ಭಾನುವಾರ, ಆಗಸ್ಟ್ 9, 2009

ಹಿನ್ನೀರಿನ ಜೊತೆಗೆ ಮುನ್ನೀರಿನತ್ತ ಪಯಣ....

"ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ -"
ನಿಜ.. ಈ ಮನಸ್ಸೆಂಬುದು ಆ ಶರಧಿಗೇ ಸಮ. ಇದರಾಳವ ಅಳೆಯಬಲ್ಲವರು ಯಾರೂ ಇಲ್ಲ. ಬರೆಯಲಾಗದು, ಬರೆಯಲಾರೆ, ಬರೆಯಬಾರದೆಂದು ಬಯಸಿ ಬಯಸಿ, ಮನಸ ರಮಿಸಿ ಸಾಕಾಯಿತು. ಜಟಿಲಕಾನನದ ಕುಟಿಲ ಪಥದೊಳು ಹರಿವ ತೊರೆ ನಾನಾಗಿರುವಾಗ ಮನಸೆಂಬ ಸಾಗರವನ್ನು ಹೇಗೆ ತಾನೇ ಮೀರಬಲ್ಲೆನು?! ಕಾಣದ ಕಡಲಿಗೆ ಹಂಬಲಿಸಿದ ಮನ.. ಆದರೆ ಅರಿಯದೇ ಹೋಯಿತು ನನ್ನೀ ಮನ, ಸ್ವತಃ ತಾನೇ ಆ ನಿಗೂಢ ಕಡಲಿಗೆ ಸಮವೆಂದು!! ಹಾಗಾಗಿಯೇ ಶರಣಾದೆ ಭಾವನೆಗಳ ತೆರೆಗಳಬ್ಬರದ ಧಾಳಿಗೆ... ತೆರೆತೆರೆದು ತೆರೆದಿಡುವ ಅವುಗಳ ಕಪ್ಪು-ಬಿಳಿಪಿನಾಟಕ್ಕೆ... ಹಳೆಯ ನೆನಪುಗಳ ತಾಕಲಾಟಕ್ಕೆ... ಮಾನಸವನ್ನು ತೆರೆಯಲೇಬೇಕಾಯಿತು.

ಮಂಗಳೂರಿಗೆ ಹೋಗಿದ್ದಾಗ ಹೀಗೇ ಸುಮ್ಮನೆ ನನ್ನ ಹಳೆಯ ಪುಸ್ತಕಗಳನ್ನೆಲ್ಲ ಮಗುಚಿ ಹಾಕುವ ಮನಸ್ಸಾಯಿತು. ಹಾಗೆ ಜೋಡಿಸಿಡುವಾಗ ಎಲ್ಲೋ ಮೂಲೆಯಲ್ಲಿ ಕುಳಿತಿದ್ದ ಒಂದು ಪುಟ್ಟ ನೋಟ್‌ಪುಸ್ತಕ ನನ್ನ ಗಮನ ಸೆಳೆಯಿತು. ಒಳ ಇಣುಕಿ ನೋಡಿದರೆ, ೨೦೦೧ನೆಯ ಇಸವಿಯಲ್ಲಿ ಅಂದರೆ ಸುಮಾರು ಎಂಟೊಂಭತ್ತು ವರುಷಗಳ ಹಿಂದೆ ಹರಿ ಬಿಟ್ಟಿದ್ದ ನನ್ನ ಪಕ್ವ-ಅಪಕ್ವ ಭಾವನೆಗಳೆಲ್ಲಾ ಒಮ್ಮೆಲೇ ನನ್ನ ಮನಮಂದಾರವನ್ನು ಹೊಕ್ಕು ಹೊಸ ಕಂಪನ್ನು ಸೂಸತೊಡಗಿದವು. ಇವುಗಳನ್ನೆಲ್ಲಾ ಆಗ ನಾನೇ ಬರೆದಿದ್ದೆನೇ? ಇವು ನನ್ನ ಮನದಾಳದ ಮಾತುಗಳಾಗಿದ್ದವೇ?! ಅಥವಾ ಇದನ್ನು ಹಿಂದಿನ ತೇಜಸ್ವಿನಿ ಬರೆದು ಮುಚ್ಚಿ ಮರೆತುಬಿಟ್ಟಿದ್ದಳೋ? ಆಗಿನ ನನ್ನ ಮನದಾಳದ ಮಾತುಗಳನ್ನು ಓದಿದಾಗ ನನ್ನೊಳಗಿನ ನಾನು ಹೊರ ಬಂದು ನನ್ನನ್ನೇ ದುರುಗುಟ್ಟಿ ನೋಡಿ ಮುಗುಳ್ನಕ್ಕು ಪರಿಚಿತವಾಗಿಯೂ ಅಪರಿಚಿತ ಅನ್ನಿಸುವಂತಹ ಭಾವನೆ ಮೂಡಿದ್ದಂತೂ ಸುಳ್ಳಲ್ಲ. ಅವುಗಳಲ್ಲಿ ಕೆಲವನ್ನಾದರೂ ನಿಮ್ಮೊಂದಿಗೆ ಹಂಚಿಕೊಂಡು ಮತ್ತೆ ನನ್ನನ್ನು ನಿಮಗೆ (ಜೊತೆಗೆ ನನಗೂ) ಪರಿಚಯಿಸಿಕೊಳ್ಳುವ ಸಣ್ಣ ಆಸೆ ಮೂಡಿತು. ಅಂತೆಯೇ ಆ ಭಾವಲಹರಿಗಳನ್ನು ಮಾನಸದಲ್ಲಿ ಮೂಡಿಸುತ್ತಿದ್ದೇನೆ.

-------------------------------------------

೨೦-೦೪-೨೦೦೧

೧. ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕೆಲವು ಬಾರಿ ಬೇರೊಬ್ಬರಿಂದಲೇ ಸಿಗುವುದು. ಆದರೆ ಆ ಪರಿಹಾರ ನೀಡುವ ಬೇರೊಬ್ಬರು ನಮ್ಮವರಾಗಿರಬೇಕು ಅಷ್ಟೇ!

೨. ಮನಸಿಗಾಗುವ ನೋವು, ಹೃದಯದ ಬೇನೆಗಿಂತಲೂ ದೊಡ್ಡದೇ. ಮನದಾಳದ ನೋವನ್ನು ತಿಳಿಸಲಾಧ್ಯವಾದರೆ, ಹೃದಯಾಳದ ನೋವನ್ನು ಮುಚ್ಚಿಡಲು ಅಸಾಧ್ಯ. ಒಂದಂತೂ ನಿಜ. ಗಾಯ ತೆರೆದಿಟ್ಟಷ್ಟೂ ಬಲುಬೇಗ ವಾಸಿಯಾಗುವುದು. ಮುಚ್ಚಿಟ್ಟರೆ ಪ್ರಾಣಕ್ಕೇ ಅಪಾಯ!

೩. ಪ್ರೀತಿಯ ಅರ್ಥವನ್ನು ತಿಳಿಯ ಹೋದಂತೆಲ್ಲಾ ನಿಗೂಢವಾಗಿಯೇ ಕಾಣುತ್ತದೆ. ಹೌದು.. ಇದರರ್ಥ ಇದಾಗಿರಬಹುದೆಂದು ಒಂದು ಕ್ಷಣ ಅನಿಸಿದರೆ, ಮರುಕ್ಷಣವೇ ಅದು ಸುಳ್ಳೆನಿಸುತ್ತದೆ. ಈ ಯುಗದಲ್ಲೂ ನಿಶ್ಕಲ್ಮಶ ಪ್ರೀತಿ ನಮ್ಮ ಸಮಾಜದಲ್ಲಿ ಜೀವಂತವಾಗಿದೆಯೇ?! ಈ ಪ್ರಶ್ನೆಗೆ ನಿಸ್ಸಂಶಯವಾದ ಉತ್ತರ ಸಿಗದಿರುವಾಗ, ಪ್ರೀತಿಯ ಅರ್ಥ ತಿಳಿಯುವುದಾದರೂ ಹೇಗೆ?!

೪. "ಕಣ್ಣ ಭಾಷೆಯನ್ನು ತಿಳಿಯಬಹುದು" - ಇದು ಹಲವರ ಅಭಿಪ್ರಾಯ. ಆದರೆ ಅರ್ಥೈಸಿಕೊಂಡ ಭಾಷೆಯೂ, ಕಣ್ಣೊಳಗಿನ ಭಾವವೂ ಒಂದೇ ಎಂದು ಅರಿಯುವ ಮಾಪನ ಯಾವುದು? ಅದಿಲ್ಲದೇ ಇದೊಂದು ಅರ್ಧ ಸತ್ಯವೇ ಸರಿ.

೫. ನಗು ನೂರು ತರಹದ್ದಾಗಿರಬಹುದು. ಅದರ ಭಾಷೆ ಹಲವಾರು ಆಗಿರಬಹುದು. ಆದರೆ ಅಳುವಿನ ಭಾಷೆ ಒಂದೇ. ಅದು ದುಃಖದ ಪರಿಕಲ್ಪನೆಯ, ನೋವಿನ ಪರಿಭಾಷೆಯ ಸಾಧನ. ನೋವ ಮರೆಮಾಚಲು ಮನಃಪೂರ್ವಕವಾಗಿ ನಗಲೂಬಹುದು. ಆದರೆ ನಲಿವ ಬಚ್ಚಿಡಲು ಮನಃಪೂರ್ವಕವಾಗಿ ಅಳುವುದು ಸಾಧ್ಯವೇ?!

೬. ತಿಳಿದುಕೊಂಡಿರುವೆ, ತಿಳಿಯುತ್ತಿರುವೆ, ತಿಳಿದುಕೊಳ್ಳಬಲ್ಲೆ..ಎನ್ನುತ್ತಲೇ ಸಾಗಿಸುವೆವು ಜೀವನವ. ಆದರೆ ಕೊನೆಯಲ್ಲಿ ಮಾತ್ರ ತಿಳಿಯುವೆವು ನಾವು.. ತಿಳಿದುಕೊಳ್ಳದೇ ಹೋದೆ, ತಿಳಿದುಕೊಳ್ಳಲಾರೆ, ತಿಳಿದುಕೊಳ್ಳುವುದು ಬಲು ಕಷ್ಟ ಎಂಬ ಕಟು ಸತ್ಯವನ್ನು ಮಾತ್ರ!

೭. ಮನುಷ್ಯನಿಗೆ ಅತೀವ ನೋವು, ದುಃಖ ಉಂಟಾಗುವುದು ಆತನ ಪ್ರೀತಿಪಾತ್ರರಿಂದಲೇ. ಪ್ರೀತಿಪಾತ್ರರ ಮಾತುಗಳು ಸದಾ ನೆನಪಿರುತ್ತವೆ. ಅಪಾತ್ರರ ಮಾತುಗಳು ಎಷ್ಟೇ ಕಟುವಾಗಿದ್ದರೂ ಮಳೆಹೊಯ್ದು ಮಾಯವಾಗುವಂತೆ ಕೆಲಸಮಯದಲ್ಲೇ ಮರೆಯಾಗಿಹೋಗುತ್ತದೆ. ಆದರೆ ಆತ್ಮೀಯರ ನುಡಿಗಳು(ಸಿಹಿ/ಕಹಿ) ಸದಾ ಸ್ಮೃತಿಯಲ್ಲಿರುತ್ತವೆ.

೮. ಮನಸ್ಸು ಬಯಸಿದ್ದೆಲ್ಲಾ ಸರಿಯಾಗಿರುತ್ತದೆ ಎಂದು ಹೇಳಲಾಗದು. ಆದರೆ ಹೃದಯ ಬಯಸಿದ್ದು ಮಾತ್ರ ತಪ್ಪಾಗಿರುವುದು ತೀರಾ ಕಡಿಮೆಯೇ. ಕಾರಣ ಮನಸ್ಸು ಚಂಚಲ, ಹೃದಯ ಸ್ಥಿರ. ಮನಸ್ಸು ಸ್ಥಿರಗೊಂಡರೆ ಜೀವನ ಸುಗಮ. ಆದರೆ ಹೃದಯ ನಿಂತರೆ ಜೀವಿಯ ಅಂತ್ಯ. ಆಗ ಮನಸಿಗೂ ಕೊನೆಯುಂಟಾಗುವುದು.

೯. ಪ್ರೀತಿಸುವುದು ಬಲು ಸುಲಭ. ಆದರೆ ದ್ವೇಷಿಸುವುದು ಬಲು ಕಷ್ಟ. ದ್ವೇಷದಲ್ಲೇ ಜೀವಿಸುವುದು ಅಸಾಧ್ಯ ಕೂಡ. ಆದರೆ ಪ್ರೀತಿಯ ನಂಟಿಗಿಂತ ದ್ವೇಷದ ನಂಟು ಬಲು ಹೆಚ್ಚಾಗಿರುತ್ತದೆ. ದ್ವೇಷಿಸುವಾಗ ಅದರ ಉರಿ ನಮ್ಮನ್ನೂ ಬಿಡದು. ಪ್ರೀತಿ ಏಕ ಮುಖವಾಗಿದ್ದರೂ ತಂಪನ್ನೀಯುವುದು. ದ್ವೇಷ ಸದಾ ಉರಿಯಲ್ಲಿ ಆರಂಭಗೊಂಡು ಬೂದಿಯಲ್ಲಿ ಅಂತ್ಯವಾಗುವುದು.

೧೦. ಮನುಜನ ಆಸೆ ಮರೀಚಿಕೆಯಂತೆ. ದೂರದಲ್ಲೆಲ್ಲೋ ಇದ್ದಂತೆ ಕಾಣುವುದು, ಕೈಗೆಟಕುವಂತೇ ಅನಿಸುವುದು, ಹತ್ತಿರ ಹೋದಾಗ ಮಾತ್ರ ಮರೆಯಾಗುವುದು. ಒಂದು ಕಡೆ ಓಯಾಸಿಸ್ ಸಿಕ್ಕರೆ ಮತ್ತೊಂದು ಕಡೆ ಸುಡು ಬಿಸಿಲು.

೧೧. ಗೆಲುವಿಗೆ ಆತ್ಮವಿಶ್ವಾಸ ಅಗತ್ಯವೋ ಇಲ್ಲಾ ಆತ್ಮವಿಶ್ವಾಸವನ್ನು ಗೆಲುವಿನಿಂದ ಮಾತ್ರ ಪಡೆಯಬಲ್ಲೆವೋ ಎಂಬ ತರ್ಕ ನನ್ನ ಮನದಲ್ಲಿ ಸದಾ ನಡೆಯುತ್ತಿರುತ್ತದೆ. ಆದರೆ ಒಂದಂತೂ ಸತ್ಯ... ಆತ್ಮವಿಶ್ವಾಸ ಹೆಚ್ಚಿಸಲು, ಸ್ಥಿರಗೊಳಿಸಲು ಒಂದಾದರೂ ಗೆಲುವಿನ ಅಗತ್ಯತೆ ಬೇಕೇ ಬೇಕು.

೧೨. ಸೋಲನ್ನು ಒಪ್ಪಿಕೊಳ್ಳುವುದು ಒಂದು ಕಲೆ. ಇದು ಒಳ್ಳೆಯತನ. ಆದರೆ ಶ್ರಮ ಪಟ್ಟು ಪಡೆದ ನಮ್ಮ ಗೆಲುವನ್ನು ಇತರರಿಗೆ(ನಮ್ಮವರಿಗೇ ಆದರೂ ಸರಿ) ಬಿಟ್ಟುಕೊಡುವುದು ಉದಾರತನವಲ್ಲ, ಮೂರ್ಖತನ. ಕಾರಣ ಗೆಲುವನ್ನು ದಾನವಾಗಿ ಪಡೆದಾಗ ಉಂಟಾಗುವುದು ಕೀಳಿರಿಮೆ. ಗಳಿಸಿಕೊಂಡಾಗ ಮಾತ್ರ ಸಿಗುವುದು ನಿಜ ಹಿರಿಮೆ.

೧೩. ಗುಂಪಿನಲ್ಲಿದ್ದೂ ಏಕಾಂಗಿತನವನ್ನು ಅನುಭವಿಸುವುದು, ಏಕಾಂಗಿಯಾಗಿದ್ದರೂ ಗುಂಪೊಳಗೆ ಸೇರಿ ಬೆರೆಯುವುದು ಸೂರ್ಯ ಮತ್ತು ಚಂದ್ರರಿಗಿರುವಷ್ಟೇ ವ್ಯತ್ಯಾಸವನ್ನು ಹೊಂದಿದೆ ಎಂದೆನ್ನಿಸುತ್ತದೆ. ಮೊದಲನೆಯ ಭಾವ ತನಗೂ ತನ್ನ ಸುತ್ತಲಿನವರಿಗೂ ಬಿಸಿಲನ್ನು, ಸುಡು ತಾಪವನ್ನು ನೀಡಿದರೆ, ಎರಡನೆಯದು ಉರಿವ ಬಿಸಿಲಿನಲ್ಲೂ ತಂಪಾದ ನೆರಳನ್ನು ನೀಡುತ್ತದೆ.

೧೪. ಚಿತ್ರಗೀತೆಯ ಸಾಲೊಂದು ಸದಾ ಕಾಡುತ್ತಿರುತ್ತದೆ...
"ಓ ಚಂದಮಾಮ ಏಕೆ ಹೀಗೇ?
ತಂಗಾಳಿಯಲ್ಲೂ ಬಿಸಿಲ ಬೇಗೆ
ಅಂಗಳದ ತುಂಬ ನಿನ್ನ ಬಿಂಬ ಇದ್ದರೂ
ಮನೆಯೊಳಗೆ ಮಾತ್ರ ಬೆಳಕಿಲ್ಲ!!" - ಮನದೊಳಗೆ ದೀಪ ಹೊತ್ತಿಸಲಾಗದವರು ಬದುಕೆಂಬ ಮನೆಯೊಳಗೆ ಕತ್ತಲನ್ನೇ ತುಂಬಿಕೊಳ್ಳುತ್ತಾರೇನೋ!! ಹೀಗಿದ್ದಾಗ ನಿಜ ಬೆಳಕು ಬಂದಾಗಲೂ ಕಣ್ಕುಕ್ಕುವ ಭಯದಿಂದಾಗೋ ಇಲ್ಲ ಭ್ರಮೆಗೊಳಗಾಗೋ ಕಣ್ಮುಚ್ಚುತ್ತಾರೆ. ಬದುಕನ್ನಿಡೀ ಕತ್ತಲೆಯಲ್ಲೇ ಕಳೆಯುತ್ತಾರೆ...ಕೊಳೆಯುತ್ತಾರೆ.

೧೫. ಹಲವಾರು ಸೋಲುಗಳು ಒಂದನ್ನೊಂದು ಅರಸಿ ಬಂದಾಗ ನಡುವೆ ಆಗಾಗ ಸಿಗುವ ಗೆಲವುಗಳೂ ಅಲ್ಪವಾಗಿಯೋ ಇಲ್ಲಾ ಸೋಲಾಗಿಯೋ ಕಾಣುತ್ತವೆ. ಅದೇರೀತಿ ಗೆಲುವೇ ತುಂಬಿರುವಾಗ ನಡುವೆ ಸಿಗುವ ಆಗೊಂದು ಈಗೊಂದು ಸೋಲೂ ಅಲ್ಪವಾಗಿಯೋ ಇಲ್ಲಾ ಮುಂದಿನ ಗೆಲುವಿಗೆ ಒಂದು ಮಜಲಾಗಿಯೋ ಭಾಸವಾಗುವುದು.

೧೬. "ಆಸೆಯೇ ದುಃಖಕ್ಕೆ ಮೂಲ" ನಿಜ. ಆದರೆ ಆಸೆಯ ಪ್ರಭಾವ, ಋಣಾತ್ಮಕ ಹಾಗೂ ಧನಾತ್ಮಕ ಪರಿಣಾಮಗಳು- ಇವುಗಳನ್ನೆಲ್ಲಾ ಆ ಆಸೆಯನ್ನು ಹೊಂದಿ ಪಡೆಯಲು ಹವಣಿಸಿದಾಗ ಮಾತ್ರ ಅರಿವಾಗಬಹುದೇನೋ!? ನಿರಾಸೆಗೂ ನಿರ್ಲಿಪ್ತತೆಗೂ ಹೆಚ್ಚಿನ ಅಂತರವೇನೂ ಕಂಡುಬರದು. ನಿರಾಸೆ ಹೊಸ ಆಸೆಯ ಅನ್ವೇಷಣೆಗೆ ಹೊರಟೆರೆ ನಿರ್ಲಿಪ್ತತೆ ಬದುಕುವ ಆಶಯವನ್ನೇ ಹೊಸಕಿಹಾಕಬಹುದು!!

ಅದೇ ಪುಸ್ತಕದ ಮೂಲೆಯಲ್ಲೊಂದು ಕಡೆ ಗಾಂಧೀಜಿಯವರ ಹಾಗೂ ರಾಮಕೃಷ್ಣ ಪರಮಹಂಸರ ನುಡಿಮುತ್ತುಗಳನ್ನೂ ದಾಖಲಿಸಿಟ್ಟಿದ್ದೆ. ಅವೂ ನನ್ನ ಕಣ್ಣ ಹೊಕ್ಕಿ ಮನದೊಳಗೆ ಮನೆಮಾಡಿಕೊಂಡವು. ಆ ಸಾಲೂಗಳೂ ಈಗ ನಿಮಗಾಗಿ ಇಲ್ಲಿ ಭಿತ್ತರಿಸುತ್ತಿದ್ದೇನೆ.

"ಹೃದಯದಲ್ಲಿ ಗೊಂದಲವಿದ್ದರೂ ಹೊರಗೆ ಮುಗುಳು ನಗು ಬೀರಲು ನನ್ನ ಪಳಗಿಸಿದ್ದೇನೆ."

"ದುಃಖ ಬರುವಾಗಲೂ ನಕ್ಕು ಬಿಡು. ಆ ದುಃಖವನ್ನು ಗೆಲ್ಲುವುದಕ್ಕೆ ನಗುವಿಗಿಂತ ಮೇಲಿನದಾದ ಬೇರೆ ಯಾವುದೇ ಶಕ್ತಿ ಇರುವುದಿಲ್ಲ"

"ಮಾನಸಿಕ ದುಗುಡ ಜೀವನದ ತಪ್ಪು ದೃಷ್ಟಿಕೋನದಿಂದ ಉಂಟಾಗುತ್ತದೆ."

--------------------------------------------------------

ಇವಿಷ್ಟು ಸುಮಾರು ಒಂಭತ್ತು ವರುಷಗಳ ಹಿಂದೆ ನಾನೇ ಬರೆದು ಮರೆತಿಟ್ಟ ಪಕ್ವ-ಅಪಕ್ವ ಸಾಲುಗಳು. ಈ ಸಾಲುಗಳ ಕುರಿತಾಗಿ ನಿಮಗಿರುವ ಅಭಿಪ್ರಾಯ-ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸಲು ನನ್ನ ಮಾನಸ ಸಿದ್ಧವಾಗಿದೆ. ನಿಮಗೆಲ್ಲರಿಗೂ ಆದರದ ಸ್ವಾಗತ :)

- ತೇಜಸ್ವಿನಿ.