ಕೆಲವೊಮ್ಮೆ ಮನೆಗೆ ಅತಿಥಿಗಳು ದಿಢೀರನೆ ಬಂದಾಗ ಯಾವ ತಿಂಡಿ ತಯಾರಿಸಬೇಕು? ಇದು ಯಾವತ್ತಿಗೂ ಬಗೆಹಹರಿಯದ ಜಿಜ್ಞಾಸೆಗಳಲ್ಲಿ ಒಂದು. ಇಂಥ ಜಟಿಲ ಪರಿಸ್ಥಿತಿಯಲ್ಲಿ ಅಡುಗೆ ಮನೆ ಕೆಲಸ ನಿರ್ವಹಿಸುವ ಮಹಿಳೆಯರಿಗೆ ದಿಕ್ಕೇ ತೋಚದಂತಾಗುವುದು. ಅದೂ ಅಲ್ಲದೇ ಸಮಯದ ಅಭಾವವೂ ಜೊತೆಗೆ ಕಾಡುವುದರಿಂದ ಮನದೊಳಗೆ ಗಲಿಬಿಲಿ, ಅಡುಗೆಮನೆಯೊಳು ಗಡಿಬಿಡಿ.
ಆ ಸಮಯದಲ್ಲಿ ಸುಲಭದಲ್ಲಿ ತಯಾರಿಸಬಹುದಾದಂತಹ ಪದಾರ್ಥಗಳ ಬಗೆಗೆ ಕಣ್ಣು ಹಾಯುವುದು ಸಹಜ. ಬೇಗಬೇಗ ರುಚಿಯಾದದ್ದನ್ನೇನಾದರೂ ತಯಾರಿಸುವ ಹವಣಿಕೆ ಆರಂಭ. ಚಕ್ ಅಂತ ಒಂದು ಸ್ವಾದಭರಿತ ಸಿಹಿ ತಿಂಡಿ ತಯಾರಿಕೆ ಕುರಿತು ಯೋಚಿಸಲು ತೊಡಗುತ್ತೇವೆ. ಡಬ್ಬದಲ್ಲಿ ಅವಲಕ್ಕಿ ಇದ್ದರೆ ಆ ಕ್ಷಣದ ಸಮಸ್ಯೆ ಬಗೆಹರಿದಂತೆಯೇ. ಅವಲಕ್ಕಿ ಶಿರಾ ಮಾಡಿಬಿಡಿ. ಅದು ಸುಲಭ, ಸರಳ ಹಾಗೂ ಮಿತ ಸಮಯದಲ್ಲಿ ತಯಾರಿಸಲು ಸಾಧ್ಯವಾಗುವಂತಹ ಸಿಹಿ ತಿಂಡಿಗಳಲ್ಲೊಂದು.
ಅದೂ ಅಲ್ಲದೇ ಉತ್ತರಕನ್ನಡದ ಕಡೆ ಅವಲಕ್ಕಿ ಶಿರಾವನ್ನು ವಿಶೇಷವಾಗಿ ಬಾಣಂತಿಯರಿಗೆ ಮಾಡಿಕೊಡುತ್ತಾರೆ. ಇದನ್ನು ತಯಾರಿಸುವಾಗ ಬಳಸುವ ತುಪ್ಪ, ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿ ಪುಡಿಗಳು ಬಾಣಂತಿಯರಿಗೆ ವಿಶಿಷ್ಟವಾದ ಪೌಷ್ಟಿಕತೆಯನ್ನು ಕೊಡುತ್ತದೆ. ಜೀರ್ಣಿಸಿಕೊಳ್ಳಲೂ ತುಂಬಾ ಸುಲಭ ಈ ಸಿಹಿ ತಿಂಡಿ.
ಅವಲಕ್ಕಿಯನ್ನು ಸ್ವಲ್ಪ ಪರಿಮಳ ಬರುವ ತನಕ ಹುರಿದಿಟ್ಟುಕೊಂಡು(ತುಪ್ಪ ಹಾಕದೇ ಹಾಗೆಯೇ ಹುರಿಯಬೇಕು) ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟುಕೊಂಡರೆ ಮೂರುತಿಂಗಳವರೆಗೂ ಕೆಡದು. ಹಾಗೆ ಮಾಡಿಟ್ಟುಕೊಂಡಲ್ಲಿ ಈ ಸಿಹಿ ತಿಂಡಿಯನ್ನು ತಯಾರಿಸುವುದು ಮತ್ತೂ ಸುಲಭ. ದಿಢೀರನೆ ಶಿರಾ ತಯಾರಿಸುವಾಗ ಹುರಿದಿಟ್ಟಿರುವ ಅವಲಕ್ಕಿಯನ್ನು ನೇರವಾಗಿ ಬಳಸಬಹುದು. ಕೇವಲ 15 ನಿಮಿಷದೊಳಗೆ ಸ್ಪೆಷಲ್ ತಿಂಡಿಯನ್ನು ಮಾಡಿ ಅತಿಥಿಗಳಿಗಳನ್ನು ಸತ್ಕರಿಸಬಹುದು.
ಬೇಕಾಗುವ ಸಾಮಗ್ರಿಗಳು:
* ಅವಲಕ್ಕಿ - 8 ದೊಡ್ಡ ಚಮಚ
* ಸಕ್ಕರೆ - 8 ಚಮಚ (ಅವಲಕ್ಕಿಯ ಅಳತೆಯಲ್ಲೇ ಸಕ್ಕರೆ ಹಾಕಬೇಕು. ೧-೨ ಚಮಚ ಹೆಚ್ಚಾದರೂ ನಡೆಯುವುದು.)
* ನೀರು - 1 ಲೋಟ (ಹದಮಾಡುವಾಗ ನೋಡಿಕೊಂಡು ಬೇಕಷ್ಟೇ ನೀರನ್ನು ಹಾಕಿಕೊಳ್ಳಬೇಕು. ಇಲ್ಲಿ ಕೊಟ್ಟಿದ್ದು ಅಂದಾಜಿನಲ್ಲಷ್ಟೇ. ಜಾಸ್ತಿ ನೀರಾದರೆ ತುಂಬಾ ಮೆದುವಾಗುವುದು. ತಣಿದನಂತರ ಸ್ವಲ್ಪ ಹದಕ್ಕೆ ಬರುವುದು)
* ತುಪ್ಪ - 6 ಚಮಚ
* ಏಲಕ್ಕಿ ಪುಡಿ - 1/2 ಚಮಚ
* ದ್ರಾಕ್ಷಿ, ಗೋಡಂಬಿ ಚೂರುಗಳು - ನಮಗೆ ಬೇಕಾದಷ್ಟು.
ಮಾಡುವ ವಿಧಾನ
* ಮೊದಲಿಗೆ ಅವಲಕ್ಕಿಯನ್ನು ಹಾಗೇಯೇ ಸ್ವಲ್ಪ ಹುರಿದು ಮಿಕ್ಸಿಯಲ್ಲಿ ಹುಡಿಮಾಡಿಟ್ಟುಕೊಳ್ಳಬೇಕು. (ಮೇಲೆ ಹೇಳಿರುವಂತೆ ಮೊದಲೇ ಹುರಿದಿಟ್ಟುಕೊಂಡು ಡಬ್ಬದಲ್ಲಿ ಹಾಕಿಟ್ಟಿರುವ ಅವಲಕ್ಕಿಯಾದರೆ ಮತ್ತೆ ಹುರಿಯಬೇಕೆಂದಿಲ್ಲ)
* 1 ಲೋಟ ನೀರನ್ನು ಚೆನ್ನಾಗಿ ಕುದಿಸಿಟ್ಟುಕೊಳ್ಳಬೇಕು.
* ಒಂದು ತೋಪಿನಲ್ಲಿ ಹುಡಿಮಾಡಿಟ್ಟಿರುವ ಅವಲಕ್ಕಿ, ಕುದಿಸಿದ ನೀರು(ಬಿಸಿ ಬಿಸಿ ಇರುವಾಗಲೇ), ಸಕ್ಕರೆ ಹಾಗೂ ತುಪ್ಪವನ್ನು ಹಾಕಿ ಚೆನ್ನಾಗಿ ಕಲಕಬೇಕು. ಹಾಗೆ ಕದಡುತ್ತಲೇ ಇರುವಾಗ ಹತ್ತು ನಿಮಿಷದೊಳಗೆ ಮಿಶ್ರಣ ಶಿರಾದ ಹದಕ್ಕೆ ಬರುತ್ತದೆ.
* ಹಾಗೆ ಹದ ಬಂದ ಮಿಶ್ರಣಕ್ಕೆ ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಮತ್ತೊಮ್ಮೆ ಕಲಕಿ ಬಿಸಿ ಇರುವಾಗಲೇ ತಿನ್ನಲು ಕೊಡಬೇಕು. ಹೀಗೆ, ಸ್ವಾದಿಷ್ಟ ಆರೋಗ್ಯಕರ ಅವಲಕ್ಕಿ ಶಿರವನ್ನೊಮ್ಮೆ ತಿಂದರೆ ಮತ್ತೂ ಇನ್ನಷ್ಟು ಬೇಕೆನಿಸಿದರೆ ಅದು ನಮ್ಮ ತಪ್ಪಲ್ಲ!
ಸೂಚನೆ :ವಿಶೇಷ ಸಂದಂರ್ಭಗಳಲ್ಲಿ ಬೇಕಿದ್ದರೆ ಕೇಸರಿ ಎಳೆಗಳನ್ನು ಸ್ವಲ್ಪ ಹಾಲಲ್ಲಿ ಕದಡಿ ಗೋಡಂಬಿ ಹಾಗೂ ದ್ರಾಕ್ಷಿಗಳ ಜೊತೆಗೆ ಹಾಕಬಹುದು.
[ವರುಷದ ಹಿಂದೆ ದಟ್ಸ್‌ಕನ್ನಡದಲ್ಲಿ ಬರುತ್ತಿದ್ದ ನನ್ನ ಅಂಕಣವಾದ ಶಿರಸಿ ಭವನದಲ್ಲಿ ಪ್ರಕಟಿತ]
*ತೇಜಸ್ವಿನಿ ಹೆಗಡೆ