ಗುರುವಾರ, ಡಿಸೆಂಬರ್ 31, 2009

ಅನ್ಯಾಯವನ್ನು ಕಾಪಿಡುತಿರುವ ಕಾನೂನಿನಡಿಯಲ್ಲಿ ಮಹಿಳೆಯೆಷ್ಟು ಭದ್ರ?!!!

"ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ" -ಸಂಸ್ಕೃತ ಸುಭಾಷಿತವೊಂದು ತುಂಬಾ ಸುಂದರ ಸಂದೇಶವನ್ನು ನೀಡುತ್ತದೆ. ಅಂತೆಯೇ ಗಾಂಧೀಜಿ ಕೂಡ "ಎಂದು ಮಧ್ಯರಾತ್ರಿಯಂದೂ ಕೂಡ ಮಹಿಳೆ ನಿರ್ಭಯಳಾಗಿ ತಿರುಗುವಂತಾಗುವುದೋ ಅಂದೇ ನಮಗೆ ಸ್ವಾತಂತ್ರ್ಯ ಸಿಕ್ಕಿದಂತಾಗುವುದು" ಎಂದು ಹೇಳಿದ್ದಾರೆ. ಎಷ್ಟೊಂದು ಉದಾತ್ತ ವಿಚಾರಗಳಿವು! ಆದರೆ ಈ ಮೇಲಿನ ಹೇಳಿಕೆಗಳೆಲ್ಲಾ ಇಂದು ಕನಸಿನೊಳಗಿನ ಕನ್ನಡಿಗಂಟಿನಂತೇ ಸರಿ! ಎಂದೆಂದೂ ಈ ಸ್ವಾತಂತ್ರ್ಯ ಮಹಿಳೆಯದಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇಂದಾಗಿದೆ. ಮುಂದೆ ಇದಕ್ಕಿಂತಲೂ ದುಃಸ್ಥಿತಿ ನಮ್ಮದಾಗಬಹುದು. ಮನೆಯೊಳಗೇ ಇರಲಿ ಇಲ್ಲಾ ಹೊರಜಗತ್ತಿನಲ್ಲೇ ಇರಲಿ ಮಹಿಳೆಯರ ಬದುಕು ಆತಂಕದೊಂದಿಗೇ ಕಳೆಯುವಂತಾಗಿರುವುದು ತುಂಬಾ ಖೇದಕರ!
"ಬಲಾತ್ಕಾರ, ಮಾನಭಂಗ, ಮಾನಹರಣ, ರೇಪ್" ಈ ಶಬ್ದಗಳನ್ನು ಕೇಳುವಾಗಲೇ ಮೊಗ ಕಪ್ಪಿಡುತ್ತದೆ. ಮನ ಭಯಗೊಳ್ಳುತ್ತದೆ. ಆ ಕೃತ್ಯ ಎಸಗಿದ ವ್ಯಕ್ತಿಯ ಮೇಲೆ ಅಗಾಧ ರೋಷ, ತಿರಸ್ಕಾರ, ಅಸಹ್ಯ ಮೂಡುತ್ತದೆ ನಮಗೆ. ಆದರೆ ಈ ದುಷ್ಕೃತ್ಯಕ್ಕೆ ಒಳಗಾದ ವ್ಯಕ್ತಿಗೆ ಯಾವ ರೀತಿ ಅನಿಸಬಹುದು? ಆಕೆ ಹೇಗೆ ತನ್ನ ತಾನು ಸಂಭಾಳಿಸಿಕೊಳ್ಳುವಳು? ಮುಂದೆ ಆಕೆಯ ಬದುಕು ಅವಳನ್ನು ಎಲ್ಲಿಗೆ ಒಯ್ಯಬಹುದು? ಎನ್ನುವ ಚಿಂತನೆಗೆ ಹೋಗುವವರು ಕಡಿಮೆಯೇ. ಆ ಕ್ಷಣದ ಕರುಣೆ, ಅನುಭೂತಿ, ಅಯ್ಯೋ ಪಾಪ ಎನ್ನುವ ಅನುಕಂಪವನ್ನಷ್ಟೇ ತೋರಿ, ಆ ಪಾಪಿಗೆ ಸರಿಯಾಗಿ ಶಿಕ್ಷೆಯಾಗಲೆಂದು ಹಾರೈಸಿ ಮರೆಯುತ್ತೇವೆ. ಆದರೆ ಅಂತಹ ಒಂದು ಮಹಾಪಾಪವನ್ನು ಎಸಗಿದ ವ್ಯಕ್ತಿಗೆ ಸರಿಯಾದ ಶಿಕ್ಷೆಯಾಗಿದೆಯೋ ಇಲ್ಲವೋ?! ಇಲ್ಲದಿದ್ದರೆ ಹೇಗೆ ಶಿಕ್ಷೆ ಆಗುವಂತೆ ಮಾಡಬೇಕು? ಎಂಬುದನ್ನು ನಾವು ಯೋಚಿಸುವುದೇ ಇಲ್ಲ. ಆ ಹೊತ್ತಿನ ಬಿಸಿ ಸುದ್ದಿಯನ್ನಷ್ಟೇ “Breaking News” ಆಗಿ ಪ್ರಸಾರಮಾಡುವ ಮಾಧ್ಯಮ, ತದನಂತರದ ಬೆಳವಣಿಗೆಯ ಬೆನ್ನತ್ತಿ ಹೋಗುವುದೂ ಇಲ್ಲ. ಆಘಾತಕ್ಕೊಳಗಾದ ಮಹಿಳೆಗೆ ತಮ್ಮ ಬೆಂಬಲ ಹಾಗೂ ಮಾನಸಿಕ ಶಕ್ತಿಯನ್ನು ನೀಡಿ, ಆ ಮೂಲಕ ಪಾಪಿಗೆ ಆಕೆಯೇ ಶಿಕ್ಷೆ ನೀಡುವಂತೆ ಮಾಡಲು ಸಹಕರಿಸುವ ನಿಟ್ಟಿನಲ್ಲಿ ನಮ್ಮ ಸಮಾಜವಾಗಲೀ, ಕಾನೂನಾಗಲೀ, ಕನಿಷ್ಠ ಆಕೆಯ ಮನೆಯವರಾಗಲೀ ಮುಂದುವರಿಯುವುದೇ ಇಲ್ಲ!
ನಮ್ಮ ಕಾನೂನಿನಲ್ಲಿ ಬಲಾತ್ಕಾರ ಎಸಗಿದವನಿಗೆ ಹೆಚ್ಚೆಂದರೆ ೭ ವರ್ಷ ಸಜೆ ಮಾತ್ರವಿದೆ. ಅದರಲ್ಲೂ ಆತ ಆ ಕೃತ್ಯ ಎಸಗಿದ ಮೇಲೆ ಆಕೆಗೆ ಹೆಚ್ಚು ದೈಹಿಕ ಹಲ್ಲೆ ಮಾಡದೇ ಹೋದರೆ ಕಡಿಮೆ ಶಿಕ್ಷೆಯಂತೆ. ಒಂದು ವೇಳೆ ಬಲಾತ್ಕಾರಕ್ಕೊಳಗಾದ ವ್ಯಕ್ತಿ ತದನಂತರ ಆಘಾತದಿಂದ ಕೋಮಾಕ್ಕೋ, ಇಲ್ಲಾ ಮೃತಳಾದರೆ ಆ ಕೃತ್ಯವೆಸಗಿದವನಿಗೆ ಹೆಚ್ಚೆಂದರೆ ಹತ್ತುವರ್ಷಗಳ ಸಜೆಯಂತೆ! ಇದೆಲ್ಲಾ ತಪ್ಪು ಸಾಬೀತಾದರೆ ಮಾತ್ರ! ಸಾಕ್ಷಿಗಳ ಕೊರತೆಯಿಂದಾಗಿಯೋ ಇಲ್ಲಾ ಇನ್ನವುದೋ ಪ್ರಭಾವಶಾಲೀ ವಶೀಲಿಯಿಂದಾಗಿಯೋ ಆ ವ್ಯಕ್ತಿ ಏನೂ ಶಿಕ್ಷೆ ಅನುಭವಿಸದೇ ಆರಾಮವಾಗಿ ಹೊರಬರುವ ಸಾಧತೆಯೇ ೯೫% ಹೆಚ್ಚು! ಆದರೆ ಇತ್ತ ಮಾನಭಂಗಕ್ಕೊಳಗಾದ ಮಹಿಳೆ ಮಾತ್ರ ಏನೊಂದೂ ತಪ್ಪು ಮಾಡದೇ ಜೀವನ ಪೂರ್ತಿ ಕೊರಗುತ್ತಾ, ಕುರುಡ ಸಮಾಜದ ಕಟು ನಿಂದೆಗೆ ಪ್ರತಿನಿಮಿಷ ಸಾಯುತ್ತಾ, ಜೀವಂತ ಹೆಣವಾಗಿರಬೇಕಾಗುತ್ತದೆ. ಇದು ೧೦೦% ಸತ್ಯ! ಇಂದು ನಮ್ಮ ಕಾನೂನು ೧೦೦ ಅಪರಾಧಿಗಳು ತಪ್ಪಿಸಿಕೊಂಡರೂ ಸರಿ ಓರ್ವ ನಿರಪರಾಧಿಗೆ ಸಜೆ ಆಗಬಾರದೆಂದು ಕೊಚ್ಚಿಕೊಳ್ಳುತ್ತಾ, ಸಾವಿರಾರು ನಿರಪರಾಧಿಗಳನ್ನು ಪ್ರತಿನಿತ್ಯ ಕೊಲ್ಲುತ್ತಿದೆ. ಹೆಚ್ಚಿನ ವಕೀಲರು ಹುಡುಕುವುದೇ ಎಲ್ಲಿ ಅಪರಾಧಿಗೆ ತಪ್ಪಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆಯೆಂದು. ನ್ಯಾಯ ಅನ್ಯಾಯದ ಪರಿಭಾಷೆ ನಿರಪರಾಧಿಗಳ ಕೈಯಲ್ಲೇ ಇಲ್ಲ! ಉಗುರಿನಿಂದ ತಲೆಯವರೆಗೂ ಇಂದು ಹಣ, ವಶಿಲೀಕರಣ, ಗದ್ದುಗೆ, ಅಧಿಕಾರವೇ ಎಲ್ಲವನ್ನೂ ನಿರ್ಧರಿಸುತ್ತದೆ. ಸಾಕ್ಷಿಗಳನ್ನು ಮಾರುತ್ತದೆ, ಕೊಂಡು ಕೊಳ್ಳುತ್ತದೆ. ಇನ್ನು ಹಲವರಂತೂ ಬಲಾತ್ಕಾರಕ್ಕೊಳಗಾದವರ ಪರ ಸಾಕ್ಷಿ ಹೇಳುವುದೂ ಒಂದು ಅವಮಾನಕರವೆಂಬ ಮೂರ್ಖ ಅನಿಸಿಕೆಯೊಂದಿಗೇ ಮುಂದೆ ಬರಲು ಹೆದರಿ ಮತ್ತಷ್ಟು ಸಹಾಯ ಮಾಡುತ್ತಾರೆ ಪಾಪಿಗಳನ್ನುಳಿಸಲು.
ತನ್ನ ಸ್ವಂತಿಕೆ, ಘನತೆ, ಗೌರವ, ಹೆಣ್ತತ, ದೇಹ, ಮನಸ್ಸು ಎಲ್ಲವುದರ ಮೇಲೆ ಆಗುವ ಘೋರಧಾಳಿಯನ್ನು ತಡೆದುಕೊಂಡು, ಸುತ್ತಮುತ್ತಲಿನ ಸಮಾಜ ನೀಡುವ ಪೊಳ್ಳು ಅನುಕಂಪ, ಉಪಯೋಗಕ್ಕೆ ಬಾರದ ಸಲಹೆ, ತಿವಿದು ಚುಚ್ಚುವ ನೋಟಗಳು, "ಇವಳಲ್ಲೇ ಏನೋ ತಪ್ಪಿರಬೇಕು" ಎಂಬ ಘನಾಂದಾರಿ ಮಾತುಗಳ ವಾಗ್ಬಾಣ- ಇವೆಲ್ಲವುಗಳನ್ನೂ ಎದುರಿಸಿಕೊಂಡು, ತುಸು ಧೈರ್ಯದಿಂದ ಆಕೆಯೇನಾದರೂ ಅಪ್ಪಿ ತಪ್ಪಿ ಕಾನೂನಿನ ಮೊರೆ ಹೋದಳೋ ಮುಗಿದೇ ಹೋಯಿತು. ಪ್ರತಿನಿತ್ಯ ಅಲ್ಲಿ ಅವಳ ಮಾನಹರಣ ನೆಡೆಯತೊಡಗುತ್ತದೆ. ಮಾಧ್ಯಮದವರಂತೂ ಆಕೆಗಾದ ಅನ್ಯಾಯವನ್ನು ಎತ್ತಿಹಿಡಿವ ಬದಲು ಆಕೆಯನ್ನು ಹೇಗೆ, ಎಲ್ಲಿ ಯಾವರೀತಿ ಬಲಾತ್ಕಾರಿಸಲಾತೆನ್ನುವುದನ್ನೇ ಪದೇ ಪದೇ ಹಾಕಿ ಅವಳನ್ನು ಕೊಂದೇ ಬಿಡುತ್ತಾರೆ. ಸಿಕ್ಕ ಸಾಕ್ಷಿಗಳನ್ನೇ ಹೆದರಿಸಿಯೋ ಇಲ್ಲಾ ಸತಾಯಿಸಿಯೋ, ಇಲ್ಲದ ಸಾಕ್ಷಿಗಳನ್ನು ಸೃಷ್ಟಿಸಿಯೋ ಕೋರ್ಟ್ ಕೊನೆಗೆ ಆರೋಪಿಯನ್ನು ನಿರಪರಾಧಿಯೆಂದು ಘೋಷಿಸಿ, ಇನ್ನೊಂದು ಮಾನಭಾಂಗಕ್ಕೇ ಅಲ್ಲೇ ನಾಂದಿ ಹಾಕಿಕೊಡುತ್ತದೆ. ಈಗೀಗ ಮುಗ್ಧ ಮಕ್ಕಳನ್ನೂ ಅಮಾನುಷವಾಗಿ ಬಲಾತ್ಕಾರಿಸುವುದು ತುಂಬಾ ಹೆಚ್ಚಳವಾಗುತ್ತಿದ್ದೆ. ನಮ್ಮಲ್ಲಿ ಅಮಾಯಕ ಮಕ್ಕಳ ಮುಗ್ಧತೆಯನ್ನು ಕೊಲ್ಲುವ ಪಾಖಂಡಿಗೂ ನೀಡುವ ಸಜೆ ಕೇವಲ ೭ ವರ್ಷಗಳು ಮಾತ್ರ!!! ಎಂತಹ (ಅ)ನ್ಯಾಯವಿದು?!!
ಉದಾಹರಣೆಗೆ ಅರುಣಾ ಶಾನಭಾಗ್ ಬಲಾತ್ಕಾರ ಪ್ರಕರಣ. ಈ ಒಂದು ಖೇದಕರ, ಅಮಾನುಷ ಘಟನೆ ನಮ್ಮ ಕಾನೂನಿನಲ್ಲಿರುವ ದೌರ್ಬಲ್ಯಕ್ಕೆ, ಅವ್ಯವಸ್ಥೆಗೆ ಕನ್ನಡಿ ಹಿಡಿವಂತಿದೆ.
೨೪-೨೫ ವರುಷಗಳ ಸುಂದರ ತರುಣಿ ಅರುಣ. ಸೇವಾ ಮನೋಭಾವ ಹೊಂದಿದ, ಗಟ್ಟಿಗಾರ್ತಿಯಾದ ಈ ಯುವತಿ ೧೯೬೬ರಲ್ಲಿ ಮುಂಬಯಿಯ ಕೆ.ಇ.ಎಂ ಆಸ್ಪತ್ರೆಗೆ ನರ್ಸ್ ಆಗಿ ಸೇರುತ್ತಾಳೆ. ತನ್ನ ಕಾರ್ಯದಕ್ಷತೆಯಿಂದ ಬಹುಬೇಗ ಎಲ್ಲರ ಸ್ನೇಹಗಳಿಸಿ ಹೆಸರು ಮಾಡುತ್ತಾಳೆ. ಅದೇ ಆಸ್ಪತ್ರೆಯ ಯುವ ಡಾಕ್ಟರ್ ಒಬ್ಬ ಆಕೆಯನ್ನು ಮೆಚ್ಚಲು, ಮದುವೆಯೂ ನಿಶ್ಚಯವಾಗುತ್ತದೆ. ೧೯೭೩ರ ಆಸುಪಾಸಿನಲ್ಲಿ ಆಕೆಯನ್ನು ನಾಯಿಗಳ ಆರೋಗ್ಯ ತಪಾಸಣೆಯ ವಾರ್ಡ್‌ಗೆ ಮುಖ್ಯಸ್ಥಳನ್ನಾಗಿ ನೇಮಿಸುತ್ತಾರೆ. ಅಲ್ಲಿಯೇ ಅರೆಕಾಲಿಕ ವಾರ್ಡ್‌ಬಾಯ್ ಆಗಿ ಸೇರುವ ಸೋಹನ್‌ಲಾಲ್ ವಾಲ್ಮೀಕಿಗೂ ಈಕೆಗೂ ಹಲವಾರು ಬಾರಿ ಜಟಾಪಟಿ ಆಗುತ್ತದೆ. ಆತನ ಮೈಗಳ್ಳತನ, ಕದಿಯುವ ಬುದ್ಧಿ, ಒರಟುತನಕ್ಕೆ ಬೇಸತ್ತ ಆಕೆ ಮೇಲಧಿಕಾರಿಗಳಿಗೆ ದೂರನ್ನು ಕೊಡುತ್ತಾಳೆ. ಹಾಗೆ ಆಕೆ ದೂರು ಕೊಟ್ಟದ್ದು ನವೆಂಬರ್ ೨೩ ೧೯೭೬ರಂದು. ಅಂದೇ ಅಕೆ ಹಲವರಲ್ಲಿ ತಾನು ಮದುವೆಯಾಗುತ್ತಿರುವುದಾಗಿಯೂ ಕೆಲದಿನಗಳ ರಜೆಯ ಮೇಲೆ ಹೋಗುತ್ತಿರುವುದಾಗಿಯೂ ಹೇಳುತ್ತಾಳೆ. ಇದನ್ನೆಲ್ಲಾ ಅರಿತ ಹುಂಬ, ರಾಕ್ಷಸೀ ಮನೋಭಾವದ ವಾಲ್ಮೀಕಿ ಅಂದೇ ಸಂಜೆ ಆಕೆ ನಾಯಿಗಳ ವಾರ್ಡನಲ್ಲಿ ಒಬ್ಬಂಟಿಗಳಾಗಿರುವುದನ್ನು ನೋಡಿ ನಾಯಿಗಳನ್ನು ಕಟ್ಟಿಹಾಕಲು ಬಳಸುವ ಸರಪಳಿಯಿಂದಲೇ ಅವಳ ಕುತ್ತಿಗೆಯನ್ನು ಬಿಗಿದು ಅಮಾನುಷವಾಗಿ ಬಲಾತ್ಕಾರಿಸಿ ಪರಾರಿಯಾಗುತ್ತಾನೆ. ಸರಪಳಿಯ ಬಿಗಿತದಿಂದಾಗಿ ಮೆದುಳಿಗೆ ಆಕ್ಸಿಜನ್ ಪೂರೈಕೆ ಸ್ಥಗಿತಕೊಂಡು ಆಕೆ ಅಲ್ಲೇ ಕೋಮಾಕ್ಕೆ ಹೋಗುತ್ತಾಳೆ. ಮರುದಿನ ಅವಳನ್ನು ಆ ಸ್ಥಿತಿಯಲ್ಲಿ ಕಂಡ ಇತರರು ಟ್ರೀಟ್ಮೆಂಟ್‌ಗಾಗಿ ತುರ್ತುನಿಗಾಘಟಕಕ್ಕೆ ಸೇರಿಸಿದರೂ ಪ್ರಯೋಜನವಾಗದೇ ಆಕೆ ಶಾಶ್ವತ ಕೋಮಾಕ್ಕೆ ಹೋಗುತ್ತಾಳೆ. ಆಗಿನಿಂದ ಈಗಿನವರೆಗು ಆಕೆ ಹಾಸಿಗೆಯನ್ನಷ್ಟೇ ಆಶ್ರಯಿಸಿ ಬದುಕುತ್ತಿದ್ದಾಳೆ, ಬದುಕಿಯೂ ಸತ್ತಂತಿದ್ದಾಳೆ. ಅವಳ ಮೆದುಳಿನ ಒಂದು ಭಾಗ ಮಾತ್ರ ಸ್ವಲ್ಪ ಜೀವಂತವಾಗಿದೆ. ಆ ಭಾಗ ಆಕೆಗಾಗುತ್ತಿರುವ ದೈಹಿಕ ನೋವನ್ನು ಗ್ರಹಿಸುತ್ತದೆ. ದೀರ್ಘಕಾಲದ ಅಸ್ವಸ್ಥತೆಯಿಂದ ಕೈ, ಕಾಲು, ಬೆನ್ನು ಇತ್ಯಾದಿಭಾಗಗಳ ಮೂಳೆಗಳು ಒಳಬಾಗ ತೊಡಗಿವೆ ಈಗ. ಅವುಗ ಮಾರ್ಪಡುವಿಕೆಯಿಂದಾಗಿ ಅಸಾಧ್ಯ ನೋವುಂಟಾಗುತ್ತದೆ. ಇದನ್ನು ಆ ಮೆದುಳಿನ ಭಾಗ ಗ್ರಹಿಸಿ, ಅರಿವಿಲ್ಲದಂತೆಯೇ ಚೀತ್ಕಾರ ಆಕೆಯಿಂದ ಆಗಾಗ ಬರುತ್ತದೆಯಂತೆ. ಕೇವಲ ಕೃತಕ ಉಸಿರಾಟದ ಮೂಲಕ ೩೬ ವರುಷಗಳಿಂದ ಒಂದು ಮರದ ಕೊರಡಿನಂತೇ ಬದುಕಿರುವ ಅರುಣಾಳ ಕರುಣಾಜನಕ ಕಥೆಗೆ ಪಿಂಕಿ ವಿರಾನಿ ಅನ್ನೋ ಪತ್ರಕರ್ತೆ ಪುಸ್ತಕರೂಪ ಕೊಟ್ಟಿದ್ದಾಳೆ. "Aruna's Story" ಅನ್ನೋ ಈ ಪುಸ್ತಕದ ರಾಯಲ್ಟಿಯಲ್ಲಿ ೫೦% ಅರುಣಾಳ ಶುಶ್ರೂಷೆಗೆ ಹೋಗುತ್ತಿದೆ. ಕೆ.ಇ.ಎಂ ನಲ್ಲಿ ಅವಳೊಂದಿಗೆ ಕೆಲಸಮಾಡುತ್ತಿದ್ದ ಸ್ನೇಹಿತರು ಈಗಲೂ ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ. ಮಾನಸಿಕವಾಗಿ ಸತ್ತಿರುವ ಕೇವಲ ದೈಹಿಕವಾಗಿ ಬದುಕಿರುವ ಆಕೆಗೆ ದಯಾಮರಣ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.ಆದರೆ ಇದೇ ಕಾನೂನು ಅರುಣಾಳ ಇಷ್ಟೆಲ್ಲಾ ಯಾತನೆಗೆ, ಹಿಂಸೆಗೆ ಕಾರಣೀಭೂತವಾದ ಸೋಹನ್‌ಲಾಲ್‌ಗೆ ನೀಡಿದ್ದು ಕೇವಲ ೭ ವರುಷ ಸಜೆ!!! ಮಾನಭಂಗಕ್ಕೆ ಒಳಗಾದ ಆಕೆಯ ಮನೆಯವರು ಹಾಗೂ ಅವಳ ಪ್ರಿಯಕರ ತಮಗೊದಗುವ ಅವಮಾನಕರ ಸನ್ನಿವೇಶವನ್ನು(?!) ತಪ್ಪಿಸಿಕೊಳ್ಳಲು ಸೋಹನ್‌ಲಾಲ್ ಕೇವಲ ಆಕೆಯನ್ನು ಘಾಸಿಗೊಳಿಸಿದ್ದಾನೆಂದೇ ಮೊದಲು ದೂರು ಧಾಖಲಿಸಿದ್ದಂತೆ. ಬಲಾತ್ಕಾರಕ್ಕೊಳಗಾದ ಬಗ್ಗೆ ಮೊದಲೇ ಪ್ರಕರಣ ದಾಖಲಿಸದೇ ಇದ್ದ ತಪ್ಪಿಗಾಗಿ ಸೋಹನ್‌ಲಾಲ್ ಕೇವಲ ದೈಹಿಕ ಹಲ್ಲೆಯ ಶಿಕ್ಷೆಗೆ ಮಾತ್ರ ಗುರಿಯಾದ! ಸೋಹನ್‌ಲಾಲ್ ಈಗ ನೆಮ್ಮದಿಯ ಬದುಕನ್ನು ಜೀವಿಸುತ್ತಿರಬಹುದು. ಅರುಣಾ ಮಾತ್ರ ಇಂದೂ ಪ್ರತಿನಿಮಿಷ ಸತ್ತು ಬದುಕುತ್ತಿದ್ದಾಳೆ! ಇಂತಹ ಕಾನೂನಿನಡಿಯಲ್ಲಿ ನಾವೆಷ್ಟು ಭದ್ರ?!!
ಒಂದು ವಿಶ್ವಾಸಾರ್ಹ ಮೂಲದ ಪ್ರಕಾರ ಅತ್ಯಾಚಾರ ಅಪರಾಧದಲ್ಲಿ ಭಾರತಕ್ಕೆ ಮೂರನೆಯ ಸ್ಥಾನ ಲಭಿಸಿದೆ! 2008 ರಲ್ಲಿ ನಡೆದ ಒಂದು ಸರ್ವೆಯ ಪ್ರಕಾರ, ಆ ಒಂದು ವರ್ಷದಲ್ಲಿ ಒಟ್ಟೂ 44,159 ವಿವಿಧ ರೀತಿಯ ಅತ್ಯಚಾರ ಪ್ರಕರಣಗಳು ದಾಖಲುಗೊಂಡಿವೆ. ಇನ್ನೊಂದು ಸರ್ವೆಯ ಪ್ರಕಾರ ನಮ್ಮಲ್ಲಿ 69 ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ ಒಂದು ಪ್ರಕರಣ ಮಾತ್ರ ಬೆಳಕಿಗೆ ಬರುವುದು. ಹಾಗೆ ಬೆಳಕಿಗೆ ಬಂದ ಪ್ರಕರಣಗಳಲ್ಲೂ ಕೇವಲ 20% ಅತ್ಯಾಚಾರಿಗಳಿಗೆ ಮಾತ್ರ ತಕ್ಕ ಶಿಕ್ಷೆ ಆಗುವುದು. ಅಂದರೆ ನಮ್ಮ ಕಾನೂನು ಎಷ್ಟು ನಿಕ್ಷಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ನಾವು ಇದರಿಂದಲೇ ತಿಳಿದುಕೊಳ್ಳಬಹುದು! ಇನ್ನೊಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ 50 ಮಹಿಳೆಯರಲ್ಲಿ ಐದು ಮಹಿಳೆಯರು ಈ ನೀಚ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ! ಬೆಂಗಳೂರು ನಗರ ಪೋಲೀಸರ ಪ್ರಕಾರ, ೨೦೦೯ರ ಜವನರಿಯಿಂದ ನವೆಂಬರ್ ತನಕ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಭ್ರೂಣ ಹತ್ಯೆ ಸೇರಿದಂತೆ ಒಟ್ಟು 1395 ಪ್ರಕರಣಗಳು ಮಹಿಳೆಯರ ವಿರುದ್ಧ ನಡೆದಿವೆ. ಅದರಲ್ಲೂ ೫೭ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ೪೭ ಮಂದಿ ವರದಕ್ಷಿಣೆ ಕಿರುಕೊಳದಿಂದ ಸಾವಿಗೆ ಶರಣಾಗಿದ್ದಾರೆ.
ಇದು ನಮ್ಮ ದೇಶದ ಕಾನೂನಿನ ದೌರ್ಭಾಗ್ಯ. ಇಲ್ಲಿ ಪಾತಕಿಗಳು ಬಹು ಸುಲಭವಾಗಿ ಪರಾಗಬಹುದು. ಈ ಒಂದು ಕುಕೃತ್ಯಕ್ಕೆ ಮಹಿಳೆಯರು ಮಾತ್ರವಲ್ಲದೇ 6 ತಿಂಗಳ ಹಸುಳೆಯಿಂದ ಹಿಡಿದು, 70 ವರ್ಷದ ವೃದ್ಧೆಯವರೆಗೂ ಬಲಿಯಾಗುತ್ತಿರುವುದು ಮನುಷ್ಯನೊಳಗೆ ಹೆಚ್ಚುತ್ತಿರುವ ಪಾಶವೀ ಮನಃಸ್ಥಿತೆ ಹಿಡಿವ ಕನ್ನಡಿಯಾಗಿದೆ. ಇಂತಹ ಒಂದು ಮಹಾಪರಾಧವನ್ನು ನಮ್ಮ ಸಮಾಜ ಹಾಗೂ ಕಾನೂನು ಎರಡೂ ತುಂಬಾ ಹಗುರವಾಗಿ ತೆಗೆದುಕೊಂಡಿರುವುದೇ ಈ ಅಪರಾಧದ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ ಎಂದರೆ ಖಂಡಿತ ತಪ್ಪಾಗದು. ಸಮಾಜದೊಳಗೆ ಯಾವುದೇ ರೀತಿಯ ಅಪರಾಧ ಕಡಿಮೆಯಗಲು ಅದಕ್ಕಿರುವ ಸಜೆ ಕಠಿಣವಾಗಿರಬೇಕು. ಕ್ಷಿಪ್ರವಾಗಿರಬೇಕು. ಆಗಲೇ ಅಪರಾಧಿ ಆ ಕೃತ್ಯವೆಸಗಲು ಹೆದರುತ್ತಾನೆ. ಆದರೆ ಇಲ್ಲಿ ಬಲಾತ್ಕಾರವೆಂದರೆ ನೀರುಕುಡಿದಷ್ಟೇ ಸುಲಭವೆಂದಾಗಿದೆ. ಹಾಗಾಗಿಯೇ ಭಾರತದಲ್ಲಿಂದು ಈ ಒಂದು ಅಮಾನವೀಯ ಕೃತ್ಯ ಎಲ್ಲೆಂದರಲ್ಲಿ, ಹಗಲಿರಲಿ, ರಾತ್ರಿಯಿರಲಿ, ಮನೆಯೊಳಗಿರಲಿ, ಹೊರಗಿರಲಿ ಎಗ್ಗಿಲ್ಲದೇ, ನಿರ್ಭಯದಿಂದ ನಡೆಯುತ್ತಿದೆ. ನರರೂಪಿ ರಾಕ್ಷಸರು ಆರಮಾಗಿ ಅಲೆದಾಡುತ್ತಲೇ ಇದ್ದಾರೆ.
ಆದರೆ ಯು.ಎಸ್.ಎ. ಹಾಗೂ ಇನ್ನಿತರ ಪಾಶ್ಚಾತ್ಯ ದೇಶಗಳಲ್ಲಿ ಕಾನೂನು ಇಷ್ಟೊಂದು ಸಡಿಲವಾಗಿಲ್ಲ. ನಮ್ಮ ಸಮಾಜದಂತೆ, ಅಲ್ಲಿಯ ಸಮಾಜ ಈ ಕೃತ್ಯಕ್ಕೆ ಒಳಗಾದವರನ್ನು ಒಂದು "ಎಲಿಯನ್" ಹಾಗೆ ನೋಡದೇ ತುಂಬಾ ಆತ್ಮೀಯವಾಗಿ ಕಾಣುತ್ತದೆ. ಮಾನಸಿಕ ಬೆಂಬಲ ತುಂಬಾ ಉತ್ತಮವಾಗಿ ದೊರಕುತ್ತದೆ. ಒಂದೊಮ್ಮೆ ಸರಿಯಾದ ನ್ಯಾಯ ಸಿಗದಿದ್ದರೂ ಸಾಂತ್ವನವಾದರೂ ದೊರಕುತ್ತದೆ. ಹಾಗಾಗಿಯೇ ತನಗುಂಟಾದ ಆಘಾತದಿಂದ ವ್ಯಕ್ತಿ ಆದಷ್ಟು ಬೇಗ ಹೊರಬರಲು ಸಹಕಾರಿಯಾಗುತ್ತದೆ. ಅಲ್ಲಿಯ ಕಾನೂನು ತೀರ್ಪುಕೊಡುವ ಅಧಿಕಾರವನ್ನು ಸಾರ್ವಜನಿಕಗೊಳಿಸಿದೆ. ಎರಡೂ ಕಡೆಯ ವಕೀಲರು ಒಟ್ಟು ಸೇರಿ ತಮಗೆ ಪರಿಚಯವಿಲ್ಲದ ಕೆಲವು ಸಾರ್ವಜನಿಕ ಉತ್ತಮ ಜನರನ್ನು ಜ್ಯೂರಿಗಳನ್ನಾಗಿ ನೇಮಿಸುತ್ತಾರೆ. ಈ ಜ್ಯೂರಿಗಳು ಯಾರೂ ಆಗಬಹುದು. ಸಾಮಾನ್ಯ ಗೃಹಿಣಿಯಿಂದ ಹಿಡಿದು ದೊಡ್ಡ ವ್ಯಕ್ತಿಯೂ ಆಗಿರಬಹುದು. ಹಾಗೆ ಆಯ್ದ ವ್ಯಕ್ತಿಗಳು ಪ್ರತಿ ಟ್ರಯಲ್‌ಗಳಿಗೂ ಹಾಜರಿರಬೇಕಾಗುತ್ತದೆ. ತದನಂತರ ಅವರೇ ಒಮ್ಮತದ ಒಂದು ತೀರ್ಪನ್ನು ನೀಡುತ್ತಾರೆ. ಈ ರೀತಿಯ ವ್ಯವಸ್ಥೆ ಇಲ್ಲಿಯೂ ಬಂದರೆ ತುಂಬಾ ಉತ್ತಮವಿತ್ತು. ಅಲ್ಲಿ ಬಲಾತ್ಕಾರಿಗೆ ಕನಿಷ್ಠ ಎಂದರೂ ಸುಮಾರು ೩೦-೪೦ ವರ್ಷಗಳ ಸಜೆಯಿದೆಯಂತೆ. ಹಲ್ಲೆಗೊಳಗಾಗಿ ವ್ಯಕ್ತಿ ಮೃತಪಟ್ಟರೆ ಜೀವಾವಧಿ ಶಿಕ್ಷೆಯಂತೆ. ಅಲ್ಲಿ ಜೀವಾವಧಿ ಎಂದರೆ ಸಾಯುವ ತನಕವೂ ಆತ ಜೈಲಿನಲ್ಲೇ ಕೊಳೆಯಬೇಕು.
ಆದರೆ ಭಾರತದಲ್ಲಿ ಜೀವಾವಧಿ ಶಿಕ್ಷೆ ಎಂದರೆ ಕೇವಲ ೧೪ ವರ್ಷಗಳು ಮಾತ್ರ. ಆತನದು ಎಷ್ಟೇ ದೊಡ್ಡ ಅಪರಾಧವಾಗಿದ್ದರೂ ೧೪ ವರುಷಗಳ ಸಜೆಯ ನಂತರ ಅವನು ಬಿಡುಗಡೆಗೊಳ್ಳುತ್ತಾನೆ! ಇದನ್ನು ನೋಡಿದರೆ ಅರುಣಾಳ ಅಪರಾಧಿಗೆ ಒಂದೊಮ್ಮೆ ಜೀವಾವಧಿ ಶಿಕ್ಷೆ ಆಗಿದ್ದರೂ ಆತ ಮುಕ್ತನಾಗಿ ಈಗ ೨೪ ವರ್ಷಗಳಾಗಿರುತ್ತಿತ್ತು. ಆದರೆ ಅವಳು ೩೬ ವರ್ಷಗಳಿಂದಲೂ ಶಿಕ್ಷೆಯನ್ನನುಭವಿಸುತ್ತಲೇ ಇದ್ದಾಳೆ. ಕೆಲವು ರಾಜಕಾರಣಿಗಳು, ವಕೀಲರು ಅತ್ಯಾಚಾರದಂತಹ ಮಹಾಪರಾಧಕ್ಕೆ ಗಲ್ಲು ಶಿಕ್ಷೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಇದಕ್ಕೆ ಹಲವಾರು ಬುದ್ಧಿಜೀವಿಗಳು, ಹ್ಯೂಮನ್‌ರೈಟ್ಸ್ ಅವರು ತಡೆ ಹಾಕುತ್ತಿದ್ದಾರೆ. ಮನುಷ್ಯನನ್ನು ಮಾನಸಿಕವಾಗಿ ನಿಷ್ಕ್ರಿಯಗೊಳಿಸಿ ಆಜೀವ ಸಜೆಯಲ್ಲಿ ನೂಕುವ ಬಲಾತ್ಕಾರಕ್ಕೆ ಹಾಗೂ ಅದನ್ನೆಸಗುವ ಆ ಪಾಪಿಗೆ ಯಾಕಿಷ್ಟು ಬೆಂಬಲ ಹಾಗೂ ಕರುಣೆ? ಮಾನವತೆ ಪದದ ಅರ್ಥವೇ ಇವರಿಗೆ ಗೊತ್ತಿಲ್ಲವೇ? ಇಂತಹ ಪ್ರಕರಣಗಳಿಗೆ ಸಾಕ್ಷಿಯನ್ನು ಒದಗಿಸಲು ಅಸಮರ್ಥವಾದರೆ ಆ ಕೃತ್ಯವೇ ನಡೆದಿಲ್ಲವೆಂದು ಕೋರ್ಟ್ ಕಣ್ಮುಚ್ಚಿ ಕೂರಬಹುದು. ಆದರೆ ಅದನ್ನು ಅನುಭವಿಸಿ ಬದುಕುತ್ತಿರುವವರ ಪಾಡು ಏನಾಗಬೇಡ?

ಕೊಲೆಯಾದರೆ ಜೀವ ಒಂದೇಸಲ ಹೋಗಿ ಮುಕ್ತನಾಗುತ್ತಾನೆ ಮನುಷ್ಯ. ಆದರೆ ಬಲಾತ್ಕಾರಕ್ಕೊಳಗಾದ ವ್ಯಕ್ತಿಯ ಬದುಕು ಮಾತ್ರ ಆ ನೋವು, ಅವಮಾನ, ಹಿಂಸೆ, ಆಘಾತದಿಂದ ಎಂದೂ ಮುಕ್ತವಾಗದು. ಅತ್ತ ಸಾಯಲೂ ಆಗದೇ ಇತ್ತ ಬದುಕಲೇ ಆಗದೆ ನರಳುತ್ತಿರುತ್ತಾಳೆ ಆಕೆ. ಅಂತಹವಳ ಮುಂದೆ ಅವಳ ಅಪರಾಧಿಯನ್ನು ನಿರಪರಾಧಿಯೆಂದು ಘೋಷಿಸಿ ಹೊರಬಿಡುತ್ತದೆ ಕಾನೂನು. ಆದ ತಪ್ಪನ್ನು ಮರೆತು ಬಿಡು, "ಎಲ್ಲಾ ಮಾಮೂಲು, ಮುಂದೆ ನಡಿ" ಎಂದು ಬಿಟ್ಟಿ ಸಲಹೆಯನ್ನೋ, "ಎಲ್ಲೋ ನಿಂದೇ ತಪ್ಪು, ಒಂಟಿಯಾಗಿ ಹೆಣ್ಣು ತಿರುಗಬಾರದೆಂದು ಗೊತ್ತಿಲ್ಲವೇ?" ಎಂಬ ಮಾತಿನ ಬರೆಯನ್ನೋ, "ಹೀಗೆ ಬದುಕುವುದಕ್ಕಿಂತ ಸಾವು ಮೇಲು" ಎಂಬ ತನ್ನದೇ ಘನ ತೀರ್ಮಾನವನ್ನು ನೀಡುವ ಸಮಾಜ, ಎಂದೂ ಮರೆಯಲಾಗದ ಕಹಿ ನೆನಪನ್ನು ಆಕೆಯೊಂದಿಗೆ ಬಿಟ್ಟು, ಆ ಕೃತ್ಯವನ್ನೆಸಗಿದ ವ್ಯಕ್ತಿಯನ್ನೂ ಮರೆತುಬಿಡುತ್ತದೆ.
ಅರುಣಾಳಂತಹ ಅಸಂಖ್ಯಾತ ಅಭಾಗಿನಿಯರು ನ್ಯಾಯಕ್ಕಾಗಿ ನಮ್ಮ ಬೆಂಬಲಕ್ಕಾಗಿ ಕಾಯುತ್ತಲೇ ಇದ್ದಾರೆ. ನಮ್ಮಿಂದ ಈ ತುಕ್ಕು ಹಿಡಿದ ಕಾನೂನನ್ನು ಬಹು ಬೇಗ ಬದಲಿಸಲಾಗದು. ಆದರೆ ಪ್ರಯತ್ನವಿಲ್ಲದೇ ಫಲವಿಲ್ಲ. ಅದೇ ರೀತಿ ಈ ರೀತಿಯ ಘಟನೆ ನಡೆದಾಗ ಹೇಗಾಯಿತು? ಏನಾಯಿತು? ಎಂದೆಲ್ಲಾ ಹಿಂಸಿಸದೇ ಮುಂದೇನಾಗಬೇಕು? ಯಾವ ರೀತಿ ಸಮಾಧಾನ, ಮಾನಸಿಕ ಶಾಂತಿ ಆಕೆಗೆ ನೀಡಬಹುದು ಎಂಬ ನಿಟ್ಟಿನಲ್ಲಿ ನಾವು ಯೋಚಿಸುವಂತಾದರೆ ಅಷ್ಟೇ ಸಾಕು.
ಅರ್ಧರಾತ್ರಿಯಲ್ಲಿ ಮಹಿಳೆ ನಿರ್ಭಯಳಾಗಿ ಓಡಾಡುವ ಸ್ವಾತಂತ್ರ ಕನಸೇ ಸರಿ. ನಡು ಮಧ್ಯಾಹ್ನವಾದರೂ ಆಕೆ ಒಬ್ಬಂಟಿಯಾಗಿ ಯಾರ ಭಯವಿಲ್ಲದೇ ಎಲ್ಲಿ ಬೇಕಾದರೂ ಓಡಾಡುವಂತೆ ಆದರೆ ಅಷ್ಟೇ ಸಾಕು!!
.............
@ ಹೊಸ ದಿಗಂತ ಪತ್ರಿಕೆಯ ಧರಿತ್ರಿ ಪುರವಣಿಯಲ್ಲಿ ಪ್ರಕಟಿತ ಲೇಖನ.
ಚಿತ್ರ ಕೃಪೆ : ಗೂಗಲ್
- ತೇಜಸ್ವಿನಿ.

******************

ಹೊಸ ವರುಷ ಹಳೆಯ ವರುಷದಲ್ಲಿ ನೋವುಂಡ ಮನಸುಗಳಿಗೆಲ್ಲಾ ನವ ಚೈತನ್ಯವನ್ನೂ ಹೊಸ ಹುರುಪನ್ನೂ ತುಂಬಿ ಹೊಸ ಹರುಷ ತರುವಂತಾಗಲೆಂದು ಹಾರೈಸುವೆ.

೨೦೧೦ ಎಲ್ಲರಿಗೂ ಶುಭದಾಯಕವಾಗಲೆಂದು ಶುಭಕೋರುವೆ.

- ತೇಜಸ್ವಿನಿ ಮಾನಸ ಹೆಗಡೆ

ಗುರುವಾರ, ಡಿಸೆಂಬರ್ 3, 2009

ಕೊಳೆಯದಿರಲಿ..ನನ್ನೆದೆಯ ಫಸಲು...

ಗಾಢ ನೀಲ ಬಣ್ಣವನು ತುಂಬಿ
ಕರಿಮೋಡದ ಭಾರ ಹೊತ್ತ,
ಅಯೋಮಯ ಭಾವವೊಂದು
ಆವರಿಸುತಿದೆ ನನ್ನೊಳಗೆ

ಎಲ್ಲಿಂದ ಬಂತೋ ನಾ ಕಾಣೆ
ಇಲ್ಲೇ ಮನೆ ಮಾಡಿಕೊಂಡು
ಈಗಲೋ ಆಗಲೋ,
ಸುರಿಯುವಂತಿದೆ...
ನನ್ನೆದೆಯ ಫಸಲನ್ನೇ
ಕೊಳೆಸುವಂತಿದೆ...

ಬಯಸಿದ್ದೆ ತಿಳಿ ನೀಲಿ ಬಣ್ಣವ
ಹೋಗಲಿ ಬೇಡ, ಸಿಗಬಾರದೇ
ಬಿಳಿ ಬಣ್ಣವಾದರೂ?

ಬಿಳಿಯೊಳಗೆ ಬೇಕಾದ ರಂಗು ತುಂಬಿ,
ಸಪ್ತವರ್ಣವನ್ನೇ ಕಾಣಿಸುತ್ತಿದ್ದೆ
ಫಸಲಿಂದ ಹೊಸ ಬೀಜವ ಹೆಕ್ಕಿ
ಹೊಸ ಪೈರ ಬೆಳೆಯುತ್ತಿದ್ದೆ.

ಬೇಡವೆಂದರೂ ಬಂದಿದೆ
ಗಾಢ ನೀಲಿಯ ವೇಷ ಧರಿಸಿ,
ಮಳೆಮೋಡದ ಮುಸುಕು ಹಾಕಿ

ಬರಲಿ ಬಿಡಿ, ಈಗಿಲ್ಲ ಚಿಂತೆ...
ಹಾಕಿರುವೆ ಬಿಳಿಯ ಟರ್ಪಾಲು
ನನ್ನೆದೆಯ ಫಸಲ ಮೇಲೆ
ಬಿದ್ದರೆ ಹೇಳಿ ಈಗ
ಹನಿ ನೀರು!!