ಬುಧವಾರ, ಡಿಸೆಂಬರ್ 24, 2008

ನೀರಾಗಿ ಹರಿವ ನೀರೆ....ನೀನ್ಯಾರೆ?!


ಎಲ್ಲರಿಗೂ ಹೊಸವರುಷದ ಹಾರ್ದಿಕ ಶುಭಾಶಯಗಳು.

ಮಳೆಮಾಲೆ ಹುಡುಗಿ
ನಿನ್ನ ನೆನಪಲೇ
ಈ ಮನ
ತುಂತುರು ಹನಿಯಾಗಿದೆ...
.
ಪುಟ್ಟ ಹಣೆಯ ತುಂಬೆಲ್ಲಾ
ಪುಟವಿಟ್ಟಂತಿರುವ
ಸ್ವೇದಬಿಂದುಗಳ ಸಾಲು
ನಿನ್ನ ಕೊರಳಪ್ಪಿ ಬೀಗುತಿಹ
ಮುತ್ತಿನ ಹಾರವನೇ ಮಸುಕಾಗಿಸಿವೆ!
.
ಬೆನ್ನ ತುಂಬೆಲ್ಲ ಹರಡಿರುವ
ಕಡುಗಪ್ಪು ಕೂದಲಿನಿಂದಿಳಿವ
ನೀರ ಬಿಂದುಗಳೆಲ್ಲಾ ಸೇರಿ
ನಿನ್ನಿಂದಗಲಿದ ವಿರದದಲಿ
ನೀರಾಗಿ ಹರಿದು ಶೋಕಿಸುತಿವೆ!


ಆಗಸವನು ತೊರೆದು
ನಿನ್ನ ಸೇರಿದ ಕಾಮನ ಬಿಲ್ಲು
ನಿನ್ನ ಕಣ್ಗಳ ಹೊಡೆತಕ್ಕೆ ಸಿಲುಕಿ,
ಇಬ್ಭಾಗವಾಗಿ, ಬಿಲ್ಲಂತೆ ಬಾಗಿ,
ರೆಪ್ಪೆಗಳಾಟವನೇ ಇಣುಕಿ ನೋಡುತಿವೆ!


ಚುಂಬಕದಂತೇ ಕಣ್ಣಲ್ಲೇ ಸೆಳೆದು,
ಮಕರಂದದ ಸವಿಯ ಸುರಿದು,
ನನ್ನರಿವನೇ ಸೂರೆಗೈದ,
ಮಳೆಮಾಲೆ ಹುಡುಗಿ
ನಿನ್ನ ನೆನಪಲೇ
ಈ ಮನ
ತುಂತುರುಹನಿಯಾಗಿದೆ...

ಶನಿವಾರ, ಡಿಸೆಂಬರ್ 20, 2008

ನೀ ಮಾಯೆಯೋ ನಿನ್ನೊಳಗಿಂದ ನೀ ಮಾಯವೋ?!!

ಈ ಬರಹವನ್ನೋದುವ ಮೊದಲೇ ನಾನು ಸ್ಪಷ್ಟಪಡಿಸುತ್ತಿದ್ದೇನೆ. ನಾನು ಯಾವುದೇ ಸತ್ಯಾಸತ್ಯತೆಯ ಶೋಧನೆಗೋ ಸಂಶೋಧನೆಗೋ ಹೋಗುತ್ತಿಲ್ಲ. ಯಾರ ಭಾವನೆಯನ್ನೂ ಟೀಕಿಸುತ್ತಿಲ್ಲ. ಎಲ್ಲವನ್ನೂ ಅವರವರ ಭಾವಕ್ಕೆ ಬಿಡುತ್ತಿದ್ದೇನೆ. ಇದ್ದುದನ್ನು ಇದ್ದಹಾಗೇ, ನಡೆದದ್ದನ್ನು ನೇರವಾಗಿ ನಿಮ್ಮ ಮುಂದಿಡುತ್ತಿದ್ದೇನೆ. ಇದು ಕಾಲ್ಪನಿಕ ಘಟನೆಯಲ್ಲ. ಕಟ್ಟು ಕಥೆಯೂ ಅಲ್ಲ!
----------------------ನಿನ್ನೆ ಅಂದರೆ ಶುಕ್ರವಾರ ನಮ್ಮ ಫ್ಲಾಟ್‌ನಲ್ಲೊಬ್ಬರು ನನ್ನ ಮನೆಗೆ ಬಂದು "ಇವತ್ತು ಸಂಜೆ ಎಂಟುಗಂಟೆಗೆ ನಮ್ಮ ಮನೆಗೆ ಬರಬೇಕು....ಅರಿಶಿನ ಕುಂಕುಮಕ್ಕೆ. ಗಣಪತಿ ಪೂಜೆ ಮಾಡುತ್ತಿದ್ದೇನೆ. ಜೊತೆಗೆ ಮಗಳನ್ನೂ ಕರೆತನ್ನಿ ಎಂದರು." ಅವರು ಉತ್ತರಭಾರತದವರು. ಹಾಗಾಗಿ ನಮ್ಮ ಸಂಭಾಷಣೆಯೆಲ್ಲಾ ಹಿಂದಿಯಲ್ಲಾಗುತ್ತಿತ್ತು. ವಯಸ್ಸಿನಲ್ಲಿ ನನಗಿಂತ ಬಲು ದೊಡ್ಡವರಾಗಿದ್ದ ಕಾರಣ "ಆಂಟಿ ಇಲ್ಲವೇ ದಿದೀ" ಎಂದೇ ಕರೆಯುತ್ತಿದ್ದೆ. ಆದರೆ ಅವರ ಯಜಮಾನರು ಬೆಂಗಳೂರಿನವರೇ. ಕನ್ನಡಿಗರು. ಅವರಿಗೆ ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಅದಿತಿಯ ಜೊತೆ ಆಡಲು ಬರುತ್ತಿದ್ದರಿಂದ ನಮ್ಮಿಬ್ಬರ ಪರಿಚಯ ಗಾಢವಾಗಿತ್ತು. ಸ್ವಭಾವತಃ ಭಾವುಕರು, ಸೌಮ್ಯ ಸ್ವಭಾವದವರು ಹಾಗೂ ಒಂದು ರೀತಿಯ ಮುಗ್ಧತೆ ಅವರಲ್ಲಿದ್ದುದರಿಂದ ನನಗೂ ಅವರ ಒಡನಾಟ ಬಹು ಬೇಗ ಇಷ್ಟವಾಯಿತು.

ಸರಿ.. ಕುಂಕುಮಕ್ಕೆ ಹೇಳಿದ್ದಾರೆ.. ಹೋಗದಿದ್ದರೆ ಸರಿಯೆನಿಸದು ಎಂದು ಸುಮಾರು ೮ ಗಂಟೆಯ ಹತ್ತಿರ ಮಗಳ ಜೊತೆ ಹೋದೆ. ಅದಿತಿಯನ್ನು ಬಿಡಲು ನನ್ನ ಯಜಮಾನರೂ ನನ್ನೊಂದಿಗೆ ಬಂದರು. ಒಳಹೋದ ತಕ್ಷಣ ನಾನು ಇನ್ನೇನು ಅವರ ಪೂಜೆಯ ಕೋಣೆಯೆಡೆ ಹೋಗಬೆಕೆನ್ನುವಷ್ಟರಲ್ಲಿ ನನ್ನ ತಡೆದು ಪಕ್ಕದ ಕೋಣೆಗೆ ಕರೆದೊಯ್ದರು. "ನಾವು ಇಲ್ಲೇ ದೊಡ್ಡ ದೇವರನ್ನಿಡುವುದು.. ಈ ಕೋಣೆಯನ್ನು ಅದಕ್ಕಾಗಿಯೇ ಮೀಸಲಿಟ್ಟಿದ್ದೇವೆ. ಪೂಜಾರೂಂ ಸಣ್ಣದಿರುವುದರಿಂದ.." ಎನ್ನುತ್ತಾ ನನ್ನ ಒಳ ಕರೆದರು.

ಒಳ ಹೋದೊಡನೆಯೇ ತುಸು ದಂಗಾದೆ. ಆಳೆತ್ತರದ "ಕಲ್ಕಿ ಬಾಬಾ"ನ ಫೋಟೋ!! ಅದರ ಸುತ್ತ ಲೈಟನಿಂಗ್. ಫೋಟೋ ಕೆಳಗೆ ಕಲ್ಕಿ ಭಗವಾನ್ ಹಾಗೂ ಅವರ ಪತ್ನಿ.. ಕ್ಷಮಿಸಿ ಅಮ್ಮನವರ(ಅವರ ಪ್ರಕಾರ)ಫೋಟೋ. ಸುತ್ತಲೂ ತುಪ್ಪದ ದೀಪಗಳು, ವಿವಿಧ ಅಲಂಕಾರಗಳು. ಇನ್ನೂ ಕೆಳಗೆ ಮೂಲೆಯಲ್ಲೆಲ್ಲೋ ಸಣ್ಣ ಗಣಪತಿಯ ಮೂರ್ತಿ. ಕಲ್ಕಿ ದಂಪತಿಗಳ(ನನ್ನ ಪ್ರಕಾರ)ಫೋಟೋ ಕೆಳಗೆ ಬೆಳ್ಳಿಯ ದೊಡ್ಡ ಪಾದುಕೆಗಳು. ಅವುಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಇದೆಲ್ಲಾ ನನಗೆ ಹೊಸತು. ಈವರೆಗೆ ನೋಡಿರದ್ದು. ಕಲ್ಕಿ ದಂಪತಿಗಳ ಪೋಟೋ ಹಾಗೂ ಅವರ ಮಹಿಮೆಯ ಕುರಿತಾದ ಲೇಖನವನ್ನು ಒಂದೆರಡು ಬಾರಿ ತರಂಗದಲ್ಲಿ ನೋಡಿದ್ದೆನಷ್ಟೇ. ನೀವೂ ಓದಿರಬಹುದು. ಈಗಲೂ ಬರುತ್ತಿರುತ್ತದೆ. ಒಂದು ಪುಟ ಅವರಿಬ್ಬರಿಗೇ ಮೀಸಲು. ತದನಂತರದ ಸಂಭಾಷಣೆಯನ್ನು(ನಮ್ಮಿಬ್ಬರೊಳಗೆ ನಡೆದದ್ದು) ನಿಮ್ಮ ಮುಂದಿಡುತ್ತಿದ್ದೇನೆ.

(ಅವರೊಂದಿಗಿನ ನನ್ನ ಹಿಂದಿ ಸಂಭಾಷಣೆಯನ್ನು ಕನ್ನಡಕ್ಕೆ ಭಾಷಾಂತರಿಸಿ ಹಾಕಿದ್ದೇನೆ.)ನಾನು : ಆಂಟಿ ಇದೇನಿದು? ಯಾರ ಪಾದುಕೆಗಳಿವು? ಯಾರು ಈ ಬಾಬಾ?

ಅವರು : ಇವರು ಕಲ್ಕಿ ಭಗವಾನ್. ಕೇಳಿಲ್ವಾ? ತುಂಬಾ ಪ್ರಸಿದ್ಧರು. ಮಹಾನ್ ಶಕ್ತಿವಂತರು. ಕಲ್ಕಿ ಭಗವಾನ್ ಹಾಗೂ ಅವರ ಪತ್ನಿಯ ಭಾವ ಚಿತ್ರವದು. ನಾವೆಲ್ಲ ಅಮ್ಮಾಜಿ, ಪದ್ಮಾವತಮ್ಮ ಎಂದು ಕರೆಯುವುದು. ಇದು ಭಗವಾನ್‌ರ ಪಾದುಕೆ.

ನಾನು : ಓಹ್ ಹೌದಾ.. ನಾನೂ ಕೇಳಿದ್ದೇನಷ್ಟೇ. ಸರಿಯಾಗಿ ಗೊತ್ತಿಲ್ಲ. ನೀವು ಈ ಪಾದುಕೆಗಳನ್ನು ಪೂಜಿಸುವುದಾ? ಏನು ಇದರ ವಿಶೇಷ?

ಅವರು : ಈ ಪಾದುಕೆಗಳಿಗೆ ಅಪಾರ ಶಕ್ತಿಯಿದೆ. ಇದನ್ನು ಸ್ವತಃ ಕಲ್ಕಿ ಭಗವಾನ್ ಸ್ಪರ್ಶಿಸಿ ಕೊಟ್ಟದ್ದು.(ಆ ದಂಪತಿಗಳು) ಇದರ ಮೇಲೆ ಕೈಯಿಟ್ಟು ಭಕ್ತಿಯಿಂದ ನಿನಗಿಷ್ಟವಾದ ಶ್ಲೋಕವನ್ನೋ ದೇವರನ್ನೋ ನೆನೆಯುತ್ತಾ ಬೇಕಾದ್ದನ್ನು ಬೇಡಿದರೆ ಖಂಡಿತ ನೆರವೇರುವುದು. ಬಟ್ಟಲು ತನ್ನಿಂದತಾನೇ ಮುಂದೆ ಬರುವುದು. ಇಲ್ಲಾ ನಿನ್ನ ಕೈ, ಮೈಯೊಳಗೆಲ್ಲಾ "ವೈಬ್ರೇಷನ್" ಅಗುವುದು.

ನಾನು : (ತುಂಬಾ ಚಕಿತಳಾದೆ) ಹೌದಾ ಆಂಟಿ? ಯಾರೂ ಮುಟ್ಟ ಬಹುದಾ ಇವುಗಳನ್ನಾ? ನಾನೂ ಮುಟ್ಟಲಾ?

ಅವರು : ಖಂಡಿತ ಯಾರೂ ಮುಟ್ಟ ಬಹುದು. ಮೊದಲು ನಾನು ಹೇಗೆ ಮಾಡಬೇಕೆಂಡು ತೋರಿಸುವೆ. ನೀನೇ ನೋಡು. ಬಟ್ಟಲು ಮುಂದೆ ಬರುವುದನ್ನು.. ಎಂದು ಕೆಳಗೆ ಕುಳಿತು ಬೆಳ್ಳಿ ಪಾದುಕೆಗಳ ಮೇಲೆ ಕೈಗಳನ್ನಿಟ್ಟು ಕಣ್ಮುಚ್ಚಿದರು.
(ಇಷ್ಟೇಲ್ಲಾ ಆಗುವಾಗ ತಿರುಗಿ ಮನೆಗೆ ಹೊರಟಿದ್ದ ನನ್ನ ಯಜಮಾನರು ಕುತೂಹಲದಿಂದ ಅಲ್ಲೇ ನಿಂತರು. ಅವರ ಮುಖದ ತುಂಬೆಲ್ಲಾ ನಗು.. ನನಗೋ ಫಚೀತಿ. ಕಣ್ಸನ್ನೆ ಮಾಡಿದರೂ ತಿಳಿಯದಲ್ಲ ನನ್ನವರಿಗೆ!! ಅದಿತಿಯೋ ಆ ಪದುಕೆಗಳನ್ನು ಯಾವಾಗ ಎತ್ತುಕೊಂಡು ಓಡಲಿ ಎಂದೇ ಯೋಚಿಸುತ್ತಿದ್ದಳು ಪಕ್ಕದಲ್ಲೇ ಕುಳಿತು. ಅವಳಿಗೆ ಅದೊಂದು ಹೊಸ ಆಟಿಕೆಯಂತೆ ಕಂಡಿತ್ತೇನೋ ಬಹುಶಃ :) )
ಒಂದು ನಿಮಿಷವಾಗಿತ್ತಷ್ಟೇ. ಮೆಲ್ಲನೆ ಬಟ್ಟಲು ಜರುಗಿದಂತಾಯಿತು. ತುಸು ಭಾರವಾಗಿದ್ದ ಆಕೆಯ ಕೈ ಶಕ್ತಿಯಿಂದಾಗಿರಲೂ ಬಹುದು. ಇಲ್ಲಾ ಅಷ್ಟು ಹೊತ್ತಿನಿಂದ ಪಾದುಕೆಗಳನ್ನು ಒತ್ತಿ ಹಿಡಿದಿದ್ದರಿಂದಲೋ.. ಇಲ್ಲಾ ನಿಜವಾಗಿಯೂ ಇದು ಪವಾಡವೋ???!!.

ಅವರು: ನೋಡಿದಿರಾ? ಬಟ್ಟಲು ಮುಂದೆ ಬಂದದ್ದನ್ನು? ಈಗ ನೀವೂ ನನ್ನಂತೆಯೇ ಮಾಡಿ. ಜಾಸ್ತಿ ಒತ್ತಡವನ್ನು ಹಾಕಬೇಡಿ. ಕಣ್ಮುಚ್ಚಿ ನಿಮಗೆ ತೋಚಿದಂತೆ ಧ್ಯಾನಿಸಿ. ಒಮ್ಮೆಲೇ ಈ ರೀತಿ ಆಗದಿರಬಹುದು. ಇನ್ನೊಮ್ಮೆ ಮಾಡಿದಾಗ ಅನುಭವವಾಗುವುದು.ಎನ್ನಲು ನಾನೂ ಮುಂದಾದೆ.... ಮಾಡಿ ನೊಡಲೇನಡ್ಡಿ ಎಂದು. ಅಂತೆಯೇ ಕೆಳಗಿಳಿದು ಅದರ ಬಳಿ ಕುಳಿತು ಕೈ ಪಾದುಕೆಗಳ ಮೇಲಿಟ್ಟೆ. ಯಾವುದನ್ನೇ ಆಗಲಿ ಸರಿಯಾಗಿ ಪರೀಕ್ಷಿಸಬೇಕು ತಾನೆ? ಅಂತೆಯೇ ನನ್ನಿಷ್ಟ ದೇವರನ್ನು ನೆನೆದು ಕೈಯಿಟ್ಟೆ. ಊಹೂಂ ಎನೂ ಆಗಲಿಲ್ಲ.

ನಾನು : ಆಂಟಿ ಏನೂ ಅನಿಸಲೇ ಇಲ್ಲ.

ಅವರು : ಹೌದಾ? ನಾ ಹೇಳಿದೆನಲ್ಲಾ ಒಮ್ಮೆಲೇ ಆಗೊಲ್ಲ. ಇನ್ನೊಮ್ಮೆ ಪ್ರಯತ್ನಿಸು ಎಂದು ಒತ್ತಾಯಿಸಲು ಮತ್ತೆ ಕೈಯಿಟ್ಟು ಕಣ್ಮುಚ್ಚಿದೆ. ಒಂದು ನಿಮಿಷ ಬಿಟ್ಟು ಕಣ್ತೆರೆದೆ.
ಅವರು : ಈಗ?
ನಾನು : ಹೂಂ ಆಂಟಿ ಏನೋ ಮೈಯೊಳಗೆಲ್ಲಾ ಹರಿದ ಅನುಭವ.. ಬಹುಶಃ ನೀವೆಂದ "ವೈಬ್ರೇಷನ್" ಇರಬಹುದು! (ಮತ್ತೆ ಹಾಗೆ ಮಾಡಲು ಹೇಳದಿರಲೆಂದು ಮತ್ತೆ ಆಕೆಗೆ ಬೇಸರವಾಗದಿರಲೆಂದು ಹಾಗೆ ಹೇಳಿದ್ದು).
(ಆದರೆ ನನ್ನವರು ಮಾತ್ರ ನನ್ನ ಮಾತೊಳಗಿದ್ದ "ಪ್ರಾಮಾಣಿಕತೆಗೆ" ಉಕ್ಕಿ ಬರುತ್ತಿರುವ ನಗು ತಡೆಯಲು ಪಾದುಕೆಯ ಬಳಿ ಓಡಿ ಬರುತ್ತಿದ್ದ ಮಗಳನ್ನೆತ್ತಿಕೊಂಡು ಹೊರ ನಡೆದರು)

ಅವರು : ನಾ ಹೇಳಿಲ್ಲವೇ? ಇದು ತುಂಬಾ "ಪವರ್‌ಫುಲ್". ಇದನ್ನು ಸ್ವತಃ ಬಾಬಾನ ಸ್ಪರ್ಶಮಾಡಿಸಿ ತಂದಿದ್ದೇವೆ. ನಮ್ಮೆಲ್ಲಾ ಮನೋಕಾಮನೆಗಳು, ಮನೆ, ಬಿಸಿನೆಸ್ ಡೆವಲೆಪ್‌ಮೆಂಟ್ ಎಲ್ಲಾ ಇವರಿಂದಲೇ ಆಗಿದ್ದು. ಈ ಪಾದುಕೆಯ ಪೂಜೆಯಿಂದಲೇ ಸರ್ವವೂ ಸಿದ್ಧಿಯಾಗಿದ್ದು. ಬನ್ನಿ ನನ್ನ ಮನೆ ತೋರಿಸುವೆ ಎಂದು ಹೊರ ಕರೆದೊಯ್ದರು.

ಹೊರಬಂದು ಕೂರಲು, ನಾನು ಒಂದೊಂದೇ ಪ್ರಶ್ನೆಗಳನ್ನು ಅವರಿಗೆ ಕೇಳತೊಡಗಿದೆ.
ನಾನು : ಆಂಟಿ ಆ ಪಾದುಕೆಗಳೆಲ್ಲಿಂದ ತಂದಿರಿ? ಎಷ್ಟಾಯಿತು? ಬಲು ಚೆನ್ನಾಗಿದೆ. ತುಂಬಾ ದೊಡ್ಡದಿದೆ.

ಅವರು : ಅದನ್ನು ಚೆನ್ನೈನಲ್ಲಿರುವ ಭಗವಾನ್ ಆಶ್ರಮದಲ್ಲೇ ಮಾಡಿಸಿದ್ದು. ಅವರೇ ಮಾಡುತ್ತಾರೆ. ಬೆಳ್ಳಿಯದು. ನಿನಗೆ ಗೊತ್ತಾ ಅದಕ್ಕೆ ೨೦,೦೦೦ ಆಗಿದೆ. ನಂತರ ಅದನ್ನು ಭಗವಾನ್ ಹತ್ತಿರ ಕೊಂಡೊಯ್ದು ಅವರ ಹಸ್ತ ಮುಟ್ಟಿಸಿ ತಂದಿದ್ದೇವೆ. (ಏನೋ ಒಂದು ಭಕ್ತಿಯ ಪರವಶತೆ, ತನ್ಮಯತೆ, ಹೆಮ್ಮೆ ಅವರ ಮುಖದಲ್ಲೆದ್ದು ಕಾಣುತ್ತಿತ್ತು)

ನಾನು : ಓಹ್.. ಹೌದಾ. ಭಗವಾನ್ ಅವರ ಹಸ್ತ ಸ್ಪರ್ಶ ಸುಲಭದಲ್ಲಿ ದೊರಕುವುದಾ? ಪಾದುಕೆ ಕೊಂಡೊಯ್ದ ಕೂಡಲೇ?

ಅವರು : ಇಲ್ಲಮ್ಮಾ.. ಇಲ್ಲಾ ಅದಕ್ಕೂ ಬಲು ಕಷ್ಟ ಪಡಬೇಕು. ಅವರ ಅನುಚರರು.. ಅವರನ್ನು "ದಾಸಾಜಿ" ಎನ್ನುತ್ತೇವೆ ನಾವೆಲ್ಲಾ. ದಾಸಾಜಿಗಳನ್ನು ಬೇಡಿಕೊಂಡು ಸಮಯವನ್ನು ಪಡೆದು ಪಾದುಕೆಗಳಿಗೆ ಭಗವಾನ್ ಅವರ ಸ್ಪರ್ಶ ಪಡೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಸುಮಾರು ಒಂದು ಲಕ್ಷದ ಹತ್ತಿರ ಕೊಡಬೇಕಾಗುತ್ತದೆ. ಸುಲಭದ ಮಾತಲ್ಲ ಅದು. (ಮತ್ತದೇ ಭಾವ ಅವರ ಮುಖದಲ್ಲಿ...)

ನಾನು : ಅಬ್ಬಾ!! ಆಂಟಿ, ಅಂದರೆ ನೀವು ಒಂದು ಲಕ್ಷದ ಮೇಲೆ ಕೊಟ್ಟು ಈ ಪಾದುಕೆ ತಂದು ಪೂಜಿಸುತ್ತಿದ್ದಾರಾ? ಮತ್ತೆ ನೀವು ಚೆನ್ನೈನಲ್ಲಿರುವ ಅವರ ಆಶ್ರಮಕ್ಕೆ ಎಷ್ಟು ಸಲ ಭೇಟಿ ಕೊಡುತ್ತೀರಾ?

ಅವರು: ಹೂಂ.. ಸುಮಾರು ಅಷ್ಟೇ ಆಯಿತು. ಕಲ್ಕಿ ಭಗವಾನ್ ಅವರ ಪೂಜೆಯಿಂದಲೇ ನಾವು ಸ್ವಂತ ಮನೆ, ಬಿಸಿನೆಸ್, ಎಲ್ಲಾ ಪಡೆದದ್ದು. "ಬಹುತ್ ಮಾಂತೆಹೇ ಹಮ್ ಉನ್ಕೋ" ಎಂದು ಬಹಳ ಸಲ ಹೇಳಿದರು. (ಭಯ ಭಕ್ತಿಯಿಂದ). ನಾವು ವರ್ಷದಲ್ಲಿ ಒಂದು ಸಲ ಹೋಗುವೆವು. ಫ್ಯಾಮಿಲಿ ಪ್ಯಾಕೇಜ್‌ನಲ್ಲಿ.

ನಾನು : ಫ್ಯಾಮಿಲಿ ಪ್ಯಾಕೇಜ್?!! ಅಂದರೆ?

ಅವರು : ಭಗವಾನ್ ಹಾಗೂ ಅವರ ಪತ್ನಿ ಪದ್ಮಾವತಮ್ಮ.. ಅದೇ ಅಮ್ಮಾಜೀ ಬೇರೆ ಬೇರೆಯಾಗಿ ತಮ್ಮ ದರ್ಶನ ಕೊಡುವರು. ಅವರ ದರ್ಶನ ಸುಲಭವಲ್ಲ. ತುಂಬಾ ಕಾಯಬೇಕು. ದಾಸಾಜಿಯವರನ್ನು ವಿಚಾರಿಸಬೇಕು ಯಾವಾಗ, ಯಾವತ್ತು ಅವರ ದರ್ಶನವಾಗುವುದೆಂದು. ಆಮೇಲೆ ಒಬ್ಬರಿಗೆ ೨೦,೦೦೦ ಫೀಸ್ ಇದೆ ದರ್ಶನಕ್ಕೆ. ನಾವು ಅಂದರೆ ನಾನು, ಯಜಮಾನರು, ನನ್ನಿಬ್ಬರು ಮಕ್ಕಳಿಗೆ ಒಮ್ಮೆಗೆ ಒಂದು ಲಕ್ಷ ಫೀಸ್! ಅಲ್ಲದೇ ವರುಷದಲ್ಲೊಮ್ಮೆ ಎಲ್ಲರಿಗೂ ಫ್ರೀ ದರ್ಶನವಿರುತ್ತದೆ. ಆಗ ತಿರುಪತಿಯಲ್ಲಿ ಆಗುವಂತಹ ರಶ್ ಇರುತ್ತದೆ ಆಶ್ರಮದಲ್ಲಿ. ಹಾಗೆ ಫ್ರೀ ದರ್ಶನವಿರುವ ಮೊದಲು ಹೇಳುತ್ತಾರೆ. ದಾಸಾಜಿಗಳನ್ನು ವಿಚಾರಿಸುತ್ತಿರಬೇಕು. ನಾವು ವರುಷಕ್ಕೊಮ್ಮೆ ಒಂದು ಲಕ್ಷ ಕೊಟ್ಟು ಹೋಗುತ್ತೇವೆ. ನನ್ನೊಂದಿಗೆ ನನ್ನ ಯಜಮಾನರ ಅಕ್ಕ ಹಾಗೂ ಅವರ ಮನೆಯವರೆಲ್ಲಾ ಬರುತ್ತಾರೆ. ಅವರೂ ಕಲ್ಕಿ ಭಗಾವ್‌ರ ಭಕ್ತರು. ಅವರೇ ನಮಗೂ ಈ ದಾರಿ ತೋರಿಸಿದ್ದು.

ಅವರಿಷ್ಟೆಲ್ಲಾ ಹೇಳುವಾಗ ನನಗಂತೂ ತಲೆ ಬಿಸಿಯಾಗಿ ಹೋಗಿತ್ತು. ಆದರೂ ಮುಖದಲ್ಲೆಲ್ಲೂ ಭಾವನೆ ಪ್ರಕಟಿಸಿದಂತೆದ್ದೆ.
ನಾನು : ಓಹ್.. ಅಬ್ಬಾ!! ಇಷ್ಟೆಲ್ಲಾ ಖರ್ಚು ಇದೆಯಾ? ಇಷ್ಟೊಂದು ದುಡ್ಡನ್ನು ಏನು ಮಾಡ್ತಾರೆ?

ಅವರು : ಅವರು ಇದನ್ನೆಲ್ಲಾ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ ಖರ್ಚು ಮಾಡ್ತಾರಂತೆ. ಅದೂ ಅಲ್ಲದೇ ಅಲ್ಲೊಂದು ಈಗ ಮಾರ್ಬಲ್ ಹಾಗೂ ಗೋಲ್ಡನ್ ಆಶ್ರಮವಾಗಿದೆ. ನಾನು ಹೋಗಬೇಕು ಮತ್ತೆ. ಪೂರ್ತಿಯಾದಮೇಲೆ ನೊಡಿಲ್ಲ. ಅವರು ೩-೫ ದಿನದ ಕ್ಯಾಂಪ್‌ಗಳನ್ನೂ ಮಾಡುತ್ತಾರೆ. ಅದಕ್ಕೆ ಕಡಿಮೆ ಫೀಸ್. (ಎಷ್ಟೆಂದು ಕೇಳುವ ಧೈರ್ಯ ಮಾಡಲಿಲ್ಲ ನಾನು.)

ನಾನು : ಅವರಿಬ್ಬರೇ ಇರೋದಾ? ಅವರಿಗೆ ಮಕ್ಕಳಿಲ್ವಾ?

ಅವರು : ಸರಿಯಾಗಿ ಎಷ್ಟು ಮಕ್ಕಳೆಂದು ಗೊತ್ತಿಲ್ಲ. ಆದರೆ ಅವರಿಗೆ ಒಬ್ಬ ಮಗನಿರುವುದಂತೂ ನಿಜ. ಆದರೆ ಅವನು ಸಂಸಾರಸ್ಥ(!) ಆಶ್ರಮದಲ್ಲಿರುವುದಿಲ್ಲ. ಅವನೂ ಇತರ ಭಕ್ತರಂತೇ ಬಂದು ದರ್ಶನ ಪಡೆಯುತ್ತಾನೆ. ಆದಿತ್ಯವಾರ ಸಂಜೆ ೮ ಗಂಟೆಗೆ "ಆಸ್ಥಾ" ಟಿ.ವಿ. ಚಾನಲ್‌ನಲ್ಲಿ ಕಲ್ಕಿ ಭಗವಾನ್ ದಂಪತಿಗಳ, ಮಹಿಮೆ, ಪವಾಡ, ಭಕ್ತಿಯ ಕುರಿತು ದಾಸಾಜಿಗಳು ಉಪದೇಶಕೊಡುತ್ತಾರೆ. ತಪ್ಪದೇ ನೋಡಿ. ನೋಡುತ್ತಿದ್ದಂತೆ ನಾವು ನಮ್ಮನ್ನೇ ಮರೆಯುತ್ತೇವೆ. ಈ ದಾಸಾಜಿಗಳಿಗೆ ಸ್ವತಃ ಭಗವಾನ್ ದಂಪತಿಗಳೇ ಉಪದೇಶ ಕೊಡುತ್ತಾರೆ.

ಅಷ್ಟರಲ್ಲಿ ನನ್ನ ಯಜಮಾನರು ನನ್ನ ಕರೆಯಲು ಬಂದರು. ಮಗಳು ಹಠ ಹಿಡಿದಿದ್ದಳು.
ಅವರು : (ನನ್ನ ಯಜಮಾನರಲ್ಲಿ) ನೀವೂ ಬೇಕಿದ್ದರೆ ಪಾದುಕೆಗಳನ್ನು ಮುಟ್ಟಿ.

ನನ್ನವರು : ಬೇಡ. ಖಂಡಿತ ಇನ್ನೊಮ್ಮೆ ಬರ್ತೀನಿ. ಈಗ ನಾನು ಆಫೀಸ್ ಡ್ರೆಸ್ಸಿನಲ್ಲಿದ್ದೇನೆ ಎನ್ನಲು..

ಅವರು : ಓ..ಖಂಡಿತ ಈ ಪಾದುಕೆಗಳು ಇಲ್ಲೇ ಇರುತ್ತವೆ. ನಿಮಗೆ ಬೇಕಾದಾಗ ಮುಟ್ಟಿ ಕೇಳಿಕೊಳ್ಳಬಹುದು. ಬನ್ನಿ ಮತ್ತೆ ಎಂದು ಪ್ರೀತಿಯಿಂದ ಬೀಳ್ಕೊಡಲು ನಾವೂ ಖಂಡಿತ ಇನ್ನೊಮ್ಮೆ ದರ್ಶನಕ್ಕೆ ಬರುವೆವೆಂದು ಹೇಳುತ್ತಾ ಮನೆಗೆ ತೆರಳಿದೆವು.

ಈ ಘಟನೆಯ ನಂತರ ನನ್ನಲ್ಲಿ ಅದೆಷ್ಟೋ ಸಂದೇಹ, ಗೊಂದಲಗಳೆದ್ದಿವೆ. ನನ್ನ ನೆರೆಮನೆಯಾಕೆಯದು ಮುಗ್ಧತೆಯೋ ಇಲ್ಲಾ ಅಮಾಯಕತೆಯ ಪರಾಕಷ್ಠತೆಯೋ ತಿಳಿಯೇ. ಆದರೆ ಆಕೆಯಂತವರು, ಆಕೆಯ ಮನೆಯಂತವರು ಅಸಂಖ್ಯಾತರಿದ್ದಾರೆ ನಮ್ಮಲ್ಲಿ. ಇದರ ಸತ್ಯಾಸತ್ಯೆಯ ಗೋಜಿಗೆ ನಾ ಹೋಗುತ್ತಿಲ್ಲ. ಅವರನ್ನು(ನೆರೆಮನೆಯಾಕೆಯನ್ನು) ಟೀಕಿಸುವುದಾಗಲೀ, ಅವರ ಭಾವನೆಗಳನ್ನು ಅವಹೇಳನಗೊಳಿಸುವುದಕ್ಕಾಗಲೀ ಖಂಡಿತ ನಾನೀ ಬರಹವನ್ನು ಬರೆದಿಲ್ಲ. "ಬ್ರೈನ್‌ವಾಶ್ ಅಂದರೇನೂ ಅದೆಷ್ಟು ವ್ಯವಸ್ಥಿತವಾಗಿರುತ್ತದೆ"ಎಂದು ಅದೆಷ್ಟೋ ಘಟನೆಗಳನ್ನು ಸ್ವತಃ ನೋಡಿ ತಿಳಿದು ಬಲ್ಲೆ.

ನಿಮ್ಮಲ್ಲಿ ಯಾರಿಗಾದರೂ ಈ "ಕಲ್ಕಿ ಭಗವಾನ್‌"ಕುರಿತು ಮತ್ತಷ್ಟು ಮಾಹಿತಿಗಳಿದ್ದರೆ ದಯವಿಟ್ಟು ಹಂಚಿಕೊಳ್ಳಿ. ಆಗಲಾದರೂ ನನ್ನ ಸಂದೇಹಗಳು ಹಾಗೂ ಗೊಂದಲಗಳು ತುಸುವಾದರೂ ಪರಿಹಾರಗೊಳ್ಳಬಹುದೇನೋ!!!?

ಕಲ್ಕಿಭಗವಾನ್ ದಂಪತಿಗಳ ಛಾಯಾಚಿತ್ರಗಳಿಗೆ(ಈವರೆಗೂ ನೋಡದವರಿಗಾಗಿ) ಹಾಗೂ ಅವರ ಇತಿಹಾಸಗಳ ಅಧ್ಯಯನಕ್ಕೆ ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ಕಿಸಬಹುದು :) (ಈ ಘಟನೆ ನನ್ನೊಂದಿಗೆ ನಡೆದ ಮೇಲೆ ನಾನು ಹುಡುಕಿ ತೆಗೆದ ಲಿಂಕ್‌ಗಳಿವು)
http://www.golden-heart.net/amma-and-bhagavan.html
&
http://images.google.co.in/images?gbv=2&hl=en&q=Sri+Amma+%26+Bhagavan

ಕೊನೆಯ ಹನಿ : ಇದನ್ನೋದಿ ನನ್ನನ್ನು "ನಾಸ್ತಿಕಳೆಂದು" ತಿಳಿಯದಿರಿ. "ಎಲೆ, ಹಣ್ಣು, ಹೂವು ಇಲ್ಲಾ ಬರಿಯ ನೀರನ್ನೇ ಆಗಲಿ ಯಾವನು ಭಕ್ತಿಯಿಂದ ಅರ್ಪಿಸಿ ಮನದೊಳಗೇ ನನ್ನ ನೆನೆಯುತ್ತಾನೋ ಅಂತಹ ಭಕ್ತನು ನನಗೆ ಪ್ರೀತಿ ಪಾತ್ರನು ಎಂದು" ಹೇಳಿದ ಭಗವಂತನ ಆರಾಧಿಸುವ ಸಂಪೂರ್ಣ "ಆಸ್ತಿಕಳು"ನಾನು. :)

ಶುಕ್ರವಾರ, ಡಿಸೆಂಬರ್ 12, 2008

ಹೋರಾಟಕ್ಕೆ ಸ್ಫೂರ್ತಿ ತುಂಬಿದ "ಉದಯವಾಣಿ"

ಈ ಮೊದಲೇ ನನ್ನ ಬದುಕಿನ ಪಯಣ ಹೋರಾಟದ ಜೊತೆಗೆ.. ಲೇಖನದಲ್ಲಿ ನನ್ನೊಂದಿಗಾದ ಅನುಭವವನ್ನು ಎಲ್ಲಾ ಪ್ರಮುಖ ಪತ್ರಿಕೆಗಳಿಗೆ ಕಳುಹಿಸಿರುವೆ ಎಂದೂ, ಅವುಗಳಲ್ಲಿ ಒಂದಾದರೂ ಪತ್ರಿಕೆಯಲ್ಲಿ ವರದಿ ಬಂದರೂ ನಾನು ಆ ಪುಟವನ್ನು ಆ ವೈದ್ಯ ಮಹಾಶಯನಿಗೆ ಪೋಸ್ಟ್ ಮಾಡುವೆನೆಂದೂ ಹೇಳಿದ್ದೆ. ಆದರೆ ಮೈಲ್ ಕಳುಹಿಸಿ ಹದಿನೈದು ದಿನ ಕಳೆದರೂ ಯಾವ ಪೇಪರ್‌ನವರೂ ನನ್ನ ಈ ಸ್ವಾರಸ್ಯ ರಹಿತ ಸುದ್ದಿಯನ್ನು ಪ್ರಕಟಸಿದಿದ್ದುದನ್ನು ನೋಡಿ ಬಹುಶಃ Trash Folderಗೆ ಹಾಕಿದರೇನೋ ಎಂದು ಅನಿಸಿತು. ಇದನ್ನು ನಾನು ಮೊದಲೇ ನಿರೀಕ್ಷಿಸಿಯೂ ಇದ್ದೆ. ಕಾರಣ ಯಾವುದೇ ರೀತಿಯ ಅಪೇಕ್ಷೆಯಿಲ್ಲದೇ ಮೈಲ್ ಮಾಡಿದ್ದೆ.

ಆದರೆ ಉದಯವಾಣಿ ಪತ್ರಿಕೆಯಲ್ಲಿ ಮಾತ್ರ ಓರ್ವ ಸಹೃದಯ ಪತ್ರಕರ್ತನ ಸ್ಪಂದನದಿಂದಾಗಿ ನನ್ನ ಹೋರಾಟದ ದನಿಗೆ ಜನತಾವಾಣಿಯಲ್ಲಿ ಸ್ಥಾನ ದೊರಕಿದೆ. ಇವತ್ತಿನ ಉದಯವಾಣಿ ಪತ್ರಿಕೆಯಲ್ಲಿ ಸುದ್ದಿಬಂದುದು ತಿಳಿದು ಬಲು ಸಂತೋಷವಾಯಿತು. ಏನೋ ಧನ್ಯತಾಭಾವ.
ಇದು ನನ್ನೊಂದಿಗಾದ ಅನ್ಯಾಯಕ್ಕೆ ನಾನು ತೀರಿಸಿಕೊಂಡ ಸೇಡೆಂದು ಇಲ್ಲಾ ಸಿಟ್ಟೆಂದು ದಯವಿಟ್ಟು ಖಂಡಿತ ಭಾವಿಸದಿರಿ. ನನಗೆ ಆ ವೈದ್ಯರ ಮೇಲೆ ಯಾವ ಸಿಟ್ಟಿಲ್ಲ. ಆತನ್ನು ಶಿಕ್ಷಿಸುವುದೂ ನನ್ನ ಉದ್ದೇಶವಲ್ಲ. ಅದೆಷ್ಟೋ ಅಸಹಾಯಕರ, ಪ್ರತಿಭಟಿಸಲು ತಿಳಿಯದ, ತಿಳಿದರೂ ಧೈರ್ಯ ಸಾಲದ ಅಂಗವಿಕಲರ ಪ್ರತೀಕವಾಗಿ ನಾನು ಈ ಹೆಜ್ಜೆಯನ್ನಿಟ್ಟಿದ್ದು. ಈ ಘಟನೆ ನನ್ನೊಂದಿಗೆ ನಡೆಯದೇ ಬೇರಾವ ಅಂಗವಿಕಲನೊಂದಿಗೆ ನಡೆದಿದ್ದರೂ(ನನ್ನ ಕಣ್ಮುಂದೆಯೇ ಇಲ್ಲಾ ನನ್ನರಿವಿಗೆ ಬರುವಂತೆ), ನಾನೂ ಇದೇ ರೀತಿ ಮಾಡುತ್ತಿದ್ದೆ. ಇದು ಸತ್ಯ. ಇವತ್ತೇ ನಾನು ಉದಯವಾಣಿ ಪತ್ರಿಕೆಯ "ಜನತಾವಾಣಿ" ಪುಟವನ್ನು ಆ ವೈದ್ಯನಿಗೆ ಪೋಸ್ಟ್‌ಮಾಡುತ್ತಿರುವೆ. ಆತನಿಗೆ ಆತ್ಮಸಾಕ್ಷಿಯಿದ್ದರೆ, ತಾನೇ ಆ ರೀತಿ ವರ್ತಿಸಿದವನು ಎಂದು ತಿಳಿದು(ಆತನ ಹೆಸರನ್ನು ಹಾಕದಿದ್ದರೂ) ಮುಂದೆ ಈ ರೀತಿಯ ತಪ್ಪನ್ನು ಮಾಡದಿರಬಹುದು. ಇದರಿಂದಾಗಿ ಅದೆಷ್ಟೋ ರೋಗಿಗಳಿಗೆ/ಅಶಕ್ತರಿಗೆ ಸಹಾಯವಾಗಬಹುದು. ಅದೂ ಅಲ್ಲದೇ ಉದಯೋನ್ಮುಖ ಪತ್ರಕರ್ತರೂ ಕೂಡಾ ಈ ನಿಟ್ಟಿನಲ್ಲಿ ಚಿಂತಿಸಿ ಇಂತಹ ಘಟನೆಗಳಾದಾಗ ಬೇಕಿದ್ದರೆ ಸತ್ಯಾಸತ್ಯತೆಗಳನ್ನು ತಿಳಿದು ತಾವೂ ಜೊತೆಗೂಡಬಹುದಲ್ಲವೇ? ಹೆಚ್ಚೇನೂ ಬೇಡ ತಮ್ಮ ಪತ್ರಿಕೆಗಳಲ್ಲಿ ಇಂತಹ ಘಟನೆಗಳ ವರದಿಗಳನ್ನು ಹಾಕುವಂತೆ ಮಾಡಬಹುದಲ್ಲವೇ? ಇದರಿಂದಲಾದರೂ ಕ್ರಮೇಣ ಜನಜಾಗೃತಿಯಾಗಬಹುದು!(ಇಲ್ಲಿ ನನ್ನ ಘಟನೆಯನ್ನು ಮಾತ್ರ ದೃಷ್ಟಿಕೋನದಲ್ಲಿಟ್ಟುಕೊಂಡು ಖಂಡಿತ ಹೇಳುತ್ತಿಲ್ಲ) ಯಾವುದೇ ಒಂದು ಗುರಿ ಸಾಧನೆಗೆ ಧನಾತ್ಮಕ ಚಿಂತನೆ, ಯೋಜನೆ ಹಾಗೂ ಉದ್ದೇಶ ಬಹು ಮುಖ್ಯ ಅಲ್ಲವೇ?

ನನ್ನಂತವರಿಗೆ ಹಾಗೂ ಮುಂದೆ ಯಾರಿಗಾದರೂ ಒಂದೊಮ್ಮೆ ಈ ಸ್ಥಿತಿ ಬಂದರೆ (ಯಾರಿಗೂ ಬರದಿರಲಿ ಎಂದೇ ಪ್ರಾರ್ಥಿಸುವೆ) ಅವರ ಶ್ರೇಯಸ್ಸಿಗಾಗಿ ನಾನು ಮೊದಲ ಬಾರಿ ಹೋರಾಟದ ದಾರಿ ಹಿಡಿದಿರುವೆ. ಇದು ಇಲ್ಲಿಗೇ ನಿಲ್ಲದು. ಇದು ಪ್ರಾರಂಭವಷ್ಟೇ.. ನಡೆಯುವ ದಾರಿ ತುಂಬಾ ಮುಂದಿದೆ. ಸಾಗುವ ಪಥ ಕಠಿಣವಾಗಿದೆ ನಿಜ. ಆದರೆ ಗುರಿ ಸ್ಪಷ್ಟವಾಗಿದೆ. ನನ್ನ ಜೊತೆ ಸ್ಪಂದಿಸಿದ, ನನ್ನ ದನಿಗೆ ಮಾರ್ದನಿಯಾದ, ಪ್ರೋತ್ಸಾಹಿಸಿ ನಾವಿದ್ದೇವೆ ಎಂದು ಹುರಿದಿಂಬಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು. ನಿಮ್ಮ ಸಹಕಾರ ಸಲಹೆಗಳು ಸದಾ ನನ್ನೊಂದಿಗಿರಲಿ ಎಂದು ಹಾರೈಸುವೆ.

ಆತ್ಮೀಯರೇ ನಿಮ್ಮಲ್ಲಿ ನನ್ನದೊಂದು ಮನವಿ. ನಿಮ್ಮ ನಡುವೆ ಇರುವ ಅಂಗವಿಕಲರಿಗೆ ಈರೀತಿಯ ಇಲ್ಲಾ ಯಾವುದೇ ರೀತಿಯ ಅನ್ಯಾಯ/ಅಪಮಾನ/ಹಕ್ಕುಚ್ಯುತಿಗಳಾಗುತ್ತಿದ್ದರೆ ದಯವಿಟ್ಟು ಪ್ರತಿಭಟಿಸಿ. ಇಲ್ಲಾ ನನಗೆ ಮಾಹಿತಿಗಳನ್ನು ಕೊಡಿ ನಾನು ಈ ನಿಟ್ಟಿನಲ್ಲಿ ನನ್ನಿಂದಾಗುವ ಸಹಾಯಗಳನ್ನು ಮಾಡುವೆ.

ನನ್ನ ಹೋರಾಟಕ್ಕೆ ಸ್ಪಂದಿಸಿ, ಜನತಾವಾಣಿಯಲ್ಲಿ ಪ್ರಕಟಿಸಿ ಪ್ರೇರಣೆಯನ್ನಿತ್ತ ಉದಯವಾಣಿಗೆ ಹಾಗೂ ಸಹೃದಯ ಪತ್ರಕರ್ತನಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು.

-ತೇಜಸ್ವಿನಿ.

ಶುಕ್ರವಾರ, ಡಿಸೆಂಬರ್ 5, 2008

ಬದುಕಿನ ಪಯಣ ಹೋರಾಟದ ಜೊತೆಗೆ..

ನನ್ನ ಈ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ದಟ್ಸ್‌ಕನ್ನಡಕ್ಕೂ ಹಾಗೂ ಪ್ರತಿಕ್ರಿಯೆಗಳ ಮೂಲಕ ಪ್ರೇರೇಪಿಸಿದ ಎಲ್ಲಾ ದಟ್ಸ್‌ಕನ್ನಡ ಓದುಗರಿಗೂ ತುಂಬಾ ಧನ್ಯವಾದಗಳು.
-----------------------
ಭಾರತದಲ್ಲಿ ಅದೆಷ್ಟೋ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗಳಾಗಿವೆ, ಆಗುತ್ತಿವೆ. ಸಮಸ್ಯೆಗಳಿಗಳ ಪರಿಹಾರಕ್ಕಾಗಿ, ಹೋರಾಟಕ್ಕಾಗಿ ಅಸಂಖ್ಯಾತ ಸಂಘಟೆನೆಗಳು ಹುಟ್ಟಿಕೊಳ್ಳುತ್ತವೆ. ತಕ್ಕಮಟ್ಟಿಗೆ ಪರಿಹಾರವನ್ನೂ ಕಂಡುಕೊಂಡಿವೆ. ಮಂತಾತರದ ಬಗ್ಗೆ, ಭಯೋತ್ಪಾದನೆಯ ಬಗ್ಗೆ, ರಾಜಕಾರಣ/ರಾಜಕಾರಣಿಗಳ ಬಗ್ಗೆ, ಸನ್‌ಸೆಕ್ಸ್ ಇತ್ಯಾದಿಗಳ ಬಗ್ಗೆ ಬುದ್ಧಿಜೀವಿಗಳು, ವಿದ್ಯಾವಂತರು, ಬುದ್ಧಿವಂತರು ಎಲ್ಲರೂ ಗಂಟೆಗಟ್ಟೆಲೆ ಮಾತಾಡುತ್ತಾರೆ.. ಪುಟಗಟ್ಟಲೆ ಬರೆಯುತ್ತಾರೆ. (ಹಾಗೆ ಮಾಡುವುದು ತಪ್ಪೆಂದು ಖಂಡಿತ ನಾನು ಹೇಳುತ್ತಿಲ್ಲ) ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರುಷಗಳಾದರು ಯಾರೂ ದೈಹಿಕ/ಮಾನಸಿಕ ಅಂಗವೈಕಲ್ಯ ಹೊಂದಿದವರ ಕುರಿತು, ಅವರು ಹಾಗೂ ಅವರ ಮನೆಯವರು ಅನುಭವಿಸುವ ಕಷ್ಟ, ನೋವು, ಅವಮಾನ, ಹಿಂಸೆ, ಅನ್ಯಾಯಗಳ ಕುರಿತು ಸುದೀರ್ಘವಾಗಿ ಯೋಚಿಸಿ ಆ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ/ನೀಡುವ ರೀತಿಯಲ್ಲಿ ಈವರೆಗೂ ಯೋಚಿಸಲೇ ಇಲ್ಲ. ಇದೊಂದು ದೊಡ್ಡ ದುರಂತ.

ಇದು ಅವರ ಪ್ರಾರಾಬ್ಧ ಎಂದೋ, ಅಯ್ಯೋ ಪಾಪ ಎಂಬ ಅನುಕಂಪ ನೀಡಿಯೋ, ದೇವರಿದ್ದಾನೆ ಎಂಬ ಆಶಾಢಭೂತಿತನವನ್ನು ತೋರುವುದರಿಂದಲೋ ದೂರವೇ ಉಳಿಯುತ್ತಾರೆ. ವರುಷಕ್ಕೊಮ್ಮೆ ಅವರ ದಿನವನ್ನಾಚರಿಸಿ.. ವ್ಹೀಲ್‌ಚೇರ್ ನೀಡಿ ನೀವು ಇದರಲ್ಲಿ ಕುಳಿತಿರುವುದೇ ಲೇಸೆಂದು ಹಾರೈಸುತ್ತದೆ ಸರಕಾರ.

ಒಂದು ಅಂಕಿಯ ಪ್ರಕಾರ ಭಾರತದಲ್ಲಿ ಈಗ ೭೦ ಮಿಲಿಯನ್ ಅಂಗವಿರಲರಿದ್ದಾರೆ. ಅವರಲ್ಲಿ ಕೇವಲ ೨% ಅಂಗವಿಕಲರು ಮಾತ್ರ ವಿದ್ಯೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ೧% ಜನರು ಮಾತ್ರ ಉದ್ಯೋಗಿಗಳಾಗಿದ್ದಾರೆ!! ಭಾರತದ ಪ್ರಜೆ ೭೨,೦೦೦ ಕೋಟಿ ರೂಗಳನ್ನು ಅಂಗವಿಕಲರಿಗಾಗಿ ವಿನಿಯೋಗಿಸುತ್ತಿದ್ದಾನೆ. ಆದರೆ ಅದರಲ್ಲಿ ಅಂಗವಿಕಲರಿಗಾಗಿ ಸರಕಾರ ಕೊಡುತ್ತಿರುವುದು ಮಾತ್ರ ಅತ್ಯಲ್ಪ!!!

ದೈಹಿಕವಾಗಿ ಅಂಗನ್ಯೂನತೆ ಹೊಂದಿದವರು ನೈತಿಕ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯಿದ್ದರೂ ಯಾವರೀತಿಯ ಹೋರಾಟಗಳನ್ನೆಲ್ಲಾ ಮಾಡಬೇಕಾಗುತ್ತದೆ, ಎಷ್ಟೆಲ್ಲಾ ಮಾನಸಿಕ ಹಿಂಸೆ, ಅನ್ಯಾಯ, ಅಪಮಾನಗಳನ್ನು ಎದಿರುಸಿ, ಸಹಿಸಿ ಮುನ್ನೆಡಯಬೇಕಾಗುತ್ತದೆ ಅನ್ನುವುದಕ್ಕೆ ಸ್ವತಃ ನಾನೇ ಉದಾಹರಣೆ.

ಹುಟ್ಟಿನಿಂದಲೂ ನನ್ನೆರಡೂ ಕಾಲ್ಗಳಿಗೂ ಶಕ್ತಿಯಿಲ್ಲ. ಆದರೆ ವಿಕಲಚೇತನವಾಗಿರುವುದು ನನ್ನ ಅಂಗಗಳಿಗೆ ಆದರೆ ನನ್ನ ಬುದ್ಧಿಗಲ್ಲವೆಂದೇ ತಿಳಿದು ಮನಃಶಕ್ತಿಯಿಂದಲೇ ೨೯ ವರುಷಗಳನ್ನು ಸಾಮಾನ್ಯರಂತೆಯೇ ಕಳೆದವಳು. ಯಾವುದೇ ಅಂಗವಿಕಲ ಸೌಕರ್ಯವನ್ನೂ ಪಡೆಯದೇ ಮೇಲೆ ಬಂದವಳು. ಆದರೂ ಆಗಾಗ ಭಾರತದಲ್ಲಿ ವಿಕಲಚೇತನರ ಪ್ರತಿ ಇರುವ ಶುದ್ಧ ನಿರ್ಲಕ್ಯತನ, ಬೇಜಾವಾಬ್ದಾರಿತನ, ಅವರ ಪ್ರತಿ ತೊರುವ ತೋರಿಕೆಯ ಕಾಳಜಿ ಕಂಡು ತುಂಬಾ ನೋವು, ಸಿಟ್ಟು ಬರುತ್ತಲಿತ್ತು. ಬುದ್ಧಿ ಮತ್ತೆಯಿದ್ದರೂ ಆಸಕ್ತಿಯಿದ್ದರೂ, ಬೇಕಾದಷ್ಟು ಮಾರ್ಕ್ಸ್ ಗಳಿದ್ದರೂ ನನಗೆ ಪಿ.ಯು.ಸಿ ನಂತರ ಮೆಡಿಕಲ್ ಆಗಲೀ, ಬಿ.ಎಸ್ಸಿ. ನಂತರ ಮೈಕ್ರೋಬಯೋಲಾಜಿಯಾಗಲೀ ಮಾಡಲಾಗಲಿಲ್ಲ (ಸೀಟ್ ಸಿಕ್ಕಿದ್ದರೂ). ಕನ್ನಡ ಸಾಹಿತ್ಯದಲ್ಲಿ ಎಂ.ಎ.ಯನ್ನು ಕೂಡ ನಾನು "ಮೈಸೂರು ಮುಕ್ತ ವಿಶ್ವವಿದ್ಯಾಲಯದ" ಮೂಲಕ ಮಾಡಬೇಕಾಗಿ ಬಂತು. ಕಾರಣ ಇಲ್ಲಿ ೯೯% ಕಟ್ಟಡಗಳಿರುವುದೂ ಫ್ಲೋರ್‍ಗಳಲ್ಲಿ ಅದೂ ವಿದೌಟ್ ಲಿಫ್ಟ್!!! ನೈತಿಕ, ಆರ್ಥಿಕ ಬೆಂಬಲಗಳಿದ್ದರೂ ನನಗೆ ಅದೆಷ್ಟೋ ಕನಸುಗಳನ್ನು ಸಾಕಾರಿಸಿಕೊಳ್ಳಲಾಗಲಿಲ್ಲ. ಕಾರಣ ನನ್ನ ದೈಹಿಕ ವಿಕಲಚೈತನ್ಯ. ಇನ್ನು ಏನೂ ಇಲ್ಲದ, ಯಾರ ಬೆಂಬಲವೂ ಸಿಗದ ಆದರೆ ಅಪಾರ ಬುದ್ಧಿಮತ್ತೆ ಇರುವ ಇತರ ವಿಕಲಚೇತನರ ಗತಿ ಎಣಿಸಿದರೆ ತುಂಬಾ ನೋವಾಗುವುದು.

ಇಲ್ಲಿಯ ದುರವಸ್ಥೆಕಂಡು ನಾನು ಅದೆಷ್ಟೋ ಸಲ ಯೋಚಿಸಿದ್ದಿದೆ. ಬೇರೆ ದೇಶಗಳಲ್ಲಿಯೂ ಇವರ ಸ್ಥಿತಿ ಹೀಗೇಯೇ ಎಂದು. ಆಗ ಹೊರದೇಶಗಳಲ್ಲಿರುವ ನನ್ನ ಆತ್ಮೀಯರನ್ನು ವಿಚಾರಿಸಿದೆ. ಅಲ್ಲಿ ಅವರನ್ನು ಯಾವ ರೀತಿ ಗೌರ್ವಯುತವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದೇ ಇದೆ. ಅಮೇರಿಕಾ, ಇಂಗ್ಲೇಡ್, ನ್ಯೂಜಿಲೇಂಡ್ ಮುಂತಾದ ಪಾಶ್ಚಿಮಾತ್ಯ ದೇಶಗಳಲ್ಲಿ ಅಂಗವಿಕಲರನ್ನು ತುಂಬಾ ಗೌರವಯುತವಾಗಿ ನಡೆಸಿಕೊಳ್ಳುವರೆ. ಕೇವಲ ಅನುಕಂಪ ತೋರದೇ ಅವರಿಗೆ ಸಲ್ಲಬೇಕಾದ ಹಕ್ಕು ಸೌಲಭ್ಯ, ಸಹಕಾರ ಮೊದಲು ಸಿಗುವುದು. ಯಾವುದೇ ಅಂಗಡಿ ಮುಂಗಟ್ಟುಗಳಿರಲಿ ಅಲ್ಲಿಗೆ ಅಂಗವಿಕಲರೂ ಸುಲಭವಾಗಿ ಹೋಗುವ ಎಲ್ಲಾ ಸೌಕರ್ಯಗಳಿವೆ. ಆಸ್ಪತ್ರೆಗಳಲ್ಲಿ ಡಾಕ್ಟರ್‌ಗಳು ಮೊದಲು ಅವರ ತಪಾಸಣೆ ಮಾಡಬೇಕು. ಅವರನ್ನು ನೋಡೆನೆಂದ ಡಾಕ್ಟರ್ ತಕ್ಷಣ ಕೆಲಸ ಕಳೆದುಕೊಳ್ಳುವನು.

ಆದರೆ ಇಲ್ಲಿ ಮಾತ್ರ ಓರ್ವ ಡಾಕ್ಟರ್ ಕ್ಲಿನಿಕ್ ಕೂಡಾ ಕನಿಷ್ಠ ಪಕ್ಷ ೪-೫ ಮೆಟ್ಟಿಲುಗಳನ್ನೊಳಗೊಂಡಿರುತ್ತದೆ!!!! ಕೆಲವು ಡಾಕ್ಟರ್‌ಗಳಂತೂ ತಮ್ಮ ವೃಧ್ಧಿ ಧರ್ಮವನ್ನೇ ಮರೆತು ಅಮಾನವೀಯತೆಯ ಪರಾಕಷ್ಠೆಯನ್ನು ಮುಟ್ಟುತ್ತಾರೆ. ಮೊನ್ನೆ ಸ್ವತಃ ನನ್ನೊಂದಿಗೆ ನಡೆದ ಅಮಾನವೀಯ ಘಟನೆಯನ್ನೇ ಹೇಳುವೆ. ಇದನ್ನು ಹೇಳುವ ಮೊದಲೇ ನಾನು ಸ್ಪಷ್ಟ ಪಡಿಸುವೆ. ನನಗೆ ಆ ಡಾಕ್ಟರ್ ಮೇಲೆ ಯಾವ ಪೂರ್ವಾಗ್ರಹವಾಗಲೀ, ದ್ವೇಷವಾಗಲೀ ಖಂಡಿತ ಇಲ್ಲ. ಅವನ ವರ್ತನೆಗೆ, ಯೋಚನೆಗೆ ಮಾತ್ರ ತೀವ್ರ ಖಂಡನೆ ಹಾಗೂ ನೋವಿದೆ ಅಷ್ಟೇ.

ಹಲವು ದಿನಗಳಿಂದ ಜ್ವರದಲ್ಲಿ ಬಳುತ್ತಿದ್ದ ನಾನು ನಿನ್ನೆ ರಾಜರಾಜೇಶ್ವರಿ ನಗರದಲ್ಲಿರುವ ಓರ್ವ ಡಕ್ಟರ್ ಕ್ಲಿನಿಕ್‌ಗೆ ಹೋದೆ. ನಮಗೆ ಪರಿಚಯ ಇದ್ದ ಡಾಕ್ಟರ್ ಊರಲ್ಲಿರದಿದ್ದ ಕಾರಣ ನನ್ನ ಯಜಮಾನರ ಫ್ರೆಂಡ್ ಓರ್ವ ಹೇಳಿದ ಈ ಕ್ಲಿನಿಕ್‌ಗೇ ಹೋಗಬೇಕಾಯಿತು. ನನ್ನ ಹೆಲ್ಪರ್‌ಗೂ ಸೌಖ್ಯವಿರದಿದ್ದ ಕಾರಣ ಅವಳನ್ನು ಕರೆದುಕೊಂಡು ಹೋಗಿದ್ದೆ.ಕ್ಲಿನಿಕ್ಕಿಗೆ ಹೋಗಲೂ ೬-೭ ಮೆಟ್ಟಿಲುಗಳನ್ನು ಇಳಿಯಬೇಕಿತ್ತು (ಭಾರತದ ಎಲ್ಲಾ ಕ್ಲಿನಿಕ್‌ಗಳ ದುರವಸ್ಥೆ ಇದು.. ಆಸ್ಪತ್ರೆಗಳನ್ನು ಬಿಟ್ಟು). ಹಾಗಾಗಿ ಹೆಲ್ಪರ್ ಹಾಗೂ ನನ್ನವರು ಒಳಗೆ ಹೋದರು. ನಾನು ಕಾರಿನಲ್ಲೇ ಕುಳಿತಿದ್ದೆ. ಕ್ಲಿನಿಕ್ ಕೇವಲ ೫-೧೦ ಹೆಜ್ಜೆ ದೂರವಷ್ಟೇ ಇತ್ತು. ಇವರು ಡಾಕ್ಟರ್ ಬಳಿ "ನಾನು "Physically Challenged ಎಂದು ಹೇಳಿ ಕೇವಲ ಜ್ವರವಿದೆ ಕಾರ್ ಬಳಿ ಬಂದು ನೋಡುವಿರಾ "ಎನ್ನಲು ಮೊದಲು ಆಯಿತೆಂದರು. ನನ್ನ ಹೆಲ್ಪರ್ ಚೆಕ್‌ಅಪ್ ಮಾಡಿ ಬಿಲ್ ಪಡೆದ ನಂತರ ನಾನು ಕಾರ್ ಬಳಿ ಬರುವುದಿಲ್ಲ.. "I feel very Odd to test" ಏನೇ ಆದರೂ ಅವರೇ ಇಲ್ಲಿಗೆ ಬರಬೇಕು. ಇಲ್ಲಾ ಬೇರೆ ಕಡೆ ಹೋಗಿ" ಅಂದು ಬಿಟ್ಟ. ನಂತರ ನಾವು ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಕ್ಲಿನಿಕ್‌ಗೆ ಹೋದೆವು. ಆ ಡಾಕ್ಟರ್ ಕಾರ್ ಬಳಿಯೇ ಬಂದು ನೋಡಿ ಮೆಡಿಸಿನ್ ಕೊಟ್ಟರು.
ಇಂತಹ ಅಮಾನವೀಯತೆ ಕಂಡು ತುಂಬಾ ನೋವಾಯಿತು. ಇಲ್ಲಿ ನನ್ನ ಭಾವನೆ ಅಪ್ರಸ್ತುತ. ನನ್ನ ಬಳಿ ಕಾರಿತ್ತು.. ಎಲ್ಲಾ ಸೌಕರ್ಯವಿತ್ತು.. ಹಾಗಾಗಿ ತುರ್ತಾಗಿ ಬೇರೆಡೆ ಹೋದೆ. ಆದರೆ ಏನೂ ಇಲ್ಲದ.. ದುಡ್ಡು ಚೆಲ್ಲಿ ಆಟೊದಲ್ಲೋ ಇಲ್ಲಾ ಬಸ್ಸಿನಲ್ಲೋ ಬಂದ ಬಡ ಅಂಗವಿಕಲರು ಏನು ಮಾಡಬೇಕು? ಮೆಟ್ಟಿಲುಗಳನ್ನು ಇಳಿಯಲಾಗದೇ ಇದ್ದರೆ ಎಲ್ಲಿ ಹೋಗಬೇಕು? ಅವರನ್ನು ನೋಡೆನು ಎನ್ನುವ ಇಂತಹ ಡಾಕ್ಟರ್ ಗಳನ್ನು ಸುಮ್ಮನೇ ಸಹಿಸಬೇಕೆ?
ಅದಕ್ಕಾಗಿಯೇ ನಂತರ ಚೆನ್ನಾಗಿ ಯೋಚಿಸಿ ಪೇಪರ್‌ಗಳಲ್ಲಿ ಇಂತಹವರ ಕುರಿತು ಹಾಕಬೇಕೆಂದಿರುವೆ. ಇಷ್ಟು ವರುಷ ನನ್ನೊಂದಿಗಾದ, ನನ್ನಂತಹವರೊಂದಿಗಾದ ಅದೆಷ್ಟೋ ಅನ್ಯಾಯಗಳನ್ನು ನಾನು ಸಹಿಸಿ ನಾನೇ ತಪ್ಪು ಮಾಡಿರುವೆ. ಅದರೆ ಈಗ ಈ ಘಟನೆಯನ್ನು ಹೊರತಂದರೆ ನಾಳೆ ಆತ ಬೇರೆ ಯಾರಿಗೂ ಹೀಗೆ ಮಾಡದಿರಲಿ..ಆತನ ಹೆಸರು ಬಯಲಾಗದಿದ್ದರೂ, ಪೇಪರಿನಲಿ ಬಂದರೆ, ಆತನಿಗೂ ಆ ಪೇಪರ್ ಒಂದನ್ನು ಪೋಸ್ಟ್ ಮಾಡುವ ಮೂಲಕ ಎಚ್ಚರಿಕೆ ಕೊಡುವೆ. ಅದೂ ಅಲ್ಲದೇ ಈ ಘಟನೆಯನ್ನೋದುವ ಮೂಲಕ ಇನ್ನೋರ್ವ ಡಾಕ್ಟರ್ ಇಂತಹ ಯೋಚನೆಯಿದ್ದರೆ ಕೈಬಿಟ್ಟು, ಆತ್ಮಸಾಕ್ಷಿಗೆ ಓಗುಟ್ಟರೆ, ನನ್ನಂತಹ ಅದೆಷ್ಟೋ ನೊಂದವರಿಗೆ ಮುಂದೆ ಸಹಾಯವಾಗುವುದು.
ಹಾಗಾಗಿಯೇ ವಿಜಯಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಪತ್ರಿಕೆಗಳಿಗೆಲ್ಲಾ ಈ ಘಟನೆಯನ್ನು ಕಳುಹಿಸಿರುವೆ. ಹಾಕುವುದು ಬಿಡುವುದು ಅವರಿಚ್ಚೆ. ಒಂದು ವೇಳೆ ಯಾವುದಾದರೂ ಒಂದು ಪೇಪರಿನಲ್ಲಾದರೂ ಬಂದರೆ ಆ ಪೇಪರ್ ಪ್ರತಿಯೊಂದನ್ನು ಆ ಡಕ್ಟರ್‌ಗೂ ಪೋಸ್ಟ ಮಾಡಬೇಕೆಂದಿರುವೆ.

ಭಾರತದಲ್ಲಿ ಎಲ್ಲೇ ಆಗಲೀ, ಯಾವುದೇ ಮಾಲ್‍ಗಳಾಗಿರಲಿ(ಬಿಗ್‍ಬಜಾರ್ ಬಿಟ್ಟು), ಅಂಗಡಿಗಳಾಗಿರಲಿ, ಸಿನಿಮಾ ಥಿಯೇಟರ್‌ಗಳಾಗಿರಲೀ, ಬಿಡಿ.. ಸಣ್ಣ ಕ್ಲಿನಿಕ್‌ಗಳು ಕೂಡಾ ಮೆಟ್ಟುಲುಗಳಿಲ್ಲದೇ ಇಲ್ಲ!! ಕಲಿಯುವ ವಿದ್ಯಾಕೇಂದ್ರಗಳಲ್ಲೂ ಅಂಗವಿಕಲರಿಗಾಗಿ ಬೇರೆ ಸುಲಭ ಮಾರ್ಗವಿಲ್ಲ. ಇನ್ನು ವ್ಹೀಲ್‌ಚೇರ್ ಮೇಲೆ ಹೋಗುವ ಮಾತು ಬಲು ದೂರ. ಬೇಕಿದ್ದರೆ ಅವರು ಅವರಿಗಾಗಿಯೇ ಇರುವ ಸ್ಮೆಷಲ್ ಸ್ಕೂಲ್‌ಗಳಿಗೆ ಹೋಗಲಿ ಎಂಬ ಭಂಡತನದ ಮತುಗಳನ್ನು ನಾನೇ ಕೇಳಿ ಅನುಭವಿಸಿದ್ದೇನೆ.... ಎದುರಿಸಿದ್ದೇನೆ. "ನಿನಗೇಕೆ ಬೇಕು ಸೈನ್ಸ್ ಓದು? ನಿನ್ನಿಂದಾಗದು ಈ ಪ್ರಾಕ್ಟಿಕಲ್ ಎಲ್ಲಾ... ಸುಮ್ಮನೆ ಬಿ.ಎ. ಮಾಡು" ಎಂದು ನನಗೆ ದೊಡ್ಡ ಉಪದೇಶ ಕೊಟ್ಟವರೇ ಬಹಳಷ್ಟು ಜನ. ಆದರೆ ದೇವರ ದಯೆ ಹಾಗೂ ನನ್ನ ಹೆತ್ತವರ ಸಂಪೂರ್ಣ ಸಹಕಾರ, ಮನೋಧೈರ್ಯದಿಂದ ಎಲ್ಲ ವಿದ್ಯಾರ್ಥಿಗಳಂತೆಯೇ ಕಾಲೇಜಿಗೆ ಹೋಗಿ ಪ್ರಾಕ್ಟಿಕಲ್ ಕೂಡಾ ಮಾಡಿ ಉತ್ತಮ ಅಂಕಗಳನ್ನು ಪಡೆದು ಪಾಸಾದೆ. ಆದರೆ ಮನೆಯವರ ಅಸಹಕಾರವಿರುವ, ಆರ್ಥಿಕ ಬೆಂಬಲ ಇರದ ಬುದ್ಧಿವಂತ ಅಂಗವಿಕಲರು ಏನು ಮಾಡಬೇಕು? ಎಲ್ಲಿಗೆ ಹೋಗ ಬೇಕು. ಸಾಮಾನ್ಯರಂತೇ ಕಾಲೇಜಿನಲ್ಲಿ ಓದುವ ಹಕ್ಕು ಅವರಿಗೇಕಿಲ್ಲ?

ಹಾಗಿದ್ದರೆ ಅಂಗವಿಕಲರಾದವರು ಸ್ವಂತ ವ್ಹೀಲ್‌ಚೇರ್ ಮೇಲಾದರೂ ತಮಗಿಷ್ಟ ಬಂದ ಕಡೆ ಸುಲಭವಾಗಿ ಹೋಗಿ ತಮ್ಮ ಕೆಲಸ ಕರ್ಯಗಳನ್ನು ತಾವೇ ಸ್ವತಃ ಮಡಿಕೊಳ್ಳುವ ಕಾಲ ಭಾರತದಲ್ಲಿ ಬರದೇ? ಅವರಲ್ಲಿ ಸ್ವಾಭಿಮಾನ, ಆತ್ಮಶಕ್ತಿಯನ್ನು ವೃದ್ಧಿಸುವ ಕಾರ್ಯಗಳನ್ನು ಸರಕಾರ ಮಾಡದಿದ್ದರೆ ಸರಿ.. ಜನ ಸಾಮಾನ್ಯರಾದರೂ ಎಚ್ಚೆತ್ತು ಕೊಳ್ಳಬಾರದೇ? ಸುತ್ತಮುತ್ತಲಿರುವ ಅಂಗವಿಕಲರು ಪಡುತ್ತಿರುವ ಪಾಡು, ಕಷ್ಟಗಳನ್ನು ನೋಡಿಯಾದರೂ ಸಮಾಜ ತನ್ನೊಳಗಿನ ವ್ಯವಸ್ಥೆಗಳಲ್ಲಿ ಬದಲಾವಣೆ ತರಬಾರದೇಕೆ? ಅವರಿಗೂ ಎಲ್ಲರಂತೇ ಜೀವಿಸುವ, ಓದುವ, ದುಡಿಯುವ, ಎಲ್ಲಾ ಕಡೆಯೂ ಹೋಗುವ ಹಕ್ಕಿದ, ಸ್ವಾತಂತ್ರ್ಯವಿದೆ. ಇವರಿಗಾಗಿ ಜನಜಾಗೃತಿಯಾಗುವುದು ಯಾವತ್ತು?!! ಅಂಗವಿಕಲರ ಸಮಸ್ಯೆಗಳು ಅಷ್ಟೊಂದು ದೊಡ್ಡ ಸಮಸ್ಯೆಯೇ? ಪರಿಹರಿಸಲಾರದಷ್ಟು?

ಎಲ್ಲಾ ಸಮಸ್ಯೆಗಳಿಗೂ ಖಂಡಿತ ಪರಿಹಾವಿದೆ ಎಂದು ನಂಬಿರುವವಳು ನಾನು. ಹಾಗಾಗಿ ಕೇವಲ ಸಮಸ್ಯೆಗಳನ್ನಲ್ಲದೇ. ಅದಕ್ಕೆ ತಕ್ಕುದಾದ ನನ್ನದೇ ರೀತಿಯ ಪರಿಹಾರಗಳನ್ನೂ ಮುಂದಿಟ್ಟಿರುವ. ಈ ಪರಿಹಾರಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಹೇಳುತ್ತಿಲ್ಲ. ಆದರೆ ಈ ನಿಟ್ಟಿನಲ್ಲಿ ಇನ್ನಾದರೂ ಜನಜಾಗೃತಿಯಾಗಬೇಕಿದೆ. ಈ ಪರಿಹಾರಗಳು ಓದುಗರಾದ ತಮಗೆ ಸರಿಯೆನಿಸಿದರೆ ದಯವಿಟ್ಟು ಜಾರಿಗೆ ತರುವನಿಟ್ಟಿನಲ್ಲಿ ನಿಮ್ಮದೇ ಕೊಡುಗೆ ನೀಡಿ ಎಂದು ವಿನಂತಿಸುವೆ.
ಪರಿಹಾರಕ್ರಮಗಳು:
೧.ಮೊದಲಿಗೆ ಅವರ ದಿನಾಚರಣೆಯ ಕ್ರಮವೇ ಸರಿಯಲ್ಲ. ಅಂಗವಿಕಲರು ವಿಶೇಷರಲ್ಲ. ಅವರೂ ಸಾಮಾನ್ಯರಂತೆ, ಆದರೆ ಅಂಗದಲ್ಲಿ ವಿಶೇಷ ಊನವಾಗಿರುವವರು ಅಷ್ಟೇ ಎಂದು ತಿಳಿಯಬೇಕು. ಅವರ ಪ್ರತಿ ಸ್ನೇಹವಿರಲಿ. ಅತಿಯಾದ ಅನುಕಂಪ ಆತ್ಮಸ್ಥೈರ್ಯ ಕೊಡದು. ತಿರಸ್ಕಾರ ಬೇಡ. ಸಮಾನತೆಯೊಂದೇ ದಾರಿ.
೨. ಮಾನೋವಿಕಲರನ್ನು ಬಿಟ್ಟು ಕೇವಲ ದೈಹಿಕ ನ್ಯೂನತೆಯಾದವರಿಗೆ ಎಲ್ಲರಂತೆ ಓದಲು, ಉದ್ಯೋಗ ಮಾಡಲು ಅವಕಾಶಗಳನ್ನು ನೀಡಬೇಕು. ಇದು ಕೇವಲ ಇಂತಿಷ್ಟು %ಗಳಲ್ಲಿಡುವುದರಿಂದ ಪರಿಹಾರವಾಗದು. ಎಲ್ಲಾ ವಿದ್ಯಾಕೇಂದ್ರಗಳನ್ನು, ಕಚೇರಿಗಳನ್ನು, ಅಂಗಡಿಗಳನ್ನು, ಮಾಲ್‌ಗಳನ್ನು ವ್ಹೀಲ್‌ಚೇರ್ ಹೋಗುವಂತೆ ವಿನ್ಯಾಸಗೊಳಿಸಬೇಕು.
೩. ಬಹುಮಡಿ ಕಟ್ಟಡಗಳಲ್ಲಿ, ಬಹು ಅಂಕಣಗಳಿರುವ ಮನೆಗಳನ್ನು ಕಟ್ಟುವಾಗ ಲಿಫ್ಟ್ ಸೌಲಭ್ಯವಿರುವಂತೆ ನೊಡಬೇಕು.
೪.ಕ್ಲಿನಿಕ್‌ಗಳು ಎಷ್ಟೇ ಸಣ್ಣವಾಗಿರಲಿ ಕಡ್ಡಾಯವಾಗಿ ರೋಗಿಗಳು ಸುಲಭವಾಗಿ ಒಳಹೋಗುವಂತೆ ಮಾಡಬೇಕು. ಮೆಟ್ಟುಲುಗಳನ್ನಿಡಲೇ ಬಾರದು. ಇಟ್ಟರೆ ಲಿಫ್ಟ್ ಸೌಲಭ್ಯವಿರಲೇಬೇಕು.
೫. ಅವರಿಂದ ಈ ಕಲಿಕೆ/ಕೆಲಸವಾಗದು ಎಂದು ಇತರರು ನಿರ್ಧರಿಸಬಾರದು. ಅಂತಿಮ ನಿರ್ಧಾರ ಆತನದಾಗಿರಬೇಕು.
೬. ಅಂಗವೈಕಲ್ಯ ಪ್ರಾರಾಬ್ಧ ಕರ್ಮ, ಒಂದು ಶಾಪ ಅನುಭವಿಸಲೇ ಬೇಕಾದ್ದು ಎಂಬ ಮುಢತೆಯನ್ನು ತೊರೆಯಬೇಕು. ಕೇವಲ ಅನುಕಂಪ, ಕರುಣೆ ತೋರದೇ. ಅವರಿಂದಲೂ ಸಾಧಿಸಲು ಸಾಧ್ಯ ಎನ್ನುವ ಮಾನಸಿಕ ಬೆಂಬಲ ನೀಡಬೇಕು. ಸಹಕಾರವಿರಲಿ.
೭. ಎಲ್ಲಕ್ಕಿಂತ ಮುಖ್ಯವಾಗಿ ವಿಕಲಚೇತನರು ತಮ್ಮನ್ನು ತಾವು ಹಳಿದುಕೊಳ್ಳುವುದು, ಕುಗ್ಗಿಸಿಕೊಳ್ಳುವುದು, ತಾವು ಅಸಮರ್ಥರೆಂಡು ಕೊರಗುವುದನ್ನು ಬಿಡಬೇಕು. "ನಮ್ಮನ್ನು ನಾವೇ ಉದ್ಧಾರಮಾಡಿಕೊಳ್ಳಬೇಕು. ಯಾರೋ ಬಂದು ನಮ್ಮನ್ನು ಮೇಲೆತ್ತರು. ನಾವು ಮನೋಬಲ ಹೊಂದಿದಾಗ ಸಮಾಜವೂ ನಮ್ಮೊಂದಿಗೆ ಒಂದಲ್ಲಾ ಒಂದು ದಿನ ಬರುವುದು ಎನ್ನುವದನ್ನು ಮನಗೊಳ್ಳಬೇಕು."

ಕೊನೆಯದಾಗಿ : ಸಾವಿರಾರು ಮಾತುಗಳನ್ನು ಒಂದು ಕವನವು ಹೇಳುವುದು.

ಆಶಾಜ್ಯೋತಿ

ನೂರು ಕನಸ ಕಣ್ಣೊಳಿಟ್ಟು,
ಜಗವ ಪಡೆವ ಕೆಚ್ಚುಹೊತ್ತು
ಸದಾ ನಗುವ ತುಟಿಯೊಳಿಟ್ಟು
ಹತಾಶೆಯ ಕೊರಗು ಬಿಟ್ಟು,
ಹೋರಾಟವು ನಮ್ಮ ಬದುಕು,
ಮುಂದಿದೆ ಬಾಳ ಬೆಳಕು;

ಸಮಾನತೆಯು ಇರೆ ಜೊತೆಗೆ
ಏರುವೆವು ಪರ್ವತವನೇ
ಕರುಣೆ ಇರದೆ ಸ್ನೇಹ ನೀಡೆ
ದಾಟುವೆವು ಸಾಗರವನೇ

ತಳ್ಳಲಾರರು ಯಾರೂ
ಬಗ್ಗದ ಮರ ನಾವು,
ಒಡೆಯಲಾರರು ಮನವ
ಇದು ಬಂಡೆ ಕಲ್ಲು.

ಹೂವಂಥ ಮನದೊಳು
ವಜ್ರದ ಬಲವಿರಲು
ಹೊಸಕಲಾರರು ಯಾರೂ
ಇದು ಬಾಡದ ಹೂವು.

ನೀಡುತಿರೆ ನೀವು ಸದಾ
ವಿಶ್ವಾಸ ಪ್ರೀತಿ,
ಬೆಳಗಬಲ್ಲೆವು ನಾವು
ಹೊಸ ಆಶಾಜ್ಯೋತಿ.

"ಬದಲಾವಣೆ ಒಂದು ದಿನದಲ್ಲಾಗದು..ಒಂದು ಬರಹದಲ್ಲಾಗದು.. ಆದರೆ ಬದಲಾವಣೆಯ ಪ್ರಾರಂಭ ಒಂದು ಬರಹದಿಂದಲಾದರೂ ಆದರೆ ಅಷ್ಟೇ ಸಾಕು"

-ತೇಜಸ್ವಿನಿ ಹೆಗಡೆ.