ಹೊರಗೆ ಮುಸಲಧಾರೆಯ ಆರ್ಭಟಕ್ಕೆ ಸುಯ್ಯೆಂದು ಬೀಸುವ ಗಾಳಿ ಸಾಥ್ ನೀಡುತ್ತಿದ್ದರೆ, ಒಳಗೆ ಬೆಚ್ಚಗೆ ಸ್ವೆಟರ್ ಹಾಕಿಕೊಂಡು ಒಂದು ಕೈಯಲ್ಲಿ ಬಿಸಿ ಕಾಫಿಯನ್ನೂ ಇನ್ನೊಂದು ಕೈಯಲ್ಲಿ ಕಾರಂತರ "ಮೂಕಜ್ಜಿಯ ಕನಸುಗಳನ್ನೂ" ಹಿಡಿದುಕೊಂಡು ಕುಳಿತಿದ್ದಳು ಪಾವನಿ. ಹಾಗಂತ ಇದೇ ಮೊದಲೇನಲ್ಲ ಆಕೆ ಈ ಕಾದಂಬರಿಯನ್ನು ಓದುತ್ತಿರುವುದು. ಕಳೆದ ನಾಲ್ಕೈದು ವರ್ಷಗಳಲ್ಲಿ ಮೂರು ಸಲ ಓದಿ ಮುಗಿಸಿದ್ದಾಗಿದೆ. ಇದು ನಾಲ್ಕನೆಯ ಬಾರಿ ಅಷ್ಟೇ. ಅದೇನೋ ಎಂತೋ ಮೂಕಜ್ಜಿಯ ಕನವರಿಕೆಗಳು, ವಿಚಿತ್ರ ಕನಸುಗಳು ಹಾಗೂ ಆಕೆಯೊಳಗಿನ ವಿಶೇಷತೆಯಾದ ವಸ್ತು ಸ್ಪರ್ಶ ಮಾತ್ರದಿಂದ ಜನರನ್ನೇ ಅಳೆಯುವ ಪರಿ, ಎಲ್ಲವೂ ಪ್ರತಿ ಸಲ ಓದುವಾಗಲೂ ಅವಳಲ್ಲೊಂದು ವಿನೂತನ ಭಾವವನ್ನು ಭಿತ್ತುತ್ತಿದ್ದವು. ಇವೆಲ್ಲವುಗಳ ಜೊತೆಗೇ ಸದಾ ಆಕೆಯನ್ನು ಕಾಡುತ್ತಿದ್ದುದು ತನ್ನ ಮೂರೂರಜ್ಜಿಯ ನೆನಪುಗಳು. ಎಲ್ಲೋ ಒಂದು ಮೂಲೆಯಲ್ಲಿ ಪಾವನಿ ಮೂರೂರಜ್ಜಿಯನ್ನು ಮೂಕಜ್ಜಿಯೊಂದಿಗೆ ಹೋಲಿಸಿಕೊಂಡು ನೋಡುತ್ತಿದ್ದಳು. ಕ್ರಮೇಣ ಅವಳ ಮನಃಪಟಲದಲ್ಲಿ ಮೂಕಜ್ಜಿಯೇ ಮೂರೂರಜ್ಜಿಯಾಗಿ ಮಾರ್ಪಾಡಾಗುತ್ತಿದ್ದಳು. ಇದಕ್ಕೆ ಮೂಲ ಕಾರಣ ಇಬ್ಬರ ಹೆಸರೂ ಮೂಕಾಂಬಿಕೆಯಾಗಿದ್ದುದೂ ಹೌದು.
ಪಾವನಿಯ ಅಜ್ಜ ಅಂದರೆ ತಾಯಿಯ ತಂದೆಯ ಏಕಮಾತ್ರ ತಂಗಿಯೇ ಈ ಮೂರೂರಜ್ಜಿ. ಅಣ್ಣ ತಂಗಿಯರ ಅನುಬಂಧ, ವಾತ್ಸಲ್ಯವನ್ನು ಸ್ವತಃ ತನ್ನಜ್ಜಿ ಅಂದರೆ ತಾಯಿಯ ತಾಯಿಯ ಮೂಲಕವೇ ಅನೇಕ ಬಾರಿ ಕೇಳಿದ್ದಳು. "ಆಯಿ ನಿಜ ಹೇಳು ನೀನೂ ಮೂರೂರಜ್ಜಿ ಯಾವತ್ತೂ ಠೂ ಬಿಟ್ಟಿದ್ದಿಲ್ಯ? ಜಗ್ಳ ಆಡಿದ್ದಿಲ್ಯ? ಆವಾಗ ಅಜ್ಜ ಯಾರ ಪಕ್ಷ ವಹಿಸ್ತಿದ್ದ? ನಿಂದೋ ತನ್ನ ತಂಗಿದೋ?" ಎಂದು ಪಾವನಿ ಕೆಣಕಲು ಸರಸಮ್ಮ ತನ್ನ ಬೊಚ್ಚು ಬಾಯಿ ತೆಗೆದು ಗೊಳ್ಳೆಂದು ನಕ್ಕಿದ್ದರು. "ಎಂತ ಕೂಸೇ ನಂಗವೆಂತ ನಿಂಗ್ಳ ಈಗಿನ ಆ ಸುಡುಗಾಡು ಧಾರಾಹಿ ತರಹ ಹೇಳಿ ಮಾಡ್ಕಂಜ್ಯ? ಅದು ನನ್ನ ನಾದ್ನಿಗಿಂತ ಹೆಚ್ಚಾಗಿದ್ದು ತಿಳ್ಕ. ಅದೂ ಅಲ್ದೇ ಪಾಪ ಅದ್ರ ಜೀವ್ನವೇ ಒಂದು ಗೋಳಾಟ ಆಗಿರಕಿರೆ ನಾ ಎಂತಕ್ಕೆ ಸುಮ್ನೆ ಜಗ್ಳ ಆಡ್ಲಿ ಹೇಳು? ಆ ಬಡ್ವೆಯಾದ್ರೂ ಎಂತಕ್ಕೇ ಹೇಳಿ ನನ್ನ ಜೊತೆಗೆ ಮಾತಿಗೆ ನಿಲ್ಗು? ಹಾಂಗೆ ನೋಡಿದ್ರೆ ಮೂಕಾಂಬೆ ಹುಟ್ಟಿ, ಬದ್ಕಿದ್ದೇ ಒಂದು ಪವಾಡ.. ಆದ್ರೆ ಅದು ಜೀವನ್ದಲ್ಲಿ ಕಂಡ ದುಃಖ, ಸಂಕ್ಟ ಎಣ್ಸಿದ್ರೆ ಒಂದೊದ್ಸಲ ಅದು ಬದ್ಕಿದ್ದಾದ್ರೂ ಎಂತಕ್ಕನೋ ಕಂಡಿತ್ತು ನನ್ಗೆ ನೋಡು..." ಎಂದು ಹೇಳುತ್ತಾ ಆಕೆಯ ಕಣ್ಣಂಚಿನಲ್ಲಿಣುಕಿದ ವ್ಯಥೆಯ ಬಿಸಿ ಪಾವನಿಯನ್ನೂ ತಾಗಿದಂತಾಗಿತ್ತು.
"ಕೂಸೆ ಮೂಕಾಂಬೆ ಹುಟ್ಟಿದಾಗ ಮಾವ್ನೋರಿಗೆ ರಾಶಿ ಖುಶಿ ಆಗಿತ್ತಡ.. ಹೆರಿಗೆ ರಾಶಿ ಕಷ್ಟ ಆಗಿ ಅತ್ತೇರು ಬದ್ಕಿದ್ದೇ ದೊಡ್ಡದು.... ಹುಟ್ಟು ಒಂದು ದಿವ್ಸ ಕೂಸು ಕುಂಯ್ಯಿ..ಕುಂಯ್ಯಿ.. ಅಂದಿದ್ದು, ಮಾರನೇ ದಿವ್ಸ ಸದ್ದೇ ಇಲ್ಯಡ ನೋಡು. ಆಗೋತು... ಕಥೆ ಮೂಗ್ದೇ ಹೋತು... ಋಣ ಇಷ್ಟೇ ಇದ್ದಿತ್ತು ಇದ್ರಿದ್ದು.. ಹೇಳಿ ಅಂದ್ಕಂಡು ಮಾವ್ನೋರು ನಿನ್ನಜ್ಜ ಎಲ್ಲಾ ಸೇರಿ ಕಣ್ಣೀರಿಡ್ತಾ ಗುಂಡಿ ತೋಡಿ ಅದ್ನ ಹಾಕಿದ್ದೇ ತಡ ನೋಡು.. ಮತ್ತೆ ಸಣ್ಣಕೆ ಕುಂಯ್ಯಿ ಅಂತಡ. ಇವ್ಕೆ ಒಂದ್ಸಲ ಕೈಕಾಲೇ ಆಡಿದ್ದಿಲ್ಯಡ. ಒಂದು ಚೂರು ಆಚೀಚೆ ಆಗಿದ್ರೆ ಎಂತಾ ಅನಾಹುತ ಆಗ್ತಿತ್ತು ಹೇಳು? ಅದ್ರ ಪ್ರಾಣಾನ ಆ ಯಮರಾಜ ಹಿಂದೇನೆ ಕಳ್ಸುವುಟ ನೋಡು.. ಇಲ್ಲೇ ಅನುಭವಿಸ್ಲಿ ಹೇಳಾದಿಕ್ಕು.. ಹ್ಮಂ.. ಎಲ್ಲಾ ಬ್ರಹ್ಮರಾಯನ ಹಣೆಬರಹ.. ಪಾಪ.. ಸತ್ತೇಹೋತು ಹೇಳಿ ಅಂದ್ಕಂಡಿದ್ದು ಬದಿಕಂಡು ಇವತ್ತಿನವರೆಗೂ ಸಾಯ್ತಾನೇ ಇದ್ದು.." ಎಂದು ಸೆರಗಂಚಿನಿಂದ ಕಣ್ಣೊರೆಸಿಕೊಂಡಿದ್ದಳು ಸರಸಮ್ಮ.
ಆಯಿ ಹೇಳಿದ್ದ ಈ ಕಥೆಯನ್ನು ತನ್ನ ತಾಯಿಯ ಬಾಯಿಯಲ್ಲಿ ಅದೆಷ್ಟೋ ಬಾರಿ ಕೇಳಿ ವಿಸ್ಮಿತಳಾಗಿದ್ದಳು ಪಾವನಿ. ಇನ್ನೇನು ಮಣ್ಣಾಗ ಬೇಕಿದ್ದ ಕೂಸು ಉಸಿರಾಡಿ ಬಾಳಿ ಬದುಕಿದ್ದು ಒಂದು ಅಪೂರ್ವ ಸಂಗತಿ ಎನಿಸಿತ್ತು ಅವಳಿಗೆ. ಪಾವನಿಯ ತಾಯಿ ತನ್ನ ಬಾಲ್ಯವನ್ನೆಲ್ಲಾ ಕಳೆದದ್ದು ಸೋದರತ್ತೆಯ ಮನೆಯಾದ ಮೂರೂರಿನಲ್ಲೇ ಆಗಿತ್ತು. ಹಾಗಾಗಿ ಇನ್ನೂ ಆಕೆಗೆ ಅವಳ ಕಂಡರೆ ವಿಶೇಷ ಮಮತೆ. ಹೆತ್ತ ಮಕ್ಕಳು ಬರಲು ಹಿಂದೆ ಮುಂದೆ ನೋಡಿದರೂ ಅವಳು ಮಾತ್ರ ವರುಷಕ್ಕೆರಡು ಬಾರಿಯಾದರೂ ಪಾವನಿಯ ಕರೆದುಕೊಂಡು ಸೋದರತ್ತೆಯನ್ನು ಕಂಡು ಬರುತ್ತಿದ್ದಳು. ಆದರೂ ಪಾವನಿಗೆ ಕೆಲವೊಂದು ವಿಷಯಗಳ ಸ್ಪಷ್ಟತೆ ಈವರೆಗೂ ಆಗಿರಲಿಲ್ಲ. ಯಾಕೆ ತನ್ನಜ್ಜ, ಮೂರೂರಜ್ಜಿಯನ್ನು ಮುಖ ನೋಡಿ ಮಾತಾಡಿಸೊಲ್ಲ?.. ಯಾಕೆ ಮೂರೂರಜ್ಜಿ ತನ್ನ ಅಣ್ಣಯ್ಯನೆದುರು ಬರಲು ಆದಷ್ಟು ಹಿಂದೇಟು ಹಾಕುತ್ತಾಳೆ? ಅಂಥದ್ದೇನು ನಡೆದಿರಬಹುದು ಎಂದು ಎಷ್ಟೋ ಸಲ ಅಮ್ಮನನ್ನೂ ಕೇಳಿದ್ದಳು. ಆದರೆ ಅಷ್ಟೊಂದು ಸಮರ್ಪಕ ಉತ್ತರವೇನೂ ಆಕೆಗೆ ಸಿಕ್ಕಿರಲಿಲ್ಲ. ತನ್ನತ್ತೆಯ ಗೋಳಿನ ಕಥೆಯನ್ನು ಮತ್ತೆ ಹೇಳಲಿಚ್ಚಿಸದೆಯೋ ಇಲ್ಲಾ ಹಿಂದೆ ನಡೆದ ಕಹಿ ನೆನಪುಗಳನ್ನು ಮತ್ತೆ ಹಸಿರಾಗಿಸಲು ಇಷ್ಟವಾಗದೆಯೋ ಹಾರಿಕೆಯ ಉತ್ತರವನ್ನಷ್ಟೇ ನೀಡಿದ್ದಳು. ಆದರೆ ತನ್ನ ಸಂಶಯಗಳಿಗೆಲ್ಲಾ ಸರಿಯಾದ ಉತ್ತರಗಳನ್ನು ಪಾವನಿ ಮುಂದೊಂದು ದಿನ ತನ್ನ ಆಯಿಯ ಬಳಿಯೇ ಕೇಳಿದಳು. ಸರಸಮ್ಮನ ಸ್ಮೃತಿಪಟಲದಲ್ಲಿ ಆ ಕಹಿ ಘಟನೆ ಎಂದೂ ಮರೆಯಲಾಗದ ಛವಿಯನ್ನೊತ್ತಿತ್ತು. ಹೇಗೆ ತಾನೇ ಆಕೆ ಮರೆತಾರು ತನ್ನ ಪ್ರಿಯ ನಾದಿನಿಯ ಆ ಕರುಣಾಜನಕ ಸ್ಥಿತಿಯನ್ನು.
ಮೂಕಾಂಬಿಕೆ ಹುಟ್ಟಿ ಮರುಜನ್ಮ ಪಡೆದದ್ದೇ ಒಂದು ಪವಾಡವಷ್ಟೇ. ಆದರೆ ಆಕೆಯ ಬದುಕಿನಲ್ಲೇನೂ ಪವಾಡ ನಡೆಯಲೇ ಇಲ್ಲಾ. ಇಲ್ಲೇ ಸ್ವರ್ಗ..ಇಲ್ಲೇ ನರಕ ಎಂಬತೆ ಜೀವ ಪಡೆದದ್ದೇ ಸ್ವರ್ಗ ಉಳಿದದ್ದೆಲ್ಲಾ ನರಕ ಎಂಬಂತಾಗಿತ್ತು ಆಕೆಯ ಬದುಕು ಮುಂದೆ. ನರಸಿಂಹ ಜೋಯಿಸರು ಸರಸಮ್ಮನ ವರಿಸಿ ಗುಬ್ಬಿಮನೆಗೆ ತಂದ ವರುಷದೊಳಗೇ ಮೂಕಾಂಬಿಕೆಯನ್ನೂ ಕನ್ಯಾದಾನ ಮಾಡಿ ಕಳುಹಿಸಿದ್ದರು. ಏಕ ಮಾತ್ರ ತಂಗಿಯ ಮದುವೆಯನ್ನು ಗೊತ್ತುಮಾಡುವ ಮೊದಲು ಯೋಗ್ಯ ವರನಿಗಾಗಿ ಜೋಯಿಸರು ಚೆನ್ನಾಗಿಯೇ ಹುಡುಕಿದ್ದರು. ಅಂತೂ ಕೊನೆಗೆ ಸಿಕ್ಕಿದ್ದು ಕುಮಟಾದಿಂದ ೬-೭ ಕಿ.ಮೀ ದೂರದ ಮೂರೂರಿನ ಶ್ರೀಪತಿ ಹೆಗಡೆ. "ಜೋಯ್ಸ್‌ರೇ ಚಿನ್ನದ ತುಂಡು ಮಾಣಿ.. ಕಣ್ಮುಚ್ಕ ಮದ್ವೆ ಮಾಡ್ಲಕ್ಕು.. ದೊಡ್ಡ ಮಾತೇ ಆಡ್ತ್ನಿಲ್ಲೆ ನೋಡಿ.. ನಿಮ್ಮ ಕೂಸು ಆರಾಮಾಗಿರ್ತು" ಎಂದು ಮೂರೂರು, ಕಲ್ಲಬ್ಬೆಯ ಆಚೀಚೆ ಮನೆಯವರು ಹೇಳಿದ್ದು ಕೇಳಿಯೇ ಜೋಯಿಸರು ಧಾರೆ ಎರೆದು ಕೊಟ್ಟಿದ್ದರು. ಹದಿನಾರರಲ್ಲಿಯೇ ಹಸೆಮಣೆ ಏರಿ ಹೊಸಬದುಕ ಕನಸ ಹೊತ್ತು ಗುಬ್ಬಿಮನೆಯಿಂದ ಮೂರೂರು ಸೇರಿದ ಮೂಕಾಂಬೆಯ ಬಾಳು ಮೂರಾಬಟ್ಟೆ ಆಗಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ.
ಊರವರ ಮಾತಿಗೆ ಮರುಳಾಗಿ ಮೋಸ ಹೋಗಿದ್ದ ಮೂಕಾಂಬೆಯ ಅಣ್ಣಯ್ಯ ಹಾಗೂ ತಂದೆಗೆ ಶ್ರೀಪತಿಯ ನಿಜ ಬಣ್ಣ ತಿಳಿಯಲು ತಿಂಗಳೂ ಬೇಕಾಗಲಿಲ್ಲ. ಹದಿನೈದು ದಿನಕ್ಕೊಮ್ಮೆ ಉಕ್ಕೇರುವ ಆತನ ಹುಚ್ಚುತನ ಮೂಕಾಂಬೆಯ ಜೊತೆಗೆ ಅವಳ ತವರನ್ನೂ ಮಂಕಾಗಿಸಿಬಿಟ್ಟಿತು. ತಿಂಗಳಲ್ಲಿ ಹದಿನೈದು ದಿನ ಮಂಕಾಗಿ ಕುಳಿತಿದ್ದು, ತನಗರಿತ ಕೆಲಸ ಕಾರ್ಯ ಮಾಡಿಕೊಂಡಿರುತ್ತಿದ್ದ ಶ್ರೀಪತಿ ತಿಂಗಳು ಕಳೆಯುವುದರೊಳಗೆ ಬುದ್ಧಿಭ್ರಮಣೆಗೊಳಗಾಗಿ ಅಸಂಬದ್ಧವಗಿ ವರ್ತಿಸುತ್ತಿದ್ದ. "ಕೂಸೆ ಎಂತ ಕೇಳ್ತೆ ನೀನು....ಹುಣ್ಣಿಮೆ ಅಮಾವಾಸ್ಯೆಗೆಲ್ಲಾ ಹುಚ್ಚೇರಿ ಸರ ಸರನೆ ತೆಂಗಿನ ಮರ, ಅಡ್ಕೆ ಮರ ಹತ್ತಿ ಬರ ಬರನೆ ಕಾಯೆಲ್ಲಾ ಉದ್ರಿಸಿ ಹಾಕ್ತಿದ್ದ.... ಓಡೋಗಿ ಎಲ್ಲಾ ಅವ್ನ ಎಳ್ಕ ಬರಕಾಗಿತ್ತು. ಆಗಿನ ಕಾಲ್ದಲ್ಲಿ ಸುಟ್ಟ್ ಕುಮ್ಟೇಲೂ ಹುಚ್ಚಿನ ಡಾಕ್ಟ್ರ ಇದ್ದಿದ್ನಿಲ್ಲೆ. ಅದ್ರ ಕಷ್ಟ ನೋಡಲಾಗ್ದೇ ನಂಗವೇ ಎಂಥದೋ ಹಳ್ಳಿ ಔಷ್ದಿನೇ ಮಾಡ್ಸಿ ನೋಡ್ದೋ.. ಆದ್ರೂ ಕಡ್ಮೆ ಆಜಿಲ್ಲೆ...ಹದ್ನೆಂಟು ವರ್ಷಕ್ಕೇ ಮೂಕಾಂಬೆಗೆ ಅರ್ವತ್ತಾದಾಂಗೆ ಅನಿಸ್ತಿತ್ತು. ಚಿಂತೆ ಮಾಡಿ ಮಾಡಿ ಮಾವ್ನೋರು ಹಾಸ್ಗೆ ಹಿಡ್ದಾಗಿತ್ತು ನೋಡು. ಮಧ್ಯೆ ಎರ್ಡು ಪುಟ್ಟ ಗಂಡು ಮಕ್ಕ ಬೇರೆ. ಎಂತ ಮಾಡ್ತೆ ಹೇಳು? ನಿನ್ನಜ್ಜ ಮಾಡ್ದೇ ಹೋದ ಪೂಜೆಯಿಲ್ಲೆ...ಊಹೂಂ ಎಂತೂ ಪ್ರಯೋಜ್ನ ಆಜಿಲ್ಲೆ... ಪಾಪ ಅವ್ನ ಹುಚ್ಚಿಗೋ ಇಲ್ಲ ಮೂಕಾಂಬೆ ವ್ಯಸನಕ್ಕೋ ಕೊನೆ ಹೇಳು ಹಾಂಗೆ ಇಪ್ಪತ್ನಾಲ್ಕು ವರ್ಷಕ್ಕೇ ಮೂಕಾಂಬೆಕೆ ಗಂಡ ಹೇಳಂವ ಇಲ್ಲಗಿದ್ದಾಂಗಾದ..ಇದ್ರ ನರ್ಕಕ್ಕೆ ದೂಡಿ ತಾನು ಸತ್ತು ಸ್ವರ್ಗ ಸೇರ್ದ...ಹ್ಮ್ಂ... ಮೊದ್ಲಾದ್ರೂ ಎನು ಸುಖಾ ಇತ್ತು ಹೇಳಿ ಇದು ದುಃಖ ಪಡವು ಹೇಳು.. ಸ್ವಲ್ಪ ದಿನ ಇಲ್ಲೇ ಇತ್ತು ನಂಗ್ಳ ಜೊತೆಗೆ.. ಎರ್ಡು ಗಂಡುಮಕ್ಕನೂ ಇಲ್ಲೇ ಶಾಲೆಗೆ ಹೋಗ್ತಿದ್ದೋ..." ಎಂದು ಸರಸಮ್ಮ ಕಣ್ಣೀರೊರೆಸಿಕೊಂಡಾಗ ಪಾವನಿಯ ಕಣ್ಣಂಚೂ ಒದ್ದೆಯಾಗಿತ್ತು.
ಗಂಡ ಸತ್ತ ಮರುದಿವಸವೇ ಮೂಕಾಂಬೆ ತವರಿಗೆ ಬಂದಿದ್ದಳು. ಮಗಳ ದುರ್ಗತಿ ಕಂಡು ದೊಡ್ಡ ಜೋಯಿಸರು ಅತೀವ ದುಃಖ ಪಟ್ಟರೂ ಹಳೆಕಾಲದ ಸಂಪ್ರದಾಯ ಮಾತ್ರ ಮರೆಯಲಿಲ್ಲ. ಮೊದಲಿನಿಂದಲೂ ಮೂಕಾಂಬೆಗೆ ತನ್ನ ಮಾರುದ್ದದ ಕೂದಲ ಮೇಲೆ ಅತೀವ ಅಭಿಮಾನ. ಬಿಗಿಯಾಗಿ ಒಂದು ಜಡೆಹಾಕಿದರೆ ಅದು ಕರಿನಾಗರದಷ್ಟು ಉದ್ದವಾಗುತ್ತಿತ್ತು. ಮಿರಮಿರನೆ ಮಿಂಚುವ ಆ ಕೂದಲನ್ನು ಮೊಗ್ಗಿನದಂಡೆಗಳಿಂದ ಅಲಂಕರಿಸುವುದೆಂದರೆ ಅವಳಿಗದೆಂಥದೋ ಸಂತೋಷ. ಆದರೆ ವೈಧವ್ಯ ಅವಳ ಆ ಜಡೆಯ ಸುಖಕ್ಕೂ ಕತ್ತರಿ ಹಾಕಿತ್ತು. "ಅಪ್ಪಯ್ಯ ಬ್ಯಾಡ... ಈಗ ಕಾಲ ಬದ್ಲಾಜು.. ಮೂಕಾಂಬೆಗೆ ಮನಸ್ಸಿಲ್ಲೆ ಅಂದ್ರೆ ಬಿಟ್ಬುಡು.. ಪಾಪ ಬಡವೆ ಮೊದ್ಲೇ ಬೇಜಾರದಲ್ಲಿದ್ದು.. ಕೂದ್ಲೆಲ್ಲಾ ತೆಗ್ಸದು ಬೇಡ.."ಎಂದು ಗೋಗರೆದ ಮಗನ ಮಾತಿಗೂ "ಅತ್ಗೆ ನೀನಾದ್ರೂ ಹೇಳೆ.. ನಾ ಬಳೆ, ಕುಂಕಮ, ಹೂವು ಎಲ್ಲಾ ಬಿಡ್ತಿ ಆದ್ರೆ ಈ ಕೂದ್ಲೊಂದು ತೆಗ್ಸದು ಬ್ಯಾಡ ಹೇಳೆ.. ಕೈ ಮುಗಿತಿ.." ಎಂದು ಗೋಳಾಡಿದ ಮಗಳ ದುಃಖವನ್ನೂ ಮರೆತು.."ಮಾವಯ್ಯ ಯಾರೇನಾರ ಹೇಳ್ಕಳ್ಲಿ..ಎಲ್ಲದಕ್ಕಿಂತ ಮೂಕಾಂಬೆ ದುಃಖ ದೊಡ್ಡದು ಇದೆಲ್ಲಾ ಬೇಡ.." ಎಂದು ಮೊದಲಬಾರಿ ಎದುರು ನಿಂತು ಮಾತಾಡಿದ ಸೊಸೆಯ ಮಾತನ್ನೂ ಮೀರಿ ದೊಡ್ಡ ಜೋಯಿಸರು ಹಠ ಹೊತ್ತು ಆ ಸುಂದರ ಕೇಶರಾಶಿಯನ್ನು ಹೊಳೆಪಾಲು ಮಾಡಿಬಿಟ್ಟರು. "ನಿನ್ನ ಕೂದ್ಲಿಂದ ನೀರು ತೊಟ್ಟಿಕ್ಕಿರೆ ನಮ್ಗೆ ಒಳ್ಳೇದಾಗ್ತಿಲ್ಲೆ..ಒಂದೋ ನೀ ಕೂದ್ಲು ತೆಗ್ಸು.. ಇಲ್ಲಾ ನಾ ಊಟ, ಆಸರಿ ಬಿಟ್ಟು ಪ್ರಾಣ ಬಿಡ್ತಿ.." ಎಂದು ಪಣ ತೊಟ್ಟ ಅಪ್ಪನ ಮುಂದೆ ಕೊನೆಗೂ ಮಗಳು ತಲೆಯೊಡ್ಡಿದ್ದಳು. ಅವಳ ಬದುಕು ಅಲ್ಲಿಗೆ ಸಂಪೂರ್ಣ ಬೋಳಾಗಿಹೋಯಿತು. ತಂಗಿಯ ಸಂತೋಷಕ್ಕಾಗಿ ಈ ಒಂದು ಸಂಪ್ರದಾಯವನ್ನಾದರೂ ತಡೆಯಬೇಕೆಂದು ಎಣಿಸಿದ್ದ ನರಸಿಂಹ ಜೋಯಿಸರಿಗೆ ಅತೀವ ನಿರಾಸೆ ದುಃಖಗಳಾದವು. ತದನಂತರ ಅವರಿಗೆ ಮೂಕಾಂಬೆಯ ಮೊಗನೋಡುವುದೇ ಕಷ್ಟವಾಗಿ ಹೋಯಿತು. ಅಂತೆಯೇ ಆಕೆಗೂ ಅಣ್ಣನ ನೋವಿನ ಅರಿವಾಗಿ, ಆದಷ್ಟು ಅವರ ಎದುರಿಗೆ ಬರುವುದನ್ನೇ ಕಡಿಮೆ ಮಾಡತೊಡಗಿದಳು. ಅವರಿಬ್ಬರ ಹೆಚ್ಚಿನ ಮಾತುಗಳೆಲ್ಲಾ ಸರಸಮ್ಮನ ಮೂಲಕವೇ ಆಗತೊಡಗಿತು.
ಮುಂದೆ ತವರು ಪಾಲಾದ ಮೂಕಾಂಬೆಯ ಆಸ್ತಿಹೊಡೆಯಲು ಅವಳ ಮೈದುನರು ಸಂಚುಹಾಕುತ್ತಿರುವುದನ್ನರಿತ ಜೋಯಿಸರು ಗಟ್ಟಿ ಮನಸುಮಾಡಿ ತಂಗಿಯನ್ನೂ ಅವಳ ಮಕ್ಕಳನ್ನೂ ಮೂರೂರಿಗೆ ತಂದು ಅವಳ ಮನೆಯಲ್ಲೇ ಬಿಡಬೇಕಾಯಿತು. ಆದರೂ ತಿಂಗಳಲ್ಲೆರಡು ಸಾರಿಯಾದರೂ ಅಲ್ಲಿಗೆ ಹೋಗಿ ಎಲ್ಲಾ ವಿಚಾರಿಸಿಕೊಂಡು ಬರುತ್ತಿದ್ದರು. ತವರು ಮನೆ ಬೆಂಬಲವೊಂದಿಲ್ಲದಿದ್ದರೆ ಅವಳಾಸ್ತಿಯನ್ನು ನುಂಗಿ ನೀರು ಕುಡಿಯುತ್ತಿದ್ದರು ಮೈದುನರು. ಮನೆಯವರ ಅಸಡ್ಡೆಗೆ, ಕೊಂಕು ನುಡಿಗೆ, ತನ್ನ ಮಕ್ಕಳಿಗಾಗುತ್ತಿರುವ ಅನ್ಯಾಯಕ್ಕೆ, ಎಲ್ಲವುದಕ್ಕೂ ಅವಳ ಉತ್ತರ ಬರಿಯ ಮೌನವಾಗಿರುತ್ತಿತ್ತು. ಅಖಂಡ ನಿರ್ಲಿಪ್ತತೆ ಅವಳ ಪಾಲಿಗೆಂದೋ ಒಲಿದಿತ್ತು. ಓದಿನಲ್ಲಿ ಮುಂದಿದ್ದರೂ ಓದಲಾಗದ ಸಂಕಟದ ಜೊತೆಗೆ, ಮನೆಯೊಳಗಿನ ಅಸಮಾನತೆ, ಪಕ್ಷಪಾತಿ ಗುಣಗಳಿಗೆಬೇಸತ್ತು ಬೆಂಗಳೂರನ್ನು ಸೇರಿ, ಯಾವುದೋ ನೌಕರಿ ಹಿಡಿದು, ಅಲ್ಲೇ ಒಂದು ಹುಡುಗಿಯನ್ನು ಮದುವೆಯಾಗಿ ನೆಲೆಸಿದ ಮೊದಲ ಮಗನ ಉದಾಸೀನತೆಗೆ, ತಮ್ಮ ಈ ಪಾಡಿಗೆ ಯಾರು ಹೊಣೆ ಎಂದು ಹುಡುಕುತ್ತಾ ಉತ್ತರ ಸಿಗದೇ ತಾನೇ ಕುದಿದು ಕುದಿದು ಬಡ ತಾಯಿಯ ಮೇಲೆ ಲಾವಾವನ್ನು ಹೊರಹಾಕಿ ದೂರಾದ ಎರಡನೆಯ ಮಗನ ನಿರ್ಲಕ್ಷತನಕ್ಕೂ ಮೂರೂರಜ್ಜಿಯದು ಈಗ ಒಂದೇ ಉತ್ತರ.."ದೇವರ ಹಣೆಯಲ್ಲಿ ಭಗವಂತ ಬರ್ದ ಹಾಂಗೆ ಆಗ್ತು.."
ವರುಷದ ಹಿಂದೆ ಊರಿಗೆ ಹೋಗಿದ್ದಾಗ ಮಾತು ಮಾತಿನ ಮೇಲೆ ಸರಸಮ್ಮ ಪಾವನಿಯಲ್ಲಿ ಹೇಳಿದ್ದರು. "ನಮ್ಮನೆ ಮೂಕಾಂಬೆ ಸ್ಥಿತಿ ನೋಡಿರೆ ಬೇಜಾರಾಗ್ತು ತಂಗಿ.. ಕಷ್ಟ ಪಟ್ಟು ಬೆಳ್ಸಿದ ಮಕ್ಕ ಹತ್ರ ಇಲ್ಲೆ. ಈಗ ಅವು ಮದ್ವೆ ಆಗಿ ಅವ್ರವ್ರ ಸಂಸಾರದಲ್ಲಿದ್ದೋ.. ಪಾಪ ಮೂಕಾಂಬೆ ಮನ್ಸು ಬಂದಾಗ ಇಲ್ಲಿಗೆ ಬಂದ್ಕತ್ತ... ಶ್ರೀಪತಿ ಕಿರಿ ತಮ್ಮನ ಮೊಮ್ಮಕ್ಳ ಆಡ್ಸಕತ್ನ ಇದ್ದು ಬಡ್ವೆ. ಇಲ್ಲೇ ಬಂದಿರು ಅಂದ್ರೂ ಅದ್ಕೆ ಮನಸಿಲ್ಲೆ.."ಇಷ್ಟು ವರ್ಷನೇ ಅಲ್ಲಿದ್ದಾಜು ಅತ್ಗೆ.. ಇನ್ನೆಂತಾ ಅಲ್ಲಿ ಇಲ್ಲಿ.. ಸುಮ್ನೇಯಾ.. ಆ ದೇವ್ರು ಈಗ್ಲಾದ್ರೂ ಅವ್ನಲ್ಲಿಗೇ ಕರ್ಸಕಂಡಿದ್ರೆ ಆರಾಮಾಗಿತ್ತು ನೋಡು.." ಹೇಳ್ತಿ ಕೊರಗತಾ ಇರ್ತು.. ಹ್ಮಂ.. ನೀ ಒಂದ್ಸಲ ಮೂರೂರಿಗೂ ಹೋಗ್ಬಾ. ನಿನ್ನ ರಾಶಿ ಕೇಳ್ತಿರ್ತು. ಸಣ್ಣಕಿರ್ಬೇಕಿದ್ರೆ ನೀನು ಅದ್ರ ಜೊತೆಗೇ ಇರ್ತಿದ್ದೆ ನೆನ್ಪಿಲ್ಯಾ.." ಎನ್ನಲು ಪಾವನಿಯ ಮನಸೆಲ್ಲಾ ಹಳೆ ನೆನಪುಗಳಿಂದ ಹಸಿರಾಗಿತ್ತು. ಮರುದಿವಸವೇ ಆಕೆ ಕುಮ್ಟೆಯ ಬಸ್ಸು ಹತ್ತಿ ಮೂರೂರನ್ನು ಸೇರಿದ್ದಳು.
ಹಿಂದೆ ಹರಿದ್ವರ್ಣ ಮರಗಳಿಂದ, ಹೂವಿನ ಗಂಧ, ಹಕ್ಕಿಗಳಿಂಚರದಿಂದ ನಳನಳಿಸುತ್ತಿದ್ದ ಕಾಡೊಂದು, ಮನುಜನ ಕ್ರೌರ್ಯಕ್ಕೆ ಬಲಿಯಾಗಿ ಬೋಳುಗುಡ್ದೆಯಾದಂತೆ ಕಾಣುತ್ತಿದ್ದ ಬೋಳು ತಲೆ, ಮಾಸಲು ಮಡಿಸೀರೆಯೊಂದನ್ನು ಸುತ್ತಿದ್ದ ಕೃಶ ಶರೀರ, ಗುಳಿ ಬಿದ್ದ ಕಳಾಹೀನ ಕಣ್ಗಳು, ವಯಸ್ಸಿನ ಪ್ರಭಾವದಿಂದಲೋ ಇಲ್ಲಾ ಬದುಕು ಕೊಟ್ಟ ಹೊಡೆತಗಳಿಂದಲೋ ತುಸು ಹೆಚ್ಚೇ ಬಾಗಿದ್ದ ಬೆನ್ನು, ಕಣ್ಣ ಕಿರಿದಾಗಿಸಿ ತನ್ನನ್ನೇ ದಿಟ್ಟಿಸಿ ನೋಡುತ್ತಾ ನಿಂತ ಮೂರೂರಜ್ಜಿಯನ್ನು ಕಂಡ ಪಾವನಿಗೆ ವಿಪರೀತ ಸಂಕಟವಾಯಿತು. ಆದರೆ ಈಗತಾನೇ ಅರಳಿದ ಹೂವಂತೆ ಕಂಗೊಳಿಸುತ್ತಿದ್ದ ಪಾವನಿಯನ್ನು ಅಚಾನಕ್ಕಾಗಿ ಅಲ್ಲಿ ಕಂಡು ಮೂಕಾಂಬೆಯ ಸಂತೋಷ ಹೇಳತೀರದು.
"ಕೂಸೆ, ನಿನ್ನಮ್ಮ ನನ್ನ ತೊಡೆಮೇಲೇ ಬೆಳ್ದಿದ್ದು. ಅತ್ಗೆಗಾದ್ರೂ ಎಲ್ಲಿತ್ತು ಪುರ್ಸೊತ್ತು ಮಕ್ಳ ಆಡ್ಸಲೆ? ಬೆನ್ನಿಗೇ ನಾಲ್ಕೈದು ಮಕ್ಕ ಆಗಿದ್ದ. ನಿನ್ನಾಯಿ ಹೆಚ್ಚಿನ ದಿವ್ಸ ಇದ್ದಿದ್ದು ಮೂರೂರಲ್ಲೇಯಾ.. ಕೇಳು ಬೇಕಿದ್ರೆ.. ಅಂತೂ ನೀನು ಈ ಮೂರೂರಜ್ಜಿ ನೆನ್ಪು ಮಾಡ್ಕಂಡು ಬಂದ್ಯಲಿ.. ಖುಶಿ ಆತು ನೋಡು.. ಈ ಮುದ್ಕಿನಾ ಮಾತಾಡ್ಸವೇ ಇಲ್ಲೆ ಈಗ..."ಎಂದು ಮುಕ್ತವಾಗಿ ನಕ್ಕರೂ ಆ ದನಿಯೊಳಡಗಿದ್ದ ವಿಷಾದ ಪಾವನಿಯನ್ನು ತಾಗಿತ್ತು.
ಬಂದ ನಾಲ್ಕು ದಿನ ಕಳೆದದ್ದೇ ಗೊತ್ತಾಗಿರಲಿಲ್ಲ ಆಕೆಗೆ. ಹೊಸ ಹುರುಪು ಬಂದಂತೆ ಮೂಕಾಂಬೆ ತನ್ನೂರನ್ನು ಸುತ್ತಿಸಿದ್ದಳು. ಅಪರೂಪವಾಗಿದ್ದ ತನ್ನ ಸ್ವಂತ ಮೊಮ್ಮಕ್ಕಳನ್ನು ಬಹುಶಃ ಪಾವನಿಯಲ್ಲಿ ಕಂಡಿದ್ದಿರಬೇಕು ಆ ಜೀವಿ. ಮೊದಮೊದಲು ತಂದೆಯೊಂದಿಗೆ ವರುಷಕ್ಕೊಮ್ಮೆಯಾದರೂ ಬರುತ್ತಿದ್ದ ಮೊಮ್ಮಕ್ಕಳು ಈಗ ತಮ್ಮ ಹೆತ್ತವರನ್ನು ಕೆಳುಹಿಸಿಕೊಟ್ಟೇ ದೊಡ್ಡುಪಕಾರ ಮಾಡುತ್ತಿದ್ದಂತಿತ್ತು. ಆಕೆಯ ಉತ್ಸಾಹ, ಸಂತೋಷ ಕಂಡು ಹಿಂತಿರುಗುವ ಅವಸರವನ್ನು ಮತ್ತೂ ಮೂರುದಿನಕ್ಕೆ ಮುಂದೂಡಿದ್ದಳು ಪಾವನಿ.
ಅಂದೂ ಹಾಗೆಯೇ ಹೊರೆಗೆ ಭೋರೆಂದು ಮಳೆ ಸುರಿಯುತ್ತಿದ್ದರೆ ಮೂರೂರಜ್ಜಿ ಬಿಸಿಬಿಸಿ ಹಲಸಿನಕಾಯಿ ಸೊಳೆ ಕರಿದು ತಂದಿಟ್ಟಿದ್ದಳು. ಬಟ್ಟಲು ತುಂಬಾ ತಿಂಡಿಯಿದ್ದರೂ ಒಂದೊಂದೇ ತಿನ್ನುತ್ತಾ ಅದೇನನ್ನೋ ಕಿವೊಯೊಳಗಿಟ್ಟುಕೊಂಡು ಗುನುಗುತ್ತಿದ್ದ ಪಾವನಿಯನ್ನು ನೋಡಿ ಮೋಜೆನಿಸಿತ್ತು ಮೂರೂರಜ್ಜಿಗೆ.
"ಕೂಸೆ ಎಂತದೇ ಅದು.. ಕೆಮಿ ಸರಿ ಕೇಳ್ಸದೇ ಹೋದವು ಹಾಕ್ಕಂಬಥಾ ವಸ್ತುನಾ ಇಟ್ಕಂಜೆ....?" ಎಂದು ಆಕೆಯನ್ನು ಕೇಳಿದಾಗ ಪಾವನಿಗೆ ನಗೆಯುಕ್ಕಿ ಬಂದಿತ್ತು.
"ಅಜ್ಜಿ ಇದು ಅದಲ್ಲ.. ಇದಕ್ಕೆ ಎಂ.ಪಿ. ತ್ರೀ ಹೇಳ್ತೋ.. ಇದ್ರಲ್ಲಿ ಚೊಲೋ ಚೊಲೋ ಹಾಡಿದ್ದು. ಈ ದಾರಾನ ಕಿವಿಗಿಟ್ಕಂಡ್ರೆ ಕೇಳ್ತು.." ಎಂದಾಗ ಆಕೆಗೆ ಅರ್ಥವೇ ಆಗಿರಲಿಲ್ಲ.
"ಎಂಥಾ ಸುಡಗಾಡೋ.. ಬಿಸಿ ಆರೋಗ್ತು ಮೊದ್ಲು ಇದ್ನ ತಿನ್ನು.. ಅಮೇಲೆ ಕೇಳ್ಲಕ್ಕು... ಅದ್ರಲ್ಲಿ ಎಲ್ಲಾ ಹಾಡೂ ಬತ್ತಾ? ಭಜನೆ ಎಲ್ಲಾ ಬತ್ತಾ?"ಎಂದು ಮುಗ್ಧವಾಗಿ ಪ್ರಶ್ನಿಸಲು ಪಾವನಿ.."ಅಜ್ಜಿ ಸದ್ಯಕ್ಕೆ ಇದ್ರಲ್ಲಿ ಭಾವಗೀತೆಗಳಿದ್ದು. ಅದ್ನೇ ಕೇಳ್ತಾ ಇದ್ದಿದ್ದಿ. ತಡಿ..ಕೊಡ್ತಿ..ಕೇಳು.."ಎನ್ನುತ್ತಾ ಆಕೆಯ ಕಿವಿಗಿಟ್ಟಿದ್ದಳು.
ಹಾಡು ಪ್ರಾರಂಭವಾಗಿ ಮುಗಿಯುವ ತನಕವೂ ಬಿಮ್ಮನೆ ಕುಳಿತಿದ್ದ ಮೂರೂರಜ್ಜಿಯ ಕಣ್ಣ ತುಂಬೆಲ್ಲಾ ನೀರು ತುಂಬಿತ್ತು. "ಕೂಸೆ ಈ ಹಾಡು ರಾಶಿ ಚೊಲೋ ಇದ್ದು.. ನಿಂಗೆ ಬರ್ತಾ ಹಾಡಲೆ? ಎಷ್ಟು ಚೊಲೋ ಹಾಡಿದ್ದು ಅದು.. ಈ ಹಾಡಿನಾಂಗೇಯಾ ನನ್ನ ಬದ್ಕೂವಾ ಅನಿಸ್ತಾ ಇದ್ದು ನೋಡು.. "ಎನ್ನಲು ಯಾವ ಹಾಡು ಬರುತ್ತಿತ್ತಪ್ಪಾ ಎಂಡು ರೆವೈಂಡ್ ಮಾಡಿ ಕೇಳಿದ್ದಳು ಪಾವನಿ.
ಬೇಸರದ ಬಯಲಿನಲಿ ಬೋಳು ಮರ ಕರೆಯುತಿದೆ
ಬನ್ನಿ ನನ್ನೆಲೆಗಳೆ ಶಿಶಿರದಲ್ಲಿ
ಕಳುಹಿಸಿದ ಪತ್ರಗಳು ತಲುಪುದಿವೋ ಇಲ್ಲವೋ
ಎಲ್ಲಿ ಗುರಿ ತಪ್ಪಿದವೋ ಇರುಳಿನಲ್ಲಿ....
ಹೊರಗೆ ಬಿರುಮಳೆ, ಒಳಗೆ ಅಜ್ಜಿಯ ಕಣ್ಣೀರು, ಕಿವಿಯೊಳಗೆಲ್ಲಾ ಹಾಡಿನ ಮೊರೆತ... ವಿಚಿತ್ರ ಸಂಕಟವಾಗಿತ್ತು ಪಾವನಿಗೆ. ಅಪ್ರಯತ್ನವಾಗಿ ಆಕೆಯ ಕೆನ್ನೆಗಳೂ ಒದ್ದೆಯಾಗಿದ್ದವು.
"ಅಯ್ಯೋ ನನ್ನ ಮಳ್ಳೇ.. ಅಪ್ರೂಪಕ್ಕೆ ಬಂದ ನಿನ್ನ ಅಳ್ಸಿದೆ. ಬೇಜಾರಾಗಡ ತಂಗಿ. ಎಂತೋ ನೆನ್ಪಾತು.. ಹೋತು. ಬಿಟ್ಬುಡು. ಹಾಂ.. ಅದೆಂತದೋ ಸುಡುಗಾಡು ಹೆಸ್ರು ಅಂದ್ಯಲೆ ಇದ್ಕೆ? ನಂಗೆ ಇದ್ನ ನೋಡಿ ಅಣ್ಣಯ್ಯ ಮೊದ್ಲನೇ ಬಾರಿ ರೇಡ್ಯೋ ತಂದ ನೆನ್ಪಾತು ನೋಡು.."ಎಂದಾಗ ಇಬ್ಬರ ಕಣ್ಗಳೂ ಮಿನುಗಿದ್ದವು.
"ಎಂತಾ ಎಡವಟ್ಟಾಗಿತ್ತು ಅಜ್ಜಿ? ಅಜ್ಜ ತಂದ ರೇಡಿಯೋ ಸರಿ ಇತ್ತಿಲ್ಯ?"
"ಕೇಳು ಕೂಸೆ.. ಆಗಿನ ಕಾಲ್ದಲ್ಲಿ ರೇಡಿಯೋ ಇಟ್ಕಂಬದೇ ದೊಡ್ಡ ಪ್ರತಿಷ್ಠೆ ಆಗಿತ್ತಾ.. ಅಣ್ಣಯ್ಯನೂ ಮನಿಗೆ ತಂದ ರೇಡಿಯೋ. ಆದ್ರೆ ಆಗೆಲ್ಲಾ ಆ ಮೂಲೆ ಊರಿಗೆ ಸರಿಯಾಗಿ ಎಲ್ಲಿ ದನಿ ಬರ್ತಿತ್ತು ಹೇಳು? ಒಂದಿನ ರೇಡ್ಯೋ ಕೇಳಿದ್ರೆ ಮರ್ದಿನ ಕೇಳ್ತಿತ್ತಿಲ್ಲೆ.. ಅಣ್ಣಯ್ಯಂಗೆ ತಲೆ ಬಿಸಿ ಆತು. ಒಂದಿನ ಕುಪ್ಪಾ ಭಟ್ರ ಮನೆಗೆ ಹೋಗಿ ಅವ್ರ ಮಗ್ನ ಎಂತ ವಿಷ್ಯ ಕೇಳ್ದಾ? ಅಂವ ದೊಡ್ಡೂರಲ್ಲಿ ಓದಿ ಬಂದವ. ಅವಂಗೆಲ್ಲಾ ಗೊತ್ತಿರ್ತು ಹೇಳಿ. ಆ ಮಾಣಿ ಅಣ್ಣಯ್ಯನ್ನ ತಮಾಷೆ ಮಾಡವು ಹೇಳಿ.."ಜೋಯ್ಸ್ರೆ.. ಅದು ‘ಸಿಗಿನೆಲ್ಲು’ ನಿಮ್ಮಲ್ಲಿಗೆ ಬಪ್ಪಲೆ ನಮ್ಮನೆ ಗೊಬ್ರದಗುಂಡಿ ದಾಟಿ ಬರವಲ್ರಾ.. ಅದ್ಕೇ ಲೇಟಾಗ್ತು.. ಅದೂ ಅಲ್ದೇ ಕೆರೆ ಬದಿ ಶಿವ ಭಟ್ರ ಮನೆ ಏರಿ ಬೇರೆ ಹತ್ತಿ ಬರವು.. ಹಾಂಗಾಗಿ ನಿಮ್ಗೆ ಸರಿ ಬತ್ತಿಲ್ಲೆ ಕಾಣ್ತು.." ಹೇಳಿ ಕಳ್ಸದ. ಆಮೇಲೆ ಗೊತ್ತಾತು ನೋಡು ಅಂವ ಮಳ್ಳು ಮಾಡಿದ್ದ ಅಣ್ಣಯ್ಯನ ಹೇಳಿ.. ಗೊತ್ತಾದಾಗ ಅಣ್ಣಯ್ಯಂಗೆ ರಾಶಿ ಸಿಟ್ಟು ಬಂದಿತ್ತು.. ಎರ್ಡು ತಾಸು ಹಾರಾಡಿದ್ದ.." ಎಂದು ನಗಲು, ಆ ನಗು ಪಾವನಿಯ ಮೊಗವನ್ನು ಸೇರಿತ್ತು. ವಾರವಿಡೀ ತನ್ನ ಮೂರೂರಜ್ಜಿಯ ಬೆನ್ನಿಗಂಟಿಕೊಂಡೇ ಕಳೆದ ಪಾವನಿ ಬೆಂಗಳೂರಿಗೆ ಹಿಂತಿರುಗುವಾಗ ಮಧುರ ನೆನಪುಗಳ ಮೂಟೆಯನ್ನೇ ಹೊತ್ತೊಯ್ದಿದ್ದಳು.
ಹಳೆಯ ನೆನಪುಗಳನ್ನು ಮೆಲುಕುತ್ತಾ, ಕಾರಂತರ ಮೂಕಜ್ಜಿಯ ಕನಸುಗಳನ್ನು ಕಾಣುತ್ತಾ, ಮೆಲುವಾಗಿ ಸಿ.ಡಿ.ಪ್ಲೇಯರ್‌ನಿಂದ ಹೊರ ಹೊಮ್ಮುತ್ತಿದ್ದ ಭಾವಗೀತೆಯನ್ನು ಆಲಿಸುತ್ತಾ ಮೈಮರೆತಿದ್ದ ಪಾವನಿಯನ್ನೆಬ್ಬಿಸಿದ್ದು ಆಕೆಯ ಮೊಬೈಲ್ ರಿಂಗ್.
"ಪಾವನಿ ನಾನು ಶಂಕ್ರಮಾವ.. ಮೂರೂರತ್ತೆಗೆ ಹಾರ್ಟ್ ಅಟ್ಯಾಕ್ ಆಗಿ ಎರ್ಡುತಾಸಿನ ಹಿಂದೆ ಹೋಗೋತಡ ಮಾರಾಯ್ತಿ..ಲ್ಯಾಂಡ್‍ಲೈನಿಗೆ ಟ್ರೈ ಮಾಡಿಟ್ಟಿ.. ಹೋಜಿಲ್ಲೆ.. ಅಮ್ಮಂಗೆ ಹೇಳ್ಬುಡು. ನಾ ಅರ್ಜೆಂಟ್ ಮೂರೂರಿಗೆ ಹೊರ್ಟಿದ್ದಿ.." ಎಂದು ಕಟ್ ಮಾಡಲು ಆಕೆಯ ಮಡಿಲಲ್ಲಿದ್ದ "ಮೂಕಜ್ಜಿಯ ಕನಸುಗಳು" ಕೆಳಗೆ ಬಿತ್ತು. ಪ್ಲೇಯರ್ -
ಮರದ ಬುಡವನು ಕೊಡಲಿ
ಕಡಿವ ಮೊದಲೇ ಬನ್ನಿ.....
ತಾಯಿ ಬೇರಿನ ತವರ ದಾರಿ ಹಿಡಿದು...
ಬೇಸರದ ಬಯಲಿನಲಿ ಬೋಳು ಮರ ಕರೆಯುತಿದೆ.. - ಹಾಡನ್ನು ಹಾಡತ್ತಲೇ ಇತ್ತು.
-ತೇಜಸ್ವಿನಿ ಹೆಗಡೆ
----****----