ಭಾನುವಾರ, ಜುಲೈ 27, 2008

ಆಡುಂಬ ಬಾಲೆಗೆ ತೊಟ್ಟಿಲೇ ತಾಯಮ್ಮ...


‘ತಾವರೆದಳ ನಿನ್ನ ಕಣ್ಣು,
ಕೆನ್ನೆ ಮಾವಿನ ಹಣ್ಣು
ಕಣ್ಣ ತುಟಿಯ ಅಂದ,
ಬಣ್ಣದ ಚಿಗುರಿಗೂ ಚಂದ
ನಿದ್ದೆ ಮರುಳಲ್ಲಿ ನಗಲು,
ಮಂಕಾಯ್ತು ಉರಿಯುವ ಹಗಲು
ಮಲಗೂ ಮಲಗೆನ್ನ ಮರಿಯೇ
ಬಣ್ಣದ ನವಿಲಿನ ಗರಿಯೇ
ಎಲ್ಲಿಂದ ಬಂದೆ ಈ ಮನೆಗೆ,
ನಂದನ ಇಳಿದಂತೆ ಭುವಿಗೆ
ಜೋss ಜೋ ಜೋ ಜೋss....’
----
ಲಾಲಿ ಕೇಳುತ್ತಾ ಮಡಿಲೊಳಗೆ ಹಾಯಾಗಿ ಮಲಗಿದ್ದ ಪುಟ್ಟಿಯ ಕಡೆ ನೋಡಿದೆ. ಹಾಡಿನ ಮೋಡಿಗೋ ಇಲ್ಲಾ ಹಾಲಿನ ಸವಿಗನಸಕಂಡೋ ತುಸುವೆ ತುಟಿ ಬಿರಿದುಕೊಂಡು ನಗುತ್ತಿದ್ದಳು. ಆ ನಗುವನ್ನೇ ನೋಡುತ್ತಾ ಮೈಮರೆತೆವಳನ್ನು ಎಚ್ಚರಿಸಿದ್ದು ಲಕ್ಷ್ಮಿಯ ಮಾತುಗಳು.

"ಅಕ್ಕಾ, ಪಾಪು ಮಲಗಿದೆ. ಹಾಸಿಗೆಗೆ ಹಾಕಿ ಬನ್ನಿ. ಮೊದ್ಲು ನೀವು ಊಟ ಮಾಡಿಬಿಡಿ. ಎದ್ರೆ ನಾನಿಲ್ಲೆ ಇರ್ತೀನಿ. ಗಂಟೆ ಆಗ್ಲೇ ಒಂದಾಯ್ತು.. ಏಳಿ" ಎಂದು ಅವಸರಿಸಿಸಲು ಅರೆಮನಸ್ಸಿನಿಂದಲೇ ಎದ್ದು ಊಟಕ್ಕೆ ಹೋದೆ.

ನನ್ನ ಚಿಕ್ಕಮ್ಮನ ಊರಾದ ಬೆಳ್ತಂಗಡಿಯ ಕಡೆಯ ಈ ಲಕ್ಷ್ಮಿಗೆ ಸುಮಾರು30ವರ್ಷಗಳಾಗಿರಬಹುದು. ಹಲವಾರು ಕಡೆ ಕೆಲಸಮಾಡಿ ನುರಿತವಳು. ಮಕ್ಕಳ ಲಾಲನೆ-ಪಾಲನೆಯಲ್ಲೂ ಪಳಗಿದ ಅನುಭವಸ್ಥೆ ಎಂಬೆಲ್ಲ ಶಿಫಾರಸ್ ಗಳನ್ನು ಹೊತ್ತೇ ಬಂದವಳು. ಕಾರಣಾಂತರಗಳಿಂದ ನನಗೊಬ್ಬಳಿಗೇ ಪುಟ್ಟಿಯನ್ನು ನೋಡಿಕೊಳ್ಳುವುದು ಅಸಾಧ್ಯವಾಗಿದ್ದರಿಂದ ಇಂತಹ ಓರ್ವ ಅನುಭವಸ್ಥೆಯ ಸಹಾಯವೂ ನನಗೆ ಅತ್ಯಗತ್ಯವಾಗಿತ್ತು. ಮಗು ಹುಟ್ಟುವ ಮೊದಲೇ ಬಂದ ಲಕ್ಷ್ಮಿ ಈಗ ಮನೆಯವಳಂತೆಯೇ ಆಗಿದ್ದಳು. 10 ತಿಂಗಳ ಪುಟ್ಟಿಯೂ ಕೂಡಾ ಆಕೆಯನ್ನು ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಳು.

ಹತ್ತುನಿಮಿಷದಲ್ಲೇ ಊಟ ಮುಗಿಸಿ ಲಕ್ಷ್ಮಿಯನ್ನು ಊಟಕ್ಕೆ ಕಳುಹಿಸಬೇಕೆಂದುಕೊಂಡು ಕೋಣೆಗೆ ಬಂದರೆ ಆಕೆ ಅದ್ಯಾವುದೋ ಗಂಭೀರ ಯೋಚನೆಯಲ್ಲಿ ಮುಳುಗಿದಂತೆ ಕಂಡು ಬಂದಳು. ದೃಷ್ಟಿ ಪುಟ್ಟಿಯನ್ನೇ ತದೇಕವಾಗಿ ನೋಡುತ್ತಿದ್ದರೂ ಅದ್ರೊಳಗಿನ ನೋಟದಲ್ಲು ಶೂನ್ಯತೆ ಕಾಣಿಸುತ್ತಿತ್ತು.

"ಏನೇ ಲಕ್ಷ್ಮೀ ಪಾಪುನ ಹಾಂಗೆ ನೋಡ್ತಾ ಇದ್ದೀಯಾ..ನಾ ನೋಡಿದ್ರೆ ಅಕ್ಕಾ ಹಾಗೆ ನೋಡ್ಬೇಡಿ ದೃಷ್ಟಿಯಾಗುತ್ತೆ ಅನ್ನೋಳು ಈಗ ದೃಷ್ಟಿಯಾಗೋದಿಲ್ವಾ?" ಎಂದು ಹಾಸ್ಯ ಮಾಡಿದೆ. ಊಹೂಂ ಆದರೂ ಆಕೆಯ ಮುಖದಲ್ಲಿ ನಸುನಗುವೂ ಮೂಡಲಿಲ್ಲ. ಈಗ ನನಗೆ ಸಂಶಯವಾಯಿತು ನನ್ನಿಂದೇನಾದರೂ ಬೇಸರವಾಯಿತೇ ಎಂದು.. ಯೋಚಿಸಿದರೆ ನಾನೇನೂ ಬೇಸರ ತರಿಸುವ ರೀತಿ ನಡೆದುಕೊಂಡ ನೆನಪಾಗಲಿಲ್ಲ. ಆಕೆಯನ್ನೇ ನೇರವಾಗಿ ಕೇಳಿದೆ.
"ಏನಾಯ್ತೇ ಲಕ್ಷ್ಮಿ? ತುಂಬಾ ಯೋಚ್ನೆ ಮಾಡ್ತಾ ಇದ್ದೀಯಾ.. ಮನೆ ನೆನಪಾಗ್ತಾ ಇದೆಯಾ? ಹಾಗಿದ್ರೆ ಹೇಳು ಮನೆಗೆ ಫೋನ್ ಮಾಡುವಿಯಂತೆ" ಎಂದು ಕೇಳಿದೆ.

"ಹಾಗೇನಿಲ್ಲಕ್ಕ, ಹಾಗೇ ಸುಮ್ನೇ ಯೋಚ್ನೆ ಮಾಡ್ತಾ ಇದ್ದೆ. ಪಾಪು ನೋಡ್ತಾ ಏನೋ ನೆನಪಾಯ್ತು" ಎಂದು ನಿಟ್ಟುಸಿರು ಚೆಲ್ಲಿದಳು. "ಪುಟ್ಟಿ ನೋಡಿ ಎಂತ ಯೋಚ್ನೆ ಬಂತೆ ನಿನಗೆ? ಅಂಥದೇನು ನೆನ್ಪಾಯ್ತು" ಎಂದು ಅಲ್ಲೇ ಹಾಸಿಗೆಯಲ್ಲಿ ಕುಳಿತೆ. ಕೈ ಅಪ್ರಯತ್ನವಾಗಿ ಪುಟ್ಟಿಯ ತಲೆ ಸವರತೊಡಗಿತು.

"ಅಕ್ಕಾ, ನೀವು ಅಣ್ಣಾ ಎಲ್ಲಾ ಪಾಪುನ ಎಷ್ಟು ಪ್ರೀತಿಸುತ್ತೀರಲ್ಲಾ.. ಅದ್ಕೆ ಉಂಚೂರು ನೋವಾದ್ರೂ ನೀವೂ ಅಳ್ತೀರಾ, ಅತ್ತ್ ಕೂಡ್ಲೇ ಮುದ್ದಿಸ್ತೀರಾ, ಹಸಿವಾಗಿ ಅತ್ರೆ, ಊಟಾನೂ ಮಾಡ್ದೆ ಹಾಲು ಕೊಡ್ತೀರಾ, ಆದ್ರೆ ಆ ಪಾಪುಗಳಿಗೆ ಇದ್ಯಾವುದೂ ಸಿಗೊಲ್ಲ.. ಅತ್ರೆ ತಕ್ಷಣ ಹಾಲು ಕೊಡೋರಿಲ್ಲ, ಎತ್ಕೊಂಡ್ ಮುದ್ದು ಮಾಡೋರೂ ಇಲ್ಲಾ.. ಇದ್ನೆಲ್ಲಾ ಯೋಚಿಸಿ ಬೇಜಾರಾಯ್ತು ಅಷ್ಟೆ" ಎಂದು ಹೇಳಿದವಳೇ ನನ್ನ ಪ್ರತಿಕ್ರಿಯೆಗೂ ಕಾಯದೇ ಊಟಕ್ಕೆ ಹೋದಳು.

ನನ್ನ ತಲೆಯೆಲ್ಲಾ ಗೋಜಲಾಗಿ ಹೋಯಿತು. ಅವಳ ಒಗಟಾದ ಮಾತುಗಳು ನನ್ನೊಳಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದವು. ಆದರೂ ತಡೆದುಕೊಂಡೆ, ಅವಳ ಊಟ ಸಾಂಗವಾಗಿ ಸಾಗಲೆಂದು. ಅದೂ ಅಲ್ಲದೇ ಅಲ್ಲೇ ಮಾತಿಗೆ ತೊಡಗಿದರೆ ಎಲ್ಲಿ ಪುಟ್ಟಿ ನಿದ್ದೆಯಿಂದೇಳುವಳೋ ಎಂಬ ಸಣ್ಣ ಭಯವೂ ಇತ್ತು.

ಊಟಮುಗಿಸಿ, ಒಳಗಿನ ಕೆಲಸಗಳನ್ನೆಲ್ಲಾ ಮುಗಿಸಿದ ಲಕ್ಷ್ಮಿ, ಹಾಲಿಗೆ ಬರುವುದನ್ನೇ ಕಾದಿದ್ದ ನಾನು -"ಲಕ್ಷ್ಮಿ ಅದೇನೋ ಆಗ ಹೇಳ್ತಾ ಇದ್ಯಲ್ಲೆ.. ಅದನ್ನೇ ಸರಿಯಾಗಿ ಹೇಳೆ.. ನಂಗೇನೂ ಅರ್ಥನೇ ಆಗ್ಲಿಲ್ಲ ನೊಡು" ಎಂದು ಅವಳುತ್ತರಕ್ಕೆ ಕಾಯುತ್ತಾ ಅಲ್ಲೇ ಕುಳಿತೆ. ಒಮ್ಮೆ ನಿಡಿದಾದ ಉಸಿರು ಬಿಟ್ಟು ಆಕೆ ನನ್ನಡೆ ತಿರುಗಿ ಕುಳಿತಳು.

"ಅಕ್ಕಾ, ನಿಮಗೂ ಗೊತ್ತಲ್ಲ, ಇಲ್ಲಿಗೆ ಬರುವ ಮೊದಲು ನಾನು ಹಲವು ಕಡೆ ಕೆಲಸ ಮಾಡಿಬಂದವಳು ಎಂದು. ಈ ಮೊದಲು ಅಂದರೆ ಇಲ್ಲಿಗೆ ಬರುವ ಮೊದಲು ನಾನು ಬೆಂಗಳೂರಿನಲ್ಲೇ ಆಶ್ರಮವೊಂದರಲ್ಲಿ ಕೆಲಸಕ್ಕಿದ್ದೆ. ನನ್ನ ದೂರದ ಚಿಕ್ಕಮ್ಮ ಒಬ್ಬರು ಅಲ್ಲೇ ಕೆಲ್ಸ ಮಾಡ್ತಿದ್ರು. ಅವ್ರೇ ನನ್ನೂ ಅಲ್ಲಿಗೆ ಕರಕೊಂಡು ಹೋಗಿದ್ದು. ಅಕ್ಕಾ ಅದು ಶಿಶುಗಳ, 2-3 ವರ್ಷಗಳಷ್ಟು ದೊಡ್ಡ ಮಕ್ಕಳ ಅನಾಥಾಶ್ರಮ. ಬೇಡದ ಮಗುವನ್ನು ತೊಟ್ಟಿಯಲ್ಲಿ ಬಿಸಾಡಿ ಹೋಗ್ತಾರಲ್ಲ.. ಅಂತಹ ಶಿಶುಗಳನ್ನು ಯಾರಾದ್ರೂ ಹೇಳಿದ್ರೆ ತಂದು ಸಾಕ್ತಾರೆ. ಹೆಚ್ಚಿನವೆಲ್ಲಾ ಆಗ ಮಾತ್ರ ಹುಟ್ಟಿದವೋ, ಇಲ್ಲಾ 4 - 6 ತಿಂಗಳಿನಷ್ಟು ಸಣ್ಣವೇ. ಅಂತಹ ಮಕ್ಕಳನ್ನು ನಾವು ಅಂದ್ರೆ 6 - 7 ಹುಡುಗಿಯರು ನೋಡ್ಕೋ ಬೇಕಿತ್ತು. ಒಬ್ಬೊಬ್ರಿಗೆ 3 - 4 ತೊಟ್ಟಿಲು ಕೊಡ್ತಿದ್ರು. ಅಂದ್ರೆ ನಾವು ಒಬ್ಬೊಬ್ರು 3 - 4 ಶಿಶುಗಳನ್ನು ನೋಡ್ಕೋ ಬೇಕಿತ್ತು. ನನಗೆ 3 ತೊಟ್ಲು ಸಿಕ್ಕಿತ್ತಕ್ಕ. ಎಷ್ಟು ಚೆಂದ ಇದ್ವು ಪಾಪುಗಳು. ಆದ್ರೆ ಪಾಪ ಹಾಲಿಗಾಗಿ ಯಾವಾಗ್ ನೋಡಿದ್ರೂ ಅಳ್ತಿದ್ವು. ಬಾಟ್ಲಿ ಕೊಟ್ರೂ ಅಳು ನಿಲ್ತಿರ್ಲಿಲ್ಲ. ಪಾಪ ಅನಿಸ್ತಿತ್ತು. ಅಮ್ಮನ ಹಾಲಿಗಾಗಿ ಅವು ಅಳೋವಾಗ ನಂಗೂ ಎಷ್ಟೋ ಸಲ ಅಳು ಬರೋದಕ್ಕ. ನಾನು ನನ್ನ ಹೊಗಳಿಕೊಳ್ಳೋದಲ್ಲ. ಕೆಲ್ವೊಂದು ಹುಡ್ಗೀರು, ಅವ್ರಿಗೆ ತಾಳ್ಮೆ ಕಡ್ಮೆ. ಜಾಸ್ತಿ ಅತ್ರೆ, ಬೋರಲಾಗಿ ಮಲ್ಗ್ಸಿ ಬಿಡೋರು... ಇಲ್ಲಾ ಬಾಟಲಿ ತುರ್ಕಿ ಸುಮ್ಮನಾಗೋರು.. ರಾತ್ರಿ ಎಲ್ಲ ಅತ್ರೆ ಮತ್ತೇನ್ ಮಾಡಿಯಾರು ಬಿಡಿ. ಅವ್ರಿಗೂ ನಿದ್ದೆಗಣ್ಣು ನೋಡಿ... ಆದ್ರೂ ನಂಗೆ ಇದ್ನೆಲ್ಲಾ ನೋಡೋಕೆ ಆಗೋವಲ್ದು. ಹೆಡ್ ಮೇಡಮ್ ಓಳ್ಳೇರು ಗೊತ್ತಾದ್ರೆ ತೆಗ್ದೇ ಹಾಕೋರು. ಬೈಯ್ಯೋರು. ಆದ್ರೆ ದೂರು ಹೇಳೋರು ಯಾರು? ಸುಮ್ನೆ ಯಾಕೆ ದ್ವೇಷ ಕಟ್ಟಿಕೊಳ್ಳೋದು ಎಂದು ಹೆದ್ರಿ ಇರೋದು. ಆದ್ರೆ ಆ ಪಾಪುಗಳ ಗೋಳು ನೋಡ್ಕೊಂದು ಸಹಿಸೋಕೂ ಆಗ್ದೆ, ಅವ್ರಿಗೆ ಬುದ್ಧಿ ಹೇಳೋಕೂ ಆಗ್ದೆ ಹಿಂಸೆ ಆಗ್ತಿತ್ತಕ್ಕಾ, ಅದ್ಕೆ ನಾಲ್ಕೇ ತಿಂಗ್ಳಲ್ಲಿ ಕೆಲ್ಸ ಬಿಟ್ಟು ಮನೆಗೆ ಬಂದ್ಬಿಟ್ಟೆ. ಆಮೇಲೆ ಒಂದ್ವರ್ಷ ಎಲ್ಲೂ ಹೋಗಿಲ್ಲ. ಇಲ್ಲಿಗೇ ಬಂದಿದ್ದು ಅದೂ ಪಾಪು ಇದೆ ಅಂತ.. " ಎಂದು ಮೌನ ತಾಳಿದಳು.

ಒಂದು ಕ್ಷಣ್ ನನಗೂ ಮಾತು ಹೊಳೆಯದಂತಾಯಿತು. ಎದೆಯೊಳಗೆ ಏನೋ ಚುಚ್ಚಿದಂತಹ ಅನುಭವ. ಒಡಲಾಳದೊಳಗೆ ಬೆಂಕಿಹೊತ್ತಿಯುರಿದಂತಾಯಿತು. ಅರಿವಿಲ್ಲದಂತೆಯೇ ಕಣ್ಣೀರು ಧಾರೆಯಾಗಿ ತುಟಿಯಸೋಕಿದಾಗಲೇ ಎಚ್ಚರ ನನಗೆ. ಲಕ್ಷ್ಮಿಯಿಂದ ನನ್ನ ವೇದನೆಯನ್ನು ಮುಚ್ಚಿಕೊಳ್ಳಲು ರೂಮಿನ ಕಡೆ ನಡೆದೆ. ಮಗು ಪ್ರಶಾಂತವಾಗಿ ಮಲಗಿತ್ತು. ಎದೆಹಾಲ ಕನಸಕಂಡೋ ಏನೋ ಬಾಯಿ ಚೀಪಿದಂತೆ ಮಾಡಿ ನಿದ್ದೆ ಮರುಳಲ್ಲಿ ನಗಲು, ತುಸು ಹಾಯೆನಿಸಿತು. ಮತ್ತೆ ಅವಳ ಬಳಿ ಬಂದು ಕುಳಿತೆ. ಏನನ್ನೂ ಕೇಳದೇ ಆಕೆಯೇ ಮತ್ತೆ ಶುರು ಮಾಡಿದಳು.

"ಅಕ್ಕಾ, ಯಾರಿಗೂ ಹೇಳ್ಬೇಡಿ ಮತ್ತೆ .. ಆ ಆಶ್ರಮದಲ್ಲಿ ಈ ಪಾಪದ ಮಗುವನ್ನು ಹೊತ್ತ ಹೆಂಗಸ್ರು ಬಂದು ಹೆರಿಗೆ ಮಾಡಿಸಿಕೊಂಡು ಆಮೇಲೆ ಪಾಪುನ ಅಲ್ಲೇ ಬೆಳೆಯಲು ಬಿಟ್ಟು ಹೋಗ್ತಿದ್ರು. ನಮ್ಗೆ ಅವ್ರು ಹಾಗೆ ಬಿಟ್ಟೂ ಹೋಗೋವಾಗ ತುಂಬಾ ನೋವಾಗೋದು. ಪಾಪ ಹೆಸರಿಡೋರು ಇಲ್ಲಾ. ನಾವೇ ನಮ್ಗೆ ಕೊಟ್ಟ ಶಿಶುಗಳಿಗೆ ನಮ್ಗೆ ಇಷ್ಟವಾದ ಹೆಸ್ರಿಟ್ಟು ಕರೆಯೋದು. ಸುಮಾರು 4 - 5 ತಿಂಗಳಾಗೋವಾಗ ಕೆಲವ್ರು ದತ್ತು ತಗೋಳೋಕೆ ಬರೋರು. ಯಾವ ಪಾಪು ಅವ್ರನ್ನ ನೋಡಿ ಆತ ಮಾಡ್ತೊ, ನಕ್ಕಿತೋ ಅದ್ನ ಆರಿಸೋರು. ಪಾಪು ಹೋಗೋವಾಗನೂ ತುಂಬಾ ಬೇಜಾರಾಗೋದು ಗೊತ್ತಾ? ಪ್ಚ..ಪಾಪ, ಪುಟ್ಟಿ ಭಾಗ್ಯ ಅವುಗಳಿಗಿಲ್ಲಕ್ಕ. ಏನೇ ಹೇಳಿ ನೀವು, ಪಾಪುಗಳಿಗೆ ಅಮ್ಮ ಬೇಕೇ ಬೇಕು ಅಲ್ವಾ?" ಎಂದು ಕೇಳಿದರೆ ಉತ್ತರಿಸಲು ಗಂಟಲೊಳಗೇನೋ ಸಿಕ್ಕಿದಂತೆ......ಮಾತುಗಳೆಲ್ಲಾ ಮೌನರೂಪ ತಾಳಿ ಮನದೊಳು ಹೊಕ್ಕಿ ಅಲ್ಲೇ ಹಲವಾರು ವಿಪ್ಲವಗಳನ್ನೆಬ್ಬಿಸಿದ್ದವು.

‘ಹೇಗೆ ತಾನೆ ತಾಯೊಬ್ಬಳು ಮಗುವನ್ನು ಬಿಟ್ಟು ಹಾಗೆ ಹೋಗಲು ಸಾಧ್ಯ? ಪಾಪದ ಮಗುವೆಂದರೆ ಏನರ್ಥ? ಯಾವ ಮಗು ತಾನೇ ತಾನು ಒಡಲೊಳಗೆ ಮೂಡುವಾಗ ಪಾಪದ ಹಣೆಪಟ್ಟಿಯನ್ನು ಹೊತ್ತಿರುತ್ತದೆ? ಹುಟ್ಟಿದ ಮೇಲೆ ತಾನೆ ಅದರ ಕರ್ಮಾನುಸಾರ ಪಾಪ-ಪುಣ್ಯಗಳ ಲೆಕ್ಕಾಚಾರವಾಗುವುದು? ಯಾರೋ ಮಾಡಿದ ಪಾಪಕ್ಕೆ ಕುಡಿ ಜೀವದ ಬಲಿ! ಇದೆಂತಹ ಪಾಪಕಾರ್ಯ? ಜಗತ್ತೇಕೆ ಹೀಗಿದೆ? ಆ ಕಂದಮ್ಮಗಳೂ ಪುಟ್ಟಿಯಂತೆಯೇ ತಾನೇ? ತನ್ನ ಸೃಷ್ಟಿಯಜೊತೆ ಇರಲೆಂದೇ ಆ ದೇವ ತಾಯರೂಪ ಧರಿಸಿದ ಎಂದು ಹೇಳುತ್ತಾರೆ... ಹಾಗೆ ಮಾಡುವಾಗ ಈ ಶಿಶುಗಳನ್ನೇಕೆ ಮರೆತ? ಅಮ್ಮನ ಹಾಲು, ಜೋಗುಳ, ಪ್ರೀತಿಯ ಅಮೃತಧಾರೆಯನ್ನು ಹಂಚುವಾಗ ಈ ರೀತಿಯ ತಾರತಮ್ಯ ಮಾಡುತ್ತಾನೆ? --ಇಂತಹ ಉತ್ತರಗಳೇ ಇಲ್ಲದ ಮುಗಿಯದ ಪ್ರಶ್ನೆಗಳ ಭಾರದಿಂದ ತಲೆಸಿಡಿಯತೊಡಗಿತು. ಅದೇಕೋ ಏನೋ ಪುಟ್ಟಿಗೆ ಅಮ್ಮ ಹೇಳುತ್ತಿದ್ದ ಹಾಡೊಂದು ಥಟ್ಟೆಂದು ನೆನೆಪಿಗೆ ಬಂತು..

`ಆಡುಂಬ ಬಾಲೆಗೆ ತೊಟ್ಟಿಲೇ ತಾಯಮ್ಮ...
ಆಡಿ ನಲಿವ ನವಿಲನ್ನ
ನಮ್ಮ್ ತಂಗ್ಯಮ್ಮನ ಕೈಗೆ ತಾರಮ್ಮ..

ಆಡುಂಬ ಬಾಲೆಗೆ ತೊಟ್ಟಿಲೇ ತಾಯಮ್ಮ...
ಮಾವಿನ ಮರದ ಗಿಳಿಯನ್ನ
ನಮ್ಮ್ ತಂಗ್ಯಮ್ಮನ ಕೈಗೆ ತಾರಮ್ಮ....’

ಊ..ಹೂಂ... ಮುಂದಿನ ಸೊಲ್ಲುಗಳಾವವೂ ನೆನೆಪಿಗೆ ಬರುತ್ತಿಲ್ಲ. ನಿಜ.. ಆ ಆಶ್ರಮದ ಪುಟಾಣಿಗಳಿಗೆ ತೊಟ್ಟಿಲೇ ತಾಯಿ. ಆಡಿ ನಲಿವ ನವಿಲನ್ನಾಗಲೀ, ಮಾವಿನ ಮರದ ಗಿಳಿಯನ್ನಾಗಲೀ ತಂದುಕೊಡಬಹುದೇನೋ.. ಆದ್ರೆ ತಾಯಿಯನ್ನು ಎಲ್ಲಿಂದ ತರಲು ಸಾಧ್ಯ? ಅಬ್ಬಾ! ತಲೆ ಸಿಡಿದೇ ಹೋದಂತಹ ಅನುಭವ.

"ಸಾಕು ಲಕ್ಷ್ಮಿ. ಇನ್ನು ಕೇಳಲಾಗದು ಮಾರಾಯ್ತಿ. ತುಂಬಾ ನೋವಾಗುತ್ತೆ. ನಿನ್ನ ಕೈಲಾದದ್ದು ನೀ ಮಾಡಿದ್ದೀಯಲ್ಲಾ. ಅದ್ಕೆ ಸಂತೋಷ ಪಡು. ದೇವರು ಒಳ್ಳೆಯವರನ್ನ ಕೈ ಬಿಡೋದಿಲ್ಲ. ಏನೂ ಪಾಪ ಮಾಡದಿರೋ ಆ ಕಂದಮ್ಮಗಳನ್ನ ಆ ದೇವರೇ ಕಾಪಾಡ್ತಾನೆ" ಎಂದು ನನಗೇ ಇಲ್ಲದ ಭರವಸೆಯನ್ನು ಆಕೆಗೆ ನೀಡಿ ಹಾಸಿಗೆಗೆ ಬಂದು ಮಲಗಿ ಬಿಟ್ಟೆ. ಊಹೂಂ.. ನಿದ್ದೆ ಬರಲೊಲ್ಲದು. ತಲೆಬಿಸಿ ಏರತೊಡಗಿತು.

ಸಂಜೆಯಾಗುತ್ತಿದ್ದಂತೇ ತಲೆನೋವು ಜಾಸ್ತಿಯಾಗತೊಡಗಿತು. ಹವೆ ತಿನ್ನಲು ಬಾಲ್ಕನಿಗೆ ಬಂದರೆ ಮೋಡಗಟ್ಟಿದ ಬಾನು ಮತ್ತಷ್ಟು ಬೇಸರ ತಂದಿತು. ರಾತ್ರಿಯವೇಳೆಗೆಲ್ಲಾ ನೋವು ಮುಖದಲ್ಲೂ ಕಾಣಿಸುವಷ್ಟಾಗಿತ್ತು. ಆಫೀಸಿನಿಂದ ಬಂದ ನನ್ನವರಿಗೆ ನನ್ನೊಳಗಿನ ಬದಲಾವಣೆ ಕಂಡು ಮಲಗುವಾಗ ಕೇಳಿಯೂ ಬಿಟ್ಟರು. ಲಕ್ಷ್ಮಿ ಹೇಳಿದ ಕಥೆಯನ್ನೆಲ್ಲಾ ಅರುಹಿ ತುಸು ಹಗುರಾಗಲು ಯತ್ನಿಸಿದೆ. ಅವರಿಗೂ ತುಂಬಾ ಕೆಡುಕೆನಿಸಿತು. ಮೌನವಾದರು.

ದೀಪವಾರಿಸಿದರೂ ನಿದ್ದೆಯ ಸುಳಿವಿಲ್ಲ. ಮಗ್ಗುಲಲಿದ್ದ ಮಗು ಹಾಯಾಗಿ ಮಲಗಿತ್ತು. ಕಣ್ಮುಚ್ಚಿದರೂ ಕಾಣದ ಆ ಕಂದಮ್ಮಗಳ ಅಳುವಿನ ಚಿತ್ರಣವೇ ಬರುತ್ತಿದೆ. ತಿರುಗಿ ನೋಡಿದರೆ ಇವರೂ ಕಣ್ಬಿಟ್ಟೆ ಮಲಗಿದ್ದರು. ತುಸು ಗಳಿಗೆಯ ನಂತರ ಏನೋ ಹೊಳೆಯಲು ಅವರ ಕಡೆ ತಿರುಗಿದೆ.

"ರೀ...ನಾವು ಹೀಗ್ ಮಾಡ್ಬಹುದು.. ಹೇಗಿದ್ರೂ ಇನ್ನೊಂದು ತಿಂಗ್ಳಿಗೆ ಪುಟ್ಟಿಗೆ ಒಂದ್ವರ್ಷವಾಗೊತ್ತೆ. ಅವ್ಳ ಹುಟ್ಟಿದ ದಿನದ ನೆನಪಿಗಾಗಿ ಈ ವರ್ಷದಿಂದ ಪ್ರತಿ ವರ್ಷ ಶಕ್ತಾನುಸಾರ ಸ್ವಲ್ಪ ಹಣ, ಲ್ಯಾಕ್ಟೋಜಿನ್ ಡಬ್ಬ, ಪುಟ್ಟಿಯ ಹಳೆ ಬಟ್ಟೆ ಹಾಗೂ ಆಟಿಗೆಸಾಮಾನುಗಳನ್ನೆಲ್ಲಾ ಇಂತಹ ಆಶ್ರಮಗಳಿಗೆ ಕೊಡೋಣ್ವಾ? ಹಾಗೆ ಕೊಡೋ ಮೊದ್ಲು ಸರಿಯಾಗಿ ಆಶ್ರಮದ ಕೆಲಸ ಕಾರ್ಯಗಳ ಬಗ್ಗೆ ವಿಚಾರಿಸೋಣ. ನಾವು ನೀಡಿದ್ದು ಆ ಶಿಶುಗಳಿಗೇ ಸೇರಬೇಕು ನೋಡಿ... ನಮ್ಮ ಈ ಅಲ್ಪ ಕಾಣ್ಕೆಯಿಂದ ಒಂದು ಶಿಶುವಿನ ಹಸಿವು ನೀಗಿದ್ರೂ ಸಾಕು, ನಾವು ಕೊಡೋ ಬಟ್ಟೆಯಿಂದ ಅದ್ರ ಮೈ ಬೆಚ್ಚಗಾದ್ರೂ ಸಾಕು, ಪುಟ್ಟಿಯ ಆಟಿಕೆಯಿಂದ ತುಸು ನಗು ಮೂಡಿದ್ರೂ ಸಾಕು..ಆ ನಗುವೇ ನಮ್ಮ ಪುಟ್ಟಿಯ ನಗುವಿಗೆ ಜೊತೆಯಾಗುತ್ತೆ ಅಂತ ಅಷ್ಟೇ.." ಎನ್ನುತ್ತಾ ಅವರ ಮುಖ ನೋಡಿದರೆ ಅಲ್ಲಿ ಅವರ ಮೊಗದಲ್ಲರಳಿದ್ದ ಒಪ್ಪಿಗೆಯ ಮುಗುಳ್ನಗೆ ನನ್ನನ್ನೇ ನೋಡುತ್ತಿತ್ತು. ಅದೇ ನಗುವನ್ನೇ ನನ್ನೊಳಗೂ ತುಂಬಿಕೊಳ್ಳುತ್ತಾ ಮಗ್ಗುಲಲ್ಲಿದ್ದ ‘ಅದಿತಿ’ಯನ್ನಪ್ಪಿ ಕಣ್ಮುಚ್ಚಿದೆ.

---***---

ಗುರುವಾರ, ಜುಲೈ 10, 2008

ಹುಚ್ಚು ಮನಸಿನ ಹಲವು ಭಾವಗಳು...

**ನನ್ನ-ನಿನ್ನ ನಡುವೆ**

ಒಲುಮೆಯ ಸಾಗರವಿದೆ
ನೋವ-ನಲಿವ ಅಲೆಗಳಿವೆ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!
----------------------------
**ವಿಶ್ವಾಸ**

ನಳ್ಳಿಯಿಂದ ಬಿಂದಿಗೆಗೆ
ಹನಿ ಹನಿಯಾಗಿ ನೀರ ತುಂಬಿದ ನೀರೆ
ತನ್ನ ಕಟಿಯಲ್ಲಿಟ್ಟು
ನಾಜೂಕಾಗಿ ನಡೆವಾಗ..
ಕಲ್ಲೆಡವಿ ಬಿದ್ದು
ಬಿಂದಿಗೆಯ ನೀರೆಲ್ಲಾ ಸೋರಿ
ಮಣ್ಣುಪಾಲು!
----------------------------
**ಪ್ರೀತಿ**

ದೇವಿಗಾಗಿ ಗರ್ಭಗುಡಿಯ
ಬಾಗಿಲ ಬಳಿ ಕಾದು
ಸುಸ್ತಾದ ಭಕ್ತ, ಕೊನೆಗೆ
ನಂದಾದೀಪದ ಬೆಳಕಿಗೆ
ಕೈ ಮುಗಿದು ಹೊರಟ
--------------------------
**ಕಾಲ**

ಪುಟ್ಟ ಮಗುವಿನ
ಕಪಿಮುಷ್ಠಿಯೊಳಡಗಿ ಭದ್ರವಾಗಿದ್ದ
ಮಂಜುಗಡ್ಡೆಯೊಂದು
ಕರಗಿ ಹನಿಯಾಗಿ
ನೀರಾಗಿ ಹರಿಯಿತು.

ಬುಧವಾರ, ಜುಲೈ 2, 2008

ಕವನ

ಆ ದಿನಗಳು
-----------
ಹಾರೋ ಹಕ್ಕಿಯೇ ಅಂಗೈಯಲ್ಲಿ,
ಕುಣಿಯೋ ನವಿಲುಗಳೇ ಮನದಂಗಳದಲ್ಲಿ,
ಎಲ್ಲೆಲ್ಲೂ ವಸಂತನ ಹಾಡು, ಕುಣಿತ..
ಕಾಡುವ ಕನಸುಗಳಿಗೆಲ್ಲಾ
ನಿನ್ನದೇ ಮುಖಾರವಿಂದ

ಹರಿವ ಲಹರಿಗಳೆಲ್ಲ ಸೇರಿ
ಸೋನೆ ಮಳೆಯಾಗಿ ಸೋರಿ
ಮನದ ಧಗೆಯನೆಲ್ಲ ಹೀರಿ
ಎದೆಯೊಳಗಿಳಿದಾದಿನಗಳು..

ಯಾವುದೋ ಹಳೆಯ ಹಾಡು ಮತ್ತೆ
ಹೊಸ ಹಾಡಾಗಿ ಗುನುಗಲು,
ಮೊಗದ ತುಂಬೆಲ್ಲಾ ರಾಗರಂಜಿನಿ..
ಕದ್ದು ಕೊಟ್ಟ ಮುತ್ತುಗಳ ಸವಿ
ಮೆದ್ದು ಹೊದ್ದ ರೆಪ್ಪೆಗಳಡಿಯಲ್ಲಿ
ಸವಿಗನಸ ಬಿತ್ತಿದಾದಿನಗಳು

ಬರಲಾರವೇ ಮತ್ತೆ ತಿರುಗಿ
ಆ ನೆನಪುಗಳೇ ಚಿಗುರಿ, ಹಸಿರಾಗಿ
ನವ ವಸಂತದ ಗಾಳಿ ಬೀಸಿ
ಶಿಶಿರ ತುಂಬಿಹ ಬಾಳಲಿ
ನಗುವಾಗಿಸೋ ಆ ಸುದಿನಗಳು