ಶುಕ್ರವಾರ, ಫೆಬ್ರವರಿ 27, 2009

ಒಳಗೊಂದು ಕಿರುನೋಟ....ಭಾಗ-೧

ಮಲೆಯ ಮದುಮಗಳ ತುಂಬೆಲ್ಲಾ ಮಲೆಯದೇ ಸ್ನಿಗ್ಧ ಸೌಂದರ್ಯ!
-------------------------------------------
ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕೃತಿ ಮೊದಲು ಬಿಡುಗಡೆಗೊಂಡಿದ್ದು ೧೯೬೭ರಲ್ಲಿ. ಇಂತಹ ಒಂದು ಬೃಹತ್ ಕಾದಂಬರಿಯನ್ನು ಇಷ್ಟು ನಾಜೂಕಾಗಿ, ಸುಂದರವಾಗಿ, ಸಾರ್ವಕಾಲಿಕ ಶೇಷ್ಠವಾಗಿ, ಕಾಲಾತೀತವಾದ ಕೃತಿಯನ್ನು ರಚಿಸಲು ಅವರಿಗೆ ಎಷ್ಟು ಸಮಯ ಬೇಕಾಯಿತೋ ಕಾಣೆ. ಈವರೆಗೆ ಒಟ್ಟೂ ಹನ್ನೆರಡು ಮುದ್ರಣವನ್ನು ಕಂಡಿರುವುದೇ ಇದರ ಪ್ರಖ್ಯಾತಿಗೆ, ಮೆಚ್ಚುಗೆಗೆ ಹಾಗೂ ಕಾದಂಬರಿಯೊಳಗಿನ ಸೊಬಗು, ಮಾರ್ದವತೆ, ನೈಜತೆಯ ಮೋಡಿಗೆ ಸಾಕ್ಷಿ. ಆಗಿನ ಕಟು ವಾಸ್ತವಿಕತೆಗಳು, ಪಶುತ್ವ ವರ್ತನೆಗಳು, ಗ್ರಾಮ್ಯ ಭಾಷೆಗಳ ಒರಟುತನ, ಆಹಾರ ವಿಹಾರಗಳಲ್ಲಿನ ರೂಕ್ಷತೆಗಳನ್ನು ಮೊದಮೊದಲು ಅರಗಿಸಿಕೊಳ್ಳಲು ತುಸು ಕಠಿಣ ಎಂದೆನಿಸಿದರೂ, ಕ್ರಮೇಣ ಅದರೊಳಗಿನ ಪಾರದರ್ಶಕತೆ ನಮ್ಮನ್ನು, ನಮ್ಮರಿವನ್ನೂ ಮರೆವಂತೆ ಮಾಡುವುದು ಸುಳ್ಳಲ್ಲ. ಈ ಕಾದಂಬರಿಯನ್ನು ನಾನು ಸುಮಾರು ೭-೮ ವರ್ಷಗಳ ಹಿಂದೆ ಓದಿದ್ದೆ. ಈಗ ಇತ್ತೀಚಿಗೆ ಮತ್ತೊಮ್ಮೆ ಈ ಕಾದಂಬರಿಯನ್ನೋದಿದೆ. ಓದುತ್ತಿದ್ದಂತೆ ನನಗನಿಸಿತು ಇದರ ಕುರಿತು ನನ್ನ ಅಭಿಪ್ರಾಯ, ಅನಿಸಿಕೆಗಳನ್ನು ಸಹಮಾನಸಿಗರಾದ ನಿಮ್ಮೆ ಮುಂದೆಯೂ ತೆರೆದಿಡಬೇಕೆಂದು. ಅದಕ್ಕಾಗಿಯೇ ಈ ಪುಟ್ಟ ಪ್ರಯತ್ನ.
ಆರಂಭದಲ್ಲಿ ಕುವೆಂಪು ಅವರೇ ಹೇಳಿದಂತೆ-"ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!"

ಕಾದಂಬರಿಯೊಳಗೆ ಕಥೆ ಪ್ರಾರಂಭವಾಗುವುದು ಸಿಂಬಾವಿಯ ಭರಮೈಹೆಗ್ಗಡೆಯವರ ಚೌಕಿಮನೆಯಿಂದಾದರೆ, ಕೊನೆಗೊಳ್ಳದೇ ನಿರಂತರತೆಯನ್ನು ಸಾರುತ್ತಾ ಓದುಗನ ಕಲ್ಪನೆಯಲ್ಲಿ ನಿಲ್ಲುವುದು ಹೂವಳ್ಳಿ ಚಿನ್ನಮ್ಮ ಹಾಗೂ ಮುಕುಂದಯ್ಯನವರು ಒಂದಾಗುವ ಸಂಕೇತದೊಂದಿಗೆ. ಈ ನಡುವೆ ಬರುವ ಅನೇಕ ಕಥೆಗಳು ಉಪಕಥೆಗಳು, ಹಲವಾರು ಜಾತಿ, ಮತ, ಪಂಥಗಳು, ಪಂಗಡಗಳು, ಪಾತ್ರಗಳು, ಪ್ರಸಂಗಗಳು ಎಲ್ಲವೂ ಸಾವಧಾನವಾಗಿ ಮೆಲ್ಲಮೆಲ್ಲನೆ ಮನದೊಳಗಿಳಿದು..ಆಳವ ಹುಡುಕಿ ತಮ್ಮ ತಮ್ಮ ಜಾಗವನ್ನು ಹಿಡಿದು ಬೇರನ್ನೂರಿ ಚಿರಸ್ಥಾಯಿಯನ್ನು ಪಡೆಯುತ್ತವೆ.


ಸಿಂಬಾವಿ ಭರಮೈಹೆಗಡೆ, ಹಳೆಮನೆ ಸುಬ್ಬಣ್ಣ ಹೆಗ್ಗಡೆ, ಹೂವಳ್ಳಿ ವೆಂಕಟನ್ಣ, ಬೆಟ್ಟಳ್ಳಿ ಕಲ್ಲೇಗೌಡ್ರು ಹಾಗೂ ಅವರ ಮಗ ದೇವಯ್ಯ, ಕೋಣೂರಿನ ರಂಗೇಗೌಡ್ರು ಹಾಗೂ ಅವರ ತಮ್ಮ ಮುಕುಂದಯ್ಯ, ಹೊಲೆಯನಾದ ಗುತ್ತಿ ಹಾಗೂ ಆತನ ಹುಲಿ ಗಾತ್ರದ ನಾಯಿ ಹುಲಿಯ, ತಿಮ್ಮಿ, ಚಿನ್ನಮ್ಮ, ಪಿಂಚಲು, ಐತ - ಇವರು ಮಲೆಯ ಮದುಮಗಳನ್ನು ಸಿಂಗರಿಸುವಲ್ಲಿ ಪ್ರಮುಖ ಪಾತ್ರಧಾರಿಗಳು.

ಸೇನಾನಾಯ್ಕ, ಅಂತಕ್ಕ ಸೆಟ್ತಿ ಆಕೆಯ ಮಗಳು ಕಾವೇರಿ, ಮತಾಂತರಿ ಫಾದರ್ ಜೀವರತ್ನಯ್ಯ, ಕಾಮುಕ ಚೀಂಕ್ರ, ಆತನ ದುರ್ಬಾಗ್ಯ ಹೆಂಡತಿ ದೇಯಿ, ರೋಗಿಷ್ಠ ಗಂಡನ ಶುಶ್ರೂಷೆಯಲ್ಲೇ ನೆಮ್ಮದಿ ಕಾಣುವ ಅಕ್ಕಣಿ, ಕೇಡಿ/ಪುಂಡಾಡಿ ಕರೀಂಸಾಬ, ಆತನ ಚೇಲ ಪುಡಿಸಾಬ, ಸಾಧ್ವಿಯರಾದ ಜಟ್ಟಮ್ಮ, ದೇವಮ್ಮ, ರಂಗಮ್ಮ, ಜಿಪುಣ ಮಂಜಭಟ್ಟ, ಅಂತರ್ಯಾಮಿಯಾದ ಹೊಳೆದಂಡೆಯ ಸಂನ್ಯಾಸಿ ಮುಂತಾದವರೆಲ್ಲಾ ಮದುಮಗಳ ಸಹಚಾರರು. ಅಂದರೆ ಉಪಕಥೆಗಳಿಗೆ ಕಾರಣಕರ್ತರು.

ಆದರೆ ಇಲ್ಲಿ ಉಪಕಥೆಯ ಮೂಲಕವೇ ಪ್ರಮುಖ ಕಥೆಯನ್ನೂ ಘಟನಾವಳಿಗಳನ್ನೂ ಹೇಳಿದ, ಹಾಗೆ ಹೇಳಲು ಹಣೆದ ನಿರೂಪಣಾಶೈಲಿಗೆ ಎರಡು ಮಾತಿಲ್ಲ. ನಿಜವಾಗಿಯೂ ಇಲ್ಲಿ ಯಾರೂ ಮುಖ್ಯರಲ್ಲ. ಅಮುಖ್ಯರೂ ಅಲ್ಲ!

ಕುವೆಂಪು ಅವರು ಇಲ್ಲಿ ಪ್ರಮುಖವಾಗಿ ಮೂವರು ಮದುಮಗಳನ್ನು ಪ್ರತಿಪಾದಿಸುತ್ತಾರೆ. ಒಬ್ಬಳು ಬೆಟ್ಟಳ್ಳಿ ಕಲ್ಲೇಗೌಡರ ಹೊಲೆಯಕೇರಿಯಲ್ಲಿರುವ ಹೊಲೆಯನಾದ ಗುತ್ತಿ. ಇನ್ನೊಬ್ಬಳು ಗೌಡತಿಯಾದ ಹೂವಳ್ಳಿ ಚಿನ್ನಮ್ಮ. ಇಬ್ಬರೂ ಕಾರಣಾಂತರಗಳಿಂದ ತಮಗಿಷ್ಟವಿಲ್ಲ ಮದುವೆಯಿಂದ ತಪ್ಪಿಸಿಕೊಳ್ಳಲು ತಮ್ಮ ಪ್ರಿಯಕರನೊಂದಿಗೆ (ತಿಮ್ಮಿಯ ಪ್ರಿಯಕರ ಸಿಂಬಾವಿ ಒಡೆಯರ ಹೊಲಗೇರಿ ವಾಸಿಯಾದ ಗುತ್ತಿಯಾದರೆ ಚಿನ್ನಮ್ಮಳ ಪ್ರಿಯತಮ ಕೋಣೂರಿನ ಮುಕುಂದಯ್ಯ ಗೌಡ್ರು) ಓಡಿಹೋಗಿ ಸದಾ ಮದುಮಗಳಾಗಿ ಕಂಗೊಳಿಸುತ್ತಿದ್ದ ದಟ್ಟ ಮಲೆಯಲ್ಲಡಗಿರುತ್ತಾರೆ. (ಸಂದರ್ಭ ಹಾಗೂ ಕಾಲ ಎರಡೂ ಭಿನ್ನವಾಗಿರುತ್ತದೆ. ಒಂದೇ ದಿನ/ಒಂದೇ ಸಮಯದಲ್ಲೇ ಇಬ್ಬರೂ ಓಡಿ ಹೋಗುವುದಿಲ್ಲ.)
ಆದರೆ ಹೊಲೆಯನಾದ ಗುತ್ತಿಯ ಪಲಾಯನದಲ್ಲೂ ಹೂವಿನಂತಹ ಚೆಲುವೆ ಚಿನ್ನಮ್ಮಳ ಪಲಾಯನದಲ್ಲೂ ಇರುವ ಸಾಮ್ಯತೆ/ವಿರುದ್ಧತೆಯನ್ನು ಕಣ್ಣಿಗೆ ಕಟ್ಟಿದಂತೇ ಚಿತ್ರಿಸುತ್ತಾರೆ ಕುವೆಂಪು. ಮೈನವಿರೇಳಿಸುವ ಪ್ರಸಂಗ, ಕಾನನ ಚಿತ್ರಣ, ಹೋರಾಟ, ಅಂತರ್ಯುದ್ಧದ ಜೊತೆ ಬಹಿರ್ಯುದ್ಧ, ಮನದೊಳಗಿನ ತಲ್ಲಣ, ಹೊಯ್ದಾಟ, ಹೆಣ್ಮನಸಿತ ನೋವು, ಯಾತನೆ, ಕೊರಗು, ಮುಗ್ಧತೆ ತುಂಬಿದ ಆಶಯ ಎಲ್ಲವೂ ನಮ್ಮನ್ನು ಓದುತ್ತಿದ್ದಂತೆ ಮಂತ್ರಮುಗ್ಧರನ್ನಗಿಸುತ್ತದೆ. ಎಲ್ಲೋ ಒಂದು ಕಡೆ ನಡೆಯುವ ಪ್ರತಿಘಟನೆಯೊಳಗೇ ನಾವೂ ನಮ್ಮನ್ನು ಒಂದಾಗಿಸಿಕೊಂಡು ಬಿಡುತ್ತೇವೆ. ಕೆಲವೊಂದು ಘಟನೆಗಳಲ್ಲಿ ಸಿನಿಮೀಯತೆಯೂ ಮೇಳೈಸಿರುವುದರಿಂದ ಈ ಕಾಲಕ್ಕೂ ಅವು ಪ್ರಸ್ತುತವೆನಿಸುತ್ತವೆ. ರೋಮಾಂಚಕತೆ, ಕುತೂಹಲ, ಮೈ ನವಿರೇಳಿಸುವ ಕಥಾಕಾನನ ಸರಾಗವಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಪ್ರಧಾನವಾಗಿ ಮೂರು ಅಂಶಗಳನ್ನು ಕಾಣುತ್ತೇವೆ.

ಮೊದಲಿಗೆ ಆ ಕಾಲದ ಜನಜೀವನ ಹಾಗೂ ಸಾಮಾಜಿಕ ಚಿತ್ರಣ

ಈ ಕಾದಂಬರಿಯುದ್ದಕ್ಕೂ ಕಾಣಸಿಗುವುದು ಆ ಕಾಲದ ಸಾಮಾಜಿಕ ಚಿತ್ರಣ. ಅಂದರೆ ವಿವೇಕಾನಂದರು ಭವ್ಯ ಭಾರತವನ್ನುದ್ದೇಶಿಸಿ ಅಮೇರಿಕಾದಲ್ಲಿ ಸಂದೇಶವನ್ನಿತ್ತು ನಮ್ಮ ಸಂಸ್ಕೃತಿಯನ್ನು ಸಾರಿದ, ಸಾರುತ್ತಿದ್ದ ಸಮಯ. ಆ ಕಾಲದಲ್ಲಿ ಪುಟ್ಟ ಹಳ್ಳಿಯಾದ ದಟ್ಟ ಕಾಡು, ಮಲೆಗಳಿಂದಲೇ ಕೂಡಿದ್ದ, ತೀರ್ಥಳ್ಳಿ, ಮೇಗರವಳ್ಳಿ, ಕೋಣೂರು, ಬೆಟ್ಟಳ್ಳಿ, ಹೂವಳ್ಳಿ, ಸಿಂಬಾವಿ ಹಳ್ಳಿಗಳೊಳಗಿನ ಅರಾಜಕತೆ, ದಾರಿದ್ರ್ಯತೆ, ಅಸಂಸ್ಕೃತಿಯಲ್ಲೂ ಒಂದು ವಿಶಿಷ್ಟವಾದ ಸಂಸ್ಕೃತಿಯನ್ನೆಳೆದುಕೊಂಡು, ಜಾತಿ, ಮತ, ಮೂಢನಂಬಿಕೆ, ಕಂದಾಚಾರಗಳನ್ನೇ ಹೊದ್ದು ಹಾಸಿಕೊಂಡು, ಪಶುವಿಗೂ ಹೊಲೆಯನಿಗೂ ಏನೊಂದೂ ವ್ಯತ್ಯಾಸವನ್ನೇ ಕಾಣದ, ಸಾಮಾಜಿಕ ಜನ ಜೀವನ.

ವಿಶೇಷವೆಂದರೆ ಇಲ್ಲಿ ಹೊಲೆಯನೇ ತಾನು ಪರಿತ್ಯಕ್ತ ಎಂದು ಸಾರಿಕೊಂಡು ಹಾಗೇ ಜೀವಿಸುತ್ತಾ. ತನ್ನನ್ನೂ ಪಶುವಿಗೇ ಹೋಲಿಸಿಕೊಂಡು, ಪಶೂತ್ವವನ್ನೇ ಸುಖಿಸುತ್ತಾ, ತುಸು ಗೌರವ ಸಿಕ್ಕರೂ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿ ಆ ಜೀವನದಲ್ಲೇ ಸಾರ್ಥಕತೆಪಡೆಯುವ ಒಂದು ಮನೋಭಾವ ಬಲು ಬೆರಗು ಮೂಡಿಸುತ್ತದೆ. ಹಾಗೆಯೇ ಮನಭಾರಗೊಳಿಸುವುದೂ ದಿಟ.
ಜೊತೆಗೇ ಮೂಕಪ್ರಾಣಿಗಳ ಪ್ರತಿ ಅವರಿಗಿದ್ದ ಪ್ರೀತಿ, ವಿಶ್ವಾಸ, ಭಾವಾನಾ ಸಂಬಂಧವನ್ನರಿಯಲು ಗುತ್ತಿ ಹಾಗೂ ಆತನ ನಾಯಿ ಹುಲಿಯನ ಪ್ರಸಂಗಗಳನ್ನೂ, ಕೊನೆಯಲ್ಲಿ ಕೊನೆಯಾಗುವ ಅವರ ಋಣಾನುಬಂಧವನ್ನೂ ಓದಲೇಬೇಕು. ಎಂತಹವರಿಗಾದರೂ ಒಮ್ಮೆ ಪಿಚ್ಚೆನಿಸುವಂತೆ ಆಗುವುದು.

ಎರಡನೆಯ ಅಂಶವೆಂದರೆ ಮತಾಂತರದ ಅವಾಂತರ

ಕಾದಂಬರಿಯಲ್ಲಿ ಈ ಪಿಡುಗು ಯಾವ ರೀತಿ ಆ ಕಾಲದಲ್ಲೇ ಬೇರುಬಿಡತೊಡಗಿತ್ತೆಂದು ನಿಚ್ಚಳವಾಗಿ ತಿಳಿಯತೊಡಗುತ್ತದೆ. ಊರಿಗೆ ಫಾದರ್ ಆಗಿ ಬಂದ ಪಾದರಿ ಜೀವರತ್ನಯ್ಯ, ಹೇಗೆ ಅಮಾಯಕರ, ಮುಗ್ಧರ ಮನಸನ್ನು ಅಮಿಶಗಳೊಂದಿಗೆ ಸೆಳೆದುಕೊಂಡು, ಅವರ ದಾರಿದ್ರ್ಯತೆಯನ್ನೇ ಬಂಡವಾಳವನ್ನಾಗಿಸಿ ಮತಾಂತರಕ್ಕೆ ಹುನ್ನಾರು ನಡೆಸುತ್ತಿದ್ದ ಎನ್ನುವುದನ್ನು ಕಣ್ಣಿಗೆ ಕಟ್ಟುವಂತೇ ಚಿತ್ರಿಸಿದ್ದಾರೆ ಕುವೆಂಪು. ಆದರೆ ಇದರಲ್ಲಿ ಬ್ರಾಹ್ಮಣರ ಹಾಗೂ ತುಸು ಮೇಲ್ ಪಂಗಡದವರಾದ ಗೌಡರ ಕೊಡುಗೆಯೂ ಅಪಾರವಾಗಿತ್ತೆಂದು ಹೇಳಲು ಮರೆಯರು. ಹಾಗಾಗಿ ಕುವೆಂಪು ಅವರೇ ಹೇಳುವಂತೆ ಇಲ್ಲಿ ಯಾವುದೂ ಯಕಃಶ್ಚಿತವಲ್ಲ!
ಮೂರನೆಯ ಹಾಗೂ ಪ್ರಮುಖ ಅಂಶವೆಂದರೆ ಪ್ರಾಕೃತಿಕ ವರ್ಣನೆ.

ಮಳೆಕಾಡಿನ ಚಿತ್ರಣ ರುದ್ರಭಯಂಕರವೆನಿಸುತ್ತದೆ. ಹುಲಿಕಲ್ ಗುಡ್ಡದ ಚಿತ್ರಣ ಇಲ್ಲೇ ಎಲ್ಲೋ ಪಕ್ಕದಲ್ಲೇ ಗುಡ್ಡವಿರುವಂತೆ, ಎಲ್ಲೋ ದೂರದಿಂದ ಹುಲಿ ಗರ್ಜನೆ ಕೇಳಿದಂತೆ ಓದುಗನಿಗೂ ಭಾಸವಾಗುವಷ್ಟು ವಾಸ್ತವವಾಗಿದೆ.
ಕಾದಂಬರಿಯಲ್ಲಿ ಒಂದು ಕಡೆ ಕುವೆಂಪು ಅವರು ಪ್ರಕೃತಿಯಲ್ಲುಂಟಾಗುವ ಬದಲಾವಾಣೆ ಹೇಗೆ ಅಸಂಸ್ಕೃತ, ಅನಕ್ಷರಸ್ಥ, ಭಾವನೆಗಳೇ ಬತ್ತಿ ಹೋದ ಮನುಷ್ಯನೊಳಗೂ ಎಲ್ಲೋ ಸುಪ್ತವಾಗಿ ಅಡಗಿರುವ ವಿಸ್ಮೃತಿಯೊಳಗನ ಸ್ಮೃತಿಯನ್ನು ಬಡಿದಬ್ಬಸಿ ವರ್ಣನಾತೀತ ಅನುಭೂತಿಯನ್ನು ಕೊಡುತ್ತದೆ ಎನ್ನುವುದನ್ನು ಈ ರೀತಿ ವರ್ಣಿಸುತ್ತಾರೆ.

ಸಂದರ್ಭದ ಹಿನ್ನಲೆ : ಇಲ್ಲಿ ಬರುವ ಹಳೆಮನೆ ಸುಬ್ಬಣ್ಣ ಹೆಗ್ಗಡೆ ಸ್ವಭಾವತಃ ಅಸಂಸ್ಕೃತ. ಸಂಸ್ಕಾರ ವಿಹೀನ. ಹಂದಿದೊಡ್ಡಿ, ಕುರಿದೊಡ್ಡಿ, ಕೋಳಿ ಹಿಕ್ಕೆಯಲ್ಲೇ ಮೈತಿಕ್ಕಿ ಕೊಂಡು ವಾರದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡಿ ಬಟ್ಟೆ ಒಗೆಯುವವ ಮನುಷ್ಯ. ಪ್ರತಿದಿನ ಸ್ನಾನ ಮಾಡುವವ ಈ ಲೋಕಕ್ಕೇ ಸಲ್ಲದವ ಎಂದು ಬಲವಾಗಿ ನಂಬಿದವ. ನಂಬಿದಂತೇ ಬಾಳುತ್ತಿರುವವ. ಅಂತಹವನಲ್ಲೂ ಬೆಳಗಿನ ಪ್ರಾಕೃತಿಕ ಬದಲಾವಣೆ ಯಾವರೀತಿ ಆನಂದಾನುಭೂತಿಯನ್ನು ತುಂಬಿತು!!.. ಇದಕ್ಕೆ ಎಲ್ಲೋ ಏನೋ ಪೂರ್ವಜನ್ಮದ ಸ್ಮರಣೆಯೋ ಇಲ್ಲಾ ಸುಪ್ತವಾಗಿರುವ ‘ಅಸ್ಮೃತಿ’ಯೋ ಕಾರಣವಾಗಿರಬಹುದು ಎಂಬುದನ್ನು ಕುವೆಂಪು ಅವರು ಈ ರೀತಿ ವಿವರಿಸುತ್ತಾರೆ. ಅವರ ಈ ಕೆಳಗಿನ ವರ್ಣನೆ ನನ್ನ ಸ್ಮೃತಿಗೂ ಸಂಪೂರ್ಣ ಎಟುಕಿತೆಂದು ಹೇಳೆನು. ಅರ್ಥೈಸಿಕೊಳ್ಳಲು ಯತ್ನಿಸಿದಷ್ಟೂ ದೂರಾಗುವ ಇದರೊಳಗಿನ ಮರ್ಮ ನಿಮಗೆ ಸಂಪೂರ್ಣವಾಗಿ ತಿಳಿದಲ್ಲಿ ನನಗೂ ತಿಳಿಸಬೇಕಾಗಿ ವಿನಂತಿ.

"ಮನುಷ್ಯನು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿಯೇ ಅವನ ಅಂತಃಪ್ರಕೃತಿ ಸೃಷ್ಟಿಯ ಬಹಿಃಪ್ರಕೃತಿಗೆ ಅನುಯಾಯಿಯಾಗಿರುತ್ತದೆ. ಆತನ ಆತ್ಮಕೊಶವು ಬಹು ಜನ್ಮಗಳ ಸಂಸ್ಕಾರಗಳಿಂದ ತುಂಬಿರುವಂತೆ ಆತನ ಅನ್ನಮಯಕೋಶವೂ ಪೃಥ್ವಿಯಲ್ಲಿ ಪ್ರಾಣೋತ್ಪತ್ತಿಯಾದಂದಿನಿಂದ ಮೊದಲುಗೊಂಡು ಇಂದಿನವರೆಗೆ ಜೀವವು ಕೈಗೊಂಡ ನಾನಾರೂಪದ ನಾನಾ ಪ್ರಯೋಗದ ನಾನಾ ಕಷ್ಟ ಸಂಕಟಗಳ ನಾನಾ ಸುಖ ಸಂತೋಷಗಳ ಮಹಾ ಸಾಹಸಯಾತ್ರೆಗಳ ಸಮಗ್ರ ಪರಿಣಾಮ ಮುದ್ರೆಯನ್ನೂ ‘ಅಸ್ಮೃತಿ’ ರೂಪದಲ್ಲಿ ಪಡೆದಿರುತ್ತದೆ. ಆ ಅಪಾರ್ಥಿವ ಮತ್ತು ಪಾರ್ಥಿವ ಸಂಸ್ಕಾರ ಕೋಶಗಳೆರಡೂ ನಮ್ಮ ಬಾಳ್ವೆಯ ಹೃದಯದ ಇಕ್ಕೆಲಗಳಲ್ಲಿ ಶ್ವಾಸಕೋಶಗಳಂತಿವೆ. ಅಪ್ರಜ್ಞಾಸೀಮೆಯಲ್ಲಿರುವ ಆ ಸಂಸ್ಕಾರಗಳಲ್ಲಿ ಯಾವುದನ್ನಾದರೂ ಮುಟ್ಟಿ ಎಚ್ಚರಿಸುವಂತಹ ಸನ್ನಿವೇಶ ಒದಗಿದರೆ ನಮಗೆ ಬಹುತೇಕ ಆನಂದವೂ ಅಕಾರಣ ಸಂಕಟವೂ ಸಂಭವಿಸಿದಂತಾಗುತ್ತದೆ. ಅಲ್ಪ ಕಾರಣದಿಂದ ಮಹತ್ತಾದ ಅನುಭವ ಉಂಟಾದಂತೆ ಭಾಸವಾಗಿ ಆಶ್ಚರ್ಯವಾಗುತ್ತದೆ. ಎಳೆಬಿಸಿಲಿನಲ್ಲಿ ಹಸುರು ಗರಿಕೆಯ ಕುಡಿಯಲ್ಲಿ ಮಿರುಗುವ ದುಂಡು ಮುತ್ತಿನ ತೆರೆದ ಇಬ್ಬನಿ, ಪ್ರಾಣದ ಪ್ರಪ್ರಾಚೀನಾನುಭವದ ಮಹಾ ಸಾಗರದ ‘ಅಸ್ಮೃತಿ’ಯನ್ನು ಕೆರಳಿಸಿ, ಸಮುದ್ರದರ್ಶನದ ಭೂಮಾನುಭೂತಿಯನ್ನುಂಟುಮಾಡಬಹುದು. ಕಾಡಿನಂಚಿನಲ್ಲಿ ಬೈಗುಗಪ್ಪಿನ ಮಬ್ಬಿನಲ್ಲಿ, ಹೆಮ್ಮರದ ದಿಂಡಿನಲ್ಲಿರುವ ಮರಕುಟಿಗನ ಗೂಡಿನ ಪೊಟ್ಟರೆ, ಅತ್ಯಂತ ಪೂರ್ವಕಾಲದ ಬಾಳಿನ ಯಾವುದೊ ಒಂದು ಕಗ್ಗವಿಯನ್ನೋ ಪೆಡಂಭೂತದ ಕಣ್ಣನ್ನೋ ‘ಅಸ್ಮೃತಿ’ಗೆ ತಂದು, ಅನಿರ್ವಚನೀಯವಾದ ಭೀತಿಯನ್ನುಂಟುಮಾಡಬಹುದು. ಪರ್ವತಾರಣ್ಯಗಳ ಭಯಂಕರ ಪ್ರಕೃತಿಯ ಮಧ್ಯೆ ವಾಸಮಾಡುವವರಿಗೆ ಅರ್ಥವಾಗದ, ಆದ್ದರಿಂದ ಅರ್ಥವಿಲ್ಲದ, ಆ ಅನುಭವಗಳು ಪಿಶಾಚಿಗಳಂತೆಯೊ ದೆಯ್ಯ ದ್ಯಾವರುಗಳಂತೆಯೊ ತೋರುತ್ತವೆ. ಕತ್ತಲೆಯಲ್ಲಿ ಆಕಾಶಕ್ಕೆದುರಾಗಿ ಚಾಚಿರುವ ಭೀಮಾಕಾರದ ಕೋಡುಗಲ್ಲಿನಲ್ಲಿ ಪ್ರಾಚೀನಾನುಭವ ಸಮಷ್ಟಿರೂಪದ ‘ಅಸ್ಮೃತಿ’ ಆವಿರ್ಭಾವವಾಯಿತೆಂದರೆ ಬ್ರಹ್ಮರಾಕ್ಷಸ ದರ್ಶನವಾಗುವುದರಲ್ಲಿ ಆಶ್ಚರ್ಯವೇನಿದೆ? ಕಬ್ಬಿಣದ ಪೆಟ್ಟಿಗೆಯ ಖಜಾನೆಯನ್ನು ತೆರೆಯುವುದಕ್ಕೆ ಸಣ್ಣ ಬೀಗದ ಕೈ ಸಾಕಾಗುವಂತೆ ‘ಅಸ್ಮೃತಿ’ಯ ಮಹದೈಶ್ವರ್ಯವನ್ನು ಕೆರಳಿಸಲು ಅತ್ಯಲ್ಪ ಕಾರಣಗಳೂ ಸಾಕಾಗುತ್ತವೆ."
(ಮುದ್ರಣ:೨೦೦೭, ಪುಟ ಸಂಖ್ಯೆ : ೪೪)

ಈ ಮೂರೂ ಅಂಶಗಳನ್ನೂ ಮೀರಿದ, ಕಾದಂಬರಿಯ ಜೀವನಾಡಿಯಾಗಿ, ಜೀವನದಿಯಾಗಿ ಕಥೆಯುದ್ದಕ್ಕೂ ಹರಿಯುವುದು ಸ್ತ್ರೀ ಮನೋಧರ್ಮ :-

ಪ್ರಾರಂಭದಲ್ಲಿ ಗುತ್ತಿ ತಿಮ್ಮಿಯನ್ನು ಹಾರಿಸಿಕೊಂಡು ಹೋಗುವದಕ್ಕೆ ಯೋಚಿಸುವುದರಿಂದ ಶುರುವಾಗುವ ಕಥೆ, ನಿಲ್ಲುವುದು ತಾನು ವರಿಸಬೇಕೆಂದು ಬಯಸಿದ್ದ ಚಿನ್ನಮ್ಮನ್ನು ಅಂತೂ ಕೊನೆಗೆ ಪಡೆಯುವ ಮುಕುಂದಯ್ಯನಲ್ಲಿ. ಸ್ತ್ರೀಯೇ ಇಲ್ಲಿ ಪ್ರಮುಖಳು. ಸ್ತ್ರೀ ಪ್ರಧಾನ ಕಾದಂಬರಿ ಇದೆಂದರೂ ತಪ್ಪಾಗದು. ಪ್ರಕೃತಿ ಹಾಗೂ ಹೆಣ್ಣಿನೊಳಗಣ ಅವಿನಾಭಾವ ಸಂಬಂಧವನ್ನು ಕಥೆಯುದ್ದಕ್ಕೂ ಕಾಣಬಹುದು. ಹೆಣ್ಣಿನ(ಹೊಲೆಯ ಗೌಡ ಎಂಬ ಬೇಧವಿಲ್ಲದೇ)ಮನೋಕಾಮನೆಗಳಿಗೆ, ವಿಪ್ಲವಗಳಿಗೆ, ಹೊಯ್ದಾಟಕ್ಕೆ, ತುಮುಲಕ್ಕೆ, ಅನಿಶ್ಚಿತತೆಗೆ, ನಿರ್ಧಾರಕ್ಕೆ ಸದಾ ಸಾಥ್ ನಿಡುತ್ತದೆ ರಮ್ಯ ಮನೋಹರ ಪ್ರಕೃತಿ. ಅದು ಗುತ್ತಿಯೊಡನೆ ಅಮಾವಾಸ್ಯೆ ರಾತ್ರಿಯಲ್ಲಿ ಹುಲಿಕಾಡಿನ ಮೂಲಕ ಓಡಿಹೋಗುವ ತಿಮ್ಮಿಯ ಜೊತೆಗಾಗಿರಲಿ ಇಲ್ಲಾ ಸುಂಸ್ಕೃತೆ ಚಿನ್ನಮ್ಮ ಮದುವೆಯ ದಿನ ಸಂಜೆಯೇ ಪ್ರಿಯಕರ ಮುಕುಂದಯ್ಯನೊಂದಿಗೆ ಅದೇ ಕಾಡಿನ ದಾರಿಯಾಗಿ ಓಡಿಹೋಗುವ ಸಂದರ್ಭವೇ ಆಗಿರಲಿ..ಪ್ರಕೃತಿಯೇ ಇಲ್ಲಿ ಕಾರಣಕರ್ತ ಹಾಗೂ ಕತೃ.

ಹೆಣ್ಣಿಗೆ ಪರಿಶುದ್ಧತೆ ಇರಬೇಕಾದದ್ದು ಮನಸಿಗೇ ಹೊರತು ಮೈಗಲ್ಲಾ ಎಂಬ ಸಂದೇಶವನ್ನು ತುಂಬಾ ಸರಳವಾಗಿ, ಸುಂದರವಾಗಿ ಯಾರೂ ಒಪ್ಪುವಂತೆ, ಪಿಂಚಲು, ತಿಮ್ಮಿ, ಅಕ್ಕಣಿ, ರಂಗಮ್ಮ ಹಾಗೂ ಚಿನ್ನಮ್ಮರ ಪಾತ್ರದ ಮೂಲಕ ತೋರಿಸಿದ್ದಾರೆ. ಈ ಐವರು ನಾರಿಮಣಿಗಳು ಯಾವ ಪತಿವ್ರತೆಯರಿಗೂ ಕಡಿಮೆಯೆನಿಸರು. ಕುಲ/ಕಸುಬಿನಲ್ಲಿ ಬಹು ಅಂತರವಿದ್ದರೂ ಈ ನಾರಿಯರ ಮನಸಿನೊಳಗಿನ ಮುಗ್ಧತೆಗೆ, ಪರಿಶುದ್ಧತೆಗೆ ಯಾವ ಸೀಮೆಯಾಗಲೀ, ಅಂತರವಾಗಲೀ ಕಾಣಸಿಗದು. ಆಗಿನ ಕಾಲದ ದುಃಸ್ಥಿಗೋ ಪರಿಸ್ಥಿಗೋ ಸಿಲುಕಿ, ಅರಿಯದ ಮುಗ್ಧತೆಗೋ ಇಲ್ಲಾ ಆಮಿಶಕ್ಕೋ ಬಲಿಪಶುವಾಗಿ ಬಿಡಿಸಿಕೊಳ್ಳದಂತಿರುವಾಗ ಆ ಕಾಲದ ಹೆಣ್ಣು ತನ್ನ ಮೈ ಮಾರಿಕೊಂಡರೂ, (ಒಂದು ರೀತಿ ಬಲಾತ್ಕಾರಕ್ಕೊಳಪಡುವುದು) ಅವರ ಮನಸು ಮಾತ್ರ ಅವರ ಮನದಿನಿಯನ ಬಳಿಯೇ ಇರುತ್ತದೆ. ಮಾನಸಿಕ ಭದ್ರತೆ, ನೆಮ್ಮದಿ ಸುಖ-ಸಂತೋಷಗಳಿಗೇ ಅವರ ಮನಸು ತುಡಿಯುತ್ತಿರುತ್ತದೆ. ಅದಕ್ಕಾಗಿಯೇ ಹಂಬಲಿಸುತ್ತಿರುತ್ತದೆ.
ಕೊನೆಯಲ್ಲಿ ಕುವೆಂಪು ಅವರೇ ಹೇಳಿದಂತೆ-
"ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ; ಕೊನೆಮುಟ್ಟುವುದೂ ಇಲ್ಲ"

ನಾನು ಕುವೆಂಪು ಅವರ ಕಾದಂಬರಿಯನ್ನು ವಿಮರ್ಶಿಸುವಷ್ಟು ದೊಡ್ಡವಳಲ್ಲ. ಇದು ನನ್ನ ಉದ್ದೇಶವೂ ಅಲ್ಲ. ಅವರ ಈ ಕೃತಿ "ಕಾನೂರು ಹೆಗ್ಗಡತಿ ಸುಬ್ಬಮ್ಮ" ಕೃತಿಗಿಂತಲೂ ಅತ್ಯುತ್ತಮವಾಗಿದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ. ಎಷ್ಟೆಂದರೂ ಅವರ ಕೃತಿ ಹೋಲಿಕೆಗೆ ಅವರ ಕೃತಿಯೇ ಸಾಟಿ. ಆದಷ್ಟು ಸ್ಪಷ್ಟವಾಗಿ, ಸರಳವಾಗಿ, ಕ್ಲುಪ್ತವಾಗಿ ನನ್ನ ಅಭಿಪ್ರಾಯಗಳನ್ನು(ವಿಮರ್ಶೆಯನ್ನಲ್ಲ!!) ವಿಶದಪಡಿಸಿರುವೆ. ಏನಾದರೂ ಲೋಪದೋಷಗಳಿದ್ದಲ್ಲಿ, ಈ ಮೊದಲೇ ಈ ಕಾದಂಬರಿಯನ್ನು ಓದಿದವರು ತಿದ್ದಿದಲ್ಲಿ, ಸ್ವಾಗತಾರ್ಹ. ವಿಚಾರ ವಿನಿಮಯಗಳಿಗೆ ಸದಾ ಸ್ವಾಗತ. ಉತ್ತಮ ಕೃತಿಗಳನ್ನು ಓದುವಂತೆ ಪ್ರೇರೇಪಿಸುವುದು, ಓದಿರುವುದನ್ನು ಪುನರ್ ಸ್ಮರಿಸುವಂತೆ ಮಾಡುವುದು ಈ ನನ್ನ ಲೇಖನದ ಉದ್ದೇಶ ಅಷ್ಟೇ.

--------*****--------

26 ಕಾಮೆಂಟ್‌ಗಳು:

Unknown ಹೇಳಿದರು...

ಒಂದು ಬೃಹತ್ ಮತ್ತು ಮಹತ್ತಾದ ಕಾದಂಬರಿಯನ್ನು ಓದಿ ಅದರ ಅನುಭವಗಳನ್ನು ಅನಿಸಿಕೆಗಳನ್ನು ಸಮರ್ಥವಾಗಿ ನಮ್ಮೊಂದಿಗೆ ಹಂಚಿಕೊಂಡ್ಡಿದ್ದೀರಿ. ನಾನು ಬಿ.ಎಸ್ಸಿ.ಯಲ್ಲಿದ್ದಾಗ, ಆ ಕಾದಂಬರಿಯನ್ನು ಓದಿದ ಮೇಲೆ, ಈ ಹದಿನಾರು ವರ್ಷಗಳ ಅಂತರದಲ್ಲಿ ಕನಿಷ್ಟ ನಾಲ್ಕು ಬಾರಿಯಾದರು ಪೂರ್ಣವಾಗಿ ಓದಿದ್ದೇನೆ. ಇನ್ನು ಮಧ್ಯಮಧ್ಯದಲ್ಲಿ ಓದಿರುವುದು ಲೆಕ್ಕವೇ ಇಲ್ಲ. ವಿಶ್ವಕವಿಯಾದವನಿಗೆ ಮಾತ್ರ ಅಂತಹ ಮಹತ್ ಕೃತಿಯನ್ನು ರಚಿಸಲು ಸಾಧ್ಯ. ಆ ದೃಷ್ಟಿಯಿಂದ ಕುವೆಂಪು ವಿಶ್ವಕಿವಿಯಾಗಿದ್ದಂತೆ, ವಿಶ್ವಮಾನವರೂ ಹೌದು.

ಮಲೆಗಳಲ್ಲಿ ಮಧುಮಗಳು ಕೃತಿಯ ಅಚ್ಚಹೊಸ ಪ್ರತಿಯೊಂದನ್ನು ನಮ್ಮ ಗ್ರಂಥಾಲಯಕ್ಕೆ ತರಿಸಿದ್ದಾಗ, ಒಬ್ಬ ಸಂಸ್ಕೃತ ಉಪನ್ಯಾಸಕರು ಅದರ ಮೇಲೆ ಕಣ್ಣಾಡಿಸಿದರು. ಅದರ ಬೆಲೆ 180 ರೂಪಾಯಿ ಎಂದಿದ್ದನ್ನು ನೋಡಿ, 'ಪುಟ್ಟಪ್ಪ ಬದುಕಿದ್ದಾಗ ಕನ್ನಡಕ್ಕೆ ಏನೂ ಮಾಡಲಿಲ್ಲ, ಈಗ 180 ರೂಪಾಯಿಗೆ ಇಷ್ಟು ದೊಡ್ಡ ಪುಸ್ತಕವನ್ನು ಚೆನ್ನಾಗಿ ಪ್ರಿಂಟ್ ಮಾಡಿದ್ದಾರೆ' ಎಂದು (2004ರಲ್ಲಿ!) ಹೇಳಿದ್ದರು! ಜೊತೆಗೆ ಆ ಪುಸ್ತಕವನ್ನು ಅವರು ಓದಿರಲಿಲ್ಲವಂತೆ ಕೂಡಾ!

ಹೀಗೆ ಕುವೆಂಪು ಅವರನ್ನು ಒಂದು ಬಾರಿಯೂ ಓದದೆ, ಹೊಗಳುವ, ಟೀಕಿಸುವ ಜನಗಳ ನಡುವೆ ಮರು ಓದು ನಡೆಸಿ, ಅದರ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿರುವ ನಿಮಗೆ ಧನ್ಯವಾದಗಳು.

'ಪ್ರಮುಖವಾಗಿ ಮೂವರು ಮದುಮಗಳನ್ನು ಪ್ರತಿಪಾದಿಸುತ್ತಾರೆ' ಎಂದಿದ್ದೀರಾ. ಅದು ಎರಡು ಎಂದಿರಬೇಕಿತ್ತು ಅಲ್ಲವೆ?

Unknown ಹೇಳಿದರು...

ತೇಜಕ್ಕಾ,
ಅದ್ಭುತವಾದ ಪ್ರಯತ್ನ! ಬಹುಷಃ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಬಗ್ಗೆ ಬರೆಯುವುದು ಅತ್ಯಂತ ಕ್ಲಿಷ್ಟ ಮತ್ತು ಕಠಿಣವಾದ ಕೆಲಸ. ನೀವು ಬಹಳ ತಾಳ್ಮೆಯಿಂದ ಮತ್ತು ಆಸಕ್ತಿಯಿಂದ ಆ ಕೆಲಸ ಮಾಡಿದ್ದೀರಿ, ನಿಮಗೆ ಅಭಿನಂದನೆಗಳು.
ಇನ್ನೇನು ಹೇಳುವುದು? ಈ ಕಾದಂಬರಿಯ ಪ್ರತೀ ವಾಕ್ಯವೂ ಒಂದು ಕಾವ್ಯ!. ನಿಮ್ಮ ಲೇಖನವೂ ಅಷ್ಟೇ ಸುಂದರವಾಗಿದೆ.

sunaath ಹೇಳಿದರು...

ತೇಜಸ್ವಿನಿ,
ಕತೆಯಲ್ಲಿಯ ಜೀವನ ಹಾಗೂ ಕತೆಗಾರನ ಆಶಯ ನಿನ್ನ ವಿಮರ್ಶೆಯಲ್ಲಿ ಅಚ್ಚುಕಟ್ಟಾಗಿ ಬಂದಿವೆ.
ಕನ್ನಡದಲ್ಲಿ ದಲಿತರ ಜೀವನದ ಬಗೆಗೆ ಅನೇಕ ಕಾದಂಬರಿಗಳು ಬಂದಿವೆ. ಬಹುಶಃ ಶಿವರಾಮ ಕಾರಂತರ ‘ಚೋಮನ ದುಡಿ’ ಮೊದಲನೆಯ ಕಾದಂಬರಿ. ಆನಂತರ ಅವರ ‘ಬೆಟ್ಟದ ಜೀವ’ ಬಂದಿತು. ಆದರೆ ನಿಸರ್ಗವೂ ಸಹ ಕಾದಂಬರಿಯ ಮುಖ್ಯ ಪಾತ್ರವಾಗಿ ಬಂದದ್ದು ಕುವೆಂಪುರವರ ಈ ಕಾದಂಬರಿಯಲ್ಲಿ.
ಕನಿಷ್ಠ ತರಗತಿಯಲ್ಲಿ ಜೀವಿಸುವವರ ಜೀವನ ಹಾಗು ಮನೋಧರ್ಮಗಳನ್ನು ಕುವೆಂಪು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.
ಆ ಅವಧಿಯಲ್ಲಿ ಜರುಗುತ್ತಿದ್ದ ಮತಾಂತರಗಳು ಹಾಗು ಅದಕ್ಕೆ ಹೇಗೆ ಮೇಲುವರ್ಗದವರೇ ಕಾರಣರಾದರು ಎನ್ನುವ ವೃತ್ತಾಂತ ಸಹ ಸರಿಯಾಗಿ ಬಂದಿದೆ.
ಇಷ್ಟೆಲ್ಲಾ ಇದ್ದರೂ ಸಹ, ಕಾದಂಬರಿಯ ಮೊದಲರ್ಧ ಭಾಗದಲ್ಲಿ ದಲಿತರ ಬದುಕು, ಬವಣೆಗಳಿಗೆ ಮೀಸಲಾದ ಕಾದಂಬರಿ, ಉತ್ತರಾರ್ಧದಲ್ಲಿ ಸಾಹಸಪ್ರಧಾನ(!)ವಾಗಿಬಿಟ್ಟಿದೆ. ಇದು ಬಹುಶಃ ಕಥಾನಕದ ಅನಿವಾರ್ಯತೆಯೂ ಇರಬಹುದು. Anyway, ಇಂತಹ ಮತ್ತೊಂದು ಕಾದಂಬರಿ ಕನ್ನಡದಲ್ಲಿ ಮತ್ತೊಂದಿಲ್ಲ ಎಂದು ಹೇಳಬಹುದು.
ಕಾದಂಬರಿಯ ಭಾಷೆ, ಶೈಲಿ, ಆಶಯ ಹಾಗೂ ಕಥಾನಕಗಳನ್ನು ಸೂಕ್ತವಾಗಿ ವಿಮರ್ಶೆ ಮಾಡಿದ್ದಕ್ಕಾಗಿ ನಿನಗೆ ಅಭಿನಂದನೆಗಳು.

PARAANJAPE K.N. ಹೇಳಿದರು...

ತೇಜಸ್ವಿನಿಯವರೇ,
ಸುಮಾರು ಹತ್ತು ವರುಷಗಳ ಹಿ೦ದೆ ಓದಿದ್ದ ಕೃತಿಯನ್ನು ಇನ್ನೊಮ್ಮೆ ಓದುವ೦ತೆ ನಿಮ್ಮ ಬರಹ ಪ್ರೇರೇಪಿಸಿದೆ. ಕುವೆ೦ಪು ಅವರ ಕಾವ್ಯಸೃಷ್ಟಿ ಯ೦ತೆ ಈ ಕಾದ೦ಬರಿಯಲ್ಲಿ ಮಲೆನಾಡ ಪರಿಸರ, ಆಚರಣೆಗಳು, ಸಾಮಾಜಿಕ ಪಿಡುಗುಗಳು, ಜಾತಿ ತಾರತಮ್ಯ, ಮತಾ೦ತರ, ಇವುಗಳನ್ನು ಕಲಾತ್ಮಕವಾಗಿ ಹೆಣೆದ ಶೈಲಿ ಮತ್ತು ಮಲೆನಾಡ ಪರಿಸರದ ವೈಭವವನ್ನು ಅಕ್ಷರರೂಪಕ್ಕೆ ಇಳಿಸಿದ ಪರಿ ಅನನ್ಯ ಅನುಭವ ಕೊಡುತ್ತದೆ. ನೆನಪಿನಾಳಕ್ಕೆ ಇಳಿದಿದ್ದ ಒ೦ದು ಅಪೂರ್ವ ಕೃತಿಯನ್ನು ಮತ್ತೆ ನೆನಪಿಸಿ ಮೆಲುಕು ಹಾಕಿದ್ದೀರಿ. ಬಹಳ ಚೆನ್ನಾಗಿ, ಸ್ಥೂಲವಾಗಿ ನಿರೂಪಿಸಿದ್ದೀರಿ. ಉತ್ತಮ ಬರಹ.

ತೇಜಸ್ವಿನಿ ಹೆಗಡೆ ಹೇಳಿದರು...

@ಸತ್ಯನಾರಾಯಣ ಅವರೆ,

ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಆಭಾರಿ. ಹೌದು ಕುವೆಂಪು ಅವರಿಂದ ಮಾತ್ರ ಇಂತಹ ಒಂದು ಕೃತಿಯನ್ನು ರಚಿಸಲು ಸಾಧ್ಯ. ಯಾವುದೇ ಪುಸ್ತಕವನ್ನಾಗಲೀ ಅದನ್ನು ಓದಿ, ಮತ್ತೆ ಮತ್ತೆ ಓದಿ, ಅದರ ಕುರಿತು ಟೀಕೆಯನ್ನೋ, ಟಿಪ್ಪಣಿಯನ್ನೋ ಮಾಡಬೇಕು. ಇಲ್ಲಿ ನಾನು ಟೀಕೆಯನ್ನಾಗಲೀ, ವಿಮರ್ಶೆಯನ್ನಾಗಲೀ ಮಾಡ ಹೋಗಲಿಲ್ಲ. ನನ್ನಭಿಪ್ರಾಯಗಳನ್ನು, ಈ ಕಾದಂಬರಿ ಓದಿದಾಗ ನನಗನಿಸಿದ್ದನ್ನು ನೇರವಾಗಿ ಪ್ರಾಮಾಣಿಕವಾಗಿ ಹೇಳಿದ್ದೇನೆ. ಇಂತಹ ಮೇರು ಕೃತಿಯ ವಿಮರ್ಶೆಮಾಡಲು ನನ್ನಂತವರಿಂದ ಸಾಧ್ಯವಾಗದ ಮಾತು.

ಅಂದಹಾಗೆ ನೀವು ಕೇಳಿದ ಪ್ರಶ್ನೆಯ ಕುರಿತು: ಇಲ್ಲಿ ಮೊದಲೆರಡು ಮದುಮಗಳಂದಿರನ್ನು ವಿವರಿಸುತ್ತಾ ಮೂರನೆಯ ಮದುಮಗಳು "ಮಲೆಯೇ" ಎಂದು ಲೇಖನದಲ್ಲೇ ಹೇಳಿದ್ದೇನೆ. ನಿತ್ಯ ನೂತನ ಸದಾ ಹೊಸತೆನಿಸುವ, ಕಂಗೊಳಿಸುತ್ತಿದ್ದ ಆ ಕಾಲದ ಆ ಊರಿನ ದಟ್ಟ ಮಲೆಯೇ ಮೊದಲೆರಡು ಮದುಮಗಳಂದಿರ ಜೊತೆಯಾಗುವುದು. ಇದು ನಾನು ಕಂಡುಕೊಂಡ ಅಂಶ. ನನ್ನ ವೈಯಕ್ತಿಕ ಅನಿಸಿಕೆ ಮಾತ್ರ. ನಿಮಗೆ ನನ್ನ ವಿವರಣೆ ಸಮಾಧಾನ ತಂದಿದೆ ಎಂದೆಣಿಸುವೆ.ಚರ್ಚೆಗೆ, ಅಭಿಪ್ರಾಯ/ಅನಿಸಿಕೆಗಳ ವಿನಿಮಯಕ್ಕೆ ಮುಕ್ತ ಅವಕಾಶವಿದೆ. ಸದಾ ಸ್ವಾಗತ..:) ಧನ್ಯವಾದಗಳು.


@ಮಧು,

ಸಾಮಾನ್ಯವಾಗಿ ಬೃಹತ್ ಕಾದಂಬರಿಗಳ ಕುರಿತು ಕೆಲವರಿಗೆ ಅನಾಸಕ್ತಿಯಿರುತ್ತದೆ. ಯಾವುದೋ ಪೂರ್ವಾಗ್ರಹಕ್ಕೀಡಾಗಿಯೋ ಇಲ್ಲಾ ಇದರಲ್ಲೇನಿದೆ ಮಹಾ ಎಂದೆಣಿಸಿಯೋ ಕಡೆಗಣಿಸಿರುತ್ತಾರೆ.(ನಾನೂ ಕೆಲವೊಂದು ಪುಸ್ತಕಗಳ ಕುರಿತು ಈ ಭಾವನೆ ಹೊಂದಿದ್ದೆ... ಇದರಿಂದಾಗಿ ಸಾಹಿತ್ಯಿಕ ದೃಷ್ಟಿಯಿಂದ ನಷ್ಟವನ್ನನುಭವಿಸಿದ್ದಿದೆ..) ಅಂತಹವರಿಗಾಗಿ, ಹಾಗೂ ಈ ಮೊದಲೇ ಓದಿದವರನ್ನು ಈ ಮೂಲಕ ವಿಚಾರ ವಿನಿಮಯಕ್ಕಾಗಿ ಈ ಲೇಖನವನ್ನು ಬರೆದೆ. ಪ್ರಯತ್ನವನ್ನೇನೋ ಪಟ್ಟಿರುವೆ. ಎಷ್ಟರಮಟ್ಟಿಗೆ ಸರಿಯಾಗಿದೆ ಎಂಬುದು ನನಗಂತೂ ತಿಳಿದಿಲ್ಲ :) ಮುಂದೆಯೂ ಕೆಲವು ಪುಸ್ತಕಗಳ ಕುರಿತು ಕಿರು ಲೇಖನವನ್ನು ಬರೆಯುವ ಆಶಯವಿದೆ. ನೋಡಬೇಕು.

ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು.

@ಕಾಕಾ,

ನಿಮ್ಮ ಪುಟ್ಟ ಪ್ರತಿಕ್ರಿಯೆಯ ಮೂಲಕವೇ ಈ ಕೃತಿಯ ಕಿರು ವಿಮರ್ಶೆಯನ್ನೇ ಮಾಡೀರುವಿರಿ. ತುಂಬಾ ಧನ್ಯವಾದಗಳು. ನೀವು ಹೇಳಿದ್ದು ಸತ್ಯ. ಇಂತಹ ಮತ್ತೊಂದು ಕಾದಂಬರಿ ಕನ್ನಡದಲ್ಲಿ ಮೂಡಿಬಂದಿಲ್ಲ.

@ಪರಾಂಜಪೆ ಅವರೆ,

ನನ್ನ ಆಶಯವೂ ಇದೇ ಆಗಿತ್ತು.. "ನೆನಪಿನಾಳಕ್ಕೆ ಇಳಿದಿದ್ದ ಒ೦ದು ಅಪೂರ್ವ ಕೃತಿಯನ್ನು ಮತ್ತೆ ನೆನಪಿಸಿ ಮೆಲುಕುಹಾಕುವಂತೆ ಮಾಡುವುದು". ಅದು ಈಡೇರಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಈ ಸಂತಸವನ್ನು ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು.

ಚಂದ್ರಕಾಂತ ಎಸ್ ಹೇಳಿದರು...

ತೇಜಸ್ವಿನಿ
ನಿಮ್ಮ ಈ ಲೇಖನ ಅದೆಷ್ಟು ದಿನಗಳ ಪರಿಶ್ರಮವೋ ? ಅಲ್ಲವೇ?ನಾನು ಈ ಕಾದಂಬರಿಯನ್ನು ಓದಿ ಹದಿನೈದು ವರ್ಷಗಳ ಮೇಲಾಯಿತು.ಹೀಗಾಗಿ ನಿಮ್ಮ ವಿಮರ್ಶೆಯನ್ನು ವಿಮರ್ಶೆ ಮಾಡಲು ನಾ ಹೋಗುವುದಿಲ್ಲ.

ಇಲ್ಲಿ ಗುತ್ತಿ- ಒಂದೆಡೆ ಸ್ತ್ರೀಪಾತ್ರದಂತೆ ಮತ್ತೊಮ್ಮೆ ಪುರುಷ ಪಾತ್ರದಂತೆ ಬಂದಿದೆ. ಅದನ್ನು ಸ್ವಲ್ಪ ಸರಿಪಡಿಸಬಹುದು.

ಮಲೆಗಳಲ್ಲಿ ಮದುಮಗಳು ಹಾಗೂ ಅವರ ಕಾನೂರು ಹೆಗ್ಗಡಿತಿ ಕಾದಂಬರಿಗಳನ್ನು ನಾವು ಓದುತ್ತಾ ಹೋದಂತೆ ನಾವು ಮಲೆನಾಡಿನ ಒಬ್ಬ ಪ್ರಜೆಯಾಗಿ ಕಾದಂಬರಿಯ ಲೋಕದೊಳಗೇ ಪ್ರವೇಶಿಸುತ್ತೇವೆ. ಅದೇ ಅವರ ಈ ಕಾದಂಬರಿಗಳ ವೈಶಿಷ್ಟ್ಯ.

Ittigecement ಹೇಳಿದರು...

ತೇಜಸ್ವಿನಿ..

ನಾನು ಈ ಕಾದಂಬರಿ ಓದಿಲ್ಲ..

ನೀವು ಬರೆದ ಈ ಲೇಖನ ಓದಿದ ಮೇಲೆ

ನಾಳೆಯೆ ಖರಿದಿಸಿ ಓದಬೇಕೆಂಬ ತವಕ ಹುಟ್ಟಿದೆ...

ವಿಮರ್ಶೆ ಚೆನ್ನಾಗಿದೆ..

ನಿಮ್ಮ ಅಧ್ಯಯನ ಶೀಲತೆಗೆ
ಅಭಿನಂದನೆಗಳು..

Sushrutha Dodderi ಹೇಳಿದರು...

’ಮಲೆಗಳಲ್ಲಿ ಮದುಮಗಳು’ ನಾನು ಓದಿದ ಅತ್ಯಂತ ಕ್ಲಾಸಿಕ್ ಕಾದಂಬರಿ. ಅದರಲ್ಲಿ ಮುಳುಗಿಕೊಂಡು ಓದಿದ ಅನುಭವ ಸಹ ಇನ್ನೂ ಹಸುರಾಗಿದೆ: ಮಲೆಕಾನಿನ ಹಾಗೆ. ಕೊನೆಕೊನೆಯ ಪುಟ ಬರ್ತಿದ್ದಾಗ ’ಅಯ್ಯೋ ಮುಗಿದು ಹೋಗತ್ತಲ್ಲಾ..’ ಅಂತ ನಿಧನಿಧಾನಕ್ಕೆ ಓದ್ತಿದ್ದೆ ನಾನು..! ’ಓದೋ ಸುಖ’ದಲ್ಲಿ ಅದೆಂಥಾ ’ನಶೆ’ ಇದೆ ಅಂತ ಗೊತ್ತಾಗ್ಬೇಕೂಂದ್ರೆ ಆ ಕಾದಂಬರಿ ಓದ್ಬೇಕು.

’ಮಲೆಗಳಲ್ಲಿ..’ಯಷ್ಟು ದಟ್ಟವಾದ ಮತ್ತೊಂದು ಕಾದಂಬರಿ ನಂಗಂತೂ ಸಿಕ್ಕಿಲ್ಲ ಆಮೇಲೆ. ಅಷ್ಟಿಲ್ದೇ ಹೇಳ್ತಾರಾ ಜನ: ’ಕುವೆಂಪು ಬರೆದಿದ್ದು ಎರಡೇ ಕಾದಂಬರಿ.. ಆದ್ರೆ.. ಅವರ ಕಥನಶಕ್ತೀನ ಪ್ರೂವ್ ಮಾಡ್ಲಿಕ್ಕೆ ಮತ್ತೊಂದು ಬೇಕಾಗೇ ಇಲ್ಲ!’

ಜೈ ಕುವೆಂಪು!

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಾನು ಈ ಕಾದಂಬರಿಯನ್ನು ಓದಿಲ್ಲ. ನಿಮ್ಮ ತಾಳ್ಮೆಯ ಓದು, ಅದನ್ನು ಅರ್ಥೈಸಿಕೊಂಡ್ ರೀತಿ, ಮತ್ತೆ ತೂಕಬದ್ಧವಾದ ವಿಮರ್ಶೆಗಳು, ನನಗೆ ಆ ಕಾದಂಬರಿಯನ್ನು ಓದುವಂತೆ ಕುತೂಹಲ ಕೆರಳಿಸಿದೆ....ಓದುತ್ತೇನೆ.....

PaLa ಹೇಳಿದರು...

ನಾನು ಒಂದು ೬ ತಿಂಗ್ಳ ಹಿಂದಷ್ಟೇ ಇದನ್ನ ಓದಿ ಮುಗ್ಸಿದೆ.. ಪೀಂಚಲು ಐತುವಿನ ದಾಂಪತ್ಯ, ನಾಯಿಗುತ್ತಿ ಹುಲಿಯರ ಸಂಬಂಧ, ತಿಮ್ಮಿ ಹುಲಿಕಲ್ ಗುಡ್ಡದಲ್ಲಿ ಸೂರ್ಯೋದಯ ನೋಡಿ ಪುಳಕಿತಳಾದ ತಿಮ್ಮಿ, ಅನಕ್ಷರಸ್ಥಳಾದರೂ ಅದನ್ನು ವ್ಯಕ್ತ ಪಡಿಸಿದ ರೀತಿ ಕಣ್ಣಿಗೆ ಕಟ್ಟಿದಂತಿದೆ.. ಒಳ್ಳೆಯ ಬರಹದ ಮೆಲುಕು ಹಾಕಿಸಿದ್ದಕ್ಕೆ ವಂದನೆಗಳು
--
ಪಾಲ

ಬಿಸಿಲ ಹನಿ ಹೇಳಿದರು...

ತೇಜಸ್ವಿನಿಯವರೆ,
ಈ ಹಿಂದೆ ನಾನು ಬೆಂಗಳೂರಿನ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಕನ್ನಡ ವಿಭಾಗದ ಮುಖ್ಯಸ್ಥರು ಈ ಕಾದಂಬರಿಯ ಕತೆಯನ್ನು ನನಗೆ ಹೇಳಿದ್ದರು. ಅವರು ಹಾಗೆ ಹೇಳುವಾಗ ಸಮಾಜದ ಯಾವುದೇ ವರ್ಗದ (ಮೇಲ್ವರ್ಗ, ಮಧ್ಯಮ ವರ್ಗ, ಹಾಗೂ ಕೆಳವರ್ಗ)ದಂಪತಿಗಳ ನಡುವೆ ಅವಿನಾಭಾವ ಪ್ರೀತಿಯ ಜೊತೆಗೆ ಯಾವಾಗಲೂ ಒಂದು ರೀತಿಯ ಸಂಘರ್ಷ ಇದ್ದೇ ಇರುತ್ತದೆ. ಆ ಕಾರಣಕ್ಕಾಗಿ ಅವರು ಸದಾ ಜಗಳಾಡುತ್ತಿರುತ್ತಾರೆ ಎಂದು ಹೇಳಿದ ನೆನಪು. ಆದರೆ ಅದು ಹೇಗೆ ಒಡಮೂಡಿ ಬಂದಿದೆ ಎಂದು ನನಗೆ ಗೊತ್ತಿಲ್ಲ. ಏಕೆಂದರೆ ನಾನು ಕಾದಂಬರಿಯನ್ನು ಓದಿಲ್ಲ. ನಿಮ್ಮ ಲೇಖನ ಓದಿದ ಮೇಲೆ ಅದನ್ನು ಓದಬೇಕೆನಿಸುತ್ತಿದೆ. ಈ ಸಾರಿ ಬೆಂಗಳೂರಿಗೆ ಬಂದಾಗ ಆ ಕೆಲಸ ಮಾಡುವೆ.Thanks for giving such a wonderful article.

NiTiN Muttige ಹೇಳಿದರು...

ತೇಜಕ್ಕ... ಮಹಾನ್ ಕವಿಯ ಈ ಗ್ರಂಥವನ್ನು ೪ ವರ್ಷದ ಹಿಂದೆ ನಾನು ಮತ್ತು ಸ್ನೇಹಿತರು ಸ್ಪರ್ಧೆಯನ್ನು ಇಟ್ಟುಕೊಂಡು ಓದಿದ್ದೆವು.ಈಗ ಮತ್ತೆ ಅದರ ಮೆಲುಕು ಹಾಕುತ್ತಿರುವಾಗ, ನಿಮ್ಮ ಬರಹ ಮತ್ತೋಮ್ಮೆ ಸಂಪೂರ್ಣ ಓದಲು ಪ್ರೇರೆಪಿಸಿತು...

Shiv ಹೇಳಿದರು...

ತೇಜಸ್ವಿನಿಯವರೇ,
ಕುವೆಂಪು ಅವರ ಮಹಾನ್ ಕೃತಿಯನ್ನು ಮತ್ತೆ ನೆನಪು ಮಾಡಿಕೊಟ್ಟಿದ್ದಕ್ಕೆ ವಂದನೆಗಳು.
ಚೆನ್ನಾಗಿದೆ ನಿಮ್ಮ ವಿಮರ್ಶೆ.

Shashi Dodderi ಹೇಳಿದರು...

hi
I haven't read this novel ( sadly) I don't know why, in my house, my grandfather had all the collection of Karantha, and Bengali novels, but not a single Kuvembu prose writings, few poem collections were there, so I never got near to Kuvempu, as compared to Karanta, Tagore, and Bendre.
But your review, and readers comments definitely prompt me to read that one. In March I am coming to Bangalore, I will buy this and read
thanks once again for taking effort to read and write on a classic.
shashi

ತೇಜಸ್ವಿನಿ ಹೆಗಡೆ ಹೇಳಿದರು...

@ಚಂದ್ರಕಾಂತ ಅವರೆ,

ನೀವು ಹೇಳಿದ್ದು ನಿಜ. ಅವರ ಕಾದಂಬರಿಯನ್ನು ಓದುತ್ತಿರುವಾಗ ನಾವೂ ಅಲ್ಲಿಯ ಜನಜೀವನ ಒಂದು ಅಂಗವಾಗಿ ಮಾರ್ಪಡೂತ್ತೇವೆ. ಅಷ್ಟೊಂದು ಎಳೆದುಕೊಂಡು ತನ್ಮಗೊಳಿಸುತ್ತದೆ ಕಾದಂಬರಿಯೊಳಗಣ ಕಥಾಚಿತ್ರಣ.

ಹೌದು ಕೆಲವೊಂದೆಡೆ "ಗುತ್ತಿ"ಯನ್ನು ತಪ್ಪಾಗಿ ಸಂಬೋಧಿಸಿದ್ದೆ. ಈಗಾ ಅ ತಪ್ಪನ್ನು ಸರಿಪಡಿಸಿದ್ದೇನೆ. ತಿದ್ದಿದ್ದಕ್ಕೆ ತುಂಬಾ ಧನ್ಯವಾದಗಳು. ಹೀಗೇ ಆದ ತಪ್ಪುಗಳನ್ನು ತಿದ್ದಬೇಕಾಗಿ ವಿನಂತಿ.

@ಪ್ರಕಾಶಣ್ಣ ಹಾಗೂ ಶಿವು ಅವರೆ,

ನನ್ನ ಉದ್ದೇಶವೂ ಅದೇ. ಉತ್ತಮ ಪುಸ್ತಕಗಳ ಕಿರು ಪರಿಚಯದ ಮೂಲಕ ಓದುಗರಲ್ಲಿ ಓದುವ ಹವ್ಯಾಸವನ್ನು ಮತ್ತಷ್ಟು ಹೆಚ್ಚಿಸುವುದು. ನನ್ನ ಈ ಲೇಖನವನ್ನು ಮೆಚ್ಚಿಕೊಂಡು, ಅವರ ಕೃತಿಯನ್ನು ಓದಲು ನಿರ್ಧರಿಸಿದ್ದಕ್ಕೆ ನಿಮಗಿಬ್ಬರಿಗೂ ತುಂಬಾ ಧನ್ಯವಾದಗಳು.

@ಸುಶ್ರುತ,

ನೀ ಹೇಳಿದ್ದು ನಿಜ. ಕುವೆಂಪು ಅವರಿಗೆ ಕುವೆಂಪು ಅವರೇ ಸಾಟಿ. ಜೈ ಕರ್ನಾಟಕ. ಜೈ ಭಾರತಾಂಬೆ...:)

@ಪಾಲ ಅವರೆ,

ತಿಮ್ಮಿಯ ಅನಕ್ಷರಸ್ಥತೆಗೆ ಕಾರಣ ಆಗಿನ ಸಮಾಜ ಜೀವನ ಹಾಗೂ ಪರಿಸ್ಥಿತಿ. ಆದರೆ ಸುಪ್ತವಾಗಿ "ಅಸ್ಮೃತಿ"ರೂಪದಲ್ಲಿರುವ ಆಕೆಯ ಮನೋವೈಶಾಲತೆ ಆ ಪ್ರಕೃತಿಯೊಳಗಿನ ಸೌಂದರ್ಯವನ್ನು ಕಾಣುವಂತೆ ಮಾಡಿತು. ಅದ್ಭುತ ಕಥಾಗಾರಿಗೆ ಅಲ್ಲವೇ? ಧನ್ಯವಾದಗಳು.

@ಉದಯ್ ಅವರೆ,

ನಿಮ್ಮ ಕನ್ನಡವಿಭಾಗದ ಮುಖ್ಯಸ್ಥರು ಹೇಳಿದ ಮಾತನ್ನು ನನ್ನೊಂದಿಗೆ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. ತುಂಬಾ ಇಷ್ಟವಾಯಿತು ಅವರು ಹೇಳಿದ ಮಾತು. ನನಗೂ ನೂರಕ್ಕೆ ನೂರು ಸತ್ಯ ಎಂದೆನಿಸಿತು.

ಅವಿನಾಭಾವ ಸಂಬಂಧದೊಳಗೇ ಸಂಘರ್ಷ ಹೆಚ್ಚು ನಿಜ...:) ಇನ್ನೂ ಹೆಚ್ಚಿಗೆ ತಿಳಿಯಬೇಕೆಂದಿದ್ದರೆ ಈ ಕಾದಂಬರಿಯನ್ನು ಓದಿ. ನಿಜಕ್ಕೂ ಸುಂದರ ಹಾಗೂ ಅದ್ಭುತ ಕೃತಿ ಇದು.


@ನಿತಿತ್,

ಖಂಡಿತ ಇನ್ನೋಮ್ಮೆ ಓದಿ. ಎಷ್ಟು ಸಲ ಓದಿದರೂ ಬೇಸರ ಬರದಂತಿದೆ ಈ ಕೃತಿ. ನನ್ನ ವಿಮರ್ಶೆ ನಿಮ್ಮನ್ನು ಮತ್ತೊಮ್ಮೆ ಓದಲು ಪ್ರೇರೆಪಿಸಿದ್ದು ಕೇಳಿ ಸಂತೋಷವಾಯಿತು. ಹೀಗೇ ಬರುತ್ತಿರಿ. ಧನ್ಯವಾದಗಳು.

@ಶಿವ್ ಅವರೆ,

ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು.

ವಿ.ರಾ.ಹೆ. ಹೇಳಿದರು...

ಹೈಸ್ಕೂಲಲ್ಲಿದ್ದಾಗ ಇದನ್ನ ಓದಲು ಹೋಗಿ ನಿದ್ದೆಗೆ ಜಾರಿದ್ದೆ. ನಂತರ ಪ್ರಯತ್ನ ಮಾಡಲೇ ಇಲ್ಲ. ನೀವು ಬರೆದಿದ್ದನ್ನು ಓದಿದ ಮೇಲೆ ಈಗ ಆಸಕ್ತಿ ಬಂದಿದೆ. ಓದಬೇಕು!

Unknown ಹೇಳಿದರು...

ನಿಮ್ಮ ಅಭಿಪ್ರಾಯವು ಸರಿಯೆ! ಸ್ವತಃ ಕುವೆಂಪು ಅವರೇ ಕವನಗಳಲ್ಲಿ ಮಲೆಯನ್ನು, ಮಲೆನಾಡನ್ನು ಒಂದು ಹೆಣ್ಣಿಗೆ ಹೋಲಿಸಿ ಕರೆದಿದ್ದಾರೆ. ಮಲೆನಾಡು ನಿತ್ಯವೂ ಮಧುಮಗಳೇ!

ಸುಧೇಶ್ ಶೆಟ್ಟಿ ಹೇಳಿದರು...

ನಾನು ಈ ಕಾದ೦ಬರಿ ಓದಿಲ್ಲ. ಆದರೆ ಕಾನೂರು ಸುಬ್ಬಮ್ಮ... ಓದಿದ್ದೇನೆ. ಅದು ತು೦ಬಾ ಇಷ್ಟವಾಗಿತ್ತು. ಇದು ಅದಕ್ಕಿ೦ತಲೂ ಚೆನ್ನಾಗಿದೆ ಎ೦ದಿರುವಿರಾದ್ದರಿ೦ದ ಯಾವಾಗ ಓದುತ್ತೇನೋ ಎ೦ದು ತುದಿಗಾಲಲ್ಲಿ ನಿ೦ತಿದ್ದೇನೆ.

ನೀವು ವಿವರಿಸಿರುವ ರೀತಿ ಕಾದ೦ಬರಿಯ ಸ್ಥೂಲ ಚಿತ್ರಣವನ್ನು ಕಣ್ಣಿಗೆ ಕಟ್ಟಿ ಕೊಡುತ್ತದೆ. ಧ್ಯಾ೦ಕ್ಸ್...

ಸಧ್ಯಕ್ಕೆ ಭೈರಪ್ಪನವರ ಧರ್ಮಶ್ರೀ ಓದುತ್ತಿದ್ದೇನೆ. ಅದು ಕೂಡ ಮತಾ೦ತರದ ಬಗ್ಗೆಯೇ...

ಕಾದ೦ಬರಿ ಓದಿದ್ದರೆ ಇನ್ನೂ ಹೆಚ್ಚಾಗಿ ಚರ್ಚಿಸಬಹುದಿತ್ತು

ತೇಜಸ್ವಿನಿ ಹೆಗಡೆ ಹೇಳಿದರು...

@ವಿಕಾಸ್,

ನಿನಗೂ ನನ್ನ ವಿಮರ್ಶೆ ನೋಡಿ ಓದಬೇಕೆನಿಸಿತೆಂದು ಕೇಳಿ ತುಂಬಾ ಸಂತೋಷವಾಯಿತು :) ಧನ್ಯವಾದ.

@ಸತ್ಯನಾರಾಯಣ ಅವರೆ,

ನಿಜ. ಮಲೆಯು ನಿತ್ಯ ಮದುಮಗಳೇ... ವಂದನೆಗಳು.

@ಸುಧೇಶ್,

ಧರ್ಮಶ್ರೀ ಕಾದಂಬರಿಯನ್ನು ಹಿಂದೆ ಓದಿದ್ದೆ. ತುಂಬಾ ಚೆನ್ನಾಗಿದೆ. ಮತ್ತೊಮ್ಮೆ ಓದಿ ಆದರೆ ವಿಮರ್ಶೆ ಹಾಕುವೆ. ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

Dr.Gurumurthy Hegde ಹೇಳಿದರು...

Tumba chandvaagi varanisiddiri. Ondu dodda kaadambariya vivarane ishtu chikka chokkadaagi maduvudu kashtada kelsa.

abhinandanegalu

ತೇಜಸ್ವಿನಿ ಹೆಗಡೆ ಹೇಳಿದರು...

ತುಂಬಾ ಧನ್ಯವಾದಗಳು ಗುರುಮೂರ್ತಿಯವರೆ... ನಿಮ್ಮ ಬ್ಲಾಗ್ ಏಕೆ ಮಾಯವಾಗಿದೆ? ಬರೆಯುತ್ತಿರಿ. ಬರವಣಿಗೆ ನಿರಂತರ ಸಾಗಲಿ.. ಹಾಗೆಯೇ ನಿಮ್ಮ ಪ್ರೋತ್ಸಾಹ ಮನಸದೆಡೆಗೂ ಹೀಗೇ ಸದಾ ಹರಿದುಬರಲೆಂದು ಹಾರೈಸುವೆ. :)

Shashanka G P (ಉನ್ಮುಖಿ) ಹೇಳಿದರು...

ಇದೇ ಪ್ಯಾರಾ ನನ್ನ ಮನಸ್ಸನ್ನು ಮುಟ್ಟಿದ್ದು ತೀವ್ರವಾಗಿ. ಆದರೆ ನಾನು ಓದುತ್ತಿದ್ದ ಪುಸ್ತಕದಲ್ಲಿ ನೀವೇನು “ಅಸ್ಮೃತಿ” ಎಂದು ಕೀಲಿಸಿದ್ದೀರೋ ಅದು “ಅಸ್ಕೃತಿ” ಎಂದು ಅಚ್ಚಾಗಿತ್ತು. ಬಹಳ ತಲೆ ಕೆಡಿಸಿಕೊಂಡಿದ್ದೆ ಆಗ. ನೀವು ಇಲ್ಲಿ ಹೇಳಿರುವಂತೆಯೇ ಅದಿರುವುದಾದರೆ, ಇದೋ ನನ್ನ ಅನಿಸಿಕೆ. ಇಲ್ಲಿ ಪದಶಃ ಅರ್ಥದ ನಿರೂಪಣೆ ಅಗತ್ಯವಿಲ್ಲವೆಂದೆನಿಸುತ್ತದೆ, ಯಾವ ಕ್ಲಿಷ್ಟಪದಗಳೂ ಕಾಣಿಸುತ್ತಿಲ್ಲ ಇಲ್ಲಿ. ಇದರ ಒಳಾರ್ಥವನ್ನು ನಾನಂದುಕೊಂಡಂತೆ ಮುಂದಿಡುವೆ.

"ಮನುಷ್ಯನು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿಯೇ ಅವನ ಅಂತಃಪ್ರಕೃತಿ ಸೃಷ್ಟಿಯ ಬಹಿಃಪ್ರಕೃತಿಗೆ ಅನುಯಾಯಿಯಾಗಿರುತ್ತದೆ.
ಇದರಲ್ಲೇನೂ ಕಷ್ಟ ಇಲ್ಲ ಅನಿಸುತ್ತದೆ. ಇದು ನಮ್ಮನಿಮ್ಮ ಸಾಮಾನ್ಯ ಅನುಭವವೇ. ನಾವು ಜಗತ್ತನ್ನು ನೋಡುವುದು ಎರಡಾಗಿ. ಒಂದು ನಮ್ಮೊಳಗಿನದ್ದು ಮತ್ತೊಂದು ನಮ್ಮಿಂದ ಹೊರತಾದ್ದು. ಬಹಿಃಪ್ರಕೃತಿಯೆಂದರೆ ನಮ್ಮ ಭೌತಿಕ ದೇಹದ ಸ್ಥಿತಿ. ಆ ದೇಹವು ಹೊರಗಣ ಪ್ರಕೃತಿಯಿಂದ ನೇರವಾಗಿ ಬಾಧಿತವಾಗುವಂತದ್ದು. ಹಾಗಾಗಿ ದೇಹವನ್ನು ಬಾಹ್ಯಪ್ರಕೃತಿಗೇ ಸೇರಿಸಬಹುದು. ದೇಹ ಆರೋಗ್ಯದಿಂದಿದ್ದರೆ ಮನಸ್ಸೂ ಉಲ್ಲಾಸದಿಂದಿರುತ್ತದೆ. ಇಲ್ಲವಾದರೆ ಮನಸ್ಸೂ ಮುರುಟುವುದು. “A sound mind in a sound body” ಎಂದು ಹೇಳುತ್ತಾರಲ್ಲ ಹಾಗೆ. ಒಟ್ಟಿನಲ್ಲಿ ಈ ಮಾತಿನ ತಾತ್ಪರ್ಯ – ನಮ್ಮ ಮನಸ್ಥಿತಿ ನಮ್ಮ ಹತೋಟಿಯಲ್ಲಿಲ್ಲ, ಬಹ್ವಂಶ ಬಾಹ್ಯಪ್ರಕೃತಿಯೇ ಅದನ್ನು ಆಳುತ್ತದೆ.

ಆತನ ಆತ್ಮಕೊಶವು ಬಹು ಜನ್ಮಗಳ ಸಂಸ್ಕಾರಗಳಿಂದ ತುಂಬಿರುವಂತೆ ಆತನ ಅನ್ನಮಯಕೋಶವೂ ಪೃಥ್ವಿಯಲ್ಲಿ ಪ್ರಾಣೋತ್ಪತ್ತಿಯಾದಂದಿನಿಂದ ಮೊದಲುಗೊಂಡು ಇಂದಿನವರೆಗೆ ಜೀವವು ಕೈಗೊಂಡ ನಾನಾರೂಪದ ನಾನಾ ಪ್ರಯೋಗದ ನಾನಾ ಕಷ್ಟ ಸಂಕಟಗಳ ನಾನಾ ಸುಖ ಸಂತೋಷಗಳ ಮಹಾ ಸಾಹಸಯಾತ್ರೆಗಳ ಸಮಗ್ರ ಪರಿಣಾಮ ಮುದ್ರೆಯನ್ನೂ ‘ಅಸ್ಮೃತಿ’ ರೂಪದಲ್ಲಿ ಪಡೆದಿರುತ್ತದೆ.
ವಿವೇಕಾನಂದರ ಜ್ಞಾನಯೋಗದಲ್ಲಿ ಇದರ ಚರ್ಚೆ ಇದೆ. ವ್ಯಕ್ತಿಯೋರ್ವನ ನಡವಳಿಕೆ, ಸಂಸ್ಕಾರ ಇವುಗಳನ್ನೆಲ್ಲ ನೋಡಿದರೆ, ಅದರ ಪ್ರತಿಯೊಂದು ಅಂಶವನ್ನೂ ನಿರ್ಧರಿಸುವುದು ಆತನ ಜನ್ಮ ಮತ್ತು ಬೆಳೆದ ವಾತಾವರಣವಷ್ಟೇ ಅಲ್ಲ ಎನಿಸದಿರದು. ಹಾಗಾಗಿಯೇ ಪುನರ್ಜನ್ಮದ ಕಲ್ಪನೆ ಕುಡಿಯೊಡೆದಿದೆ. ಆತ್ಮಕೋಶವೆನ್ನುವುದು(ಆತ್ಮವಲ್ಲ! ಅದ್ವೈತದ ನಂಬಿಕೆಯಂತೆ ಆತ್ಮಕ್ಕೆ ಪುನರ್ಜನ್ಮವಿಲ್ಲ) ದೇಹದಿಂದ ದೇಹಕ್ಕೆ ಸಂಚರಿಸುತ್ತ ವ್ಯಕ್ತಿಜೀವನದಲ್ಲಿ ಪುನರ್ಜನ್ಮದ ಅರಿವನ್ನು ಮೂಡಿಸುತ್ತಾ ಸಾಗುತ್ತದೆ. ಆತ್ಮಕೋಶವೆನ್ನುವುದು ಎಲ್ಲ ಜನ್ಮಗಳ ಅನುಭವಗಳ ಮೊತ್ತ, ಅದೊಂದು ಸೂಕ್ಷ್ಮಶರೀರ, ಅಭೌತಿಕ ವಸ್ತು. ಬಹುಶಃ ಆತ್ಮಕೋಶ ಎನ್ನುವುದು “ಅಹಂ”. ಅರ್ವಾಚೀನ ಕಲ್ಪನೆಯಂತೆ ವ್ಯಕ್ತಿಯ ರೀತಿ ನೀತಿ, ಪರಿಸ್ಥಿತಿಗಳೆಲ್ಲವನ್ನೂ ನಿರ್ಧರಿಸುವುದು ಆತನ ಪೂರ್ವಜನ್ಮಕೃತ ಕರ್ಮಗಳು. ಅದೇ ವಿಜ್ಞಾನಕ್ಕೆ ಬಂದರೆ, ಅದೆಲ್ಲವನ್ನೂ ವಂಶವಾಹಿನಿಗೆ ಮತ್ತು ನಾವು ಬೆಳೆದ, ಇರುವ ಪರಿಸರಕ್ಕೇ ಆರೋಪಿಸುತ್ತದೆ. ಇಲ್ಲಿ ಕುವೆಂಪು ಅದ್ವೈತದ ಕಲ್ಪನೆಯನ್ನೇ ಮತ್ತೆ ಮುಂದೊಡ್ಡಿದ್ದಾರೆ, ಅದು ಎರಡನ್ನೂ ಒಪ್ಪುವುದು. ನಮ್ಮ ಇರವು ಪೂರ್ವಜನ್ಮವನ್ನೂ ಪ್ರಸ್ತುತ ಜನ್ಮವನ್ನೂ ಅವಲಂಬಿಸಿರುತ್ತದೆ. (ಅನ್ನಮಯಕೋಶ=ದೇಹ, ಪ್ರಾಣಮಯಕೋಶ=ಮನಸ್ಸು, ಅಹಂ, ಪುನರ್ಜನ್ಮ ಹೊಂದುವಂತದ್ದು, ಅಸ್ಮೃತಿ=subconscious mind, ಸ್ಮೃತಿಗೆ/ಅರಿವಿಗೆ ಸಿಗದಂತದ್ದು, ಸುಪ್ತಪ್ರಜ್ಞೆ)

ಆ ಅಪಾರ್ಥಿವ ಮತ್ತು ಪಾರ್ಥಿವ ಸಂಸ್ಕಾರ ಕೋಶಗಳೆರಡೂ ನಮ್ಮ ಬಾಳ್ವೆಯ ಹೃದಯದ ಇಕ್ಕೆಲಗಳಲ್ಲಿ ಶ್ವಾಸಕೋಶಗಳಂತಿವೆ. ಅಪ್ರಜ್ಞಾಸೀಮೆಯಲ್ಲಿರುವ ಆ ಸಂಸ್ಕಾರಗಳಲ್ಲಿ ಯಾವುದನ್ನಾದರೂ ಮುಟ್ಟಿ ಎಚ್ಚರಿಸುವಂತಹ ಸನ್ನಿವೇಶ ಒದಗಿದರೆ ನಮಗೆ ಬಹುತೇಕ ಆನಂದವೂ ಅಕಾರಣ ಸಂಕಟವೂ ಸಂಭವಿಸಿದಂತಾಗುತ್ತದೆ.
ಮೇಲಿನದ್ದನ್ನೇ ಮತ್ತೊಂದು ರೀತಿಯಲ್ಲಿ ಹೇಳಿದ್ದಾರೆ. (ಅಪಾರ್ಥಿವ ಸಂಸ್ಕಾರ ಕೋಶ= ಪ್ರಾಣಮಯಕೋಶ, ಪಾರ್ಥಿವ ಸಂಸ್ಕಾರಕೋಶ=ಅನ್ನಮಯಕೋಶ, ಅಪ್ರಜ್ಞಾಸೀಮೆ=ಸುಪ್ತಮನಸ್ಸು)

ಅಲ್ಪ ಕಾರಣದಿಂದ ಮಹತ್ತಾದ ಅನುಭವ ಉಂಟಾದಂತೆ ಭಾಸವಾಗಿ ಆಶ್ಚರ್ಯವಾಗುತ್ತದೆ. ಎಳೆಬಿಸಿಲಿನಲ್ಲಿ ಹಸುರು ಗರಿಕೆಯ ಕುಡಿಯಲ್ಲಿ ಮಿರುಗುವ ದುಂಡು ಮುತ್ತಿನ ತೆರೆದ ಇಬ್ಬನಿ, ಪ್ರಾಣದ ಪ್ರಪ್ರಾಚೀನಾನುಭವದ ಮಹಾ ಸಾಗರದ ‘ಅಸ್ಮೃತಿ’ಯನ್ನು ಕೆರಳಿಸಿ, ಸಮುದ್ರದರ್ಶನದ ಭೂಮಾನುಭೂತಿಯನ್ನುಂಟುಮಾಡಬಹುದು.
ಯಾರೋ ಜ಼ೆನ್ ಗುರುವೊಬ್ಬರಿಗೆ, ಮರದಿಂದ ಉದುರುತ್ತಿದ್ದ ಹಣ್ಣೆಲೆಯೊಂದನ್ನು ನೋಡಿ ಜ್ಞಾನೋದಯವಾಯಿತಂತೆ. ಹಾಗಾದರೆ ವರ್ಷಗಟ್ಟಲೆ ಮಾಡಿದ ತಪಸ್ಸು(ಪ್ರಯತ್ನ) ಫಲ ನೀಡಲಿಲ್ಲ ಎಂದೇ? ಹಾಗೂ ಹೇಳಲಾರೆವು, ಆಷ್ಟು ತಪಸ್ಸಿಲ್ಲದೇ ಆ ಎಚ್ಚರವನ್ನು, ಸಣ್ಣ ಪ್ರಚೋದನೆಯಿಂದ ಮಹತ್ತರ ಅನುಭವವನ್ನು ಹೊಂದುವಂಥ ಜಾಗೃತಿಯನ್ನು ಪಡೆಯುವುದು ಸಾಧ್ಯವೇ? ಮತ್ತೆ ಅದೇ ನೆನಪಾಗುತ್ತದೆ – “ಯಾರೂ/ಯಾವುದೂ ಮುಖ್ಯವಲ್ಲ ಅಮುಖ್ಯವಲ್ಲ ಯಕಶ್ಚಿತವಲ್ಲ”
ಪುನರ್ಜನ್ಮ ಸತ್ಯವಾದರೆ, ವಿಕಾಸವಾದ ಎನ್ನುವುದು ಪ್ರಾಣದ ಅಭಿವ್ಯಕ್ತಿಯ ವಿಕಾಸ ಎಂದಾಗುತ್ತದೆ. ಅಂದರೆ ಸಮುದ್ರದಲ್ಲಿನ ಯಾವುದೋ ಏಕಕೋಶಜೀವಿಯಲ್ಲಿ ಪ್ರಾಣ ಹೇಗೆ ಅಭಿವ್ಯಕ್ತಗೊಳ್ಳುವುದೋ, ಅದಕ್ಕಿಂತ ಭಿನ್ನವಾದುದು ಈ ಮಾನವ ದೇಹದಲ್ಲಿನ ಪ್ರಾಣದ ಅಭಿವ್ಯಕ್ತಿ, ಅದೊಂದು ಪ್ರಗತಿ, ವಿಕಾಸ. ಯಾವುದೋ ಸನ್ನಿವೇಶದ ಕಾರಣ ನಮ್ಮ ಮನ್ನಸ್ಸು ಯುಗಾಂತರಕ್ಕೆ ಹೋದರೆ! ನಮ್ಮ ಪೂರ್ವಜೀವಿತದಲ್ಲಿ “ನಾವೂ” ಸಮುದ್ರದಲ್ಲೇ ಜೀವತಾಳಿದ್ದೆವಲ್ಲ!

ಕಾಡಿನಂಚಿನಲ್ಲಿ ಬೈಗುಗಪ್ಪಿನ ಮಬ್ಬಿನಲ್ಲಿ, ಹೆಮ್ಮರದ ದಿಂಡಿನಲ್ಲಿರುವ ಮರಕುಟಿಗನ ಗೂಡಿನ ಪೊಟ್ಟರೆ, ಅತ್ಯಂತ ಪೂರ್ವಕಾಲದ ಬಾಳಿನ ಯಾವುದೊ ಒಂದು ಕಗ್ಗವಿಯನ್ನೋ ಪೆಡಂಭೂತದ ಕಣ್ಣನ್ನೋ ‘ಅಸ್ಮೃತಿ’ಗೆ ತಂದು, ಅನಿರ್ವಚನೀಯವಾದ ಭೀತಿಯನ್ನುಂಟುಮಾಡಬಹುದು. ಪರ್ವತಾರಣ್ಯಗಳ ಭಯಂಕರ ಪ್ರಕೃತಿಯ ಮಧ್ಯೆ ವಾಸಮಾಡುವವರಿಗೆ ಅರ್ಥವಾಗದ, ಆದ್ದರಿಂದ ಅರ್ಥವಿಲ್ಲದ, ಆ ಅನುಭವಗಳು ಪಿಶಾಚಿಗಳಂತೆಯೊ ದೆಯ್ಯ ದ್ಯಾವರುಗಳಂತೆಯೊ ತೋರುತ್ತವೆ. ಕತ್ತಲೆಯಲ್ಲಿ ಆಕಾಶಕ್ಕೆದುರಾಗಿ ಚಾಚಿರುವ ಭೀಮಾಕಾರದ ಕೋಡುಗಲ್ಲಿನಲ್ಲಿ ಪ್ರಾಚೀನಾನುಭವ ಸಮಷ್ಟಿರೂಪದ ‘ಅಸ್ಮೃತಿ’ ಆವಿರ್ಭಾವವಾಯಿತೆಂದರೆ ಬ್ರಹ್ಮರಾಕ್ಷಸ ದರ್ಶನವಾಗುವುದರಲ್ಲಿ ಆಶ್ಚರ್ಯವೇನಿದೆ? ಕಬ್ಬಿಣದ ಪೆಟ್ಟಿಗೆಯ ಖಜಾನೆಯನ್ನು ತೆರೆಯುವುದಕ್ಕೆ ಸಣ್ಣ ಬೀಗದ ಕೈ ಸಾಕಾಗುವಂತೆ ‘ಅಸ್ಮೃತಿ’ಯ ಮಹದೈಶ್ವರ್ಯವನ್ನು ಕೆರಳಿಸಲು ಅತ್ಯಲ್ಪ ಕಾರಣಗಳೂ ಸಾಕಾಗುತ್ತವೆ."
ಕಡುಕತ್ತಲೆಯಲ್ಲಿ, ತಣ್ಣೀರ ಸ್ನಾನದ ಅನುಭವ ಅದೆಷ್ಟು ಭಯಂಕರ ಗೊತ್ತೇ? ಕಣ್ಣು ತೆರೆಯಲಾರದಷ್ಟು ಸೀಗೇಕಾಯಿಯನ್ನೋ ಸೋಪನ್ನೋ ಹಾಕಿಕೊಂಡು, ಸ್ವಲ್ಪ ದೀರ್ಘಕಾಲ ಉಸಿರುಕಟ್ಟುವ ಹಾಗೆ ತಲೆಯ ಮೇಲೆ ತಣ್ಣೀರು ಸುರಿದುಕೊಂಡು, ನೀರಿನಲ್ಲಿ ಮುಳುಗಿ ಸಾಯುತ್ತಿರುವೆನೇನೋ ಎನ್ನುವಂತೆ ಭಾವಿಸಿಕೊಂಡರೆ(ಯೋಚನೆಯಲ್ಲ), ಆಗ ಸಿಗುವಂಥ ಅನುಭವ ಏನಿದೆ ಅದು ಬಹುಶಃ ಸಾವಿನದ್ದೇ ಇರಬೇಕು. “ನಾನು” ಇಲ್ಲವಾಗುವಿಕೆಯ ಅನುಭವ, ಜೀವವನ್ನೇ ಅಲುಗಾಡಿಸಿಬಿಡುತ್ತದೆ, ಅದುವೇ ತಾನೇ ಸಾವು. ಬಹುಶಃ ಧ್ಯಾನವೂ ಹಾಗೇ ಇರಬಹುದು. ನಿಮಗೂ ನನ್ನ ಅನುಭವವೇ ಆಗಬೇಕೆಂದಿಲ್ಲ, ಬೇರಿನ್ನಾವುದೋ ಕಾರಣ, ಸನ್ನಿವೇಶ ನಿಮ್ಮನ್ನೆಚ್ಚರಿಸಬಹುದು, ಮುಟ್ಟಬಹುದು. ಯಾವ ಸನ್ನಿವೇಶವನ್ನೂ, ಅನುಭವವನ್ನೂ ಯಃಕಶ್ಚಿತವೆಂದು ನಿರಾಕರಿಸಲು ಬರುವುದಿಲ್ಲ. ಹಾಗಾಗಿ ಸದಾ ಎಚ್ಚರದಿಂದಿರುವುದೇ ಮಾರ್ಗ.

ತೇಜಸ್ವಿನಿ ಹೆಗಡೆ ಹೇಳಿದರು...

ಉನ್ಮುಖಿಯವರೆ,

ತುಂಬಾ ಸುಂದರವಾಗಿ, ಸರಳವಾಗಿ, ಅರ್ಥೈಸಿದ್ದೀರಿ ಈ ಪ್ಯಾರಾವನ್ನು. ಇದಕ್ಕಾಗಿ ತುಂಬಾ ಧನ್ಯವಾದಗಳು. ನಾನು ಅರ್ಥೈಸಿಕೊಂಡಿದ್ದು ಹೀಗೇ ಆಗಿತ್ತು.. ಆದರೆ ತುಸು ಭಿನ್ನವಾಗಿ.

ಮನುಷ್ಯನು ತೀರಿ ಹೋಗಿ ಮತ್ತೊಂದು ಜನ್ಮ ಪಡೆದರೂ ಯಾವುದೋ ಒಂದು ಜೀನ್ (ವಂಶಸ್ಥರಿಂದ ಪಡೆದ) ಆತನ ಈ ರೀತಿಯ ಅಪೂರ್ವ ಅಸ್ಮೃತಿಗೆ ಕಾರಣವಾಗುರಬಹುದೆಂದು. ಇದನ್ನೇ ವಿಜ್ಞಾನ ಕೂಡಾ ಪುಷ್ಟಿಕೊಡುವುದು. ಆದರೆ ಕಾಲಕ್ಕೂ, ವಿಜ್ಞಾನಕ್ಕೂ ಅತಿತವಾಗಿರುವ ಅಂತೀದ್ರಿಯ ಶಕ್ತಿಗಳು ನಮ್ಮನಾಳುವವು ಎನ್ನುವುದನ್ನೂ ನಂಬುವೆ.

ಆಗಾಗ ಬರುತ್ತಿರಿ. ಪ್ರೋತ್ಸಾಹ ಹೀಗೇ ಇರಲಿ.

ತೇಜಸ್ವಿನಿ ಹೆಗಡೆ ಹೇಳಿದರು...

ಉನ್ಮುಖಿಯವರೆ,

ತುಂಬಾ ಸುಂದರವಾಗಿ, ಸರಳವಾಗಿ, ಅರ್ಥೈಸಿದ್ದೀರಿ ಈ ಪ್ಯಾರಾವನ್ನು. ಇದಕ್ಕಾಗಿ ತುಂಬಾ ಧನ್ಯವಾದಗಳು. ನಾನು ಅರ್ಥೈಸಿಕೊಂಡಿದ್ದು ಹೀಗೇ ಆಗಿತ್ತು.. ಆದರೆ ತುಸು ಭಿನ್ನವಾಗಿ.

ಮನುಷ್ಯನು ತೀರಿ ಹೋಗಿ ಮತ್ತೊಂದು ಜನ್ಮ ಪಡೆದರೂ ಯಾವುದೋ ಒಂದು ಜೀನ್ (ವಂಶಸ್ಥರಿಂದ ಪಡೆದ) ಆತನ ಈ ರೀತಿಯ ಅಪೂರ್ವ ಅಸ್ಮೃತಿಗೆ ಕಾರಣವಾಗುರಬಹುದೆಂದು. ಇದನ್ನೇ ವಿಜ್ಞಾನ ಕೂಡಾ ಪುಷ್ಟಿಕೊಡುವುದು. ಆದರೆ ಕಾಲಕ್ಕೂ, ವಿಜ್ಞಾನಕ್ಕೂ ಅತಿತವಾಗಿರುವ ಅಂತೀದ್ರಿಯ ಶಕ್ತಿಗಳು ನಮ್ಮನಾಳುವವು ಎನ್ನುವುದನ್ನೂ ನಂಬುವೆ.

ಆಗಾಗ ಬರುತ್ತಿರಿ. ಪ್ರೋತ್ಸಾಹ ಹೀಗೇ ಇರಲಿ.

Once Again This ಹೇಳಿದರು...

ತೇಜಸ್ವಿನಿಯವರೇ,,
ಈ ನಿಮ್ಮ (ವಿಮರ್ಶೆ) ಅಭಿಪ್ರಾಯ ಓದಿ ಖುಶಿ ಆಯಿತು. ನಿಮ್ಮ ಪ್ರಯತ್ನ ಮತ್ತು ಪ್ರಕಟಣೆಗೆ ಸದಾ ರುಣಿ. ಈಗ ಏಳು ವರ್ಶ ಗಳ ಹಿಂದೆ "ಮಲೆ ಗಳಲ್ಲಿ" ಓದಿದಾಗ ನನಗೆ ಹೀಗನ್ನಿಸಿತ್ತು. ಈಗಲೂ ದುಬೈ ಯಲ್ಲಿ ಸಿಕ್ಕಲ್ಲಿ ಓದಬೇಕು ಇನ್ನೊಮ್ಮೆ , ಸ್ವಲ್ಪ, ಬೇರೆ ಆಯಮದಿಂದ.
ಆ ಕಾಲದ ಆ ಸನ್ನಿವೇಶ ದಲ್ಲಿ ಬದುಕಿದ ಜನಕ್ಕೆ ಸಂಸ್ಕ್ರ್ ತಿ ‍‍ಮತ್ತು ಸಂಸ್ಕಾರ ಗಳು ಇತ್ತೋ ಇಲ್ಲವೋ ಎನ್ನುವುದು ನಮಗೆ ಒಂದು ಪ್ರಶ್ನೆಯಾಗುತ್ತದೆಯೇ ಹೊರತು, ಆ ಸನ್ನಿವೇಶ ದಲ್ಲಿ ಬದುಕಿದ ಜನರಿಗೆ ಅದರ ಕೊರತೆ ಅಥವಾ ಅತೀವ ಅಗತ್ಯತೆ ಬಹುಶಹ ಇರಲಿಕ್ಕಿಲ್ಲ ಅಲ್ಲವೇ? ಅವರ ಪರಿಸರದ ಕೊಳಚೆಯೇ ಇರಲಿ ಅಥವಾ ದರ್ಪ ಅಹಂಕಾರದ ಯಾಜಮಾನ್ಯ ವೇ ಇರಲಿ, ಅವರ ಬದುಕಿನ ಸಾಮನ್ಯ ಅಂಗ ವೆಂಬಂತೆ ಇದ್ದವೋ ಎಂದು ನನ್ನ ಅನಿಸಿಕೆ. ಬೇಕೆಂದರೆ ಹೀಗೆನ್ನೋಣ, ಇದು ಅವರ ಒಪ್ಪಿ ಕೊಂಡು ಬಂದ ಸಂಸ್ಕ್ರತಿ. ಇನ್ನೂ ನಮ್ಮ ಅನೇಕ ಹಳ್ಳಿಗಳಲ್ಲಿ ಅನೇಕರಿಗೆ ವೈಯಕ್ತಿಕತೆ (ಅಭಿರುಚಿ, ಆಸಕ್ತಿ) , ಗೊತ್ತೇ ಇಲ್ಲದ, ಈ ಜನ್ಮ್ ದಲ್ಲಿ ಸಿಕ್ಕದ ವಸ್ತು ಆಗಿದೆ (ವಿಶೇಶ ವಾಗಿ ಸ್ತ್ರೀಯರಿಗೆ). Ignorance is bliss !, ಆಗಿಯೂ ಬಹುತೇಕರದು ನೆಮ್ಮದಿಯ ಬದುಕು. ನಮ್ಮ ಸಮಾಜದ ವಿಕಾಸ ಈ ಹಂತ ಗಳನ್ನೆಲ್ಲ ಅನಿವಾರ್ಯ ವಾಗಿ ದಾಟಿ ಬಂದಿರ ಬೇಕು.
Naveen GH

ತೇಜಸ್ವಿನಿ ಹೆಗಡೆ ಹೇಳಿದರು...

Once Again This,

ಮಾನಸಕ್ಕೆ ಸ್ವಾಗತ...

ಈ ಕಾದಂಬರಿಯ ಕುರಿತು ನೀವು ನೀಡಿರುವ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿತೆ. ನಾಗರೀಕರೆನಿಸಿಕೊಂಡಿರುವ ನಮಗೆ ಅಂದಿನ ಜನರ ವರ್ತನೆ, ಆಲೋಚನೆಗಳು ಅಸಭ್ಯ, ಅನಾಗರೀಕ ಎನಿಸಬಹುದಾದರೂ... ಅಂದು ಅವರಿಗೆ ಸಾಮಾನ್ಯವೆನಿಸಿದ್ದಿರಬಹುದು. ಸಮಾಜ ಒಪ್ಪಿಕೊಂಡ ನಡೆಯೇ ಸಂಸ್ಕೃತಿ.... ಅಂದು ಅದೇ ಅವರ ಸಂಸ್ಕೃತಿಯಾಗಿತ್ತು. ಇಂದು ಸಂಸ್ಕಾರವಂತರ (ಅ)ಸಂಸ್ಕಾರ ನಡೆಯೂ ಅಂದಿಗಿಂತೇನೂ ಭಿನ್ನವಾಗಿಲ್ಲ ಎಂದೆನಿಸುತ್ತದೆ ಒಮ್ಮೊಮ್ಮೆ....

ನಿಮ್ಮ ಪ್ರತಿಕ್ರಿಯೆ ನೋಡೀ ಸಂತೋಷವಾಯಿತು. ಧನ್ಯವಾದಗಳು.