ಭಾನುವಾರ, ಫೆಬ್ರವರಿ 25, 2018

ಭಯದ ಬೆನ್ನೇರಿ!


ಅದೊಂದು ದಿವಸ ಮೂಢನಂಬಿಕೆಗಳ ಮೇಲೆ ಬರೆದಿದ್ದ ಒಂದು ಹಾಸ್ಯ ಪ್ರಬಂಧವನ್ನು ಓದುತ್ತಾ ಉರುಳಾಡಿ ನಗುತ್ತಿದ್ದೆ. ಅದೇ ಸಮಯದಲ್ಲೇ ನನ್ನ ಹತ್ತು ವರುಷದ ಮಗಳು ಸಣ್ಣ ಮುಖ ಮಾಡಿಕೊಂಡು ಬರಲು, ನಗುವನ್ನು ಸಂಭಾಳಿಸಿಕೊಳ್ಳುತ್ತಲೇ “ಏನಾಯ್ತು?” ಎಂದು ನಾನು ಕೇಳಿದೆ. ಎಷ್ಟು ತಡೆಹಿಡಿದರೂ, ನಗು ಉಕ್ಕುತ್ತಲೇ ಇತ್ತು. ಇದನ್ನು ಕಂಡು ಮಗಳು ಮುಖ ಗಂಟಿಕ್ಕಿಕೊಂಡಳು. “ಅಮ್ಮಾ ನೀ ಒಂದೋ ನಗು ಇಲ್ಲಾ ಮಾತನಾಡು... ನಾನೆಷ್ಟು ಬೇಜಾರಿನಲ್ಲಿದ್ದೇನೆ ಈಗ ಗೊತ್ತಾ? ನೀ ಹೀಂಗೆಲ್ಲಾ ನಗ್ತಾ ಕೇಳಿದ್ರೆ ನಾ ಹೇಂಗೆ ನಿನ್ನ ಹತ್ರ ವಿಷ್ಯ ಹೇಳೋದು?” ಎಂದು ಕೇಳಲು ಥಟ್ಟನೆ ಗಂಭೀರತೆ ತಂದುಕೊಂಡು ಅವಳನ್ನು ಸಮಾಧಾನಗೊಳಿಸುತ್ತಾ ವಿಷಯ ಕೇಳಿದೆ. “ನನ್ನ ಶಾಲೆಯಲ್ಲಿ ಕೆಲವು ಫ್ರೆಂಡ್ಸು ಬ್ಲಡ್ಡಿ ಮೇರಿ ಎಂಬ ದೆವ್ವದ ಬಗ್ಗೆ ಕಥೆ ಹೇಳಿದ್ದಾರೆ ಗೊತ್ತಾ... ಆ ದೆವ್ವದ ಹೆಸ್ರನ್ನು ಮೂರು ಸಲ ಹೇಳಿಬಿಟ್ರೆ ಅದು ನಮ್ಮಲ್ಲಿಗೇ ಬರುತ್ತದೆಯಂತೆ! ನಾನು ಈಗಾಗಲೇ ಬಹಳ ಸಲ ಆ ದೆವ್ವದ ಹೆಸ್ರನ್ನು ಹೇಳಿಬಿಟ್ಟಿದ್ದೇನೆ... ಹೀಗಾಗಿ ನಂಗೆ ಬಹಳ ಟೆನ್ಷನ್ ಆಗ್ತಿದೆ ಅಮ್ಮಾ...” ಎನ್ನಲು ನಗು ಒದ್ದುಕೊಂಡು ಬಂದರೂ, ಅದನ್ನು ತಡೆಹಿಡಿಯಲು ಹೆಣಗಾಡುತ್ತಾ, “ಓಹೋ... ಇದು ವಿಷಯ! ನೋಡು ಪುಟ್ಟಿ, ಇದೆಲ್ಲಾ ಸುಳ್ಳೆಪುಳ್ಳೆ ಕಥೆಗಳು ಅಷ್ಟೇ. ದೇವರಿರೋ ಕಡೆ ದೆವ್ವವಿರೋಕೆ ಸಾಧ್ಯವೇ ಇಲ್ಲಾ. ದೇವರು ಎಲ್ಲಾ ಕಡೆ ಇದ್ದಾನೆ... ನಮ್ಮೊಳಗೂ ಇದ್ದಾನೆ ಅಂತ ಹೇಳಿದ್ದೇನಲ್ಲಾ ನಿಂಗೆ ಎಷ್ಟೋ ಸಲ... ಸೋ ಈ ಬ್ಲಡಿ ಮೇರಿ ಎಲ್ಲಾ ಬರೋದಿಲ್ಲ” ಎನ್ನುವಾಗಲೇ ಆಕೆ ನಡುವೆ ಬಾಯಿ ಹಾಕಿ “ಬ್ಲಡಿ ಅಲ್ಲಾ ಬ್ಲಡ್ಡಿ ಅಂತ ಹೇಳು... ಬ್ಲಡ್ ಬಡ್ಕೊಂಡಿರತ್ತಂತೆ ಅದ್ರ ಮುಖದ ತುಂಬಾ” ಎಂದು ಕಿರುಚಲು ನನಗೂ ನಾನು ದೆವ್ವದ ಹೆಸರನ್ನು ತಪ್ಪು ಉಚ್ಚರಿಸಿ ಏನೋ ಅನಾಹುತವೇ ಮಾಡಿಬಿಟ್ಟೆನೇನೋ ಎಂದೆನಿಸಿಬಿಟ್ಟಿತು. ಅರೆಕ್ಷಣ ಆಲೋಚನೆಗೆ ಬಿದ್ದ ಅವಳ ಮುಖದಲ್ಲಿ ಇದ್ದಕ್ಕಿದ್ದಂತೇ ಸಾವಿರ ಕ್ಯಾಂಡಲ್ ಬಲ್ಬಿನ ಬೆಳಕು ಮೂಡಿತು. ಸದ್ಯ ನನ್ನ ಮಾತು ಇಷ್ಟು ಬೇಗ ಪರಿಣಾಮ ಬೀರಿತೆಂದು ಬೀಗುವಾಗಲೇ, “ಐಡಿಯಾ ಅಮ್ಮಾ! ನನ್ನ ಫ್ರೆಂಡ್ಸ್ ಇದನ್ನೂ ಹೇಳಿದ್ದಾರೆ... ನಾವು ನಮ್ಮ ಎಡಗೈ ಮೇಲೆ ಬಲಗೈಯಿಯ ಮೂರು ಬೆರಳುಗಳಿಂದ ರಾಮ, ಕೃಷ್ಣ, ಸೀತೆ ಎಂದು ಗುಟ್ಟಾಗಿ ಹೇಳಿ ಜೋರಾಗಿ ಹೊಡೆಯಬೇಕಂತೆ... ಆಗ ಮೂರು ಕೆಂಪು ಬಣ್ಣದ ಗೆರೆಗಳು ಬಿದ್ರೆ ಬ್ಲಡ್ಡಿ ಮೇರಿ ಬರೋದಿಲ್ವಂತೆ! ನನ್ನ ಕೈ ತುಂಬಾ ಸಣ್ಣ... ಎಲ್ಲಿ ನಿನ್ನ ಕೈ ಕೊಡು ಟ್ರೈ ಮಾಡುವ” ಎನ್ನಲು, ನನಗೀಗ ನಿಜಕ್ಕೂ ಬ್ಲಡ್ಡಿ ಮೇರಿಯ ಮೇಲೆ ಸಿಟ್ಟು ಬಂದಿತ್ತು. ನಾನೇನಾದರೂ ಸಮಜಾಯಿಶಿ ಕೊಡುವ ಮುನ್ನವೇ, ಒತ್ತಾಯದಿಂದ ನನ್ನ ಎಡಗೈಯನ್ನು ಎಳೆದುಕೊಂಡ ಆಕೆ, ಎಡ ಮೊಣಕೈಯಿಯ ಮೇಲ್ಭಾಗದಲ್ಲಿ ತನ್ನ ಬಲಗೈಯ ನಡುವಿನ ಮೂರು ಬೆರಳುಗಳಿಂದ ಜೋರಾಗಿ ಹೊಡೆಯಲು ಅಪ್ರಯತ್ನವಾಗಿ ರಾಮಕೃಷ್ಣರನ್ನು ನೆನೆಯಬೇಕಾಯ್ತು. ಕೈ ಮೇಲೆ ರಾಮ, ಸೀತೆ, ಲಕ್ಷ್ಮಣರ ಕೆಂಪು ಗೆರೆಯ ರೂಪದಲ್ಲಿ ಅರೆಕ್ಷಣ ಮೂಡಿ ನಿಧಾನಕ್ಕೆ ಮಾಯವಾಗತೊಡಗಿದರು. ಬಹಳ ಸಮಾಧಾನ ಹೊಂದಿದ ಮಗಳು, ನನಗೆ ಹೊಡೆದು ಉರಿಸಿದ್ದರಿಂದ ನನ್ನ ಕೈಗೆ ಐದಾರು ಸಲ ಮುತ್ತುಕೊಟ್ಟು ಸಾಂತ್ವನ ನೀಡಿ ನೆಮ್ಮದಿಯಿಂದ ಓದಲು ಹೋಗಲು ನನಗೂ ಎಷ್ಟೋ ಸಮಾಧಾನವಾಗಿತ್ತು. ಆದರೆ ಈ ಮೂಢನಂಬಿಕೆಗಳು ಅನ್ನೋದು ಅನಾದಿ ಕಾಲದಿಂದ ನಮ್ಮೊಳಗೇ ಹಾಸುಕೊಕ್ಕಾಗಿ ಬಿಟ್ಟಿರುತ್ತವೆ. ಎಷ್ಟೋ ಸಲ ನಮ್ಮನ್ನು ಭಯಬೀಳಿಸುತ್ತಿರುತ್ತವೆ.
ನಾನಾಗ ಮೂರನೆಯ ತರಗತಿಯಲ್ಲಿದ್ದೆ. ನನ್ನೊಳಗೆ ಇದ್ದಕ್ಕಿದ್ದಂತೆ ಸಂಗೀತ ಕಲಿಯುವ ಹುಚ್ಚು ಹುಟ್ಟಿಬಿಟ್ಟಿತ್ತು. ಅದಕ್ಕೆ ಬಹು ಮುಖ್ಯ ಕಾರಣವೇನೆಂದರೆ, ದೂರದರ್ಶನದಲ್ಲಿ ಪ್ರಸಾರಗೊಳ್ಳುತ್ತಿದ್ದ ಚಿತ್ರಹಾರಗಳು! ಅದೊಂದು ದಿವಸ ಪ್ರಸಾರವಾಗುತ್ತಿದ್ದ ಹಾಡಿನಲ್ಲಿ ರೀನಾ ರಾಯ್ ಕಪ್ಪು ಲೆಹೆಂಗಾ ಧರಿಸಿ, ತಲೆಯ ಮೇಲೆ ಸೆರಗು ಹೊದ್ದು, ಇಷ್ಟುದ್ದದ ಮೈಕಿನಲ್ಲಿ “ಶೀಶಾ ಹೋ ಯಾ ದಿಲ್ ಹೋ ಆಖಿರ್ ಟೂಟ್ ಜಾತಾ ಹೈ...” ಎಂದು ಹಾಡುತ್ತಿರುವುದನ್ನು ಕಂಡು ಬಹಳ ಪ್ರಭಾವಿತಳಾಗಿಬಿಟ್ಟಿದ್ದೆ. ನಾನೂ ಮುಂದೊಂದು ದಿನ ಹೀಗೇ ಹಾಡಬೇಕು, ಸಭೆಯಲ್ಲಿರುವವರೆಲ್ಲಾ ಎದ್ದು ನಿಂತು ಚಪ್ಪಾಳೆ ಹೊಡೆಯಬೇಕು... ಎಂದೆಲ್ಲಾ ಕನಸು ಕಂಡಿದ್ದೆ. ಆಗ ನನಗೆ ಇದನ್ನು ಹಾಡಿದ್ದು ಲತಾ ಮಂಗೇಶ್ವರ್, ಆಕೆ ಪ್ರಸಿದ್ಧ ಹಿನ್ನಲೆ ಗಾಯಕಿ ಎಂಬುದೆಲ್ಲಾ ಗೊತ್ತೇ ಇರಲಿಲ್ಲ. ಸರಿ, ನನ್ನ ಹಠಕ್ಕೆ ಸೋತು ಅಪ್ಪ ಸಂಗೀತ ಕ್ಲಾಸಿಗೆ ಸೇರಿಸಿದ್ದಾಯ್ತು. ಅವರೋ ಸಂಗೀತ ಹೇಳಿಕೊಡುವುದಕ್ಕಿಂತ ಹೆಚ್ಚಾಗಿ ಬಾಯಲ್ಲಿ ಬೈಯ್ಗಳುಗಳ ತಬಲಾ ಬಾರಿಸಿದ್ದೇ ಹೆಚ್ಚು! ಇದ್ಯಾಕೋ ಸರಿ ಹೋಗ್ತಿಲ್ಲ ಅಂದ್ಕೊಂಡು ಬಿಟ್ಟುಬಿಟ್ಟೆ. ಅದೊಂದು ದಿವಸ ನನಗಿಂತ ಎರಡು ವರುಷ ದೊಡ್ಡವಳಾಗಿದ್ದ ಗೆಳತಿ ಸಂಗೀತಾ “ನನ್ನತ್ತೆ ಎಷ್ಟು ಚೆಂದ ಹಾಡ್ತಾರೆ ಗೊತ್ತುಂಟಾ? ಆದ್ರೆ ಅವ್ರೇನೂ ಸಂಗೀತ ಕಲ್ತಿಲ್ಲಪ್ಪ” ಎನ್ನಲು ನನಗೆ ಬಹಳ ಕುತೂಹಲವಾಗಿ ಆಸೆ ಮತ್ತೆ ಗರಿಕೆದರಿತ್ತು. “ಮತ್ತೆ, ಅದು ಹೇಂಗೆ ಕಲಿತದ್ದಂತೆ ಮಾರಾಯ್ತಿ?” ಎಂದು ಕೇಳಿದಾಗ, ಆಕೆ ತೀರಾ ತಗ್ಗಿದ ಧ್ವನಿಯಲ್ಲಿ... “ಕಂಠ ಒಳ್ಳೆದಾಗ್ಲಿಕ್ಕೆ ಹಿಸ್ಕು (ಬಸವನ ಹುಳ) ತಿನ್ಬೇಕಂತೆ ನೋಡು... ಅದನ್ನು ತಿಂದವರ ಕಂಠ ಬಹಳ ಚೆಂದ ಆಗ್ತದಂತೆ” ಎಂದಿದ್ದೇ ವಾಯಕ್ ಎಂದುಬಿಟ್ಟಿದ್ದೆ. ನೋಡಲೂ ಒಂಥರ ಅನ್ನಿಸುವ ಹಿಸ್ಕನ್ನು, ಅಪ್ಪಿ ತಪ್ಪಿ ಮುಟ್ಟಿದರೂ ಲೋಳೆಯಾಗುವ ಆ ಅಂಟು ಜೀವಿಯನ್ನು ಹಿಡಿಯುವುದಲ್ಲದೇ, ತಿನ್ನುವುದು ಎಂದರೆ... ಅಲ್ಲಿಗೆ ನನ್ನ ಅಳಿದುಳಿದ ಆಸೆಯೂ ಟೂಟ್ ಗಯಿ.
ನಮ್ಮೂರಿನಲ್ಲಿ ನಾಗಪ್ಪ ಎಂಬವನಿದ್ದ. ಬೇಸಿಗೆ ರಜೆಯಲ್ಲಿ ಅಜ್ಜನ ಮನೆ ಸೇರಿ ಲಾಗ ಹಾಕಿ ಗಲಾಟೆ ಎಬ್ಬಿಸುತ್ತಿದ್ದ ನಮಗೆಲ್ಲಾ ವರ್ಣರಂಜಿತ ಕಥೆಗಳನ್ನು ಹೇಳುವ ಕೆಲಸ ಅವನದಾಗಿತ್ತು. ಹೀಗೆ ಒಂದು ದಿವಸ ನಾವು ಕಥೆ ಕೇಳುತ್ತಿರುವಾಗಲೇ, ಅಷ್ಟು ದೂರದಿಂದ ದೊಡ್ಡ ಲಕ್ಷ್ಮೀ ಚೇಳು ಸರಸರನೆ ಹರಿದು ಹೋಗಿದ್ದು ನನ್ನ ಕಣ್ಣಿಗೇ ಬಿದ್ದುಬಿಟ್ಟಿತ್ತು. (ಅದಕ್ಕೆ ಲಕ್ಷ್ಮೀ ಚೇಳು ಅಂತ ಯಾಕೆ ಕರೀತಾರೋ ಎಂಬುದು ಇನ್ನೂ ನನಗೆ ಗೊತ್ತಾಗಿಲ್ಲ!) ಸರಿ, ನನಗೋ ಈ ಸರೀಸೃಪ ಜಾತಿಯ ಮೇಲೆ ವಿಶೇಷ ಭಯ! ಎರೆಹುಳ, ಚೇರಂಟೆಗಳಿಂದ ಹಿಡಿದು ಕಾಳಿಂಗದವರೆಗೂ, ಏಕರೀತಿಯ ಭಯವನ್ನು ನನ್ನೊಳಗೆ ಆ ಸೃಷ್ಟಿಕರ್ತ ಭರಪೂರ ಹಂಚಿಬಿಟ್ಟಿದ್ದಾನೆ. ಹೀಗಾಗಿ ಆ ಚೇಳನ್ನು ಕಂಡಿದ್ದೇ, ಜೋರಾಗಿ ಬೊಬ್ಬಿರಿದು ಮನೆಯವರನ್ನೆಲ್ಲಾ ಒಟ್ಟುಗೂಡಿಸುವಷ್ಟರಲ್ಲಿ ಆ ಚೇಳೆಲ್ಲೋ ಮಾಯವಾಗಿಬಿಟ್ಟಿತ್ತು. ಅಷ್ಟು ಚಿಕ್ಕ ವಿಷಯಕ್ಕೆ ಕೂಗಿ ಗಾಭರಿಗೊಳಿಸಿದ್ದಕ್ಕಾಗಿ ಎಲ್ಲರೂ ನನಗೆ ಸಮಾ ಬೈಯ್ದುಬಿಡಲು, ನನ್ನ ಓರಗೆಯವರ ಮುಂದೆ ನನಗೆ ಬಹಳ ಅವಮಾನವೆನಿಸಿಬಿಟ್ಟಿತ್ತು. “ಹೌದೌದು... ನಿಮಗೆಲ್ಲಾ ಏನು ಗೊತ್ತು... ಆ ಚೇಳು ನನ್ನ ಬಳಿಯೇ ಬರುವಂತಿತ್ತು... ಅಷ್ಟು ಜೋರಾಗಿ ನಾನು ಕೂಗಿಕೊಂಡಿದ್ದು ಕೇಳಿ ಹೆದರಿ ಓಡಿ ಹೋಯ್ತು. ಅದೇನಾದ್ರೂ ನನ್ನ ಕಚ್ಚಿ, ನಾ ಸತ್ತು ಹೋಗಿದ್ದಿದ್ರೆ, ದೆವ್ವವಾಗಿ ಬಂದು ನಿಮ್ಮನ್ನೆಲ್ಲಾ ಕಾಡ್ತಿದ್ದೆ...” ಎಂದು ಒದರಿಬಿಟ್ಟಿದ್ದೆ. ಅದಕ್ಕೆ ಕೂಡಲೇ ನನ್ನ ತಂಗಿ “ಈಗೆಂತ ಆಗಿದ್ದಿ ನೀ ಮತ್ತೆ...” ಎಂದು ಹಲ್ಕಿರಿಯಲು, ಅವಳ ಬೆನ್ನಿಗೊಂದು ಸಮಾ ಗುದ್ದಿಬಿಟ್ಟಿದ್ದೆ. ನಮ್ಮಿಬ್ಬರ ಜಗಳ ವಿಪರೀತಕ್ಕೆ ಹೋಗ್ತಿರೋದು ಕಂಡ ನಾಗಪ್ಪ, “ತಂಗಿ, ಇಷ್ಟಕ್ಕೆಲ್ಲಾ ಹೆದರಬಾರದು... ಚೇಳು ಕಚ್ಚಿದರೆ ಅದನ್ನ ಕೂಡಲೇ ಹಿಡಿದುಕೊಂಡು ಅದಕ್ಕೆಷ್ಟು ಕಲ್ಗಳಿವೆ ಎಂದು ಎಣಿಸಿದರಾಯ್ತು... ವಿಷ ಏರೋದೇ ಇಲ್ಲಾ... ಗಾಯವೂ ಥಟ್ಟನೆ ಮಾಯವಾಗ್ತದೆ...” ಎಂದಿದ್ದೇ, ದೊಡ್ಡವರೆಲ್ಲಾ ಕಿಸಕ್ಕನೆ ನಕ್ಕು ಒಳಗೆ ಹೋಗಿಬಿಟ್ಟಿದ್ದರು. ನನಗೋ ಪೂರ್ತಿ ಪುಕುಪುಕು ನಿಂತಿರಲಿಲ್ಲ. “ನಾಗಪ್ಪ, ನಂಗೇನಾದ್ರೂ ಆ ಚೇಳು ಮತ್ತೆ ಬಂದು ಕಚ್ಚಿದರೆ ನೀನೇ ಅದನ್ನ ಹಿಡ್ಕಂಡು ಅದರ ಕಾಲುಗಳನ್ನೆಲ್ಲಾ ಲೆಕ್ಕ ಮಾಡ್ಬಿಡು ಹಾಂ...” ಎಂದು ಆದೇಶಿಸಿಬಿಟ್ಟಿದ್ದೆ. ಈಗಲೂ ಇದನ್ನು ನೆನೆದಾಗೆಲ್ಲಾ ನಗುವುಕ್ಕಿ ಬರುತ್ತದೆ. ಆದರೆ ಚೇಳಿನ ಭಯ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ!
ಅದೇ ರೀತಿ, ನಾಗರ ಹಾವು ಕಚ್ಚಿದರೆ ಅದರ ಹೆಡೆಯಿಂದ ಕೆಳಗೆ ಗಟ್ಟಿಯಾಗಿ ಹಿಡಿದು ಆಸ್ಪತ್ರೆಗೆ ಹೋಗಬೇಕು... ಆಗ ನಮ್ಮೊಳಗೆ ಅದರ ವಿಷ ಏರದು... ಚೇರಂಟೆಯ ಕಾಲುಗಳನ್ನು ಲೆಕ್ಕ ಮಾಡಿದರೆ ದುಡ್ಡು ರಾಶಿ ಸಿಗುತ್ತದೆ.... ದೂರದ ಘಟ್ಟದಲ್ಲಿ ಘಟ ಸರ್ಪಗಳಿವೆ ಅವು ರಾತ್ರಿ ಹೊತ್ತು ಸಿಳ್ಳೆ ಹಾಕಿಕೊಂಡು ಬರುತ್ತಿರುತ್ತವೆ, ಪ್ರತಿಯಾಗಿ ನಾವೂ ಸಿಳ್ಳೆ ಹಾಕಿದರೆ ತಕ್ಷಣ ನಮ್ಮಲ್ಲಿಗೇ ಬಂದುಬಿಡುತ್ತವೆ... ಬಿಳಿ ಜಿರ್ಲೆ ಕಚ್ಚಿದ್ರೆ ಅದೃಷ್ಟ ಹೆಚ್ಚಾಗ್ತದೆ... ಹೀಗೆ ಇಂತಹ ಅನೇನಾನೇಕ ಅಸಾಧ್ಯ ಸಂಗತಿಗಳನ್ನೇ ಕಥೆಯಲ್ಲಿ ತುಂಬಿ ಹೇಳಿ ನಮ್ಮ ಮಂಗಬುದ್ಧಿಗೊಂದು ಅಂಕೆ ಹಾಕಿಡುತ್ತಿದ್ದ ನಾಗಪ್ಪ. 
ಮೊನ್ನೆ ಹೀಗೇ ಈ ಕಥೆಗಳನ್ನೆಲ್ಲಾ ಗೆಳತಿಯೊಂದಿಗೆ ಹಂಚಿಕೊಳ್ಳುತ್ತಿದ್ದೆ. ಆಗ ಆಕೆ ಇದರ ಹಿನ್ನಲೆಯೊಳಗೆ ಅಡಗಿರಬಹುದಾದಂಥ ಹೊಸ ಹೊಳಹೊಂದನ್ನು ತೆರೆದಿಟ್ಟಳು! ಚೇಳು, ಹಾವು ಇನ್ನಿತರ ಜಂತುಗಳು ಕಚ್ಚಿದಾಗ, ನಾವು ಅತಿಯಾದ ಭಯಕ್ಕೆ ಒಳಗಾಗಿಬಿಡುತ್ತೇವೆ. ಆಗ ನಮ್ಮ ಮನಸ್ಸನ್ನು ಬೇರೆಡೆಗೆ ಹೊರಳಿಸಲೂ ಇಂಥಾ ಕಥೆಗಳನ್ನು ಕಟ್ಟಿರುವ ಸಾಧ್ಯತೆಯಿದೆಯೆಂದು ಅವಳು ಹೇಳಿದಾಗ ಹೌದಲ್ಲಾ ಎಂದೆನಿಸಿತು. ವಿಷಜಂತುಗಳು ಕಚ್ಚಿದಾಗ ಉದ್ವೇಗ, ಆತಂಕ ಹೆಚ್ಚಾಗಿ, ಅದರಿಂದ ಬಿ.ಪಿ. ಜಾಸ್ತಿಯಾಗಿ, ವಿಷ ಬಹುವೇಗದಲ್ಲಿ ಏರತೊಡಗುತ್ತದೆ. ಇದನ್ನು ತಪ್ಪಿಸಲೂ, ಇಂಥಾ ಕಾಲ್ಪನಿಕ ಕಥೆಗಳನ್ನು ಹೊಸೆದಿರಬಹುದು ಎಂದೆನಿಸಿತು. ಅದೇನೇ ಹಿನ್ನಲೆ ಇದ್ದಿರಲಿ, ರೆಪ್ಟೈಲ್ ಸ್ಪೀಶೀಸ್‌ಗಳನ್ನು ಕಂಡರೇ ಹೌಹಾರುವ ನನ್ನಂಥವರಿಗೆ ಇಂಥಾ ಕಥೆಗಳನ್ನು ಹೇಳಿಬಿಟ್ಟರೆ, ಕಚ್ಚಿದ ಭಯದ ಜೊತೆಗೇ ಅದನ್ನು ಹಿಡಿಯುವ, ಹಿಡಿದು ಕಾಲುಗಳನ್ನು ಬೇರೆ ಎಣಿಸುವ ಕಲ್ಪನೆಯಿಂದಲೇ ಮತ್ತಷ್ಟು ಬಿ.ಪಿ. ಏರಿಬಿಡುವುದು ಗ್ಯಾರಂಟಿ! ಅಂಥ ಸಮಯದಲ್ಲಿ ವಿಷ ನಿಜವಾಗಿಯೂ ಹೊಕ್ಕಿರದಿದ್ದರೂ, ಅತೀವ ಭಯದಿಂದಲೇ ಮೂರ್ಛೆ ತಪ್ಪಿದರೂ ಅಚ್ಚರಿಯಿಲ್ಲ!
*****
(25-02-2018ರ ಉದಯವಾಣಿಯಲ್ಲಿ ಪ್ರಕಟಿತ)

~ತೇಜಸ್ವಿನಿ ಹೆಗಡೆ