನೆಗಳ ಕುರಿತೂ ಸವಿವರವಾಗಿ ಪೋಸ್ಟ್ ಮಾಡಿದ್ದೆ... ಆ ಎರಡು ಲೇಖನಗಳ ಲಿಂಕ್ಸ್ ಮಗದೊಮ್ಮೆ ಈಗ ಇಲ್ಲಿ...


&


-ತೇಜಸ್ವಿನಿ ಹೆಗಡೆ.

ಗುರುವಾರ, ಮೇ 3, 2012

ಕೈಹಿಡಿದು ಪೊರೆವಳು ಕನ್ನಡಮ್ಮ


ಪದವಿ ಶಿಕ್ಷಣ ಮುಗಿದಾಕ್ಷಣ, ನಮ್ಮೊಳಗೆ ಒಂದು ಪ್ರಮುಖ ಘಟ್ಟವನ್ನು ಮುಟ್ಟಿದ ನಿರುಮ್ಮಳತೆ ತುಂಬಿಕೊಳ್ಳುತ್ತದೆ. ಆದರೆ ಅದು ತಾತ್ಕಾಲಿಕವಷ್ಟೇ! ಬದುಕನ್ನು ಸರಿಯಾದ ರೀತಿಯಲ್ಲಿ ಈಸಿ ಜಯಿಸಲು ಸ್ವಾವಲಂಬನೆ ಅತ್ಯಗತ್ಯ. ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ವಿದ್ಯಾಭ್ಯಾಸವೂ ಅತ್ಯಾವಶ್ಯಕ. ಈಗಿನ ಯುಗದಲ್ಲಿ ಕೇವಲ ಒಂದು ಪದವಿಯಿಂದ ಉನ್ನತ ಹುದ್ದೆಯ ನೌಕರಿಗಳನ್ನು ಗಳಿಸಲು, ಆರ್ಥಿಕವಾಗಿ ಸಾಕಷ್ಟು ಸದೃಢಗೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಪದವಿಯ ನಂತರ ಉನ್ನತ ಶಿಕ್ಷಣಕ್ಕೆ ಅಣಿಯಾಗುವುದು ಅನಿವಾರ್ಯ. ಪದವಿಯಲ್ಲಿ ಓದಿರುವ ಪಠ್ಯಗಳಲ್ಲಿ ನಮಗೆ ಯಾವ ವಿಷಯ ಹೆಚ್ಚು ಆಸಕ್ತಿಕರವಾಗಿರುತ್ತದೆಯೋ, ಯಾವ ವಿಷಯ ನಮಗೆ ಸುಲಭ ಗ್ಯಾಹ್ಯವಾಗಿದ್ದು, ನಾವು ಅದರ ಅಧ್ಯಯನದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬಲ್ಲೆವೆಂಬ ಆತ್ಮವಿಶ್ವಾಸವಿರುತ್ತದೆಯೋ ಅಂತಹ ವಿಷಯವನ್ನೇ ಆರಿಸಿಕೊಂಡು ಉನ್ನತ ಶಿಕ್ಷಣ ಪಡೆದರೆ ಉತ್ತಮ. ಹಾಗೆಯೇ ಪ್ರಸ್ತುತ ಸ್ಥಿತಿಯಲ್ಲಿ ಯಾವ ವಿಷಯಕ್ಕೆ ಹೆಚ್ಚು ಬೇಡಿಕೆಯಿದೆ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕಾದ್ದು ಅಗತ್ಯ. ಸಾಮಾನ್ಯವಾಗಿ ವಿಜ್ಞಾನ, ಕಲಾವಿಜ್ಞಾನ, ವಾಣಿಜ್ಯ ವಿಷಯದಲ್ಲಿ ಪದವಿಪಡೆದವ ಅದೇ ವಿಷಯದಲ್ಲೇ ಉನ್ನತ ಶಿಕ್ಷಣ ಅಧ್ಯಯನ ಮಾಡಲು ಬಯಸುತ್ತಾನೆ. ಆದರೆ ಎಲ್ಲೋ ಒಂದಿಬ್ಬರು ಮಾತ್ರ ಕನ್ನಡದಲ್ಲಿ ಎಂ.ಎ. ಮಾಡಲು ಇಚ್ಛಿಸುವರು. ಕನ್ನಡ ಸಾಹಿತ್ಯವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಳ್ಳಲು ಬಯಸುವವರು ಮತ್ತೂ ಕಡಿಮೆಯೇ ಎನ್ನಬಹುದು. ಇದಕ್ಕೆ ಕಾರಣ ಈ ವಿಷಯದ ಕುರಿತಾಗಿ ಇರುವ ಅಸಡ್ಡೆ ಹಾಗೂ ಇದಕ್ಕೆ ಅತಿ ಕಡೆಮೆ ಬೇಡಿಕೆಯಿದೆ ಅನ್ನೋ ಮನೋಭಾವ. ಆದರೆ ಯಾವುದೇ ವಿಷಯದಲ್ಲಿ ಸಂಪೂರ್ಣ ಪ್ರಾವಿಣ್ಯತೆ ಪಡೆದರೆ, ನಮ್ಮ ದೃಷ್ಟಿಕೋನವನ್ನು ಸಂಕುಚಿತಗೊಳಿಸಿಕೊಳ್ಳದಿದ್ದರೆ, ಸ್ಪಷ್ಟ ಗುರಿ ಹಾಗೂ ಅದನ್ನು ತಲುಪಲು ಸರಿಯಾದ ಸಾಧನವನ್ನು ಕಂಡುಕೊಂಡರೆ, ಎಲ್ಲವೂ ಸುಲಭ ಸಾಧ್ಯ.

ಉನ್ನತ ಶಿಕ್ಷಣವನ್ನು ಓದುವಾಗ ಪಠ್ಯಗಳಲ್ಲಿದ್ದಷ್ಟನ್ನೇ ಪಠಿಸಿ, ಕೇವಲ ಅಂಕಗಳನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ಓದಿದರೆ ಖಂಡಿತ ಗುರಿ ಸಾಧಿಸಲಾಗದು. ಅಧ್ಯಯನದ ಜೊತೆ ಸಂಶೋಧನೆ, ಹತ್ತು ಹಲವಾರು ಇತರ ವಿಷಯಗಳ ಜ್ಞಾನಾರ್ಜನೆ, ಸಾಮಾನ್ಯ ಜ್ಞಾನದ ತಿಳುವಳಿಕೆ- ಇವೆಲ್ಲವುಗಳ ಜೊತೆ ಕನ್ನಡದೊಂದಿಗೆ ಇಂಗ್ಲೀಷ್ ಯಾಗೂ ಇನ್ನಿತರ ಭಾಷೆಯಗಳ (ಉದಾ: ಜರ್ಮನ್, ಪ್ರೆಂಚ್, ಸ್ಪಾನಿಶ್ ಇತ್ಯಾದಿ..) ಕಲಿಕೆಯೂ ಜೊತೆಗೂಡಿದಲ್ಲಿ ಹಲವಾರು ಅವಕಾಶಗಳು ಕಾಣಸಿಗುತ್ತವೆ. 

ನಾನೂ ಒರ್ವ ಬಿ.ಎಸ್ಸಿ. ಪದವೀಧರೆ. ವಿಜ್ಞಾನ ನನ್ನ ಅಚ್ಚುಮೆಚ್ಚಿನ ವಿಷಯವಾಗಿತ್ತು.. ಈಗಲೂ ಆಗಿದೆ. ಬಿ.ಎಸ್ಸಿ.ಯ ನಂತರ ಕಾರಣಾಂತರಗಳಿಂದ ವಿಜ್ಞಾನದಲ್ಲೇ ಉನ್ನತ ಶಿಕ್ಷಣ ಪಡೆಯಲಾಗಲಿಲ್ಲ. ಆದರೆ ಮೊದಲಿನಿಂದಲೂ ವಿಜ್ಞಾನದಷ್ಟೇ ಆಸಕ್ತಿ, ಅಕ್ಕರೆ ಹೊಂದಿದ್ದ ನನ್ನ ಮೆಚ್ಚಿನ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ಭಾಗ್ಯ ನನ್ನದಾಯಿತು. ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮಾಡಲು ಹೊರಟಾಗ ಹಲವರು ಪ್ರೋತ್ಸಾಹಿಸಿದ್ದರು... ವಿಜ್ಞಾನದ ನೆಲೆಕಟ್ಟಿನ ಮೇಲೆ ಕನ್ನಡ ಸಾಹಿತ್ಯದವನ್ನು ಅಭ್ಯಸಿಸಲು ಸಾಧ್ಯವಾಗುತ್ತಿರುವುದು ತುಂಬಾ ಅಪರೂಪ... ಆಸಕ್ತಿಕರ ಎಂದು. ಅದರ ನಿಜ ಅರ್ಥ ಎಂ.ಎ. ಮಾಡಿದ ಮೇಲಷ್ಟೇ ನನಗೆ ಸರಿಯಾಗಿ ಅರಿವಾಗಿದ್ದು. ಅದೆಷ್ಟೋ ಪದವೀಧರರು ಕನ್ನಡ ಸಾಹಿತ್ಯವನ್ನು ಅಭ್ಯಸಿಸಲು ಇಚ್ಛಿಸಿದರೂ ಬೇಡಕೆ ಹಾಗೂ ಅವಕಾಶಗಳ ಕೊರತೆಯ ಭಯದಿಂದಾಗಿ ಹಿಂದಡಿಯಿಟ್ಟಿರಬಹುದು. ಇನ್ನು ಕೆಲವರು ತಮ್ಮೊಳಗಿನ ಆಸಕ್ತಿಯಿಂದ ಅಭ್ಯಸಿಸಿದರೂ ಅದನ್ನೇ ತಮ್ಮ ವೃತ್ತಿಯನ್ನಾಗಿಸಲು ಸೋತು ಕನ್ನಡ ಸಾಹಿತ್ಯದಿಂದ ವಿಮುಖರಾಗಿರಲೂ ಬಹುದು. ಆದರೆ ಇಂದು ಹತ್ತು ಹಲವು ಅವಕಾಶಗಳು ಕೈಬೀಸಿಕರೆಯುತ್ತಿದ್ದು, ನಮ್ಮ ಪ್ರವೃತ್ತಿ ಹಾಗೂ ವೃತ್ತಿ ಎರಡೂ ನಮ್ಮೊಂದಿಗೆ ಜೊತೆಯಾಗಿ ಸಾಗಲು ಸಾಧ್ಯವಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಬೇಡಿಕೆ :- ಕನ್ನಡ ಎಂ.ಎ. ಜೊತೆಗೆ ಬಿ.ಎಡ್. ಸಹ ಮಾಡಿಕೊಂಡವರು ಶಾಲಾ/ಕಾಲೇಜ್‌ಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕ ಹುದ್ದೆಯನ್ನು ಪಡೆಯಬಹುದು. ಕಾಲೇಜುಗಳಲ್ಲಿ ಸಧ್ಯ ತಾತ್ಕಲಿಕ ಹುದ್ದೆಯನ್ನು ಮಾತ್ರ ಪಡೆಯಬಹುದಾಗಿದ್ದು, ಯು.ಜಿ.ಸಿ. ಸ್ಕೇಲ್ ಪಡೆಯಲು ಎನ್.ಇ.ಟಿ./ಎಸ್.ಎಲ್.ಇ.ಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ವಿದ್ಯಾರ್ಥಿಗಳೊಂದಿಗೆ ಸಮರ್ಥವಾಗಿ ಸಂವಹಿಸಲು ಇಲ್ಲಿ ಕನ್ನಡ ಭಾಷೆಯೇ ಪ್ರಮುಖವಾಗಿ ಬೇಕಾಗಿರುತ್ತದೆ. ಆದರೆ ಇತ್ತೀಚಿಗೆ ಈ ಕ್ಷೇತ್ರದಲ್ಲಿ ಅವಕಾಶಗಳು ಸ್ವಲ್ಪ ಕಡಿಮೆಯೇ ಆಗಿರಿವುದು ನಿಜ. ಹಾಗಾಗಿ ಬೇರೆ ವಿಕಲ್ಪಗಳತ್ತ ನೋಟ ಬೀರುವುದು ಅತ್ಯಗತ್ಯ.

ಫ್ರೀಲ್ಯಾನ್ಸ್ ಪತ್ರಿಕೋದ್ಯಮ :- ಮನೆಯಲ್ಲಿ ಕುಳಿತೇ ಪತ್ರಿಕೆಗಳಿಗೆ, ಮ್ಯಾಗಝೀನ್‌ಗಳಿಗೆ ಬರಹಗಳನ್ನು ಕಳಿಸಬಹುದು. ರಾಘವಾಂಕ, ಕುಮಾರವ್ಯಾಸ, ಪಂಪರ ಕಾವ್ಯಗಳನ್ನು, ಕಾವ್ಯಮೀಮಾಂಸೆ, ಛಂದಸ್ಸು, ರಗಳೆಗಳನ್ನು ಸರಳಗೊಳಿಸಿ ಸುಲಭವಾಗಿ ಜನಸಾಮಾನ್ಯರಿಗೆ ಮುಟ್ಟಿಸಲು, ಜನಮಾನಸವನ್ನು ಸುಲಭವಾಗಿ ತಟ್ಟುವ ಕಥೆ, ಕವನ, ಲೇಖನಗಳನ್ನು ಕಳುಹಿಸಲು.. ಪ್ರಮುಖವಾಗಿ ಕನ್ನಡ ಸಾಹಿತ್ಯದ ಮೇಲಿನ ನಮ್ಮ ಪ್ರವೃತ್ತಿಯ ಆಸ್ವಾದನೆಗೆ ಇದು ಅತ್ಯುತ್ತಮ ಸಾಧನ. 

ಸಾರ್ವಜಿಕ ಸಂಪರ್ಕ ಸಂಸ್ಥೆಗಳಲ್ಲಿ :- ಕರ್ನಾಕ ರಾಜ್ಯದಲ್ಲಿರುವ ಸಾರ್ವಜನಿಕ ಸಂಪರ್ಕ ಅಧಿಕಾರಿ (Public Relations Officer- P.R.O) ಹುದ್ದೆಗಳಲ್ಲಿ ಹೇರಳ ಅವಕಾಶಗಳಿವೆ. ಗ್ರಾಹಕರು ಹಾಗೂ ಅಧಿಕಾರಿಗಳ ನಡುವೆ ಹಾಗೆಯೇ ಅಧಿಕಾರಿಗಳು ಹಾಗೂ ಸರ್ಕಾರದ ನಡುವೆ ಸಂವಹನ ನೆಡೆಸುವಲ್ಲಿ ಪಬ್ಲಿಕ್ ರಿಲೇಷನ್ ಆಫೀಸರ್ ಪಾತ್ರ ಅತಿ ದೊಡ್ಡದು. ಆತನಿಗೆ ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಚೆನ್ನಾಗಿದ್ದು, ಇಂಗ್ಲೀಷ್ ಭಾಷೆ ಕೂಡ ಚೆನ್ನಾಗಿ ತಿಳಿದರಬೇಕಾಗುತ್ತದೆ. ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆದವರಿಗೇ ಮೊದಲ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ ಓರ್ವ ಪಿ.ಆರ್.ಓ ಅಧಿಕಾರಿ.

ತರ್ಜುಮೆಯ ಕ್ಷೇತ್ರದಲ್ಲಿ (Translation):- ಯಾರೋ ಎಲ್ಲೋ ಹೇಳಿದ ನೆನಪು..‘ಕನ್ನಡದಲ್ಲಿ ಶಾಸನಗ್ರಂಥಗಳ ಕೊರೆತೆಯಿದೆ’ ಎಂದು. ರಸಾಯನಶಾಸ್ತ್ರ, ಭೌತಶಾಸ್ತ್ರ ಇತ್ಯಾದಿ ವಿಷಯಗಳ ಮೇಲಿನ ಸಂಶೋಧನಾತ್ಮಕ ಪುಸ್ತಕಗಳು ಬೇರೆ ಭಾಷೆಗಳಲ್ಲಿ ಸಾಕಷ್ಟು ಲಭ್ಯ. ಆದರೆ ಕನ್ನಡಕ್ಕೆ ತರ್ಜುಮೆಗೊಂಡವು ತೀರಾ ಅಲ್ಪ. ಇಂಗ್ಲೀಷ್, ಜರ್ಮನಿ, ಫ್ರೆಂಚ್ - ಇತ್ಯಾದಿ ಭಾಷೆಗಳಲ್ಲಿರುವ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನಗಳನ್ನು ಕನ್ನಡಕ್ಕೆ ಅನುವಾದಿಸುವಾಗ ಮೂರು ಅಂಶಗಳು ಅತ್ಯಗತ್ಯವಾಗಿರುತ್ತವೆ. ಒಂದು- ನೀವು ಕನ್ನಡವನ್ನು ಚೆನ್ನಾಗಿ ಅಧ್ಯಯನ ಮಾಡಿರಬೇಕು.. ಭಾಷೆಯಲ್ಲಿನ ಹಿಡಿತ, ಸರಿಯಾದ ಪದ ಜೋಡಣೆ, ಅರ್ಥ ಕೆಡದಂತೇ ವಾಕ್ಯ ರಚನೆ ಇವೆಲ್ಲವುಗಳಿಗೆ ಕನ್ನಡದಲ್ಲಿ ಪಾಂಡಿತ್ಯ ಅತ್ಯಗತ್ಯ. ಎರಡನೆಯದಾಗಿ - ಇಂಗ್ಲೀಷ್ ಚೆನ್ನಾಗಿ ಗೊತ್ತಿರಬೇಕು. ಮೂರನೆಯದಾಗಿ - ನೀವು ತರ್ಜುಮೆ ಮಾಡಲು ಹೊರಟಿರುವ ವಿಷಯದ ಜ್ಞಾನ ನಿಮ್ಮಲ್ಲಿ ಚೆನ್ನಾಗಿರಬೇಕಾಗುತ್ತದೆ. http://www.ntm.org.in/ - ಈ ಲಿಂಕ್‌ಗೆ ಭೇಟಿ ಇತ್ತಲ್ಲಿ ತರ್ಜುಮೆಯ ಕುರಿತು ಹಲವು ಮಾಹಿತಿಗಳು, ಉದ್ಯೋಗಾವಕಾಶಗಳು ನಿಮಗೆ ದೊರಕಬಲ್ಲದು. 

ಗಣಕ ತಜ್ಞ ಯು.ಬಿ.ಪವಜ ಅವರ ಪ್ರಕಾರ ಮೈಕ್ರೋಸಾಫ್ಟ್, ಗೂಗಲ್ ಕಂಪನಿಗಳು ಕನ್ನಡದಲ್ಲಿ ಪ್ರಾವೀಣ್ಯ ಹೊಂದಿದ್ದು, ಇಂಗ್ಲೀಷ್ ಜ್ಞಾನವನ್ನೂ ಚೆನ್ನಾಗಿ ಹೊಂದಿರುವವರನ್ನು ಒಡಂಬಡಿಕೆಯ (Contract) ಮೇಲೆ ಪಠ್ಯಕಣಜ (corpus) ತಯಾರಿಸಲು ಆಹ್ವಾನಿಸುತ್ತಿದ್ದಾರೆ. ಸಹಜಭಾಷಾಸಂಸ್ಕರಣ ಕ್ಷೇತ್ರದಲ್ಲೂ (Natural Language Processing) ಸಾಕಷ್ಟು ಅವಕಾಶಗಳಿವೆ. ಹಲವು ಸಂಶೋಧನಾ ಕೇಂದ್ರಗಳು, ವಿಶ್ವವಿದ್ಯಾಲಯಗಳು ಪಠ್ಯಕಣಜವನ್ನು ತಯಾರಿಸಲು ಪ್ರಾರಂಭಿಸಿವೆ. ಇವು ತಯಾರಾದಲ್ಲಿ ಸಹಜಭಾಷಾಸಂಸ್ಕರಣೆ ಮಾಡುವವರಿಗೆ ಉಪಯೋಗವಾಗಲಿದೆ.

ಜಾಹೀರಾತು ಹಾಗೂ ದೂರದರ್ಶನ ಕ್ಷೇತ್ರದಲ್ಲಿ:- ಹಿಂದಿ, ಇಂಗ್ಲೀಷ್ ಇನ್ನಿತರ ಭಾಷೆಗಳಲ್ಲಿ ತಯಾರಾದ ಜಾಹೀರಾತುಗಳನ್ನು ದೂರದರ್ಶನ, ಖಾಸಗೀ ಚಾನಲ್‌ಗಳಲ್ಲಿ ಬಿತ್ತರಿಸಲು ಅಂತೆಯೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಲು, ಕಾಪಿ ರೈಟ್/ಕಾಪಿ ಎಡಿಟಿಂಗ್ ಹುದ್ದೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಅಲ್ಲದೇ ರಾಜ್ಯದ ಚಾನಲ್‌ಗಳಲ್ಲಿ ಬಿತ್ತರಗೊಳ್ಳುವ ಧಾರಾವಾಹಿಗಳಿಗೆ, ಇನ್ನಿತರ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ರೈಟರ್‌ಆಗಿ, ಉದ್ಘೋಷಕರಾಗಿ, ನಿರೂಪಕರಾಗಿ, ವಾರ್ತಾವಾಚಕರಾಗಿ ಕಾರ್ಯನಿರ್ವಹಿಸಲೂ ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದಿರುವುದು ಅತ್ಯಗತ್ಯ.

ನಿಘಂಟು ರಚನೆಯಲ್ಲಿ(Lexicography):- ಕನ್ನಡಕ್ಕೆ ಸಧ್ಯ ಇರುವವರು ಓರ್ವರೇ ನಿಘಂಟು ತಜ್ಞರು. ಅವರೇ ಶ್ರೀಯುತ ಜಿ.ವಿ.ವೆಂಕಟ ಸುಬ್ಬಯ್ಯ. ನಿಘಂಟು ತಜ್ಞರಾಗಲು ಅಪಾರ ಅಧ್ಯಯನ, ಸಂಶೋಧನೆಗಳು ಅತ್ಯಗತ್ಯ. ಕನ್ನಡ ಸಾಹಿತ್ಯದ ಕುರಿತು ಬಹು ಆಸಕ್ತಿ ಉಳ್ಳವರು ಈ ಕ್ಷೇತ್ರದಲ್ಲೂ ಯಶಸ್ಸುಗಳಿಸಬಲ್ಲರು. ಈ ನಿಟ್ಟಿನಲ್ಲಿ ಕನ್ನಡ ಎಂ.ಎ. ಮಾಡಿಕೊಂಡವರು ಸಂಶೋಧನೆಗೆ ತೊಡಗಿಕೊಂಡು ನಿಘಂಟು ರಚನೆಯಲ್ಲಿ ತಮ್ಮ ಕೊಡುಗೆಯನ್ನು ಕೊಡಬಹುದಾಗಿದೆ.

ಯಾವುದೇ ವಿಷಯವಾಗಲಿ, ಅದರಲ್ಲಿ ತಾದಾತ್ಮ್ಯತೆ, ತನ್ಮಯತೆ, ಶ್ರದ್ಧೆ ಇದ್ದರೆ ಪ್ರಾವೀಣ್ಯತೆ ತಾನಾಗೇ ಬರುತ್ತದೆ. ಜೊತೆಗೆ ಸಾಮಾನ್ಯ ಜ್ಞಾನದ ತಿಳಿವು, ವಿಶಾಲ ದೃಷ್ಟಿಕೋನದ ಅಳವಡಿಕೆಯಿಂದಾಗಿ ಅವಕಾಶಗಳು, ಯಶಸ್ಸುಗಳು ನಮ್ಮನ್ನರಿಸಿ ಬಂದೇ ಬರುತ್ತವೆ. ಕೇವಲ ಪುಸ್ತಕದ ಬದನೇಕಾಯಿಯಾಗದೇ ಆಯಾ ಕಾಲಕ್ಕೆ ತಕ್ಕಂತೇ ತಿಳಿವನ ಹರಿವನ್ನು ಅರಿಯುತ್ತಾ ಮುನ್ನಡೆದರೆ ನಮ್ಮ ಆಸಕ್ತಿಯನ್ನೇ ವೃತ್ತಿಯನ್ನಾಗಿಸಿಕೊಳ್ಳಬಹುದು.

@ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಪ್ರಕಟಿತ

-ತೇಜಸ್ವಿನಿ ಹೆಗಡೆ.

ಗುರುವಾರ, ಮಾರ್ಚ್ 22, 2012

ಬೇವಿನ ಕಹಿ ಬಾಳಿನಲ್ಲಿ.... ಹೂವಿನ ನಸುಗಂಪು ಸೂಸಿ

ನಾವು ಚಿಕ್ಕವರಿದ್ದಾಗ.. ‘ಯುಗಾದಿಲಿ ಮಾತ್ರ ಎಂತಕ್ಕೆ ಬೇವು-ಬೆಲ್ಲಾ?’ ಎಂದು ಅಮ್ಮನನ್ನು ಕೇಳಿದಾಗ... "ಬದುಕೆಂದ್ರೆ ಸಿಹಿ ಒಂದೇ ಅಲ್ಲಾ.. ಕಹಿನೂ ಜೊತೆಗೇ ಇರುತ್ತದೆ... ಎರಡನ್ನೂ ಸಮಾನವಾಗಿ ಸ್ವೀಕರಿಸುವೆ ಎಂದು ಪ್ರತಿ ವರ್ಷ ಮನಸೊಳಗೇ ದೃಢ ಸಂಕಲ್ಪ ಮಾಡ್ಕೊಳೋಕೇ ತಿನ್ನೋದು.." ಅಂದಿದ್ಲು... ಈಗ್ಲೂ ಹೇಳ್ತಾ ಇರ್ತಾಳೆ. ಮನೋಸಂಕಲ್ಪ ಒಂದಿದ್ದ್ರೆ ಎಲ್ಲವೂ ಸಾಧ್ಯ ಅಂತಾನೆ ಗೀತೆಯ ಕೃಷ್ಣ.

ಆವಾಗೆಲ್ಲಾ ಅಮ್ಮನ ಮಾತಿನ ಒಳಾರ್ಥ ಅಷ್ಟು ಅರ್ಥ ಆಗ್ತಿರ್ಲಿಲ್ಲ.. ಇಲ್ಲಾ ಅರ್ಥ ಮಾಡ್ಕೊಂಡು ಹೋಗೋವಷ್ಟು ವಯಸ್ಸು ಆಗಿರ್ಲಿಲ್ಲ :). ಹಾಗಾಗಿ ಸಿಹಿ ಸ್ವಲ್ಪ ಜಾಸ್ತಿ ತಿಂದು, ಕಹಿ ಚೂರೇ ಚೂರು ತಿಂತಿದ್ದೆ. ಬೆಲ್ಲ ಜಾಸ್ತಿ ತಿಂದು ಬೇವು ಕಡ್ಮೆ ತಿಂದ್ರೆ ನೋವು, ಕಷ್ಟ ಆ ವರ್ಷ ಕಡ್ಮೆ ಸಿಗೊತ್ತೆ... ನಲಿವೇ ಜಾಸ್ತಿ ಆಗೊತ್ತೆ ಅನ್ನೋ ನನ್ನದೇ ತರ್ಕದಲ್ಲಿ ನಾನೇ ಸುಖಿಸುತ್ತಾ...:) 

ಈಗ ಗೊತ್ತಾಗಿದೆ... ಬೇವು-ಬೆಲ್ಲಾ ತಿನ್ಲಿ ಬಿಡ್ಲಿ.. ವರ್ಷದ ಪಂಚಾಂಗದ ಭವಿಷ್ಯದಲ್ಲೇ ಎನೇ ಬರ್ದಿರ್ಲಿ.. ನಮಗಾಗಿ ಏನು ಇದೆಯೋ... ಕಾದಿದೆಯೋ ಅದನ್ನು ತಪ್ಪಿಸಲು ಸಾಧ್ಯವೇ ಇಲ್ಲಾ! ಹಾಗಾಗಿ ಅಪ್ಪನಿಂದ, ಅಮ್ಮನಿಂದ, ಗುರುವಿನಿಂದ ಕಲಿತದ್ದನ್ನೆಲ್ಲಾ ಸೇರಿಸಿ, ಮಂಥಿಸಿ, ನಾನೇ ಒಂದು ಹೊಸ ಅರ್ಥವನ್ನು, ಹೊಳಹನ್ನು ಕೊಟ್ಟಿರುವೆ "ಯುಗಾದಿಗೆ". .-
ನಮ್ಮೊಳಗಿನ ಸಾತ್ವಿಕ ಭಾವನೆಯನ್ನು ಉದ್ದೀಪನಗೊಳಿಸಲು ಸಾತ್ವಿಕ ಆಹಾರಗಳು ಬಹು ಮುಖ್ಯ ಪಾತ್ರವಹಿಸುತ್ತವೆ.... ಹಾಗಾಗಿ ಸಿಹಿ=ಬೆಲ್ಲವನ್ನು ತಿನ್ನಬೇಕು. ದೇಹದೊಳಗಿನ ಕಲ್ಮಶತೆಯನ್ನು ಹೊರಹಾಗಿ ಆರೋಗ್ಯ ವೃದ್ಧಿಸಲು ಆಯುರ್ವೇದಿ ಗುಣವುಳ್ಳ ಕಹಿ=ಬೇವು ಅತ್ಯುತ್ತಮ ಔಷಧೀಯ ಸಸ್ಯ. ಇವೆರಡನ್ನೂ ಸಮ ಪ್ರಮಾಣದಲ್ಲಿ ಸ್ವೀಕರಿಸಿದರೆ ಮನಸೂ ಶಾಂತ, ದೇಹವೂ ಸುದೃಢ. 
ಹಾಗಾಗಿ ಬೇವು-ಬೆಲ್ಲವನ್ನು ಸಮನಾಗಿ ಸ್ವೀಕರಿಸಿ ಯುಗಾದಿಯನ್ನು ಸಂತೋಷದಿಂದ ಆಚರಿಸಿ.

ವರುಷಕೊಂದು ಹೊಸತು ಜನ್ಮ 
ಹರುಷಕೊಂದು ಹೊಸತು ನೆಲೆಯು 
ಅಖಿಲ ಜೀವಜಾಲಕೆ
ಒಂದೆ ಒಂದು ಜನ್ಮದಲಿ 
ಒಂದೆ ಬಾಲ್ಯ ಒಂದೆ ಹರೆಯ  
ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ 
ಎದ್ದ ಸಲ ನವೀನ ಜನನ 
ನಮಗೆ ಏಕೆ ಬಾರದೋ


ಎಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು :)

-ತೇಜಸ್ವಿನಿ ಹೆಗಡೆ.

ಮಂಗಳವಾರ, ಫೆಬ್ರವರಿ 21, 2012

ಸುಖಿಯಾಗಿರಲೊಂದೇ ಸೂತ್ರ!?

ನೋಟ ಚಾಚುವಷ್ಟೂ ಚಾಚಿ,
ಇದ್ದ ಬಿದ್ದ ದೃಶ್ಯಗಳನ್ನೆಲ್ಲಾ ಸೆರೆ ಹಿಡಿದರೂ,
ತನಗೆ ಬೇಕಾದ್ದನ್ನಷ್ಟೇ ಮನಸೊಳಗೆ
ಪ್ರಿಂಟ್ ಹಾಕುವ ಈ ಕಣ್ಗೋಲಿಗಳಂತೇ ಈ
ಬದುಕೂ ಜಾಣ್ಮೆಯನ್ನು  ಕಲಿತಿದ್ದರೆ......
ಸುಖಿಯಾಗಿರುತ್ತಿದ್ದೆನೇನೋ!

ತನಗೆಸೆದ ಎಲ್ಲಾ ಕಸ ಗುಡ್ಡೆಗಳ
ಒಂದಿನಿತೂ ಬೇಸರಿಸದೇ ಕ್ಷಣ ಒಳಗೆಳೆದುಕೊಂಡು,
ಅಲೆಗಳ ತಲೆಯ ಮೇಲೇರಿಸಿಕೊಂಡು ಬಂದು,
ಎಲ್ಲವನೂ ಮತ್ತೆ ದಡಕೆಸೆದು, ಮರಳ ಕೊಡಗುವ ಆ
ಸಾಗರನಂತೆ ನಾನಿರುವಂತಾಗಿದ್ದರೆ....
ಸುಖಿಯಾಗಿರುತ್ತಿದ್ದೆನೇನೋ!

ಗೆಳತಿ ಮುರಿದ ಕಡ್ಡಿ, ಗೆಳೆಯ ಎಳೆದ ಜಡೆ
ಎಲ್ಲವನೂ ಮರೆತು, ಮತ್ತೆ ಬೆರೆತು
ನಗುವಿನಾಚೆಯ ನೋವ ಅನುಭವವ
ಅರಿಯಲಾಗದ ಬಾಲ್ಯದ ಎಳೆತನವ ನಾನೂ-
ಒಳಗೆಳೆದುಕೊಳ್ಳುವಂತಿದ್ದರೆ....
ಸುಖಿಯಾಗಿರುತ್ತಿದ್ದೆನೇನೋ!

-ತೇಜಸ್ವಿನಿ ಹೆಗಡೆ.

ಬುಧವಾರ, ಫೆಬ್ರವರಿ 8, 2012

ಇದ್ದಲ್ಲೇ ಇಡು ದೇವ್ರೆ....

ರಿಯೊಳ್ಗೆ ಒಲೆ ಹತ್ರ ಕುಂತ್ಕಂಡು ಅಮ್ಮ ಹಾಕಿದ್ದ ಬಿಶಿ ದೋಸೆಗೆ ಅದ್ಕಂಡು ತಿಂಬಲೆ ನಾಲ್ಕು ಚಮ್ಚ ಬೆಲ್ಲಕ್ಕೆ ಒಂದು ದೊಡ್ಡ್ ಚಮ್ಚ ಆಕಳ ತುಪ್ಪ ಹಾಯ್ಕಂಡು, ಅದನ್ನೇಯಾ ಗಿರಗಿರನೆ ತಿರ್ಗ್ಸಿ ಪಾಯ್ಸ ಮಾಡ್ತಿದ್ದಿದ್ರ ತಲೆಯೊಳ್ಗೆಲ್ಲಾ ಕಲ್ಲೆದೇ ಯೋಚ್ನೆ ಗಿರ್ಕಿ ಹೊಡೀತಾಯಿತ್ತು. ‘ಈ ಕಲ್ಲೆ ಎಂತಕ್ಕೆ ಇನ್ನೂ ಬಂಜಿಲ್ಯನಪ...!? ಇಷ್ಟೊತ್ತಿಗಾಗ್ಲೇ ಯನ್ನ ದೋಸೆ ಪಾಲು ಕೇಳಲೆ ಹಾಜರಾಗಕಾಗಿತ್ತು...ಇನ್ನೂ ಪತ್ತೆಯಿಲ್ಲೆ ಅಂದ್ರೆ ಎಂತೋ ಪರಾಮಶಿ ಆಗಿರವಪ್ಪ...’ ಹೀಂಗೆಲ್ಲಾ ಯೋಚ್ನೆಲಿ ಬಿದ್ದಿದ್ದಕ್ಕೆ ತಾನು ಬರೀ ಬೆಲ್ಲ ತುಪ್ಪನೇ ನೆಕ್ತಾಯಿದ್ದಿ ಹೇಳಿ ಗೊತ್ತೇ ಆಜಿಲ್ಲೆ. ಆದ್ರೆ ಅಲ್ಲೇ ಒಲೆ ಪಕ್ಕ ಕುತ್ಕಂಡು ದೋಸೆ ಎರ್ದು ಹಾಕ್ತಿದ್ದ ಅದ್ರಮ್ಮ ಶಾರದೆಗೆ ಕಂಡ್ಬುಡ್ಚು. "ಕೂಸೆ.. ಅನಘ... ಅದೆಲ್ಲಿದ್ದೇ ನಿನ್ತಲೆ? ಯೆಂತ ಮಳ್ವೇಶನೇ ಇದು? ಇದ್ಯಾವ್ರೀತಿ ತಿನ್ನಾಣ್ವೋ ಎಂತೋ! ಬಿಶಿ ದೋಸೆನೇ ಬೇಕು ಹೇಳಿ ಯನ್ನ ಜೀವ ತಿಂತೆ... ಈಗ ನೋಡಿರೆ ಹೀಂಗೆ! ಏಳ್ವರ್ಷದ ಕೋಣಾದ್ರೂ ಬುದ್ಧಿ ಮಾತ್ರ ಎರಡ್ರದ್ದೇ ಸೈ..." ಹೇಳಿ ಗದ್ರಿದ್ದೇ ತಡ ಬಿರ್‌ಬಿರ್ನೆ ದೋಸೆ ಮುರ್ಕಂಡು ಬಾಯಿಗೆ ಹಾಕ್ತೋ ಇಲ್ಯೋ... ಹೆಬ್ಬಾಗ್ಲಲ್ಲಿ ಕಲ್ಲೆ ದನಿ ಕೇಳಿಶ್ಚು.

ಜಗ್ಲೀಲಿ ಕುತ್ಕಂಡು ಕವ್ಳದ್ ಸಂಚಿ ಸೊಂಯಿಸ್ತಿದ್ದ ಅಜ್ಜಮ್ಮನ್ನ "ಆಯಮ್ಮಾ ಅಂದಿ.." ಎಂದು ಮಾತಾಡಿಸ್ತಾನೇ ಪ್ರಧಾನ್‌ಬಾಗ್ಲು ದಾಟಿ ಒಳ ಜಗ್ಲಿಗೆ ಜಿಗೀತಾ ಹೋತು ಕಲ್ಲೆ. "ಅನು... ಒಳಗಿದ್ಯನೇ...? ಆಸರಿ ಕುಡ್ದಾತಾ...?" ಕೇಳ್ತಾ ಅಡ್ಗೆ ಮನೆ ಕಡೆ ಹೋದ ಕೂಸ್ನ ಕಂಡು ಶಾರದೆ ಅತ್ತೆ ಸೀತಮ್ಮಂಗೆ ಕಿರಿಕ್ ಆತು. "ಶುದ್ಧ ಆಶೆಬುರ್ಕ್ ಕೂಸು... ಸಮಾ ಟೇಮಿಗೆ ಬದ್ವುಡ್ತು ದೋಸೆ ಮುಕ್ಕಲೆ... ನಮ್ಮನೆ ಕೂಸಿಗೂ ತಲೆ ಇಲ್ಲೆ.. ಲಗೂನೆ ತಿಂದ್ಕಂಡು ಹೊರ್ಗೆ ಇರ್ದೇ ಅದ್ನೂ ಕೂರ್ಸಿ ತಿನ್ಸಿ ಸಂಭ್ರಮ ಮಾಡ್ತು..." ಹೇಳಿ ವಟಗುಡದೇನೂ ಅಡ್ಗೆ ಮನೇಲಿ ದೋಸೆ ಮುಕ್ತಿದ್ದ ಕಲ್ಲೆ ಕಿವಿಗೆ ಬೀಳು ಹಾಂಗಿತ್ತಿಲ್ಲೆ... ಬಿದ್ರೂವಾ ಅದ್ಕೆ ಎಂತೂ ಅನಿಸ್ತಾನೂ ಇತ್ತಿಲ್ಲೆ. ಅನಘೆಗಿಂತ ಎರಡೇ ವರ್ಷ ದೊಡ್ಡಕಿದ್ದ ಕಲ್ಲೆ ಮನೇಲಿ ತುಂಬ್ಕ ಇದ್ದಿದ್ದು ಬರೀ ಬಡತನ. ಅದ್ರ ಅಪ್ಪಯ್ಯ ಶ್ರೀನಿವಾಸ ಭಟ್ಟ ಶುದ್ಧ ಸೋಂಬೇರಿ. ಹೆಸ್ರಿಗ್‌ಪೂರ್ತೆ ಪುರೋಹಿತ ಭಟ್ಟ.... ಹೊರ್ಗೆ ಬಿದ್ದು ದುಡ್ಯದು ಅಂದ್ರೆ ನೂರಾಯೆಂಟು ನೆಪ. ಇಂಥದ್ರಲ್ಲಿ ಅವ್ನ ಹೆಂಡ್ತಿ ಲಕ್ಷ್ಮೀನೇ ಅವ್ರಿವ್ರ ಮೆನೇಲಿ ಕಸ-ಮುಸ್ರೆ, ಹಿಟ್ಟು-ಹುಡಿ ಮಾಡ್ಕಂಡು ಹೇಂಗೋ ಗಂಡಂದು, ಮೂರ್ಮಕ್ಕಳಿಂದು ಹೊಟ್ಟೆ ಹೊರೀತಿತ್ತು. 

ಸಣ್ಣಿರ್ಬೇಕಿಂದ್ರೂವಾ ಅನಘ, ಕಲಾವತಿ ಕಡ್ಡಿ ದೋಸ್ತ್ರು. ಕಡ್ಡಿ ಅಂದ್ರೆ ಬಳಪದ ಕಡ್ಡಿ... ಶಾಲೆ ಅಂದ್ರೆ ಎಂತು ಹೇಳೇ ಗೊತ್ತಿಲ್ದೇ ಇಪ್ಪು ಕಲ್ಲೆಗೆ ಬಿಳೀ ಬಣ್ಣದ ಬಳಪದ ಕಡ್ಡಿ ಅಂದ್ರೆ ರಾಶಿ ಪ್ರೀತಿ. ಅದ್ಕೆ ಅಕ್ಷರ ಕಲ್ಸಿದ್ದೇ ಅನಘೆ. ತನ್ನ ಹತ್ರಿದ್ದ ಬಳಪನೆಲ್ಲಾ ಚೂರು ಮಾಡಿ ಅದ್ಕೂ ಕೊಡ್ತಿತ್ತು. ಇದ್ರಿಂದಾಗಿ ಮನೇಲಿ ಎಷ್ಟೋ ಸಲ ಬೈಸ್ಕಂಡಿದ್ದೂ ಇದ್ದು...."ನೀ ಎಂತ ಬಳ್ಪನೇ ತಿಂತ್ಯನೇ ಕೂಸೆ... ಬರ್ಯದು ನಾಲ್ಕು ಅಕ್ಷರನೂ ಇಲ್ಲೆ.. ಕಡ್ಡಿ ಮಾತ್ರ ಎರ್ಡು ದಿನಕ್ಕೇ ನಾಪತ್ತೆ..." ಹೇಳಿ ಅಪ್ಪಯ್ಯ ಅದೆಷ್ಟು ಸಲ ಗದ್ರಿಸಿದ್ನೋ ಅದ್ಕೇ ಗೊತ್ತಿಲ್ಲೆ. ಮನೇಲಿ ಸಿಗ್ತಾಯಿದ್ದ ಗಂಜಿ ಬೇಜಾರು ಬಂದ್ ಕೂಡ್ಲೇ ಶಾರದೆ ಹಿಂದೆ ಮುಂದೆ ಸುತ್ತದು. ಪಾಪದ್ ಕೂಸ್ನ ಕಷ್ಟ ಗೊತ್ತಿಪ್ಪು ಶಾರದೆ ಅದ್ರ ತಂಗ್ಯಕ್ಕಗೂ ಸೇರ್ಸಿ ಸ್ವಲ್ಪ ಜಾಸ್ತಿನೇ ತಿಂಡಿ ಕಟ್ಟಿ ಕೊಡ್ತಿತ್ತು. 

ಇವತ್ತೆಂತಕ್ಕೋ ಕಲ್ಲೆ ಮನ್ಸು ಎಲ್ಲೋ ಇದ್ದಾಂಗೆ ಇತ್ತು... ದೋಸೆ ತಿಂತಾ ಇದ್ರೂ ಎಂತೋ ಯೋಚ್ನೆಲಿ ಬಿದ್ದಾಂಗೆ ಇದ್ದ ಕೂಸ್ನ ಕಂಡು ಶಾರದೆ ಕೇಳ್ಚು.."ಎಂತಾ ಆತೆ ತಂಗಿ? ಮನೇಲಿ ಎಲ್ಲಾ ಆರಮಾ? ಸಮಾ ತಿಂತಾ ಇಲ್ಲೆ ಇಂದು..." ಹೇಳಿ ಕೇಳಿದ್ದೇ ತಡ, ಇದ್ಕೇ ಕಾಯ್ತಾ ಇದ್ದಾಂಗೆ... ತಾನು ಬರ್ಬೇಕಿದ್ರೆ ಕೇಳ್ದ ಹೊಸ ವಿಷ್ಯವನ್ನ ಹೊರ್ಗೆ ಹಾಕಲೆ ಶುರು ಮಾಡ್ಚು ಕಲ್ಲೆ.

"ಶಾರ್ದತ್ತೆ... ಆನು ಬರ್ತಿರ್ಬೇಕಿರೆ... ನಿಮ್ಮನೇ ತೋಟ್ದ ಕೆಳ್ಗೆ ಮೂಲೆ ಮನೆ ಶಂಕ್ರಣ್ಣ, ಯನ್ನಪ್ಪಯ್ಯ, ಆಚೆಕೇರಿ ಗಣಪಣ್ಣ, ಶಾನಭೋಗ್ರು, ಸುಬ್ಬುಮಾಮ ಎಲ್ಲಾ ನಿತ್ಕಂಡು ಅದ್ಯಾವ್ದೋ ಪ್ಯಾಟೆಯಿಂದ ಬಂದ ದೊಡ್ಡ ಜನ್ರ ಸಂತಿಗೆ ಗಟ್ಟಿಯಾಗಿ ಮಾತಾಡ್ತಾ ಇದ್ದಿದ್ವಪ್ಪಾ... ಎಲ್ರೂ ಒಂಥರಾ ಇದ್ದಿದ್ದೊ... ನಂಗೆಂತೂ ಸಮಾ ಗೊತ್ತಾಜಿಲ್ಲೆ... ನೀನು ಸುಬ್ಬು ಮಾಮನ್ನ ಕೇಳು.. ಈಗ ಒಳ್ಗೆ ಬಕ್ಕು ಅಂವ.." ಹೇಳಿ ಮುಗ್ಸಿದ್ದೋ ಇಲ್ಯೋ ಶಾರದೆ ಗಂಡ ಸುಬ್ಬರಾಯ ಹೆಗಡೆ ಒಳ್ಗೆ ಬಂದ. ಒಳ್ಗೆ ಬಂದವ್ನೇ ಸುಸ್ತು ಹೊಡ್ದು ಅಲ್ಲೇ ಮಣೆ ಹಾಕ್ಕಂಡು ಕೂತ್ಕಂಡ ರೀತಿ, ಗಾಬ್ರಿ ಬಿದ್ದ್ ಮುಖ.. ಎಲ್ಲಾ ನೋಡಿ ರಾಶಿ ಹೆದ್ರಿಕೆ ಆತು ಅದ್ಕೆ. ಹಾಂಗೆ ನೋಡಿರೆ ಸುಬ್ಬಣ್ಣ ಮೊದ್ಲಿಂದ್ಲೂ ಸ್ವಲ್ಪ ಪುಕ್ಲೇಯಾ. ಊರಲ್ಲೆಂತಾ ಸಣ್ಣ ಪುಟ್ಟ ಗದ್ಲ ಆದ್ರೂ ಒಂದೆರ್ಡು ದಿನ ಮನೆಯಿಂದ ಹೊರ್ಗೇ ಬೀಳಂವಲ್ಲ. ಶಾರದೆನೇ ಎಷ್ಟೋ ಗಟ್ಟಿಗಿತ್ತಿ. ಆದ್ರೆ ಇವತ್ತೆಂತಕ್ಕೋ ಯಜಮಾನ್ರು ಜಾಸ್ತಿನೇ ಭಯ ಬಿದ್ದಾಂಗೆ ಕಂಡು, ಕಣ್ಸನ್ನೆ ಮಾಡು ಗಂಡನ್ನ ಹಿತ್ಲಿಗೆ ಕರತ್ತು. ಸೊಕಾಶಿ ಹಿತ್ಲಕಡೆ ಬಂದವ್ನೇ ಅಲ್ಲೇ ಇದ್ದ ಬಟ್ಟೆ ಒಗ್ಯ ಕಲ್ಮೇಲೆ ಕುಂತ್ಕಂಡು ವಿಷ್ಯಾನೆಲ್ಲಾ ಸಮಾ ಹೇಳಿದ್ದೇ ತಡಾ ಶಾರದೆ ಎದೆನೂ ಜೋರಾಗಿ ಹೊಡ್ಕಳಲೆ ಶುರುವಾತು.

-೨-

ಶಿರ್ಸಿ ತಾಲೂಕಿನ ಆಸ್ಪಾಸಿಪ್ಪು ಹತ್ತು ಹಳ್ಳಿ ಸುತ್ತ ತಣ್ಣಗೆ ಹರಿಯೋ ಅಘನಾಶಿನೀ ನದಿಗೆ ಅಣೆಕಟ್ಟು ಹಾಕವು ಹೇಳಿ ಸರ್ಕಾರದವು ಪರಾಮರ್ಶಿ ನಡಿಸ್ತಾಯಿದ್ದೊ..... ಇಷ್ಟಲ್ದೇ ನದಿಗೆ ಒಡ್ಡನ್ನ ಯಮ್ಮನೆ ಹತ್ರನೇ ಎಲ್ಲೋ ಹಾಕ್ತ್ವಡ ....ಇದ್ರಿಂದೆಲ್ಲಾ ಯಂಗಕಿಗೇ ಭಯಂಕರ ತೊಂದ್ರೆ ಅಪ್ಪುದಿದ್ದು ಎಂದೆಲ್ಲಾ ಹೇಳಿ ತಲೆ ಮೇಲೆ ಕೈಹೊತ್ಕಂಡು ಕೂತ್ಕಂಡ ಮಗನ ಮಾತೆಲ್ಲಾ ಕೇಳಿ ಮುದಿ ಅಜ್ಜಮ್ಮಂಗೆ ವಿಪರೀತ ಸಂಕ್ಟ ಆಗೋತು. ಕಣ್ಣೀರು ಹರಿಸ್ತಾ ಕವ್ಳ ತುಪ್ಪಲೆ ಕಡವಾರದ ಕಡೆ ಹೋದ್ರೆ ಗಡದ್ದಾಗಿ ಆಸ್ರಿ ಹೊಡ್ದು, ಕಲ್ಲೆ ಸಂತಿಗೆ ಸುತ್ತಲೆ ಹೋಗವು ಹೇಳಿ ಜಗ್ಲಿಗೆ ಬಂದ ಅನಘೆಗೆ ಅಪ್ಪನ ಮಾತು ಕೇಳಿ ಶಿರಾತಿಂದಷ್ಟು ಖುಶಿ ಆತು.

"ಅಪ್ಪಯ್ಯ.. ದೊಡ್ಡೊಳೆಗೆ ಒಡ್ಡು ಹಾಕ್ತ್ವಡಾ?! ಹಾಂಗಾದ್ರೆ ದೊಡ್ಡೊಳೆ ನಮ್ಮನೆ ಮೆಟ್ಲ ಮುಂದೇ ಹರೀತಾ? ದಣಪೆ ಆಚೆ ಇಪ್ಪು ದಪ್ಪ ಮೆಟ್ಲು ಇದ್ದಲೋ ಅದ್ರ ಹತ್ರಾನೋ ಇಲ್ಲಾ ಕೆಳ್ಗೆ ಇಪ್ಪು ತೋಟದ ಹತ್ರಾನೋ? ಅಯ್ಯಬ್ಬಾ.. ಮಸ್ತಾಗ್ತು ಅಲ್ದಾನೆ ಕಲ್ಲೆ ದಿನಾ ನೀರಾಡಲೆ.." ಎಂದೆಲ್ಲಾ ಹೇಳ್ತಾ ಸಂಭ್ರಮ ಮಾಡ್ತಿದ್ದ ಕೂಸಿನ್ ಬೆನ್ನಿಗೊಂದು ಗುದ್ದು ಬಿತ್ತು ಅಮ್ಮನಿಂದ. "ಇಲ್ಲಿ ಊರು ಹೊತ್ಕಂಡ್ ಉರೀತಿದ್ರೂ ಇದ್ಕಿನ್ನೂ ಬೆಂಕಿದೇ ಚಿಂತೆ...... ಹೆಡ್ಡ್ ಕೂಸೆ... ಅಘನಾಶಿನಿ ಇಲ್ಲಿಗೆ ಬಂದ್ರೆ ನಾವೆಲ್ಲಾ ಮುಳ್ಗದೇಯಾ.... ತೋಟ ಗದ್ದೆ ಎಲ್ಲಾ ಹೋದ್ಮೆಲೆ ಬರೀ ನೀರು ಕುಡ್ಕ ಬದ್ಕಕಾಗ್ತು ತಿಳ್ಕ... ಹೊಟ್ಟೆಗೆ ಸರಿ ಬೀಳ್ದೆ ಹೋದಾಗ ನಿನ್ನ ನೀರಿನ ಭೂತನೂ ಬಿಡ್ತೇನೋ..." ಹೇಳ್ತಾ ಅಳಲೆ ಶುರು ಮಾಡ್ಕಂಡ ಅಮ್ಮನ ಹೊಸ ಅವತಾರ ನೋಡಿ ಅನಘೆಗೆ ವಿಚಿತ್ರ ಅನಿಸ್ತು. ದೋಸ್ತಿ ಮುಂದೆನೇ ಅಮ್ಮ ಹೀಂಗೆಲ್ಲಾ ಬೈದು ಹೊಡ್ದಿದ್ದಕ್ಕೆ ಸುಮಾರಾಗಿ, ಅಳು ಬಂದ್‌ಹಾಂಗೆ ಆದ್ರೂ ಗೊತ್ತಗಿರೋ ದೊಡ್ಡ ಸುದ್ದಿನ ಬಾಕಿ ಗೆಳ್ತೀರಿಗೆಲ್ಲಾ ಹೇಳು ಉತ್ಸಾಹ ತುಂಬ್ಕಂಡು ಕಲ್ಲೆ ಸಂತಿಗೆ ಹೊರ್ಗೆ ಓಡೋತು.

ಮಗಳ ಮುಗ್ಧತೆ, ತುಂಟಾಟ ಗೊತ್ತಿದ್ರೂ ಆ ಕ್ಷಣಕ್ಕೆ ಭವಿಷ್ಯದ ಚಿಂತೆ ಹೆಚ್ಚಾಗಿತ್ತು ಶಾರದೆಗೆ. ಅದ್ರಲ್ಲೂ ಗಂಡನ ಮೆದು ಸ್ವಭಾವ ಗೊತ್ತಿದ್ದಿದ್ರಿಂದ ಅದ್ಕೆ ಮತ್ತೂ ಭಯವಾಗ್ತಾ ಇತ್ತು. "ಎಲ್ಲಾ ನಮ್ಮ್ ಕರ್ಮ... ಸುಖ ಅನುಭವ್ಸಲೂ ಪಡ್ಕ ಬರವು... ಹೋಯ್...ನೀವೊಂಚೂರು ಪ್ಯಾಟಿಗ್‌ಹೋಗಿ ತಹಶೀಲ್ದಾರ್ರನ್ನ ಮತ್ತೆ ವಿಚಾರ್ಸಿಯಲ್ಲಾ.. ಹೀಂಗೇ ಕುಂತ್ರೆ ಎಂತೂ ಅಪ್ಪದಲ್ಲಾ ಹೋಪದಲ್ಲಾ... ಶಂಕ್ರಣ್ಣ, ಶಾನುಭೋಗ್ರು ಎಲ್ಲಾ ಇದ್ವಲಿ.. ನೀವೂ ಏನಾದ್ರೂ ಮಾಡುಲಾಗ್ತಾ ನೋಡಿ..." ಎಂದದ್ದೇ ಅಲ್ಲಿಂದೆದ್ದು ಕೊಟ್ಗೆ ಕಡೆ ಹೋತು. ಮೊದ್ಲಿಂದ್ಲೂ ಅಷ್ಟೇ ದುಃಖ ಜಾಸ್ತಿ ಆದ್ರೆ ಅದು ಹೋಪದು ತನ್ನ ಪ್ರೀತಿ ಆಕಳು ಗೌರಿ ಇದ್ದಲ್ಲೇಯಾ. ಸೀತಮ್ಮನೂ ಸಂಕ್ಟದಿಂದ ವಿಪರೀತ ಸುಸ್ತಾದಂಗೆ ಅನ್ಸಿ, ತನ್ನ ಹಾಸ್ಗೆ ಹತ್ರ ಹೋಗಿ ಹಾಂಗೇ ಬಿದ್ಕಂಡ್ತು. "ಅವು ಕಷ್ಟದಲ್ಲಿ ಬೆವ್ರು ಸುರ್ಸಿ, ಮೈ ಬಗ್ಸಿ ಗುಡ್ಡ ಕಡ್ದು ಮಾಡಿದ್ ತೋಟ, ಗದ್ದೆ... ಎಷ್ಟು ತ್ರಾಸು ತಗಂಡು ಮೇಲೆ ತಂದ ಆಸ್ತಿ.. ಅವೇನೋ ಪರಲೋಕ ಸೇರಿ ಪಾರಾದೋ.. ಯನ್ನೆಂತಕ್ಕೆ ದೇವ್ರು ಇದ್ನೆಲ್ಲಾ ನೋಡಲೆ ಇನ್ನೂ ಇಟ್ಟಿದ್ನೋ... ಭಗವಂತ ಮುಳ್ಗದನ್ನ ನೋಡೋ ಮೊದ್ಲೇ ಯನ್ನೂ ತಗಂಡು ಹೋಗಪ್ಪ..’ ಕಣ್ಣೀರ್‌ಹಾಕ್ತಾ... ಮನ್ಸೊಳ್ಗೇ ಬೇಡ್ಕತ್ತಾ ಮಗ್ಲಾತು ಸೀತಮ್ಮ.

-೩-

ಎಲ್ನೋಡಿರಲ್ಲಿ ಫಳಫಳ ಹೊಳೀತಿದ್ದ ನೀರಿನ್ ರಾಶಿ. ಇಚೆ ಬದಿಯವ್ಕೆ ಆಚೆ ಬದಿಯವು ಕಾಣ್ದೇ ಹೋಪಷ್ಟು ಅಗಲ.... ತನ್ಮುಂದಿಪ್ಪ ನೀರನ್ನೇ ಕಣ್ತುಂಬ್ಕತ್ತಾ ಅನಘೆ ಕಲ್ಲೆ ಹತ್ರ ಅಂತು.. "ಹೇ ಕಲ್ಲೆ.. ನಿನ್ಗೆ ಗೊತ್ತಿದ್ದಾ... ಅಜ್ಜ-ಆಯಮ್ಮ ಯನ್ನ ಇದೇ ಹೋಳಿಗೆ ಸಣ್ಣಿರ್ಬೇಕಿದ್ರೆ ಕರ್ಕಕಂಡ್ಬಂದು ನೀರಾಡಿಸ್ತಿದ್ದೋ... ಎಷ್ಟು ಖುಶಿ ಆಗ್ತಿದ್ದು ಅಂಬೆ... ಹೋದ್ವರ್ಷ ಯಂಗ್ಳ ಸ್ಕೂಲ್ನವು ಗೋಕರ್ಣಕ್ಕೆ ಪ್ರವಾಸ ಹಾಕಿಯಿದ್ವಲೇ.... ಅಲ್ಲಿಪ್ಪು ಸಮುದ್ರನೂ ಇಷ್ಟೇ ದೊಡ್ಡಕಿತ್ತು ಗೊತ್ತಿದ್ದಾ? ಇದ್ರಲ್ಲಿ ತೆರೆ ಒಂದ್ ಕಮ್ಮಿ ನೋಡು.. ನಮ್ ಅಘನಾಶಿನಿ ಸಮುದ್ರಕ್ಕೆ ಸಮ ಅಲ್ದಾ?" ಇದ್ನ ಕೇಳಿದ್ ಕಲ್ಲೆ ಮುಖ ಅರಳ್ಚು. "ಹೌದನೇ.. ಸಮುದ್ರನೂ ಹೀಂಗೇ ಇರ್ತಾ? ದೊಡ್ಡ್ ದೊಡ್ಡ್ ತೆರೆ ಬತ್ತಡ ಅಲ್ದಾ? ಅಪ್ಪಯ್ಯಂಗೆ ಹೇಳಿ ಸಾಕಾತು.. ಒಂದ್ಸಲನೂ ಕರ್ಕ ಹೋಗದಿಲ್ಲೆ... ಆಯಿಗಂತೂ ಪುರ್ಸೊತ್ತೆ ಇರ್ತಿಲ್ಲೆ.. ನಾ ಯಾವಾಗೇನ ಸಮುದ್ರ ನೋಡದು.. ಆ ತೆರೇಲಿ ಆಡದು.." ಬೇಜಾರ್‌ಬಿಟ್ಕಂಡ ಕಲ್ಲೆ ಸಣ್ಣ್ ಮುಖ ನೋಡಿ ಪಾಪ ಅನಿಶ್ಚು ಅನಘೆಗೆ. "ಹೋಗ್ಲೇ ಬಿಡೆ... ಅದ್ಯಾವ ಮಾಹಾ ಕಾರ್ಯ.. ನಾನೇ ನಿನ್ನ ಕರ್ಕ ಹೋಗ್ತಿ.. ಹಾಂಗೆ ನೋಡಿರೆ ಈ ನೀರು ಸೀ ಇದ್ದು.. ಅದು ಬರೀ, ಉಪ್ಪುಪ್ಪು ಗೊತ್ತಿದ್ದಾ? ಯಾರಿಗೊತ್ತು... ನಾಳೆ ದಿನ ಅಘನಾಶಿನೀ ನೋಡಲೆ ಸಮುದ್ರನೇ ಇಲ್ಲಿಗ್ಬಂದ್ರೂ ಬಂತು.." ಎಂದಿದ್ದೇ ತಡ ನಗಿ ತಡ್ಕಂಬ್ಲೇ ಆಜಿಲ್ಲೆ ಕಲ್ಲೆಗೆ. ಗೆಳ್ತೀರಿಬ್ರೂ ಮನ್ಸಿಗೆ ಖುಶಿ ಆಪಷ್ಟು ಹೊತ್ತು ನೀರಲ್ಲೆ ಆಡಿ... ಸಾಕಾಗಿ ಅಲ್ಲೇ ಪಕ್ದಲ್ಲಿದ್ದ ಅಮ್ಮನೋರ ಗುಡಿ ಹತ್ರ ಹೋದ್ವಾ, ಗುಡಿಕಟ್ಟೆ ಮೇಲೆ ಕೂತ್ಕಂಡು ಬಿಸ್ಲ್ ಕಾಯಿಸ್ಕತ್ತಿದ್ದ ವೆಂಕಜ್ಜಂಗೆ ಒಂದ್ ಕಂಪನಿ ಸಿಕ್ದಾಂಗಾತು.

"ಎಂತದೇ ಕೂಸ್ಗಳ್ರಾ.. ಎಲ್ಲಿಗೆ ಹೊಂಟಿದ್ದು ಸವಾರಿ. ನೀರಾಡೀ ಸಾಕಾತಾ? ಇಲ್ಲೆಂತಕ್ಬಂದ್ರಿ... ಮನಿಕಡೆ ಹೋಪದ್ನ ಬಿಟ್ಟು... ಉಂಬ ಯೋಚ್ನೆ ಇಲ್ಯನ್ರೇ...?" ವೆಂಕಜ್ಜನ ಮಾತಿಂದ್ಲೇ ಗೊತ್ತಾಗಿದ್ದು ಅವ್ಕೆ ಊಟಕ್ಕೆ ಹೊತ್ತಾತು ಹೇಳಿ... ನೆನ್ಪಾದ್‌ಕೂಡ್ಲೇ ಹೊಟ್ಟೆ ಚುರುಚುರು ಹೇಳಲೆ ಶುರು ಮಾಡ್ಚಾ, ಗುಡಿ ಒಳ್ಗೆ ಶಂಭಟ್ರು ಪ್ರಸಾದಯೇನಾದ್ರೂ ಕೊಡ್ತ್ರಾ ಹೇಳಿ ನೋಡಲೆ ಸೀದಾ ಒಳ್ಗೆ ಓಡ್ಜ. ಕೈಯಲ್ಲೊಂದೊಂದು ಬಾಳೆಹಣ್ಣ ಹಿಡ್ಕಂಡು... ಬಾಯೊಳ್ಗೊಂದು ತುರ್ಕ್ಸಂಡು ತನ್ನ ಪಕ್ಕದಲ್ಲೇ ಕೂತ್ಕಂಡ ಕೂಸ್ಗಳನ್ನೇ ಪ್ರೀತಿಯಿಂದ ನೋಡ್ದ ವೆಂಕಜ್ಜ. ಮಕ್ಕ ಅಂದ್ರೆ ವಿಪರೀತ ಪ್ರೀತಿ ಅವಂಗೆ... ಇವ್ಕಿಬ್ರಿಗೂವಾ ವೆಂಕಜ್ಜ ಹೇಳು ಪಿಶಾಚಿ ಕತೆ, ಎಲ್ಲಾದ್ರೂ ತೆಗ್ಸಿಕೊಡೋ ಲಿಂಬು ಪೆಪ್ಪರ್‌ಮೆಂಟ್ ಅಂದ್ರೆ ರಾಶಿ ಇಷ್ಟ.

"ಎಂತ ಕೇಳ್ಕಂಡ್ರೆ ದೇವಮ್ಮನಲ್ಲಿ..?" ಕೇಳಿದ್ದೇ ತಡ ದೊಡ್ಕಣ್ಣು ಮಾಡಿ, ಇಷ್ಟಗಲಾ ಬಾಯಿ ತೆಗ್ದು ಅನಘೆ ಶುರು ಮಾಡೇವುಡ್ಚು. "ಅಜ್ಜಾ... ದೊಡ್ಡೊಳೆಗೆ ಒಡ್ಡು ಹಾಕ್ತ್ವಡಲೋ.. ಆವಾಗ ನೀರು ನಮ್ಮನೆ ಮುಂದೇ ಬತ್ತಡ ಮಾರಾಯಾ... ಆದ್ರೆ ಯಮ್ಮನೆಯವ್ಕೆ ಸುತಾರಾಂ ಇಷ್ಟ ಇಲ್ಲೆ.. ನಿಲ್ಸವು ಹೇಳಿ ಮಾಡ್ತಾ ಇದ್ದೊ... ಇಷ್ಟ್ ದೂರ ನೀರಾಡಲೆ ಬಪ್ಪ ಬದ್ಲು.. ಮನೆ ಕೆಳ್ಗೇ ನೀರ್ ಬತ್ತಪಾ... ಹಾಂಗಾಗಿ ಅವು ಎಂತ ಬೇಕಿದ್ರೂ ಮಾಡ್ಕಳ್ಲಿ.. ನೀ ಮಾತ್ರ ನೀರನ್ನ ಯಮ್ಮನೆ ಮುಂದೇ ತಗಂಬಾ ಹೇಳಿ ಕೇಳ್ಕಂಡಿ..." ಹೇಳಿ ಅದು ಮಾತು ಮುಗ್ಸಿದ್ದೋ ಇಲ್ಯೋ ಕಲ್ಲೆನೂ ಶುರು ಮಾಡ್ಚು.... "ವೆಂಕಜ್ಜ ಯನ್ನಪ್ಪಯ್ಯಂಗಂತೂ ಮನ್ಸಿದ್ದಪ.... ಜಾಗ ಮುಳ್ಗೀರೆ ನಮ್ಗೆ ದುಡ್ಡು ಕೊಡ್ತ್ವಡ... ಆವತ್ತು ಯಾರ್‌ಹತ್ರಾನೋ ಹೇಳ್ತಾ ಇದ್ದಿಯಿದ್ನಪ.... ಯಂಗಕಿಗೆಲ್ಲಾ ಬೇಷ್ ಆಗ್ತು ಆವಾಗ.. ಅಮ್ಮ ಮಾತ್ರ ಬೇಜಾರು ಮಾಡ್ಕತ್ತನ ನೋಡು..." ಹೇಳ್ತಾ ಮತ್ತೊಂದು ಬಾಳೇ ಹಣ್ಣ ಗುಳುಂ ಮಾಡೇವುಡ್ತು. ಮಕ್ಳ ಮುಗ್ಧತೆ ಕಂಡು ನಗಿ ಬಂದ್ರೂ ಒಳ್ಗೊಳ್ಗೇ ಸಂಕ್ಟಾನೂ ಆತು ವೆಂಕಜ್ಜಂಗೆ.

"ಎಲ್ಲಾ ಸರಿ ಮಕ್ಕಳ್ರಾ.. ನಿಂಗಕಿಗೆ ನೀರೊಂದೇ ಮುಖ್ಯಾನೋ ಇಲ್ಲಾ ಶಾಲೆ, ಓದು, ಆಟದ ಬಯ್ಲು-ಇವೆಲ್ಲಾ ಮುಖ್ಯಾನೋ?" ಅವ್ನ ಮಾತು ಕೇಳಿ ಅವ್ಕಿಬ್ರಿಗೂ ಸ್ವಲ್ಪ ಗೊಂದ್ಲ ಆತು.. ಆದ್ರೆ ಅನಘೆ ಮಾತ್ರ ಬಿಡಲೊಪ್ಪಿದ್ದಿಲ್ಲೆ.."ನಂಗೆ ಎಲ್ಲಾದೂ ಬೇಕು.. ಹಾಂಗೇ ನೀರೂ ಆಡಲೆ ಹತ್ರ ಬೇಕು..." ಎಂದಿದ್ದಕ್ಕೆ ಮತ್ತೆ ವೆಂಕಜ್ಜ.. "ಆತು ತಗ.. ನೀರು ಸಿಗ್ತು ಇಟ್ಗ... ಆದ್ರೆ ದೇವಿಮನೆ ಮಾವಿನ್‍ತೋಪು, ಕಲ್ಲೆ ಮನೆ ಹೂವಿನ್ಗಿಡ, ನಿನ್ನ ಆಯಿ ಕಷ್ಟಪಟ್ಟು ಬೆಳ್ಸಿದ್ ಹಿತ್ಲು, ಕಾಯಿಪಲ್ಲೆ... ನೀ ಲಗೋರಿ ಆಡ್ತ್ಯಲೆ ಆ ಜಡ್ಡಿಗೆದ್ದೆ ಎಲ್ಲಾದೂ ಮುಳ್ಗೋಗ್ತು.. ನೀ ಬರೀ ಮನೆ ಮುಂದೆ ನೀರಾಡ್ಕತ್ತ ಬರೀ ಸಾರನ್ನ ಉಂಡ್ಕತ್ತ ಇರವು.. ತರಕಾರಿ ಬೆಳ್ಯಲೆ ಜಾಗ ಇರ್ತಿಲ್ಲೆ.. ಪ್ಯಾಟೆಗೆ ಹೋಪಲೆ ಮೋಟಾರ್ ಬತ್ತಿಲ್ಲೆ.. ಅಕ್ಕಾ ಹಾಂಗಿದ್ರೆ?" ಎಂದಿದ್ದೇ ತಡ ಇಬ್ರು ಹುಡ್ಗೀರೂ ಗಾಬ್ರಿ ಬಿದ್ದೊ. ‘ಪಾಪ ಅಮ್ಮಾ ಎಷ್ಟು ಖುಶಿಯಿಂದ ಹೂವಿನ್ ತೋಟ ಮಾಡೀದ್ದು.. ಅದ್ರಲ್ಲಾದ ಹೂವಿನ ಮಾಲೆ ಮಾರಿನೇ ಅಲ್ದಾ ಹೋದ್ವರ್ಷದ ತೇರಲ್ಲಿ ಯಂಗಕಿಗೆಲ್ಲಾ ಬಳೆ, ರಿಬ್ಬನ್ನು ತೆಕ್ಕೊಟ್ಟಿದ್ದು.. ಇದೆಲ್ಲಾ ಮುಳ್ಗೋದ್ರೆ ಅದ್ಕೆಷ್ಟು ಬೇಜಾರಾಗಡ... ಬ್ಯಾಡ್ದೇ ಬೇಡ ಈ ನೀರಿನುಸಾಬ್ರಿ.... ಅದಿಲ್ಲೇ ಇದ್ಕಳ್ಲಿ.." ಎಂದು ಮನ್ಸಲ್ಲೇ ಕಲಾವತಿ ಅಂದ್ಕಂಡ್ರೆ.. "ಇಶ್ಯೀ.. ಬರೀ ಸಾರನ್ನ ತಿನ್ನದು ಜ್ವರ ಬಂದವು.. ಯಂಗಂತೂ ಹಶೀ, ಹುಳಿ, ಪಲ್ಯ ಬೇಕಪ್ಪಾ... ಅಮ್ಮ, ಆಯಮ್ಮ ಕೂಡಿ ಹಿತ್ಲಲ್ಲಿ ಎಷ್ಟೆಲ್ಲಾ ತರಕಾರಿ ಹಾಕಿದ್ದೊ.... ಲಗೋರಿ ಆಡ್ದೇ ನಿದ್ದೆ ಬರ್ತಾ ಯಂಗೆ? ಸ್ಕೂಲಿಗೆ ಹೋಗ್ದೇಯಿದ್ರೆ ದನ ಕಾಯವು ಹೆಳ್ತಾ ಇರ್ತ ಅಪ್ಪಯ್ಯ.. ಇಶ್ಯೀ... ಅವೆಲ್ಲಾ ಬೇಡ್ದಪ್ಪಾ ಬೇಡ.. ಅಘನಾಶಿನಿ ಇಲ್ಲೇ ಹರೀತಾ ಇರ್ಲಿ.. ಕಷ್ಟಾ ಅದ್ರೂ ಬಂದು ಹೋದ್ರಾತು..." ಅಂದ್ಕತ್ತಾ ಕಲ್ಲೆ ಮುಖ ನೋಡಿರೆ ಅದೂ ಹಾಂಗೇ ಅಂದ್ಕತ್ತಿದ್ದಾಂಗೆ ಕಂಡ್ಚು. ಇಬ್ರೂ ಗುಸುಗುಸು ಪಿಸಪಿಸ ಮಾತಾಡ್ಕಂಡು ಮತ್ತೆ ಅಮ್ಮನೋರ ಹತ್ರ ಬೇಡ್ಕಂಬ್ಲೆ ಒಳ್ಗೆ ಓಡ್ದೋ. ವೆಂಕಜ್ಜಂಗೆ ಅವ್ರಿಬ್ರ ಭಾವ ಅರ್ಥ್ವಾಗಿ ಸಮಾಧಾನದ ನಿಟ್ಟುಸ್ರು ಬಿಟ್ಟ. ‘ಪುಟ್ಟ ಮಕ್ಳ ಈ ಸಲದ ಹಾರೈಕೆನೇ ನೆರವೇರ್ಲಿ ತಾಯಿ...’ ಹೇಳಿ ಅವ್ನೂ ಅಲ್ಲಿಂದ್ಲೇ ಅಮ್ಮನೋರಿಗೆ ದೊಡ್ಡ ನಮಸ್ಕಾರ ಹಾಕ್ದ.

"ಪ್ರತಿಬಿಂಬ- ೦೧೨" ರ ಹವಿಗಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.


------
ಶಬ್ದಾರ್ಥ:-

ಬಿರ್‌ಬಿರ್ನೆ= ಲಗುಬಗನೆ.
ಕವ್ಳದ್ ಸಂಚಿ = ಎಲೆ ಅಡಿಕೆ, ಸುಣ್ಣ ತುಂಬಿರುವ ಪುಟ್ಟ ಚೀಲ.
ಸೊಂಯಿಸ್ತಿದ್ದ = ಹುಡುಕುತಿದ್ದ.
ಪ್ರಧಾನ್‌ಬಾಗ್ಲು = ಮುಖ್ಯ ದ್ವಾರ.
ಆಯಮ್ಮಾ = ಅಜ್ಜಿ.
ಸೊಕಾಶಿ = ಮೆಲ್ಲನೆ.
ಪರಾಮರ್ಶಿ = ಪರಿಶೀಲನೆ
ಕರ್ಕಂಡು= ಕರೆದುಕೊಂಡು.


*ಕಥೆ ಅರ್ಥೈಸಿಕೊಳ್ಳಲು ಬಹು ಕಷ್ಟವಾಗುತ್ತಿದೆ ಎಂದಾದಲ್ಲಿ.. ಕನ್ನಡಕ್ಕೆ ಸರಳೀಕರಿಸಿದ ಕಥೆಯನ್ನೂ ಮುಂದೆ ಮಾನಸದಲ್ಲಿ ಪ್ರಕಟಿಸಲಾಗುವುದು.

-ತೇಜಸ್ವಿನಿ ಹೆಗಡೆ.

ಸೋಮವಾರ, ಜನವರಿ 16, 2012

ಬಾ ತಂಗಿ ಊರಿಗೆ ಬರಗಿದ್ದೆ ಇರಡ....


ಸೋಗೆಮನೆ ಶೀನುಮಾವಂಗೊಂದೇ ಚಿಂತೆ ಮನ್ಸೊಳ್ಗೆ
ಗನಾದೊಂದು ಕೂಸು ಬೇಕು ಮನೇಲಿಪ್ಪ ಮಗಂಗೆ

ಕಾಲೇಜ್ ಮುಖ ಕಂಡವ್ಕೆಲ್ಲಾ ಬರೀ ಕನ್ಸು ಪ್ಯಾಟಿದೇ
ಊರು ಬ್ಯಾಡ, ಕೇರಿ ಬ್ಯಾಡ, ಕಾಣುದೊಂದು ಬೆಂಗ್ಳೂರೇ!

ಲವ್ವು-ಗಿವ್ವು ಮಾಡೋ ಯೋಚ್ನೆ ಇದ್ದವೆಲ್ಲಾ ಕೇಳ್ಕಳಿ
ಮೊದ್ಲೇ ಎಲ್ಲಾ ಸ್ಕೆಚ್ ಹಾಯ್ಕಂಡು ಹುಡ್ಗಿ ನೋಡಿ ಇಟ್ಕಳಿ

ಬರ್ಗಾಲ್ ಬಂದ್ರೂ ತೊಂದ್ರೆಯಿಲ್ಲೆ ಬಾವಿ ತೋಡಿ ಬದ್ಕಲಕ್ಕು
ಹೆಣ್ಣ್ ಸಿಗದೇ ಕಷ್ಟ ಆದ್ರೆ ಹೇಂಗೆ ವಂಶ ಬೆಳೆಸಕ್ಕು?

ಯಂಗ್ಳ ಕಾಲದ್ ಗಂಡಿಗೇನು ಕಡ್ಮೆ ಡೌಲು ಇದ್ದಿತ್ತಾ?
ಈಗ್ಮೇಲೆ ಕೆಳ್ಗೆ ನೋಡ್ತೋ, ಮೊದ್ಲು ಸೊಕ್ಕು ಕಡ್ಮಿತ್ತಾ?

ಅದ್ಕೊಂದ್ಕಾಲ, ಇದ್ಕೊಂದ್ಕಾಲ ಸುಮ್ನೆ ದೇವ್ರು ಮಾಡಿದ್ನಾ?
ಹಿಂದಿದ್ ತಿಳ್ಕಂಡ್ ಮುಂದಿದ್ ಯೋಚ್ಸಿ ಚೆನ್ನಾಗ್ ಬಾಳ್ಸಿ ಜೀವ್ನನಾ

-ತೇಜಸ್ವಿನಿ ಹೆಗಡೆ.

------


ಈ ಕವಿತೆಯನ್ನು ಪ್ರತಿಬಿಂಬ ೨೦೧೨- ಏಪ್ರಡಿಸಿದ್ದ ಹವಿಗವನ ಸ್ಪರ್ಧೆಗಾಗಿ ಬರೆದು ಕಳಿಸಿದ್ದು... ಹವ್ಯಕದಲ್ಲಿ ಕವಿತೆ ಬರೆಯುತ್ತಿರುವುದು ಇದೇ ಮೊದಲ ಪ್ರಯತ್ನ.... ನೂತನ ಅನುಭವವನ್ನು ನೀಡಿತು :)


ಹವಿಗಥಾ ಸ್ಪರ್ಧೆಯಲ್ಲಿ ನನ್ನ "ಇದ್ದಲ್ಲೇ ಇಡು ದೇವ್ರೆ" ಕಥೆಗೆ ಪ್ರಥಮ ಬಹುಮಾನ ದೊರಕಿದೆ :)



ಜನವರಿ ೧೩ಕ್ಕೆ ನನ್ನ ಬ್ಲಾಗ್ ಮರಿ "ಮಾನಸ" ಹುಟ್ಟಿ ವರುಷಗಳಾದವು :)