ಶುಕ್ರವಾರ, ಜನವರಿ 30, 2015

ತಪ್ತ

ಹನಿಯಲೆಂದೇ ಸಿದ್ಧವಾಗಿಹ ತುಂಬಿದ ಮನ,
ಬಿಳಿ ಮೋಡಗಳ ನಡುವೆ ರಾಟೆ ತಿರುಗಿಸುವ ಕರಿ ಚಂದ್ರ....
ಅಂಚಿಂದೆದ್ದು ಬರುತಿವೆ ಕೆಂಬಣ್ಣದ ಕೋಲ್ಮಿಂಚುಗಳು,
ಸಿಡಿಲು-ಗುಡುಗುಗಳೆಲ್ಲಾ ಮೌನದೊಳು ಮಗುಮ್ಮಾ!

ಆರೋಹಣದಲ್ಲಿಹ ಎದೆಬಡಿತ,
ಅವರೋಹಣದಲ್ಲಿರುವ ಉಸಿರು,
ಒಳಸರಿದ ಕೆಳ್ದುಟಿ, ಮಂದ್ರಕ್ಕಿಳಿದ ಕಸುವು.

ಕರವಸ್ತ್ರವಾಗದ ಕವಿತೆ,
ಕಂಡಷ್ಟೇ ಕಾಣಿಸಿದ ಕಡಲು,
ಅಪಸ್ವರ ನುಡಿಸುತಿದೆ ಮುರಿದು ಬಿದ್ದ ಕೊಳಲು...

ಕತ್ತಲ ಹುಡುಕಿ ಹೊರಟರೆ,
ಬೆಳಕೇ ಕಣ್ಮುಚ್ಚುವುದು..!
ಇರದುದರೆಡೆ ತುಡುಯುವುದು
ಎರಡು ದೋಣಿ ಪಯಣವು!

~ತೇಜಸ್ವಿನಿ
ಸೋಮವಾರ, ಜನವರಿ 26, 2015

ಇರುವೆ

ಧಾಳಿಲಿ ಕುದುರೆ ವೈಯಾರದಿ ಕುಣಿಯಲು
ಧೂಳು ರವಿಯ ಮೇಲೆ ಮುಸುಕುವುದೆ...
ನಾ ನಿನ್ನ ಧ್ಯಾನದೊಳಿರಲು ಮಿಕ್ಕ
ಹೀನ ಮಾನವರೇನು ಮಾಡಬಲ್ಲರೋ ರಂಗ ....
ಬಲಗಾಲನ್ನು ಮಡಚಿಟ್ಟು, ಎಡಗಾಲನ್ನು ಬಿಚ್ಚಿ, ಮಜ್ಜಿಗೆ ಬೊಡ್ಡೆಯನ್ನಿಟ್ಟು
ಕೊಂಡು ಕಡೆಯುತ್ತಾ ಮೆಲುದನಿಯಲ್ಲಿ ದಾಸರ ಕೀರ್ತನೆಯನ್ನು ಶಾಂತತ್ತೆ ಹಾಡಿಕೊಳ್ಳುತ್ತಿದ್ದಂತೇ, ಹುರುಪಿಂದ ಮಜ್ಜಿಗೆಯೂ ಸೊರೋಬೊರೋ ಎಂದು ತನ್ನ ದನಿಯನ್ನೂ ಸೇರಿಸತೊಡಗಿತು. ಇವರಿಬ್ಬರ ಕುಣಿತಾಟಕ್ಕೆ ಒಳಗಿರಲಾರೆ ಮೇಲೇರಲಾರೆ ಎಂಬಂತೇ ಒಡಲೊಳಗಿಂದ ಬೆಣ್ಣೆ ಮುದ್ದೆ ಮೆಲ್ಲಗೆ ತೇಲತೊಡಗಿತು. ’ಅಜ್ಜಿ ಎಷ್ಟೊಂದು ಗೋವಿಂದೆರ ನೋಡು!! ಕಪ್ಪಿರುವೆ ಬಂದ್ರೆ ರಾಶಿ ದುಡ್ಡು ನಮ್ಮನೆಗೆ ಬತ್ತು ಹೇಳಲ್ದಾ?!" ಎಂಟು ವರ್ಷದ ಲಾಸ್ಯ ಜೋರಾಗಿ ಕಿರುಚಲು, ಅಲ್ಲೇ ಪಕ್ಕದಲ್ಲಿ ಕುಳಿತು ಕಡುಬಿಗೆ ಗೋವೆ ಕಾಯಿ ಹೆಚ್ಚುತ್ತಿದ್ದ ಅಪರ್ಣ ಮಗಳ ತಲೆಗೊಂದು ಮೆಲ್ಲನೆ ಕುಟ್ಟಿದಳು. "ಮಳ್ಳನೆ ನಿಂಗೆ... ಇರುವೆ ಬಂದ್ರೆ ದುಡ್ಡು ಬರ್ತು ಅಂತ ಯಾರು ಹೇಳಿದ್ವೆ? ಅಜ್ಜಿ ಎಷ್ಟು ಚೊಲೋ ಹಾಡು ಹೇಳ್ತಾ ಇದ್ದು.. ಅದ್ನ ಕೇಳದು ಬಿಟ್ಟು..." ಎಂದು ಸಣ್ಣಗೆ ಗದರಲು ಶಾಂತತ್ತೆ, "ಅಯ್ಯೋ ಕೂಸಿಗೆ ಎಂತ ಗೊತ್ತಾಗ್ತೆ? ಅದ್ರ ಮುಗ್ಧತೆ ನೋಡಿ ಸಂತೋಷ ಪಡವು ನಾವು... ಯಾರೋ ಹೇಳಿದ್ದು ಕೇಳಿಕ್ಕು... ಕಪ್ಪಿರುವೆ ಮನೆಗೆ ಬಂದ್ರೆ ಶುಭ ಹೇಳಿ.. ನೀ ಗದರಡ....." ಎಂದು ಸಮಾಧಾನಿಸುತ್ತಾ ತೇಲುತ್ತಿದ್ದ ಬೆಣ್ಣೆ ಮುದ್ದೆಯನ್ನು ತೆಗೆದು ಮತ್ತೊಂದು ಪಾತ್ರೆಗೆ ಹಾಕಿ, ಬೆರಳ ತುದಿಯಿಂದ ಸ್ವಲ್ಪ ಬೆಣ್ಣೆ ತೆಗೆದುಕೊಂಡು ಮಜ್ಜಿಗೆ ಬೊಡ್ಡೆಗೂ ಸವರಿ, ಕೂತು ಸೊಂಟ ಹಿಡಿದಿದ್ದರಿಂದ ಕೈಯಾಧಾರಿಸುತ್ತಾ ತುಟಿ ಕಚ್ಚಿ ಮೇಲೇಳಲು ಸೊಸೆ ಅಪರ್ಣೆಗೆ ಪಿಚ್ಚೆನಿಸಿತು. "ಅತ್ತೆ ನೀವ್ಯಾಕೆ ಇಲೆಕ್ಟ್ರಿಕ್ ಮೆಷಿನ್ ತಗಳಲಾಗ? ಹೀಂಗೆ ಕಡೆದಾಗ ಮಾತ್ರ ಮಜ್ಜಿಗೆ ರುಚಿ ಅಂತ ಸುಮ್ನಾಗಿಸದಾತು..... ನಿಮ್ಮ ಮಗನಿಗೇ ಹೇಳಿ ಈ ಸಲ ಬೆಂಗ್ಳೂರಿಂದ ಮಜ್ಜಿಗೆ ಕಡೆಯೋ ಮೆಷಿನ್ ತರದೇಯಾ ನೋಡಿ.." ಎನ್ನಲು ಮನಸೊಳಗೇ ನಕ್ಕರು ಶಾಂತತ್ತೆ. "ನನ್ನ ಮೈಯಲ್ಲಿ ಕಸುವಿರೋವರ್ಗೆ ಅವೆಲ್ಲಾ ಬೇಡಾ.... ಎಲ್ಲಾ ಶಕ್ತಿ ಹೋದ್ಮೇಲೆ ನಾನೇ ನೀವಿದ್ದಲ್ಲಿಗೆ ಬರದು ಆತಾ?" ಎಂದು ಚಿಕ್ಕ ಬೌಲಿನಲ್ಲಿ ಆಗ ತಾನೇ ಕಡೆದಿದ್ದ ಬೆಣ್ಣೆ ಮುದ್ದ್ದೆಯ ಚೂರೊಂದನ್ನು ಲಾಸ್ಯಳಿಗೆ ಹಾಕಿ ಕೊಟ್ಟರು. "ಅಜ್ಜಿ ವಾವ್ ಯಮ್ಮಿ ಇದ್ದು.. ಥಾಂಕ್ಸ್.. ಅಮ್ಮಾ ಬೆಂಗಳೂರಲ್ಲಿ ಕೊಡದೇ ಇಲ್ಲೆ.. ಶೀತ ಆಗ್ತು.. ಕೆಮ್ಮ ಹೇಳಿ ಬೈತು.. ಅಜ್ಜಿ.. ನೀ ಎಂತಕ್ಕೆ ಚೂರು ಬೆಣ್ಣೆ ಆ ಚರಿಗೆಗೂ ಬಡಿದದ್ದು?" ಎನ್ನುತ್ತಾ ನಾಲ್ಕೂ ಬೆರಳುಗಳಿಗೆ ಬೆಣ್ಣೆ ಮೆತ್ತಿಕೊಂಡು ನೆಕ್ಕ ತೊಡಗಿದವಳನ್ನು ತಲೆ ಸವರಿ, "ಹ್ಹಿ ಹ್ಹಿ... ನೀ ನೋಡಿದ್ಯಾ ಅದ್ನಾ? ಪಾಪ ಮಜ್ಜಿಗೆ ಬೊಡ್ಡೆ ನಮ್ಗಾಗಿ ಕಡೆದು ಬೆಣ್ಣೆ ಕೊಡ್ತು ಅಲ್ದಾ? ಹಾಂಗಾಗಿ ಅದ್ಕೂ ಸ್ವಲ್ಪ ಬೆಣ್ಣೆ ಇರ್ಲಿ ಹೇಳಿ ಬಡ್ಯದು...". "ಓಹ್ಹೋ... ಮಿಸ್ಸ್ ಹೇಳಿದ್ರು.. ವಿ ಶುಡ್ ಶೇರ್ ಅವರ್ ಫುಡ್ ವಿದ್ ನೀಡೀ....." ಅಂತ... ವೆರಿ ಗುಡ್ ಅಜ್ಜಿ ಎಂದು ಪುಟ್ಟಿ ಸರ್ಟಿಪಿಕೇಟ್ ಕೊಡಲು ಅತ್ತೆ ಸೊಸೆ ಇಬ್ಬರೂ ಗೊಳ್ಳನೆ ನಕ್ಕು ಬಿಟ್ಟರು. ಇದಾವುದರ ಪರಿವೆಯೇ ಇಲ್ಲದೇ ಲಾಸ್ಯ ತುಪ್ಪದ ಪಾತ್ರೆ ಏರಲು ಹರ ಸಾಹಸ ಮಾಡುತ್ತಿದ್ದ ದೊಡ್ಡ ಕಪ್ಪಿರುವೆಯನ್ನೇ ನೋಡುತ್ತಾ "ಇರುವೆ ಇರುವೆ ಕರಿಯ ಇರುವೆ ನಾನು ಜೊತೆಗೆ ಬರುವೆ.. ತಿನಲು ನಿನಗೆ ಬೆಣ್ಣೆಯ ಚೂರು ಕೊಡುವೆ..." ಎಂದು ಮುದ್ದಾಗಿ ಹಾಡಿಕೊಳ್ಳತೊಡಗಿದಳು.
  "ಅಪ್ಪಿ... ನಾನು ವಿಶ್ವಂಗೂ ಹೇಳಿದ್ದೆ ನಾರಿಮನೆ ಲಕ್ಷ್ಮಕ್ಕ ಹಾಸಿಗೆಗೆ ಬಿದ್ದು ಮೂರು ತಿಂಗ್ಳ ಮೇಲಾತು... ದೇಹ ಪೂರ್ತಿ ಕೊಳೀತಾ ಇದ್ದಡ.. ಇಂದೋ ನಾಳೇನೋ ಗೊತ್ತಿಲ್ಲ ಅಂಬ.. ಒಂದ್ಸಲ ನೀವಿಬ್ರೂ ಹೋಗಿ ನೋಡ್ಕ ಬನ್ನಿ.... ನಾನು ಹೋಗಿ ನೋಡಿ ಬಂದಾಯ್ದು..." ಬೆಳಗಿನಿಂದ ಮೂರನೆಯ ಬಾರಿ ಅಪರ್ಣೆಗೆ ನೆನಪಿಸುತ್ತಿರುವುದು ಆಕೆ. ಆದರೆ ಪ್ರತಿ ಸಲವೂ ಹಾಂ, ಹೂಂ ಹೇಳದೇ ಮೌನವಾಗುವ ಸೊಸೆಯ ಹೊಸ ವರಸೆ ಮಾತ್ರ ದೊಡ್ಡ ಪ್ರಶ್ನೆಯಾಗಿತ್ತು ಶಾಂತತ್ತೆಗೆ. ಸ್ವಭಾವತಃ ಶಾಂತ ಸ್ವಭಾವದ ಸೊಸೆ ಯಾವತ್ತು ಅತ್ತೆಯ ಮಾತಿಗೆ ಎದುರಾಡಿದವಳೇ ಅಲ್ಲಾ. ಮದುವೆಯ ಮೊದಲೇ ಗುಡ್ಡೆಮನೆಯ ಕಷ್ಟ-ಕಾರ್ಪಣ್ಯಗಳನ್ನು ಬಹು ಹತ್ತಿರದಿಂದ ಬಲ್ಲವಳು ಆಕೆ. ಗುಡ್ಡೆಮನೆಗೆ ಶಾಂತತ್ತೆ ಸೊಸೆಯಾಗಿ ಬಂದಾಗ ಅವಳನ್ನು ಸ್ವಾಗತಿಸಿದ್ದು ದಟ್ಟ ದಾರಿದ್ರ್ಯವೊಂದೇ. ಹೇಗೋ ಎಂತೋ ಬದುಕು ಮುಂದೆ ಸಾಗುತ್ತಿರುವಾಗ ಕೈಗೆರಡು ಮಕ್ಕಳನ್ನಿತ್ತ ಪತಿ ಮಂಜುನಾಥ ಹಾವು ಕಚ್ಚಿ ಅಕಾಲ ಮರಣವನ್ನಪ್ಪಲು ಬದುಕು ಅಕ್ಷರಶಃ ಶಾಪವೆನಿಸಿತ್ತು. ಗುಡ್ಡೆಮನೆಯಿಂದ ಎರಡೇ ಮೈಲು ದೂರವಿದ್ದ ಅಪರ್ಣೆಯ ಅಬ್ಬೆ, ಅಪ್ಪಯ್ಯನಿಗೆ ಶಾಂತತ್ತೆಯ ಮೇಲೆ ಸಹಾನುಭೂತಿಯಿದ್ದರೂ, ಅವರ ಸ್ಥಿತಿಯೂ ಅಷ್ಟಕಷ್ಟೇ. ಇದ್ದ ಒಂದು ತುಂಡು ಹೊಲದಲ್ಲೇ ಮೈ ಮುರಿದು ದುಡಿಯುತ್ತಾ, ಅವರಿವರ ಮನೆಯಲ್ಲಿ ತಿಂಡಿ ತಿನಸು ಮಾಡಿಕೊಡುತ್ತಾ, ತವರಿನಿಂದ ಅಣ್ಣ ಕಳುಹಿಸುತ್ತಿದ್ದ ಅಷ್ಟಿಷ್ಟು ಧನ ಸಹಾಯದಿಂದಲೇ ಮಕ್ಕಳನ್ನು ಬೆಳಸಿದ್ದಳು. ಓದಿನಲ್ಲಿ ಬಲು ಚುರುಕಾಗಿದ್ದ ವಿಶ್ವನಾಥ ಎಂ.ಬಿ‌ಎ. ಮಾಡಿ ಉತ್ತಮ ಪಗಾರದ ನೌಕರಿ ಹಿಡಿದಾಗಲೇ ಆ ಜೀವ ನೆಮ್ಮದಿಯ ನಿದ್ದೆ ಕಂಡಿದ್ದು. ತಮ್ಮನನ್ನು ಓದಿಸಿ, ಮುರುಕಲು ಮನೆಯನ್ನೂ ರಿಪೇರಿ ಮಾಡಿಸಿ, ಅಮ್ಮನಿಗೆ ಮನೆ ಒಳ-ಹೊರಗೆಲ್ಲಾ ಸವಲತ್ತು ಮಾಡಿಕೊಟ್ಟೇ, ಮೊದಲಿನಿಂದಲೂ ಗುಟ್ಟಾಗಿ ಪ್ರೀತಿಸುತ್ತಿದ್ದ ತನ್ನದೇ ಊರಿನ ಅಪರ್ಣಾಳನ್ನು ವರಿಸಿದ್ದ. ಚಿಕ್ಕವಳಿದ್ದಾಗಿನಿಂದ ನೋಡಿದ್ದ ಶಾಂತತ್ತೆಗೂ ಮಗನ ಆಯ್ಕೆ ನೆಮ್ಮದಿ ತಂದಿತ್ತು. ಊರಿಗೆ ಬಂದಾಗೆಲ್ಲಾ ಅತ್ತೆಗೆ ನೆರವಾಗುತ್ತಾ, ನೆರಳಾಗಿರುತ್ತಿದ್ದ ಅಪರ್ಣಾ ಇಂದು ಮಾತ್ರ ಅವಳ ಸಣ್ಣ ಕೋರಿಕೆಗೂ ಸ್ಪಂದಿಸದಂತಿದ್ದುದು ದೊಡ್ಡ ವಿಪರ್ಯಾಸವಾಗಿತ್ತು. 
"ಅಲ್ದೇ ನಂಗೆ ಸುತ್ತು ಬಳಸಿ ಮಾತು ಬರದಿಲ್ಲೆ.. ಬೆಳ್ಗೆ ಎರ್ಡು ಸಲ ಹೇಳಿದಾಗ್ಲೂ ನೀ ಸುಮ್ನಿದ್ದಿದ್ದೆ.. ವಿಶ್ವ ಬೇರೆ ಮುಖ ಒಂಥರಾ ಮಾಡಿಕೊಂಡು ನಿನ್ನ ನೋಡಿದ.. ಅದೆಂಥಕೆ ನಿಂಗಕಿಗೆ ಆ ಮುದಿ ಜೀವ ನೋಡದು ಇಷ್ಟ ಇಲ್ಲೆ? ನಿಂಗ್ಳನ್ನ ಎಷ್ಟು ಕೇಳ್ತಿತ್ತು ಗೊತ್ತಿದ್ದಾ? ಹೊಟ್ಟೆಗಿಲ್ದೇ ಹೋದಾಗ ಎಷ್ಟೋ ಸಲ ಮಜ್ಜಿಗೆ, ಸಾರು ಕೊಟ್ಟಿದ್ದು... ಒಂದ್ಸಲ ನೋಡಿ ಬರದಲ್ದಾ? ಇಲ್ಲಿಂದ ಬರೀ ಅರ್ಧ ಕಿಲೋಮೀಟರ್ ದೂರಾಗ್ತು...." ಎಂದು ನೇರಾನೇರ ಕೇಳಿ ಬಿಟ್ಟಳು. ಅಷ್ಟತ್ತೂ ತಲೆತಗ್ಗಿಸಿ ಹೆಚ್ಚಿದ್ದ ಹೋಳುಗಳನ್ನೇ ಹೆಚ್ಚುತ್ತಿದ್ದ ಅಪರ್ಣೆಗೆ ಅತ್ತೆಯ ಬಾಯಿಂದ ಲಕ್ಷ್ಮತ್ತೆಯ ಗುಣಗಾನ ಕೇಳಿ, ಅದರಲ್ಲೂ ಮಜ್ಜಿಗೆ ಕೊಟ್ಟ ಪ್ರಸ್ತಾಪ ಬರಲು, ಹೊಟ್ಟೆ ತೊಳಸಿದಂತಾಗಿ,ಉಮ್ಮಳಿಸಿ ಹಿತ್ತಲ ಕಡೆ ಓಡಿ ಬಿಟ್ಟಳು. 
’ಹೇಗೆ ಹೇಳಲಿ ಅತ್ತೆಗೆ ಆ ಲಕ್ಷ್ಮಕ್ಕನ ನಿಜ ಮುಖದ ಬಗ್ಗೆ? ತನಗೇನೂ ಆ ಲಕ್ಷ್ಮತ್ತೆಯ ಮೇಲೆ ಅನುಕಂಪವಿಲ್ಲ.... ಆದರೆ ನಿಜ ವಿಷಯ ತಿಳಿದರೆ ಅತ್ತೆ ಅದೆಷ್ಟು ನೊಂದು ಕೊಂಡಾರು? ಸಂಕಟ ಪಟ್ಟಾರು? ಮದುವೆಯ ನಂತರ ಒಮ್ಮೆ ತಡೆಯಲಾರದೇ ವಿಶ್ವನ ಬಳಿ ಹೇಳಿಕೊಂಡಿದ್ದಕ್ಕೆ ಆತನೇ ಅದೆಷ್ಟು ಅತ್ತಿದ್ದಿಲ್ಲ!! ಎರಡು ದಿನ ನಿದ್ದೇಯೇ ಮಾಡಿರಲಿಲ್ಲ... ಅಮ್ಮನಿಗೆ ಇದನ್ನೆಲ್ಲಾ ಹೇಳ್ಬೇಡ ಎಂದ್ಬಿಟ್ಟಿದ್ದ. ಆದರೆ ಅತ್ತೆ ಮಾತ್ರ ಒಂಟಿ ಕಾಲಲ್ಲಿ ನಿಂತು ಒತ್ತಾಯಿಸುತ್ತಿದ್ದಾರಲ್ಲಾ.. ಏನು ಮಾಡಲಿ? ಛೇ...." ಮನದೊಳಗೇ ಅಲವತ್ತುಕೊಳ್ಳುತ್ತಿದ್ದ ಅಪರ್ಣೆಗೆ ಬೇಡ ಬೇಡವೆಂದರೂ ಗತಕಾಲದ ಆ ಕಹಿ ಘಟನೆ ಮತ್ತೆ ನೆನಪಾಗತೊಡಗಿತು.
ನಾರಿಮನೆಗೆ ಶ್ರೀಲಕ್ಷ್ಮೀ ಹಿರಿ ಸೊಸೆಯಾಗಿ ಬಂದಾಗ ಅಲ್ಲಿ ತುಂಬಿದ್ದ ಸಿರಿ-ಸಂಪತ್ತನ್ನು ಕಂಡು ಹಿರಿ ಹಿಗ್ಗಿ ಹೋಗಿದ್ದಳು. ತವರಿನಲ್ಲೂ ಹೇಳುಕೊಳ್ಳುವಂಥ ಕಷ್ಟ ಇರಲಿಲ್ಲವಾದ್ದರಿಂದ ದರ್ಪ, ಅಹಂಕಾರ ಸ್ವಭಾವತಃ ಕೊಡುಗೆಯಾಗಿ ಬಂದಿತ್ತು. ಬಡವರು, ಆಳುಗಳು, ಪಾಪದ ಜನರೆಲ್ಲಾ ಅವಳ ಕಡೆಗಣ್ಣಿಗೆ ಸಮ. ಬಡತನವನ್ನೇ ಹೊದ್ದಿದ್ದ ಶಾಂತತ್ತೆ ಹೊಟ್ಟೆಗೇನೂ ಇಲ್ಲದ ದಿನ ಗಂಜಿ ಬೇಯಿಸಿಟ್ಟುಕೊಂಡು ನೆಂಜಿಕೊಳ್ಳಲು ಸಾರನ್ನೋ, ಮಜ್ಜಿಗೆಯನ್ನೋ ಕೇಳಲು ಬಂದಾಗ ಒಂದು ಲೋಟದಲ್ಲಿ ಅರ್ಧ ಹುಳಿ ಮಜ್ಜಿಗೆಯನ್ನೋ, ಇನ್ನೇನು ಹಳಸಲಿದ್ದ ನಿನ್ನೆಯ ಸಾರನ್ನೋ ಕೊಟ್ಟು ಅದನ್ನೇ ನಾಲ್ಕು ಜನರಲ್ಲಿ ಹೇಳಿಕೊಂಡು ತಿರುಗುತ್ತಿದ್ದರೂ, ನಿರ್ಮಲ ಮನಸಿನ ಶಾಂತತ್ತೆಗೆ ಮಾತ್ರ ಅವಳು ಕರುಣಾಳುವೇ ಆಗಿದ್ದಳು.  
ಅಂದು ಮಹಾಚೌತಿಯಾಗಿತ್ತು. ಹನ್ನೆರಡರ ಬಾಲೆಯಾಗಿದ್ದ ಅಪರ್ಣೆಗೋ ಟೋಳಿ ಕಟ್ಟಿಕೊಂಡು ಮನೆ ಮನೆ ತಿರುಗಿ ಗಣಪನ ನೋಡುವ ಹುಚ್ಚು. ಅಂದು ತನ್ನ ಓರಗೆಯ ಮಕ್ಕಳ ಜೊತೆ ಲಕ್ಷ್ಮತ್ತೆಯ ಮನೆಗೂ ಬಂದಿದ್ದಳು. ಜರಿತಾರೆ ಸೀರೆಯುಟ್ಟು ಒಳ ಕೋಣೆಯಲ್ಲಿ ಆಸರಿಗೆ ಕುಳಿತಿದ್ದ ದೊಡ್ಡ ಜನರ ನಡುವೆ ಈ ಮಕ್ಕಳಿಗೆ ಎಲೆ ಹಾಕದೇ, ಅಡುಗೆ ಕೋಣೆಯ ಓರಿಯೊಳಗೆ ತಿಂಡಿ ನೀಡಿದ್ದರು. "ಅಯ್ಯೋ ನಿನ್ನೆ ಮಜ್ಜಿಗೆ ವಿಪರೀತ ಹುಳಿಯಾಗೋಯ್ದು.. ಸುಟ್ಟ್ ಕಪ್ಪಿರುವೆ ರಾಶಿ ರಾಶಿ ತುಂಬಿದ್ದೋ.. ದನದ ಅಕ್ಕಚ್ಚಿಗೆ ಹಾಕದೇಯಾ.. ಕೆಟ್ಟ್ ಹುಳಿ..." ಎಂದು ತನ್ನಷ್ಟಕ್ಕೇ ಹಲುಬುತ್ತಾ ದೊಡ್ಡ ಹುಳಿ ಮಜ್ಜಿಗೆಯ ಚರಿಗೆಯನ್ನು ಹೊತ್ತು ಬಾಗಿಲ ಸಂದಿಯಲ್ಲಿಟ್ಟ ಲಕ್ಷ್ಮಕ್ಕನನ್ನು ಹಿಂಬಾಗಿಲಿನಾಚೆಯಿಂದ ಕರೆದಿದ್ದಳು ಶಾಂತತ್ತೆ. ಆರಾಮಾಗಿ ಚಕ್ಕುಲಿ ತಿನ್ನುದ್ದಿದ್ದ ಅಪರ್ಣೆಗೆ ಹುಳಿ ಮಜ್ಜಿಗೆ ವಾಸನೆ ಬಡಿದು ಅತ್ತ ನೋಡಲು, ಸಣ್ಣ ದೊಡ್ಡ ಇರುವೆಗಳ ರಾಶಿಯೇ ಆ ಚರಿಗೆಯ ಬಾಯಿಯನ್ನು ಇಂಚೂ ಬಿಡದೇ ಮುತ್ತಿಕೊಂಡು, ಅದರ ಒಳ ಹೊರಗೆಲ್ಲಾ ಬುಳು ಬುಳುನೆ ಬೀಳುತ್ತಿರುವುದನ್ನು ಕಂಡು ಅಸಹ್ಯವೆನಿಸಿಬಿಟ್ಟಿತ್ತು. ಅತ್ತ ಕೈತುಂಬ ತುಂಬಿಕೊಂಡಿದ್ದ ಚಿನ್ನದ ಬಳೆ ಪ್ರದರ್ಶಿಸುತ್ತಾ ಲಕ್ಷ್ಮಕ್ಕ -ಯಾರು? ಗುಡ್ಡೆಮನೆ ಶಾಂತಿನಾ? ಇವತ್ತೂ ಉಪವಾಸನಾ? ಮಜ್ಜಿಗೆಗೆ ಬಂದ್ಯನ ಅಲ್ದಾ? ಇರು ಕೊಡ್ತೆ..... ಇಂದು ನಿನ್ನ ಪುಣ್ಯಕ್ಕೆ ಸುಮಾರು ಉಳದ್ದು... ಎಂದು ಸಂಭ್ರಮದಿಂದಲೇ ದೊಡ್ಡ ಗಿಂಡಿಯ ತುಂಬಾ ಅದೇ ಮಜ್ಜಿಗೆಯನ್ನು ಸುರಿದು, ಬಿದ್ದಿದ್ದ ಇರುವೆಗಳನ್ನೆಲ್ಲಾ ಸೋಸಿ ಉದಾರತೆಯಿಂದ ಅವಳ ಪಾತ್ರೆಗೆ ಹಾಕಿದ್ದನ್ನು ಕಣ್ಣಾರೆ ಕಂಡ ಅಪರ್ಣೆಗೆ ವಾಕರಿಗೆ ಬಂದು ಎಲ್ಲವನ್ನೂ ಹಾಗೇ ಬಿಟ್ಟು ಮನೆಗೆ ಓಡಿದ್ದಳು. ಅಕ್ಕಚ್ಚಿಗಾಗಿ ತಂದಿಟ್ಟಿದ್ದ ಆ ಬೊಡ್ಡೆಯ ಬಾಯಿಗೆಲ್ಲಾ ಮೆತ್ತಿಕೊಂಡಿದ್ದ ಇರುವೆಗಳ ಸಾಲು, ಅದನ್ನೇ ಲಕ್ಷ್ಮಕ್ಕ ಸೋಸಿ ನೀಡಿದ್ದ ದೃಶ್ಯ ಅವಳಿಂದ ಮರೆಯಾಗದೇ, ಛೇ... ಕೊಡದಿದ್ದರೂ ನಡೆಯುತ್ತಿತಲ್ಲಾ ಎಂದು ಸಂಕಟ ಪಟ್ಟಿದ್ದಳು. ಆ ದಿನದ ನಂತರ ಮತ್ತೆಂದೂ ಆಕೆ ಲಕ್ಷ್ಮಕ್ಕನ ಮನೆಗೆ ಕಾಲಿಡಲೇ ಇಲ್ಲಾ. ಇಂದು ಈ ಮನೆಯ ಸೊಸೆ ತಾನು.. ಈಗ ಅತ್ತೆಯೇ ಆ ಮನೆಗೆ ಹೋಗಿ ವಿಚಾರಿಸಿಕೊಂಡು ಬಾ ಎನ್ನುವಾಗ.... ಅಲ್ಲಿಗೆ ಹೋಗಿ ಹೇಗೆ ನಾಟಕವಾಡಲಿ..? ಎಂಬುದೇ ಅವಳ ದೊಡ್ಡ ಚಿಂತೆ. 
ದೀರ್ಘಾಲೋಚನೆಯಲ್ಲೇ ಮುಳುಗಿದ್ದವಳನ್ನು, ಅವಳತ್ತೆ ಬಂದು ಮೆಲ್ಲನೆ ಮುಟ್ಟಲು, ಬೆಚ್ಚಿ ಹಿಂತಿರುಗಿದವಳಿಗೆ ಕಂಡಿದ್ದು ನಸುನಗುತ್ತಿದ್ದ ಶಾಂತ ಮೊಗ. "ಹುಚ್ಚು ಕೂಸೆ... ವಿಶ್ವ ಎಲ್ಲಾ ವಿಶ್ಯ ಹೇಳಿದ.. ಮಳ್ಳಿ, ಇದಕ್ಕಿಂತಲೂ ಹೆಚ್ಚಿನ ತಿರಸ್ಕಾರ ಕಂಡ ಜೀವ ಇದು. ಹಣ ಇಲ್ದಾಗ ನಾ ಗುಡ್ಡೆಮನೆ ಶಾಂತಿ ಆಗಿದ್ದೆ... ಈಗ ಶಾಂತಮ್ಮಾ ಆಯ್ದೆ! ಇಂಥದ್ದೆಲ್ಲಾ ಅನುಭವಿಸಿ, ದಾಟಿ ಬಂದಾಯ್ದು.... ಎಲ್ಲಾ ಕಾಲದ ಮಹಿಮೆ! ಏನೇ ಆದ್ರೂ ಈಗ ನೀವಿಬ್ರು ಮಾಡ್ತಿರದು ದೊಡ್ಡ ತಪ್ಪು. ಸಾಯುವ ವ್ಯಕ್ತಿಯ ಜೊತೆಯೆಂಥಾ ದ್ವೇಷಾ? ಅಪ್ಪಿ, ಜನ ನನ್ನ ನೋಡಿ ಅಪಹಾಸ್ಯ ಮಾಡ್ತಿದ್ದಾಗ ತುಂಬಾ ನೊಂದಿದ್ದೆ... ಆದ್ರೆ ಆಗ ನಂಗೆ ದೈರ್ಯ ತುಂಬಿದ್ದು ಅಪ್ಪಯ್ಯ ಕೊಟ್ಟಿದ್ದ ಭಗವದ್ಗೀತೆ. ’ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ’ ಎಂದ ಕೃಷ್ಣನ ಧೈರ್ಯದ ಮಾತನ್ನೇ ನಂಬಿ ಬದ್ಕಿದ್ದು ನಾನು. ಮನಸ್ಸನ್ನು ದುರ್ಬಲಗೊಳಿಸಿಕೊಳ್ಳಲೇ ಬಾರ.... ನಮ್ಮನ್ನು ಕುಗ್ಗಿಸೋ ವಿಷ್ಯಗಳನ್ನು ಬಿಟ್ಟು ಮೇಲೇರಿದಾಗ್ಲೇ ಗೆಲುವು ಸಿಗದು. ಸಣ್ಣತನ ಅಂಥವ್ಕೇ ಇರ್ಲಿ... ನಾವು ದೊಡ್ಡತನ ತೋರ್ಸನ. ಗೊತ್ತಿದ್ದೋ ಗೊತ್ತಿಲ್ದೇನೋ ನಮ್ಮಿಂದನೂ ತಪ್ಪು ಆಗ್ತಾ ಇರ್ತು... ತಪ್ಪು ಅಂತ ಗೊತ್ತಾದ್ಮೇಲೆ ಸರಿ ಮಾಡವು ಅಲ್ದಾ? ಇಬ್ರೂ ಹೋಗ್ಬನ್ನಿ. ಅಲ್ದೇ, ನಮ್ಮ್ ಲಾಸ್ಯ ಹೇಳ್ದಾಂಗೆ ಇರುವೆ ಶ್ರೀಮಂತಿಕೆ ತರದು ಸತ್ಯವಾದಿಕ್ಕು ನೋಡು..... ಅದ್ರಿಂದನೇ ನಮ್ಮ ಸ್ಥಿತಿನೂ ಸುಧಾರ್ಸಿಕ್ಕು....! " ಎಂದು ಮುಕ್ತವಾಗಿ ನಗಲು ಅಪರ್ಣ ಹನಿಗಣ್ಣಾದಳು.

*****

[ 25-01-2015 ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]

ಗುರುವಾರ, ಜನವರಿ 15, 2015

ಸಂಚಾರಿ ಭಾವಗಳು....

ಕೆಲವು ಭಾವಗಳೇ ಹೀಗೆ-
ಧುಮ್ಮಿಕ್ಕಿ ಹರಿಯುವ ಜಲಧಾರೆಯೊಂದು
ಥಟ್ಟನೆ ನಿಂತು ತಣ್ಣಗೆ ಹರಿವ ಹೊಳೆಯಾದಂತೆ
ನಿಶೆಯ ಗರ್ಭವನೇ ಸೀಳಲು ಹೊರಟ ಕೋಲ್ಮಿಂಚು
ತನ್ನ ಬೆಳಕಿಗೆ ತಾನೇ ಉರಿದು ಮತ್ತೆ ಕಪ್ಪಾಗುವಂತೆ.
ಇಂದು ಬದುಕಿರುವಂತೆ ಕಾಣುವಾತ,
ನಾಳೆ ಭೂತವಾಗಿ ಕಾಡುವಂತೆ!


ಕೆಲವು ಭಾವಗಳು ಹೀಗೂ-
ಕಲಾವಿದನೋರ್ವ ತನ್ನ ಸುಂದರ ಚಿತ್ರಕೆ
ಅರೆಬರೆ ಬಣ್ಣವ ಬಳಿದು ಬಿಟ್ಟಂತೆ
ತಾಯ ಗರ್ಭದೊಳು ನೀರಾಡುವ ಶಿಶುವಿಗೆ
ಇಳೆ ಗರ್ಭದಿಂದುಕ್ಕಿದ ನೀರು ಚಳಿಯಾಗುವಂತೆ.
ಚಿಕ್ಕ ಸವತೆ ಮಿಡಿಯಂತಹ ಪುಗ್ಗವೊಂದು ಉಬ್ಬಿ,
ಸೂಜಿಮೊನೆಯೊಂದರ ಮುತ್ತಿಗೆ ಠುಸ್ ಎನ್ನುವಂತೆ.

ಕೆಲವೊಂದು ಭಾವಗಳು ಹೀಗೆಲ್ಲಾ-
ಉಷಾಕಾಲದೊಳು ತಲೆಯ ಹೊಕ್ಕಿ,
ಮಟ ಮಧ್ಯಾಹ್ನದೊಳು ಕಕ್ಕಾಬಿಕ್ಕಿಯಾಗಿ
ಸಧ್ಯಾರಾಗದಲ್ಲೇ ಕಣ್ಮುಚ್ಚಿ ಅಂತ್ಯವಾಗುವ,
ಈ ಹುಚ್ಚು ಯೋಚನೆಗಳೆಲ್ಲಾ ಹೀಗೇ....

-ತೇಜಸ್ವಿನಿ ಹೆಗಡೆ.

ಬುಧವಾರ, ಜನವರಿ 7, 2015

ಮಿಥುನ

Tejaswini & Ramakrishna

ಆ ಬಲಗೈ ಬೆಸೆದಿದ್ದ ಬೆಸುಗೆಯಿಂದಲೋ
ಭಾವ ಮಂಥನದ ನಡುಕದಿಂದಲೋ
ಬೆವರಿದ ನನ್ನ ಬಲಗೈಯಿಂದೆದ್ದು,
ಹನಿಯುತ್ತಿದ್ದ ಬೆವರಿನಹನಿಗಳನ್ನೇ
ಬಾಗಿ ನೋಡುತ್ತಿದ್ದ ನೊಸಲ ಹನಿಗಳು.....
ಹೊಸ ರೇಶಿಮೆ ಸೀರೆಯ ಸರಪರದ ಸದ್ದು,
ಜೊತೆಗೆ ಮಲ್ಲೆ ಹೂವುಗಳ ಮತ್ತು,
ಅನೂಹ್ಯ ರೋಮಾಂಚನಕೆಳೆಸಿದ ಆ
‘ಸುಲಗ್ನೇ ಸಾವಧಾನ....ಸುಮುಹೂರ್ತೇ ಸಾವಧಾನ..’

ಲಾಜಹೋಮದಲ್ಲಿ ತುಸು ಬಿಸಿಯಾದ
ಕೈ ಸವರಿ ಮೆಲುನಕ್ಕಿದ ಆ ಪರಿ,
ಅರಳು ಹೊಯ್ದು ಮರಳು ಮಾಡಿ
ಕಣ್ಸೆರೆ ಹಿಡಿದು ಕೆಂಪಾಗಿಸಿದಾ ನೋಟ,
ಕೊರಳೊಳಗಿನ ಕರಿ ಮಣಿಗಳ
ಪಿಸುದನಿಗಳ ಕಚಗುಳಿಗಳು,
ಸುಖಾಸುಮ್ಮನೆ ಹೊಡೆದುಕೊಳ್ಳುತ್ತಿದ್ದ
ಎದೆಬಡಿತದ ಸದ್ದು...

ಎಲ್ಲವೂ ಹಸಿಯಾಗಿ ಹಸಿರಾಗಿವೆ....
ಹರುಷಕೆ ಹತ್ತು ವರುಷಗಳಾದರೂ!

ದಶಕಗಳನು ಹತ್ತೇ ನಿಮಿಷಗಳಲಿ,
ಕೂಡಿ ಕಳೆದಂತೆ.... ಕಳೆದು ಕೂಡಿದಂತೇ...
ಸಾಗಿಹುದು, ಸಾಗುತಿದೆ ಬಾಳ ಪಯಣ
ಸವಿಗನಸಿನಂತೇ....

-ತೇಜಸ್ವಿನಿ ರಾಮಕೃಷ್ಣ ಹೆಗಡೆ.ನಾನೇ ಕಲಿತು ಮೊದಲ ಬಾರಿ ತಯಾರಿಸಿದ 2 ನಿಮಿಷಗಳಪುಟ್ಟ ಮೂವಿಯ ಲಿಂಕ್ ಇಲ್ಲಿದೆ..... :)
https://www.youtube.com/watch?v=HaoFV6hdEpc&feature=youtu.be