ಶುಕ್ರವಾರ, ಮಾರ್ಚ್ 11, 2022

ಭಕ್ತಿ: ಭವಸಾಗರ ಪಾರು ಮಾಡುವ ನೌಕೆ

             ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |

ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ ||

ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು, ಸಕಲ ಚೈತನ್ಯವನ್ನು ನೀಡಿ ರಕ್ಷಿಸುವವಳು ನೀನು. ಎಲ್ಲರ, ಎಲ್ಲಾ ರೀತಿಯ ದುಃಖವನ್ನು ನಿವಾರಿಸುವ ಹೇ ದೇವಿ, ನಾರಾಯಣಿ ನಿನಗೆ ನಮಸ್ಕಾರ.

ಮಾರ್ಕಾಂಡೇಯ ಪುರಾಣದಲ್ಲಿ ಬರುವ ದುರ್ಗಾಸಪ್ತಶತಿಯಲ್ಲಿ ಹನ್ನೊಂದನೇ ಅಧ್ಯಾಯದಲ್ಲಿ ನಾರಾಯಣಿಸ್ತುತಿಯು ಅತ್ಯಂತ ಪ್ರಸಿದ್ಧ. ಅದರೊಳಗೆ ಈ ಮೇಲಿನ ಶ್ಲೋಕವು ಅತ್ಯಂತ ಪ್ರಸಿದ್ಧ. ಶರಣಾಗತಿ ಎಂದರೆ ಸಂಪೂರ್ಣ ಬಾಗುವುದು. ಇಲ್ಲಿ ಬಾಗುವುದು ಎಂದರೆ ಶಾರೀರಿಕ ಮಾತ್ರವಲ್ಲ, ಮಾನಸಿಕವಾಗಿ ಒಂದಾಗುವುದು; ಸಮರ್ಪಿಸಿಕೊಳ್ಳುವುದು. ಇದೇ ಭಕ್ತಿಯ ನಿಜವಾದ ಅರ್ಥ!

ಭಕ್ತಿ ಎಂದರೆ ಭಜ್, ಹೊಂದುವುದು ಅಥವಾ ಸಮರ್ಪಣಾ ಭಾವ. ಭಕ್ತ ಎಂದರೆ ಹೊಂದಲ್ಪಟ್ಟವ ಅಥವಾ ಸಮರ್ಪಿಸಿಕೊಂಡವನು. ತಾಯಿ ಸದಾ ಮಕ್ಕಳ ಮೊರೆಗೆ, ಅಳುವಿನ ಕರೆಗೆ ಬಹು ಬೇಗ ಕರಗುವವಳು. ಅಂತೆಯೇ ಆಕೆಯನ್ನು ‘ಕ್ಷಿಪ್ರ ಪ್ರಸಾದಿನಿ’ ಎಂದು ಸ್ತುತಿಸಲಾಗುತ್ತದೆ. ಜಗನ್ಮಾತೆ ಮಾತ್ರವಲ್ಲ ಭಗವಂತನ ಸಾನ್ನಿಧ್ಯದ ಅರಿವನ್ನು, ಆ ಅನುಭೂತಿಯನ್ನೂ ಹೊಂದಲು ಒಳಗಿನ ಜೀವರಸ ಕಾಯಬೇಕು, ಕುದಿಯಬೇಕು, ಪಾಕಗಟ್ಟಿ ನಿವೇದನೆಯಾಗಬೇಕು. ಅಂತಹ ಪರಿಪಕ್ವಗೊಂಡ ಭಕ್ತರ ಆರ್ತನಾದವು, ಕರೆಯು ಭಗವಂತನನ್ನು ತಲುಪಲು ಇರುವ ಅತ್ಯಂತ ಪ್ರಬಲ ಸಾಧನವೇ ಭಕ್ತಿ’!

ಅಧ್ಯಾತ್ಮ ಚಿಂತಕರು, ವಿದ್ವಾಂಸರೂ ಆಗಿರುವ ಶ್ರೀಯುತ ಲಕ್ಷ್ಮೀಶ ತೋಳ್ಪಾಡಿಯವರು ಭಕ್ತಿಯನ್ನು ವಿಶ್ಲೇಷಿಸುತ್ತಾ ಹೀಗೆ ಹೇಳಿದ್ದಾರೆ “ಭಕ್ತಿ ಎಂದರೆ ಭಾವಜನ್ಯ, ಅನುಭವಜನ್ಯ ಮತ್ತು ಅನುಕರಣೀಯ. ನನ್ನ ಬಗ್ಗೆ ನನಗಿಂತ ಚೆನ್ನಾಗಿ ಅರಿತಿರುವ ಭಗವಂತನ ಬಳಿ ತೋಡಿಕೊಳ್ಳುವಾಗ ಹುಟ್ಟುವುದು ಭಕ್ತಿಯೆಂಬ ಭಾವದ್ರವ್ಯ.ಹೀಗೆ ಹೇಳುವುದರ ಮೂಲಕ ಅವರು ಭಕ್ತ-ಭಗವಂತನ ನಡುವೆ ದ್ವೈತ ಭಾವ ಬೇಕು ಎಂಬುದನ್ನು ಸೂಚಿಸುತ್ತಾರೆ. ಭಕ್ತಿಯಲ್ಲಿ ದ್ವೈತ (ಆತ್ಮ ಎಂದರೆ ನಾನು ಪರಮಾತ್ಮ ಎಂದರೆ ಭಗವಂತ ಇವಿರಿಬ್ಬರೂ ಬೇರೆ ಎಂಬ ಭಾವ) ಇದ್ದಾಗಲೇ ನನ್ನ ಒಳಗೆ ನನಗೆ ಗೊತ್ತಿಲ್ಲದೇ ನೀನಿದ್ದೀಯಲ್ಲಾ ಎನ್ನುವ ಆಶ್ಚರ್ಯ ಹೊಂದಬಹುದು ಎನ್ನುತ್ತಾರೆ ಶ್ರೀಯುತರು. ಬಹುಶಃ ಆರಂಭಿಕ ಹಂತದಲ್ಲಿಈ ರೀತಿಯ ಭಾವದಲ್ಲಿಯೇ ಸಾಗುತ್ತಾ ಹಂತಹಂತವಾಗಿ ಮೇಲೇರಿದಂತೇ ಏಕತ್ವಭಾವವು ಮೂಡುತ್ತಾ ಹೋಗಿ ಭಿನ್ನತೆ ಮಾಯವಾಗುವುದು.

ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ  ಜಗದ್ಗುರು ಶಂಕರಾಚಾರ್ಯರು ಭಕ್ತಿಯ ಮಹತ್ವವನ್ನು ಮತ್ತು ಆ ಪಥದಲ್ಲಿ ಸಾಗುವುದರ ಮೂಲಕ ಜನಸಾಮಾನ್ಯರೂ ಮೋಕ್ಷವನ್ನು ಹೊಂದಬಹುದಾದ ಮಾರ್ಗವನ್ನು ಬಹಳ ಮನಮುಟ್ಟುವಂತೆ ವಿವರಿಸುತ್ತಾರೆ

.

ಭಕ್ತಿಯ ಅಗತ್ಯ 

ವೇದಾಂತದಲ್ಲಿ, ಧರ್ಮ, ಅರ್ಥ, ಕಾಮ, ಮೋಕ್ಷ ಇವು ನಾಲ್ಕು ನಮ್ಮ ಜೀವನದ ಪ್ರಮುಖ ಗುರಿಗಳು (ಚತುರ್ವಿಧ ಪುರುಷಾರ್ಥಗಳು) ಎನ್ನಲಾಗಿದೆ.

ಧರ್ಮ ಎಂದರೆ ಧಾರಣೆ ಮಾಡುವುದು. ಜೀವನಧರ್ಮ, ಶರೀರಧರ್ಮ, ಮನೋಧರ್ಮ ಹೀಗೆ ಎಲ್ಲವೂ ಇದರಲ್ಲಿ ಬಂತು.

ಅರ್ಥ ಎಂದರೆ ಸಂಪತ್ತು. ಕಾಮ ಎಂದರೆ ಬಯಕೆ. ಸಂಪತ್ತು ಮತ್ತು ಬಯಕೆಗಳ ಪೂರೈಕೆಗೆ ಯಾವ ಧರ್ಮವನ್ನು ನಾವು ಧರಿಸುತ್ತೇವೆ ಎನ್ನುವುದು ಬಹು ಮುಖ್ಯ. ಇನ್ನು ಮೋಕ್ಷ ಇದು ಕೇವಲ ಜ್ಞಾನ ಮಾರ್ಗದಲ್ಲಿ ಸಾಗುವ ಯೋಗಿಗಳಿಗೆ ಲಭಿಸುವುದು ಎಂದು ಹೇಳಲಾಗಿದ್ದರೂ, ಜನ ಸಾಮಾನ್ಯರೂ ಕೂಡ ಸಾಂಸಾರಿಕ ಜೀವನದಲ್ಲಿದ್ದೂ ಮೋಕ್ಷ ಮಾರ್ಗದಲ್ಲಿ ಸಾಗಬಹುದು ಎಂದೂ ತೋರಿಸಲಾಗಿದೆ. ನಾವು ಮಾಡುವ ಪ್ರತಿ ಕರ್ಮವೂ ಆ ಭಗವಂತನಿಗೆ ಅರ್ಪಣೆ ಎನ್ನುವ ಮನೋಭಾವದಲ್ಲಿ ಸಾಗಿದರೆ ನಮ್ಮ ಚಿತ್ತಶುದ್ಧಿಯಾಗಿ ಆ ಮೂಲಕ ಜನಸಾಮಾನ್ಯರೂ ಮೋಕ್ಷದ ಪಥದಲ್ಲಿ ಸಾಗಬಹುದು ಎನ್ನುವುದಕ್ಕೆ ಹಲವಾರು ನಿದರ್ಶನಗಳು ಸಿಗುತ್ತವೆ. ಗೀತಾಭಾಷ್ಯದಲ್ಲೂ ಶಂಕರರು ಇದನ್ನು ಪ್ರತಿಪಾದಿಸಿದ್ದಾರೆ.

ಈ ರೀತಿ ಚಿತ್ತಶುದ್ಧಿಯಾಗಲು ನಮಗೆ ಮೊದಲಿಗೆ ಭಗವಂತನಲ್ಲಿ ನಂಬಿಕೆ ಇದ್ದಿರಬೇಕಾಗುತ್ತದೆ. ಆ ನಂಬಿಕೆಯೇ ಮುಂದಿನ ಹಂತದಲ್ಲಿ ಶ್ರದ್ಧೆಯಾಗಿ ರೂಪ ತಳೆದು, ಕೊನೆಗೆ ಅದು ತಾದಾತ್ಮ್ಯಭಾವವಾದ ಆತನೇ ನಾನು, ನಾನೇ ಆತ ಎನ್ನುವ ಭಕ್ತಿಯ ಪರಾಕಷ್ಠೆಗೆ ದಾರಿ ಮಾಡಿಕೊಡುತ್ತದೆ. ನಮ್ಮೊಳಗಿನ ನೋವು, ಸಂಕಟ, ಒದ್ದಾಟ, ತೊಳಲಾಟ - ಈ ಎಲ್ಲವನ್ನೂ ನಾವು ಭಗವಂತನಿಗೆ ಸಮರ್ಪಿಸುವ ಹಂಬಲ ಬರುವುದು ಭಕ್ತಿಯಲ್ಲಿಯೇ! ಹೀಗಾಗಿ ಭಕ್ತಿಯಲ್ಲಿ ಧಾರಣಾ ಸಾಮರ್ಥ್ಯ ಅಗಾಧ ಎನ್ನುತ್ತಾರೆ ವಿದ್ವಾಂಸರು.

ಇನ್ನೊಂದೆಡೆ ಶ್ರೀ ಮಧುಸೂದನ ಸರಸ್ವತಿಗಳು ಚತುರ್ವಿಧ ಪುರುಷಾರ್ಥಗಳಲ್ಲದೇ ಭಗವದ್ಭಕ್ತಿಯೂ ಬಹು ಮಹತ್ವದ ಪುರುಷಾರ್ಥ ಎಂದು ತಮ್ಮ ಶ್ರೀಮದ್ಭಗವದ್ಭಕ್ತಿರಸಾಯನಮ್ ಎಂಬ ಗ್ರಂಥದಲ್ಲಿ ಮಂಡಿಸಿದ್ದಾರೆ. ಆ ಗ್ರಂಥದಲ್ಲಿ ಅವರು ನಿಶ್ಚಲವಾದ ತತ್ತ್ವಜ್ಞಾನ ಮತ್ತು ಶ್ರದ್ಧಾಪೂರ್ವಕವಾದ, ದುಃಖವನ್ನು ಪರಿಹರಿಸಿ, ಸುಖವನ್ನು ನೀಡುವ ಭಗವದ್ಭಕ್ತಿಯೂ ಜೀವನದ ಗುರಿ ಎನ್ನುತ್ತಾರೆ.

ಭಕ್ತಿಯ ಮಹತ್ವ ಮತ್ತು ಅದರ ದಾರಿಯಲ್ಲಿ ಸಾಗುವವನಿಗೆ ಒಲಿಯುವ ಜ್ಞಾನ ಮತ್ತು ವೈರಾಗ್ಯಗಳು ಇವುಗಳ ಕುರಿತು ಸಮಗ್ರವಾಗಿ ಶ್ರೀಮದ್ಭಾಗವತ ಮಹಾಪುರಾಣದ ಆರಂಭದ ಮೊದಲ ಎರಡು ಅಧ್ಯಾಯಗಳಲ್ಲಿ ವಿವರಿಸಲಾಗಿದೆ.

ಅಲ್ಲಿ ನಾರದ ಮಹರ್ಷಿಗಳು ಪರೀಕ್ಷಿತ ಮಹಾರಾಜನು ನಿಸ್ಸಾರವಾಗಿರುವ, ಭ್ರಷ್ಟಗೊಂಡಿರುವ ಕಲಿಯುಗದ ಆರಂಭಕ್ಕೆ ಯಾಕಾಗಿ ಒಪ್ಪುಕೊಂಡನು ಎನ್ನುವುದನ್ನು ವಿವರಿಸುತ್ತಾರೆ. ಹರಿಕೀರ್ತನೆಯನ್ನು ಭಕ್ತಿಯಿಂದ ಮಾಡುವವರಿಗೆ, ಆಲಿಸುವವರಿಗೆ ಮೋಕ್ಷದ ದಾರಿಯು ಪ್ರಾಪ್ತಿಯಾಗುತ್ತದೆ ಎನ್ನುವ ಅತಿಶಯದ ಫಲದ ಅರಿವು ರಾಜನಿಗೆ ಆಗಿದ್ದರಿಂದಲೇ ಮಾನವ ಜೀವಿಗಳ ಕಲ್ಯಾಣಕ್ಕಾಗಿ ಕಲಿಗೆ ಪ್ರವೇಶವನ್ನಿತ್ತನು ಎಂದು ನಾರದರು ಹೇಳುತ್ತಾರೆ. ಚಿತ್ತಶುದ್ಧಿಗೆ ಹರಿ ಕೀರ್ತನೆಗಿಂತ ಮಿಗಿಲಾದ ಸಾಧನೆ ಬೇರೊಂದಿಲ್ಲ ಎಂದೂ ಭಾಗವತದಲ್ಲಿ ಹೇಳಲಾಗಿದೆ. 

ಹಾಗೆ ನೋಡಿದರೆ ಜ್ಞಾನಿಯಾದವನಿಗೂ ಸಾಯುಜ್ಯ (ಮೋಕ್ಷ) ಸುಲಭಕ್ಕೆ ಸಿಗದು, ಅನೇಕ ಜನ್ಮಗಳ ನಿರಂತರ ಪರಿಶ್ರಮದಿಂದ ಜ್ಞಾನಿಯಾದವನು ಮುಕ್ತಿ ಪಡೆಯುತ್ತಾನೆ ಎನ್ನಲಾಗಿದೆ. ಜ್ಞಾನಿಗೇ ಮುಕ್ತಿ ಹೊಂದುವುದು ಇಷ್ಟೊಂದು ಕಷ್ಟಸಾಧ್ಯವಾಗಿದ್ದಿರುವಾಗ, ಇನ್ನು ಸಾಮಾನ್ಯರಿಗೆ ಇದು ದುರ್ಲಭವಾದದ್ದು. ಹೀಗಾಗಿ ಜನಸಾಮಾನ್ಯರಿಗೆ ಭಕ್ತಿ ಮಾರ್ಗವನ್ನು ಶ್ರೀಕೃಷ್ಣ ಹೇಳಿದ್ದಾನೆ. ಭಕ್ತಿಮಾರ್ಗದಲ್ಲಿ ಸಮರ್ಪಣೆ, ಶರಣಾಗತ ಮನೋಭಾವ, ನಾನು ಎಂಬ ಅಹಂಕಾರದ ನಿರ್ಮೂಲನೆಯ ಮೂಲಕ ಚಿತ್ತ ನಿರ್ಮಲವಾಗಿ ಮೋಕ್ಷದ ಕಡೆ ಹೋಗಬಹುದು. ಹೀಗಾಗಿ ಅನೇಕರು ಭಕ್ತಿಮಾರ್ಗವೇ ಪ್ರಶಸ್ತ ಎನ್ನುತ್ತಾರೆ. ಈ ರೀತಿ ಉಪಾಸನಾ ಮಾರ್ಗವಾದ ಭಕ್ತಿ ಮಾರ್ಗದಲ್ಲಿ ಒಟ್ಟೂ ನವವಿಧಗಳಿವೆ ಎಂದು ಪ್ರಹ್ಲಾದನು ಒಂದು ಸಂದರ್ಭದಲ್ಲಿ ತನ್ನ ತಂದೆ ಹಿರಣ್ಯಕಶಿಪುವಿಗೆ ಹೇಳಿದ್ದಾನೆ.

ಈ ನವವಿಧದ ಭಕ್ತಿಗಳನ್ನು ಉದಾಹರಣಯ ಸಹಿತವಾಗಿ ತಿಳಿದುಕೊಳ್ಳೋಣ.

ಭಕ್ತಿಯಲ್ಲಿನ ವಿಧಗಳು

1. ಶ್ರವಣ -      ಭಗವಂತನ ಮಹಿಮೆಯನ್ನು ಹಾಡಿ ಹೊಗಳುವ ಕೀರ್ತನೆಗಳನ್ನು ಕೇಳುತ್ತಾ ಅದರಲ್ಲೇ ಮುಳುಗಿ ಭಕ್ತಿಪರವಶವಾಗುವುದು. ಉದಾಹರಣೆಗೆ : ಕಲಿಯುಗದ ಆರಂಭದಲ್ಲಿ ಕಾಲನೆಂಬ ಸರ್ಪದ ಕಡಿತಕ್ಕೆ ಒಳಗಾಗಿ ಅಂತ್ಯಕಾಣುವೆನೆಂದು ಅರಿತ ರಾಜಾ ಪರೀಕ್ಷಿತನು ವ್ಯಾಸರ ಪುತ್ರನಾಗಿದ್ದ ಶ್ರೀಶುಕಮಹಾಮುನಿಗಳಿಂದ ಶ್ರೀಮದ್ಭಾಗವತದ ಕಥಾನಕವನ್ನು ಕೇಳುತ್ತಾ ಕೊನೆಯಲ್ಲಿ ಮೋಕ್ಷ ಹೊಂದುವನು.

2.  ಕೀರ್ತನೆ - ಭಗವಂತನ ಅವತಾರಗಳನ್ನು, ಮಹಿಮೆಯನ್ನು ಅನುದಿನ ಹಾಡುತ್ತಾ ಹೋಗುವುದು. ನಾರದರು ಇದಕ್ಕೆ ಅತ್ಯುತ್ತಮ ಉದಾಹರಣೆ. 

3.  ಸ್ಮರಣ - ಅನವರತ, ಏಕಾಗ್ರಚಿತ್ತದಿಂದ ವಿಷ್ಣುನಾಮದ ಸ್ಮರಣೆಯಲ್ಲೂ ಉತ್ಕಟ ಭಕ್ತಿಭಾವವನ್ನು ಕಾಣಬಹುದು. ಪ್ರಹ್ಲಾದನು ತನ್ನನ್ನು ವಧೆ ಮಾಡಲು ಬಂದ ಸ್ವಂತ ಅಪ್ಪ ಹಿರಣ್ಯಕಶಿಪುವಿನಿಂದ ಪಾರಾಗಲು ಹರಿನಾಮ ಸ್ಮರಣೆಯನ್ನು ಮಾಡುತ್ತಾನೆ. ಆಗ ನರಸಿಂಹನ ಅವತಾರದಲ್ಲಿ ಪ್ರಕಟಗೊಂಡ ವಿಷ್ಣುವು ಅಸುರ ಹಿರಣ್ಯಕಶಿಪುವನ್ನು ಸಂಹಾರ ಮಾಡುತ್ತಾನೆ. ಅದೇ ರೀತಿ ಗಜೇಂದ್ರಮೋಕ್ಷ ಕಥಾನಕವೂ ಇದಕ್ಕೆ ಬಹಳ ಉತ್ತಮ ಉದಾಹರಣೆಯಾಗುವುದು.

4.  ಪಾದಸೇವನ - ಈ ಭಕ್ತಿಗೆ ಅತ್ಯುತ್ತಮ ಉದಾಹರಣೆಯನ್ನು ನಾವು ರಾಮಾಯಣದಲ್ಲಿ ಕಾಣುತ್ತೇವೆ. ಪಟ್ಟವೇರಬೇಕಿದ್ದ ಶ್ರೀರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಂದಿಗೆ ವನವಾಸಕ್ಕೆ ಹೊರಡಲು, ಮತ್ತೋರ್ವ ಸಹೋದರ ಭರತನು ತನ್ನ ಪ್ರೀತಿಯ ಅಣ್ಣ ರಾಮನ ಪಾದುಕೆಗಳನ್ನೇ ಸಿಂಹಾಸನದಲ್ಲಿ ಇಟ್ಟುಕೊಂಡು, ಪೂಜಿಸುತ್ತಾ, ರಾಜ್ಯಾಭಾರಮಾಡಿದ್ದನು. ಇದು ‘ಭರತನ ಭಕ್ತಿ’ ಎಂದೇ ಪ್ರಸಿದ್ಧವಾಯಿತು.

5.  ಅರ್ಚನೆ - ಭೂಮಿಯನ್ನೇ ಪುತ್ರಿಯೆಂದು ಸ್ವೀಕರಿಸಿದ ಪೃಥುಮಹಾರಾಜನು ಯಾಗ-ಯಜ್ಞಾದಿಗಳಿಂದ ಅರ್ಚಿಸಲು ಅವನ ಆ ಭಕ್ತಿಗೆ ಒಲಿದ ಶ್ರೀಹರಿಯು ಆತನಿಗೆ ದರ್ಶನ ನೀಡಿ ಉದ್ಧರಿಸುತ್ತಾನೆ.

 6. ಅಭಿವಂದನೆ - ಭಗವಂತಮ ಸಾಮೀಪ್ಯಕ್ಕೆ ತೆರಳಿ ವಂದಿಸುವುದು. ಅಕ್ರೂರ ಕಂಸನ ಆಸ್ಥಾನದಲ್ಲಿ ಮಂತ್ರಿಯಾಗಿದ್ದವನು. ಆದರೆ ಆತ ಕೃಷ್ಣನ ಪರಮ ಭಕ್ತನಾಗಿದ್ದ. ಕಪಟ ಸಂಧಾನಕ್ಕಾಗಿ ಕಂಸನು ಅಕ್ರೂರನನ್ನು ಪುಸಲಾಯಿಸಿ ಕೃಷ್ಣನ ಬಳಿಗೆ ಕಳಿಸುತ್ತಾನೆ. ಆದರೆ ಅಕ್ರೂರನ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣ ಸಾಯುಜ್ಯ ನೀಡುತ್ತಾನೆ.

7.  ದಾಸ್ಯ - ಶ್ರೀರಾಮನ ದಾಸಾನುದಾಸ ಎಂದು ಅವನ ಸೇವೆಗೈದ ಹನುಮಂತನ ಭಾವವು ಈ ಭಕ್ತಿಯ ಪ್ರತೀಕ. 

8. ಸಖ್ಯ - ಇದು ಭಕ್ತ ಮತ್ತು ಭಗವಂತನ ನಡುವಿನ ಬಂಧ. ಪರಮಾತ್ಮನೊಡನೆ ಬೆಸೆಯುವ ಗೆಳೆತನದ ನಿರ್ವ್ಯಾಜ, ನಿಸ್ವಾರ್ಥ ಭಾವದಲ್ಲೂ ಭಕ್ತಿಯಿದೆ ಎನ್ನಲಾಗಿದೆ. ಉದಾಹರಣೆಗೆ:  ವಿಭೀಷಣ ಮತ್ತು ಶ್ರೀರಾಮ, ಅರ್ಜುನ ಮತ್ತು ಶ್ರೀಕೃಷ್ಣ, ಅಕ್ಕಮಹಾದೇವಿ ಮತ್ತು ಮಲ್ಲಿಕಾರ್ಜುನ (ಸತಿ-ಪತಿ ಭಾವದ ಸಖ್ಯ).

9. ಆತ್ಮನಿವೇದನೆ- ತನ್ನನ್ನೇ ತಾನು ಸಂಪೂರ್ಣ ಸಮರ್ಪಿಸಿಕೊಳ್ಳುವುದು. ಉದಾಹರಣೆಗೆ: ಬಲಿಚಕ್ರವರ್ತಿ. ಅಸುರರ ಪ್ರಬಲ, ಪ್ರಮುಖ ರಾಜನಾಗಿದ್ದ ಬಲಿಯು, ಯಜ್ಞನದ ಸಮಯದಲ್ಲಿ ದಾನವನ್ನು ಪಡೆಯಲು ವಟುವಿನ ವೇಷ ಧರಿಸಿ ಬರುವ ವಿಷ್ಣುವಿಗೆ ತನ್ನದೆಲ್ಲವನ್ನೂ, ಕೊನೆಗೆ ತನ್ನನ್ನೂ ಸಮರ್ಪಣಾಭಾವದಿಂದ ಧಾರೆಯೆರೆದು ಕೊಟ್ಟು ಮೋಕ್ಷವನ್ನು ಹೊಂದುವನು.

ಆತ್ಮನಿವೇದನೆಯ ಭಕ್ತಿಯಲ್ಲೂ ಎರಡು ಹಂತಗಳವೆ:-

ಕಪಿಕಿಶೋರ ನ್ಯಾಯ:- ಉದಾ: ಕೋತಿ ಮತ್ತು ಅದರ ಮರಿ.  ಕೋತಿ ತನ್ನ ಕಂದಮ್ಮನನ್ನು ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯುವಾಗ ಕೋತಿ ಮರಿಯೂ ತನ್ನ ತಾಯಿಯನ್ನು ಗಟ್ಟಿಯಾಗಿ ಅಪ್ಪಿಕೊಂಡಿರುತ್ತದೆ. ಅದೇ ರೀತಿಯೇ ಭಕ್ತನು ಭಗವಂತನನ್ನು ಆಶ್ರಯಿಸಿರುತ್ತಾನೆ. ಅಂದರೆ ಇಲ್ಲಿ ಭಕ್ತನು ಭಗವಂತನನ್ನು ನಂಬಿ ಆಶ್ರಯಿಸಿದ್ದರೂ, ತನ್ನ ಅಸ್ತಿತ್ವದ ಬಗ್ಗೆಯೂ ಪ್ರಜ್ಞೆ ಉಳಿದುಕೊಂಡುಬಿಡುವುದರಿಂದ, ಮರಿಯು ತನ್ನ ತಾಯಿಯನ್ನು ಅಪ್ಪಿಕೊಂಡಿರುವಂತೇ ನೆಚ್ಚಿಕೊಂಡಿರುತ್ತಾನೆ.

ಆದರೆ ಆತ್ಮನಿವೇದನೆಯ ಪರಮೋಚ್ಚಸ್ಥಿತಿ ಮಾರ್ಜಾಲಕಿಶೋರ ನ್ಯಾಯದಲ್ಲಿ ಬರುತ್ತದೆ. ಉದಾಹರಣೆಗೆ : ಬೆಕ್ಕು ಮತ್ತು ಅದರ ಮರಿ.

 ಇಲ್ಲಿ ಬೆಕ್ಕು ತನ್ನ ಮರಿಯನ್ನು ಕತ್ತಿನ ಹಿಂಭಾಗದಲ್ಲಿ ಹಿಡಿದು ಎತ್ತಿಕೊಂಡು ಹೋಗುತ್ತದೆ. ಇಲ್ಲಿ ಮರಿಗೆ ಸ್ವಾತಂತ್ರ್ಯ ಇಲ್ಲ. ಅದು ಸಂಪೂರ್ಣ ತಾಯಿಯನ್ನಾಶ್ರಯಿಸಿರುತ್ತದೆ. ತಾಯಿ ಬೆಕ್ಕೇ ತನ್ನ ಮಗುವನ್ನು ಅದಕ್ಕೇನೂ ನೋವಾಗದಂತೇ ಎತ್ತಿಕೊಂಡು ಹೋಗುತ್ತದೆ. ಹಾಗೆ ನೋಡದರೆ ವಸ್ತ್ರಾಪಹರಣದಲ್ಲಿ ದ್ರೌಪದಿಯು ತನ್ನ ಅಸ್ತಿತ್ವದ ಪ್ರಜ್ಞೆಯನ್ನೂ ಕಳೆದುಕೊಂಡು ಸಂಪೂರ್ಣ ಶ್ರೀಕೃಷ್ಣನಿಗೆ ಶರಣಾದ ಮೇಲೆಯೇ ಆತ ಅವಳ ಸಹಾಯಕ್ಕೆ ಧಾವಿಸಿ ಬಂದಿದ್ದು.

ಭಗವದ್ಗೀತೆಯಲ್ಲಿ ‘ಚತುರ್ವಿಧಾ ಭಜಂತೇ ಮಾಂ....’ - ಎಂದು ನಾಲ್ಕು ವಿಧದ ಭಕ್ತರನ್ನು ಉಲ್ಲೇಖಿಸಲಾಗಿದೆ:-

1. ಆರ್ತ - ನನಗೆ ಬಹಳ ಸಂಕಷ್ಟವಿದೆ ಪರಿಹರಿಸು, ಇಂಥದ್ದನ್ನು ನೀಡು ಎಂದು ಬೇಡುವುದು.

2. ಜಿಜ್ಞಾಸು - ಭಗವತ್ ತತ್ತ್ವ ಎಂದರೇನು ಎಂಬುದನ್ನು ಅರಿಯಲು ಇಚ್ಛಿಸುವ ಭಕ್ತ.

3. ಅರ್ಥಾರ್ಥಿ- ಐಶ್ವರ್ಯವನ್ನು ಬೇಡುವವನು. ಇದ್ದಷ್ಟು ಸಾಲದೇ ತನಗೆ ಇನ್ನಷ್ಟು ಸಂಪತ್ತು ಕೊಡು ಎಂದು ಮೊರೆಯಿಡುವವನು.

4. ಜ್ಞಾನಿ –  ಸಂಪೂರ್ಣ ಶರಣಾಗತ ಭಾವದಲ್ಲಿರುವವನು. ಇವನಿಗೆ ಯಾವ ಕಾಮನೆಗಳೂ ಇರುವುದಿಲ್ಲ. ಇಲ್ಲಿ ಭಕ್ತನು ಅಂತರ್ಮುಖಿಯಾಗಿ ತನ್ನ ಜೀವನ ಸಾಗಿಸುತ್ತಿರುತ್ತಾನೆ.

ಮೊದಲನೆಯವ ಅತಿ ಕಷ್ಟದಲ್ಲಿರುವುದರಿಂದ, ತನ್ನನ್ನು ಪಾರು ಮಾಡು ಎಂದು ಪ್ರಾರ್ಥಿಸಿದರೆ, ಮೂರನೆಯವನು ಸಾಕಷ್ಟಿದ್ದರೂ ಮತ್ತಷ್ಟು ಬೇಕೆಂದು ಬೇಡುವನು. ತನಗೆ ಇನ್ನಷ್ಟು ದೊರಕಿದರೆ ಅದರಲ್ಲಿ ಅಷ್ಟು ಪಾಲನ್ನು ಕೊಡುವೆನು ಎಂಬ ವ್ಯಾಪಾರಕ್ಕೆ ಇಳಿಯುವವನು. ಅರ್ಥಕ್ಕೆ ಆಶ್ರಯವಾದಂತಹ ಹರಕೆಗಳೆಲ್ಲ ಮೂರನೇ ವರ್ಗಕ್ಕೇ ಬರುತ್ತವೆ. ಮನಶ್ಶಾಂತಿ, ನೆಮ್ಮದಿಯ ಪ್ರಾರ್ಥನೆಗಳೆಲ್ಲ ಮೊದಲ ವರ್ಗಕ್ಕೆ ಬರುವವು.

 

ದಾಸರ ಭಕ್ತಿಪಂಥ

ನವ ವಿಧದ ಭಕ್ತಿಗಳಲ್ಲಿ ಬಹಳ ಆರ್ದ್ರವಾಗಿರುವ ಹಲವು ಭಾವಗಳನ್ನು ಸಮ್ಮಿಳಿಸಿಕೊಂಡಿರುವ ದಾಸ್ಯ ಭಕ್ತಿಯಲ್ಲಿ ಪ್ರಮುಖವಾಗಿ ನಾವು ಕಾಣುವುದು ಕನಕ ದಾಸರು, ಪುರಂದರ ದಾಸರು, ಮೀರಾಬಾಯಿ - ಮುಂತಾದ ಹರಿಭಕ್ತರನ್ನು.  ದಾಸರೆಲ್ಲ ತಮ್ಮ ಅನನ್ಯ ಕಾವ್ಯ ಸುಧೆಯ ಮೂಲಕ, ಕೀರ್ತನೆಗಳ ಮೂಲಕ ಭಕ್ತಿಪಂಥದ ವಿಶಿಷ್ಟ ದಾರಿಯನ್ನೇ ನಮಗೆ ತೆರೆದು ತೋರಿಸಿದವರು. ಹಾಗೆಂದು ಅವರು ತಮ್ಮ ಕೀರ್ತನೆ ಅಥವಾ ಕಾವುಗಳಲ್ಲಿ ಎಲ್ಲಿಯೂ ನೇರವಾಗಿ ತಮ್ಮದು ಭಕ್ತಿಭಾವ ಎಂದು ಹೇಳಿಕೊಂಡಿಲ್ಲ. ಪರಮಾತ್ಮನ ಪ್ರತಿ ತಮ್ಮ ಉತ್ಕಟ ಭಾವವನ್ನಷ್ಟೇ ಹಾಡಿನ ಮೂಲಕ ಅಭಿವ್ಯಕ್ತಿಸುತ್ತಾ ಸಾಗಿದವರು. ಹೀಗಾಗಿ  ಅವರ  ಕಾವ್ಯಗಳಲ್ಲಿ ಭಕ್ತಿರಸದ ಮಹಾಪೂರವೇ ಹರಿದಿರುವುದನ್ನು ಕಾಣಬಹುದು.

ದಾಸರ ಕಾವ್ಯಗಳಲ್ಲಿ ಉತ್ಕಟ ಶರಣಾಗತಿಯ ದಾಸ್ಯಭಾವ ಮಾತ್ರವಲ್ಲ, ಅನೇಕ ವಿಶಿಷ್ಟ ಭಕ್ತಿಭಾವಗಳನ್ನು ನಾವು ಗಮನಿಸಬಹುದು. ಕಾತುರತೆ, ನಿವೇದನೆ, ಹಳಹಳಿಕೆ, ತೊಳಲಾಟ, ಅಸಹಾಯಕತೆ, ಆತುರ, ಆಸೆ – ಹೀಗೆ ಈ ಎಲ್ಲಾ ಭಾವಗಳೂ ಏಕಮಾರ್ಗದಲ್ಲಿಯೇ ಅಂದರೆ ಆ ಭಗವಂತನ ಸಾನ್ನಿಧ್ಯವನ್ನು ತಲುಪುವ, ಹೊಂದು ದಾರಿಯಲ್ಲೇ ರಭಸದಿಂದ ಸಾಗುತ್ತಿರುತ್ತವೆ.

ಏಸು ಜನ್ಮ ಬಂದರೇನು

ದಾಸನಲ್ಲವೇನೊ ನಿನ್ನ

ಘಾಸಿ ಮಾಡದಿರೋ ಎನ್ನ ವಾಸುದೇವನೆ |

(ಕನಕದಾಸರ, `ಈಶ ನಿನ್ನ ಸ್ಮರಣ ಭಜನೆ ಆಸೆಯಿಂದ ಮಾಡುವೆನು…’ ಕೀರ್ತನೆಯಿಂದ)

**

ಕಲ್ಲ ಕರಗಿಸಬಹುದು , ಹುರಿಗಡಲೆಯೊಳು ಅದರ

ತೈಲವನು ತೆಗೆದಾದರುಣಲುಬಹುದು

ಬಲ್ಲಿದವರ ಮನಸು ಮೆಚ್ಚಿಸಲರಿಯೆನೈ

ಹಲ್ಲು ಕಿರಿಯುತೆ ಹಂಬಲಿಸಿ ಬಾಯಿಬಿಡುತ || (ಪುರದಂರದಾಸರ, `ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು…’ ಕೀರ್ತನೆಯಿಂದ).

ಹೀಗೆ, ಅವರದ್ದು ಸಂಪೂರ್ಣ ಸಮರ್ಪಣಾಭಾವ. ಅಲ್ಲದೇ, ಭಗವಂತನೊಡನೆ ತಕರಾರು ಮಾಡುವ, ಮುನಿಸು ತೋರುವ, ಪ್ರಶ್ನಿಸುವ – ಹೀಗೆ ಹುಂಬತನವನ್ನೂ, ಸಲಿಗೆಯನ್ನೂ ಪ್ರಕಟಿಸುವ, ತನ್ನೊಳಗಿನ ವಿಷಾದವನ್ನು ತೋಡಿಕೊಳ್ಳುವ ಅನನ್ಯ ಭಕ್ತಿಭಾವವನ್ನೂ ಕಾಣಬಹುದು.

ನೀನ್ಯಾಕೋ ನಿನ್ನ ಹಂಗ್ಯಾಕೋ

ನಿನ್ನ ನಾಮದ ಬಲವೊಂದಿದ್ದರೆ ಸಾಕೋ |

**

ಕರುಣಾಕರ ನೀನೆಂಬುವುದೆತಕೊ

ಭರವಸೆ ಇಲ್ಲೆನಗೆ |

(ಪರಂದರದಾಸರ ಕೀರ್ತನೆಗಳು)

ಭಕ್ತಿಯ ಮಹತ್ವ:

ಶ್ರೀಮದ್ಭಾಗವತದಲ್ಲಿ ಭಕ್ತಿಯಲ್ಲಿ ಸ್ತ್ರೀತ್ವವನ್ನು ಗುರುತಿಸಿ, ಆಕೆಗೆ ಜ್ಞಾನ ಮತ್ತು ವೈರಾಗ್ಯವನ್ನು ಭಕ್ತಿಯ ಮಕ್ಕಳು ಎಂದು ಉಲ್ಲೇಖಿಸಲಾಗಿದೆ. ಮುಂದೆ ಅಲ್ಲಿ ನಾರದರು ಕಲಿಯುಗದ ಪ್ರಹಾರಕ್ಕೆ ಬಳಲಿ ದುಃಖಿಸುತ್ತಿರುವ ಭಕ್ತಿಗೆ ಸಮಾಧಾನಿಸುತ್ತಾ, ಆಕೆಗೆ ಅವಳದೇ ಮಹತ್ವವನ್ನು ವಿವರಿಸುತ್ತಾರೆ:

ಈ ಕಲಿಯುಗದಲ್ಲಿ ನಿನ್ನಿಂದ (ಭಕ್ತಿಯಿಂದ) ಯುಕ್ತರಾದ ಜೀವಿಗಳು ಪಾಪಿಗಳಾಗಿದ್ದರೂ ತಡವದೆ ಭಗವಾನ್ ಶ್ರೀಕೃಷ್ಣನ ಅಭಯಧಾಮವನ್ನು ಪಡೆದುಕೊಳ್ಳುವರು, ಹೃದಯದಲ್ಲಿ ಭಕ್ತಿಯು ವಾಸಿಸುವವರನ್ನು ಪ್ರೇತ, ಪಿಶಾಚ, ರಾಕ್ಷಸ, ದೈತ್ಯ ಮೊದಲಾದವರು ಮುಟ್ಟಲೂ ಕೂಡ ಸಮರ್ಥರಾಗಲಾರರುಎಂದು ನಾನಾ ರೀತಿಯಲ್ಲಿ ಭಕ್ತಿಯ ಔನ್ನತ್ಯವನ್ನು ವಿವರಿಸುತ್ತಾರೆ.

 ಸ್ವಾಮಿ ವಿವೇಕಾನಂದರು ತಮ್ಮ ‘ಭಕ್ತಿ-ಯೋಗ’ದ ಕರಿತು ಹೇಳುವಾಗ ‘ನಾರದೀಯಭಕ್ತಿಸೂತ್ರ’ದಲ್ಲಿ ಉಲ್ಲೇಖಿತವಾಗಿರುವ ಭಕ್ತಿಯ ಮಹತ್ವವನ್ನು ಹೀಗೆ ವಿವರಿಸಿದ್ದಾರೆ- "ಭಕ್ತನಾದವನಿಗೆ ದೇವರಲ್ಲಿರುವುದು ಗಾಢವಾದ ಭಕ್ತಿ. ಈ ಭಕ್ತಿಭಾವವನ್ನು ಹೊಂದಿದ ವ್ಯಕ್ತಿಯು ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸುವವ, ಯಾರನ್ನೂ, ಯಾವುದನ್ನೂ ದ್ವೇಷಿಸಲಾರ, ಆತ ಸಂಪೂರ್ಣ ತೃಪ್ತಿಯನ್ನು ಹೊಂದಿದವನು. ಈ ಪ್ರೀತಿಯು ಎಲ್ಲಾ ಲೌಕಿಕ ಆಸೆ-ಆಕಾಂಕ್ಷೆಗಳನ್ನೂ ಮೀರಿದ್ದು. ಯಾವಾಗ ಲೌಕಿಕ ಆಶಯಗಳು ಕೊನೆಗೊಳ್ಳುತ್ತವೆಯೋ, ಆಗಲೇ ಈ ದೈವಿಕ ಪ್ರೀತಿಯು ಆರಂಭವಾಗುವುದು."  ಇದರ ಜೊತೆಗೇ ವಿವೇಕಾನಂದರು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವ ಒಂದು ಎಚ್ಚರಿಕೆಯನ್ನೂ ಕೊಡುತ್ತಾರೆ! "ಭಕ್ತಿಯು ಭಗವಂತನ ಕಡೆಗೆ ಸಾಗಲು ಇರುವ ಅತ್ಯಂತ ಸಹಜ ಹಾಗೂ ಸುಲಭ ಮಾರ್ಗವಾಗಿದ್ದರೂ ಸಹ, ಇದು ಅನೇಕ ಸಲ ಕೆಳಸ್ತರದಲ್ಲಿ ಅಸಹ್ಯಕರವಾದ ಮತಾಂಧತೆಯೆ ತೆಕ್ಕೆಗೆ ಸಿಲುಕಿ ಅಪಾಯಕಾರಿಯೂ ಆಗಿಬಿಡುತ್ತದೆ" ಎಂದು ಅದರ ಮತ್ತೊಂದು ಮುಖವನ್ನೂ ತೋರಿದ್ದಾರೆ! ಹೀಗಾಗಿಬಿಟ್ಟಾಗ ತಾನು ಆರಾಧಿಸುವ ರೀತಿ ಮಾತ್ರ ಸರಿ, ತಾನು ಪೂಜಿಸುವ ದೈವ ಮಾತ್ರ ಸತ್ಯ ಎನ್ನುವ ಮೂಢತೆಯಲ್ಲಿ ಸಿಲುಕಿದ ದುರ್ಬಲ ಮನಸ್ಸಿನ ವ್ಯಕ್ತಿ ಇತರೆಲ್ಲರ ಆಚರಣೆ, ಸಂಪ್ರದಾಯ, ದೇವರನ್ನು ತಿರಸ್ಕರಿಸಲು, ದ್ವೇಷಿಸಲು ಆರಂಭಿಸುತ್ತಾನೆ. ಆಗ ಭಕ್ತಿಯಿಂದ ಅರಳುವ ಪರಿಪೂರ್ಣ ತೃಪ್ತಭಾವ, ಅನನ್ಯ ಪ್ರೀತಿಯ ಅನುಭೂತಿಯನ್ನು ಹೊಂದಲು ಅವರಿಗೆ ಸಾಧ್ಯವಾಗುವುದಿಲ್ಲ. ನಿಜವಾದ ಭಕ್ತಿಯು ಮೂಢತೆಯನ್ನು ಅಂತ್ಯವಾಗಿಸುತ್ತದೆ.

 ಭಕ್ತಿಗೆ ಇಂಥದ್ದೇ ಎನ್ನುವ ಯಾವುದೇ ಒಂದು ವ್ಯಾಖ್ಯಾನವಿಲ್ಲ. ಅದಕ್ಕೆ ಅದರದ್ದೇ ಆದ ಸಿದ್ಧಾಂತವಾಗಲೀ, ನಿಯಮ ಅಥವಾ ತೀರ್ಮಾನಗಳಿಲ್ಲ. ಅದೊಂದು ಉತ್ಕಟ ಭಾವಾಭಿವ್ಯಕ್ತಿ. ತಾದಾತ್ಮ್ಯತೆಯನ್ನು ಹೊಂದು ಪರಿ. ಈ ಅನುಭೂತಿಯನ್ನು ಆಸ್ವಾದಿಸಬಹುದು, ಆನಂದಿಸಬಹುದೇ ವಿನಃ ಅಕ್ಷರಗಳಲ್ಲಿ ಹಿಡಿದಿಡಲಾಗದು. ವಿವರಿಸಲು ಸಾಧ್ಯವಾಗುವಂಥದ್ದು ಅನುಭವವಾಗಿಬಿಡುತ್ತದೆ. ಅನುಭೂತಿಯನ್ನು ದಾಟಿಸಲು ಹೋದರೆ ಅದು ತೆಳುವಾಗಿಬಿಡುವುದು. ಮತ್ತೊಬ್ಬರ ಅರಿವಿಗೆ ದಕ್ಕದು. ಆದರೆ ಭಕ್ತಿಯ ಪರಿಯನ್ನು, ವಿಧಗಳನ್ನು, ಪರಿಣಾಮಗಳನ್ನು ಮತ್ತು ಆ ಮೂಲಕ ಪಡೆಯಬಹುದಾದಂತಹ ಅಪರಿಮಿತ ಫಲವನ್ನು ವಿವರಿಸಬಹುದಷ್ಟೇ. ಹೀಗಾಗಿ ಯಾರೆಷ್ಟೇ ವಿಧಗಳಲ್ಲಿ ವಿವರಿಸಿದರೂ ಕಡೆಗೆ ಭಕುತಿಯು ಅವರವರ ಭಾವಕ್ಕೆ ಬಿಟ್ಟಿದ್ದಾಗಿದೆ. ಭಕ್ತಿಯನ್ನು ಸಾಬೀತು ಮಾಡುವುದು ಕಠಿಣ. ಹಾಗೆಂದ ಮಾತ್ರಕ್ಕೆ ಅದು ಸುಳ್ಳು ಎಂದಾಗದು. ಸತ್ಯ, ಅನುಭವಕ್ಕಷ್ಟೇ ವೇದ್ಯ; ದು ಭಕ್ತಿಯ ನಿಜವಾದ ಸೌಂದರ್ಯ.

 (2021ರ ಹೊಸದಿಗಂತ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ ಲೇಖನ.)

**********

~ತೇಜಸ್ವಿನಿ ಹೆಗಡೆ.