ಕಣ್ಣು ಕಿರಿದಾಗಿಸಿದರೂ ಕಾಣಲಿಲ್ಲ ಮಿಂಚಿನ ಗುರುತು,
ಮೇಲೆ ನೋಡೆ, ಬಸಿರು ಹೊತ್ತ ನಿಂತ ಕಾರ್ಮೋಡಗಳು
ತಾಸುಗಳು ಕಳೆದರೂ ಹನಿ ಬಿಂದೂ ಹಣೆ ತಾಗದು!
ಮತ್ತೆ ದೂರದಲ್ಲೆಲ್ಲೋ ಸಣ್ಣ ಗುಡುಗಿದ ಸದ್ದು...
ಒಡಲಾಳದ ಧಗೆಯಿಂದ ಬೆವರಿಟ್ಟ ಧರೆಯು
ಸೀಳು ಬಾಯ್ತೆರೆದು ಹಪ ಹಪಿಸುತಿಹುದು,
ಮುತ್ತಾಗಲು ಕಾಯುತಿಹ ಅದೆಷ್ಟೋ ಚಿಪ್ಪುಗಳು
ಮಳೆಗಪ್ಪೆಗಳ ಭವಿಷ್ಯವನೇ ಬಹು ನೆಚ್ಚಿಕೊಂಡಿಹವು.
ಕೋಲ್ಮಿಂಚಿಗೆ ನಲಿಯಲು ನವಿಲುಗಳು ಕಾದಿದ್ದರೂ
ಹನಿ ನೀರ ಸುಳಿವಿಲ್ಲ, ಗಾಳಿಯೊಳು ಕಂಪಿಲ್ಲ,
ಮತ್ತಷ್ಟು ದೂರದಲಿ ಗುಡುಗಿದೆ ಸದ್ದು....
ಹಾರುವ ಪುಗ್ಗೆಯಿಂದ ಗಾಳಿ ಸುಯ್ಯೆನ್ನಲು ಸಾಕು
ಒಂದೇ ಒಂದು ಸಣ್ಣ, ಮಿರುಮಿರುಗೋ ಸೂಜಿಯ ಮೊನೆ
ಉಬ್ಬಿಹ ಕರಿ ಮೋಡಗಳು ಹಗುರಾಗಲು ಬೇಕು
ಸಣ್ಣನೆಯ ಕೋಲ್ಮಿಂಚುಗಳ ತಿವಿತದ ಬರೆ.
ಹನಿ ಹನಿ ಸೇರಿ, ಶರಧಿಗಳಾಗಿ ಒಡಲೊಳು ನೆಟ್ಟು,
ಹಸಿವು ತಣಿದು, ಹಸಿರಾಗಿ ಬೆಳೆದು, ಫಲವ ನೀಡೆ
ಚಾಚಿದ ಕೈಗಳಿಗೂ ಬಿತ್ತು ಒಂದೊಂದೇ ತುತ್ತು..
ಮತ್ತೆಲ್ಲೋ ಸಣ್ಣಗೆ ಗುಡುಗಿದ ಸದ್ದು!
-ತೇಜಸ್ವಿನಿ ಹೆಗಡೆ