ಕೆಲವು ತಿಂಗಳ ಹಿಂದೆ ಊರಿಗೆ ಹೋದಾಗ ಪುಟ್ಟಿ "ಅಮ್ಮಾ ಇದೆಂಥದೇ ಮಜಾ ಇದ್ದು.. ಹಿಂಡಿದ್ರೆ ನೀರು ಬತ್ತು.. ಇದ್ನ ಕುಡೀಲಕ್ಕಾ?" ಎಂದು ಕೇಳುತ್ತಾ ನೀರುಕಡ್ಡಿ ಗಿಡವನ್ನು ಹಿಡಿದು ಬಂದಳಾ.....ನನಗೆ ನನ್ನ ಬಾಲ್ಯದ ನೆನಪುಗಳೆಲ್ಲಾ ಒಂದೊಂದಾಗಿ ಧಾಳಿಯಿಡತೊಡಗಿದವು. "ತಂಗಿ ಅದು ಕುಡ್ಯ ನೀರಲ್ಲಾ.. ಪಾಟಿ ಒರ್ಸಲೆಲ್ಲಾ ಬಳಸ್ತೊ... ನೀರ್ಕಡ್ಡಿ ಹೇಳ್ತೋ ಇದ್ಕೆ... ನೀ ಆಡಿದ್ಮೇಲೆ ಚೆನ್ನಾಗಿ ಕೈ ತೊಳ್ಕೊ.. ಬಾಯಿಗೆಲ್ಲಾ ಹಾಕಡ..." ಎಂದೆ. ತಿರುಗಿ ಹೊರಟವಳು ಮತ್ತೆ ನಿಂತು... "ಅಮ್ಮಾ ಪಾಟಿ ಒರ್ಸದಾ? ಅಪ್ಪ ಆಡಲೆ ಹೇಳಿ ಚಾಕ್ ಪೀಸ್ ತಗಬಂಜನಲೆ ಅದ್ರಲ್ಲಿ ಬರ್ದು ಒರ್ಸದಾ" ಎಂದು ಕೇಳಿದಾಗ ಒಂದು ಕ್ಷಣ ಅಯ್ಯೋ ಎನಿಸಿತು. ಈಗಿನ ಮಕ್ಕಳು ಅದರಲ್ಲೂ ‘ಸಿಟಿ’ ಮಕ್ಕಳು ಬರೆಯೋದನ್ನು ಆರಂಭಿಸುವುದೇ ಪೆನ್ಸಿಲ್ಲು, ಪುಸ್ತಕದಲ್ಲಿ! ಬಳಪದ ಕಡ್ಡಿ, ರಂಗುರಂಗಿನ ಪ್ಲಾಸ್ಟಿಕ್ ಚೌಕಟ್ಟುಗಳಿಂದ ಕಂಗೊಳಿಸುತ್ತಿದ್ದ ಕರಿ ಸ್ಲೇಟುಗಳನ್ನು ಹೊತ್ತು ಬೀಸುತ್ತಾ ಸಾಗುತ್ತಿದ್ದ ಪಾಟೀಚೀಲ, ಅದರ ಕಿರುಗಿಸೆಯಲ್ಲಿ ತುರುಕಿರುತ್ತಿದ್ದ ನೀರ್ದಂಟು....ಇವೆಲ್ಲಾ ನಮ್ಮ ಕಾಲದಲ್ಲೇ ಮುಗಿದು ಹೋದವು. ಆದರೂ ಅದೇ ಸವಿನೆನಪಿಗಾಗಿಯೇ.. ನನ್ನ ಖುಶೀಗೋಸ್ಕರ ಇವಳಿಗೂ ಒಂದು ಪಾಟಿಯನ್ನು ತಂದು ಕೊಟ್ಟಿದ್ದೇನೆ... ನಮ್ಮ ಕಾಲದಂಥದ್ದಲ್ಲದೇ ಹೋದರೂ ಸರಿಸುಮಾರು ಅಂಥದ್ದೇ... ಇದರಲ್ಲಿ ಬರೆದು ಒರೆಸಲೆಂದೇ ಪುಟ್ಟ ಡಸ್ಟರ್ ಅನ್ನೂ ಸಿಕ್ಕಿಸಿಟ್ಟಿರುತ್ತಾರೆ. ಹಾಗಾಗಿ ನೀರ್ಕಡ್ಡಿ, ಒದ್ದೆ ಬಟ್ಟೆ ಎಲ್ಲಾ ಬೇಕಾಗಿಲ್ಲ.
Courtesy : http://oppanna.com/?p=1921 |
ತುಸು ಕಂದು ಮಿಶ್ರಿತ ಕೆಂಪು ದಂಟಿನ ತುದಿಯಲ್ಲಿ ಹಸಿರೆಲೆಗಳಿಂದ ಕಂಗೊಳಿಸುವ ಇದನ್ನು ಕನ್ನಡದಲ್ಲಿ ನೀರು ದಂಟು, ನೀರ್ಕಡ್ಡಿ ಎಂದು ಕರೆದರೆ, ತುಳುವಿನಲ್ಲಿ ನಿರ್ಕಲ್ ಎನ್ನುತ್ತಾರೆ. ಏನೇ ಅನ್ನಿ... ಈ ತೆಳು ಕಡ್ಡಿಯನ್ನು ಹಿಂಡಿ, ಅದರ ರಸವನ್ನು ಪಾಟಿಯ ಮೇಲೆ ಹೊಯ್ದು, ಹರಿದು ಬೊಕ್ಕಣವಾದ ಹಳೇ ಬಟ್ಟೆ ಚೂರಲ್ಲೋ.. ಇಲ್ಲಾ ತೊಟ್ಟಿದ್ದ ಲಂಗದ ಕೊನೆ ತುದಿಯಿಂದಲೋ ಗಸ ಗಸನೆ, ಮೈ ಮೇಲೆ ಶೀತದ ಗುಳ್ಳೆ ಎಳೋ ಹಾಗೇ ಉಜ್ಜುವ ಆ ಮಜವೇ ಬೇರೆ. ನೀರ್ಕಡ್ಡಿಯನ್ನು ಹಿಂಡಿದಾಗ ಬರುವ ವಿಚಿತ್ರ ವಾಸನೆಯ ಕಂಪು ಇನ್ನೂ ನನ್ನ ಮೂಗಿನ ಗೃಂಥಿಯಲ್ಲೆಲ್ಲೋ ಹಾಗೇ ಶಾಶ್ವತವಾಗಿ ಉಳಿದುಕೊಂಡುಬಿಟ್ಟಿದೆ. ಬಸಳೆ ಸೊಪ್ಪನ್ನು ಅರ್ಧಂಬರ್ಧ ಬೇಯಿಸಿದಾಗ ಬರುವ ಒಂಥರಾ ವಾಸನೆಯದು! ಅಂದು... ಯಾರ ಬಳಿ ಎಷ್ಟು ಬಳಪ ಇದೆ? ಅದರಲ್ಲೂ ಬಿಳಿದೆಷ್ಟು? ಕರಿಯದೆಷ್ಟು? ಯಾರ ಬಳಪ ಹೆಚ್ಚು ಉದ್ದವಿದೆ? ನೀರ್ಕಡ್ಡಿಯನ್ನು ಯಾರೆಷ್ಟು ಒಟ್ಟು ಹಾಕಿದ್ದಾರೆ? ಎಂದೆಲ್ಲಾ ಲೆಕ್ಕಾಚಾರ ಹಾಕೊಕೊಳ್ಳುವುದು, ಅದರ ಮೇಲೆ ಕೊಡು-ಕೊಳ್ಳುವಿಕೆಯ ವ್ಯವಹಾರ ಮಾಡುವುದು ಸಾಮಾನ್ಯವಾಗಿತ್ತು. ಬಳಪವೋ, ನೀರ್ಕಡ್ಡಿಯೋ ಕಡಿಮೆ ಇದ್ದವರಿಂದ ಮನೆಯ ರುಚಿ ರುಚಿ ತಿಂಡಿಯನ್ನು ತರಿಸಿಕೊಂಡು, ಅವುಗಳ ಬದಲಾಗಿ ನಮ್ಮ ಒಂದೆರಡು ಬಳವನ್ನೋ ಅಥವಾ ನೀರ್ಕಡ್ಡಿಯನ್ನೋ ವಿನಿಮಯಮಾಡಿಕೊಳ್ಳುವುದು... ಇವೆಲ್ಲಾ ಒಂದು ತರಹದ ಸಂಭ್ರಮವೇ ಆಗಿದ್ದವು. ಮಂಗಳೂರಿನ ಗಾಂಧೀನಗರದ ಆ ಪುಟ್ಟ ಶಾಲೆಯಲ್ಲಿ ಕಲಿಯುತ್ತಿದ್ದ ಪ್ರತಿಮಕ್ಕಳಿಗೂ ನೀರ್ಕಡ್ಡಿಯ ಮಹತ್ವ ಚೆನ್ನಾಗಿ ತಿಳಿದಿತ್ತು. ಒಂದೆರಡು ದಿವಸಗಳಿಗಿಂತ ಜಾಸ್ತಿ ಉಳಿಯದ ಈ ನೀರ್ಕಡ್ಡಿ ಹಾಗೇ ಇಟ್ಟಲ್ಲಿ.. ಅಲ್ಲೇ ಕೊಳೆತು ನಾರುವುದೂ ಇತ್ತು. ಆದರೆ ಇಲ್ಲಿ..... ಬೆಂಗಳೂರಲ್ಲಿ.. ಹಾಗೇ ಈಗೀಗ ಮಂಗಳೂರಿನಲ್ಲೂ ಈ ನೀರೆಯನ್ನು ಕಾಣುವುದೇ ಅಪರೂಪವಾಗಿ ಹೋಗಿದೆ! ಬಹುಶಃ ನಮ್ಮ ಪಾಟೀಚೀಲದ ಜೊತೆ ಅದೂ ಅಸ್ತಂಗತವಾಗಿ ಹೋಗಿದೆಯೇನೋ!
ಓದು, ಬರಹ, ಆಟ, ಪಾಠ ಎಲ್ಲವೂ ಈಗ ಹೈಟೆಕ್! ಈಗಿನ ಮಕ್ಕಳು ಆಡೋದೇನಿದ್ರೂ ವಿಡಿಯೋ ಗೇಮ್, ಮೊಬೈಲ್, ಟ್ಯಾಬ್ಲೆಟ್... ಇತ್ಯಾದಿ. ಇಷ್ಟೆಲ್ಲಾ ಧಾಂ ಧೂಂ ನಡುವೆಯೂ ಇನ್ನೂ ಉಸಿರಾಡುತ್ತಿವೆ ನಮ್ಮ ಮುಟ್ಟಾಟ, ಕಣ್ಣಾ-ಮುಚ್ಚೆ, ಕೆರೆ-ದಡ, ಲಗೋರಿ! ಅವತ್ತೊಂದು ದಿನ ಚಿಕ್ಕಮ್ಮನ ಮಗಳಿಗೆ ನನ್ನ ಬಾಲ್ಯದ ಗುಂಗಿನಲ್ಲೇ... ಕಾಯಿ ತುರ್ದು ಖಾಲಿಯಾಗಿದ್ದ ಗೆರಟೆಯನ್ನು ಕೊಟ್ಟು.. "ನೀನು ಅದಿತಿ ಇದ್ರಲ್ಲಿ ಅಡಿಗೆ ಆಟ ಆಡ್ಕೊಳ್ಳಿ ಹೋಗಿ.." ಎಂದು ತಪ್ಪಿ ಹೇಳಿ ಬಿಟ್ನಾ....? ಅವಳು ತನ್ನ ಮೊಗದಲ್ಲಿ ತೋರಿದ ಆ ವಿಚಿತ್ರ ಭಾವವನ್ನು ಯಾವತ್ತೂ ಮರೆಯೋ ಹಾಗಿಲ್ಲ! "ಅಯ್ಯೋ ಅತ್ತೆ ಇದೂ ಒಂದು ಆಟದ ವಸ್ತುವಾ? ಕಾಯಿ ಜುಬ್ರೆಲ್ಲಾ ಅಲೀತಾ ಇದ್ದು.. ಇಶ್ಯೀ...ನನ್ನ ಹತ್ರ ‘ಕಿಚನ್ ಸೆಟ್’ ಇದೆ ಬಿಡು..." ಎನ್ನುತ್ತಾ ಕಸದಬುಟ್ಟಿಗೆ ಹಾಕಿ ತನಗಾಗಿ ತಂದಿದ್ದ ಕಲರ್ ಕಲರ್ ಅಡಿಗೆ ಮಾಡೋ ಆಟಿಕೆಗಳನ್ನು ಒಟ್ಟು ಹಾಕಿ ಕೂತಳು. ಖಾಲಿ ಗೆರಟೆಗಳಲ್ಲಿ ನೀರು, ಸೊಪ್ಪು, ಮಣ್ಣು ಎಲ್ಲವನ್ನೂ ಕದಡಿ.. ಮೈ-ಮೊಗ-ಮನಗಳ ತುಂಬೆಲ್ಲಾ ರಂಗು ತುಂಬಿಕೊಂಡು ಮಜಾ ಮಾಡುತ್ತಿದ್ದ ಆ ದಿನಗಳ ಭಾಗ್ಯ ಈಗಿನ ಪ್ಲಾಸ್ಟಿಗ್ ಯುಗದ ಮಕ್ಕಳಿಗೆಲ್ಲಿ ತಿಳೀಬೇಕು?!
ಆದರೆ ಒಂದಂತೂ ಸತ್ಯ.. ಅಂದಿಗೂ ಇಂದಿಗೂ ಅಜ್ಜನ ಮನೆಗೆ ಹೋಗೋ ಸಂಭ್ರಮ ಮಾತ್ರ ಬದಲಾಗಿಲ್ಲ. ನನ್ನ ಪುಟ್ಟಿಗೆ ವರ್ಷಕ್ಕಿರೋದು ಎರಡೇ ತಿಂಗಳು... ಎಪ್ರಿಲ್ ಮತ್ತು ಮೇ! ನಾವೂ ಅಷ್ಟೇ.. ಚಿಕ್ಕೋರಿದ್ದಾಗ, ಊರಿಗೆ ಹೋಗೋ ದಿನಕ್ಕಾಗಿ ಚಾತಕ ಪಕ್ಷಿಗಳಾಗುತ್ತಿದ್ದೆವು. ಪಕ್ಕದ್ಮನೆ ವೀಣ, ಮೂಲೆ ಮನೆ ಸಾತಿ, ಕೆಳ್ಗಿನ್ಮನೆ ಶಾರಿ, ಅತ್ತೆ, ಚಿಕ್ಕಮ್ಮಂದಿರ ಮಕ್ಕಳೆಲ್ಲಾ ಒಟ್ಟಿಗೆ ಸೇರಿ ಹಿತ್ತಲಿನಲ್ಲಿ ಸೇರಿದ್ರೆ ಮನೆಸೇರೋದು ಸೂರ್ಯ ಮುಳ್ಗೋ ಹೊತ್ತಲ್ಲೇ. ಊಟಕ್ಕೆ ಕರೆದು ಕರೆದು ಸುಸ್ತಾದ ಮನೆಯವರು.. ಕೊನೆಗೆ ನಮ್ಮ ಹಠಕ್ಕೆ ಮಣಿದೋ ಇಲ್ಲಾ ಪುಟ್ಟತ್ತೆಯ ಉದಾರತೆಗೆ ಒಪ್ಪಿಯೋ ಅಲ್ಲೇ ಬಾಳೆ ಎಲೆ ಹಾಕಿ ಊಟ ಬಡಿಸಿ ಹೋಗುತ್ತಿದ್ದರು. ತಿಂದಿದ್ದೆಷ್ಟೋ.. ಚೆಲ್ಲಿದ್ದೆಷ್ಟೋ!! ಇರುವೆ, ಹೆಗ್ಗಣ, ಹುಳ-ಹಪ್ಪಟೆಗಳಿಗೂ ಭೂರಿ ಭೋಜನ.
ಹುಣ್ಸೆ ಹಣ್ಣಿಗೆ ಉಪ್ಪು, ಸೂಜಿ ಮೆಣಸು ನುರಿದು, ಚೆನ್ನಾಗಿ ಮೊದಲೇ ತೊಳೆದು ಒಣಗಿಸಿಟ್ಟಿಕೊಂಡಿದ್ದ ತೆಂಗಿನ ಗರಿಗಳ ಕಡ್ಡಿಯ ತುದಿಗೆ ಸಿಕ್ಕಿಸಿ ಗೋಲ ಮಾಡಿ ಚೀಪ್ತಾ ಇದ್ರೆ ಸ್ವರ್ಗ ಅಂದ್ರೆ ಇದೇ ಇರ್ಬೇಕಪ್ಪಾ ಅನಿಸುತ್ತಿತ್ತು. ಹಿತ್ತಲಿನಲ್ಲಿದ್ದ ತೋತಾಪುರಿ ಮಾವಿನ ಕಾಯಿ, ಪುನ್ನೇರ್ಲ ಹಣ್ಣು, ಪೇರಳೆ ಹಣ್ಣು, ಜಾಂಬ್ಳೆ ಹಣ್ಣು, ಕುಸುಮಾಲೆ ಹಣ್ಣು ಎಲ್ಲಾ ನಮ್ಮ ಹೊಟ್ಟೆ ಸೇರಿ ಪಾವನವಾಗುತ್ತಿದ್ದವು. ಆವಾಗೆಲ್ಲಾ ಈ ಮಿಲ್ಕಿ ಬಾರು, ತರಾವರಿ ಲಾಲಿ ಪಾಪ್ಪು, ಕೊಕ್ಕೋ, ಕ್ರೀಂ ಬಿಸ್ಕಿಟ್ಟು ಎಲ್ಲಾ ಎಲ್ಲಿ ಸಿಗುತ್ತಿದ್ದವು? ಹೆಚ್ಚು ಅಂದರೆ ಲಿಂಬೆ ಪೆಪ್ಪರ್‌ಮೆಂಟು, ಪಾರ್ಲೆ ಬಿಸ್ಕಿಟ್ಟು ಮತ್ತು ಹಳದಿ ಬಣ್ಣದ ಲಿಮ್ಚಿ ಬಿಸ್ಕತ್ತುಗಳಷ್ಟೇ ನಮಗೆ ಅಪರೂಪಕ್ಕೊಮ್ಮೆ ದರ್ಶನಕೊಡುತ್ತಿದ್ದವು.
ಆಟದಲ್ಲೂ ಮನೆಯಾಟ ನಮ್ಮ ನೆಚ್ಚಿನ ಆಟವಾಗಿತ್ತು. ಅದರಲ್ಲೂ ರಾಜಕೀಯ ನಡೆಯುವುದು ಸಾಮಾನ್ಯವಾಗಿತ್ತು ಬಿಡಿ. ಯಾರು ಸೊಪ್ಪು, ನೀರು, ಮಣ್ಣು ಎಲ್ಲಾ ಒಟ್ಟು ಹಾಕಿ, ಮಡಲಲ್ಲಿ, ಹರಿದ ಪಂಜೆ, ಸೀರಿಯನ್ನು ಮರದ ರೆಂಭೆ, ಕೊಂಬೆಗಳಿಗೆಲ್ಲಾ ಸಿಕ್ಕಿಸಿ... ಮನೆಯೆಂಬ ಪುಟ್ಟ ಟೆಂಟ್ ಕಟ್ಟಿ ವ್ಯವಸ್ಥೆ ಮಾಡುವರೋ ಅವರೇ ಯಜಮಾನ. ಆ ದಿನವಿಡೀ ಅವರದೇ ಪಾರುಪತ್ಯ. ಅತೀ ಹೆಚ್ಚು ಗರಟೆ ಒಟ್ಟು ಹಾಕಿ ತಂದವಳೇ ಯಜಮಾನ್ತಿ. ಅಡುಗೆ ಮಾಡೋದು.. ಸುಳ್ಳೆ ಪುಳ್ಳೆ ತಿನ್ನೋದು.. ಅದ್ರಲ್ಲೇ ಮಜ ಸೂರೆ ಹೊಡೆದು ತೇಗೋದು. ದಿನಾ ಇದೇ ಆಟ ಆಡಿ ಬೇಜಾರದ ಒಂದು ದಿನ ಮದುವೆ ಆಟಕ್ಕೆ ತೊಡಗಿಕೊಂಡೆವು. ಮೇಕಪ್ ಮಳ್ಳಿ ಸುಬ್ಬಿ, ಮನೆಯಿಂದ ಆಯಿಯ ಪೌಡರ್, ಟಿಕಲಿ, ಲಾಲಿ ಎಲ್ಲಾ ಕದ್ದು ತಂದು.. ತನಗೆ ತಿಳಿದ ರೀತಿಯಲ್ಲಿ ಬಳಿದುಕೊಂಡು ಬಾರದ ನಾಚಿಕೆ ತಂದುಕೊಂಡು ಕೂತರೆ, ಸ್ವಲ್ಪ ಗಂಡುಬೀರಿ ಅನ್ನೋ ಪಟ್ಟ ಹೊತ್ತಿದ್ದ ಶಾಂತಿ ಪಂಜೆಯುಟ್ಟು ಮದುಮಗನಾದಳು. ಮದುವೆ ನಡೆಸುತ್ತಿದ್ದ ಪುರೋಹಿತ(ತಿ) ಶಾಂಭವಿ ತನಗೆ ಗೊತ್ತಿದ್ದ ಏನೋ ಒಂದು ಮಂತ್ರವನ್ನೇ ಹೇಳುತ್ತಿದ್ದಳಾ... ಇದ್ದಕ್ಕಿದ್ದಂತೇ ನಿಲ್ಲಿಸಿ "ಅಲ್ಲಾ ಮದ್ವೆ ಆದ್ಮೇಲೆ ಸಿಹಿ ಊಟ ಹಾಕವಲಿ.. ಖಾರನೂ ತಿಂಬಲೆ ಏನೂ ಇಲ್ಲೆ....... ಈ ಮಳ್ಳು ಮಣ್ಣು, ನೀರು ತಿನ್ನದೆಂತು?" ಎಂದಿದ್ದೇ ತಡ.. ನಾಚುತ್ತಿದ್ದ ಸುಬ್ಬಿ ಛಂಗನೆ ಹಾರಿ.. "ತಡಿ ಮೆತ್ತಿ ಮೇಲೆ ಹೋಳ್ಗೆ ಅಡಗ್ಸಿಟ್ಟಿದ್ದೋ.. ನಾ ನೋಡಿದ್ದಿ.. ತಗ ಬತ್ತಿ.." ಎಂದು ಲಂಗವೆತ್ತಿಕೊಂಡು ಓಡಿದರೆ... ಮದುಮಗ ಅಲ್ಲೇ ಇದ್ದ ಮಾವಿನ ಮರ ಹತ್ತಿ ತೋತಾಪುರಿಗೆ ಕೈ ಹಾಕಿದ್ದ. ಸರಿ ಎಲ್ಲರೂ ಸೇರಿ ತೋತಾಪುರಿಗೆ ಉಪ್ಪು, ಮೆಣಸು ನುರಿದು, ಹೋಳಿಗೆಗೆ ತುಪ್ಪ ಹಚ್ಚಿಟ್ಟು.. ತಿನ್ನಲೆ ಎಲ್ಲವನ್ನೂ ತಯಾರಿಟ್ಟುಕೊಂಡು ಮತ್ತೆ ಮದುವೆ ಮುಂದುವರಿಸಲು... ಎಲ್ಲರ ಹೊಟ್ಟೆಯಲ್ಲೂ ಸುಮೂಹೂರ್ತೇ ಸಾವಧಾನ!.
ಎಲ್ಲವನ್ನೂ ತಿಂದು ತೇಗಿ.. ಮನೆಗೆ ಬಂದಾಗ ಊಟದ ಸಮಯವೂ ಮೀರಿಹೋಗಿತ್ತು. ಹಸಿವಾದರೂ ಎಲ್ಲಿತ್ತು? ಮನೆಯವರ ಬೈಗುಳಕ್ಕೆ ಹೆದರಿ ತಿಂದ ಶಾಸ್ತ್ರ ಮಾಡಿ ಬಿದ್ದವರಿಗೆ ರಾತ್ರಿಯಾಗುತ್ತಿದ್ದಂತೇ ಮಾವಿನಕಾಯಿ, ಉಪ್ಪು, ಹುಳಿ, ಕಡಲೇಬೇಳೇಗಳು ತಮ್ಮ ನರ್ತನವನ್ನು ತೋರಿದ್ದವು. ಹೊಟ್ಟೆಯ ಗುಟ್ಟು ಹೊರಬರಲು ಎಲ್ಲರೂ ಸೇರಿ ಸಮಾ ಬೈದಿದ್ದರು.
ನಮ್ಮ ಈ ಮದುವೆಯಾಟದ ನೆನಪಾದಾಗೆಲ್ಲಾ ನೆನಪಿಗೆ ಬರೋದು ಮಕ್ಕೀಗದ್ದೆ ಪಾರ್ವತಿ ಮದುವೆಯ ಮಹಾ ಪ್ರಸಂಗ! ಆಗಿದ್ದಿಷ್ಟೇ... ಪಾತಕ್ಕನ ತಾಯಿ ಸೀತತ್ತೆಗೆ ತನ್ನ ಮಗಳನ್ನು ಬೊಂಬಾಯಿಯಲ್ಲಿದ್ದ ವರನಿಗೇ ಕೊಡಬೇಂಬ ಹುಚ್ಚು ಆಸೆ. ಹುಡುಕಿ ಹುಡುಕಿ ಸಾಗಾಗಿ ಕೊನೆಗೆ ಗುರುತಿದ್ದವರೋರ್ವರ ಮುಖಾಂತರ ಬೊಂಬಾಯಿಯಲ್ಲೇ ಕೆಲಸಕ್ಕಿದ್ದ ಗಂಡೇ ಸಿಕ್ಕಿ, ಮದುವೆ ನಿಕ್ಕಿಯಾಗಲು, ಸೀತತ್ತೆಯ ಕಾಲು ಭೂಮಿಯಮೇಲೇ ಇರಲಿಲ್ಲ. ಸ್ವತಃ ಪಾತಕ್ಕನಿಗೂ ಅಷ್ಟು ಖುಶಿಯಾಗಿರಲಿಕ್ಕಿಲ್ಲ. ಆ ಸಂತೋಷದಲ್ಲೇ ಮೈಮರೆತ ಸೀತತ್ತೆ...ತನ್ನ ನಾದನಿಯ ಬಳಿ "ಯಮ್ಮನೆ ಕೂಸಂತೂ ಪಾರಾತೇ ಲಲ್ತೆ... ಈಗೆಲ್ಲಾ ಎಲ್ಲಿ ಸಿಗ್ತು ಇಂಥಾ ಬಂಗಾರದಂಥಾ ಸಂಬಂಧ?" ಎಂದು ಹೇಳಿದ್ದೇ ತಡ ಇನ್ನೂ ಮದುವೆಯಾಗದೇ ಇದ್ದ ತನ್ನ ಮಗಳಿಗೇ ಅತ್ತಿಗೆ ಕೊಂಕಾಡಿದಳೆಂದು ತಿಳಿದ ಲಲಿತೆ ಒಳಗೊಳಗೇ ಕುದ್ದು, ಸರಿಯಾದ ಸಮಯಕ್ಕೆ ಕಾಯುತ್ತಿದ್ದಳು. ಆ ಸುಸಮಯ ಅವಳಿಗೆ ಸಿಕ್ಕಿದ್ದಾದರೂ ಎಂದು.. ಪಾತಿಯ ಮದುವೆಯ ದಿನವೇ! ಗೌರಿ ಪೂಜೆಯಾಗಿ.. ಧಾರೆಯಾಗಿ.. ಲಾಜ ಹೋಮ ಇನ್ನೇನು ಶುರುವಾಗಬೇಕೆನುವಾಗಲೇ.... ಆಚೀಚೆ ತಿರುಗಾಡುತ್ತಾ, ಸೀತತ್ತೆಯ ಬಳಿಯೇ ಸುಳಿದಾಡುತ್ತಾ ಮೆಲ್ಲನೆ ಎಂದೋ ಕೇಳಿದ್ದ ಹಾಡನ್ನು ಹಾಡತೊಡಗಿದಳು ಲಲಿತೆ....
"ಆಚೆ ಮನೆ ಶಣ್ಣು ಭಾವ ಮಗ್ಳ ಮದ್ವೆ ಮಾಡಿದ್ನಡ
ಮಹಾರಾಷ್ಟ್ರದ್ ಬದಿಗೆಲ್ಲೋ ಕೊಟ್ಟಿದ್ನಡ
ಆ ಬದಿಯ ಬ್ರಾಹ್ಮಣ್ರಡ ದಲ್ಲಾಳಿಂದ ಆಗಿತ್ತಡ
ತಿಂಗ್ಳೊಳ್ಗೆ ಕೂಸಿನ್ ಸುದ್ದಿ ಪತ್ತೆ ಇಲ್ಯಡ.."
ಬೇಕೆಂತಲೇ ತುಸು ಗಟ್ಟಿಯಾಗಿ ಹಾಡಿಕೊಳ್ಳುತ್ತಿದ್ದ ಲಲಿತೆಯ ಹಾಡು ಅಲ್ಲೇ ಇದ್ದ ಸೀತತ್ತೆಗಲ್ಲದೇ, ಈ ಮದುವೆಗೆ ರಾಯಭಾರಿಯಾಗಿದ್ದ ಆ ಸಂಬಂಧಿಕನ ಕಿವಿಗೂ ಬಿದ್ದು... ದೊಡ್ಡ ಗಲಾಟೆಯೇ ಆಗಿ.... ಕೊನೆಗೆ ಎಲ್ಲರೂ ಲಲಿತೆಯನ್ನೇ ದೂರಲು... ಸಿಟ್ಟಾದ ಆಕೆ ಊಟವನ್ನೂ ಮಾಡದೇ ಹೋದವಳು ತನ್ನ ಮಗಳ ಮದುವೆಯ ಕರೆಯೋಲೆಯನ್ನೂ ಕಳುಹಿಸಲಿಲ್ಲವೆಂಬುದೇ ಹಲವು ಕಾಲ ಸುದ್ದಿಯಲ್ಲಿತ್ತು. ಆವಾಗ ನಮಗೆಲ್ಲಾ ಅದೊಂದು ಅತಿ ರಂಜನಾತ್ಮಕ ಕಥೆಯಾಗಿತ್ತು. ಅಜ್ಜಿಯ ಬಾಯಲ್ಲಿ ಕೇಳಿದಷ್ಟೂ ಸಾಕಾಗದೇ ಮತ್ತೆ ಮತ್ತೆ ಕೆದಕಿ ಕೇಳಿ ಬೈಸಿಕೊಳ್ಳುತ್ತಿದ್ದೆವು.
ಮಣ್ಣು, ನೀರು, ಸೊಪ್ಪು, ಗೆರಟೆ ಇಂತಹ ನೈಸರ್ಗಿಕ ವಸ್ತುಗಳ ಜೊತೆಯೇ ಬೆಳೆದ ನಮ್ಮ ಬಾಲ್ಯದ ಆ ಸಂತಸ ತೃಪ್ತಿಯನ್ನೆಲ್ಲಾ ನೆನಸಿದಾಗ ನಮ್ಮ ಮಕ್ಕಳ ಪಾಲಿಗೆ ಇವೆಲ್ಲಾ ಎಂದೂ ಇಲ್ಲವಲ್ಲಾ ಎನ್ನುವ ನೋವು ಕಾಡುತ್ತಿರುತ್ತದೆ. ನಮ್ಮ ಕಪ್ಪು-ಬಿಳುಪು, ರಂಗು ರಂಗಿನ ಇಂದಿನವರಿಗೆ ಎಷ್ಟು ಪ್ರಿಯವಾಗಬಹುದು? "ಕಾಲಕ್ಕೆ ತಕ್ಕಂತೆ ಕೋಲ" ಅನ್ನೋದೊಂದು ಗಾದೆಯಿದೆ. ಅದು ನೂರಕ್ಕೆ ನೂರು ಸತ್ಯವೆನಿಸುತ್ತದೆ. ಆದರೂ... ನನ್ನಜ್ಜಿಯ ರಂಗುರಂಗಿನ ಕಥೆ ಕೇಳುವಾಗ ಹೇಗೆ ನನ್ನ ಕಣ್ಣರಳುತ್ತಿತ್ತೋ.. ಮನಸೊಳಗೆ ಕಲ್ಪನೆ ಮೂಡಿ ಮುದಗೊಳ್ಳುತ್ತಿದ್ದೆನೋ ಹಾಗೇ ನನ್ನ ಮಗಳೂ ಕಣ್ಣು ದೊಡ್ಡದಾಗಿ ಮಾಡಿ ನನ್ನ ಬಾಲ್ಯದ ಪರಾಕ್ರಮವನ್ನು ಕೇಳುವಾಗ, ಮತ್ತೆ ಮತ್ತೆ ಬಯಸಿ "ಹೂಂ...ಹೇಳು.. ನೀ ಚೌಡೀ ಹಿತ್ಲಲ್ಲಿ ಆಡಿದ್ ಕಥೆ ಹೇಳು...." ಎಂದು ಪೀಡಿಸುವಾಗ, ವಂಡರ್‌ಲಾ, ಪಿಲಿಕುಳಗಳಂತಹ ಕೃತಕ ನೀರಿನ ಧಾಮಗಳಿಗಿಂತ, ಊರಿನ ಚಿಕ್ಕ ತೊರೆ, ಹಳ್ಳ, ನದಿ, ಸಮುದ್ರ - ಇವೇ ಚೊಲೋವಾ ಅಮ್ಮಾ.. ಎಂದು ಕುಣಿದಾಡುವಾಗ.... - ಕೃತ್ರ್‍ಇಮತೆಯನ್ನಪ್ಪದ, ಸಹಜತೆಯನ್ನೊಪ್ಪುವ ಆ ಮುಗ್ಧ ಬಾಲ್ಯತನ ಯಾವ ಕಾಲ, ದೇಶ, ಊರಾದರೂ ಒಂದು ಸಾಮ್ಯತೆಯನ್ನು ಕಾಯ್ದುಕೊಂಡಿರುತ್ತದೆಯೇನೋ ಎಂದೆನಿಸುತ್ತದೆ. ತುಸು ಸಮಾಧಾನವಾಗುತ್ತದೆ. ಹಾಗಾಗಿ ಒಳಗೆಲ್ಲೋ ಹೂತು ಹೋಗಿರುವ ನೀರ್ಕಡ್ಡಿಯ ಕಂಪು ಆಗಾಗ ಎದ್ದು ಬಂದು ಉಸಿರಾಡುತ್ತಲೇ ಇರುತ್ತದೆ.
-ತೇಜಸ್ವಿನಿ ಹೆಗಡೆ.