ಬುಧವಾರ, ಅಕ್ಟೋಬರ್ 14, 2015

ಅಸತ್ಯದ ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ ‘ನನ್ನಿ’


ಕಾರಣಾಂತರಗಳಿಂದಾಗಿ ನಾನು ನನ್ನ ಹೈಸ್ಕೂಲ್‌ಅನ್ನು (೮, ೯ ಮತ್ತು ೧೦ನೆಯ ತರಗತಿ) ಓದಿದ್ದು ಕ್ರಿಶ್ಚನ್ ಸಂಸ್ಥೆಯೊಂದರಲ್ಲಿಯೇ. ಮೊತ್ತ ಮೊದಲಬಾರಿ ನನ್ನದಲ್ಲದ ಧರ್ಮವೊಂದರ ಪರಿಚಯವಾಗಿದ್ದು ಅಲ್ಲಿಯೇ ನನಗೆ. ನಾನು ಅಲ್ಲಿ ಯಾವ ಪೂರ್ವಾಗ್ರಹಗಳಿಲ್ಲದೇ ಬೆರೆತದ್ದು, ಕಲಿತದ್ದು, ನಲಿದದ್ದು. ನನ್ನ ಹೆತ್ತವರು ಯಾವುದನ್ನೂ, ಯಾವತ್ತೂ ತಲೆಗೆ ತುಂಬಿಸಿರಲೂ ಇಲ್ಲ. ಮೂರುವರುಷಗಳಲ್ಲಿ ನಾನು ಅಲ್ಲಿಂದ ಪಡೆದದ್ದು ಅಸಂಖ್ಯಾತ! ಪ್ರತಿ ದಿವಸ ಪ್ರಾರ್ಥನೆಗೆ ಹಾಡುತ್ತಿದ್ದ ‘ಅಗಣಿತ ತಾರಾಗಣಗಳ ನಡುವೆ..’ ಹಾಡನ್ನು ಇಂದೂ ಗುನುಗುತ್ತಿರುತ್ತೇನೆ. ಆ ದಿನಗಳು ನಿಸ್ಸಂಶಯವಾಗಿಯೂ ಮಧುರ ನೆನಪುಗಳಿಂದ ತುಂಬಿದ ನನ್ನ ಅವಿಸ್ಮರಣೀಯ ಕಾಲಘಟ್ಟವಾಗಿವೆ. ಕಿನ್ನಿಗೋಳಿಯ ಲಿಟ್ಲ್‌ಫ್ಲವರ್ ಹೈಸ್ಕೂಲ್ ನನಗೆ ನನ್ನನ್ನು ಪರಿಚಯಿಸಿದ, ನನ್ನೊಳಗೆ ಚಿಗುರುತ್ತಿದ್ದ ಪ್ರತಿಭೆಯನ್ನು ಗುರುತಿಸಿದ ತಾಣ. ಸತ್ಯಕ್ಕೆ ಯಾವ ಬಣ್ಣವೂ ಇಲ್ಲವೆಂಬುದನ್ನು ಇಂದು ನನಗೆ ಮನಗಾಣಿಸಲು ಕಾರಣವಾದ ಜಾಗವೂ ಹೌದು. ಹಾಗಾಗಿ ನನಗೆ ಕಲಿಸಿದ ಅಲ್ಲಿಯ ಎಲ್ಲಾ ಸಿಸ್ಟರ್ಸ್‌ಗಳಿಗೂ ನಾನು ಸದಾ ಚಿರ ಋಣಿ. ಗುರುಭ್ಯೋ ನಮಃ ಎಂದೇ ಅಕ್ಷರ ತಿದ್ದಿಸಿದ ನನ್ನ ಅಪ್ಪನ ಬುನಾದಿಯಡಿ ನನ್ನ ಬಾಲ್ಯ, ಹದಿವಯಸ್ಸು ಅರಳಿದ್ದೂ ಇದಕ್ಕೆ ಕಾರಣವೆನ್ನಬಹುದು. 

ಈ ರೀತಿಯ ನನ್ನ ಪೀಠಿಕೆಗೆ ಒಂದು ಬಲವಾದ ಕಾರಣವಿದೆ. ‘ನನ್ನಿ’ ಎಂದರೆ ನನ್ ಓರ್ವಳ ಸತ್ಯಾನ್ವೇಷಣೆಯ ಕಥೆ ಎಂಬುದಷ್ಟೇ ನನಗೆ ಗೊತ್ತಿದ್ದುದು ಓದುವ ಮೊದಲು. ನಾನು ಹೈಸ್ಕೂಲ್ ಕಲಿತ ನನ್ನ ಶಾಲೆ, ಸಿಸ್ಟರ್ಸ್‌ಗಳೊಂದಿಗೆ ಒಡನಾಡಿದ್ದು, ಅಲ್ಲಿಯ ಆಶ್ರಮದಲ್ಲಿ ಓದುತ್ತಿದ್ದ ಕ್ರಿಶ್ಚನ್ ಗೆಳತಿಯರ ಒಳಗುದಿಯನ್ನು, ಅನಿಸಿಕೆಗಳನ್ನು ಕೇಳಿದ್ದು ಎಲ್ಲವೂ ಗಟ್ಟಿಯಾಗಿ ಇನ್ನೂ ಸ್ಮೃತಿಯಲ್ಲಿ ಉಳಿದುಕೊಂಡಿವೆ.. ಆಗಾಗ ನೆನಪಾಗಿ ನನ್ನ ಮತ್ತೆ ಗತಕಾಲಕ್ಕೆಳೆಯುತ್ತಿರುತ್ತವೆ. ಆ ದಿನಗಳ ನನ್ನ ಅನುಭವವೇ ಇಂದು ಈ ಕೃತಿಯನ್ನು ಮತ್ತಷ್ಟು ಆಪ್ತವಾಗಿ ಓದಿಸಿಕೊಳ್ಳಲು, ತೀರ ಭಿನ್ನವಲ್ಲದ ಪರಿಸರದೊಳಗೆ (ಕಾದಂಬರಿಯಲ್ಲಿ ಬರುವ) ನನ್ನನ್ನು ಸಮೀಕರಿಸಿಕೊಂಡು, ಹೆಚ್ಚು ತಾದಾತ್ಮ್ಯತೆಯಿಂದ ಒಳಗೆಳೆದುಕೊಳ್ಳಲು ಸಾಧ್ಯವಾಯಿತು ಎನ್ನಬಹುದು. ಅಂತೆಯೇ ಓದಲು ತೆಗೆದುಕೊಂಡಾಗಲೂ, ಓದುವಾಗಲೂ ಯಾವುದೇ ಪೂರ್ವಾಗ್ರಹವಿಲ್ಲದೇ ಓದಿದ್ದೇನೆ.. ವಿಶ್ಲೇಷಿಸಿದ್ದೇನೆ.. ಗಂಟೆಗಟ್ಟಲೇ ಚಿಂತಿಸಿದ್ದೇನೆ ಮತ್ತು ಸಂಶಯವಿದ್ದ ವಿಷಯಗಳ ಗುರುತು ಹಾಕಿಕೊಂಡು, ಕಾದಂಬರಿಯನ್ನೋದಿ ಮುಗಿಸಿದ ಮೇಲೆ, ಲೇಖಕರ ಪರಿಚಯ ಮಾಡಿಕೊಂಡು ಅವರೊಂದಿಗೇ ಖುದ್ದಾ ನನ್ನ ಸಂದೇಹಗಳನ್ನು ಕೇಳಿ ನಿವಾರಿಸಿಕೊಂಡಿದ್ದೇನೆ. ಇದು ಹಾಗೇ.. ಇದು ಹೀಗೇ.. ಇದು ಅದೇ... ಎಂಬೆಲ್ಲಾ ಸ್ವಯಂ ನಿರ್ಧಾರಕ್ಕೆ ಬರದೇ ಪರಾಮರ್ಶಿಸಿ ಅರಿಯಲು, ತಿಳಿಯಲು ಯತ್ನಿಸಿದ್ದು. ಹಾಗಾಗಿ ಅಷ್ಟೇ ವಸ್ತುನಿಷ್ಠವಾಗಿ ಈ ಪುಟ್ಟ ವಿಮರ್ಶೆಯನ್ನೂ ಬರೆಯಲು ಪ್ರಯತ್ನಿಸುತ್ತಿದ್ದೇನೆ. 

ಮೊದಲು ಕಥೆಯ ಸ್ಥೂಲ ಚಿತ್ರಣ : ‘ಸಿಸ್ಟರ್ ರೋಣಾ’ಳಿಂದ ಆರಂಭವಾಗುವ ಕಥೆ ‘ರೋಣಾ’ಳೊಂದಿಗೆ ಕೊನೆಯಾಗುವುದು. ರೋಣಾಳಿಂದ ಸಿಸ್ಟರ್ ರೋಣಾಳಾಗುವ ಪ್ರಕ್ರಿಯೆ... ಅದಕ್ಕಿರುವ ಹಿನ್ನಲೆ... ಆನಂತರ ಆಕೆ ಸ್ವಯಂ ವಿಮರ್ಶೆಗೆ, ವಿಶ್ಲೇಷಣೆಗೆ ಹೊರಟು, ಅಚಾನಕ್ಕಾಗಿ ಸಿಗುವ ಯುರೋಪ್ ಲೇಖಕ ಎಡಿನ್ ಬರ್ಗ್‌ನ ಪುಸ್ತಕಗಳ ಪ್ರಭಾವಕ್ಕೆ ಸಿಲುಕಿ ಸತ್ಯಾನ್ವೇಷಣೆಗೆ ಹೊರಟು.. ಆ ಪಥದಲ್ಲಿ ತನ್ನ ಸಹಜ ಗುಣ ಧರ್ಮದಿಂದ ಅದೇ ಸತ್ಯ ಅವಳನ್ನು ಸುಟ್ಟು, ಘಾಸಿಗೊಳಿಸಿ, ತಪದಲ್ಲಿ ಬೆಂದು ಬೆಳಗುವ ಚಿನ್ನದಂತೇ ಆಕೆ ಮತ್ತೆ ಎಲ್ಲಾ ಕಳಚಿ ರೋಣಳಾಗುವ ಕಥೆ. ಈ ಕಥೆ ಆರಂಭದಿದ್ದ, ಅಂತ್ಯದವರೆಗೂ ಬರುವ ಮತ್ತೊಂದು ಪಾತ್ರವಿದೆ. ಮೊದ ಮೊದಲು ಆ ಪಾತ್ರವೇ ಪ್ರಧಾನ ಪಾತ್ರವೆಂಬಂತೇ ಭಾಸವಾಗುವ.. ಕಥೆಯುದ್ದಕ್ಕೂ ಸುಳ್ಳಿಗೂ, ಸತ್ಯಕ್ಕೂ ಇರುವ ಅಂತರ ಅಂದರೆ ಬ್ಲಾಕ್ ಆಂಡ್ ವೈಟ್‌ಅನ್ನು ಸ್ಪಷ್ಟವಾಗಿ ಓದುಗರಿಗೆ ಕಾಣಿಸುವಂಥ ಪಾತ್ರ! ಅದೇ ಮದರ್ ಎಲಿಸಾರದ್ದು. ಈ ಮೂರು ಪ್ರಮುಖ ಪಾತ್ರಗಳಲ್ಲದೇ ಇನ್ನೂ ಹಲವು ಪಾತ್ರಗಳು ತಮಗೊದಗಿಸುವ ಅತ್ಯಗತ್ಯ ಕಾರ್ಯವನ್ನು ಮಾಡಿ, ತಮ್ಮ ತಮ್ಮ ಕೆಲಸದಾನಂತರ ಸತ್ಯಾನ್ವೇಷಣೆಗೆ ರೋಣಾಳನ್ನು ಇನ್ನಷ್ಟು ಉತ್ತೇಜಿಸಿ ಮಾಯವಾಗುತ್ತವೆ. (ಅತಿ ಕ್ಲುಪ್ತವಾಗಷ್ಟೇ ಕಥೆ ಹೇಳುತ್ತಿದ್ದೇನೆ. ಪೂರ್ತಿ ತಿಳಿಯಲು ‘ನನ್ನಿ’ಯ ಓದೊಂದೇ ದಾರಿ.)

ನನ್ನ ಪ್ರಕಾರ ಪ್ರತಿ ಕಾದಂಬರಿಯ ಒಂದೊಂದು ಪಾತ್ರವೂ ಆ ಕಾದಂಬರಿಯ ಜೀವಂತಿಕೆಯೇ ಆಗಿರುತ್ತದೆ. ಹೀಗಾಗಿ, ಆಯಾ ಕಾದಂಬರಿಯು ಅದರ ಓದುಗ ಓದುವಷ್ಟು ಹೊತ್ತೂ ಕಣ್ಮುಂದೆ ನಡೆವ ಒಂದು ತುಂಬು ಜೀವನವೆನಿಸಿಕೊಂಡು ಬಿಡುತ್ತದೆ. ನನ್ನಿಯ ಕೆಲವು ಓದುಗರಿಗೆ ಮದರ್ ಎಲಿಸಾರೋ, ‘ಸಿ.ರೋಣಾಳೊ’ ಅಥವಾ ಕೇವಲ ರೋಣಾಳೋ, ಮಿಲ್ಟನ್ ಫಾಬ್ರಿಗಾಸ್‌ನೋ, ತೇಗೂರಿನ ರಾಯಪ್ಪನೋ ಕಾದಂಬರಿಯ ಜೀವಾಳದಂತೇ, ಪ್ರಮುಖ ಪಾತ್ರ ಅಂದರೆ ಹೀರೋ/ಸೆಂಟರ್ ಎಂದು ಅನಿಸಿರಬಹುದು. ಆದರೆ ನನಗೆ ಮಾತ್ರ ‘ನನ್ನಿ’ ಕಾದಂಬರಿಯ ಜೀವನದೊಳಗಿನ ಸೆಂಟರ್ ಆಫ್ ಅಟ್ರಾಕ್ಷನ್, ಪ್ರಮುಖ ಪಾತ್ರಧಾರಿ ಎಂದೆನಿಸಿಕೊಂಡವ ಎರಿಕ್ ಬರ್ಗ್‌ನೇ. ಎರಿಕ್ ಯುರೋಪಿನಲ್ಲೆಲ್ಲೋ ಇರುವವನೆಂದು ಹೇಳುವ ಈ ಕಾದಂಬರಿ, ಅವನ ಮೂಲಕ ಹೇಳಿಸುವ ಕಟು ವಾಸ್ತಿವಿಕತೆಯನ್ನು ಬಿಚ್ಚಿ, ಎಳೆಯೆಳೆಯಾಗಿ ಹರವಿ, ಬೆಚ್ಚಿ ಬೀಳುವಂತಹ ಸತ್ಯ ಶೋಧನೆಯನ್ನು ಮಾಡಿಸುತ್ತದೆ. ಎರಿಕ್ ಬರೆದಿದ್ದು ಎನ್ನಲ್ಲಾಗುವ "ಸತ್ಯ ದಯೆ ಮತ್ತು ಸೇವೆ" ಹಾಗೂ "ಮಾನವ ಜಗತ್ತಿನ ಅಪಮೌಲ್ಯಗಳು" ಎಂಬೆರೆಡು ಪುಸ್ತಕಗಳೊಳಗಿನ ವಾಸ್ತವಿಕ ಅಂಶಗಳ ಮಂಥನದಿಂದ ಹೊರ ಬರುವ ಕಟು ಸತ್ಯಗಳು ಓದುಗರಿಗೆ ಜೀರ್ಣಿಸಿಕೊಳ್ಳಲು ತುಸು ತ್ರಾಸದಾಯಕವೂ ಆಗುವುದು. ಆ ನಿಟ್ಟಿನಲ್ಲಿ ಆಮೂಲಾಗ್ರವಾಗಿ ಇಂತಹ ಒಂದು ಸತ್ಯ ಶೋಧನೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟ ಕರಣಂ ಪವನ್ ಪ್ರಸಾದ್ ಅವರ ಈ ಅಪೂರ್ವ ಪುಸ್ತಕ ‘ನನ್ನಿ’ ಎಂದರೆ ಖಂಡಿತ ಉತ್ಪ್ರೇಕ್ಷೆಯೆನಿಸದು.

ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲೊಂದಾದ ಎರಿಕ್ ಬರ್ಗ್ ಎಂಬ ಯುರೋಪಿಯನ್ ಸತ್ಯಶೋಧಕನಷ್ಟೇ ನನ್ನ ಕಾಡಿದ ಪಾತ್ರವೆಂದರೆ, ತೇಗೂರಿನ ರಾಯಪ್ಪ. ಕ್ರಿಶ್ಚನ್ ವಳಿಗನಾಗಿ ಬಾಳಿದ, ಬದುಕಲು ಹೆಣಗಾಡಿದ, ತಾ ಸಾಯುತ್ತಲೇ ತನ್ನ ಪೋಲಿಯೋ ಪೀಡಿತ ಮಗಳಿಗಾಗಿ ದುಡಿದು ದಣಿದ, ಆತನ ಆ ಬೆಚ್ಚಿ ಬೀಳಿಸುವ ಕೊನೆಯ ಎಣಿಸುವಾಗೆಲ್ಲಾ ಎದೆ ಝಿಲ್ಲೆನಿಸುತ್ತದೆ. ಈ ಪಾತ್ರದ ಕುರಿತು ನಾನು ಏನೇ ಹೇಳಿದರೂ ಅದು ಓದುಗರ ಓದುವ ಸುಖವನ್ನು ಕಸಿದುಕೊಂಡಂತಾಗುವುದು. ಈ ಪಾತ್ರ ಚಿತ್ರಣವನ್ನಷ್ಟೇ ಅಲ್ಲಾ, ಈ ಕಾದಂಬರಿಯ ಬೇರಾವ ಪಾತ್ರವನ್ನೂ ಹೆಚ್ಚು ವಿಶ್ಲೇಷಿಸಹೋಗುವುದು ಈ ನಿಟ್ಟಿನಲ್ಲಿ ಸಮಂಜಸವೆನಿಸದು. ಹಾಗಾಗಿ ನಾನು ಓದಿದಾಗಿನಿಂದ ನನ್ನ ಬಿಟ್ಟೂ ಬಿಟ್ಟೂ ಕಾಡುತಿಹ ನನ್ನಿಷ್ಟದ ಪಾತ್ರ, ಕಥೆಯ ಜೀವಾಳನಾಗಿರುವ (ನನ್ನ ವೈಯಕ್ತಿಕ ಅನಿಸಿಕೆಯಂತೇ) ಎಡಿನ್ ಬರ್ಗ್‌ನ ಕೆಲವು ಸಾರ್ವಕಾಲಕ ಸತ್ಯ ದರ್ಶನವನ್ನು, ರೋಣಾಳ ಮಂಥನವನ್ನು ಕಾದಂಬರಿಯಲ್ಲಿದ್ದ ಹಾಗೇ ಇಲ್ಲಿ ಹಂಚಿಕೊಳ್ಳಬಯಸುತ್ತಿದ್ದೇನೆ.  ಈ ಕೆಳಗಿನ ಪ್ರತಿ ಸಾಲೂ ಹೊಸ ಚಿಂತನೆಗಳಿಗೆ, ಹೊಳಹುಗಳಿಗೆ, ಮಂಥನಕ್ಕೆ ನಮ್ಮನ್ನೆಳೆಸುವಂತಿದ್ದು, ಓದುಗರನ್ನೂ ಸತ್ಯಾನ್ವೇಷಣೆಗೆ, ಸ್ವ ವಿಮರ್ಶೆಗೆ ಖಚಿತವಾಗಿಯೂ ಎಳೆಸುತ್ತವೆ ಎಂಬುದು ನನ್ನ ವಿಶ್ವಾಸ.

೧) ಪ್ರಚಾರ ಹೇಗೆ ಪಡೀಬೇಕು ಅನ್ನೋದು ಮುಖ್ಯವೇ ಹೊರತು, ಪ್ರಚಾರಕ್ಕಾಗಿ ಏನು ಮಾಡಿದೆವು ಅನ್ನೋದಲ್ಲ. ನಾನು ಪ್ರಚಾರಕ್ಕೆ ಇಳಿದಿದ್ದೇನೆ ಎಂದು ಪ್ರಚಾರಕ್ಕೆ ಇಳಿದವನಿಗೂ ಗೊತ್ತಾಗಬಾರದು. ಹಾಗೆ ನೋಡಿಕೊಳ್ಳೋದು ಜಾಣತನ. (ಫಾಬ್ರಿಗಸ್ ಹೇಳುವ ಈ ಮೇಲಿನ ಮಾತೊಳಗಿನ ಮೊನಚು, ವ್ಯಂಗ್ಯ.. ಅದರೊಳಗಿನ ವರ್ತಮಾನದ (ಪ್ರಸ್ತುತ) ಕಟು ವಾಸ್ತವ ಎಷ್ಟು ದಿಟ ಎಂದೆನಿಸಿತು.)

೨) "ಹೇಳಿಕೊಳ್ಳದ ತ್ಯಾಗಗಳಿಗೆ ಬೆಲೆ ಇರೋಲ್ಲ. ಹೇಳಿಕೊಂಡ ತ್ಯಾಗಗಳನ್ನು ನಂಬೋಕೆ ಆಗಲ್ಲ." 

೩) ಯಾವುದು ತಪ್ಪು ಎನ್ನಿಸುತ್ತದೋ ಆಗ ಅದನ್ನು ಸರಿಯೊಂದಿಗಿನ ಯಾವುದೋ ಒಂದು ಅಂಶದೊಂದಿಗೆ ಕೂಡಿಸಿ ತಪ್ಪನ್ನು ಸರಿ ಎನ್ನಿಸುವ ಕುಚೋದ್ಯ ಪ್ರಯತ್ನ ಇಲ್ಲಿ ಪುನರಾವರ್ತನೆ ಆಗುತ್ತಿಲ್ಲವೇ? (ರೋಣಾಳ ಜಿಜ್ಞಾಸೆ)

೪) ಕಾರಣ ಅಶುದ್ಧವಾದ ಮೇಲೆ ಕ್ರಿಯೆಯೂ ಅಶುದ್ಧವೇ, ಕ್ರಿಯೆಗಳಿಂದ ಕಾರಣ ಹುಟ್ಟುವುದಿಲ್ಲ. ಕಾರಣಗಳಿಂದಲೇ ಕ್ರಿಯೆ ಹುಟ್ಟುತ್ತದೆ. ಅದರಲ್ಲೂ ಕಾರಣವಿರುವ ಸೇವೆ!? ಇದರ ಆಳಕ್ಕೆ ಹೋಗಲು ಆಗುತ್ತಿಲ್ಲ. ಹೌದು ಜಗತ್ತಿನಲ್ಲಿ ಯಾವುದೂ ಸೇವೆಯಲ್ಲ. ಸಹಕಾರವಷ್ಟೇ ನಿಜ.

೫) ಮಾನವನು ಪ್ರಾರಂಭಿಸುವ ಪ್ರತಿಯೊಂದು ಸತ್ಕಾರ್ಯಗಳು ಮೂಲದಲ್ಲಿ ನಿಸ್ವಾರ್ಥ ಸೇವೆಯೇ ಆಗಿದ್ದು, ಅನಂತರ ಇಷ್ಟಾರ್ಥಕಾಮವಾಗೇ ಕೊನೆಗೊಳ್ಳುತ್ತದೆ.

೬) ಪ್ರಕೃತಿ ಯಾವುದನ್ನು ಹಿಡಿತದಲ್ಲಿಟ್ಟು, ಯಾವುದನ್ನು ಬೆಳೆಸಬೇಕು ಎಂದು ಆಲೋಚಿಸಿಯೇ ಪ್ರತಿ ಜೀವಿಗೂ ಗುಣಗಳನ್ನು ನೀಡಿದೆ. ಆದರೆ ಮಾನವನು ತನ್ನ ಪಾಕೃತಿಕ ಗುಣಗಳಿಂದ ದೂರವಾಗಿ, ವಿವೇಚನೆಯ ಹೆಸರಿನಲ್ಲಿ ಸಹಜೀವಿ, ಜಗತ್ತನ್ನೇ, ಹತೋಟಿಗೆ ತೆಗೆದುಕೊಂಡು ಹಾಳುಮಾಡುತ್ತಿದ್ದಾನೆ. ಮಾನವನ ಮೂಲ ಗುಣವೇ ಸ್ವಾರ್ಥ. ತನ್ನೆಲ್ಲಾ ಅಪಾಕೃತಿಕ ಗುಣಗಳನ್ನು ಹತೋಟಿಯಲ್ಲಿಟ್ಟುಕೊಂಡು, ಪ್ರಕೃತಿಯ ಜೊತೆ ಸಹಬಾಳ್ವೆ ನಡೆಸುತ್ತಿದ್ದ ಮಾನವ ಜನಾಂಗ ಮರೆಯಾಗುತ್ತಿದೆ. ಈಗಿರುವುದು ಮಿತಿಯನ್ನು ಮೀರಿದ ಕ್ರೂರ ಜೀವ ಸಂತತಿ....

೭) ಮನುಷ್ಯ ಹುಲಿಯನ್ನು ಕೊಂದರೆ ಶೌರ್ಯ, ಆದರೆ ಹುಲಿ ಮನುಷ್ಯನನ್ನು ಕೊಂದರೆ ಕ್ರೌರ್ಯ! (ಜಾರ್ಜ್ ಬರ್ನಾಡ್ ಶಾ) ನನ್ನ ಪ್ರಕಾರ ಪ್ರಾಣ ರಕ್ಷಣೆಗೆ ಹೊರತಾದ ಎಲ್ಲಾ ತರಹದ ಪ್ರಾಣಿಹತ್ಯೆಯೂ ಕ್ರೌರ್ಯವೇ... ಆದರೆ ಮನುಷ್ಯ ಕಾಡನ್ನು ನೆಲಸಮ ಮಾಡಿ, ಪ್ರಾಣ ರಕ್ಷಣೆಯೆಂದು ಆಗಲೂ ಪ್ರಾಣಿಹತ್ಯೆ ಮಾಡುತ್ತಾನೆ. ಮನುಷ್ಯನಿಗೆ ವಿಕೃತಿ ತೋರಲು ಕಾರಣ ಬೇಕು, ಅಷ್ಟೇ.

ನಾನಿಲ್ಲಿ ಕೊಟ್ಟಿರುವುದು ‘ನನಿ’ಯಲ್ಲಿ ದಾಖಲಾಗಿರುವ ಕೆಲವೇ ಕೆಲವು ನನ್ನಿಗಳನ್ನು. ಅವುಗಳ ಪೂರ್ಣ ಪಾಠಕ್ಕೆ ಕಾದಂಬರಿಯ ಸಮಗ್ರ ಓದು, ಚಿಂತನೆ ಅತ್ಯಗತ್ಯ. ಇಲ್ಲಿ ಕಾಣ ಸಿಗುವ, ಕುಕ್ಕುವ, ಕರಗಿಸುವ, ಬೆಚ್ಚಿಸುವ, ಕಣ್ಮುಚ್ಚಿ ದಿಟ್ಟಿ ಹೊರಳಿಸಲು, ನಿರ್ಲಕ್ಷಿಸಿ ತಾತ್ಕಾಲಿಕ ನೆಮ್ಮದಿ ಪಡೆಯಲು ಪ್ರೇರೇಪಿಸುವ ಸತ್ಯವು ನಿಜವಾಗಿಯೂ ಉರಿವ ಸೂರ್ಯನಂತೇ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವೇ. ಕಾದಂಬರಿಯಲ್ಲೆಲ್ಲೋ ಬರುವಂತೇ.. ‘ಇಲ್ಲಿ ನಾವು ವಿಮರ್ಶಿಸಬೇಕಾದದ್ದು ಸತ್ಯಕ್ಕೆ ಯಾರು ಹತ್ತಿರವಿದ್ದಾರೆ ಎಂದೇ ಹೊರತು ಸತ್ಯವನ್ನು ಮುಟ್ಟಿದವರು ಯಾರು ಎಂದಲ್ಲ.’  ಅಂತಹ ಸತ್ಯವನ್ನು ಜಾಗೃತಿಯಲ್ಲೇ, ಜಾಗೃತೆಯಿಂದ ತಡವುವ, ಕೊಂಚ ವಿಶಾದದೊಂದಿಗೇ ಸ್ವೀಕರಿಸುವ ಸಣ್ಣ ಅವಕಾಶ ಓದುಗರಾದ ನಮಗೆ ಕಲ್ಪಿಸುತ್ತದೆ ‘ನನ್ನಿ’. 

ಪುಸ್ತಕವನ್ನು ಇಲ್ಲಿ ಕೊಳ್ಳಬಹುದು..  "ಕ್ಲಿಕ್ಕಿಸಿ-ನನ್ನಿ"

~ತೇಜಸ್ವಿನಿ ಹೆಗಡೆ.

ಶುಕ್ರವಾರ, ಅಕ್ಟೋಬರ್ 9, 2015

`ಓದಿರಿ’ ಓದಿದ ಮೇಲೆ....


`ಓದಿರಿ' ಕಾದಂಬರಿಯ ಲೇಖಕರಾದ ಬೊಳುವಾರು ಮಹಮದ್ ಕುಂಞಿಯವರ ಪರಿಚಯ ‘ಓದಿರಿ’ಯನ್ನು ಓದುವ ಮೊದಲು ನನಗೆ ಇರಲೇ ಇಲ್ಲಾ! ಮುಖಗೋಡೆಯಲ್ಲಿ ಮೊತ್ತ ಮೊದಲ ಬಾರಿ ‘ಓದಿರಿ’ ಐತಿಹಾಸಿಕ ಕಾದಂಬರಿಯ ಕುರಿತು ಪ್ರಸ್ತಾವನೆಯಾದಾಗಲೇ ಗಮನ ಅತ್ತ ಹೋಗಿದ್ದು. ಈ ಮೊದಲು ಪ್ರಕಟಗೊಂಡಿದ್ದ ಎನ್ನಲಾಗಿರುವ ಅವರ ಕಾದಂಬರಿಗಳಾದ ಜಿಹಾದ್, ಸ್ವಾತಂತ್ರ್ಯದ ಓಟ ಮತ್ತು ಅವರ ಸಣ್ಣ ಕಥೆಗಳ ಪ್ರಾಕಾರಗಳನ್ನು.. ಯಾವುದನ್ನೂ ನಾನು ಓದಿಲ್ಲ. ಹಾಗಾಗಿ ನಾನು ಈಗ ಓದಿರುವ ‘ಓದಿರಿ’ ಕಾದಂಬರಿಯೇ ಈ ಲೇಖಕರ ಮೊತ್ತ ಮೊದಲ ಬರಹ ಎನ್ನಬಹುದು. ಮುಖಗೋಡೆಯಲ್ಲೂ ಅಷ್ಟೇ.., ‘ಓದಿರಿ’ ಕಾದಂಬರಿಯ ಕುರಿತು ನನ್ನ ಓದಲು ಪ್ರೇರೇಪಿಸಿದ್ದು ಅವರೇ ಹಾಕಿಕೊಂಡಿದ್ದ ಈ ಸಾಲು.. “ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತ ಮೊದಲ ಐತಿಹಾಸಿಕ ಕಾದಂಬರಿ”! ಹೌದು ಇದು ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಇಸ್ಲಾಮ್ ಧರ್ಮದ ಪ್ರವಾದಿಯೊಬ್ಬರ  ಕಥೆ.

ನಾನು ಈ ಮೊದಲೆಲ್ಲೂ ಪ್ರವಾದಿ ಮುಹಮ್ಮದರ  ಕುರಿತಾದ ಯಾವುದೇ ಖಚಿತ ಪುಸ್ತಕವನ್ನೋದಿರಲೂ ಇಲ್ಲಾ. ಇಸ್ಲಾಂ ಬಗ್ಗೆ ಹಲವು ಮಾಹಿತಿಗಳನ್ನು ಓದಿದ್ದೆನಾದರೂ ಅವೆಲ್ಲಾ ತುಣುಕುಗಳಲ್ಲಿ.. ಸಣ್ಣ ಪುಟ್ಟ ಲೇಖನಗಳಲ್ಲಿ... ಮುಲ್ಲಾಗಳ ಪ್ರವಚನಗಳನ್ನು ಸಾರುವ ವಿಡಿಯೋ ತುಣುಕುಗಳಲ್ಲಿ.. ಧಾರಾವಾಹಿ/ಚಲನಚಿತ್ರಗಳಲ್ಲಿ ಬರುವ ಕೆಲವು ಆಚರಣೆ/ಕಟ್ಟಳೆಗಳಲ್ಲಿ ಅಷ್ಟೇ. ಆ ನಿಟ್ಟಿನಲ್ಲಿ ಈ ಕಾದಂಬರಿ ನನ್ನಂಥವರಿಗೆ ಇಸ್ಲಾಂ ಅನ್ನು, ಮುಸ್ಲಿಮರ ಪ್ರವಾದಿ ಮುಹಮ್ಮದರನ್ನು ಸ್ಪಷ್ಟವಾಗಿ ತೆರೆದು ಕೊಡುವ ಪುಸ್ತಕ ಎಂದೆನ್ನಬಹುದು. ಇಂದು ನಾನು ಸ್ಪಷ್ಟವಾಗಿ ಹಿಂದು, ಮುಸ್ಲಿಂ, ಕ್ರಿಶ್ಚನ್ ಎಂಬ ಆಯಾ ಧರ್ಮದ ಹೆಸರಿನಲ್ಲೇ ಉಲ್ಲೇಖಿಸಲು (ಪ್ರಸ್ತುತ ಲೇಖನದುದ್ದಕ್ಕೂ) ಈ ಕಾದಂಬರಿಯ ಲೇಖಕರೇ ಕಾರಣ. ಅವರು ‘ಆ ಪ್ರವಾದಿಯ ಹೆಸರಲ್ಲಿ ನಿತ್ಯ ಮಾರಣ ಹೋಮಗಳೇ ನಡೆಯುತ್ತಿರುವಾಗ ಅವರ ತಂಟೆಗೆ ಹೋಗದಿರುವುದೇ ಕ್ಷೇಮ’ ಎಂದು ಹಿಂಜರಿಯದೇ, ಪ್ರಾಮಾಣಿಕವಾಗಿ, ಅಪಾಯದ ಮಟ್ಟ ಮೀರದಿರುವ ಜಾಗೃತಿಯೊಂದಿಗೇ, ಓರ್ವ ಮೂರನೆಯ ವ್ಯಕ್ತಿಯಾಗಿ ಬರೆದಿದ್ದಾರೆ ಈ ಪುಸ್ತಕ, ಎಂದೆನಿಸಿತು.

‘ಓದಿರಿ’ಕಾದಂಬರಿಯನ್ನೋದುತ್ತಾ ಕಾಡಿದ ಹತ್ತು ಹಲವು ಸಂದೇಹಗಳ ಪರಿಹಾರಕ್ಕಾಗಿ ಈ ಬರಹದ ಲೇಖಕರನ್ನೇ ಸಂಪರ್ಕಿಸುವುದು ಉತ್ತಮ ಎಂದು ನಿರ್ಧರಿಸಿದ ನಾನು ಗೆಳೆಯನೋರ್ವನಿಂದ ಬೋಳುವಾರು ಅವರ ನಂಬರ್ ಪಡೆದು ಮೊದಲ ಬಾರಿ ಫೋನಾಯಿಸಿದಾಗ ಸಹಜವಾಗಿಯೇ ಹಿಂಜರಿಕೆ ಬಲು ಇತ್ತು. ಆದರೆ ಅವರ ಮಾತುಗಳೊಳಡಗಿದ್ದ ಮುಕ್ತತೆ, ಪ್ರಾಮಾಣಿಕತೆ, ಸರಳತೆ, ನಿಸ್ಸಂಕೋಚವಾಗಿ ಹಿಂಜರಿಯುತ್ತಲೇ ಪ್ರಶ್ನಿಸುತ್ತಿದ್ದ ನನ್ನ, “ಮಗು ನಿಂಗೆ ಅನಿಸಿದ್ದು ಕೇಳು..” ಎಂದು ಪ್ರೋತ್ಸಾಹಿಸಿದಾಗ ಮುಂದಿನ ಸಂವಹನಗಳೆಲ್ಲಾ ಸರಾಗವಾಗಿಬಿಟ್ಟವು. ಲೇಖಕರು ಸ್ವಯಂ ಯಾವುದೇ ತಡೆಯನ್ನು ಹಾಕಿಕೊಳ್ಳದೇ, ನನಗೂ ಹಾಕದೇ ಆದಷ್ಟು ನನ್ನ ಸಂದೇಹಗಳನ್ನು ಪರಿಹರಿಸಿ, ಆ ಮೂಲಕ ನನ್ನೊಳಗೆ ನಿರ್ಭೀತಿಯನ್ನು ತುಂಬಿದ ಅವರಿಗೆ ತುಂಬು ಮನದ ಕೃತಜ್ಞತೆಗಳು. ಅವರೊಂದಿಗೆ ಸಂವಹಿಸುವಾಗ ‘ನಮ್ಮಲ್ಲಿ’, ‘ನಿಮ್ಮಲ್ಲಿ’ ಎಂದೇ ಮೊದ ಮೊದಲು ನಾನು ಪ್ರಶ್ನಿಸತೂಡಗಿದ್ದೆ. ಆಗ ಅವರು ಸ್ಪಷ್ಟವಾಗಿ, ‘ಹಾಗೆ ಹೇಳುವುದೇ ತಪ್ಪು, ಹಿಂದುಗಳಲ್ಲಿ, ಮುಸ್ಲಿಮ್ಮರಲ್ಲಿ ಎಂದೇ ಹೇಳಿ.’. ಅದು ಸತ್ಯ, ವಾಸ್ತವ.. ಎಂದು ಹೇಳಿದಾಗ, ಅರೆ ಹೌದಲ್ಲಾ ಅದ್ಯಾಕೆ ಹಾಗೆ ಸಂಬೋಧಿಸಲೂ ಮುಜುಗುರ ಇರಬೇಕು ನನ್ನಲ್ಲಿ? ಎಂದೇ ಅರಿವಾಗಲು ಲೇಖನದುದ್ದಕ್ಕೂ ಆ ಹಿಂಜರಿಕೆಯನ್ನು ಬಿಟ್ಟು, ‘ಓದಿರಿ’ ಓದಿದ ನನ್ನೊಳಗಿನ ಹರಿವನ್ನು, ಹರವನ್ನು, ಸಂದೇಹಗಳನ್ನು ಪ್ರಾಮಾಣಿಕವಾಗಿ ಯಾವುದೇ ಪೂರ್ವಾಗ್ರಹವಿಲ್ಲದೇ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿ ನಾನು ಹೇಳಿಕೊಳ್ಳುತ್ತಿರುವ ನನ್ನ ಅಭಿಪ್ರಾಯಗಳು, ಪ್ರಶ್ನೆಗಳು, ಸಂದೇಹಗಳು ಎಲ್ಲವೂ ನನ್ನ ವೈಯಕ್ತಿಕ ಅನಿಸಿಕೆಗಳು ಮತ್ತು ಯಾವುದೇ ವ್ಯಂಗ್ಯ, ಕೊಂಕು, ತಿವಿತಗಳ ಕುರುಡತ್ವವನ್ನು ಹೊಂದಿದವಂಥವಲ್ಲ ಎಂದು ಮೊದಲೇ ಸ್ಪಷ್ಟ ಪಡಿಸುತ್ತಿದ್ದೇನೆ. ಓದುಗರೂ ಇರುಳುಗಣ್ಣಿನಿಂದ ನೋಡದೇ ಅರ್ಥೈಸಿಕೊಳ್ಳುವಿರೆಂದು ಆಶಿಸುವೆ.

ಪ್ರಸ್ತಾವನೆ:-


‘ಓದಿರಿ’ಯ ಪ್ರಸ್ತಾವನೆಯನ್ನೋದುವಾಗ ನನ್ನ ಬಹುವಾಗಿ ಹಿಡಿದಿಟ್ಟ ಸಾಲುಗಳಿವು :-“ದೈವ ನಂಬುಗೆಯ ಸಾಮಾನ್ಯನಿರಲಿ, ಕಟ್ಟಾ ಕೋಮುವಾದಿ ಅಥವಾ ರೋಸಿಹೋಗಿರುವ ನಿರೀಶ್ವರವಾದಿಯೇ ಆಗಿರಲಿ, ಅನ್ಯರ ಪ್ರಾಮಾಣಿಕ ಧಾರ್ಮಿಕ ನಂಬುಗೆಯನ್ನು ಅಷ್ಟೇ ಪ್ರಾಮಾಣಿಕತೆಯಿಂದ ತಿರಸ್ಕರಿಸುತ್ತಾನೆ ಅಥವಾ ಮೌನವಾಗಿರುತ್ತಾನೆ. ಅಂತ್ಯಪ್ರವಾದಿಯ ಮಾತುಗಳನ್ನೇ ಪರಮ ಸತ್ಯವೆಂದು ನಂಬುವವರು, ಶ್ರೀಕೃಷ್ಣನನ್ನು ಪರಮಾತ್ಮನೆಂದು ಹೇಗೆ ಒಪ್ಪಲಾರರೋ, ಅಂತೆಯೇ ಶ್ರೀರಾಮನ ಪೂಜಕರು ಪ್ರವಾದಿಯ ಮಾತುಗಳಿಗೆ ಮತ ಹಾಕಲಾರರು. ಆದ್ದರಿಂದಲೇ, ಯಾವುದೇ ಬಗೆಯ ಧರ್ಮ ಪ್ರಚಾರದ ಬರಹಗಳು ಅನ್ಯ ಧರ್ಮದ ಓದುಗರನ್ನು - ಉಚಿತ ವಿತರಣೆಯಾದಾಗಲೂ ಪ್ರೀತಿಯಿಂದ ಓದಿಸಿಕೊಳುವುದಿಲ್ಲ.” ಎಂಬ ಈ ಸಾಲುಗಳು  ಎಷ್ಟು ನಿಜ ಅನ್ನಿಸಿತು.


ನನ್ನ ನಂಬುಗೆಯು ನನಗೆ ಸತ್ಯ.. ಉಳಿದೆದ್ದಲ್ಲಾ, ಉಳಿದವರ ನಂಬುಗೆಯೆಲ್ಲಾ ಸುಳ್ಳು ಎನ್ನುವ ಭಾವವೇ ಘರ್ಷಣೆಗೆ, ಗಲಭೆಗೆ ನಾಂದಿಯಾಗಿದ್ದು, ಆಗುತ್ತಿದ್ದುದು ಎಂದೆನಿಸಿತು. ಕಾದಂಬರಿಯ ಮೊತ್ತ ಮೊದಲು ಹೇಳಿರುವಂತೇ ಯಾವುದೇ ಧರ್ಮದ ಕುರಿತು ಓದಿಕೊಳ್ಳದೇ, ಪೂರ್ವಾಗ್ರಹದಿಂದ, ಅಲ್ಲಲ್ಲಿ ಕೇಳಿದ್ದನ್ನೇ ನಂಬಿ ವ್ಯಾಖ್ಯಾನಿಸುವುದು, ಟೀಕಿಸುವುದು ಬಲು ತಪ್ಪು ಎಂಬುದನ್ನೂ ಒಪ್ಪುವೆ. ಆ ನಿಟ್ಟಿನಲ್ಲಿ ‘ಓದಿರಿ’ ಬಲು ಸಹಕಾರಿಯಾಗಿದೆ. ಈ ಪುಸ್ತಕವನ್ನೋದಿ ಮುಗಿಸಿದ ಮೇಲೆ, ನಾನು ನನ್ನ ನಂಬುಗೆ, ವಿಶ್ವಾಸ, ಸಿದ್ಧಾಂತಗಳ ಜೊತೆಯೂ, ಇಸ್ಲಾಂನಲ್ಲಿ ಮುಹಮ್ಮದ್ ಅವರು ಹೇಳಿರುವ ಸಂದೇಶಗಳಲ್ಲಿ ನನಗೆ ಸ್ಪಷ್ಟವಾದ, ಅರ್ಥವಾದ ಕೆಲವು ಒಳ್ಳೆಯ ಮಾತುಗಳನ್ನೂ ಒಪ್ಪಿರುವೆ, ಸತ್ಯವಿದೆಯೆಂದು ಅರಿತಿರುವೆ! ಈ ಮೊದಲು ಅಂದರೆ ಪುಸ್ತಕವನ್ನೋದುವ ಮೊದಲು ನನ್ನಲ್ಲಿ ಹಲವು ತಪ್ಪು ಗ್ರಹಿಕೆಗಳಿದ್ದವು. ಅದರಲ್ಲಿ ಕೆಲವಷ್ಟಕ್ಕಾದರೂ ಪರಿಹಾರ ಕಂಡಿವೆ.

ನನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆಯೆಂದಲ್ಲಾ.. ಆದರೆ ಕೆಲವು ತಪ್ಪು ಗ್ರಹಿಕೆಗಳು ನಿವಾರಣೆಯಾಗಿವೆ. ಈವರೆಗೂ ಶೂನ್ಯ ಜ್ಞಾನವಿದ್ದ (ಇಸ್ಲಾಂ ಬಗ್ಗೆ), ಕೆಲವು ಋಣಾತ್ಮಕ ವಿಷಯಗಳನ್ನೇ ಎಷ್ಟೋ ಕಡೆ ನೋಡಿ, ಕಂಡು, ಓದಿದ್ದ ನನ್ನೊಳಗೆ ಎಲ್ಲಾ ನೋಟಗಳಾಚೆ ಇನ್ನೊಂದು ದೃಶ್ಯವಿದೆ ಎಂಬ ನನ್ನ ನಂಬುಗೆಗೆ ಮತ್ತಷ್ಟು ಇಂಬು ಕೊಟ್ಟಿತು ಈ ‘ಓದಿರಿ’ಯ ಓದು. ಆ ನಿಟ್ಟಿನಲ್ಲಿ ಲೇಖಕರು ಇದನ್ನೊಂದು ಐತಿಹಾಸಿಕ ಕಾದಂಬರಿ ಎಂಬ ಗಡಿ ರೇಖೆಹಾಕಿ ಎದುರಾಗಬಹುದಾದ ಅಪಾಯವನ್ನು ತಡೆದಿದ್ದರೂ, ‘ಓದಿರಿ’ ನನ್ನಂಥವರಿಗೆ ಅದಕ್ಕೂ ಮೀರಿದ, ಒಂದು ಹೊಸ ಧರ್ಮವನ್ನರಿವ, ಸ್ಥೂಲವಾಗಿ ಅರ್ಥೈಸಿಕೊಳ್ಳುವ ಪಾಠ ಪುಸ್ತಕವಾಗಿದೆ ಎನ್ನಬಹುದು. ಉದಾಹರಣೆಗೆ ಹಿಂದುಗಳಲ್ಲಿರುವಂತೇ ಇಸ್ಲಾಂ’ನಲ್ಲೂ ಗೋತ್ರ ಪದ್ಧತಿಯಿತ್ತು ಎನ್ನುವ ಸತ್ಯ ನನಗೆ ಗೊತ್ತಾಗಿದ್ದೇ ಇಲ್ಲಿ!

ಓದಿರಿ ಕಾದಂಬರಿಯೊಳಗಿನ ಸ್ಥೂಲ ಕಥಾ ಚಿತ್ರಣ. :- ಹಾಶಿಮ್ ಗೋತ್ರದ ಅಬ್ದುಲ್ ಮುತ್ತಲಿಬರ ಪುತ್ರ ಅಬ್ದುಲಾರವರು ಮತ್ತು ನಜ್ಜಾರ್ ಗೋತ್ರದ ಆಮಿನಾರ ಪುತ್ರ ಮುಹಮ್ಮದರು. ‘ಮುಹಮ್ಮದ್’ ಎಂದರೆ ಎಲ್ಲರಿಂದ ಹೊಗಳಿಸಿಕೊಳ್ಳುವವನು ಎಂಬಲ್ಲಿಂದ ಆರಂಭವಾದ ಕಥೆ.. ಬೆಳೆಯುತ್ತಾ ‘ಸಫಾ’ ಬೆಟ್ಟದ ಗುಹೆಯಲ್ಲಿ ಅಲ್ಲಾಹು ಕಳುಹಿಸಿದ ದೇವದೂತ ಜಿಬ್ರೀಲರಿಂದ ಜನರನ್ನು ಸಂಘಟಿಸಿ, ಇಸ್ಲಾಂ ಅನ್ನು ಬೆಳೆಸುವ ಸಂದೇಶ ಪಡೆದು, ಅಂತೆಯೇ ಪ್ರವಾದಿಯಾಗಿ ಅರಬರನ್ನು ಎಚ್ಚರಿಸಿ, ಹಲವು ವಿರೋಧಗಳನ್ನೆದುರಿಸುತ್ತಾ, ಕುರೈಶ್ ಮನೆತನದ ಒಡೆತನದಲ್ಲಿದ್ದ ಕ‌ಅಬಾದಲ್ಲಿನ ಬಹು ವಿಗ್ರಹಗಳನ್ನು ಒಡೆದು, ಹಜರುಲ್ ಅಸ್ವದ್ ಪವಿತ್ರ ಕಲ್ಲೊಂದನ್ನು ಮಾತ್ರ ಉಳಿಸಿ, ಯಸ್ರಿಬ್‌ನಲ್ಲಿ [ಮದೀನಾದಲ್ಲಿ] ಮಸೀದಿಯೊಂದನ್ನು ಕಟ್ಟಿಸಿ, ಏಕದೇವೋಪಾಸನೆಯನ್ನು ಎಲ್ಲೆಡೆ ಪಸರಿಸಬೇಕೆಂಬ ಸಂದೇಶ ಕೊಟ್ಟು ನಿರ್ಗಮಿಸಿದ ಪ್ರವಾದಿಯವರು, ಅಲ್ಲಾಹು ಭೂಮಿಗೆ ಕಳುಹಿಸಿದ ಅಂತ್ಯಪ್ರವಾದಿ ಎಂದೆನಿಸಿಕೊಂಡಿದ್ದಾರೆ. ‘ಕುರ್‌ಆನ್’ ಮುಸ್ಲಿಮರ ಏಕೈಕ ಪವಿತ್ರ ಗ್ರಂಥ. ಇವಿಷ್ಟು ಸ್ಥೂಲ ಚಿತ್ರಣ. ಪೂರ್ಣ ಕಥೆಗೆ, ಕಥೆ ಬೆಳೆದ ರೀತಿಗ, ಪ್ರವಾದಿಯವರ ಸಂದೇಶಗಳಿಗೆ ‘ಓದಿರಿ’ಯನ್ನೇ ಓದಿಬಿಡಿ.

ಈಗ ಮೊದಲಿಗೆ ನನ್ನಲ್ಲಿದ್ದ ಕೆಲವು ಪ್ರಶ್ನಗಳಿಗೆ ಪಡೆದ ಉತ್ತರ. (ಸ್ಪಷ್ಟವಾಗಿ ಹೇಳಿ ಬಿಡುವೆ.. ಈ ಉತ್ತರಗಳೆಲ್ಲಾ ನನಗೆ ‘ಓದಿರಿ’ಯಲ್ಲಿ ಸಿಕ್ಕಂಥವು, ಕೆಲವು ಲೇಖಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಪಡೆದುಕೊಂಡು ನನ್ನದೇ ಮಾತುಗಳಲ್ಲಿ ಬರೆದುಕೊಂಡಂಥವು)

ಪ್ರ. ೧ ಇಸ್ಲಾಂ ಧರ್ಮ ಎಂದರೆ ಏನು? ಮುಸಲ್ಮಾನರು ಎಂದರೆ ಯಾರು?
ಉ: ಇಸ್ಲಾಂ ಎಂದರೆ ಶಾಂತಿ, ಸಮರ್ಣಣೆ. ಇಸ್ಲಾಂ ಧರ್ಮದಲ್ಲಿ ವಿಶ್ವಾಸವಿರಿಸಿದವರೆಲ್ಲ, ಅದನ್ನು ಪ್ರಶ್ನಿಸದೆ ಅನುಸರಿಸುವವರೆಲ್ಲರೂ ಮುಸ್ಲಿಮರು.

೨) ಪ್ರವಾದಿ ಮುಹಮ್ಮದ್ ಮುಸ್ಲಿಮರ ದೇವರೇ?
ಉ: ಅಲ್ಲ. ಅವರು ಸಾಮಾನ್ಯ ಮನುಷ್ಯರೇ. ಆದರೆ ಮನುಷ್ಯರಲ್ಲಿ ಅತಿ ಒಳ್ಳೆಯ ಗುಣವುಳ್ಳವರು. ಮುಸಲ್ಮಾನರ ಏಕೈಕ ಆರಾಧ್ಯನಾಗಿರುವ ‘ಅಲ್ಲಾಹು’ ಕಳುಹಿಸಿದ ದೇವದೂತ ಜಿಬ್ರೀಲರಿಂದ ಸಂದೇಶ ಪಡೆದು ಇಸ್ಲಾಮಿನ ಪುನರುತ್ಥಾನಕ್ಕಾಗಿ ಕಳುಹಿಸಲ್ಪಟ್ಟ ಸಂದೇಶವಾಹಕ.  ತನ್ನನ್ನು ಅಂತಿಮ ಪ್ರವಾದಿ ಎಂದು ಸಾರಿ, ಅಲ್ಲಾಹುವಿನ ಸಂದೇಶವನ್ನು ಜನರಿಗೆ ಹೇಳಿದವರು. ‘ಕುರ್‌ಆನ್’ ಪ್ರವಾದಿಯ ಮೂಲಕ  ಭೂಮಿಗೆ ಇಳಿದ ಅಲ್ಲಾಹುವಿನ ಆದೇಶಗಳು

೩) ಯಹೂದೀಯರು, ಕ್ರೈಸರು ಮುಸ್ಲಿಮ್ಮರು ಹೇಗೆ ಲಿಂಕ್ ಆಗಿದ್ದಾರೆ?
ಉ: ಇಸ್ಲಾಮ್ ನಂಬಿಕೆಯ ಪ್ರಕಾರ ಯಹೂದಿಯರು, ಕ್ರಿಸ್ತರು ಮಾತ್ರವಲ್ಲ ಭೂಮಿಯ ಮೇಲೆ ಹುಟ್ಟಿದವರೆಲ್ಲರೂ ಮೂಲತಃ, ಆದಿ ಪ್ರವಾದಿಯಾದ ಆದಮ್ ಮತ್ತು ಈವ್ ಎಂಬ ಗಂಡು ಹೆಣ್ಣಿನಿಂದ ಹುಟ್ಟಿದವರೇ. ಎಲ್ಲರೂ ಮೂಲತಃ ಇಸ್ಲಾಂ ಧರ್ಮದವರೇ. ಅವರೆಲ್ಲರ ಪ್ರವಾದಿ ಹಾಗೂ ಇಸ್ಲಾಮಿನ ಪ್ರವಾದಿಗಳೆಲ್ಲಾ ಒಬ್ಬರೇ. ಆದರೆ ಕಾಲ ಕ್ರಮೇಣ ಅಭಿಪ್ರಾಯ ಬೇಧಗಳಿಂದ ತಮ್ಮ ತಮ್ಮ ಸಿಧ್ದಾಂತಗಳಿಗಾಗಿ ಬೇರ್ಪಟ್ಟವರು.

೪) ಡೇವಿಡ್-ದಾವೂದ್, ಏಸು-ಈಸಾ, ಅಬ್ರಹಾಂ-ಇಬ್ರಾಹಿಂ, ಮೋಸೆಸ್-ಮೂಸಾ ಇವರೆಲ್ಲಾ ಯಾರು?
ಉ: ಯಹೂದಿಯರ ಪ್ರವಾದಿ ಡೇವಿಡ್. ಅವರೂ ದಾವೂದರೂ ಒಬ್ಬರೇ. ಅಲ್ಲಿ ಡೇವಿಡ್ ಇಸ್ಲಾಮಿನಲ್ಲಿ ದಾವೂದ್ ಎಂದು ಕರೆದರು. ಅದೇ ರೀತಿ ಅಬ್ರಾಹಾಂ, ಇಬ್ರಾಹಿಂ, ಮೋಸೆಸ್ಸ್ ಮೂಸಾ. ಏಸು ಈಸಾ. ಇದನ್ನು ಯಹೂದಿಗಳು, ಕ್ರೈಸ್ತರು ಒಪ್ಪುತ್ತಾರೋ ಬಿಡುವರೋ ಗೊತ್ತಿಲ್ಲ.. ಆದರೆ ಇಸ್ಲಾಂ ಹಾಗೇ ಹೇಳುತ್ತದೆ.

೫) ಇಸ್ಲಾಂ ಹುಟ್ಟಿದ್ದು ಹೇಗೆ? ಯಾಕೆ? ಮುಸ್ಲಿಮರೇಕೆ ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ?
ಉ: ಇಸ್ಲಾಂ ಹುಟ್ಟಿದ್ದು ಅಲ್ಲಾನಿಂದ ಎಂಬ ನಂಬಿಕೆ ಮುಸ್ಲಿಮರದ್ದು. ಮೂಲ ಪ್ರವಾದಿಯಾದ ಆದಮ್ ಮತ್ತು ಅವರ ಪತ್ನಿ ಈವ್‌ನಿಂದ ಹುಟ್ಟಿದ್ದು. ಕ‌ಅಬಾದಲ್ಲಿದ್ದ ಮಸೀದಿಯಲ್ಲಿ ಹಿಂದೆ ಅರಬರು ತಾವು ತಾವು ನಂಬಿದ್ದ, ಅನೇಕರ ಮೂರ್ತಿಗಳನ್ನು ತಂದು ಸ್ಥಾಪಿಸಿ ಪೂಜಿಸುತ್ತಿದ್ದರು. ಅದರಲ್ಲಿ ಹಲವು ಮೂರ್ತಿಗಳು ಆಯಾ ಮನೆತನದವರ ಪೂರ್ವಿಕರ ಮೂರ್ತಿಗಳೂ ಆಗಿದ್ದವು. ಅವನ್ನೆಲ್ಲಾ ತ್ಯಜಿಸಿ ಏಕದೇವೋಪಾಸನೆಯನ್ನು ಪ್ರತಿಪಾದಿಸಿದವರು ಮುಹಮ್ಮದರು.

೬) ಬುರ್ಖಾ ಪದ್ಧತಿಯನ್ನು ಪ್ರವಾದಿಯವರೇ ಹೇಳಿದ್ದೇ? ಮಹಿಳೆಯ ಮೇಲಿರುವ ಅಷ್ಟು ಕಟ್ಟುನಿಟ್ಟಿನ ಕಟ್ಟಳೆಗಳು ಹೇಗೆ ಬಂದವು?
ಉ: ಇದಕ್ಕೆ ಲೇಖಕರು ನೀಡಿದ ಉತ್ತರ ನನಗೆ ಸ್ಪಷ್ಟವಾಗಲಿಲ್ಲ. ತಾವು ಓದಿರುವ ಸಾವಿರಗಟ್ಟಲೆ ಪುಟಗಳ ನೂರಾರು  ಗ್ರಂಥಗಳ ಸಾರವನ್ನು ೩೦೦ ಪೇಜಿಗೆ ಇಳಿಸಿದ್ದೇನೆ. ಹಾಗಾಗಿ ಇಲ್ಲಿ ಕೆಲವನ್ನಷ್ಟೇ ಕೊಟ್ಟಿರುವೆ ಎಂದರು. ‘ಓದಿರಿ’ಯಲ್ಲೆಲ್ಲೂ ಪ್ರವಾದಿಯವರು ಹೆಣ್ಮಕ್ಕಳು ಬುರ್ಖಾ ಧರಿಸಬೇಕು ಎಂಬ ನಿಯಮ ಹೇಳಿದ್ದು ಕಂಡು ಬಂದಿಲ್ಲ. ಅಲ್ಲದೇ ಈಗ ಮುಸ್ಲಿಮ್ ಹೆಣ್ಮಕ್ಕಳಿಗೆ ಹಾಕಿರುವ ಕಟ್ಟುಪಾಡುಗಳ ಉಲ್ಲೇಖವೂ ಪುಸ್ತಕದಲ್ಲಿ ದೊರಕುವುದಿಲ್ಲ.

೭) ಶಿಯಾ, ಸುನ್ನಿ ಪಂಗಡಗಳ ಹುಟ್ಟು ಹೇಗಾಗಿದ್ದು? ಮತ್ತು ಯಾಕೆ?
ಉ: ಮುಹಮ್ಮದರ ದೇಹಾಂತ್ಯದ ಬಳಿಕದ ದಿನಗಳಲ್ಲಿ ಹುಟ್ಟಿದ ಅಧಿಕಾರ ಲಾಲಸೆ, ಗೊಂದಲ, ಗಲಾಟೆಯಿಂದಾಗಿ ಪ್ರವಾದಿಯವರ ಸಾಕು ಪುತ್ರನ ಬೆಂಬಲಿಗರು ಶಿಯಾ ಎಂದು ಕರೆಸಿಕೊಂಡರೆ, ಉಳಿದವರು ಸುನ್ನಿ ಪಂಗಡವಾಗಿ ಉಳಿದುಕೊಂಡರು.

೮) ಹದೀಸ್ ಬರೆದದ್ದು ಯಾರು? ಪ್ರವಾದಿಯವರೇ ಖುದ್ದಾ ಹೇಳಿ ಬರೆಸಿದ್ದೆ?
ಉ : ಹದೀಸ್ ಬರೆದದ್ದು ಪ್ರವಾದಿಯವರಲ್ಲ. ಅವರ ಜೊತೆಯಲ್ಲಿ ಸಂಗಾತಿಗಳಾಗಿದ್ದವರು ಬರೆದಿರಿಸಿಕೊಂಡಿದ್ದ ಪ್ರವಾದಿಯವರ ಮಾತುಗಳನ್ನು, ಅವರಾನಂತರದ ತಲೆಮಾರುಗಳಲ್ಲಿ ಅವರ ನಿಕಟವರ್ತಿಗಳಿಂದ ಸಂಗ್ರಹಿಸಿದ ಮಾಹಿತಿಗಳಿಂದ ಕ್ರೂಢೀಕರಿಸಿ ಬರೆದದ್ದು. ಇದರಲ್ಲಿ ಬುರ್ಖಾ ಪದ್ಧತಿ, ಇನ್ನಿತರ ಕಟ್ಟು ಪಾಡುಗಳ ಉಲ್ಲೇಖವಿದೆಯೆಂದು ಕೇಳಿದ್ದೇನೆ.

ಈಗ ಬರುವ ಬಹು ಮುಖ್ಯ ಪ್ರಶ್ನೆಯೆಂದರೆ ಕುರ್‌ಆನ್‌ನಲ್ಲಿ ಏನು ಹೇಳಿದ್ದಾರೆ ಮುಹಮ್ಮದರು? ಪೂರ್ಣ ಕುರ್‌ಅನ್ ನಾನು ಓದಿಲ್ಲ. ಆದರೆ ‘ಓದಿರಿ’ಯಲ್ಲಿ ಬರುವ ಕೆಲವೊಂದು ಸಂದೇಶಗಳನ್ನೋದಿದಾಗ ಅಲ್ಲಲ್ಲಿ ನನಗೆ ದ್ವಾಪರಯುಗದಲ್ಲಾದ ನನ್ನ ಗೀತೆಯಕೃಷ್ಣನ ಗೀತೋಪದೇಶ, ತ್ರೇತಾಯುಗದಲ್ಲಾದ ರಾಮಾಯಣದ ಶ್ರೀರಾಮ ಹೇಳಿದ್ದ ಹಿತವಚನಗಳು, ವೇದಗಳಲ್ಲಿನ ಉಪನಿಷತ್ತುಗಳ ಕೆಲವು ಸಂದೇಶಗಳೇ ನೆನಪಿಗೆ ಬಂದವು! ಹಾಗೇ ಹನ್ನೆರಡನೆಯ ಶತಮಾನದ ಬಸವಣ್ಣನವರು ಹೇಳಿದ್ದೂ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬುದೂ ನೆನಪಾಯ್ತು.

ಅಲ್ಲದೇ ರಾಮಾಯಣದಲ್ಲಿ ಸೀತೆಗುಂಟಾದ ಅನುಮಾನದ ಅಗ್ನಿಪರೀಕ್ಷೆ, ಮಹಾಭಾರತದ ಧರ್ಮಯುದ್ಧ, ದೇವಿಕಿಯಿಂದ ಬೇರ್ಪಟ್ಟು ಯಶೋದೆಯ ಮಡಿಲಲ್ಲಿ ಬೆಳೆವ ಬಾಲ ಕೃಷ್ಣ ಇತ್ಯಾದಿ ಘಟನಾವಳಿಗಳೆಲ್ಲವೂ ದಿಟ್ಟೋ ಪ್ರವಾದಿಯವರ ಬದುಕಿನಲ್ಲೂ ನಡೆದಿರುವುದು! (ಕಥೆಯ ತಿಳಿಯಲು ಪುಸ್ತಕ ಓದಿರಿ) ಆದರೆ ಬಹು ಮುಖ್ಯ ವ್ಯತ್ಯಾಸವೆಂದರೆ ಮುಹುಮ್ಮದರು ಅಲ್ಲಾನ ಸಂದೇಶವಾಹಕರು. ನಾವು ಪೂಜಿಸುವ ಶ್ರೀರಾಮ ಕೃಷ್ಣರು ಭಗವಂತನ ಅವತಾರಿಗಳು.

ನನ್ನ ಪ್ರಮುಖ ಸಂದೇಹಗಳಲ್ಲೊಂದು.. ಇಸ್ಲಾಂ ಧರ್ಮದ ಸ್ಥಾಪನೆಗಾಗಿ ಪ್ರವಾದಿಯವರು ಎಲ್ಲೆಡೆ ಪ್ರವರ್ತಕರನ್ನು ಕಳುಹಿಸುವುದು. ಅಲ್ಲಾಹು ಹೇಳಿದ್ದಕ್ಕೆ ತಾನು ಮುಸ್ಲಿಮ್ಮರನ್ನು ಹೆಚ್ಚು ಹೆಚ್ಚು ಬೆಳೆಸಲು ತನ್ನ ಮತಕ್ಕೆ ಬರಲು ಕೋರುತ್ತಿದ್ದೇನೆ. ಏಕ ದೇವೋಪಾಸನೆಯನ್ನು ಒಪ್ಪಲು ಹೇಳುತ್ತಿದ್ದೇನೆ ಎಂದಿದ್ದಾರೆ. ಅವರ ಪೂರ್ವಜರು, ಹೆಂಡ, ಮೋಜು, ಕಪಟ, ಸುಳ್ಳಿನಿಂದ ಹಾದಿ ತಪ್ಪಿದ್ದು ಕಂಡು ಅವರು ಆ ರೀತಿ ಆ ಕಾಲ ಘಟ್ಟದಲ್ಲಿ ಮಾಡಿದ ಆ ನಿಯಮಗಳು ಆಯಾ ಕಾಲ ಘಟಕ್ಕೆ, ಅಲ್ಲಿನ ಸ್ಥಿತಿ ಗತಿಗೆ ತಕ್ಕುದಾಗಿದ್ದವು ಎಂದೂ ಒಪ್ಪೋಣ. ಆದರೆ ಅಂದಿನ ಅವರ ಸಾರಾಂಶಗಳಲ್ಲಿನ ಉತ್ತಮ ಅಂಶಗಳನ್ನು ಮರೆತು, ಇಂದಿನ, ವರ್ತಮಾನದ ಸ್ಥಿತಿಗತಿಯ ನಿರ್ಲಕ್ಷಿಸಿ, ಎಲ್ಲರ ನಂಬಿಕೆಯನ್ನೂ ಗೌರವಿಸಿ ನಡೆಯಬೇಕೆಂದು ಅರಿಯದೇ, ರಕ್ತಪಾತವನ್ನು ಮಾಡುತ್ತಿರುವ ಕೆಲವು ಧರ್ಮಾಂಧರ ನಡೆ ನುಡಿಗಳು ಇಸ್ಲಾಂ ವಿರುದ್ಧವಲ್ಲವೇ? ಪ್ರವಾದಿಯವರೂ ರಕ್ತಪಾತ ಬಯಸಿರಲೇ ಇಲ್ಲಾ ಎಂದು ‘ಓದಿರಿ’ ಹೇಳುತ್ತದೆ. ಅನಿವಾರ್ಯವಾದಾಗ ಕತ್ತಿ ಹಿಡಿದದ್ದು ಎಂದೂ ಕಾಣಿಸುತ್ತದೆ. ಅಂಥದ್ದರಲ್ಲಿ, ಒತ್ತಾಯದಿಂದ ದಬ್ಬಾಳಿಕೆ ಮಾಡುತ್ತಿರುವುದು ಇಂದಿಗೆ ಎಷ್ಟು ಪ್ರಸ್ತುತ? ಇಂಥಾ ಕ್ರೌರ್ಯ ಸರಿಯೇ? ಎಂಬ ಪ್ರಶ್ನೆ ಕಾಡಿತು. ಅಲ್ಲದೇ ವಿಮರ್ಶಿಸಿದಾಗ, ‘ಹದೀಸ್‌’ಗಳಲ್ಲಿದೆ ಎನ್ನಲಾಗುವ ಎಷ್ಟೋ ವಿಷಯಗಳಿಗೂ, ಸ್ವತಃ ಸಂದೇಶ ನೀಡಿದ ಪ್ರವಾದಿಯವರ ನುಡಿಗಳಿಗೂ ತುಂಬಾ ವ್ಯತ್ಯಾಸ ಕಂಡು ಬಂದು ಅನುಮಾನ ಕಾಡುತ್ತದೆ. ಇಷ್ಟಕ್ಕೂ ಕಾದಂಬರಿಯ ಪ್ರಸ್ತಾವನೆಯ ಕೊನೆಗೆಯಲ್ಲಿ ಲೇಖಕರು ಹೀಗೆ ಹೇಳಿಬಿಟ್ಟಿದ್ದಾರೆ :- “ಈ ಕಾದಂಬರಿಯಲ್ಲಿ ಕಾಣಿಸಿರುವ ವಿವರಗಳಷ್ಟೇ ಪರಿಪೂರ್ಣವೂ ಅಲ್ಲ, ಅಂತಿಮ ಸತ್ಯವೂ ಅಲ್ಲ. ಆ ಹುಡುಕಾಟದ ಸಾವಿರಾರು ಮುಖಗಳಲ್ಲಿ ಮೊದಲ ಮುಖ ಮಾತ್ರ. ಈ ಕೃತಿಯನ್ನು ತಿದ್ದಿ ಮತ್ತೊಂದು ಮುಖವನ್ನು ಚಿತ್ರಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ.” ಈ ಜಾಣ್ಮೆಯ ಮಾತುಗಳು ಸಮಾಧಾನದ ಜೊತೆಗೆ ಮತ್ತಷ್ಟು ಗೊಂದಲಗಳನ್ನೂ ಕೊಟ್ಟು ಬಿಡುತ್ತವೆ.

ಶಾಂತಿಯ ಸಂಕೇತವಾದ ಇಸ್ಲಾಂ, ವೈರಿಗಳನ್ನೂ ಪ್ರೀತಿಸಿ ಎಂದ ಮುಹಮ್ಮದರು.. ಮೋಜು, ಹೆಂಡ, ಅತ್ಯಾಚಾರಗಳ ತಡೆಯಲೆಂದೇ ಹುಟ್ಟಿದ್ದು ಎಂದು ಹೇಳಲಾದ ಮುಸ್ಲಿಮ್. ಆದರೆ ಇಂದೇಕೆ ‘ಜಿಹಾದ್’ ಅನ್ನುವ ಪದವೇ ದುರ್ಬಳಕೆ ಆಗಿ ಸಿರಿಯಾದಿಂದ ಹಿಡಿದು ಭಾರತದವರೆಗೂ ಧರ್ಮಾಂಧತೆಗೆ ನಲುಗಿ ಹೋಗುತ್ತಿದೆ?! ಯಾವ ಧರ್ಮದ ಸ್ಥಾಪನೆಗಾಗಿ ರಕ್ತದ ಕೋಡಿ ಹರಿಸುತ್ತಿದ್ದಾರೋ ಅಂಥಾ ಭಯೋತ್ಪಾದಕರಿಗೆಲ್ಲಾ, ‘ಓದಿರಿ’ ಪುಸ್ತಕದ ಒಂದೊಂದು ಕಾಪಿಯನ್ನಾದರೂ ಉಚಿತವಾಗಿ ನೀಡಿದರೆ, ಸಹನೆಯಿಂದ, ಶಾಂತಿಯಿಂದ ಓದಿರಿಯನ್ನು ಅವರೂ ಓದಿದರೆ ಸಿರಿಯಾದಿಂದ ಗುಳೆಯೆದ್ದು ಹೋಗುತ್ತಿರುವ ವಲಸಿಗರಿಗೆ ನೆಲೆ ಸಿಗಬಹುದೇನೋ.. ನಮ್ಮಲ್ಲಿಯ ಕಾಶ್ಮೀರ ತಂಪಾಗಿ, ಪರಸ್ಪರರ ನಂಬುಗೆ, ಶ್ರದ್ಧೆಯ ಮೇಲೆ ಪ್ರಹಾರವಾಗದೇ, ಸೌಹಾರ್ದತೆಯಿಂದ ಬಾಳ್ವೆ ಮಾಡಲಾಗುವುದೇನೋ.. ಎಂದೆಲ್ಲಾ ಅರೆಕ್ಷಣ ಅನಿಸಿದರೂ, ಅದು ಕನಸೇ ಸರಿ ಎಂದೆನಿಸಿಬಿಡುತ್ತದೆ. ಸಂಭವಾಮಿ ಯುಗೇ ಯುಗೇ ಎಂದ ಕೃಷ್ಣನ ನೆನಪಾಗುತ್ತದೆ.

ಕೊನೆಯಲ್ಲಿ :
“ಈ ವೇದ, ಉಪನಿಷತ್, ತ್ರಿಪಿಟಕಾ, ಭಗವದ್ಗೀತೆ, ಜಿನಶಾಸನ, ತೌರಾಹ್, ಝಬೂರ್, ಬೈಬಲ್, ಕುರ್’ಆನ್ ಅಥವಾ ಗ್ರಂಥಸಾಹಿಬ್ ಯಾ ಮತ್ತೊಂದು; ಧರ್ಮಗ್ರಂಥಗಳು ಯಾವುದೇ ಇರಲಿ, ಅವುಗಳು ಬೆಲೆಬಾಳುವುದು ಗ್ರಂಥಾವಲಂಬಿಗಳ ಸದ್ವರ್ತನೆಗಳಿಂದ ಮಾತ್ರ” - ‘ಓದಿರಿ’ಯ ಮೊದಲಲ್ಲಿ ಲೇಖಕರು ಹೇಳಿದ, ನಾನೂ ಒಪ್ಪುವ ಈ ಮೇಲಿನ ಸಾಲುಗಳಂತೇ ಎಲ್ಲವೂ ಬೆಳೆಯುವುದು ಗ್ರಂಥಾವಲಂಬಿಗಳ ಸದ್ವರ್ತನೆಯಿಂದ ಮಾತ್ರ ಎಂಬುದನ್ನು ಎಲ್ಲರೂ ನೆನಪಿಡಬೇಕಾದ್ದು.

ನಿನ್ನೆ ರಾತ್ರಿ ಫೋನ್ ಮಾಡಿದಾಗ ಮುದ್ರಿತ ಪ್ರತಿಗಳೆಲ್ಲ ಮಾರಾಟವಾಗಿದ್ದು, ಮರು ಮುದ್ರಣದ ತಯಾರಿಯಲ್ಲಿದ್ದೇನೆ ಎಂದಿದ್ದರು. ಅವರದೇ ಮಾತಿನಂತೆ ‘ಎಲ್ಲದಕು ಕಾರಣರು  ಮುಖಗೋಡೆಯ ಗೆಳೆಯ ಗೆಳತಿಯರು’. ಎಲ್ಲರಿಗೂ ಅವರು ಕೃತಜ್ಞತೆ ತಿಳಿಸಲು ಹೇಳಿದ್ದಾರೆ.

ಪುಸ್ತಕವನ್ನು ಇಲ್ಲಿ ಕೊಳ್ಳಬಹುದು..  "ಕ್ಲಿಕ್ಕಿಸಿ-ಓದಿರಿ"

~ತೇಜಸ್ವಿನಿ ಹೆಗಡೆ.