ಸಮಾಜ ಮತ್ತು ನಾವು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಮಾಜ ಮತ್ತು ನಾವು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜೂನ್ 3, 2019

ಅಳಿವು ಉಳಿವಿನ ನಡುವೆ...

ನಾನು ಶಾಲೆಗೆ ಹೋಗುವ ಸಮಯದಲ್ಲಿ ಆಗಷ್ಟೇ ದಕ್ಷಿಣ ಕನ್ನಡದಲ್ಲಿ ಇಂಗ್ಲೀಶ್ ಮೀಡಿಯಮ್ ಗಾಳಿ ಬೀಸತೊಡಗಿತ್ತು.  ಹೈಸ್ಕೂಲಿಗೆ ಬರುವಷ್ಟರಲ್ಲಿ ತುಸು ಬಲಪಡೆದುಕೊಂಡೇ ಬೀಸತೊಡಗಿತ್ತು. ಆದರೂ ಬಹುತೇಕ ನನ್ನ ಓರಗೆಯವರು ಹತ್ತನೆಯ ತರಗತಿಯವರೆಗೂ ಓದಿದ್ದು ಕನ್ನಡ ಮೀಡಿಯಮ್ಮಲ್ಲೇ. ಪ್ರಥಮ ಭಾಷೆ ಕನ್ನಡ, ದ್ವಿತೀಯ ಇಂಗ್ಲೀಶ್ ಮತ್ತು ತೃತೀಯ ಹಿಂದಿ – ಇದು ನಾನು ಕಲಿತ ಶಾಲೆಯಲ್ಲಿದ್ದಿದ್ದು. ಕಾರಣ ಅದೊಂದು ಕ್ರಿಶ್ಚಿಯನ್ ಶಾಲೆಯಾಗಿತ್ತು ಮತ್ತು ಅಲ್ಲಿ ನನ್ನ ಕಲಿಕೆ ಅನಿವಾರ್ಯವಾಗಿತ್ತು. ಆದರೆ ನಮ್ಮ ಮನೆಯಲ್ಲೋ ಸಂಸ್ಕೃತದ ವಾತಾವರಣವಿತ್ತು. ನನ್ನ ತಂದೆ ಸಂಸ್ಕೃತ ಪ್ರೊಫೆಸರ್. ನನಗೋ ಮೊದಲಿನಿಂದಲೂ ಕನ್ನಡ ಪುಸ್ತಕಗಳ ಓದು ಹಾಗೂ ಹಿಂದಿ ಶಾಯರಿ/ಗಝಲ್ಗಳ ಹುಚ್ಚು ಇದ್ದುದರಿಂದ ಆಯ್ಕೆಗಳಿಲ್ಲದೇ ದೊರಕಿದ್ದೇ ನನ್ನ ಐಚ್ಛಿಕ ವಿಷಯಗಳಾಗಿದ್ದವು ಅವು! ಆದರೆ ನನಗೆ ಸಂಸ್ಕೃತದ ಮೇಲೆ ಅಪಾರ ಗೌರವ ಮತ್ತು ಆದರ. ಕಾರಣ, ಅಪ್ಪ ಎಂದೂ ಅದನ್ನು ನಮ್ಮ ಮೇಲೆ ಹೇರಲು ಹೋಗಿರಲಿಲ್ಲ. ಸಂಸ್ಕೃತ ಶ್ಲೋಕ, ಗೀತಾ ಪಠಣ, ಸೂಕ್ತಗಳು, ಸಹಸ್ರನಾಮಗಳು ಏನೇ ಇದ್ದರೂ ಅದನ್ನು ನಾವೇ ಆಸಕ್ತಿಯಿಂದ ಕೇಳಿ ಕಲಿತದ್ದು. (ಕಲಿಸಲು ಅಪ್ಪನಿಗೆ ಪುರುಸೊತ್ತೂ ಇರಲಿಲ್ಲ ಅನ್ನಿ. ಆದರೆ ಈಗ ಮೊಮ್ಮಕ್ಕಳಿಗೆ ಆಸಕ್ತಿಯಿಂದ ಬಿಡುವಾಗಿ ಎಲ್ಲಾ ಪಾಠ ಮಾಡುತ್ತಿದ್ದಾರೆ ಎಂಬುದೇ ಸಂತೋಷದ ಸಂಗತಿ.)
ನಾವು ಹತ್ತನೆಯ ತರಗತಿಯವರೆಗೂ ಮೂರೂ ಭಾಷೆಗಳನ್ನೂ ಕಲಿಯಬೇಕಿತ್ತು. ಮತ್ತು ಆ ಮೂರೂ ಭಾಷೆಯ ಅಂಕಗಳು ಕೊನೆಯ ಪರೀಕ್ಷೆಯ ಅಂಕಕ್ಕೆ ಸೇರ್ಪಡೆಯಾಗುತ್ತಿದ್ದವು (ನೆನಪಿರಲಿ.. ಈಗ ಹಾಗಿಲ್ಲ! ಲೇಖನದ ಕೊನೆಯಲ್ಲಿ ವಿವರಿಸಿದ್ದೇನೆ). ಆ ಸಮಯದಲ್ಲಿ ಹಲವು ವಿದ್ಯಾರ್ಥಿಗಳು ಸಂಸ್ಕೃತ ತೆಗೆದುಕೊಳ್ಳುತ್ತಿದ್ದು ಹೆಚ್ಚಿನ ಮಾರ್ಕ್ಸ್ ಸುಲಭದಲ್ಲಿ ಸಿಗುತ್ತದೆ ಎಂಬುದಕ್ಕೇ ಆಗಿರುತ್ತಿತ್ತು! (ಇದೇ ಈಗಲೂ ಇದೆ.) ಆಗ ಆಸಕ್ತಿಯಿಂದ ತೆಗೆದುಕೊಳ್ಳುವವರಿದ್ದಿರಲಿಲ್ಲ ಎಂದಲ್ಲ. ಆದರೆ ಹೆಚ್ಚಿನವರ ಆಲೋಚನಾ ಕ್ರಮ ಹೀಗೇ ಇದ್ದಿತ್ತು. .ಇದಕ್ಕೆ ಕಾರಣ ಕನ್ನಡದಲ್ಲಿ ಬರೆಯಲು ಬಹಳವಿರುತ್ತಿತ್ತು ಮತ್ತು ದೊಡ್ಡದೊಡ್ಡ ಉತ್ತರಗಳನ್ನು ಬರೆಯಬೇಕಾಗಿತ್ತು. ಸಂಸ್ಕೃತ ಒಂದು ಪುಟ್ಟ ಪ್ಯಾರಾ ನಮ್ಮ ಕನ್ನಡದ ಎರಡು ಪೇಜಿಗೆ ಸಮನಾಗಿರುತ್ತಿದ್ದುದೂ ಇದೆ! ಇರಲಿ… ಅದು ಗತಕಾಲ ಎಂದುಕೊಳ್ಳೋಣ. ಆದರೆ ಈಗ?
ನನ್ನ ಮಗಳು ಇಂಗ್ಲೀಶ್ ಮೀಡಿಯಮ್.. ಆದರೆ ಎರಡನೇ ಭಾಷೆಯಾಗಿ ಕನ್ನಡ ಕೊಡಿಸಿದ್ದೇನೆ. ಮೂರನೆಯ ಭಾಷೆ ಅನಿವಾರ್ಯವಾಗಿ ಹಿಂದಿಯಾಗಿದೆ. ಹಿಂದಿ ನನಗೆ ಬಹಳ ಅಚ್ಚುಮೆಚ್ಚು...ನಿರರ್ಗಳ. ಅಲ್ಲದೇ ಪಂಜಾಪು, ಬಿಹಾರಿ, ಹಿಂದಿ ಗ್ರಾಮ್ಯ ಭಾಷೆಯೂ ಗೊತ್ತು. ಆದರೆ ನನ್ನ ಮಗಳಿಗೆ ಅಷ್ಟಕಷ್ಟೇ. ಅವಳಿಗೆ ಇಂಗ್ಲೀಶ್, ಸಂಸ್ಕೃತ ಮತ್ತು ಕನ್ನಡದಲ್ಲಿ ಆಸಕ್ತಿ. ಸದ್ಯ ಕನ್ನಡ ಮತ್ತು ಇಂಗ್ಲೀಶ್ ಎರಡು ಭಾಷೆಯೂ ಲೀಲಾಜಾಲ. ಆದರೆ ಅವಳಿಗೆ ಆಸಕ್ತಿ ಇದ್ದರೂ ಸಂಸ್ಕೃತವನ್ನು ಮೂರನೇ ಭಾಷೆಯಾಗಿ ತೆಗೆದುಕೊಳ್ಳುವ ಆಯ್ಕೆ ಸಿಕ್ಕಿಲ್ಲ! “ಅನಿವಾರ್ಯ ಎಂದಾದಮೇಲೆ ಅದನ್ನೇ ಸವಾಲಾಗಿ ಸ್ವೀಕರಿಸು.. ಒಂದೊಳ್ಳೆ ಭಾಷೆ ಕಲಿತ ಸುಖ, ಹಾಗೂ ಆ ಭಾಷೆಯಿಂದ ನಿನ್ನ ಓದಿನ ವಿಸ್ತಾರ ಹೆಚ್ಚಾಗುತ್ತದೆ” ಎಂದು ತಿಳಿಸಿ ಹೇಳಿದ್ದೇನೆ. ‘ಆನೋ ಭದ್ರಾಃ ಕೃತವೋಯಂತು ವಿಶ್ವತಃ”(ಒಳ್ಳೆಯ ಜ್ಞಾನ ಜಗತ್ತಿನಿಲ್ಲೆಡೆಯಿಂದ ನಮ್ಮಲ್ಲಿಗೆ ಹರಿದು ಬರಲಿ) ಎಂಬ ಸುಭಾಷಿತದಂತೇ ಅರಿವನ್ನು ಹೆಚ್ಚಿಸಿಕೊಳ್ಳಲು ಮೂರಲ್ಲ ಮುನ್ನೂರು ಭಾಷೆ ಕಲಿತರೂ ಕಡಿಮೆಯೇ. ಹಾಗೆಂದು ಅದು ಒತ್ತಾಯದಲ್ಲಿರಬಾರದು. ಆಯ್ಕೆ ನಮ್ಮದಾಗಿರಬೇಕು. ಅವಶ್ಯಕತೆ ಮತ್ತು ಅಗತ್ಯತೆ ಆಸಕ್ತಿಗಿಂತ ಪ್ರಬಲವಾದದ್ದು. ಅವಶ್ಯಕತೆ ಮತ್ತು ಅಗತ್ಯತೆಯನ್ನು ಹುಟ್ಟುಹಾಕಬೇಕು ಮತ್ತು ಅದು ಅಭಿಮಾನದಿಂದ (ದುರಭಿಮಾನವಲ್ಲ) ಮಾತ್ರ ಸಾಧ್ಯ. ಕನ್ನಡ ಕಲಿಕೆ ಅನಿವಾರ್ಯ ಮತ್ತು ಅದು ನಮ್ಮ ಅಗತ್ಯತೆ ಹಾಗೂ ಬದ್ಧತೆ ಎಂಬ ಮನೋಭಾವ ಕನ್ನಡಿಗರಲ್ಲಿ ಬರಬೇಕು. ಹಾಗೆ ಬಂದಾಗ ಮಾತ್ರ ಪ್ರೀತಿಯಿಂದ ಮಕ್ಕಳೂ ಕಲಿಯಲು ಸಾಧ್ಯ. ಆ ವಾತಾವರಣ ಈಗ ಮನೆಯಲ್ಲಿ ಮತ್ತು ಶಾಲೆಯಲ್ಲಿ ಇದೆಯೇ?
ಕಲಿಕೆ ಹೇರುವಂತಿರಬಾರದು ನಿಜ.. ಹಾಗೆಂದು ಭಾಷಾ ಹೇರಿಕೆಯನ್ನು ಗಣಿತ, ಸಮಾಜವಿಜ್ಞಾನ ಇನ್ನಿತರ ಪಠ್ಯಕ್ಕೆ ಹೋಲಿಸಲಾಗದು. ಕಾರಣ, ಅವುಗಳನ್ನು ಅವಶ್ಯ ಬಂದಾಗ ಕಲಿಯಲು ಸಾಧ್ಯವೇ? ಒಂದು ಹಂತದವರೆಗಾದರೂ ಸರಿಯೇ.. ಶಿಕ್ಷಕರು ಮತ್ತು ಪಾಲಕರು ಸೇರೆ ‘ನೋಡಿ ಮಕ್ಕಳೆ ಹೀಗೆಲ್ಲಾ ವಿಷಯಗಳಿವೆ… ಯಾವುದರಲ್ಲಿ ನಿಮಗೆ ಆಸಕ್ತಿ ಎಂದು ಕಂಡುಕೊಳ್ಳಿ’ ಎಂದೆನ್ನಲಾದರೂ ಅವನ್ನೆಲ್ಲಾ ಹರವಿ ಅವರ ಮುಂದೆ ಹಿಡಿದು ಶಿಕ್ಷಕರು ಕಲಿಸಲೇಬೇಕಾಗುತ್ತದೆ. ಅದೇ ಪ್ರಸ್ತುತ ಹತ್ತನೆಯ ತರಗತಿಯವರೆಗೂ ಆಗುತ್ತಿರುವುದು. ಆದರೆ ಇಲ್ಲೂ ಸಮಸ್ಯೆಯಿದೆ. ಎಂಟನೆಯ ತರಗತಿಯ ಹೊತ್ತಿಗೇ ಇಂದಿನ ಎಷ್ಟೋ ಮಕ್ಕಳಿಗೆ ತಮ್ಮ ಆಸಕ್ತಿಯನ್ನು ಕಂಡುಕೊಳ್ಳಲು ಸಾಧ್ಯವಿರುತ್ತದೆ. ಎಷ್ಟೋ ಮಕ್ಕಳಿಗೆ ಗಣಿತ, ವಿಜ್ಞಾನ ಇಷ್ಟವಿರುವುದೇ ಇಲ್ಲ. ಆದರೆ ಅವರು ಭಾಷಾ ಕಲಿಕೆಯಲ್ಲು ಮುಂದಿರುತ್ತಾರೆ. ಇನ್ನು ಕೆಲವರು ಇದರ ವಿರುದ್ಧ. ಹೀಗಾಗಿ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತಿದೆ. ಇನ್ನು ನಮ್ಮ ಇಂದಿನ ಶಿಕ್ಷಣದ ಗುಣಮಟ್ಟ ಹೇಗಿದೆ? ಶೈಕ್ಷಣಿಕ ವ್ಯವಸ್ಥೆ ಹೇಗೆ ಅಸ್ತವ್ಯಸ್ತವಾಗಿದೆ? ಎಂಬುದೆಲ್ಲಾ ಬೇರೆಯ ವಿಷಯ ಬಿಡಿ. ಆದರೆ ಸಮಾಜವಿಜ್ಞಾನ, ವಿಜ್ಞಾನ, ಗಣಿತದಂಥ ಪಠ್ಯಗಳನ್ನು ಒಬ್ಬರೇ ಕಲಿಯುವುದು ಕಷ್ಟ ಆದರೆ ಭಾಷೆಯನ್ನು ನಾವು ಯಾವುದೇ ಸಮಯದಲ್ಲೂ ಒಬ್ಬಂಟಿಯಾಗಿಯೂ ಕಲಿಯಬಹುದು. ಉದಾಹಣೆಗೆ…
ನನ್ನ ಮಗಳು ತನ್ನ ಮಾವನಿಂದ ಮಾಹಿತಿ ಪಡೆದು ಟ್ಯಾಬ್ಲೆಟ್ಟಿನಲ್ಲಿ ಈಗ ಅದ್ಯಾವುದೋ ಹೊಸ ಆಪ್ ಅನ್ನು ಹಾಕಿಸಿಕೊಂಡು ಕಲಿಯುತ್ತಿದ್ದಾಳೆ. ಅದೇನೋ ಡ್ಯುವೆಲ್ ಲ್ಯಾಗ್ವೆಂಜ್ ಲಿಂಕ್ ಅಂತೆ (Duolingo)… ಅದರಲ್ಲಿ ಜಗತ್ತಿನ ಯಾವುದೇ ಭಾಷೆಯನ್ನು ಸುಲಭದಲ್ಲಿ ನಾವು ಕಲಿಯಬಹುದು. ಸದ್ಯ ಅದೇನೋ ಜರ್ಮನ್ ಪದಗಳನ್ನು ಹೇಳಿ ನನ್ನ ಬೆರಗಾಗಿಸುತ್ತಿದ್ದಾಳೆ. ಟೆಕ್ನಾಲಜಿಯನ್ನು ನಾವು ಬಳಸಿಕೊಳ್ಳಬೇಕು ಅದು ನಮ್ಮನ್ನಲ್ಲ. ಈ ಮೂಲಕ ನಾವು ಭಾಷೆಯನ್ನು ಮಕ್ಕಳಿಗೆ ಅವರಿಗೆ ಬೇಕಾದಾಗ ಬೇಕಾದ ರೀತಿಯಲ್ಲೇ ಕಲಿಸಬಹುದು. ಕಲಿಕೆ ಇಷ್ಟದ್ದಾದಾಗ ಸುಲಭ.. ಕಷ್ಟದ್ದಾದರೆ, ಹೇರಿಕೆಯಾದರೆ ಕಷ್ಟ. ಈ ನಿಟ್ಟಿನಲ್ಲಿ ನಾನು ಈ ಭಾಷೆಯನ್ನು ನೀನು ಕಲಿಯಲೇಬೇಕು ಎಂದು ಯಾರಿಗೂ ಹೇರುವುದನ್ನು ಇಷ್ಟಪಡುವುದಿಲ್ಲ. ಅವರು ಕಲಿಯಲಿ ಅಥವಾ ಬಿಡಲಿ.. ಆ ಭಾಷೆಗೆಂದೂ ನಷ್ಟವಲ್ಲ. ಅದನ್ನು ಬಳಸದೇ ಇಟ್ಟರೆ ಅದು ನಮ್ಮ ಪಾಲಿಗೆ ನಶಿಸುವುದೇ ವಿನಃ ಅದು ಇದ್ದಲ್ಲೇ ಇದ್ದಿರುತ್ತದೆ ಅಷ್ಟೇ. ಸದ್ಯ ನಮ್ಮಲ್ಲಿ ಸ್ವಲ್ಪವಾದರೂ ಕನ್ನಡ ಉಳಿದುಕೊಂಡಿದ್ದರೆ ಅದು ಹಳ್ಳಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವ ಸರಕಾರಿ ಶಾಲೆಗಳಿಂದ ಮತ್ತು ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳಿಕೊಡುತ್ತಿರುವ ನೈಜ ಕಳಕಳಿಯುಳ್ಳ ಬಾಯೋರು ಮತ್ತು ಅಕ್ಕೋರುಗಳಿಂದ.(ನಗರಗಳಲ್ಲಿ ಅಂತಹ ಶಿಕ್ಷರಿಲ್ಲವೇ ಇಲ್ಲ ಎಂದು ಖಂಡಿತ ಹೇಳುತ್ತಿಲ್ಲ. ಆದರೆ ಅವರ ಸಂಖ್ಯೆ ಬಹಳ ಕಡಿಮೆಯಿದ್ದಿರುತ್ತದೆ.)
ಶ್ರೇಷ್ಠತೆಯ ವ್ಯಸನ ಹಿಡಿದರೆ ಅದಕ್ಕೆ ಮದ್ದು ಕಷ್ಟ. ಅದೇ ಈಗ ಎಲ್ಲಾ ರೋಗಕ್ಕೂ ಕಾರಣ ಎಂದೆನಿಸಿಬಿಟ್ಟಿದೆ. ಕನ್ನಡವೊಂದೇ ಶ್ರೇಷ್ಠ.. ಸಂಸ್ಕೃತವೇ ಮುಖ್ಯ ಅಥವಾ ಹಿಂದಿಯೇ ದೇಶ ಬೆಸೆವ ಭಾಷೆ ಎಂಬಿತ್ಯಾದಿ ವಿಶೇಷಗಳಿಂದ ಹೀಗಾಗಿದೆ. (ಆದರೂ ಈಗಿನ ಶೋಚನೀಯ ಪರಿಸ್ಥಿತಿ ನೋಡಿದಾಗ ಕನ್ನಡವೇ ಶ್ರೇಷ್ಠ ಎಂಬ ಭಾವ ಬಲವಾಗಿದ್ದರೂ ಉಳಿಯುತ್ತಿತ್ತೇನೋ ಎಂದು ಎಷ್ಟೋ ಸಲ ರೋಸಿ ಅನ್ನಿಸಿದ್ದಿದೆ.) ಕನ್ನಡ ಕರ್ನಾಟಕಕ್ಕೆ ಅತ್ಯಗತ್ಯ ಅದು ನಮ್ಮ ನಾಡಿನ ದ್ಯೋತಕ.. ಅಸ್ತಿತ್ವ ಎಲ್ಲವೂ ಸರಿ ಮತ್ತು ನಿಜವೂ ಹೌದು. ಆದರೆ, ನಮ್ಮದೇ ರಾಜ್ಯದ ಭಾಷೆಯನ್ನು ಇಲ್ಲಿ ಓದುವ ಮಕ್ಕಳು ಕಲಿತರೆ ಮಾತ್ರ ಇಲ್ಲಿ ವ್ಯವಹಾರ ಸಾಧ್ಯ ಎನ್ನುವ ವಾತಾವರಣ ಇದೆಯೇ? ಊಹೂಂ.. ಹಿಂದಿ ಹೋಗಲಿ ಬಿಡಿ.. ಇಂಗ್ಲೀಶ್ ಗೊತ್ತಿದ್ದರೆ ಸಾಕಲ್ಲ ಎಂಬ ಭಾವ ಬಂದಾಗಿಬಿಟ್ಟಿದೆ. ಇದನ್ನು ನಾವಿನ್ನೂ ಸಂಪೂರ್ಣ ರಿವರ್ಸ್ ಮಾಡಿ ಸರಿಮಾಡಲು ಸಾಧ್ಯವೇ? ಇಂಗ್ಲೀಶ್ ಗೊತ್ತಿಲ್ಲದವ ಬೆಂಗಳೂರಿನಲ್ಲಿ ಸರಾಗವಾಗಿ ಜೀವನ ಮಾಡುವುದು ಸಾಧ್ಯವೇ? ಕನ್ನಡ ಗೊತ್ತಿದ್ದರೆ ಮಾತ್ರ ಸಾಕೇ? ಕನ್ನಡ ವಾಹಿನಿಗಳು, ಸುದ್ದಿವಾಹಿನಿಗಳು, ಬಿತ್ತರಿಸಲ್ಪಡುವ ಜಾಹೀರಾತುಗಳು ಎಷ್ಟು ಕನ್ನಡ ಪದಗಳನ್ನು ಬಳಸುತ್ತಿವೆ? ಪರಿಸ್ಥಿತಿಯ ಕಟು ವಾಸ್ತವಿಕತೆ ಅರಿತು ಪರಿಹಾರ ಹುಡುಕಬೇಕೇ ವಿನಃ ಹೀಗಾಗಲೇ ಬೇಕು.. ಹಾಗಾಗದಿದ್ದರೆ ಅಷ್ಟೇ ಎಂಬ ಬೆದರಿಕೆ ಬರೀ ಹುಸಿ ಬೊಬ್ಬೆಯಾಗಷ್ಟೇ ಉಳಿದುಬಿಡುತ್ತದೆ.
ಹೋಗಲಿ.. ಈಗಿನ ಬಹುತೇಕ ಸಿಬಿಎಸ್ಸಿ ಶಾಲೆಗಳಲ್ಲಿರುವ ರೂಲ್ಸ್ ಎಷ್ಟು ಜನರಿಗೆ ಅದರಲ್ಲೂ ಹೆತ್ತವರಿಗೆ ಗೊತ್ತು? ಎಂಟನೆಯ ತರಗತಿಯ ನಂತರ ಮೂರನೆಯ ಭಾಷೆಯೇ ಓದಲು ಇರುವುದಿಲ್ಲ. ಅಂದರೆ ಒಂಭತ್ತನೆಯ ಮತ್ತು ಹತ್ತನೆಯ ತರಗತಿಯವರಿಗೆ ಮೂರನೇ ಭಾಷೆಯಾಗಿ ಅವರೇನು ತೆಗೆದುಕೊಂಡಿರುತ್ತಾರೋ ಅದು ಇಲ್ಲವೇ ಇಲ್ಲ. ಹೀಗಿರುವಾಗ ಕನ್ನಡ ಮೂರನೇ ಭಾಷೆಯಾಗಿ ತೆಗೆದುಕೊಂಡವರು ಐದನೆಯ ತರಗತಿಯಿಂದ ಅ, ಆ, ಇ ಕಲಿತು ಎಂಟರವರೆಗೆ ಅಂತೂ ಹೆಕ್ಕಿ ಓದಲು ಶುರುಮಾಡುವ ಹೊತ್ತಿಗೆ ಅಲ್ಲಿಗೇ ಸ್ಟಾಪ್! ಅದಕ್ಕೆ ಕಾರಣವೂ ಇಲ್ಲದಿಲ್ಲ.. ಒಂಭತ್ತಿರಿಂದ ಪಠ್ಯಗಳ ವಿಸ್ತಾರ ಜಾಸ್ತಿಯಾಗುತ್ತಾ ಹೋಗಿ ಓದುವಿಕೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಮಕ್ಕಳ ಮೇಲೆ ಭಾರ ಬೀಳಬಾರದಂದು ಒಂದು ಭಾಷೆಯೇ ಔಟ್ ಆಗಿಸಿದ್ದಾರೆ. ಅಂದರೆ ಯಾವುದೇ ಭಾಷೆಯಿರಲಿ ಅದರ ಮಹತ್ವ ಎಲ್ಲಿಗೆ ಬಂದುಮುಟ್ಟಿದೆ ಎಂದು ನೀವೇ ಆಲೋಚಿಸಿ!
ಭಾಷೆಯಲ್ಲೂ ರಾಜಕೀಯವೇ ಎಂದು ಹುಬ್ಬೇರಿಸದಿರಿ.. ಈಗ ಎಲ್ಲೆಡೆ ಬರೀ ತುಂಬಿಕೊಳ್ಳುತ್ತಿರುವುದು ರಾಜಕೀಯವೊಂದೇ. ಭಾಷೆಯಲ್ಲೂ ಅದು ಸೇರುತ್ತಿದೆ ಎನ್ನುವುದು ವಿಷಾದಕರ. ನಮ್ಮ ರಾಜ್ಯ ಸರ್ಕಾರ (ಈ ಮೊದಲು ಇದ್ದಿದ್ದು.. ಈಗಿರುವುದು ಎಲ್ಲವೂ.. ಇದಕ್ಕೂ ಮತ್ತೆ ರಾಜಕೀಯ ಸೇರಿಸಬೇಡಿ.. ಸೇರಿಸಿದರೆ ನಿಮ್ಮ ಕರ್ಮ!) ಕನ್ನಡದ ಉಳಿವಿಗೆ ಎಷ್ಟು ಶ್ರಮಿಸುತ್ತಿದೆ? ನರ್ಸರಿಯಿಂದಲೇ ಕನ್ನಡ ಕಲಿಕೆ ಪ್ರತಿ ಶಾಲೆಯಲ್ಲೂ (ಪ್ರೈವೇಟ್ ಶಾಲೆಗಳನ್ನೂ ಸೇರಿಸಿ) ಕಡ್ಡಾಯ ಎಂಬ ನಿಯಮ ಜಾರಿಯಲ್ಲಿ ತರಲಾಯಿತೇ? ಹೋಗಲಿ ಕಾನೂನು ಮಾಡಿದರು ಎಂದೇ ಇಟ್ಟುಕೊಳ್ಳೋಣ. ಆದರೆ ಅದಕ್ಕೆ ಬೇಕಾದ ತಕ್ಕ ಸಿದ್ಧತೆಯಿದೆಯೇ? ಪಠ್ಯ ರಚನೆಯ ಸಮಿತಿ ಅಷ್ಟು ಸಶಕ್ತವಾಗಿದೆಯೇ? ಒಳ್ಳೆಯ ಶಿಕ್ಷರ ಲಭ್ಯವಿದೆಯೇ? ಕನ್ನಡ ಪಠ್ಯಗಳ ತಯಾರಿಕೆಯಲ್ಲಿ ಎಷ್ಟು ಬೇಕಾಬಿಟ್ಟಿಯಾಗಿವೆ ಎನ್ನುವುದನ್ನು ಅರಿಯಲು ಒಮ್ಮೆ ಶಾಲಾ ಮಕ್ಕಳ ಕನ್ನಡ ಪಠ್ಯವನ್ನೋದಿ ಸಾಕು! ನನ್ನ ಮಗಳ ಕನ್ನಡ ಪುಸ್ತಕವನ್ನೇ ನೋಡುತ್ತೇನಲ್ಲ. ನಾನು ಓದುತ್ತಿದ್ದ ಒಳ್ಳೊಳ್ಳೆಯ ಪಾಠಗಳು, ಕವಿತೆಗಳು, ಕಥೆಗಳು ಎಲ್ಲವೂ ಮಾಯ! ತಲೆಬುಡವಿಲ್ಲದ ಪಠ್ಯಗಳು.. ಮುದ್ರಣದೋಷಗಳು.. ತಪ್ಪುಗಳು… ಕವಿತೆಗಳೋ ದೇವರಿಗೇ ಪ್ರೀತಿ! ಸಿಕ್ಕಿದ್ದೇ ಮೃಷ್ಠಾನ್ನ ಎಂದು ಸ್ವೀಕರಿಸಬೇಕು ಅಷ್ಟೇ. ಮೊದಲು ಇಲ್ಲಿ ಬದಲಾವಣೆ ಆಗಬೇಕಾಗಿದೆ. ಒಳಗೆ ಹೂಳು ತುಂಬಿಕೊಂಡು ಹೊರಗೆ ಗಲೀಜಿದೆ ಎಂದರೆ ಏನು ಮಾಡೋಣ? ಮಕ್ಕಳು ಕನ್ನಡ ಪ್ರೀತಿಸುವುದಿರಲಿ.. ದ್ವೇಷಿಸದಿರಲಿ ಸಾಕು ಎಂದು ಪ್ರಾರ್ಥಿಸಬೇಕಾಗಿದೆ ಈಗ. ಕನಿಷ್ಟ ಅಂತಹ ವಾತಾವರಣವನ್ನಾದರೂ ನಾವು ಸೃಷ್ಟಿಸದಿರೋಣ. ಯಾರೆಷ್ಟೇ ಹೇಳಲಿ ಕನ್ನಡ ಭಾಷೆ ಮೂಲೆಗುಂಪಾಗಲು ಶುರುವಾಗಿ .... ಅದು ಹಾಗೇ ಆಗಿ ದಶಕಗಳೇ ಆಗಿವೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಪ್ರೈವೇಟ್ ಇಂಗ್ಲೀಶ್ ಮಾಧ್ಯಮಗಳು ಆವರಿಸಿಕೊಳ್ಳತೊಡಗಿದಂತೇ ಆ ಭಾಷೆಯೂ ಹಿನ್ನಲೆಗೆ ಸರಿಯತೊಡಗಿತ್ತು. ಇದು ವಾಸ್ತವ. ಇಂಗ್ಲೀಶ್ ಗೊತ್ತಿಲ್ಲದಿದ್ದರೆ ನಾಚಿಕೆ.. ಕನ್ನಡ ಗೊತ್ತಿಲ್ಲದಿದ್ದರೆ ಹೆಮ್ಮೆ ಎನ್ನುವ ಪಾಲಕರಿಂದ ಅದು ತಳ ಹತ್ತಿಯಾಗಿದೆ ಮತ್ತು ಅಂತಹ ಒಂದು ಸಮಾಜ ಸೃಷ್ಟಿಯಾದಾಗಿನಿಂದ ಆಗಿ ಹೋಗಿದೆ. ಈಗೇನಿದ್ದರೂ ಅಳಿದುಳಿದದ್ದನ್ನು ಗುಡ್ಡೆಹಾಕುವ ಕೆಲಸವಷ್ಟೇ. ಆಶ್ಚರ್ಯವೆಂದರೆ ಈ ದುರಂತ ನಮ್ಮ ದೇಶದ ಬೇರೆ ಭಾಷೆಗಳೊಂದಿಗೆ ಆಗದಿರುವುದು! ಅಲ್ಲಿಯೂ ಇಂಗ್ಲೀಶ್ ಮೀಡಿಯಮ್ ಧಾಳಿಯಿಟ್ಟಿದ್ದರೂ ಆಯಾ ಪ್ರದೇಶದ ಭಾಷೆ ಇನ್ನೂ ಬಹಳ ಸಶಕ್ತವಾಗಿದೆ.. ಜೀವಂತವಾಗಿದೆ. ಹೀಗಿದ್ದಾಗ ಸಮಸ್ಯೆಯಿರುವುದು ನಮ್ಮಲ್ಲೇ ಹೊರತು ಬೇರೆ ರಾಜ್ಯದವರಿಂದಲೋ ಭಾಷೆಯಿಂದಲೋ ಅಲ್ಲ ಎಂದೆನಿಸುತ್ತಿದೆ!
ಇನ್ನು, ಯಾವುದೇ ಭಾಷೆಯ ಕುರಿತು ಆಸಕ್ತಿ ಇಲ್ಲದಿರುವುದು ಮತ್ತು ಅದನ್ನು ದ್ವೇಷಿಸುವುದೂ ಎರಡೂ ಬೇರೆ ವಿಷಯ. ಸಂಸ್ಕೃತವನ್ನೋ, ಹಿಂದಿಯನ್ನೋ, ಕನ್ನಡವನ್ನೋ ತೀರಾ ತುಚ್ಛವಾಗಿ ನಾವು ನಮ್ಮ ತಲೆಯಲ್ಲಿ ತುಂಬಿಕೊಂಡು ವಿಷವನ್ನೇ ಕಾರುತ್ತಾ, ಅದನ್ನೇ ನಮ್ಮ ಮಕ್ಕಳಿಗೂ ತುಂಬಿಸಿದರೆ ಅವರು ಮುಂದೆ ಮನುಷ್ಯನ ನಡುವೆ ಬೆಸೆವ, ಮನುಷ್ಯತ್ವವನ್ನು ಸಾರುವ ಕೊಂಡಿಯಾದ ಯಾವುದೇ ಭಾಷೆಯನ್ನೂ ಅರ್ಥೈಸಿಕೊಳ್ಳಲಾರರು (ಕನ್ನಡವನ್ನೂ ಕೂಡ)! ದಯವಿಟ್ಟು ಆ ಕೆಲಸ ಮಾಡದಿರಿ. ಮಗಳಿಗೆ ಹಿಂದಿ ಅಷ್ಟು ಇಷ್ಟ ಇಲ್ಲ ಎಂದು ಗೊತ್ತಾದಗ.. ಅದನ್ನೇ ಹೆಚ್ಚು ಓದಲು ಒತ್ತಾಯಿಸುವುದನ್ನು ಬಿಟ್ಟೆ. ಎಷ್ಟು ಆಗತ್ತೋ ಅಷ್ಟು ಕಲಿ.. ತಲೆಬಿಸಿ ಬೇಡ ಎಂದೆ. ಅವಳೇ ಕ್ರಮೇಣ ಆಸಕ್ತಿ ವಹಿಸಿ ಅರ್ಥೈಸಿಕೊಂಡಳು. ಅದರ ಬದಲು ಅವಳಿಷ್ಟದ ಬೇರೆ ಯಾವುದೇ ಭಾಷೆ ಇಟ್ಟಿದ್ದರೆ ಚೆನ್ನಿತ್ತು ಎಂದು ನನಗೂ ಹಲವು ಸಲ ಅನಿಸಿದ್ದಿದೆ. ಅದನ್ನೇ ಅವಳ ಮುಂದೆ ಬಹಳ ಸಲ ಹೇಳಿದ್ದರೆ ಅವಳೊಳಗೆ ಅದೇ ಗಟ್ಟಿಯಾಗಿ ಆ ಭಾಷೆಯ ಕುರಿತು ಅಸಡ್ಡೆ ಬೆಳೆಯಬಹುದು ಎಂದು ಸುಮ್ಮನಾದೆ. ಮಕ್ಕಳ ಮುಂದೆ ಯಾವುದೇ ಭಾಷೆಯನ್ನಾಗಲಿ... ಅದು ತುಳು, ಕೊಂಕಣಿ, ಮರಾಠಿ, ಪಂಜಾಬಿ ಯಾವುದೇ ಇರಲಿ ಅದನ್ನು ಚೆನ್ನಾಗಿದೆ ಎಂದೇ ಹೇಳೋಣ. ಅವರಿಗೆ ಆಸಕ್ತಿಯೆನಿಸಿದರೆ ಅವರೇ ಕಲಿಯಲು ಮುಂದೆ ಬರುತ್ತಾರೆ. ಕನ್ನಡ ಕಡ್ಡಾಯವಾಗಬೇಕು ಎಂಬುದು ನನ್ನದೂ ಅಭಿಮತ. ಆದರೆ ಅದು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದೂ ಇಂಗ್ಲೀಶ್ ಈಗಾಗಲೇ ಪ್ರಬಲ ರಾಜ್ಯ ಸ್ಥಾಪನೆ ಮಾಡಿ.. ಶಿಕ್ಷಣ ವ್ಯವಸ್ಥೆಯೆಂದರೆ ಹೈಯರ್ ಎಜ್ಯಿಕೇಶನ್ನಿಗಿರುವ ಮೆಟ್ಟಿಲು ಎಂದಷ್ಟೇ ಆಗಿರುವ ಹೊತ್ತಲ್ಲಿ.. ಭಾಷೆಯ ಕಲಿಕೆ ಹತ್ತನೆಯ ತರಗತಿಯವರೆಗೆ ಅಂಕಗಳಿಗಷ್ಟೇ ಸೀಮಿತವಾಗಿದ್ದರೆ ಸಾಕು ಎಂಬ ಉದಾಸೀನ ಭಾವ ಬೇರುಬಿಟ್ಟಿರುವಾಗ ಖಂಡಿತ ಬಹಳ ಕಷ್ಟ.. ಕಾರಣ ಇದಕ್ಕೆ ಪಾಲಕರು ಮನಸ್ಸು ಮಾಡಬೇಕು… ಮತ್ತು ಇದು ಮೊತ್ತಮೊದಲು ಮಹಾನಗರವಾದ ಬೆಂಗಳೂರಿನಿಂದಲೇ ಆರಂಭವಾಗಬೇಕಾಗುತ್ತದೆ. ನಾವು ಆದಷ್ಟು ನಮ್ಮ ಮನೆಯಲ್ಲಿ ಮಕ್ಕಳಿಗೆ ನಮ್ಮ ಪ್ರಾದೇಶಿಕ ಭಾಷೆ ಕಲಿಸೋಣ.. ಅದು ತುಳುವೇ ಆಗಿರಲಿ, ಕೊಂಕಣಿಯಿದ್ದಿರಲಿ, ಹವ್ಯಕವಾಗಿರಲಿ.. ಕನ್ನಡದ ಜೊತೆ ಬೆಸೆಯೋಣ. ಉಳಿದದ್ದನ್ನು ಅವರೇ ಈ ಕೊಂಡಿಯ ಮೂಲಕ ಕಲಿಯುತ್ತಾ ಹೋಗುತ್ತಾರೆ. ಮತ್ತೊಮ್ಮೆ ಹೇಳುವೆ.. ಕಲಿಕೆ ಹೇರಿಕೆಯಾಗದಿರಲಿ… ಅದು ಯಾವುದೇ ಭಾಷೆಯಿರಲಿ. ನೆನಪಿರಲಿ.. ಕನ್ನಡವನ್ನೂ ಓದಲು ಇಷ್ಟಪಡದ ಮಕ್ಕಳಿದ್ದಾರೆ! ನಾನೇ ನೋಡಿದ್ದೇನೆ. ಪಾಲಕರು ಒತ್ತಾಯಿಸಿದರೂ ಅವರಿಗೆ ಮನಸ್ಸಿರೋದಿಲ್ಲ. ಆಗ ಅದನ್ನು ತುರುಕಿಸಲು ಸಾಧ್ಯವೇ? ಸಂಧಿ, ಸಮಾಸ, ಪ್ರಬಂಧ ಬರೆಯೋದು, ವ್ಯಾಕರಣ ಎಲ್ಲವನ್ನೂ ಕಹಿ ಮಾತ್ರೆಯಂತೇ ಓದುತ್ತಾರೆ.. ಬೈಯ್ದುಕೊಂಡು ಶಾಪಹಾಕಿ ಓದುವವರನ್ನೂ ನೋಡಿದ್ದೇನೆ. (ನನ್ನ ಕಾಲದಲ್ಲೂ ಇದ್ದರು ಆದರೆ ಆಗ ಅಂಥವರು ಕಡಿಮೆಯಿದ್ದರು.. ಈಗ ಅಂಥವರೇ ಹೆಚ್ಚಿದ್ದಾರೆ) ಇದಕ್ಕೆ ಕಾರಣ ಯಾರು? ಅದನ್ನು ಆಸಕ್ತಿಕರವಾಗಿ ಪುಸ್ತಕದಲ್ಲಿ ಅಳವಡಿಸದ ಶಿಕ್ಷಣ ವ್ಯವಸ್ಥೆಯೋ ಅಥವಾ ಅದನ್ನು ಆಸಕ್ತಿಕರವಾಗಿ ಮಕ್ಕಳಿಗೆ ಕಲಿಸಲು ಸೋಲುತ್ತಿರುವ ಶಿಕ್ಷಕರೋ ಇಲ್ಲಾ ಮಕ್ಕಳೊಂದಿಗೆ ಕುಳಿತ ಕನಿಷ್ಟ ಅರ್ಧಗಂಟೆಯಾದರೂ ಅವರೊಂದಿಗೆ ಅವರ ಸಮಸ್ಯೆ ಚರ್ಚಿಸಿ ತಿಳಿಯದ ಹೆತ್ತವರೋ!
ಕನ್ನಡದ ಅವಗಣನೆಗೆ ಕಾರಣ ಇವಿಷ್ಟಲ್ಲದೇ ಇನ್ನೂ ಹಲವಿವೆ… ಅದು ಸರಿಪಡಿಸಲಾಗದಷ್ಟು ಈಗಾಗಲೇ ತಳ ಹಿಡಿದಾಗಿದೆ. ಭಾಷಾಭಿಮಾನ ಎಂಬುದು ಒಗ್ಗಟ್ಟಿನಲ್ಲಿ ಬರಬೇಕು… ಮತ್ತು ಅದು ಎಳವೆಯಿಂದಲೇ ಆಗಬೇಕು. ಇದನ್ನು ಬಿಟ್ಟು ಇನ್ನೂ ಬೇರೆ ಯಾವುದೇ ಆಯಾಮವಿದ್ದರೂ (ಧನಾತ್ಮಕ) ಅದನ್ನೂ ಗೌರವಿಸುವೆ. ಕಾರಣ, ಪ್ರತಿಯೊಬ್ಬರೂ ತಮ್ಮದೇ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಇದು ಸರಿ ಇದು ತಪ್ಪು ಎಂದು ನೇರಾನೇರ ಹೇಳಲು ಎಲ್ಲರ ಅನುಭವವೂ ಒಂದೇ ರೀತಿಯಾಗಿರದು. ಆದರೂ ಕಟ್ಟಕಡೆಯದಾಗಿ ನನ್ನಲ್ಲಿ ಏಳುವ ಪ್ರಶ್ನೆ ಏನೆಂದರೆ ಹಿಂದಿ ಭಾಷೆಯನ್ನು ಕಡ್ಡಾಯ ಮಾಡುವುದು ಸರಿಯಲ್ಲ ಒಪ್ಪುವೆ. ಆದರೆ ಅದನ್ನು ತಪ್ಪಿಸುವುದರಿಂದ ಕನ್ನಡ ಭಾಷೆಯ ಏಳಿಗೆ, ಉಳಿವು ಎಷ್ಟು ಸಾಧ್ಯ ಎಂಬುದು! ತಳ ಹಿಡಿಯುತ್ತಿರುವ ಕನ್ನಡ ಭಾಷೆಯ ಪುನರುತ್ಥಾನಕ್ಕೆ ನಾವೆಷ್ಟು ಕೊಡುಗೆ ಕೊಡಬಲ್ಲೆವು ಮತ್ತು ಕೊಡುತ್ತಿದ್ದೇವೆ ಎಂಬುದು.
ಇಷ್ಟೆಲ್ಲಾ ಗಲಾಟೆಯ ನಡುವೆಯೂ  ಅಲ್ಪ ಸಮಾಧಾನವೆಂದರೆ…. ಈ ಹಿಂದಿ ಹೇರಿಕೆಯೆಂಬ ಸುದ್ದಿ ಹರಡಿದ್ದರಿಂದ, ತಲೆಚಿಟ್ಟು ಹಿಡಿವಷ್ಟು ಹೇರಲ್ಪಡುತ್ತಿದ್ದ ರಾಹುಲ, ಮೋದಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬೆಲ್ಲಾ ರಾಜಕೀಯ ಪೋಸ್ಟುಗಳಿಂದ ಸಾಮಾಜಿಕ ಜಾಲತಾಣಕ್ಕೆ ತಾತ್ಕಾಲಿಕವಾಗಿ ಮುಕ್ತಿ ಸಿಕ್ಕಿದ್ದು!

#ಭಾಷಾಪ್ರೇಮ
#ಕನ್ನಡ_ಹಿಂದಿ_ಸಂಸ್ಕೃತ

~ತೇಜಸ್ವಿನಿ ಹೆಗಡೆ

ಶುಕ್ರವಾರ, ಏಪ್ರಿಲ್ 5, 2019

ಜೀವಿಸುವ ಪರಿ ಎಂತು ಸ್ಪಂದನೆಯನು ಮರೆತು!


ಜೀವಿಯಲ್ಲಿ ಜೀವಂತಿಕೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಬಹು ಮುಖ್ಯವಾಗಿ ಇರಬೇಕಾದದ್ದು ‘ಸ್ಪಂದನೆ’. ನೋವಿಗೆ, ನಲಿವಿಗೆ, ಹಸಿವಿಗೆ, ನಿದಿರೆಗೆ ಹೀಗೆ ಪ್ರತಿ ಕ್ಷಣದ ಚಲನೆಗೆ ಅತ್ಯವಶ್ಯಕ ಈ ಸ್ಪಂದನೆ. ಸ್ಪಂದಿಸುವುದನ್ನು ನಿಲ್ಲಿಸಿದ ದಿವಸವೇ ಸಾವು ಎಂದೆನ್ನುತ್ತಾರೆ. ಹೃದಯ ಮಾತ್ರ ಬಡಿತವಿದ್ದು, ದೇಹದಲ್ಲಿ ಬೇರಾವುದೇ ಚಲನೆಯಿಲ್ಲದ್ದರೆ ಅವರನ್ನು ಜೀವಚ್ಛವ ಎನ್ನಲಾಗುತ್ತದೆ. ಹೀಗಾಗಿ ‘ನಿಂತ ನೀರಲ್ಲ ಈ ಬದುಕು, ಹರಿವ ನದಿಯಂತೇ’ ಎಂದು ಹೇಳುವುದು. ಸ್ಪಂದನೆ ಕಾಲಕಾಲಕ್ಕೆ ಬದಲಾಗಬಹುದು, ಸ್ಪಂದಿಸುವ ರೀತಿ ಬದಲಾಗಬಹುದು, ಆದರೆ ಸ್ಪಂದಿಸುವುದೆಂದೂ ನಿಲ್ಲದು, ನಿಲ್ಲಲೂ ಬಾರದು! 
ಬದಲಾವಣೆ ಎನ್ನುವುದು ಜಗದ ನಿಯಮ. ಆದರೆ ಎಷ್ಟೋ ಸಲ ಬದಲಾವಣೆಯ ಕಾಲಗಣನೆಯಲ್ಲಿ ಬಹಳ ಅಂತರವಿರುತ್ತದೆ. ಕೆಲವೊಂದು ಬದಲಾವಣೆಗಳು ಕಡಿಮೆ ಕಾಲಾವಧಿಯಲ್ಲಾದರೆ, ಎಷ್ಟೋ ಸಲ ಒಂದು ಸಣ್ಣ ಬದಲಾವಣೆಗೂ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ. ಆದರೆ ಯಾವುದೇ ಬದಲಾವಣೆ ಪ್ರಕಟಗೊಂಡು ವಿಸ್ತರಿಸಲು ಬಹುಮುಖ್ಯವಾಗಿ ಬೇಕಾಗಿರುವುದು ಸ್ಪಂದನೆಯೇ. ಇಲ್ಲದಿದ್ದರೆ ಬದಲಾದದ್ದು ಯಾವುದು? ಎಲ್ಲಿ? ಹೇಗೆ? ಎಂಬಿತ್ಯಾದಿ ವಿವರಗಳೇ ದಾಖಲಾಗುವುದಿಲ್ಲ. ಮನುಷ್ಯ ಮಾತ್ರವಲ್ಲ ಸಕಲ ಜೀವಿಗಳೂ ಕಾಲ ಹೊತ್ತು ತರುವ ಈ ಬದಲಾವಣೆಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಲೇ ಇರುತ್ತವೆ. ಹೀಗಾಗಿ ಅದು ಬದಲಾಗುತ್ತಿರುವುದು ಅರಿವಿಗೆ ಬರುತ್ತದೆ. 
ಜೀವೋತ್ಪತ್ತಿಗೆ ಬಹು ಮುಖ್ಯವಾಗಿ ಬೇಕಾದದ್ದು ಕಾಲ ಮತ್ತು ಸ್ಥಳ. ಸಮಯಕ್ಕೆ ಮುನ್ನ ಮತ್ತು ಅದನ್ನು ಮೀರಿ ಯಾವುದೂ ಎಲ್ಲಿಯೂ ಹುಟ್ಟುವುದಿಲ್ಲ, ನಶಿಸುವುದೂ ಇಲ್ಲ ಎನ್ನುತ್ತಾರೆ ಪ್ರಾಜ್ಞರು. ಇಂಥ ದಿವಸ ಹಾಗೂ ಸ್ಥಳದಲ್ಲಿ ಈ ಜೀವದ ಹುಟ್ಟು ನಿಗದಿಯಾಗಿದ್ದಿರುತ್ತದೆ ಎನ್ನಲಾಗುತ್ತದೆ; ಅದು ಸಣ್ಣ ಸಸಿಯೇ ಇರಲಿ ಅಥವಾ ಮಗುವಿನ ಜನನವೇ ಆಗಿರಲಿ. ಈ ಹುಟ್ಟು ಅವ್ಯಕ್ತವಾಗಿರುತ್ತದೆ. ಬೆಳೆದಂತೇ ಅನುಭವಕ್ಕೆ ಬರುತ್ತದೆ. ಕಾಲವೂ ಅಷ್ಟೇ ಅದು ಆದಿ, ಅಂತ್ಯವಿಲ್ಲದ್ದು; ಅನಂತವಾದದ್ದು. ಆದರೆ ಅದು ಹೊತ್ತು ತರುವ ಬದಲಾವಣೆಗಳು ಮಾತ್ರ ಗೋಚರವಾಗುತ್ತವೆ. ‘ಯುಗಾದಿ’ ಇಂತಹ ಬದಲಾವಣೆಗೆ ನಾಂದಿಯಿಡುವ ಪಕ್ವ ಕಾಲ ಎನ್ನಬಹುದು. 
ದ.ರಾ.ಬೇಂದ್ರೆಯವರ ‘ಹಕ್ಕಿಹಾರುತಿದೆ ನೋಡಿದಿರಾ?’ ಕವನದ ಈ ಕೆಳಗಿನ ಸಾಲುಗಳನ್ನು ಗಮನಿಸೋಣ:
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? 
ಇಲ್ಲಿ ಹಕ್ಕಿ ಕಾಲ ಸೂಚಕವಾಗಿ, ರೂಪಕವಾಗಿ ಬಂದಿದೆ ಎಂಬುದು ನನ್ನ ಅನಿಸಿಕೆ. ಕಾಲವೆಂಬೋ ಈ ಹಕ್ಕಿ ಜೀವಿಗಳ ಬದುಕಲ್ಲಿ ಬದಲಾವಣೆ ತರುತ್ತಾ ಹಾರುತ್ತಲೇ ಇರುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಲವು ಚಕ್ರದಂತೇ, ಮರುಕಳಿಸುತ್ತಲಿರುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯಗಳನ್ನು ಕಳೆದು, ಪುನರಪಿ ಜನನಿ ಜಟರೇ ಶಯನಂ ಆಗಿ ಮತ್ತೆ ಹುಟ್ಟುತ್ತಲೇ ಇರುತ್ತಾನೆ ಮನುಷ್ಯ. ಸಸ್ಯದ ಗರ್ಭ ಬೀಜದೊಳಡಗಿದ್ದರೆ ಪ್ರಾಣಿ ಹಾಗೂ ಮಾನವರು ತಾಯಿ ಗರ್ಭದ ಮೂಲಕ ಜನ್ಮ ತಾಳುತ್ತಾರೆ. ಪುನರಪಿ ಮರಣಂ ಆಗುತ್ತಲೇ ಇರುತ್ತದೆ. ಇದು ಯುಗಯುಗಗಳಿಂದಲೂ ನಡೆದುಬರುತ್ತಿದೆ. ಅದಕ್ಕೇ ಅಂಬಿಕಾತನಯದತ್ತರು ಸಾಂಕೇತಿಕವಾಗಿ ಹೇಳಿದ್ದು ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂದು.
ಕಾಲ ಮತ್ತು ಜೀವಿ ಯುಗಾದಿಯೊಂದಿಗೆ ಬೆಸೆದಿರುವ ರೀತಿ:-
ಯುಗ ಎಂದರೆ ಯುಜು, ಇದರ ಅರ್ಥ ಜೋಡಿಸುವುದು, ಹೊಂದಿಸುವುದು. ಹೀಗಾಗಿ ‘ಯುಗಾದಿ’ ಕಾಲ ಮತ್ತು ಸೃಷ್ಟಿ ಎರಡನ್ನೂ ಪ್ರತಿನಿಧಿಸುತ್ತದೆ; ಜೊತೆಗೇ ಅಂತ್ಯವನ್ನೂ ಕೂಡ! ಕಾಲ ಎನ್ನುವ ಪದಕ್ಕೆ ಎರಡರ್ಥವಿದೆ. ಕಾಲ ಎಂದರೆ ಸಮಯವೂ ಹೌದು; ಅಂತ್ಯ ಸೂಚಕ ಪದವೂ ಹೌದು. ಹೀಗಾಗಿ ಜೀವ ಸೃಷ್ಟಿಯಾದ ಕ್ಷಣದಿಂದಲೇ ಕಾಲಗಣನೆಯೂ ಆ ಜೀವಿಯ ಜೊತೆ ಬೆಸೆದುಕೊಂಡಿರುತ್ತದೆ. ನಾವೇನು ‘ಸೃಷ್ಟಿಯಾಯಿತು’ ಎನ್ನುತ್ತೇವಲ್ಲ, ಅದು ಇನ್ನೊಂದು ರೀತಿಯಲ್ಲಿ ಆ ಜೀವಿಯ ಅಂತ್ಯಕ್ಕೆ ಕ್ಷಣಗಣನೆಯೂ ಆಗಿರುತ್ತದೆ. ಆದರೆ ಸಂಭ್ರಮ, ನಿರೀಕ್ಷೆಗಳು ಸಮಯವನ್ನು ಸುಲಭದಲ್ಲಿ, ವೇಗವಾಗಿ ದಾಟಲು ಸಹಕಾರಿಯಾದರೆ, ದುಃಖ ಹಾಗೂ ನಿರಾಸೆ ಆ ಹಾದಿಯನ್ನು ಕಠಿಣಗೊಳಿಸಿಬಿಡುತ್ತವೆ. ಈ ಕಾರಣದಿಂದಲೇ ಜನ್ಮದಿವಸದ ಸಂಭ್ರಮದ ಆಚರಣೆಗೆ ಹೆಚ್ಚು ಮಹತ್ವ ಸಿಗುತ್ತಿರುವುದು. ಇದೇ ದೃಷ್ಟಿಕೋನದಲ್ಲಿ ನೋಡಿದಾಗ, ಯುಗಾದಿಯ ಆಚರಣೆಗೆ ಬಹಳ ಪ್ರಾಮುಖ್ಯತೆ ಕಾಣುತ್ತದೆ.
‘ಯುಗಾದಿ’ ಕೇವಲ ವರ್ಷದಾರಂಭ, ಸಿಹಿ-ಕಹಿಗಳನ್ನು ಸಮಧಾತುವಿನಲ್ಲಿ ಸ್ವೀಕರಿಸುವ ಹಬ್ಬ ಮಾತ್ರವಲ್ಲ. ಬದುಕನ್ನು ಅರಿಯುವ, ಜೋಡಿಸುವ, ಹೊಂದಿಸುವ ಆರಂಭವೂ ಹೌದು. ಯುಗಾದಿ ಎನ್ನುವುದೇ ಕಾಲವನ್ನು ಮತ್ತು ಸೃಷ್ಟಿಯನ್ನು ಸೂಚಿಸುವುದು. ಕಾಲಕ್ಕೆ ಆದಿಯಿಲ್ಲ ಅಂತ್ಯವಿ ಎಂಬುದೇನೋ ನಿಜ. ಆದರೆ ಮಾನವ ಸೃಷ್ಟಿಯಾದ ಮೇಲೆಯೇ ಕಾಲಗಣನೆ ಆರಂಭವಾಗಿದ್ದು! ಅದಕ್ಕಿಂತ ಮೊದಲೂ ಕಾಲ ಇತ್ತು. ಆದರೆ ಅದು ನಮ್ಮ ಅರಿವಿಗೆ ಬರದೇ ಇದ್ದುದರಿಂದ ಮಹತ್ವ ಕಳೆದುಕೊಂಡಿದ್ದು. ಈ ರೀತಿ ಸಮಯಕ್ಕೆ ನಾವು ಕೊಟ್ಟ ಸ್ಪಂದನೆಯೇ ಅದಕ್ಕೊಂದು ವಿಶೇಷ ಪ್ರಾಮುಖ್ಯತೆಯನ್ನು ನೀಡಿದ್ದೆನ್ನಬಹುದು. 
ಪ್ರತಿ ಸಂತತ್ಸರದಲ್ಲೂ ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಗಳು, ಅವುಗಳಿಗೆ ಪ್ರತಿ ಜೀವಿಯೂ ಸ್ಪಂದಿಸುತ್ತಾ ತಾನೂ ಮೆಲ್ಲನೆ ಬದಲಾಗುತ್ತಾ, ಬೆಳೆಯುತ್ತಾ ಹೋಗುವುದು, ಈ ಪ್ರಕ್ರಿಯೆಗಳೇ ಅನನ್ಯ; ಅದು ತೋರುವ ಬೆರಗು ಅನೂಹ್ಯ. ಆದರೆ ಅಂತ್ಯ ಹಾಗಲ್ಲ. ಸಾವು ಸಂಭವಿಸಿದಾಕ್ಷಣ ಕಾಣಿಸಿಕೊಂಡರೆ, ಹುಟ್ಟು ಥಟ್ಟನೆ ಗೋಚರಿಸದೇ ಕ್ರಮೇಣ ಪ್ರಕಟಗೊಳ್ಳುತ್ತದೆ. ನಾವು ಹುಟ್ಟಿದ ನಂತರ ಬೆಳೆಯುತ್ತಾ ಹೋಗುತ್ತೇವೆ. ಹಾಗೆ ಭಾವಿಸಿಕೊಂಡು ಅದರಲ್ಲೇ ಕಳೆದುಹೋಗುತ್ತೇವೆ. ನಾವು ಈ ಬೆಳವಣಿಗೆಗೆ ಬೆಲೆ ಕೊಡುತ್ತೇವೆ. ಆದರೆ ಕಾಲ ಮೆಲ್ಲನೆ ಕಳೆಯುತ್ತಾ ಹೋಗುತ್ತಿರುತ್ತದೆ. ಕಳೆದುಹೋಗುವುದು ಅದರ ಗುಣ. ಸೃಷ್ಟಿ ಹಾಗಲ್ಲ; ಅದರ ಕಾರ್ಯವೇ ಬೆಳೆಸುವುದು ಮತ್ತು ಬೆಳಗುವುದು. ಉದಾಹರಣೆಗೆ:
ನಾವು ಈ ಸಸ್ಯಸಂಕುಲಗಳನ್ನೇ ತೆಗೆದುಕೊಂಡರೆ, ವರ್ಷ ಋತು ಅಂದರೆ ಮಳೆಗಾಲದ ಸಮಯದಲ್ಲಿ ಸೃಷ್ಟಿ ಭೂಮಿಯೊಳಗೆ ಅಂಕುರವಾಗುತ್ತದೆ. ಅಲ್ಲಿ ಬೀಜಾಂಕುರವಾಗಿ ಕಾಲಕ್ರಮೇಣ ಅದು ಭೂಮಿಯನ್ನು ಸೀಳಿಕೊಂಡು ಜೀವ ಹೊರಹೊಮ್ಮುತ್ತದೆ. ಹೀಗೆ ವರ್ಷ ಋತುವಿನಲ್ಲಿ ಭೂಮಿಯ ಗರ್ಭದಲ್ಲಿ ಸೃಷ್ಟಿ ಕಾರ್ಯ ನಡೆದರೆ, ವಸಂತ ಋತುವಿನಲ್ಲಿ ಭೂಮಿಯ ಮೇಲೆ ಚಿಗುರು ಹುಟ್ಟಿಕೊಳ್ಳುತ್ತದೆ. ಶಿಶಿರದಲ್ಲಿ ಎಲೆಗಳೆಲ್ಲಾ ಉದುರಿ ವಸಂತದಾಗಮನಕ್ಕೆ ಸ್ಥಳ ನಿರ್ಮಿಸಲಾಗುತ್ತದೆ. ಈ ರೀತಿ ಸೃಷ್ಟಿ ಪ್ರಕ್ರಿಯೆಗೆ ಸ್ಥಳ ಮತ್ತು ಕಾಲ ಪರಸ್ಪರ ಜೋಡಿಸಿಕೊಂಡು, ಹೊಂದಿಕೊಂಡು ಕಾರ್ಯನಿರ್ವಹಿಸುತ್ತವೆ. ಇದಕ್ಕೆ ನಾಂದಿ ಹಾಡುತ್ತದೆ ಯುಗಾದಿ; ಸಂವತ್ಸರಗಳ ಆದಿ.
ಹುಟ್ಟಿದ ಪ್ರತಿ ಜೀವಿಯೂ ಕಾಲನ ಮಿತಿಯಲ್ಲೇ ಇರುತ್ತದೆ (ಈ ಮೊದಲೇ ಹೇಳಿರುವಂತೆ ಇಲ್ಲಿ ಕಾಲ ಎಂದರೆ ಸಮಯ ಮತ್ತು ಅಂತ್ಯ ಎರಡೂ ಹೌದು). ಈ ಕಾಲಗಣನೆಯಲ್ಲಿ ಮೂರು ವಿಧವಿದೆ ಎನ್ನುತ್ತದೆ ಯುಗಧರ್ಮ. 
೧. ಮಾನವ ಕಾಲ ೨. ಗ್ರಹಗಳ ಕಾಲ ೩. ದೇವ ಕಾಲ. 
ಹೀಗೆ ಯುಗಧರ್ಮದ ಪ್ರಕಾರ ದೇವತೆಗಳೂ ಕಾಲಗಣನೆಯ ಮಿತಿಯಲ್ಲಿರುವವರೇ! ಇನ್ನು ಈ ಕಾಲಗಣನೆಯನ್ನು ಮಾನವ ಕಾಲದಲ್ಲಿ ಸುಲಭಗೊಳಿಸಲು ಹಗಲು ಮತ್ತು ಕತ್ತಲಿನ ಪರಿಮಾಣವನ್ನು ತೆಗೆದುಕೊಳ್ಳಲಾಗಿದೆ. ಹನ್ನೆರಡು ತಾಸು ಹಗಲು ಮತ್ತು ಹನ್ನೆರಡು ತಾಸು ಕತ್ತಲು ಎನ್ನುವುದು ಕಾಲ ಸೂಚಕಕ್ಕೆ ಇಲ್ಲಿ ಸಹಕಾರಿಯಾಗಿದೆ.
ಯುಗಾದಿಯ ಜೊತೆಗೆ ಬೆಸೆದಿರುವ ನಮ್ಮ ಭಾವ ಸ್ಪಂದನೆ:-
ಆದಿ, ಆರಂಭ, ಹುಟ್ಟು - ಈ ಪದಗಳೇ ಮನದೊಳಗೆ ಸಂತೋಷವನ್ನು ತುಂಬುವಂಥವು. ಪ್ರಕೃತಿ ವಸಂತನ ಆಗಮಕ್ಕೇ ಕಾದಿತ್ತೇನೋ ಎಂಬಂತೇ ಆ ಋತುವಿನಲ್ಲಿ ಎಳೆ ಹಸಿರು ಬಣ್ಣದ ಚಿಗುರುಗಳನ್ನು ಹೊತ್ತು, ಹೂವೊಳಗೆ ಗಂಧ, ಮಕರಂದವನ್ನು ತುಂಬಿಕೊಂಡು, ನಳನಳಿಸುತ್ತಿರುವುದನ್ನು ನೋಡುವುದೇ ನಮಗೊಂದು ಸಂಭ್ರಮ. ಅಂತೆಯೇ, ಖ್ಯಾತ ಕವಿ ಹಾಗೂ ನಾಡಿನ ಜನಪ್ರಿಯ ಸಹೃದಯ ಸಾಹಿತಿಯಾಗಿರುವ ಶ್ರೀಯುತ ಕೆ.ಎಸ್. ನಿಸಾರ್ ಅಹಮದ್ ಅವರು ತಮ್ಮ ‘ವರ್ಷಾದಿ’ ಕವಿತೆಯಲ್ಲಿ ಯುಗಾದಿಯ ಪ್ರಕೃತಿ ಚೆಲುವನ್ನು ಹೀಗೆ ಹಾಡಿ ಹೊಗಳಿದ್ದಾರೆ... 

        ಬೆವರ ಹೀರಿ ಬೆಳೆದ ಪೈರು 
ಕಣಕಣದಲಿ ಹೊನ್ನ ತೇರು
ಕಣಜ ತುಂಬಿ ತುಳುಕಿ ಹಿಗ್ಗಿ 
ನಾಡಿಗೊದಗಿ ಬಂತು ಸುಗ್ಗಿ
ಆದರೆ, ಸದಾ ಒಂದು ಪ್ರಜ್ಞೆ ನಮ್ಮೊಳಗೆ ಸುಪ್ತವಾಗಿ ಮಿಡಿಯುತ್ತಲೇ ಇರುತ್ತದೆ. ಅದೇನೆಂದರೆ ಈ ಸೃಷ್ಟಿಯ ಬೆನ್ನಿಗೇ ಅಂತ್ಯವೂ ಇದೆ, ಅದನ್ನೂ ನಾವು ಸಮವಾಗಿಯೇ ಸ್ವೀಕರಿಸಬೇಕು ಎಂಬುದು. ಉದುರುವ ಎಲೆಗಳಿಗೆ ಶೋಕಿಸದೇ ಅದನ್ನೂ ಸೃಷ್ಟಿಯ ಭಾಗವೆಂದು ಭಾವಿಸಬೇಕು ಎಂಬುದಕ್ಕೆ ಪ್ರತೀಕವಾಗಿಯೇ ಆ ದಿವಸ ಸi ಪ್ರಮಾಣದಲ್ಲಿ ಕಹಿಬೇವು-ಸಿಹಿಬೆಲ್ಲದ ಹಂಚುವಿಕೆ ತಪ್ಪದೇ ನಡೆದುಕೊಂಡು ಬಂದಿದೆ. 
ಹುಟ್ಟಿನ ಸಂಭ್ರಮಕ್ಕೆ ಕೊಡಲಿಯಾಗುತ್ತಿರುವ ಮನುಜನ ವಿಕೃತಿ :-
ಈ ವರುಷದ ಯುಗಾದಿ ‘ವಿಕಾರಿ ನಾಮ ಸಂವತ್ಸರ’. ಅದಕ್ಕನುಗುಣವಾಗಿಯೇ ಸಕಲ ಜೀವಿಗಳಲೇ ಶ್ರೇಷ್ಠರೆಂದೆನಿಸಿಕೊಂಡಿರುವ ಮನುಷ್ಯನ ವಿಕಾರತೆಯೂ ಇತ್ತೀಚಿಗೆ ಹೂಂಕರಿಸಿ ಅಬ್ಬರಿಸುತ್ತಿದೆ! ಪ್ರತಿ ಜೀವಿಯೂ ಬದುಕುವುದು ಅದರ ಅಸ್ತಿತ್ವಕ್ಕೆ, ಜೀವಂತಿಕೆಗಾಗಿಯೇ. ಪ್ರಾಣಿ, ಪಕ್ಷಿಗಳು ತಮ್ಮ ಉಳಿವಿಗೋಸ್ಕರ ಆಹಾರ, ನೆಲೆ ಹುಡುಕಿಕೊಳ್ಳುತ್ತವೆ. ತಮ್ಮ ಅಳಿವಿಗೆ ಪ್ರತಿರೋಧ ತೋರಿಸಲು, ಪ್ರಾಣ ರಕ್ಷಿಸಿಕೊಳ್ಳಲು ಬೇಟೆಯಾಡುತ್ತವೆ ಅಥವಾ ಹಲ್ಲೆ ನಡೆಸುತ್ತವೆ. ಮರ-ಗಿಡ-ಸಸ್ಯಗಳಂತೂ ಅದನ್ನೂ ಮಾಡಲು ಹೋಗದೆ ಮಣ್ಣಿನ ಸಾರವನ್ನು ಹೀರಿಹೀರಿ ಫಲ ತಮ್ಮದಲ್ಲ, ಕಾರ್ಯ ಮಾತ್ರ ತಮ್ಮದು ಎಂಬಂತೇ ನಿರಂತರ ಹಣ್ಣು, ಕಾಯಿ, ಸೊಪ್ಪು, ಧವಸ-ಧಾನ್ಯಗಳನ್ನು ಸಹಜೀವಿಗಳಿಗೆಲ್ಲಾ ನಿಸ್ವಾರ್ಥವಾಗಿ ಉಣಬಡಿಸುತ್ತಿರುತ್ತವೆ. ಹೀಗಿರುವಾಗ, ಮನುಷ್ಯ ಮಾತ್ರ ಅವ್ಯಾಹತವಾಗಿ ಸಹಜೀವಿಗಳ ಮೇಲೆ ಪ್ರಹಾರವನ್ನು ಸುಖಾಸುಮ್ಮನೇ ನಡೆಸುತ್ತಿರುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಮರ-ಗಿಡಗಳನ್ನು, ಪ್ರಾಣಿಗೆ-ಪಕ್ಷಿಗಳನ್ನು ನಿರ್ಧಾಕ್ಷಿಣ್ಯವಾಗಿ ಕೊಲ್ಲುತ್ತಾ, ತನ್ನ ಆಪ್ತೇಷ್ಟರನ್ನು, ಸಹ ಮಾನವರನ್ನೂ ಬಿಡದೇ ಹಿಂಸಿಸುತ್ತಿರುತ್ತಾನೆ. ಅಂತ್ಯ ಎನ್ನುವುದು ತಮಗೂ ಖಚಿತ ಎನ್ನುವ ಪರಿವೆ ಇಂಥವರಲ್ಲಿ ಸಂಪೂರ್ಣ ಮಗುಮ್ಮಾಗಿಬಿಟ್ಟಿರುತ್ತದೆ ಎಂದೆನಿಸುತ್ತದೆ. ಇಂಥಾ ಮನುಷ್ಯರೂಪಿ ರಕ್ಕಸರ ವಿಕೃತಿ ಕಂಡಾಗ ‘ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ’ ಇಟ್ಟಿದ್ದೇ ಒಳ್ಳೆಯದಾಯಿತು ಎಂದೆನಿಸಿಬಿಡುತ್ತದೆ. ಪು.ತಿ.ನರಸಿಂಹಾಚಾರ್ ಅವರ ಕವಿತೆಯೊಂದರ ಈ ಕೆಳಗಿನ ಸಾಲುಗಳು ನೆನಪಾಗಿ ಕಾಡುತ್ತಿರುತ್ತವೆ.
ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ
ಮನುಷ್ಯನ ಹೊರತು ಮತ್ತೆಲ್ಲಾ ಜೀವ ಸಂಕುಲಗಳಲ್ಲೂ ಜೀವೊತ್ಪತ್ತಿ ತಣ್ಣಗೆ, ಪ್ರೀತಿಯಿಂದ, ಶಾಂತಿಯಿಂದ ಆಗುತ್ತಿರುತ್ತದೆ. ಆದರೆ ಮನುಜನಲ್ಲಿ ಜನನದ ಜೊತೆಗೇ ಅಹಂಕಾರದ ಹುಟ್ಟೂ ಆಗಿಬಿಡುತ್ತದೆ. ಅದು ಆತನ ಶಾರೀರಿಕ ಬೆಳವಣಿಗೆಯ ಜೊತೆಗೇ ಬೆಳೆಯುತ್ತಾ ಹೋಗುತ್ತಿರುತ್ತದೆ. ಅಹಂಕಾರ ವಿಧವಿಧ ರೂಪು ತಳೆದು ಬೃಹದಾಕಾರವಾಗಿ ಬೆಳೆದಷ್ಟೂ ವಿವೇಕ, ಸುವಿಚಾರಗಳು ಕಳೆಗುಂದುತ್ತಾ ಹೋಗಿ ಕೊನೆಗೊಮ್ಮೆ ಕಳೆದುಹೋಗಿಬಿಡುತ್ತವೆ. ತನ್ನ ಅಹಂಕಾರವನ್ನು ಹತೋಟಿಯಲ್ಲಿಟ್ಟುಕೊಳ್ಳದೇ, ನಿರ್ದಾಕ್ಷಿಣ್ಯವಾಗಿ ಅದರ ಕೈಗೇ ತನ್ನ ವಿವೇಕವನ್ನು ಕೊಟ್ಟುಬಿಡುವುದೇ ಸಕಲ ವಿಕಾರಗಳಿಗೂ ಕಾರಣವಾಗಿದೆ.
ಹಬ್ಬಗಳ ಮಹತ್ವ ಮತ್ತು ಸ್ಪಂದನೆಯ ಪ್ರಸ್ತುತತೆ:-
ಬದಲಾವಣೆ ಹೇಗೆ ಜಗದ ನಿಯಮವೋ, ಕತ್ತಲು ಹೇಗೆ ಶಾಶ್ವತವಲ್ಲೋ ಹಾಗೇ ಸಮಾಜದೊಳಗೆ ಕ್ಯಾನ್ಸರಿನಂತೇ ಹಬ್ಬುತ್ತಿರುವ ಈ ವಿಕೃತಿಗಳು, ಪ್ರಭೃತಿ ಜೀವಿಗಳು ಶಾಶ್ವತವಲ್ಲ. ಈ ವಿಕಾರ ಮನೋಭಾವದ ತಮ ಕಳೆದು, ಹೊಳೆವ ಹೊಸ ಭಾವಗಳು ಮನುಜನ ಎದೆಯೊಳಗೆ ಹುಟ್ಟಿ, ಬೆಳೆದು, ಮಾತು-ಕೃತಿಗಳಲ್ಲಿ ಚಿಗುರೊಡೆದು ಸಮಾಜಕ್ಕೆ, ವಿಶ್ವಕ್ಕೆ, ನವ ಚೈತನ್ಯವನ್ನು ತುಂಬುವ ಯುಗಾದಿ ಬಂದೇ ಬರುತ್ತದೆ ಎಂಬ ಆಶಾಭಾವನೆ ಈ ಕಾಲದ ತುರ್ತಾಗಿದೆ. ಸುತ್ತಲೂ ಕಾಣಿಸುವ ಕೊಳಕಿಗೆ ಮಾತ್ರ ಸ್ಪಂದಿಸುತ್ತಾ ಹೋದರೆ, ಅದರ ಆಸುಪಾಸಿದಲ್ಲೇ ಇರುವ ಒಳಿತಿನ ಬೆಳಕೂ ಮಸುಕಾಗಿಬಿಡುತ್ತದೆ. ಇದರಿಂದ ಹತಾಶೆ ಹೆಚ್ಚಾಗಿ ಕ್ರಮೇಣ ಸ್ಪಂದನೆಯೇ ಕುಂಠಿತವಾಬಿಡಬಹುದು. ಇದರ ಪರಿಣಾಮವಾಗಿ ಮನುಜ ಸಜೀವ ಶವವಾದರೂ ಆಶ್ಚರ್ಯವಿಲ್ಲ! 
ಈಗಾಗಲೇ ನಮ್ಮಲ್ಲಿ ಹಬ್ಬಗಳು ತಮ್ಮ ಪ್ರಸ್ತುತೆಯನ್ನು ಕಳೆದುಕೊಳ್ಳುತ್ತಿವೆ. ಯುಗಾದಿಯಿಂದ ಹಿಡಿದು ದೀಪಾವಳಿಯವರೆಗೂ ಬರುವ ಹಬ್ಬಗಳನ್ನು ಬಹುತೇಕರು ಯಾಂತ್ರಿಕವಾಗಿ ಸ್ವಾಗತಿಸುವುದು, ಆಚರಿಸುವುದು ಹೆಚ್ಚಾಗುತ್ತಿದೆ. ಇದಕ್ಕೆ ಕೂಡು ಕುಟುಂಬದ ಅವಗಣನೆ, ಜಾಗತೀಕರಣ ಎಲ್ಲವುದರ ಕೊಡುಗೆಯೂ ಇದ್ದಿರಬಹುದು. ಆದರೆ ಜೀವಂತಿಕೆಯನ್ನು ಕಾಪಿಟ್ಟುಕೊಳ್ಳುವುದು ಅನಿವಾರ್ಯು ಮತ್ತು ಅಗತ್ಯ. ಎಂಥಾ ಮಹಾ ಕಷ್ಟಗಳು, ಕೌಟುಂಬಿಕ ಸಂಕಟಗಳು ಧುತ್ತನೆ ಎರಗಿದರೂ, ಜೀವನೋತ್ಸಾಹ, ಜೀವನ್ಮುಖಿತ್ವವನ್ನು ಕಳೆದುಕೊಳ್ಳದೇ ಹುರಿದುಂಬಿಸುವ ನಮ್ಮ ಹಿರಿಯರು, ನಾಡಿನ ಹಿರಿಯ ಶ್ರೇಷ್ಠ ಕವಿಗಳು ನಮಗೆ ಸದಾ ಮಾದರಿಯಾಗುತ್ತಾರೆ. ಉದಾಹರಣೆಗೆ:
ಋತುಗಳರಳುತ ಚಕ್ರಗತಿಯಲಿ
ಹೊರಳಿ ಸರಿವುವು ನಿನ್ನೆಗೆ
ನೋವು ನಲಿವಿನ ನಡುವೆ ಕಾದೆವು
ಕರೆವ ಬೆಳಕಿನ ಸನ್ನೆಗೆ...
ಎಂದು ಯುಗಾದಿಯನ್ನು ಸಮಚಿತ್ತದಿಂದ ಸ್ವಾಗತಿಸಿ ಸಂಭ್ರಮಿಸಿದ ನಮ್ಮ ನಾಡಿನ ಪ್ರಸಿದ್ಧ ಕವಿಯಾಗಿರುವ ಶ್ರೀಯುತ ಸುಬ್ರಾಯ ಚೊಕ್ಕಾಡಿಯವರ ಕವಿತೆಯೊಂದರ ಮೇಲಿನ ಸಾಲುಗಳು ಸದಾ ಸ್ಮರಣೀಯ.
-ತೇಜಸ್ವಿನಿ ಹೆಗಡೆ
********** 


ಮಂಗಳವಾರ, ಸೆಪ್ಟೆಂಬರ್ 18, 2018

ಮರ್ಯಾದಾ ಹತ್ಯೆ : ಕಾರಣಗಳು ಮತ್ತು ಪರಿಹಾರ


ಇತ್ತೀಚಿಗಷ್ಟೇ ನಾನು ಮರಾಠಿಯ ಪಸಿದ್ಧ ‘ಸೈರಾಟ್’ ಚನಲನಚಿತ್ರವನ್ನು ನೋಡಿ ಬಹಳ ಇಷ್ಟಪಟ್ಟಿದ್ದೆ ಮತ್ತು ಅದರ ಅಂತ್ಯಕ್ಕೆ ಬಹಳ ಬೇಸರವೂ ಆಗಿತ್ತು. ಹಾಗೇ ಕೆ. ನಲ್ಲತಂಬಿಯವರ ಅನುವಾದಿತ ಕಾದಂಬರಿಯಾದ ‘ಹೂ-ಕೊಂಡ’ವನ್ನೂ ಓದಿ ಮೆಚ್ಚಿದ್ದೆ, ಬೆಚ್ಚಿದ್ದೆ! ಎರಡೂ ಒಂದೇ ವಿಷಯವನ್ನು ಎತ್ತಿಹಿಡಿಯುತ್ತವೆ. ಅದೇ ಮರ್ಯಾದಾ ಹತ್ಯೆ!

ಈಗ ನೋಡಿದರೆ ತೆಲಂಗಾಣದ ಯುವ ಜೋಡಿಯ ದಾರುಣ ಕತೆ ಹೊರಬಿದ್ದಿದೆ! ಮಗಳು ತಮ್ಮ ಜಾತಿಯಲ್ಲದವನನ್ನು ಮದುವೆಯಾಗಿ ಸುಖವಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ, ತಮ್ಮ ಹುಸಿ ಪ್ರತಿಷ್ಠೆಗೆ ಕುಂದಾಯಿತು ಎಂದು ಕ್ರೋಧಗೊಂಡು ಸ್ವಂತ ತಂದೆಯೇ, ಹೆತ್ತ ಮಗಳ ಗಂಡನನ್ನು ಅವಳ ಕಣ್ಮುಂದೆ ಇರುದು ಕೊಲ್ಲಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿ ಎಲ್ಲರನ್ನೂ ತಲ್ಲಣಗೊಳಿಸಿದೆ. ಮಗಳು ಗರ್ಭಿಣಿಯಾಗಿದ್ದಾಳೆ, ಆ ಮಗುವಿಗೆ ಭವಿಷ್ಯವಿದೆ, ತಮಗೆ ಇಷ್ಟ ಇಲ್ಲದಿದ್ದರೆ ದೂರವಿದ್ದುಬಿಟ್ಟರಾಯಿತು ಎಂಬ ಕನಿಷ್ಟ ಕಾಳಜಿಯೂ ಇಲ್ಲದೆ ಪಶುವಿಗಿಂತ ಕಡೆಯಾಗಿಬಿಟ್ಟ ಆ ತಂದೆ ಎಂದೆನ್ನಿಸಿಕೊಂಡವನ ಕ್ರೌರ್ಯವಾದರೂ ಎಂಥದ್ದಪ್ಪಾ ಎಂದೆನಿಸಿಬಿಟ್ಟಿತು. ನಿಜಕ್ಕೂ ಇದೊಂದು ಹೇಯ ಮತ್ತು ತೀವ್ರ ಖಂಡನೀಯ ಘಟನೆ. ಆ ಯುವ ಜೋಡಿಯ ಕನಸುಕಂಗಳ ಭಾವಚಿತ್ರ ಇನ್ನೂ ಕಾಡುತ್ತಿದೆ ನನ್ನನ್ನು. ಕ್ಷುದ್ರ ಮನುಷ್ಯನ ವಿಕೃತಿಗಿಂತ ಅಪಾಯಕಾರಿಯಾದ್ದು ಬೇರೊಂದಿಲ್ಲ ಅನ್ನಿಸಿಬಿಟ್ಟಿತು. ಇದಾದ ನಂತರ ಸಹಜವಾಗಿಯೇ ಇಂಥಾ ದುರ್ಘಟನೆಯ ಹಿನ್ನಲೆ, ನಡೆಯುತ್ತಿರುವ ಪ್ರದೆಶಗಳ ಕುರಿತು ಮಾಹಿತಿ ಪಡೆಯಬೇಕೆಂದೆನ್ನಿಸಿತು. ಎಲ್ಲೆಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ/ನಡೆಯುತ್ತಿದೆ ಎಂದು ಸ್ವಲ್ಪ ಹುಡುಕಾಡುತ್ತಿರುವಂತೆ ಇದರ ಆಳ, ಅಗಲ, ವಿಸ್ತಾರ ಜಗತ್ತಿನಾದ್ಯಂತ ಹರಡಿಕೊಂಡಿರುವುದು ಸ್ಪಷ್ಟವಾಗುತ್ತಾ ಹೋಯಿತು.
*HBV ಸರ್ವೆಯ ಪ್ರಕಾರ ಜಗತ್ತಿನಾದ್ಯಂತ ಪ್ರತಿವರುಷ ಸರಿಸುಮಾರು ೫,೦೦೦ ಹೆಣ್ಮಕ್ಕಳು ಮತ್ತು ಹುಡುಗಿಯರು ಈ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿದ್ದಾರೆ! ಇದು ವಿಶೇಷವಾಗಿ ಮಧ್ಯ ಪೂರ್ವ ಹಾಗೂ ದಕ್ಷಿಣ ಏಷ್ಯಾ ದೇಶಗಳಲ್ಲಿ ಹೆಚ್ಚು ಕಾಣಿಸುತ್ತಿದೆಯಂತೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಪ್ರತಿ ವರುಷ ತಲಾ ೧,೦೦೦ ಹತ್ಯೆಗಳಾಗುತ್ತಿದ್ದರೆ, ಇಂಗ್ಲೇಂಡಿನಲ್ಲೂ ವರುಷದಲ್ಲಿ ೧೨ ಇಂಥಾ ಹತ್ಯೆಗಳು ರಿಪೋರ್ಟ್ ಆಗುತ್ತಿರುತ್ತವಂತೆ. ಇನ್ನು ರಿಪೋರ್ಟೇ ಆಗದ ಪ್ರಕರಣಗಳು ಅದೆಷ್ಟು ಇರುತ್ತವೆಯೋ ಗೊತ್ತಿಲ್ಲ!  ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಈಜಿಪ್ಟ್, ಇರಾನ್, ಇಸ್ರೇಲ್, ಜೋರ್ಡಾನ್, ಮೊರೊಕ್ಕೋ, ಯು.ಕೆ., ಅಮೇರಿಕಾ ಹೀಗೆ ಎಲ್ಲೆಡೆ ಈ ಒಂದು ದುರಂತ ಅವ್ಯಾಹತವಾಗಿ ನಡೆದುಹೋಗಿತ್ತಿದೆ.
*ಎಷ್ಟೋ ದೇಶಗಳಲ್ಲಿ ಇದನ್ನು ತಡೆಯಲು ಸಶಕ್ತ ಕಾನೂನೂ ಇಲ್ಲ, ಇದ್ದರೂ ಅದು ಸೂಕ್ತ ರೀತಿಯಲ್ಲಿ ಜಾರಿಗೆ ಬರುತ್ತಿಲ್ಲ. ಕೆಲವೆಡೆಯಂತೂ ಇದೊಂದು ಸಾಮಾನ್ಯ ವಿಷಯ!
*Iranian and Kurdish Rights Organization ಪ್ರಕಾರ ಯುರೋಪ್ ಮತ್ತು ಅಮೇರಿಕಾದಲ್ಲೂ ಮರ್ಯಾದ ಹತ್ಯೆಯ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆಯಂತೆ!
* ಅಮೇರಿಕಾದ ೨೦೧೪ರ ಜನಾಂಗ ಸ್ಥಿತಿ (demographics) ವರದಿಯ ಪ್ರಕಾರ ಪ್ರತಿ ವರ್ಷ ಈ ದೇಶದಲ್ಲೇ ೨೩ ರಿಂದ ೨೭ ಮರ್ಯಾದಾ ಹತ್ಯೆಯ ಪ್ರಕರಣಗಳು ಕಾಣಿಸುತ್ತಿವೆಯಂತೆ! ಆದರೆ ಸಾಕಷ್ಟು ಮಾಹಿತಿ ದೊರಕದೇ ಇದರ ಬಗ್ಗೆ ಬೆಳಕಿಗೆ ಬರದೇ ಹೋಗುತ್ತಿದೆ ಎನ್ನಲಾಗಿದೆ.
*ಈ ಕೆಳಗಿನ ಲಿಂಕಿಗೆ ಹೋಗಿ ನೋಡಿದರೂ ಸಾಕು, ಜಗತ್ತಿನಾದ್ಯಂತ ಈ ಒಂದು ಮಾರಕ ಪಿಡುಗು ಹೇಗೆ ಹಬ್ಬಿ ಬಲಿತಿದೆ ಎಂದು ನಿಚ್ಚಳವಾಗುವುದು! (ಇನ್ನೂ ಕೆಲವು ಕೊಂಡಿಗಳನ್ನು ಕೊನೆಯಲ್ಲಿ ನೀಡಿದ್ದೇನೆ.)

ಭಾರತದಲ್ಲಿ ಮರ್ಯಾದಾ ಹತ್ಯೆ:-
ಭಾರತದಲ್ಲಿ ಇದು ಮತ್ತೆಮತ್ತೆ ಕೇಳಿಬರುತ್ತಿರುವ, ಕಂಡು ಬರುತ್ತಿರುವ ಹೇಯ ಕೃತ್ಯವಾಗಿದೆ. ವಿಶೇಷವಾಗಿ ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಗಣನೀಯವಾಗಿ ಹೆಚ್ಚಿವೆ. ಹರ್ಯಾಣದಲ್ಲಿ ಬಲಶಾಲಿಯಾಗಿರುವುದೇ ಅಲ್ಲಿಯ ‘ಖಾಪ್’ ಪಂಚಾಯಿತಿ! ಇಲ್ಲಿ ಕೋರ್ಟು, ಪೋಲೀಸ್ಟೇಶನ್ ಯಾವುದೂ ನಡೆಯುವುದಿಲ್ಲ ಎಂದು ಓದಿರುವೆ. ಮರ್ಯಾದಾ ಹತ್ಯೆಗೆ, ಹೆಣ್ಮಕ್ಕಳ ಹಕ್ಕು ಚ್ಯುತಿಗೆ ಈ ಖಾಪ್ ಪಂಚಾಯಿತಿಯ ಅಂಧಾ ಕಾನೂನೇ ಕಾರಣ. ನಮ್ಮ ಸುಪ್ರೀಂ ಕೋರ್ಟೇ ಇಂಥಾ ಪಂಚಾಯಿತಿಗಳನ್ನು ತೆಗೆದುಹಾಕಬೇಕೆಂದು ಅಲ್ಲಿನ ಎಸ್ಪಿಗಳಿಗೆ ಮಾಹಿತಿ ನೀಡಿದ್ದರೂ ಅವರ ರಾಜ್ಯಭಾರ ನಿಂತಂತಿಲ್ಲ. ಅವರ ಪ್ರಕಾರ ಸರ್ವೋಚ್ಚ ನ್ಯಾಯಾಲಯಕ್ಕೇ ಸರಿಯಾದ ನ್ಯಾಯ ಗೊತ್ತಿಲ್ಲ... ಅವರೇ ಸರಿ ಎಂಬಂತೇ ಧಿಮಾಕು ತೋರುವ ಹೇಳಿಕೆ ನೀಡಿದ್ದರು. ‘ಖಾಪ್’ ಪಂಚಾಯತಿಯ ದೌರ್ಜನ್ಯದ ವಿರುದ್ಧ ಸಿಡಿದೇಳುವ, ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಚಲನಚಿತ್ರಗಳು ಬಂದಿವೆ.
ಉದಾಹರಣೆಗೆ : ಹಿಂದಿಯ “ಖಾಪ್” ಎಂಬ ಹೆಸರನಿದೇ ಚಲನಚಿತ್ರ.
ಮದುವೆ ಎಂಬುದು ಎರಡು ಕುಟುಂಬಗಳ ನಡುವಿನ ಸುಂದರ ಬಂಧ, ಎರಡೂ ಕಡೆಯವರ ಅದರಲ್ಲೂ ವಿಶೇಷವಾಗಿ ಹೆತ್ತವರ ಸಮ್ಮತಿ ಇದ್ದರೆ ಅದಕ್ಕೊಂದು ಮೆರುಗು, ಹೆಚ್ಚು ಸಾಮಾಜಿಕ ಭದ್ರತೆ ದೊರಕುತ್ತದೆ, ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನೆಲ್ಲಾ ಒಪ್ಪೋಣ. ಆದರೆ ಎಷ್ಟೋಸಲ ಹೆತ್ತವರಿಗೆ ತಮ್ಮ ಮಕ್ಕಳ ಒಳಿತು ಕೆಡುಕು ತಮಗಿಂತ ಚೆನ್ನಾಗಿ ಬಲ್ಲವರು ಯಾರೂ ಇಲ್ಲ ಎಂಬ ಭ್ರಮೆ ಇದ್ದಿರುತ್ತದೆ. ತಮ್ಮ ಮಕ್ಕಳೂ ತಮ್ಮಷ್ಟೇ ಅವರ ಬದುಕನ್ನು ಇರ್ಧರಿಸುವ ಹಕ್ಕುಳ್ಳುವರು, ಅವರೂ ತಿಳುವಳಿಕೆ ಹೊಂದಿರುತ್ತಾರೆ ಎಂಬುದನ್ನು ಮರೆತುಬಿಡುವರು. ಅವರ ಇಷ್ಟವನ್ನರಿಯದೇ ತಮ್ಮ ದೃಷ್ಟಿಯಲ್ಲಿ ಸೂಕ್ತ ಎನ್ನಿಸುವ ಕಡೆಗೆ ಒತ್ತಾಯದಿಂದ ಮದುವೆಮಾಡಿಸಲು ನೋಡುವರು. ಹೆಚ್ಚಿನ ಸಮಯದಲ್ಲಿ ಆರ್ಥಿಕ ಅಸಮಾನತೆ, ಜಾತಿ ಅಸಮಾನತೆಯೇ ಇದಕ್ಕೆ ಮೂಲಕಾರಣವಾಗಿರುತ್ತದೆ. ಆದರೆ, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಇದ್ದರೆ ಎಲ್ಲದರೂ ಹೊಂದಾಣಿಕೆ ಸಾಧ್ಯ ಎನ್ನುವುದನ್ನೇ ಮರೆತುಬಿಡುತ್ತಾರೆ. ಇಷ್ಟಕ್ಕೂ ಸುದೀರ್ಘ ಬಾಳುವೆ ಮಾಡುವವರೇ ಅವರಿಬ್ಬರು ಎಂಬುದನ್ನು ಮರೆತು ತಾವು ಆಜೀವನ ಅವರಜೊತೆ ಇರುವವರು ಎಂದೇ ಭ್ರಮಿಸಿರುತ್ತಾರೆ. ಇದರ ಅರ್ಥ ಅಂತರ್ಜಾತೀಯ ವಿವಾಹಗಳೆಲ್ಲಾ ಯಶಸ್ವಿಯಾಗುತ್ತವೆ ಎಂದಲ್ಲ. ಹಾಗೆಯೇ ವಿಚ್ಛೇದನಗಳು ಸ್ವಜಾತೀಯ ವಿವಾಹಗಳಲ್ಲೂ ಸಾಕಷ್ಟು ಇರುತ್ತವೆ ಎಂಬುದನ್ನೂ ಮರೆಯದಿರೋಣ. ಯಾವುದೂ ಇದ ಮಿತ್ಥಂ ಎನ್ನುವಂತಿಲ್ಲ. ಹೀಗಿರುವಾಗ ತಮ್ಮ ಜಾತಿಯಲ್ಲ ಎಂದೋ, ತಮಗಿಂತ ಹಣಕಾಸಿನಲ್ಲಿ ದುರ್ಬಲರಾಗಿದ್ದಾರೆಂದೋ ತುಚ್ಛೀಕರಿಸುವುದು, ಹೀಗಳೆಯುವುದು, ತಿರಸ್ಕರಿಸುವುದು – ಹೋಗಲಿ ಅದೆಲ್ಲಾ ಮಾಡಿ ಅವರನ್ನು ಅವರಷ್ಟಕ್ಕೆ ಬಿಟ್ಟರೂ ಪುಣ್ಯ ಬರುವುದೇನೋ! ತಮ್ಮ ಇಲ್ಲದ ಪ್ರತಿಷ್ಠೆ, ಇರದ ಮಾನದ ಉಳಿವಿಗಾಗಿ ಕೊಲ್ಲಿಸುವಷ್ಟು ಕ್ರೌರ್ಯಕ್ಕೆ ಹೋಗುತ್ತಾರಲ್ಲ ಅದೆಂಥಾ ಮರ್ಯಾದೆ ಇವರದಪ್ಪಾ ಎಂದೆನಿಸಿಬಿಡುತ್ತದೆ!
ಪ್ರಸ್ತುತ ಪ್ರಕರಣವನ್ನೇ ತೆಗೆದುಕೊಂಡರೆ, ತೆಲಂಗಾಣದ ಅಮೃತ ಮತ್ತು ಪ್ರಣಯ್ ಜೋಡಿಯನ್ನು ಬೇರ್ಪಡಿಸಿ, ಗರ್ಭಿಣಿಯಾಗಿರುವ ಮಗಳ ಗಂಡನನ್ನೇ ಕೊಲ್ಲಿಸಿ ಈಗ ಪೂಲೀಸರ ಕಸ್ಟಡಿಯಲ್ಲಿರುವ ಅವಳ ತಂದೆಯ ಮರ್ಯಾದೆ, ಘನತೆ ಹೆಚ್ಚಾಯಿತೇ?! ಹುಟ್ಟಿನಿಂದ ಬೆಳೆಯುವವರೆಗೂ ಮುದ್ದಿನಿಂದ ಸಾಕಿದ ಮಕ್ಕಳನ್ನೇ ತರಿಯಲು ಅವರು ಬಲಿಗಾಗಿ ತಂದು ಸಾಕಿದ ಕುರಿ, ಕೋಣ, ಪ್ರಾಣಿಗಳಲ್ಲ ಅಲ್ಲವೇ? ಅಥವಾ ಇಂಥಾ ಹೆತ್ತವರಿಗೆ ಮಕ್ಕಳೆಂದರೆ ಅಷ್ಟೇಯೋ ಎಂಬುದೇ ಗೊತ್ತಾಗುತ್ತಿಲ್ಲ!
ಇನ್ನು ಈ ಮರ್ಯಾದಾ ಹತ್ಯೆಯನ್ನು ಕೇವಲ ತಂದೆಯೋ, ಚಿಕ್ಕಪ್ಪನೋ ಮಾಡಿಸುತ್ತಾರೆಂದುಕೊಳ್ಳಬೇಡಿ. ಸ್ವಂತ ತಾಯಿ, ಅಜ್ಜಿಯೂ ಮಾಡಿಸಬಲ್ಲರು! ಉದಾಹರಣೆಗೆ ಲಾಹೋರಿನ ಝೀನತ್ ಎಂಬ ಹದಿನೆಂಟರ ಹರೆಯದ ಮಗಳನ್ನು ಅವಳ ಸ್ವಂತ ತಾಯಿ ಪರ್ವೀನ್ ರಫೀಕ್ ಎಂಬಾಕೆ ಸಜೀವ ದಹನ ಮಾಡಿದ್ದಳು. ಇದಕ್ಕೆ ಕಾರಣ ಮಗಳು ತನ್ನಿಚ್ಛೆಯಂತೇ ಮದುವೆಯಾಗದೇ ತನ್ನ ಬಾಲ್ಯದ ಗೆಳೆಯನನ್ನು ವರಿಸಿದ್ದೇ ಆಗಿತ್ತಂತೆ! ಬಿಹಾರದಲ್ಲಿ, ಹರ್ಯಾಣದಲ್ಲಿ, ಕರ್ನಾಟಕದಲ್ಲಿ ಹೀಗೆ ಎಗ್ಗಿಲ್ಲದೇ ಎಲ್ಲೆಡೆಯೂ ಇಂಥ ಹತ್ಯೆಗಳು ಆಗುತ್ತಲೇ ಇವೆ. ಎಷ್ಟೋ ಬೆಳಕಿಗೇ ಬರುವುದಿಲ್ಲ! ಈ ರೀತಿ ಇಂಥಾ ಅನೇಕಾನೇಕ ಪ್ರಕರಣಗಳು ಎಲ್ಲೆಡೆಯೂ ಹೆಚ್ಚುತ್ತಿರುವುದು ದುರದೃಷ್ಟಕರ ಮತ್ತು ಖೇದನೀಯ ಸಂಗತಿ.

ಮರ್ಯಾದಾ ಹತ್ಯೆಗೆ ಪ್ರಮುಖ ಕಾರಣಗಳು :-

ಮೊತ್ತಮೊದಲ ಕಾರಣವೇ ಸ್ವಪ್ರತಿಷ್ಠೆ, ಮೂಢತೆ ಮತ್ತು ದುರಹಂಕಾರದ ಪರಾಕಷ್ಠೆ.
ಇದರ ನಂತರ… (ಇದು ನಾನು ಅಲ್ಲಲ್ಲಿ ಓದಿದ, ಅನೇಕ ವರ್ಷಗಳಿಂದ ಕೇಳಿದ ಘಟನೆಗಳನ್ನಾಧರಿಸಿ ವಿಂಗಡಿಸುತ್ತಿರುವುದು…)
೧) ಜಾತೀಯತೆ(ಸ್ವಜಾತಿಯಲ್ಲೇ ಮೇಲ್ಜಾತಿ, ಕೀಳ್ಜಾತಿಯೆಂದು ಅಥವಾ ಅನ್ಯಜಾತಿಯವರೆಂದು)
೨) ಸಲಿಂಗಕಾಮ (ಸಲಿಂಗಕಾಮಿ ಎಂದಾಕ್ಷಣ ಆತ/ಆಕೆ ತಮ್ಮ ಮನೆತನಕ್ಕೆ ಕುಂದು ಎಂದು ಕೊಂದು ಬಿಟ್ಟಿರುವ ಅನೇಕ ಪ್ರಕರಣಗಳಿವೆ)
೩) ಅನೈತಿಕ ಸಂಬಂಧದ ನೆಪದಲ್ಲಿ (ವಿವಾಹೇತರ ಅಥವಾ ವಿವಾಹ ಪೂರ್ವದ್ದು)
೪) ಹೆಣ್ಣೆಂದರೆ ಸದಾ ತಮ್ಮ ಅಡಿಯಾಳು ಎಂದೇ ಭಾವಿಸಿಕೊಂಡು ಬಂದಿರುವ ದುಷ್ಟ ಮನಸ್ಥಿತಿ.
೫) ಆರ್ಥಿಕ ಅಸಮಾನತೆ (ತಮಗಿಂತ ಕಡಿಮೆ ದುಡ್ಡಿರವವರೆಂದೋ, ಬಡವರೆಂದೋ ತಾತ್ಸಾರದಲ್ಲಿ…)
೬) ವೈಯಕ್ತಿಕ ಅಥವಾ ಕೌಟುಂಬಿಕ ಕಲಹ/ದ್ವೇಷ (ಅಜ್ಜರ, ಪಿಜ್ಜರ ಕಾಲದ ಜಗಳದ ನೆಪದಲ್ಲಿ)
೭) ರಾಜಕೀಯ ಹಸ್ತಕ್ಷೇಪ, ಪಿತೂರಿ (ತನಗಾಗದ ಬಣದವರಿದ್ದರೆ ಅವರ ಕಡೆಯ ಹುಡುಗಿಯೋ/ಹುಡುಗನೋ ವಿರುದ್ಧ ಪಂಗಡದವರನ್ನು ಪ್ರೀತಿಸಿದ್ದು ತಿಳಿದುಬಂದರೆ, ಆ ಮನೆಯವರನ್ನು ಎತ್ತಿಕಟ್ಟಿ ಕೊಲ್ಲಿಸಿ ಅದನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಪ್ರಕರಣಗಳೂ ಹಲವು ಇರುತ್ತವೆ) ಹೀಗೆ ಕಾರಣಗಳು ಅನೇಕ.

ಪರಿಹಾರದ ಕುರಿತು ಒಂದು ಕಿರು ಚಿಂತನೆ :-

ಯಾವುದೇ ಸಮಸ್ಯೆಯಿರಲಿ ಅದನ್ನು ಕೇವಲ ಎದುರಿಟ್ಟು ಗೋಳಾಡುತ್ತಲೋ, ದೂರುತ್ತಲೋ ಇದ್ದುಬಿಟ್ಟರೆ ಪರಿಹಾರವೇನೂ ಸಿಗದು. ಖಂಡನೆಯ ಜೊತೆಗೆ ನಿವಾರಣೆಯೂ ಅತ್ಯಗತ್ಯ. ಕೊಲ್ಲುವುದಕ್ಕೆ ಪರಿಹಾರ ಮಾನವೀಯ ಸಂಸ್ಕಾರ ಬೆಳೆಸುವುದೊಂದೇ ಎನ್ನಿಸುತ್ತದೆ ನನಗೆ! ಈ ಸಮಸ್ಯೆಗೆ ಪರಿಹಾರ ತಕ್ಷಣಕ್ಕಂತೂ ಸಾಧ್ಯವಿಲ್ಲ. ಸಮಾಜದೊಳಗೆ ಆಳವಾಗಿ ಬೇರೂರಿರುವ ಈ ಮನಃಸ್ಥಿತಿಯನ್ನು ಬದಲಾಯಿಸುವ ಮನಸ್ಸು ನಾವು ಮಾಡಬೇಕಷ್ಟೇ. ಮುಂದಿನ ಪೀಳಿಗೆಯ ತಲೆಯಲ್ಲಿ ಕೌಟುಂಬಿಕ ಮರ್ಯಾದೆ, ಸ್ವಪ್ರತಿಷ್ಠೆ, ಮನೆತನದ ಗೌರವ ಎಲ್ಲದೂ ಇರುವುದು ನಮ್ಮ ಉತ್ತಮ ನಡತೆ, ಮೌಲ್ಯಯುತ ಬದುಕು ಹಾಗೂ ಜೀವನ ಕ್ರಮ ಹಾಗೂ ಸ್ವಾಭಿಮಾನದ ಬದುಕಿನಲ್ಲಿ… ಪರಸ್ಪರ ಕೊಲ್ಲದೇ ಸಹಬಾಳ್ವೆ ಮಾಡುವುದರ ಮೂಲಕ, ಎಲ್ಲರನ್ನೂ ಗೌರವಿಸುವುದರ ಮೂಲಕ, ನಮ್ಮ ಸಂಪ್ರದಾಯವನ್ನು ಘನತೆಯಿಂದ ಆಚರಿಸುತ್ತಲೇ ಮತ್ತೊಬ್ಬರ ಆಚರಣೆಯನ್ನೂ ಸಮ್ಮಾನಿಸುವುದರಲ್ಲಿ ಎಂಬ ಮನೋಭಾವವನ್ನು ಬೆಳೆಸುವುದರ ಮೂಲಕವಷ್ಟೇ ನಿಧಾನದಲ್ಲಿ ಇದನ್ನು ಪರಿಹಾರ ಮಾಡಬಹುದು. ಮೇಲು ಕೀಳು ಎನ್ನುವುದು ಹಣದಲ್ಲಾಗಲೀ, ಜಾತಿಯಲ್ಲಾಗಲೀ ಬರದೇ, ಗುಣ, ಸ್ವಭಾವದಲ್ಲಿ ಬರುವಂಥದ್ದು ಎನ್ನುವುದನ್ನು ತಿಳಿಸಿಕೊಡಬೇಕು. ಆದರೆ ಇಂಥ ಸಮಸ್ಯೆಗೆ ಪರಿಹಾರ ಏಕಪಕ್ಷೀಯವಾಗಂತೂ ಸಾಧ್ಯವಿಲ್ಲ. ಎಲ್ಲಾ ರೀತಿಯ ಜಾತಿ ಧರ್ಮಗಳಲ್ಲೂ ಆಗುತ್ತಾ ಹೋದರೆ ಮಾತ್ರ ಕ್ಷಿಪ್ರಗತಿಯಲ್ಲಿ ಬೆಳಕು ಕಾಣಬಹುದು. ಈಗಾಗುತ್ತಿರುವುದೆಲ್ಲಾ ತಾನು, ತಮ್ಮವರು ಶುದ್ಧರು, ಕ್ಷುದ್ರರೆಲ್ಲಾ ಎದುರಿನವರೇ ಎಂಬ ಅಲ್ಪಜ್ಞಾನ ಹಾಗೂ ಪಲಾಯನವಾದವೇ ಇದಕ್ಕೆ ಕಾರಣ. ಅಲ್ಲದೇ, ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣವೆಂಬಂತೇ ಎಂಥದ್ದೇ ದುರಂತ ಬರಲಿ, ವಿಪತ್ತು ಕಾಡಲಿ ಈ ದೇಶವನ್ನು, ರಾಜ್ಯವನ್ನು, ಜಿಲ್ಲೆಯನ್ನು, ಜಾತಿಯನ್ನು ನಿಂದನೆ ಮಾಡುವುದರಲ್ಲೇ ಕಾಲಹರಣಮಾಡಿದರೆ, ಮತ್ತಷ್ಟು ಬಿಗಡಾಯಿಸಿದಂತಾಗುವುದು ಅಷ್ಟೇ. ತಿವಿಯುವುದರಲ್ಲಿ, ಚುಚ್ಚುವುದರಲ್ಲಿ, ಕೆಡವುದರಲ್ಲಿ ಮೇಲೆತ್ತುವಿಕೆ, ಸುಧಾರಣೆ ಅಸಾಧ್ಯ. ಸುಧಾರಣೆ ಮಾಡುವುದಾದರೆ ನಮ್ಮ ಮನೆ-ಮನಗಳಲ್ಲಿ ಆರಂಭಿಸುವ. 
*ನಮ್ಮ ಮಕ್ಕಳಿಗೆ “There is no Honor in Killing”, ಮರ್ಯಾದೆ ಹೆಚ್ಚುವುದು ಅಮಾಯಕರನ್ನು ಕೊಲ್ಲುವುದರಲ್ಲಲ್ಲ, ಕಾಪಾಡುವುದರಲ್ಲಿ ಎಂಬುದನ್ನು ತಿಳಿಸೋಣ. ಇದೆಲ್ಲದರ ಜೊತೆಗೇ,
*ನೀನು ತೆಗೆದುಕೊಳ್ಳುವ ನಿರ್ಧಾರದ ಸಾಧಕ ಬಾಧಕಗಳ, ಕಷ್ಟ, ಸುಖಗಳ ಚಿಂತನೆಯೂ ನಿನ್ನ ಹಕ್ಕು, ಜವಾಬ್ದಾರಿ ಎನ್ನುವುದನ್ನೂ ತಿಳಿಸುತ್ತಾ ಹೋಗೋಣ. ಒಳಿತು ಕೆಡುಕು ಇದಾಗಿದ್ದರಬಹುದೇ ಎಂದು ಚರ್ಚಿಸುತ್ತಾ ಹೋಗೋಣ. ಅವರ ಜೊತೆಗೆ ನಿರ್ಧಾರ ಮಾಡೋಣ. 
*ಎಲ್ಲಕ್ಕಿಂತ ಮುಖ್ಯವಾಗಿ ಗಂಡು ಮಕ್ಕಳಿಗೆ ಮನೆಯ ಹೆಣ್ಮಕ್ಕಳನ್ನು ಗೌರವಿಸುವ, ಪ್ರೀತಿಸುವ, ಅವರು ತಮಗೆ ಸಮಾನರೆಂದು ತಿಳಿಯುವ ವಿವೇಕವನ್ನು ವಿನಮ್ರತೆಯನ್ನು ಬೆಳೆಸಿದರೂ ಸಾಕು. ಇಂಥಾ ಹತ್ಯೆಯ ಜೊತೆಗೆ ಅತ್ಯಾಚಾರದಂಥ ಪಿಡುಗೂ ಕಡಿಮೆಯಾಗುತ್ತಾ ಹೋಗುವುದು. 
*ಇನ್ನು ಅವರೇನಾದರೂ ತಾವು ತೆಗೆದುಕೊಂಡ ನಿರ್ಧಾರದಲ್ಲಿ (ಯಾವುದೇ ಇರಲಿ) ಅಪ್ಪಿತಪ್ಪಿ ಎಡವಿದಾಗ ಸಾಧ್ಯವಾದಷ್ಟು ಸಾಥ್ ಕೊಡಿ. ಅದೂ ಸಾಧ್ಯವಾಗದಿದ್ದರೆ ಸುಮ್ಮನಿದ್ದು ಬಿಡಿ. ಎಡವಿದಾಗಲೇ ಬದುಕು ತೆರೆದುಕೊಳ್ಳುವುದು. ಅಲ್ಲಿಂದ ಪಾಠ ಕಲಿತರೇ ಬೆಳೆಯಲಾಗುವುದು. ಕಲಿಯದಿದ್ದರೆ ಮತ್ತೆಮತ್ತೆ ಕಲಿಸಲು ಬದುಕಂತೂ ಜೊತೆಗಿದ್ದೇ ಇರುತ್ತದೆ. 
ಈರೀತಿ, ನಮ್ಮ ಮಕ್ಕಳಿಂದ, ಮುಂದಿನ ಪೀಳಿಗೆಯಿಂದಲಾದರೂ ಮರ್ಯಾದಾ ಹತ್ಯೆಯಂಥ ಸಾಮಾಜಿಕ ದುರಂತ ನಿಲ್ಲುವಂತಾಗಲಿ ಎಂದೇ ಹಾರೈಸೋಣ, ಪ್ರಯತ್ನಿಸೋಣ.
ಸೂಚನೆ:- ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಕೆಲವು ಅಂತರ್ಜಾಲ ಕೊಂಡಿಗಳು ಇಲ್ಲಿವೆ. ಜಗತ್ತಿನಲ್ಲಿ ಮತ್ತು ನಮ್ಮಲ್ಲಿ ನಡೆದಿರುವ ಕೆಲವು ಪ್ರಕರಣಗಳ ವಿವರಗಳೂ ಇವೆ. ನೀವೂ ಹುಡುಕಾಡಿದರೆ ಮತ್ತೂ ಹೆಚ್ಚಿನ ಮಾಹಿತಿಗಳು ಸಿಗಬಹುದು. ಪ್ರಸ್ತುತ ಲೇಖನವನ್ನೂ ನಾನು ಅಂತರ್ಜಾಲದ ಮಾಹಿತಿಗಳನ್ನಾಧರಿಸಿಯೇ ಬರೆದಿರುವುದು.

~ತೇಜಸ್ವಿನಿ ಹೆಗಡೆ



ಸೋಮವಾರ, ಫೆಬ್ರವರಿ 20, 2017

ಅಂಗೈಯಲ್ಲಿ ಅಡುಗೆ ಮನೆ....

ಈ ವಾರದ (೧೯-೦೨-೨೦೧೭) ನನ್ನ ಉದಯವಾಣಿ ಅಂಕಣವನ್ನೋದಿ ಬಹಳ ಜನ ನನ್ನ ಹೊಸ ಮನೆಯ ಅಡುಗೆಮನೆಯ ವಿಶಿಷ್ಟ ಜೋಡಣೆಯನ್ನು ನೋಡ ಬಯಸಿದ್ದರಿಂದ ಅದರ ಚಿತ್ರಗಳನ್ನು ವಿವರಣೆ ಸಮೇತ ಹಾಕುತ್ತಿದ್ದೇನೆ. ಇದರ ಉದ್ದೇಶ, ನಿಂತು ಅಡುಗೆ ಮಾಡಲು ಅಸಾಧ್ಯವಾದವರು ಇಂಥದ್ದೊಂದು ಸಾಧ್ಯತೆಯ ಬಗ್ಗೆ ಅರಿತುಕೊಳ್ಳಲೆಂಬುದೇ ಆಗಿದೆ. ಅಲ್ಲದೇ, ಹಳೆಯ ಕಾಲದಲ್ಲೂ ಇಂಥದ್ದೇ ಮಾದರಿಯಿತ್ತು.. ಫಿಸಿಯೋ ಥೆರಪಿಸ್ಟ್ಸ್ ಕೂಡ ಸ್ವಸ್ಥರಾಗಿದ್ದವರೂ ಬಹು ಕಾಲ ನಿಂತು ಅಡುಗೆ ಮಾಡುವುದು ಒಳ್ಳೆಯದಲ್ಲ ಆರೋಗ್ಯಕ್ಕೆ ಎಂದೇ ಹೇಳುತ್ತಾರೆ. ಅದಕ್ಕೆಂದೇ ಬಹುಶಃ ಹಿಂದೆ ಕುಳಿತಡಿಗೆಯೇ ಮಾಡುತ್ತಿದ್ದರು!

ಚಿತ್ರ - ೧




ಇದು ನನ್ನ ಅಡಿಗೆ ಕಟ್ಟೆ..  ಸ್ಟೂಲ್ ಇದೆಯಲ್ಲಾ .. ಅದರ ಮೇಲೆ ಕುಳಿತು ಅಡುಗೆ ಮಾಡುತ್ತೇನೆ.. ಒಮ್ಮೊಮ್ಮೆ ಸೀದಾ ಕಟ್ಟೆಯ ಮೇಲೇ ಕುಳಿತು ಒಲೆಯನ್ನು ನನ್ನತ್ತ ತಿರುಗಿಸಿಕೊಂಡು ಮಾಡುವುದೂ ಇದೆ. ಒಲೆಯ ಪೈಪ್ ಬಹಳ ಉದ್ದವಿಟ್ಟುಕೊಂಡು ಸಿಕ್ಕಿಸಿಕೊಂಡಿರುವೆ. ಬೇಕಾದಾಗ ಸಡಿಲಗೊಳಿಸಿಕೊಂಡು ಎಷ್ಟು ದೂರದವರೆಗೂ ಎಳೆದುಕೊಳ್ಳಲು ಸಹಕಾರಿಯಾಗುವಂತೆ. ಅಲ್ಲಿರುವ ಎಲ್ಲಾ ಸಾಮಾನುಗಳೂ ನನಗೆ ಸಿಗುವಂತಿವೆ. ಅಲ್ಲೇ ಪಕ್ಕದಲ್ಲಿ ಕೆಳಗೆ ಸಿಂಕ್ ಇದೆ.

ಚಿತ್ರ - ೨




ಈ ಚಿತ್ರದಲ್ಲಿ ಫ್ರಿಜ್ ಇದೆ. ಅದರ ಬಾಗಿಲು ಕಿಚನ್ ಎಂತ್ರೆನ್ಸ್ ಅಭಿಮುಖವಾಗಿಟ್ಟುಕೊಂಡಿರುವೆ.. ಕಾರಣ.. ವ್ಹೀಲ್ ಚೇರಿನಲ್ಲಿ ಸೀದಾ ಬಂದೂ ಬಾಗಿಲು ತೆಗೆದು ಬೇಕಾದ್ದನ್ನು ಪಡೆಯುವಂತೆ ಇಲ್ಲಾ ಕುಳಿತಿರುವಾಗಲೂ ಸ್ಟೂಲ್ ನಿಂದಲೇ ಬಾಗಿಲು ತೆಗೆದುಕೊಳ್ಳುವಂತೇ.. ಸದ್ಯಲ್ಲೇ ಅಂಥದ್ದೇ ಮರದ ಪುಟ್ಟ ಸ್ಟೂಲ್ ಮಾಡಿಸಿ ಅದ ಕಾಲ್ಗಳಿಗೆ ಪುಟ್ಟ ವ್ಹೀಲ್ಸ್ ಹಾಕಿಕೊಂಡು ಕಿಚ ಸುತ್ತಾ ಕುಳಿತಲ್ಲೇ ತಿರುಗುವಂತೇ ಮಾಡಿಸಿಕೊಳ್ಳಬೇಕೆಂದಿರುವೆ. ಆಫೀಸ್ ಚೇರ್ನಂತೇ. ಅದು ಎತ್ತರವಾಗುತ್ತದೆ.. ಜಾಗ ಬಹಳ ತಿನ್ನುತ್ತದೆ.. ಎಕ್ಸ್‍ಪೆನ್ಸಿವ್ ಕೂಡ. ಅದೇ ಇಂಥಾ ಪುಟ್ಟ ಸ್ಟೂಲ್ ಸಕಲ ರೀತಿಯಲ್ಲೂ ಅನುಕೂಲಕರ. ಯಾರೂ ಬಳಸಬಹುದು. ಉಳಿತಾಯವೂ ಕೂಡ.. ವ್ಹೀಲ್ ಹಾಕಿಸಿಕೊಂಡರೆ ಆಯಿತು ಕೆಳಗೆ.

ಚಿತ್ರ - ೩




ಇದು ಪಕ್ಕದಲ್ಲೇ ಇರುವ ತುಸು ಎತ್ತರದ ಅಡುಗೆ ಕಟ್ಟೆ. ಆದರೆ ಅದರ ಕೆಳಗೆ ಇರುವುದೆಲ್ಲಾ ಕಪಾಟುಗಳು.. ನನಗೆ ಸಿಗುವ ರೀತಿಯಲ್ಲಿವೆ. ಮೇಲಿನ ಕಟ್ಟೆಯಲ್ಲಿ ಬಾಸ್ಕೆಟ್ ಇಡುವೆ. .ವ್ಹೀಲ್‍ಚೇರಿನಲ್ಲಿ ಬಂದಾಗ ಸಿಗುವಂತೆ. ಒಮ್ಮೊಮ್ಮೆ ಅಮ್ಮ ಅಡುಗೆ ಅಲ್ಲೂ ಒಂದು ಸಿಂಕ್ ಇದೆ.. ಕೆಳಗೆ ಬಗ್ಗಲು ತೊಂದರೆ ಆಗುವವರಿಗೆ ಮೇಲೆಯೇ ಕೈ ತೊಳೆಯಲೆಂದು ಒಂದು ಪುಟ್ಟ ಸಿಂಕ್.

ಚಿತ್ರ ೪



ಸಿಂಕ್ ತುಂಬಾ ತಳಮಟ್ಟದಲ್ಲಿದೆ.. ಅಡುಗೆ ಕಟ್ಟೆಯನ್ನು ನಾನು ತೊಳೆದರೂ ನೀರೆಲ್ಲಾ ಅದರೊಳಗೇ ಬೀಳುವಂತಿದೆ. ಅದರ ಮೇಲೆಯೇ ಸೌಟು, ಚಮಚಗಳನ್ನು ತೂಗುಹಾಕುವ ಸ್ಟ್ಯಾಂಡ್. ಸಿಂಕ್ ಪೈಪ್ ಕೂಡ ಅದಕ್ಕೆ ಪೂರಕವಾಗಿ ಬೇಕಾದಂತೆ ಹಾಕಿಕೊಂಡಿರುವೆ. ನೆನಪಿರಲಿ.. ಇದೂ ಅಷ್ಟು ಎಕ್ಸ್‌ಪೆನ್ಸಿವ್ ಅಲ್ಲಾ. :)


ಚಿತ್ರ ೫


ಇದು ಕುಡಿವ ನೀರಿನ ಫ್ಲಿಲ್ಟರ್. ಇದೂ ತಗ್ಗಿನಲ್ಲಿದೆ. ಇದರ ನೀರು ಹೊರಗೆ ಹೋಗಲು ಪೈಪ್ ಕೂಡ ಕೆಳಗಿರಿಸಲಾಗಿದೆ. ಕಟ್ಟೆಯ ಮೇಲೆ ಕುಳಿತರೆ ಸರಾಗವಾಗಿ ನೀರು ಸಿಗುವುದು.

ಚಿತ್ರ ೬




ಫ್ರಿಜ್ ಪಕ್ಕದಲ್ಲೇ ಒಂದು ಪುಟ್ಟ ಕಪಾಟು. ನನಗೇ ಸಿಗುವಷ್ಟು ಎತ್ತರದಲ್ಲಿದೆ. ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಸಿ ಮಾಡಿಕೊಂಡಿದ್ದು.


ಚಿತ್ರ ೭


ಅಡುಗೆ ಮನೆಯ ಪಕ್ಕದಲ್ಲೇ ಪುಟ್ಟ ಸ್ಟೋರೇಜ್, ಹಾಗೆಯೇ ಅತ್ತ ಕಡೆ (ಮಿಶನ್ನಿಗೆ ಅಭಿಮುಖವಾಗಿದೆ.. ಇಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ..) ಕುಳಿತೇ ಪಾತ್ರೆ, ಸಣ್ಣ ಪುಟ್ಟ ಬಟ್ಟೆ ತೊಳೆಯುವ ಜಾಗ ಮತ್ತು ವಾಶಿಂಗ್ ಮೆಶಿನ್ ಇಟ್ಟಿದ್ದೇವೆ. ನಾನೇ ಬಟ್ಟೆಗಳನ್ನು ಕೆಳಗೇ ಕುಳಿತೂ ತೊಳೆಯಬಹುದು.. ಇಲ್ಲಾ ಮಿಶಿನ್ನಿಗೆ ಹಾಕಿ ತೊಳೆಯಲೂಬಹುದು. ಇನ್ನು ಬಹು ಮುಖ್ಯವಾಗಿ ಅಲ್ಲಿ ಹಾಲಿನಲ್ಲಿ ಚೌಕಾಕಾರದ ಬಾಗಿಲು ಕಾಣಿಸುವುದೇ? ಅದೇ ಲಿಫ್ಟ್ ಬಾಗಿಲು. ಕಡಿಮೆ ವೆಚ್ಚದಲ್ಲಿ ಬೇಸಿಕ್ ಸೆಟ್ಟಿಂಗ್ಸ್ ಮೂಲಕ ಸ್ಪೆಶಲ್ ಆಗಿ ಚೆನ್ನೈನಿಂದ ಜನ ಕರೆಸಿ ಡಿಸೈನ್ ಮಾಡಿಸಿದ್ದು. ಮಾಮೂಲಿ ಲಿಪ್ಟ್ ಆದರೆ ತುಂಬಾ ಖರ್ಚಾಗುವುದು.

ಇದಿಷ್ಟು ನನ್ನ ಪುಟ್ಟ ಅಡುಗೆಮನೆ :) ನಮ್ಮದು ೩೦*೪೦ ಕಾರ್ನರ್ ಸೈಟ್. ಅದರೊಳಗೇ ಸಾಕಷ್ಟು ವಿಶಾಲವಾಗಿ.. ಸರಾಗವಾಗಿ ವ್ಹೀಲ್‍ಚೇರ್ ತಿರುಗುವಂತೇ, ಜೊತೆಗೇ ನನಗೆ ಬೇಕಾದ ರೀತಿಯಲ್ಲಿ.. ಕೈಯಳತೆಗೆ ಎಟಕುವ ರೀತಿಯಲ್ಲಿ ಆದಷ್ಟು ಡಿಸೈನ್ ಮಾಡಿಸಿಕೊಂಡಿದ್ದು. ಬದುಕಲು ಬೇಕಾಗುವ ಅನುಕೂಲಕ್ಕೆ ಪ್ರಧಾನ ಆದ್ಯತೆ ನೀಡಿದ್ದೇವೆಯೇ ಹೊರತು ಯಾವುದೇ ರೀತಿಯ ದುಬಾರಿ ಇಂಟೀರಿಯರಿಗಲ್ಲ. ಈ ಚಿತ್ರಗಳಿಂದ, ವಿವರಣೆಯಿಂದ ಯಾರೋ ಒಬ್ಬರಿಗೆ ಅನುಕೂಲವಾದರೂ ಅದೇ ಸಂತೋಷ. ಹೆಚ್ಚಿನ ಮಾಹಿತಿಗೆ ನನಗೆ ಮೈಲ್ ಮಾಡಬಹುದು. ಪ್ರಾಮಾಣಿಕ, ನೈಜ ಮೈಲ್‍ಗಳಿಗೆ ಖಂಡಿತ ಉತ್ತರಿಸುವೆ..


~ತೇಜಸ್ವಿನಿ ಹೆಗಡೆ. 

ಶುಕ್ರವಾರ, ಸೆಪ್ಟೆಂಬರ್ 19, 2014

ಪಯಣ ಹೋರಾಟದ ಜೊತೆಗೆ.....

ಭಾರತದಲ್ಲಿ ಹೆಣ್ಣು ಎರಡನೆಯ ದರ್ಜೆಯ ಪ್ರಜೆ ಹೌದು/ಅಲ್ಲಾ ಎಂಬೆಲ್ಲಾ ವಾದ ನಡೆಯುತ್ತಲೇ ಇದೆ. ಅದು ನಿಲ್ಲುವುದು ಎಂದೋ ಎನ್ನುವುದೂ ತಿಳಿಯದು. ಆದರೆ ಹೆಣ್ಣು, ಗಂಡು, ಬಡವ, ಶ್ರೀಮಂತ, ಬ್ರಾಹ್ಮಣ, ದಲಿತ, ಹಿಂದು ಮುಸ್ಲಿಮ್ ಈ ಎಲ್ಲಾ ಗೊಂದಲ, ಗಲಾಟೆ, ಚರ್ಚೆ, ಹೋರಾಟ, ಪರದಾಟಗಳ ನಡುವೆ ನಾವು ಅಂದರೆ ವಿಶೇಷವಾಗಿ ಭಾರತೀಯರು ಮರೆತಿರುವುದು ಸಾಮಾಜಿಕ, ಆರ್ಥಿಕ, ಕೌಟುಂಬಿಕ ಎಲ್ಲಾ ರೀತಿಯಲ್ಲೂ ಇನ್ನೂ ಸಾಕಷ್ಟು ಹಿಂದುಳಿದಿರುವ, ಕುಗ್ಗಿ ಮೇಲೇರಲು ಇನ್ನಿಲ್ಲದಂತೇ ಪ್ರಯತ್ನಿಸುತ್ತಾ ಸೋತು ಸೊಪ್ಪಾಗುವ, ಬದುಕುವುದಕ್ಕಾಗಿ ಪ್ರತಿ ಕ್ಷಣ ಹೋರಾಡುವ, ಯಾವ ದರ್ಜೆಗೆ ಸೇರಿದರೆಂದೇ ತಿಳಿಯಲಸಮರ್ಥರಾಗಿರುವ, ಜಾತಿ-ಮತ-ಪಂಥ ಬೇಧವಿಲ್ಲದ ಒಂದು ವರ್ಗವನ್ನು!! ಹೌದು ನಾನಿಲ್ಲಿ ಹೇಳುತ್ತಿರುವ ಅಂಗವಿಕಲರ ಬಗ್ಗೆ...! ನಮ್ಮ ಸಮಾಜದಲ್ಲಿ ಇನ್ನೂ ಅವರ ಬಗ್ಗೆ ಆಳವಾಗಿ ಬೇರು ಬಿಟ್ಟಿರುವ ಒಂದು ರೀತಿಯ ಉಡಾಫೆ, ನಿರ್ಲಕ್ಷ್ಯತನ, ಸಲ್ಲದ ಕರುಣೆ, ಅನುಕಂಪದ ಭಾವದ ಪ್ರದರ್ಶನ, ಅವರ ಸಮಸ್ಯೆ, ಹಕ್ಕುಗಳ ಪ್ರತಿ ತೋರುವ ಅಸಡ್ಡೆಯ ಬಗ್ಗೆ.

ಆಮೀರ್ ನಡೆಸಿಕೊಡುತ್ತಿರುವ ಸತ್ಯಮೇವ ಜಯತೇ ನನಗೆ ಬಹುವಾಗಿ ಮೆಚ್ಚುಗೆಯಾಗಿದ್ದು ಅವನು ನೀಡುತ್ತಿದ್ದ ನಿಖರ ಅಂಕಿ-ಅಂಶಗಳನ್ನು ನೋಡಿ, ಸಮಸ್ಯೆಗೊಳಗಾದ ಜನರ ಬಾಯಿಯಿಂದಲೇ ಹೊರಡಿಸುತ್ತಿದ್ದ ಸತ್ಯಾಪಸತ್ಯೆಗಳ ವೈಖರಿಯನ್ನು ನೋಡಿ. ಮೂರು ಕೋಟಿ ಪಡೆದಿರುವ, ಅಷ್ಟು ಹಣಗಳಿಸಿರುವ.. ಹಾಗೆ ಹೀಗೆ ಎಂದೆಲ್ಲಾ ಆರೋಪಗಳನ್ನು ಪಕ್ಕಕ್ಕಿರಿಸಿ ನನ್ನ ಸೆಳೆದದ್ದು.... ಹೌದು ಇಂಥದ್ದೊಂದು ರಿಯಾಲಿಟೀ ಶೋ ಬೇಕಿತ್ತು... ಇಂಥ ಒಂದು ಸಾಮಾಜಿಕ ಚಳುವಳಿ, ಜಾಗೃತಿಯನ್ನುಂಟು ಮಾಡುವ ಕಾರ್ಯ ಅದೆಷ್ಟು ನಟರು ಮಾಡುತ್ತಿದ್ದಾರೆ ಹೇಳಿ? ಆ ನಿಟ್ಟಿನಲ್ಲೇ ನನಗೆ ಈ ಶೋ ಹೆಚ್ಚು ಇಷ್ಟವಾದದ್ದು.. ವರದಕ್ಷಿಣೆ, ಭ್ರೂಣ ಹತ್ಯೆ, ಅತ್ಯಾಚಾರ, ಭ್ರಷ್ಟಾಚಾರ ಈ ಎಲ್ಲಾ ಪಿಡುಗಗಳ ನಡುವೆ ಆತ ಅಂಗವಿಕಲ ಸಮಸ್ಯೆಗಳು, ಅವರ ದಿನದ ಬವಣೆಗಳು, ಅದಕ್ಕಿರುವ ಪರಿಹಾರ, ಅವರ ಹಕ್ಕುಗಳ ಕುರಿತು ದನಿಯೆತ್ತಿದ್ದ. ಈ ನಡುವೆ ಸ್ಟಾರ್‌ಪ್ಲಸ್‌ನಲ್ಲಿ ಸತ್ಯಮೇವ ಜಯತೆ ಕಾರ್ಯಕ್ರಮದ ಪ್ರಭಾವದಿಂದ ಏನೆಲ್ಲಾ ಸುಧಾರಣೆ, ಜಾಗೃತಿ ಉಂಟಾಗಿದೆ ಅನ್ನುವುದನ್ನು ತೋರುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ನನ್ನ ಸೆಳೆದದ್ದು ಗ್ವಾಲಿಯರ್‌ನ ಜಿಲ್ಲಾಧಿಕಾರಿಯೋರ್‍ವ ತನ್ನ ವ್ಯಾಪ್ತಿಗೆ ಬರುವ ಕಾರ್ಯಕ್ಷೇತ್ರದಲ್ಲೆಲ್ಲಾ ಅಂಗವಿಕಲರಿಗಾಗಿ ರ್ಯಾಂಪ್(Ramp) ಹಾಕಿಸಿದ್ದು...! ಸ್ಕೂಲ್, ಕಾಲೇಜು, ಕ್ಲಿನಿಕ್ ಹೀಗೆ ಎಲ್ಲಾ ಸಾರ್ವಜನಿಕ ಜಾಗಗಳಲ್ಲಿ ಅಂಗವಿಕಲರೂ ಸುಲಭವಾಗಿ ಹೋಗಿ ಬರುವಂತೆ ರೇಂಪ್ ಹಾಕಿಸಿದ್ದನ್ನು ತೋರಿಸಿದಾಗ ಎಲ್ಲೋ ಎನೋ ಸಮಾಧಾನದ ಭಾವ. ಸಂತಸವುಂಟಾಗಲು ಇನ್ನೂ ತುಂಬಾ ಕಾಲ ಕಾಯಬೇಕಿದೆ! ಟಿ.ವಿ ತೋರಿಸಿದ್ದು ಉತ್ಪ್ರೇಕ್ಷೆ, ಅಥವಾ ತುಸು ಹೆಚ್ಚುಗಾರಿಕೆಯಲ್ಲೇ ತೋರಿಸಿದ್ದಾರೆ ಎಂದು ನೀವು, ನಾನು ಭಾವಿಸಿದರೂ... ಅವರು ಹೇಳಿದ್ದರಲ್ಲಿ ಕಾಲು ಪರ್ಸೆಂಟ್ ಆದರೂ ನಿಜವಾಗಿದ್ದರೆ.. ಅದಕ್ಕಿಂತ ದೊಡ್ಡ ಜಾಗೃತಿ ಬೇರಿಲ್ಲ. ಹೀಗಿರುವಾಗ ಈ ಜಾಗೃತಿ ದೇಶದೆಲ್ಲೆಡೆ ಯಾಕಾಗಬಾರದು?

ನಾನು ನನ್ನೊಂದಿಗಾದ ಅತಿ ಸಣ್ಣ ಕಹಿ ಘಟನೆಯನ್ನೂ, ಮತ್ತು ಅದನ್ನು ನಾನು ಎದುರಿಸಿದ್ದ ರೀತಿಯನ್ನೂ ತುಂಬಾ ಹಿಂದೆ ದಟ್ಸ್‌ಕನ್ನಡದಲ್ಲಿ ಬರೆದಿದ್ದೆ.. ಬ್ಲಾಗಲ್ಲೂ ಹಾಕಿದ್ದೆ.. ಲಿಂಕ್ ಇಲ್ಲಿದೆ...

&


ಮೇಲಿನ ಲಿಂಕ್‌ನಲ್ಲಿ ನಾನು ಹೇಳಿದ್ದು ಅತಿ ಸಣ್ಣ ಘಟನೆ.. ಆದರೆ ಇಂಥದ್ದನ್ನು ಪ್ರತಿ ಕ್ಷಣ, ಪ್ರತಿ ದಿವಸ ಎಲ್ಲೆಂದರೆಲ್ಲಿ ನಾನು, ನನ್ನಂಥವರು ಎದುರಿಸುತ್ತಿರುತ್ತೇವೆ. ಉದಾಹರಣೆಗೆ :-

ಮನೆಯ ದಿನಸಿ, ಸಾಮನುಗಳನ್ನು ತರಲು ನಾವು ಮಾಲ್‌ಗಳಿಗೇ ಹೋಗಬೇಕಾಗುತ್ತದೆ (ಬಿಗ್ ಬಝಾರ್ ಅಂಥದ್ದು..). ಕಾರಣ ಲಿಫ್ಟ್ ಇರೋದೇ ಅಂಥ ದೊಡ್ಡ ಅಂಗಡಿಗಳಲ್ಲಿ!!! :( ತಕ್ಕಮಟ್ಟಿಗೆ ಆರ್ಥಿಕವಾಗಿ ಸಬಲರಾದವರಾದರೆ ಸರಿ.. ಹೇಗೋ ಹೋಗಬಹುದು.. ಇಲ್ಲಾ ಅಂದರೆ...? ಇನ್ನು ನನ್ನಂಥವರು ಮಾಲ್‌ಗೆ ಹೋಗಿ ಸಾಮಾನು ಕೊಳ್ಳಲು ಹೋದರೆ... ಮೇಲಿಟ್ಟಿರುವ ಸರಕುಗಳಿಗೆ ಸಹಾಯ ಬೇಕಾದಾಗ, ಅಲ್ಲಿರುವವರು ಸಹಕರಿಸುತ್ತಾರೆ.. ಇಲ್ಲಾ ಎಂದಲ್ಲಾ.. ಆದರೆ ಜೊತೆಗೊಮ್ಮೊಮ್ಮೆ ಈ ರೀತಿಯ ಮಾತೂ ಬರುವುದು "ಛೇ.. ಪಾಪ ಇಷ್ಟು ದೂರ.. ಸಾಮಾನಿಗಾಗಿ ಇಂಥವರು ಬರ್ಬೇಕಾ? ಮನೆಯವ್ರು ಬಂದ್ರೆ ಸಾಕಾಗೊಲ್ವಾ?" ಇತ್ಯಾದಿ... ಇದು ಅನುಕಂಪ ಎಂದು ಸುಮ್ಮನಿದ್ದರೂ, ಮತ್ತೆ ಕೆಲವರು "ವ್ಹೀಲ್‌ಚೇರ್ ಆಚೀಚೆ ಹೋಗೋವಾಗ ಇಕ್ಕಟ್ಟಾಗೊತ್ತೆ.. ಇವ್ರಿಂದ ನಮ್ಗೆ ತೊಂದ್ರೆ ಸಾಮಾನು ಸರ್ಸೋದು, ಇಡೋದು.. ಜೊತೇಲಿರೋವ್ರು ಕೆಲ್ಸ ಮಾಡ್ಬಾರ್ದಾ...?" ಅನ್ನೋ ಅಸಹನೆಯ ಉತ್ತರವೂ ಅದೆಷ್ಟೋ ಸಲ ಕೇಳಿದ್ದೇನೆ....!! ಜನ ಇಲ್ಲಿ ಮರೆವುದು ಒಂದೇ.. ಯಾರೂ ಯಾರಿಗೂ ಅವಲಂಬಿತವಾಗಿ ಬದುಕಲಾಗದು. ಅವರವರ ಬದುಕು ಅವರದ್ದು.. ಸಹಕಾರ, ಸಲಹೆಗಳಿಗೆ ಸದಾ ಸ್ವಾಗತ.. ಬೇಕಾದ್ದು. ಅದು ಬಿಟ್ಟು ನಿನ್ನಿಂದಾಗದು, ಅಶಕ್ತ, ಸುಮ್ಮನೆ ಕೂತಿರು.. ನಾವಿದ್ದೀವಿ ಎಂದು ಹೇಳುವುದರಿಂದ ಗಟ್ಟಿ ಮುಟ್ಟಾದ ಮನುಷ್ಯನೂ ಕುಗ್ಗೇ ಹೋಗುತ್ತಾನೆ ಕ್ರಮೇಣ. ಇಂತಿರುವಾಗ ಅಂಗವಿಕಲರ ಪಾಡೇನು? ಇಲ್ಲಿ ನನ್ನ ವಿಷಯವೇ ಬೇರೆ... ನಾನೆಂದೂ ಇಂಥಾ ಮಾತುಗಳಿಗೆ, ವರ್ತನೆಗೆ ತಲೆಕೆಡಿಸಿಕೊಳ್ಳುವುದ ಬಿಟ್ಟು ದಶಕಗಳೇ ಸಂದಿವೆ... ಆದರೂ ಒಮ್ಮೊಮ್ಮೆ ರೋಸಿ ಹೋಗಿ ಕಟುವಾಗಿ ಉತ್ತರಿಸುವುದುಂಟು. ಆದರೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಸಿಗದ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಂಬಲವಿಲ್ಲದ ಅಂಗವಿಕಲರ ಗತಿಯೇನು? ಸಮಾಜ ಅವರಿಗಾಗಿ ಎಷ್ಟು ಕಾರ್ಯೋನ್ಮುಖವಾಗಿದೆ? ಇವೆಲ್ಲವನ್ನೂ ನೋಡಾಲೇಬೇಕಾಗಿದೆ. ಜಾಗೃತಿ ಮೂಡಿಸಲೇಬೇಕಾಗಿದೆ.

ಎಲ್ಲರಂತೆ ಸಹಜವಾಗಿ, ನಿರ್ಭಯವಾಗಿ, ಸ್ವಾಲಂಬನೆಯಿಂದ ಬದುಕುವ ಹಕ್ಕು ಅಂಗವಿಕಲರದ್ದೂ ಹೌದು. ಆ ಹಕ್ಕನ್ನು ನಮ್ಮ ಸರ್ಕಾರ, ಸಮಾಜ ಕೆಲಸಕ್ಕೆ ಬಾರದ, ಕಾನೂನಿನಲ್ಲಿದ್ದರೂ ಸಮರ್ಪಕವಾಗಿ ಜಾರಿಗೆ ಬರದ ಕಾಯಿದೆಗಳಿಂದ ವಂಚಿತಗೊಳಿಸಿದೆ. ಯಾವುದೇ ಅಂಗಡಿಗಳಿರಲಿ, ಎಂಥಕ್ಕೇ ಸಾರ್ವಜನಿಕ ಸ್ಥಳವಾಗಿರಲಿ.. ಅಂಗನ್ಯೂನತೆಯುಳ್ಳವರು ಸುಲಭವಾಗಿ ಹೋಗಿ ಬರುವಂತೇ ವ್ಯವಸ್ಥೆ ಕಲ್ಪಿಸಲು ಕನಿಷ್ಠ ರೇಂಪ್ ವ್ಯವಸ್ಥೆಯೂ ಇರುವುದಿಲ್ಲ ಎಷ್ಟೋ ಕಡೆ!! ಮೆಟ್ಟಿಲುಗಳಿಲ್ಲದೇ ಯಾವುದೇ ಕಟ್ಟಡ ಕಟ್ಟಲಾಗದು ಒಪ್ಪುವೆ.. ಅದರೆ ಬದಿಯಲ್ಲೊಂದು ರೇಂಪ್ ಹಾಕಿಸಲು ಲಕ್ಷಗಟ್ಟಲೆ ಬೇಕೆ? ಕಟ್ಟು ನಿಟ್ಟಾದ ಕಾನೂನು ಯಾಕಿಲ್ಲ? ಕಟ್ಟಡ ಕಟ್ಟುವಾಗಲೇ ಇಂಥಾ ಒಂದು ಸೌಲಭ್ಯವಿದೆಯೇ ಎಂದು ನೋಡಿಯೇ ಒಪ್ಪಿಗೆ ನೋಡಲು ಸರ್ಕಾರ ಮುಂದಾಗ ಬೇಕು. ನಮ್ಮಲ್ಲಿ ತಮಾಷೆ ಎಂದರೆ ಒರ್ಥೋಪೆಡಿಕ್ ಡಾಕ್ಟರ್ ಇರೋದು ಎರಡನೆಯ ಮಹಡಿಯಲ್ಲಿ ಅದೂ ಲಿಫ್ಟ್ ಇಲ್ಲದೇ!!! ಸರ್ವರಿಗೂ ಸಮಬಾಳು, ಸಮಾನತೆ ಎಲ್ಲಿದೆ ಇವರ ವಿಷಯದಲ್ಲಿ? ಈ ನಿಟ್ಟಿನಲ್ಲಿ ನಿಜಕ್ಕೂ ವಿದೇಶದಲ್ಲಿರುವ ಸುವ್ಯವಸ್ಥೆ, ಅಲ್ಲಿಯ ಜನರ ವರ್ತನೆ (ಅಂಗವಿಕಲರ ಪ್ರತಿ..) ತುಂಬಾ ಮಾದರಿ!!!

ಒಟ್ಟಿನಲ್ಲಿ ಆರ್ಥಿಕವಾಗಿ ಸಬಲರೋ ದುರ್ಬಲರೋ ಹೋರಾಟ, ಮಾನಸಿಕ ತೊಳಲಾಟ, ಹಿಂಸೆ ಇವರಿಗೆ ಕಟ್ಟಿಟ್ಟದ್ದೇ! ಇಂಥವರು ಇಂಥಾ ಕೆಲಸಕ್ಕೆ ಮಾತ್ರ ಲಾಯಕ್ಕಿ‌ಇ... ಇಲ್ಲದ ಹೋಗದ ಉಪಧ್ವಾನ ಯಾಕೆ ಅನ್ನೋ ಚೌಕಟ್ಟಿನ ದೃಷ್ಟೀಕೋನದಿಂದ ಸಮಾಜ ಮುಕ್ತವಾಗೇ ಇಲ್ಲಾ ಇನ್ನೂ! ನನ್ನ ತಂದೆ, ತಾಯಿ, ತಂಗಿಯರ ಪ್ರೋಸಾಹ, ಅರೆ ನಿಮಿಷವೂ ನಾನು ಹೀಗೆ ಎನ್ನುವ ತುಸು ಭಾವವೂ ಬರದಂತೇ ಬೆಳೆಸಿದ ಅವರ ಆತ್ಮವಿಶ್ವಾಸ ಭರಿತ ಬೆಂಬಲದಿಂದ ನಾನಿಂದು ಕೀಳಿರಮೆ.. ಅಥವಾ ಯಾವುದೇ ಹಿಂಜರಿಕೆಯಿಂದ ಕುಗ್ಗಿಲ್ಲ.. ಆ ರೀತಿ ನನ್ನ ಬಾಲ್ಯದಿಂದಲೂ ಬೆಳೆಸಲೂ ಇಲ್ಲಾ. ಆದರೆ ಎಷ್ಟು ಜನ ಮನೆಯವರು, ಹೆತ್ತವರು, ಸ್ನೇಹಿತರು ಈ ರೀತಿಯ ಬೆಂಬಲ, ಪ್ರೋತ್ಸಾಹ, ಬದುಕಿನಿದ್ದಕ್ಕೂ ತಾಳ್ಮೆಯ ಸಹಕಾರ ನೀಡುತ್ತಾರೆ? ಆ ನಿಟ್ಟಿನಲ್ಲಿ ನಾನು ಪುಣ್ಯವಂತೆಯೇ!! ಆದರೆ ನನಗೊಲಿದಿರುವ ಸವಲತ್ತುಗಳಿಂದ ನಾನು ಖುಶಿ ಪಡುವ ಬದಲು ಪ್ರತಿ ದಿವಸ ನನ್ನಂಥವರಿನ್ನೂ ಕತ್ತಲ ಕೂಪದಲ್ಲಿ ಬೇಯುತ್ತಿರುವುದನ್ನು.. ಹಣವಿದ್ದರೂ ಮನೆಯವರ ಪ್ರೋತ್ಸಾಹವಿಲ್ಲದೇ ಅನಕ್ಷರಸ್ಥರಾಗಿರುವುದನ್ನು... ಹಲವೆಡೆ ಹೆತ್ತವರ, ನೆಂಟರಿಷ್ಟರ, ಸಮಾಜದ ತಿರಸ್ಕಾರಕ್ಕೊಳಗಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದನ್ನು ಕಂಡು ತುಂಬಾ ಹಿಂಸೆ ಅನುಭವಿಸುತ್ತಿರುತ್ತೇನೆ. ಅಸ್ಪೃಶ್ಯತೆ ಜಾತಿಗೆ ಮಾತ್ರವಲ್ಲ.. ನಮ್ಮಂಥವರನ್ನೂ ಕಾಡುತ್ತಿದೆ... ಆದರೆ ನಿಜವಾಗಿ ಸಹಕಾರ, ಬೆಂಬಲ ಸಿಗಬೇಕಾದವರಿಗಾಗಿ ಸಮಾಜದ ಅರ್ಧದಷ್ಟು ಭಾಗವೂ ನಿಲ್ಲುತ್ತಿಲ್ಲ!! ಇದರರ್ಥ ಎಲ್ಲರೂ ಹೀಗೇ ಎಂದು ಖಂಡಿತ ಹೇಳುತ್ತಿಲ್ಲಾ. ನಾನು ಬೆಳೆದ ರೀತಿಗೆ, ನನ್ನೊಳಗಿನ ಆತ್ಮವಿಶ್ವಾಸಕ್ಕೆ ಸ್ನೇಹಿತರ, ಇದೇ ಸಮಾಜದ ಹಲವು ಸಹೃದಯರು ಕಾರಣ. ಆದರೆ ಅವರ/ಅಂಥವರ ಸಂಖ್ಯೆ ಹೆಚ್ಚಾಗಬೇಕು. ಕಾರಣ ಎಲ್ಲರೂ ನನ್ನಂಥ ಬಾಳ್ವೆ ಸಮನಾಗಿ ಅರ್ಹರು ಮತ್ತು ಅದು ಅವರ ಹಕ್ಕು!!

ಬಾಲ್ಯದಲ್ಲಿ ಮೊತ್ತ ಮೊದಲು ನನ್ನ ಶಾಲೆಗೆ ಸೇರಿಸುವಾಗ ಅಪ್ಪನ ಸ್ನೇಹಿತವರ್ಗ, ಸಮಾಜ ಅವರಿಗಿತ್ತ ಸಲಹೆ ಎಂದರೆ ‘ಇಂಥವರಿಗಾಗಿಯೇ ಇರುವ ವಿಶೇಷ ಸ್ಕೂಲ್‌ಗೆ ಸೇರಿಸಿಬಿಡಿ..." ಆದರೆ ನನ್ನ ಚೈತನ್ಯದ ಪ್ರತಿರೋಧ, ಅಪ್ಪ ಅಮ್ಮನ ಧೈರ್ಯ ಹಾಗೆ ಮಾಡದೇ ಎಲ್ಲರಂತೇ ನಾರ್ಮಲ್ ಸ್ಕೂಲ್‌ಗೇ ಸೇರಿಸಲು ಪ್ರೇರೇಪಿಸಿತು. ಇದರ್ಥ.. ಅಂಥ ಸ್ಕೂಲ್‌ಗೆ ಹೋಗಲೇ ಬಾರದೆಂದಲ್ಲಾ... ಸಾಧ್ಯವಾದಷ್ಟೂ ಅಂಗವಿಕಲರು ಸಮಾಜದ ಮುಖ್ಯವಾಹಿನಿಯ ಜೊತೆ ಜೊತೆಯಲ್ಲೇ.. ಎಲ್ಲರಂತೇ ನಾವು ಎನ್ನುವ ಭಾವದಲ್ಲಿ ಬೆರೆತು ಬೆಳೆದಂತೇ ಆತ್ಮವಿಶ್ವಾಸ, ಧೈರ್ಯ ತನ್ನಿಂದ ತಾನೇ ಬಲಿಯುವುದು.. ಬಲಿಷ್ಠಗೊಳ್ಳುವುದು! ಆದರೆ ಒಂದನೆಯ ತರಗತಿಯಲ್ಲಿ ಮಂಗಳೂರಿನ ಶಾಲೆಯೊಂದು ನನಗೆ ಪ್ರವೇಶ ಕೊಡಲು ಹಿಂದೇಟು ಹಾಕಿತ್ತು! ಕಾರಣ ನಾನು ನಡೆಯಲಾಗದು... ನನ್ನಂಥವರಿಗೆ ಕಲಿಸುವುದು ಹೇಗೆ? ಇವಳಿಂದ ಇತರರಿಗೂ ತೊಂದರೆ ಆಗಬಹುದು ಅನ್ನೋ ಕ್ಷುಲ್ಲಕ ಪ್ರಶ್ನೆ ಮುಂದೂಡಿ! ಹಠ ಹೊತ್ತ ಅಪ್ಪ ಹೋರಾಡಿ ಅಲ್ಲೇ ಒಂದು ವರುಷ ಓದಿಸಿ ಮರುವರುಷ ಕೆನರಾ ಸ್ಕೂಲ್‌ಗೆ ದಾಖಲಿಸಿದ್ದ. (ಆ ಸ್ಕೂಲ್‌ನಲ್ಲಿ ಏನೂ ತೊಂದರೆ ಆಗದೇ ಪ್ರವೇಶ ಸಿಕ್ಕಿತ್ತು.) ಎಲ್ಲಾ ಒಂದೇ ರೀತಿ ಇರದು.. ಆದರೆ ಇನ್ನೂ ಆ ಭಾವ ಸಾಕಷ್ಟು ಇದೆ ನಮ್ಮಲ್ಲಿ!! ಈಗಲೂ ಅಂಗವಿಕಲರನ್ನು ಪ್ರತಿಷ್ಠಿತ ಸ್ಕೂಲ್‌ಗಳಲ್ಲಿ ಸೇರಿಸಿಕೊಳ್ಳುವಾಗ ತುಸು ಅನುಮಾನ ತೋರಿದ್ದ ಘಟನೆಗಳೂ ಕೇಳಿ ಬಂದಿವೆ!! ಮುಂದೆ ಕಾಲೇಜಿನಲ್ಲಿ ಸೈನ್ಸ್ ತೆಗೆದುಕೊಳ್ಳ ಹೊರಟಾಗ ‘ಇವಳಿಂದ ಪ್ರಾಕ್ಟಿಕಲ್ಸ್ ಸಾಧ್ಯವೇ? ಕಷ್ಟ... ಬೇಡ’ ಎಂದವರೇ ನೂರಾರು ಜನ! ಇಲ್ಲಿ ಹಠ ನನ್ನದಾಗಿತ್ತು... ಕೆಮೆಸ್ಟ್ರಿಯಲ್ಲಿ ಹೈಯೆಸ್ಟ್ ಸ್ಕೋರ್ ಮಾಡಿ ಬಿ.ಎಸ್ಸಿ. ತೇರ್ಗಡೆ ಮಾಡಿದಾಗ ಅಭಿನಂದಿಸಿದವರೂ ಅವರೇ ಆಗಿದ್ದರು. ಪಿ.ಯು.ಸಿಯಲ್ಲಿ ಉತ್ತಮ ಅಂಕ ಇದ್ದು ಮೆರಿಟ್‌ನಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಸೀಟ್ ಸಿಕ್ಕಿದ್ದರೂ, ನಾನು ಮಾಡದಿರುವುದಕ್ಕೆ ಕಾರಣ ಕಟ್ಟಡಗಳು ನನ್ನ ಹೊತ್ತಲು ಅಸಮರ್ಥವಾಗಿದ್ದು! ಲಿಫ್ಟ್ ಇಲ್ಲದ ಮಹಡಿಗಳಿಂದಾಗಿ ಓದಲು ಆಗದಿದದ್ದು!! ಬಿ.ಎಸ್ಸಿ.ಯಲ್ಲಿ ಅತ್ಯುತ್ತಮ ಅಂಕಗಳಿದ್ದರೂ ನನ್ನಿಷ್ಟದ ಮೈಕ್ರೋ ಬಯಾಲಜಿ ಮಾಡಲಾಗದಿದ್ದುದಕ್ಕೂ ಕಾರಣ ಇದೇ...!!! ಈಗ ಹೇಳಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿದ್ದೂ, ಹೆತ್ತವರ, ಸ್ನೇಹಿತರ ಬೆಂಬಲವಿದ್ದೂ ನನ್ನಿಂದಾಗದ್ದು, ಏನೂ ಇಲ್ಲದ, ಸಾಧಿಸುವ ಹುಮ್ಮಸ್ಸಿದ್ದೂ ಮಾಡಲಾಗದ.. ಒಂದಿಂಚೂ ನಡೆಯಲಾಗದೇ ಹೊರ ಪ್ರಪಂಚದಿಂದಲೇ ವಿಮುಖವಾಗಿರುವ ಅದೆಷ್ಟು ಅಂಗವಿಕಲರಿದ್ದಾರೆ ನಮ್ಮೊಂದಿಗೆ?! ಮೇಲೆ ಹೇಳಿರುವ ಘಟನೆ ಒಂದೆರಡು ಸ್ಯಾಂಪಲ್ಸ್ ಅಷ್ಟೇ. ಹುಟ್ಟಿದ ದಿನದಿಂದ, ಈವರೆಗೂ, ಈ ಕ್ಷಣವೂ ಸಾಕಷ್ಟು ಅನುಭವಗಳನ್ನು ಬದುಕು ನೀಡುತ್ತಲೇ ಬಂದಿದೆ. ಆದರೆ ಸಮಾಜ ತನ್ನ ದೃಷ್ಟೀಕೋನದಲ್ಲಿ, ವರ್ತನೆಯಲ್ಲಿ ಸಾಕಷ್ಟು ಸುಧಾರಣೆಯನ್ನೂ ತೋರುತ್ತಿರುವುದು ತುಸು ಸಮಾಧಾನವನ್ನೂ ತಂದಿದೆ.

ನಾನಿದನ್ನೆಲ್ಲಾ ಹೇಳಿದ್ದು ನಾನೇನೋ ಸಾಧನೆ ಮಾಡಿರುವೆ ಎಂದು ಹೇಳಿಕೊಳ್ಳಲು ಅಲ್ಲವೇ ಅಲ್ಲಾ... ಅಥವಾ ಯಾವುದೇ ದಯೆ, ಅನುಕಂಪಕ್ಕಂತೂ ಖಂಡಿತ ಅಲ್ಲಾ! ತಿಳಿಯದ, ಅರಿವಿಗೆ ಬಾರದ ಸಹೃದಯವುಳ್ಳ ಎಲ್ಲರಲ್ಲೂ ಜಾಗೃತಿ ಮೂಡಿಸಲು. ಇಷ್ಟೆಲ್ಲ ಕಳಕಳಿ ಇರುವ ನಾನೇನು ಮಾಡಿರುವೆ? ಎಂದೆಣಿಸದಿರಿ... ನನ್ನದೇ ಆದ ರೀತಿಯಲ್ಲಿ... ಶಕ್ತಿ ಮೀರಿ ಪ್ರಯತ್ನಿಸುತ್ತಲೇ ಇದ್ದೇನೆ. ನನ್ನಂಥವರಿಗೆ ಪ್ರೇರಣೆಯಾಗಿ ಮಾಲತಿ ಹೊಳ್ಳರಂಥ ವಿಶಿಷ್ಟ ಸಾಧಕರಿದ್ದಾರೆ. ಜಾತಿ ಮತ ಬೇಧವಿಲ್ಲದೇ ರಾಜ್ಯದ ನಾನಾ ಭಾಗದಿಂದ ಅವರು ಬಡ ಅಂಗವಿಕಲ ಮಕ್ಕಳನ್ನು ಕರೆತಂದು ಉಚಿತವಾಗಿ ಅವರಿಗೆಲ್ಲಾ ಊಟ, ವಸತಿ, ಬಟ್ಟೆಯ ಜೊತೆಗೇ ಆತ್ಮವಿಶ್ವಾಸ, ಶಿಕ್ಷಣ ಸೌಲಭ್ಯವನ್ನು ನೀಡಿ ಮಾತೃ ಪ್ರೇಮವನ್ನು ಸ್ಫುರಿಸುತ್ತಿರುವ ಅವರ ‘ಮಾತೃ ಛಾಯಾ’ವಿದೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್- http://www.manasa-hegde.blogspot.in/2011/01/blog-post_17.html

ಇದು ಕೇವಲ ದೈಹಿಕ ಅಂಗವೈಕಲ್ಯವಿರುವರ ಪಾಡಾದರೆ, ತುಸು ಮಾನಸಿಕ ಅಸ್ವಸ್ಥರ ಪಾಡು ಕೇಳುವುದೇ ಬೇಡಾ!!! ಆಟಿಸ್ಟಿಕ್‌ಗೂ ಬುದ್ಧಿ ಮಾಂದ್ಯರಿಗೂ ಎಂಥಾ ದೊಡ್ಡ ವ್ಯತ್ಯಾಸವಿದೆ.. ಪ್ರತಿಯೊಂದು ಸಮಸ್ಯೆಯೂ ಹೇಗೆ ವಿಭಿನ್ನವಾಗಿದೆ... ಪ್ರತಿ ಸಮಸ್ಯೆಯನ್ನೂ ಎದುರಿಸಲೂ ಎಷ್ಟೆಲ್ಲಾ ಮಾನಸಿಕ ತಯಾರಿ ಸ್ಥೈರ್ಯ ಬೇಕಾಗುತ್ತದೆ ಎನ್ನುವುದನ್ನೆಲ್ಲಾ ಸಮಾಜಕ್ಕೆ ಎಡ್ಯುಕೇಟ್ ಮಾಡಲೇಬೇಕಾಗಿದೆ ಇಂದು! ಈ ಸಮಾಜದಲ್ಲಿ ಹಲವರು ಅದೆಷ್ಟು ಅಸೂಕ್ಷ್ಮತೆ ಹಾಗೂ ಸಂವೇದನಾರಹಿತರಾಗಿರುತ್ತಾರೆ ಎಂದರೆ, ಆಟಿಸ್ಟಿಕ್ ಎಂದರೆ ‘ಹುಚ್ಚನಾ/ಹುಚ್ಚಳಾ’ ಎಂದು ಕೇಳುವಷ್ಟು!!! :( ಸಮಾಜ ಆ ಮಗುವನ್ನು, ಮನೆಯವರನ್ನು ಇನ್ನಿಲ್ಲದಂತೇ ಘಾಸಿಗೊಳಿಸಿದ್ದನ್ನು.... ಅಂಥವರಿಗೆ ನಾನು ತಿಳಿ ಹೇಳಲು ಹೋಗಿ ನಾನೇ ಚುಚ್ಚು ಮಾತು ಕೇಳಿದ್ದನ್ನೂ ಹೇಳಿದರೆ ಕುರೂಪ ಇನ್ನೂ ವಿಕಾರಗೊಳ್ಳಬಹುದು.

ಸಮಾಜ ಬದಲಾಗುತ್ತಿದೆ.. ನಿಜ... ಮತ್ತು ಕೆಲವೊಂದು ಬದಲಾವಣೆಗಳು ನಿಧಾನವಾಗಿ ಆಗಬೇಕಾಗುತ್ತದೆ. ಆದರೆ ಪ್ರತಿ ಹೆಜ್ಜೆಯೂ ನಮ್ಮದು ಧನಾತ್ಮಕ ಬದಲಾವಣೆಯತ್ತ ಸಾಗಿದಾಗ ಮಾತ್ರ ಅದು ಯಶಸ್ಸುಗೊಳ್ಳುವುದು. ನಮ್ಮಲ್ಲಿ ಈಗಲೂ ಧಾರಾವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ಅಂಗವಿಕಲರೆಂದರೆ ಅಪಾರ ಕರುಣೆ, ದಯೆಗೆ ಪಾತ್ರರು.. ಅವರಿಂದ ಏನೂ ಸಾಧ್ಯವಿಲ್ಲ.. ನಿಃಶ್ಯಕ್ತರೆಂದೇ ತೋರಿಸಲಾಗುತ್ತದೆ. ಅದರ ಬದಲು ಅವರಿಂದೇನೆನು ಸಾಧ್ಯ ಎನ್ನುವುದನ್ನು ಸಹಜವಾಗಿ ತೋರಿಸುವ ಯತ್ನ ಮತ್ತಷ್ಟು ಆದರೆ ಜನಜಾಗೃತಿ ಬಹು ಸುಲಭವೆಂದೆನಿಸುತ್ತದೆ. ಆ ನಿಟ್ಟಿನಲ್ಲೂ ಚಿಂತನೆ ಅತ್ಯಗತ್ಯ.

ಕಳಕಳಿಯ ವಿನಂತಿ:-
ದಯವಿಟ್ಟು ನೀವು ನಿಮ್ಮ ಸುತ್ತ ಮುತ್ತ ಅಂಗವಿಕಲರನ್ನು ಕಂಡರೆ, ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್‌ಗಳಲ್ಲಿ ಅವರೊಂದಿಗೆ ಯಾರಾದರೂ ಒರಟಾಗಿ ವರ್ತಿಸುವುದೋ, ಇಲ್ಲ ಅಸಹಕಾರ ನೀಡುವುದೋ ಮಾಡುವುದ ಕಂಡರೆ ಪ್ರತಿಭಟಿಸಿ. ಅವರೂ ನಿಮ್ಮಂತೇ ಎಲ್ಲಾ ರೀತಿಯಲ್ಲೂ ಶಕ್ತರು ಎನ್ನುವುದನ್ನು ಮನಗಂಡೇ ಸಹಕಾರ ನೀಡಿ. ಇಷ್ಟು ಕಷ್ಟ ಪಟ್ಟು ಇವರ್ಯಾಕೆ ಬಂದರೋ ಪಾಪ? ಯಾರೂ ಇಲ್ಲವೇ ಇವರಿಗೆ? ಎಂಬ ಸಲ್ಲದ ಕರುಣೆ ಬೇಡ. ನಿಮ್ಮ ಪರಿಸರದಲ್ಲಿ ಅನಕ್ಷರಸ್ಥರಿದ್ದರೆ ಕಲಿಕೆಗೆ ಪ್ರೇರೇಪಿಸಿ.... ಸಹಕರಿಸಿ. ವಿದ್ಯೆ ಅತ್ಯವಶ್ಯಕ... ಅದರಿಂದಲೇ ಹೊರ ಪ್ರಪಂಚಕ್ಕೆ ನಾವು ತೆರೆದುಕೊಳ್ಳಬಲ್ಲೆವು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲೂ ಅಂಗವಿಕಲರು ಸುಲಭವಾಗಿ ಹೋಗಿ ಬರುವಂತೇ ವ್ಯವಸ್ಥೆ ಕಲ್ಪಿಸಲು ಎಲ್ಲರೂ ಒಗ್ಗಟ್ಟಾಗಿ ಸರಕಾರವನ್ನು ಒತ್ತಾಯಿಸಬೇಕು. ಅಂಗವಿಕಲತೆ ಒಂದು ಶಾಪ, ಪ್ರಾರಾಬ್ಧ ಕರ್ಮ ಅನ್ನುವ ಕೂಪ ಮಂಡೂಕತ್ವವನ್ನು ತೊಡೆದು ಹಾಕಿ ಒಳಗಿನ ಚೈತನ್ಯದ ಮುಂದೆ ಎಲ್ಲವೂ ನಗಣ್ಯ ಅನ್ನುವುದನ್ನು ಉದ್ದೀಪನಗೊಳಿಸಿಗೊಳ್ಳಬೇಕು.. ಹಾಗೆ ಉದ್ದೀಪಿಸಿಕೊಳ್ಳಲು ಪ್ರೇರೇಪಿಸಬೇಕು. ಮುಖ್ಯವಾಹಿನಿಗೆ ಇವರೂ ಬಂದು.. ಸಮಬಾಳು, ಸಮ ಪಾಲು/ಹಕ್ಕು ಇವರಿಗೂ ಸಿಗಲೇಬೇಕು. ಆ ನಿಟ್ಟಿನಲ್ಲಿ ಸಮಾಜ ಕಾರ್ಯೋನ್ಮುಖವಾಗಲೇ ಬೇಕು. ಸಕಾಲದಲ್ಲಿ, ಸರಿಯಾದ ರೀತಿಯಲ್ಲಿ, ತುಸುವೇ ತುಸು ತಾಳ್ಮೆಯಿಂದ ಮನೆಯವರು, ಬಾಲ್ಯದಲ್ಲೇ ಪ್ರೋತ್ಸಾಹ, ಬೆಂಬಲ ಸಹಕಾರ ನೀಡಿದರೆ ಎಂಥಾ ನ್ಯೂನ್ಯತೆಯನ್ನೂ ಜಯಿಸಬಹುದು... ಓರ್ವ ಅಂಗವಿಕಲನೂ ಎಲ್ಲರಂತೇ ಸಾಮಾನ್ಯವಾಗಿ ಎಲ್ಲಾ ರೀತಿಯ ಅಂದರೆ ಮಗುವಿನ ಪಾಲನೆ, ಬಟ್ಟೆ, ಪಾತ್ರೆ, ಅಡಿಗೆ ಇತ್ಯಾದಿ ಮೆನವಾರ್ತೆಗಳ ಜೊತೆಗೇ ಹೊರಗಿನ ಕಾರ್ಯಗಳನ್ನೂ ನಿಭಾಯಿಸಬಲ್ಲ ಎನ್ನುವುದಕ್ಕೆ ಸಾಕ್ಷಿ ನಾನೇ :) ಹೀಗಾಗಿಯೇ ಹೆತ್ತವರು, ಆಪ್ತೇಷ್ಟರು, ಸ್ನೇಹಿತರು, ಸಹೃದಯರು ಈ ನಿಟ್ಟಿನಲ್ಲಿ ಒಮ್ಮೆ ಚಿಂತನೆ ನಡೆಸಿ... ಎಂದು ಎದೆಯಾಳದಿಂದ ವಿನಂತಿಸುತ್ತಿರುವೆ.

(ಸಹನೆಯಿಂದ ಲಿಂಕ್‌ಗಳ ಜೊತೆಗೆ ಲೇಖನವನ್ನೋದಿದವರಿಗೆಲ್ಲಾ ಧನ್ಯವಾದಗಳು. :) ) 

-ತೇಜಸ್ವಿನಿ.

ಬುಧವಾರ, ಆಗಸ್ಟ್ 27, 2014

ಮೂರ್ಖನಿಗೆ ಮದ್ದಿಲ್ಲ

ಮೂರ್ಖ, ಮೂರ್ಖತನ, ಹಾಗೂ ಮೂರ್ಖನ ಲಕ್ಷಣ ಕುರಿತು ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ಶ್ಲೋಕಗಳಿವೆ. ಅವುಗಳನ್ನು ಹೆಕ್ಕಿ ‘ಸುಭಾಷಿತ ರತ್ನಾಕರ’ದಲ್ಲಿ ನೀಡಲಾಗಿದೆ. ಇವು ಹಳೆಯ ನಾಡು ನುಡಿಗಳಂತೇ ನಮಗೆ ಜೀವನಾನುಭವ ನೀಡುವ ಸರಳ ಸಾಹಿತ್ಯ ಮಾಧ್ಯಮವಾಗಿವೆ. ಈ ಲೇಖನದಲ್ಲಿ ಅವುಗಳ ಆಧಾರದಲ್ಲಿ ಪ್ರಮುಖಾಂಶವನ್ನು ಗಮನಿಸೋಣ.
ಕವಿಯೊಬ್ಬ ಹೇಳುತ್ತಾನೆ ‘ಬೆಂಕಿಯನ್ನು ನೀರಿನಿಂದ, ಸೂರ್ಯನ ಪ್ರಖರಕಿರಣಗಳನ್ನು ಕೊಡೆಯಿಂದ, ಮದವೇರಿದ ಆನೆಯನ್ನು ಹರಿತವಾದ ಅಂಕುಶದಿಂದ, ದಂಡದಿಂದ ಪಶುಗಳನ್ನು ಹಾಗೂ ರೋಗಗಳನ್ನು ಔಷಧಗಳಿಂದಲೂ, ವಿಷವನ್ನು ಮಂತ್ರಪ್ರಯೋಗಗಳಿಂದಲೂ ತಡೆಯಬಹುದು’. ಹೀಗೆ ಎಲ್ಲವುದಕ್ಕೂ ಶಾಸ್ತ್ರಸಿದ್ಧ ಔಷಧವಿದೆ, ಆದರೆ ಮೂರ್ಖನಿಗೆ ಮಾತ್ರ ಔಷಧವಿಲ್ಲ!! ೧

ಮೂರ್ಖತನವನ್ನು ಗುರುತಿಸಲು ಅವನ ಲಕ್ಷಣವನ್ನು ಕವಿಯೊಬ್ಬನು ಹೀಗೆ ಹೇಳಿದ್ದಾನೆ. ಗರ್ವ, ದುರ್ವಚನ, ಸುಮ್ಮನೇ ವಿರೋಧ, ಹಾಗೂ ಕೃತ್ಯ-ಅಕೃತ್ಯಗಳನ್ನು (ಅವಿವೇಕ)೨ ಒಪ್ಪದಿರುವುದು ಈ ಗರ್ವ ಹೇಗೆ ಮದವೇರಿಸುತ್ತದೆ ನೋಡಿರಿ.
‘ನನಗೆ ಸ್ವಲ್ಪಗೊತ್ತಿದೆ’ ಅಂದು ಕೊಂಡರೆ ಆನೆಗೆ ಮದವೇರಿದಂತೆ ನಮಗೂ ಸೊಕ್ಕುಬರುತ್ತದೆ. [ಅಲ್ಪ ವಿದ್ಯಾ ಮಹಾ ಗರ್ವೀ] ಹಾಗೂ ತಾನೇ ಸರ್ವಜ್ಞನೆಂದು ಮನದಲ್ಲಿ ಅಂದುಕೊಳ್ಳುತ್ತಾನೆ.
ಅದೇ ಬುಧಜನರಿಂದ ಸ್ವಲ್ಪಸ್ವಲ್ಪ ಸಂಗ್ರಹಿಸಿ ಕಲಿತುಕೊಂಡಿದ್ದೇನೆಂಬ ಭಾವವಿದ್ದಲ್ಲಿ ಅದೇ ಮದ ಜ್ವರದಂತೇ ಜರ್ರನೇ ಇಳಿದು ‘ಛೇ ನಾನೆಂಥ ಮೂರ್ಖ’ ಎಂಬ ಭಾವನೆ ಬರುತ್ತದೆ.೩

ಇದು ಸಾಮಾನ್ಯ ಅಥವಾ ಸಾಂದರ್ಭಿಕ ಮೂರ್ಖತನವಾಯಿತು. ಆದರೆ ಇನ್ನು ಕೆಲವರು ಸ್ವಭಾವತಃ ಮೂರ್ಖರಿರುತ್ತಾರೆ; ಅವರನ್ನು ರಂಜಿಸಲು ಅಥವಾ ನಂಬಲೂ ಎಂದೂ ಹೋಗಬಾರದೆಂದು ಈ ಎರಡು ಸುಭಾಷಿತಗಳು ಹೇಳುತ್ತವೆ.
‘ಅಜ್ಞಾನಿಯನ್ನು ಸಮಾಧಾನ ಪಡಿಸುವುದಾಗಲಿ, ತಿಳಿಯುವಂತೆ ಮಾಡುವುದಾಗಲಿ ಸುಲಭ, ವಿಶೇಷಜ್ಞಾನದಲ್ಲಿ ಅವನೊಡನೆ ವ್ಯವಹರಿಸುವುದು ಇನ್ನೂ ಸುಲಭ. ಆದರೆ ಅಲ್ಪಜ್ಞಾನದಿಂದ ಠೇಂಕರಿಸುವವನನ್ನು ಬ್ರಹ್ಮನೂ ಸಹ ರಂಜಿಸಲಿಕ್ಕೆ ಸಾಧ್ಯವಿಲ್ಲವಂತೆ.೪ ಹಾಗೇ ಜನ್ಮತಃ ಮೂರ್ಖರಾಗಿರುವವನನ್ನು ತಿದ್ದುವುದು ವ್ಯರ್ಥಸಾಹಸ ಹಾಗೂ ಅಪಾಯಕಾರಿ ಎಂದು ಎಚ್ಚರಿಸಲಾಗಿದೆ. ಮೂರ್ಖರಿಗೆ ಉಪದೇಶ ಹೇಳಿದರೆ ಅದು ಅವರನ್ನು ಕೆರಳಿಸುತ್ತದೆ. ಹಾವಿಗೆ ಹಾಲೆರೆದರೆ ವಿಷವನ್ನು ಕಕ್ಕುವುದು ಸಹಜವಲ್ಲವೇ?೫ ಜಗತ್ತಿನಲ್ಲಿ ಅಸಾಧ್ಯವಾದ ಹಲವಿರೆ... “ಭುಸುಗುಟ್ಟುವ ವಿಷ ಸರ್ಪವನ್ನು ತಲೆಯಮೇಲೆ ಹೂವಿನಂತೆ ಇಟ್ಟುಕೊಳ್ಳಬಹುದು. ಮೊಸಳೆಯ ದವಡೆಯಿಂದ ಮಣಿಯನ್ನು ಕೈಹಾಕಿ ತೆಗೆಯಬಹುದು. ಭೀಕರ ಅಲೆಗಳಿರುವ ಸಮುದ್ರವನ್ನು ದಾಟಬಹುದು, ಮರಳನ್ನು ಹಿಸುಕಿ ತೈಲವನ್ನು ಹಿಂಡಬಹುದು, ಕೋಡಿರುವ ಮೊಲವನ್ನೂ ಹುಡುಕಿ ತರಬಹುದು, ಆದರೆ ವಿತಂಡವಾದದ ಮೂರ್ಖನ ಮನಸ್ಸನು ಪ್ರಸನ್ನುಗೊಳಿಸಲು ಸಾಧ್ಯವಿಲ್ಲವೆಂದು”6, ಅಸಾಧ್ಯಗಳಲ್ಲಿ ಅಸಾಧ್ಯವೆಂದು ಕಾವ್ಯಾಲಂಕಾರದಿಂದ ತಿಳಿಸಿದ್ದಾರೆ. ಅಂತಹ ದುಸ್ಸಾಹಸಕ್ಕೆ ತೊಡಗಿ ನಮ್ಮ ಸಮಯ, ಮನಸ್ಸು ಎರಡನ್ನೂ ಹಾಳುಮಾಡಿಕೊಳ್ಳದಿರುವುದೇ ಸಾಧು ಲಕ್ಷಣ.

ಕೆಲವರು ಅಮಲಿನಲ್ಲಿ ಮೂರ್ಖರಂತೆ ವರ್ತಿಸುತ್ತಾರೆ. ಕುಡಿದ ಅಮಲಿನಲ್ಲಿ ರಾತ್ರಿಯಲ್ಲಿ ಆಕಾಶನೋಡಿ ಅದು ಸೂರ್ಯನೋ ಚಂದ್ರನೋ ಕೇಳುತ್ತಾರೆ? ನಿಜ ಹೇಳಿದರೂ ಸೂರ್ಯನೆಂದು ಅದು ಹಗಲೆನ್ನುತ್ತಾರೆ. ಸುಳ್ಳು ಹೇಳಿದರೆ ನಮ್ಮನ್ನೇ ಕುಡಿದವರೆಂದು ದುರ್ವಚನ ನುಡಿಯುತ್ತಾರೆ.

ಇದೆಲ್ಲವನ್ನು ಗಮನಿಸಿ ಕವಿಯೊಬ್ಬ ವಿಡಂಬನಾತ್ಮಕವಾಗಿ “ಮೂರ್ಖನಾಗಿರುವುದೇ ವಾಸಿ ಯಾಕೆಂದರೆ ಅದರಲ್ಲಿ ೮ ಗುಣಗಳಿವೆಯೆಂದು” ಹೀಗೆ ವರ್ಣಿಸುತ್ತಾನೆ:
ಏ ದುರ್ಬುದ್ಧಿ! ಮೂರ್ಖನಾಗಿರುವುದು ಸುಲಭ ಹಾಗೇ ಇರು ಯಾಕೆಂದರೆ ಅದು   ರಹಿತ, ಬಹುಭೋಜಕ, ಮೂರ್ಖರಸ್ವಭಾವ (ಹಲುಬುವುದು), ಹಗಲು-ರಾತ್ರಿ ಕನಸು ಕಾಣಬಹುದು. ಕಾರ್ಯ-ಅಕಾರ್ಯ ವಿವೇಚನೆಯ ವಿಷಯದಲ್ಲಿ ಕುರುಡ ಮತ್ತು ಕಿವುಡ, ಮಾನ-ಅಪಮಾನ ಎರಡೂ ಸಮ, ರೋಗರಹಿತ (ಎಂದೇವಾದ) ಸು ಶರೀರ. ಇದರಿಂದ ಸುಖಜೀವನ ತಾನೇ?!೭ (ಅಂದರೆ, ನಾವು ಹೇಗಿದ್ದಲ್ಲಿ ನಮ್ಮಲ್ಲಿ ಮೂರ್ಖರ ಗುಣವಿದೆ ಎಂದು ಅರಿತುಕೊಳ್ಳಲು ಹೇಳಿದ್ದಾರೆ)
ಮೂರ್ಖರಿಗೆ, ಸಾಹಿತ್ಯ, ಸಂಗೀತ, ಕಲೆ ಇವುಗಳಲ್ಲಿ ಯಾವುದೊಂದೂ ರುಚಿಸದು. ಅವರು ಬಾಲ ಕೂಡ ಇಲ್ಲದ ಪ್ರಾಣಿಗಳು. ಹುಲ್ಲನ್ನು ತಿನ್ನುವುದಿಲ್ಲ, ಅದು ಪಾಪ ಆ ಪಶುಗಳ ಪುಣ್ಯ!೮

ಅದೇ ರೀತಿ ಮೂರ್ಖರು ವಿದ್ಯೆ, ತಪ, ದಾನ, ಜ್ಞಾನ, ಶೀಲ, ಗುಣ, ಧರ್ಮಗಳೆಂದು ದೂರವಿರುತ್ತಾರೆ. ಅವರು, ಈ ಮಾನವ ಲೋಕದಲ್ಲಿ ಭೂಭಾರಕ್ಕಾಗಿರುವವರು. ಮಾನವ ರೂಪಿ ಮೃಗಗಳು ೯ ಎಂದು ಕವಿಯೊಬ್ಬ ಅಕ್ರೋಶ ವ್ಯಕ್ತಪಡಿಸಿದ್ದಾನೆ.
ಮೂರ್ಖರಿಗೆ ಧರ್ಮಕಥಾ ಪ್ರಸಂಗ ಹೇಳುವ ದಡ್ಡತನವನ್ನು ಸಜ್ಜನರು ಮಾಡಬಾರದು. ೧೦ ಅದು, ಕುರುಡನಿಗೆ ದೀಪ ಹಿಡಿದಂತೆ, ಕಿವುಡನಿಗೆ ಸಂಗೀತದಂತೆ, ಈ ರೀತಿ ಮೂರ್ಖರ ಗುಣಲಕ್ಷಣಗಳನ್ನು ವಿವರಿಸಲಾಗಿದೆ. ಇದರಿಂದ ನಮ್ಮಲ್ಲಿ ಎರಡಂಶ ಅರಿವಾಗಿರಬೇಕು. ಒಂದು ಎಂತಹ ಗುಣ ಸ್ವಭಾವದವರು ಮೂರ್ಖರು, ಅವರೊಡನೆ ಹೇಗೆ ವ್ಯವಹರಿಸಬೇಕು ಹಾಗೂ ಇನ್ನೊಂದು ನಾನು ನನ್ನಲ್ಲಿರುವ ಮೂರ್ಖತನವನ್ನು ತ್ಯಜಿಸುವುದು ಹೇಗೆ? ಎಂದು. ಅಂತೂ, ‘ಕಷ್ಟಂ ಬಲು ಮೂರ್ಖತ್ವಂ’ ಎಂಬುದನ್ನು ನೆನಪಿಸೋಣ.

ಉಲ್ಲೇಖ ಶ್ಲೋಕಗಳು:

೧] ಶಕ್ಯೋವಾರಯಿತುಂಜಲೇನ ಹುತಭುಕ್ ಛತ್ರೇಣ ಸೂರ್ಯss ತಪೋ
   ನಾಗೇಂದ್ರೋ ನಿಶಿತಾಂಕುಶೇನ ಸಮದೋ ದಂಡೋನಗೋಗರ್ದಭೌ |
   ವ್ಯಾಧಿರ್ಭೇಷಜ ಸಂಗ್ರಹೇಶ್ಚ ವಿವಿಧೈರ್ಯಂತ್ರ ಪ್ರಯೋಗೈರ್ವಿಷಂ 
   ಸರ್ವಸಸ್ಯೊಷದಮಸ್ತಿ ಶಾಸ್ತ್ರ ವಿಹಿತಂ ಮೂರ್ಖಸ್ಯ ನಾಸ್ತ್ಯುಷಧಮ್ ||

೨] ಮೂರ್ಖಚಿನ್ಹಾನಿ ಷಡಿತಿ ಗರ್ವೋ ದುರ್ವಚನಂ ಮುಖೇ | 
   ವಿರೋಧೀ ವಿಷವಾದೀಚ ಕೃತ್ಯಾs ಕೃತ್ಯಂ ನ ಮನ್ಯತೇ ||

೩] ಯದಾ ಕಿಂಚಿಜ್ಞೋs ಹಂ ದ್ವಿಪ ಇವ ಮದಾಂಧಃ ಸಮಭವಂ |
   ತದಾ ಸರ್ವಜ್ಞೇಸ್ಮಿತ್ಯಭವದವಲಿಪ್ತಂ ಮಮ ಮನಃ |
   ಯದಾ ಕಿಂಚಿತ್ ಕಿಂಚಿತ್ ಬುಧಜನ ಸಕಾಶಾದವಗತಂ
   ತದಾ ಮುರ್ಖೋsಸ್ಮಿsತ ಜ್ವರ ಇವ ಮದೋ ಮೆ ವ್ಯಪಗತಃ ||

೪] ಆಜ್ಞಃ ಸುಖಮಾರಾಧ್ಯಃ ಸುಖತರಮಾರಾಧ್ಯತೇ ವಿಶೇಷಜ್ಞಃ |
   ಜ್ಞಾನ ಲವ ದುರ್ವಿದಗ್ಧಂ ಬ್ರಹ್ಮಾsಪಿ ತಂ ನರಂ ನ ರಂಜಯತಿ ||

೫] ಉಪದೇಶೋ ಹಿ ಮುರ್ಖಾಣಾಂ ಪ್ರಕೋಪಾಯನ ಶಾಂತಯೇ |
   ಪಯಃ ಪಾನಂ ಭುಜಂಗಾನಾಂ ಕೇವಲಂ ವಿಷವರ್ಧನಮ್ ||

೬] ಪ್ರಸಹ್ಯಮಣಿಮುದ್ಧರೇತ್ ಮಕರವಕ್ತ್ರದಂಷ್ಟ್ರಾಂಕುರಾತ್ |
   ಸಮುದ್ರಮಪಿ ಸಂಚರೇತ್ ಪ್ರಚಲದುರ್ಮಿಮಾಲಾ  ಕುಲಮ್ |
   ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪ ವದ್ಧಾರಯೇತ್ | 
   ನತು ಪ್ರತಿನಿವಿಷ್ಟ ಮೂರ್ಖಜನಚಿತ್ತಮಾರಾಧಯೇತ್ ||

೭] ಮೂರ್ಖತ್ವಂ ಸುಲಭಂ ಭಜಸ್ವ, ಕುಮತೇ ಮೂರ್ಖಸ್ಯಚಾಷ್ಟವ್‌ಗುಣ ವ್|
   ನಿಶ್ಚಿಂತೋ ಬಹುಭೋಜಕೋsತಿಮುಖರೋ ರಾತ್ರಿಂ ದಿವಂಸ್ವಪ್ನಭಾಕ್ | 
   ಕಾರ್ಯಕಾರ್ಯವಿಚಾರಣಾಂಧ ಬಧಿರೋ ಮಾನಾಪಮಾನೇ ಸಮಃ |
   ಪ್ರಾಯೋಣಾಮಯ ವರ್ಜಿತೋ ದೃಢವಪು ಮುರ್ಖಃ ಸುಖಂಜೀವನೆ ||

೮] ಸಾಹಿತ್ಯ ಸಂಗೀತ ಕಲಾವಿಹೀನ; ಸಾಕ್ಷಾತ್ ಪಶುಃ ಪುಚ್ಛ ವಿಷಾಣಹೀನಃ | 
   ತೃಣಂ ನ ಖಾದನ್ನ್ ಪಿಜೀವಮಾನಃ ತದ್ಭಾಗಧೇಯಂ ಪರಮಂ ಪಶುನಾಮ್ ||

೯] ಯೇಷಾಂ ನ ವಿದ್ಯಾ ನ  ತಪೋ ನ  ದಾನಂ ಜ್ಞಾನಂನಶೀಲಂನಗುಣೋ ನಧರ್ಮಃ |
   ತೇ ಮೃತ್ಯುಲೋಕೇ ಭುವಿಭಾರಭೂತಾಃ ಮನುಷ್ಯರೂಪೇಣ ಮೃಗಾಶ್ಚರಂತಿ ||

೧೦] ಮುಕ್ತಾ ಫಲೈಃ ಕಿಂಮೃಗಪಕ್ಷಿಣಾಂಚ ಮೃಷ್ಟಾನ್ನಾ ಪಾನಂಕಿಮು ಗರ್ಧಭಾನಾಮ್ |
    ಅಂಧಸ್ಯ ದೀಪೋ ಬಧಿರಸ್ಯಗೀತಂ ಮೂರ್ಖಸ್ಯಕಿಂ ಧರ್ಮಕಥಾಪ್ರಸಂಗಃ ||

-ಡಾ.ಜಿ.ಎನ್.ಭಟ್



ಶುಕ್ರವಾರ, ಜುಲೈ 18, 2014

ಈ ಅಸ್ಪೃಶ್ಯರನ್ನು ಅಸ್ಪೃಶ್ಯರಂತೇ ಕಾಣಿ!

ಉತ್ತರ ಪ್ರದೇಶದ ಕುಗ್ರಾಮವಿರಲಿ, ದೆಹಲಿಯಂತಹ ಮಹಾನಗರವೇ ಆಗಿರಲಿ... ಮೆಟ್ರೋಸಿಟಿ ಬೆಂಗಳೂರೇ ಇದ್ದಿರಲಿ, ಹುಬ್ಬಳ್ಳಿಯಲ್ಲಿರುವ ಒಂದು ಪುಟ್ಟ ಹಳ್ಳಿಯೇ ಆಗಿದ್ದಿರಲಿ.. ಅವ್ಯಾಹತವಾಗಿ, ನಿರ್ಭೀತಿಯಿಂದ, ಅಮಾನುಷವಾಗಿ, ಹೇಯ ರೀತಿಯಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ/ಅತ್ಯಾಚಾರ ನಾನಾ ರೀತಿಯಲ್ಲಿ ನಡೆಯುತ್ತಿದೆ. ಹುಟ್ಟಿ ಆರುತಿಂಗಳಿನ ಮಗುವಿನಿಂದ ಹಿಡಿದು ೮೦-೯೦ರ ವೃದ್ಧರನ್ನೂ ಬಿಡುವುದಿಲ್ಲ ಈ ಪಿಶಾಚಿಗಳು! ಇದರ ವಿರುದ್ಧ ಎಷ್ಟೇ ನಾನು, ನೀವು ಸಾಮಾಜಿಕ ಜಾಲದಲ್ಲಿ, ಪೇಪರ್, ನ್ಯೂಸ್‌ಗಳಲ್ಲಿ ಅದೆಷ್ಟೇ ಬೊಬ್ಬಿರಿದರೂ, ಆಕ್ರೋಶ ವ್ಯಕ್ತ ಪಡಿಸಿದರೂ ಮನುಷ್ಯಾಕಾರದ ಆ ರಕ್ಕಸರಿಗೆ ಅವೆಲ್ಲಾ ಕೇಳಿಸುವುದೂ ಇಲ್ಲ.. ತಾಗುವುದೂ ಇಲ್ಲ!  

ಕೂಲಿ ಕಾರ್ಮಿಕರ, ಗುಡಿಸಲುವಾಸಿಗಳ ಹೆಣ್ಮಕ್ಕಳು ಇಂತಹ ರಕ್ಕಸರ ಧಾಳಿಗೆ ಸುಲಭವಾಗಿ ಸಿಗುವಂತಾಗಿದ್ದು, ಕಾನೂನು ಕೂಡ ಅಸಡ್ಡೆಯ ತೋರಣೆ ಧಾರಾಳವಾಗಿ ಇವರ ಪ್ರತಿ ತೋರುತ್ತಿರುವುದು ತುಂಬಾ ವಿಷಾದನೀಯ. ಇಲ್ಲಿ ಕಾನೂನು ಅಂದರೆ ಕೋರ್ಟ್ ಎಂದಷ್ಟೇ ಆಗುವುದಿಲ್ಲ. ಮುಖ್ಯವಾಗಿ ನಮ್ಮ ಪೋಲೀಸ್ ವ್ಯವಸ್ಥೆಯ ಬಗ್ಗೆಯೇ ನಾನು ಹೇಳುತ್ತಿರುವುದು. ಶ್ರೀಮಂತ, ಶಕ್ತಿಶಾಲಿ ವರ್ಗದವರ ಮಾನ, ಪ್ರಾಣಗಳನ್ನು ಮಾತ್ರ ಕಾಪಾಡುವವರೆನ್ನುವ ಧೋರಣೆಯೇ ಇವರಲ್ಲಿ ಹೆಚ್ಚಾಗಿ ಕಂಡುಬರುತ್ತಿರುತ್ತದೆ (ಕಲವೇ ಕೆಲವರನ್ನು ಹೊರತುಪಡಿಸಿ). ನಮ್ಮ ಈ ಅವ್ಯವಸ್ಥೆಯಿಂದಾಗಿಯೇ, ಬಡವರು, ದುರ್ಬಲರು, ಅಸಹಾಯಕರು ಇವರೆಲ್ಲಾ.... ಯಾರೂ ದಿಕ್ಕಿಲ್ಲದವರಿವರೆಲ್ಲಾ ಎಂಬ ನಿರ್ಲಕ್ಷ್ಯತನ, ಉಡಾಫೆಯಿಂದಾಗಿಯೇ ಪಾಪದ ಮುಗ್ಧರನ್ನು ಸುಲಭವಾಗಿ ಹೊಸಕಿಹಾಕಿ ರಾಕ್ಷಸರು ಸುಲಭವಾಗಿ ಪಾರಾಗಿಬಿಡುತ್ತಾರೆ!

ಇದರರ್ಥ ಹೈ ಸೊಸೈಟಿಗಳಲ್ಲಿ ಅತ್ಯಾಚಾರಗಳಿಲ್ಲವೇ ಇಲ್ಲಾ ಎಂದಲ್ಲಾ! ಅಲ್ಲಿರುವ ಬಲಾತ್ಕಾರಿಗಳೆಲ್ಲಾ  ಹೆಚ್ಚು ಗೋಮುಖ ವಾಘ್ರಗಳೇ! ನಿನ್ನೆ, ಮೊನ್ನೆ ನಡೆದ ಕಾಲೇಜು ವಿಧ್ಯಾರ್ಥಿನಿಯ ಮೇಲಿನ ಬಲಾತ್ಕಾರ, ಪ್ರತಿಷ್ಟಿತ ಶಾಲೆಯೆಂದು(?!) ಹೇಳಿಕೊಂಡಿದ್ದ ವಿಬ್‍ಗಯಾರ್(VIBGYOR) ಶಾಲೆಯಲ್ಲಿ ನಡೆದ ಎಳೆಯ ಕಂದಮ್ಮನ ಮೇಲಿನ ಲೈಂಗಿಕ ದೌರ್ಜನ್ಯ - ಇವೆಲ್ಲಾ ಬಲಾತ್ಕಾರಿಗಳಿಗೆ ವಿಕೃತಿಯ, ವಿಕೃತ ಸಂತಸದ ಮುಂದೆ ಮತ್ತೆಲ್ಲವೂ ಶೂನ್ಯ ಎನ್ನುವುದನ್ನು ಎತ್ತಿ ಎತ್ತಿ ತೋರಿಸುತ್ತಿದೆ. ಸ್ವಂತ ಮನೆಯೊಳಗೇ ಅವಿತಿದ್ದರೂ ತಿಳಿಯದ, ತಿಳಿದರೂ ಮರ್ಯಾದೆ, ಪ್ರತಿಷ್ಠೆಗಳಿಗೆ ಬಲಿಯಾಗುವ ಅದೆಷ್ಟೋ ಹೆಣ್ಣು ಜೀವಗಳು, ಅವುಗಳ ನರಳಾಟಗಳು ಇನ್ನೂ ನ್ಯಾಯಕ್ಕಾಗಿ ಕೂಗುತ್ತಲೇ ಇವೆ!

ಹೀಗಿರುವಾಗ ನಾವು, ಅಂದರೆ ನಮ್ಮಿಂದಲೇ ಆಗಿರುವ ಈ ಸಮಾಜ, ಇದರೊಳಗಿನ ಸಹೃದಯ ಮನುಷ್ಯರಾದ ನಾನು, ನೀವು ಏನು ಮಾಡಬಹುದು? ಇದಕ್ಕೇನು ಪರಿಹಾರ? ಏನೂ ಸಾಧ್ಯವಿಲ್ಲವೇ? ಕೇವಲ ಪ್ರತಿಭಟನೆ, ಮುಂಬತ್ತಿ ಜಾಥಾ, ಪ್ರಾರ್ಥೆನೆಗಳಿಂದ ಸುಧಾರಣೆ ಸಾಧ್ಯವೇ? ಬಲು ಕಷ್ಟ! ಹೀಗಿರುವಾಗ ಪ್ರಜ್ಞಾವಂತ, ಕಳಕಳಿಯಿಂದ ಮಿಡಿವ ಸಮಾಜ ಏನು ಕಠಿಣ ನಿರ್ಧಾರ ತೆಗೆದುಕೊಂಡರೆ ತುಸು ಮಟ್ಟಿಗಾದರೂ ಜಾಗೃತಿ ಮೂಡಬಹುದು? ಎಂದೆಲ್ಲಾ ನಾನು ತುಂಬಾ ಚಿಂತಿಸಿದ ಮೇಲೆ ನನಗೆ ಸಿಕ್ಕ ಅತಿ ಚಿಕ್ಕ ಪರಿಹಾರವೆಂದರೆ ‘ಅಸ್ಪೃಶ್ಯತೆ’ಯನ್ನು ಕಡ್ಡಾಯ ಜಾರಿಗೆ ಗೊಳಿಸುವುದು!

ಹೌದು.... ಬಲಾತ್ಕಾರಿ ಮನೋಭಾವ ಹೊಂದಿದ ಮನುಷ್ಯರೆಲ್ಲಾ ನೀಚರೇ... ಈ ನೀಚ ಜಾತಿಯಲ್ಲಿ ಹುಟ್ಟಿದವರನ್ನು ಸಂಫೂರ್ಣ ಅಸ್ಪೃಶ್ಯರನ್ನಾಗಿಸಬೇಕು ಈ ಸಮಾಜ! ಯಾರು ಹೆಣ್ಣಿನ ಮೇಲೆ ವರದಕ್ಷಿಣೆ ಕಿರುಕುಳ, ಬಲಾತ್ಕಾರ, ಹೊಡೆತ, ಮಾನಸಿಕ ದೌರ್ಜನ್ಯಗಳನ್ನು ಎಗ್ಗಿಲ್ಲದೇ ಮಾಡುತ್ತಾರೋ, ಹಾಗೆ ಮಾಡಿರುವುದಕ್ಕೆ ನಮ್ಮೊಳಗಿನ ಪ್ರಜ್ಞೆ ಸಾಕ್ಷಿಯನ್ನೊದಗಿಸಿರುತ್ತದೋ.. ಅಂತಹವರೆಲ್ಲಾ ನಿಜವಾದ ರೀತಿಯಲ್ಲಿ ಅಧಮರೆಂದು ಪರಿಗಣಿಸಬೇಕು. ಕಾರಣ, ನೀಚ ಜಾತಿ ಎಂಬುದೊಂದಿದ್ದರೆ ಅದು ಇಂಥವರದ್ದು ಮಾತ್ರ! ಇಂತಹವರು ಯಾವುದೇ ಸಾಮಾಜಿಕ ಮನ್ನಣೆ, ಬಳಕೆ, ಸಭೆ ಸಮಾರಂಭಗಳಿಗೆ, ಪವಿತ್ರ ಸ್ಥಳಗಳ ಪ್ರವೇಶಕ್ಕೆ ಅನರ್ಹರು, ಅಯೋಗ್ಯರು. ನಿಜವಾದ ರೀತಿಯಲ್ಲಿ ಮತ್ತು ಎಲ್ಲಾ ರೀತಿಯಲ್ಲೂ ಅಸ್ಪೃಶ್ಯರೆಂದರೆ ಈ ಜನರು ಮಾತ್ರ. ಇವರಲ್ಲಿ ಹೆಣ್ಣು-ಗಂಡೆಂಬ ಬೇಧವಿಲ್ಲದೇ ಕಠಿಣವಾಗಿ ಈ ಸ್ವಯಂಘೋಷಿತ ಕಾನೂನನ್ನು ನಾವು ನಾವೇ ಜಾರಿಗೆ ತರಬೇಕು. ಅದಕ್ಕಾಗಿ ಕೆಲವು ಸೂತ್ರಗಳನ್ನು ಮನದಟ್ಟುಮಾಡಿಕೊಂಡರೆ ಸುಲಭ. 
ಅವು ಇಂತಿವೆ :-

೧. ನಮ್ಮ ನೆಂಟರಲ್ಲಿ, ಬಂಧು-ಬಾಂಧವರಲ್ಲಿ, ಸ್ನೇಹಿತವರ್ಗಗಳಲ್ಲಿ ಯಾರೇ ಆಗಿದ್ದಿರಲಿ ಅತ್ಯಾಚಾರಿಗಳು, ಹೆಣ್ಣಿನ ಜೊತೆ ಅಸಭ್ಯವಾಗಿ ವರ್ತಿಸುವವರು, ಹೆಂಡತಿಯನ್ನು ಪಶುವಂತೆ ನಡೆಸಿಕೊಳ್ಳುವವರು ನಿಮಗೆ ತಿಳಿದು ಬಂದರೆ, ಅವರು ಅಂತಹವರೇ ಎನ್ನುವುದು ನಿಮ್ಮ ಆತ್ಮಸಾಕ್ಷಿಗೆ ಮನದಟ್ಟಾದರೆ, ಅವರನ್ನು ಮನೆಯೊಳಗೆ ಹೊಕ್ಕಿಸಿಕೊಳ್ಳುವುದಾಗಲೀ, ಆದರಾತಿಥ್ಯಕೊಡುವುದಾಗಲೀ, ಯಾವುದೇ ರೀತಿಯ ಮರ್ಯಾದೆ, ಸಂಬೋಧನೆ ಕೊಟ್ಟು ಗೌರವಿಸುವಾದಗಲೀ ಮಾಡಲುಹೋಗದಿರುವುದು. ಇಂತಹ ಕುಕೃತ್ಯಕ್ಕೆ ಕುಮ್ಮಕ್ಕು, ಸಹಾಯ, ಸಲಹೆಗಳನ್ನಿತ್ತ ಹೆಂಗಸರನ್ನೂ ಸರ್ವವಿಧದಲ್ಲೂ ದೂರವಿಟ್ಟುಬಿಡುವುದು. ಈ ವರ್ತನೆಗೆ ಯಾವುದೇ ರೀತಿ ಲಿಂಗ ತಾರತಮ್ಯವನ್ನು ತೋರದೆ ನಿರ್ದಯವಾಗಿ ಜಾರಿಗೆ ತರುವುದು.

೨. ಮುಖಗೋಡೆ (Facebook), ಅಂತರ್ಜಾಲ ಹಾಗೂ ಯಾವುದೇ ರೀತಿಯ ಸಾಮಾಜಿಕ ಜಾಲಗಳಲ್ಲಿ ಇಂತಹ ದುಷ್ಟರಿರುವುದು ಸಾಕ್ಷಿ ಸಮೇತ ಗೊತ್ತಾದಲ್ಲಿ ಅಂತಹವರನ್ನು ಬ್ಲಾಕ್ ಮಾಡಿ ಸಂಪರ್ಕವನ್ನು ಸಂಫೂರ್ಣ ಖಡಿದುಕೊಳ್ಳುವುದು. ಎಷ್ಟೋ ಸಲ ನಮಗೆ ಸತ್ಯ ಗೊತ್ತಿರುತ್ತದೆ ಆದರೆ ನಮಗೇಗೆ? ನಮ್ಮ ಜೊತೆ ಆತ/ಆಕೆ ಸರಿಯಿದ್ದಾಳೆ ತಾನೆ? ನಾವೇಕೆ ಅವರೊಂದಿಗೆ ವೈರ ಕಟ್ಟಿಕೊಳ್ಳುವುದು? ಆತ ಅವಳೊಂದಿಗೆ ಅಸಭ್ಯವಾಗಿ ಚಾಟ್ ಮಾಡಿದ್ದರೆ, ನಡೆದುಕೊಂಡಿದ್ದರೆ ಇದು ಅವರಿಬ್ಬರ ಸಮಸ್ಯೆಯೇ ಸರಿ... ಇಷ್ಟಕ್ಕೂ ಆತ ದೊಡ್ಡ ಮನುಷ್ಯ, ನಾಳೆ ಯಾವುದಾದರೂ ನಮ್ಮ ಕೆಲಸಕ್ಕೆ ಬೇಕಾಗುವಂಥವನು.... ಅನ್ನುವ, ಅವಕಾಶವಾದಿತನ, ನಿರ್ಲಕ್ಷ್ಯ, ಅನವಶ್ಯಕ ಉದಾರತನ ಖಂಡಿತ ಸಲ್ಲ. ಇಂದು ದಡ ಮೀರಿದ ಹೊಳೆ, ನಾಳೆ ನಮ್ಮ ಮನೆ ಹೊಸ್ತಿಲ ದಾಟದೇ ಇರದು ಎನ್ನುವುದು ನೆನಪಿಡುವುದು ಅವಶ್ಯಕ!

೩. ನಮ್ಮೊಂದಿಗೆ ಅಂದರೆ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ಯಾರೇ ನಡೆದುಕೊಂಡರು, ಅದು ಎಷ್ಟೇ ಅಲ್ಪ ಪ್ರಮಾಣದಲ್ಲಿದ್ದರೂ, ಅದನ್ನು ಸಶಕ್ತವಾಗಿ ವಿರೋಧಿಸುವುದು, ಖಂಡಿಸುವುದು ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕ. ಇಷ್ಟರಲ್ಲೇ ಹೋಯಿತಲ್ಲಾ ಎಂದರೆ ಅದು ಮಹಾಮಾರಿಯಾಗಿ ಬೇರೊಬ್ಬರ ಮೇಲೆರೆಗಬಹುದು!! ಸಾಮಾಜಿಕ ತಾಣದಲ್ಲಿ ಅವರ ಕುಲ ಗೋತ್ರವನ್ನು, ತಮ್ಮೊಂದಿಗೆ ಆತ ನಡೆದಿಕೊಂಡ ರೀತಿಯನ್ನೂ ನೇರಾನೇರ ಹೇಳಿಕೊಳ್ಳುವುದರ ಮೂಲಕ, ಪ್ರತಿಷ್ಠೆಯ ಹಪಾಹಪಿಯಿರುವ ಕೆಲವು ಗೋಮುಖ ವ್ಯಾಘ್ರಗಳಾದರೂ ತುಸು ಎಚ್ಚೆತ್ತುಕೊಂಡು ಹಿಮ್ಮೆಟ್ಟಬಹುದು.. ಇದರಿಂದ/ಇವರಿಂದ ಕೆಲವು ಮುಗ್ಧ ಹೆಣ್ಣು ಮನಸುಗಳು ನರಳುವುದನ್ನು ತಪ್ಪಿಸಬಹುದು!

ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಲಿಂಗಾತೀತಾವಾಗಿ ಮತ್ತು ಧರ್ಮಾತೀತವಾಗಿ ಅತ್ಯಾಚಾರವನ್ನು, ಅತ್ಯಾಚಾರಿಗಳನ್ನು ಮನಃಪೂರ್ವಕವಾಗಿ ನಾವು ವಿರೋಧಿಸಿದರೆ, ಆ ವಿರೋಧವನ್ನು ಮುಕ್ತವಾಗಿ, ನಿರ್ಭೀತಿಯಿಂದ ಹೊರ ತೋರಿದರೆ, ಇದರಿಂದಾಗಿ ಸಾವಿರದಲ್ಲಿ ಒಬ್ಬನಾದರೂ ಹಿಂಜರಿದರೆ, ಇಲ್ಲಾ ಈ ಕುಕೃತ್ಯಕ್ಕೆ ಕೈಹಾಕುವಾಗ ಬೆದರಿ ಹಿಮ್ಮೆಟ್ಟಿದರೆ, ನಮ್ಮ ದೃಢಸಂಕಲ್ಪಕ್ಕೆ ಅಷ್ಟೇ ಸಾರ್ಥಕ್ಯ ದೊರಕಿದಂತಾಗುವುದು!

ನಾನಂತೂ ನಿರ್ಧರಿಸಿಯಾಗಿದೆ. ನನ್ನ ಆಪ್ತೇಷ್ಟರಲ್ಲಿ, ಸ್ನೇಹಿತರಲ್ಲಿ ಯಾರೇ ಇಂತಹ ಒಂದು ದುಷ್ಕೃತ್ಯಕ್ಕೆ (ಅಸಭ್ಯ ವರ್ತನೆ, ಚಾಟ್, ದೌರ್ಜನ್ಯ.. ಇತ್ಯಾದಿ ಎಲ್ಲಾ ರೀತಿಯ ಮಾನಸಿಕ/ದೈಹಿಕ ಅತ್ಯಾಚಾರಗಳು) ಕೈಹಾಕಿದ್ದರು/ಹಾಕಿದ್ದಾರೆ ಎಂದು ತಿಳಿದುಬಂದರೆ, ನಾನು ಸರ್ವವಿಧದಲ್ಲೂ ಅವರ ಬಗ್ಗೆ ಸತ್ಯಾಪಸತ್ಯತೆಗಳನ್ನು ತಿಳಿದುಕೊಳ್ಳಲು ಯತ್ನಿಸುತ್ತೇನೆ. ಹಾಗೆ ಒಮ್ಮೆ ಅದು ಸತ್ಯವೆಂದು ನಿಶ್ಚಿತವಾದಾಕ್ಷಣ ಅಂತಹವರ ಪಾಲಿಗೆ ನನ್ನ ಮನೆ-ಮನಸ್ಸನ್ನು ಸಂಪೂರ್ಣ ಮುಚ್ಚಿಬಿಡುತ್ತೇನೆ. ಪಶ್ಚಾತ್ತಪದ ತಪದಲ್ಲಿ ಬೇಯಲೂ ಪ್ರಜ್ಞಾವಂತ, ಆರೋಗ್ಯವಂತ ಮನಸ್ಸು ಬೇಕಾಗುತ್ತದೆ. ಆದರೆ ಹೆಣ್ಮಕ್ಕಳ ಮೇಲೆ, ಮಕ್ಕಳ ಮೇಲೆ, ದುರ್ಬಲರ ಮೇಲೆ ದೌರ್ಜನ್ಯವೆಸುಗುವ ಮನಸ್ಸುಗಳಲ್ಲಿ ಕೇವಲ ವಿಕೃತಿಮಾತ್ರ ತುಂಬಿರುತ್ತದೆ. ಅಂತಹವರಲ್ಲಿ ಪಶ್ಚಾತ್ತಾಪ ಹುಡುಕುವುದೇ ಒಂದು ವಿಕಟ ಹಾಸ್ಯ! 

ನಮ್ಮ ಮನೆಯ ಪರಿಸರವನ್ನು ಚೊಕ್ಕವಾಗಿಟ್ಟುಕೊಳ್ಳುವುದ ನಮ್ಮ ಕರ್ತವ್ಯ. ನಮ್ಮ ಮನೆ-ಮನಸ್ಸೊಳಗೆ ಇಂತಹ ಕ್ರಿಮಿಗಳು ಪ್ರವೇಶಿಸದಂತೆ ಅಸ್ಪೃಶ್ಯತೆಯನ್ನು ಜಾರಿಗೆ ತಂದು.. ನೋಡು ನೀನು ಹೀಗೆ ಅವಳ ಜೊತೆ ನಡೆದುಕೊಂಡರೆ, ಇಂತಹ ಒಂದು ಸಾಮೂಹಿಕ ತಿರಸ್ಕಾರ, ನಿರ್ಲಕ್ಷ್ಯತನದ ಶಿಕ್ಷೆ ನಿನಗೆ ಕಾದಿದೆ ಅನ್ನುವ ಒಂದು ಜಾಗೃತಿಯನ್ನು ನಾವು ಮೂಡಿಸಿದಂತಾಗುತ್ತದೆ. 

ಸದ್ಯಕ್ಕೆ ನನಗೆ ತೋಚಿದ ಅತ್ಯಲ್ಪ ಪರಿಹಾರವಿದು. ಎಷ್ಟು ಸಹಕಾರಿಯಾಗಬಲ್ಲದು ಗೊತ್ತಿಲ್ಲ. ಆಶಾವಾದಿಯಂತೂ ಆಗಿದ್ದೇನೆ. ನಿಮ್ಮಲ್ಲಿಯೂ ಇನ್ನೂ ಅನೇಕ ಉತ್ತಮ ಪರಿಹಾರಗಳು ಇದ್ದಿರಬಹುದು. ಹಂಚಿಕೊಳ್ಳುವಿರಿ ತಾನೆ? :)

-ತೇಜಸ್ವಿನಿ.

ಸೋಮವಾರ, ಫೆಬ್ರವರಿ 24, 2014

ಬದುಕ ಬದಲಿಸಬಲ್ಲ ಪುಸ್ತಕ.....

"ಸುಖವು ದುಃಖದ ಕಿರೀಟವನ್ನು ಧರಿಸಿ ಮಾನವನೆದುರು ಬಂದು ನಿಲ್ಲುವುದು. ಯಾರಿಗೆ ಸುಖ ಬೇಕೋ ಅವರು ದುಃಖವನ್ನು ಸ್ವೀಕರಿಸಬೇಕು" - ಇದು ವಿವೇಕಾನಂದರ ಅಮೂಲ್ಯ ನುಡಿಮುತ್ತು. ನನಗೂ ಬಹು ಮೆಚ್ಚುಗೆಯಾದದ್ದು. ಶ್ರುತಿ ಬಿ.ಎಸ್. ಬರೆದಿರುವ "ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ..." ಅನ್ನೋ ಆತ್ಮಚರಿತ್ರೆಯಲ್ಲಿಯೂ ಇದೇ ನುಡಿಯನ್ನು ಉದ್ಧರಿಸಲಾಗಿದೆ. ಅದೇ ರೀತಿ ಶಾನ್ ಸ್ವಾರ್ನರ್‌ನ ಬಡಿದೆಬ್ಬಿಸುವ ಅದ್ಭುತ ನುಡಿಗಳ ಮೋಡಿಗೆ ಒಳಗಾಗದೇ ಇರುವುದು ಅಸಾಧ್ಯ! ಅದರಲ್ಲೂ "ಭರವಸೆಯೇ ಬದುಕು... ಬದುಕು ನಿಂತಿರುವುದೇ ಆಶಾವಾದಿತನದ ಮೇಲೆ..." ಅನ್ನೋ ಅವನ ಅದಮ್ಯ ಉತ್ಸಾಹ, "ಎಲ್ಲವೂ ಸಾಧ್ಯ, ಮನಸ್ಸು ಮಾಡಬೇಕಷ್ಟೇ.." ಅನ್ನೋ ಅನುಭವದ ನುಡಿ, ಎಲ್ಲವೂ ಶ್ರುತಿಯ ಸಾಹಸಗಾಥೆಯಲ್ಲಿ ಹಾಸುಹೊಕ್ಕಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

೨೨ರ ಹರೆಯದ ಈ ಹುಡುಗಿಯನ್ನು ನಾನೀವರೆಗೂ ನೋಡಿಲ್ಲ. ಪರಿಚಯವಾಗಿದ್ದೂ ಅವಳ ಬ್ಲಾಗ್ ಮೂಲಕವೇ! ತದನಂತರ ಮುಖಗೋಡೆಯ ಸಹಾಯದಿಂದ ಪರಿಚಯ ಸ್ನೇಹಕ್ಕೆ ತಿರುಗಿ, ಆಪ್ತತೆ ಬೆಳೆಯಿತು. ಪುಸ್ತಕದಲ್ಲೊಂದು ಕಡೆ ಶ್ರುತಿ ಹೇಳಿಕೊಂಡಿದ್ದಾರೆ. ಆಪ್ತತೆಗೆ ಮಾತುಗಳೇ ಬೇಕೆಂದಿಲ್ಲ. ಸಂವೇದನಾ ಭರಿತ ಕಣ್ಣ ನೋಟ, ಮುಗುಳ್ನಗೆ, ಸಾಂತ್ವನದ ಒಂದೇ ಒಂದು ಮಾತು ಎಲ್ಲವೂ ಆಜನ್ಮ ಮೈತ್ರಿಯನ್ನೇ ಬೆಸೆದು ಬಿಡುತ್ತವೆ ಎಂಬರ್ಥದ ಅನುಭವದ ಮಾತುಗಳನ್ನು ತುಂಬಾ ಸುಂದರವಾಗಿ ಹಂಚಿಕೊಂಡಿದ್ದಾಳೆ. ಅದು ನೂರಕ್ಕೆ ನೂರು ಸತ್ಯ. ನಮ್ಮಿಬ್ಬರ ನಡುವೆ ಮಾತುಗಳು, ಚಾಟಿಂಗ್‌ಗಳು ಆಗಿದ್ದೇ ಅತ್ಯಲ್ಪ. ಎರಡೇ ಸಲ ಫೋನಾಯಿಸಿದ್ದು. ಹೀಗಿದ್ದರೂ ಅದೇನೋ ಎಂತೂ ಅವಳ ಪುಟ್ಟ ಶರೀರದ ತುಂಬೆಲ್ಲಾ ಹೊರ ಹೊಮ್ಮುತ್ತಿದ್ದ ಬೆಟ್ಟದಂತಹ ಧನಾತ್ಮಕ ಪ್ರಭಾವಳಿಗಳು ನೂರಾರು ಮೈಲಿ ದೂರದಲ್ಲಿದ್ದರೂ ನನ್ನನ್ನು  ಸ್ಪರ್ಶಿಸಿ ನಮ್ಮಿಬ್ಬರನ್ನೂ ಬಂಧಿಸಿದ್ದು ಮಾತ್ರ ನೂರಕ್ಕೆ ನೂರು ಸತ್ಯ. ಇದಕ್ಕೆ ಬಹುಶಃ ನನ್ನ ಹೋರಾಟದ ಬದುಕಿನ ಕೊಂಡಿಯೊಂದು ಅವಳೊಂದಿಗೆ ಅವ್ಯಕ್ತವಾಗಿ ಬೆಸೆದುಕೊಂಡಿರುವುದೂ ಆಗಿದ್ದಿರಬಹುದು! ಆಕೆ ಚಿಕಿತ್ಸೆ ಪಡೆದ ಮಣಿಪಾಲ ಆಸ್ಪತ್ರೆಗೂ ನನಗೂ ಹತ್ತಿರದ ನಂಟು, ಒಂದು ತರಹ ಅವಿನಾಭಾವ ಸಂಬಂಧ. ಇನ್ನು ಆಕೆ ಮೆಚ್ಚುವ, ಆರಾಧಿಸುವ ಅವಳ ವೈದ್ಯರಾದ ಡಾ. ಭಾಸ್ಕರಾನಂದರು ನನಗೂ ಆತ್ಮೀಯರು! ವೈದ್ಯರ ಮಾತುಗಳೊಳಗಿನ ಮಾಂತ್ರಿಕತೆಯಲ್ಲೇ ನಿಜವಾದ ಚಿಕಿತ್ಸೆ ಇರುತ್ತದೆ ಎನ್ನುವುದಕ್ಕೆ ಇಂತಹ ಅನೇಕ ವೈದ್ಯರುಗಳೇ ಸಾಕ್ಷಿ!

ಬದುಕನ್ನು ಸವಾಲಾಗಿ ಸ್ವೀಕರಿ, ಎಂತಹ ದುಃಸ್ಥರ ಸ್ಥಿತಿ ಎದುರಾದರೂ, ಪುಟಿದೆದ್ದು ಎದುರಿಸಿ ಉತ್ಕಟವಾಗಿ ಬದುಕ ಪ್ರೀತಿಸುವವರು ಯಾರೇ ಆಗಿದ್ದಿರಲಿ, ಎಲ್ಲೇ ಇದ್ದಿರಲಿ ಅವರೆಲ್ಲಾ ನನ್ನ ಅದೆಷ್ಟೋ ಜನ್ಮಗಳ ಆಪ್ತರೇನೋ ಎಂದೆನಿಸಿಬಿಡುತ್ತಾರೆ ನನಗೆ. ಮಾತು, ಕಥೆ, ಭೇಟಿ, ಒಡನಾಟ - ಇವುಗಳಿಲ್ಲದೆಯೋ ಅವರೆಲ್ಲಾ ನನ್ನ ಬಂಧುಗಳೇನೋ ಎಂದೆನಿಸಿಬಿಡುತ್ತಾರೆ! ನಿಜ.. ನೋವಿಗೆ ಸಶಕ್ತ ಬಂಧ ಕಲ್ಪಿಸುವ ಶಕ್ತಿಯಿದೆ.. ಅದು ಸಂತಸಕ್ಕೆ ಅತಿ ಕಡಿಮೆಯೇಂದೇ ಹೆಳಬಹುದು!

೧೮ರ ಹರೆಯದಲ್ಲೇ ಮೂಳೆ ಕ್ಯಾನ್ಸರ್‌ಗೆ ಒಳಗಾಗಿ ೬ ಕೀಮೋಥೆರಪಿಯ ಹಿಂಸೆಯನ್ನು ಅನುಭವಿಸಿ, ನಡು ನಡುವೆ ಹತ್ತು ಹಲವಾರು ದೈಹಿಕ, ಮಾನಸಿಕ ಯಾತನೆಗಳನ್ನು ತಡೆದುಕೊಂಡೂ, ಸಾವೇ ನಿನ್ನ ಪಾಲಿಗೆ ಸದ್ಯ ಸಾವೇ ಗತಿ ಎಂದು ಬದುಕ ಕೈ ಹಿಡಿದು ಮುನ್ನೆಡೆದ ಈ ದಿಟ್ಟ ಹುಡುಗಿ ನನ್ನ ದೈನಂದಿನ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾಳೆ. ಇವಳ ಬರಹದೊಳಗಿನ ಅಪ್ಪಟ ಜೀವನ ಪ್ರೀತಿ, ಪ್ರಾಮಾಣಿಕತೆ, ಜಗತ್ತನ್ನು ಅತಿ ಸಣ್ಣ ವಯಸ್ಸಿನಲ್ಲೇ ಸೂಕ್ಷ್ಮವಾಗಿ ಗ್ರಹಿಸಿ, ಬಂಧಿಸಿಕೊಡುವ ರೀತಿ, ನಿರೂಪಣಾ ಶೈಲಿ ಎಲ್ಲವೂ ಮನಸೂರೆಗೊಂಡವು..... ಮಾರುಹೋದೆ!

ನೆನಪಿಡಿ, ಈಕೆ ನಮ್ಮಂತಹ ದೊಡ್ಡ ಶಹರದಲ್ಲಿ ಹುಟ್ಟಿ, ಬೆಳೆದವಳಲ್ಲ!! ಶಿವಮೊಗ್ಗ ಜಿಲ್ಲೆಯಲ್ಲಿರುವ ಹೊಸನಗರ ತಾಲ್ಲೂಕಿನ, ಪುಟ್ಟ ಬಾಣಿ ಗ್ರಾಮ ವಾಸಿ ಈಕೆ! ಹಾಗಿದ್ದೂ ಇಂತಹ ಒಂದು ಭಯಂಕರ ವ್ಯಾಧಿ ೧೮ರ ಕನಸುಕಂಗಳಿಗೆ ಬಡಿದಾಗ ಅದೆಷ್ಟು ಆಕೆಯ ಜೀವ, ಹೆತ್ತವರು ಒದ್ದಾಡಿರಬಹುದೆಂಬುದು ಊಹೆಗೂ ನಿಲುಕದ್ದು. ಹಳ್ಳಿಯ ಜನರ ಮುಗ್ಧತೆಯಲ್ಲೇ ಒಂದು ತರಹದ ಮೊಡ್ಡುತನವೂ ಬೆರೆತಿರುವುದೂ ಹೆಚ್ಚು ಕಂಡು ಬರುತ್ತದೆ. ನಮ್ಮೂರ ಕಡೆ ಅಂದರೆ ಆ ಕಡೆ ಇಂತಹ ಖಾಯಿಲೆ ಬಂದರೆ ಬದುಕುವುದೇ ವ್ಯರ್ಥ, ಸಾವು ಅನಿವಾರ್ಯ ಅನ್ನೋ ಮನೋಭಾವ ತುಸು ಹೆಚ್ಚೇ ಕಂಡು ಬರುತ್ತದೆ. (ಪಟ್ಟಣ ವಾಸಿಗಳಲ್ಲಿ ಇಲ್ಲ ಎಂದೂ ನಾನು ಹೇಳುತ್ತಿಲ್ಲ...). ಅವರ ಇಲ್ಲ ಸಲ್ಲದ ಅವ್ಯಾಹತ ಪ್ರಶ್ನೆಗಳು, ರೋಧನಗಳು, ಕಪೋ ಕಲ್ಪಿತ ಕಥೆಗಳು, ಗಾಳಿ ಸುದ್ದಿಗಳು, ಅನಗತ್ಯದ ಅನುಕಂಪಗಳು ಎಲ್ಲವನ್ನೂ ಆಕೆ, ಅವಳ ಮನೆಯವರು ಸಹಿಸಿ, ಧಿಕ್ಕರಿಸಿ ಮುನ್ನೆಡೆಯಬೇಕಾಗಿತ್ತು. ದೂರದೂರಿಂದ ೫ ತಾಸುಗಳ ಪ್ರಯಾಣ ಮಾಡಿ ಪ್ರತಿ ಸಲ ಕೀಮೋಥೆರಪಿಗಾಗಿ ಮಣಿಪಾಲಕ್ಕೆ ಬಂದು ಚಿಕಿತ್ಸೆ ಪಡೆದು, ಹಿಂತಿರುಗಿ, ಯಾತನೆ ಅನುಭವಿಸಿ, ಪ್ರತಿ ದಿನ ಆತಂಕದ ಜೊತೆ ಜೀವಿಸುತ್ತಾ, ಹೆಚ್ಚು ಕಡಿಮೆ ಆದರೆ ಮತ್ತೆ ತಾಸುಗಟ್ಟಲೆ ಪ್ರಯಾಣಿಸಿ ಹೈರಾಣಾಗುತ್ತಾ, ಆತಂಕಗಳನ್ನು ಎದುರಿಸುತ್ತಾ, ಅತಿಯಾದ ವೆಚ್ಚಗಳನ್ನು ಹೇಗೋ ಭರಿಸುತ್ತಾ, ಎಲ್ಲವನ್ನೂ ಧೈರ್ಯದಿಂದ, ಆತ್ಮಬಲದಿಂದ ದಾಟಿ ಇಂದು ಈ ಕ್ಯಾನ್ಸರ್‌ಗೆ ವಿದಾಯ ಹೇಳಿ ನಳನಳಿಸುತ್ತಿರುವ ಶ್ರುತಿಯ ಬದುಕಿನ ಈ ಹೋರಾಟದ ಗಾಥೆಯನ್ನು ಓದಿದರೆ ನಮ್ಮ ಬದುಕಿನ ದಿಕ್ಕನ್ನೂ ಬದಲಿಸಿಕೊಳ್ಳಬಹುದು.

‘ಮನುಷ್ಯನ ಮನಸ್ಸಿಗೆ ಬಹಳ ಶಕ್ತಿಯಿದೆ. ಮನೋಬಲವೊಂದಿದ್ದರೆ ಏನನ್ನೂ ಸಾಧಿಸಬಹುದು. ಯಾವ ಸಮಸ್ಯೆಯನ್ನಾದರೂ ಎದುರಿಸಬಹುದು. ಒಂದು ವೇಳೆ ಮನಸು ದುರ್ಬಲವೆನಿಸಿದರೆ ಹೃದಯದ ಮೇಳೆ ಕೈ ಇಟ್ಟು- "ನೀನು ದುರ್ಬಲವಾಗಿಲ್ಲ. ನೀನಿದನ್ನು ಮಾಡಬಲ್ಲೆ" ಎಂದು ಹೇಳಿ , ಅದು ನಿಮ್ಮ ಮಾತನ್ನು ಕೇಳಿಯೇ ಕೇಳುತ್ತದೆ’. ಎನ್ನುತ್ತಾಳೆ ಶ್ರುತಿ. ಇದು ಮಾತ್ರ ಅಪ್ಪಟ ಚಿನ್ನದಂತಹ ಮಾತುಗಳು. ಇದು ನನ್ನ ಬದುಕಿನ ಪ್ರೇರಣೆಯ ಸಾಲೂ ಹೌದು! ಬಾಲ್ಯದಲ್ಲಿ ಎಲ್ಲರೂ ಹೊರ ಬಿದ್ದು ಆಡುವಾಗ, ಒಂಟಿಯಾಗಿ ಕುಳಿತು ಒಳಗೊಳಗೇ ದುಃಖಿಸುತ್ತಿದ್ದ ನನಗೆ ಅಪ್ಪ-ಅಮ್ಮ ಹೇಳಿದ್ದು -
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ, 
ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ಯೋತ್ತಿಷ್ಠ ಪರಂತಪ ”(ಸಾಂಖ್ಯಯೋಗ) (..ಹೇಡಿಯಾಗಬೇಡ, ಇದು ನಿನಗೆ ಯೋಗ್ಯವಲ್ಲ, ಅತಿ ಕ್ಷುಲ್ಲಕವಾದ ಹೃದಯ ದೌರ್ಬಲ್ಯವನ್ನು ಬಿಟ್ಟು, ಮೇಲೇಳು !) ಅದೇ ರೀತಿ "ಸುಖ ದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ (ಸುಖ-ದುಃಖ, ಲಾಭ-ನಷ್ಟ, ಜಯಾಪಜಯಗಳನ್ನು ಸಮವಾಗಿ ಸ್ವೀಕರಿಸಿ ಯುದ್ಧಕ್ಕೆ ತೊಡಗು...) ಎಂದು ಸದಾ ಹೆಳುತ್ತಲೇ ನನ್ನ ಮೇಲೆಬ್ಬಿಸಿದ್ದಾರೆ. ಬದುಕು ಒಂದು ಯುದ್ಧರಂಗವೇ ಸಮಚಿತ್ತತೆ ಇದ್ದಲ್ಲಿ ಮಾತ್ರ ಅಂತಿಮ ವಿಜಯ ನಮ್ಮದೇ... ನಿನಗೇ ನೀನೇ ಮಿತ್ರ, ಶತ್ರು, ಗೆಲುವು, ಸೋಲು ಎನ್ನುವುದನ್ನು ಮನದಟ್ಟು ಮಾಡಿಕೊಂಡರೆ ಯಾವುದೂ ಅಸಾಧ್ಯವಲ್ಲ!

ಹೋರಾಟದ ಬದುಕು ಬಹು ಬೇಗ ಹಲವನ್ನು ಕಲಿಸಿಬಿಡುತ್ತದೆ. ಕೆಲವರಿಗೆ ಬೇಗ ಕಣ್ತೆರೆದರೆ, ಇನ್ನು ಕೆಲವರಿಗೆ ತುಸು ತಡವಾಗಬಹುದೇನೋ! ಶ್ರುತಿ ಹಾಗೂ ನನ್ನಂತಹವರ ಪಾಲಿಗೆ ಬದುಕು ತುಂಬಾ ಕರುಣಾಮಯಿಯಾಗಿದೆ. ಬಹು ಬೇಗ ಅದರ ಪ್ರಾಮುಖ್ಯತೆ, ಅದರ ಕಹಿಯೊಳಡಗಿರುವ ಸವಿ, ಅದೊಡ್ಡುವ ಸವಾಲೊಳಗಿನ ರುಚಿ ಎಲ್ಲವನ್ನೂ ಕಲಿಸಿಕೊಟ್ಟಿದೆ, ಪ್ರತಿ ದಿನ ಕಲಿಸಿಕೊಡುತ್ತಲೇ ಇದೆ. 

ಚಿಕಿತ್ಸೆಯಾನಂತರ ಶ್ರುತಿ ಆ ಪುಟ್ಟ ಗ್ರಾಮದಲ್ಲೇ ಕುಳಿತು, ಅಂತರ್ಜಾಲದ ಮೂಲಕ  ದೇಶ, ವಿದೇಶಗಳಲ್ಲಿರುವ ತನ್ನತಂಹ ಪೀಡಿತರನ್ನು, ಗುಣಮುಖಿಗಳಾಗಿ ಜೀವನ್ಮುಖಿಯರಾದ ಹಲವು ಕ್ಯಾನ್ಸರ್ ಪೀಡಿತರನ್ನು ಸಂಪರ್ಕಿಸಿದ್ದಲ್ಲದೇ ಅವರಿಂದ ಹಲವು ಸ್ಪೂರ್ತಿಯನ್ನು ಪಡೆದು, ತನ್ನಂತೇ ನೊಂದವರಿಗೆ ಮಾರ್ಗದರ್ಶನ ನೀಡಿ, ತನ್ನ ಅನುಭವಗಳನ್ನು ಹಂಚಿಕೊಂಡವಳು. ಇವಳ ಪರಿಮಿತಿಯಲ್ಲಿ ಇಂತಹ ಸಾಧನೆ ಅಪರಿಮಿತ! ಅತ್ಯಲ್ಪದರಲ್ಲೇ ಮಹತ್ತನ್ನು ಸಾಧಿಸಿದ ಇವಳ ಬದುಕೊಂದು ಮಾದರಿ ಹಾಗೂ ಅನುಕರಣೀಯ ಎಂದು ಹೇಳುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಖಂಡಿತವೂ ಇಲ್ಲ. ಒಮ್ಮೆ ಪುಸ್ತಕವನ್ನೋದಿ... ನಿಮಗೂ ನನ್ನ ಮಾತುಗಳೆಷ್ಟು ಸತ್ಯ ಎಂದೆನಿಸುವುದರಲ್ಲಿ ನನಗೆ ಇನಿತೂ ಸಂಶಯವಿಲ್ಲ :)


ಪುಸ್ತಕದ ಹೆಸರು : ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ....
ಲೇಖಕಿ : ಶ್ರುತಿ ಬಿ.ಎಸ್.
ಪ್ರಕಾಶಕರು : ಗೋಮಿನಿ ಪ್ರಕಾಶನ
ಪುಟಗಳು : ೧೨೦
ಬೆಲೆ : ೮೦ ರೂಪಾಯಿಗಳು
( sapnaonline ನಲ್ಲೂ  ಲಭ್ಯ)

-ತೇಜಸ್ವಿನಿ.

ಮಂಗಳವಾರ, ಸೆಪ್ಟೆಂಬರ್ 10, 2013

ಹಬ್ಬ ಮತ್ತು ವ್ರತದ ನಡುವಿನ ವ್ಯತ್ಯಾಸ.

ಹಬ್ಬಕ್ಕೂ ವ್ರತಕ್ಕೂ ವ್ಯತ್ಯಾಸವಿದೆ. ಹಬ್ಬ/ಉತ್ಸವ ಸಾಮೂಹಿಕ, ಸಾರ್ವಜನಿಕ ಆಚರಣೆಯಾಗಿದೆ. ವ್ರತ ವೈಯಕ್ತಿಕ/ಕೌಟುಂಬಿಕ... ಒಮ್ಮೊಮ್ಮೆ ಒಂದು ಸಮುದಾಯಕ್ಕೆ ಸೀಮಿತ.

ಗಣೇಶ ಚತುರ್ಥಿ ಮೂಲತಃ ಶ್ರೀ ಸಿದ್ಧಿವಿನಾಯಕ ವ್ರತವೇ. ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಸಂಘಟನೆಗಾಗಿ, ಎಲ್ಲಾ ಸಮುದಾಯಗಳ ಏಕತೆಗಾಗಿ ಇದಕ್ಕೆ ಒಂದು ಉತ್ಸವದ ಮೆರುಗುಕೊಟ್ಟು ಆಚರಿಸಲು ಕರೆಕೊಟ್ಟಿದ್ದರು. ಅದು ಈಗ ಹಬ್ಬವಾಗಿ, ಸಾಂಸ್ಕೃತಿಕ ಉತ್ಸವವಾಗಿ ಬೆಳೆದಿದೆ.

ನವರಾತ್ರಿ, ಗಣೇಶ ಚತುರ್ಥಿ ಇವೆಲ್ಲಾ ವ್ರತಗಳೇ. ನಾಗರ ಪಂಚಮಿಯೂ ಒಂದು ವ್ರತವೇ. ಆದರೆ ನವರಾತ್ರಿ, ನಾಗರ ಪಂಚಮಿ ಈಗ ಹಬ್ಬಗಳಾಗಿ ಆಚರಿಸಲ್ಪಡುತ್ತಿವೆ. ಕೃಷ್ಣಾಷ್ಟಮಿ, ರಾಮ ನವಮಿ - ಇವು ಕೃಷ್ಣ, ರಾಮರ ಹುಟ್ಟು ಹಬ್ಬಗಳಾಗಿವೆ. ಆದರೆ ಕೆಲವು ಮತಗಳಲ್ಲಿ ಕೃಷ್ಣ ಜಯಂತಿಯನ್ನೂ ವ್ರತವನ್ನಾಗಿ ಆಚರಿಸುತ್ತಾರೆ.

ನಿಜಾರ್ಥದಲ್ಲಿ ಉತ್ಸವವೆಂದು ಪರಿಗಣಿಸಲ್ಪಡುವುದು ದೀಪಾವಳಿಯೇ. ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಒಯ್ಯುವ ಬೆಳಕಿನಹಬ್ಬ ನಿಜವಾಗಿಯೂ ಒಂದು ಸಾಮೂಹಿಕ, ಸಾರ್ವತ್ರಿಕ ಉತ್ಸವ/ಹಬ್ಬವಾಗಿದೆ.

ಆಚರಣೆ ಹಬ್ಬದ ರೀತಿಯಲ್ಲಾಗಿರಲಿ ಅಥವಾ ವ್ರತವಾಗಿರಲಿ... ಅದರ ಆಚರಣೆಯಿಂದ, ಅವರವರು ಆಚರಿಸುವ ರೀತಿ-ನೀತಿಯಿಂದ, ಆಚರಿಸುವವರಿಗೆ ಮತ್ತು ಆ ಆಚರಣೆಯನ್ನು ಹತ್ತಿರದಿಂದಲೋ ಇಲ್ಲಾ ದೂರ ನಿಂತೋ ನೋಡುವವರಿಗೆ ಸಂತಸ, ಸಮಾಧಾನ, ನೆಮ್ಮದಿ ತರುವಂಥದ್ದಾಗಿರಬೇಕು ಅಷ್ಟೇ. ಇಷ್ಟಕ್ಕೂ ಯಾವುದೇ ಹಬ್ಬಗಳಿರಲಿ, ವ್ರತಗಳಿರಲಿ, ಯಾವುದೇ ಆಚರಣೆ, ಸಂಪ್ರದಾಯಗಳಿರಲಿ... ಎಲ್ಲವೂ ಅವರವರ ಭಾವಕ್ಕೆ ಭಕುತಿಗೆ.  ಸಾಮಾಜಿಕ ಏಕತೆಯ ಜೊತೆ, ಸಹಿಷ್ಣುತೆಯೊಂದಿದ್ದರೆ ಎಲ್ಲವೂ ರಮಣೀಯ, ಆದರಣೀಯವೇ. "ಯದ್ಭಾವಂ ತದ್ಭವತಿ" :)

ನನಗಂತೂ "ತತ್ತ್ವಮಸಿ" ಇಷ್ಟ. ಸಮುದ್ರದಲ್ಲಿ ತೆರೆಗಳಿರುವಂತೇ... ಪರಮಾತ್ಮನಲ್ಲಿ ಆತ್ಮ.... ನನ್ನ ಆತ್ಮದಲ್ಲಿ ‘ಅವನ’ ಒಂದು ಅಂಶ.... :)

-ತೇಜಸ್ವಿನಿ.

ಶನಿವಾರ, ಆಗಸ್ಟ್ 3, 2013

ಶ್ರೀಯುತ ಟಿ.ಎನ್.ಎಸ್ ಅವರಲ್ಲೊಂದು ವಿನಮ್ರ ವಿನಂತಿ.

ಗೌರವಾನ್ವಿತ, ಆದರಣೀಯ ಶ್ರೀಯುತ ಟಿ.ಎನ್.ಸೀತಾರಾಮ್ ಅವರಿಗೆ,

ನನ್ನ ಹೆಸರು ತೇಜಸ್ವಿನಿ ಹೆಗಡೆ. ಮೊದಲಿನಿಂದಲೂ ನಿಮ್ಮ ಎಲ್ಲಾ ಧಾರಾವಾಹಿಗಳನ್ನೂ ತಪ್ಪದೇ ವೀಕ್ಷಿಸುತ್ತಾ ಬಂದವಳು ನಾನು. ನನ್ನ ಅಚ್ಚುಮೆಚ್ಚಿನ ಧಾರಾವಾಹಿಗಳೆಲ್ಲಾ ತಮ್ಮ ನಿರ್ದೇಶನದ್ದೇ ಎಂದರೆ ಅದರಲ್ಲೇನೂ ಉತ್ಪ್ರೇಕ್ಷೆಯಿಲ್ಲ. ನೀವು ಪಾತ್ರ ಚಿತ್ರಣವನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಡುವ ರೀತಿ.. ಅವುಗಳನ್ನು ಬೆಳೆಸುವ ರೀತಿ, ಸಂಭಾಷಣೆಗಳಲ್ಲಿನ ಚುರುಕುತನ, ನವೀನತೆ  ಅಷ್ಟೇ ಅಲ್ಲಾ ನಿಮ್ಮ ಧಾರಾವಾಹಿಗಳಲ್ಲಿ ಅಭಿನಯಿಸುವ ನಟ/ನಟಿಯರಿಂದ ನೀವು ಹೊರಹೊಮ್ಮಿಸುವ ನಟನಾಸಾಮರ್ಥ್ಯ, ಎಲ್ಲಕ್ಕಿಂತ ಮುಖ್ಯವಾಗಿ ಶೀರ್ಷಿಕೆ ಗೀತೆಗಳೊಳಗಿನ ಮಾಧುರ್ಯ, ಅರ್ಥವತ್ತಾದ ಸಾಹಿತ್ಯ... ಎಲ್ಲವೂ ನನಗೆ ಬಲು ಮೆಚ್ಚು. ಮನಃಪೂರ್ವಕವಾಗಿ ನಾನು ನಿಮ್ಮ ನಿರ್ದೇಶನದ ಧಾರಾವಾಹಿಗಳನ್ನು ಹೊಗಳಿದ್ದೇನೆ... ಮೆಚ್ಚಿದ್ದೇನೆ.
courtesy : http://www.in.com

ಆದರೆ...... ಅದ್ಯಾಕೋ ಎಂತೋ "ಮಹಾಪರ್ವ" ಧಾರಾವಾಹಿಯಲ್ಲಿನ "ಮಂದಾಕಿನಿ" ಪಾತ್ರ ಮಾತ್ರ ಯಾಕೋ ಸರಿಯಾದ ಸಂದೇಶವನ್ನು ಸಮಾಜಕ್ಕೆ, ಅಂಗವಿಕಲರಿಗೆ ನೀಡುತ್ತಿಲ್ಲ ಎನ್ನುವ ಮನದಾಳದ ಅನಿಸಿಕೆ ನನ್ನದು. ನಾನೂ ಓರ್ವ ಹುಟ್ಟಾ ಅಂಗವಿಕಲೆಯಾಗಿದ್ದು, ವ್ಹೀಲ್ ಚೇರ್ ಉಪಯೋಗಿಸುತ್ತಿರುವ.. ಅದಿಲ್ಲದೇ ಹೊರ/ಹೊಳ ಜಗತ್ತನ್ನು ಸಂಚರಿಸಲಾಗದ, ಆದರೆ ಅದೊಂದು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲೂ ಇತರ ಸಾಮಾನ್ಯರಂತೇ ಬದುಕನ್ನು  ಸಂಪೂರ್ಣವಾಗಿ ಆಸ್ವಾದಿಸುತ್ತಿರುವ ವ್ಯಕ್ತಿ. ಆರು ವರುಷದ ಮಗಳ ತಾಯಿ. ಹಾಗಾಗಿ ವ್ಹೀಲ್‌ಚೇರ್ ಬೌಂಡೆಡ್ ವ್ಯಕ್ತಿಗಳ ಸಮಸ್ಯೆ, ಅವರ ಹೋರಾಟ, ಅವರ ಸವಾಲುಗಳು ಹೇಗೆ ಚೆನ್ನಾಗಿ ಗೊತ್ತೋ ಹಾಗೇ ಅವರಿಂದ ಎಲ್ಲಾ ರೀತಿಯ ಮನೆಗೆಲಸಗಳು, ಉನ್ನತ ವಿದ್ಯಾಭ್ಯಾಸಗಳು, ಹೊರ-ಒಳ ಜಗತ್ತಿನ ಕೆಲಸಕಾರ್ಯಗಳು "ಮನಸ್ಸು ಇದ್ದರೆ.. ಸದೃಢವಾಗಿದ್ದರೆ" ಸಾಧ್ಯ ಅನ್ನೋದನ್ನು ನಂಬಿದವಳು.. ಅಂತೆಯೇ ನಡೆದವಳು.. ಇನ್ನೂ ನಡೆಯುತ್ತಿರುವವಳು. ಬಟ್ಟೆ, ಪಾತ್ರೆ, ಅಡುಗೆ, ಮನೆಯವರ ಬೇಕು ಬೇಡಗಳು, ಎಲ್ಲಾ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸಿದವಳು.. ಈಗಲೂ ನಿರ್ವಹಿಸುತ್ತಿರುವವಳು. ಇದನ್ನೆಲ್ಲಾ ನಾನು ನನ್ನ ಮೆರೆಸುಲೋಸುಗ ಖಂಡಿತ ಹೇಳುತ್ತಿಲ್ಲ. ನನಗೆ ಯಾರ ಅನುಕಂಪ ಅಥವಾ ಅತಿ ಹೊಗಳಿಕೆಯಂತೂ ಖಂಡಿತ ಬೇಕಾಗಿಲ್ಲ. 

ಮೊದಲಿನಿಂದಲೂ ನನಗೆ ಸರಿ ಕಾಣದ್ದು ಮಂದಾಕಿನ ಪಾತ್ರ ಚಿತ್ರಣ. ಓರ್ವ ಅಂಗವೈಕಲ್ಯವುಂಟಾದ ವ್ಯಕ್ತಿಯ ಚಿತ್ರಣ ನಿಮ್ಮಿಂದ ಯಾವ ರೀತಿ ಬರುವುದೆಂದು ಬಹು ಉತ್ಸುಕಳಾಗಿದ್ದೆ ಮೊದಮೊದಲು. ಆದರೆ ಕ್ರಮೇಣ ಅಸಹನೆ ತುಂಬತೊಡಗಿತು. ಮಂದಾಕಿನಿ ಸದಾ ನಿಸ್ಸಾಯಕಳಾಅಗಿ ಕೂತಿರೋದು.... "ನನ್ನಿಂದಂತೂ ಯಾವ ಕೆಲಸವೂ ಮಾಡಿಕೊಡಾಲು ಆಗುತ್ತಿಲ್ಲ...." ಅನ್ನೋ ಮಾತನ್ನೇ ಪದೇ ಪದೇ ಆಗಾಗ ಹೇಳುವುದು... ಅಲ್ಲದೇ, ಅದರಲ್ಲೂ ನಿನ್ನೆಯ ಅಂದರೆ ೦೨-೦೮-೨೦೧೩ ಶುಕ್ರವಾರದ ಕಂತಿನಲ್ಲಿ ಒಂದು ತಪ್ಪು ಸಂದೇಶವನ್ನು ಸಾರುವ ಮಾತನ್ನು ಅವಳ ಸ್ವಂತ ಮಗಳಾದ, ಅತೀವ ಸೂಕ್ಷ್ಮ ಮನಸ್ಸಿನ ಪರಿಣಿತಳ ಬಾಯಿಯಿಂದಲೇ ಹೇಳಿಸಿದ್ದು ಮಾತ್ರ ಒಪ್ಪಿಕೊಳ್ಳಲೇ ಆಗಲಿಲ್ಲ.

"ನೀನು ಯಾವಾಗಲೂ ವ್ಹೀಲ್‌ಚೇರನಲ್ಲೇ ಕೂತಿರ್ತಿಯಲ್ಲಾ.. ಅದ್ಕೇ ನಿಂಗೇ ಅಂತ ಮಾಯಾಮೃಗ ಸಿ.ಡಿ. ತಂದಿದ್ದೀನಿ.." ಅಂತ ಮಗಳು ತಾಯಲ್ಲಿ ಹೇಳಿದ್ದು ನೋಡಿ ಮೊದಲು ಸಿಟ್ಟು ಬಂದರೂ ಮರುಕ್ಷಣ ನಗುವೂ ಬಂತು. ಇಲ್ಲಿ "ನೀನು ಸದಾ ವ್ಹೀಲ್‍ಚೇರ್‌ನಲ್ಲೇ ಕೂತಿರ್ತೀಯಲ್ಲಾ ಅದ್ಕೇ ತಂದೇ" ಅನ್ನೋ ಒಂದು ಪುಟ್ಟ ವಾಕ್ಯದ ಅವಶ್ಯಕತೆ ಇರಲಿಲ್ಲ. ನಿಜ, ಸಾಮಾನ್ಯವಾಗಿ ಸಮಾಜದ, ಜನರ ಎಲ್ಲರ ವಿಚಾರಧಾರೆಯೂ ಇದೇ ಆಗಿದೆ. ಸಮಾಜ ಅಂಗವಿಕಲರು, ವ್ಹೀಲ್‌ಚೇರ್‌ನಲ್ಲಿ ಇರುವವರ ಪ್ರತಿ ಅಪಾರ, ಅನವಶ್ಯಕ ಅನುಕಂಪವನ್ನಷ್ಟೇ ತೋರುತ್ತಿರುತ್ತದೆ. ಅವರಿಂದ ಏನೇನು ಸಾಧ್ಯ ಅನ್ನೋದನ್ನು ಯೋಚಿಸುವುದು ತೀರಾ ಕಡಿಮೆ ಜನ. ಇಲ್ಲಿಯೂ ಅದೇ ಆಗುತ್ತಿರುವುದು. ಮಂದಾಕಿನ ವ್ಹೀಲ್‌ಚೇರ್‌ನಲ್ಲೇ ಕುಳಿತು ಎಷ್ಟೆಲ್ಲಾ ಕೆಲಗಳನ್ನು ಮಾಡಬಹುದು ಯೋಚಿಸಿ? ತರಕಾರಿ ಹೆಚ್ಚೋದು, ಅಡಿಗೆ ಮಾಡೋಡು (ಅಡಿಗೆ ಕಟ್ಟೆಯನ್ನು ತುಸು ತಗ್ಗಿಸಿ.. ಕುಳಿತಲ್ಲೇ...) ಪುಸ್ತಕ ಓದುವ ಹವ್ಯಾಸವಿರೋದನ್ನು ಹೇಳಿದ್ದೀರಿ.. ಬರೆಯೋದು, ಅದರಲ್ಲೇ ಪ್ರಗತಿ ಸಾಧಿಸೋದು... ಗಿಡಗಳಿಗೆ ನೀರುಣಿಸೋದು... ಎಲ್ಲವೂ ಸಾಧ್ಯ. ಹೀಗಿರೋವಾಗ ಅದರಲ್ಲೇ ಕುಳಿತು ಬೋರಾಗೊತ್ತೆ ಹಾಗಾಗಿ ಸಿ.ಡಿ. ಅಂತ ಮಗಳು ಅನ್ನೋದು.. ನನ್ನಿಂದ ಎನೂ ಆಗೊಲ್ಲಾ ಅನ್ನೋ ರೀತಿಯ ಮಾತುಗಳನ್ನು ಮಂದಾಕಿನಿ ಆಡೋದು ತುಂಬಾ ಅಸಹನೆ ತುಂಬುತ್ತದೆ. ಇದು ಇತರೆಲ್ಲಾ ನೋಡುಗರಿಗೆ ಏನೂ ಅನ್ನಿಸದೇ ಇರಬಹುದು.. ಸಾಮಾನ್ಯದಲ್ಲಿ ಸಾಮಾನ್ಯವೆಂದೇ ಹೇಳಬಹುದು ಆದರೆ ಇದರಿಂದ ಸಮಾಜಕ್ಕೆ, ಅಂಗವಿಕಲರಿಗೆ ತಪ್ಪು ಸಂದೇಶ ಹೋಗುವುದು ಎನ್ನುವುದು ನನ್ನ ಅಭಿಪ್ರಾಯ.

ನಿಮ್ಮ ಧಾರಾವಾಹಿ ಎಂದರೆ ಅದಕ್ಕೆ ಅಪಾರ ಪ್ರೇಕ್ಷಕ ವರ್ಗವಿದೆ. ನಿರೀಕ್ಷೆಗಳಿವೆ. ಮೆಚ್ಚುಗೆ ಇದೆ. ಅಭಿಮಾನಿಗಳಿದ್ದಾರೆ (ನನ್ನನ್ನೂ ಸೇರಿಸಿ). ಹೀಗಿರುವಾಗ ಅಂಗವಿಕಲರೆಂದರೆ ನಿಸ್ಸಹಾಯಕರು, ಕೆಲಸ ಮಾಡಲಾಗದವರು.. ಕುಳಿತಲ್ಲೇ ಕುಳಿತು ಬೋರ್ ಹೊಡಿಯುತ್ತಿರುವವರೆಂದು ಜನಸಾಮಾನ್ಯರಿಗೂ... ಅಂತೆಯೇ "ನನ್ನಿಂದ ಏನೂ ಆಗೊಲ್ಲಾ ನಿಜ.. ನನಗೆ ಎಲ್ಲವುದಕ್ಕೂ ಇತರರ ಸಹಾಯ ಅನಿವಾರ್ಯ... ಛೇ.." ಅನ್ನೋ ಸ್ವ-ಅನುಕಂಪ ಪಡೋ ಅಂಗವಿಕಲರಿಗೆ ಪುಷ್ಟಿಕೊಡೋ ರೀತಿ ಇದೆ ಎಂದೆನಿಸಿತು. (ನನಗೆ ಖಂಡಿತ ಅನುಕಂಪ ಮೂಡಿದ್ದು ಹೌದು.. ನನ್ನ ಮೇಲೆ ಅಲ್ಲವೇ ಅಲ್ಲಾ.. ಈ ಆಲೋಚನೆಯ ಮೇಲಷ್ಟೇ.).

ನಿಮ್ಮ ಧಾರಾವಾಹಿಗಳ ಕಟ್ಟಾ ಅಭಿಮಾನಿಯಾಗಿ, ಅಂಗವಿಕಲರ ಸಹಚಾರಿಣಿಯಾಗಿ.... ಮಹಾಪರ್ವವನ್ನು ತಪ್ಪದೇ ವೀಕ್ಷಿಸುತ್ತಿರುವ ಓರ್ವ ವೀಕ್ಷಗಳಾಗಿ, ದಯವಿಟ್ಟು ಇನ್ನಾದರೂ "ಅಂಗವೈಕಲ್ಯತೆ"ಯನ್ನು ಪ್ರೊಜೆಕ್ಟ್ ಮಾಡುತ್ತಿರುವ ಈ ರೀತಿಯ ಋಣಾತ್ಮಕ ಚಿತ್ರಣವನ್ನು ಬಿಟ್ಟು, ಧನಾತ್ಮಕತೆಯನ್ನು ಹೆಚ್ಚು ಕಾಣಿಸುವ ಚಿತ್ರಣ ಮೂಡಿಬರಲೆಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ನೀವು ಆ ಪಾತ್ರವನ್ನು ಅಸಾಮಾನ್ಯಳಂತೇ ಬಿಂಬಿಸಬೇಕೆಂದು ಖಂಡಿತ ಕೇಳುತ್ತಿಲ್ಲ.... ಅತಿ ಯಾವತ್ತೂ ಸಲ್ಲ ಕೂಡ. ಸಾಮಾನ್ಯವನ್ನೇ ತೋರಿಸಿ.. ಏನೆಲ್ಲಾ ಸಾಮಾನ್ಯ, ಸಹಜ, ಸಾಧ್ಯವೆನ್ನುವುದನ್ನಷ್ಟೇ ತೋರಿಸಿ.... ಸಾಮಾನ್ಯರಿಗೆ, ನನ್ನಂಥಹ ಇತರರಿಗೆ. ಆದರೆ ಅಸಹಾಯಕತೆಯ, ಅನುಕಂಪದ ನೆರಳೂ ಸೋಕದಿರಲಿ. ನಿಮ್ಮಂತ ಉತ್ತಮ ನಿರ್ದೇಶಕರು, ಸಹೃದಯ ವ್ಯಕ್ತಿಗಳು ನನ್ನ ಮಾತಿನೊಳಗಿರುವ ನೈಜ ಕಾಳಜಿ, ವಿನಂತಿ, ಕಳಕಳಿಯನ್ನು ಯಾವುದೇ/ಯಾರದೇ ತಪ್ಪು ಗ್ರಹಿಕೆಗೆ ಎಡೆಗೊಡದೇ ತಿಳಿದುಕೊಳ್ಳುತ್ತೀರೆಂದು ನಂಬಿದ್ದೇನೆ.... ಹಾಗೇ ಆಶಿಸುತ್ತೇನೆ. :)

ವಂದನೆಗಳು.

ಆದರಾಭಿಮಾನಗಳೊಂದಿಗೆ,
ತೇಜಸ್ವಿನಿ ರಾಮಕೃಷ್ಣ ಹೆಗಡೆ.