ಅದು ಆಗೋದೇ ಹಾಗೆ! ಬರೆಯೋ ಮನಸು ಬಂದಾಗ ಸಮಯವಿರುವುದಿಲ್ಲಾ.. ಇಲ್ಲಾ ಏನಾದರೂ ಅಡೆ ತಡೆ ಇದ್ದೇ ಇರುತ್ತದೆ... ಇನ್ನು ಸಮಯ ಸಿಕ್ಕಾಗ ಬರೆಯೋ ಹುಕ್ಕಿ ಇರೊಲ್ಲಾ.. ಯಾಕೋ ಏನೂ ಬೇಡವೆನ್ನೋ ಉದಾಸೀನತೆ ಆವರಿಸುತ್ತದೆ. ಅವತ್ತೊಂದು ದಿನ ಹೀಗೇ... ಬರೀಲೇ ಬೇಕು ಅಂತಾ ಕೂತಿದ್ದೆ ಅಷ್ಟೇ... ಅದಿತಿ ಬಂದವಳೇ "ಅಮ್ಮಾ.. ನೀ ಲೆಪ್‍ಟಾಪ್ ನಲ್ಲಿ ಎಂತ ಬರೀತಾ ಇರ್ತೆ ಹೇಳು? ನಾನೂ ಬರೀತೆ.." ಎಂದು ಪಕ್ಕದಲ್ಲಿ ಕೂತೇ ಬಿಟ್ಟಳು. ಸರಿ.. ಬರೆದಿದ್ದ ಯಾವುದೋ ಒಂದು ಕವಿತೆಯನ್ನು ತೋರಿಸಿ ಓದಿದೆ. ಅವಳಿಗೆಷ್ಟು ಅರ್ಥವಾಯಿತೋ ಗೊತ್ತಿಲ್ಲ.. ಆಮೇಲೆ ೫-೬ ಬಾರಿ ಕವಿತೆಗಳ ಬಗ್ಗೆ, ಹಾಡನ್ನು ಬರೆಯೋದರ ಬಗ್ಗೆ ಕೇಳಿದ್ದಳು. ನಾನೂ ಅವಳಿಗರ್ಥವಾಗೋ ರೀತಿ ಏನೋ ಒಂದು ಹೇಳಿದ್ದೆ. ಆದರೆ ಇಂದು ಹೀಗೆ ಬಳಿ ಬಂದವಳೇ.. "ಅಮ್ಮಾ ನೀ ಇವತ್ತು ನನ್ನ ಕವಿತೆ ಬರಿ.. ನಾ ಬಸ್ಸಲ್ಲಿ ಬರ್ತಾ ಒಂದು ಕವಿತೆ ಕಟ್ಟಿದ್ದೆ.. ನಾನೇ ಹಾಡ್ತೆ.." ಎಂದು ಹೇಳ್ತಾ ಕೂತಳು. ಹಾಡೋವಾಗ ಒಂದು ಸಾಹಿತ್ಯವಿದ್ದರೆ ಅದನ್ನೇ ಮತ್ತೆ ಅವಳಲ್ಲಿ ಹೇಳಿಸಿ ನಾನು ಇದ್ದದನ್ನು ಇದ್ದ ಹಾಗೇ ಬರೆದುಕೊಳ್ಳುವಾಗ ಸ್ವಲ್ಪ ಬೇರೆ ಆಗಿತ್ತು. ಹಾಡ್ತಾ ಹಾಡ್ತಾ ಅವಳೇ ಅವಳ ಸಾಹಿತ್ಯವನ್ನು ತಿದ್ದುತ್ತಿದ್ದಳು! ಹೀಗೇ ಅವಳು ಹೇಳಿದ್ದನ್ನೇ ಬರೆದುಕೊಂಡು ಅವಳೇ ರಾಗ ಹಾಕಿ ಹಾಡಿದ್ದನ್ನೂ ರೆಕಾರ್ಡ್ ಮಾಡಿದೆ. ರಾಗ, ಸಾಹಿತ್ಯ, ಸಂಗೀತ ಎಲ್ಲವೂ ಅದಿತಿ ಹೆಗಡೆಯದ್ದೇ! :) ಕೇಳುವಾಗ.. ಬರೆದುಕೊಳ್ಳುವಾಗ ನನ್ನೊಳಗೆ ಅರಿಯದ ಪುಳಕ, ಸಂತಸ, ಹೆಮ್ಮ! ಸ್ವತಃ ನಾನು ಮೊದಲ ಸಲ ಬರೆದಾಗಲೂ ನನ್ನೊಳಗೆ ಹೀಗೆಲ್ಲಾ ಅನುಭೂತಿ ಆಗಿತ್ತೋ ಇಲ್ಲವೋ!
ಅದಿತಿಯ ಆ ಪುಟ್ಟ ಕವನ ಇಲ್ಲಿದೆ :-
(ಅವಳೇನು ಹೇಳಿದಳೋ.. ಹಾಡಿದಳೋ ಅದನ್ನು ಹಾಗೇ ನಿಮ್ಮ ಮುಂದಿರಿಸಿದ್ದೇನೆ:))
ಕೃಷ್ಣ ಕೃಷ್ಣ ಕೊಳಲು ಹಿಡಿದ ಕೃಷ್ಣ
ಕೃಷ್ಣ ಕೃಷ್ಣ ಕೊಳಲು ಹಿಡ್ಕೊಂಡು ಹಾಡು ಹೇಳ್ತಾನೆ..
ಕೃಷ್ಣ ಬರೀ ಬೆಣ್ಣೆ ತಿನ್ನೋದೇಕೆ?
ಕೃಷ್ಣ ನೀನು ಚಂದಮಾಮ ಇದ್ದಲ್ಲಿ ಹೋಗು...
ಕೃಷ್ಣ ಕೃಷ್ಣ ನಿನ್ನ ನವಿಲು ಗರಿ ಚೊಲೋ ಇದೆ
ಕೃಷ್ಣ ಕೃಷ್ಣ ನೀನ್ಯಾಕೆ ನವಿಲುಗರಿ ಹಾಕ್ಕೊಂಡಿದೀಯಾ..
ಕೃಷ್ಣ ಪುಟ್ಟ ಮಗು ಆಗಿ ತೊಟ್ಟಿಲಲ್ಲಿ ಮಲಗಿದ್ದಾನೆ (೨ ಸಲ)
ಕೃಷ್ಣ ಯಾಕೆ ಮಗು ಆಗಿ ತೊಟ್ಟಿಲಲ್ಲಿದ್ದಾನೆ?
ಕೃಷ್ಣ ಬಲರಾಮ್ ಕೃಷ್ಣ ಬಲರಾಮ್ (೨ ಸಲ)
ಬಲರಾಮ್ ಕೃಷ್ಣ ಬಲರಾಮ್ ಕೃಷ್ಣ... (೨ ಸಲ)
-ಅದಿತಿ ಹೆಗಡೆ.
(ಟಿಪ್ಪಣಿ :- ಚಂದಮಾಮ ಇದ್ದಲ್ಲೇ ಕೃಷ್ಣ ಯಾಕೆ ಹೋಗ್ಬೇಕು? ಎಂದು ನಾನು ಕೇಳಿದ್ದಕ್ಕೆ.. ಅವನು ಇರೋದೇ ಚಂದಮಾಮ ಇರೋ ಕಡೆ ಅಂತಪ್ಪಾ.... ಅಂದರೆ ಆಕಾಶದಲ್ಲಂತೆ...:) ಹಾಗೇ ಕಾರ್ಟೂನ್‍ನಲ್ಲಿ ನೋಡಿದ್ದಾಳಂತೆ ಕೃಷ್ಣ ಇದ್ದಲ್ಲಿ ಬಲರಾಮ್ ಇರ್ಲೇ ಬೇಕಂತೆ.. ಹಾಗಾಗಿ ಕೊನೆಯ ಎರಡು ಸಾಲುಗಳು! )