ಅಮ್ಮಾ....
ಅಮ್ಮಾ... (ಜಯಲಕ್ಷ್ಮೀ ಭಟ್) |
ಹೇಗಿದ್ದೀಯಮ್ಮಾ? ನನಗೆ ಗೊತ್ತು.. ನನ್ನೀ ಪತ್ರವನ್ನೋದಿ ನಿನಗೆ ಆಶ್ಚರ್ಯವೇ ಆಗಬಹುದು. ಈವರೆಗೆ ಒಂದೂ ಪತ್ರವನ್ನು ಬರೆಯದವಳಿಂದ ಇಷ್ಟುದ್ದದ ಪತ್ರ ನೋಡಿ ವಿಚಿತ್ರವೆನಿಸಬಹುದು. ದಿನಕ್ಕೊಂದು ಹತ್ತಾರು ಬಾರಿ ಫೋನು ಮಾಡಿಟ್ಟು ನಿನ್ನ ತಲೆತಿಂದು, ನಾ ನಿರುಮ್ಮಳಳಾಗುತ್ತಿರುವಾಗ.... ನೂರಾರು ಕವಿತೆ, ಕಥೆಗಳ ಬರೆದು, ಅದನ್ನೇ ನಿನ್ನೊಂದಿಗೆ ಹಂಚಿಕೊಂಡು ಬೀಗುತ್ತಿರುವಾಗ.... ಮೊಮ್ಮಗಳ ಆಟೋಟವನ್ನು ಕೇಳಿದಷ್ಟೂ ದಣಿಯದ ನೀನು.. ಹೇಳಿದಷ್ಟೂ ನಿಲ್ಲದ ನಾನು...ಕೊನೆಗೊಮ್ಮೆ ಮನಃಪೂರ್ತಿ ನಗುವ ನಾವು.... ಇವೆಲ್ಲವುಗಳ ನಡುವೆ ಪತ್ರಕ್ಕೆ ಸೂಜಿಮೊನೆಯಷ್ಟಾದರೂ ಜಾಗವೆಲ್ಲಿತ್ತು? ಆದರೆ ಅಂದು ನಿದ್ದೆಯಿಲ್ಲದೇ ನಾನು ಹೊರಳಾಡುವಾಗ.... ನಾಳೆಯಿಂದ ಆರಂಭವಾಗುವ ನನ್ನ ಮಗಳ ಬದುಕಿನ ಹೊಸ ಅಧ್ಯಾಯವನ್ನು ನೆನೆದು ತುಸು ತಳಮಳಗೊಳ್ಳುವಾಗ... ನೆಮ್ಮದಿಯ ನಿದ್ದೆಯನ್ನರಿಸಿ ಆ ಹಾಡನ್ನು ಕೇಳತೊಡಗಿದೆ ನೋಡು... ಅದೆಲ್ಲಿತ್ತೋ ದುಃಖ... ನಿನ್ನಳಿಯನ ಜೊತೆ ಮೊದಲಬಾರಿ ನನ್ನತ್ತೆ ಮನೆಗೆ ಹೊರಟಾಗ ನಾಭಿಯಿಂದೆದ್ದು ಬಂದಿತ್ತಲ್ಲಾ ದುಃಖ... ಅದೇ ತರಹ ಆಯಿತು ನೋಡು! ಅದೆಷ್ಟು ಹೊತ್ತು ಅತ್ತೆನೋ.. ಅದೆಷ್ಟು ಹೊತ್ತು ನಿದ್ದೆ ಮಾಡಿದೆನೋ ನಾ ಕಾಣೆ. ಆ ಕ್ಷಣಕ್ಕೆ ನನ್ನ ಮನಸು ದೂರದೂರಲ್ಲಿದ್ದ ನನ್ನಮ್ಮನ ಮನೆಯೊಳಗೆ ಹೊಕ್ಕು, ನೀ ಮಲಗಿದ್ದ ಮಂಚದ ಬದಿಗೆ ಕುಳಿತು ನಿನ್ನ ತಲೆ ನೇವರಿಸುತ್ತಿತ್ತು... ನಿನ್ನ ತಬ್ಬಿ ನಾ ಮಲಗಿ ಪುಟ್ಟ ಮಗುವಾದಂತೆ ಭಾಸವಾಗುತ್ತಿತ್ತು. ಕಣ್ಬಿಟ್ಟರೆ ಸಾಕು... ಮನದೊಳಗೆ ಆ ಹಾಡಿನ ಸೊಲ್ಲುಗಳೇ ಮತ್ತೆ ಮತ್ತೆ ರಿಂಗುಣಿಸುತ್ತಿದ್ದವು...
"ಕಪ್ಪು ಕಡಲಿನಲ್ಲಿ ದೋಣಿ ದಿಕ್ಕು ತಪ್ಪಲು,
ದೂರದಲ್ಲಿ ತೀರವಿದೆ ಎಂದು ತೋರಲು...
ಅಮ್ಮಾ... ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ,
ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ.."
ಅಮ್ಮಾ.... ಮೊದಲ ಬಾರಿ ನನ್ನ ಶಾಲೆಗೆ ಕಳುಹಿಸುವಾಗ ನೀನದೆಷ್ಟು ಮನದೊಳಗೇ ಹೊಯ್ದಾಡಿದ್ದೆಯೋ ಏನೋ... ನಾನು ಅತ್ತು ಗೋಳಾಡುವಾಗ ಅದೆಷ್ಟು ಒಳಗೊಳಗೇ ಅತ್ತಿದ್ದೆಯೋ ಏನೋ... ಎದುರು ಮಾತ್ರ ಅದೇ ಹಸನ್ಮುಖ ಹೊತ್ತು.. ನನ್ನ ಸಮಾಧಾನಿಸಿ, ಕಳುಹಿಸಿಕೊಡುತ್ತಿದ್ದೆ. ಆಗೆಲ್ಲಾ ನನಗನಿಸಿದ್ದು.. ಈ ಅಮ್ಮನಿಗೆ ನಾ ಬೇಡವೇ? ಎಂದು. ಆದರೆ ನನ್ನ ಪುಟ್ಟಿಯೂ ಈಗ ಹೊಸ ಸ್ಕೂಲ್‌ಗೆ ತಯಾರಾಗಿ ನಿಂತಿದ್ದಾಳೆ. ಮೊಗದಲ್ಲಿ ದುಗುಡ ಮಡಗಟ್ಟಿ ನಿಂತಿದ್ದರೂ ಹನಿಗಣ್ಣಾಗಿ ತಲೆಬಾಗಿದ್ದರೂ, ದುಃಖ ತಡೆಹಿಡಿಯುತ್ತಿರುವ ಅವಳ ಪರಿಗೆ ನಾನೇ ಮಗುವಾಗುತ್ತಿರುವೆ. ನನ್ನೊಳಗಿನ ಉಮ್ಮಳಕ್ಕೆ ಅವಳೇ ಸಮಾಧಾನ ಹೇಳುವಂತಿದೆ. ನಾನೂ ಈಗ ನಿನ್ನಂತೇ ನಗುತ್ತಿದ್ದೇನೆ ಅಮ್ಮಾ.... ಅವಳಿಗೆ ಅವಳ ಭವಿಷ್ಯತ್ತಿನ ಹೊಸ ಬಣ್ಣವನ್ನು, ಹೊಸ ಕನಸನ್ನು ಕಟ್ಟಿಕೊಡುತ್ತಿದ್ದೇನೆ. ಹೊಸ ಲೋಕಕ್ಕೆ ಅವಳನ್ನು ಪರಿಚಯಿಸುತ್ತಿದ್ದೇನೆ. ಅಮ್ಮನಾಗಿ ಮಗಳನ್ನು ಸಂತೈಸುತ್ತಿರುವಾಗೆಲ್ಲಾ ನಿನ್ನ ನೆನಪೇಕೋ ಮತ್ತೆ ಮತ್ತೆ ಕಾಡುತ್ತಿದೆ. ಅಮ್ಮಾ.. ಅಂದು ನೀ ನನ್ನ ಹಾಗೆ ಕಳುಹದಿದ್ದಿದ್ದರೆ ನಾನಿಂದು ನಿನಗೆ ಈ ಪತ್ರ ಬರೆಯಲಾಗುತ್ತಿತ್ತೆ?! ಈಗ ಸಂಪೂರ್ಣ ಅರಿವಾಗಿದೆ ‘ತಾಯಿಯೇ ಮೊದಲ ಗುರು’ ಅನ್ನೋ ನಾಣ್ನುಡಿಯ ಅರ್ಥ. ಜೊತೆಗೆ ತಾಯಿಯಾಗಿ ನನ್ನ ಜವಾಬ್ದಾರಿಗೆ ನಾನೂ ಪಕ್ವವಾಗುತ್ತಿದ್ದೇನಮ್ಮಾ.
ಅಡುಗೆಮನೆ ಕೆಲಸ, ಬಂದ ನೆಂಟರ ಸುಧಾರಣೆ, ನಡು ನಡುವೆ ನಮ್ಮ ಬೇಕು ಬೇಡಗಳ ಗಲಾಟೆ.... ಇವೆಲ್ಲವುಗಳ ಮಧ್ಯೆಯೂ ಅದು ಹೇಗೆ ನಿನಗೆ ಸಮಯ ಸಿಗುತ್ತಿತ್ತೋ ಕಾಣೆ.. ನನಗೆ ನನ್ನ ಇಬ್ಬರು ತಂಗಿಯರಿಗೆ ಜಡೆ ಹಾಕಿ ನೀನೇ ಬಾಳೆದಿಂಡಿನ ದಾರದಲ್ಲಿ ಹಣೆದಿಟ್ಟ ಪುಟ್ಟ ನಿತ್ಯಮಲ್ಲಿಗೆಯ ಹೂವಿನ ಮಾಲೆಯನ್ನು ಮುಡಿಸಿ ಮುತ್ತಿಡುತ್ತಿದ್ದೆ... ಕಪ್ಪು ರಿಬ್ಬನ್‌ಅನ್ನು ಜಡೆಯ ಜೊತೆ ಹಣೆದು ಕೊನೆಗೆ ಜಡೆಯನ್ನು ಮಡಚಿ ಮತ್ತೆ ಮೇಲೆ ಕಟ್ಟಿ ಚೆಂದದ ರಿಬ್ಬನ್ ಗೊಂಡೆಯನ್ನು ಮಾಡಿದಾಗ ನಿನ್ನ ಮೊಗದಲ್ಲರಳುತ್ತಿದ್ದ ಆ ನಗುವಿನ ಬೆಳಕು ಇಂದೂ ನನ್ನ ಕಣ್ಣೊಳಗಿದೆ ಅಮ್ಮಾ. ಚಿಕ್ಕ ತಂಗಿ "ಇಶೀ.. ಇದು ಬೇಡ ನಂಗೆ... ಎಲ್ಲಾ ತಮಾಶೆ ಮಾಡ್ತೋ... ನೀ ಹಾಂಗೇ ಜಡೆ ಹಾಕು ನಂಗೆ.. ಹೀಂಗಲ್ದೇ.. ಸ್ನೇಹ ಹಾಕ ಬತ್ಲು ನೋಡು ಹಾಂಗೇ ಹಾಕು... ನಿನ್ನ ಕನ್ನಡ ಶಾಲೆ ಹಾಂಗೆ ನಂಗೆ ಹಾಕಡ...." ಎಂದು ವರಾತ ಎಬ್ಬಿಸುವಾಗಲೂ ಅಷ್ಟೇ ಸಹನೆಯಿಂದ ಮತ್ತೆ ಬಿಚ್ಚಿ ಕಟ್ಟುವಾಗ ನಿನ್ನೊಳಗೆ ಒಮ್ಮೆಯೂ ಬೇಸರ ಮೂಡಲಿಲ್ಲವೇ? "ಈ ಅಂಗಿ ಬೇಡ ನಂಗೆ.. ಇದ್ರ ಬಣ್ಣ ಚೊಲೋ ಇಲ್ಲೆ.. ನಂಗೆ ನೀಲಿ ಬಣ್ಣದ್ದೇ ಹಾಕು.." ಎಂದು ಗಲಾಟೆ ಎಬ್ಬಿಸಿದಾಗ ನಾನು, ಆಸೆ ಪಟ್ಟು ನೀ ತಂದಿದ್ದ ಗುಲಾಬಿ ರಂಗಿನ ಫ್ರಾಕ್ ಮಂಚದಲ್ಲಿ ಹಾಗೇ ಮುದುಡಿತ್ತು... ನಿನ್ನ ಮನವೂ ಆಗ ಹಾಗೇ ಆಗಿರಬೇಕಲ್ಲವೇ? ಅಮ್ಮಾ... ಈಗ ನಿನ್ನ ಮೊಮ್ಮಗಳು ನನಗೆ ಹೊಸ ರೀತಿಯಲ್ಲಿ ಹಳೇ ಪಾಠವನ್ನು ಕಲಿಸುವಾಗಲೆಲ್ಲಾ ನೀನೆ ನನ್ನೆದುರು ನಿಂತು ನಸುನಕ್ಕಂತಾಗುತ್ತದೆ!
"ಅಯ್ಯೋ.. ಹೀಂಗೆ ಕೂದ್ಲು ಬಾಚಡ.... ಚೊಲೋ ಕಾಣ್ತಿಲ್ಲೆ... ಲೆಫ್ಟ್ ಕಡೆ ರಾಶಿ ಕೂದ್ಲು ಇದ್ದು.. ರೈಟ್‌ನಲ್ಲಿ ಕೂದ್ಲೇ ಸರಿ ಆಜಿಲ್ಲೆ.. ಈ ಹೇರ್ ಬ್ಯಾಂಡ್ ಬೇಡ... ಆ ಕಲರ್ ಬೇಕು... ಈ ಫ್ರಾಕ್ ಸರಿ ಇಲ್ಲೆ... ಇದಡ್ಡಿಲ್ಲೆ.. ನಿಂಗೆಂತದೂ ಗೊತ್ತಾಗ್ತೇ ಇಲ್ಲೆ.. ಹ್ಮ್ಂ..." ಎಂದು ನನ್ನ ಮಗಳು ಗೊಣಗಿದಾಗಲೆಲ್ಲಾ ನಾನು ನಿನ್ನೆದುರೇ ನಿಂತಂತಾಗುತ್ತದೆ. ಆ ತಿಂಡಿ ಬೇಡ.. ಈ ಊಟ ರುಚಿಯಿಲ್ಲ.. ಇಂದು ಚಪಾತಿಯೇ ಬೇಕು... ಉಪ್ಪಿಟ್ಟು ಸೇರೊಲ್ಲ... ಎಂದೆಲ್ಲಾ ಗಲಾಟೆ ಮಾಡಿದಾಗ ಒಮ್ಮೂಮ್ಮೆ ನೀನೂ ಸೋತು, ಬೇಸತ್ತು ಚೆನ್ನಾಗಿ ಗದರಿಬಿಡುತ್ತಿದ್ದೆ.. "ನಿಂಗನೂ ದೊಡ್ಡಾಗಿ, ಮದ್ವೆಯಾಗಿ ಮುಂದೆ ನಿಂಗ್ ನಿಂಗ್ಳ ಮಕ್ಕ, ಮರಿಗೆ ಬೇಯಿಸಿ ಹಾಕ್ಬೇಕಿದ್ರೆ ಗೊತ್ತಾಗ್ತು.. ಮನೆ, ಮಕ್ಕಳನ್ನು ಸುಧಾರಿಸದು ಎಷ್ಟು ಕಷ್ಟ ಹೇಳಿ.. ಅಮ್ಮನ ಕಷ್ಟ ಎಂತು ಹೇಳಿ ಗೊತ್ತಾಗದಿಲ್ಲೆ ಈಗ..." ಎಂದಾಗ ನಾವೆಲ್ಲಾ ಅರೆಕ್ಷಣ ಪೆಚ್ಚಾದರೂ.. ಮತ್ತೊಂದು ಕ್ಷಣಕ್ಕೆ ನೀ ಮಾಡಿ ಕೊಡುವ ಬಿಸಿ ಬಿಸಿ ರವೆಲಾಡಿನ ಜೊತೆ ಎಲ್ಲವೂ ಕರಗಿ ಹೋಗುತ್ತಿತ್ತು. ಆದರೆ ಇಂದು ಮ್ಯಾಗಿ, ಬ್ರೆಡ್ ಜಾಮ್, ಪಾಸ್ತಾ, ಕುಕ್ಕಿಸ್ ಬಿಸ್ಕೀಟ್ ಎಂದೆಲ್ಲಾ ಮಗಳು ಗಲಾಟೆ ಮಾಡುವಾಗ ಸಮಾಧಾನಿಸಿ, ಸುಧಾರಿಸಿ ಸುಸ್ತಾಗುವಗ ನನ್ನೊಳಗೆ ಮತ್ತೆ ನಿನ್ನದೇ ಕನವರಿಕೆ. ನಿನ್ನಂತೇ ರುಚಿ ರುಚಿಯಾಗಿ ರವೆಯುಂಡೆಯನ್ನಾದರೂ ಮಾಡಿಕೊಡೋಣ ಎಂದರೆ ಹಾಳಾದ ಆ ಲಾಡು ಕಟ್ಟಲೇ ಆಗುತ್ತಿಲ್ಲ... ಕಲಿತುಕೋ ಎಂದು ಒತ್ತಾಯಿಸಿದ ನಿನ್ನೇ ಲಾಡು ಮಾಡಿ ಕಳುಹಿಸಲು ಹೇಳಬೇಕೆಂದು ಎಣಿಸಿ, ಕೈ ಮೊಬೈಲ್ ಅನ್ನು ಒತ್ತುತ್ತದೆ.
ನಾಲ್ಕು ಗೋಡೆಯ ಮಧ್ಯೆ ಕುಳಿತು ಮಗಳು ಹೊರ ಓಡಲು ಬೊಬ್ಬಿರಿವಾಗ ಮನಸು ಹೌಹಾರುವುದು. ಹೊರ ಕಳುಹಿದರೆ ಆಗಂತುಕರ ಕಾಟ, ರಸ್ತೆಯಲ್ಲಿ ವಿಮಾನದಂತೇ ಹಾರಿ ಬರುವ ವಾಹನಗಳ ಭಯ. ಒಳಕುಳಿತೇ ಅವಳ ಜೊತೆ ಆಡುತ್ತಾ, ಹಾಗೇ ಬಿಳಿ ಬಣ್ಣದ ಹಾಳೆಯ ಮೇಲೆ ಬಣ್ಣ ಬಣ್ಣದ ಚಿತ್ತಾರವ ಬಿಡಿಸಲು ಅವಳ ಕೈಗೆ ಕೊಟ್ಟು ಅವಳು ಸುಮ್ಮನಾಗಲು ಮತ್ತೆ ನನ್ನ ಬಾಲ್ಯ ನೆನಪಾಗುತ್ತದೆ. ಆಡಲು ಜೊತೆಗಾರರಿಲ್ಲದೇ ನಾ ಒಂಟಿಯಾದಾಗಲೆಲ್ಲಾ ಚಂದಮಾಮ, ಡಿಂಗ, ಬಾಲಮಂಗಳವನ್ನು ಮುಂದಿಡುತ್ತಿದ್ದೆ..."ಬದ್ಕಲ್ಲಿ ಯಾರು ಕೈ ಕೊಟ್ರೂ ನಾವು ಕಲಿತ ವಿದ್ಯೆ, ಓದುವ ಉತ್ತಮ ಪುಸ್ತಕ ನಮ್ಮ ಕೈ ಬಿಡದಿಲ್ಲೆ.. ಸದಾ ನೆನ್ಪಿಡು.." ಎಂದು ಉಪದೇಶಿಸುತ್ತಿದ್ದೆ. ಆ ಉಪದೇಶ ಮೊದ ಮೊದಲು ಕಿರಿ ಕಿರಿ ಆದರೂ ಕ್ರಮೇಣ ಅದರೊಳಗಿನ ನಿತ್ಯ ಸತ್ಯ ಅರಿವಾಗಿ ನಾನೂ ಓದುವ ಉತ್ತಮ ಗೀಳಿಗೆ ಬಿದ್ದೆ ನೋಡು.. ಮತ್ತೆ ಏಕಾಂತದಲ್ಲೂ ಗುಂಪಿನಲ್ಲಿರುವ ಅನುಭವವಾಗತೊಡಗಿತು ನನಗೆ. ‘ಉತ್ತಮ ಪುಸ್ತಕಗಳನ್ನು ಅಪ್ಪಿಕೋ.. ಅವೇ ನಿನ್ನ ಮುನ್ನೆಡೆಸುತ್ತವೆ’ ಎಂದು ಸದಾ ಹೇಳುತ್ತಿದ್ದ ನಿನ್ನ ನೆನೆ ನೆನೆದೇ ಇಂದು ಮಗಳ ಮುಂದೆ ಬಾಲಮಂಗಳ, ಚಂದಮಾಮರನ್ನು ಹರಡಲು ಕೈ ತಡವುತ್ತೇನೆ. ಅವರೆಲ್ಲಾ ಅಂತರಜಾಲದ ಒಳಹೊಕ್ಕಿ ಇಣುಕುತ್ತಿರುವುದು ಅರಿವಾಗಲು ನನ್ನೊಳಗೆ ಕೊಂಚ ವಿಷಾದ, ಕೊಂಚ ನಗು.
"ನೀನೂ ಸ್ಪರ್ಧೆಗೆ ಭಾಗವಹಿಸವು.. ಅದರಲ್ಲೆಂತ ಭಯ? ಎಲ್ಲರ ಮುಂದೆ ನಿಂತು ನಿಂಗೆ ಗೊತ್ತಿಪ್ಪ ವಿಷ್ಯ ಹೇಳಿರೆ ಆತು... ಪ್ರೈಸ್ ಬಗ್ಗೆ ತಲೆ ಕೆಡಸಕಳಡ... ನಾವು ನಮ್ಮ ಕರ್ತವ್ಯ ಮಾಡವು.. ಫಲ ನಮ್ಮದಲ್ಲ ಹೇಳಿದ್ದ ಕೃಷ್ಣ ಪರಮಾತ್ಮ.. ಅದನ್ನೇ ನೆನ್ಪಿಟ್ಕಂಡು ಸ್ಟೇಜ್ ಹತ್ತು.." ಎಂದು ಅಂದು ನೀ ನನ್ನ ಹುರಿದುಂಬಿಸಿದ್ದೆ. ನಿನ್ನ ಆಶೀರ್ವಾದದ ಫಲವೋ ಇಲ್ಲಾ ಗೀತಾವಾಕ್ಯದ ಮಹಿಮೆಯೋ.. ಪದವಿಯವರೆಗೂ ಒಂದೆರಡಾದರೂ ಪದಕ ನನ್ನ ಕೊರಳ ಸೇರಿ ನಿನ್ನ ಮಡಿಲ ತುಂಬಿತ್ತಲ್ಲ! ಈಗ ನೀನು ಹಾಕಿಕೊಟ್ಟ ದಾರಿಯಲ್ಲೇ ನಾನು ನಡೆಯಬೇಕಿದೆ ಅಲ್ಲವೇ? ನಿನ್ನ ಮೊಮ್ಮಗಳನ್ನೂ ಬದುಕೆಂಬ ಸ್ಪರ್ಧೆಗೆ ಛಲದಿಂದ ತಯಾರಿಸಬೇಕಿದೆ. ಆತ್ಮವಿಶ್ವಾಸ ಎಂದರೆ ಏನೆಂದು ನೀನಂದು ತಿಳಿಸಿದೆ.. ಅದನ್ನೇ ನನ್ನ ಮಗುವಿಗೂ ನಾನು ಹೇಳಿಕೊಡಬೇಕಿದೆ. ನಾಳೆ ಅವಳು ಎಲ್ಲಿಯೇ ಇರಲಿ... ಅವಳ ವ್ಯಕ್ತಿತ್ವದಲ್ಲಿ ನನ್ನ, ನಿನ್ನ ಛಾಪಿರಬೇಕು. ಜೊತೆಗೆ ಇಂದು ನಾನು ನಿನ್ನ ನೆನೆದು, ಆ ನೆನಪಲ್ಲೇ ಮಿಂದು ಕೃತಾರ್ಥಳಾಗುವಂತೇ ಅವಳೂ ಅವಳಮ್ಮನ ನೆನೆದು ತಂಪಾಗುವಂತಾಗಲೆಂದಷ್ಟೇ ಹಾರೈಸುವೆ. ಅಮ್ಮಾ.... ನಿನ್ನ ಹಾರೈಕೆಯೂ ಇದೇ ಆಗಿರುತ್ತದೆ ಎಂದು ನಾನು ಚೆನ್ನಾಗಿ ಬಲ್ಲೆ.
‘ಕೃತಕ ದೀಪ ಕತ್ತಲಲ್ಲಿ ಕಳೆದುಹೋಗದಂತೆ, ಸೂರ್ಯ ಚಂದ್ರ ತಾರೆಯಾಗಿ ಹೊಳೆದು ಬಾಳುವಂತೆ’ ನೀ ನನ್ನ ಬೆಳೆಸಿದ ಪರಿಗೆ, ನನ್ನ ಬದುಕ ಬೆಳಗಿಸದ ರೀತಿಗೆ, ನನ್ನ ವ್ಯಕ್ತಿತ್ವವ ರೂಪಿಸಿದ ನಿನ್ನ ನೀತಿಗೆ ನನ್ನ ಸಾಸಿರ ನಮನ. ನಿನ್ನ ಋಣ ತೀರಿಸುವ ಯೋಚನೆಯೂ ನನಗಿಲ್ಲ.. ತೀರಿದರೆ ತೀರುವಂತಹ ಬಂಧವೂ ನಮ್ಮದಲ್ಲ. ನೀ ಬೆಳಗಿನ ಹಣತೆಯಡಿಯಲ್ಲೇ ನನ್ನ ಬದುಕು ಬೆಳೆದು, ಕುಡಿಯೊಡೆದಿರುವ ಹೊಸ ಬತ್ತಿಗೆ ಬೆಳಕನ್ನೀವ ಶಕ್ತಿ ನನಗೆ ದಯಪಾಲಿಸೆಂದು ಸದಾ ನಿನ್ನ ನನಗಿತ್ತ... ನಿನ್ನದೇ ಪಡಿಯಚ್ಚಿರುವ ಮಗಳ ನನ್ನ ಮಡಿಲಿಗಿತ್ತ, ಆ ಭಗವಂತನ ಸ್ಮರಿಸುತ್ತೇನೆ... ಅವನಲ್ಲಿ ಪ್ರಾರ್ಥಿಸುತ್ತೇನೆ.
ನಿನ್ನ ನೆನಪಲೇ ಸದಾ ಮುಳುಗಿರುವ ನಿನ್ನೊಲವಿನ,
-ತೇಜಸ್ವಿನಿ
ಈ ಲೇಖನ ನನ್ನ ಅಮ್ಮನಿಗೆ ಅರ್ಪಿತ.
[ಉದಯವಾಣಿಯ ಮಹಿಳಾಸಂಪದದಲ್ಲಿ ಪ್ರಕಟಿತ.]