ಬುಧವಾರ, ಸೆಪ್ಟೆಂಬರ್ 15, 2010

ಕೃಷ್ಣಾರ್ಪಣಮಸ್ತು


http://devotionalonly.com/2009/11/

 
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಮ್
(ಭಗವದ್ಗೀತೆ, ಧ್ಯಾನಶ್ಲೋಕ)

[ಮೂಗನನ್ನು ಮಾತಾಡಿಸುತ್ತಾನೆ, ಕಾಲಿಲ್ಲದವನನ್ನು ಪರ್ವತವನ್ನು ಹತ್ತುವಂತೇ ಮಾಡುತ್ತಾನೆ, ಅಂತಹ ಕೃಪಾಳುವಾಗಿರುವ, ಪರಮಾನಂದವನ್ನು ನೀಡುವ ಮಾಧವನನ್ನು ನಾನು ವಂದಿಸುವೆ]

 ದೈಹಿಕವಾಗಿ ಅಶಕ್ತನಾಗಿರುವವನನ್ನೂ ಮಾನಸಿಕವಾಗಿ ಸಶಕ್ತನನ್ನಾಗಿಸುವ ಕರುಣಾಳು ಶ್ರೀಕೃಷ್ಣ ಎಂಬುದು ಮೇಲಿನ ಶ್ಲೋಕದೊಳಗಿನ ತಿರುಳು. "ಉದ್ಧರೇದಾತ್ಮನಾತ್ಮಾನಂ.." ಅಂದರೆ ನಿನ್ನ ಆತ್ಮದ ಉದ್ಧಾರ, ನಿನ್ನ ಏಳು ಬೀಳು ಎಲ್ಲಾ ನಿನ್ನ ಕೈಯಲ್ಲೇ ಇದೆ...ನಿನ್ನ ಮನೋಬಲದಲ್ಲಿದೆ. ನೀನೇ ನಿನ್ನ ಉನ್ನತಿಗೆ ಹಾಗೂ ಅವನತಿಗೆ ಮೂಲ ಕಾರಣ ಎಂಬ ಸುಂದರ ಸಂದೇಶವನ್ನಿತ್ತ ಶ್ರೀಕೃಷ್ಣ ಹುಟ್ಟಿದ್ದು ಶ್ರಾವಣ ಬಹುಳ, ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ. ಹಾಗಾಗಿ ಈ ದಿನವನ್ನು ಕೃಷ್ಣಾಷ್ಟಮಿ ಎಂದು ಕರೆಯುತ್ತಾರೆ. ಕೃಷ್ಣನ ಜನ್ಮದಿನಾಚರಣೆಯನ್ನು ಎರಡು ರೀತಿಯಲ್ಲಿ ಆಚರಿಸುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಎಲ್ಲರೂ ಒಂದೇ ದಿನ ಆಚರಿಸಿದರೂ ಕೆಲವೊಮ್ಮೆ ತಿಥಿ ಹಾಗೂ ನಕ್ಷತ್ರಗಳು ಬೇರೆಯಾಗಲು ಭಿನ್ನವಾಗಿಯೂ ಆಚರಿಸುತ್ತಾರೆ. ಈ ದಿನವನ್ನು ಸೌರಮಾನದವರು ಸಿಂಹಮಾಸದಲ್ಲಿ, ರೋಹಿಣಿ ನಕ್ಷತ್ರದ ದಿನದಂದು ಜಯಂತಿ ಎಂದು ಆಚರಿಸಿದರೆ, ಚಾಂದ್ರಮಾನದವರು ತಿಥಿ ಪ್ರಕಾರ ಅಂದರೆ ಶ್ರಾವಣ ಮಾಸದ ಕೃಷ್ಣಪಕ್ಷದಲ್ಲಿ ಬರುವ ಅಷ್ಟಮಿಯಂದು ಆಚರಿಸುತ್ತಾರೆ. ಇದೇ ದೇಶದ ಹಲವೆಡೆ ಪ್ರಚಲಿತವಾಗಿರುವ ಕೃಷ್ಣಾಷ್ಟಮಿ. ಸೌರಮಾನದವರೂ ಇದೇ ದಿನ ರೋಹಿಣಿ ನಕ್ಷತ್ರವೂ ಕೂಡಿ ಬಂದರೆ ಅಂದೇ ಕೃಷ್ಣಾಷ್ಟಮಿಯನ್ನು ಆಚರಿಸುವರು. ಆಗ ಏಕದಿನದಂದೇ ಜನ್ಮಾಷ್ಟಮಿಯ ಆಚರಣೆ ಎಲ್ಲಾ ಕಡೆಯೂ ಆಗುವುದು. ಈ ರೀತಿ ಸೌರಮಾನದವರಿಗೆ ಈ ದಿನ ನಕ್ಷತ್ರ ಪ್ರಧಾನವಾಗಿದ್ದರೆ, ಚಾಂದ್ರಮಾನದವರಿಗೆ ತಿಥಿ ಪ್ರಧಾನ. ಹಾಗಾಗಿ ಒಮ್ಮೊಮ್ಮೆ ಕೃಷ್ಣಾಷ್ಟಮಿ ಎರಡೆರಡು ಬಾರಿ ಬರುವುದೂ ಉಂಟು.

"ಕೃಷ್ಣ" ಪದದ ಅರ್ಥ ಕಪ್ಪು. ಶ್ರೀಕೃಷ್ಣ ಶ್ರೀವಿಷ್ಣು ಅಂದರೆ ಹರಿಯ ಅವತಾರ. ವಿಷ್ಣುವಿನ ಆಕರ, ಮೂಲ ತತ್ವ ಆಕಾಶ. ಆಕಾಶ ನೀಲಬಣ್ಣದ್ದಾಗಿರುವುದರಿಂದ, ಆತನ ಅಂಶವಾಗಿರುವ ಕೃಷ್ಣನಿಗೆ ನೀಲಮೇಘ ಶ್ಯಾಮ ಎಂದೂ ಕರೆಯುತ್ತಾರೆ. ಕೃಷ್ಣ ಎಂದರೆ ಎಲ್ಲರನ್ನೂ ಆಕರ್ಷಿಸುವವ ಎಂದೂ ಆಗುತ್ತದೆ. ಅಂತೆಯೇ ಆತನ ಮಾಯೆಯ ಸೆಳೆತದಿಂದ ಯಾರೂ ತಪ್ಪಿಸಿಕೊಳ್ಳಲಾಗದು. ಹಾಗಾಗಿಯೇ ಆತ ಮಾಯಾವಿ...ಈಭವದ ಬಂಧನದಿಂದ, ಮೋಹಜಾಲದಿಂದ, ಮಾಯೆಯಿಂದ ನಮ್ಮನ್ನು ಬಿಡಿಸಿ, ತನ್ನೆಡೆಗೆ ಸೆಳೆಯುವ ಮಾಯಾವಿ. ಆತ ಹುಟ್ಟಿದ್ದು ಕೃಷ್ಣಪಕ್ಷದ ನಡುರಾತ್ರಿಯಲ್ಲಿ. ಕಡುಗತ್ತಲೆಯಲ್ಲಿ ಬೆಳಕತೋರಲು ಜನಿಸಿದವ. ಇದರಿಂದಲೂ ಆತನಿಗೆ ಕೃಷ್ಣ ಎಂಬ ಹೆಸರು ಬಂತೆನ್ನಬಹುದು. ವಸುದೇವ, ದೇವಕಿಯರ ಎಂಟನೆಯ ಮಗುವಾಗಿ ಜನಿಸಿದ್ದರಿಂದ "ವಾಸುದೇವ" ಎಂಬ ಹೆಸರೂ ಬಂತು. ಹುಟ್ಟಿದ್ದು ಮಥುರಾದಲ್ಲಿರುವ ಸೋದರಮಾವನ ಸೆರೆಮನೆಯಲ್ಲಾದರೂ ಬೆಳೆದದ್ದೆಲ್ಲಾ ಗೋಕುಲದಲ್ಲಿದ್ದ ಯಶೋದೆಯ ಮಡಿಲಲ್ಲಿ... ಹಾಗಾಗಿ ಈ ದಿನವನ್ನು ಗೋಕುಲಾಷ್ಟಮಿ ಎಂದೂ ಕರೆಯುತ್ತಾರೆ.

ಶೀಕೃಷ್ಣನ ಅವತಾರದ ಮೂಲೋದ್ದೇಶ :

ಭೂಭಾರಹರಣ...ಅಂದರೆ ಭೂಮಿಯ ಮೇಲೆ ತುಂಬಿದ್ದ ಅಸುರರನ್ನು, ದುಷ್ಟರನ್ನು ಸಂಹರಿಸುವುದು. ಕ್ರೂರಿಯಾಗಿದ್ದ ಮಾವ ಕಂಸನನ್ನು ಸಂಹರಿಸುವುದು, ಪಾಂಡವರನ್ನು ಕಾಪಾಡಲಿಕ್ಕಾಗಿ. ಅಲ್ಲದೇ ಅಧರ್ಮಾಲ್ಲಿ ನಡೆಯುತ್ತಿದ್ದ ವೃಷ್ಣಿ ವಂಶಸ್ಥರನ್ನು ಅಂದರೆ ಅವನ ವಂಶವಾದ ಯಾದವ ಕುಲದವರನ್ನೂ ನಾಶಗೈದ. ಇವೆಲ್ಲಾ ಕಾರ್ಯಗಳ ಸಿದ್ಧಿಗಾಗಿ ಸ್ವಯಂ ಹರಿಯೇ ಕೃಷ್ಣನಾಗಿ ಧರೆಗೆ ಅವತರಿಸಿದ. ಆ ದಿನವನ್ನೇ ನಾವು ಕೃಷ್ಣಾಷ್ಟಮಿಯನ್ನಾಗಿ ಆಚರಿಸುತ್ತೇವೆ. ಕೃಷ್ಣ ಅಧರ್ಮವನ್ನು ನಾಶಗೈಯಲು, ಧರ್ಮವನ್ನು ಎತ್ತಿಹಿಡಿಯಲು ತನ್ನವರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಇದಕ್ಕೆ ಅಧರ್ಮದಲ್ಲಿ ಸಾಗುತ್ತಿದ್ದ ತನ್ನದೇ ಸೋದರಮಾವನ ವಧೆ ಹಾಗೂ ಅನೀತಿಯಲ್ಲಿ ಸಾಗುತಿದ್ದ ತನ್ನದೇ ಯಾದವ ಕುಲದವರ ಪತನವೇ ಸಾಕ್ಷಿ. ಧರ್ಮದ ರಕ್ಷಣೆಯಲ್ಲಿ ಸಂಬಂಧದ ಬಂಧವಿಲ್ಲ ಎಂದು ತೋರಿದವ ಶ್ರೀಕೃಷ್ಣ.

ಈ ದಿನದಂದು ಭಕ್ತಾದಿಗಳು ತಮ್ಮ ಇಂದ್ರಿಯಗಳಿಗೆ ಆಹಾರವನ್ನೊದಗಿಸದೇ ಅಂದರೆ ರಾಗ, ದ್ವೇಷಗಳಿಂದ ದೂರವುಳಿದು, ನಿರಾಹಾರ ಅಥವಾ ಅಲ್ಪ ಆಹಾರವನ್ನಷ್ಟೇ ದೇಹಕ್ಕೆ ಒದಗಿಸಿ, ಆತನನ್ನು ಧ್ಯಾನದಮೂಲಕ ಸಾಕ್ಷಾತ್ಕಾರಗೊಳಿಸಲೆತ್ನಿಸುತ್ತಾರೆ. ಹಾಲು, ಅಕ್ಷತ, ಹೂವಿನ ಅರ್ಘ್ಯಕೊಡುತ್ತಾರೆ. ರಾತ್ರಿಯಲ್ಲಿ ಆತನ ಜನನವಾದ್ದರಿಂದ ಮಧ್ಯರಾತ್ರಿಯ ಹೊತ್ತಿಗೆ ದೇವಾಲಯಗಳಲ್ಲಿ, ಮನೆಗಳಲ್ಲಿ ವಿಶೇಷ ಪೂಜೆ, ಭಜನೆಗಳನ್ನು ಏರ್ಪಡಿಸುತ್ತಾರೆ. ಹೊದ್ದಲಿನಿಂದ ತಯಾರಿಸಿದ ಲಡ್ಡು, ಸಿಹಿ ಅವಲಕ್ಕಿ, ತುಳಸಿಮಾಲೆಯನ್ನು ಅರ್ಪಿಸುತ್ತಾರೆ. ಕೃಷ್ಣ ತುಲಸಿ(ಕಪ್ಪು ತುಲಸಿ) ಆತನಿಗೆ ಬಲು ಪ್ರಿಯ. ಅಂತೆಯೇ ಅವಲಕ್ಕಿಯೂ ಕೂಡ. ಬಡ ಸುಧಾಮನಿಂದ ಆತ ಬಯಸಿದ್ದು ಬರೀ ಅವಲಕ್ಕಿಯನ್ನೇ. ಆ ಮೂಲಕ ಆತ ಸ್ಪಷ್ಟಪಡಿಸುತ್ತಾನೆ, ತನಗೆ ಭಕ್ತಿಯಿಂದ ಪತ್ರೆಯನ್ನಾಗಲೀ, ಫಲವನ್ನೇ ಆಗಲೀ ಕೊನೆಗೆ ಬರೀ ನೀರನ್ನೇ ಆಗಲಿ ನೀಡಿದರೆ ಸಾಕು, ನಾನು ಅವನೊಳಗೆ, ಅವನು ನನ್ನೊಳಗೆ ಇರುತ್ತಾನೆಂದು.

ಶ್ರೀಕೃಷ್ಣ ಸದಾ ಮನುಜನ ಮನಸಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟವನು. ನಮ್ಮ ಮನಸ್ಸೇ ನಮ್ಮನ್ನು ನಿಗ್ರಹಿಸುತ್ತದೆ. ಅದನ್ನೊಮ್ಮೆ ನಾವು ನಿಗ್ರಹಿಸತೊಡಗಿದರೆ ನಮ್ಮ ಏಳಿಗೆ ನಿಶ್ಚಿತ. ಯಾವ ಕೆಡುಕೂ ನಮಗಾಗದು....ನಮ್ಮಿಂದಲೂ ಯಾರಿಗೂ ಕೆಡುಕಾಗದು ಎಂಬ ಸಂದೇಶವನ್ನು ತನ್ನ ಭಗವದ್ಗೀತೆಯಲ್ಲಿ ಸಾರುತ್ತಾನೆ. "ಕರ್ಮವನ್ನು ಮಾಡುತ್ತಿರು. ನಿನ್ನ ಕರ್ಮದಲ್ಲಿ ನಿನಗೆ ನಿಷ್ಠೆಯಿರಲಿ. ಆದರೆ ಅದರಿಂದ ಬರುವ ಫಲದ ಪ್ರತಿ ಅಪೇಕ್ಷೆ ಸಲ್ಲ. ನಾವು ನಮ್ಮ ನಮ್ಮ ಕರ್ಮವನ್ನು ಮಾಡುತ್ತಿರಬೇಕು. ಅದನ್ನು ನಿಲ್ಲಿಸುವುದೇ ದೊಡ್ಡ ಅಪರಾಧ" ಎಂದು ಸಾರಿದ್ದಾನೆ. "ನಾವು ನಮ್ಮ ಹೃದಯ ದೌರ್ಬಲ್ಯಗಳಿಂದ ಮೇಲೆದ್ದಾಗ ಮಾತ್ರ ಬದುಕಿನ ಹೋರಾಟದಲ್ಲಿ ಗೆಲ್ಲಬಲ್ಲೆವು" ಎಂಬ ಪಾಠವನ್ನು ಅರ್ಜುನನ ಮೂಲಕ ನಮಗೆ ತಿಳಿಸಿದ್ದಾನೆ. ಭಗವದ್ಗೀತೆಯನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಅಳವಡಿಸಿಕೊಂಡರೆ ಯಾವ ಸೋಲೂ ನಮ್ಮನ್ನು ಕುಗ್ಗಿಸದು...ಎಂತಹ ಗೆಲವೂ ನಮ್ಮನ್ನು ಉಬ್ಬಿಸದು.

ಶ್ರೀಕೃಷ್ಣಾಷ್ಟಮಿ ಎಲ್ಲರಿಗೂ ಮಂಗಳವನ್ನುಂಟುಮಾಡಲಿ, ನಮ್ಮೊಳಗಿನ ಅರಿಷಡ್ವೈರಿಗಳನ್ನು ಹೊರದೂಡಿ, ಸಾತ್ವಿಕತೆಯನ್ನು ತುಂಬಲೆಂದು ಮನಃಪೂರ್ವಕವಾಗಿ ಪಾರ್ಥಿಸುತ್ತೇನೆ.

[ನನ್ನ ತಾಯಿ ಶ್ರೀಮತಿ ಜಯಲಕ್ಷ್ಮೀ ಭಟ್ ರಚಿಸಿದ ಈ ಹಾಡು ನಿಮಗಾಗಿ. ಬಾಲ್ಯದಿಂದಲೂ ನಾನು ಅಮ್ಮನೊಂದಿಗೆ ಹಾಡುತ್ತಿರುವ ಈ ಹಾಡು ನನ್ನ ಮೆಚ್ಚಿನ ಹಾಡುಗಳಲ್ಲೊಂದು]


ಜೀವಿಸುವ ಪರಿ ಎಂತು
ನಿನ್ನ ನಾಮವ ಮರೆತು
ಜೀವಿಗಳಿಗಾಧಾರ
ಗೋಪಾಲಕೃಷ್ಣ |ಜೀ|

ಬಾಲಕನು ನೀನಾಗ
ಪೂತನಿಯ ಸಂಹಾರ
ಮಾವ ಕಂಸನೆ ನಿನಗೆ ಪರಮ ಶತ್ರು
ಗೋವುಗಳ ಕಾಯ್ದಿರುವೆ
ಗೋಪಿಯರ ಕಾಡಿರುವೆ
ನಂದಗೋಪಕೆ ನೀನು ಆನಂದ ಕಂದ |ಜೀ|

ನಾರಿಮಣಿ ದ್ರೌಪದಿಯ
ಮಾನಹರಣದ ಸಮಯ
ಮಾನರಕ್ಷಕನಾಗಿ ಓ ಎಂದು ಬಂದೆ
ಧರ್ಮಮೂರ್ತಿಯು ನೀನು
ಧರ್ಮರಾಯಗೆ ಒಲಿದೆ
ಪಾರ್ಥ ಸಾರಥಿಯೆಂಬ ಬಿರುದು ನಿನಗೆ |ಜೀ|

ಕುಲದೇವ ನೀ ಎಮ್ಮ
ಕುಲವನುದ್ಧರಿಸಯ್ಯ
ಕುಲದ ಕೀರ್ತಿಯ ಬೆಳೆಸಿ ಬಾರೋ ತಂದೆ
ದುಷ್ಟರನು ಶಿಕ್ಷಿಸುವೆ
ಶಿಷ್ಟರನು ರಕ್ಷಿಸುವೆ
ನೀ ಎಮ್ಮ ಕಷ್ಟಗಳ ನೀಗೊ ತಂದೆ |ಜೀ|

 {ಈ ಲೇಖನ "ಮರಳ ಮಲ್ಲಿಗೆ" ಪತ್ರಿಕೆಯಲ್ಲಿ ಪ್ರಕಟಿತ. ಕೃಷ್ಟಾಷ್ಟಮಿಯಂದೇ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಮಾಡಿದ್ದೆ. ಆದರೆ ಅದರ ಹಿಂದಿನ ದಿನದಂದೇ ಅಕಾಲಿಕ ಮರಣಕ್ಕೆ ತುತ್ತಾದ ನನ್ನ ಚಿಕ್ಕಪ್ಪನ ಅಗಲಿಕೆಯ ಆಘಾತದಿಂದ ಪ್ರಕಟಿಸಿರಲಿಲ್ಲ...}

-ತೇಜಸ್ವಿನಿ ಹೆಗಡೆ

15 ಕಾಮೆಂಟ್‌ಗಳು:

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಶ್ರೀಕೃಷ್ಣನ ಬಗ್ಗೆ ಸರಳವಾದ ಬರಹ ಚೆನ್ನಾಗಿದೆ. ಆತನ ಹೆಸರಿನ ವಿವರಣೆಯೂ ಸಹ.

ನಿಮ್ಮ ತಾಯಿಯವರು ರಚಿಸಿದ ಹಾಡೂ ಸಹ ಚೆನ್ನಾಗಿದೆ. ಲೇಖನ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು.
ಈ ಹಾಡನ್ನು ಚಿಕ್ಕಮಕ್ಕಳಿಗೆ ಕಲಿಸಲು ಬಹಳ ಸುಲಭವಾಗಿದೆ.

ಧನ್ಯವಾದಗಳು.

ಮನಸು ಹೇಳಿದರು...

lekhana chennagide teju....... haage nimma ammana haadina saalugaLu tumba istavaytu...... nimma lekhana namma marala malligege shobhe needide bhaLa dhanyavadagaLu

nimma chikkappanavarige vayassagitte athva aarogyada tondareyaagitta enu..?

Ashok.V.Shetty, Kodlady ಹೇಳಿದರು...

ತೇಜಸ್ವಿನಿ ಅವ್ರೆ,

ತುಂಬಾ ಸುಂದರ ಲೇಖನ. ಉಪಯುಕ್ತ ಮಾಹಿತಿಗಳನ್ನೊಳಗೊಂಡ ಸೊಗಸಾದ ಲೇಖನ. ನಿಮ್ಮ ಮಾತೃಶ್ರೀ ಯವರು ರಚಿಸಿದ ಕವನವು ತುಂಬಾ ಚೆನ್ನಾಗಿದೆ. ಧನ್ಯವಾದಗಳು...

ಒಮ್ಮೆ ಇಲ್ಲಿ ಭೇಟಿ ನೀಡಿ...

http://ashokkodlady.blogspot.com/

AntharangadaMaathugalu ಹೇಳಿದರು...

ತಂಗಿ ತೇಜಸ್ವಿನಿ....
ತುಂಬಾ ಸುಂದರವಾದ ಬರಹ. ನಿಜ ಕೃಷ್ಣನೆಂದರೆ ಎಲ್ಲಾ ತಾಯಂದಿರಿಗೂ, ಹೆಣ್ಣು ಕುಲಕ್ಕೂ ಅದೇನೋ ಒಂದು ವಾತ್ಸಲ್ಯದ ಧಾರೆ. ಮಮತೆಯ ಮಳೆ... ಪ್ರೀತಿಯ ಹೊಳೆ ಹರಿಯುತ್ತದೆ. ಬಾಲ ಗೋಪಾಲನ ನೆನಪೇ ಮುದಗೊಳಿಸುತ್ತದೆ. ಮದ್ದೂರಿನ ಹತ್ತಿರವಿರುವ ಮಾಳೂರಿನಲ್ಲಿ ಮುದ್ದು ಕೃಷ್ಣ ಅಂಬೆಗಾಲಿಡುವ ಚಿನ್ನಿ ಪಾಪು. ಅವನ ಬೆಣ್ಣೆಯ ಅಲಂಕಾರದ ಚಿತ್ರ ಅತಿ ಸುಂದರ. ನಿಮ್ಮ ಬರಹ ನನಗದೆಲ್ಲಾ ನೆನಪಿಸಿತು. ಧನ್ಯವಾದಗಳು....

ಸಾಗರದಾಚೆಯ ಇಂಚರ ಹೇಳಿದರು...

ಶ್ರೀ ಕೃಷ್ಣನ ಬಗೆಗಿನ ಬರಹ ಸರಳ, ಸುಂದರ ಹಾಗೂ ಸೊಗಸಾಗಿದೆ
ಅದರಲ್ಲೂ ನಿಮ್ಮ ತಾಯಿಯವರು ರಚಿಸಿದ ಹಾಡು ಅದ್ಭುತ
ಸುಂದರ ಬರಹಕ್ಕೆ ಅಭಿನಂದನೆಗಳು

ಮನಮುಕ್ತಾ ಹೇಳಿದರು...

ತೇಜಸ್ವಿನಿ ಅವರೆ,
ಅಭಿನ೦ದನೆಗಳು.
ಸು೦ದರ ವಿವರಣೆಯೊ೦ದಿಗೆ ಕೃಷ್ಣನ ಬಗೆಗಿನ ಚೆ೦ದದ ಲೇಖನ ..
ನಿಮ್ಮ ತಾಯಿಯವರು ರಚಿಸಿದ ಕವನ ತು೦ಬಾ ಚೆನ್ನಾಗಿದೆ.ಲೇಖನ ಹಾಗೂ ಕವಿತೆ ಎರಡೂ ಇಷ್ಟವಾಯ್ತು.

V.R.BHAT ಹೇಳಿದರು...

ಬಹಳ ಚೆನ್ನಾಗಿದೆ ನಿಮ್ಮ ತಾಯಿಯವರು ಬರೆದ ಕವನ ಮತ್ತು ನಿಮ್ಮ ಪೂರಕ ಲೇಖನ, ಧನ್ಯವಾದಗಳು

sunaath ಹೇಳಿದರು...

ತೇಜಸ್ವಿನಿ,
ಕೃಷ್ಣಜನ್ಮದಿನದ ವಿವರಣೆಗಾಗಿ ಧನ್ಯವಾದಗಳು. ನಿಮ್ಮ ತಾಯಿ ತುಂಬ ಸುಂದರವಾದ ಗೀತೆಯನ್ನು ರಚಿಸಿದ್ದಾರೆ. ಅವರಿಗೆ ಅಭಿನಂದನೆಗಳು;ನಿಮಗೆ ಧನ್ಯವಾದಗಳು.

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಮ್,
ಜನ್ಮಾಷ್ಟಮಿಯ ಉಪವಾಸದ ಉದ್ದೇಶ, ಕಿಟ್ಟಪ್ಪನ ಅವತಾರ ಬಗ್ಗೆ ತಿಳಿಸಿ ಕೊಟ್ಟಿದ್ದೀರಾ ..ಧನ್ಯವಾದ ಮೇಡಮ್...
ನಿಮ್ಮ ಅಮ್ಮನವರು ಬರೆದ ಹಾಡು ತುಂಬಾ ಸೊಗಸಾಗಿದೆ....

ಜಲನಯನ ಹೇಳಿದರು...

ತೇಜಸ್ವಿನಿ,
ಶ್ರೀಕೃಷ್ಣ...ಕೃಷ್ಣ..ಕಿಷ್ಣ..ಕಿಟ್ಟಿ...ಎಲ್ಲಾ ಆಗಬಲ್ಲ ಒಬ್ಬನೇ ಒಬ್ಬ ಗೋಪಿ ಲೋಲ, ನಂದ ಗೋಪಾಲ, ಚಿತ್ತ ಚೋರ, ಭಗವತ್ ಗೀತೆಯನ್ನೂ ಕರುಣಿಸಿ ಮಾನವತೆಯ ಎಲ್ಲ ಆಯಾಮಗಳನ್ನು ಬಿಡಿಸಿದವ...ನಿಜಕ್ಕೂ ನನಗೆ ಬಹಳ ಸಹಜವೆನಿಸುವ ದೇವತಾ ಅಗಾಧತೆ ಶಕ್ತಿ..
ನಿಮ್ಮ ಲೇಖನದಲ್ಲಿ ಈ ಎಲ್ಲ ರೂಪಗಳನ್ನು ದರ್ಶಿಸಿದ್ದೀರಿ..

ಮನಸಿನಮನೆಯವನು ಹೇಳಿದರು...

ಕೃಷ್ಣನ ಬಗ್ಗೆ ಸುಲಲಿತವಾಗಿ ಹೇಳಿದ್ದೀರಿ....
ಕವನ ಮಕ್ಕಳಿಗೆ ಕಲಿಸಲು ಸುಲಭವಾಗಿದೆ..
ಚಿತ್ರ ಚೆನ್ನಾಗಿದೆ..

ಸುಧೇಶ್ ಶೆಟ್ಟಿ ಹೇಳಿದರು...

ಪುರಾಣ ಮರೆತು ಹೋಗುತ್ತಿರುವ ಈ ದಿನಗಳಲ್ಲಿ ಹಬ್ಬದ ಮಹತ್ವ ತಿಳಿಸಿ, ಕೃಷ್ಣನ ಬಗೆಗಿನ ಮಾಹಿತಿಯನ್ನು ಚೆನ್ನಾಗಿ ನೀಡಿದ್ದೀರಿ.... ನಿಜ ಹೇಳಬೇಕೆ೦ದರೆ ನನಗೆ ಈ ಲೇಖನದಲ್ಲಿದ್ದ ಹೆಚ್ಚಿನ ವಿಷಯಗಳು ಗೊತ್ತೇ ಇರಲಿಲ್ಲ!

ಥ್ಯಾ೦ಕ್ಸ್... :)

ತೇಜಸ್ವಿನಿ ಹೆಗಡೆ ಹೇಳಿದರು...

ಮುಕ್ಕೋಟಿ ದೇವರುಗಳಲ್ಲಿ ಶ್ರೀಕೃಷ್ಣನೇ ನನಗೆ ಹೆಚ್ಚು ಆಪ್ತ, ಹತ್ತಿರ ಎನಿಸುತ್ತಾನೆ. ಕಾರಣ ಅವನ ಸರಳತೆ. ಜಟಿಲತೆಯನ್ನು ಸಡಿಲಗೊಳಿಸಲು ಆತ ನೀಡಿದ ಗೀತೋಪದೇಶ. ಅದೆಷ್ಟು ಸರಳ, ಸುಂದರ ಎಂದೆನಿಸುತ್ತದೆಯೋ ಅಷ್ಟೇ ಅಗಾಧ, ವಿಶಾಲ, ಆಳವನ್ನು ಹೊಂದಿದೆ. ಲೇಖನವನ್ನು ಮೆಚ್ಚಿ ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.

ಶ್ರೀಕೃಷ್ಣ ಎಲ್ಲರಿಗೂ ಒಳಿತನ್ನು ಮಾಡಲಿ.

@ಮನಸು,

ಈ ಹಿಂದಿನ ಪೋಸ್ಟ್ ನೋಡಿ... ನಿಮಗೆಲ್ಲಾ ತಿಳಿಯುವುದು. ನನ್ನ ಚಿಕ್ಕಪ್ಪನಿಗೆ ಕೇವಲ ೫೦ ವರ್ಷವಾಗಿತ್ತಷ್ಟೇ. ಅಪಘಾತವೊಂದರಲ್ಲಿ ದುರ್ಮರಣ ಸಂಭವಿಸಿತು.:(

-ತೇಜಸ್ವಿನಿ ಹೆಗಡೆ.

ಸೀತಾರಾಮ. ಕೆ. / SITARAM.K ಹೇಳಿದರು...

ಕೃಷ್ಣನ ಬಗ್ಗೆ ಸಮಗ್ರ ಸರಳ ದರ್ಶನ ಮಾಡಿ ತಮ್ಮ ಮಾತೊಶ್ರೀಯವರು ಬರೆದ ಸುಂದರ ಕವಿತೆ ಹಂಚಿ ಕೊಂಡಿದ್ದಿರಾ. ಇಬ್ಬರಿಗೂ ನಮ್ಮ ವಂದನೆಗಳು.

Anuradha Rao ಹೇಳಿದರು...

ತುಂಬಾ ಚೆನ್ನಾಗಿದೆ ..