ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;
ಎನೊ ತೀಡಲು ಏನೊ ತಾಡಲು ಹೊತ್ತಿ ಉರಿವುದು ಕಾತರ.
ಕಡುಗಪ್ಪು ಬಣ್ಣವನ್ನು ಹಂಡೆಯಲಿ ತುಂಬಿ ತುಂಬಿ ತಂದು, ಆಗಸದಲ್ಲಿ ಮಿನುಗುತ್ತಿದ್ದ ಒಂದೆರಡು ತಾರೆಗಳನ್ನೂ ತೋಯಿಸಿ, ನಿಶೆಯ ನಶೆಯನ್ನೇ ಹೊದ್ದು ಮಲಗಿಸಿದಂತಹ ರಾತ್ರಿ..... ಧೋ ಎಂದು ಬೀಳುತ್ತಿದ್ದ ಮಳೆಯ ಸದ್ದು, ಕಿಟಕಿಯ ಪಕ್ಕದಲ್ಲೇ ನೆಟ್ಟಿದ್ದ ಜಾಜಿ ಮೊಲ್ಲೆಯ ಕಂಪು, ಕೋಣೆಯ ಗೋಡೆಯಲ್ಲಿ ಕಥಕ್ಕಳಿ ಕುಣಿಯುತ್ತಿರುವ ಎರಡು ಜೋಡು ಮೊಂಬತ್ತಿಗಳ ನೆರಳುಗಳು, ಅವುಗಳ ಪಕ್ಕದಲ್ಲಿದ್ದ ಅಡಿಗರ ಸಮಗ್ರ ಕಾವ್ಯ, ಮನದೊಳಗೆ ರಿಂಗಣಿಸುತ್ತಿರುವ ನೆಚ್ಚಿನ ಕವಿತೆ ‘ಯಾವ ಮೋಹನ ಮುರಳಿ ಕರೆಯಿತೋ..’, ಇಷ್ಟೆಲ್ಲದರ ಸಾಥ್ ಇರುವಾಗ ತಾನು ಒಂಟಿಯಲ್ಲವೇ ಅಲ್ಲವೆಂದೆನಿಸಿತು ಆ ಕ್ಷಣಕೆ ಜಾನಕಿಗೆ. ಜೋರಾಗಿ ಬೀಸುತ್ತಿದ್ದ ಗಾಳಿಗೆ ಕಿರ್ರ್ ಎನ್ನುತ್ತಿದ್ದ ಕಿಟಕಿಯ ಸದ್ದು ಮಾತ್ರ ಮನದೊಳಗೆ ಗದ್ದಲವನ್ನೆಬ್ಬಿಸುತ್ತಿತ್ತು. ಕಿಟಕಿಯನ್ನು ಪೂರ್ತಿ ಮುಚ್ಚದಿದ್ದರೆ ನುಗ್ಗಿ ಬೀಸುತ್ತಿರುವ ಗಾಳಿಗೆ ಮೊಂಬತ್ತಿಗಳು ನಂದಿ, ಹೊರಗೆ ಚೆಲ್ಲುತ್ತಿರುವ ಕಪ್ಪು ಒಳಗಡಿಯಿಡುವ ಭಯ.... ಮುಚ್ಚಿದರೋ ಒಳ ತುಂಬಿಕೊಳ್ಳುತ್ತಿದ್ದ ಜಾಜಿ ಕಂಪು ಹೊರಗೇ ಸೋರಿ ಹೋಗುವ ತಳಮಳ. ದೀಪವಾರದಂತೇ ಹಳೆಯ ಪುಸ್ತಕದ ರಟ್ಟೊಂದನ್ನು ಅದರಸುತ್ತ ಅಡ್ಡವಿಟ್ಟು, ತುಸು ಹೊತ್ತಿನ ಮೊದಲು ಗೀಚಿದ್ದ ತನ್ನದೇ ಕವಿತೆಯ ಸಾಲುಗಳನ್ನು ಮತ್ತೆ ಓದತೊಡಗಿದಳು.
ಹರಿವ ಲಹರಿಗಳೆಲ್ಲ ಸೇರಿ
ಸೋನೆ ಮಳೆಯಾಗಿ ಸೋರಿ
ಮನದ ಧಗೆಯನೆಲ್ಲ ಹೀರಿ
ಎದೆಯೊಳಗಿಳಿದಾದಿನಗಳು...
"ಛೇ ಆಗೋದೇ ಹೀಗೆ... ಕಥೆ ಬರೆಯ ಹೊರಟಾಗೆಲ್ಲಾ, ಕವಿತೆ ಜನ್ಮಿಸಿಬಿಡುತ್ತಾಳೆ. ಎಲ್ಲಿಗೂ ಕಳುಹಿಸಲಾಗದಿದ್ದರೂ ಸರಿಯೇ... ತುರ್ತಾಗಿ ನಾನೀಗ ಕಥೆಯೊಂದ ಬರೆಯಲೇಬೇಕಿದೆ... ಏನಾದರಾಗಲಿ ಈ ರಾತ್ರಿಯ ನೀರವತೆಯಲಿ ಕಥೆಯೊಂದನ್ನು ಹುಟ್ಟಿಸಿಬಿಡಬೇಕು..." ಎಂದು ಹಠದಿಂದ ಜಾನಕಿ ಪೆನ್ನಿಗೆ ಕೈ ಹಚ್ಚುವಾಗಲೇ, ನಿಯತಿ ನೆನಪಾದಳು.
"ಜಾನು, ನೀ ಕಥೆ ಯಾಕೆ ಬರೆಯೋದು ಹೇಳು?" ಇಂತಹ ಒಂದು ಪ್ರಶ್ನೆಗೆ ಸಿದ್ಧವಿಲ್ಲದಿದ್ದವಳನ್ನು ಅಂದೊಮ್ಮೆ ನಿಯತಿ ಕೇಳಿದ್ದಳು. ಹೌದು... ಬರೆಯೋದು ಚಟವೋ, ಹವ್ಯಾಸವೋ ಇಲ್ಲಾ ಹೆಸರಿನ ಮೋಹವೋ...?! ಅವಳಿಗಿದು ಅಸ್ಪಷ್ಟ. "ನಾನು ಯೋಚಿಸಿಯೇ ಇಲ್ಲಾ.. ಬರೆಯೋದು ನನ್ನ ಅನಿವಾರ್ಯ ಕರ್ಮ.. ಬರೆದರಷ್ಟೇ ಏನೋ ತೃಪ್ತಿ... ಹಾಗಾಗಿ ಬರೀತಿನಿ ಅಷ್ಟೇ." ಆ ಕ್ಷಣಕ್ಕೆ ತೋಚಿದ್ದನ್ನು ಉತ್ತರಿಸಿದ್ದಳು. "ಊಹೂಂ.. ಕಂಡಿದ್ದು, ಕೇಳಿದ್ದನ್ನೆಲ್ಲಾ ಬರೆಯ ಹೋದರೆ, ತುಂಬಾ ಜೊಳ್ಳು, ಜಾಳು ಬರಹಗಳೇ ಹುಟ್ಟುತ್ತವೆ ಎಂದು ಅಜಿಂಕ್ಯ ರಾವ್ ಹೇಳಿದ್ದನ್ನು ಮರ್ತೇ ಬಿಟ್ಟೆಯಾ?" ಎಂದವಳ ಮಾತಿಗೆ ಜಾನಕಿ ಮೌನಿಯಾಗಿದ್ದಳು. ಹೂಂ.. ಅವಳೂ ಓದಿದ್ದಳು. ಅವಳ ನೆಚ್ಚಿನ ಲೇಖಕ.... ಅವಳ ಸ್ಪೂರ್ತಿ, ಪ್ರೇರಕ, ಅಜಿಂಕ್ಯ ರಾವ್‌ನ ಲೇಖನಗಳನ್ನು. ಆದರೆ ಅವನ ಇತ್ತೀಚಿನ ಪುಸ್ತಕ ಮಾತ್ರ ಅವಳನ್ನು ತುಂಬಾ ಕಾಡಿತ್ತು. "ಯಶಸ್ವಿ ಲೇಖಕನಾಗಲು ಹತ್ತು ಸೂತ್ರಗಳು".... ಅಬ್ಬಾ!! ಎಂತಹ ಮಾಂತ್ರಿಕ ಶೀರ್ಷಿಕೆಯದು! ಅದರಲ್ಲೂ ಮೊದಲ ಒಂಭತ್ತು ಸೂತ್ರಗಳಿಗಿಂತ ಹತ್ತನೆಯ ಸೂತ್ರವೇ ಅವಳನ್ನು ಬಹುವಾಗಿ ಚಿಂತನೆಗೆಳೆಸಿದ್ದು. ‘ಬರೆಯುವ ಮುನ್ನ, ಬರಹದ ವಿಷಯ ನಮ್ಮನ್ನು ಬಹು ಕಾಲದವರೆಗೆ ಕಾಡಬೇಕು... ಕಾದು ಕಾದು, ಕುದ್ದು, ಲಾವಾ ರಸವಾಗಿ ಹರಿದು, ಹೊರ ಹೊಮ್ಮಿದ ಬರಹ ಮಾತ್ರ ಚಿನ್ನದಂತೇ ಹೊಳೆಯುವುದು. ಕಾಡದ, ಮಾಗದ ಭಾವನೆಗಳನ್ನೆಲ್ಲಾ ಹೊರ ಚೆಲ್ಲಬೇಡಿ... ಅಕ್ಷರವನ್ನು ಕಾರಿ ಹೇವರಿಕೆ ತರಬೇಡಿ..’ ಎಂಬ ಅವನ ಕೊನೆಯ ಸೂತ್ರ ಓದಿದಾಗ ಮೊದಲು ಬಹು ಮೆಚ್ಚಿಕೊಂಡಿದ್ದಳು. ಅದನ್ನೇ ಮತ್ತೆ ಮತ್ತೆ ಓದಿ ಮನನ ಮಾಡಿಕೊಂಡಿದ್ದಳು. ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು ಲೈಕ್ಸ್‌ಗಳನ್ನು ಒತ್ತಿಸಿಕೊಂಡು ಹೆಮ್ಮೆಯ ನಗು ಬೀರಿದ್ದಳು. ಆದರೆ ಕ್ರಮೇಣ ಅವಳೊಳಗೇನೋ ಅರಿಯದಂತಹ ಬೇಗುದಿ, ತಳಮಳ ಅಸಹನೆ ತುಂಬ ತೊಡಗಿತ್ತು. ಅಂತಹ ದಿನಗಳಲ್ಲೇ ಅಜಿಂಕ್ಯನ ಪುಸ್ತಕದೊಳಗಿದ್ದ ಆ ಕೊನೆಯ ಸೂತ್ರದ ಪ್ರಸ್ತಾಪ ಮಾಡಿದ್ದಳು ನಿಯತಿ. ಇದರಿಂದಾಗಿ ಜಾನಕಿಯ ಒಳಗೊಳಗೇ ಹಬೆಯಾಡುತ್ತಿದ್ದ ಅಸಮ್ಮತಿಯ ಕಿಡಿಗೆ ಜೋರಾದ ಗಾಳಿ ಬೀಸಿದಂತಾಗಿತ್ತು.
ಹುಚ್ಚೆದ್ದ ಮಳೆಯ ಅಬ್ಬರವನ್ನೂ ಮೀರಿಸುವ ಗುಡುಗಿನ ಸದ್ದಿಗೆ ಕಿಟಕಿಯ ಗಾಜಿನಲ್ಲೂ ನಸು ಕಂಪನವಾಗಲು ಬೆಚ್ಚಿದಳು ಜಾನಕಿ. ಎದುರಿದ್ದ ಹಾಳೆಗಳು ಅಕ್ಷರಗಳ ಭಾರವಿಲ್ಲದೇ ಪಟ ಪಟನೆ ಹೊಡೆದುಕೊಳ್ಳಲು, ಅವುಗಳ ಮೇಲೆ ಪೇಪರ್‌ವೇಟ್‌ಅನ್ನು ಇಟ್ಟುಬಿಟ್ಟಳು. ಬಿದ್ದ ಭಾರಕ್ಕೆ ಹಾಳೆಗಳು ತೆಪ್ಪಗಾದರೂ ತುದಿಯಲ್ಲೇ ಅಲ್ಪ ಪ್ರತಿಭಟನೆ ತೋರಹತ್ತಿದವು. ಅವಳ ದೃಷ್ಟಿ ಅವುಗಳ ಮೇಲಿದ್ದರೂ, ಮನಸೊಳಗೆ ಮಾತ್ರ ಹತ್ತು ಹಲವು ಆಲೋಚನೆಗಳ ಮಂಥನ.
ತನಗೇಕೆ ಇತ್ತೀಚಿಗೆ ಒಂದಕ್ಷರವನ್ನೂ ಬರೆಯಲಾಗುತ್ತಿಲ್ಲವೋ...?! ಥೂ.. ಆ ಅಂಜಿಕ್ಯನ ಪುಸ್ತಕದ ಹಿಂದೆ ಬಿದ್ದು ತನ್ನೆಲ್ಲಾ ಆಲೋಚನಾ ಲಹರಿಯ ಸೂತ್ರವೇ ಹರಿದು ಹೋಗಿದೆಯೇನೋ?! ಹಾಗೆ ನೋಡ ಹೋದರೆ ಅಂವ ಹೇಳಿರುವಂತೇ ಮಾಡಲೆಣಿಸಿದರೆ, ಕಾದು ಕುದ್ದು ಕರಕಲಾದ ಅದೆಷ್ಟೋ ನೆನಪುಗಳನ್ನೆಲ್ಲಾ ಹಿಂಡಿ ಹೀರಿ ಹರಿಸಿ, ಅವುಗಳಿಂದ ಒಂದೆರಡು ಕಾದಂಬರಿಗಳನ್ನೇ ಸೃಷ್ಟಿಸಿಬಿಡಬಹುದು. ಸ್ಮೃತಿಯಿಂದುರುಳಿದ ಎಲ್ಲವನ್ನೂ ಸಮರ್ಥವಾಗಿ, ನೈಜರೂಪದಲ್ಲೇ ಹಿಡಿದಿಡುವ ಶಕ್ತಿ ಅಕ್ಷರಗಳಿಗಿವೆಯೇ? ಇದ್ದಿದ್ದರೆ ಇತಿಹಾಸವೇಕೆ ಇಷ್ಟು ಗೋಜಲಾಗಿರುತ್ತಿತ್ತು?!
ಕಳೆದುಹೋದ ಸಿಹಿ ಬಾಲ್ಯದ ನೆನಪುಗಳ ಸವಿದಷ್ಟೂ ಮಧುರವೇ. ಮಣ್ಣೊಳಗೆ ಹೊರಳಾಡಿ, ಒಳಗೆಲ್ಲಾ ಬೆಳಕಾಗಿ ಹಬ್ಬಿ ಬೆಳೆದ, ಅವರಿವರ ಮಾತುಗಳಿಗೆ ಕಿವಿಯಾಗದೇ ನಾನು ನಾನಾಗೇ ಉಳಿದ, ಗೇರು ಹಣ್ಣುಗಳ ಆ ಮತ್ತೇರಿಸುವ ಪರಿಮಳವ ಹೀರಿ... ಬಿದ್ದು ಬಿರಿದ ಹಲಸಿನ ತೊಳೆಗಳ ಎಳೆದೆಳೆದು ಹರಿದು ಮುಕ್ಕಿ, ನಾಳೆಯ ಪರಿವಿರದೇ... ನಿನ್ನೆಯ ನೆನೆದು ಕೊರಗದೇ, ನೆಮ್ಮದಿಯ ನಗುವ ನಕ್ಕಿದ್ದ ಆ ಬಾಲ್ಯ ಇಂದು ನನ್ನ ಕಾಡುತಿದೆ. ಬರೆದು ಬಿಡಲೇ ಒಂದು ಚೆಂದದ ಕಥೆಯ ಆ ಬಾಲ್ಯದ ಮೇಲೆಯೇ? ಮೊದಲ ಪ್ರೇಮ, ತಿರಸ್ಕಾರ, ಅವಮಾನ, ಪ್ರತೀಕಾರ ಎಲ್ಲವೂ ಇನ್ನೂ ಹಸಿ ಹಸಿಯಾಗಿವೆ. ಮಾಗಲು ಕಾಯದೇ ಕಥೆಯ ರೂಪ ಕೊಟ್ಟರೆ ಹೇಗೆ? ಅಪ್ಪ ಕಟ್ಟಿದ್ದ ಗಂಡ ಮೊದಲ ರಾತ್ರಿಯೇ ಷಂಡ ಎಂದು ತಿಳಿದಾಗ, ಒದ್ದೆಯಾಗಿ ತೊಟ್ಟಿಕ್ಕುತ್ತಿದ್ದ ಕೆನ್ನೆಗಳ ಮೇಲೆ ಅಂವ ಸುಟ್ಟ ಸಿಗರೇಟಿನ ಹೊಗೆ ಮೆತ್ತಿದ್ದನ್ನೇ ಬರೆಯಲೇ? ವಿಚ್ಛೇದನ ನಾನೇ ಕೊಟ್ಟರೂ, ಗಂಡ ಬಿಟ್ಟವಳೆಂದು ಹಿಂದೆ ಬಿದ್ದು ನಕ್ಕ ಸಮಾಜವ ಬಿಚ್ಚಿ ಬಯಲಾಗಿಸಲೇ? ಒಂಟಿ ಹೆಣ್ಣೆಂದರೆ ಬೀದಿ ಬದಿಯ ಮಾವಿನ ಮರದಂತೇ ಎಂದು ಪೋಲಿಯಾಗಿ ನಕ್ಕಿದ್ದ ಸಹೋದ್ಯೋಗಿಯ ಮೇಲೆಯೇ ಒಂದು ಕಥೆ ಬರೆದು ಸೇಡು ತೀರಿಸಿಕೊಂಡರೆ ಹೇಗೆ? ಅವೆಲ್ಲಾ ಹೋಗಲಿ... ‘ನಿನ್ನ ಕವಿತೆಗಳಲ್ಲಿ ಒಂದು ನಶೆಯಿದೆ... ನನ್ನ ಕಥೆಗಳಲ್ಲಿ ಅದಿಲ್ಲ ನೋಡು... ನಾನೂ ಒಂಟಿ.... ನನ್ನ ಕಥೆಗಳೊಳಗಿನ ಪಾತ್ರಗಳೂ... ನಿನ್ನ ಕವಿತೆಗಳ ನಿಶೆಯ ಸಾಮೀಪ್ಯ ನನಗೂ ಕೊಡುವೆಯಾ...?’ ಎಂದು ಒಕ್ಕಣ್ಣು ಮಾಡಿ ಪೆಕರನಂತೇ ನಕ್ಕು, ತನ್ನೆದೆಯೊಳು ನೂರು ಮುಳ್ಳುಗಳನ್ನೇಳಿಸಿದ್ದ ಆ ಪಡಪೋಶಿ ಕಥೆಗಾರನನ್ನೇ ಒಂದು ಪಾತ್ರವಾಗಿಸಿ, ಕುಪ್ರಸಿದ್ಧನನ್ನಾಗಿಸಬಹುದು! ಊಹೂಂ... ನಾನು ಬರೆಯೋದು ಬರಹದ ದಾಹ ನೀಗಿಸಿಕೊಳ್ಳಲು... ನನ್ನೊಳಗಿನ ನನ್ನ, ನನಗಾಗಿ ಬಯಲಾಗಿಸಿಕೊಳ್ಳಲು... ಬರೆಯೋ ತುಡಿತಕೆ ಯಾರ ಅಪ್ಪಣೆಯೂ, ಹಂಗೂ ಬೇಕಾಗಿಲ್ಲ..." ಎಂದು ಸ್ವ ಸಮಜಾಯಿಷಿಕೊಟ್ಟುಕೊಂಡಾಗ ತುಸು ನಿರಾಳವೆನಿಸಿತು ಜಾನಕಿಗೆ. ಹಾಗೇ ಸುಖಾಸೀನಕ್ಕೊರಗಿ ಕಣ್ಮುಚ್ಚಿದಳು. ಹೊರಗಿನ ಮಳೆಯ ಆರ್ಭಟ ಕೊಂಚ ತಗ್ಗಿತ್ತು.... ಆದರೆ ಒಳಗಿನ ಗದ್ದಲಗಳು ಅಬ್ಬರಿಸುತ್ತಲೇ ಇದ್ದವು.
ಆಗಸದ ಅಸ್ತಿತ್ವವನ್ನು ಆಗೀಗ ತೋರುತ್ತಿದ್ದ ಕೋಲ್ಮಿಂಚೊಂದು ಕಿಟಕಿಯ ಗಾಜಿನ ಮೇಲೆ ವಿಕಾರ ನರ್ತನಗೈದು ಝಗ್ಗನೆ ಬೆಳಕ ಹೊತ್ತಿಸಿ ಕ್ಷಣ ಮಾತ್ರದೊಳಗೆ ಮರೆಯಾಯಿತು. ಎದುರಿದ್ದ ಕನ್ನಡಿಯಲ್ಲಿ ಮಿಂಚಿನ ಬೆಳಕು ಒಂದು ಕ್ಷಣ ಅವಳ ಪ್ರತಿಬಿಂಬವನ್ನು ತೋರಿಸಲು, ಸತ್ತಮೇಲೆ ತಾನು ಒಂದೊಮ್ಮೆ ಪ್ರೇತವಾದರೆ ಹೀಗೇ ಕಾಣಿಸುವೆನೇನೋ ಎಂದು ಕಲ್ಪಿಸಿ, ಹುಚ್ಚುಚ್ಚಾಗಿ ನಕ್ಕಳು. ನಗುವಿನಲೆಗಳ ಬೆನ್ನಿಗೇ ಛಳಕ್ ಎಂದಿತು ಪರಾಶರನ ನೆನಪು. ಇಪ್ಪತ್ತು ವರುಷದ ಹಿಂದೆ ತಾನು ಪತಿಯ ಮನೆಯನ್ನು ತೊರೆದು, ಎಲ್ಲೆಡೆಯಿಂದ ಅವಮಾನಗಳನ್ನು ಅನುಭವಿಸಿ ಹತಾಶಳಾಗಿದ್ದಾಗ ಹೆಗಲು ಕೊಟ್ಟಂತೆ ನಟಿಸಿ ಎಲ್ಲವನೂ ಪಡೆದವ! "ಮದುವೆಯ ಸಂಕೋಲೆಯೇ ನಮಗೆ ಬೇಡ ಜಾನು... ನೀ ನನಗೆ, ನಾ ನಿನಗೆ ಸಾಕಲ್ಲಾ? ಯಾವುದೇ ಬಂಧನವಿರದ ಬಾಂಧವ್ಯ ನಮ್ಮದಾಗಲಿ.." ಎಂದೆಲ್ಲಾ ಬೆಣ್ಣೆ ಸವರಿ, ತನ್ನ ಅಳಿದುಳಿದ ಬುದ್ಧಿಗೂ ಮಂಕು ಎರೆಚಿದವ.... ಮದುವೆಯ ಪ್ರಸ್ತಾಪ ಬಂದಾಗ, ಅಪ್ಪ ಅಮ್ಮನ ನೇಣಿಗೆ ಹಾಕಲಾರೆ ಜಾನು, ಎಂದು ಗೋಳಾಡಿ, ನುಣ್ಣಗೆ ಜಾರಿಕೊಂಡವ.... ಪ್ರತಿ ದಿನ ನರಕ ಕಾಣಿಸಿದ್ದ ಒಲ್ಲದ ಗಂಡನನ್ನೂ ಅಷ್ಟು ಶಪಿಸಿದ್ದಳೋ ಇಲ್ಲವೋ.. ಪರಾಶರ ಮಾತ್ರ ಈಗಲೂ ನಿತ್ಯ ಅವಳ ಒಂದು ಹೊತ್ತಿನ ಕಣ್ಣೀರಿಗೆ ಕಾರಣನಾದವ!
ಅವೇಳೆಯಲ್ಲಿ ಅಮಾನುಷವಾಗಿ ಕಾಡುವ ಈ ಯಾತನಾಮಯ ನೆನಪುಗಳನ್ನೆಲ್ಲಾ ಹೊರದೂಕಿ ಈ ಕರಾಳ ರಾತ್ರಿಯೊಳಗೆ ತುರುಕಿ, ಶೂನ್ಯ ತುಂಬಿದ ಮನಸಿನೊಂದಿಗೆ ಹಾಯಾಗಿರುವಂತಾಗಿದ್ದರೆ ತಾನೂ ಬದುಕನ್ನು ಉತ್ಕಟವಾಗಿ ಜೀವಿಸುತ್ತಿದ್ದೆನೇನೋ ಎಂದು ಚಡಪಡಿಸಿದಳು. ಅದೆಷ್ಟೋ ಹೊತ್ತಿನಿಂದ ಎಲ್ಲೋ ನೆಟ್ಟಿದ್ದ ದೃಷ್ಟಿ ಹಾಗೇ ಕಿಟಿಕಿಯ ಮೇಲೆ ಬೀದ್ದಿತು. ಗಾಳಿಗೆ ಓರೆಯಾಗಿದ್ದ ಕಿಟಕಿಯ ಬಾಗಿಲುಗಳನ್ನು ಒಮ್ಮೆಲೇ ಸಂಪೂರ್ಣ ತೆಗೆದು ಬಿಡಲು, ಕತ್ತಲೆಗೆ ಹಬ್ಬವಾಯಿತು. ಜಾಜಿ ಮೊಲ್ಲೆಯ ಕಂಪು ಮಸ್ತಿಷ್ಕವನ್ನೇರಿ ಕುಳಿತು, ಮನದೊಳಗೆ ಹೂತಿಟ್ಟಿದ್ದ ಭೂತಗಳಿಗೆಲ್ಲಾ ಉಸಿರು ತುಂಬತೊಡಗಿತು.
ಒಮ್ಮೊಮ್ಮೆ ಈ ನೆನಪುಗಳೇ ಹೀಗೆ.... ಕಾದ ಬಾಣಲೆಯೊಳಗಿನ ಎಣ್ಣೆಗೆ ಹನಿ ನೀರು ಬಿದ್ದು ಸಿಡಿವಂತಾದರೆ, ಕೆಲವೊಮ್ಮೆ, ಕೊಳದೊಳಗೆ ಹರಿದಾಡುವ ಕಿರು ಮೀನುಗಳು ಕಾಲ್ಬೆರಳುಗಳ ಕಚ್ಚಿ ಹಿತವಾದ ನೋವನೀವಂತೆ! ಈ ಅನುಭೂತಿಗಳದೆಷ್ಟು ವಿಭಿನ್ನ! ಊಹೂಂ.. ಯಾಕೋ ಇಂತಹ ಅನುಭವಗಳನ್ನು ನೆಚ್ಚಿ, ತನ್ನಿಂದ ಇನ್ನು ಏನನ್ನೂ ಗಟ್ಟಿಯಾಗಿ ಬರೆಯಲಾಗದೇನೋ.... ಎಂದೆನಿಸಿ ಅಧೀರಳಾದಳು ಜಾನಕಿ. ಬದುಕೆಂಬ ಹೊಲದಲ್ಲಿ ಕಾಳಿಗಿಂತ ಜೊಳ್ಳೇ ಹೆಚ್ಚಾದರೆ...? ಎಂಬ ಪ್ರಶ್ನೆಯೇ ಬೃಹದ್ರೂಪ ಪಡೆದಂತಾಗಿ ಸುಸ್ತಾದಳು.
ತಾನೇ ಪೆದ್ದಿ.... ಅಜಿಂಕ್ಯ ಏನು ಬರೆದರೂ, ಓದಿದಾಕ್ಷಣ ಗೀತಾಸಾರದಂತೇ ಪಠಿಸಿ, ಕುಣಿದು ಕುಪ್ಪಳಿಸಿದೆ.... ಹೊಳೆಯುವುದೆಲ್ಲಾ ಚಿನ್ನವಲ್ಲ ಎಂದು ಅವನೇ ಹೇಳಿದ್ದನ್ನು ಮರೆತೇ ಬಿಟ್ಟೆ. ಕಾಡಬೇಕಂತೆ, ಕುಲುಮೆಯಲ್ಲಿ ಕಾಯಬೇಕಂತೆ.... ಹಾಗೆ ಕರಗಿ, ಕರಟಿಹೋದ ಮನಸಿನ ಅವಶೇಷಗಳನ್ನು ವಿಸರ್ಜಿಸುವ ಸಮಯದಲ್ಲಿ, ಬೇಯುವ ಕರ್ಮ ತನಗೇಕೆ? ಹೋದರೆ ಹೋಗಲಿ... ಹುಟ್ಟಲಾರದ ಕಥೆಯ ಹಂಗು ತನಗೂ ಬೇಕಾಗಿಲ್ಲ. ಅವಳೊಳಗೆದ್ದ ಅನೇಕ ಪ್ರಶ್ನೆಗಳಿಗೆ ಅವಳೇ ಉತ್ತರಿಸಲು ಸನ್ನದ್ಧಳಾದಳು. ಏನೋ ಹುಕ್ಕಿ ಒಳಗಿಂದೆದ್ದು ಮನವನ್ನೆಲ್ಲಾ ಅವಸರಿಸುತ್ತಿದ್ದಂತೇ, ಪೇಪರ್‌ವೇಟ್ ತೆಗೆದು, ಖಾಲಿಹಾಳೆಗಳ ಮೇಲೆ ನೀಲಿ ಶಾಯಿಯಲ್ಲಿ ದುಂಡಗೆ ಬರೆಯತೊಡಗಿದಳು......
ಒಂದೊಂದು ಕ್ಷಣಗಳನೂ ಸೆರೆ ಹಿಡಿದು
ಕಥೆಯಾಗಿಸಿ, ಅದರೊಳಗೆ
ಬಂಧಿಯಾಗ ಹೊರಟೆ,
ನೆನಪುಗಳು ಸಾಸಿರ ಮೈಲಿ ವೇಗದಲಿ ಸಾಗಲು,
ವಿಮೋಚನೆಗೆ ಕಾದ,
ಅಹಲ್ಯೆಯಂತಾದೆ.
ಬರೆದ ಮೇಲೆ ಮತ್ತೊಮ್ಮೆ ಓದಿಕೊಂಡಳು. ಅಹಲ್ಯೆ ಪದದ ಮೇಲೆ ಅವಳ ದಿಟ್ಟಿ ನಿಂತು ಹೋಯಿತು. ರಾಮನ ಪಾದ ಸ್ಪರ್ಶದಿಂದ ಅಹಲ್ಯೆಗೆ ಮುಕ್ತಿ ಸಿಕ್ಕಿತೆನ್ನುವರು....ಹೌದೆ?! ಶಿಲೆಯಾಗಿದ್ದಾಗಲೇ ಆಕೆ ಬಹು ಸುಖಿಯಾಗಿದ್ದಳಲ್ಲವೇ? ರಾಮ ಉಳಿಸಿದ್ದು ಅಹಲ್ಯೆಯನ್ನೋ ಇಲ್ಲಾ ತನ್ನೊಳಗಿನ ದೈವತ್ವದ ಮೇಲಿದ್ದ ನಂಬಿಕೆಯನ್ನೋ? ಯಾಕೋ ಅವಳಿಗೆ ಕತ್ತಲು ಅಸಹನೀಯವೆನಿಸಿ, ಬೆಳಕು ಬೇಕೆಂದೆನಿಸಿತು. ಕಿಟಕಿಗಳನ್ನು ಮುಚ್ಚಿ, ಮೊಂಬತ್ತಿಗಳನ್ನು ಹಚ್ಚಿ, ಟೇಬಲ್ಲಿನ ಮೇಲಿಡಲು ಹೋದವಳಿಗೆ ಅದೇ ಕನ್ನಡಿ ಅವಳ ಮೊಗದ ನೈಜ ಪ್ರತಿಬಿಂಬವನೇ ತೋರಿಸಿತು. ನೆನಪುಗಳ ಕವಾಯತಿನಿಂದ ತನ್ನನ್ನು ತಾನು ಎಳೆದು ಹೊರತಂದ ಜಾನಕಿ ಮತ್ತೆ ತನ್ನನ್ನೇ ದಿಟ್ಟಿಸತೊಡಗಿದಳು. ಅಷ್ಟು ಹೊತ್ತೂ ಬೀಸುತ್ತಿದ್ದ ಗಾಳಿಗೆ ಅಮಲು ಹತ್ತಿದಂತೇ ಅತ್ತಿತ ಸಣ್ಣಗೆ ಓಲಾಡುತ್ತಿದ್ದ ಮೊಂಬತ್ತಿಯ ಬೆಳಕು, ಕನ್ನಡಿಯೊಳಗೆ ಹೊಕ್ಕು ತನ್ನೆದೆಯ ಮಟ್ಟದಲ್ಲಿ ಸ್ಥಾವರವಾಗಿದ್ದು ಕಂಡು ಏನೋ ಅರಿಯದ ಅನಿರ್ವಚನೀಯ ಅನುಭೂತಿಯಾಗಲು, ರೋಮಾಂಚಿತಳಾದಳು. ಕಂಡಿದ್ದೆಲ್ಲಾ ಭೂತಕ್ಕೆ ಸೇರಿದೆ.... ಕಾಣೋದು ಅನಿಶ್ಚಿತವಾಗಿದೆ... ಈಗ, ಈ ಕ್ಷಣ ಕಣ್ಗಳ ತಂಪಾಗಿಸುವ ಬೆಳಕಿನಡಿಯಲ್ಲಿ ತನ್ನನ್ನು ತಾನು ಕಂಡುಕೊಳ್ಳುತ್ತಿರುವ ಈ ಹೊತ್ತು ಮಾತ್ರ ಸುಂದರ ಸತ್ಯ ಎಂದೆನಿಸಿದ್ದೇ ಅವ್ಯಕ್ತ ಪ್ರಶಾಂತತೆ ಅವಳಲ್ಲಿ ತುಂಬತೊಡಗಿತು.
*****
[ಹೊಸದಿಗಂತ ಸಾಪ್ತಾಹಿಕದಲ್ಲಿ ಪ್ರಕಟಿತ]