ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜುಲೈ 11, 2026

ಮೃಗಶಿರ : ಹಲವು ಕಥೆಗಳ ಒಂದು ಸುಂದರ ಗುಚ್ಛ

ಯಾವುದೇ ಪುಸ್ತಕವನ್ನು ಅದರ ಮುಖಪುಟವನ್ನು ನೋಡಿ ಅಳೆಯದಿರು ಎಂದು ಹೇಳುತ್ತಾರೆ. ಅಂತೆಯೇ ಓರ್ವ ವ್ಯಕ್ತಿಯ ಬದುಕನ್ನು ಅರಿಯುವಾಗ, ಕೇವಲ ಆತನ ಏಕಪಕ್ಷೀಯ ಮಾತುಗಳನ್ನು, ಅವರಿವರು ಹೇಳಿದ್ದನ್ನು ಕೇಳಿಯೋ ಮೇಲ್ನೋಟಕ್ಕೆ ಇದಮಿತ್ಥಂ ಎಂದು ತೀರ್ಪು ನೀಡುವುದು ಸಲ್ಲ. ಅದರ ಬದಲು ಆತನ ಬದುಕಲ್ಲಿ ಬಂದವರ ಅನಿಸಿಕೆಗಳನ್ನು, ಅನುಭವಗಳನ್ನು ಅವರದೇ ಮುಖೇನ ಅರಿತಾಗ, ಬಹುರೂಪದಲ್ಲಿ ಕಂಡಾಗ  ಅದೆಷ್ಟೋ ಜಟಿಲತೆಗಳು ಸರಳಗೊಳ್ಳುತ್ತವೆ. ಕಾಣದ ಕೊಂಡಿಗಳು ಎದ್ದು ಬರುತ್ತವೆ, ಸುಳ್ಳಿನ ಪರದೆಗಳೂ ತೆರೆದುಕೊಳ್ಳುತ್ತವೆ. ಅಂತಹದೇ ಒಂದು ಪ್ರಯತ್ನವನ್ನು ಲೇಖಕ ಶ್ರೀಧರ ಬಳಗಾರ ಅವರ ‘ಮೃಗಶಿರ’ ಕಾದಂಬರಿಯು ಮಾಡುತ್ತದೆ. 

ಕಾದಂಬರಿಯ ಶೀರ್ಷಿಕೆ ಮತ್ತು ಪಾತ್ರಗಳ ವೈಶಿಷ್ಟ್ಯ:

ಇದು ಮೇಲ್ನೋಟಕ್ಕೆ ಕಾದಂಬರಿ ಎಂದೆನಿಸಿದರೂ, ಬೆಟ್ಟದ ತುದಿಯಿಂದ ಕವಲಾಗಿ ಹರಿವ ತೊರೆಗಳು ಅಲ್ಲಲ್ಲಿ ಜೊತೆ ಸೇರಿ ಹೊಳೆಯಾಗಿ, ಕೊನೆಗೊಂದು ದೊಡ್ಡ ನದಿಯಾಗಿ ಸಾಗರ ಸೇರುವಂತೇ,  ಹಲವು ಪಾತ್ರಗಳು ತಮ್ಮ ಕಥೆಗಳನ್ನು ಹರವಿ, ಮುಂದಿನ ಪಾತ್ರಕ್ಕೆ ಖೋ ಕೊಟ್ಟು ಬೆಳೆಯುತ್ತ ಸಾಗುವ ಕಾದಂಬರಿ. ಹೀಗಾಗಿ ಈ ಕಾದಂಬರಿಯನ್ನು ಪರಸ್ಪರ ಬೆಸುಗೆ ಹಾಕಿಕೊಂಡಿರುವ ಹಲವು ಕಥೆಗಳ ಒಂದು ಗುಚ್ಛ ಎಂದೂ ಹೇಳಬಹುದು. ಗಡಿಮನೆಯ ಸುಬ್ರಾಯಪ್ಪ, ಅವನ ಪತ್ನಿ ಅನಸೂಯ (ಅಂತತ್ತೆ), ಹೊಸ್ಮನೆಯ ಪುಟ್ಟಣ್ಣ, ತಂಗಕ್ಕ, ಶಂಕ್ರ, ಗಪ್ಪತಿ - ಹೀಗೆ ಬರುವ ಪ್ರತಿ ಪಾತ್ರವೂ ತಮ್ಮ ಕಥೆಯನ್ನು ತೆರೆದಿಡುತ್ತವೆ. ಆ ಮೂಲಕ ತಾವು ತಮ್ಮ ಪಾಪಪ್ರಜ್ಞೆಯಿಂದ ಬಿಡುಗಡೆ ಹೊಂದಲು ಬಯಸುತ್ತಿವೆಯೇನೋ ಎಂಬಂತಿವೆ.

ನನ್ನ ಪ್ರಕಾರ ಮುಖ್ಯ ಪಾತ್ರಧಾರಿ ಇಲ್ಲಿ ನಿರೂಪಕ. ಆತ ಇಲ್ಲದೇ ಹೋದರೆ, ಸುಬ್ರಾಯಪ್ಪನ ಆತ್ಮಕಥನ ಹುಟ್ಟುತ್ತಿರಲಿಲ್ಲ. ಅಂತತ್ತೆಯಂತಹ ಪಾತ್ರವೊಂದು ದೇಶ, ಕಾಲವನ್ನು ಮೀರಿ ಇಂದಿನ ಅದೆಷ್ಟೋ ಅಂತತ್ತೆಗಳನ್ನು ನಮಗೆ ನೆನಪಿಗೆ ತರುತ್ತಿರಲಿಲ್ಲ. ಸುಬ್ರಾಯಪ್ಪನ ಗತಚರಿತ್ರೆಯ ಬೆನ್ನು ಹಿಡಿದು ಅವನಿಗೆ ಸಂಬಂಧ ಪಡುವ ಅನೇಕಾನೇಕರ ಕಥೆಗಳು, ಉಪಕಥೆಗಳು ಎಲ್ಲವೂ ಎಲ್ಲೂ ನಿಮಗೆ ಬೋರು ಹೊಡೆಸದೇ ಕಥೆ ಬೆಳೆಯುವ ಪರಿಸರದೊಳಗೆ ಹದವಾಗಿ ಹುದುಗಿ ಓದಿನ ಸುಖ ಕೊಡುತ್ತ ಸಾಗುತ್ತವೆ. ಅಲ್ಲದೇ,

ಜ್ಯೋತಿಷ್ಯದಲ್ಲಿ ಉಲ್ಲೇಖಿಸಿರುವ ಮೃಗಶಿರ ನಕ್ಷತ್ರದ ವಿಶೇಷತೆಗೂ ಕಾದಂಬರಿಯ ನಿರೂಪಕನಿಗೂ ಬಹಳ ಸಾಮ್ಯವಿದೆ. ಇಲ್ಲಿ ಬರುವ ನಿರೂಪಕನು ಬಹಳ ಕುತೂಹಲಿ, ಸದಾ ಕಥೆಯ ಅನ್ವೇಷಣೆಯಲ್ಲೇ ತೊಡಗಿರುವವನು, ಸೌಮ್ಯವಾಗಿ ಎಲ್ಲವನ್ನೂ, ಎಲ್ಲರನ್ನೂ ಅಳೆದು ತೂಗುವವನು, ಯಾವುದೇ ನಿರ್ಣಯಕ್ಕೆ ದಿಢೀರನೆ ಬರದೆ ಎಲ್ಲ ಕೋನಗಳಿಂದಲೂ ಕಥೆಗಳನ್ನು ಇದ್ದ ಹಾಗೇ ಹರಹಿ ಇಡುವ ಮನೋಭಾವ. ಅಲ್ಲಲ್ಲಿ ಜಿಜ್ಞಾಸೆಯನ್ನೂ ಮಾಡುತ್ತಾನೆ. ಒಂದೆರಡು ಕಡೆ ಪಾತ್ರಗಳು ನುಡಿವ ಕೆಲವು ತೂಕ ಭರಿತ ಮಾತುಗಳು ಆ ಪಾತ್ರದ ಮಿತಿಯನ್ನೂ ಮೀರಿ ನಿರೂಪಕನದೇ ಚಿಂತನೆಗಳೇನೋ ಎಂಬಷ್ಟು ಗಾಢವಾಗಿ ತಾಗಿದ್ದೂ ಇದೆ. ಆದರೆ ಕಾದಂಬರಿಯಲ್ಲಿ ಎಲ್ಲೂ ತೀರ್ಪು ನೀಡುವ ಆತುರತೆ ಕಾಣುವುದಿಲ್ಲ, ಬದುಕನ್ನು ಆಪ್ತವಾಗಿ ನೋಡುವ, ತಿಳಿಯುವ ಹಂಬಲವನ್ನಷ್ಟೇ ನೋಡಬಹುದು. ಅಂತ್ಯದಲ್ಲಿ ತಾನು ಹುಡುಕುತ್ತಿರುವುದು ದೊರೆತ ತೃಪ್ತಿಯ ಭಾವವನ್ನು ಶಂಕ್ರನ ಮನೆಯ ಗೇಟಿನ ರೂಪಕದಲ್ಲಿ ಕಾಣಿಸಲಾಗಿದೆ.

ಕಥೆಯ ಕೇಂದ್ರಬಿಂದು ಸುಬ್ರಾಯಪ್ಪನ ಆತ್ಮಚರಿತ್ರೆಯಾಗಿದ್ದರೂ, ಆ ಬಿಂದುವಿನ ಸುತ್ತಲ್ಲೂ ಗಿರಗಿರನೆ ತಿರುಗುವ ಉಳಿದೆಲ್ಲ ಪಾತ್ರಗಳ ಕಥನಗಳು ಕಡೆಗೆ ಅವನ ಕಥೆಯೊಳಗೇ ಐಕ್ಯವಾದಂತೆ ಕಂಡರೂ ಭಿನ್ನವಾಗಿಯೇ ಉಳಿಯುತ್ತವೆ. ಪ್ರತಿಯೊಂದು ಅಧ್ಯಾಯವೂ ಒಂದು ಕುತೂಹಲವನ್ನು ಉಳಿಸಿಕೊಂಡು ಸಾಗಿದರೂ ಈ ಕಾದಂಬರಿ ಕೇವಲ ಅದಕ್ಕಷ್ಟೇ ಸೀಮಿತವಾಗಿಲ್ಲ. ಕಥೆ ಹುಟ್ಟುವ, ಬೆಳೆವ, ಬಲಿಯುವ ಕಡೆಗೊಂದು ತಿರುವಲ್ಲಿ ಕೊನೆಗೊಳ್ಳುವ ಪರಿಸರ, ಊರು, ಕೇರಿ, ಕಾಡು, ತೋಟ, ವನ್ಯಜೀವಿಗಳು - ಇವೆಲ್ಲವನ್ನೂ ನಮ್ಮ ಕಣ್ಣಿಗೆ ಕಟ್ಟಿಕೊಡುತ್ತವೆ. ನಾವೂ ನಿರೂಪಕನ ಪಕ್ಕದಲ್ಲೇ ಕುಳಿತು, ತಿರುಗಿ ಕಥೆಯನ್ನು ಸಂಗ್ರಹಿಸಿ ಕೇಳುತ್ತಿರುವಂತೆ ಭಾಸವಾಗುತ್ತದೆ. 

ಕಥೆಯ ಚೌಕಟ್ಟು, ಶೈಲಿ:-

ಕಾದಂಬರಿಯ ನಿರೂಪಣೆಯು ಬಹಳ ಸೊಗಸಾಗಿದೆ. ಮಾಮೂಲಿ ಸಾಮಾಜಿಕ ಕಥನ ಶೈಲಿಯಲ್ಲಿರದೇ ನಮ್ಮೊಳಗೊಂದು ಚಿಂತನೆಯನ್ನು ಹುಟ್ಟುಹಾಕುವಂತಿದೆ. ಅಂತತ್ತೆಯಂತೇ ಸಾಮಾಜಿಕ ಕಟ್ಟುಪಾಡಿಗೆ, ಪುರುಷಪ್ರಧಾನ ವ್ಯವಸ್ಥೆಗೆ ಸಿಲುಕಿ, ಒದ್ದಾಡಿ, ನಲುಗುವ ಜೀವಗಳು ಇಂದಿಗೂ ನಮ್ಮ ಸುತ್ತ ಕಾಣುತ್ತಿರುತ್ತವೆ. ಗಂಡನಿಂದ/ಗಂಡಿನಿಂದ ಎಂತಹ ದುರ್ಗತಿ ಎದುರಾದರೂ ಅವಳದೇ ತಪ್ಪು, ಆಕೆ ತನಗೆ ಹಾಕಿರುವ ಚೌಕಟ್ಟನ್ನು ಮೀರಬಾರದು, ಗಂಡನ ದುಸ್ಥಿತಿಗೆ ಹೆಂಡತಿಯೇ ಪ್ರಮುಖ ಕಾರಣ ಎಂಬಿತ್ಯಾದಿ  ಮನಃಸ್ಥಿತಿಯು ಆ ಕಾಲದ್ದು ಮಾತ್ರವಲ್ಲ ಈಗಲೂ ಚಾಲ್ತಿಯಲ್ಲಿರುವಂಥದ್ದು. ಅದೇ ರೀತಿ ಹೆಣ್ಣಿಗೆ ರಕ್ಷಣೆಯಾಗಿ ಓರ್ವ ಗಂಡ ಬೇಕು, ಅವನ ಆಸರೆಯಿಲ್ಲದ ಹೆಣ್ಣು ಸದಾ ತನಗೆ ಲಭ್ಯಳು, ಅವಳನ್ನು ಹೇಗೂ ಬಳಸಿಕೊಳ್ಳಬಹುದೆಂಬ ಮನಸ್ಥಿತಿಯೂ ಯಾವ ಕಾಲಕ್ಕೂ ಎದ್ದು ಕಾಣುವಂಥದ್ದು. 

ಅಂದು ಅಸಂಖ್ಯಾತರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಮನೆ-ಹೊಲಗಳನ್ನು ಬಿಟ್ಟು ಒದ್ದಾಡಿ ಕೊನೆಗೂ ಅದನ್ನು ದೊರಕಿಸಿಕೊಂಡರು. ಆದರೆ ಅನೇಕರು ಅವರೊಳಗಿನ ಅಹಂ, ಸ್ವಾರ್ಥ, ಸಿಟ್ಟು, ಸಂಕುಚಿತತೆ, ಮನೋ ದೌರ್ಬಲ್ಯದ ದಾಸ್ಯಗಳಿಂದ ಬಿಡುಗಡೆ ಹೊಂದುವ ಬಗೆ ಅರಿಯದೇ ತಮ್ಮ ಮನೆಯೊಳಗಿನ ಹೆತ್ತವರು, ಪತ್ನಿ-ಮಕ್ಕಳನ್ನು ಬಂಧನಕ್ಕೆ ಸಿಲುಕಿಸಿಬಿಟ್ಟರು. ಇದೆಲ್ಲವೂ ಇಂದೂ ಪ್ರಸ್ತುತವೇ. ಕಾದಂಬರಿಯಲ್ಲಿ ಬರುವ ಈ ಕೆಳಗಿನ ಸಾಲುಗಳು ಸಾರ್ವಕಾಲಿಕ ಕಟು ಸತ್ಯವನ್ನು ಸಾರುವಂಥವು!

*ಚರಿತ್ರೆಯ ಪುಸ್ತಕಗಳಲ್ಲಿ ಬೀದಿಯಲ್ಲಿ ಘೋಷಣೆ ಕೂಗಿದವರ ಹೆಸರಿರುತ್ತದೆಯೆ ವಿನಃ ಹೊಗೆಯ ಒಲೆ ಊದಿ ಹಿತ್ತಲ ಪ್ರಪಂಚದಲ್ಲೆ ಆಯುಷ್ಯ ಕಳೆದವರ ನೆನಪಿರುವುದಿಲ್ಲ.

* ದೇಶದ ದೊಡ್ಡ ಕಥೆಗಳಲ್ಲಿ ಕೋಟೆಯ ಬಾಗಿಲನ್ನು ಕಾದವರಿಗೆ ಜಾಗವೇ ಇರುವುದಿಲ್ಲ.

ಇಂದೂ ಗಡಿಗಾಗಿ ವರ್ಷಗಟ್ಟಲೇ ಎಲ್ಲೋ ಹೋಗಿ ಕಾಯುವ ಸೈನಿಕ ತನ್ನವರನ್ನು ಯಾವುದೋ ಹಳ್ಳಿಯ ಮೂಲೆಯಲ್ಲಿ ಬಿಟ್ಟು ಹೋಗುವಾಗ ಅವರ ಪರಿಸ್ಥಿತಿ, ಮನಃಸ್ಥಿತಿಯು ಅಂತತ್ತೆ, ಸುಬ್ರಾಯಪ್ಪನ ಹೆತ್ತವರಿಗಿಂತ ಭಿನ್ನವಾಗಿರದೇನೋ! ಲೈಂಗಿಕ ವಾಂಛೆ ಕೇವಲ ಗಂಡಿನ ಸ್ವತ್ತು, ಸ್ವಭಾವ ಎಂಬ ಮೌಢ್ಯ ಅಂದಿನಿಂದಲೂ ಹರಿದು ಬಂದ ಕಣಕು ನೀರು. ಆದರೆ ಹೆಣ್ಣು-ಗಂಡಿನ ನಡುವಿನ ಸೂಕ್ಷ್ಮ ವ್ಯವಹಾರಗಳನ್ನು ಬಹಳ ನಾಜೂಕಾಗಿ ನೇಯ್ದ ಪಾತ್ರಗಳೂ ಇಲ್ಲಿವೆ. ಉದಾಹರಣೆಗೆ ಕಾದಂಬರಿಯ ನಡುವೆ ಬರುವ ಕನ್ನಡಗಲ್ ಲಚ್ಚಿ ಚಿಕ್ಕಿಯ ಕಥೆ. ಕೆಲವೇ ಪುಟಗಳಲ್ಲಿ ಬಂದು ಹೋಗುವ ಈ ಪಾತ್ರ ಬಿತ್ತರಿಸುವ ದೃಶ್ಯ ಕಾವ್ಯ ಬಹಳ ಸುಂದರವಾಗಿದೆ. 

ಬಹಳ ಹಿಂದೆ ಎಲ್ಲೋ ಒಂದೆಡೆ ಈ ಒಂದು ಕಥೆ ಓದಿದ್ದೆ:- 

ಇಬ್ಬರು ಸಹೋದರರು ದೇವಸ್ಥಾನಕ್ಕೆಂದು ಕಾಡಿನಲ್ಲಿ ಸಾಗುತ್ತಿರುತ್ತಾರೆ. ನಡುವೆ ಜೋರಾದ ಗಾಳಿ ಮಳೆ ಬಂದು ದಿಕ್ಕು ತಪ್ಪಿ ಬೇರ್ಪಡುತ್ತಾರೆ. ತಮ್ಮನು ದಾರಿ ತಪ್ಪಿ ವೇಶ್ಯೆಯೋರ್ವಳ ಮನೆಗೆ ಹೋದರೆ ಅಣ್ಣ ಹೇಗೋ ಆ ದೇವಸ್ಥಾನವನ್ನು ಹೋಗಿ ಸೇರುತ್ತಾನೆ. ಆದರೆ ಅಲ್ಲಿ ಆತನಿಗೆ ಯಾರಿಂದಲೋ ತಿಳಿಯುತ್ತದೆ ತನ್ನ ತಮ್ಮ ಅಂಥವಳ ಮನೆಗೆ ಹೋಗಿಬಿಟ್ಟಿರುವನು ಎಂದು. ಇತ್ತ ರಾತ್ರಿ ಬೆಳಗಾಗುವವರೆಗೂ ವೇಶ್ಯೆಯ ಮನೆಯ ಜಗುಲಿಯ ಮೂಲೆಯಲ್ಲೆಲ್ಲೋ ಕುಳಿತ ತಮ್ಮ ದೇವಸ್ಥಾನದ ಧ್ಯಾನದಲ್ಲೇ ಇದ್ದು ಬೆಳಗಾಗಿದ್ದೇ ಅಲ್ಲಿಂದ ಹೊರಟುಬಿಟ್ಟರೆ, ಅತ್ತ ಅಣ್ಣನು ತನ್ನ ತಮ್ಮ ಅದೆಷ್ಟು ಸುಖದಲ್ಲಿದ್ದಾನೋ ಎಂದು ಕಲ್ಪನೆಮಾಡಿಕೊಂಡು, ಅಸಹನೆಯಿಂದ ಕುದಿಯುತ್ತಲೇ ದೇವಸ್ಥಾನದಲ್ಲಿ ಕುಳಿತು ಬೆಳಗುಮಾಡಿರುತ್ತಾನೆ. ಇವರಿಬ್ಬರೂ ಈ ಕಾದಂಬರಿಯಲ್ಲಿ ಬರುವ ಅಂತತ್ತೆ, ಸುಬ್ರಾಯಪ್ಪ, ಪುಟ್ಟಣ್ಣ - ಹೀಗೆ ಹಲವು ಪಾತ್ರಗಳಲ್ಲಿ ಕಂಡರು.

ಕುತೂಹಲಕರ ಕಥನ, ಸ್ವಾತಂತ್ರ್ಯಪೂರ್ವದ ಮಲೆನಾಡಿನ ಪರಿಸರ, ಕಾಡು, ಜನಜೀವನ, ಬೇಸಾಯ ಪದ್ಧತಿಗಳ ವಿವರಣೆ, ಯಾವ ಕಾಲಕ್ಕೂ ಸಲ್ಲಬಹುದಾದ ಹೆಣ್ಣು-ಗಂಡಿನ ಮನೋವ್ಯಾಪಾರ, ಎದುರಾಗುವ ಅಸಂಖ್ಯ ಆಪತ್ತುಗಳನ್ನು ಪ್ರತಿಕೂಲ ವಾತಾವರಣದಲ್ಲೂ ಕೇವಲ ಮನೋಬಲದಿಂದ ಎದುರಿಸುವುದು ಹೇಗೆಂಬುದಕ್ಕೆ ಸಿಗುವ ನಿದರ್ಶನಗಳು, ನಿರೂಪಕನ ಸಮಚಿತ್ತತೆ - ಇವೆಲ್ಲವುಗಳನ್ನೂ "ಮೃಗಶಿರ" ಕಾದಂಬರಿಯನ್ನೋದಿ ಆಸ್ವಾದಿಸಬಹುದು. 

~ತೇಜಸ್ವಿನಿ ಹೆಗಡೆ


ಭಾನುವಾರ, ಜುಲೈ 5, 2026

ಅವ್ವರಸಿಯ ಸಾರ್ಥಕ ಬದುಕಿನ ಅನಾವರಣ

 

ಬಾಲ್ಯದಲ್ಲಿ ಶಾಲಾದಿನಗಳಲ್ಲಿ ನಡೆಯುತ್ತಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಹಲವು ಹೆಣ್ಮಕ್ಕಳು ಹಾಕುತ್ತಿದ್ದುದು ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದ ಅಬ್ಬಕ್ಕ ರಾಣಿ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ - ಇವರುಗಳ ವೇಷವನ್ನೇ. ಹೀಗಾಗಿ ನಮಗೆಲ್ಲ ಕೆಚ್ಚೆದೆಯ ರಾಣಿಯರೆಂದರ ತಕ್ಷಣ ನೆನಪಿಗೆ ಬರುತ್ತಿದ್ದುದೇ ಇವರೆಲ್ಲರು. ಆದರೆ ಯುರೋಪಿನ ಕೆಲವು ಕುತ್ಸಿತ ಬುದ್ಧಿಯ ಇತಿಹಾಸಕಾರರು ಮತ್ತು ಓರ್ವ ಹೆಣ್ಣಿನ ಚಾರಿತ್ರ್ಯವನ್ನು ಪ್ರಶ್ನಿಸಿದ ತಕ್ಷಣ ಅದನ್ನೇ ಶಿರಸಾ ನಂಬಿ ಮೂಲೆಗುಂಪಾಗಿಸುವ ಪುರುಷಪ್ರಧಾನ ವ್ಯವಸ್ಥೆಯ ದೆಸಿಯಿಂದಾಗಿ ಮೇಲೆ ಉಲ್ಲಾಖಿಸಿದ ಎಲ್ಲ ಮಹಾನ್ ರಾಣಿಯರ ಸಾಲಿಗೆ ನಿಲ್ಲುವ, ಅದಕ್ಕಿಂತಲೂ ತುಸು ಹೆಚ್ಚೇ ಸ್ಥಾನ ಪಡೆಯಬಹುದಾದ ಸಾಧ್ಯತೆಯಿದ್ದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಯಶೋಗಾಥೆಯನ್ನು ಕರುನಾಡಿನ ಜನತೆಯಿಂದಲೇ ಮುಚ್ಚಿಡಲಾಯಿತು! ಮಕ್ಕಳ ಪಠ್ಯದಲ್ಲಿ, ಕಥೆ-ನಾಟಕ-ಲೇಖನಗಳಲ್ಲಿ ರಾಜಾಜಿಸಬೇಕಾಗಿದ್ದ ಧೀರ, ಧೀಮಂತ, ಜನರಿಗಾಗಿಯೇ ತನ್ನ ಸುದೀರ್ಘ ಬದುಕನ್ನೇ ಮುಡಿಪಾಗಿಟ್ಟ ನಗಿರೆಯ ರಾಣಿಯನ್ನು ದುಷ್ಟ ಬುದ್ಧಿಯೋರ್ವನ ಅಪಪ್ರಚಾರದ ಕಾರಣದಿಂದ ಮೂಲೆಗುಂಪಾಗಿಸಿಬಿಟ್ಟರು. ಇದಕ್ಕೆ ಕಾರಣ ಹಲವು. ವೈವಾಹಿಕ ಬದುಕನ್ನಪ್ಪದೇ, ಯಾವುದೇ ಸಂತಾನ ಹೊಂದದೇ ವಿರಕ್ತಿಯನ್ನೇ ಹೊದ್ದು, ಕೇವಲ ತನ್ನ ರಾಜ್ಯ, ಪ್ರಜೆಗಳ ಹಿತಾಸಕ್ತಿಗಾಗಿ ದುಡಿದು ಹಣ್ಣಾದ ಆ ಜೀವವನ್ನು ಗೌರವಿಸಲು ಕಾರಣ ಸಿಕ್ಕಿರಲಿಕ್ಕಿಲ್ಲ! ಯಾವುದೇ ಶಾಸನ ಬರೆಸದೇ, ತಾನು ಕೊಟ್ಟ ದಾನ-ದತ್ತಿ, ಮಾಡಿಸಿದ ಅಭಿವೃದ್ಧಿಗೆ ಯಾವ ಪುರಾವೆಯನ್ನಿಡಲು ಹೋಗದೇ ಎಲ್ಲವೂ ದೇವರ ಇಚ್ಛೆ ಎಂದು ನಿರ್ಲಿಪ್ತಳಾಗಿ ಬದುಕಿನ ಸಾಳುವ ವಂಶದ ಕೊನೆಯ ಕೊಂಡಿಯಾದ ಈ ರಾಣಿಯ ಕುರಿತು ಅಸಡ್ಡೆ ಬೆಳೆದಿರಬಹುದು! ಆದರೆ ತಡವಾಗಿಯಾದರೂ ಸರಿ, ಇಂದು ಈ ಒಂದು ಸಮಗ್ರ ಕಥನವನ್ನೋದಿದ ಮುಗಿಸಿದಾಗ ನನ್ನ ಮನಸ್ಸು ಆರ್ದ್ರಗೊಂಡಿತು. ಹೀಗಾಗಿ, ‘ಚೆನ್ನಭೈರಾದೇವಿ’ ಎಂಬ ಈ ಒಂದು ಅಪೂರ್ವ ಕೃತಿಯನ್ನು ರಚಿಸಿ, ಆ ಮೂಲಕ ನಮಗೆ ಮತ್ತು ಮುಂಬರುವ ಪೀಳಿಗೆಗೆ ಒಂದು ಮಹಾನ್ ವ್ಯಕ್ತಿಯನ್ನು ಸಶಕ್ತವಾಗಿ ಪರಿಚಿಯಿಸಿದ್ದಕ್ಕೆ ಲೇಖಕರಾದ ಡಾ. ಗನಾನ ಶರ್ಮ ಅವರಿಗೆ ಅನಂತ ಧನ್ಯವಾದಗಳು. ಅವರೇ ಹೇಳಿರುವಂತೆ ಇದು ಕೇವಲ ಓರ್ವ ರಾಣಿಯ ಕಥೆ ಮಾತ್ರವಲ್ಲ, ಹೆಣ್ಣೋರ್ವಳ ಬದುಕಿನ ಹಲವು ಮಗ್ಗಲುಗಳನ್ನು ಪರಿಚಯಿಸುವ ಕಾದಂಬರಿ.   

ಯಾರು ಈ ಚೆನ್ನಭೈರಾದೇವಿ?

 1552ರ ಸುಮಾರಿಗೆ ಪಟ್ಟವನ್ನೇರಿ, ಸುಮಾರು ಐವತ್ತಾರು ವರ್ಷಗಳ ಕಾಲ ಹೈವ, ಕೊಂಕಣ ತುಳುನಾಡುಗಳ ಮಹಾಮಂಡಳೇಶ್ವರಿಯಾಗಿ ಮೆರೆದವಳು. ಪೋರ್ಚುಗೀಸರಿಂದಲೇ ‘ರೈನಾ ದ ಪಿಮೆಂಟಾ’ ಎಂದು ಕರೆಸಿಕೊಂಡು, ತನ್ನ ಮುತ್ಸದ್ದಿತನ, ಚತುರತೆ, ಕುಶಾಗ್ರಮತಿ, ಧೈರ್ಯದಿಂದ ಪೋರ್ಚುಗೀಸರನ್ನೇ ಹಿಮ್ಮೆಟ್ಟಿಸಿದವಳು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ತನ್ನ ಆದರ್ಶ, ನಿಷ್ಠೆಯನ್ನು ಬಿಟ್ಟವಳಲ್ಲ. ಬದುಕು ಅವಳಿಗೆ ಕಲ್ಲು-ಮುಳ್ಳಿನ ಹಾಸಿಗೆಯಷ್ಟೇ ಕಠಿಣವಾಗಿತ್ತು. ಆದರೆ ಆಕೆ ಅದನ್ನೇ ಬಗ್ಗಿಸಿ ಪ್ರಜೆಗಳಿಗೆ ಬದುಕನ್ನು ಸರಳಗೊಳಿಸಿದವಳು. "ಬದುಕು ಚೆನ್ನಭೈರಾದೇವಿಗೆ ಅತ್ಯುತ್ತಮವಾದದ್ದನ್ನು ಕೊಟ್ಟಿತ್ತೋ ಇಲ್ಲವೋ ಆದರೆ ಅವಳಂತೂ ಪ್ರಜೆಗಳಿಗೆ ಅತ್ಯುತ್ತಮ ಬದುಕನ್ನು ಕಟ್ಟಿಕೊಟ್ಟಿದ್ದಳು" - ಕಾದಂಬರಿಯಲ್ಲೊಂದೆಡೆ ಬರುವ ಈ ಸಾಲು ಅಕ್ಷರಶಃ ಅವಳಿಗೊಪ್ಪುವಂಥದ್ದು. ಅಂತಹ ಧೀಮಂತ ವ್ಯಕ್ತಿತ್ವಕ್ಕೆ ಅವಳದೇ ಸೋದರಮಾವ ಕೃಷ್ಣದೇವರಸ ತನ್ನ ಸ್ವಾರ್ಥಕ್ಕಾಗಿ, ಮತ್ಸರದಿಂದ ಅವಳ ಬೆಂಗಾವಲಿನ ಗೊಂಡನಾಯಕನ ಜೊತೆಗೆ ಅವಳ ಅನೈತಿಕ ಸಂಬಂಧದ ಪುಕಾರನ್ನು ಹಬ್ಬಿಸಿದ. ಮುಂದೆ ಅವಳಿಂದ ಸೋತು ಸುಣ್ಣವಾಗಿದ್ದ  ಪೋರ್ಚುಗೀಸರ ಸೇಡನ್ನು ತೀರಿಸಲೋ ಎಂಬಂತೆ ಯುರೋಪಿನ ಕೆಲವು ಇತಿಹಾಸಕರರು ಅದನ್ನೇ ಎತ್ತಿಹಿಡಿದರು! ವಿದೇಶಿ ಇತಿಹಾಸ ತಜ್ಞರು ಹೇಳಿದ್ದೆ ಪರಮ ಐತಿಹಾಸಿಕ ಸತ್ಯವೆಂದು ಬಗೆವ ನಮ್ಮವರೂ ಅದನ್ನೇ ನಂಬಿ ಅವಳ ಅಪಾರ ಕೊಡುಗೆ, ಹೋರಾಟ, ಹೃದಯ ವೈಶಾಲ್ಯತೆ, ರಾಜನೀತಿಯ ಮುತ್ಸದ್ದಿತನ ಎಲ್ಲವನ್ನೂ ಬದಿಗೆ ತಳ್ಳಿ, ಭವಿಷ್ಯದಲ್ಲಿ ಎಲ್ಲರೂ ವಿಶೇಷವಾಗಿ ಕರ್ನಾಟಕದವರು ಸದಾ ನೆನಪಿನಲ್ಲಿಡಬೇಕಾದಂಥ ಅದ್ಭುತ ವ್ಯಕ್ತಿಯನ್ನು ಸಂಪೂರ್ಣ ಕತ್ತಲಿಗೆ ನೂಕಿಬಿಟ್ಟರು!

ಬಂಗಾಲದ ಮೈತ್ರಾದೇವಿ ಅವರ ‘ನ ಹನ್ಯತೆ’ ಎಂಬ ಆತ್ಮಚರಿತ್ರೆಯಲ್ಲೊಂದು ಸಾಲು ಬರುತ್ತದೆ... "ಅಪ್ರಿಯವಾದ ಸತ್ಯವನ್ನು ಒಪ್ಪಿಕೊಳ್ಳಲು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದು. ಆದರೆ ಅಪ್ರಿಯವಾದ ಸುಳ್ಳನ್ನು ಎದುರಿಸುವ ಬಗೆಯಾದರೂ ಹೇಗೆ?" - ಇದು ಅಕ್ಷರಶಃ ಗೇರುಸೊಪ್ಪೆಯ ಈ ರಾಣಿಗೂ ಅನ್ವಯಿಸುತ್ತದೆ. ತಾನಾಗೇ ಎಂದೂ ಯಾರ ಮೇಲೂ ದಂಡೆತ್ತಿ ಹೋಗದ ಈ ರಾಣಿ, ತನ್ನ ಮೇಲೆರಿಗಿದ ಯಾರನ್ನೂ ಸುಮ್ಮನೆ ಬಿಟ್ಟಿಲ್ಲ, ಸೋತಿಲ್ಲ ಎನ್ನುವುದನ್ನು ಈ ಕಾದಂಬರಿ ಎತ್ತಿ ತೋರಿದೆ.

ಇಷ್ಟಕ್ಕೂ ಹೆಣ್ಣನ್ನು ಹಣಿಯ ಬೇಕೆಂದರೆ ಯುದ್ಧದಲ್ಲಿ ಸೋಲಿಸಲೇಬೇಕೆಂದಿಲ್ಲವಲ್ಲ. ಒಂದು ಚಾರಿತ್ರ್ಯಹನನದ ಸುಳ್ಳಿನ ಕಿಡಿ ಸಾಕು! ಹಾಗೆ ನೋಡಿದರೆ ರಾಣಿ ಇಲ್ಲೂ ಸೋಲು ಕಂಡಿಲ್ಲ ಎಂದೇ ಹೇಳಬಹುದು. ತನ್ನ ಮೇಲೆ ಹೊರೆಸಿದ ಆಪಾದನೆಯನ್ನು ಮೆಟ್ಟಿ ಸೆಟೆದು ನಿಂತು ಬಾಯಿ ಮುಚ್ಚಿಸಿದವಳು.

ಆದರೆ ಕೊನೆಗೆ 75ರ ಹರೆಯದ (1606) ತನ್ನ ಮುಪ್ಪಿನಗಾಲದಲ್ಲಿ  ತನ್ನದೇ ನಿರ್ಲಿಪ್ತ, ಅಲಕ್ ನಿರಂಜನ್ ಭಾವನೆಯಿಂದ ಕೆಳದಿಯ ವೆಂಕಟಪ್ಪ ನಾಯಕನಿಗೆ ಸ್ವಯಂ ಶರಣಾಗಿ ಕೊನೆಗೆ ಸಲ್ಲೇಖನ ವೃತದ ಮೂಲಕ ದೇಹ ತ್ಯಜಿಸಿದ್ದು ಬಿಟ್ಟರೆ ಬಿಜಾಪುರ, ಪೋರ್ಚುಗೀಸ್, ಕೆಳದಿ - ಹೀಗೆ ಎಲ್ಲರನ್ನೂ ಹಿಮ್ಮೆಟ್ಟಿಸಿದ್ದ ಸಾಹಸಿ! 

ಭೈರಾದೇವಿಯ ಧರ್ಮ ಸಹಿಷ್ಣುತೆ

ತಾನು ನಂಬಿದ ಧರ್ಮ, ದೇವರ ಮೇಲೆ ನಿಶ್ಕಾಮ ಪ್ರೇಮ, ಶರಣಾಗತ ಭಾವ ಇದ್ದಾಗ ಇತರ ಎಲ್ಲ ಸಂಪ್ರದಾಯ, ಆಚಾರ, ವಿಚಾರ, ನಂಬಿಕೆಗಳ ಮೇಲೂ ಅದೇ ಅಭಿಮಾನ, ಶ್ರದ್ಧೆ ಇರುತ್ತದೆ ಎನ್ನುವುದಕ್ಕೇ ಈಕೆಯ ಎಲ್ಲ ಧಾರ್ಮಿಕ ಜೀರ್ಣೋದ್ಧಾರಗಳೇ ಸಾಕ್ಷಿ. ಜಿನ ಬಸದಿಗಳಷ್ಟೇ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದವಳು. ಆದರೆ ಎಲ್ಲೂ ಇದು ತನ್ನ ಕೊಡುಗೆ ಎಂಬ ಲಿಪಿ, ಶಾಸನಗಳನ್ನು ಬರೆಸುವ ಕೊಡವೆಗೂ ಹೋಗದೇ ಇದೆಲ್ಲ ದೇವರ ದೇಣಿಗೆ ಎಂದುಬಿಟ್ಟಳು. ಬಹುಶಃ ಇದಕ್ಕೇ ಚರಿತ್ರೆಯೂ ಅವಳನ್ನು ಮರೆತುಬಿಟ್ಟಿತೇನೋ! ಕೇವಲ ಧರ್ಮೋದ್ಧಾರ ಮಾತ್ರವಲ್ಲ, ಪ್ರಜೆಗಳಿಗಾಗಿ ರಸ್ತೆ, ಕುಡಿವ ನೀರಿನ ಸರಬರಾಜು, ಸುಭದ್ರ ನೆಲೆ, ಆಯಾ ಕಾಲಕ್ಕೆ ತಕ್ಕುದಾದ ಬೆಳೆಯ ವ್ಯಾಪಾರಕ್ಕೆ ಪ್ರೋತ್ಸಾಹ - ಹೀಗೆ ಸಕಲ ರೀತಿಯಲ್ಲೂ ಏಳಿಗೆಗೆ ಶ್ರಮಿಸಿದವಳು.

ತನ್ನ ರಾಜ್ಯದ ಶಕ್ತಿ ಮತ್ತು ಬಲಹೀನತೆಯನ್ನು ಚೆನ್ನಾಗಿ ಅರಿತಿದ್ದ ಚೆನ್ನಭೈರಾದೇವಿ ಕಾಳುಮೆಣಸಿನ ವ್ಯಾಪಾರದ ಮೂಲಕ ಬೊಕ್ಕಸಕ್ಕೆ ಅಪಾರ ಧನರಾಶಿ ತುಂಬಿದರೆ, ಶಬಲೆಯಂತಹ ಗೂಢಚರ್ಯೆಯರನ್ನು ನಿರ್ಮಿಸಿ ದೇಶದೊಳಗಿನ ಗೆದ್ದಲುಗಳನ್ನು ಮಟ್ಟ ಹಾಕಿದವಳು. ಇವಳಂತಹ ರಾಣಿ ನನ್ನ ಕರ್ನಾಟಕವನ್ನಾಳಿದ್ದಳು ಅದೂ ನನ್ನ ಹುಟೂರಾದ ಉತ್ತನ ಕನ್ನಡದಲ್ಲೇ ಇದ್ದಳು ಎಂಬ ಭಾವವೇ ರೋಮಾಂಚನ ತರುವಂಥದ್ದು.

    
     ಪೂರ್ಚುಗೀಸರ ಕ್ರೌರ್ಯದ ಅನಾವರಣ

ವಲಸೆ ಎಂದರೆ ಕೇವಲ ಒಂದು ಸಮುದಾಯದ ಗುಳೆ ಅಲ್ಲ. ಒಂದು ಬೃಹತ್ ವೃಕ್ಷವನ್ನು ಬೇರು ಸಮೇತ ಕಿತ್ತು ಅದು ಬೆಳೆಯಲು ಅನುಕೂಲ ವಾತಾವರಣವಿರುವ ಪ್ರದೇಶದಿಂದ ಬಲವಂತದಿಂದ ತೆಗೆದು, ಪ್ರತಕೂಲ ಜಾಗವೊಂದಕ್ಕೆ ತಂದು ಹುಗಿವ ಪ್ರಯತ್ನ! ‘ಸ್ವಪ್ನ ಸಾರಸ್ವತ’ದಂಥ ಅದ್ಭುತ ಕಾದಂಬರಿಗಳು ಸಾರಸ್ವತರ ಕರುಣಾಜನಕ ವಲಸೆಯ ಕಥೆಯನ್ನು ಸ್ಪಷ್ಟವಾಗಿ ತೆರೆದಿಟ್ಟಿವೆ.

"ನಮ್ಮ ಮತಾಂತರ ಪ್ರಯತ್ನಗಳ ಹಿಂದಿರುವುದೂ ಇದೇ ಮನಃಸ್ಥಿತಿ. ನಾವು "ಇವ್ಯಾಂಜುಲಿಕ್" ಪಾದ್ರಿಗಳು ಕ್ರಿಸ್ತನಿಗಾಗಿ ಜೀವ ಮುಡಿಪಿಡುತ್ತೇವೋ ಇಲ್ಲವೋ, ಕ್ರಿಶ್ಚಿಯಾನಿಟಿಗಾಗಿ ಮುಡಿಪಿಡುತ್ತೇವೆ. ಕ್ರಿಶ್ಚಿಯಾನಿಟಿಗಾಗಿ ಯಾವ ಸಾಹಸಕ್ಕೂ ಸಿದ್ಧರಾಗುತ್ತೇವೆ. ನಮಗೆ ಮುಖ್ಯವಾಗಿರುವುದು ದೈವ ಶ್ರದ್ಧೆಯಲ್ಲ, ಧರ್ಮಶ್ರದ್ಧೆ. ಅದಕ್ಕಿಂತ ಮುಖ್ಯವಾಗಿರುವುದು ಸ್ವಾರ್ಥ. ನಾಳೆ ವಿಶ್ವವೆಲ್ಲ ಕ್ರಿಶ್ಚಯನ್ ಧರ್ಮವನ್ನಪ್ಪಿಕೊಂಡರೆ ನಮ್ಮ ಬದುಕಿಗೆ ಪೂರ್ಣ ಭದ್ರತೆ ದೊರೆಯುವುದೆಂಬ ಲೋಭ. ನನ್ನ ದೃಷ್ಟಿಯಲ್ಲಿ ಧರ್ಮವಿಸ್ತರಣೆಯ ಹಿಂದಿರುವುದೂ ನಮ್ಮ ದೇವರೇ ಮೇಲು ಎಂಬ ನಿರೂಪಿಸುವ ಹಠ. ಇದು ಏಕದೇವೋಪಾಸನೆಯ ದೌರ್ಬಲ್ಯ. ನಮಗೆ ಇರುವೊಬ್ಬ ದೇವರರೂ ಶ್ರೇಷ್ಠನೆಲ್ಲವೆಂದರೆ ನಾವು ಯಾರನ್ನು ಪೂಜಿಸಬೇಕು? ನಿಮ್ಮ ಜಿಂಟುಗಳಿಗೆ ಹಾಗಲ್ಲ. ಬಹುದೇವೋಪಾಸಕರಾದ ನಿಮಗೆ ದೇವರು ಒಬ್ಬನಲ್ಲ: ಕೋಟಿ ದೇವರನ್ನು ಸೃಷ್ಟಿಸಿಕೊಂಡು, ಸುಖವಾಗಿದ್ದೀರಿ. ನಿಮಗೆ ನೀರು ನೆಲ ಬಾನು ಬೆಟ್ಟ ಎಲ್ಲವೂ ದೇವರೇ. ಹಾಗಾಗಿ ನಿಮಗೆ ಒಬ್ಬ ದೇವರನ್ನು ಬಿಟ್ಟರೆ ಪೂಜಿಸಲು ಇನ್ನೊಬ್ಬನಿದ್ದಾನೆ. ನಿಮ್ಮದಲ್ಲದ ದೇವರನ್ನು ಒಪ್ಪಿಕೊಳ್ಳುವುದನ್ನೂ ಅಭ್ಯಾಸ ಮಾಡಿಕೊಂಡಿದ್ದೀರಿ." -ಕಾದಂಬರಿಯಲ್ಲಿ ಬರುವ ಬ್ರೂನೋ ಪಾದ್ರಿಯ ಈ ಮಾತುಗಳು ಎಲ್ಲ ಕಾಲಕ್ಕೂ ಎಲ್ಲ ಮತಗಳಿಗೂ ಅನ್ವಯಿಸುವಂತಿದೆ. ಇತಿಹಾಸದ ತಿಳಿವು ನಮ್ಮನ್ನು ರೊಚ್ಚಿಗೆಬ್ಬಿಸಬಾರದು ನಿಜ. ಆದರೆ ಅದು ಮತ್ತೆಮತ್ತೆ ಮರುಕಳಿಸದಿರುವ ಎಚ್ಚರಿಕೆಯನ್ನು ಹುಟ್ಟಿಸುವಂತಿರಬೇಕು. ಈ ನಿಟ್ಟಿನಲ್ಲಿ ಪರಕೀಯರ ದಾಳಿಗೆ ತುತ್ತಾಗುವವರ ಬವಣೆಯನ್ನು ಹಸಿಹಸಿಯಾಗಿ ಹರಡಿರುವ ಈ  ಕೃತಿ ಸಶಕ್ತವಾಗಿದೆ ಎನ್ನಬಹುದು. ಇನ್ನು, ಸರಿಸುಮಾರು ಅದೇ ಸಮಯದಲ್ಲಿ ಉತ್ತರ ಕನ್ನಡದ ಬಹುತೇಕ ಭಾಗವನ್ನು ಆಳುತ್ತಿದ್ದ ಗೇರುಸೊಪ್ಪೆ ರಾಣಿ ಚೆನ್ನಭೈರಾದೇವಿ ಹೇಗೆ ಆ ಗೋವೆಯ ಸಾರಸ್ವತ ವಲಸಿಗರಿಗೊಂದು ಘನತೆಯ ಬದುಕನ್ನು, ಸುಭದ್ರ ನೆಲೆಯನ್ನು ಒದಗಿಸದಳು ಎಂಬುದನ್ನೂ ಈ ಕಾದಂಬರಿ ತೆರೆದಿಡುತ್ತದೆ.

  ನಿಷ್ಕಾಮ ಪ್ರೀತಿಗೆ ವ್ಯಾಖ್ಯಾನ ಬರೆವ ಭೈರಾದೇವಿಯ ಗುರುಪುತ್ರ ಜಿನದತ್ತ

ಒಂದೆಡೆ ಕಾಮ, ಕ್ರೋಧ, ಮದ, ಮತ್ಸರಕ್ಕೊಳಗಾಗಿ ಸ್ವಂತ ಅಕ್ಕನ ಮಗಳ ಚಾರಿತ್ರ್ಯವನ್ನೇ ಹನನಗೊಳಿಸುವ ಸಾಳುವ ವಂಶದ ಕೃಷ್ಣದೇವರಸ, ಇನ್ನೊಂದೆಡೆ ದೇಹ ವಾಂಛೆ, ಮೋಹ, ಕಾಮ - ಇವೆಲ್ಲವುಗಳ ಗೊಡವೆಯಿಲ್ಲದೇ ಭೈರಾದೇವಿಯ ಅಕಳಂಕ ಮನಸ್ಸನ್ನು ಪ್ರೀತಿಸಿ ಅವಳ ಮತ್ತು ರಾಜ್ಯದ ಹಿತಾಸಕ್ತಿಗಾಗಿ ತನ್ನನ್ನೇ ಮುಡಿಪಾಗಿಟ್ಟ ಜಿನದತ್ತ! ಎರಡೂ ವೈರುಧ್ಯಗಳ ಮೂಲಕ ಮನುಷ್ಯನ ಮನೋ ವ್ಯಾಪಾರ ಮತ್ತು ಅವುಗಳಿಂದಾಗುವ ವಿನಾಶ ಮತ್ತು ಒಳಿತನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.

"ಸ್ವಂತದ್ದನ್ನಷ್ಟೇ ಪ್ರೀತಿಸಬೇಕು ಅಥವಾ ಪ್ರೀತಿಸುವುದೆಲ್ಲ ಸ್ವಂತವಾಗಬೇಕು ಎಂಬ ಸ್ವಾರ್ಥ ನನ್ನದಲ್ಲ. ಪ್ರೀತಿಯ ಅರ್ಥ ಬಯಸುವುದರಲ್ಲಿಲ್ಲ, ಪ್ರೀತಿಸುವುದರಲ್ಲಿದೆ, ಅಷ್ಟೇ. ಪ್ರೀತಿಯೊಂದು ಅನುಭವ. ಅದು ವ್ಯಾಖ್ಯಾನಕ್ಕೆ ಸಿಗುವ ಸಂಗತಿಯಲ್ಲ" ಎಂದಿರುವ ಜಿನದತ್ತನ ವೈಶಾಲ್ಯತೆ, ನಿಷ್ಕಾಮ ಮನಸ್ಸು ರಾಣಿಯಲ್ಲೂ ಇತ್ತು ಎಂಬುದು ಮನದಟ್ಟಾಗುತ್ತದೆ. ಅವಳು ತನ್ನ ರಾಜ್ಯವನ್ನು, ಪ್ರಜೆಗಳನ್ನು ಯಾವುದೇ ಪ್ರತಿಫಲನದ ಅಪೇಕ್ಷೆ, ನಿರೀಕ್ಷೆಗಳಿಲ್ಲದೇ ಪ್ರೀತಿಸಿದಳು. ಎಷ್ಟು ವೈರಾಗ್ಯಪೂರ್ಣ ಪ್ರೀತಿ ಅವಳದಾಗಿತ್ತೆಂದರೆ ತಾನು ಕೊಟ್ಟಿದ್ದು ತನ್ನ ದೇಣಿಗೆ ಅಲ್ಲ ಅವರ ಹಕ್ಕು ಎಂಬುದು ಅವಳ ನಿಲುವಾಗಿತ್ತು. ಬಹುಶಃ ಅವಳು ಪ್ರಜೆಗಳಿಂದ ಅದರಲ್ಲೂ ಕೆಲವು ಸೈನಾಧಿಕಾರಿಗಳಿಂದ ನಿಯತ್ತನ್ನೂ ನಿರೀಕ್ಷಿಸದೇ ಹೋಗಿದ್ದೇ ಅವಳ ಮೊದಲ ಹಾಗೂ ಅಂತಿಮ ಸೋಲಿಗೆ ಕಾರಣವಾಯ್ತೇನೋ.

ಜ್ವಾಲಾಮಾನಿಯ ಪ್ರಸ್ತಾಪ

ರಾಣಿ ಪ್ರತಿ ದಿವಸ ತನ್ನ ನಿವಾಸದಲ್ಲಿದ್ದ ಜ್ವಾಲಾಮಾಲಿನಿ ಮೂರ್ತಿಗೆ ನಮಸ್ಕರಿಸುತ್ತಿದ್ದಳೆಂಬುದನ್ನು ಕಾದಂಬರಿಯಲ್ಲಿ ಓದಿ ಬಹಳ ಕುತೂಹಲವಾಯ್ತು. ಹುಡುಕಿದಾಗ ಆಸಕ್ತಿಕರ ವಿಷಯಗಳು ದೊರಕಿದವು. ಜ್ವಾಲಾಮಾಲಿನಿ ಜೈನ ಧರ್ಮದ ಎಂಟನೇ ತೀರ್ಥಂಕರರಾದ ಚಂದ್ರಪ್ರಭ ಅವರ ರಕ್ಷಕ ದೇವತೆಯಾಗಿದ್ದವಳು. ಆರಂಭಿಕ ಮಧ್ಯಕಾಲೀನ ಕರ್ನಾಟಕದಲ್ಲಿ ಅತ್ಯಂತ ವ್ಯಾಪಕವಾಗಿ ಆರಾಧಿಸಲ್ಪಟ್ಟ ಯಕ್ಷಿಣಿಯರಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಳು ಎಂಬ ಮಾಹಿತಿ ದೊರಕಿತು. ಜೈನಧರ್ಮದ ಆಚಾರ, ಸಂಪ್ರದಾಯ, ವೃತ-ನೇಮಗಳ ಅರ್ಥ, ಅವುಗಳ ಆಚರಣೆಯ ವಿಧಾನಗಳು, ಸಲ್ಲೇಖನ ವ್ರತದ ಮೂಲೋದ್ದೇಶ ಮತ್ತು ಅದನ್ನು ಪಡೆಯಲು ಇರಬೇಕಾದ ಅರ್ಹತೆಗಳು - ಹೀಗೆ ನಮಗೆ ಗೊತ್ತಿಲ್ಲದ ಒಂದು ಧರ್ಮಾಚರಣೆಯ ಸಮಗ್ರ ವಿವರಣೆಗಳನ್ನು  ಸಂಶೋಧಿಸಿ ಒದಗಿಸಿರುವ ಮಾಹಿತಿಪೂರ್ಣ ಕಾದಂಬರಿ ಇದು.

ಲೇಖಕರ ಅಗಾಧ ಸಂಶೋಧನಾತ್ಮಕ ವಿವರಣೆ:

ಕಾದಂಬರಿಯುದ್ದಕ್ಕೂ ಶ್ರೀಯುತ ಗಜಾನನ ಶರ್ಮ ಅವರು ಈ ಒಂದು ಐತಿಹಾಸಿಕ, ಜನಮಾನಸದಲ್ಲಿ ಜಾಗ ಪಡೆಯದಿರುವ ಕಥಾವಸ್ತುವನ್ನು ನಿರೂಪಿಸಲು ಎಷ್ಟೆಲ್ಲ ಸಂಶೋಧನೆ, ಅಧ್ಯಯಯನಗಳನ್ನು ಮಾಡಿದ್ದಾರೆ ಎಂಬುದಕ್ಕೆ ಕೊನೆಯಲ್ಲಿ ಕೊಟ್ಟ ಆಕರ ಗ್ರಂಥಗಳು ಮತ್ತು ಮೂಲಗಳ ವಿವರಣೆಯೇ ಸಾಕ್ಷಿ. ಅಲ್ಲದೇ ಆ ಕಾಲದ ಉಡುಪು, ಆಚಾರ-ವಿಚಾರ, ನೇಮ-ನಿಷ್ಠೆಗಳು, ಆಹಾರ-ವಿಹಾರ, ಮುಖ್ಯವಾಗಿ ಜಿನ ಪದ್ಧತಿಗಳನ್ನು ಆಮೂಲಾಗ್ರಹವಾಗಿ ಸಂಗ್ರಹಿಸಿ ನೀಡಲಾಗಿದೆ. ದಟ್ಟಕಾಡಿನಲ್ಲಿ ಚತುರತೆಯಿಂದ ಮಾಡುವ ಯುದ್ಧಗಳು, ಗೇರುಸೊಪ್ಪೆಯ ಘಾಟನ್ನು ಏರಲಾಗದೇ ಬುಸುಗುಡುವ ಕತ್ತೆಗಳನ್ನು ವೈರಿಗಳ, ದಾಳಿಕೋರರ ಬಾಣದಿಂದ ಪಾರುಮಾಡಲು ರಾಣಿ ಮಾಡುತ್ತಿದ್ದ ಚಾಣಾಕ್ಷ ಉಪಾಯಗಳನ್ನೋದಿ ಬೆರಗು ಮೂಡಿತು.  ಕರಿಮೆಣಸು, ಬಿಳಿಕಾಳು ಮೆಣಸಿನ ವ್ಯಾಪಾರದ ಚತುರತೆ, ಅದಕ್ಕಾಗಿ ಆಕೆ ಯಾವೆಲ್ಲ ಸೌಕರ್ಯ, ಸವಲತ್ತುಗಳನ್ನು ಜನರಿಗೆ ಹೇಗೆಲ್ಲ ಏರ್ಪಡಿಸಿದಳು ಎಂಬುದರ ಸ್ಪಷ್ಟ ನಿದರ್ಶನ ಸಿಗುತ್ತದೆ. ಮಧ್ಯಕಾಲದಲ್ಲಿ ಕರ್ನಾಟಕ ಅದರಲ್ಲೂ ಕರಾವಳಿ, ಮಲೆನಾಡಿನ ಜನಜೀವನ, ಮನೋವ್ಯಾಪಾರಗಳ ಅನಾವರಣ ನಮಗಾಗುತ್ತದೆ. ಪ್ರತಿ ಅಧ್ಯಾಯದಲ್ಲೂ ಲೇಖಕರ ಸಂಶೋಧನೆ, ಸೂಕ್ಷ್ಮ ನಿರ್ವಹಣೆ ಎದ್ದುಕಂಡು ಕಥೆಯ ಗಟ್ಟಿತನಕ್ಕೆ, ನೈಜತೆಗೆ ಇಂಬುಕೊಡುತ್ತದೆ.

ತನ್ನ ನಿಸ್ವಾರ್ಥ ಪ್ರಜಾಸೇವೆ, ಧೀಮಂತ ವ್ಯಕ್ತಿತ್ವದಿಂದ ಪ್ರಜೆಗಳಿಂದ ಪ್ರೀತಿಪೂರ್ವಕವಾಗಿ ‘ಅವ್ವರಸಿ’ ಎಂದು ಕರೆಸಿಕೊಂಡ ಚೆನ್ನಭೈರಾದೇವಿ, ಪಟ್ಟದಲ್ಲಿದ್ದರೂ ಪೀಠಕ್ಕಂಟಿಕೊಳ್ಳದೇ, ಅಕ್ಷರಶಃ ಪದ್ಮಪತ್ರದ ಮೇಲಿನ ಹನಿಬಿಂದುವಿನಂತೆ ಹೇಗೆ ಬದುಕಿದಳು. ಮಹಾಮಂಡಳೇಶ್ವರಿಯಾಗಿ, ಪಂಚಾಣುವ್ರತದ ಉಪದೇಶಪಡೆದು ಜಿನಪಾದ ಪೂಜಪರಳಾದ ಶ್ರಾವಕಿಯಾಗಿ, ಯಾರ ಹಂಗಿಗೂ ಒಳಗಾಗದೇ, ಯಾರಿಗೂ ಬಗ್ಗದೇ ಕೇವಲ ಪ್ರಜೆಗಳ ಪ್ರೀತ್ಯಾದರಗಳಿಗೆ ತಲೆಬಾಗಿ, ಸಲ್ಲೇಖನ ವ್ರತ ಕೈಗೊಂಡು ಜಿನಪಾದ ಸೇರಿದ ಓರ್ವ ಅಪೂರ್ವ ಜೀವಿಯ ಆತ್ಮಕಥನವಿದು. ಕಳಂಕದ ಸುಳ್ಳು ಎಷ್ಟೇ ಕಾಡ್ಗಿಚ್ಚಿನಂತೆ ಹಬ್ಬಿದರೂ, ಸತ್ಯದ ನಂದಾದೀಪ ಸದಾ ಬೆಳಗಿ ನಿಜದ ಪ್ರಭೆ ಎಂದಾದರೊಂದು ದಿನ ಹೊರಹೊಮ್ಮುತ್ತದೆ ಎಂಬುದಕ್ಕೆ "ಚೆನ್ನಭೈರಾದೇವಿ"ಯಂತಹ ಕಾದಂಬರಿಗಳು, ಅಳಿದುಳಿದ  ಐತಿಹಾಸಿಕ ಸಾಕ್ಷಿಗಳು ಇಂದು ಬೆಳಕಿಗೆ ಬರುತ್ತಿರುವುದೇ ಸಾಕ್ಷಿ.

ಕಾದಂಬರಿಯನ್ನೋದಿದ ಮೇಲೆ ಮನದಲ್ಲಿ ಅಚ್ಚೊತ್ತುವ ಕೆಲವು ಅಪೂರ್ವ ಸಾಲುಗಳು:

*  ಸಮಾಜದ ದೃಷ್ಟಿಯಲ್ಲಿ ಬೀಜ ಎಲ್ಲಿ ಉದುರಿ ಬಿದ್ದು ಮೊಳೆತರೂ ಅದಕ್ಕೆ ಮಾಲಿನ್ಯದ ಹಂಗಿಲ್ಲ. ಶುದ್ಧತೆಯ ಬದ್ಧತೆಯಿಲ್ಲದ ಅದಕ್ಕೆ ಸಂಸ್ಕಾರದ ಹಂಗೂ ಇಲ್ಲ. ಹೇಗೆ ಮೊಳೆಯಿತು ಎಂಬುದಕ್ಕಿಂತ, ಮೊಳೆಯುವುದೇ ಅದರ ಹೆಚ್ಚುಗಾರಿಕೆ. ಆದರೆ ಕ್ಷೇತ್ರಕ್ಕೆ ಮಾತ್ರ ಪಾವಿತ್ರ್ಯದ ಪಾಗಾರ, ನೇಮಗಳ ಬೇಲಿ. ಸದಾ ಶುದ್ಧವಾಗಿರುವುದೇ ಅದರ ಮೌಲ್ಯ. ಹಾಗೆಂದೇ ಅದಕ್ಕೆ ಹಲವು ಕಟ್ಟುಕಟ್ಟಳೆಗಳು. ಇದಲ್ಲವೇ ಹೆಣ್ಣುಗಂಡುಗಳ ನಡುವಿನ ಶುದ್ಧಾಶುದ್ಧತೆಗೆ ಜಗತ್ತು ಅನುಸರಿಸುತ್ತಿರುವ ಮಾನದಂಡ!?

* ಪಾತ್ರ ಮುಗಿದ ಮೇಲೂ ರಂಗದಲ್ಲಿ ಉಳಿದರೆ ಪ್ರದರ್ಶನ ಹೇಗೆ ಸ್ವಾರಸ್ಯ ಕಳೆದು ಕೊಳ್ಳುವುದೋ ಹಾಗೇ ಅವಧಿ ಮುಗಿದ ಮೇಲೆ ಪದವಿಯಲ್ಲಿ ಮುಂದುವರಿಯುವುದೂ ಆಭಾಸ. ಇಲ್ಲಿ ಯಾರೂ ಅನಿವಾರ್ಯರಲ್ಲ.

*ಒಳ್ಳೆಯವರಾಗಿರುವುದಷ್ಟೇ ಮುಖ್ಯವಲ್ಲ, ಒಳ್ಳೆಯವರೆಂದು ತೋರ್ಪಡಿಸಿಕೊಳ್ಳುವುದೂ ಅಷ್ಟೇ ಮುಖ್ಯ.

*ಗೆದ್ದು ಬೀಗುವ ಸಾಮ್ರಾಜ್ಯಗಳ ರಾಜಬೀದಿಗಳಲ್ಲಿ ಬಳ್ಳದಲ್ಲಿ ಅಳೆದು ಮಾರುವ ಮುತ್ತುರತ್ನಗಳಲ್ಲಿ ವಿಧವೆಯರ ತಾಳಿ ಓಲೆಗಳ ಪಾಲಿಲ್ಲವೇನು? ಹೋರಾಡಿ ಮಡಿದ ಯೋಧರಿಗೆ ವೀರ ಸ್ವರ್ಗ ಎಂದು ಬರೆದ ಚರಿತ್ರೆ, ಬದುಕಿರುವ ಅವರ ಪತ್ನಿಯರಿಗೆ ರೌರವ ನರಕವೆಂದು ಬರೆಯಿತೇನು?

*ಯುದ್ಧಕ್ಕಾಗಿ ಎಷ್ಟೇ ವೆಚ್ಚ ಮಾಡಿದರೂ ಚಕ್ರವರ್ತಿಗಳು ಶ್ರೀಮಂತರಾಗಿ ಉಳಿಯುವುದು ಸೋತವರನ್ನು ಸುಲಿದು ತಾನೇ?

*ಬದುಕೆಂದರೆ ತೆರೆಯೊಂದು ಬಂದರೆ ಹೆಜ್ಜೆಯ ಗುರುತೆಲ್ಲ ತೊಳೆದು ಹೋಗುವ ಮರಳು ತೀರದ ಪಯಣವಾಗಬೇಕು.

 

~ತೇಜಸ್ವಿನಿ ಹೆಗಡೆ.

*********

 

 

ಶುಕ್ರವಾರ, ಮಾರ್ಚ್ 11, 2022

ಭಕ್ತಿ: ಭವಸಾಗರ ಪಾರು ಮಾಡುವ ನೌಕೆ

             ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |

ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ ||

ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು, ಸಕಲ ಚೈತನ್ಯವನ್ನು ನೀಡಿ ರಕ್ಷಿಸುವವಳು ನೀನು. ಎಲ್ಲರ, ಎಲ್ಲಾ ರೀತಿಯ ದುಃಖವನ್ನು ನಿವಾರಿಸುವ ಹೇ ದೇವಿ, ನಾರಾಯಣಿ ನಿನಗೆ ನಮಸ್ಕಾರ.

ಮಾರ್ಕಾಂಡೇಯ ಪುರಾಣದಲ್ಲಿ ಬರುವ ದುರ್ಗಾಸಪ್ತಶತಿಯಲ್ಲಿ ಹನ್ನೊಂದನೇ ಅಧ್ಯಾಯದಲ್ಲಿ ನಾರಾಯಣಿಸ್ತುತಿಯು ಅತ್ಯಂತ ಪ್ರಸಿದ್ಧ. ಅದರೊಳಗೆ ಈ ಮೇಲಿನ ಶ್ಲೋಕವು ಅತ್ಯಂತ ಪ್ರಸಿದ್ಧ. ಶರಣಾಗತಿ ಎಂದರೆ ಸಂಪೂರ್ಣ ಬಾಗುವುದು. ಇಲ್ಲಿ ಬಾಗುವುದು ಎಂದರೆ ಶಾರೀರಿಕ ಮಾತ್ರವಲ್ಲ, ಮಾನಸಿಕವಾಗಿ ಒಂದಾಗುವುದು; ಸಮರ್ಪಿಸಿಕೊಳ್ಳುವುದು. ಇದೇ ಭಕ್ತಿಯ ನಿಜವಾದ ಅರ್ಥ!

ಭಕ್ತಿ ಎಂದರೆ ‘ಭಜ್’, ಹೊಂದುವುದು ಅಥವಾ ಸಮರ್ಪಣಾ ಭಾವ. ಭಕ್ತ ಎಂದರೆ ಹೊಂದಲ್ಪಟ್ಟವ ಅಥವಾ ಸಮರ್ಪಿಸಿಕೊಂಡವನು. ತಾಯಿ ಸದಾ ಮಕ್ಕಳ ಮೊರೆಗೆ, ಅಳುವಿನ ಕರೆಗೆ ಬಹು ಬೇಗ ಕರಗುವವಳು. ಅಂತೆಯೇ ಆಕೆಯನ್ನು ‘ಕ್ಷಿಪ್ರ ಪ್ರಸಾದಿನಿ’ ಎಂದು ಸ್ತುತಿಸಲಾಗುತ್ತದೆ. ಜಗನ್ಮಾತೆ ಮಾತ್ರವಲ್ಲ ಭಗವಂತನ ಸಾನ್ನಿಧ್ಯದ ಅರಿವನ್ನು, ಆ ಅನುಭೂತಿಯನ್ನೂ ಹೊಂದಲು ಒಳಗಿನ ಜೀವರಸ ಕಾಯಬೇಕು, ಕುದಿಯಬೇಕು, ಪಾಕಗಟ್ಟಿ ನಿವೇದನೆಯಾಗಬೇಕು. ಅಂತಹ ಪರಿಪಕ್ವಗೊಂಡ ಭಕ್ತರ ಆರ್ತನಾದವು, ಕರೆಯು ಭಗವಂತನನ್ನು ತಲುಪಲು ಇರುವ ಅತ್ಯಂತ ಪ್ರಬಲ ಸಾಧನವೇ ‘ಭಕ್ತಿ’!

ಅಧ್ಯಾತ್ಮ ಚಿಂತಕರು, ವಿದ್ವಾಂಸರೂ ಆಗಿರುವ ಶ್ರೀಯುತ ಲಕ್ಷ್ಮೀಶ ತೋಳ್ಪಾಡಿಯವರು ಭಕ್ತಿಯನ್ನು ವಿಶ್ಲೇಷಿಸುತ್ತಾ ಹೀಗೆ ಹೇಳಿದ್ದಾರೆ – “ಭಕ್ತಿ ಎಂದರೆ ಭಾವಜನ್ಯ, ಅನುಭವಜನ್ಯ ಮತ್ತು ಅನುಕರಣೀಯ. ನನ್ನ ಬಗ್ಗೆ ನನಗಿಂತ ಚೆನ್ನಾಗಿ ಅರಿತಿರುವ ಭಗವಂತನ ಬಳಿ ತೋಡಿಕೊಳ್ಳುವಾಗ ಹುಟ್ಟುವುದು ಭಕ್ತಿಯೆಂಬ ಭಾವದ್ರವ್ಯ.” – ಹೀಗೆ ಹೇಳುವುದರ ಮೂಲಕ ಅವರು ಭಕ್ತ-ಭಗವಂತನ ನಡುವೆ ದ್ವೈತ ಭಾವ ಬೇಕು ಎಂಬುದನ್ನು ಸೂಚಿಸುತ್ತಾರೆ. ಭಕ್ತಿಯಲ್ಲಿ ದ್ವೈತ (ಆತ್ಮ ಎಂದರೆ ನಾನು – ಪರಮಾತ್ಮ ಎಂದರೆ ಭಗವಂತ – ಇವಿರಿಬ್ಬರೂ ಬೇರೆ ಎಂಬ ಭಾವ) ಇದ್ದಾಗಲೇ ನನ್ನ ಒಳಗೆ ನನಗೆ ಗೊತ್ತಿಲ್ಲದೇ ನೀನಿದ್ದೀಯಲ್ಲಾ ಎನ್ನುವ ಆಶ್ಚರ್ಯ ಹೊಂದಬಹುದು ಎನ್ನುತ್ತಾರೆ ಶ್ರೀಯುತರು. ಬಹುಶಃ ಆರಂಭಿಕ ಹಂತದಲ್ಲಿಈ ರೀತಿಯ ಭಾವದಲ್ಲಿಯೇ ಸಾಗುತ್ತಾ ಹಂತಹಂತವಾಗಿ ಮೇಲೇರಿದಂತೇ ಏಕತ್ವಭಾವವು ಮೂಡುತ್ತಾ ಹೋಗಿ ಭಿನ್ನತೆ ಮಾಯವಾಗುವುದು.

ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ  ಜಗದ್ಗುರು ಶಂಕರಾಚಾರ್ಯರು ಭಕ್ತಿಯ ಮಹತ್ವವನ್ನು ಮತ್ತು ಆ ಪಥದಲ್ಲಿ ಸಾಗುವುದರ ಮೂಲಕ ಜನಸಾಮಾನ್ಯರೂ ಮೋಕ್ಷವನ್ನು ಹೊಂದಬಹುದಾದ ಮಾರ್ಗವನ್ನು ಬಹಳ ಮನಮುಟ್ಟುವಂತೆ ವಿವರಿಸುತ್ತಾರೆ

.

ಭಕ್ತಿಯ ಅಗತ್ಯ 

ವೇದಾಂತದಲ್ಲಿ, ಧರ್ಮ, ಅರ್ಥ, ಕಾಮ, ಮೋಕ್ಷ – ಇವು ನಾಲ್ಕು ನಮ್ಮ ಜೀವನದ ಪ್ರಮುಖ ಗುರಿಗಳು (ಚತುರ್ವಿಧ ಪುರುಷಾರ್ಥಗಳು) ಎನ್ನಲಾಗಿದೆ.

ಧರ್ಮ ಎಂದರೆ ಧಾರಣೆ ಮಾಡುವುದು. ಜೀವನಧರ್ಮ, ಶರೀರಧರ್ಮ, ಮನೋಧರ್ಮ ಹೀಗೆ ಎಲ್ಲವೂ ಇದರಲ್ಲಿ ಬಂತು.

ಅರ್ಥ ಎಂದರೆ ಸಂಪತ್ತು. ಕಾಮ ಎಂದರೆ ಬಯಕೆ. ಸಂಪತ್ತು ಮತ್ತು ಬಯಕೆಗಳ ಪೂರೈಕೆಗೆ ಯಾವ ಧರ್ಮವನ್ನು ನಾವು ಧರಿಸುತ್ತೇವೆ ಎನ್ನುವುದು ಬಹು ಮುಖ್ಯ. ಇನ್ನು ಮೋಕ್ಷ ಇದು ಕೇವಲ ಜ್ಞಾನ ಮಾರ್ಗದಲ್ಲಿ ಸಾಗುವ ಯೋಗಿಗಳಿಗೆ ಲಭಿಸುವುದು ಎಂದು ಹೇಳಲಾಗಿದ್ದರೂ, ಜನ ಸಾಮಾನ್ಯರೂ ಕೂಡ ಸಾಂಸಾರಿಕ ಜೀವನದಲ್ಲಿದ್ದೂ ಮೋಕ್ಷ ಮಾರ್ಗದಲ್ಲಿ ಸಾಗಬಹುದು ಎಂದೂ ತೋರಿಸಲಾಗಿದೆ. ನಾವು ಮಾಡುವ ಪ್ರತಿ ಕರ್ಮವೂ ಆ ಭಗವಂತನಿಗೆ ಅರ್ಪಣೆ ಎನ್ನುವ ಮನೋಭಾವದಲ್ಲಿ ಸಾಗಿದರೆ ನಮ್ಮ ಚಿತ್ತಶುದ್ಧಿಯಾಗಿ ಆ ಮೂಲಕ ಜನಸಾಮಾನ್ಯರೂ ಮೋಕ್ಷದ ಪಥದಲ್ಲಿ ಸಾಗಬಹುದು ಎನ್ನುವುದಕ್ಕೆ ಹಲವಾರು ನಿದರ್ಶನಗಳು ಸಿಗುತ್ತವೆ. ಗೀತಾಭಾಷ್ಯದಲ್ಲೂ ಶಂಕರರು ಇದನ್ನು ಪ್ರತಿಪಾದಿಸಿದ್ದಾರೆ.

ಈ ರೀತಿ ಚಿತ್ತಶುದ್ಧಿಯಾಗಲು ನಮಗೆ ಮೊದಲಿಗೆ ಭಗವಂತನಲ್ಲಿ ನಂಬಿಕೆ ಇದ್ದಿರಬೇಕಾಗುತ್ತದೆ. ಆ ನಂಬಿಕೆಯೇ ಮುಂದಿನ ಹಂತದಲ್ಲಿ ಶ್ರದ್ಧೆಯಾಗಿ ರೂಪ ತಳೆದು, ಕೊನೆಗೆ ಅದು ತಾದಾತ್ಮ್ಯಭಾವವಾದ ಆತನೇ ನಾನು, ನಾನೇ ಆತ ಎನ್ನುವ ಭಕ್ತಿಯ ಪರಾಕಷ್ಠೆಗೆ ದಾರಿ ಮಾಡಿಕೊಡುತ್ತದೆ. ನಮ್ಮೊಳಗಿನ ನೋವು, ಸಂಕಟ, ಒದ್ದಾಟ, ತೊಳಲಾಟ - ಈ ಎಲ್ಲವನ್ನೂ ನಾವು ಭಗವಂತನಿಗೆ ಸಮರ್ಪಿಸುವ ಹಂಬಲ ಬರುವುದು ಭಕ್ತಿಯಲ್ಲಿಯೇ! ಹೀಗಾಗಿ ಭಕ್ತಿಯಲ್ಲಿ ಧಾರಣಾ ಸಾಮರ್ಥ್ಯ ಅಗಾಧ ಎನ್ನುತ್ತಾರೆ ವಿದ್ವಾಂಸರು.

ಇನ್ನೊಂದೆಡೆ ಶ್ರೀ ಮಧುಸೂದನ ಸರಸ್ವತಿಗಳು ಚತುರ್ವಿಧ ಪುರುಷಾರ್ಥಗಳಲ್ಲದೇ ಭಗವದ್ಭಕ್ತಿಯೂ ಬಹು ಮಹತ್ವದ ಪುರುಷಾರ್ಥ ಎಂದು ತಮ್ಮ ‘ಶ್ರೀಮದ್ಭಗವದ್ಭಕ್ತಿರಸಾಯನಮ್’ ಎಂಬ ಗ್ರಂಥದಲ್ಲಿ ಮಂಡಿಸಿದ್ದಾರೆ. ಆ ಗ್ರಂಥದಲ್ಲಿ ಅವರು ನಿಶ್ಚಲವಾದ ತತ್ತ್ವಜ್ಞಾನ ಮತ್ತು ಶ್ರದ್ಧಾಪೂರ್ವಕವಾದ, ದುಃಖವನ್ನು ಪರಿಹರಿಸಿ, ಸುಖವನ್ನು ನೀಡುವ ಭಗವದ್ಭಕ್ತಿಯೂ ಜೀವನದ ಗುರಿ ಎನ್ನುತ್ತಾರೆ.

ಭಕ್ತಿಯ ಮಹತ್ವ ಮತ್ತು ಅದರ ದಾರಿಯಲ್ಲಿ ಸಾಗುವವನಿಗೆ ಒಲಿಯುವ ಜ್ಞಾನ ಮತ್ತು ವೈರಾಗ್ಯಗಳು – ಇವುಗಳ ಕುರಿತು ಸಮಗ್ರವಾಗಿ ‘ಶ್ರೀಮದ್ಭಾಗವತ ಮಹಾಪುರಾಣ’ದ ಆರಂಭದ ಮೊದಲ ಎರಡು ಅಧ್ಯಾಯಗಳಲ್ಲಿ ವಿವರಿಸಲಾಗಿದೆ.

ಅಲ್ಲಿ ನಾರದ ಮಹರ್ಷಿಗಳು ಪರೀಕ್ಷಿತ ಮಹಾರಾಜನು ನಿಸ್ಸಾರವಾಗಿರುವ, ಭ್ರಷ್ಟಗೊಂಡಿರುವ ಕಲಿಯುಗದ ಆರಂಭಕ್ಕೆ ಯಾಕಾಗಿ ಒಪ್ಪುಕೊಂಡನು ಎನ್ನುವುದನ್ನು ವಿವರಿಸುತ್ತಾರೆ. ಹರಿಕೀರ್ತನೆಯನ್ನು ಭಕ್ತಿಯಿಂದ ಮಾಡುವವರಿಗೆ, ಆಲಿಸುವವರಿಗೆ ಮೋಕ್ಷದ ದಾರಿಯು ಪ್ರಾಪ್ತಿಯಾಗುತ್ತದೆ ಎನ್ನುವ ಅತಿಶಯದ ಫಲದ ಅರಿವು ರಾಜನಿಗೆ ಆಗಿದ್ದರಿಂದಲೇ ಮಾನವ ಜೀವಿಗಳ ಕಲ್ಯಾಣಕ್ಕಾಗಿ ಕಲಿಗೆ ಪ್ರವೇಶವನ್ನಿತ್ತನು ಎಂದು ನಾರದರು ಹೇಳುತ್ತಾರೆ. ಚಿತ್ತಶುದ್ಧಿಗೆ ಹರಿ ಕೀರ್ತನೆಗಿಂತ ಮಿಗಿಲಾದ ಸಾಧನೆ ಬೇರೊಂದಿಲ್ಲ ಎಂದೂ ಭಾಗವತದಲ್ಲಿ ಹೇಳಲಾಗಿದೆ. 

ಹಾಗೆ ನೋಡಿದರೆ ಜ್ಞಾನಿಯಾದವನಿಗೂ ಸಾಯುಜ್ಯ (ಮೋಕ್ಷ) ಸುಲಭಕ್ಕೆ ಸಿಗದು, ಅನೇಕ ಜನ್ಮಗಳ ನಿರಂತರ ಪರಿಶ್ರಮದಿಂದ ಜ್ಞಾನಿಯಾದವನು ಮುಕ್ತಿ ಪಡೆಯುತ್ತಾನೆ ಎನ್ನಲಾಗಿದೆ. ಜ್ಞಾನಿಗೇ ಮುಕ್ತಿ ಹೊಂದುವುದು ಇಷ್ಟೊಂದು ಕಷ್ಟಸಾಧ್ಯವಾಗಿದ್ದಿರುವಾಗ, ಇನ್ನು ಸಾಮಾನ್ಯರಿಗೆ ಇದು ದುರ್ಲಭವಾದದ್ದು. ಹೀಗಾಗಿ ಜನಸಾಮಾನ್ಯರಿಗೆ ಭಕ್ತಿ ಮಾರ್ಗವನ್ನು ಶ್ರೀಕೃಷ್ಣ ಹೇಳಿದ್ದಾನೆ. ಭಕ್ತಿಮಾರ್ಗದಲ್ಲಿ ಸಮರ್ಪಣೆ, ಶರಣಾಗತ ಮನೋಭಾವ, ನಾನು ಎಂಬ ಅಹಂಕಾರದ ನಿರ್ಮೂಲನೆಯ ಮೂಲಕ ಚಿತ್ತ ನಿರ್ಮಲವಾಗಿ ಮೋಕ್ಷದ ಕಡೆ ಹೋಗಬಹುದು. ಹೀಗಾಗಿ ಅನೇಕರು ಭಕ್ತಿಮಾರ್ಗವೇ ಪ್ರಶಸ್ತ ಎನ್ನುತ್ತಾರೆ. ಈ ರೀತಿ ಉಪಾಸನಾ ಮಾರ್ಗವಾದ ಭಕ್ತಿ ಮಾರ್ಗದಲ್ಲಿ ಒಟ್ಟೂ ನವವಿಧಗಳಿವೆ ಎಂದು ಪ್ರಹ್ಲಾದನು ಒಂದು ಸಂದರ್ಭದಲ್ಲಿ ತನ್ನ ತಂದೆ ಹಿರಣ್ಯಕಶಿಪುವಿಗೆ ಹೇಳಿದ್ದಾನೆ.

ಈ ನವವಿಧದ ಭಕ್ತಿಗಳನ್ನು ಉದಾಹರಣಯ ಸಹಿತವಾಗಿ ತಿಳಿದುಕೊಳ್ಳೋಣ.

ಭಕ್ತಿಯಲ್ಲಿನ ವಿಧಗಳು

1. ಶ್ರವಣ -      ಭಗವಂತನ ಮಹಿಮೆಯನ್ನು ಹಾಡಿ ಹೊಗಳುವ ಕೀರ್ತನೆಗಳನ್ನು ಕೇಳುತ್ತಾ ಅದರಲ್ಲೇ ಮುಳುಗಿ ಭಕ್ತಿಪರವಶವಾಗುವುದು. ಉದಾಹರಣೆಗೆ : ಕಲಿಯುಗದ ಆರಂಭದಲ್ಲಿ ಕಾಲನೆಂಬ ಸರ್ಪದ ಕಡಿತಕ್ಕೆ ಒಳಗಾಗಿ ಅಂತ್ಯಕಾಣುವೆನೆಂದು ಅರಿತ ರಾಜಾ ಪರೀಕ್ಷಿತನು ವ್ಯಾಸರ ಪುತ್ರನಾಗಿದ್ದ ಶ್ರೀಶುಕಮಹಾಮುನಿಗಳಿಂದ ಶ್ರೀಮದ್ಭಾಗವತದ ಕಥಾನಕವನ್ನು ಕೇಳುತ್ತಾ ಕೊನೆಯಲ್ಲಿ ಮೋಕ್ಷ ಹೊಂದುವನು.

2.  ಕೀರ್ತನೆ - ಭಗವಂತನ ಅವತಾರಗಳನ್ನು, ಮಹಿಮೆಯನ್ನು ಅನುದಿನ ಹಾಡುತ್ತಾ ಹೋಗುವುದು. ನಾರದರು ಇದಕ್ಕೆ ಅತ್ಯುತ್ತಮ ಉದಾಹರಣೆ. 

3.  ಸ್ಮರಣ - ಅನವರತ, ಏಕಾಗ್ರಚಿತ್ತದಿಂದ ವಿಷ್ಣುನಾಮದ ಸ್ಮರಣೆಯಲ್ಲೂ ಉತ್ಕಟ ಭಕ್ತಿಭಾವವನ್ನು ಕಾಣಬಹುದು. ಪ್ರಹ್ಲಾದನು ತನ್ನನ್ನು ವಧೆ ಮಾಡಲು ಬಂದ ಸ್ವಂತ ಅಪ್ಪ ಹಿರಣ್ಯಕಶಿಪುವಿನಿಂದ ಪಾರಾಗಲು ಹರಿನಾಮ ಸ್ಮರಣೆಯನ್ನು ಮಾಡುತ್ತಾನೆ. ಆಗ ನರಸಿಂಹನ ಅವತಾರದಲ್ಲಿ ಪ್ರಕಟಗೊಂಡ ವಿಷ್ಣುವು ಅಸುರ ಹಿರಣ್ಯಕಶಿಪುವನ್ನು ಸಂಹಾರ ಮಾಡುತ್ತಾನೆ. ಅದೇ ರೀತಿ ಗಜೇಂದ್ರಮೋಕ್ಷ ಕಥಾನಕವೂ ಇದಕ್ಕೆ ಬಹಳ ಉತ್ತಮ ಉದಾಹರಣೆಯಾಗುವುದು.

4.  ಪಾದಸೇವನ - ಈ ಭಕ್ತಿಗೆ ಅತ್ಯುತ್ತಮ ಉದಾಹರಣೆಯನ್ನು ನಾವು ರಾಮಾಯಣದಲ್ಲಿ ಕಾಣುತ್ತೇವೆ. ಪಟ್ಟವೇರಬೇಕಿದ್ದ ಶ್ರೀರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಂದಿಗೆ ವನವಾಸಕ್ಕೆ ಹೊರಡಲು, ಮತ್ತೋರ್ವ ಸಹೋದರ ಭರತನು ತನ್ನ ಪ್ರೀತಿಯ ಅಣ್ಣ ರಾಮನ ಪಾದುಕೆಗಳನ್ನೇ ಸಿಂಹಾಸನದಲ್ಲಿ ಇಟ್ಟುಕೊಂಡು, ಪೂಜಿಸುತ್ತಾ, ರಾಜ್ಯಾಭಾರಮಾಡಿದ್ದನು. ಇದು ‘ಭರತನ ಭಕ್ತಿ’ ಎಂದೇ ಪ್ರಸಿದ್ಧವಾಯಿತು.

5.  ಅರ್ಚನೆ - ಭೂಮಿಯನ್ನೇ ಪುತ್ರಿಯೆಂದು ಸ್ವೀಕರಿಸಿದ ಪೃಥುಮಹಾರಾಜನು ಯಾಗ-ಯಜ್ಞಾದಿಗಳಿಂದ ಅರ್ಚಿಸಲು ಅವನ ಆ ಭಕ್ತಿಗೆ ಒಲಿದ ಶ್ರೀಹರಿಯು ಆತನಿಗೆ ದರ್ಶನ ನೀಡಿ ಉದ್ಧರಿಸುತ್ತಾನೆ.

 6. ಅಭಿವಂದನೆ - ಭಗವಂತಮ ಸಾಮೀಪ್ಯಕ್ಕೆ ತೆರಳಿ ವಂದಿಸುವುದು. ಅಕ್ರೂರ ಕಂಸನ ಆಸ್ಥಾನದಲ್ಲಿ ಮಂತ್ರಿಯಾಗಿದ್ದವನು. ಆದರೆ ಆತ ಕೃಷ್ಣನ ಪರಮ ಭಕ್ತನಾಗಿದ್ದ. ಕಪಟ ಸಂಧಾನಕ್ಕಾಗಿ ಕಂಸನು ಅಕ್ರೂರನನ್ನು ಪುಸಲಾಯಿಸಿ ಕೃಷ್ಣನ ಬಳಿಗೆ ಕಳಿಸುತ್ತಾನೆ. ಆದರೆ ಅಕ್ರೂರನ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣ ಸಾಯುಜ್ಯ ನೀಡುತ್ತಾನೆ.

7.  ದಾಸ್ಯ - ಶ್ರೀರಾಮನ ದಾಸಾನುದಾಸ ಎಂದು ಅವನ ಸೇವೆಗೈದ ಹನುಮಂತನ ಭಾವವು ಈ ಭಕ್ತಿಯ ಪ್ರತೀಕ. 

8. ಸಖ್ಯ - ಇದು ಭಕ್ತ ಮತ್ತು ಭಗವಂತನ ನಡುವಿನ ಬಂಧ. ಪರಮಾತ್ಮನೊಡನೆ ಬೆಸೆಯುವ ಗೆಳೆತನದ ನಿರ್ವ್ಯಾಜ, ನಿಸ್ವಾರ್ಥ ಭಾವದಲ್ಲೂ ಭಕ್ತಿಯಿದೆ ಎನ್ನಲಾಗಿದೆ. ಉದಾಹರಣೆಗೆ:  ವಿಭೀಷಣ ಮತ್ತು ಶ್ರೀರಾಮ, ಅರ್ಜುನ ಮತ್ತು ಶ್ರೀಕೃಷ್ಣ, ಅಕ್ಕಮಹಾದೇವಿ ಮತ್ತು ಮಲ್ಲಿಕಾರ್ಜುನ (ಸತಿ-ಪತಿ ಭಾವದ ಸಖ್ಯ).

9. ಆತ್ಮನಿವೇದನೆ- ತನ್ನನ್ನೇ ತಾನು ಸಂಪೂರ್ಣ ಸಮರ್ಪಿಸಿಕೊಳ್ಳುವುದು. ಉದಾಹರಣೆಗೆ: ಬಲಿಚಕ್ರವರ್ತಿ. ಅಸುರರ ಪ್ರಬಲ, ಪ್ರಮುಖ ರಾಜನಾಗಿದ್ದ ಬಲಿಯು, ಯಜ್ಞನದ ಸಮಯದಲ್ಲಿ ದಾನವನ್ನು ಪಡೆಯಲು ವಟುವಿನ ವೇಷ ಧರಿಸಿ ಬರುವ ವಿಷ್ಣುವಿಗೆ ತನ್ನದೆಲ್ಲವನ್ನೂ, ಕೊನೆಗೆ ತನ್ನನ್ನೂ ಸಮರ್ಪಣಾಭಾವದಿಂದ ಧಾರೆಯೆರೆದು ಕೊಟ್ಟು ಮೋಕ್ಷವನ್ನು ಹೊಂದುವನು.

ಆತ್ಮನಿವೇದನೆಯ ಭಕ್ತಿಯಲ್ಲೂ ಎರಡು ಹಂತಗಳವೆ:-

ಕಪಿಕಿಶೋರ ನ್ಯಾಯ:- ಉದಾ: ಕೋತಿ ಮತ್ತು ಅದರ ಮರಿ.  ಕೋತಿ ತನ್ನ ಕಂದಮ್ಮನನ್ನು ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯುವಾಗ ಕೋತಿ ಮರಿಯೂ ತನ್ನ ತಾಯಿಯನ್ನು ಗಟ್ಟಿಯಾಗಿ ಅಪ್ಪಿಕೊಂಡಿರುತ್ತದೆ. ಅದೇ ರೀತಿಯೇ ಭಕ್ತನು ಭಗವಂತನನ್ನು ಆಶ್ರಯಿಸಿರುತ್ತಾನೆ. ಅಂದರೆ ಇಲ್ಲಿ ಭಕ್ತನು ಭಗವಂತನನ್ನು ನಂಬಿ ಆಶ್ರಯಿಸಿದ್ದರೂ, ತನ್ನ ಅಸ್ತಿತ್ವದ ಬಗ್ಗೆಯೂ ಪ್ರಜ್ಞೆ ಉಳಿದುಕೊಂಡುಬಿಡುವುದರಿಂದ, ಮರಿಯು ತನ್ನ ತಾಯಿಯನ್ನು ಅಪ್ಪಿಕೊಂಡಿರುವಂತೇ ನೆಚ್ಚಿಕೊಂಡಿರುತ್ತಾನೆ.

ಆದರೆ ಆತ್ಮನಿವೇದನೆಯ ಪರಮೋಚ್ಚಸ್ಥಿತಿ ಮಾರ್ಜಾಲಕಿಶೋರ ನ್ಯಾಯದಲ್ಲಿ ಬರುತ್ತದೆ. ಉದಾಹರಣೆಗೆ : ಬೆಕ್ಕು ಮತ್ತು ಅದರ ಮರಿ.

 ಇಲ್ಲಿ ಬೆಕ್ಕು ತನ್ನ ಮರಿಯನ್ನು ಕತ್ತಿನ ಹಿಂಭಾಗದಲ್ಲಿ ಹಿಡಿದು ಎತ್ತಿಕೊಂಡು ಹೋಗುತ್ತದೆ. ಇಲ್ಲಿ ಮರಿಗೆ ಸ್ವಾತಂತ್ರ್ಯ ಇಲ್ಲ. ಅದು ಸಂಪೂರ್ಣ ತಾಯಿಯನ್ನಾಶ್ರಯಿಸಿರುತ್ತದೆ. ತಾಯಿ ಬೆಕ್ಕೇ ತನ್ನ ಮಗುವನ್ನು ಅದಕ್ಕೇನೂ ನೋವಾಗದಂತೇ ಎತ್ತಿಕೊಂಡು ಹೋಗುತ್ತದೆ. ಹಾಗೆ ನೋಡದರೆ ವಸ್ತ್ರಾಪಹರಣದಲ್ಲಿ ದ್ರೌಪದಿಯು ತನ್ನ ಅಸ್ತಿತ್ವದ ಪ್ರಜ್ಞೆಯನ್ನೂ ಕಳೆದುಕೊಂಡು ಸಂಪೂರ್ಣ ಶ್ರೀಕೃಷ್ಣನಿಗೆ ಶರಣಾದ ಮೇಲೆಯೇ ಆತ ಅವಳ ಸಹಾಯಕ್ಕೆ ಧಾವಿಸಿ ಬಂದಿದ್ದು.

ಭಗವದ್ಗೀತೆಯಲ್ಲಿ ‘ಚತುರ್ವಿಧಾ ಭಜಂತೇ ಮಾಂ....’ - ಎಂದು ನಾಲ್ಕು ವಿಧದ ಭಕ್ತರನ್ನು ಉಲ್ಲೇಖಿಸಲಾಗಿದೆ:-

1. ಆರ್ತ - ನನಗೆ ಬಹಳ ಸಂಕಷ್ಟವಿದೆ ಪರಿಹರಿಸು, ಇಂಥದ್ದನ್ನು ನೀಡು ಎಂದು ಬೇಡುವುದು.

2. ಜಿಜ್ಞಾಸು - ಭಗವತ್ ತತ್ತ್ವ ಎಂದರೇನು ಎಂಬುದನ್ನು ಅರಿಯಲು ಇಚ್ಛಿಸುವ ಭಕ್ತ.

3. ಅರ್ಥಾರ್ಥಿ- ಐಶ್ವರ್ಯವನ್ನು ಬೇಡುವವನು. ಇದ್ದಷ್ಟು ಸಾಲದೇ ತನಗೆ ಇನ್ನಷ್ಟು ಸಂಪತ್ತು ಕೊಡು ಎಂದು ಮೊರೆಯಿಡುವವನು.

4. ಜ್ಞಾನಿ –  ಸಂಪೂರ್ಣ ಶರಣಾಗತ ಭಾವದಲ್ಲಿರುವವನು. ಇವನಿಗೆ ಯಾವ ಕಾಮನೆಗಳೂ ಇರುವುದಿಲ್ಲ. ಇಲ್ಲಿ ಭಕ್ತನು ಅಂತರ್ಮುಖಿಯಾಗಿ ತನ್ನ ಜೀವನ ಸಾಗಿಸುತ್ತಿರುತ್ತಾನೆ.

ಮೊದಲನೆಯವ ಅತಿ ಕಷ್ಟದಲ್ಲಿರುವುದರಿಂದ, ತನ್ನನ್ನು ಪಾರು ಮಾಡು ಎಂದು ಪ್ರಾರ್ಥಿಸಿದರೆ, ಮೂರನೆಯವನು ಸಾಕಷ್ಟಿದ್ದರೂ ಮತ್ತಷ್ಟು ಬೇಕೆಂದು ಬೇಡುವನು. ತನಗೆ ಇನ್ನಷ್ಟು ದೊರಕಿದರೆ ಅದರಲ್ಲಿ ಅಷ್ಟು ಪಾಲನ್ನು ಕೊಡುವೆನು ಎಂಬ ವ್ಯಾಪಾರಕ್ಕೆ ಇಳಿಯುವವನು. ಅರ್ಥಕ್ಕೆ ಆಶ್ರಯವಾದಂತಹ ಹರಕೆಗಳೆಲ್ಲ ಮೂರನೇ ವರ್ಗಕ್ಕೇ ಬರುತ್ತವೆ. ಮನಶ್ಶಾಂತಿ, ನೆಮ್ಮದಿಯ ಪ್ರಾರ್ಥನೆಗಳೆಲ್ಲ ಮೊದಲ ವರ್ಗಕ್ಕೆ ಬರುವವು.

 

ದಾಸರ ಭಕ್ತಿಪಂಥ

ನವ ವಿಧದ ಭಕ್ತಿಗಳಲ್ಲಿ ಬಹಳ ಆರ್ದ್ರವಾಗಿರುವ ಹಲವು ಭಾವಗಳನ್ನು ಸಮ್ಮಿಳಿಸಿಕೊಂಡಿರುವ ದಾಸ್ಯ ಭಕ್ತಿಯಲ್ಲಿ ಪ್ರಮುಖವಾಗಿ ನಾವು ಕಾಣುವುದು ಕನಕ ದಾಸರು, ಪುರಂದರ ದಾಸರು, ಮೀರಾಬಾಯಿ - ಮುಂತಾದ ಹರಿಭಕ್ತರನ್ನು.  ದಾಸರೆಲ್ಲ ತಮ್ಮ ಅನನ್ಯ ಕಾವ್ಯ ಸುಧೆಯ ಮೂಲಕ, ಕೀರ್ತನೆಗಳ ಮೂಲಕ ಭಕ್ತಿಪಂಥದ ವಿಶಿಷ್ಟ ದಾರಿಯನ್ನೇ ನಮಗೆ ತೆರೆದು ತೋರಿಸಿದವರು. ಹಾಗೆಂದು ಅವರು ತಮ್ಮ ಕೀರ್ತನೆ ಅಥವಾ ಕಾವುಗಳಲ್ಲಿ ಎಲ್ಲಿಯೂ ನೇರವಾಗಿ ತಮ್ಮದು ಭಕ್ತಿಭಾವ ಎಂದು ಹೇಳಿಕೊಂಡಿಲ್ಲ. ಪರಮಾತ್ಮನ ಪ್ರತಿ ತಮ್ಮ ಉತ್ಕಟ ಭಾವವನ್ನಷ್ಟೇ ಹಾಡಿನ ಮೂಲಕ ಅಭಿವ್ಯಕ್ತಿಸುತ್ತಾ ಸಾಗಿದವರು. ಹೀಗಾಗಿ  ಅವರ  ಕಾವ್ಯಗಳಲ್ಲಿ ಭಕ್ತಿರಸದ ಮಹಾಪೂರವೇ ಹರಿದಿರುವುದನ್ನು ಕಾಣಬಹುದು.

ದಾಸರ ಕಾವ್ಯಗಳಲ್ಲಿ ಉತ್ಕಟ ಶರಣಾಗತಿಯ ದಾಸ್ಯಭಾವ ಮಾತ್ರವಲ್ಲ, ಅನೇಕ ವಿಶಿಷ್ಟ ಭಕ್ತಿಭಾವಗಳನ್ನು ನಾವು ಗಮನಿಸಬಹುದು. ಕಾತುರತೆ, ನಿವೇದನೆ, ಹಳಹಳಿಕೆ, ತೊಳಲಾಟ, ಅಸಹಾಯಕತೆ, ಆತುರ, ಆಸೆ – ಹೀಗೆ ಈ ಎಲ್ಲಾ ಭಾವಗಳೂ ಏಕಮಾರ್ಗದಲ್ಲಿಯೇ ಅಂದರೆ ಆ ಭಗವಂತನ ಸಾನ್ನಿಧ್ಯವನ್ನು ತಲುಪುವ, ಹೊಂದು ದಾರಿಯಲ್ಲೇ ರಭಸದಿಂದ ಸಾಗುತ್ತಿರುತ್ತವೆ.

ಏಸು ಜನ್ಮ ಬಂದರೇನು

ದಾಸನಲ್ಲವೇನೊ ನಿನ್ನ

ಘಾಸಿ ಮಾಡದಿರೋ ಎನ್ನ ವಾಸುದೇವನೆ |

(ಕನಕದಾಸರ, `ಈಶ ನಿನ್ನ ಸ್ಮರಣ ಭಜನೆ ಆಸೆಯಿಂದ ಮಾಡುವೆನು…’ ಕೀರ್ತನೆಯಿಂದ)

**

ಕಲ್ಲ ಕರಗಿಸಬಹುದು , ಹುರಿಗಡಲೆಯೊಳು ಅದರ

ತೈಲವನು ತೆಗೆದಾದರುಣಲುಬಹುದು

ಬಲ್ಲಿದವರ ಮನಸು ಮೆಚ್ಚಿಸಲರಿಯೆನೈ

ಹಲ್ಲು ಕಿರಿಯುತೆ ಹಂಬಲಿಸಿ ಬಾಯಿಬಿಡುತ || (ಪುರದಂರದಾಸರ, `ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು…’ ಕೀರ್ತನೆಯಿಂದ).

ಹೀಗೆ, ಅವರದ್ದು ಸಂಪೂರ್ಣ ಸಮರ್ಪಣಾಭಾವ. ಅಲ್ಲದೇ, ಭಗವಂತನೊಡನೆ ತಕರಾರು ಮಾಡುವ, ಮುನಿಸು ತೋರುವ, ಪ್ರಶ್ನಿಸುವ – ಹೀಗೆ ಹುಂಬತನವನ್ನೂ, ಸಲಿಗೆಯನ್ನೂ ಪ್ರಕಟಿಸುವ, ತನ್ನೊಳಗಿನ ವಿಷಾದವನ್ನು ತೋಡಿಕೊಳ್ಳುವ ಅನನ್ಯ ಭಕ್ತಿಭಾವವನ್ನೂ ಕಾಣಬಹುದು.

ನೀನ್ಯಾಕೋ ನಿನ್ನ ಹಂಗ್ಯಾಕೋ

ನಿನ್ನ ನಾಮದ ಬಲವೊಂದಿದ್ದರೆ ಸಾಕೋ |

**

ಕರುಣಾಕರ ನೀನೆಂಬುವುದೆತಕೊ

ಭರವಸೆ ಇಲ್ಲೆನಗೆ |

(ಪರಂದರದಾಸರ ಕೀರ್ತನೆಗಳು)

ಭಕ್ತಿಯ ಮಹತ್ವ:

ಶ್ರೀಮದ್ಭಾಗವತದಲ್ಲಿ ಭಕ್ತಿಯಲ್ಲಿ ಸ್ತ್ರೀತ್ವವನ್ನು ಗುರುತಿಸಿ, ಆಕೆಗೆ ಜ್ಞಾನ ಮತ್ತು ವೈರಾಗ್ಯವನ್ನು ‘ಭಕ್ತಿ’ಯ ಮಕ್ಕಳು ಎಂದು ಉಲ್ಲೇಖಿಸಲಾಗಿದೆ. ಮುಂದೆ ಅಲ್ಲಿ ನಾರದರು ಕಲಿಯುಗದ ಪ್ರಹಾರಕ್ಕೆ ಬಳಲಿ ದುಃಖಿಸುತ್ತಿರುವ ಭಕ್ತಿಗೆ ಸಮಾಧಾನಿಸುತ್ತಾ, ಆಕೆಗೆ ಅವಳದೇ ಮಹತ್ವವನ್ನು ವಿವರಿಸುತ್ತಾರೆ:

“ಈ ಕಲಿಯುಗದಲ್ಲಿ ನಿನ್ನಿಂದ (ಭಕ್ತಿಯಿಂದ) ಯುಕ್ತರಾದ ಜೀವಿಗಳು ಪಾಪಿಗಳಾಗಿದ್ದರೂ ತಡವದೆ ಭಗವಾನ್ ಶ್ರೀಕೃಷ್ಣನ ಅಭಯಧಾಮವನ್ನು ಪಡೆದುಕೊಳ್ಳುವರು, ಹೃದಯದಲ್ಲಿ ಭಕ್ತಿಯು ವಾಸಿಸುವವರನ್ನು ಪ್ರೇತ, ಪಿಶಾಚ, ರಾಕ್ಷಸ, ದೈತ್ಯ ಮೊದಲಾದವರು ಮುಟ್ಟಲೂ ಕೂಡ ಸಮರ್ಥರಾಗಲಾರರು” ಎಂದು ನಾನಾ ರೀತಿಯಲ್ಲಿ ಭಕ್ತಿಯ ಔನ್ನತ್ಯವನ್ನು ವಿವರಿಸುತ್ತಾರೆ.

 ಸ್ವಾಮಿ ವಿವೇಕಾನಂದರು ತಮ್ಮ ‘ಭಕ್ತಿ-ಯೋಗ’ದ ಕರಿತು ಹೇಳುವಾಗ ‘ನಾರದೀಯಭಕ್ತಿಸೂತ್ರ’ದಲ್ಲಿ ಉಲ್ಲೇಖಿತವಾಗಿರುವ ಭಕ್ತಿಯ ಮಹತ್ವವನ್ನು ಹೀಗೆ ವಿವರಿಸಿದ್ದಾರೆ- "ಭಕ್ತನಾದವನಿಗೆ ದೇವರಲ್ಲಿರುವುದು ಗಾಢವಾದ ಭಕ್ತಿ. ಈ ಭಕ್ತಿಭಾವವನ್ನು ಹೊಂದಿದ ವ್ಯಕ್ತಿಯು ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸುವವ, ಯಾರನ್ನೂ, ಯಾವುದನ್ನೂ ದ್ವೇಷಿಸಲಾರ, ಆತ ಸಂಪೂರ್ಣ ತೃಪ್ತಿಯನ್ನು ಹೊಂದಿದವನು. ಈ ಪ್ರೀತಿಯು ಎಲ್ಲಾ ಲೌಕಿಕ ಆಸೆ-ಆಕಾಂಕ್ಷೆಗಳನ್ನೂ ಮೀರಿದ್ದು. ಯಾವಾಗ ಲೌಕಿಕ ಆಶಯಗಳು ಕೊನೆಗೊಳ್ಳುತ್ತವೆಯೋ, ಆಗಲೇ ಈ ದೈವಿಕ ಪ್ರೀತಿಯು ಆರಂಭವಾಗುವುದು."  ಇದರ ಜೊತೆಗೇ ವಿವೇಕಾನಂದರು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವ ಒಂದು ಎಚ್ಚರಿಕೆಯನ್ನೂ ಕೊಡುತ್ತಾರೆ! "ಭಕ್ತಿಯು ಭಗವಂತನ ಕಡೆಗೆ ಸಾಗಲು ಇರುವ ಅತ್ಯಂತ ಸಹಜ ಹಾಗೂ ಸುಲಭ ಮಾರ್ಗವಾಗಿದ್ದರೂ ಸಹ, ಇದು ಅನೇಕ ಸಲ ಕೆಳಸ್ತರದಲ್ಲಿ ಅಸಹ್ಯಕರವಾದ ಮತಾಂಧತೆಯೆ ತೆಕ್ಕೆಗೆ ಸಿಲುಕಿ ಅಪಾಯಕಾರಿಯೂ ಆಗಿಬಿಡುತ್ತದೆ" ಎಂದು ಅದರ ಮತ್ತೊಂದು ಮುಖವನ್ನೂ ತೋರಿದ್ದಾರೆ! ಹೀಗಾಗಿಬಿಟ್ಟಾಗ ತಾನು ಆರಾಧಿಸುವ ರೀತಿ ಮಾತ್ರ ಸರಿ, ತಾನು ಪೂಜಿಸುವ ದೈವ ಮಾತ್ರ ಸತ್ಯ ಎನ್ನುವ ಮೂಢತೆಯಲ್ಲಿ ಸಿಲುಕಿದ ದುರ್ಬಲ ಮನಸ್ಸಿನ ವ್ಯಕ್ತಿ ಇತರೆಲ್ಲರ ಆಚರಣೆ, ಸಂಪ್ರದಾಯ, ದೇವರನ್ನು ತಿರಸ್ಕರಿಸಲು, ದ್ವೇಷಿಸಲು ಆರಂಭಿಸುತ್ತಾನೆ. ಆಗ ಭಕ್ತಿಯಿಂದ ಅರಳುವ ಪರಿಪೂರ್ಣ ತೃಪ್ತಭಾವ, ಅನನ್ಯ ಪ್ರೀತಿಯ ಅನುಭೂತಿಯನ್ನು ಹೊಂದಲು ಅವರಿಗೆ ಸಾಧ್ಯವಾಗುವುದಿಲ್ಲ. ನಿಜವಾದ ಭಕ್ತಿಯು ಮೂಢತೆಯನ್ನು ಅಂತ್ಯವಾಗಿಸುತ್ತದೆ.

 ಭಕ್ತಿಗೆ ಇಂಥದ್ದೇ ಎನ್ನುವ ಯಾವುದೇ ಒಂದು ವ್ಯಾಖ್ಯಾನವಿಲ್ಲ. ಅದಕ್ಕೆ ಅದರದ್ದೇ ಆದ ಸಿದ್ಧಾಂತವಾಗಲೀ, ನಿಯಮ ಅಥವಾ ತೀರ್ಮಾನಗಳಿಲ್ಲ. ಅದೊಂದು ಉತ್ಕಟ ಭಾವಾಭಿವ್ಯಕ್ತಿ. ತಾದಾತ್ಮ್ಯತೆಯನ್ನು ಹೊಂದು ಪರಿ. ಈ ಅನುಭೂತಿಯನ್ನು ಆಸ್ವಾದಿಸಬಹುದು, ಆನಂದಿಸಬಹುದೇ ವಿನಃ ಅಕ್ಷರಗಳಲ್ಲಿ ಹಿಡಿದಿಡಲಾಗದು. ವಿವರಿಸಲು ಸಾಧ್ಯವಾಗುವಂಥದ್ದು ಅನುಭವವಾಗಿಬಿಡುತ್ತದೆ. ಅನುಭೂತಿಯನ್ನು ದಾಟಿಸಲು ಹೋದರೆ ಅದು ತೆಳುವಾಗಿಬಿಡುವುದು. ಮತ್ತೊಬ್ಬರ ಅರಿವಿಗೆ ದಕ್ಕದು. ಆದರೆ ಭಕ್ತಿಯ ಪರಿಯನ್ನು, ವಿಧಗಳನ್ನು, ಪರಿಣಾಮಗಳನ್ನು ಮತ್ತು ಆ ಮೂಲಕ ಪಡೆಯಬಹುದಾದಂತಹ ಅಪರಿಮಿತ ಫಲವನ್ನು ವಿವರಿಸಬಹುದಷ್ಟೇ. ಹೀಗಾಗಿ ಯಾರೆಷ್ಟೇ ವಿಧಗಳಲ್ಲಿ ವಿವರಿಸಿದರೂ ಕಡೆಗೆ ಭಕುತಿಯು ಅವರವರ ಭಾವಕ್ಕೆ ಬಿಟ್ಟಿದ್ದಾಗಿದೆ. ಭಕ್ತಿಯನ್ನು ಸಾಬೀತು ಮಾಡುವುದು ಕಠಿಣ. ಹಾಗೆಂದ ಮಾತ್ರಕ್ಕೆ ಅದು ಸುಳ್ಳು ಎಂದಾಗದು. ಸತ್ಯ, ಅನುಭವಕ್ಕಷ್ಟೇ ವೇದ್ಯ; ಇದು ಭಕ್ತಿಯ ನಿಜವಾದ ಸೌಂದರ್ಯ.

 (2021ರ ಹೊಸದಿಗಂತ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ ಲೇಖನ.)

**********

~ತೇಜಸ್ವಿನಿ ಹೆಗಡೆ.