ಭಾನುವಾರ, ಏಪ್ರಿಲ್ 11, 2021

ಬೆಟ್ಟವೇರಿದ ಮೇಲೆ ಹನಿದ ಕಾಲದೊಂದೊಂದೇ ಹನಿಗಳು...

"ಆತ್ಮಕಥೆ ಎನ್ನುವುದು ತುಂಬಾ ದೊಡ್ಡ ಅರ್ಥವ್ಯಾಪ್ತಿಯನ್ನು ಹೊಂದಿರುವಂಥದ್ದು. ಆ ಅರ್ಥವ್ಯಾಪ್ತಿಗೆ ಅನುಗುಣವಾಗುವಂತಹ ವಿಷಯ ನನ್ನಲ್ಲಿ ಇದೆ ಎನ್ನುವುದರ ಬಗ್ಗೆ ನನಗೆ ನಂಬಿಕೆಯಿಲ್ಲ. ಯಾವ ಆತ್ಮಕಥೆಯೂ ಕೂಡಾ ಪರಿಪೂರ್ಣವಲ್ಲ; ಹೇಳಬಹುದಾದಂಥದ್ದು ಅಥವಾ ಹೇಳುವುದಕ್ಕಿಂತ, ಹೇಳದೆ ಇರುವುದೇ ಜಾಸ್ತಿ ಇರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಪ್ರತಿಯೊಂದು ಆತ್ಮಕಥೆಯೂ ಒಂದೋ ತನ್ನನ್ನು ತಾನು ವೈಭವಿಸಿಕೊಳ್ಳುವಂತಹ ರೀತಿಯದ್ದು ಅಥವಾ ತನ್ನನ್ನು ತಾನು ಹೀನಯಿಸಿಕೊಳ್ಳುವ ರೀತಿಯದ್ದು ಆಗಿರುವಂತಹ ಸಾಧ್ಯತೆ ಇದೆ" - ಎಂದು ವಿವರಿಸುತ್ತಾ, ಹೇಗೆ ‘ಕಾಲದೊಂದೊಂದೇ ಹನಿ...’ ತಮ್ಮ ಆತ್ಮಕಥೆಯಲ್ಲ ಎನ್ನುವುದನ್ನು ‘ಶ್ರೀಯುತ ಸುಬ್ರಾಯ ಚೊಕ್ಕಾಡಿ’ಯವರು ಹೇಳಿಬಿಡುತ್ತಾರೆ. ಮುಂದೆ, "ನನಗೆ ವೈಯಕ್ತಿಕವಾಗಿ ಆದಂತಹ ಅನುಭವ, ನನ್ನ ಮತ್ತು ಸುತ್ತಲಿನ ಸಮಾಜದ ಮುಖಾಮುಖಿಯಾಗಿ ಅರಿವಿಗೆ ಸಿಕ್ಕಿದಂತಹ ಅನುಭವಗಳು, ನಾನು ಕೇಳಿದ-ನೋಡಿದ ವಿಚಾರಗಳಿಂದ ನನಗೆ ದೊರಕಿದ ಅನುಭವಗಳು ಈ ಎಲ್ಲವೂ ಸೇರಿ ಇದೊಂದು ಅನುಭವ ಕಥನವಾಗಿದೆ" ಎಂದು ಮೊದಲ ಅಧ್ಯಾಯದಲ್ಲೇ ಸ್ಪಷ್ಟಪಡಿಸುತ್ತಾರೆ. ಹೀಗಾಗಿ ಆರಂಭದಲ್ಲೇ ನಮ್ಮ ಓದಿಗೆ ಒಂದು ಸ್ಪಷ್ಟ ಪರಿಕಲ್ಪನೆಯನ್ನೊದಗಿಸುತ್ತಾ, ಆತ್ಮಕಥೆಯ ನಿಟ್ಟಿನಲ್ಲಿ ನಾವು ಓದಲು ಹೋಗದೇ ಅವರ ಅನುಭವಗಳನ್ನು ಒಳಗೆಳೆದುಕೊಳ್ಳುವ, ಆ ಮೂಲಕ ನಮ್ಮ ಬದುಕು ನಮಗೆ ಕಲಿಸಿದ ಪಾಠ, ಅನುಭವಗಳಿಗೆ ಒಂದು ಸೇತುವನ್ನೇರ್ಪಡಿಸಿಕೊಂಡು ಸಾಗುವ ಪಯಣವಾಗಿಬಿಡುತ್ತದೆ.

‘ನಾನೇರಿದೆತ್ತರಕೆ ನೀನೇರಬಲ್ಲೆಯ’ ಎಂದು ಸವಾಲು ಹಾಕುವಂತಹ ಬಂಟಮಲೆ ಬೆಟ್ಟದ ತಪ್ಪಲಿನಲ್ಲಿರುವ ‘ಚೊಕ್ಕಾಡಿ’ ಎಂಬ ಪುಟ್ಟ ಸುಂದರ ಊರು ಹೇಗೆ ಅಂತಹ ಮಹತ್ವದ ಸ್ಥಳವಲ್ಲದೆಯೂ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು, ಮಹತ್ವವನ್ನು ಪಡೆದುಕೊಂಡಿದೆ ಎಂಬುದನ್ನು ವಿವರಿಸಿದ ರೀತಿ ನಮಗೂ ಆ ಊರನ್ನು ಬಹಳ ಆಪ್ತಗೊಳಿಸಿಬಿಡುತ್ತದೆ. ಇಲ್ಲಿ ಲೇಖಕರು ತಮ್ಮ ಬದುಕು ಹೇಗೆ ತಾವಿದ್ದ ತಾವಿನಿಂದಲೇ ಹದಗೊಂಡು ಗಟ್ಟಿಯಾಗುತ್ತಾ ಸಾಗಿತು, ಯಾವ ರೀತಿ ಚೊಕ್ಕಾಡಿ ತಮ್ಮ ಜೀವನ ಸಂಘರ್ಷದಲ್ಲಿ ಮಹತ್ವದ ಪಾತ್ರವನ್ನು ವಹಿಸಿತು ಎನ್ನುವುದನ್ನು ವಿವರಿಸುತ್ತಾ ಹೋದಂತೇ ಅದು ನಮ್ಮನ್ನು ನಮ್ಮ ಬಾಲ್ಯ, ಓದು, ಆರಂಭದ ಹೋರಾಟ ದಿನಗಳು - ಇವೆಲ್ಲಾ ಜರುಗಿದ ನಮ್ಮ ಪರಿಸರದ ಕಡೆಗೆ ಎಳೆದುಕೊಂಡು ಹೋಗಿಬಿಡುತ್ತದೆ.
ತಮ್ಮ ಊರಿನ ಮೇಲೆ ಅವರಿಟ್ಟಿರುವ ಅಭಿಮಾನ, ಪ್ರೀತಿಯನ್ನು ಅಕ್ಷರಗಳಲ್ಲಿ ಸಶಕ್ತವಾಗಿ ಪ್ರಾಮಾಣಿಕವಾಗಿ ಕಟ್ಟಿಕೊಡುವಾಗ ಓದುಗನೂ ಅವನ ಮನದಲ್ಲಿ ಬಲವಾಗಿ ಬೇರೂರಿದ, ನೋವು-ನಲಿವು ಕಂಡು-ಉಂಡು ಬೆಳೆದ ಊರು, ಪರಿಸರಕ್ಕೆ ಹಾರಿಬಿಡುತ್ತಾನೆ.

ಅಮರಪಡ್ನೂರಿನ ಅಜ್ಜನಗದ್ದೆಯಿಂದ ಆರಂಭವಾಗುವ ಜೀವನದ ಪಯಣದ ಬೀಜವು ಚೊಕ್ಕಾಡಿಯಲ್ಲಿ ಸ್ಥಿರಗೊಂಡು, ಅಲ್ಲೇ ಬೇರೂರಿ ಎಲ್ಲೆಡೆ ಹಬ್ಬಿಬೆಳೆದು, ಎದುರಾದ ಅಸಂಖ್ಯಾತ ಎಡರುತೊಡರುಗಳು, ನೋವು-ನಲಿವುಗಳು, ಕಹಿ ಘಟನೆಗಳು, ಸಂಕಷ್ಟದ ದಿನಗಳು ಎಲ್ಲವನ್ನೂ ಹೀರಿಕೊಂಡು ಈ ಅನುಭವ ಕಥನದಲ್ಲಿ ದಟ್ಟ ಹೆಬ್ಬಲಸಿನ ಮರವಾಗಿ ಹಬ್ಬಿ ಬೆಳೆದಿದೆ. 355 ಪುಟಗಳ (ಮೊದಲ ಓದಿನ ಸ್ಪಂದನಗಳನ್ನು ಬಿಟ್ಟು) ಈ ಸುದೀರ್ಘ ಅನುಭವ ಕಥನದಲ್ಲಿ ಹಲವು ಘಟನೆಗಳನ್ನು ಈಗಾಗಲೇ ನಾನು ಚೊಕ್ಕಾಡಿಯವರಿಂದಲೇ ಮುಖತಃ ಒಂದೆರಡು ಬಾರಿ ಕೇಳಿದ್ದರೂ, ಅವನ್ನೆಲ್ಲಾ ಸಮಗ್ರವಾಗಿ ಅನುಕ್ರಮದಲ್ಲಿ ಜೋಡಿಸಿ ಕೊಟ್ಟಾಗ ಒಂದೇ ಕಡೆ ಓದಿಕೊಳ್ಳುವಾಗ ಸಿಗುವ ಸಮಾಧಾನವೇ ಬೇರೆ. ಇಲ್ಲಿಯ ಪ್ರಸಂಗಗಳು, ಅನುಭವಗಳು ನಮ್ಮೊಳಗಿನ ಸೂಕ್ಷ್ಮ ಭಾವಗಳನ್ನು, ದುಃಖ-ದುಮ್ಮಾನಗಳನ್ನು ನೇವರಿಸುತ್ತಾ, ಸಂತೈಸುತ್ತಾ, ಸಾಂತ್ವನವನ್ನೂ ನೀಡುತ್ತವೆ. ಹೀಗಾಗಿ ಈ ಕಥನ ಒಂದು ತರಹ ಕೊಡುಕೊಳ್ಳುವ ರೀತಿಯದ್ದು ಅನ್ನಬಹುದು.

‘ದೊಡ್ಡವರು ನೀವು ಕುಬ್ಜರು ನಾವಲ್ಲ’(ಅಡಿಗರು), ‘ಇದ್ದಲ್ಲೇ ಇಡು ದೇವರೆ’ ಹಾಗೂ ‘ಈಸಬೇಕು ಇದ್ದು ಜಯಿಸಬೇಕು’ – ನಾನು ಸದಾ ಸ್ಮರಿಸುವ ಈ ಮೂರು ವಾಕ್ಯಗಳು ಈ ಅನುಭವ ಕಥನದ ಆಧಾರ ಸ್ತಂಭಗಳಾಗಿವೆ ಎಂಬುದು ನನ್ನ ಅನಿಸಿಕೆ.

1.ದೊಡ್ಡವರು ನೀವು, ಕುಬ್ಜರು ನಾವಲ್ಲ
ನಮ್ಮ ಅಭಿಮಾನ, ಸ್ವಾಭಿಮಾನ, ಪ್ರಾಮಾಣಿಕತೆಗೆ ಧಕ್ಕೆ ಬಂದಾಗ, ನಾವು ಸತ್ಯ ಪಥದಲ್ಲಿದ್ದಾಗ, ಎದುರಿನವರು ಎಂತಹ ದೊಡ್ಡ ಹುದ್ದೆಯಲ್ಲಿರುವ, ಪ್ರಸಿದ್ಧ ವ್ಯಕ್ತಿಯೇ ಆಗಿದ್ದರೂ ಬಾಗಬೇಕಾಗಿಲ್ಲ. ಇದರಿಂದ ನಮ್ಮೊಳಗೆ ದೃಢತೆ, ಛಲ ಗಟ್ಟಿಯಾಗತ್ತಲೇ ಹೋಗುತ್ತದೆ. ಆ ಕ್ಷಣಕ್ಕೆ ಬೇಸರ, ಸಮಸ್ಯೆಗಳು ಎದುರಾದರೂ ಅದು ಬದುಕಲ್ಲಿ ಬೆಳೆಸುವ ಧೈರ್ಯ, ಕೊಡುವ ಧೈರ್ಯ ಅನನ್ಯ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇಲ್ಲಿ ದೊರಕುತ್ತವೆ. ಎಂತಹ ಕಷ್ಟಕರ ಸಮಯದಲ್ಲೂ ತಮ್ಮ ಸ್ವಾಭಿಮಾನ, ಆತ್ಮವಿಶ್ವಾಸವನ್ನು ಅಡವಿಡದ, ಯಾವ ಬೆದರಿಕೆಗೂ ಬೆದರದೇ ಎದುರಾದ ಸವಾಲುಗಳನ್ನು ಸ್ವೀಕರಿಸಿದ ರೀತಿಯನ್ನು ಲೇಖಕರು ಹಲವು ಪ್ರಸಂಗಗಳ ಮೂಲಕ ನಮ್ಮೆದುರು ತೆರೆದಿಟ್ಟಿದ್ದು ಮಾದರಿಯಾಗಿದೆ.

2.ಇದ್ದಲ್ಲೇ ಇಡು ದೇವ್ರೆ
ಹಲವು ಒಳ್ಳೊಳ್ಳೆಯ ಅವಕಾಶಗಳು ಬದುಕಲ್ಲಿ ಮುಂದೆ ದೊರತಾಗಲೂ ತಮ್ಮ ಗ್ರಾಮ, ಊರಿನ ಜನ, ಶಾಲೆಯ ಮಕ್ಕಳನ್ನು ತೊರದು ಹೋಗದದಿದ್ದು, ಅನ್ಯಾಯ, ಸಂಕಷ್ಟಗಳು ಧುತ್ತನೆ ಎದುರಾದಾಗ, ಅಪಮಾನಗಳು ಹಲವು ಬಗೆಯಲ್ಲಿ ಸಮಾಜದಿಂದ ಹಾಗೂ ಕುಟುಂಬದೊಳಗಿನಿಂದಲೂ ಹೊಡೆತ ನೀಡಿದಾಗಲೂ ಧೃತಿಗೆಡದೇ, ಊರು, ಮನೆ ಬಿಟ್ಟು ಹೋಗದೇ, ಅಲ್ಲೇ ಬೇರೂರಿ ನಿಂತು ಸಡ್ಡು ಹೊಡೆದದ್ದು - ಹೀಗೆ ಇರುವಲ್ಲಿಯೇ ಲೋಕ ಜ್ಞಾನವನ್ನು ಪಡೆಯಲು ನಿರ್ಧರಿಸಿದ್ದು, ಸುಖ ಮತ್ತು ನೆಮ್ಮದಿಯಲ್ಲಿ ನೆಮ್ಮದಿಯನ್ನು ಆಯ್ದುಕೊಂಡು ಹೊರಟಿದ್ದು ಎಲ್ಲವೂ ಹೊಸ ಹೊಳಹನ್ನು ನೀಡಿ ಮಾರ್ಗದರ್ಶನವನ್ನು ಮಾಡುತ್ತವೆ.

3.ಈಸಬೇಕು ಇದ್ದು ಜಯಿಸಬೇಕು
ಎಲ್ಲಕ್ಕಿಂತ ಮುಖ್ಯ ಬದುಕು ಮತ್ತು ಅದನ್ನು ಘನತಯಿಂದ ಬದುಕುವುದರಲ್ಲಿರುವುದು ಎಂಬುದು ಇಲ್ಲಿ ನಿಚ್ಚಳವಾಗಿ ತೋರುತ್ತದೆ. ಜೀವನಕ್ಕೆ ವಿಮುಖನಾಗಿಬಿಡುವುದು ಸುಲಭ, ಅದಕ್ಕೆ ಮನಸ್ಸು ಹಾಗೂ ಪ್ರಸಂಗಗಳು ಹಲವಾರು ಕಾರಣಗಳನ್ನು ನೀಡುತ್ತವೆ. ಆದರೆ ಅವುಗಳಿಗೆ ಶರಣಾಗದೇ ಸ್ಪಷ್ಟ ಗುರಿಯೊಡನೆ, ಸಂಕಲ್ಪದೊಂದಿಗೆ ಮುನ್ನುಗ್ಗಿದಾಗ ಕಾಲವೂ ಶರಣಾಗುತ್ತದೆ ಎನ್ನುವ ಒಳ್ಳೆಯ ಸಂದೇಶವನ್ನೂ ನೀಡುತ್ತದೆ.

ಶ್ರೀಯುತ ಚೊಕ್ಕಾಡಿಯವರ ಸಮಗ್ರ ಕಾವ್ಯದಲ್ಲಿರುವ "ಧಾನಸ್ಥ’ ಎನ್ನುವ ಕವಿತೆಯನ್ನು ಆಗಾಗ ಓದುತ್ತಿರುತ್ತೇನೆ. ಇದು ಅವರ ಈ ಅನುಭವ ಕಥನದ ಸಾರವನ್ನೇ ಹಿಂಡಿ ಕೊಡುತ್ತದೆ ಎಂದು ಈಗ ನನಗನ್ನಿಸುತ್ತಿದೆ.

-ಎಲ್ಲ ಗತ ಇತಿಹಾಸವಾಗುವ ಹಾಗೆ
ಇದಲ್ಲ ಇದಲ್ಲ ಎಂದು ಸಾರುವ ಹಾಗೆ
ಎದುರು ನಿಂತಿದೆ ಇಲ್ಲಿ ತ್ರಿಭಂಗಿ ನಿಲುವಲ್ಲಿ ಧ್ಯಾನಸ್ಥ
ಆಕಾಶಕ್ಕೆ ಲಗ್ಗೆಯಿಟ್ಟಂಥ ಪಾರಿಜಾತ.
....
ಕಾಣ್ಕೆ-ಕಣ್ಕಟ್ಟುಗಳ ನಡುವೆ ತೆಳುಗೆರೆ ಹರಿದು
ಆಚೆಗೆ ಚಾಚಿಕೊಳ್ಳುವ ಸಿದ್ಧಿಯಾಕಾಂಕ್ಷೆಯಲಿ
ಎದುರು ನಿಂತಿದೆ ಇಲ್ಲಿ ತ್ರಿಭಂಗಿ ನಿಲುವಲ್ಲಿ ಧಾನ್ಯಸ್ಥ
ಆಕಾಶಕ್ಕೆ ಲಗ್ಗೆಯಿಟ್ಟಂಥ ಪಾರಿಜಾತ.

ಅಲ್ಲದೇ, ಈ ಅನುಭವ ಕಥನವನ್ನು ಓದುತ್ತಿರುವಾಗ ಪದೇಪದೇ ಜಿ.ಎಸ್.ಶಿವರುದ್ರಪ್ಪನವರ ನನ್ನಚ್ಚುಮೆಚ್ಚಿನ ‘ಶಕ್ತಿಯ ಕೊಡು ಹೇ ಪ್ರಭು..’ ಕವಿತೆ ನೆನಪಿಗೆ ಬರುತ್ತಿತ್ತು.
ಎಡರ ಕಡಲ ತೆರೆಹೆಡೆಗಳು
ಭೋರ್ಗರೆಯುತ ಬಂದರೂ
ತಡೆದು ನಿಲುವ ಮಳಲ ತಡಿಯ
ಛಲವ ನೀಡು ಶ್ರೀಗುರು- ಎಂಬ ಸಾಲುಗಳು ಹಲವು ಅಧ್ಯಾಯಗಳನ್ನೋದುವಾಗ ನೆನಪಾಗಿ ಆರ್ದ್ರಗೊಂಡಿದ್ದಿದೆ.
ಅಲ್ಲದೇ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವಿತೆಯೊಂದರ,
ಜೀವ ಭಾವ ಕಾವು ನಿಂತು
ಬೆರಗು ಮುಳ್ಳು ಕಲ್ಲಿಗೂ
ಕವಿತೆ ಬೆಳೆದ ಕಂಪು ಬಂತು,
ಅಲ್ಲಿ ಇಲ್ಲಿ ಎಲ್ಲಿಗೂ.. - ಈ ಸಾಲುಗಳೂ ನೆನಪಾಗಿ ಬಹಳ ಸಮಾಧಾನವನ್ನೂ ನೀಡಿದೆ.

ಇದು ಲೇಖಕರ ವೈಯಕ್ತಿಕ ಕಥನ ಮಾತ್ರವಲ್ಲ.
ಈ ಅನುಭವ ಕಥನ ಓರ್ವ ವ್ಯಕ್ತಿಯ ಸುದೀರ್ಘ ಎಂಭತ್ತು ವರುಷಗಳ ಸಾಹಿತ್ಯಿಕ ಹಾಗೂ ಸಾಮಾಜಿಕ ಬದುಕಿನ ಕಥೆ ಮಾತ್ರ ಎಂದೆನ್ನಿಸುವುದಿಲ್ಲ. ಆ ಕಾಲಘಟ್ಟದ ಸಮಗ್ರ ಚಿತ್ರಣವನ್ನು ಕಾಣಿಸುವಂಥದ್ದೂ ಹೌದು ಎನ್ನಬಹುದು. ಈ ಒಂದು ಓದಿನ ಪಯಣದಲ್ಲಿ ಅಂದಿನ ದಕ್ಷಿಣ ಕನ್ನಡದ ಜನಜೀವನ, ಸಮಾಜಿಕ ಚಿತ್ರಣ, ಸಾಂಸ್ಕೃತಿಕ-ಸಾಹಿತ್ಯಿಕ ವಲಯಗಳಲ್ಲಿ ಆಗುತ್ತಿದ್ದ ವಿಪ್ಲವಗಳು, ರಾಜ್ಯದ ರಾಜಕೀಯಗಳು, ಅದರ ಹಳವಂಡಗಳು ಹಾಗೂ ಗುದ್ದಾಟಗಳು... ಅಡಿಗರು, ಕಾರಂತರು, ಚಿತ್ತಾಲರು - ಮುಂತಾದ ಹಿರಿಯ ಸಾಹಿತಿಗಳೊಡನೆ ಅವರ ಒಡನಾಟ, ಅನುಭವಗಳು - ಇವೆಲ್ಲದರ ಮಾಹಿತಿಗಳನ್ನು ನೀಡುತ್ತಾ ಹೋಗುತ್ತದೆ. ಅಂತೆಯೇ, ಅಂದಿನ ಶಾಲೆಗಳ ಕಾರ್ಯವೈಖರಿ, ಶಿಕ್ಷಣ ಪದ್ಧತಿ, ಶಿಕ್ಷಕರಿಗೆ ನೀಡುತ್ತಿದ್ದ ತರಬೇತಿ, ಅಂದಿನ ರಾಜಕೀಯ ನಿಲುವುಗಳು, ಸೈದ್ಧಾಂತಿಕ ಗುದ್ದಾಟಗಳು... ಇನ್ನು, ಕವಿತೆ ಎಂದರೆ ಏನು? ಕಾವ್ಯ ಪ್ರಕಾರ ಹೇಗೆ ವಿಶಿಷ್ಟವಾಗಿದೆ, ಕವಿತೆ ಬರೆಯಲು ಯಾವೆಲ್ಲಾ ಪೂರ್ವ ತಯಾರಿಗಳು ಅತ್ಯಗತ್ಯ, ಕವಿ ಮತ್ತು ಕಾವ್ಯ ಹೇಗೆ ಭಿನ್ನ, ಕಾವ್ಯವನ್ನು ಏಕೆ ಬರೆಯುತ್ತಾರೆ/ಬರೆಯಬೇಕು - ಹೀಗೆ ಈ ಎಲ್ಲಾ ಅಂಶಗಳನ್ನೊಳಗೊಂಡ ಒಂದು ಅಪರೂಪದ ಮಾಹಿತಿಪೂರ್ಣ ಪುಸ್ತಕವೂ ಹೌದು. ಇವೆಲ್ಲಾ ಕಥನ ಶೈಲಿಯಲ್ಲಿರುವುದರಿಂದ ಅಕೆಡಮಿಕ್ ನಿರೂಪಣೆಯ ಕ್ಲಿಷ್ಟತೆಯಿಲ್ಲದೇ ಸರಾಗವಾಗಿ ಓದಿಸಿಕೊಳ್ಳುತ್ತವೆ. ಆ ಕಾಲದ ಶಿಕ್ಷಣ ಪದ್ಧತಿಯು ಮಕ್ಕಳಲ್ಲಿ ಬಾಲ್ಯದಿಂದಲೇ ಬದುಕನ್ನು ಹತ್ತಿರದಿಂದ ನೋಡುವ, ಸಂಪೂರ್ಣವಾಗಿ ಜೀವಿಸುವ, ಸೋಲನ್ನು ಎದುರಿಸುವ ಶಿಕ್ಷಣವನ್ನು ಕಲಿಸುತ್ತಿತ್ತು. ಬಹುಮುಖ್ಯವಾಗಿ ನಮ್ಮ ಪರಿಸರ, ಸಹಜೀವಿಗಳನ್ನು ಗೌರವಿಸುವ, ಪ್ರೀತಿಸುವ ಬಗೆಯನ್ನು ಕಲಿಸುತ್ತಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಇಂದು ನಾವು, ನಮ್ಮ ಮಕ್ಕಳು ಎಂತಹ ಶಿಕ್ಷಣವನ್ನು ಪಡೆದಿದ್ದೇವೆ/ಪಡೆಯುತ್ತಿದ್ದೇವೆ ಎಂಬ ಕಟು ವಾಸ್ತವಿಕತೆಯೂ ಅರಿವಾಗುತ್ತದೆ. ಬೇರನ್ನೂರಿ ಆಗಸಕ್ಕೆ ಜಿಗಿವ ಶಿಕ್ಷಣವು ಅಂದಿನದ್ದಾಗಿದ್ದರೆ, ಇಂದೋ ಬೇರನ್ನೇ ಕತ್ತರಿಸಿ ಗಾಳಿಯಲ್ಲಿ ತೇಲುವ, ಮತ್ತೆಲ್ಲೋ ಹಾರಿ ಬಿದ್ದರೂ ತೆವಳಲೂ ಗೊತ್ತಿರದಂತಹ ಕಲಿಕೆಯ ಮಟ್ಟದಲ್ಲಿದ್ದೇವೆಯೇನೋ ಎಂದೆನಿಸಿ ಕಳವಳವಾಗುತ್ತದೆ!

‘ದೊಡ್ಡ ಹೊಟ್ಟೆಯವನ ಹಸಿವು ಗೊತ್ತಾಗುವುದಿಲ್ಲ, ಉಬ್ಬು ಹಲ್ಲಿನವನ ದುಃಖ ಗೊತ್ತಾಗುವುದಿಲ್ಲ ’ - ಎಂಬ ಗಾದೆಯ ಮಾತೊಂದು ಇಲ್ಲಿ ಉಲ್ಲೇಖವಾಗಿದ್ದು, ಅದು ಬಹಳ ಕಾಡುತ್ತದೆ. ಇದು ಹೇಗೆ ಈ ಅನುಭವ ಕಥನದುದ್ದಕ್ಕೂ ಹಾಸುಹೊಕ್ಕಾಗಿದೆ ಎಂಬುದನ್ನು ಅರಿತಾಗ ಮನಸು ಆರ್ದ್ರಗೊಳ್ಳುತ್ತದೆ. ಹಸಿವು ಮತ್ತು ದುಃಖವನ್ನು ಅಡಗಿಸಿ ಬದುಕುವ ಕಲೆ ಸಿದ್ಧಿಸಿದರೆ ಮತ್ತೇನೂ ಅಷ್ಟು ಕಾಡದೇನೋ ಅನ್ನಿಸಿಬಿಡುತ್ತದೆ. ಎಷ್ಟೋ ಸಲ ನಾವು ನಮ್ಮ ಸಂಕಟಗಳನ್ನು, ಎದುರಿಸಿದ ಸವಾಲುಗಳನ್ನು, ಅವಮಾನ, ನೋವುಗಳನ್ನು ಕುಟುಂಬದವರೊಡನೆ ಹಂಚಿಕೊಳ್ಳುತ್ತಾ ಹೋಗದಿದ್ದರೆ ಅದರ ಪರಿಣಾಮ ಯಾವ ರೀತಿಯ ವೈಪರಿತ್ಯಕ್ಕೂ ಕಾರಣವಾಗಿಬಿಡುವುದು ಎಂಬುದರ ಸ್ಥೂಲ ಪರಿಕಲ್ಪನೆ ಸಿಗುತ್ತದೆ. ಸುಖವನ್ನು ಹಂಚುವುದು ಮಾತ್ರವಲ್ಲ, ಅದನ್ನು ಪಡೆಯಲು ಸವೆಸಿದ ಕಷ್ಟದ ಹಾದಿಯ ಗುರುತನ್ನೂ ನಮ್ಮ ಸಹಜೀವಿಗಳಿಗೆ ನೀಡುತ್ತಿರಬೇಕೆಂಬ ಪಾಠವೂ ದೊರಕುತ್ತದೆ.

ಆದರೆ ಈ ಸುದೀರ್ಘ ಅನುಭವ ಕಥನವನ್ನೋದಿ ಮುಗಿಸಿದಾಗ ಅಲ್ಲಲ್ಲಿ ಕೆಲವೊಂದು ಪ್ರಸಂಗಗಳನ್ನು ಮತ್ತೂ ಸಂಕ್ಷಿಪ್ತವಾಗಿ ತರಬಹುದಿತ್ತು, ಕೆಲವೊಂದು ವಿವರಗಳನ್ನು ಕ್ಲುಪ್ತವಾಗಿಸಿದ್ದರೆ ಓದಿನ ಓಘಕ್ಕೆ ಅದು ಮತ್ತಷ್ಟು ಸಹಕಾರಿಯಾಗುತ್ತಿತ್ತು ಎಂದೂ ಅನ್ನಿಸಿತು. ಅದೇನೇ ಇದ್ದರೂ ಇದು ಅನುಭವ ಕಥನವಾಗಿರುವುದರಿಂದ ಹೇಳಬೇಕಾದ್ದಷ್ಟನ್ನು ಹೇಳುವ ರೀತಿಯಲ್ಲಿ ಹನಿಸುವ ಹಕ್ಕು ಲೇಖಕರದ್ದೇ ಎನ್ನುವುದೂ ಸತ್ಯವೇ.

ಇಷ್ಟು ದೊಡ್ಡ ಕಥನವನ್ನು ರೆಕಾರ್ಡ್ ಮಾಡಿಕೊಂಡು ಚಾಚೂ ತಪ್ಪದೇ ಬಹಳ ಸಹನೆಯಿಂದ ನಿಷ್ಠೆಯಿಂದ ಎಲ್ಲವನ್ನೂ ಅಕ್ಷರಗಳಲ್ಲಿ ಹಿಡಿದು ಚೆನ್ನಾಗಿ ನಿರೂಪಿಸಿದ ಲೇಖಕಿ ಅಂಜನಾ ಹೆಗಡೆ ಅವರ ಕೊಡುಗೆ ನಿಜಕ್ಕೂ ಶ್ಲಾಘನೀಯ. ಸ್ವತಃ ಚೊಕ್ಕಾಡಿಯವರೇ ಬರೆದಿದ್ದರೆ ಇದರ ಶೈಲಿ ಹೇಗಿರುತ್ತಿತ್ತೋ ಗೊತ್ತಿಲ್ಲ. ಆದರೆ ಅನುಭವ ಕಥನಕ್ಕೆ ಶೈಲಿಯ ಹಂಗಿಲ್ಲ, ಅಲ್ಲಿ ಕಥೆ ಮತ್ತು ಅದು ಓದುಗನಿಗೆ ದಾಟಿಸಲು ಸುಲಭವಾಗುವಂತಹ ಒಂದು ಸಹಜ ಶೈಲಿ ಇದ್ದರೆ ಸಾಕಾಗುತ್ತದೆ. ಹೀಗಾಗಿ ಇದು ನಿರೂಪಕನ ಶೈಲಿ ಎಂದು ಅನ್ನಿಸದೇ ಲೇಖಕರೇ ಮೌಖಿಕವಾಗಿ ಹೇಳುತ್ತಾ ಸಾಗಿದಂತೆ ಭಾಸವಾಗಿಬಿಡುತ್ತದೆ. ಆ ಮಟ್ಟಿಗೆ ಇದು ಯಶಸ್ವಿಯಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ನನಗೆ ತಲೆಬಾಗಬೇಕು ಅನ್ನಿಸಿದ್ದು ಶ್ರೀಯುತ ಚೊಕ್ಕಾಡಿಯವರ ಜೋಡಿ ಹಕ್ಕಿಯಾದ, ಬಂಟಮಲೆಯ ಅಗೋಚರ ಶಿಖರದಂತಿರುವ ಶ್ರೀಮತಿ ಲಕ್ಷ್ಮೀ ಚೊಕ್ಕಾಡಿಯವರಿಗೆ!
ಪುಸ್ತಕದ ಹಲವೆಡೆ ಅವರ ಸಹಕಾರ, ತ್ಯಾಗ, ಸಹನೆ, ಸಜ್ಜನಿಕೆಯನ್ನು ಕೆಲವು ಘಟನೆಗಳ ಮೂಲಕ ಲೇಖಕರು ಸ್ಮರಿಸಿಕೊಂಡಿದ್ದಾರೆ. ಆದರೆ ಇಡೀ ಪಯಣದುದ್ದಕ್ಕೂ ಅವರು ಶ್ರೀಯುತ ಸುಬ್ರಾಯ ಚೊಕ್ಕಾಡಿಯವರ ಗುರಿಯಿಟ್ಟ ಸಾಧನೆಯ ಬಾಣದ ಹಿಂಭಾಗದ ಗರಿಯಂತೇ ಭಾಸವಾದರು! ಇಷ್ಟೆಲ್ಲಾ ಸಾಮಾಜಿಕ, ಸಾಹಿತ್ಯಕ ವೈವಿಧ್ಯಮ ಚಟುವಟಿಕೆಗಳನ್ನು ನಡೆಸುವಾಗ ಅವರು ಮನೆಯೊಳಗೆ ಏನೆಲ್ಲಾ ಪರಿಸ್ಥಿತಿ ಎದುರಿಸಿದರು, ಆ ಸಂಕಷ್ಟಗಳನ್ನು ನಿವಾರಿಸಿಕೊಂಡು ಉತ್ಸಾಹದಿಂದ ಸಂಗಾತಿಯ ಬದುಕಿಗೆ ಬಲವಾಗಲು ಅದ್ಯಾವ ಶಕ್ತಿಮಂತ್ರವನ್ನು ವಶಪಡಿಸಿಕೊಂಡಿದ್ದರು, ಎಲ್ಲವೂ ಆಗಿಯೂ ಎದುರಿಗೆ ಕಾಣಿಸಿಕೊಳ್ಳದೇ ನಿಜಾರ್ಥದಲ್ಲಿ ಶಿವನ ಶಕ್ತಿಯಂತೇ ಪ್ರವಹಿಸಿದ ಆ ಅಮ್ಮನ ಜೀವನಗಾಥೆಯನ್ನು, ಅನುಭವ ಕಥನವನ್ನು ಕೇಳುವ ಅತೀವ ಆಸಕ್ತಿ, ಉತ್ಸಾಹ, ನಿರೀಕ್ಷೆ ಮೂಡಿಬಿಟ್ಟಿತು. ಎಂದಾದರೊಂದು ದಿನ ಬಂಟಮಲೆಯ ತಪ್ಪಲಿಗೆ ಹೋದಲ್ಲಿ, ಅದಕ್ಕೆದುರಾಗಿ ಕೂತು ಅವರ ಅನುಭಾವಮೃತದ ಹನಿಗಳನ್ನು ಹೀರಿ ಬರುವ ಸಂಕಲ್ಪ ನನ್ನದಾಗಿದೆ.

ಲೇಖಕರೇ ಒಂದೆಡೆ ಬರೆದುಕೊಂಡಿರುವಂತೇ ‘I am free as the rooted tree is free’ ಎಂಬ ಲಾರೆನ್ಸಿನ ಸಾಲಿನಂತೇ ನಿಂತ ಕಡೆಯೇ ಬೇರನೂರಿ ಆಳ ಅಗಲ ಹರಡಿ ಶಾಪ ವಿಮೋಚನೆಗೆ ಧಾನ್ಯಸ್ಥರಾದ ಈ ಪಾರಿಜಾತದ ಮರದ ಕಥೆಯನ್ನು ಓದುವಾಗ ಹೊರಹೊಮ್ಮುವ ಭಾವಗಳು ಅನೇಕ ಮತ್ತು ಅನನ್ಯ.
ಅಂದು ಬಂಟಮಲೆ ಹೇಗೆ ಚೊಕ್ಕಾಡಿಯವರಿಗೆ ಮೇಲೇರಲು, ಒಳಗಣ ಬೇಗುದಿಯನ್ನು ಅಕ್ಷರಗಳ ಮೂಲಕ ಹೊರಹಾಕಿ ನಿರುಮ್ಮಳರಾಗಲು ಪ್ರೋತ್ಸಾಹಿಸಿತೋ, ಪ್ರೇರಣೆ ನೀಡಿತೋ, ಅಂತೆಯೇ ತಮ್ಮ ಮೇರು ವ್ಯಕ್ತಿತ್ವದ ಮೂಲಕ ಶ್ರೀಯುತ ಚೊಕ್ಕಾಡಿಯವರೂ ಸಹ ಕಿರಿಯ ಬರಹಗಾರರನ್ನು ಮುಲಾಜಿಲ್ಲದೇ ತಮಗೆ ಕಂಡ ತಪ್ಪನ್ನು ತಿದ್ದುತ್ತಿದ್ದಾರೆ. ಉತ್ಸಾಹದಿಂದ ಬರೆಯಲು ಹೊರಟವರಿಗೆ ಮತ್ತಷ್ಟು ಪ್ರೇರೇಪಿಸುತ್ತಾ, ಸಹನೆಯಿಂದ ತಮ್ಮೊಳಗಿನ ಜ್ಞಾನವನ್ನು ಧಾರೆಯೆರೆಯುತ್ತಿದ್ದಾರೆ. ಈ ಹನಿಗಳು ಹನಿಯುವ ಪಯಣವು ನಿರಂತರವಾಗಿರಲಿ ಎಂದು ಪ್ರಾರ್ಥನೆ.

#ಪುಸ್ತಕ_ಪರಿಚಯ #ಅನಿಸಿಕೆ

ಪುಸ್ತಕ: ಕಾಲದೊಂದೊಂದೇ_ಹನಿ...
(Subraya Chokkady ಅನುಭವ ಕಥನ)
ನಿರೂಪಣೆ : ಅಂಜನಾ ಹೆಗಡೆ
ಪ್ರಕಾಶನ : ವಿಕಾಸ ಪ್ರಕಾಶನ, ಬೆಂಗಳೂರು
ಪುಟಗಳು : 16+384
ಬೆಲೆ : 350/-

~ತೇಜಸ್ವಿನಿ ಹೆಗಡೆ.

ಬುಧವಾರ, ಮಾರ್ಚ್ 17, 2021

ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗೆ...[ಶ್ರೀಯುತ ಡಿ.ವಿ.ಜಿಯವರ ಜನ್ಮದಿನದ ಸ್ಮರಣಾರ್ಥ ಅವರ ಕಗ್ಗಗಳನ್ನಾಧರಿಸಿ ಆಸೆ/ಮೋಹದ ಮೇಲೊಂದು ಪುಟ್ಟ ಲೇಖನ. ]

‘ಕನ್ನಡದ ಭಗವದ್ಗೀತೆ’ ಎಂದೇ ಪ್ರಸಿದ್ಧವಾಗಿರುವ ಶ್ರೀಯುತ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿ.ವಿ.ಜಿ) ಅವರ ಮಹೋನ್ನತ ಕೃತಿಯಾದ ಮಂಕುತಿಮ್ಮನ ಕಗ್ಗದಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ಜಗತ್ತಿಗೆ ಸಂಬಂಧಿಸಿದ ಅನೇಕ ರಹಸ್ಯಗಳು ಅಡಗಿಕೊಂಡಿವೆ. ಪ್ರತಿ ಕಗ್ಗವೂ ಒಂದು ಹೊಸ ಕಗ್ಗಂಟನ್ನು ಒಡೆದು, ಸೂಕ್ಷ್ಮವಾಗಿ ಬಿಡಿಸಿ ಒಂದು ಬೆರಗನ್ನು ಹೊಸ ಹೊಳಹನ್ನು ನಮ್ಮಲ್ಲಿ ಮೂಡಿಸುತ್ತದೆ. ಹೀಗಾಗಿಯೇ ಅನೇಕ ಮಹಾನ್ ವಿದ್ವಾಂಸರು ಡಿ.ವಿ.ಜಿ.ಯವರ ‘ಮಂಕುತಿಮ್ಮನಕಗ್ಗ’ವನ್ನು ಮೆಚ್ಚಿದ್ದಾರೆ, ಒಪ್ಪಿದ್ದಾರೆ, ಹೊಗಳಿದ್ದಾರೆ, “ವಿಸ್ತರದ ದರುಶನಕೆ ತುತ್ತ ತುದಿಯಲಿ ನಿನ್ನ ಪುಸ್ತಕಕೆ ಕೈ ಮುಗಿದೆ – ಮಂಕುತಿಮ್ಮ” ಎಂದು ರಾಷ್ಟ್ರಕವಿ ಕುವೆಂಪು ಅವರು ವಿನಮ್ರರಾಗಿ ನಮಿಸಿದ್ದಾರೆ. ಕಗ್ಗ ರಸಧಾರೆಯನ್ನು ಹನಿಹನಿಯಾಗಿ ಸವಿಯುವಾಗ ನಮಗೂ ಇದು ಬಹಳ ಸತ್ಯ ಎಂಬುದು ಅರಿವಾಗುವುದು.

ಚಿಕ್ಕಂದಿನಲ್ಲಿ ಅಮ್ಮ ಕಲಿಸಿಕೊಟ್ಟ ಗಣಪತಿಯ ಮೇಲಣ ಭಜನೆಯೊಂದನ್ನು ಇಂದಿಗೂ ನಮ್ಮ ಮನೆಯಲ್ಲಿ ತಪ್ಪದೇ ಹೇಳಲಾಗುತ್ತದೆ. ಅದರ ಒಂದು ಸಾಲು ಹೀಗೆ ಬರುವುದು - ‘ಮೂಷಿಕ ವಾಹನ ಮೋದಕ ಹಸ್ತ, ಪಾಶಾಂಕುಶಧರ ಪರಮ ಪವಿತ್ರ...’- ಆದರೆ ಇಷ್ಟು ಚಿಕ್ಕ ಸಾಲಿನೊಳಗೆ ಎಷ್ಟೆಲ್ಲಾ ಅರ್ಥಗಳಿವೆ ಎಂಬುದು ಅಂದು ಗೊತ್ತಾಗಿರಲಿಲ್ಲ. ಕ್ರಮೇಣ ಗೀತೆಯ ಕೃಷ್ಣನ ಸಾರದ ಜೊತೆಗೆ ಡಿ.ವಿ.ಜಿ.ಯವರ ಕಗ್ಗ ರಸಧಾರೆಯನ್ನು ಬೆರೆಸಿ ಹನಿಯಾಗಿ ಒಳಗಿಳಿಸಿದಂತೇ, ಮುಸುಕೂ ತುಸು ತೆರೆಯುತ್ತಾ ಹೋಯಿತು. 

ಬಾಂಧವ್ಯದಿಂದ ಆರಂಭವಾಗುವ ಈ ನಂಟಿನ ಅಂಟು, ಮೆಲ್ಲನೆ ಆಸೆಯನ್ನು ಬೆಸೆದು, ಅದೇ ದುರಾಸೆಯಾಗಿ ಬೆಳೆದು, ಅಲ್ಲಿಂದ ಮೋಹದ ಹೆಮ್ಮರವಾಗಿ ಜಿಗಿದು, ಮದವಾಗಿ ಹಬ್ಬಿ, ಅವಿವೇಕದ ಫಲದಿಂದ ಬುದ್ಧಿನಾಶವಾಗುವುದೆಂದು ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಅದನ್ನೇ ಶ್ರೀಯುತ ಡಿ.ವಿ.ಗುಂಡಪ್ಪನವರು ತಮ್ಮ ಅನೇಕ ಕಗ್ಗದಲ್ಲಿ ಬಹಳ ಅರ್ಥವತ್ತಾಗಿ ವಿವರಿಸುತ್ತಾ ಹೋಗಿದ್ದಾರೆ. 

ದಾಸರೋ ನಾವೆಲ್ಲ ಶುನಕನಂದದಿ ಜಗದ |
 ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ || 
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹುವು | 
 ವಾಸನಾಕ್ಷಯ ಮೋಕ್ಷ - ಮಂಕುತಿಮ್ಮ ||- ಹೇಗೆ ನಾಯಿಯು ವಸ್ತುವಿನ ನೋಟ ಹಾಗೂ ವಾಸನೆಯ ಸೆಳೆತಕ್ಕೆ ಸಿಲುಕಿ ಅದರ ಹಿಂದೆ ಸುತ್ತುವುದೋ, ಹಾಗೇ ನಾವು ಜಗತ್ತಿನಲ್ಲಿ ನಮ್ಮನ್ನು ಆಕರ್ಷಿಸುವ ವಸ್ತು-ವಿಷಯಗಳ ಬಯಕೆಯ ದಾಸರಾಗಿಬಿಡುತ್ತೇವೆ. ಚಿತ್ತಾಕರ್ಷಣೆಗಳೆಲ್ಲಾ ಹೊರಗಿದ್ದರೆ ಅವುಗಳನ್ನು ಹೊಂದುವ ಆಸೆಯ ಕೊಂಡಿ ನಮ್ಮೊಳಗೆ ಇದ್ದಿರುತ್ತದೆ. ಮುಂದೆ ಈ ಬಯಕೆಯೇ ಬಲಿತು ‘ಇದು ನನ್ನ ಸ್ವತ್ತು, ನಾನದರ ಒಡೆಯ’ ಎಂಬ ಮೋಹದ ಬಲೆಗೆ ಸಿಲುಕಿ, ಅದು ಬಿಡಿಸಿಕೊಳ್ಳಲಾಗದ ಸಂಕೋಲೆಯಾಗಿಬಿಡುತ್ತದೆ. ಹೀಗಾಗಿ ಈ ಕೊಂಡಿ ಕ್ಷಯಗೊಂಡಾಗಲೇ ಮೋಕ್ಷ ಸಿಗುವುದು ಎಂಬುದು ಈ ಕಗ್ಗದ ಸಾರ. 

ಹಾಗೆ ನೋಡಿದರೆ ಡಿ.ವಿ.ಜಿ.ಯವರು ತಮ್ಮ ಮತ್ತೊಂದು ಕಗ್ಗದಲ್ಲಿ ಮೋಹಪಾಶಗಳೆಲ್ಲಾ ಆ ಭಗವಂತನದೇ ಲೀಲೆ, ಅವನಾಡುವ ಮಾಯೆ ಎಂದೂ ಸಾರಿಬಿಡುತ್ತಾರೆ.

ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು| 
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ|| 
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ| 
ಮೋಸದಾಟವೋ ದೈವ - ಮಂಕುತಿಮ್ಮ|| - ಚಿನ್ನ, ವಜ್ರಗಳು ಮೂಲದಲ್ಲಿ ಕಪ್ಪಾಗಿದ್ದು, ಮಣ್ಣು, ಹೊಲಸು ಮೆತ್ತಿಕೊಂಡು ಕೊಳಕಾಗಿರುತ್ತವೆ. ಅವುಗಳನ್ನು ಹೊರತೆಗೆದು, ಚೆನ್ನಾಗಿ ತೊಳೆದು, ಬೆಂಕಿಯಲ್ಲಿ ಕಾಯಿಸಿಯೋ, ಯಂತ್ರದಲ್ಲಿ ಕೊರೆದೋ ಸಾಣೆಹಿಡಿದು ಅವುಗಳ ನಿಜಗುಣವನ್ನು ಹೊರತರದೇ ಹೋದರೆ ಕೊನೆಯವರೆಗೂ ಅವೆಲ್ಲಾ ಬರಿಗಣ್ಣಿಗೆ ಕಲ್ಲಿನ ಚೂರಿನಂತೇ ಕಂಡುಬಿಡುತ್ತವೆ. ಅಂತೆಯೇ ಭಗವಂತ ಹುಟ್ಟಿದ ಪ್ರತಿಯೊಬ್ಬ ಜೀವಿಯನ್ನೂ ಸಕಲ ವಿಧದಲ್ಲಿ ಪರೀಕ್ಷೆಗೊಳಪಡಿಸಿ, ತನ್ನ ಸೃಷ್ಟಿಯ ಮಹತ್ತನ್ನು ತಾನೇ ಸಾಣೆಹಿಡಿಯುತ್ತಾನೆ. ಸಂಕಷ್ಟಗಳನ್ನಿತ್ತು, ಸುಖಗಳನ್ನೂ ಕೊಟ್ಟು, ಆಮಿಷಗಳನ್ನು ಒಡ್ಡಿ, ಮೋಹದ ಪಾಶದಲ್ಲಿ ಸುತ್ತಿ - ಹೀಗೆ ಅನೇಕ ವಿಧದಲ್ಲಿ ಪ್ರಯತ್ನಿಸಿ, ಹುಲು ಮಾನವರ ತೊಳಲಾಟವನ್ನು, ಒದ್ದಾಟವನ್ನು ಕಿರುಗಣ್ಣಿನಲ್ಲಿ ವೀಕ್ಷಿಸುತ್ತಾ ಹೋಗಿತ್ತಾನೆ. ಈ ಆಸೆ, ಮೋಹಗಳೆಲ್ಲಾ ವಾಸನಾ ರೂಪದಲ್ಲಿ ಜನ್ಮಾಂತರಗಳನ್ನು ಪ್ರವೇಶಿಸಿ ಕಾಡುತ್ತವೆ ಎಂಬುದನ್ನೂ ವಿವರಿಸುತ್ತಾ ಹೋಗಿದ್ದಾರೆ. ಪರಮಾತ್ಮನ ಈ ಮೋಸದಾಟವನ್ನು ಅರಿಯಲಾಗದ ಮಾನವ, ಆ ವರ್ತುಲದೊಳಗೇ ಸಿಲುಕಿಕೊಂಡುಬಿಡುವನು. ಅಂತಹ ವ್ಯಕ್ತಿಯನ್ನು ಮೋಹ ಹೇಗೆ ಯಾತನೆಗೆ ದೂಡುವುದು ಎಂಬುದನ್ನು ಈ ಕೆಳಗಿನ ಕಗ್ಗವೊಂದಗೆ ಹೀಗೆ ಸ್ಫುಟವಾಗಿ ವಿವರಿಸಿದ್ದಾರೆ – 

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ| 
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ| 
ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ| 
ವಣುವಣುವೆ ಬಿಗಿಯುವುವೊ - ಮಂಕುತಿಮ್ಮ ||  

ಆಸೆಯೆಂಬ ಬಿಸಿಲುಗುದುರೆ ಯನ್ನೇರಿ, ಮೋಹದ ಸವಾರಿ... 

 ಜೀವಿ ಎಂದಮೇಲೆ ಯಾವುದೇ ವಸ್ತು/ವ್ಯಕ್ತಿಯ ಜೊತೆಗೆ ಒಂದು ನಂಟು/ಸಂಬಂಧ ಬೆಳೆದೇಬೆಳೆಯುತ್ತದೆ. ಹುಟ್ಟಿನಿಂದ ಅಂಟುವಂಥವು ಒಂದೆಡೆಯಾದರೆ, ಬುದ್ಧಿಯಿಂದ, ಬಯಸಿ ಬೆಳೆಸಿಕೊಳ್ಳುವ ಸಂಬಂಧಗಳು ಮತ್ತೊಂದೆಡೆ. ರಕ್ತಸಂಬಂಧಗಳ ಜೊತೆಗೆ ಬಂಧ ಅನಿವಾರ್ಯ, ಸಹಜ. ಆದರೆ ಎಲ್ಲವೂ ಒಂದು ಮಿತಿಯಲ್ಲಿದ್ದರೆ ಸಹನೀಯವಾಗಿರುವುದು, ಅಗಲುವಿಕೆಯ ನೋವಿನ ತೀವ್ರತೆ ಕಡಿಮೆಯಾಗಿ ಅದರಿಂದ ಬದುಕೂ ಹಿತವಾಗಿರುವುದು ಎಂಬುದನ್ನು ಅವರ ಈ ಕೆಳಗಿನ ಕಗ್ಗದಲ್ಲಿ ಕಾಣುತ್ತೇವೆ. 

ಸೆಳೆಯುತಿರ್ಪುದೊಂದು ಹೊರಬೆಡಗಿನೆಳೆಗಳೆ| 
ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು|| 
ಎಳೆದಾಟವೇಂ ಋಣಾಕರ್ಷಣೆಯೋ? ಸೃಷಿ ವಿಧಿ | 
ಯೊಳತಂತ್ರವೋ? ನೋಡು - ಮಂಕುತಿಮ್ಮ|| 
ನಮ್ಮ ಧರ್ಮಶಾಸ್ತ್ರವು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ - ಈ ಅರಿಷಡ್ವರ್ಗಳನ್ನು ಮನುಷ್ಯನ ಮನಶ್ಶಾಂತಿಯನ್ನು ಕದಡುವ ಶತ್ರುಗಳು ಎಂದು ಹೇಳಿದೆ. ಈ ಆರು ಭಾವಗಳೂ ಒಂದಕ್ಕೊಂದು ಕೊಂಡಿಯನ್ನು ಬೆಸೆದುಕೊಂಡಿರುತ್ತವೆ. ಆದರೆ ಕಾಮ, ಕ್ರೋಧಗಳು ತಮ್ಮನ್ನು ಹೊತ್ತ ವ್ಯಕ್ತಿಯ ವ್ಯಕ್ತಿತ್ವವನ್ನು ಸುಡುವಂತಹ ಭಾವಗಳಾದರೆ, ಈ ಮೋಹವೆಂಬುದು ಆತ್ಮೀಯಭಾವದ ಒಂದು ನಯವಂಚಕ ಮುಖ. ಇದು ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ ಅದರ ಬಂಧ ಬಿಗಿಯಾಗುತ್ತಾ ಹೋಗಿ ಅಪಾಯಕಾರಿಯಾಗುತ್ತದೆ ಎಂದು ಸ್ವಾಮಿ ಪುರುಷೋತ್ತಮಾನಂದರು ಒಂದೆಡೆ ಹೇಳುತ್ತಾರೆ. ಮೋಹದ ಭೀಕರತೆಯು ಅದೆಷ್ಟೋ ಬಾರಿ ‘ತನಗೆ ದಕ್ಕದ್ದು, ತನ್ನ ಬಿಟ್ಟುಹೋಗಿದ್ದು ಬೇರೊಬ್ಬನಿಗೆ ಸಿಗಬಾರದು’ ಎಂಬ ಕಡು ಲೋಭದ ರೂಪವನ್ನು ಹೊಂದಿ ಕೊಲೆಗಾರನನ್ನಾಗಿಸಿಬಿಡುವ ಅಪಾಯವಿದೆ! ಅದರ ಮಾಯಾವಿಗುಣವನ್ನು ವಿವರಿಸುತ್ತಾ ಪುರುಷೋತ್ತಮಾನಂದರು- “ಜನರನ್ನು ಮೋಹ ಪಾಶದಿಂದ ಪಾರುಮಾಡಹೊರಟ ಮಹಾತ್ಮರೆನಿಸಿಕೊಂಡವರೇ ಮೋಹದ ಬಲೆಯೊಳಗಿರುವುದು ಕಂಡುಬರುತ್ತಿರುವಾಗ ಅದರ ಭೀಕರತೆಯ ಕುರಿತು ಏನೆಂದು ಹೇಳಲಿ?” ಎಂದು ವಿವರಿಸಿದ್ದಾರೆ. 

 ಪ್ರಾಜ್ಞರು ಮೋಹವನ್ನು ಮೋಹಿನಿಗೆ ಹೋಲಿಸಿದ್ದಾರೆ. ಮೋಹಿನಿ ಮೇಲ್ನೋಟಕ್ಕೆ ಬಹಳ ಸುಂದರವಾಗಿ ಕಾಣುವ ಯುವತಿ. ಭಸ್ಮಾಸುರನು ಆಕೆಯನ್ನು ಬಯಸಿ, ಅವಳ ಪ್ರೇಮಪಾಶದೊಳು ಸಿಲುಕಿ, ಬೆನ್ನು ಹತ್ತಿ ಅಪ್ಪಿಕೊಳ್ಳಲು, ತಾನೇ ಸುಟ್ಟು ಭಸ್ಮವಾಗಿಬಿಡುತ್ತಾನೆ. ಮೋಹವೆಂಬ ಮಾಯಾಂಗನೆಯೂ ಹೀಗೆಯೇ. ಮೇಲ್ನೋಟಕ್ಕೆ ಆಸೆ, ದುರಾಸೆಗಳಿಂದ ಸಿಂಗರಿಸಲ್ಪಟ್ಟ ನಯನಮನೋಹರಿಯಂತಹ ಸುಂದರ ಈ ಕುಣಿಕೆಗೆ ಒಮ್ಮೆ ಸಿಲುಕಿಬಿಟ್ಟರೆ ಪ್ರತಿಕ್ಷಣವದು ದಹಿಸಿವುದು, ಕೊನೆಗೆ ಪೂರ್ಣ ವ್ಯಕ್ತಿತ್ವವನ್ನೇ ಸುಟ್ಟುಬಿಡುವುದು!

ಮೂರರಲ್ಲೇ ನೂರು ಭಾವ! 

     ಆಶಾಪಾಶದಿಂದ ಬಂಧಿಸಲ್ಪಟ್ಟ ಈ ಮೋಹವನ್ನು ನಮ್ಮ ಉರುಳಾಗಿಸಿಕೊಳ್ಳುವ ಬದಲು, ಬಲವನ್ನು ನೀಡುವ ಊರುಗೋಲಾಗಿಸಿಕೊಳ್ಳಲೂ ಸಾಧ್ಯವಿದೆ ಎಂಬುದನ್ನೂ ನಾವು ಡಿ.ವಿ.ಜಿಯವರ ಈ ಕೆಳಗಿನ ಕಗ್ಗದ ಮೂಲಕ ತಿಳಿಯಬಹುದು. 

ಸುಂದರದ ರಸ ನೂರು; ಸಾರವದರೊಳು ಮೂರು|
ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ|
ಒಂದರಿಂದೊಂದು ಬೆಳೆಯಾದಂದು ಜೀವನವು|
ಚೆಂದಗೊಂಡುಜ್ಜುಗವೋ - ಮಂಕುತಿಮ್ಮ|| - ಇಲ್ಲಿ ಗುಂಡಪ್ಪನವರು ಮೋಹಕ್ಕೆ ತುಸು ಭಿನ್ನ ಸ್ವರೂಪವನ್ನು ನೀಡಿದ್ದಾರೆ. ಈ ಕಗ್ಗದ ಪ್ರಕಾರ ಜಗತ್ತಿನಲ್ಲಿ ನೂರಾರು ರಸಗಳಿದ್ದಿರಬಹುದು, ಆದರೆ ಸಾರಗಳಿರುವುದು ಮೂರೇ - ಮೋಹ, ಕರುಣೆ ಮತ್ತು ಶಾಂತಿ. ಈ ಮೂರು ಸಾರಗಳು ಪರಸ್ಪರ ಹೊಂದಿಕೊಂಡು ಬೆಳೆದರೆ ಮನುಷ್ಯನ ಬದುಕು ಹಸನಾಗುತ್ತದೆ ಎನ್ನುವುದೇ ಈ ಕಗ್ಗದ ಸಾರ. ವೀರ, ಶೃಂಗಾರ, ಭೀಭತ್ಸ, ಭಯಾನಕ ಮುಂತಾದ ರಸಗಳೆಲ್ಲಾ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಸಂದರ್ಭದಲ್ಲಿ ವಿವಿಧ ವಸ್ತು/ವ್ಯಕ್ತಿಯನ್ನು ಕಂಡಾಗಿ ಹುಟ್ಟುವ ಭಾವಗಳು. ಆದರೆ ಈ ಎಲ್ಲಾ ರಸಗಳ ಸಾರ ಅಡಗಿರುವುದು ಮೋಹ, ಕರುಣೆ ಮತ್ತು ಶಾಂತಿಯಲ್ಲಿ ಮಾತ್ರ ಎನ್ನುತ್ತಾರೆ ಡಿ.ವಿ.ಜಿಯವರು. ನಾನು, ನನ್ನದು ಎಂಬ ಮಮಕಾರದಿಂದ ವಿವಿಧ ರಸಗಳ ಉತ್ಪತ್ತಿಯಾಗಿ ಅದು ಮೋಹಕ್ಕೆ ಕಾರಣವಾಗುವುದು. ಈ ಮಮಕಾರ ಮನುಷ್ಯನಲ್ಲಿ ಬಹಳ ಸಹಜ. ಬದುಕಿನಲ್ಲಿ ಇದು ಒಂದು ಹಂತದವರೆಗೆ ಅಗತ್ಯವೂ ಹೌದು. ಆದರೆ ಈ ಮಮಕಾರ ಬಹುಬೇಗ ಮೋಹದ ರೂಪವನ್ನು ಪಡೆದುಕೊಂಡು ಬಿಡುತ್ತದೆ ಮತ್ತು ಇದರಲ್ಲಿಯೇ ಎಲ್ಲಾ ಬಗೆಯ ನೂರಾರು ರಸಗಳು ಅಡಗಿಕೊಂಡಿರುತ್ತವೆ. ಆದರೆ, ಯಾವಾಗ ನಾನು ನಿಮಿತ್ತ ಮಾತ್ರ, ಎಲ್ಲವೂ ಅವನದೇ ಇಚ್ಛೇ ಎಂಬ ಉದಾರತೆ ಹುಟ್ಟುವುದೋ, ಆಗಲೇ ಬಂಧಿಸಿಟ್ಟುಕೊಂಡಿದ್ದರ ಮೇಲೆ ಕಾರುಣ್ಯವುಕ್ಕಿ, ಅವುಗಳಿಗೆಲ್ಲಾ ಬಿಡುಗಡೆ ದೊರಕುವುದು. ಸಹಜೀವಿಗಳ ಮೆಲೆ ಗೌರವ, ಪ್ರೀತಿ ಹುಟ್ಟುವುದು. ಬಂಧಿಸಿಡುವ ದುರಾಸೆಯ ಬದಲು ಸಹಬಾಳ್ವೆ ಮಾಡುವ ಸದ್ವಿಚಾರ ಮೂಡುವುದು. ಆಗ ನಾವು ಮನಶ್ಶಾಂತಿಯನ್ನು ಹೊಂದುವುದು ಸಾಧ್ಯ ಎಂಬ ಅದ್ಭುತ ಹೊಳಹನ್ನು ಮೇಲಿನ ಕಗ್ಗದಲ್ಲಿ ನಾವು ಕಾಣುತ್ತೇವೆ.

ಅವನ ನಿಯಮ ಮೀರಿ ಇಲ್ಲಿ ಏನು ಸಾಗದು!

    ಸ್ವಾಮಿ ಪುರುಷೋತ್ತಮನಾಂದರು ಕೂಡ ಮೋಹವನ್ನು ಋಣಾತ್ಮಕತೆಯಿಂದ ಧನಾತ್ಮಕತೆಗೆ ತಿರುಗಿಸುವುದು ಹೇಗೆ ಎಂಬುದನ್ನು ಬಹಳ ಸರಳವಾಗಿ, ಸುಂದರವಾಗಿ ವಿವರಿಸಿದ್ದಾರೆ. ಈ ಅರಿಷಡ್ವರ್ಗಳು ನಮ್ಮ ಶತ್ರುಗಳಲ್ಲ, ಶಕ್ತಿಗಳು, ಅವುಗಳನ್ನು ನಮ್ಮ ಬಲವಾಗಿ ಪರಿವರ್ತಿಸಿಕೊಳ್ಳುವ ವಿವೇಕವನ್ನು ಸಜ್ಜನರ ಸಂಗದಿಂದ, ಅಧ್ಯಾತ್ಮ ಚಿಂತನೆಗಳಿಂದ, ಪರಮಾತ್ಮನ ಧ್ಯಾನದಿಂದ ಹೊಂದಬಹುದು ಎಂದಿದ್ದಾರೆ. ಅದು ನನ್ನದು, ಇದು ನನ್ನದು ಎಂಬ ಆಸೆಗೆ, ಮೋಹಕ್ಕೆ ಅಂಟಿಕೊಳ್ಳುವುದರ ಬದಲು ನಾನು ಆ ಪರಮಾತ್ಮನಿಗೆ ಸೇರಿದವನು, ಅವನು ಮಾತ್ರ ನನ್ನವನು ಎಂಬ ಅನುಪಮ ಬಂಧವನ್ನು ಬಿಗಿಯಾಗಿ ಹಿಡಿದು, ಆತನ ಇರುವಿಕೆಯನ್ನು ಅರಿಯುವ ಅದಮ್ಯ ಆಸೆಯನ್ನು ತುಂಬಿಕೊಂಡು, ಅಲೌಕಿಕತೆಯ ಮೋಹಕ್ಕೆ ತಿರುಗಿಸಿಕೊಂಡರೆ ಈ ಎಲ್ಲಾ ಭಾವಗಳು ಬಹು ದೊಡ್ಡ ಶಕ್ತಿಯಾಗಿ ನಮ್ಮನ್ನು ಸರಿಯಾದ ದಾರಿಯಲ್ಲೇ ಕೈಹಿಡು ಮುನ್ನೆಡೆಸುವವು ಎಂಬ ವಿಶೇಷ ಅರ್ಥವನ್ನು ಈ ಅರಿಷಡ್ವರ್ಗಗಳಿಗೆ ನೀಡಿದ್ದಾರೆ.

 ಈಶಾವಾಸ್ಯೋಪನಿಷತ್ತಿನಲ್ಲೊಂದು ಶ್ಲೋಕ ಬರುತ್ತದೆ-
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್| 
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್|| -  ಸೃಷ್ಟಿಯಲ್ಲಿರುವ ಸಕಲವೂ ಪರಮಾತ್ಮನ (ಬ್ರಹ್ಮನ) ಪ್ರಸಾದ, ಹೀಗಾಗಿ ಎಲ್ಲವೂ/ಎಲ್ಲರೂ ಅವನದೇ ಸ್ವತ್ತು. ಹೀಗಾಗಿ ಯಾವುದನ್ನೂ ಸ್ವಂತದ್ದೆಂದು ಭಾವಿಸದೇ, ತ್ಯಾಗಭಾವನೆಯಿಂದ ಸಹಜೀವಿಗಳೊಂದಿಗೆ ಹಂಚಿಕೊಳ್ಳುತ್ತಾ ಸುಖವನ್ನು ಅನುಭವಿಸು - ಎಂಬುದು ಈ ಶ್ಲೋಕದ ಒಟ್ಟೂ ತಾತ್ಪರ್ಯ. ಈ ವಿಶಾಲ ಮನೋಭಾವ, ಅರಿವು ನಮ್ಮಲ್ಲಿ ಮೂಡಿದಾಗ ‘ನಾನು, ನನ್ನದು, ನನ್ನ ಸ್ವತ್ತು’ ಎಂಬೆಲ್ಲಾ ಆಸೆಗಳು ತನ್ನಿಂದ ತಾನೇ ಮಾಯವಾಗುವವು. ಇದೇ ಭಾವವನ್ನು ನಾವು ವಚನ ಸಾಹಿತ್ಯದಲ್ಲಿ, ದಾಸರ ಕೀರ್ತನೆಗಳಲ್ಲೂ ಕಾಣುತ್ತೇವೆ. 

ಮಮತೆಯ ಕೊಂಡಿಗೆ ಬೆಸೆದಿರುವ ಮೋಹಪಾಶಗಳನ್ನು ವಿಧಿ ಕತ್ತರಿಸಿದಾಗ ಆತ್ಮದ ಉದ್ಧಾರವಾಗುವುದು, ಹೀಗಾಗಿ ವಿಧಿಯಾಟಕ್ಕೆಂದೂ ಮರುಗದಿರು ಎಂಬ ಉತ್ತಮ ಸಂದೇಶವನ್ನು ಡಿ.ವಿ.ಜಿ ಅವರ ಈ ಕೆಳಗಿನ ಕಗ್ಗವು ನೀಡುತ್ತದೆ- 

ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ| 
ನಿನ್ನ ಮಹಿಮೆಯ ನೂಲ ವಿಧಿಯೆ ಪರಿದಂದು||
ಉನ್ನತಿಯಿನಾತ್ಮವನು ತಡೆದಿಡುವ ಪಾಶಗಳು| 
ಛಿನ್ನವಾದಂದೆ ಸೊಗ - ಮಂಕುತಿಮ್ಮ || 


 ~ತೇಜಸ್ವಿನಿ ಹೆಗಡೆ 

 *****