ಕೆ.ಸತ್ಯನಾರಾಯಣ ಅವರ ಬರಹಗಳನ್ನು ನಾನು ಓದಲು ಶುರುಮಾಡಿದ್ದು ತೀರಾ ಮೂರು
ವರುಷಗಳ ಹಿಂದೆಯಷ್ಟೇ. ಅವರ ಕಥಾಸಂಕಲನವೊಂದನ್ನು ಓದಿ ಬಹಳ ಪ್ರಭಾವಿತಳಾಗಿರುವಾಗಲೇ ಅಚಾನಕ್ಕಾಗಿ ‘ಕಾಲಜಿಂಕೆ’ ಎನ್ನುವ ಅಪರೂಪದ ಕಾದಂಬರಿ ಕಣ್ಣಿಗೆ ಬೀಳಲು, ಅದನ್ನು ಮೊದಲು ಓದಲು ಆಯ್ದಿಕೊಂಡಿದ್ದು ಅದರ
ಶೀರ್ಷಿಕೆಯೊಳಡಗಿದ್ದ ಆಕರ್ಷಣೆಯೇ ಕಾರಣವಾಗಿತ್ತು. ಬಹಳ ಅಪರೂಪದ ಕಾದಂಬರಿಯದು! ಅದನ್ನೋದಿ
ಪ್ರಭಾವಿತಳಾಗಿ,
ಅವರ ಇನ್ನೂ ಕೆಲವು ಹೊತ್ತಗೆಗಳನ್ನು
ಓದಲು ಶುರುವಿಟ್ಟುಕೊಂಡೆ. ‘ವಿಕಲ್ಪ’, ‘ವೃತ್ತಿ ವಿಲಾಸ’ ಇವೆಲ್ಲಾ ಅವರದ್ದೇ ವಿಶಿಷ್ಟ ಶೈಲಿಯಲ್ಲಿ
ನಿರೂಪಣೆಗೊಂದ ಹೊತ್ತಗೆಗಳೇ. ಆದರೆ ಅವರ ಇತ್ತೀಚಿನ ‘ಸಾವಿನ ದಶಾವತಾರ’ ಬಹಳ ಕಾಡಿ, ಬಿಡದೇ
ಓದಿಸಿಕೊಂಡಿತು.
ಇದು ಒಂದೇ ಗುಕ್ಕಿನಲ್ಲಿ ಖಂಡಿತ ಓದಿಸಿಕೊಳ್ಳುವುದಿಲ್ಲ! ಬಹಳ
ತಿಣುಕಾಡಿಸುತ್ತದೆ... ಕಾಡಿಸುತ್ತದೆ... ನೋಯಿಸುತ್ತದೆ... ನಮ್ಮೊಳಗೆ ಹೊಕ್ಕಿರುವ ನಮ್ಮ ಸಾವಿನ
ಭಯವನ್ನೆಬ್ಬಿಸಿ ಹುಯಿಲೆಬ್ಬಿಸುತ್ತದೆ... ಪ್ರಶ್ನಿಸುತ್ತದೆ... ಕೆಲವೊಂದಕ್ಕೆ ಉತ್ತರಿಸುತ್ತದೆ
ಕೂಡ... ಹಾಗೇ ಎಷ್ಟೋ ಪ್ರಶ್ನೆಗಳನ್ನು ಹಾಗೇ ಉಳಿಸಿಯೂ ಬಿಡುತ್ತದೆ!
ನನಗೆ ಸದಾ ಅನ್ನಿಸುತ್ತಿರುತ್ತದೆ. ನಮಗೆ ನಮ್ಮ ಸಾವಿನ ಭಯಕ್ಕಿಂತ ನಮ್ಮವರ
ಅಗಲಿಕೆಯ ಆತಂಕವೇ ಹೆಚ್ಚು ಕಾಡುತ್ತಿರುತ್ತದೆ, ಜೊತೆಗೇ ನಮ್ಮ ಸಾವಿನಾನಂತರ ನಮ್ಮವರು ಅನುಭವಿಸುವ ನೋವು ದುಃಖದ ಕಲ್ಪನೆಯೇ
ನಮ್ಮೊಳಗೆ ಹೆಚ್ಚು ಸಂಕಟವನ್ನುಂಟುಮಾಡುತ್ತದೆ ಎಂದು. “ಅಲ್ಲಾ ಮಾರಾಯ್ತಿ, ನೀನು ಸತ್ತ ಮೇಲೆ ಏನಾದರೇನು? ಕಾಲ ಹೀಗೇ ನಿಲ್ಲೊಲ್ಲ.. ಕ್ರಮೇಣ ಎಲ್ಲಾ/ಎಲ್ಲರೂ ಸಮಾ ಆಗುವುದು/ಆಗುವರು” ಎಂದಿರಾದರೆ ನನಗೆ ತಕ್ಷಣಕ್ಕೆ ಈ ಮಾತೊಳಗೆ
ಪರಮ ಸ್ವಾರ್ಥವೇ ಕಂಡೀತು! ನಾನು ಸತ್ತಮೇಲೆ ಈ ಜಗತ್ತಿನಲ್ಲಿ ಏನೇ ದುರಂತಗಳು, ಆಗು ಹೋಗುಗಳಾದರೂ ಆಗಿ ಹೋಗಲಿ.. ನೋಡಲು, ಪರಿತಪಿಸಲು ನಾನಂತೂ ಇರುವುದಿಲ್ಲವಲ್ಲ
ಎನ್ನುವ ಭಾವವೇ ಮತ್ತಷ್ಟು ಹಿಂಸೆ ನೀಡುವಂಥದ್ದು ಎನ್ನಿಸುವುದು. ಆದರೆ ಇಂದಿನ ಯುಗದಲ್ಲಿ
ಮತ್ತೊಬ್ಬರ ಸಾವೂ ಒಂದು ಸಾಧಾರಣದ ಉದಾಸೀನ, ಅತಿ ಸಾಮಾನ್ಯ, ಅನಿವಾರ್ಯ
ಕರ್ಮ ಅಷ್ಟೇ ಎಂಬ ತಣ್ಣನೆ ಕ್ರೌರ್ಯ ಬೆರೆತ ಫಿಲಾಸಫಿಯಿಂದ ನೋಡುವುದೇ ಸಾಮಾನ್ಯವಾಗಿಬಿಟ್ಟೀದೆ. ಸ್ವಂತ
ಸಾವಿನ ಕುರಿತು ನಮ್ಮ ನಂತರ ಉಳಿದವರಿಗೇನು ತೊಂದರೆಯಾವುದೋ ಎಂಬ ಮಿಡುಕಿಗಿಂತಲೂ, ಅವರೆಲ್ಲಾ ಈ ಬದುಕಿನಲ್ಲೂ ಇನ್ನೂ ಹೆಚ್ಚು
ಕಾಲ ಬದುಕನ್ನು ಅನುಭವಿಸುತ್ತಾ, ಸಂಭ್ರಮಿಸುತ್ತಾ
ಇರುತ್ತಾರಲ್ಲ ಎಂಬ ಅಸೂಯೆಯೇ ಹೆಚ್ಚಿನ ಸಮಯದಲ್ಲಿ ತಲೆ ಕೊರೆಯುತ್ತಿರುತ್ತದೆಯೇನೋ
ಎಂದೆನಿಸಿಬಿಟ್ಟಿತು.
ಇಂಥೆಲ್ಲಾ ಹುಚ್ಚುಚ್ಚೋ ಇಲ್ಲಾ ಹುಚ್ಚೊಳಗಿನ ಸತ್ಯವೋ ನನ್ನೊಳಗೆ ಎದ್ದಿದ್ದು, ಎದ್ದು ನನ್ನ ಕೆರಳಿಸಿದ್ದು, ತಾಕಲಾಡಿದ್ದು ‘ಸಾವಿನ ದಶಾವತಾರ’ ಕಾದಂಬರಿಯನ್ನೋದಿದಾಗ!
ಸಾವು ಸಂಭವಿಸಿದ ಮೇಲೆ ಮಾಡಬೇಕಾದ ಅಪರ ಕರ್ಮಗಳನ್ನು ನಡೆಸಿಕೊಡುವುದನ್ನೇ ತನ್ನ
ವೃತ್ತಿಯನ್ನಾಗಿಸಿಕೊಂಡ ನಾಯಕ (event management ತರಹ ಸಾವಿನಾನಂತರದ ವಿಧಿಗಳನ್ನು ಆಯಾ ಸಾವಿನ ಹಿನ್ನಲೆಗನುಗುಣವಾಗಿ ನೆರವೇರಿಸುವಂಥ ವೃತ್ತಿ!), ತನ್ನ ಬದುಕಿನ ಸಣ್ಣ ಸಣ್ಣ ಕಥೆಗಳನ್ನು ನಿರೂಪಿಸುವುದರ ಮೂಲಕ ಸಾವು ಹೇಗೆಲ್ಲಾ
ತನ್ನ ಮುಖವನ್ನು,
ವಿರಾಟ್ ಸ್ವರೂಪವನ್ನು, ಕರಾಳತೆಯನ್ನು, ವಿಕೃತೆಯನ್ನು ತೆರೆಯಬಹುದು, ಕ್ರೌರ್ಯದ ಪರಾಕಷ್ಠೆ ಹೇಗೆಲ್ಲಾ ಇದ್ದಿರುತ್ತದೆ ಎಂಬುದನ್ನು ತಣ್ಣಗೆ, ಮೆಲು ಧ್ವನಿಯಲ್ಲಿ ನಿರೂಪಿಸುತ್ತಾ ಹೋಗುತ್ತಾನೆ. ಕ್ರಿಯಾಕರ್ಮಗಳಿಗೆ ಜನರನ್ನು ಹೊಂದಿಸುವುದು.. ವಿಧಿ ನಡೆವ
ದಿನಗಳಲ್ಲೇ, ಸ್ಥಳದಲ್ಲೇ ಎದ್ದೇಳುವ ಆಸ್ತಿ ವಿವಾದ, ಕುಟುಂಬ ಕಲಹ, ದೋಷಾರೋಪಗಳಿಗೆಲ್ಲಾ
ಕಾನೂನು ಸಲಹೆ,
ಸಂಪರ್ಕ, ಇನ್ನಿತರ ವ್ಯವಸ್ಥೆಗಳನ್ನೊದಗಿಸಿವುದು... ಆ
ಸಮಯದುದ್ದಕ್ಕೂ ಮನೆಯವರೊಂದಿಗೆ ಒಂದು ನಶ್ವರ ಬಂಧವನ್ನೇರ್ಪಡಿಸಿಕೊಂಡು, ತದನಂತರ ಅದಕ್ಕೊಂದು
ಶಾಶ್ವತ ಕೊನೆ ಕಲ್ಪಿಸಿಬಿಡುವುದು... ಮತ್ತೆ ಮತ್ತೊಂದು ಸಾವಿಗೆ ಕಾಯುತ್ತಿರುವುದು. ಇಂತಹ ವಿಶಿಷ್ಟ
ವೃತ್ತಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದವನ್ನು ಸಂದರ್ಶಿಸಲು ಬರುವ ಚಿತ್ರಣದೊಂದಿಗೆ ಕಾದಂಬರಿ
ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಆ ಸಂದರ್ಶನಕ್ಕೆ ಉತ್ತರಿಸುವ ನೆಪದಲ್ಲಿ ಆತ ತನಗೆ ತಾನೇ ಉತ್ತರಿಸುತ್ತಾ, ನಮ್ಮೊಳಗೂ ಪ್ರಶ್ನೆ ಎಬ್ಬಿಸಿ ಸ್ವಯಂ ಉತ್ತರಿಸಿಕೊಳ್ಳಲು ಪ್ರೇರೇಪಿಸುತ್ತಾ, ಅಲ್ಲಲ್ಲಿ ಹೊಸ ಪ್ರಶ್ನೆಗಳನ್ನೂ
ಹುಟ್ಟಿಸಿಬಿಡುತ್ತಾನೆ.
ಉದಾಹರಣಗೆ ನನ್ನಲ್ಲಿ ಹುಟ್ಟಿದ ಪ್ರಶ್ನೆಗಳಿವು :-
*ನಾವು ಮಾಡುತ್ತಿರುವ ವೃತ್ತಿ ಅಥವಾ ಅಳವಡಿಸಿಕೊಂಡಿರುವ ಪ್ರವೃತ್ತಿ ನಮ್ಮ
ಆಯ್ಕೆಯೇ? ನಿಜವಾಗಿಯೂ ಬಾಲ್ಯದಲ್ಲಿ ಅದರ ಕನಸು
ಕಂಡಿದ್ದೆವೆಯೇ?
ಅದು ನನಸಾಗಿದೆಯೇ?
*ನನ್ನ ವೃತ್ತಿಯ ಕುರಿತು ನಮಗೆ ಗೌರವವಿದೆಯೇ? ಅದನ್ನು ಮತ್ತೊಬ್ಬರಿಗೆ ಹಸ್ತಾಂತರಿಸಲು
ಅಥವಾ ಇತರರು ಅನುಸರಿಸಲೆಂಬ ಆಶಯವಿದೆಯೇ?
*ಎದುರಾಗುವ ಸವಾಲುಗಳನ್ನೆಷ್ಟು ಸಮರ್ಥವಾಗಿ ಎದುರಿಸಿದ್ದೇವೆ?
*ನಮ್ಮ ವೃತ್ತಿ ಸಮಾಜವೊಡ್ಡುವ ಮಿತಿಗಳನ್ನು ಮೀರಲೆಷ್ಟು ಸಹಕಾರಿಯಾಗಿದೆ?
*ಮಾಡುತ್ತಿರುವ ಕೆಲಸವನ್ನು ನಿಲ್ಲಿಸಬೇಕೆಂದು ಅನಿಸಿದ್ದಿದೆಯೇ? ಹಾಗೆನಿಸಲು ಕಾರಣ? - ಹೀಗೆ ಹಲವಾರು ಪ್ರಶ್ನೆಗಳನ್ನು ಸ್ವಯಂ ಹಾಕುತ್ತಾ ಹೋಗಿದ್ದೇನೆ ನಾಯಕನ ಜೊತೆಗೇ!
“ಈಗ ನಾವು ಬದುಕುತ್ತಿರುವುದು ಮುಗಿದುಹೋದ ಕಾದಂಬರಿಯ ಕೊನೆಯ ಪುಟಗಳ ನಂತರ
ಸುಮ್ಮನೆ ಬಿಡುವ ಖಾಲಿ ಒಂದು ಪುಟವನ್ನು ಮಾತ್ರ” ಎಂಬ ಸಾಲು ನಮ್ಮನ್ನು ತಣ್ಣಗಾಗಿಸಿಬಿಡುತ್ತದೆ.
“ಆಯ್ಕೆ ನಾವು ಮಾಡಿದಾಗ ಇಲ್ಲ ನಮ್ಮನ್ನು ಮತ್ತೊಬ್ಬರು ಆಯ್ಕೆ ಮಾಡಿದಾಗಲೂ
ಆಯ್ಕೆಯೇ ಇಲ್ಲದಿರಬಹುದು” ಎಂಬ
ಮಾತು ತುಸು ಗೊಂದಲವನ್ನು ಹುಟ್ಟಿಸಿಬಿಡುತ್ತದೆ. ನಾವೇ ಆಯ್ಕೆ ಮಾಡಿಕೊಂಡ ಸಂಬಂಧಗಳ ಜೊತೆಗೆ ನಮ್ಮ
ನಿತ್ಯ ಬದುಕಿನ ಅನಿವರ್ಯತೆ ಹುಟ್ಟಿಸುವ ಸಂಬಂಧಗಳು - ಇವುಗಳೂ ಕೂಡ ಯಾರ ಅರಿವಿಗೂ ಬಾರದಂತೇ
ತಣ್ಣಗೆ ಕರಗಿ ಹೋಗುತ್ತಿರುವುದರ ಅನುಭವ ನಿಚ್ಚಳವಾಗಿ ಇಲ್ಲಿ ನಮಗೆ ದೊರಕುತ್ತದೆ.
“ಪದಗಳ ಶ್ರೀಮಂತಿಕೆಗೆ, ಕುಕ್ಕಲಾತಿಗೆ ಬಿಂಬವೂ ಇಲ್ಲ, ಪ್ರತಿಬಿಂಬವೂ ಇಲ್ಲವೇನೋ. ಸುಮ್ಮನೇ ಹುಟ್ಟುತ್ತವೆ. ಸುಮ್ಮನೇ ಇರುತ್ತವೆ. ಅಷ್ಟೇ” ಎಂಬ ಮಾತುಗಳನ್ನೋದಿದ ತಕ್ಷಣ ಅದೇಕೋ ಎಂತೋ
ನನಗೆ
ಭೈರಪ್ಪನವರ ‘ದಾಟು’ ಕಾದಂಬರಿಯಲ್ಲಿ ಬರುವ “ಪ್ರಳಯ ಜಲದಲ್ಲಿ ಬಿಂಬವೂ ಇಲ್ಲ, ಬಿಂಬಿಯೂ ಇಲ್ಲ” ಎಂಬ ಸಾಲು ನೆನಪಿಗೆ ಬಂದು ಬಿಟ್ಟಿತು. ಇಂದಿನ
ಅಂತರ್ಜಾಲ ಯುಗದಲ್ಲಿ, ವಾಟ್ಸ್‌ಆಪ್, ಫೇಸ್ಬುಕ್ ಜಮಾನದಲ್ಲಿ ನಾವು ಬಳಸುವ
ಇಮೋಟಿಕಾನ್ಸ್‌ಗಳ ಕುರಿತು ರಪ್ಪನೆ ಮುಖಕ್ಕೆ ಹೊಡೆದು ಹೇಳುವಂತಿದೆಯೇನೋ ಈ ಸಾಲು ಎಂದು ನನಗೆ
ಭಾಸವಾಯಿತು. ಎಗ್ಗಿಲ್ಲದೇ ಬಳಸುವ ಕೆಂಪು, ಗುಲಾಬಿ ಬಣ್ಣದ ಹಾರ್ಟ್, ಕಿಸ್ಸಿಂಗ್, ಲವ್
ಎಕ್ಸ್‌ಪ್ರೆಶೆನ್ಸ್ ಇಮೋಜಿಗಳು ಬರೀ ಪದಗಳನ್ನು ಶೃಂಗರಿಸಬಲ್ಲವೇ ಹೊರತು, ನಮ್ಮೊಳಗಿನ ನಿಜ ಭಾವವನ್ನು ತೋರ್ಪಡಿಸಲಾರವು.
ಅಲ್ಲದೇ, ಪರದೆಯ ಮೇಲೆ ಎಗ್ಗಿಲ್ಲದೇ ಇಮೋಜಿ
ಹೃದಯಗಳನ್ನು ಬಿಚ್ಚಿಡುವ ತೆರೆಮರೆಯ ಮನಸುಗಳು, ಪರಸ್ಪರ ಎದುರಾದಾಗ ತೋರುವ ನಿರ್ಲಿಪ್ತತೆ, ಸಣ್ಣ ನಿರ್ಲಕ್ಷ್ಯತನಕ್ಕೆ ಕನ್ನಡಿ ಹಿಡಿದಂತಿದೆ
ಎಂದೆನಿಸಿಬಿಟ್ಟಿತು.
ಮತ್ತೆ ಮತ್ತೆ ಓದಿಸಿಕೊಂಡು ಮೆಲುಕು ಹಾಕಿದಂಥ ಸಾಲುಗಳು :-
೧) ಹಿಡಿದಿಟ್ಟ ದುಃಖ, ಹಿಂಡಿಬಿಡುವ ದುಃಖ ಎಂಬ ಮಾತೇ ಸುಳ್ಳು. ಯಾವುದೂ ಹಿಡಿದಿಡುವುದಿಲ. ಯಾವುದೂ
ಹಿಂಡಿಬಿಡುವುದಿಲ್ಲ. ಕಾಲವು ದುಃಖವನ್ನು ಕೂಡ ಸೋಸಿಬಿಡುತ್ತದೆ. ಮುಂದಿನ ಕ್ಷಣ, ಮುಂದಿನ ಅನುಭವ ಇರುವುದೇ ಹಿಂದಿನ ಕ್ಷಣ, ಹಿಂದಿನ ಅನುಭವದ ಮೇಲೆ ದಬ್ಬಾಳಿಕೆ ನಡೆಸಲು.
೨) ಕಾಲವು ದುಃಖದ ಪ್ರಮಾಣವನ್ನು ಕಡಿಮೆ ಮಾಡಬಹುದು. ಶಾಪದ ಪ್ರಮಾಣವನ್ನಲ್ಲ (ಇಲ್ಲಿ
ಶಾಪವೆಂದರೆ ದುಃಖದಲ್ಲಿ ನಾವು ಮತ್ತೊಬ್ಬರಿಕೆ ಹಾಕುವಂಥದ್ದಲ್ಲ. ನಮ್ಮ ದುಃಖಕ್ಕೆ ಕಾರಣವಾದ ಘಟನೆ
ಜೀವನದುದ್ದಕ್ಕೂ ಕಟು ವಾಸ್ತವವಾಗಿ ನಮ್ಮೊಂದಿಗಿದ್ದುಬಿಡುವುದು)
೩) ಈ ಜಗತ್ತಿನಲ್ಲಿ ತಪ್ಪು ಅಂತ ಯಾರೂ ಮಾಡುವುದಿಲ್ಲ. ಅವರು ಸರಿ ಎಂದುಕೊಂಡು
ಮಾಡಿದ್ದು ತಪ್ಪಾಗಿರುತ್ತದೆ ಅಷ್ಟೆ. (ಈ ಸಾಲು ಮಾತ್ರ ನನ್ನೊಳಗೆ ಹೊಸ ಆಲೋಚನ ಕ್ರಮವನ್ನೇ
ಹುಟ್ಟು ಹಾಕಿಬಿಟ್ಟಿತು!)
೪) ನಾವು ಅಸತ್ಯದ, ಅನ್ಯಾಯದ ಪರವಾಗಿ ಸಕ್ರಿಯವಾಗಿ ಇರುವುದಿಲ್ಲ. ಸತ್ಯ, ನ್ಯಾಯದ ಬಗ್ಗೆ ಉದಾಸೀನವಾಗಿ ಗೊತ್ತಿದ್ದು
ಗೊತ್ತಿದ್ದೂ ಇರುತ್ತೇವೆ. (ಎಷ್ಟು ಸತ್ಯ!)
೫) ಯಾರೊಬ್ಬರ ಸಾವು, ನಮ್ಮ ಸಾವೂ ಕೂಡ ಸೇರಿದಂತೆ ಅಸತ್ಯದ ಬಗ್ಗೆ ನಮಗಿರುವ ಆಂತರಿಕ ಒಲವನ್ನು, ಸತ್ಯದ ಬಗ್ಗೆ ಇರುವ ಉದಾಸೀನವನ್ನು ಕೊಂಚವೂ
ವಿಚಲಿತಗೊಳಿಸಲಾರದಲ್ಲ! (ಕಟು ಸತ್ಯ!)
೬) ನಮ್ಮ ನಮ್ಮ
ಸ್ವಭಾವವೆಂದರೆ ಶನಿ ಮಹಾತ್ಮ ಇದ್ದ ಹಾಗೇ. ನಾವೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಇನ್ನೊಬ್ಬರೂ
ಬದಲಾಯಿಸಲಾಗುವುದಿಲ್ಲ.
೭) ವಿಚಾರಕ್ಕೆ
ತಕ್ಕಂತೆ ಬದುಕಬೇಕೋ, ಇಲ್ಲ ಸ್ವಭಾವಕ್ಕೆ, ಪ್ರಾಮಾಣಿಕವಾಗಿರಬೇಕೋ ಎಂಬುದೇ ತಿಳಿಯದಾಗಿದೆ. ಎರಡೂ
ತರದವರನ್ನು ಹತ್ತಿರದಿಂದ ಕಂಡು, ಅನುಭವಿಸಿ, ಆತ್ಮೀಯರನ್ನಾಗಿ ಕೂಡ ಮಾಡಿಕೊಂಡು, ಅವರು ಬದಲಾದಂತೆ
ನಾನೂ ಗೋಸುಂಬೆ ಆಗುತ್ತಾ ಜೀವನದ ಅಷ್ಟೊಂದು ಭಾಗವನ್ನು ಮುಗಿಸಿಯೇಬಿಟ್ಟಿದ್ದೇನೆ.
ಆದರೆ,
“ಸಂಬಂಧವನ್ನು ಬಯಸಿದವರ ಜೊತೆ ಮಾತ್ರ ಸಂಬಂಧ
ಇಟ್ಟುಕೊಳ್ಳಬೇಕೆ?
ಯಾವ ಸಂಬಂಧವನ್ನು ಇನ್ನೊಬ್ಬರು ನಮ್ಮ
ಬಗ್ಗೆ obligeಆಗಿರಲಿ ಎನ್ನುವ ಕಾರಣಕ್ಕೆ
ಇಟ್ಟುಕೊಳ್ಳಬಾರದು” - ಎಂಬ
ಮಾತು ಮಾತ್ರ ಯಾಕೋ ಪೂರ್ತಿ ಒಪ್ಪಿತವಾಗಲಿಲ್ಲ. ಪ್ರತಿ ಜೀವಿಯೂ ಸಂಬಂಧ ಏರ್ಪಡಿಸಿಕೊಳ್ಳಲು
ಬಯಸುವುದು, ಅದು ಉಳಿವುದು ಎದುರಿನ ವ್ಯಕ್ತಿಯ ಪ್ರತಿಕ್ರಿಯೆಯ
ಮೇಲೆಯೇ ಅಲ್ಲವೇ?
ಆತ ಒಪ್ಪಲಿ ಬಿಡಲಿ, ಪ್ರೀತಿಸಲಿ ತಿರಸ್ಕರಿಸಲಿ ನಾನು ಮಾತ್ರ
ಸಂಬಂಧ ಉಳಿಸಿಕೊಂಡು ಹೋಗುವೆ ಎನ್ನುವ ಸಂಕಲ್ಪ ಎಷ್ಟು ದಿವಸ ಗಟ್ಟಿಯಾಗಿರಬಹುದು ಎಂದೆನಿಸಿತು.
ಅಲ್ಲದೇ,
Bits of paperಗಳಂಥ ಚಿಕ್ಕ ಕಥೆಗಳು/ಘಟನಾವಳಿಗಳು ಕೆಲವೆಡೆ ಓವರ್ ಲ್ಯಾಪ್ ಆಗಿ ಮತ್ತೊಮ್ಮೆ ಓದಿ
ನೆನಪಿಸಿಕೊಳ್ಳುವಂತೆ ಆಗುತ್ತವೆ.
ಬಹು ಮುಖ್ಯವಾದ ವಿಷಯ!
ಈ ಕಾದಂಬರಿ ದೇಹ ದಾನದೊಳಗೆ ಅಡಗಿರುವ ಕರಾಳತೆಯನ್ನು, ಪರಮ ನಿರ್ಲಕ್ಷ್ಯತನವನ್ನು, ವಿಕಾರತೆಯನ್ನು,
ಹೇವರಿಕೆ ಹುಟ್ಟಿಸುವಂಥ ಸತ್ಯವನ್ನು ಹಸಿ
ಹಸಿಯಾಗಿ ತೆರೆದಿಟ್ಟು, ‘ಅಂತಹ ಕ್ರಮಕ್ಕೆ ನಾನೆಂದೂ ನನ್ನ ಆಪ್ತರನ್ನು ಒಡ್ಡಲಾರೆ, ಸ್ವತಃ ಒಳಗೊಳ್ಳಲಾರೆ’ ಎಂಬ ನನ್ನ ನಿರ್ಧಾರವನ್ನು ಮತ್ತಷ್ಟು
ಬಲವಾಗಿಸಿಕೊಳ್ಳಲು ನೆರವಾಯಿತು!
ಗಹನ ಚಿಂತನೆಗೆ ಒರೆ ಹಚ್ಚುವ ೧೭೨ ಪುಟಗಳ ಈ ಹೊತ್ತಗೆ ಮತ್ತೆ ಮತ್ತೆ ಓದಿಗೆ ಪ್ರೇರೇಪಿಸುವಂಥದ್ದು. ಒಮ್ಮೆ ಓದಿ, ಸುಲಭವಾಗಿ ಮರೆತುಬಿಡುವಂಥದ್ದಲ್ಲ, ಮರೆಯಲು ಬಿಡುವುದೂ ಇಲ್ಲ!
~ತೇಜಸ್ವಿನಿ ಹೆಗಡೆ.