ಶನಿವಾರ, ಜುಲೈ 29, 2017

ಪಳಮೆಗಳು

ಸೇಡಿಯಾಪು ಕೃಷ್ಣ ಭಟ್ಟರ ‘ಪಳಮೆಗಳು’ ಕಥಾಸಂಕಲನ ಬಹಳ ಮೆಚ್ಚುಗೆಯಾಯಿತು.


ಇದರಲ್ಲಿನ ‘ನಾಗರ ಬೆತ್ತ’ ಕಥೆಯನ್ನು ಬಹಳ ಹಿಂದೆಯೇ ಓದಿದ್ದೆ. ನನಗೆ ತುಂಬಾ ಇಷ್ಟವಾದ ಕಥೆಯಿದು. ಕಥೆಯಲ್ಲಿ ಬರುವ ಬಾಲಕನೊಂದಿಗೆ ಬಹಳ ಬೇಗ ನಾವೂ ಒಂದಾಗಿ ಬಿಡುತ್ತೇವೆ. ಅದರಲ್ಲೂ ಅಷ್ಟು ಅಕ್ಕರಾಸ್ಥೆಯಿಂದ ತಂದಿದ್ದ ಆ ಪುಟ್ಟ ಬಾಲಕನ ಬೆತ್ತವನ್ನು ನಿರ್ಧಾಕ್ಷಿಣ್ಯವಾಗಿ, ಕಾರಣವಿಲ್ಲದೇ ಅವನಜ್ಜ ಮುರಿದದ್ದು ಓದುವಾಗ ಹಿಂದೆಯೂ ಸಂಕಟವಾಗಿತ್ತು.. ಇಂದೂ ಮತ್ತೊಮ್ಮೆ ಓದುವಾಗಲೂ ಅಷ್ಟೇ ಬೇಸರವಾಯಿತು. ನಾಗರ ಬೆತ್ತ ಎಂದಕೂಡಲೇ ನನಗೆ ನೆನಪಿಗೆ ಬರುವುದು ನನ್ನ ಬಾಲ್ಯ. ನಾನು ಪ್ರೈಮರಿಯನ್ನು ಕಲಿತಿದ್ದ ನನ್ನ ಕನ್ನಡ ಶಾಲೆಯ ಮಾಸ್ತರರೋರ್ವರ ಕೈಯೊಳಗಿನ ಬೆತ್ತ! ಅವರ ಕೈಲಿದ್ದುದು ನಾಗರ ಬೆತ್ತವೋ ಹೌದೋ ಎಂಬುದು ಗೊತ್ತಿಲ್ಲ. ಅದನ್ನು ಮುಟ್ಟಿ ನೋಡುವುದಿರಲಿ.. ಅದರತ್ತ ದಿಟ್ಟಿ ಹಾಯಿಸುವುದು ಭಯಂಕರದ ಕೆಲಸವಾಗಿತ್ತು ಬಿಡಿ. "ಎಂತ ದಡ್ಡರೋ ನೀವೆಲ್ಲಾ.. ಸುಮ್ಮನೆ ಬೆಂಚು ಬಿಸಿ ಮಾಡಲು ಇಲ್ಲಿಗೆ ಬರುವುದೋ? ಎತ್ತಿ ಕೈಯನ್ನ’ ಎಂದು ಪ್ರಶ್ನೆಗೆ ಉತ್ತರಿಸದ ಮಕ್ಕಳ ಕೈ ಬಿಸಿ ಮಾಡುತ್ತಿದುದು ಅದೇ ಬೆತ್ತದಲ್ಲೇ

. ಆ ದೃಶ್ಯ ಇನ್ನೂ ನನ್ನಿಂದ ಮರೆಯಾಗಿಲ್ಲ. ಆದರೆ ಪುಟ್ಟನ ಮೆಚ್ಚಿನ ನಾಗರ ಬೆತ್ತ ಮುರಿದಾಗ ಉಂಟಾಗಿದ್ದ ನೋವು.. ದೇವಜ್ಜಿಯ ಆ ಯಾತನಾಮಾ ಪ್ರಸಂಗವನ್ನೋದಿದಾಕ್ಷಣ ಅದೇಕೋ ಥಟ್ಟನೆ ಹಾಗೆ ಬೆತ್ತ ಮುರಿದದ್ದೇ ಒಳ್ಳೆದಾಯಿತು ಎಂದೇ ಅನಿಸಿಬಿಡುತ್ತದೆ! ಬಹುಶಃ ಇದಕ್ಕೆ ಕಾರಣ ದೇವಜ್ಜಿಯ ಆ ಎಳೇ ಬದುಕಿನಲ್ಲಿ ನಡೆದ ಕರುಣಾಜನಕ ಘಟನೆಯೇ ಇದ್ದಿರಬಹುದು. ಅವರಿಗೆ ಆ ನಾಗರ ಬೆತ್ತ ಅನಿಷ್ಟವನ್ನುಂಟು ಮಾಡಿದಂತೇ ಆ ಹುಡುಗನಿಗೂ ಉಂಟು ಮಾಡಿದ್ದಿದ್ದರೆ.. ನಿಜಕ್ಕೂ ಅಂಥದೊಂದು ಬೆತ್ತದ ಅವಶ್ಯಕತೆಯಾದರೂ ಏನು? ಒಳ್ಳೆಯದೇ ಆಯಿತು ಹೋಗಿದ್ದು ಎಂದೆಲ್ಲಾ ಅಪ್ರಯತ್ನವಾಗಿ ನಮ್ಮ ಮನಸ್ಸೇ ಆ ಹುಡುಗನ ನೋವಿನೊಂದಿಗೆ ಸ್ಪಂದಿಸಿದ ನಮ್ಮನ್ನು ಸಾಂತ್ವನಗೊಳಿಸಿಬಿಡುತ್ತದೆ. ಆದರೆ ಮೂಲೆಯಲ್ಲೆಲ್ಲೋ ಬೆತ್ತವನ್ನು ಪ್ರೀತಿಯಿಂದ ಕೊಟ್ಟಿದ್ದ ಲಿಂಗಯ್ಯ ಅಳುತ್ತಿರುತ್ತಾನೆ. ಬಹಳ ಚೆಂದದ ಕಥೆ.. ಹತ್ತು ಹಲವು ರೀತಿಯನ್ನು ನಮ್ಮನ್ನು ಕಾಡುವಂಥದ್ದು.

ಪಳಮೆಗಳಲ್ಲಿ ನಾಗರ ಬೆತ್ತದ ನಂತರ ನನ್ನ ಬಹಳ ಕಾಡಿದ ಕಥೆ ಧರ್ಮಮ್ಮ. ಬಹಳ ವಿಶಿಷ್ಟವಾಗಿ ನೇಯ್ದಿರುವ ಕಥೆಯಿದು. ಜಿಜ್ಞಾಸೆಗಳನ್ನು ಹುಟ್ಟಿಸಿ.. ತರ್ಕವನ್ನು ಬೆಳೆಸಿ.. ಉತ್ತರ ಕೊಟ್ಟೂ ಅದು ಪೂರ್ತಿ ಅರಿವಾಗದಂಥ ಕಥೆಯಿದು. ಇದರ ಕೊನೆಯೇಕೋ ನನಗಷ್ಟು ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಬಲ್ಲವರಲ್ಲಿ ಚರ್ಚಿಸಬೇಕೆಂದಿರುವೆ. ಮತ್ತೊಮ್ಮೆ ಮಗದೊಮ್ಮೆ ಓದನ್ನು ಬೇಡುವಂಥ ಕಥೆಯಿದು. ಮನಸ್ಸು, ಅಭ್ಯಾಸ, ಸ್ವಭಾವ - ಈ ಮೂರರೊಳಗೆ ಯಾವುದು ಮೆಚ್ಚಾಗಬೇಕು ಎಂದು ಚಿಂತಿಸುತ್ತಲೇ ಇದ್ದೇನೆ ಇನ್ನೂ.

ಚೆನ್ನೆಮಣೆ ಕಥೆಯೂ ಚೆನ್ನಾಗಿದೆ. ಮನುಷ್ಯನ ‘ಅಹಂ’ ಎನ್ನುವುದು ಪರಾಕಷ್ಟೆಯನ್ನು ತಲುಪಿದಾಗ ಎಷ್ಟೆಲ್ಲಾ ದುರಂತಗಳು ನಡೆಯಬಲ್ಲವು ಎಂಬುದಕ್ಕೊಂದು ಸ್ಪಷ್ಟ ನಿದರ್ಶನ ನೀಡುವಂಥ ಕಥೆಯಿದು. ಹಣೆದ ರೀತಿ ಬಲು ಇಷ್ಟವಾಯಿತು.

ಚಿನ್ನದ ಚೇಳು ಕಥೆ ಮಕ್ಕಳಿಗೆ ಹೇಳಿ ಮಾಡಿಸಿದಂತಿದೆ. ನೀತಿ ಪಾಠವನ್ನು ನೇರವಾಗಿ ಸಾರುವ ಕಥೆಯನ್ನು ರಮ್ಯವಾಗಿ ಕಣ್ಣಿಗೆ ಕಟ್ಟುವಂತೇ ಮಕ್ಕಳಿಗೆ ಹೇಳಿದರೆ, ಅವರ ಹಾವ ಭಾವವನ್ನು ನೋಡಿ ನಾವೂ ರಂಜಿಸಬಹುದು. ಅದರಲ್ಲೂ ಈ ಕಥೆಯಲ್ಲಿ ಬರುವ ಭೂತ "ನಾನು ಹಾರಲೋ! ಹಾರಲೋ!" ಎಂದು ಹೇಳುವುದನ್ನು ಓದಿದಾಕ್ಷಣ ಯಾಕೋ ನಗು ಅವ್ಯಾಹತವಾಗಿ ಉಕ್ಕಿತು. :) ಭೂತವೊಂದು ಹೀಗೆ ಕೇಳಿ ಹಾರಿ.. ಸುರಿಸುವ ಧನವನ್ನು ಬಾಚಲು ಸಾಧ್ಯವಾಗುವಂತಿದ್ದರೆ ಇಂದಿನ ಯುಗದಲ್ಲಿ ಎಷ್ಟು ಜನ ಆ ಭೂತವನ್ನೇ ಹಾರಿಸಿಕೊಂಡು ಹೋಗುತ್ತಿದ್ದರೇನೋ ಎಂದೇ ಊಹಿಸಿಕೊಂಡು ಮನಸಾರೆ ನಕ್ಕುಬಿಟ್ಟೆ.

ಶಕುಂತಳೆ ಕಥೆಯಲ್ಲೇನೂ ವಿಶೇಷ ಕಾಣಲಿಲ್ಲ. ಮೊದಲೇ ಈ ಕಥೆಯ ವಿವಿಧ ರೂಪಗಳನ್ನು ಹತ್ತು ಹಲವೆಡೆ ಓದಿದ್ದರಿಂದಲೋ ಏನೋ.. ವಿಶೇಷತೆ ಕಾಣಲಿಲ್ಲ.

‘ಮಹಾರಾಣಿ ಲಕ್ಷ್ಮೀಬಾಯಿ’ ಕಥೆಯಿಂದ
ಆದರೆ ಈ ಮೊದಲೇ ಹಲವೆಡೆ ಓದಿದ್ದರೂ "ಮಹಾರಾಣಿ ಲಕ್ಷ್ಮೀಬಾಯಿ’ ಕಥೆ ವಿಶಿಷ್ಟವೆನಿಸಿತು! ಅದರಲ್ಲೂ ಈ ಕಥೆಯಲ್ಲಿ ಬರುವ ಒಂದೆರಡು ಪ್ಯಾರ ವಿಶೇಷ ಗಮನ ಸೆಳೆಯಿತು. ಅವುಗಳ ಫೋಟೋ ಲಗತ್ತಿಸಿದ್ದೇನೆ ಓದಿಕೊಳ್ಳಿ ಬೇಕಿದ್ದರೆ. ಲಕ್ಷ್ಮೀಬಾಯಿಯ ಕುರಿತು ಅನೇಕ ಅತಿ ರಂಜಿತ ಕಥೆಗಳನ್ನೋದಿದ್ದೇನೆ.. ಈವರೆಗೂ ತಿಳಿಯದ ಕೆಲವು ವಿಷಯಗಳನ್ನು ಇಲ್ಲಿ ಓದಲು ಸಿಕ್ಕಿತು. ಈ ರಾಣಿಯ ಬಗ್ಗೆ ಖಚಿತ ಮಾಹಿತಿಯುಳ್ಳ.. ಕೆಲವು ಇತಿಹಾಸಗಾರರಿಂದ ತಿರುಚಲಾಗದೇ ಹಾಗೇ ಉಳಿದಿರುವ ನಿಜ ಇತಿಹಾಸವನ್ನು ಓದುವ ಮನಸ್ಸಾಗಿದೆ. ಸಾಧ್ಯವಾದರೆ ಓದಬೇಕು.
‘ಮಹಾರಾಣಿ ಲಕ್ಷ್ಮೀಬಾಯಿ’ ಕಥೆಯಿಂದ

ಪಳಮೆಗಳು ಕಥಾಸಂಕಲನದಲ್ಲಿ ಬರುವ ಕಥೆಗಳನ್ನು ಆ ಕಾಲಘಟ್ಟದ ನೆಲೆಯಲ್ಲಿಟ್ಟು ನೋಡಿದರೆ ಅವುಗಳೊಳಗಿನ ವಿಶೇಷತೆಗಳು ನಮಗೆ ಹೊಳೆಯುತ್ತವೆ. ನಿರೂಪಣೆಯಲ್ಲಿರುವ ಮುಗ್ಧತೆ, ಸಹಜತೆ, ನಿಷ್ಕಲ್ಮಶತೆ ಸಹೃದಯ ಓದುಗರನ್ನು ಸಹಜವಾಗಿ ಸೆಳೆದು ಬಿಡುತ್ತವೆ. ಆ ಕಾಲದಲ್ಲಿ, ಆ ಪ್ರದೇಶದಲ್ಲಿ ಪ್ರಚಲಿತವಾಗಿದ್ದ ಅನೇಕ ದೇಸೀಯ ಶಬ್ದಗಳ ಪರಿಚಯವಾಗುತ್ತದೆ.. ಜನ ಜೀವನದ ಪರಿಚಯವಾಗುತ್ತದೆ.. ಅಂದಿನ ಜನರಲ್ಲಿ ಉಳಿದಿದ್ದ ಸತ್ಯ ಸಂಧದತೆ.. ಸಮಾಜದ ಪ್ರತಿ ಅವರಿಗಿದ್ದ ಜವಾಬ್ದಾರಿ, ಪರಸ್ಪರ ಮನುಷ್ಯರೊಳಗಿದ್ದ ಕಾರುಣ್ಯ, ಸಹನಶೀಲತೆ ಪ್ರಕಟಗೊಳ್ಳುತ್ತದೆ. ಹಾಗೆಯೇ ಕ್ರೌರ್ಯ, ಮನೋ ವಿಕೃತಿ, ದಬ್ಬಾಳಿಕೆಗಳು ಕಾಲಾತೀತ, ದೇಶಾತೀತ ಎನ್ನುವುದು ಮತ್ತೆ ಸ್ಪಷ್ಟವಾಗುತ್ತದೆ.

~ತೇಜಸ್ವಿನಿ ಹೆಗಡೆ.

1 ಕಾಮೆಂಟ್‌:

sunaath ಹೇಳಿದರು...

ನಿಮ್ಮ ಪರಿಚಯಲೇಖನ ಸೊಗಸಾಗಿದೆ.