"ಅಯ್ಯೋ ಅಮ್ಮೋರೆ...ಯಾಕಾಗಿ ನಾನು ದುಡೀ ಬೇಕು? ಯಾರಿಗಾಗಿ ದುಡ್ಡು ಜೋಡಿಸಬೇಕು ಅಂತಾನೇ ಗೊತ್ತಾಗ್ತಿಲ್ಲ ನೋಡಿ...." ಎಂದು ಗೊಣಗುತ್ತಾ, ಸಪ್ಪೆ ಮುಖ ಹೊತ್ತು ಬಂದ ಸರೋಜಮ್ಮನ ಈ ಹೊಸ ವರಸೆಕಂಡು ತುಸು ಚಕಿತಳಾದೆ.
"ಯಾಕಮ್ಮಾ? ಏನಾಯ್ತು? ಗಂಡ ಏನಾದ್ರೂ ಮತ್ತೆ ಕುಡ್ದು ಬಂದು ಬೈದ್ನಾ? ಇಲ್ಲಾ ಮಗ ಮತ್ತೆ ಸ್ಕೂಲ್‌ಗೆ ಚಕ್ಕರ್ ಹಾಕಿದ್ನಾ?"ಎಂದು ಕೇಳಿದೆ.
"ಅಯ್ಯಾ.. ಬಿಡಿಯಮ್ಮ... ಇನ್ನು ಹಾಂಗೆಲ್ಲಾ ಆದ್ರೂ ಅಷ್ಟು ತಲೆಕೆಡ್ಸಿಕೊಳಾಕೆ ಹೋಗೋದಿಲ್ಲ... ಏನೇ ಆದ್ರೂ ಎಷ್ಟು ವರ್ಷ ಹೇಳಿ? ಅಬ್ಬಬ್ಬಾ ಅಂದ್ರೆ ಇನ್ನೊಂದ್ ಮೂರು ವರ್ಷ ತಾನೆ? ಆಮೇಲೆ ಎಲ್ಲಾ ಗೋಳಿಗೂ ಮುಕ್ತಿನೇಯಾ.. ಇರೋಷ್ಟು ದಿನಾ ಚೆನ್ನಾಗಿ ತಿಂದುಂಡು, ಆ ಸ್ವಾಮಿ ಪೂಜಿಸ್ತಾ ಇದ್ಬಿಡೋನಾ ಅಂತಿದ್ದೀನಿ.. ಕೂಡಿಟ್ಟಿದ್ನೆಲ್ಲಾ ನೀರು ಪಾಲು ಮಾಡೋಕೆ ನಾನ್ಯಾಕೆ ಹೀಂಗೆ ದುಡೀಲಿ ಅನ್ನೀ? ಎಲ್ಲಾರೂ ಎಲ್ಲಾನೂ ಮುಳ್ಗೇ ಹೋಗೋವಾಗ ನನ್ನ ಪುಡಿಗಾಸಿಗೇನು ಬೆಲೆ?" ಎನ್ನುತ್ತಾ ಎಲ್ಲಾ ಸಿಟ್ಟು, ಸಿಡುಕು, ಹತಾಶೆಗಳನ್ನೇ ಗುಡಿಸಿ ಗುಂಡಾಂತರ ಮಾಡುವಂತೆ ನೆಲವೇ ಕಿತ್ತು ಹೋಗುವಂತೆ... ಗುಡಿಸತೊಡಗಿದಳು. ಇನ್ನೇನು ನನ್ನೂ ಕಸದ ಜೊತೆ ಸೇರಿಸಿ ಬಿಡುತ್ತಾಳೇನೋ ಅಂತ ಹೆದರಿಕೆಯಾಗಿ ಆದಷ್ಟು ಪಕ್ಕಕ್ಕೆ ಸರಿದೆ. ಅಂಥದ್ದೇನು ಆಗಿರಬಹುದಪ್ಪಾ? ಎಲ್ಲಾರೂ ಎಲ್ಲದೂ ಮುಳುಗಿಹೋಗೋವಂಥದ್ದು? ಎನ್ನುವ ಕುತೂಹಲ ಮಾತ್ರ ಗುಡಿಸಿ ಹೋಗಲಿಲ್ಲ.
"ಅಲ್ಲಾ.. ಬೆಳಿಗ್ಗೆ ಬೆಳಿಗ್ಗೆ ಏನಾಯ್ತು ನಿಂಗೆ? ಹೀಗೆಲ್ಲಾ ಮಾತಾಡ್ತಿದ್ದೀಯಲ್ಲಾ? ಎಲ್ಲರೂ.. ಎಲ್ಲಾದೂ ಮುಳ್ಗಿ ಹೋಗೋಕೆ ಬೆಂಗ್ಳೂರಲ್ಲೇನು ಸುನಾಮಿ ಬರತ್ತೆ ಅಂದ್ರಾ? ಹಾಂಗೆ ಬರೋದಿದ್ರೂ ಅದು ಶಿರಾಡಿ ಘಟ್ಟ ಹತ್ತಿ ಬರ್ಬೇಕು ನೋಡು.." ಎಂದು ನನ್ನ ತಮಾಶೆಗೆ ನಾನೇ ನಕ್ಕರೂ ಆಕೆ ನಗಲೇ ಇಲ್ಲ!
"ಅಲ್ರಮ್ಮಾ.. ನೀವು ಟೀವಿ ನೋಡಿಲ್ವಾ ನಿನ್ನೆ? "ಹೀಗೂ ಉಂಟೆ..?" ಕಾರ್ಯಕ್ರಮದಲ್ಲಿ ಪ್ರಳಯ ಆಗತ್ತಂತೆ... ಅದೂ ಸರಿಯಾಗಿ ಮೂರುವರ್ಷದಲ್ಲಿ.. ಅಂದ್ರೆ ೨೦೧೨ ಡಿಸೆಂಬರ್ ೨೧ಕ್ಕಂತ್ರವ್ವ... ನಮ್ಮ ವಠಾರದಲ್ಲೆಲ್ಲಾ ಇದೇ ಮಾತು ನೋಡಿ.. ನೀವು ನೋಡಿದ್ರೆ ಎನೂ ಗೊತ್ತೆ ಇಲ್ಲಾ ಅಂತಿದ್ದೀರಾ..." ಎನ್ನಲು ನಿಜಕ್ಕೂ ನಾನು ಆಶ್ಚರ್ಯಚಕಿತಳಾದೆ. ನಾನು ಈ ಪ್ರೊಗ್ರಾಂ ನೋಡಿರಲಿಲ್ಲ.(ಹೀಗೂ ಉಂಟೆಗಿಂತಲೂ ಹೀಗಿರಲು ಸಾಧ್ಯವೇ ಇಲ್ಲಾ ಎನ್ನುವಂತೆ ಚಿತ್ರಿಸುವ ಆ ಚಾನಲ್ ಸ್ವಲ್ಪ ನನ್ನ ಕಣ್ಣಿಂದ ದೂರವೇ. ವೈಭವೀಕರಣಕ್ಕೆ ಇನ್ನೊಂದು ಹೆಸರು ಅದು ಎನ್ನುವುದು ನನ್ನ ಅಭಿಮತ...).
"ಅಲ್ವೇ.. ೨೧ಕ್ಕೇ ಎಲ್ಲಾ ಸರ್ವನಾಶ ಅಂತಾದ್ರೆ ಮರುದಿನದಿಂದ ಯಾವ ಜೀವಿಯೂ ಇರೋದಿಲ್ವಂತೋ? ಆಮೇಲೆ ಏನಾಗೊತ್ತಂತೆ?" ಎಂದು ಅವಳನ್ನು ಮತ್ತೆ ಪ್ರಶ್ನಿಸಿದೆ ನನ್ನ ನಗುವನ್ನು ಅದುಮಿಟ್ಟುಕೊಂಡು.
"ಹಾಂಗಲ್ಲಾ.. ಕೆಲವು ಒಳ್ಳೇವ್ರು ಮಾತ್ರ ಬುದ್ಧಿಭ್ರಮಣೆ ಆಗಿ ಬದ್ಕತಾರಂತೆ... ಅವ್ರಿಗೆ ಈ ಯುಗದ ನೆನಪ್ಯಾವ್ದೂ ಇರೋದಿಲ್ವಂತೆ.. ಎಲ್ಲಾ ಹೊಸತಾಗೇ ಶುರು ಆಗೊತ್ತಂತೆ.. ಅದ್ಯಾವ್ದೋ ಮಾಯಾಂಗನೆ ಕ್ಯಾಲೆಂಡರ್ ಪ್ರಕಾರವಂತೆ ಕಾಣಮ್ಮ..." ಎನ್ನಲು ನನ್ನ ನಗೆಬುಗ್ಗೆ ಯಾವ ತಡೆಯೂ ಇಲ್ಲದೇ ಹೊರಬಂತು. "ಅದು ಮಾಯಾಂಗನೆ ಕ್ಯಾಲೆಂಡರ್ ಅಲ್ವೇ.. ಮಾಯನ್ ಕ್ಯಾಲೆಂಡರ್... ಸರಿ ಸರಿ.. ಪ್ರಳಯ ಆಗೋಕೆ ಇನ್ನೂ ಸಮಯ ಇದೆ ಅಲ್ವಾ? ಈಗ ಸಧ್ಯಕ್ಕೆ ನನ್ನ ಕೆಲ್ಸ ಮಾಡ್ಕೊಡು ಮಾರಾಯ್ತಿ. ಪ್ರಳಯ ಅಗೊತ್ತೆ ಅಂತ ಕೆಲ್ಸ ಬಿಟ್ಟು ಹೋಗ್ಬಿಡ್ಬೇಡ.. ಹಾಗೇನಾದ್ರೂ ಆದ್ರೆ ಮುಂದೆ ಆಗೋ ಪ್ರಳಯ ಇಂದೇ ಇಲ್ಲೇ ನನ್ನ ಜೊತೆ ಆಗ್ಬಿಡೊತ್ತೆ.." ಎಂದು ಅವಳನ್ನೂ ನಗಿಸಿ ಕೆಲ್ಸದ ಕಡೆ ಗಮನ ಹರಿಸಿದೆ.
ಆದರೂ ತಲೆಯೊಳಗೆ ಇದೇ ಯೋಚನೆ. ಏನಿದು ಮಾಯನ್ ಕ್ಯಾಲೆಂಡರ್ ಮಹಿಮೆ? ಜನ ಮರುಳೋ ಜಾತ್ರೆ ಮರುಳೋ? ಇತರರೂ ಈ ಪ್ರೊಗ್ರಾಂ ನೋಡಿರಬಹುದು.. ಇಲ್ಲಾ ಇದ್ರ ಬಗ್ಗೆ ಉಳಿದವರ ಯೋಚನೆ ಏನಾಗಿರಬಹುದು? ಎಂದು ತಿಳಿಯುವ ಸಣ್ಣ ಆಶಯ ಮನದೊಳಗೆ ಮೂಡಿತು. ನನಗೆ ಪರಿಚಯ ಇದ್ದವರೊಡನೆ, ಕೆಲವು ಸ್ನೇಹಿತರೊಡನೆ, ಆತ್ಮೀಯರೊಡನೆ, ಸಹ ಬ್ಲಾಗಿಗರೊಡನೆ ಮಾತಾಡುವಾಗ.. ಚಾಟ್ ಮಾಡುವಾಗ.. ಈ ವಿಷಯ ಪ್ರಸ್ತಾಪಿಸಿದೆ. ಚಾಟಿಂಗ್ ಸ್ಟೇಟಸ್‌ಬಾರ್ ನಲ್ಲೂ ಇದನ್ನು ಹಾಕಿದಾಗ ಹಲವರು ಪ್ರತಿಕ್ರಿಯಿಸಿದರು. ಈ ವಿಚಾರ ಮಂಥನದಲ್ಲಿ ಹಲವು ಸುಂದರ, ಹಾಸ್ಯಮಯ, ಚಿಂತನಾಶೀಲ ಅಭಿಪ್ರಾಯಗಳು ಹೊರಹೊಮ್ಮಿದವು. ಅವುಗಳನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಮೊದಲಿಗೆ ನಾನು ಕಾಲ್ ಮಾಡಿದ್ದು ನನ್ನ ಬರಹಕ್ಕೆ ಅದರಲ್ಲೂ ವಿಶೇಷವಾಗಿ ಕಥಾರಚನೆಗೆ ಸ್ಪೂರ್ತಿಯಾಗಿರುವ ಭುವನೇಶ್ವರಿ ಹೆಗಡೆಯವರಿಗೆ. ಇದಕ್ಕೆ ಕಾರಣವೂ ಇದೆ. ಹತ್ತನೆಯ ತರಗತಿಯಲ್ಲೋ ಇಲ್ಲಾ ಒಂಭತ್ತನೆಯ ತರಗತಿಗೋ ನಮಗೆ ಅವರ ಲೇಖನವೊಂದರ ಪಾಠವಿತ್ತು. ಅದು ಪ್ರಳಯದ ಕುರಿತೇ ಆಗಿತ್ತು. ತುಂಬಾ ಹಾಸ್ಯಮಯವಾಗಿ ಬರೆದಿದ್ದರು. ಅದು ಇನ್ನೂ ನನ್ನ ಮನಃಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ಅವರು "ಮೊಸರೊಳಗೆ ಬೆಣ್ಣೆ ಮುಳುಗಿದಾಗ ಪ್ರಳಯ ಆಗುತ್ತದೆಂದು" ಹೇಳಿ ಬರೆದಿದ್ದರು. ಅದನ್ನೋದಿ ನಾವೆಲ್ಲಾ ತುಂಬಾ ನಕ್ಕಿದ್ದೆವು. ಅದು ನೆನಪಾಗಿ ಅವರಿಗೇ ಕಾಲ್ ಮಾಡಿದೆ. ವಿಷಯ ತಿಳಿದ ಅವರು ಕೊಟ್ಟ ಮೊದಲ ಪ್ರತಿಕ್ರಿಯೆ ಒಂದು ದೊಡ್ಡ ನಗು. "ಮೊಸ್ರಲ್ಲಿ ಬೆಣ್ಣೆ ಮುಳ್ಗ್‌ದಾಗ ಪ್ರಳಯ ಆಗ್ತು ಹೇಳಿದ್ನಲೇ.. ಈಗೆಂತ ಮೊಸ್ರೊಳ್ಗೆ ಬೆಣ್ಣೆ ಮುಳ್ಗಿದ್ದಡ?" ಎಂದು ಕೇಳಿದಾಗ ನಗು ಈ ಕಡೆಯೂ ಹರಿದಿತ್ತು. ಮಾತು ಮಾತಲ್ಲಿ ಅವರೊಂದು ಸ್ವಾರಸ್ಯಕರ ಘಟನೆಯನ್ನೂ ಹಂಚಿಕೊಂಡರು.
ಕೆಲವು ವರುಷಗಳ ಹಿಂದೆ ಜನಪ್ರಿಯ ವಾರ ಪತ್ರಿಕೆಯೊಂದು ೨೦೦೦ದಲ್ಲಿ ಜಗತ್ ಪ್ರಳಯವಾಗುತ್ತದೆ ಎಂದು ಪ್ರಕಟಿಸಿತ್ತು. ಅತಿ ರಂಜಿತ, ಅದ್ಭುತ ಚಿತ್ರಗಳ ಮೂಲಕ ಓದುಗರನ್ನು ಸೆಳೆದಿತ್ತು. ನಾನಾಗ ಬಿ.ಎಸ್ಸಿ. ಓದುತ್ತಿದ್ದೆ. ಇನ್ನೂ ನನಗೆ ನೆನಪಿದೆ. ಕನ್ನಡ ಎಂದರೆ ಎನ್ನಡ ಎನ್ನುವ ಕಲವರೂ ಆಗ ಈ ಪತ್ರಿಕೆಯನ್ನು ತಂದು ಎಲ್ಲೆಂದರಲ್ಲಿ ಓದುತ್ತಿದ್ದರು. ಲ್ಯಾಬ್, ಕಾರಿಡಾರ್ ಎಲ್ಲ ಕಡೆ ಇದೇ ಸುದ್ದಿ... ಸಾವಿನ ಭೀತಿ ಅವರನ್ನು ಆ ರೀತಿ ಆಡಿಸಿತ್ತೇನೋ...! ಇದೇ ಸಮಯದಲ್ಲೇ ಭುವನೇಶ್ವರಿಯವರು ಕಾಲೇಜ್ ವಾರ್ಷಿಕೋತ್ಸವಕ್ಕೆಂದು ಗೆಸ್ಟ್ ಆಗಿ ಹೋಗಿದ್ದರಂತೆ. ಆ ಕಾಲೇಜಿನ ಪ್ರಿನ್ಸಿಪಾಲರು ಇವರಲ್ಲೊಂದು ಕೋರಿಕೆ ಮಾಡಿಕೊಂಡರಂತೆ. "ದಯವಿಟ್ಟು ನೀವು ನಿಮ್ಮ ಭಾಷಣದಲ್ಲಿ ಸ್ವಲ್ಪ ತಿಳಿ ಹೇಳಿ... ಪ್ರಳಯ ಆಗೋವಂಥದ್ದು ಏನೂ ಇಲ್ಲ ಎಂದು. ಭಯ ಬೇಡ ಎಂದು ಹೇಳಿ... ಹಲವು ವಿದ್ಯಾರ್ಥಿಗಳು ಭಯ ಪಟ್ಟು, ನಿರುತ್ಸಾಹಗೊಂಡು ಓದೂ ಬೇಡ ಎಂದು ಹೇಳುತ್ತಿದ್ದಾರೆ.." ಎಂದರಂತೆ! ಇದನ್ನು ಕೇಳಿ ಭುವನೇಶ್ವರಿ ಅವರಿಗೆ ತುಂಬಾ ಆಶ್ಚರ್ಯವಾಗಿತ್ತಂತೆ. ಅಂತೆಯೇ ಅಲ್ಲಿಯೂ ತಮ್ಮ ಹಾಸ್ಯ ಚಟಾಕಿಯ ಮೂಲಕ ನಗೆಬುಗ್ಗೆಯನ್ನು ಚಿಮ್ಮಿಸಿ, ಪ್ರಳಯದ ಭಯವನ್ನೋಡಿಸಲು ಬಹುಪಾಲು ಯತ್ನಿಸಿದ್ದರಂತೆ. ಇದನ್ನು ಕೇಳಿ ನನಗೆ ಮತ್ತೂ ಆಶ್ಚರ್ಯ ವಾಯಿತು.. "ಹೀಗೂ ಉಂಟೆ? " ಎಂದೆನಿಸಿಯೇ ಬಿಟ್ಟಿತು.
"ಪ್ರಳಯ ಅನ್ನೋದು ಕಪೋ ಕಲ್ಪಿತ. ಎಲ್ಲವೂ ಒಂದೇ ದಿವಸ ನಾಶ ಆಗೋಕೆ ಸಾಧ್ಯನೇ ಇಲ್ಲ. ಹಾಂ.. ಮನುಷ್ಯನ ದುರಾಸೆಗಳಿಂದಾಗಿ ಅಪಾರ ಜೀವ ಹಾನಿ ಆಗಬಹುದು. ಅದು ಆಗಾಗ ಆಗುತ್ತಲೇ ಇದೆ ಕೂಡ.. ಸುಮ್ಮಸುಮ್ಮನೇ ಜನರನ್ನು ಭೀತಿಗೊಳಿಸುವ ಯತ್ನವಿದೆಲ್ಲಾ.." ಎಂದು ಮೂರು ವರುಷದಲ್ಲಿ ಆಗುವ ದಿಢೀರ್ ಪ್ರಳಯದ ಯೋಚನೆಯೇ ಶುದ್ಧ ತಪ್ಪು ಎಂದರು.
ತದನಂತರ ನಾನು ಕೆಲವು ಬ್ಲಾಗಿಶ್ಚರುಗಳನ್ನು, ಸ್ನೇಹಿತರನ್ನು ಅವರ ಅಭಿಪ್ರಾಯ ತಿಳಿಯಲು ಸಂಪರ್ಕಿಸಿದೆ. ಅವರ ಉತ್ತರಗಳು, ಅನಿಸಿಕೆಗಳು ಈ ಕೆಳಗಿನಂತಿವೆ..
೧. "ವಿಕಾಸವಾದ"ದಲ್ಲಿ ತೊಡಗಿರುವ ವಿಕಾಸ್ ಹೆಗಡೆ - "ಹೌದಾ.. ಹಾಂಗೆ ಹೇಳಿದ್ವಾ? ಅಯ್ಯೋ... ಸರಿ ಹಾಂಗಿದ್ದ್ರೆ... ಮೂರುವರ್ಷದೊಳ್ಗೆ ನಾನು ಮದ್ವೆ ಮಾಡ್ಕೊಬೇಕು... ಬ್ಯಾಚುಲರ್ ಆಗಿ ಸಾಯೋಕೆ ಇಷ್ಟ ಇಲ್ಲೆ.. ಹ್ಹ ಹ್ಹ ಹ್ಹ.." (ಹ್ಮಂ.. ಆದಷ್ಟು ಬೇಗ ನಾಲ್ಕನೆ ಗೆಟಗರಿಯಿಂದ ಭಡ್ತಿ ಪಡೀತೆ ಹೇಳಾತು ಹಾಂಗಿದ್ರೆ....:) )
೨. "ನಾವೇಕೆ ಹೀಗೆ?" ಎನ್ನುವ ಲಕ್ಷ್ಮಿ - "ನಂಬೊಲ್ಲ ಒಂದ್ಸರ್ತಿ.. ನಂಬೊಲ್ಲ ಎರಡಸರ್ತಿ.. ನಂಬೊಲ್ಲ ಮೂರಸರ್ತಿ....ಮಾಯನ್ ಕ್ಯಾಲೆಂಡರ್ ತುಂಬಾ ಕ್ರೂಡ್ ರಚನೆ ಆಗಿರೋದು. ಅವರು ಚಂದ್ರನ ದೂರ ತಿಳ್ಕೊಂಡ ತಕ್ಷಣ ಅವ್ರ ಎಲ್ಲಾ ಪ್ರಿಡಿಕ್ಷನ್ನೂ ಸರಿ ಎನ್ನೋಕೆ ಆಗಲ್ಲ.. ಇದೆಲ್ಲಾ ಬರೀ ಸುಳ್ಳು.."
೩. "ಅಂತರ್ವಾಣಿ"ಯನ್ನು ಹಂಚಿಕೊಂಡ ಜಯಶಂಕರ್ - "ಹೌದಾ ತೇಜಕ್ಕ.. ಗೊತ್ತಿರ್ಲಿಲ ನೋಡಿ.. ಒಂದು ಲೆಕ್ಕದಲ್ಲಿ ಒಳ್ಳೇದು ಬಿಡಿ.. ಮನೆಕಟ್ಟಿ ಸಾಲದಲ್ಲಿದ್ದೀನಿ. ಜೀವ್ನ ಪೂರ್ತಿ ತೀರ್ಸೊದಲ್ಲೇ ಆಗೊತ್ತೆ ಅಂತಿದ್ದೆ. ಪ್ರಳಯ ಆಗಿ ಸಾಲದಿಂದನೂ ಮುಕ್ತಿ ಸಿಗೊತ್ತೆ ಬಿಡಿ... :) " (ಇದನ್ನು ಕೇಳಿ ಮನಃಪೂರ್ತಿ ನಕ್ಕು ಬಿಟ್ಟಿದ್ದೆ..:)).
೪. "ತುಂತುರು ಹನಿ" ಸಿಂಪಡಿಸುವ ಶ್ರೀನಿಧಿ - "ಅಯ್ಯೋ ನಿಂಗೆ ತೀರಾ ಮಳ್ಳಾಗೋಜೆ ಅತ್ಗೆ.. ನೀ ಇಂಥದ್ದನ್ನೆಲ್ಲಾ ಪ್ರಶ್ನೆ ಕೇಳೋದೇ ಅಲ್ಲಾ.." (ಮುಂದೆ ನಾನು ಮಾತಾಡೋ ಹಾಂಗೇ ಇಲ್ಲಾ.. ಗಪ್‌ಚುಪ್!)
೫. "ಮೌನ ಗಾಳ" ಹಾಕಿ ಕುಂತ ಸುಶ್ರುತ - "ಹೋದ್ರೆ ಹೋಗ್ಲಿ ಬಿಡೆ.. ಎಲ್ರ ಜೊತೆ ನಾವೂ ಹೋಗೋದಾದ್ರೆ ಹೋಗಾಣ ಅದ್ಕೇನಂತೆ.. ಎಲ್ಲಾ ಒಂದ್ಸಲ ಫಿನಿಶ್ ಆಗ್ಬೇಕು.. ಒಬ್ಬಿಬ್ರು ಉಳ್ಯೋದಾದ್ರೆ ಬೇಡ.. ಎಲ್ಲಾ ಹೋಗ್ಲಿ.. ನಂದಂತೂ ಸಹಮತಿ ಇದ್ದು ನೋಡು.." (ಪ್ರಳಯಕ್ಕೆ ಇವರ ಸಹಮತಿ ಇದೆ,, ನೋಟೆಡ್!!! :) ).
೬. "ಮನಸೆಂಬ ಹುಚ್ಚು ಹೊಳೆಯಲ್ಲಿ" ಈಜುತ್ತಿರುವ ಚಿತ್ರ - "ಅಯ್ಯೋ.. ನಿಂಗೇನಾಯ್ತೆ? ಇನ್ನೂ ನೀನು ಈ ಪ್ರಳಯದ ಹುಚ್ಚಿಂದ ಹೊರ್ಗೆ ಬಂದಿಲ್ವಾ? ಹ್ಮ್ಂ.. ಹಾಂಗಾಗೋದಾದ್ರೆ ಅಮೇರಿಕಾಕ್ಕೆ ಪ್ಲೇನ್ ಟಿಕೆಟ್ ಮೊದ್ಲೇ ಮಾಡ್ಸಿ ಇಟ್ಕೋಬೇಕು.. " ನಂಗೆ ಆಶ್ಚರ್ಯ "ಯಾಕೆ ಚಿತ್ರಕ್ಕ? ಎಲ್ಲಾ ಕಡೆನೂ ಪ್ರಳಯ ಆಗಿರೊತ್ತಲ್ಲಾ..?" "ಅಯ್ಯೋ ಅವ್ರ ಪ್ರಕಾರ ಡಿಸೆಂಬರ್ ೨೧ಕ್ಕೆ ಅಲ್ದಾ? ಅಮೇರಿಕಾಕ್ಕೆ ೨೧ ಡೇಟ್ ಆಗೋದು ಮರುದಿನ...ಸೋ... ಈ ದಿನ ನಾವು ಪ್ಲೇನ್ ಹತ್ತಿದ್ರೆ ಅಲ್ಲಿ ಪ್ರಳ ಆಗೋಮುಂಚೆ ಇರ್ತಿವಿ. ಭಾರತದಲ್ಲಿ ಪ್ರಳಯ ಶುರು ಆಗೋವಾಗ ನಾವು ಪ್ಲೇನ್‍ನಲ್ಲಿ ಇರ್ತಿವಲ್ಲಾ... ಹಾಗೆಯೇ ಅಲ್ಲಿ ಪ್ರಳಯ ಶುರು ಆಗೋ ಮೊದಲು ಮತ್ತೆ ಹೊರಟ್ರೆ ಇಲ್ಲಿಗೆ ನೀರ ಮೇಲೆ ಲ್ಯಾಂಡ್ ಆಗ್ಬಹುದು ನೋಡು.." (ಭಾರೀ ಯೋಚನೇನೆ.. ಆದ್ರೆ ಜೊತೆಗೆ ಹಡಗಿನ ಟಿಕೆಟ್ ಕೂಡಾ ಮಾಡ್ಸಿ ಇಟ್ಕೊಂಡಿರ್ಬೇಕು... ಲ್ಯಾಂಡ್ ಆಗೋಕೆ ಹಡಗು ಬೇಕು ತಾನೆ? :)).
೭. "ಕ್ಷಣ ಚಿಂತನೆಯ" ಚಂದ್ರಶೇಖರ್ - "ಹೌದು ಮೇಡಂ... ಹೀಗೂ ಉಂಟೆ? ಪ್ರೋಗ್ರಾಂನಲ್ಲಿ "ಬ್ರಹ್ಮ ರಹಸ್ಯ" ಅಂತ ಬಂದಿತ್ತು ಅದನ್ನ ನೋಡಿದ್ದೆ. ಈ ಬ್ರಹ್ಮ ರಹಸ್ಯ ಬರೆದಿದ್ದು ಪಿ.ಯು.ಸಿ ಓದಿದ ಹುಡುಗನಂತೆ ಮೇಡಂ... ಅದು ಭಾಗ-೧, ೨ ಹಾಗೂ ೩ ಇದೆಯಂತೆ.. ನಂಬೋಕಂತೂ ಆಗೊಲ್ಲಾ ನೋಡಿ..." (ಓಹೋ ಇದು ಬ್ರಹ್ಮ ರಹಸ್ಯದ ಕಥೆಯೋ... ಹಾಗಿದ್ದರೆ ಇದೊಂದು ಸುಳ್ಳಿನ ಬ್ರಹ್ಮ ಗಂಟೇ ಸರಿ ಎಂದೆನಿಸಿತು ನನಗೆ).
೮. "ಮಧುವನದಲ್ಲಿ" ವಿಹರಿಸುತ್ತಿರುವ ಮಧುಸೂದನ್ - "ಇದ್ರಲ್ಲಿ ನಂಬಿಕೆ ಇಲ್ಲಾ...ಸಾಕಷ್ಟು ವೈಜ್ಞಾನಿಕ ಸಾಕ್ಷಿಗಳೂ ಇಲ್ಲಾ... ಆದ್ರೆ ಒಂದೇ ಸಲ ಎಲ್ಲರೂ ಹೋಗೋದಾದ್ರೆ ಒಳ್ಳೇದೇ.. ಆಗ್ಲಿ ಬಿಡು.... ಎಲ್ಲರಿಗೂ ಒಟ್ಟಿಗೇ ಮೋಕ್ಷ ಸಿಕ್ಕಿದಂತಾಗ್ತು.."
ತಮ್ಮ ತಮ್ಮ ಕ್ಷೇತ್ರದಲ್ಲಿ ವಿಜ್ಞಾನಿಗಳಾಗಿರುವ "ಸಾಗರದಾಚೆಯ ಇಂಚರ"ಹೊರಡಿಸುವ ಡಾ.ಗುರುಮೂರ್ತಿ ಹಾಗೂ "ಜಲನಯನ"ದ ಮೂಲಕ ನೋಡುವ ಡಾ.ಆಝಾದ್ ಅವರು ವೈಜ್ಞಾನಿಕ ನೆಲೆಯಲ್ಲಿ ಈ ವಿಷಯವನ್ನು ಅಲ್ಲಗಳೆದರು.
ಗುರುಮೂರ್ತಿ - "ನೋ ಛಾನ್ಸ್... ಪ್ರಳಯ ಆಗೋಕೆ ಸಾಧ್ಯನೇ ಇಲ್ಲಾ. ಇನ್ನೇನಾದ್ರೂ ಭೂಮಿ ತನ್ನ ಅಕ್ಷಾಂಶದಿಂದ ದಿಕ್ಕು ತಪ್ಪಿದರೆ ಮಾತ್ರ ಹಾಗಾಗಬಹುದಷ್ಟೇ. ಆದರೆ ಅದೂ ಅಷ್ಟು ಸುಲಭವಲ್ಲ. ಇನ್ನು ಸಮುದ್ರ ಮಟ್ಟ ಪ್ರತಿ ವರ್ಷ ಏರುತ್ತಲೇ ಇದೆ. ಇದೆಲ್ಲಾ ಗ್ಲೋಬಲ್ ವಾರ್ಮಿಂಗ್‌ನಿಂದಾಗುತ್ತಿದ್ದು.. ಇದು ಸುಮಾರು ೨೦೦ ವರ್ಷಗಳಿಂದಲೂ ನಡೆಯುತ್ತಿದೆ. ಎಲ್ಲೋ ಒಂದಿಷ್ಟು ಭೂಭಾಗಳು ಮುಳುಗಡೆ ಆಗಬಹುದು ಕ್ರಮೇಣ... ಬಿಟ್ಟರೆ ಸಂಪೂರ್ಣ ನಾಶ ಸಾಧ್ಯವೇ ಇಲ್ಲ. ಇನ್ನು ಮನುಷ್ಯರೇ ಅಣುಬಾಂಬುಗಳ ಮೂಲಕ ಕೃತ್ರಿಮ ಪ್ರಳಯ ತಂದರೆ ತರಬಹುದಷ್ಟೇ. ಸ್ವಾಭಾವಿಕವಾಗಿ ಭೂಮಿಯ ಸಂಪೂರ್ಣ ನಾಶ ಆಗೊಲ್ಲ.. ನನ್ನ ಅಭಯ ಇದ್ದು..೨೦೦% ಹೆದ್ರಿಕೆ ಬೇಡ.. ಪ್ರಳಯ ಆಗ್ತಿಲ್ಲೆ....:)" (ಇಷ್ಟು ಅಭಯ ಸಿಕ್ಕರೆ ಸಾಕಲ್ಲಾ....:) ).
ಆಝಾದ್ - "ನಿಮ್ಗೆ ಈ ಪ್ರಳಯದ ಯೋಚ್ನೆ ಯಾಕೆ ತಲೆ ತಿನ್ತಾ ಇದೆ?... ಆ ಮಾಯನ್ ಕ್ಯಾಲೆಂಡರ್ ಅವರ ಸಂಖ್ಯಾಕ್ರಮ ವಿಚಿತ್ರವಾಗಿದೆ. ಹಾಗೊಂದು ವೇಳೆ ೨೦೧೨ಗೆ ಪ್ರಳಯ ಆಗ್ಬೇಕು ಅಂತಾಗಿದ್ರೆ ಅದ್ರ ಇಫೆಕ್ಟ್ ಸುಮಾರು ೫೦-೬೦ ವರ್ಷಗಳ ಮೊದಲೇ ಆಗಬೇಕಾಗುತ್ತಿತ್ತು. ಸಿಂಪಲ್ ರೊಟೇಷನ್, ರೆವಲ್ಯೂಷನ್, ಲೈಟ್ ಟ್ರಾವೆಲ್, ಎನರ್ಜಿ ಡಿಸಿಪೀಷನ್ ಇವುಗಳನ್ನು ಲೆಕ್ಕ ಹಾಕಿ ಎಲ್ಲ ಡೈನಾಮಿಸಮ್ ಎಕ್ಸ್ಟ್ರಾಪೊಲೇಟ್ ಮಾಡಿದ್ರೆ.. ಇದು ಇನ್ನು ಮೂರುವರ್ಷದೊಳಗಂತೂ ಅಸಾಧ್ಯ. ರಾತ್ರಿ ಆಗುವ ಮೊದಲು ಸಂಜೆ ಆಗ್ಬೇಕು ತಾನೆ? ಹಾಗೇ ಏನಾದ್ರೂ ಒಂದು ದೊಡ್ಡ ವಿಪತ್ತು ಬರುವ ಮೊದಲು ಅದರ ಮುನ್ಸೂಚನೆ ಸಿಗ್ಬೇಕು. ದೊಡ್ಡ ಉಲ್ಕೆಯೋ ಇನ್ನಾವುದೋ ಈ ಭೂಮಿಯನ್ನು ಬಡಿಯಬೇಕೆಂದರೆ ಅದು ಬಹು ದೂರವನ್ನು ಕ್ರಮಿಸಬೇಕಾಗುತ್ತದೆ. ಅದಕ್ಕೆ ಸಮಯ ಹಿಡಿಯುವುದು ಮತ್ತು ಅದು ನಮ್ಮ ಗಮನಕ್ಕೂ ಬರುವುದು. ನಿಮಗೆ ಇನ್ನೊಂದು ವಿಷಯ ಗೊತ್ತೇ?.... ಸೌದಿ ರಾಷ್ಟ್ರಗಳಲ್ಲಿ ಇತ್ತೀಚಿಗೆ ಕೆಲವಡೆ ಸ್ನೋ ಫಾಲ್ ಆಗುತ್ತಿದೆಯಂತೆ..!!! ಸುಮಾರು ೫೩ ಡಿಗ್ರಿ ತಾಪಮಾನ ಇರುವ ಪ್ರದೇಶವದು. ಜನರ ದುರಾಸೆ, ಪ್ರಕೃತಿಯೊಂದಿಗಿನ ದುರ್ವರ್ತನೆಯಿಂದ ಹವಾಮಾನ ವೈಪರೀತ್ಯವಾಗುತ್ತಿದೆ. ಇದರಿಂದ ಅನೇಕ ಜೀವ ಹಾನಿ ಮುಂದೆ ಆಗಬಹುದಷ್ಟೇ. ಅಲ್ಲಾರಿ ಅಷ್ಟಕ್ಕೂ ಪ್ರಳಯ ಆಗೇ ಆಗೊತ್ತೆ ಅಂತಾದ್ರೆ ಏನು ಮಾಡೋಕೆ ಆಗೊತ್ತೆ? ಒಂದು ಬಿಲ್ಡಿಂಗ್ ಬೀಳೊತ್ತೆ ಅಂದ್ರೆ ಜನ ಓಡಿ ಬಚಾವ್ ಆಗ್ತಾರೆ. ಆದ್ರೆ ಇಡೀ ಭೂಮಿನೇ ಇರೊಲ್ಲ ಅಂದ್ರೆ ಏನು ಮಾಡೋಕೆ ಆಗೊತ್ತೆ?...." (ಹ್ಮ್ಂ.. ನಿಜ. ಆಗದೇ ಹೋಗದೇ ಇರೋ ವಿಚಾರಕ್ಕೆ ಜನ ಯಾಕೆ ಇಂದೇ ಈಗಲೇ ತಲೆ ಕೆಡಿಸಿಕೊಂಡು ಕಾಣದ ಪ್ರಳಯದ ಆತಂಕಕ್ಕೆ ಕೆಲ ಕಾಲವಾದರೂ ತುತ್ತಾಗುತ್ತಾರೋ ನಾ ಕಾಣೆ!!!).
ಇವಿಷ್ಟು ನನ್ನ ಮಂಥನದೊಳಗೆ ಸಿಕ್ಕ ವಿಚಾರಧಾರೆಗಳು. ಅದೆಷ್ಟೋ ಸಹಮಾನಸಿಗರಲ್ಲೂ ಕೇಳಬೇಕೆಂದಿದ್ದೆ. ಆಗಲಿಲ್ಲ. ಈ ವಿಷಯದ ಕುರಿತಾಗಿ ನೀವೂ ನಿಮ್ಮ ಅಭಿಪ್ರಾಯಗಳನ್ನು... ಇತರರಿಂದ ಕೇಳಿದ, ಓದಿದ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಬೇಕಾಗಿ ವಿನಂತಿ.
ಇನ್ನು ಕೊನೆಯದಾಗಿ ನಾನು ಅಂದರೆ "ಮಾನಸ" -
ಆ ಚಾನಲ್‌ನಲ್ಲಿ ಈ ಪ್ರೋಗ್ರಾಂ ಪ್ರಸಾರವಾಗಿದ್ದು ನಾನು ನೋಡಲಿಲ್ಲ ಎಂದು ಮೊದಲೇ ಹೇಳಿದ್ದೇನೆ. ಮೊದಲಸಲ ನಾನು ಕೇಳಿದ್ದೇ ನಮ್ಮ ಮನೆಯ ಕೆಲಸಕ್ಕೆ ಬರುತ್ತಿದ್ದ ಸರೋಜಳ ಮೂಲಕ. ಆಮೇಲೆ ನೋಡಿದರೆ ನಮ್ಮ ಫ್ಲ್ಯಾಟ್ ತುಂಬಾ ಇದೇ ಸುದ್ದಿ. ಏನೋ ಆಗುವುದಿದೆ.. ಅದು ನಾಳೆಯೇ ಘಟಿಸುತ್ತದೆ ಅನ್ನೋ ರೀತಿಯಲ್ಲಿ ಎಲ್ಲರೂ ಇದನ್ನೇ ಮಾತಾಡಿಕೊಳ್ಳುತ್ತಿದ್ದರು. "ಅಲ್ಲಾರೀ.. ಹೀಗಾದ್ರೆ ಹೇಗೆ? ಎಷ್ಟು ಕಷ್ಟ ಪಟ್ಟು ಮಗ್ನ "ಆ" ಸ್ಕೂಲ್‌ಗೆ ಒಂದೂವರೆ ಲಕ್ಷ ಕೊಟ್ಟು ಸೇರ್ಸಿದೀವಿ. ಅದೆಲ್ಲಾ ವೇಸ್ಟ್ ಆಗೊಲ್ವಾ? ಛೇ ಏನೂ ಬೇಡ ಅನ್ಸೊತ್ತೆ ಇದ್ನ ಕೇಳಿದ್ರೆ.." ಎಂದು ಒಬ್ಬರು ಅಂದ್ರೆ... "ನಾನಂತೂ ನನ್ನ ಮಗ್ಳ ಇಂಜಿನೀಯರಿಂಗ್ ಸೀಟ್‌ಗೆ ಡೊನೇಷನ್ ಒಟ್ಟು ಹಾಕಲ್ಲ ಇನ್ನು.. ಸುಮ್ನೇ ಒದ್ದಾಡಿ ಸಾಯೋಕಾ...!" ಅಂತ ಇನ್ನೊಬ್ರ ವರಾತ. "ಯೇ ಸಬ್ ಪ್ರಭೂಕಿ ಪ್ರಕೋಪ್ ಹೈ... ಅಗರ್ ಆಪ್ ಕಲ್ಕಿ ಭಗವಾನ್ ಕೋ ಪೂಜತೇ ಹೈಂ ತೋ ಕುಛ್ ನಹಿ ಹೋಗಾ.. ಆಜ ಸೇ ಹೀ ಕಲ್ಕಿ ಭಗವಾನ್ ಕೋ ಮಾನಿಯೇ,,"(="ಇದೆಲ್ಲಾ ದೇವರ ಕೋಪದಿಂದಾಗುತ್ತಿರುವುದು.. ನೀವು ಕಲ್ಕಿ ಭಗವಾನ್‌ರನ್ನು ಪೂಜಿಸಿ.. ಅವರನ್ನು ಪೂಜಿಸುವವರಿಗೆ ಎನೂ ಆಗೊಲ್ಲವಂತೆ... ಇವತ್ತಿನಿಂದಲೇ ಅವರ ಅನುಯಾಯಿಯಾಗಿ...") ಅಂತ ಮತ್ತೋರ್ವರ ಪುಕ್ಕಟೆ ಸಲಹೆ. ಈ ಕಲ್ಕಿ ಭಗವಾನ್‌ನ ಮಾಯೆಯ ಪ್ರಭಾವದ ಕುರಿತು ಈ ಮೊದಲೇ ಲೇಖನವೊಂದನ್ನು ಬರೆದಿದ್ದೆ. ಓದಿದ್ದರೆ ನಿಮಗೂ ಅನಿಸಬಹುದು ಈಗ "ಜೈ ಕಲ್ಕಿ ಭಗವಾನ್" ಎಂದು :) ಸಾವಿಗಂಜಿ ಬದುಕಲು ಹೆದರುವ ಮನುಷ್ಯರಿಗೆ ಏನೆನ್ನೋಣ? ಪ್ರಳಯಾಂತಕವೀ ಪ್ರಳಯದ ಆತಂಕ ಎಂದೆನಿಸಿತು!
ಪ್ರಳಯ ಅನ್ನೋದು ಎಂದೋ ಮುಂದಾಗುವಂತದ್ದಲ್ಲ. ಅದು ಆಗದೆಯೂ ಇರಬಹುದು. ಆಗಲೂ ಬಹುದು. ಆದಿ ಇದ್ದ ಮೇಲೆ ಅಂತ್ಯ ಇದ್ದೇ ಇದೆ ಎಂದು ನಂಬುವವಳು ನಾನು. ಆದರೆ ಆ ಅಂತ್ಯ ದಿಢೀರ್ ಎಂದು... ಇಂಥದ್ದೇ ದಿನವೆಂದು ಹೇಳಿದರೆ ಖಂಡಿತ ನಂಬಲಾಗದು. ಮುಂದಾಗುವ ದುರಂತದ ಸಣ್ಣ ಚಿತ್ರಣ ಇಂದೇ ಕೆಲವು ಕಡೆ ದೊರಕಿದೆ.. ದೊರಕುತ್ತಲೂ ಇದೆ... ಮುಂದೆಯೂ ಕಾಣಸಿಗುವುದು. ಮನುಷ್ಯ ತನ್ನ ಉಳಿವಿಗೆ ಹಾಗೂ ಅಳಿವಿಗೆ ತಾನೇ ಜವಾಬ್ದಾರ ಎಂದು ಮೊದಲು ತಿಳಿಯಬೇಕು. ಪ್ರಕೃತಿಯೊಡನೆ ಚೆಲ್ಲಾಟ ಪ್ರಾಣ ಸಂಕಟ ಎನ್ನು ಸತ್ಯ ಮನದಟ್ಟಾದರೆ ಇನ್ನೂ ಸ್ವಲ್ಪ ಕಾಲ ಈ ಕಲಿಯುಗ ಬಾಳಿಕೆಗೆ ಬರಬಹುದು. ಹುಟ್ಟು ಹೇಗೆ ಅನಿಶ್ಚಿತವೋ ಸಾವೂ ಹಾಗೆಯೇ... ಯಾರ ಸಾವನ್ನೂ ಯಾರೂ ಮೊದಲೇ ನಿಶ್ಚಯ ಮಾಡಲಾರರು. ಅದನ್ನು ಊಹಿಸಬಹುದಷ್ಟೇ! ಊಹೆ ಯಾವತ್ತೂ ಸತ್ಯವಲ್ಲ. ಅದಕ್ಕೆ ಅದರದ್ದೇ ಆದ ಅಸ್ತಿತ್ವವೂ ಇಲ್ಲ! ಪ್ರಳಯವೇ ಆಗಿರಲಿ..ಇಲ್ಲಾ ಇನ್ನಾವುದೇ ವಿಷಯವಾಗಿರಲಿ.. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದೇ.. ಕೇವಲ ಕಪೋ ಕಲ್ಪಿತ ಸುದ್ದಿಯನ್ನು ನಂಬುವುದರ ಮೂಲಕ ನಾವು ನಮ್ಮ ಇಂದಿನ ಬಾಳ್ವೆಯನ್ನು ಮಾತ್ರ ನಾಶ ಮಾಡಿಕೊಳ್ಳುತ್ತೇವೆ. ಇದು ಮಾತ್ರ ಸತ್ಯ.
- ತೇಜಸ್ವಿನಿ ಹೆಗಡೆ.