ಸೋಮವಾರ, ಫೆಬ್ರವರಿ 21, 2011

ಆರದಿರಲಿ ಬೆಳಕು...

ಅವಳು ತನ್ನೊಳಗೇ ಸುತ್ತು ಹಾಕಿ ಗಿರಕಿ ಹೊಡೆದು
ಹಳೆಯ ಹೊಸ ಭಾವಗಳ ಮಸೆದು ಹೊಸೆದು
ಅಕ್ಕರೆಯ ಅಕ್ಷರಗಳೆಣ್ಣೆಯಿಂದ ದೀಪಹಚ್ಚುತ್ತಿದ್ದ ಹುಡುಗಿ


ಬೆಳಗುವ ದೀಪದಿಂದೆದ್ದು ಹೊಳೆವ ಅಕ್ಷರಗಳ ಕಿಡಿಗಳ
ಕಣ್ಗಳು ಕಂಡು, ಈ ಮನಸೊಳಗೇ ತುಂಬಿ ಕೊಂಡು ಬಂದು
ನನ್ನ ದೀಪಾಕ್ಷರಗಳ ಬೆಳಗಲು ಬಂದವಳು ನಾನು


ಬತ್ತಿ ಹೊಸೆಯಲು ಬರುತ್ತಿದ್ದರೂ, ಬತ್ತಿ ಹೋಗದ ಎಣ್ಣೆಯ ಹಿಡಿದಿಡುವ
ಆರಿ ಹೋಗುವ ಅಕ್ಷರಗಳನೆಲ್ಲಾ ಒಗ್ಗೂಡಿಸಿ ಸದಾ ಬೆಳಗುವ
ಬೆರಗಿನ ಬೆಳಕಿನ ಪರಿಯ ಕಾಣಿಸಿದಳು, ಒಟ್ಟಾಗಿ ಬೆಳಗ ಕರೆದಳು


ಅದೆಲ್ಲಿತ್ತೋ ನನ್ನ ದೀಪದೊಳು ಹುಮ್ಮಸ್ಸು, ಎಲ್ಲಿಲ್ಲದ ತೇಜಸ್ಸು!
ಬೆಳಗಿತು, ಹೊಳೆಯಿತು, ಹಾಕಿದಷ್ಟೂ ಅಕ್ಷರದೆಣ್ಣೆಯ ಹೊದ್ದು, ಹೊಯ್ದು
ಬತ್ತಿ ಸದಾ ನೆನೆಯುತ್ತಲೇ ಇತ್ತು, ಕಲಿಸಿದವಳ ನೆನೆಯುತ್ತಲೂ ಇತ್ತು...


ಹೊರಗಿನ ದೀಪ ಜಗವ ಬೆಳಗಿದರೆ, ಒಳಗಿನದೆಲ್ಲಾ ಬರೀ ಸುಡುವುದಂತೆ
ಸುಟ್ಟು ಕರಕಲಾದ ಒಡಲಿಂದೆದ್ದ ಹೊಗೆಯ ಕೆಟ್ಟ ವಾಸನೆ ನನ್ನಡರಿಗೂ ತಾಗಿತ್ತು
ನನ್ನೊಳಗಿನ ಅಕ್ಷರದೆಣ್ಣೆಗೆ ಮೊದಲಬಾರಿ ತ(ಕ)ಣ್ಣೀರಿನ ಹನಿಯೊಂದುದುರಿತ್ತು..


ಚಟ ಪಟ, ಚರ ಚರ, ಚುಂಯ್ ಚುಂಯ್ ಸದ್ದು ಮೊದಲಾಗಿ ದೀಪ ಹೆದರಿತ್ತು
ನನ್ನ ಅಂಗೈಯೊಳಗಿನ ಗೂಡೊಳಗೆ ಭದ್ರವಾಗಿದ್ದು ಉರಿಯುತ್ತಿದ್ದರೂ,
ಎಣ್ಣೆಯೊಳಗೆ ಮಾತ್ರ ಒಂದೊಂದೇ ಹನಿ ನೀರುಗಳ ಯುದ್ಧ ಸಾಗೇ ಇತ್ತು


ಬೇಡ ಸಾಕಿನ್ನು, ತಾಳಲಾರೆ ಈ ಬಿಸಿ ಸುಡುತ್ತಿದೆ ಅಂಗೈ ಗೂಡ...
ನನ್ನೊಳಗಿನ ಅಕ್ಕರೆಗಳಿಗೆ ಹಾಕಬೇಕಿದೆ ಪುಟ್ಟದೊಂದು ಬೇಲಿಯ
ಭಾವಗಳ ಬತ್ತಿ ಹೊಸೆವ ಪರಿಯ ಕಲಿಕೆಗೆ ತೆತ್ತಿರುವೆ ಸಾಕಷ್ಟು ಬೆಲೆಯ


- ತೇಜಸ್ವಿನಿ.

ಶನಿವಾರ, ಫೆಬ್ರವರಿ 19, 2011

ನಾವೇಕೆ ಹೀಗೆ?

courtesy : http://johnyml.blogspot.com

ಈ ಆಲೋಚನೆ ಬಂದಿದ್ದು ಇತ್ತೀಚಿಗೆ ನಡೆದ ಆ ಘಟನೆಯಿಂದ ಮಾತ್ರ ಅಲ್ಲ. ಬಹು ಸಮಯದಿಂದಲೂ ಇದು ನನ್ನ ಕಾಡುತ್ತಿದ್ದ ಚಿಂತನೆ. ಸಮಾಜದಲ್ಲಿ ಆಳದಿಂದ ಬೇರೂರಿರುವ ಪಿಡುಗುಗಳಾದ ಸ್ತ್ರೀ ಶೋಷಣೆ, ಸ್ತ್ರೀ-ಪುರುಷ ತಾರತಮ್ಯ, ಆಕೆಯ ಮೇಲಿನ ಅತ್ಯಾಚಾರ - ಮುಂತಾದವುಗಳಿಗೆಲ್ಲಾ ಕಾರಣ ಯಾರು? ಅವಳ ಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವಿಕೆ, ಆಕೆಯನ್ನು ಬೆತ್ತಲಾಗಿಸಿ ಸಂತಸಪಡುವ ವಿಕೃತ ಮನಸ್ಸು, ಎಲ್ಲಾ ಕೌಟುಂಬಿಕ ಸಮಸ್ಯೆಗಳಿಗೆ ಅವಳೊಳಗಿನ ಹೊಂದಾಣಿಕೆಯ ಕೊರತೆಯೇ ಕಾರಣವೆಂದು ಆರೋಪಿಸುವಿಕೆ, ನೈತಿಕತೆಯ ಪಾಠ ಆಕೆಗೆ ಮಾತ್ರ ಎಂದು ಘೋಷಿಸುವ ಸಮಾಜ ಸುಧಾರಕರ ಧೋರಣೆ - ಇವೆಲ್ಲಾ ಕೇವಲ ಪುರುಷರಿಂದ ಮಾತ್ರ ಆಗುತ್ತಿರುವ ಅನ್ಯಾಯಗಳೇ? ಸ್ತ್ರೀ ಕೇವಲ ಪುರುಷರಿಂದ ಮಾತ್ರ ಶೋಷಿತಳೇ? ಅವಳ ಎಲ್ಲಾ ಸಮಸ್ಯೆಗಳಿಗೂ, "ಅವಳ" ಮೇಲಾಗುವ ಎಲ್ಲಾ ರೀತಿಯ ಅತ್ಯಾಚಾರ, ಅನಾಚಾರ, ದಬ್ಬಾಳಿಕೆಗಳಿಗೆ ಕೇವಲ "ಆತ" ಮಾತ್ರ ಕಾರಣನೇ? ಎಲ್ಲವುದಕ್ಕೂ ಪುರುಷ ಸಮಾಜ ಮಾತ್ರ ದೋಷಿಯೇ?!

ಈ ಮೇಲಿನ ನನ್ನ ಪ್ರಶ್ನೆಗಳಿಗೆಲ್ಲಾ ನನ್ನದೇ ಆದ ಉತ್ತರಗಳು ನಾನಿಲ್ಲಿ ಕೊಟ್ಟುಕೊಳ್ಳುವ ಮುನ್ನ, ಈ ವಿಚಾರಧಾರೆಗಳು ನನ್ನ ಮತ್ತಷ್ಟು ಕಾಡಲು ಕಾರಣವಾದ ತೀರಾ ಇತ್ತೀಚಿಗೆ ನಡೆದ ಆ ಘಟನೆಯನ್ನು ಸ್ವಲ್ಪ ಸ್ಥೂಲವಾಗಿ ನೋಡೋಣ. ಇದು ಯಾರಿಗೂ ತಿಳಿಯದ ಘಟನೆಯೇನಲ್ಲ. ಘಂಟಾಘೋಷವಾಗಿ ಎಲ್ಲಾ ಚಾನಲ್‌ಗಳು, ಪೇಪರ್‌ಗಳೂ ಕೂಗಿ ಕೂಗಿ, ಬರೆದು ಕೊರೆದು ಸುಸ್ತಾಗಿ, ಸಾಕಾಗಿ ಸುಮ್ಮನಾದ ಪ್ರಸಂಗ. ಜನಪ್ರಿಯ ಬಹುಭಾಷಾ ನಟಿಯೋರ್ವಳು ಸ್ಟಾರ್(?!) ಹೋಟೇಲ್ ಒಂದರಲ್ಲಿ, ಪ್ರತಿಷ್ಠಿತ ಸಾಪ್ಟ್‌ವೇರ್ ಕಂಪೆನಿಯೊಂದರ ಸಿ.ಇ.ಒ. ಆಗಿದ್ದವನೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿರುವಾಗ ಪೋಲೀಸರ ಕೈಗೆ ಸಿಲುಕಿ ಸುದ್ದಿಗೆ ಆಹಾರವಾದ ಘಟನೆ.

ನಾನು ಇಲ್ಲಿ ಆ ನಟಿಯನ್ನಾಗಲೀ, ಆ ವ್ಯಕ್ತಿಯನ್ನಾಗಲೀ ಖಂಡಿತ ಸಮರ್ಥಿಸುತ್ತಿಲ್ಲ. ಆದರೆ ಸುದ್ದಿ ಹೊರ ಬರುತ್ತಿದ್ದಂತೇ ಎಲ್ಲಾ ಬೇಧ ಮರೆತು ಈ ಒಂದು ಸುದ್ದಿಗೆ ಮುಗಿ ಬಿದ್ದ ಚಾನಲ್‌ಗಳು ನಡೆದುಕೊಂಡ ರೀತಿ ಮಾತ್ರ ಖಂಡನೀಯ! "ಒಡಕು ಸುದ್ದಿ"(Breaking News) ಎಂಬ ತಲೆಬರಹದಡಿಯಲ್ಲಿ ಆ ನಟಿಯ ಹೆಸರನ್ನು, ಚಿತ್ರಗಳನ್ನು, ಆಕೆ ನಟಿಸಿದ್ದ ಕನ್ನಡ ಹಾಗೂ ಇತರ ಭಾಷೆಗಳ ಚಿತ್ರಗಳಲ್ಲಿದ್ದ ಹಸಿ/ಬಿಸಿ ಚಿತ್ರಗಳ ತುಣುಕುಗಳನ್ನು ಹಾಕಿದ್ದೇ ಹಾಕಿದ್ದು. ಆ ಚಿತ್ರದಲ್ಲಿ ಗೌರಮ್ಮನಂತೆ ನಟಿಸಿದ್ದ ಇವಳೇನಾ ಅವಳು? ಎಂದು ಪ್ರಶ್ನಿಸಿದ್ದೇ ಪ್ರಶ್ನಿಸಿದ್ದು. ಎಲ್ಲಿದೆ ಸಿನಿಮಾದವರಿಗೆ ನೈತಿಕತೆ? ಎಂದು ಚರ್ಚೆ ಮಾಡಿದ್ದೇ ಮಾಡಿದ್ದು. ಒಂದು ಚಾನಲ್ ಅಂತೂ ಇದಕ್ಕಾಗಿಯೇ ವಿಶೇಷ ಪ್ರೋಗ್ರಾಂ ಮಾಡಿ ಅವಳ ಜನ್ಮ ಜಾಲಾಡಿ ಬಿಟ್ಟು ಏನೋ ಸಾಧಿಸಿದಂತೆ ಬೀಗಿತ್ತು. ಮರುದಿನ ಪತ್ರಿಕೆ ತೆಗೆದರೂ ಅಲ್ಲೂ ಇದೇ ಕತೆ-ವ್ಯಥೆ! ಆದರೆ ಯಾರೊಬ್ಬರೂ, ಯಾವ ಚಾನಲ್/ಪತ್ರಿಕೆಯೂ ಆಕೆಯೊಡನೆ ಇದೇ ಚಟುವಟಿಕೆಯಲ್ಲಿ ತೊಡಗಿದ್ದ ಆ ಮಹಾನ್ ಘನವೆತ್ತ ವ್ಯಕ್ತಿಯ ಮುಖವನ್ನಾಗಲೀ, ಆತನ ಕಿರು ಪರಿಚಯವನ್ನಾಗಲೀ, ಕನಿಷ್ಟ ಅವನ ಕಂಪೆನಿಯ ಹೆಸರನ್ನಾಗಲೀ ಹಾಕಲು ಹೋಗಲೇ ಇಲ್ಲಾ. ಕಾಟಾಚಾರಕ್ಕೆಂಬಂತೆ ಒಂದೆರಡು ಕಡೆ ಮಾತ್ರ ಅವನ ಹೆಸರನ್ನು (ನಿಜನಾಮವೋ, ಸುಳ್ಳೋ....!) ಮಾತ್ರ ಪ್ರಕಟಿಸಿತ್ತು. ಆ ಸಾಫ್ಟ್‌ವೇರ್ ಕಂಪನಿ ತನ್ನ ಪ್ರತಿಷ್ಠೆ ಉಳಿಸಿಕೊಳ್ಳಲೋ, ಇಲ್ಲಾ ಆ ವ್ಯಕ್ತಿ ತನ್ನ ಮುಖ ಮುಚ್ಚಿಕೊಳ್ಳಲೋ ದುಡ್ಡು/ಅಧಿಕಾರ ಉಪಯೋಗಿಸಿ ಆ ದೃಶ್ಯದಿಂದಲೇ ತನ್ನನ್ನು ಬೇರ್ಪಡಿಸಿಕೊಂಡುಬಿಟ್ಟ. ಕೊನೆಗೆ ಉಳಿದದ್ದು, ಸುಲಭವಾಗಿ ಎಲ್ಲರಿಗೂ ಗ್ರಾಸವಾಗಿದ್ದು ಆ ನಟಿ ಮಾತ್ರ. ಮದುವೆಯಾಗಿ ಮಕ್ಕಳಿರುವ ಆಕೆ ಯಾಕೆ ಈ ದಂಧೆಗೆ ಬಂದಳು? ಇದರ ಹಿನ್ನಲೆ ಏನು? ಯಾವುದನ್ನೂ ಅರಿಯಲು ಹೋಗಲಿಲ್ಲ. ಹೋಗಲಿ ಇದು ಅವಳ ವೈಯಕ್ತಿಕತೆ ಎಂದಾದಲ್ಲಿ ಮತ್ತೆ ಮತ್ತೆ ಅವಳ ಬಗ್ಗೆ ಯಾಕೆ ಪ್ರಕಟಿಸಬೇಕಿತ್ತು? ಆಕೆ ಮಾಡಿದ್ದು ಸರ್ವಥ ಸಮರ್ಥನೀಯವಲ್ಲ. ಕೇವಲ ದುಡ್ಡಿಗೋಸ್ಕರ, ಮೋಜಿಗೋಸ್ಕರ ಈ ಕೆಲಸಕ್ಕೆ ಇಳಿದಿದ್ದರೆ ಅಕ್ಷಮ್ಯ ಕೂಡ. ಆದರೆ ಎಷ್ಟೋ ಮಹಿಳೆಯರು ತನ್ನ ಗಂಡನ ಒತ್ತಡಕ್ಕೆ, ಮನೆಯ ಪರಿಸ್ಥಿತಿಯಿಂದಾಗಿಯೋ ಯಾವುದೋ ಒಂದು ಅಸಹಾಯಕತೆಯಿಂದಾಗಿಯೂ ಈ ಕೆಲಸಕ್ಕೆ ಇಳಿಯುತ್ತಾರೆ. ಆದರೆ ಅವರ ಹಿಂದಿನ ನಿಜ ಕಾರಣ ತಿಳಿಯದ ನಾವು ಕೇವಲ ಆಕೆಯನ್ನು ಮಾತ್ರ ದೂಷಿಸುತ್ತೇವೆ. ಹಣ ತೆತ್ತು ಆಕೆಯನ್ನು ಪ್ರಲೋಭಿಸಿದ ಆ ವ್ಯಕ್ತಿಯ ಮುಖವಾಡ ನಮಗೆ ಕಾಣಿಸೋದೇ ಇಲ್ಲ!!

ನನ್ನ ಪ್ರಕಾರ ಹೆಣ್ಣಿನಮೇಲಾಗುವ ಎಲ್ಲಾ ದೌರ್ಜನ್ಯಗಳಿಗೆ ಕೇವಲ ಪುರುಷ ಮಾತ್ರ ಖಂಡಿತ ಕಾರಣನಲ್ಲ. ಪುರುಷ ಸಮಾಜದ ಅನ್ಯಾಯದ ಹಿಂದೆ ಹೆಣ್ಣಿನ ಕೊಡುಗೆಯೂ ಸಾಕಷ್ಟಿರುತ್ತದೆ. ಹೆಣ್ಣಿಗೆ ಹೆಣ್ಣೇ ಶತ್ರುವಾಗದೇ, ಸ್ನೇಹಿತೆಯಾದಾಗ ಪುರುಷನ ದಬ್ಬಾಳಿಕೆಗೂ ಕೊನೆ ಬೀಳದಿರದು. ಸುಡುವ ಅತ್ತೆ, ತಿವಿಯುವ ನಾದಿನಿ, ಹೊರದೂಡುವ ಅತ್ತಿಗೆ, ಮೋಸಕ್ಕೆಳೆಯುವ ಗೆಳತಿ - ಇವರೆಲ್ಲರೂ ಆಕೆಯ ದುರ್ಗತಿಗೆ, ಅನ್ಯಾಯಕ್ಕೆ ಕಾರಣಕರ್ತರೇ. ಬರುವ ಸೊಸೆಯನ್ನೂ ಓರ್ವ ಹೆಣ್ಣಾಗಿ ಕಾಣುವ ಅತ್ತೆ-ನಾದಿನಿಯರಿದ್ದರೂ ಸಾಕು, ಅದೆಷ್ಟೋ ಮನೆ/ಮನಗಳು ಮುರಿಯದೇ ಸದಾ ನಗುತ್ತಿರಬಹುದು. ಮುರಿದ ಮನೆ/ಮನಗಳೂ ಒಂದಾಗಬಲ್ಲವು. ದಬ್ಬಾಳಿಕೆ ಮಾಡುವ, ಹೊಡೆದು ಹಿಂಸಿಸುವ, ಹಾದರಕ್ಕೆಳೆಸುವ, ಅನೈತಿಕತೆಯೆಡೆಗೆ ನಡೆಯುವ ತನ್ನ ಮಗನ ವಿರುದ್ಧ ಆತನ ತಾಯಿ ಎದುರುನಿತ್ತರೂ ಸಾಕು ೧೦ರಲ್ಲಿ ಒಂದಾದರೂ ಸಂಸಾರ ಸರಿ ದಾರಿಗೆ ಬರಬಲ್ಲದು. 

ಪುರುಷರ ಕಡೆಗೇ ಬೆಟ್ಟು ಮಾಡೋ ಮುಂಚೆ ಸ್ತ್ರೀಯರು ನಮ್ಮೊಳಗಿನ ಒಗ್ಗಟ್ಟನ್ನು ಮೊದಲು ಪ್ರಶ್ನಿಸಿಕೊಳ್ಳೋದು ಉತ್ತಮವೇನೊ ಎಂದೆನಿಸುತ್ತದೆ. ಅಂದು ಆ ಘಟನೆ ನಡೆದಾಗ "ಕಡ್ಡಿ"ಚಾನಲ್ ಒಂದು ಆ ನಟಿಯ ಬಗ್ಗೆ ಅದೆಷ್ಟು ಕೆಟ್ಟದಾಗಿ ಪ್ರಚಾರಕ್ಕೆ ತೊಡಗಿತೆಂದರೆ ೨ ನಿಮಿಷವೂ ಅದನ್ನು ನೋಡದೇ ನಾನು ಬೇರೆ ಚಾನಲ್‌ಗೆ ಹೋದೆ. ಆದರೆ ನನಗೆ ಅಚ್ಚರಿಯಾದದ್ದೆಂದರೆ ಅಂದು ಆ ನಟಿಯ ಬಗ್ಗೆ ಆ ರೀತಿಯ ಕಾರ್ಯಕ್ರಮ ನಡೆಸಿಕೊಟ್ಟಿದ್ದೂ ಓರ್ವ ಹೆಣ್ಣೇ ಆಗಿದ್ದು!!! ಕನಿಷ್ಟ ಗೌರವವನ್ನೂ ಕೊಡದೇ ನಿರೂಪಕಿ ನಟಿಯ ಬಗ್ಗೆ ಮಾತನಾಡುವಾಗ ಆಕೆಗೆ ಒಮ್ಮೆಯೂ ಆ ಪುರುಷನ ಬಗ್ಗೆ ನೆನಪಾಗಲಿಲ್ಲವೇ? ಆತನ ವಿವರಗಳನ್ನೂ ನೀಡಬೇಕೆಂಬ ಅರಿವೇ ಮೂಡಲಿಲ್ಲವೇ? ಅವನ ಹೆಸರಿನ ಬದಲಾಗಿ ಆಗಾಗ ಬಳಸಿದ್ದು ಸಿ.ಇ.ಒ ಎಂಬ ಘನಾಂದಾರಿ ಹುದ್ದೆಯ ಪರದೆಯನ್ನು!! ಕೇಳಿದರೆ ಹೇಳುವರೆಲ್ಲಾ... ಇದು ನಮ್ಮ ಹೊಟ್ಟೆ ಪಾಡು. ನಾಳೆ ಇವರಿಗೇ ಅನ್ಯಾಯವಾದರೆ ಕೂಗುವರು ಪುರುಷ ಸಮಾಜದ ದಬ್ಬಾಳಿಕೆ ಎಂದು!!!

ಹೆಣ್ಣಿನ ಮೇಲೆ ಪುರುಷ ದೌರ್ಜನ್ಯ ಮೊದಲಿನಿಂದಲೂ ನಡೆದು ಬಂದಿದೆ ನಿಜ. ಆದರೆ ಆಕೆಗೆ ಬಲವಾಗಿ, ಬೆಂಬಲವಾಗಿ ಒತ್ತು ನಿಲ್ಲುವ ಸ್ತ್ರೀಯರ ಸಂಖ್ಯೆ ಮಾತ್ರ ಹಿಂದೆಯೂ ವಿರಳವಾಗಿತ್ತೂ ಇಂದೂ ಅಷ್ಟೇ. ಆಶಾಷಭೂತಿತನದಿಂದ, ಹೋರಾಟದ ಸೋಗು ಹಾಕಿರುವವರೇ ಹೆಚ್ಚು. ಎಲ್ಲವೂ ಹಣ/ಅಧಿಕಾರಮಯ. ಓರ್ವ ಸ್ತ್ರೀಯನ್ನು ಇನ್ನೋರ್ವ ಸ್ತ್ರೀ ಗೌರವಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಮಾತ್ರ ನಿಜವಾದ ಸುಧಾರಣೆ ಸಾಧ್ಯ... ಆಕೆಯ ಮೇಲಾಗುವ ದೌರ್ಜನ್ಯವನ್ನು ಹತ್ತಿಕ್ಕುವುದೂ ಸುಲಭ. ಅದರ ಬದಲು ಬಿದ್ದವರಿಗೇ ಮತ್ತಷ್ಟು ಗುದ್ದು ಕೊಡುತ್ತೇವೆ... ದುಡ್ಡು, ಅಧಿಕಾರ ಇದ್ದವನೇ ದೊಡ್ಡಪ್ಪ ಎಂದು ತಪ್ಪಗಾಗುತ್ತೇವೆ..... ನೈತಿಕತೆಯ ಪಾಠ ಕೇವಲ ಹೆಣ್ಣಿಗೆ ಮಾತ್ರ ಎನ್ನುವಂತೆ ವರ್ತಿಸುತ್ತೇವೆ.... ಬಿದ್ದವರಿಗೆ ಕೈ ಕೊಟ್ಟು ಮೇಲೇರಿಸುವುದ ಬಿಟ್ಟು ಕೈ ಕೊಡವಿ ಮುನ್ನೆಡೆಯುತ್ತೇವೆ.... ನಮ್ಮ ನಿನ್ನೆಗಳ, ನೋವು/ಯಾತನೆಗಳನ್ನೇ ಮರೆತು ಮತ್ತೊಬ್ಬರ ನೋವಿಗೆ ನಗುತ್ತೇವೆ... ಸ್ವಂತ ಲಾಭಕ್ಕಾಗಿ ಇನ್ನೊಬ್ಬರ ಕೆಡುಕಿಗೆ ಹೊಂಚು ಹಾಕುತ್ತೇವೆ... - ಇವನ್ನೆಲ್ಲಾ ನೋಡಿದಾಗ ನನ್ನೊಳಗೆ ಮೂಡುವ ಪ್ರಶ್ನೆ ಒಂದೇ.... ನಾವೇಕೆ ಹೀಗೆ?!!

-ತೇಜಸ್ವಿನಿ.

ಮಂಗಳವಾರ, ಫೆಬ್ರವರಿ 8, 2011

ಬದುಕು ಪಗಡೆಯ ಆಟ... ದಾಳ ಅದರ ಸಾಹೇಬ

ಇತ್ತೀಚಿಗೆ ಈ ಪಗಡೆಯಾಟದ ಹುಚ್ಚು ತುಸು ಜಾಸ್ತಿಯೇ ಆಗುತ್ತಿದೆ... (ಲೂಡೋ). ಹಿಂದೆ ಚಿಕ್ಕವರಿದ್ದಾಗ ಊರಿಗೆ ಹೋದಾಗ ನಾನೂ ನನ್ನ ಚಿಕ್ಕಪ್ಪನ ಮಕ್ಕಳೆಲ್ಲಾ ಸೇರಿ "ಬಳೇವೋಡಾಟ" ಆಡುತ್ತಿದ್ದೆವು. ಈ ಆಟವೂ ಪಗಡೆಯಾಟದಂಥದ್ದೇ. ಮನೆಯ ಮೇಲಂಕಣದಲ್ಲಿ ಸಗಣಿಯಿಂದ ನುಣ್ಣಗೆ ಸಾರಿಸಿದ್ದ ಮೆತ್ತಿಯ ನೆಲದ ಮೇಲೆ ಸೀಮೆಸುಣ್ಣದಲ್ಲಿ ಪಗಡೆಯ ಮನೆ ಬರೆದು (ಲೂಡೋ ಬೋರ್ಡ್ ನಕ್ಷೆ) ೬ ಪಗಡೆಗಳನ್ನೇ ದಾಳವಾಗಿ ಉಪಯೋಗಿಸಿ ಆಡುತ್ತಿದ್ದೆವು. ಮನೆಯನ್ನು ನಡೆಸಲು ಕಾಳುಗಳಾಗಿ ಒಡೆದ ಬಳೆಗಳನ್ನು ಬಳಸುತ್ತಿದ್ದೆವು. ರಂಗು ರಂಗಿನ ಪುಟ್ಟ ಪುಟ್ಟ ಬಣ್ಣದ ಬಳೆಗಳನ್ನು ಉಪಯೋಗಿಸಿ ಆಡುತ್ತಿದ್ದ ಆ ದಿನಗಳ ನೆನಪು ಮಾತ್ರ ಹಚ್ಚ ಹಸಿರು.

ಒಂದೇ ಬಣ್ಣದ ನಾಲ್ಕು ಬಳೆಚೂರುಗಳನ್ನು ಇಟ್ಟುಕೊಂಡು, "ವಚ್ಚಿ(=ಒಂದು), ದುಕ್ಕಿ(=ಎರಡು)..." ಎಂದೆಲ್ಲಾ ದಾಳ ಹಾಕುತ್ತಾ... ಮುನ್ನೆಡೆಯುತ್ತಿರುವಾಗಲೇ ಹಿಮ್ಮೆಟ್ಟಿ ಬರುವ ಬೇರೆ ಮನೆಯ ಬೇರೆ ಬಣ್ಣದ ಬಳೆ ಚೂರುಗಳು ಸಮಯ ಸಾಧಿಸಿ ನನ್ನ ಬಳೆಚೂರನ್ನು ಹೊಡೆದು ಮತ್ತೆ ಪ್ರಾರಂಭಕ್ಕೇ ತಂದು ನಿಲ್ಲಿಸಿ ಮುನ್ನೆಡೆವಾಗ ಮಾತ್ರ ಅಸಾಧ್ಯ ಕೋಪವೇ ಬಂದು ಬಿಡುತ್ತಿತ್ತು. ಆದರೂ ಮತ್ತೆ ಯತ್ನವ ಮಾಡಿ ಆರು ಬೀಳಿಸಿ ಹೊರ ಬಂದು ಹೊಡೆದವರಿಗೇ ಮತ್ತೆ ಹೊಡೆತ ಕೊಟ್ಟು ಮುನ್ನುಗ್ಗಿ ಅಂತಿಮವಾಗಿ ಮನೆ ತಲುಪಿದಾಗ "ಅಬ್ಬಾ! ಮಲಗ್ದಿ.." ಅನ್ನೋ ನಿರುಮ್ಮಳತೆಯನ್ನು ಮಾತ್ರ ಈವರೆಗೂ ಯಾವುದರಲ್ಲೂ ಪಡೆದಿಲ್ಲ!:)

ಅಂದಿನ ಬಳೆವೋಡಾಟ, ಪಗಡೆಯಾಟ, ಇಂದಿನ ಲೂಡೋ ರೂಪ... ಎಲ್ಲವೂ ಒಂದೇ. ಅದೇ ಆಟ, ಅದೇ ಕಾಳುಗಳು, ಒಂದರಿಂದ ಆರು ಚುಕ್ಕಿಗಳನ್ನೊಳಗೊಂಡ ದಾಳ... ಹಿಮ್ಮೆಟ್ಟಿ ಸಾಗುವಾಗ ನಡುವೆ ಸಿಗುವವರ ಕಾಳುಗಳನ್ನು ಹೊಡೆದು ಮುನ್ನುಗ್ಗುವಿಗೆ, ಹೊಡೆತ ತಿಂದು ಹಿಮ್ಮೆಟ್ಟುವಿಕೆ... ಎಲ್ಲವೂ ಅದೇ. ಆದರೆ ಬಾಲ್ಯದ ಆ "ಮಲಗ್ದಿ.." ಅನ್ನೋ ನಿರುಮ್ಮಳತೆಯ ಭಾವ ಮಾತ್ರ ಹೆಚ್ಚು ಕಾಲ ಬಾಳುವಂಥದ್ದಲ್ಲ.

ಕೆಲ ದಿನಗಳಿಂದ ನಾವೂ ಈ ಲೂಡೋ(ಪಗಡೆಯಾಟ) ಆಟವನ್ನು ದಿನವೂ ಆಡುತ್ತಿದ್ದೇವೆ. ಪುಟ್ಟಿಗಂತೂ ಒಂದು ಬಿದ್ದರೂ, ನಾಲ್ಕು ಬಿದ್ದರೂ ಆರೇ ಬೇಕೆಂಬ ಹಠ. ಅದಕ್ಕಾಗಿ ಚೆನ್ನಾಗಿ ಆರನ್ನೇ ಆರಿಸಿ ಇಟ್ಟು ಬಿಡುತ್ತಾಳೆ. ಒಪ್ಪಿಕೊಳ್ಳುವ ಅನಿವಾರ್ಯತೆ ನಮ್ಮದು...:) ಅವಳಿಗೆ ಸೋಲಿನ ಪರಿಭಾಷೆ ಗೊತ್ತಿಲ್ಲ... (ಸದ್ಯ ಗೊತ್ತಾಗುವುದೂ ಬೇಡ)... ಹಾಗಾಗಿ ಎಲ್ಲಾ ಆಟದಲ್ಲೂ ಗೆಲುವು ಅವಳದೇ.

ಬದುಕೂ ಇದೇ ತರಹ ಪ್ರತಿ ಸೋಲಿನಲ್ಲೂ ಗೆಲುವನ್ನೇ ಕಾಣುಸಿವಂತಿದ್ದರೆ.... ಎಲ್ಲಾ ಸಲವೂ ದಾಳದಲ್ಲಿ ಆರೇ ಬೀಳುವಂತಿದ್ದರೆ.... ನಾಲ್ಕೂ ಕಾಳುಗಳೂ ಸರಾಗವಾಗಿ, ಹೊಡೆತವನ್ನೇ ತಿನ್ನದೇ ಸಾಗಿ, ಮನೆಯನ್ನು ಮುಟ್ಟಿ ಮಲಗುವಂತಿದ್ದರೆ.... - ಊಹೂಂ... ಇಲ್ಲಿ ಮಾತ್ರ ಈ ‘ರೆ’ಗಳು ಇಷ್ಟವಾಗವು. ಆಟದ ಮಜವಿರುವುದು ಸೋಲಿನಲ್ಲಿ.. ಸೋತು ಗೆಲ್ಲುವುದರಲ್ಲಿ.... ಹೊಡೆತ ತಿನ್ನುವುದರಲ್ಲಿ.. ತಿಂದು ಮತ್ತೆ ತಿರುಗಿ ಬರುವುದರಲ್ಲಿ. ಎಲ್ಲವನ್ನೂ ಜಯಸಿ ಆಮೇಲೆ ಮನೆ ಸೇರುವುದರಲ್ಲಿರುವ ಸಂತೋಷ ಆ ‘ರೆ’ಗಳಲ್ಲಿಲ್ಲ.

ಪಗಡೆಯಾಟದಂತೇ ಇಲ್ಲೂ... ಅಂದರೆ ಬದುಕಲ್ಲೂ ಯಾರೂ ಮಿತ್ರರಲ್ಲ.. ಯಾರೂ ಶತ್ರುವಲ್ಲ. ಆ ಕ್ಷಣಕ್ಕೆ ನಮ್ಮನ್ನು ಹೊಡೆಯದವ.. ನಮ್ಮನ್ನು ಸುಮ್ಮನೇ ಬಿಟ್ಟು ದಾಟಿದವ ಮಿತ್ರ... ಹೊಡೆದವ... ಹೊಡೆಯಲೆಂದೇ ಹಿಂದೆ ಬಿದ್ದವ ಮಾತ್ರ ಶತ್ರು. ಎಲ್ಲಾ ಭಾವಗಳ ಮೇಲಾಟ. ಆರಂಭದಿಂದ ಅಂತ್ಯದವರೆಗೂ ಅನಿಶ್ಚಿತತೆಯ, ಅನುಮಾನದ, ಅದೃಷ್ಟದ ಆಟ. ಕೇವಲ ದಾಳ ಮಾತ್ರ ಅದರ ಗತಿಯನ್ನು, ಗೆಲುವಿನ ರೂಪವನ್ನು ಕಾಣಿಸಬಹುದು. ಒಂದು ಬಿದ್ದರೆ ಮನೆಯನ್ನೂ ಸೇರಬಹುದು.. ಮುಂದಿದ್ದವರನ್ನೂ ಹೊಡೆಯಬಹುದು ಹಾಗೇ ನಮಗೂ ಹೊಡೆತ ನೀಡಬಹುದು. ಆದರೆ ಆರು ಮಾತ್ರ ಸದಾ ಮುನ್ನೆಡೆಸುತ್ತಲೇ ಇರುತ್ತದೆ.. ಹೊಡೆತ ಕೊಟ್ಟರೂ ಮತ್ತೆ ಹೊರ ಬರಲೂ ಕಾರಣವಾಗಿರುತ್ತದೆ. ಅಂತಹ ಆರು ಚುಕ್ಕೆಯ ಬೀಳುವಿಕೆಗಾಗಿ ಆ ದಾಳದ ಮೊರೆ ಹೋಗುವುದು ಮಾತ್ರ ನಮ್ಮ ಕೈಲಿದೆ. ಬಿದ್ದರೆ ಮುಂದೆ.. ಬೀಳದಿದ್ದರೆ ಇನ್ನೊಂದು ಅವಕಾಶಕ್ಕಾಗಿ ನಿರೀಕ್ಷೆ ಅಷ್ಟೇ!

ಒಮ್ಮೆ ಮುಂದಿದ್ದವ ಸಂಪೂರ್ಣವಾಗಿ ಪುನರಾರಂಭ ಮಾಡುವಂತಾಗಬಹುದು. ತೀರಾ ಹಿಂದೆ ಬಿದ್ದವ ಒಮ್ಮೆಲೇ ಮುನ್ನುಗ್ಗಿ ಮನೆ ಸೇರುವಂತಾಗಲೂ ಬಹುದು. ಎಲ್ಲವೂ ಆ ಸೂತ್ರಧಾರನ ಕೈಲಿದೆ. ಆತನೇ ದಾಳ... ನಾವೆಲ್ಲಾ ಕಾಳುಗಳು(ಬಳೆವೋಡುಗಳು), ಈ ನಮ್ಮ ಬದುಕೇ ಪಗಡೆಯ ಮನೆ.... ಪಯಣ ಮನೆಯ ಕಡೆಗೆ... ವಚ್ಚಿ, ದುಕ್ಕಿ, ಮೂರು, ಆರು... ಎನ್ನುತ್ತಾ ಸಾಗುವುದೇ ಜೀವನ.

-ತೇಜಸ್ವಿನಿ ಹೆಗಡೆ

Pics Courtesy : 1. http://www.bombayharbor.com/Product/28920/M_Folding_Ludo_Game.html
                 2. http://www.alibaba.com
                 3. http://www.grand-illusions.com