ಸೋಮವಾರ, ಮಾರ್ಚ್ 29, 2010

ದಾನಿಯಾಗುವೆನು ನಾ ನನ್ನಕ್ಷರಗಳಿಗಾಗಿ...

ಅಕ್ಷರಗಳೀಗ ಅಳುತ್ತಿವೆ
ನರಳುತ್ತಿವೆ, ಕರಗುತ್ತಿವೆ
ನನ್ನೊಳು ಹುದುಗಿ ಕುದಿಯುತ್ತಿವೆ...
ತಮ್ಮ ಅಸ್ತಿತ್ವಕ್ಕೆ ಬಿದ್ದ
ಪೆಟ್ಟಿನಿಂದಾದ ನೋವಿಗೆ
ಬಿಕ್ಕುತ್ತಿವೆ, ಬೆಚ್ಚುತ್ತಿವೆ...

ಮಾನಸದಲ್ಲೇ ಹುಟ್ಟಿ
ವಿವೇಕದಲ್ಲಿ ಬೆಳೆದು
ಯೋಚನೆಯ ಮೂಲಕ
ಕಲ್ಪನೆಯೊಳು ಹೊಕ್ಕು
ಹೊರಬಂದು ಚಿಗುರಿದ್ದ
ನನ್ನ ಅಕ್ಷರಗಳೀಗ ಅಳುತ್ತಿವೆ...

ತನ್ನ ಕಂದನ ನೋಡಿ
ಅದರ ಮೆರುಗಿಗೆ ಬೆರಗಾಗಿ
ಮೈಮರೆತಿದ್ದ ತಾಯಿಯ ಮೇಲೆ,
(ಅ)ಪರಿಚಿತರೇ ಧಾಳಿಯಿಟ್ಟು,
ಮಗುವ ಕಸಿಯ ಬಂದಂತೇ,
ನನ್ನ ಅಕ್ಷರಗಳೀಗ ಅಳುತ್ತಿವೆ...

ನಿಶ್ಚಲವಾಗಿ, ಸುನೀಲವಾಗಿ
ಗಂಭೀರವಾಗಿ, ವಿಶಾಲವಾಗಿ,
ಸುನೀತದಂತಿದ್ದ ಕೊಳಕ್ಕೆ
ಕಲ್ಲುಗಳನೆಸೆದು, ರಾಡಿಯೆಬ್ಬಿಸಿ
ನೀರು ಕಣಕಾಗಿ ಕನಲಿದಂತೇ
ನನ್ನ ಅಕ್ಷರಗಳೀಗ ಅಳುತ್ತಿವೆ....

ಅಳುವ ಪದಗಳು ಸೋಲುವ ಮುನ್ನ....
ದಾನಗಳಲ್ಲೇ ಶ್ರೇಷ್ಠ ದಾನವ
ನೀಡುತ್ತಿರುವುದೇ, ನಾ ನನ್ನಕ್ಷರಗಳಿಗೆ
ಮಾಡುತ್ತಿರುವ ಸಮಾಧಾನ...
ನೋವನಿತ್ತ ಮನಸಿಗೂ, ಅದರ ರೀತಿಗೂ
ಕೊಟ್ಟುಬಿಡುವೆನು ಇಂದು ಕ್ಷಮಾದಾನವ

- ತೇಜಸ್ವಿನಿ

(ಚಿತ್ರ ಕೃಪೆ : ಗೂಗಲ್)

ಗುರುವಾರ, ಮಾರ್ಚ್ 25, 2010

ಹರಿವ ಲಹರಿಯೊಡನೆ...

ದೂರದಾಗಸದಿಂದೆಲ್ಲೋ ಎದ್ದು ಬರುವ ಕರಿಮೋಡವ ನೋಡಿದಾಗಲೆಲ್ಲ ನಿನ್ನೊಡನೆ ನನಗಿರುವ ಮುನಿಸೇ ನೆನಪಾಗುತ್ತದೆ ನೋಡು. ಕ್ರಮೇಣ ದಟ್ಟೈಸುವ ಕಪ್ಪು ಮೋಡ ಮತ್ತಷ್ಟು ದೊಡ್ಡದಾಗಿ, ಹರವಿ, ಸೂರ್ಯನಿಗೇ ಮುಸುಕು ಹಾಕಿ ಬೀಗಿದಾಗ ನಿನ್ನೊಳಗಿನ ಅಹಂ ಕೂಡ ನೆನಪಾಗುವುದು. ತನ್ನೊಳಗೆ ತುಂಬಿರುವ ತುಂತುರು ಹನಿಗಳ ಘನ ಭಾರವೇ ತಮ್ಮ ಅಸ್ತಿತ್ವಕ್ಕೆ ಕಾರಣವೆಂದರಿಯದೆಯೇ ಮೆರೆಯುವ ಈ ಮೋಡಕ್ಕೆ ಪ್ರತಿ ಸಲವೂ ಮೋಸವೇ ಆಗುವುದು. ಹೆಚ್ಚು ಭಾರ ತಾಳಲಾಗದೇ ಸೋತು ನೀರಾಗಿ ಭುವಿಯೊಳಗೆ ಇಳಿದು ಗುಪ್ತಗಾಮಿನಿಯಾಗುವಾಗ, ಹರಿದು ತೊಳೆದುಹೋಗುವಾಗ ಎಲ್ಲಿಯ ಕರಿಮೋಡ? ಎಲ್ಲಿಯ ಅಹಂ?! ಈ ಅಹಂ ಶುರುವಾಗಿರುವುದು ಎಲ್ಲಿಂದ ಎನ್ನುವುದರ ಬಗ್ಗೆ ದೊಡ್ಡ ಸಂಶಯವಿದೆ ನನಗೆ. ಹರಿವ ತೊರೆಯನಾರಿಗೂ ಬಂಧಿಸಲಾಗದೆಂದು ಬೀಗುವ ಭುವಿಯೇ? ಆ ನೀರನ್ನೇ ಸ್ಟ್ರೋದಂತೇ ತುಸುವೇ ಹೀರಿ ಸೆಳೆದುಕೊಂಡು ಮೈ ಬೆಳೆಸಿಕೊಳ್ಳುವ ಕರಿ ಮೋಡವೇ? ಅಲ್ಲಿ ನಾ ನಿಲ್ಲಲಾರೆ, ಇಲ್ಲಿ ಹೆಚ್ಚು ಬಾಳಲಾರೆ ಎಂಬಂತೆ ಭುವಿಯಿಂದ ಬಾನಿಗೆ, ಬಾನಿಂದ ಮರಳಿ ಭುವಿಗೆ ಚಕ್ರದಂತೇ ತಿರುಗುವ ಆ ಮಳೆ ಹನಿಗೇ? ಊಹೂಂ... ಇದರ ಬಗ್ಗೆ ಉತ್ತರಿಸುವುದು ಅಸಾಧ್ಯವೇ ಸರಿ. ಆದರೆ ಮೋಡದೊಳಗೆ ಮರೆಯಾಗಿಯೂ ಮರೆಯಾಗದಂತಿದ್ದು, ನಾನಿಲ್ಲದಿದ್ದರೆ ನಿಮ್ಮಾಟಗಳೇನೂ ನಡೆಯದು ಎಂದು ಕಳ್ಳ ನಗು ಬೀರುವ ರವಿಯನ್ನು ಮಾತ್ರ ಮರೆಯುವಂತಿಲ್ಲ.

ಸುಖಾಸುಮ್ಮನೆ ನನ್ನ ರೇಗಿಸಿ, ಒಳಗಿನ ಅರಿಷಡ್ವೈರಿಗಳಗೆಲ್ಲಾ ಹಿರಿಯಪ್ಪನಾದ ಕ್ರೋಧವನ್ನೇ ಬಡಿದೆಬ್ಬಿಸಿ, ಎಲ್ಲವನ್ನೂ ನಾ ಹೊರ ಕಾರಿದ ಮೇಲೆ ಬಿಮ್ಮನೆ ಸುಮ್ಮನಾಗುವ, ನನ್ನೊಳಗಿನ ಕೋಪವನ್ನು ಕಂಡು ಹೀಯಾಳಿಸಿ ಗೆದ್ದೆನೆಂದು ಬೀಗುವ ನಿನ್ನ ಅಹಂ ಕೂಡ ಹೀಗೇ ಅಲ್ಲವೇ? ಆದರೆ ನನ್ನೊಳಗಿನ ಭಾವಗಳು ಹಾಗೂ ಅವುಗಳನಾಳುವ ಈ ಮನಸು - ಇವು ಮಾತ್ರ ನನ್ನ ಹೆಡ್ಡುತನವನ್ನು ನೆನೆಸಿ ನೆನೆಸಿ ನಗುತ್ತವೆ ಪ್ರತಿಬಾರಿಯೂ. "ತೀರುತಿರುವ ಹರುಷದಂತೇ ಆರುತಿದ್ದ ದೀಪವು.." ಎಂಬ ಸಾಲುಗಳನ್ನು ನೆನೆದಾಗಲೆಲ್ಲಾ ಅಸಹನೆಯ ಹೊಗೆ ದಟ್ಟವಾಗುವಂತೇ....ನನ್ನ ನೆಚ್ಚಿನ ಹಾಡಾದ-
 "हम खुशी के चाह मे हर खुशी से दूर हॊगये,
डूंढने चले थे जिंदगि, जिंदगी से दूर हॊगयॆ..." ನೆನಪಾಗಿ, ರವಿಯ ಶ್ರೇಷ್ಠತೆಯೂ, ನೀರ ಹನಿಗಳ ಅಲ್ಪತೆಯೂ ಅರಿವಾಗುತ್ತದೆ. ಮನಸು ಮೃದುವಾಗುತ್ತದೆ...ಮುನಿಸು ನೀರಾಗಿ ಕರಗಿಹೋಗುತ್ತದೆ. ಎಂದೂ ಕಾಣದಂಥ ಕನಸೊಂದು ನನ್ನ ಮನದ ಮೂಲೆಯಲ್ಲೆಲ್ಲೋ ಅಡಗಿರುವ ಬರಡು ನೆಲದ ಕಡಗೆ ತಣ್ಣನೆ ಹರಿದು, ಅಲ್ಲೇ ಆಳ ಅಗಲವ ತೋಡಿ, ಹೊಸ ಕನಸುಗಳ ಬೀಜ ಬಿತ್ತಿ, ಭರವಸೆಯ ಹಸಿರು ಪೈರನ್ನು ಬಿತ್ತುವ ಆ ಕಾಣದ ಕನಸಿಕೆ ಹಂಬಲಿಸಿದೆ ನನ್ನ ಮನ. ಉದಯರವಿ ಉಷೆಗಾಗಿ ಪ್ರತಿದಿನ ಕಾದು ಹಂಬಲಿಸಿ, ಇರುಳ ಪರದೆಯ ಸೀಳಿ ಬರುವಂತೆ....ನಿಶೆಯ ಸೇರುವ ತವಕದಲಿ, ರವಿಯನ್ನೇ ಮುಳುಗಿಸಿ ತೇಲುವ ಚಂದಿರನಂತೇ, ನೀ ಬರುವಾಗ ನಾನು.... ನೀ ಬರುವ ಹಾದಿಯಲ್ಲಿ ನಗೆಹೂವ ಹಾಸಿ, ದಂಡೆ ಮೇಲೆ ನಿಂತುಕೊಂಡು, ದಂಡೆ ಹೂವ ಮುಡಿದು ಕೊಂಡು ನಿನಗಾಗಿ ಕಾದಿರುವ ನನ್ನ ಕಿವಿಯೊಳಗೆ ಸಖೀಗೀತವನೊಮ್ಮೆ ಹಾಡಿಬಿಡು ಮೆಲ್ಲನೆ.

- ತೇಜಸ್ವಿನಿ

ಗುರುವಾರ, ಮಾರ್ಚ್ 18, 2010

ವಿನಾಕಾರಣ....ಈ ನಿರಾಕರಣ


ಹೊಸ ಸ್ನೇಹವೊಂದು ತೇಲಿಬಂತು ಮನೋವೇಗದಲ್ಲಿ
ಕಡಲಾಚೆಯಿಂದ ಹಾರಿಬಂತು ನಸುನಗೆಯ ಹೂವು ಚೆಲ್ಲಿ

ಹೊಸಭಾವ ತಂತು, ಹೊಸರೀತಿಯಲ್ಲಿ ಹೊಸಬೆಳಕನ್ನು ಎನಗೆ ತೋರಿ
ನನ್ನೊಳಗಿನ ನನ್ನ ಹೊರತಂದು ಬೆಸೆದೆ, ತಾನೂ ಜೊತೆಗೆ ಸೇರಿ

ಸಾವಿರಾರು ಮೈಲು ದೂರವಿದ್ದೂ ನೋಡು, ಬೆಸೆದಿತ್ತು ನನ್ನ ನಿನ್ನ
ಈ ಸ್ನೇಹವೆಂದೂ, ಘಮಘಮಿಸಲೆಂದು ಪ್ರಾರ್ಥಿಸಿದ್ದೆ ಆ ದೇವನನ್ನ

ತಿಳಿಮುಗಿಲ ತುಂಬಾ ಕರಿಮೋಡ ಕವಿದು ಕಾಣಲಿಲ್ಲವೇಕೋ ಏನೂ!
ಕಣ್ತೆರೆದು ನೋಡೆ, ಕಟು ವಾಸ್ತವದ ಛಾಯೆ, ಕೃಷ್ಣಪಕ್ಷವೀಗ ಬಾನು

ನೀ ಹೇಳಲಿಲ್ಲ, ನಾ ಕೇಳಲಿಲ್ಲ ಕಾರಣವು ಏನು ಎಂದು
ತಪ್ಪಿಲ್ಲ ನಂದು, ತಪ್ಪೆಲ್ಲ ನಿಂದು ಎನ್ನುತಲೇ ಕಳೆದೆವೆಂದೂ

ಸ್ನೇಹಕ್ಕೆ ಸಾವಿಲ್ಲ, ನಿನ್ನೆಯ ನೋವಿಲ್ಲ, ಸಾಂತ್ವನವಿಹುದೀ ಮನಕೆ
ಏಕೋ ಏನೋ ಕಾಣೆ, ನಿನ್ನದೇ ನೆನಪು, ಮರೆತಷ್ಟೂ ನನ್ನ ಒಳಗೆ

ಸೋಮವಾರ, ಮಾರ್ಚ್ 15, 2010

ವಿಕೃತಿಯಿಲ್ಲದ ವಿಕಸನದೆಡೆಗೆ ಸಾಗೋಣ ಬನ್ನಿ....


ಹೊ ವರುಷದಾರಂಭವನ್ನು ಒಂದು ಉತ್ತಮ ಹಾಗೂ ವಿಶಾಲಾರ್ಥವನ್ನು ನೀಡುವ ಸುಂದರ ಲೇಖನದ ಮೂಲಕ ಆರಂಭಿಸುತ್ತಿದ್ದೇನೆ. ಈ ಲೇಖನವನ್ನು ಬರೆದವರು ದಿವಗಂತ ಡಾ.ದಯಾನಂದ ಶಾನಭಾಗ. ಇವರು ಧಾರವಾಡದ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ದೀರ್ಘಕಾಲದ ಅಸೌಖ್ಯದಿಂದಾಗಿ ಕಳೆದ ತಿಂಗಳಲ್ಲಿ ದಿವಗಂತರಾದರು. ಪುಟಗಳ ಈ ಒಂದು ಲೇಖನವನ್ನು ಸಂಗ್ರಹಿಸಿ ಕೇವಲ ಪ್ರಮುಖಾಂಶಗಳನ್ನಷ್ಟೇ ಇಲ್ಲಿ ಹಾಕಿದ್ದೇನೆ. ಇಡೀ ಲೇಖನವೇ ಬಹು ಅದ್ಭುತವಾಗಿ ನಮ್ಮ ಕಣ್ತೆರೆಸುವಂತಿದೆ. ಜಾತಿ, ಮತ, ಹಿಂಸೆಗಳ ವಿರುದ್ಧ ಹೊಸ ಭಾಷ್ಯವನ್ನು ಬರೆಯುವಂತಿದೆ. ಸುಮಾರು ಹದಿನೈದು ವರುಷಗಳಿಂದಲೂ, ಪ್ರತಿ ವರುಷ ನನ್ನ ತಂದೆಯವರಾದ ಡಾ.ಜಿ.ಎನ್ ಭಟ್ ಅವರು ತಮ್ಮ ಸಂಸ್ಕೃತ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ (Centre For Inter-Disciplinary Studies and Research in Sanskrit) ಮೂಲಕ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಗಳನ್ನು(Seminar)ಏರ್ಪಡಿಸುತ್ತಿದ್ದಾರೆ. ೧೯೯೯ ರಲ್ಲಿ "ವ್ಯಕ್ತಿತ್ವ ವಿಕಸನ : ಭಾರತೀಯ ದೃಷ್ಟಿ” (Personality Development - Indian View) ಎಂಬ ವಿಷಯದಡಿ ವಿಚಾರಗೋಷ್ಠಿಯನ್ನು ಏರ್ಪಡಿಸಿದ್ದರು. ಆಸಮಯದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ನಿವೃತ್ತ ಹಾಗೂ ಕಾರ್ಯನಿರತ ಅನೇಕ ಪ್ರಾಧ್ಯಾಪಕರು ತಮ್ಮ ಪೇಪರ್ ಮಂಡಿಸಿದ್ದರು. ಅವುಗಳನ್ನೆಲ್ಲಾ ಸಂಪಾದಿಸಿ ಒಂದು ಪುಸ್ತಕವನ್ನು ಹೊರ ತರಲಾಗಿದೆ. ಅಲ್ಲಿಂದಲೇ ಆಯ್ದ ಲೇಖನವಿದು. ಅಂತೆಯೇ ಈವರೆಗೂ ಪ್ರತಿ ವರುಷ ನಡೆಸಿದ ಗೋಷ್ಠಿಗಳನ್ನೆಲ್ಲಾ ಸಂಗ್ರಹ ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸಲಾಗಿದೆ. ಅವುಗಳೆಲ್ಲವುಗಳ ಪಟ್ಟಿಗಳನ್ನು ಸಧ್ಯವೇ ನೀಡಲು ಯತ್ನಿಸುವೆ.
(ಚಿತ್ರ ಕೃಪೆ - ಗೂಗಲ್)

ಸರ್ವರಿಗೂ ವಿಕೃತಿನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.
 ಈ ಯುಗಾದಿ ಎಲ್ಲರ ಮನದೊಳಗಿರುವ ವಿಕೃತಿಯನ್ನು ಹೋಗಲಾಡಿಸಿ, ಸುವಿಚಾರಗಳನ್ನು ಹುಟ್ಟುಹಾಕಿ ಆ ಮೂಲಕ ಸುಕೃತಿಗಳನ್ನು ಮಾಡುವಂತೆ ಪ್ರೇರೇಪಿಸಲೆಂದು ಮನಃಪೂರ್ವಕವಾಗಿ ಹಾರೈಸುವೆ.


ವ್ಯಕ್ತಿತ್ವ ವಿಕಸನ : ಭಾರತೀಯ ದೃಷ್ಟಿ
(Personality Development - Indian View)

ಸಂಪಾದಕ : ಡಾ.ಜಿ.ಎನ್.ಭಟ್
ಪ್ರಸ್ತುತ ಲೇಖನದ ಲೇಖಕ : ದಿ. ಡಾ.ದಯಾನಂದ ಶಾನಭಾಗ
(ಈ ಲೇಖನದ ಒಟ್ಟು ಸಾರವನ್ನು ಬರೆದವರು : ತೇಜಸ್ವಿನಿ ಹೆಗಡೆ)

(ಚಿತ್ರ ಕೃಪೆ - ಗೂಗಲ್)

‘ವ್ಯಕ್ತಿತ್ವ-ವಿಕಸನ’ ಎಂಬ ವಿಷಯದ ಬಗ್ಗೆ ಮನುಷ್ಯರಾದ ನಾವು ಯೋಚಿಸುವಂತೆ ಪಶು-ಪಕ್ಷಿಗಳಾಗಲೀ ಹುಳ-ಹುಪ್ಪಡಿಗಳಾಗಲೀ ಯೋಚಿಸುವುದೂ ಇಲ್ಲ, ಚಿಂತಿಸುವುದೂ ಇಲ್ಲ. ಏಕೆಂದರೆ ಅವುಗಳಿಗೆ ಅದರ ಅಗತ್ಯವಿಲ್ಲ. ಅವುಗಳ ವಿಕಾಸ(ಬೆಳವಣಿಗೆ) ಅನಾಯಾಸವಾಗಿ ಆಗುತ್ತಲೇ ಇರುತ್ತದೆ. ಆದರೆ ಮನುಷ್ಯನ ಬದುಕಿನ ರೀತಿಯೇ ಬೇರೆ. ಅವನು ನೆಲದಲ್ಲಿ ನೆಲೆಸುವಂತೆ ನೀರಿನಲ್ಲೂ ಬದುಕಬಲ್ಲ. ಆಕಾಶದಲ್ಲೂ ಹಾರಾಡಬಲ್ಲ. ಮಾಂಸ ತಿಂದು ಅರಗಿಸಬಲ್ಲ. ಹುಲ್ಲು ತಿಂದೂ ಬದುಕಬಲ್ಲ. ಈತ ತ್ಯಾಗಿಯೂ ಆಗ ಬಲ್ಲ, ಭೋಗಿಯೂ ಆಗಬಲ್ಲ. ಪ್ರಾಣ ಕೊಡಬಲ್ಲ, ಪ್ರಾಣ ಕೊಳ್ಳಬಲ್ಲ. ತನ್ನ ಜೀವನವನ್ನು ರೂಪಿಸಬಲ್ಲನಷ್ಟೇ ಅಲ್ಲ ತನಗೆ ಬೇಕಾದ ಜಗತ್ತನ್ನೂ ನಿರ್ಮಿಸಬಲ್ಲ, ಕಟ್ಟಬಲ್ಲ, ಕೆಡವಬಲ್ಲ. ಇದು ಮನುಷ್ಯಜೀವನಕ್ಕೆ ಸಂಬಂಧಿಸಿದ ಸತ್ಯಸಂಗತಿ. ಇದನ್ನು ಭಾರತೀಯ ಋಷಿ-ಮುನಿಗಳು ಸಾವಿರಾರು ವರುಷಗಳ ಹಿಂದೆಯೇ ಕಂಡುಕೊಂಡರು. ಈ ಸತ್ಯವನ್ನಲ್ಲದೇ ನಮ್ಮ ಪೂರ್ವಜರು ಇನ್ನೊಂದು ಐತಿಹಾಸಿಕ ಸತ್ಯವನ್ನೂ ಅರಿತಿಕೊಂಡರು. ಅದೆಂದರೆ ವಿಶ್ವದ ಆರಂಭದಿಂದಲೂ ಇಡಿಯ ಜಗತ್ತಿನ ಆಗುಹೋಗುಗಳಿಗೆ ಮನುಷ್ಯನೇ ಕಾರಣ. ಜಗತ್ತಿನಲ್ಲಿ ಹಿಂದೆ ಆಗಿಹೋದ, ಇಂದಾಗುತ್ತಿರುವ, ಮುಂದೆ ಆಗಬಹುದಾದ ಉನ್ನತಿ-ಅವನತಿಗಳಿಗೆಲ್ಲಾ ಮನುಷ್ಯನೇ ಕಾರಣ. ಅದಕ್ಕಾಗಿಯೇ ಪೂರ್ವಜರು-ಭಾರತೀಯರು-ಮಾನವರು ದಾನವತ್ವದ ಕಡೆ ಹೊರಳದೇ ದೇವತ್ವದ ಕಡೆ ಮುನ್ನಡೆಯುವಂತೆ ಅವನ ಬೆಳವಣಿಗೆಯ ಅಂದರೆ ‘ವ್ಯಕ್ತಿತ್ವ ವಿಕಸನ’ದ ರಾಜಮಾರ್ಗ ಕಂಡುಹಿಡಿದರು.

‘ವ್ಯಕ್ತಿತ್ವ-ವಿಕಸನ’ ಎಂಬುದನ್ನು ತಿಳಿಯಬೇಕಾದರೆ ‘ವ್ಯಕ್ತಿತ್ವ’ ಎಂಬುದರ ಅರ್ಥ ತಿಳಿಯಬೇಕಾಗುತ್ತದೆ. ಮನುಷ್ಯನ ವ್ಯಕ್ತಿತ್ವದಲ್ಲಿ ಪ್ರಮುಖವಾಗಿ ಮೂರು ಅಂಗಗಳು ಕೂಡಿಕೊಂಡಿವೆ. ಅವುಗಳೆಂದರೆ ಬುದ್ಧಿ, ಮನಸ್ಸು ಮತ್ತು ಇಂದ್ರಿಯಗಳುಳ್ಳ ದೇಹ. ಇವುಗಳಲ್ಲಿ ಬುದ್ಧಿ ಒಂದೆಡೆಯಿದ್ದರೆ ಇಂದ್ರಿಯಗಳು ಇನ್ನೊಂದು ಕಡೆ ಇವೆ. ಬುದ್ಧಿಯಲ್ಲಿ ಅರಿವು ತುಂಬಿ ಅದು ಪ್ರಬಲವಾದರೆ ಅದರಂತೆ ಮನಸ್ಸು-ಇಂದ್ರಿಯಗಳು ಕಾರ್ಯಪ್ರವೃತ್ತವಾಗುತ್ತವೆ. ಹೀಗಾದಾಗಲೇ ಮಾನವನು ದೇವನಾಗುವ ಸಾಧ್ಯತೆ ಅಧಿಕವಾಗುತ್ತದೆ. ತದ್ವಿರುದ್ಧವಾಗಿ, ಇಂದ್ರಿಯಗಳು ಬಲಶಾಲಿಯಾಗಿ ಅವುಗಳ ಇಚ್ಛೆಯಂತೆ ಮನಸ್ಸು-ಬುದ್ಧಿಗಳೆರಡೂ ಕೆಲಸ ಮಾಡತೊಡಗಿದರೆ ಮಾನವನು ದಾನವನಾಗುವ ಸಂಭವ ಬಲಿಯುತ್ತದೆ. ಶಾರೀರಿಕ ಅಂಗವೈಕಲ್ಯದಿಂದ ಮನುಷ್ಯನು ವಿಕಲಾಂಗನಾಗುವುದಿಲ್ಲ. ಆದರೆ ಬೌದ್ಧಿಕ ವೈಕಲ್ಯದಿಂದ ಸಂಪೂರ್ಣ ವಿಕಲಾಂಗನಾಗಿ ಪಶುವೇ ಆಗಿಬಿಡುತ್ತಾನೆ. ಆದುದರಿಂದ ಹಿತಕಾರಕ ವ್ಯಕ್ತಿತ್ವ ವಿಕಸನವಾಗಬೇಕಾದರೆ ಬುದ್ಧಿ ಬಲಶಾಲಿಯಾಗುವಂತೆ ಪ್ರಯತ್ನವಾಗಬೇಕು. ಒಳಿತು-ಕೆಡುಕುಗಳ ಅರಿವನ್ನು ತುಂಬಿದ ಬುದ್ಧಿಗೇ ‘ವಿವೇಕ’ವೆನ್ನುವರು. ಇಂತಹ ಬುದ್ಧಿಯೇ ಬಲಶಾಲಿ.

ಹಾಗಾದರೆ ಬುದ್ಧಿಯಲ್ಲಿ ಎಂತಹ ಅರಿವನ್ನು ತುಂಬಬೇಕೆಂಬುದನ್ನು ಯೋಚಿಸಬೇಕಾಗಿದೆ.
೧. ಮೊದಲನೆಯದಾಗಿ : ಮನುಷ್ಯನಾಗಿ ಜನ್ಮ ಪಡೆದ ಪ್ರತಿಯೊಬ್ಬ ಜೀವಿಯು ತಾನು ಸಂಪೂರ್ಣ ಮಾನವ ಸಮಜದ ಒಂದು ಅವಿಭಾಜ್ಯ ಅಂಗವೆಂಬುದರ ಅರಿವನ್ನು ಬುದ್ಧಿಯಲ್ಲಿ ತುಂಬಿಕೊಳ್ಳಬೇಕು. ನಮ್ಮ ಹಿರಿಯರು ಸಾರಿ ಸಾರಿ ಹೇಳಿದ್ದೂ ಇದನ್ನೇ ‘ವಸುಧೈವ ಕುಟುಂಬಕಮ್’.

೨. ಎರಡನೆಯದಾಗಿ : ಮನುಷ್ಯನನ್ನು ‘ಸಾಮಾಜಿಕ ಪ್ರಾಣಿ’ (Social Animal) ಎಂದು ಗುರುತಿಸಲಾಗಿದೆ. ಅಂದರೆ ಸಮಾಜದಲ್ಲಿದ್ದು, ಸಮಾಜದ ಸಹಾಯದಿಂದ, ಸಮಾಜದೊಡನೆ ಬದುಕುವ, ಬದುಕಬೇಕಾದ ಪ್ರಾಣಿಯು. ಸಮಾಜವನ್ನು ಬಿಟ್ಟು ಬದುಕುವುದು ಅಸಾಧ್ಯ,ಅವನ ಜೀವನದ ಬಹುಪಾಲು ಸಂಗತಿಗಳು ಅವನಿರುವ ಸಮಾಜದಿಂದಲೇ ನಿರ್ಧರಿಸಲ್ಪಡುತ್ತವೆ.

೩. ಮೂರನೆಯದಾಗಿ : ಮನುಷ್ಯನು "ತಾನು ಇತರರೊಡನೆ ಬದುಕಬೇಕು" ಅಂದರೆ "ತಾನೂ ಬದುಕಬೇಕು, ಇತರರನ್ನೂ ಬದುಕಬಿಡಬೇಕು" ಎಂಬ ನೀತಿಯನ್ನು ಬುದ್ಧಿಯಲ್ಲಿ ತುಂಬಿಕೊಂಡು ಅದನ್ನು ಕೃತಿಯಲ್ಲಿಳಿಸಬೇಕು. ಇದೆಲ್ಲ ದೇವರ ದೇಣಿಗೆ. ಮನುಷ್ಯರೆಲ್ಲ ಹಂಚಿಕೊಂಡು ತಿನ್ನಬೇಕು. ದೇವರು ನೀಡಿದ್ದನ್ನು ಇತರರಿಗೆ ಕೊಡದೇ ತಿನ್ನುವವನು ಕಳ್ಳ ಎನ್ನುವ ಅರಿವನ್ನು ಬುದ್ಧಿಯಲ್ಲಿ ತುಂಬಿಕೊಳ್ಳಬೇಕು. ಇದಕ್ಕೆ ಪೂರಕವಾಗಿದೆ ಬೇಂದ್ರೆಯವರ ಸೂತ್ರವಾಕ್ಯವೊಂದು - "ಸಮರಸವೇ ಜೀವನ".

ಈ ಸತ್ಯ ಪ್ರತಿಯೊಬ್ಬನ ಬುದ್ಧಿಯಲ್ಲಿ ಆಳವಾಗಿ ಬೇರೂರಿದಾಗಲೇ ಅವನ ಸಮರ್ಪಕ ಹಾಗೂ ಹಿತಕಾರಕ ವ್ಯಕ್ತಿತ್ವ-ವಿಕಸನ ಸಾಧ್ಯ. ಈ ಸತ್ಯಗಳಿಂದ ನಮ್ಮನ್ನು ವಿಮುಖಗೊಳಿಸುವ, ಮಾನವನಿಗೆ ಕೇಡುಂಟುಮಾಡುವ ಶಕ್ತಿಗಳು ಅಥವಾ ಶತ್ರುಗಳು ಅವನ ದೇಹದಲ್ಲೇ ಮನಮಾಡಿಕೊಂಡಿವೆ. ಅವೇ ಅರಿಷಡ್ವೈರಿಗಳು. (ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರ) ಈ ಒಳವೈರಿಗಳಿಗೆ ಸೋತ ಬುದ್ಧಿಯಿಂದಾಗಿ ಮನುಷ್ಯನು ಇಂದ್ರಿಯಗಳಿಗೆ ಗುಲಾಮನಾಗುತ್ತಾನೆ. ಅವನ ಅಧಃಪತನ ನಿಶ್ಚಿತವಾಗುತ್ತದೆ. ಜಿತೇಂದ್ರಿಯನು ಎಲ್ಲ ಗಳಿಸಿದರೆ, ಅಜಿತೇಂದ್ರಿಯನು ಎಲ್ಲ ಕಳಕೊಳ್ಳುತ್ತಾನೆ. ಹಾಗಾಗಿ ಇಂದ್ರಿಯ ನಿಗ್ರಹವು ವ್ಯಕ್ತಿತ್ವ-ವಿಕಸನದ ಒಂದು ಭಾಗವೇ ಆಗಿದೆ. ಹೀಗೆ ಸಕಲರ ಹಿತಕ್ಕಾಗಿ, ಎಲ್ಲರೊಡನೆ ಬಾಳುವ ಅಗತ್ಯವಿರುವ ಮನುಷ್ಯನು ಸಫಲ ಸುಖೀಜೀವನಕ್ಕಾಗಿ ಅನುಸರಿಸಬೇಕಾದ ಸೂತ್ರವೊಂದನ್ನು ನಮ್ಮ ಹಿರಿಯರು ದಯಪಾಲಿಸಿದ್ದಾರೆ. ಅದೆಂದರೆ, "ತನ್ನಂತೆ ಪರರ ಬಗೆ". ಈ ರೀತಿಯ ಬೌದ್ಧಿಕ ವಿಕಾಸಕ್ಕೆ, ವ್ಯಕ್ತಿತ್ವ-ವಿಕಸನಕ್ಕೆ ಅನುಕೂಲವಾಗುವಂತೆ ನಮ್ಮ ಹಿರಿಯರು ‘ಧರ್ಮದ’ ಬೋಧೆ ಮಾಡಿದರು. ಈ ಸಂದರ್ಭದಲ್ಲಿ ‘ಧರ್ಮದ’ ನಿಜವಾದ ಅರ್ಥ ತಿಳಿದುಕೊಳ್ಳಲೇಬೇಕು. ಇಂದು ಧರ್ಮವೆಂದರೆ ಕೇವಲ ‘religion’ ಅಂದರೆ ‘ದೇವರಲ್ಲಿ ನಂಬಿಕೆ’ ‘ಸಾಂಪ್ರದಾಯಿಕ ಪೂಜಾ-ಪಾಠ’ ಎಂದು ಮುಂತಾಗಿ ತಪ್ಪಾಗಿ ಅರ್ಥ ಮಾಡಿಕೊಂಡು ಧರ್ಮದ ಬಗೆಗೆ ಅಸಂಬದ್ಧ ಪ್ರಲಾಪ ಮಾಡುವವರು ಇದ್ದಾರೆ, ಹಿಂದೆಯೂ ಅಂತವರಿದ್ದರು; ಮುಂದೆಯೂ ಇರಬಹುದು. ಆದರೆ ನಮ್ಮ ಪೂರ್ವಿಕರ ಪ್ರಕಾರ ಧರ್ಮವೆಂದರೆ ಮನುಷ್ಯನಿಗೆ ‘ಮನುಷ್ಯತ್ವ’ ನೀಡುವುದು. ನಿಜವಾದ ಧರ್ಮದ ಅರ್ಥ ವಿಶಾಲವಾದುದು. ಮಾನವ ಜೀವನದ ಎಲ್ಲ ಅಂಗಗಳನ್ನೂ ಧರ್ಮವು ವ್ಯಾಮಿಸಿಕೊಂಡಿದೆ. ಅದು ಸರ್ವಾಧಾರ, ಸರ್ವವ್ಯಾಪಿ, ಸರ್ವಸುಖಪ್ರದ, ಸರ್ವತ್ರ ಶಾಂತಿಪ್ರಸಾರಕ. ಅದುವೇ ಮಾನವಧರ್ಮ, ವಿಶ್ವಧರ್ಮ, ಸನಾತನ ಧರ್ಮ, ಚಿರಂತನಧರ್ಮ, ಭಾರತೀಯಧರ್ಮ. ಅಂತಹ ಧರ್ಮದ ನಿಯಮಗಳು ಇಂತಿವೆ - ಅಹಿಂಸೆ, ಸತ್ಯ, ಕಳ್ಳತನವನ್ನು ಮಾಡದಿರುವುದು, ಶುದ್ಧಿ (ಮಾತು, ಶರೀರ, ಮನಸ್ಸು ಮತ್ತು ಕರ್ಮ), ಇಂದ್ರಿಯ ನಿಗ್ರಹ. ಮಾನವಧರ್ಮದ ಈ ನಿಯಮಗಳನ್ನು ಅರ್ಧೈಸಿ ಕೃತಿಯಲ್ಲಿಳಿಸಬೇಕು. ಆಗಲೇ ಸಂಪೂರ್ಣ ವ್ಯಕ್ತಿತ್ವ-ವಿಕಸನ ಸಾಧ್ಯ.

ವಿಕಸಿತ ವ್ಯಕ್ತಿತ್ವದ ಗುಣಮಟ್ಟ ಅಳೆಯುವುದು ಹೇಗೆ? ಅದು ಹಿತಕಾರಕವೋ ಅಹಿತಕಾರಕವೋ ಎಂದು ನಿರ್ಧರಿಸುವುದು ಹೇಗೆ? ಅದಕ್ಕೆ ತಕ್ಕ ಮಾನದಂಡದ ಬಗೆಗೂ ನಮ್ಮ ಹಿರಿಯರು ಯೋಚಿಸಿದ್ದಾರೆ. ಅದೇನೆಂದರೆ ‘ಬಿತಿದ್ದನ್ನು ಬೆಳೆದುಕೊ’, ’ಸತ್ಕೃತಿಯಿಂದ ಸುಖಫಲ, ಕುಕರ್ಮದಿಂದ ಕಹಿಫಲ’ - ಹೀಗೆ ನಮ್ಮ ಸುಖ-ದುಃಖಗಳಿಗೆ ನಮ್ಮ ಕೃತಿಯೇ ಕಾರಣ. ಆದುದರಿಂದ ವಿಕಸಿತ ವ್ಯಕ್ತಿತ್ವದಿಂದ ಹಿತವಾಗಬೇಕಾದರೆ ಅದು ಕೃತಿರೂಪ ಧರಿಸಿ ಪ್ರಕಟವಾಗಬೇಕು. ಹಿತಕಾರಕ ವ್ಯಕ್ತಿತ್ವ-ವಿಕಸನವಾದವನು ಸುಖಕಾರಕ ಸತ್‌ಕೃತಿ ಗೈದು ತೋರಿಸಬೇಕು. ಕೃತಿಯೇ ಒಬ್ಬನ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಕೃತಿಯಿಂದಲೇ ವಿಕಸಿತ ವ್ಯಕ್ತಿತ್ವವನ್ನು ಅಳೆಯುವುದು ಸಾಧ್ಯ. ಹಾಗಿದ್ದರೆ ಸತ್‌ಕೃತಿಯನ್ನು ಪರೀಕ್ಷಿಸುವುದು ಹೇಗೆ? ಎನ್ನುವ ಸಂದೇಹ ತಲೆದೋರಬಹುದು. ಸತ್‌ಕೃತಿಯನ್ನು ಮೂರು ವಿಧವಾಗಿ ಪರೀಕ್ಷಿಸಿ ನಿರ್ಧರಿಸಲು ಬರುತ್ತದೆ.

೧. ಅದು ಎಲ್ಲರಿಗೂ ತಿಳಿಯಬೇಕೆಂದು ನಾವು ಬಯಸಬೇಕು
೨. ಅದನ್ನು ಮಾಡುವಾಗ ನಾವು ನಾಚಿಕೆ ಪಡಬಾರದು
೩. ಅದರಿಂದ ನಮ್ಮ ಅಂತರಾತ್ಮ ಸಂತುಷ್ಟವಾಗಬೇಕು. - ಇಂತಹ ಕೃತಿಯನ್ನೇ ಸತ್‌ಕೃತಿಯೆನ್ನುತ್ತೇವೆ.

ಅಂತಿಮವಾಗಿ : ನಮ್ಮ ಹಿರಿಯರು(ಪೂರ್ವಜರು) ಕಂಡು ಹಿಡಿದ ಇನ್ನೊಂದು ಸತ್ಯ ಹೀಗಿದೆ - ಮಾನವರೆಲ್ಲ ಪುಣ್ಯದ ಫಲವಾದ ಸುಖ ಬಯಸುತ್ತಾರೆ; ಆದರೆ ಪುಣ್ಯ ಕಾರ್ಯ ಮಾಡಬಯಸುವುದಿಲ್ಲ. ಅಂತೆಯೇ ಪಾಪದ ಫಲವಾದ ದುಃಖ ಬಯಸುವುದಿಲ್ಲ; ಆದರೆ ಪಾಪದ ಕಾರ್ಯ ಮಾಡೇ ಮಾಡುತ್ತಾರೆ. ಅಂದರೆ ಬೇವಿನ ಮರದಿಂದ ಮಾವು ಪಡೆಯ ಬಯಸುತ್ತಾರೆ. ಮನುಷ್ಯ ಜನಿಸಿದ್ದು ಸಾಯುವುದಕ್ಕಲ್ಲ, ಸಾಧಿಸಲಿಕ್ಕೆ. ಜನ್ಮ-ಮೃತ್ಯುಗಳು ಮನುಷ್ಯನ ಕೈಯಲ್ಲಿಲ್ಲವಾದರೂ ಅವುಗಳ ನಡುವಿನ ಜೀವನ-ಸಾಧನೆ ಪೂರ್ಣವಾಗಿ ಅವನ ಕೈಯಲ್ಲಿದೆ. ಅದಕ್ಕಾಗಿ ಅವನ ವ್ಯಕ್ತಿತ್ವ ಸುಯೋಗ್ಯವಾಗಿ ವಿಕಸಿತವಾಗಬೇಕು. ಅದುವೆ ನಿಜವಾದ ವ್ಯಕ್ತಿತ್ವ-ವಿಕಸನ. ಅದನ್ನು ಕುರಿತು ಭಾರತೀಯ ದೃಷ್ಟಿ ಸ್ಪಷ್ಟವಾಗಿದೆ. ವ್ಯಕ್ತಿತ್ವ-ವಿಕಸನದಿಂದಲೇ ಮಾನವ ಮಹಾಮಾನವನಾಗಬಲ್ಲ, ವಿಶ್ವಮಾನವನಾಗಬಲ್ಲ, ದೇವನಾಗಬಲ್ಲ.

---***---

ವಿಕೃತನಾಮ ಸಂವತ್ಸರ ಎಲ್ಲರೊಳಗಿನ ಕೆಡುಕನ್ನು ಹೊರಹಾಕಿ ಸುವಿಚಾರಗಳನ್ನು ತುಂಬಿ, ವಿವೇಕವನ್ನು ಕೊಟ್ಟು ಸತ್‌ಕೃತಿಗಳಿಗೆ ದೀವಿಗೆಯಾಗಲೆಂದು ಪ್ರಾರ್ಥಿಸುವೆ.

ಎಲ್ಲರಿಗೂ ಮತ್ತೊಮ್ಮೆ ಹೊಸವರುಷದ ಹಾಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.


-ತೇಜಸ್ವಿನಿ ಹೆಗಡೆ.

ಬುಧವಾರ, ಮಾರ್ಚ್ 10, 2010

ಹೀಗೇಕೆ?!!


ನಿದ್ದೆಬರದ ರಾತ್ರಿಗಳಲ್ಲಿ,
ನೀಲಾಗಸವ ತುಂಬಿರುವ
ನಕ್ಷತ್ರಗಳ ಎಣಿಸಿದರೆ
ನಿದ್ದೆ ಬರುವುದೆಂದೆ ನೀನು
ಅದ ನಂಬಿ, ನಾನೆಣಿಸತೊಡಗಿದರೆ,
ಸೂರ್ಯೋದಯವಾಗಬೇಕೆ!

ಮನದೊಳಗಿನ ನೋವುಗಳ,
ಯಾತನೆಯ ಮರೆಯಲು
ಜೋರಾಗೊಮ್ಮೆ ನಕ್ಕುಬಿಡು...
ಹಗುರಾಗುವೆ ಎಂದೆ ನೀನು
ಅದ ನಂಬಿ, ನಾ ಜೋರಾಗಿ ನಗಲು
ಎದೆನೋವು ಶುರುವಾಗಬೇಕೆ!

ಚಿಂತೆಯಾಕೆ ಸುಮ್ಮನೇ
ಚಿನ್ಮಯನಿರುವಾಗ ಜೊತೆಗೆ
ಎಂದು ಅಭಯವನಿತ್ತೆ ನೀನು
ಅದ ನಂಬಿ, ನಾ ನಿಶ್ಚಿಂತಳಾದರೂ
ಆ ಚಿನ್ಮಯನ ಹುಡುಕುವ
ಹೊಸ ಚಿಂತೆ ನನ್ನದಾಗಬೇಕೆ!

- ತೇಜಸ್ವಿನಿ
(ಚಿತ್ರ ಕೃಪೆ - ಗೂಗಲ್)

ಮಂಗಳವಾರ, ಮಾರ್ಚ್ 2, 2010

ಸತ್ಯಾಪಸತ್ಯಗಳ ನಡುವಿನ ಹೋರಾಟಕ್ಕೆ "ರಣ್" ಭೂಮಿಯಾಗುತ್ತಿರುವ "ಮಾಧ್ಯಮ"

"ಮೀಡಿಯಾ ಕಿಸೀಕಿ ನಹಿ ಹೋತಿ.. ನ ಪಕ್ಷ ಕೀ ನ ವಿಪಕ್ಷ ಕೀ.." (ಮೀಡಿಯಾ ಯಾರದ್ದೂ ಅಲ್ಲ. ಪಕ್ಷದ್ದೂ ಅಲ್ಲ ವಿಪಕ್ಷದ್ದೂ ಅಲ್ಲ..)- ಎಂದು ಕಡಲ ಗಂಭೀರ ಧ್ವನಿಯಲ್ಲಿ, ಕಣ್ಣಲ್ಲೇ ಎದುರಾಳಿಯನ್ನು ಇರಿಯುತ್ತಾ, ಸುನಾಮಿಯ ಶಾಂತತೆಯನ್ನು ಪ್ರದರ್ಶಿಸುತ್ತಾ, ಗ್ರೇಟ್ ಅಮಿತಾಬ್ ಬಚ್ಚನ್ ಹೇಳುವ ಈ ಒಂದು ಡಯಲಾಗ್ ಸಾಕು ಇಡೀ ರಣ್ ಚಿತ್ರದ ಜೀವಾಳವನ್ನು ನಮಗೆ ಕಾಣಿಸಲು. ಆದರೆ ಈಗ ಮಾತ್ರ ಮಾಧ್ಯಮ ಎರಡು ಬಣಗಳಲ್ಲಿ ವಿಂಗಡಿಸಿ ಹೋಗಿರುವುದು ಮಾಧ್ಯಮದೊಳಗಿನ ಸುಳ್ಳಿನಷ್ಟೇ ಸತ್ಯ! ಒಂದು ಮಾಧ್ಯಮ ಆಡಳಿತ ಪಕ್ಷದಲ್ಲಿದ್ದರೆ, ಇನ್ನೊಂದು ವಿಪಕ್ಷದಲ್ಲಿ... ಮಗದೊಂದು ಯಾರು ಹಿತವರು ಈ ಮೂವರೊಳಗೆ ಎನ್ನುವ ಮೀನಾಮೇಶದಲ್ಲಿ. ಆದರೆ ಯಾರಿಗೂ ಜನಸಾಮಾನ್ಯರು ಬೇಕಾಗಿಲ್ಲ. ಅವರೇನಿದ್ದರೂ ಬಕರಾ‍ಗಳಂತೇ ತಾವು ಕಾಣಿಸುವ ಸಿಹಿಸುಳ್ಳುಗಳ ಆಮಿಶಕ್ಕೆ ಒಳಗಾಗಿ ತಮ್ಮ ತಮ್ಮ ಟಿ.ಆರ್.ಪಿ. ಏರಿಸಿಕೊಳ್ಳಲು ಮಾತ್ರ ಬೇಕು! ಇದು ಇಂದಿನ ಮಾಧ್ಯಮ ಜಗತ್ತಿನ ಕರಾಳ ಕಟು ಸತ್ಯ. ಸುಳ್ಳೇ ತುಂಬಿ ನಾರುತ್ತಿರುವ ಇಂದಿನ ಮಾಧ್ಯಮ ಜಗತ್ತಿನ ಹುಳುಕು ಎಲ್ಲರಿಗೂ ತಿಳಿದದ್ದೇ. ಆದರೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ, ಭ್ರಷ್ಟಾಚಾರ, ಅನ್ಯಾಯ, ಮೋಸ, ವಂಚನೆ ಎಲ್ಲವನ್ನೂ ಹೇಗೆ ನಾವು ಸುಮ್ಮನೇ ಒಪ್ಪಿಕೊಂಡು, ವ್ಯವಸ್ಥೆಯೊಳಗಿನ ಅವ್ಯವಸ್ಥೆಯನ್ನು ನೋಡಿಯೂ ನೋಡದಂತಿರುವುದನ್ನು ಹೇಗೆ ರೂಢಿಸಿಕೊಂಡೆವೋ, ಹಾಗೇ ಮೀಡಿಯಾದೊಳಗಿನ ಅವ್ಯವಹಾರಗಳನ್ನೂ, ಸುದ್ದಿ ಹಾದರಗಳನ್ನೂ ಒಪ್ಪಿಕೊಂಡೆವು. ಬರೀ ಒಪ್ಪಿಕೊಂಡಿದ್ದು ಮಾತ್ರವಲ್ಲ, ಅದೇ ಸತ್ಯ ಎಂದು ನಂಬಿಕೊಂಡೆವು. ಹಾಗಾಗಿ ಇದರೊಳಗಿನ ಸುಳ್ಳು, ಅನಾಚಾರಗಳೂ ಈಗ ಸಾಮಾನ್ಯ ಮನುಷ್ಯನಿಗೆ "Common" ಆಗಿ ಹೋಗಿವೆ ಬಿಡಿ. ಸತ್ಯ ಗೊತ್ತಿರುವುದು ಬೇರೆ, ಅದನ್ನೇ ಎಳೆ ಎಳೆಯಾಗಿ ಬಿಡಿಸಿ, ಪರಿಣಾಮಕಾರಿಯಾಗಿ ನಮ್ಮ ಮುಂದಿಡುವುದು ಬೇರೆ. ಕೇಳಿದ್ದಕ್ಕಿಂತ ಕಂಡಿದ್ದರ ಪರಿಣಾಮ ಜಾಸ್ತಿ. ಈ ಕೆಲಸವನ್ನು ರಾಮ್‌ಗೋಪಾಲ್ ವರ್ಮಾರ "ರಣ್" ಚಿತ್ರ ಯಶಸ್ವಿಯಾಗಿ ಮಾಡಿದೆ. ಇದು ನಾ ನೋಡಿದ ಉತ್ತಮ ಚಿತ್ರಗಳಲ್ಲೊಂದು ಎನ್ನಲು ಯಾವುದೇ ಸಂಶಯವಿಲ್ಲ.

ಇಂದಿನ ಮಾಧ್ಯಮ ಜಗತ್ತಿಗೆ ಕೇವಲ ಸತ್ಯ ಬೇಕಿಲ್ಲ. ಉಪ್ಪು, ಖಾರ, ಹುಳಿ, ಮಸಾಲೆಗಳಲ್ಲಿದ ಸರಳ ಸತ್ಯವನ್ನು ಕಾಣುವುದಾಗಲೀ, ಕೇಳುವುದಾಗಲೀ, ನೋಡುವುದಾಗಲೀ ಬೇಕಿಲ್ಲ. ಇದೇ (ಅ)ವ್ಯವಸ್ಥೆಗೆ ಹೊಂದಿಕೊಂಡಿರುವ ಸಾಮಾನ್ಯ ಜನರಿಗೂ ಕೇವಲ ನಿಜವನ್ನು ಮಾತ್ರ ನೋಡುವುದೂ ಪಥ್ಯವಾಗುತ್ತಿಲ್ಲ. ಕಾರಣ ಸುಳ್ಳಿಗಿರುವುಷ್ಟು ವಿಕಾರಗಳು, ಬಣ್ಣಗಳು ಸತ್ಯಕ್ಕಿರುವುದಿಲ್ಲ. ಅದಕ್ಕೆ ಬೇಕಾದಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ದಿನಬೆಳಗಾದರೆ ಕಾಣುತ್ತವೆ. ಯಾರೋ ಓರ್ವ, ಒಂದು ಚಾನೆಲ್, ಒಂದು ಪೇಪರ್ ಶುರು ಮಾಡಿಕೊಂಡ ಈ ಹುಚ್ಚಾಟವನ್ನು ಕ್ರಮೇಣ ಎಲ್ಲರೂ ಅನುಸರಿಸಿ, ಅದನ್ನೇ ನಮಗೂ ಉಣಬಡಿಸಿ, ನಮ್ಮ ಆರೋಗ್ಯಕರ ಸ್ವಾದವನ್ನೇ ಕೆಡಿಸಿಬಿಟ್ಟಿವೆ ಇಂದು. ಇದಕ್ಕೆ ಎಲ್ಲರೀತಿಯಲ್ಲೂ ಎಲ್ಲರ ಕೊಡುಗೆಯೂ ಇದೆ. ಓದುಗರ, ಪತ್ರಕರ್ತರ, ಪ್ರಾಯೋಜಕರ, ಮುಖ್ಯಸ್ಥರ, ಮಂತ್ರಿಗಳ - ಹೀಗೇ ಎಲ್ಲರೂ ವ್ಯವಸ್ಥಿತವಾಗಿ ಈ ಸಂಚಿನಲ್ಲಿ ಭಾಗಿಯಾಗುತ್ತಾರೆ. ಆದರೆ ಕೊನೆಯಲ್ಲಿ ಸತ್ಯ ಮಾತ್ರ ನರಳುತ್ತದೆ...ಸಾಯುತ್ತದೆ. ಸುಳ್ಳು, ಭ್ರಮೆ, ಅಲ್ಪ ಕಾಲದ ರೋಮಾಂಚನಗಳು ಮಾತ್ರ ವಿಜೃಂಭಿಸುತ್ತವೆ.
ಇದ್ದ ಸುದ್ದಿಯನ್ನು ಇದ್ದಹಾಗೇ ಹೇಳಿದರೆ ಅದು ಕೇವಲ ಸುದ್ದಿಯಾಗಿ ಸತ್ತು ಹೋಗುತ್ತದೆಯಂತೆ. ಆದರೆ ಅದೇ ಸುದ್ದಿಗೆ ಇಲ್ಲದ ಮಸಾಲೆ ಹಾಕಿ ಕಣ್ಮುಂದೆ ತಂದರೆ ಅದು ಕೆಲ ಕಾಲ ಜೀವಂತವಾಗಿರುತ್ತದೆಯಂತೆ...ಇದು ಕೆಲವು ಪ್ರಮುಖ ಮಾಧ್ಯಮ ದಿಗ್ಗಜರ ಅಂಬೋಣ! ಜನರ ದಡ್ಡತನ, ಮುಗ್ಧತೆ, ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಸುದ್ದಿಯನ್ನೂ ಅದರೊಳಗಿನ ಸತ್ಯವನ್ನೂ ಮಾರುತ್ತಿವೆ ಮಾಧ್ಯಮಗಳು. ಸತ್ಯದ ಮೇಲೆ ಸುಳ್ಳಿನ ತಲೆಹಾಕಿ ಅದನ್ನೇ ನಮ್ಮ ಮುಂದಿಡುತ್ತವೆ. ಅದನ್ನೇ ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಕಾಣಿಸಿ, ನಾವು ನಂಬುವಂತೆ ಮಾಡುತ್ತವೆ. ಟಿ.ಆರ್.ಪಿ ಮುಂದೆ ಮನುಷ್ಯತ್ವವನ್ನೇ ಮರೆಯುತ್ತವೆ! ರಾಜಕೀಯ ಹಾಗೂ ಸಾಮಾನ್ಯರ ನಡುವೆ ಸುದೃಢ ಸೇತುವೆಯಂತೆ ಕೆಲಸ ನಿರ್ಮಿಸಬೇಕಿದ್ದ, ಜನಸಾಮಾನ್ಯರಿಗಾಗುವ ಅನ್ಯಾಯ, ಅತ್ಯಾಚರಕ್ಕೆ ಸ್ಪಂದಿಸಿ ಅವರ ಧ್ವನಿಯಾಗಬೇಕಿದ್ದ, ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕಿದ್ದ ಮಾಧ್ಯಮ ಇಂದು ರಾಜಕೀಯ ಪುಢಾರಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಹುನ್ನಾರದಲ್ಲಿದೆ ಎಂದು ನನಗನಿಸುತ್ತಿದೆ.
ಉದಾಹರಣೆಗೆ : ಇತ್ತೀಚಿಗೆ ದಾರಿ ಮಧ್ಯದಲ್ಲಿ ರೌಡಿಯೊಬ್ಬನಿಂದ ಹಲ್ಲೆಗೊಳಗಾಗಿ ಜೀವನ್ಮರಣದ ಹೋರಾಟದಲ್ಲಿದ್ದ ಪೋಲಿಸ್ ಆಫೀಸರ್ ಓರ್ವರ ನರಳಾಟವನ್ನು "LIVE" ಆಗಿ ಟೆಲಿಕಾಸ್ಟ್ ಮಾಡಿದ್ದ ಚಾನೆಲ್ ಒಂದು ಅವರನ್ನು ಆಸ್ಪತ್ರೆಗೆ ಮೊದಲು ಸೇರಿಸಿದ್ದರೆ ಇಂದು ಆ ಆಫೀಸರ್ "LIFE" ಉಳಿದಿರುತ್ತಿತ್ತೇನೋ..! ತನ್ನ ರಕ್ಷಣೆಗಾಗಿ ಮುಂದೆ ಸಾಗುತ್ತಿದ್ದ ಆ ಪೋಲೀಸ್ ಆಫಿಸರ್ ಕೆಳಗೆ ಬಿದ್ದು ಒದ್ದಾಡುತ್ತಿದ್ದರೂ ದಾಟಿ ಹೋದ ರಾಜಕಾರಣಿಗಿಂತ, ಅದನ್ನೇ ಮತ್ತೆ ಮತ್ತೆ ನಮ್ಮ ಮುಂದೆ ಕಾಣಿಸಿದ ಆ ಚಾನಲ್ ಹೆಚ್ಚು ಕ್ರೂರ ಎನಿಸಿತು ನನಗೆ. ಬೇಡ ಇತ್ತೀಚಿಗೆ ನಡೆದ ಕಾರ್ಟನ್ ಟವರ್ ಅಗ್ನಿ ದುರಂತವನ್ನೇ ನೋಡೋಣ. ಚಾನಲ್ ಒಂದು ಮಹಿಳೆಯೊಬ್ಬಳು ೭ನೇ ಮಹಡಿಯಿಂದ ಪ್ರಾಣ ಕಾಪಾಡಿಕೊಳ್ಳಲು ೬ನೆಯ ಮಹಡಿಗೆ ಜಿಗಿಯಲು ಹೋಗಿ ಆಯತಪ್ಪಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡದ್ದನ್ನು ಪ್ರತೀ ೨ ನಿಮಿಷಕ್ಕೊಮ್ಮೆ ಪ್ರಸಾರ ಮಾಡಿತ್ತು. ಮನೆಯೊಳಗೆ ವೀಕ್ಷಿಸುತ್ತಿದ್ದ ಆ ಮಹಿಳೆಯ ಮನೆಯವರಿಗೆ, ಮಕ್ಕಳಿಗೆ ಏನನಿಸಬಹುದು ಎನ್ನುವ ಸಾಮಾನ್ಯ ತಿಳಿವಳಿಕೆ ಹೋಗಲಿ, ಮನುಷ್ಯತ್ವವೂ ಇಲ್ಲದಂತೇ, ನಿರ್ಭಾವುಕನಾಗಿ, ವಿಕಾರವಾದ ದೊಡ್ಡ ಧ್ವನಿಯಲ್ಲಿ ಮತ್ತೆ ಮತ್ತೆ ಬೊಬ್ಬಿರಿಯುತ್ತಿದ್ದ ಆ ರಿಪೋರ್ಟರ್ "ಇದನ್ನು ಕಾಣಿಸುತ್ತಿರುವುದು ನಾವೇ ಮೊದಲು... ಯಾರೋ ಒಬ್ಬರು ತಮ್ಮ ಮೊಬೈಲ್ ಕ್ಯಾಮರಾದಿಂದ ವಿಡೀಯೋ ಮಾಡಿ ಕಳುಹಿಸಿದ್ದಾರೆ..." ಎಂದೆಲ್ಲಾ ವದರುತ್ತಿರುವುದನ್ನು ನೋಡಿ ನಿಜಕ್ಕೂ ಮನುಷ್ಯನಲ್ಲ ಎಂದೆನಿಸಿತು. ಅಂತಹ ಒಂದು ದುರಂತದಲ್ಲೂ ಮಹಿಳೆ ಮೇಲಿನಿಂದ ಬೀಳುವಾಗ ರಕ್ಷಿಸಲು ಧಾವಿಸುವುದನ್ನು ಬಿಟ್ಟು ಮೊಬೈಲ್ ಕ್ಯಾಮಾರದಿಂದ ಶೂಟ್ ಮಾಡಿ ಇವರಿಗೆ ಕಳುಹಿಸಿ ಪುಣ್ಯ ಕಟ್ಟಿಕೊಂಡ ಆ ಮಹಾನುಭಾವರ ಇಂಟರ್‌ವ್ಯೂ ಕೂಡ ಮಾಡಲು ಅದೇ ಚಾನಲ್‌ನವರು ಟೈಮ್ ಸೆಟ್ ಮಾಡಿದ್ದರು! ನಾನು ಪದೇ ಪದೇ ಆ ಅಮಾನುಷ ದೃಶ್ಯವನ್ನು ಅದೇ ಚಾನಲ್‌ನಲ್ಲಿ ನೋಡಿ ಅವರ ಟಿ.ಆರ್.ಪಿ ಹೆಚ್ಚಳಕ್ಕೆ ಕಾರಣಳಾಗಿ, ಆ ಮೂಲಕ ಆ ಪಾಪದಲ್ಲಿ ನಾನೂ ಭಾಗೀಧಾರಳಾಗದಿರಲು ನಿರ್ಧರಿಸಿ, ಚಾನಲ್ ಬದಲಾಯಿಸಿಬಿಟ್ಟೆ. ಓರ್ವ ವೀಕ್ಷಕನನ್ನು ಅವರ ಟಿ.ಆರ್.ಪಿ ಇಂದ ಕಡಿಮೆಮಾಡಿದ ಅಲ್ಪ ಸಮಾಧಾನ ನನ್ನದಾಯಿತು ಅಷ್ಟೇ.

ಇಂದು ಒಂದು ಪತ್ರಿಕೆಯಲ್ಲಿ ಓರ್ವ ಪ್ರಸಿದ್ಧ ನಟನನ್ನೋ, ಇಲ್ಲಾ ಒಂದು ಪಕ್ಷದ ರಾಜಕಾರಣಿಯನ್ನೋ ಚೆನ್ನಾಗಿ ಬೈದು ಬರೆದರೆ, ಮರುದಿನ ಇನ್ನೊಂದು ಪತ್ರಿಕೆಯಲ್ಲಿ ಅದೇ ನಟ ಹಾಗೂ ರಾಜಕಾರಣಿಯನ್ನು ಹೊಗಳಿಯೋ ಇಲ್ಲಾ ಬೈದ ಪತ್ರಿಕೆಗೆ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ಕೊಡುವ ರೀತಿಯಲ್ಲೋ ಅವರ ಹೇಳಿಕೆ ಪ್ರಕಟವಾಗಿರುತ್ತದೆ. ಎರಡೂ ಪತ್ರಿಕೆಗಳು ತಮ್ಮ ತಮ್ಮ ಬೇಳೆ ಬೇಯಿಸಿಕೊಂಡಿರುತ್ತವೆ ಎನ್ನುವುದು ಮಾತ್ರ ಸತ್ಯ. ಉಳಿದದ್ದೆಲ್ಲಾ ಓದಿಗ ಮಹಾಶಯರಿಗೇ ಬಿಟ್ಟಿದ್ದು. ಜನಸಾಮಾನ್ಯರ ಪ್ರತಿನಿಧಿಯಾಗಬೇಕಾಗಿದ್ದ ಮಾಧ್ಯಮ ಅವರನ್ನಾಳುವ ಪಕ್ಷ, ವಿಪಕ್ಷಗಳ ಕೈಗೊಂಬೆಯಾಗಿರುವುದು ತುಂಬಾ ಖೇದಕರ ವಿಷಯ. ನಾನೇನೂ ಮಾಧ್ಯಮದವರೆಲ್ಲಾ ಸುದ್ದಿ ಸೃಷ್ಟಿಸುತ್ತಿರುವವರು ಎಂದು ಆರೋಪ ಮಾಡುತ್ತಿಲ್ಲ. ಆದರೆ ಕಲವೇ ಕೆಲವು ಮಾಧ್ಯಮದವರಿಂದಾಗಿ ಇಂದು ಈ ಕ್ಷೇತ್ರ ನಮ್ಮಿಂದ ಅಂದರೆ ಸಾಮಾನ್ಯ ಜನರಿಂದ ಬಹು ದೂರವಾಗುತ್ತಿದೆ... ಬಹುಪಾಲು ಆಗಿದೆ ಕೂಡ ಎಂದಷ್ಟೇ ಹೇಳುತ್ತಿದ್ದೇನೆ.

"ಇಲ್ಲಿ ಸುದ್ದಿ ಹುಟ್ಟುವುದಿಲ್ಲ.. ಸೃಷ್ಟಿಸಲಾಗುತ್ತದೆ" ಎನ್ನುವ ಆಘಾತಕಾರಿ ಸತ್ಯವನ್ನು ರಣ್‌ನಲ್ಲಿ ವರ್ಮಾ ಬಹು ಚೆನ್ನಾಗಿ ಕಾಣಿಸಿದ್ದಾರೆ. ಸುದ್ದಿ ಮಾಧ್ಯಮದೊಳಗಿನ ಹೊಲಸನ್ನು, ಕುರೂಪತೆಯನ್ನು ತೊಡೆದುಹಾಕಲು, ಆ ವ್ಯವಸ್ಥೆಯೊಳಗಿನ ಅವ್ಯವಹಾರಗಳನ್ನು ಬಯಲಿಗೆಳೆಯಲು ವರ್ಮಾ ಬಳಸಿಕೊಂಡ ಪಾತ್ರಗಳೂ ಅದೇ ಮಾಧ್ಯಮ ಜಗತ್ತಿನೊಳಗಿನ ವ್ಯಕ್ತಿಗಳೇ ಆಗಿದ್ದುದು ಮತ್ತೂ ವಿಶೇಷ. ಯಾವುದೇ ಒಂದು ಕ್ಷೇತ್ರದೊಳಗಿನ ಅವ್ಯವಸ್ಥೆಯನ್ನು, ಅನೀತಿಯನ್ನು ಸರಿಪಡಿಸಲು ಆ ಕ್ಷೇತ್ರದೊಳಗಿನ ಜನರಿಂದಲೂ ಸಾಧ್ಯ, ಅದಕ್ಕಾಗಿ ಬೇರೆಯವರ ಅವಲಂಬನೆ ಬೇಕಾಗಿಲ್ಲ, ಎನ್ನುವ ಉತ್ತಮ ಸಂದೇಶ ನೀಡಿದ್ದಾರೆ. ಅಂತೆಯೇ ಒಂದು ಕ್ಷೇತ್ರದೊಳಗೆ ದುಡಿಯುವ ಎಲ್ಲರೂ ಕೆಟ್ಟವರಲ್ಲ, ನಿಯತ್ತು, ನೈತಿಕತೆ, ಪ್ರಾಮಾಣಿಕತೆ ಹೊಂದಿರುವವರೂ ಇರುತ್ತಾರೆ ಎನ್ನುವುದನ್ನೂ ತೋರಿಸಿದ್ದಾರೆ. ಇನ್ನು ರಣ್ ಚಿತ್ರದ ನಟರ ಹಾಗೂ ಅವರ ನಟನೆಯ ಕುರಿತು ಹೇಳಬೇಕೆಂದರೆ.... ನಮ್ಮಲ್ಲಿ ಅಂದರೆ, ಕನ್ನಡದಲ್ಲಿ ಪ್ರತಿಭೆಗಳಿಲ್ಲ ಎನ್ನುವವರ ಬಾಯಿ ಮುಚ್ಚಿಸುವಂತೆ ನಟಿಸಿದ್ದಾರೆ ಸುದೀಪ್. ಅಮಿನಾಬ್ ಗೆ ಅಮಿತಾಬ್ ಸಾಟಿ ಎನ್ನುವಂತಿದೆ ಬಚ್ಚನ್ ಅವರ ನಟನೆ. ವಿಲಾಸ್ ರಾವ್‌ದೇಶ್‌ಮುಖ್ ಮಗ ಎನ್ನುವ ಐಡೆಂಟಿಟಿಯಿಂದ ಸಂಪೂರ್ಣ ಹೊರಬಂದು ಪರಿಪೂರ್ಣ ನಟನಾಗಿರುವುದಕ್ಕೆ ಸಾಕ್ಷಿ ನೀಡಿದ್ದಾರೆ ರಿತೇಶ್ ದೇಶ್‌ಮುಖ್. "ರಣ್‌ನಲ್ಲಿ" ಎಲ್ಲಾ ನಟರೂ ತಮಗೆ ದಕ್ಕಿದ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಚಿತ್ರದ ಕೊನೆಯಲ್ಲಿ ನಿರ್ದೇಶಕ ವರ್ಮಾ, ಚಿತ್ರದಲ್ಲಿ ನ್ಯೂಸ್‌ಚಾನಲ್ ಒಂದರ ಒಡೆಯನಾಗಿರುವ ವಿಜಯ್ ಹರ್ಷವರ್ಧನ್(ಅಮಿನಾಬ್ ಬಚ್ಚನ್) ಮೂಲಕ ಮಾಧ್ಯಮಕ್ಕೆ ಮಾಧ್ಯಮದವರಿಂದಾಗುತ್ತಿರುವ ಅನ್ಯಾಯವನ್ನು ಎತ್ತಿ ಹಿಡಿದು, ಸುಳ್ಳಿನ ಪರದೆಯೊಳಗೆ ಹುದುಗಿರುವ ಸತ್ಯವನ್ನು ಹೊರತಂದು, ಮಾಧ್ಯಮ ಜಗತ್ತಿಗೆ ನೈತಿಕತೆಯ ಪಾಠವನ್ನು ಹೇಳುವುದರ ಮೂಲಕ ಅರ್ಥವತ್ತಾದ ಅಂತ್ಯವನ್ನೂ ಕೊಟ್ಟಿದ್ದಾರೆ. ನಾನೇನೂ ವರ್ಮಾರ ದೊಡ್ಡ ಅಭಿಮಾನಿಯೂ ಅಲ್ಲ, ಅವರ ಎಲ್ಲಾ ಚಿತ್ರಗಳನ್ನೂ ನೋಡಿಲ್ಲ. ಆದರೆ ರಣ್ ಚಿತ್ರ ಬಹು ಮೆಚ್ಚುಗೆಯಾಯಿತು. ಚಿತ್ರಕಥೆಯೊಳಗಿನ ಆಶಯ ತುಂಬಾ ಚೆನ್ನಾಗಿದೆ. ಕಥೆಗಾರ ಸತ್ಯನೋ ಅಲ್ಲವೋ ಎನ್ನುವುದು ತಿಳಿಯದು. ನಿರ್ದೇಶಕನ ಸಾಚಾತನವನ್ನು ಅಳೆಯುವ ಬದಲು ಅವನ ನಿರ್ದೇಶನದೊಳಗಿನ ಪ್ರಾಮಾಣಿಕತೆಯನ್ನು ಮಾತ್ರ ನೋಡುವುದು ಉತ್ತಮ.

ಕೊನೆ ಕಹಳೆ : ಕಾಖಿ, ಖಾವಿ, ಖಾದಿ - ಈ ಮೂರರಿಂದ ಆದಷ್ಟು ದೂರವಿರಬೇಕೆಂದು ಹೆಚ್ಚಿನವರು ಹೇಳುತ್ತಾರೆ. ಅದು ಬಹುಮಟ್ಟಿಗೆ ನಿಜ ಕೂಡ. ಆದರೆ ಈಗ ಈ ಮೂರರೊಂದಿಗೆ ಮತ್ತೊಂದೂ ಸೇರುವಂತಿದೆ..... ಅದೇ "ಮಾಧ್ಯಮ"!!

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳೆಲ್ಲಾ ವೈಯಕ್ತಿಕವಾದವುಗಳು...)

-ತೇಜಸ್ವಿನಿ ಹೆಗಡೆ.