[ಶ್ರೀಯುತ ಡಿ.ವಿ.ಜಿಯವರ ಜನ್ಮದಿನದ ಸ್ಮರಣಾರ್ಥ ಅವರ ಕಗ್ಗಗಳನ್ನಾಧರಿಸಿ ಆಸೆ/ಮೋಹದ ಮೇಲೊಂದು ಪುಟ್ಟ ಲೇಖನ. ]
‘ಕನ್ನಡದ ಭಗವದ್ಗೀತೆ’ ಎಂದೇ ಪ್ರಸಿದ್ಧವಾಗಿರುವ ಶ್ರೀಯುತ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿ.ವಿ.ಜಿ) ಅವರ ಮಹೋನ್ನತ ಕೃತಿಯಾದ ಮಂಕುತಿಮ್ಮನ ಕಗ್ಗದಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ಜಗತ್ತಿಗೆ ಸಂಬಂಧಿಸಿದ ಅನೇಕ ರಹಸ್ಯಗಳು ಅಡಗಿಕೊಂಡಿವೆ. ಪ್ರತಿ ಕಗ್ಗವೂ ಒಂದು ಹೊಸ ಕಗ್ಗಂಟನ್ನು ಒಡೆದು, ಸೂಕ್ಷ್ಮವಾಗಿ ಬಿಡಿಸಿ ಒಂದು ಬೆರಗನ್ನು ಹೊಸ ಹೊಳಹನ್ನು ನಮ್ಮಲ್ಲಿ ಮೂಡಿಸುತ್ತದೆ. ಹೀಗಾಗಿಯೇ ಅನೇಕ ಮಹಾನ್ ವಿದ್ವಾಂಸರು ಡಿ.ವಿ.ಜಿ.ಯವರ ‘ಮಂಕುತಿಮ್ಮನಕಗ್ಗ’ವನ್ನು ಮೆಚ್ಚಿದ್ದಾರೆ, ಒಪ್ಪಿದ್ದಾರೆ, ಹೊಗಳಿದ್ದಾರೆ, “ವಿಸ್ತರದ ದರುಶನಕೆ ತುತ್ತ ತುದಿಯಲಿ ನಿನ್ನ ಪುಸ್ತಕಕೆ ಕೈ ಮುಗಿದೆ – ಮಂಕುತಿಮ್ಮ” ಎಂದು ರಾಷ್ಟ್ರಕವಿ ಕುವೆಂಪು ಅವರು ವಿನಮ್ರರಾಗಿ ನಮಿಸಿದ್ದಾರೆ. ಕಗ್ಗ ರಸಧಾರೆಯನ್ನು ಹನಿಹನಿಯಾಗಿ ಸವಿಯುವಾಗ ನಮಗೂ ಇದು ಬಹಳ ಸತ್ಯ ಎಂಬುದು ಅರಿವಾಗುವುದು.
ಚಿಕ್ಕಂದಿನಲ್ಲಿ ಅಮ್ಮ ಕಲಿಸಿಕೊಟ್ಟ ಗಣಪತಿಯ ಮೇಲಣ ಭಜನೆಯೊಂದನ್ನು ಇಂದಿಗೂ ನಮ್ಮ ಮನೆಯಲ್ಲಿ ತಪ್ಪದೇ ಹೇಳಲಾಗುತ್ತದೆ. ಅದರ ಒಂದು ಸಾಲು ಹೀಗೆ ಬರುವುದು - ‘ಮೂಷಿಕ ವಾಹನ ಮೋದಕ ಹಸ್ತ, ಪಾಶಾಂಕುಶಧರ ಪರಮ ಪವಿತ್ರ...’- ಆದರೆ ಇಷ್ಟು ಚಿಕ್ಕ ಸಾಲಿನೊಳಗೆ ಎಷ್ಟೆಲ್ಲಾ ಅರ್ಥಗಳಿವೆ ಎಂಬುದು ಅಂದು ಗೊತ್ತಾಗಿರಲಿಲ್ಲ. ಕ್ರಮೇಣ ಗೀತೆಯ ಕೃಷ್ಣನ ಸಾರದ ಜೊತೆಗೆ ಡಿ.ವಿ.ಜಿ.ಯವರ ಕಗ್ಗ ರಸಧಾರೆಯನ್ನು ಬೆರೆಸಿ ಹನಿಯಾಗಿ ಒಳಗಿಳಿಸಿದಂತೇ, ಮುಸುಕೂ ತುಸು ತೆರೆಯುತ್ತಾ ಹೋಯಿತು.
ಬಾಂಧವ್ಯದಿಂದ ಆರಂಭವಾಗುವ ಈ ನಂಟಿನ ಅಂಟು, ಮೆಲ್ಲನೆ ಆಸೆಯನ್ನು ಬೆಸೆದು, ಅದೇ ದುರಾಸೆಯಾಗಿ ಬೆಳೆದು, ಅಲ್ಲಿಂದ ಮೋಹದ ಹೆಮ್ಮರವಾಗಿ ಜಿಗಿದು, ಮದವಾಗಿ ಹಬ್ಬಿ, ಅವಿವೇಕದ ಫಲದಿಂದ ಬುದ್ಧಿನಾಶವಾಗುವುದೆಂದು ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಅದನ್ನೇ ಶ್ರೀಯುತ ಡಿ.ವಿ.ಗುಂಡಪ್ಪನವರು ತಮ್ಮ ಅನೇಕ ಕಗ್ಗದಲ್ಲಿ ಬಹಳ ಅರ್ಥವತ್ತಾಗಿ ವಿವರಿಸುತ್ತಾ ಹೋಗಿದ್ದಾರೆ.
ದಾಸರೋ ನಾವೆಲ್ಲ ಶುನಕನಂದದಿ ಜಗದ |
ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ||
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹುವು |
ವಾಸನಾಕ್ಷಯ ಮೋಕ್ಷ - ಮಂಕುತಿಮ್ಮ ||- ಹೇಗೆ ನಾಯಿಯು ವಸ್ತುವಿನ ನೋಟ ಹಾಗೂ ವಾಸನೆಯ ಸೆಳೆತಕ್ಕೆ ಸಿಲುಕಿ ಅದರ ಹಿಂದೆ ಸುತ್ತುವುದೋ, ಹಾಗೇ ನಾವು ಜಗತ್ತಿನಲ್ಲಿ ನಮ್ಮನ್ನು ಆಕರ್ಷಿಸುವ ವಸ್ತು-ವಿಷಯಗಳ ಬಯಕೆಯ ದಾಸರಾಗಿಬಿಡುತ್ತೇವೆ. ಚಿತ್ತಾಕರ್ಷಣೆಗಳೆಲ್ಲಾ ಹೊರಗಿದ್ದರೆ ಅವುಗಳನ್ನು ಹೊಂದುವ ಆಸೆಯ ಕೊಂಡಿ ನಮ್ಮೊಳಗೆ ಇದ್ದಿರುತ್ತದೆ. ಮುಂದೆ ಈ ಬಯಕೆಯೇ ಬಲಿತು ‘ಇದು ನನ್ನ ಸ್ವತ್ತು, ನಾನದರ ಒಡೆಯ’ ಎಂಬ ಮೋಹದ ಬಲೆಗೆ ಸಿಲುಕಿ, ಅದು ಬಿಡಿಸಿಕೊಳ್ಳಲಾಗದ ಸಂಕೋಲೆಯಾಗಿಬಿಡುತ್ತದೆ. ಹೀಗಾಗಿ ಈ ಕೊಂಡಿ ಕ್ಷಯಗೊಂಡಾಗಲೇ ಮೋಕ್ಷ ಸಿಗುವುದು ಎಂಬುದು ಈ ಕಗ್ಗದ ಸಾರ.
ಹಾಗೆ ನೋಡಿದರೆ ಡಿ.ವಿ.ಜಿ.ಯವರು ತಮ್ಮ ಮತ್ತೊಂದು ಕಗ್ಗದಲ್ಲಿ ಮೋಹಪಾಶಗಳೆಲ್ಲಾ ಆ ಭಗವಂತನದೇ ಲೀಲೆ, ಅವನಾಡುವ ಮಾಯೆ ಎಂದೂ ಸಾರಿಬಿಡುತ್ತಾರೆ.
ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು|
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ||
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ|
ಮೋಸದಾಟವೋ ದೈವ - ಮಂಕುತಿಮ್ಮ|| - ಚಿನ್ನ, ವಜ್ರಗಳು ಮೂಲದಲ್ಲಿ ಕಪ್ಪಾಗಿದ್ದು, ಮಣ್ಣು, ಹೊಲಸು ಮೆತ್ತಿಕೊಂಡು ಕೊಳಕಾಗಿರುತ್ತವೆ. ಅವುಗಳನ್ನು ಹೊರತೆಗೆದು, ಚೆನ್ನಾಗಿ ತೊಳೆದು, ಬೆಂಕಿಯಲ್ಲಿ ಕಾಯಿಸಿಯೋ, ಯಂತ್ರದಲ್ಲಿ ಕೊರೆದೋ ಸಾಣೆಹಿಡಿದು ಅವುಗಳ ನಿಜಗುಣವನ್ನು ಹೊರತರದೇ ಹೋದರೆ ಕೊನೆಯವರೆಗೂ ಅವೆಲ್ಲಾ ಬರಿಗಣ್ಣಿಗೆ ಕಲ್ಲಿನ ಚೂರಿನಂತೇ ಕಂಡುಬಿಡುತ್ತವೆ. ಅಂತೆಯೇ ಭಗವಂತ ಹುಟ್ಟಿದ ಪ್ರತಿಯೊಬ್ಬ ಜೀವಿಯನ್ನೂ ಸಕಲ ವಿಧದಲ್ಲಿ ಪರೀಕ್ಷೆಗೊಳಪಡಿಸಿ, ತನ್ನ ಸೃಷ್ಟಿಯ ಮಹತ್ತನ್ನು ತಾನೇ ಸಾಣೆಹಿಡಿಯುತ್ತಾನೆ. ಸಂಕಷ್ಟಗಳನ್ನಿತ್ತು, ಸುಖಗಳನ್ನೂ ಕೊಟ್ಟು, ಆಮಿಷಗಳನ್ನು ಒಡ್ಡಿ, ಮೋಹದ ಪಾಶದಲ್ಲಿ ಸುತ್ತಿ - ಹೀಗೆ ಅನೇಕ ವಿಧದಲ್ಲಿ ಪ್ರಯತ್ನಿಸಿ, ಹುಲು ಮಾನವರ ತೊಳಲಾಟವನ್ನು, ಒದ್ದಾಟವನ್ನು ಕಿರುಗಣ್ಣಿನಲ್ಲಿ ವೀಕ್ಷಿಸುತ್ತಾ ಹೋಗಿತ್ತಾನೆ. ಈ ಆಸೆ, ಮೋಹಗಳೆಲ್ಲಾ ವಾಸನಾ ರೂಪದಲ್ಲಿ ಜನ್ಮಾಂತರಗಳನ್ನು ಪ್ರವೇಶಿಸಿ ಕಾಡುತ್ತವೆ ಎಂಬುದನ್ನೂ ವಿವರಿಸುತ್ತಾ ಹೋಗಿದ್ದಾರೆ. ಪರಮಾತ್ಮನ ಈ ಮೋಸದಾಟವನ್ನು ಅರಿಯಲಾಗದ ಮಾನವ, ಆ ವರ್ತುಲದೊಳಗೇ ಸಿಲುಕಿಕೊಂಡುಬಿಡುವನು. ಅಂತಹ ವ್ಯಕ್ತಿಯನ್ನು ಮೋಹ ಹೇಗೆ ಯಾತನೆಗೆ ದೂಡುವುದು ಎಂಬುದನ್ನು ಈ ಕೆಳಗಿನ ಕಗ್ಗವೊಂದಗೆ ಹೀಗೆ ಸ್ಫುಟವಾಗಿ ವಿವರಿಸಿದ್ದಾರೆ –
ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ|
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ|
ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ|
ವಣುವಣುವೆ ಬಿಗಿಯುವುವೊ - ಮಂಕುತಿಮ್ಮ ||
ಆಸೆಯೆಂಬ ಬಿಸಿಲುಗುದುರೆ ಯನ್ನೇರಿ, ಮೋಹದ ಸವಾರಿ...
ಜೀವಿ ಎಂದಮೇಲೆ ಯಾವುದೇ ವಸ್ತು/ವ್ಯಕ್ತಿಯ ಜೊತೆಗೆ ಒಂದು ನಂಟು/ಸಂಬಂಧ ಬೆಳೆದೇಬೆಳೆಯುತ್ತದೆ. ಹುಟ್ಟಿನಿಂದ ಅಂಟುವಂಥವು ಒಂದೆಡೆಯಾದರೆ, ಬುದ್ಧಿಯಿಂದ, ಬಯಸಿ ಬೆಳೆಸಿಕೊಳ್ಳುವ ಸಂಬಂಧಗಳು ಮತ್ತೊಂದೆಡೆ. ರಕ್ತಸಂಬಂಧಗಳ ಜೊತೆಗೆ ಬಂಧ ಅನಿವಾರ್ಯ, ಸಹಜ. ಆದರೆ ಎಲ್ಲವೂ ಒಂದು ಮಿತಿಯಲ್ಲಿದ್ದರೆ ಸಹನೀಯವಾಗಿರುವುದು, ಅಗಲುವಿಕೆಯ ನೋವಿನ ತೀವ್ರತೆ ಕಡಿಮೆಯಾಗಿ ಅದರಿಂದ ಬದುಕೂ ಹಿತವಾಗಿರುವುದು ಎಂಬುದನ್ನು ಅವರ ಈ ಕೆಳಗಿನ ಕಗ್ಗದಲ್ಲಿ ಕಾಣುತ್ತೇವೆ.
ಸೆಳೆಯುತಿರ್ಪುದೊಂದು ಹೊರಬೆಡಗಿನೆಳೆಗಳೆ|
ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು||
ಎಳೆದಾಟವೇಂ ಋಣಾಕರ್ಷಣೆಯೋ? ಸೃಷಿ ವಿಧಿ |
ಯೊಳತಂತ್ರವೋ? ನೋಡು - ಮಂಕುತಿಮ್ಮ||
ನಮ್ಮ ಧರ್ಮಶಾಸ್ತ್ರವು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ - ಈ ಅರಿಷಡ್ವರ್ಗಳನ್ನು ಮನುಷ್ಯನ ಮನಶ್ಶಾಂತಿಯನ್ನು ಕದಡುವ ಶತ್ರುಗಳು ಎಂದು ಹೇಳಿದೆ. ಈ ಆರು ಭಾವಗಳೂ ಒಂದಕ್ಕೊಂದು ಕೊಂಡಿಯನ್ನು ಬೆಸೆದುಕೊಂಡಿರುತ್ತವೆ. ಆದರೆ ಕಾಮ, ಕ್ರೋಧಗಳು ತಮ್ಮನ್ನು ಹೊತ್ತ ವ್ಯಕ್ತಿಯ ವ್ಯಕ್ತಿತ್ವವನ್ನು ಸುಡುವಂತಹ ಭಾವಗಳಾದರೆ, ಈ ಮೋಹವೆಂಬುದು ಆತ್ಮೀಯಭಾವದ ಒಂದು ನಯವಂಚಕ ಮುಖ. ಇದು ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ ಅದರ ಬಂಧ ಬಿಗಿಯಾಗುತ್ತಾ ಹೋಗಿ ಅಪಾಯಕಾರಿಯಾಗುತ್ತದೆ ಎಂದು ಸ್ವಾಮಿ ಪುರುಷೋತ್ತಮಾನಂದರು ಒಂದೆಡೆ ಹೇಳುತ್ತಾರೆ. ಮೋಹದ ಭೀಕರತೆಯು ಅದೆಷ್ಟೋ ಬಾರಿ ‘ತನಗೆ ದಕ್ಕದ್ದು, ತನ್ನ ಬಿಟ್ಟುಹೋಗಿದ್ದು ಬೇರೊಬ್ಬನಿಗೆ ಸಿಗಬಾರದು’ ಎಂಬ ಕಡು ಲೋಭದ ರೂಪವನ್ನು ಹೊಂದಿ ಕೊಲೆಗಾರನನ್ನಾಗಿಸಿಬಿಡುವ ಅಪಾಯವಿದೆ! ಅದರ ಮಾಯಾವಿಗುಣವನ್ನು ವಿವರಿಸುತ್ತಾ ಪುರುಷೋತ್ತಮಾನಂದರು- “ಜನರನ್ನು ಮೋಹ ಪಾಶದಿಂದ ಪಾರುಮಾಡಹೊರಟ ಮಹಾತ್ಮರೆನಿಸಿಕೊಂಡವರೇ ಮೋಹದ ಬಲೆಯೊಳಗಿರುವುದು ಕಂಡುಬರುತ್ತಿರುವಾಗ ಅದರ ಭೀಕರತೆಯ ಕುರಿತು ಏನೆಂದು ಹೇಳಲಿ?” ಎಂದು ವಿವರಿಸಿದ್ದಾರೆ.
ಪ್ರಾಜ್ಞರು ಮೋಹವನ್ನು ಮೋಹಿನಿಗೆ ಹೋಲಿಸಿದ್ದಾರೆ. ಮೋಹಿನಿ ಮೇಲ್ನೋಟಕ್ಕೆ ಬಹಳ ಸುಂದರವಾಗಿ ಕಾಣುವ ಯುವತಿ. ಭಸ್ಮಾಸುರನು ಆಕೆಯನ್ನು ಬಯಸಿ, ಅವಳ ಪ್ರೇಮಪಾಶದೊಳು ಸಿಲುಕಿ, ಬೆನ್ನು ಹತ್ತಿ ಅಪ್ಪಿಕೊಳ್ಳಲು, ತಾನೇ ಸುಟ್ಟು ಭಸ್ಮವಾಗಿಬಿಡುತ್ತಾನೆ. ಮೋಹವೆಂಬ ಮಾಯಾಂಗನೆಯೂ ಹೀಗೆಯೇ. ಮೇಲ್ನೋಟಕ್ಕೆ ಆಸೆ, ದುರಾಸೆಗಳಿಂದ ಸಿಂಗರಿಸಲ್ಪಟ್ಟ ನಯನಮನೋಹರಿಯಂತಹ ಸುಂದರ ಈ ಕುಣಿಕೆಗೆ ಒಮ್ಮೆ ಸಿಲುಕಿಬಿಟ್ಟರೆ ಪ್ರತಿಕ್ಷಣವದು ದಹಿಸಿವುದು, ಕೊನೆಗೆ ಪೂರ್ಣ ವ್ಯಕ್ತಿತ್ವವನ್ನೇ ಸುಟ್ಟುಬಿಡುವುದು!
ಮೂರರಲ್ಲೇ ನೂರು ಭಾವ!
ಆಶಾಪಾಶದಿಂದ ಬಂಧಿಸಲ್ಪಟ್ಟ ಈ ಮೋಹವನ್ನು ನಮ್ಮ ಉರುಳಾಗಿಸಿಕೊಳ್ಳುವ ಬದಲು, ಬಲವನ್ನು ನೀಡುವ ಊರುಗೋಲಾಗಿಸಿಕೊಳ್ಳಲೂ ಸಾಧ್ಯವಿದೆ ಎಂಬುದನ್ನೂ ನಾವು ಡಿ.ವಿ.ಜಿಯವರ ಈ ಕೆಳಗಿನ ಕಗ್ಗದ ಮೂಲಕ ತಿಳಿಯಬಹುದು.
ಸುಂದರದ ರಸ ನೂರು; ಸಾರವದರೊಳು ಮೂರು|
ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ|
ಒಂದರಿಂದೊಂದು ಬೆಳೆಯಾದಂದು ಜೀವನವು|
ಚೆಂದಗೊಂಡುಜ್ಜುಗವೋ - ಮಂಕುತಿಮ್ಮ|| - ಇಲ್ಲಿ ಗುಂಡಪ್ಪನವರು ಮೋಹಕ್ಕೆ ತುಸು ಭಿನ್ನ ಸ್ವರೂಪವನ್ನು ನೀಡಿದ್ದಾರೆ. ಈ ಕಗ್ಗದ ಪ್ರಕಾರ ಜಗತ್ತಿನಲ್ಲಿ ನೂರಾರು ರಸಗಳಿದ್ದಿರಬಹುದು, ಆದರೆ ಸಾರಗಳಿರುವುದು ಮೂರೇ - ಮೋಹ, ಕರುಣೆ ಮತ್ತು ಶಾಂತಿ. ಈ ಮೂರು ಸಾರಗಳು ಪರಸ್ಪರ ಹೊಂದಿಕೊಂಡು ಬೆಳೆದರೆ ಮನುಷ್ಯನ ಬದುಕು ಹಸನಾಗುತ್ತದೆ ಎನ್ನುವುದೇ ಈ ಕಗ್ಗದ ಸಾರ.
ವೀರ, ಶೃಂಗಾರ, ಭೀಭತ್ಸ, ಭಯಾನಕ ಮುಂತಾದ ರಸಗಳೆಲ್ಲಾ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಸಂದರ್ಭದಲ್ಲಿ ವಿವಿಧ ವಸ್ತು/ವ್ಯಕ್ತಿಯನ್ನು ಕಂಡಾಗಿ ಹುಟ್ಟುವ ಭಾವಗಳು. ಆದರೆ ಈ ಎಲ್ಲಾ ರಸಗಳ ಸಾರ ಅಡಗಿರುವುದು ಮೋಹ, ಕರುಣೆ ಮತ್ತು ಶಾಂತಿಯಲ್ಲಿ ಮಾತ್ರ ಎನ್ನುತ್ತಾರೆ ಡಿ.ವಿ.ಜಿಯವರು. ನಾನು, ನನ್ನದು ಎಂಬ ಮಮಕಾರದಿಂದ ವಿವಿಧ ರಸಗಳ ಉತ್ಪತ್ತಿಯಾಗಿ ಅದು ಮೋಹಕ್ಕೆ ಕಾರಣವಾಗುವುದು. ಈ ಮಮಕಾರ ಮನುಷ್ಯನಲ್ಲಿ ಬಹಳ ಸಹಜ. ಬದುಕಿನಲ್ಲಿ ಇದು ಒಂದು ಹಂತದವರೆಗೆ ಅಗತ್ಯವೂ ಹೌದು. ಆದರೆ ಈ ಮಮಕಾರ ಬಹುಬೇಗ ಮೋಹದ ರೂಪವನ್ನು ಪಡೆದುಕೊಂಡು ಬಿಡುತ್ತದೆ ಮತ್ತು ಇದರಲ್ಲಿಯೇ ಎಲ್ಲಾ ಬಗೆಯ ನೂರಾರು ರಸಗಳು ಅಡಗಿಕೊಂಡಿರುತ್ತವೆ. ಆದರೆ, ಯಾವಾಗ ನಾನು ನಿಮಿತ್ತ ಮಾತ್ರ, ಎಲ್ಲವೂ ಅವನದೇ ಇಚ್ಛೇ ಎಂಬ ಉದಾರತೆ ಹುಟ್ಟುವುದೋ, ಆಗಲೇ ಬಂಧಿಸಿಟ್ಟುಕೊಂಡಿದ್ದರ ಮೇಲೆ ಕಾರುಣ್ಯವುಕ್ಕಿ, ಅವುಗಳಿಗೆಲ್ಲಾ ಬಿಡುಗಡೆ ದೊರಕುವುದು. ಸಹಜೀವಿಗಳ ಮೆಲೆ ಗೌರವ, ಪ್ರೀತಿ ಹುಟ್ಟುವುದು. ಬಂಧಿಸಿಡುವ ದುರಾಸೆಯ ಬದಲು ಸಹಬಾಳ್ವೆ ಮಾಡುವ ಸದ್ವಿಚಾರ ಮೂಡುವುದು. ಆಗ ನಾವು ಮನಶ್ಶಾಂತಿಯನ್ನು ಹೊಂದುವುದು ಸಾಧ್ಯ ಎಂಬ ಅದ್ಭುತ ಹೊಳಹನ್ನು ಮೇಲಿನ ಕಗ್ಗದಲ್ಲಿ ನಾವು ಕಾಣುತ್ತೇವೆ.
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು!
ಸ್ವಾಮಿ ಪುರುಷೋತ್ತಮನಾಂದರು ಕೂಡ ಮೋಹವನ್ನು ಋಣಾತ್ಮಕತೆಯಿಂದ ಧನಾತ್ಮಕತೆಗೆ ತಿರುಗಿಸುವುದು ಹೇಗೆ ಎಂಬುದನ್ನು ಬಹಳ ಸರಳವಾಗಿ, ಸುಂದರವಾಗಿ ವಿವರಿಸಿದ್ದಾರೆ. ಈ ಅರಿಷಡ್ವರ್ಗಳು ನಮ್ಮ ಶತ್ರುಗಳಲ್ಲ, ಶಕ್ತಿಗಳು, ಅವುಗಳನ್ನು ನಮ್ಮ ಬಲವಾಗಿ ಪರಿವರ್ತಿಸಿಕೊಳ್ಳುವ ವಿವೇಕವನ್ನು ಸಜ್ಜನರ ಸಂಗದಿಂದ, ಅಧ್ಯಾತ್ಮ ಚಿಂತನೆಗಳಿಂದ, ಪರಮಾತ್ಮನ ಧ್ಯಾನದಿಂದ ಹೊಂದಬಹುದು ಎಂದಿದ್ದಾರೆ. ಅದು ನನ್ನದು, ಇದು ನನ್ನದು ಎಂಬ ಆಸೆಗೆ, ಮೋಹಕ್ಕೆ ಅಂಟಿಕೊಳ್ಳುವುದರ ಬದಲು ನಾನು ಆ ಪರಮಾತ್ಮನಿಗೆ ಸೇರಿದವನು, ಅವನು ಮಾತ್ರ ನನ್ನವನು ಎಂಬ ಅನುಪಮ ಬಂಧವನ್ನು ಬಿಗಿಯಾಗಿ ಹಿಡಿದು, ಆತನ ಇರುವಿಕೆಯನ್ನು ಅರಿಯುವ ಅದಮ್ಯ ಆಸೆಯನ್ನು ತುಂಬಿಕೊಂಡು, ಅಲೌಕಿಕತೆಯ ಮೋಹಕ್ಕೆ ತಿರುಗಿಸಿಕೊಂಡರೆ ಈ ಎಲ್ಲಾ ಭಾವಗಳು ಬಹು ದೊಡ್ಡ ಶಕ್ತಿಯಾಗಿ ನಮ್ಮನ್ನು ಸರಿಯಾದ ದಾರಿಯಲ್ಲೇ ಕೈಹಿಡು ಮುನ್ನೆಡೆಸುವವು ಎಂಬ ವಿಶೇಷ ಅರ್ಥವನ್ನು ಈ ಅರಿಷಡ್ವರ್ಗಗಳಿಗೆ ನೀಡಿದ್ದಾರೆ.
ಈಶಾವಾಸ್ಯೋಪನಿಷತ್ತಿನಲ್ಲೊಂದು ಶ್ಲೋಕ ಬರುತ್ತದೆ-
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್|| -
ಸೃಷ್ಟಿಯಲ್ಲಿರುವ ಸಕಲವೂ ಪರಮಾತ್ಮನ (ಬ್ರಹ್ಮನ) ಪ್ರಸಾದ, ಹೀಗಾಗಿ ಎಲ್ಲವೂ/ಎಲ್ಲರೂ ಅವನದೇ ಸ್ವತ್ತು. ಹೀಗಾಗಿ ಯಾವುದನ್ನೂ ಸ್ವಂತದ್ದೆಂದು ಭಾವಿಸದೇ, ತ್ಯಾಗಭಾವನೆಯಿಂದ ಸಹಜೀವಿಗಳೊಂದಿಗೆ ಹಂಚಿಕೊಳ್ಳುತ್ತಾ ಸುಖವನ್ನು ಅನುಭವಿಸು - ಎಂಬುದು ಈ ಶ್ಲೋಕದ ಒಟ್ಟೂ ತಾತ್ಪರ್ಯ. ಈ ವಿಶಾಲ ಮನೋಭಾವ, ಅರಿವು ನಮ್ಮಲ್ಲಿ ಮೂಡಿದಾಗ ‘ನಾನು, ನನ್ನದು, ನನ್ನ ಸ್ವತ್ತು’ ಎಂಬೆಲ್ಲಾ ಆಸೆಗಳು ತನ್ನಿಂದ ತಾನೇ ಮಾಯವಾಗುವವು. ಇದೇ ಭಾವವನ್ನು ನಾವು ವಚನ ಸಾಹಿತ್ಯದಲ್ಲಿ, ದಾಸರ ಕೀರ್ತನೆಗಳಲ್ಲೂ ಕಾಣುತ್ತೇವೆ.
ಮಮತೆಯ ಕೊಂಡಿಗೆ ಬೆಸೆದಿರುವ ಮೋಹಪಾಶಗಳನ್ನು ವಿಧಿ ಕತ್ತರಿಸಿದಾಗ ಆತ್ಮದ ಉದ್ಧಾರವಾಗುವುದು, ಹೀಗಾಗಿ ವಿಧಿಯಾಟಕ್ಕೆಂದೂ ಮರುಗದಿರು ಎಂಬ ಉತ್ತಮ ಸಂದೇಶವನ್ನು ಡಿ.ವಿ.ಜಿ ಅವರ ಈ ಕೆಳಗಿನ ಕಗ್ಗವು ನೀಡುತ್ತದೆ-
ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ|
ನಿನ್ನ ಮಹಿಮೆಯ ನೂಲ ವಿಧಿಯೆ ಪರಿದಂದು||
ಉನ್ನತಿಯಿನಾತ್ಮವನು ತಡೆದಿಡುವ ಪಾಶಗಳು|
ಛಿನ್ನವಾದಂದೆ ಸೊಗ - ಮಂಕುತಿಮ್ಮ ||
~ತೇಜಸ್ವಿನಿ ಹೆಗಡೆ
*****