ಗುರುವಾರ, ಮೇ 3, 2012

ಕೈಹಿಡಿದು ಪೊರೆವಳು ಕನ್ನಡಮ್ಮ


ಪದವಿ ಶಿಕ್ಷಣ ಮುಗಿದಾಕ್ಷಣ, ನಮ್ಮೊಳಗೆ ಒಂದು ಪ್ರಮುಖ ಘಟ್ಟವನ್ನು ಮುಟ್ಟಿದ ನಿರುಮ್ಮಳತೆ ತುಂಬಿಕೊಳ್ಳುತ್ತದೆ. ಆದರೆ ಅದು ತಾತ್ಕಾಲಿಕವಷ್ಟೇ! ಬದುಕನ್ನು ಸರಿಯಾದ ರೀತಿಯಲ್ಲಿ ಈಸಿ ಜಯಿಸಲು ಸ್ವಾವಲಂಬನೆ ಅತ್ಯಗತ್ಯ. ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ವಿದ್ಯಾಭ್ಯಾಸವೂ ಅತ್ಯಾವಶ್ಯಕ. ಈಗಿನ ಯುಗದಲ್ಲಿ ಕೇವಲ ಒಂದು ಪದವಿಯಿಂದ ಉನ್ನತ ಹುದ್ದೆಯ ನೌಕರಿಗಳನ್ನು ಗಳಿಸಲು, ಆರ್ಥಿಕವಾಗಿ ಸಾಕಷ್ಟು ಸದೃಢಗೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಪದವಿಯ ನಂತರ ಉನ್ನತ ಶಿಕ್ಷಣಕ್ಕೆ ಅಣಿಯಾಗುವುದು ಅನಿವಾರ್ಯ. ಪದವಿಯಲ್ಲಿ ಓದಿರುವ ಪಠ್ಯಗಳಲ್ಲಿ ನಮಗೆ ಯಾವ ವಿಷಯ ಹೆಚ್ಚು ಆಸಕ್ತಿಕರವಾಗಿರುತ್ತದೆಯೋ, ಯಾವ ವಿಷಯ ನಮಗೆ ಸುಲಭ ಗ್ಯಾಹ್ಯವಾಗಿದ್ದು, ನಾವು ಅದರ ಅಧ್ಯಯನದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬಲ್ಲೆವೆಂಬ ಆತ್ಮವಿಶ್ವಾಸವಿರುತ್ತದೆಯೋ ಅಂತಹ ವಿಷಯವನ್ನೇ ಆರಿಸಿಕೊಂಡು ಉನ್ನತ ಶಿಕ್ಷಣ ಪಡೆದರೆ ಉತ್ತಮ. ಹಾಗೆಯೇ ಪ್ರಸ್ತುತ ಸ್ಥಿತಿಯಲ್ಲಿ ಯಾವ ವಿಷಯಕ್ಕೆ ಹೆಚ್ಚು ಬೇಡಿಕೆಯಿದೆ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕಾದ್ದು ಅಗತ್ಯ. ಸಾಮಾನ್ಯವಾಗಿ ವಿಜ್ಞಾನ, ಕಲಾವಿಜ್ಞಾನ, ವಾಣಿಜ್ಯ ವಿಷಯದಲ್ಲಿ ಪದವಿಪಡೆದವ ಅದೇ ವಿಷಯದಲ್ಲೇ ಉನ್ನತ ಶಿಕ್ಷಣ ಅಧ್ಯಯನ ಮಾಡಲು ಬಯಸುತ್ತಾನೆ. ಆದರೆ ಎಲ್ಲೋ ಒಂದಿಬ್ಬರು ಮಾತ್ರ ಕನ್ನಡದಲ್ಲಿ ಎಂ.ಎ. ಮಾಡಲು ಇಚ್ಛಿಸುವರು. ಕನ್ನಡ ಸಾಹಿತ್ಯವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಳ್ಳಲು ಬಯಸುವವರು ಮತ್ತೂ ಕಡಿಮೆಯೇ ಎನ್ನಬಹುದು. ಇದಕ್ಕೆ ಕಾರಣ ಈ ವಿಷಯದ ಕುರಿತಾಗಿ ಇರುವ ಅಸಡ್ಡೆ ಹಾಗೂ ಇದಕ್ಕೆ ಅತಿ ಕಡೆಮೆ ಬೇಡಿಕೆಯಿದೆ ಅನ್ನೋ ಮನೋಭಾವ. ಆದರೆ ಯಾವುದೇ ವಿಷಯದಲ್ಲಿ ಸಂಪೂರ್ಣ ಪ್ರಾವಿಣ್ಯತೆ ಪಡೆದರೆ, ನಮ್ಮ ದೃಷ್ಟಿಕೋನವನ್ನು ಸಂಕುಚಿತಗೊಳಿಸಿಕೊಳ್ಳದಿದ್ದರೆ, ಸ್ಪಷ್ಟ ಗುರಿ ಹಾಗೂ ಅದನ್ನು ತಲುಪಲು ಸರಿಯಾದ ಸಾಧನವನ್ನು ಕಂಡುಕೊಂಡರೆ, ಎಲ್ಲವೂ ಸುಲಭ ಸಾಧ್ಯ.

ಉನ್ನತ ಶಿಕ್ಷಣವನ್ನು ಓದುವಾಗ ಪಠ್ಯಗಳಲ್ಲಿದ್ದಷ್ಟನ್ನೇ ಪಠಿಸಿ, ಕೇವಲ ಅಂಕಗಳನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ಓದಿದರೆ ಖಂಡಿತ ಗುರಿ ಸಾಧಿಸಲಾಗದು. ಅಧ್ಯಯನದ ಜೊತೆ ಸಂಶೋಧನೆ, ಹತ್ತು ಹಲವಾರು ಇತರ ವಿಷಯಗಳ ಜ್ಞಾನಾರ್ಜನೆ, ಸಾಮಾನ್ಯ ಜ್ಞಾನದ ತಿಳುವಳಿಕೆ- ಇವೆಲ್ಲವುಗಳ ಜೊತೆ ಕನ್ನಡದೊಂದಿಗೆ ಇಂಗ್ಲೀಷ್ ಯಾಗೂ ಇನ್ನಿತರ ಭಾಷೆಯಗಳ (ಉದಾ: ಜರ್ಮನ್, ಪ್ರೆಂಚ್, ಸ್ಪಾನಿಶ್ ಇತ್ಯಾದಿ..) ಕಲಿಕೆಯೂ ಜೊತೆಗೂಡಿದಲ್ಲಿ ಹಲವಾರು ಅವಕಾಶಗಳು ಕಾಣಸಿಗುತ್ತವೆ. 

ನಾನೂ ಒರ್ವ ಬಿ.ಎಸ್ಸಿ. ಪದವೀಧರೆ. ವಿಜ್ಞಾನ ನನ್ನ ಅಚ್ಚುಮೆಚ್ಚಿನ ವಿಷಯವಾಗಿತ್ತು.. ಈಗಲೂ ಆಗಿದೆ. ಬಿ.ಎಸ್ಸಿ.ಯ ನಂತರ ಕಾರಣಾಂತರಗಳಿಂದ ವಿಜ್ಞಾನದಲ್ಲೇ ಉನ್ನತ ಶಿಕ್ಷಣ ಪಡೆಯಲಾಗಲಿಲ್ಲ. ಆದರೆ ಮೊದಲಿನಿಂದಲೂ ವಿಜ್ಞಾನದಷ್ಟೇ ಆಸಕ್ತಿ, ಅಕ್ಕರೆ ಹೊಂದಿದ್ದ ನನ್ನ ಮೆಚ್ಚಿನ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ಭಾಗ್ಯ ನನ್ನದಾಯಿತು. ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮಾಡಲು ಹೊರಟಾಗ ಹಲವರು ಪ್ರೋತ್ಸಾಹಿಸಿದ್ದರು... ವಿಜ್ಞಾನದ ನೆಲೆಕಟ್ಟಿನ ಮೇಲೆ ಕನ್ನಡ ಸಾಹಿತ್ಯದವನ್ನು ಅಭ್ಯಸಿಸಲು ಸಾಧ್ಯವಾಗುತ್ತಿರುವುದು ತುಂಬಾ ಅಪರೂಪ... ಆಸಕ್ತಿಕರ ಎಂದು. ಅದರ ನಿಜ ಅರ್ಥ ಎಂ.ಎ. ಮಾಡಿದ ಮೇಲಷ್ಟೇ ನನಗೆ ಸರಿಯಾಗಿ ಅರಿವಾಗಿದ್ದು. ಅದೆಷ್ಟೋ ಪದವೀಧರರು ಕನ್ನಡ ಸಾಹಿತ್ಯವನ್ನು ಅಭ್ಯಸಿಸಲು ಇಚ್ಛಿಸಿದರೂ ಬೇಡಕೆ ಹಾಗೂ ಅವಕಾಶಗಳ ಕೊರತೆಯ ಭಯದಿಂದಾಗಿ ಹಿಂದಡಿಯಿಟ್ಟಿರಬಹುದು. ಇನ್ನು ಕೆಲವರು ತಮ್ಮೊಳಗಿನ ಆಸಕ್ತಿಯಿಂದ ಅಭ್ಯಸಿಸಿದರೂ ಅದನ್ನೇ ತಮ್ಮ ವೃತ್ತಿಯನ್ನಾಗಿಸಲು ಸೋತು ಕನ್ನಡ ಸಾಹಿತ್ಯದಿಂದ ವಿಮುಖರಾಗಿರಲೂ ಬಹುದು. ಆದರೆ ಇಂದು ಹತ್ತು ಹಲವು ಅವಕಾಶಗಳು ಕೈಬೀಸಿಕರೆಯುತ್ತಿದ್ದು, ನಮ್ಮ ಪ್ರವೃತ್ತಿ ಹಾಗೂ ವೃತ್ತಿ ಎರಡೂ ನಮ್ಮೊಂದಿಗೆ ಜೊತೆಯಾಗಿ ಸಾಗಲು ಸಾಧ್ಯವಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಬೇಡಿಕೆ :- ಕನ್ನಡ ಎಂ.ಎ. ಜೊತೆಗೆ ಬಿ.ಎಡ್. ಸಹ ಮಾಡಿಕೊಂಡವರು ಶಾಲಾ/ಕಾಲೇಜ್‌ಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕ ಹುದ್ದೆಯನ್ನು ಪಡೆಯಬಹುದು. ಕಾಲೇಜುಗಳಲ್ಲಿ ಸಧ್ಯ ತಾತ್ಕಲಿಕ ಹುದ್ದೆಯನ್ನು ಮಾತ್ರ ಪಡೆಯಬಹುದಾಗಿದ್ದು, ಯು.ಜಿ.ಸಿ. ಸ್ಕೇಲ್ ಪಡೆಯಲು ಎನ್.ಇ.ಟಿ./ಎಸ್.ಎಲ್.ಇ.ಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ವಿದ್ಯಾರ್ಥಿಗಳೊಂದಿಗೆ ಸಮರ್ಥವಾಗಿ ಸಂವಹಿಸಲು ಇಲ್ಲಿ ಕನ್ನಡ ಭಾಷೆಯೇ ಪ್ರಮುಖವಾಗಿ ಬೇಕಾಗಿರುತ್ತದೆ. ಆದರೆ ಇತ್ತೀಚಿಗೆ ಈ ಕ್ಷೇತ್ರದಲ್ಲಿ ಅವಕಾಶಗಳು ಸ್ವಲ್ಪ ಕಡಿಮೆಯೇ ಆಗಿರಿವುದು ನಿಜ. ಹಾಗಾಗಿ ಬೇರೆ ವಿಕಲ್ಪಗಳತ್ತ ನೋಟ ಬೀರುವುದು ಅತ್ಯಗತ್ಯ.

ಫ್ರೀಲ್ಯಾನ್ಸ್ ಪತ್ರಿಕೋದ್ಯಮ :- ಮನೆಯಲ್ಲಿ ಕುಳಿತೇ ಪತ್ರಿಕೆಗಳಿಗೆ, ಮ್ಯಾಗಝೀನ್‌ಗಳಿಗೆ ಬರಹಗಳನ್ನು ಕಳಿಸಬಹುದು. ರಾಘವಾಂಕ, ಕುಮಾರವ್ಯಾಸ, ಪಂಪರ ಕಾವ್ಯಗಳನ್ನು, ಕಾವ್ಯಮೀಮಾಂಸೆ, ಛಂದಸ್ಸು, ರಗಳೆಗಳನ್ನು ಸರಳಗೊಳಿಸಿ ಸುಲಭವಾಗಿ ಜನಸಾಮಾನ್ಯರಿಗೆ ಮುಟ್ಟಿಸಲು, ಜನಮಾನಸವನ್ನು ಸುಲಭವಾಗಿ ತಟ್ಟುವ ಕಥೆ, ಕವನ, ಲೇಖನಗಳನ್ನು ಕಳುಹಿಸಲು.. ಪ್ರಮುಖವಾಗಿ ಕನ್ನಡ ಸಾಹಿತ್ಯದ ಮೇಲಿನ ನಮ್ಮ ಪ್ರವೃತ್ತಿಯ ಆಸ್ವಾದನೆಗೆ ಇದು ಅತ್ಯುತ್ತಮ ಸಾಧನ. 

ಸಾರ್ವಜಿಕ ಸಂಪರ್ಕ ಸಂಸ್ಥೆಗಳಲ್ಲಿ :- ಕರ್ನಾಕ ರಾಜ್ಯದಲ್ಲಿರುವ ಸಾರ್ವಜನಿಕ ಸಂಪರ್ಕ ಅಧಿಕಾರಿ (Public Relations Officer- P.R.O) ಹುದ್ದೆಗಳಲ್ಲಿ ಹೇರಳ ಅವಕಾಶಗಳಿವೆ. ಗ್ರಾಹಕರು ಹಾಗೂ ಅಧಿಕಾರಿಗಳ ನಡುವೆ ಹಾಗೆಯೇ ಅಧಿಕಾರಿಗಳು ಹಾಗೂ ಸರ್ಕಾರದ ನಡುವೆ ಸಂವಹನ ನೆಡೆಸುವಲ್ಲಿ ಪಬ್ಲಿಕ್ ರಿಲೇಷನ್ ಆಫೀಸರ್ ಪಾತ್ರ ಅತಿ ದೊಡ್ಡದು. ಆತನಿಗೆ ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಚೆನ್ನಾಗಿದ್ದು, ಇಂಗ್ಲೀಷ್ ಭಾಷೆ ಕೂಡ ಚೆನ್ನಾಗಿ ತಿಳಿದರಬೇಕಾಗುತ್ತದೆ. ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆದವರಿಗೇ ಮೊದಲ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ ಓರ್ವ ಪಿ.ಆರ್.ಓ ಅಧಿಕಾರಿ.

ತರ್ಜುಮೆಯ ಕ್ಷೇತ್ರದಲ್ಲಿ (Translation):- ಯಾರೋ ಎಲ್ಲೋ ಹೇಳಿದ ನೆನಪು..‘ಕನ್ನಡದಲ್ಲಿ ಶಾಸನಗ್ರಂಥಗಳ ಕೊರೆತೆಯಿದೆ’ ಎಂದು. ರಸಾಯನಶಾಸ್ತ್ರ, ಭೌತಶಾಸ್ತ್ರ ಇತ್ಯಾದಿ ವಿಷಯಗಳ ಮೇಲಿನ ಸಂಶೋಧನಾತ್ಮಕ ಪುಸ್ತಕಗಳು ಬೇರೆ ಭಾಷೆಗಳಲ್ಲಿ ಸಾಕಷ್ಟು ಲಭ್ಯ. ಆದರೆ ಕನ್ನಡಕ್ಕೆ ತರ್ಜುಮೆಗೊಂಡವು ತೀರಾ ಅಲ್ಪ. ಇಂಗ್ಲೀಷ್, ಜರ್ಮನಿ, ಫ್ರೆಂಚ್ - ಇತ್ಯಾದಿ ಭಾಷೆಗಳಲ್ಲಿರುವ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನಗಳನ್ನು ಕನ್ನಡಕ್ಕೆ ಅನುವಾದಿಸುವಾಗ ಮೂರು ಅಂಶಗಳು ಅತ್ಯಗತ್ಯವಾಗಿರುತ್ತವೆ. ಒಂದು- ನೀವು ಕನ್ನಡವನ್ನು ಚೆನ್ನಾಗಿ ಅಧ್ಯಯನ ಮಾಡಿರಬೇಕು.. ಭಾಷೆಯಲ್ಲಿನ ಹಿಡಿತ, ಸರಿಯಾದ ಪದ ಜೋಡಣೆ, ಅರ್ಥ ಕೆಡದಂತೇ ವಾಕ್ಯ ರಚನೆ ಇವೆಲ್ಲವುಗಳಿಗೆ ಕನ್ನಡದಲ್ಲಿ ಪಾಂಡಿತ್ಯ ಅತ್ಯಗತ್ಯ. ಎರಡನೆಯದಾಗಿ - ಇಂಗ್ಲೀಷ್ ಚೆನ್ನಾಗಿ ಗೊತ್ತಿರಬೇಕು. ಮೂರನೆಯದಾಗಿ - ನೀವು ತರ್ಜುಮೆ ಮಾಡಲು ಹೊರಟಿರುವ ವಿಷಯದ ಜ್ಞಾನ ನಿಮ್ಮಲ್ಲಿ ಚೆನ್ನಾಗಿರಬೇಕಾಗುತ್ತದೆ. http://www.ntm.org.in/ - ಈ ಲಿಂಕ್‌ಗೆ ಭೇಟಿ ಇತ್ತಲ್ಲಿ ತರ್ಜುಮೆಯ ಕುರಿತು ಹಲವು ಮಾಹಿತಿಗಳು, ಉದ್ಯೋಗಾವಕಾಶಗಳು ನಿಮಗೆ ದೊರಕಬಲ್ಲದು. 

ಗಣಕ ತಜ್ಞ ಯು.ಬಿ.ಪವಜ ಅವರ ಪ್ರಕಾರ ಮೈಕ್ರೋಸಾಫ್ಟ್, ಗೂಗಲ್ ಕಂಪನಿಗಳು ಕನ್ನಡದಲ್ಲಿ ಪ್ರಾವೀಣ್ಯ ಹೊಂದಿದ್ದು, ಇಂಗ್ಲೀಷ್ ಜ್ಞಾನವನ್ನೂ ಚೆನ್ನಾಗಿ ಹೊಂದಿರುವವರನ್ನು ಒಡಂಬಡಿಕೆಯ (Contract) ಮೇಲೆ ಪಠ್ಯಕಣಜ (corpus) ತಯಾರಿಸಲು ಆಹ್ವಾನಿಸುತ್ತಿದ್ದಾರೆ. ಸಹಜಭಾಷಾಸಂಸ್ಕರಣ ಕ್ಷೇತ್ರದಲ್ಲೂ (Natural Language Processing) ಸಾಕಷ್ಟು ಅವಕಾಶಗಳಿವೆ. ಹಲವು ಸಂಶೋಧನಾ ಕೇಂದ್ರಗಳು, ವಿಶ್ವವಿದ್ಯಾಲಯಗಳು ಪಠ್ಯಕಣಜವನ್ನು ತಯಾರಿಸಲು ಪ್ರಾರಂಭಿಸಿವೆ. ಇವು ತಯಾರಾದಲ್ಲಿ ಸಹಜಭಾಷಾಸಂಸ್ಕರಣೆ ಮಾಡುವವರಿಗೆ ಉಪಯೋಗವಾಗಲಿದೆ.

ಜಾಹೀರಾತು ಹಾಗೂ ದೂರದರ್ಶನ ಕ್ಷೇತ್ರದಲ್ಲಿ:- ಹಿಂದಿ, ಇಂಗ್ಲೀಷ್ ಇನ್ನಿತರ ಭಾಷೆಗಳಲ್ಲಿ ತಯಾರಾದ ಜಾಹೀರಾತುಗಳನ್ನು ದೂರದರ್ಶನ, ಖಾಸಗೀ ಚಾನಲ್‌ಗಳಲ್ಲಿ ಬಿತ್ತರಿಸಲು ಅಂತೆಯೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಲು, ಕಾಪಿ ರೈಟ್/ಕಾಪಿ ಎಡಿಟಿಂಗ್ ಹುದ್ದೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಅಲ್ಲದೇ ರಾಜ್ಯದ ಚಾನಲ್‌ಗಳಲ್ಲಿ ಬಿತ್ತರಗೊಳ್ಳುವ ಧಾರಾವಾಹಿಗಳಿಗೆ, ಇನ್ನಿತರ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ರೈಟರ್‌ಆಗಿ, ಉದ್ಘೋಷಕರಾಗಿ, ನಿರೂಪಕರಾಗಿ, ವಾರ್ತಾವಾಚಕರಾಗಿ ಕಾರ್ಯನಿರ್ವಹಿಸಲೂ ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದಿರುವುದು ಅತ್ಯಗತ್ಯ.

ನಿಘಂಟು ರಚನೆಯಲ್ಲಿ(Lexicography):- ಕನ್ನಡಕ್ಕೆ ಸಧ್ಯ ಇರುವವರು ಓರ್ವರೇ ನಿಘಂಟು ತಜ್ಞರು. ಅವರೇ ಶ್ರೀಯುತ ಜಿ.ವಿ.ವೆಂಕಟ ಸುಬ್ಬಯ್ಯ. ನಿಘಂಟು ತಜ್ಞರಾಗಲು ಅಪಾರ ಅಧ್ಯಯನ, ಸಂಶೋಧನೆಗಳು ಅತ್ಯಗತ್ಯ. ಕನ್ನಡ ಸಾಹಿತ್ಯದ ಕುರಿತು ಬಹು ಆಸಕ್ತಿ ಉಳ್ಳವರು ಈ ಕ್ಷೇತ್ರದಲ್ಲೂ ಯಶಸ್ಸುಗಳಿಸಬಲ್ಲರು. ಈ ನಿಟ್ಟಿನಲ್ಲಿ ಕನ್ನಡ ಎಂ.ಎ. ಮಾಡಿಕೊಂಡವರು ಸಂಶೋಧನೆಗೆ ತೊಡಗಿಕೊಂಡು ನಿಘಂಟು ರಚನೆಯಲ್ಲಿ ತಮ್ಮ ಕೊಡುಗೆಯನ್ನು ಕೊಡಬಹುದಾಗಿದೆ.

ಯಾವುದೇ ವಿಷಯವಾಗಲಿ, ಅದರಲ್ಲಿ ತಾದಾತ್ಮ್ಯತೆ, ತನ್ಮಯತೆ, ಶ್ರದ್ಧೆ ಇದ್ದರೆ ಪ್ರಾವೀಣ್ಯತೆ ತಾನಾಗೇ ಬರುತ್ತದೆ. ಜೊತೆಗೆ ಸಾಮಾನ್ಯ ಜ್ಞಾನದ ತಿಳಿವು, ವಿಶಾಲ ದೃಷ್ಟಿಕೋನದ ಅಳವಡಿಕೆಯಿಂದಾಗಿ ಅವಕಾಶಗಳು, ಯಶಸ್ಸುಗಳು ನಮ್ಮನ್ನರಿಸಿ ಬಂದೇ ಬರುತ್ತವೆ. ಕೇವಲ ಪುಸ್ತಕದ ಬದನೇಕಾಯಿಯಾಗದೇ ಆಯಾ ಕಾಲಕ್ಕೆ ತಕ್ಕಂತೇ ತಿಳಿವನ ಹರಿವನ್ನು ಅರಿಯುತ್ತಾ ಮುನ್ನಡೆದರೆ ನಮ್ಮ ಆಸಕ್ತಿಯನ್ನೇ ವೃತ್ತಿಯನ್ನಾಗಿಸಿಕೊಳ್ಳಬಹುದು.

@ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಪ್ರಕಟಿತ

-ತೇಜಸ್ವಿನಿ ಹೆಗಡೆ.