ಶನಿವಾರ, ಜುಲೈ 29, 2017

ಪಳಮೆಗಳು

ಸೇಡಿಯಾಪು ಕೃಷ್ಣ ಭಟ್ಟರ ‘ಪಳಮೆಗಳು’ ಕಥಾಸಂಕಲನ ಬಹಳ ಮೆಚ್ಚುಗೆಯಾಯಿತು.


ಇದರಲ್ಲಿನ ‘ನಾಗರ ಬೆತ್ತ’ ಕಥೆಯನ್ನು ಬಹಳ ಹಿಂದೆಯೇ ಓದಿದ್ದೆ. ನನಗೆ ತುಂಬಾ ಇಷ್ಟವಾದ ಕಥೆಯಿದು. ಕಥೆಯಲ್ಲಿ ಬರುವ ಬಾಲಕನೊಂದಿಗೆ ಬಹಳ ಬೇಗ ನಾವೂ ಒಂದಾಗಿ ಬಿಡುತ್ತೇವೆ. ಅದರಲ್ಲೂ ಅಷ್ಟು ಅಕ್ಕರಾಸ್ಥೆಯಿಂದ ತಂದಿದ್ದ ಆ ಪುಟ್ಟ ಬಾಲಕನ ಬೆತ್ತವನ್ನು ನಿರ್ಧಾಕ್ಷಿಣ್ಯವಾಗಿ, ಕಾರಣವಿಲ್ಲದೇ ಅವನಜ್ಜ ಮುರಿದದ್ದು ಓದುವಾಗ ಹಿಂದೆಯೂ ಸಂಕಟವಾಗಿತ್ತು.. ಇಂದೂ ಮತ್ತೊಮ್ಮೆ ಓದುವಾಗಲೂ ಅಷ್ಟೇ ಬೇಸರವಾಯಿತು. ನಾಗರ ಬೆತ್ತ ಎಂದಕೂಡಲೇ ನನಗೆ ನೆನಪಿಗೆ ಬರುವುದು ನನ್ನ ಬಾಲ್ಯ. ನಾನು ಪ್ರೈಮರಿಯನ್ನು ಕಲಿತಿದ್ದ ನನ್ನ ಕನ್ನಡ ಶಾಲೆಯ ಮಾಸ್ತರರೋರ್ವರ ಕೈಯೊಳಗಿನ ಬೆತ್ತ! ಅವರ ಕೈಲಿದ್ದುದು ನಾಗರ ಬೆತ್ತವೋ ಹೌದೋ ಎಂಬುದು ಗೊತ್ತಿಲ್ಲ. ಅದನ್ನು ಮುಟ್ಟಿ ನೋಡುವುದಿರಲಿ.. ಅದರತ್ತ ದಿಟ್ಟಿ ಹಾಯಿಸುವುದು ಭಯಂಕರದ ಕೆಲಸವಾಗಿತ್ತು ಬಿಡಿ. "ಎಂತ ದಡ್ಡರೋ ನೀವೆಲ್ಲಾ.. ಸುಮ್ಮನೆ ಬೆಂಚು ಬಿಸಿ ಮಾಡಲು ಇಲ್ಲಿಗೆ ಬರುವುದೋ? ಎತ್ತಿ ಕೈಯನ್ನ’ ಎಂದು ಪ್ರಶ್ನೆಗೆ ಉತ್ತರಿಸದ ಮಕ್ಕಳ ಕೈ ಬಿಸಿ ಮಾಡುತ್ತಿದುದು ಅದೇ ಬೆತ್ತದಲ್ಲೇ

. ಆ ದೃಶ್ಯ ಇನ್ನೂ ನನ್ನಿಂದ ಮರೆಯಾಗಿಲ್ಲ. ಆದರೆ ಪುಟ್ಟನ ಮೆಚ್ಚಿನ ನಾಗರ ಬೆತ್ತ ಮುರಿದಾಗ ಉಂಟಾಗಿದ್ದ ನೋವು.. ದೇವಜ್ಜಿಯ ಆ ಯಾತನಾಮಾ ಪ್ರಸಂಗವನ್ನೋದಿದಾಕ್ಷಣ ಅದೇಕೋ ಥಟ್ಟನೆ ಹಾಗೆ ಬೆತ್ತ ಮುರಿದದ್ದೇ ಒಳ್ಳೆದಾಯಿತು ಎಂದೇ ಅನಿಸಿಬಿಡುತ್ತದೆ! ಬಹುಶಃ ಇದಕ್ಕೆ ಕಾರಣ ದೇವಜ್ಜಿಯ ಆ ಎಳೇ ಬದುಕಿನಲ್ಲಿ ನಡೆದ ಕರುಣಾಜನಕ ಘಟನೆಯೇ ಇದ್ದಿರಬಹುದು. ಅವರಿಗೆ ಆ ನಾಗರ ಬೆತ್ತ ಅನಿಷ್ಟವನ್ನುಂಟು ಮಾಡಿದಂತೇ ಆ ಹುಡುಗನಿಗೂ ಉಂಟು ಮಾಡಿದ್ದಿದ್ದರೆ.. ನಿಜಕ್ಕೂ ಅಂಥದೊಂದು ಬೆತ್ತದ ಅವಶ್ಯಕತೆಯಾದರೂ ಏನು? ಒಳ್ಳೆಯದೇ ಆಯಿತು ಹೋಗಿದ್ದು ಎಂದೆಲ್ಲಾ ಅಪ್ರಯತ್ನವಾಗಿ ನಮ್ಮ ಮನಸ್ಸೇ ಆ ಹುಡುಗನ ನೋವಿನೊಂದಿಗೆ ಸ್ಪಂದಿಸಿದ ನಮ್ಮನ್ನು ಸಾಂತ್ವನಗೊಳಿಸಿಬಿಡುತ್ತದೆ. ಆದರೆ ಮೂಲೆಯಲ್ಲೆಲ್ಲೋ ಬೆತ್ತವನ್ನು ಪ್ರೀತಿಯಿಂದ ಕೊಟ್ಟಿದ್ದ ಲಿಂಗಯ್ಯ ಅಳುತ್ತಿರುತ್ತಾನೆ. ಬಹಳ ಚೆಂದದ ಕಥೆ.. ಹತ್ತು ಹಲವು ರೀತಿಯನ್ನು ನಮ್ಮನ್ನು ಕಾಡುವಂಥದ್ದು.

ಪಳಮೆಗಳಲ್ಲಿ ನಾಗರ ಬೆತ್ತದ ನಂತರ ನನ್ನ ಬಹಳ ಕಾಡಿದ ಕಥೆ ಧರ್ಮಮ್ಮ. ಬಹಳ ವಿಶಿಷ್ಟವಾಗಿ ನೇಯ್ದಿರುವ ಕಥೆಯಿದು. ಜಿಜ್ಞಾಸೆಗಳನ್ನು ಹುಟ್ಟಿಸಿ.. ತರ್ಕವನ್ನು ಬೆಳೆಸಿ.. ಉತ್ತರ ಕೊಟ್ಟೂ ಅದು ಪೂರ್ತಿ ಅರಿವಾಗದಂಥ ಕಥೆಯಿದು. ಇದರ ಕೊನೆಯೇಕೋ ನನಗಷ್ಟು ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಬಲ್ಲವರಲ್ಲಿ ಚರ್ಚಿಸಬೇಕೆಂದಿರುವೆ. ಮತ್ತೊಮ್ಮೆ ಮಗದೊಮ್ಮೆ ಓದನ್ನು ಬೇಡುವಂಥ ಕಥೆಯಿದು. ಮನಸ್ಸು, ಅಭ್ಯಾಸ, ಸ್ವಭಾವ - ಈ ಮೂರರೊಳಗೆ ಯಾವುದು ಮೆಚ್ಚಾಗಬೇಕು ಎಂದು ಚಿಂತಿಸುತ್ತಲೇ ಇದ್ದೇನೆ ಇನ್ನೂ.

ಚೆನ್ನೆಮಣೆ ಕಥೆಯೂ ಚೆನ್ನಾಗಿದೆ. ಮನುಷ್ಯನ ‘ಅಹಂ’ ಎನ್ನುವುದು ಪರಾಕಷ್ಟೆಯನ್ನು ತಲುಪಿದಾಗ ಎಷ್ಟೆಲ್ಲಾ ದುರಂತಗಳು ನಡೆಯಬಲ್ಲವು ಎಂಬುದಕ್ಕೊಂದು ಸ್ಪಷ್ಟ ನಿದರ್ಶನ ನೀಡುವಂಥ ಕಥೆಯಿದು. ಹಣೆದ ರೀತಿ ಬಲು ಇಷ್ಟವಾಯಿತು.

ಚಿನ್ನದ ಚೇಳು ಕಥೆ ಮಕ್ಕಳಿಗೆ ಹೇಳಿ ಮಾಡಿಸಿದಂತಿದೆ. ನೀತಿ ಪಾಠವನ್ನು ನೇರವಾಗಿ ಸಾರುವ ಕಥೆಯನ್ನು ರಮ್ಯವಾಗಿ ಕಣ್ಣಿಗೆ ಕಟ್ಟುವಂತೇ ಮಕ್ಕಳಿಗೆ ಹೇಳಿದರೆ, ಅವರ ಹಾವ ಭಾವವನ್ನು ನೋಡಿ ನಾವೂ ರಂಜಿಸಬಹುದು. ಅದರಲ್ಲೂ ಈ ಕಥೆಯಲ್ಲಿ ಬರುವ ಭೂತ "ನಾನು ಹಾರಲೋ! ಹಾರಲೋ!" ಎಂದು ಹೇಳುವುದನ್ನು ಓದಿದಾಕ್ಷಣ ಯಾಕೋ ನಗು ಅವ್ಯಾಹತವಾಗಿ ಉಕ್ಕಿತು. :) ಭೂತವೊಂದು ಹೀಗೆ ಕೇಳಿ ಹಾರಿ.. ಸುರಿಸುವ ಧನವನ್ನು ಬಾಚಲು ಸಾಧ್ಯವಾಗುವಂತಿದ್ದರೆ ಇಂದಿನ ಯುಗದಲ್ಲಿ ಎಷ್ಟು ಜನ ಆ ಭೂತವನ್ನೇ ಹಾರಿಸಿಕೊಂಡು ಹೋಗುತ್ತಿದ್ದರೇನೋ ಎಂದೇ ಊಹಿಸಿಕೊಂಡು ಮನಸಾರೆ ನಕ್ಕುಬಿಟ್ಟೆ.

ಶಕುಂತಳೆ ಕಥೆಯಲ್ಲೇನೂ ವಿಶೇಷ ಕಾಣಲಿಲ್ಲ. ಮೊದಲೇ ಈ ಕಥೆಯ ವಿವಿಧ ರೂಪಗಳನ್ನು ಹತ್ತು ಹಲವೆಡೆ ಓದಿದ್ದರಿಂದಲೋ ಏನೋ.. ವಿಶೇಷತೆ ಕಾಣಲಿಲ್ಲ.

‘ಮಹಾರಾಣಿ ಲಕ್ಷ್ಮೀಬಾಯಿ’ ಕಥೆಯಿಂದ
ಆದರೆ ಈ ಮೊದಲೇ ಹಲವೆಡೆ ಓದಿದ್ದರೂ "ಮಹಾರಾಣಿ ಲಕ್ಷ್ಮೀಬಾಯಿ’ ಕಥೆ ವಿಶಿಷ್ಟವೆನಿಸಿತು! ಅದರಲ್ಲೂ ಈ ಕಥೆಯಲ್ಲಿ ಬರುವ ಒಂದೆರಡು ಪ್ಯಾರ ವಿಶೇಷ ಗಮನ ಸೆಳೆಯಿತು. ಅವುಗಳ ಫೋಟೋ ಲಗತ್ತಿಸಿದ್ದೇನೆ ಓದಿಕೊಳ್ಳಿ ಬೇಕಿದ್ದರೆ. ಲಕ್ಷ್ಮೀಬಾಯಿಯ ಕುರಿತು ಅನೇಕ ಅತಿ ರಂಜಿತ ಕಥೆಗಳನ್ನೋದಿದ್ದೇನೆ.. ಈವರೆಗೂ ತಿಳಿಯದ ಕೆಲವು ವಿಷಯಗಳನ್ನು ಇಲ್ಲಿ ಓದಲು ಸಿಕ್ಕಿತು. ಈ ರಾಣಿಯ ಬಗ್ಗೆ ಖಚಿತ ಮಾಹಿತಿಯುಳ್ಳ.. ಕೆಲವು ಇತಿಹಾಸಗಾರರಿಂದ ತಿರುಚಲಾಗದೇ ಹಾಗೇ ಉಳಿದಿರುವ ನಿಜ ಇತಿಹಾಸವನ್ನು ಓದುವ ಮನಸ್ಸಾಗಿದೆ. ಸಾಧ್ಯವಾದರೆ ಓದಬೇಕು.
‘ಮಹಾರಾಣಿ ಲಕ್ಷ್ಮೀಬಾಯಿ’ ಕಥೆಯಿಂದ

ಪಳಮೆಗಳು ಕಥಾಸಂಕಲನದಲ್ಲಿ ಬರುವ ಕಥೆಗಳನ್ನು ಆ ಕಾಲಘಟ್ಟದ ನೆಲೆಯಲ್ಲಿಟ್ಟು ನೋಡಿದರೆ ಅವುಗಳೊಳಗಿನ ವಿಶೇಷತೆಗಳು ನಮಗೆ ಹೊಳೆಯುತ್ತವೆ. ನಿರೂಪಣೆಯಲ್ಲಿರುವ ಮುಗ್ಧತೆ, ಸಹಜತೆ, ನಿಷ್ಕಲ್ಮಶತೆ ಸಹೃದಯ ಓದುಗರನ್ನು ಸಹಜವಾಗಿ ಸೆಳೆದು ಬಿಡುತ್ತವೆ. ಆ ಕಾಲದಲ್ಲಿ, ಆ ಪ್ರದೇಶದಲ್ಲಿ ಪ್ರಚಲಿತವಾಗಿದ್ದ ಅನೇಕ ದೇಸೀಯ ಶಬ್ದಗಳ ಪರಿಚಯವಾಗುತ್ತದೆ.. ಜನ ಜೀವನದ ಪರಿಚಯವಾಗುತ್ತದೆ.. ಅಂದಿನ ಜನರಲ್ಲಿ ಉಳಿದಿದ್ದ ಸತ್ಯ ಸಂಧದತೆ.. ಸಮಾಜದ ಪ್ರತಿ ಅವರಿಗಿದ್ದ ಜವಾಬ್ದಾರಿ, ಪರಸ್ಪರ ಮನುಷ್ಯರೊಳಗಿದ್ದ ಕಾರುಣ್ಯ, ಸಹನಶೀಲತೆ ಪ್ರಕಟಗೊಳ್ಳುತ್ತದೆ. ಹಾಗೆಯೇ ಕ್ರೌರ್ಯ, ಮನೋ ವಿಕೃತಿ, ದಬ್ಬಾಳಿಕೆಗಳು ಕಾಲಾತೀತ, ದೇಶಾತೀತ ಎನ್ನುವುದು ಮತ್ತೆ ಸ್ಪಷ್ಟವಾಗುತ್ತದೆ.

~ತೇಜಸ್ವಿನಿ ಹೆಗಡೆ.

ಶುಕ್ರವಾರ, ಜುಲೈ 14, 2017

‘ದಕ್ಕಿದಷ್ಟು ಸಾಗರ, ಸಿಕ್ಕಿದಷ್ಟು ಹಿಮಾಲಯ...’

ಛಾಯಾ ಭಗವತಿಯವರ ಸರಿಯಾದ ಪರಿಚಯ ನನಗಾಗಿದ್ದು ತೀರಾ ಇತ್ತೀಚಿಗೆ. ಅದೂ ಸೋಶಿಯಲ್ ಮೀಡಿಯಾಗಳ ಮೂಲಕ. ಆದರೂ ಅವರ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಒಂದೆರಡು ಕಥೆಗಳ ಕುರಿತು ಸಂವಾದಿಸಿದ್ದು ಬಿಟ್ಟರೆ. ಬಹಳ ಹಿಂದೆ ಅವರ ಫೇಸ್ಬುಕ್ ವಾಲ್ನಲ್ಲಿ ಅವರ ಪ್ರವಾಸ ಕಥನವಾದ "ಹಿಮಗಿರಿಯಾನ" ಬಿಡುಗಡೆಗೊಳ್ಳುತ್ತಿರುವುದರ ಕುರಿತು ಓದಿ ಅಚ್ಚರಿಗೊಂಡಿದ್ದೆ. ಇದಕ್ಕೆ ಕಾರಣ.. ಹಿಮಾಲಯ ಎಂದರೇ ಏನೋ ಅನಿರ್ವಚನೀಯ ಆನಂದ ಪುಳಕ ನನ್ನೊಳಗಾಗುವುದು. ಆದರೆ ಮತ್ತೆಂದಾದರೂ ಓದಿದರಾಯಿತು ಎಂದು ಅಲ್ಲೇ ಸುಮ್ಮನಿದ್ದುಬಿಟ್ಟಿದ್ದೆ. ಮೊನ್ನೆ ಹೀಗೇ ಅಚಾನಕ್ಕಾಗಿ ಆ ಪುಸ್ತಕದ ನೆನಪಾಯಿತು. ಎರಡ್ಮೂರು ತಿಂಗಳಿಗಾದರೂ ಒಮ್ಮೆ ಒಂದಾದರೂ ಹೊಸ ಪುಸ್ತಕದ ಸುವಾಸನೆ ನೋಡದಿದ್ದರೆ ನನಗೇನೋ ಅನ್ನಿಸಿಬಿಡುತ್ತದೆ. ಈ ಸಲ ರೇಖಾ ಕಾಖಂಡಕಿಯವರ ‘ವೈವಸ್ವತ’ದ ಜೊತೆ ಛಾಯಾ ಅವರ ‘ಹಿಮಗಿರಿಯಾನ’ವನ್ನೂ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದಾಯಿತು. ಮೊದಲು ವೈವಸ್ವತವನ್ನೇ ಓದಬೇಕೆಂದು ಆಶಿಸಿದ್ದೆ.. ಅದಕ್ಕೆ ಕಾರಣ ಕಾದಂಬರಿಯ ಶೀರ್ಷಿಕೆಯ ಮೇಲಣ ಸೆಳೆತ!! ಆದರೆ ಇಂದು ಮಧ್ಯಾಹ್ನ ಕೊರಿಯರ್ ಬಂದಾಗ ಅದರ ಸೈಜ್ ನೋಡಿಯೇ ತಿಳಿಯಿತು ಇದು ಹಿಮಗಿರಿಯಾನವೆಂದು. ಈ ಮೊದಲೇ ಓದಲು ಕೈಗೆತ್ತಿಕೊಂಡಿದ್ದ, ಮೆಲ್ಲನೆ ಪೆಪ್ಪರ್ಮೆಂಟಿನಂತೇ ಸವಿಯುತ್ತಿದ್ದ ‘ಯೇಗ್ದಾಗೆಲ್ಲಾ ಐತೆ’ ಪುಸ್ತಕವನ್ನೇ ಮೊದಲು ಪೂರ್ತಿ ಮುಗಿಸಬೇಕೆಂದು ಸುಮ್ಮನಾದೆ. ಊಟವಾದ ನಂತರ ಹಾಗೇ ಕಣ್ಣಾಡಿಸಲೋಸುಗ ಪುಸ್ತಕ ತೆರೆದದ್ದೇ ಬಂತು.. ಮಧ್ಯ ಮಗಳು ಸ್ಕೂಲಿಗೆ ಬಂದಾಗ ಕೊಟ್ಟ ಅರ್ಧಗಂಟೆಯ ಬ್ರೇಕ್ ಬಿಟ್ಟರೆ ಮತ್ತೆ ಓದಿನ ಯಾನ ಮುಗಿಸಿದ್ದು ಪುಸ್ತಕದ ಕೊನೆಯ ಪುಟಕ್ಕೇ! ಸದ್ಯದಲ್ಲಿ ಯಾವ ಪುಸ್ತಕವೂ ನನ್ನ ಹೀಗೆ ಸೆಳೆದು ಓದಿಸಿಕೊಂಡಿದ್ದಿಲ್ಲ ಎಂದೆನ್ನಬಹುದು. ಇದಕ್ಕೆ ಕಾರಣ ಬಹುಶಃ ನನ್ನೊಳಗೆ ಸುಪ್ತವಾಗಿ ಅಡಗಿರುವ ಹಿಮಾಲ ಯಾನದ ಆಶಯವೂ ಕಾರಣವಾಗಿದ್ದಿರಬಹುದು. ಆದರೆ ನನ್ನ ಗಟ್ಟಿಯಾಗಿ ಹಿಡಿದಿಟ್ಟಿದ್ದು ಮುನ್ನುಡಿಯಿಂದ ಹಿಡಿದು ಕೊನೆಯ ಪುಟದವರೆಗು ಅರಳಿದ್ದ ಅಕ್ಷರ ಮಲ್ಲಿಗೆಗಳ ಘಮ!

79 ಪುಟಗಳ ಈ ಪುಟ್ಟ ಹೊತ್ತಿಗೆಯೊಳಗೆ ತುಂಬಿರುವುದು ಅಗಾಧ! ಲೇಖಕಿಯ ಬರಹದೊಳಗೆ ಅಡಗಿರುವ ಸರಳತೆ, ಪ್ರಾಮಾಣಿಕತೆ, ಜೀವನೋತ್ಸಾಹ, ಒಳ ಧ್ವನಿಗಳಿಗೆ ಆಕೆ ಕೊಡುವ ಸ್ಪಂದನ, ತಾನು ಅನುಭವಿಸಿದ್ದನ್ನು ಓದುಗನಿಗೆ ದಾಟಿಸುವ ಅಪಾರ ಕೌತಕ, ಮಗುವಿನ ಉತ್ಸಾಹ.. ಎಲ್ಲವೂ ನಮ್ಮನ್ನಾವರಿಸಿಕೊಂಡುಬಿಡುತ್ತದೆ. ಹಿಮಾಲಯದ ‘ಬೃಹತ್-ಮಹತ್’ಗಳನ್ನು ಅರಿಯಲು ಹಿಮ ಪರ್ವತವನ್ನೇ ಏರಬೇಕೆಂದಿಲ್ಲ.. ಅಲ್ಲಿಯ ಕಂಡು ಕೇಳರಿಯದ ಪುಟ್ಟ ಹಳ್ಳಿಗಳಲ್ಲಿ ಹತ್ತು ದಿನಗಳ ಕಳೆದರೂ ಸಾಕು ಎಂಬುದನ್ನು ಚೆಂದವಾಗಿ ಮನಗಾಣಿಸುತ್ತದೆ ಈ ಪ್ರವಾಸ ಕಥನ. ಮತ್ತೊಂದು ವಿಶೇಷವೆಂದರೆ.. ಪ್ರತಿಯೊಂದ ಪುಟ್ಟ ಅಧ್ಯಾಯಕ್ಕೂ ಸುಂದರ, ಅರ್ಥವತ್ತಾದ ಶೀರ್ಷಿಕೆಯನ್ನಿತ್ತು ಅದರೊಳಗಿನ ಸತ್ವದ ಎಳೆಯನ್ನು ಬಿಟ್ಟುಕೊಡುತ್ತಾ ಹೋಗುವುದು.  ಶೀರ್ಷಿಕೆಯನ್ನೋದುತ್ತಿರುವಂತೇ ಮನಸು ಕಲ್ಪನೆಗೆ ಎಳೆದೊಯ್ದು ಬಿಡುತ್ತದೆ.. ಉದಾ: ಚಂಢೀಗಢವೆಂಬ ಕೊಯಿದಿಟ್ಟ ಕೇಕಿನಂತಹ ನಗರ.."
ಚಂದ್ರಶೇಖರ ಆಲೂರು ಅವರ ಮುನ್ನುಡಿ ಪ್ರಯಾಣದೊಳಗಿನ ಕುತೂಹಲಕ್ಕೆ ನೀರೆರೆವಂತಿದ್ದು.. ಈ ಯಾನದೊಳಗಿನ ಅಂತಃಸತ್ವವನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಇದನ್ನು ಪ್ರಕಟಿಸಿದ್ದು ಗುಬ್ಬಚ್ಚಿ ಸತೀಶ್ ಅವರ ಗೋಮಿನಿ ಪ್ರಕಾಶನ.
********

ಈ ಕಥನದ ಆರಂಭದಲ್ಲಿ ಲೇಖಕಿಯವರು ತಮ್ಮ ಪುಟ್ಟ ಮಕ್ಕಳನ್ನು, ಪತಿಯನ್ನು ಬಿಟ್ಟು ಹತ್ತು ದಿನ ಅಷ್ಟು ದೂರ ಹೊರಡುವಾಗ ಎಷ್ಟೆಲ್ಲಾ ಮಾನಸಿಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಯಿತೆಂಬುದನ್ನು ಎಷ್ಟು ಮನಮುಟ್ಟುವಂತೇ ಬರೆದಿದ್ದಾರೆಂದರೆ.. ಪುಟ್ಟ ಮಕ್ಕಳಿರುವ.. ಆ ಬಾಲ್ಯಾವಸ್ಥೆಯನ್ನು ಕಂಡಿರುವ ಪ್ರತಿಯೊಬ್ಬ ತಾಯಿಗೂ ಇದು ಮೆಚ್ಚಾಗುತ್ತಾ ಹೋಗುತ್ತದೆ. ಓರ್ವ ತಂದೆ ದೂರದ ಪ್ರವಾಸಕ್ಕೆ ಹೋಗುವುದಕ್ಕೂ, ತಾಯಿ ಹೊರಡುವುದಕ್ಕೂ ನಮ್ಮಲ್ಲಿ ಎಷ್ಟು ವ್ಯತ್ಯಾಸವಿರುತ್ತದೆ ಎಂಬುದು ಎಲ್ಲಾ ತಾಯಂದಿರಿಗೂ ಚೆನ್ನಾಗಿ ಗೊತ್ತಿರುತ್ತದೆ. ಅಂಥ ಸಮಯದಲ್ಲಿ ಪತಿಯ, ಮನೆಯವರ ಆಸರೆ ಬಹು ಮುಖ್ಯ. ಅದು ಲಭಿಸಿದರೂ ಮಕ್ಕಳ ಗೋಳು, ಸ್ವತಃ ಮನದೊಳಗಿನ ಆತಂಕ, ದೌರ್ಬಲ್ಯ ಮೀರಿ ಹೊರಡುವುದು ನಿಜಕ್ಕೂ ಯಾವುದೇ ಹಿಮಾಲಯವನ್ನೇರುವುದಕ್ಕೂ ಕಡಿಮೆಯದ್ದೇನಲ್ಲಾ ಎಂಬುದು ನನ್ನ ಸ್ವಂತ ಅನುಭವವೂ ಹೌದು. ಸ್ವತಃ ನನ್ನ ಪುಟ್ಟಿಯೇ ಒಂದು ರಾತ್ರಿ ಅಜ್ಜಿ ಮನೆಯಲ್ಲಿರುವಾಗಲೂ ನಿದ್ದೆ ಬೀಳುವವರೆಗೂ ಆಗೀಗ ಕಾಲ್ ಮಾಡ್ತಿರ್ತಾಳೆ. ಈ ಅಧ್ಯಾಯವನ್ನೋದುತ್ತಿರುವಾಗಲೇ ನನ್ನ ಮಗಳು ಸ್ಕೂಲಿನಿಂದ ಬಂದಳು. ಅವಳ ಶಾಲಾ ಪ್ರವರಕ್ಕಾಗಿ ನಾನೊಂದು ಒತ್ತಾಯದ ಪಾಸ್ ಓದಿಗೆ ಕೊಡಲೇಬೇಕಾಯಿತು. ಆಗ ಲೇಖಕಿ ಇಲ್ಲೊಂದೆಡೆ ಸಣ್ಣ ಟ್ರಯಲ್ ಮಕ್ಕಳಿಗೆ ಮಾಡಿದಂತೇ ನಾನೂ ಮಾಡುವ ತುಂಟ ಆಲೋಚನೆ ಬಂದು ಮಗಳನ್ನು ಕೇಳಿದೆ.. "ಅಮ್ಮ ಕೆಲವು ದಿವ್ಸ ಏನೋ ಅರ್ಜೆಂಟ್ ಕೆಲ್ಸದ ಮೇಲೆ ಹೊರಗೆ ಹೋಗ್ತೀನಿ.. ಅಜ್ಜಿ, ಅಪ್ಪ ಎಲ್ಲಾ ಇರ್ತಾರೆ.. ಇರ್ತೀಯಾ ಪುಟ್ಟಾ.." ಎಂದಿದ್ದೇ, ಐದನೇ ತರಗತಿಯ ಆ ಪೋರಿ ಥಟ್ಟನೆ ನನ್ನ ಕಾಲಿಗೆ ಬಿದ್ದು ಗೋಳಾಡಿ.. ಸೀನ್ ಕ್ರಿಯೇಟ್ಮಾಡಿ.. ನಾನು ಹೋಗಲ್ಲಾ ಮಾರಾಯ್ತಿ ಎಂದು ಗಟ್ಟಿಯಾಗಿ ಹೇಳಿದಾಕ್ಷಣ.. ಅದೆಲ್ಲೆಂದಲೋ ಧುಮಕಲು ರೆಡಿಯಾಗಿದ್ದ ಕಣ್ಣಿರುಗಳೆಲ್ಲಾ ಇಂಗಿ ಹೋಗಿ.. ಜೋರಾಗಿ ನಕ್ಕು ತನ್ನ ಕ್ಲಾಸ್ ಪ್ರವರ ಮುಂದುವರಿಸಿದಳು. ದೊಡ್ಡ ನಾಟಕ್ ಬಾಜ್! ಆದರೆ ಹೊರಟು ನಿಂತರೆ ಇದು ದೊಡ್ಡ ರಾಮಾಯಣವೇ ಆಗಬಹುದಾದ ಎಲ್ಲಾ ಲಕ್ಷಣ ಆ ಐದು ನಿಮಿಷದೊಳಗೇ ನನಗೆ ದೊರಕಿ ಬಿಟ್ಟೀತು!

ಬಹಳ ಹಿಂದೆ ಯಾರೋ ಹಿರಿಯರು ನನಗೆ ಹೇಳಿದ್ದರು.. "ಈ ಕ್ಷಣ ನಿನ್ನ ಕಣ್ಮುಂದಿರುವುದಷ್ಟೇ ಬದುಕು.. ಜೀವನ ಅಂತ ಜೀವಿಸ್ಬಿಡ್ಬೇಕಮ್ಮಾ.. ನಾಳೆಯ ಬಗ್ಗೆ ಬಹಳ ಚಿಂತಿಸಿದರೆ ಆತಂಕವಾಗುವುದು.. ನಿನ್ನೆಯ ಕುರಿತು ಕೊರಗುತ್ತಾ ಹೋದರೆ ವ್ಯಸನ ಬೆಳೆವುದು.." ಎಂದು. ಅದು ನಿಜ ಎಂದು ಬಹಳ ಸಲ ಅನ್ನಿಸಿದ್ದರೂ, ಹಾಳಾದ ಮನಸು ಮಾತ್ರ ತನ್ನ ಚಾಳಿ ಆಗೀಗ ಮುಂದುವರಿಸಿ ಲೈಟಾಗಿ ಕೆಟ್ಟು.. ಹೇಗೋ ರಿಪೇರಿಯಾಗುತ್ತಿರುತ್ತದೆ. ಈ ಪ್ರವಾಸ ಕಥನದಲ್ಲೊಂದೆಡೆ ಲೇಖಕಿ "ಈ ಕ್ಷಣವೇ ಸತ್ಯ, ಸತ್ಯದ ಈ ಕ್ಷಣವನ್ನಷ್ಟೇ ಮನಸಾರೆ ಜೀವಿಸು" ಎಂದು ಹೇಳಿದ್ದನ್ನು ಓದಿದಾಗ ಆಹ್.. ಎಷ್ಟು ನಿಜ..! ಅಂದು ಅವರೂ ಹಾಗೇ ಹೇಳಿದ್ದರಲ್ಲಾ.. ಎಂದೆನಿಸಿ ಹಳೆಯ ಎಳೆಗೊಂದು ಬಲ ಸಿಕ್ಕಂತಾಯ್ತು. ಲೇಖಕಿಯೇ ಹೇಳುವಂತೇ.. ಜೀವನದ ಅಚ್ಚರಿಗಾಗಿ ಸಮಯ ವ್ಯರ್ಥ ಮಾಡದೇ, ಅಚ್ಚರಿ ಘಟಿಸಿದಾಗ ಮನಸೋ ಇಚ್ಛೆ ಅನುಭವಿಸಿಬಿಡಬೇಕು.

ಹಿಮಾಲಯದ ತಪ್ಪಲಿನಲ್ಲಿದ್ದ ಸೋಲನ್, ಶಿಲ್ಲಿ, ಶಿಮ್ಲಾ, ಸಾಂಗ್ಲ.. ಮುಂತಾದ ನಾನೀವರೆಗೂ ಕಂಡು ಕೇಳರಿಯದ (ಶಿಮ್ಲಾ ಹೆಸ್ರು ಮಾತ್ರ ಕೇಳಿದ್ದೇನೆ ಹಲವು ಬಾರಿ..) ಪುಟ್ಟ ಪುಟ್ಟ ಹಳ್ಳಿಗಳ ಸುಂದರ, ಸ್ಪಷ್ಟ, ಮನದೊಳಗೆ ಮನಮಾಡುವಂಥ ಚಿತ್ರಣ.. ನಾನಲ್ಲಿ ಇಲ್ಲದೆಯೂ.. ಹೋಗದೆಯೂ ಅವರೊಂದಿಗೇ ಆ ಕಾಡು, ಹಿಮ, ಬಯಲುಗಳಲ್ಲಿ ಓಡಾಡಿದಂಥ ಕಲ್ಪನೆ ಮಾಡಿಕೊಂಡು ಖುಶಿ ಪಡುವಂಥ ರಮ್ಯ ನಿರೂಪಣೆ.. ಎಲ್ಲವುದರ ಇಂಚಿಂಚಿನ್ನೂ ಚಪ್ಪರಿಸಿದೆ.

ಈ ಪ್ರವಾಸ ಕಥನದಲ್ಲಿ ಒಂದೆಡೆ ಒಂದು ಹಳ್ಳಿಯಲ್ಲಿ ಚಾಲ್ತಿಯಲ್ಲಿದ್ದ ವಿಚಿತ್ರ, ಬೇಸರ ತರುವಂಥ ಪದ್ಧತಿಯ ಉಲ್ಲೇಖವಿದೆ. ಅದಕ್ಕವರು "ಆಧುನಿಕ ದ್ರೌಪದಿಯರು" ಎಂದು ಶೀರ್ಷಿಕೆ ಕೊಡುತ್ತಾರೆ. ಅದನ್ನೋದಿಯೇ ಒಳಗಿರಬಹುದಾದಂಥ ಮಾಹಿತಿಯ ಸುಳಿವು ಸಿಕ್ಕಿತ್ತು. ಗಂಡು ಸಂತಾನಗಳಿಲ್ಲ ಎಂಬ ನೆಪವೊಡ್ಡಿಯೋ ಇಲ್ಲಾ ಮನೆಯಲ್ಲಿರುವ ನಾಲ್ಕೈದು ಗಂಡು ಮಕ್ಕಳಿಗೆ ಬೇರೆ ಬೇರೆ ಮದುವೆ ಮಾಡಿಸಿದರೆ ಅವರ ಹೊಟ್ಟೆ ಹೊರೆಯುವಷ್ಟು ಆರ್ಥಿಕಾನುಕೂಲತೆ ಇಲ್ಲವೆಂಬ ಕಟು ವಾಸ್ತವಿಕತೆಗೋ ಅಲ್ಲಿಯ ಸಮಾಜ ಬಹುಪತಿತ್ವ ಪದ್ಧತಿಯನ್ನು ಜಾರಿಯಲ್ಲಿಟ್ಟಿದೆಯಂತೆ. ನಿಜ.. ಹೆಣ್ಣಿನ ಮರ್ಜಿ ಇದೆಯೋ ಇಲ್ಲವೋ ಅವಳು ಒಪ್ಪಲೇಬೇಕು ಇಂಥಾ ಬಲಾತ್ಕಾರಕ್ಕೆ! ಆದರೆ ಒಂದೆಡೆ ಅವರು "ಮೂವರು ಅಕ್ಕತಂಗಿಯರು ಒಬ್ಬನನ್ನೇ ವರಿಸಿ ಸುಖವಾಗಿರುವುದನ್ನೂ ಕೇಳಿಸಿಕೊಂಡೆ.."ಎಂದು ಹೇಳುತ್ತಾರೆ. ಆಗ ನನಗನಿಸಿದ್ದೇನೆಂದರೆ.. ಇದು ಸರಿಯಲ್ಲ.. ಇದು ನಮ್ಮ ಮೇಲಾಗುತ್ತಿರುವ ಹೇರಿಕೆ, ದೌರ್ಜನ್ಯ.. ಖಂಡಿಸಬೇಕು.. ಎಂಬ ಈ ಯಾವ ಭಾವಗಳೂ ಹುಟ್ಟಿಲ್ಲದಿದ್ದಾಗ ಮನುಷ್ಯ(ಹೆಣ್ಣಿರಲಿ/ಗಂಡಿರಲಿ) ಅದನ್ನು ಮನಸಾರೆ ಒಪ್ಪಿ ಬಿಡುತ್ತಾನೆ ಮತ್ತು ಅದು ಅವನಿಗೆ ಯಾವುದೇ ಮಾನಸಿಕ/ದೈಹಿಕ ಬಾಧೆ ನೀಡದು. ಮನಸೊಪ್ಪಿದಾಗ ಎಲ್ಲವೂ ಸರಿಯೇ.. ಆದರೆ ಪ್ರಶ್ನೆಯೆದ್ದು ಬಿಟ್ಟಾಗ.. ಧಿಕ್ಕರಿಸಲು ಮನಸು ತೊಡಗಿದಾಗ, ತಿರಸ್ಕರಿಸಿದಾಗ ಮಾತ್ರ ಅದು ಇನ್ನಿಲ್ಲದ ಹಿಂಸೆ!

ದಿಲ್ಲಿಯಾದರೇನು ಶಿವಾ.. ಹಳ್ಳಿಯಾದರೇನು ಶಿವಾ ಎಂಬ ಹಾಡಿನಂತೇ ಕೆಲವೊಂದು ಬವಣೆಗಳಿಗೆ ಎಲ್ಲಿ ಹೋದರೂ ಮುಕ್ತಿಯಿಲ್ಲ. ಅದಕ್ಕೆ ಮತ್ತೆ ಮತ್ತೆ ನಿದರ್ಶನ ಸಿಗುತ್ತಾ ಹೋಗುತ್ತದೆ. ಇಲ್ಲಿಯೂ ಲೇಖಕಿ ಹಿಮಾಲಯದ ಆ ಹಳ್ಳಿಗಳ ಹೆಣ್ಮಕ್ಕಳು ದುಡಿವ ರೀತಿಗೆ, ಶ್ರಮ ಜೀವನ ನೆಡೆಸುತ್ತಾ ನಗುವ ಪರಿಗೆ.. ಗಂಡು ಮಕ್ಕಳಿಗಿಂತಲೂ ಬಹು ಪಾಲು ಜಾಸ್ತಿ ಶಕ್ತಿ ಹಾಕುತ್ತಾ ಮನೆಯ ಒಳ ಹೊರಗನ್ನು ನಿಭಾಯಿಸುವ ಛಾತಿಗೆ ಬೆರಗಾಗುತ್ತಾ "ಎಲ್ಲಾ ಊರುಗಳ ಒಲೆಯ ಮಾದರಿ ಬೇರೆಯಾದರೇನಂತೆ, ಕುದಿ, ಉರಿ, ಝಳ, ಸಿಡಿವ ಕಿಡಿಯ ಗಾಯ ಒಂದೇ ಅಲ್ಲವೇ?" ಎನ್ನುತ್ತಾರೆ. ಇದನ್ನೋದಿ ಛಕ್ಕನೆ ಹೊಸ ಕಿಡಿಯೊಂದು ನನ್ನೊಳಗು ಹೊತ್ತಿ ಅಷ್ಟೊತ್ತೂ ಹಿಮಗಿರಿಯ ಯಾನದಲ್ಲಿ ತಂಪೆದ್ದ ಮೈ, ಮನಸು ಬಿಸಿಯಾಯಿತು. ಇಂತಹ ಅನೇಕ ಸಣ್ಣ ಪುಟ್ಟ ಚುರುಕು ಮುಟ್ಟಿಸುವ, ಸಣ್ಣ ಏಟು ಕೊಟ್ಟು ಎಬ್ಬಿಸುವಂಥ ಮಾತುಗಳು, ಅರಳಿಸುವ ಉಪಮೆಗಳು ಆಗಾಗ ಹಿಮನದಿಯ ಝರಿಯಂತೇ ಬರಹದ ನಡುವೆ ನಮಗೆ ಸಿಗುತ್ತಾ ಹೋಗುವವು.

‘ಹಿಮಗಿರಿಯಾನ’ ನನಗೇಕೆ ಇಷ್ಟು ಇಷ್ಟವಾಯಿತೋ.. ಇಷ್ಟು ಒಳಕ್ಕಿಳಿದು ಕಾಡುತಿಹುದೋ ಎಂದು ಅರೆಕ್ಷಣ ಆಲೋಚಿಸಿದಾಗ ಅನಿಸಿದ್ದು.. ಇದರಲ್ಲಿ ಉಲ್ಲೇಖಿಸಲ್ಪಟ್ಟ ಬಹಳಷ್ಟು ವಿಷಯಗಳು, ಪ್ರಸಂಗಗಳು ನನ್ನ ಬದುಕಿನ ಗತಕಾಲದ, ಪ್ರಸ್ತುತ ನಡೆಯುತ್ತಿರುವ ಹಳೆಯ/ಹೊಸ ಘಟನಾವಳಿಗಳ ಜೊತೆ ನನ್ನ ಮಾನಸು ಥಳಕು ಹಾಕಿದ್ದು.. ನಾನು ಅವುಗಳನ್ನು ಸಮೀಕರಿಸಿಕೊಂಡಿದ್ದು.. ಇದೇ ಕಾರಣಗಳಿಂದಲೇ ಬಹುಶಃ ಇದು ನನಗೆ ಪುಟ್ಟದಾಗಿದ್ದರೂ ಮಹತ್ತಾದ ವಿಷಯಗಳನ್ನು ಅರುಹಿದೆ ಎಂದೆನಿಸಿದೆ. ಯಾವುದೇ ಪುಸ್ತಕವನ್ನೋದುವಾಗ ಅದರ ಜೊತೆ ನಮ್ಮ ಅಂತಃಸತ್ವ, ಒಳಧ್ವನಿಯೂ ಜೊತೆಗೂಡಿ ಬಿಟ್ಟರೆ ಅದರ ಜೊತೆ ಒಂದು ಅವಿನಾಭಾವ ನಂಟು ಏರ್ಪಡುತ್ತದೆಯಂತೆ.. ಅದೇ ಇಲ್ಲಿ ನನ್ನೊಂದಿಗೂ ಆಯಿತು. ಬಹಳ ಬೇಗ ಮುಗಿದೇ ಹೋಯಿತೇ ಈ ಯಾನ ಎಂಬ ವಿಷಾದವೊಂದು ಕೊನೆಗೆ ಸಣ್ಣಗೆ ಕಾಡಿತು.. ಜೊತೆಗೆ ಈ ಜನ್ಮದಲ್ಲಿ ನಾನೆಂದೂ ಈ ಎಲ್ಲಾ ರಮ್ಯತಾಣಗಳನ್ನು ಇವರಂತೇ ಕಣ್ತುಂಬಿಕೊಳ್ಳಬಲ್ಲೆನೆ?! ಎಂಬ ಕೊರಗೂ... (ಪ್ರಶ್ನಾರ್ಥಕವೇಕೆಂದರೆ.. ‘ಎಂದಾದರೊಂದು ದಿನ..’ ಎಂದ ಎಕ್ಕುಂಡಿಯವರ ಸಾಲು ನನಗೆ ಆಶಾದೀಪದಂತೇ..).

ಮನದೊಳಗೆ ಅಚ್ಚಾಗುವಂಥ ಹಲವು ಚಿತ್ರಣಗಳು ಇಲ್ಲಿ ಸಿಕ್ಕಿದ್ದರೂ... ನನ್ನ ಬಹಳ ತಾಗಿದ್ದು ಈ ಸಾಲುಗಳು..
"ಬದುಕಿನಲ್ಲಿ ಎಡವಿದ್ದು, ಏನೂ ಆಗಿಯೇ ಇಲ್ಲವೇನೋ ಎಂಬಂತೆ ಮತ್ತೆ ಮತ್ತೆ ಎದ್ದು ನಿಂತದ್ದು, ಮುಂದೆ ನಡೆದದ್ದು ಅದೆಷ್ಟು ಸಲವೋ! ಲೆಕ್ಕ ಮಾಡುತ್ತ ಕೂತರೆ ತಲೆ ಕೆಟ್ಟ ಮೊಸರಿನ ಗಡಿಗೆಯಾಗುತ್ತದೆ. ಅದೊಂಥರಾ ಸೈಕಲ್ ಕಲಿಯುವಾಗ ಬಿದ್ದೂ ಎದ್ದೂ ಮಾಡಿದಂತೆ! ಇಳಿಜಾರಿನಲ್ಲಿ ಸಲೀಸು, ಏರು ದಿಬ್ಬಗಳಿದ್ದಾಗ ಉಸಿರೇ ನಿಂತಂತೆ! ಕೈಕಾಲುಗಳ ತುಂಬೆಲ್ಲಾ ಗಾಯ, ಆದರೂ ಸೈಕಲ್ ಓಡಿಸಲು ಕಲಿತ ರೋಮಾಂಚನ! ಜೀವನದ ಸೈಕಲ್ ತುಳಿಯುವಾಗಲೂ ಹಲವು ಸಲ ಇದೇ ಉದಾರಹಣೆಯನ್ನು ಮನಸಿಗೆ ತಂದುಕೊಂಡು, ಬಿದ್ದಾಗೊಮ್ಮೆ ಎದ್ದು ಮೈಕೊಡವಿಕೊಂಡು ಮತ್ತೆ ಮುನ್ನಡೆಯುವುದನ್ನು ಮುಂದುವರಿಸಿಯೇ ಇದ್ದೇನೆ."

ಇಂಥಾ ಒಂದು ಚೆಂದದ ಹೊತ್ತಗೆಯನ್ನು ನಮಗೆ ಓದಲು ಕೊಟ್ಟಿರುವ ಲೇಖಕಿಗೆ ಪ್ರೀತಿಯ ಅಪ್ಪುಗೆ. ಒಳ್ಳೆಯ ಓದು ಮನಸಿಗೆ ಕೊಡುವಷ್ಟು ನೆಮ್ಮದಿ, ಸಂತಸ ಬೇರೇನೂ ಕೊಡದು ಎಂದು ನಾನೇ ನಂಬಿರುವ ವಿಶ್ವಾಸ ಮತ್ತೆ ಮತ್ತೆ ಬಲಗೊಳ್ಳುತ್ತಿರುತ್ತದೆ.

~ತೇಜಸ್ವಿನಿ ಹೆಗಡೆ.