ಚಿತ್ರ ಕೃಪೆ: www.yobserver.com/reports/10015111.html |
ಈ ಸಂಜೆ ಎಂದಿನಂತಿಲ್ಲ ಎಂದೆನಿಸುತ್ತಿದೆ ನನಗೆ. ಏನೋ ಕಾತುರ....ಅರಿಯದ ತಳಮಳ. ಅದೆಷ್ಟು ತಿಂಗಳುಗಳಾದವೋ ಆತನನ್ನು ನಾನು ಕಾಣದೇ....ಮಾತನಾಡಿಸದೇ....ಸ್ಪರ್ಶಿಸದೇ. ಇಂದು ಅವನ ಭೇಟಿ ನಿಶ್ಚಿತ....ಆತನಿದ್ದಲ್ಲಿಗೇ ಸಾಗುತಿದೆ ನನ್ನ ಪಯಣ. ಗಮ್ಯ ದೂರವೇನಿಲ್ಲ...ಆದರೂ ಪ್ರತಿ ನಿಮಿಷವೂ ಅಸಹನೆಯನ್ನು ತರುತ್ತಿದೆ. ಉದ್ವೇಗದಿಂದ ನನ್ನ ಹಣೆಯ ಮೇಲೆ ಹೊಳೆಯುತಿದ್ದ ಸ್ವೇದ ಬಿಂದುಗಳನ್ನು ಕರಗಿಸಲು, ಮಂದವಾಗಿ ಬೀಸುತ್ತಿದ್ದ ತಂಗಾಳಿ ಕೂಡ ಸೋಲುತಿದೆ. ಅಗೋ... ಅಲ್ಲೇ ದೋರದಲ್ಲಿ ಕಾಣುತ್ತಿದ್ದಾನೆ...ಅವನೇ ಹೌದೋ ಅಲ್ಲವೋ? ಇಲ್ಲಾ ಈ ಹಾಳಾದ ರವಿಯ ಪ್ರಖರತೆಯಿಂದ ಉಂಟಾದ ಮರೀಚಿಕೆಯೋ...? ಮನಸೊಳಗೇ ಶಪಿಸುತ್ತಲೇ ಮತ್ತೂ ಕಣ್ಗಳನ್ನು ಹಿರಿದಾಗಿಸಿ ನೋಡಿದೆ. ಸಂಶಯವೇ ಇಲ್ಲ... ಇದು ಅವನೇ. ಕಡುನೀಲ ಬಣ್ಣದ ನಡುವೆ ಬಿಳಿ ಬಣ್ಣದ ಗೆರೆಗಳಿರುವ ಶರ್ಟ್ ತೊಟ್ಟು, ಶುಭ್ರವಾಗಿ ನಗುತ್ತಾ ನನಗಾಗಿ ಕಾಯುತ್ತಿರುವವನನ್ನು ಅಷ್ಟು ದೂರದಿಂದಲೇ ನೋಡಿ ಸಂತಸ ತಡೆಯಲಾಗಲಿಲ್ಲ. ಹಾರಿ ಆತನ ತೆಕ್ಕೆಯೊಳಗೆ ಸೇರಬೇಕೆಂದಿದ್ದ ನನ್ನ ಏನೋ ಜಗ್ಗಿದಂತಾಯಿತು. ಇಷ್ಟು ದಿನ ಕಾಣಲಾಗದಿದ್ದ ತವಕ, ಅಸಹನೆ, ಅರಿಯದ ಮುಜುಗರವನ್ನು, ಮುನಿಸನ್ನು ನನ್ನೊಳಗೆ ತುಂಬಲು, ಅವನ ಬಳಿಯಲ್ಲೇ.....ಆದರೆ ತುಸು ದೂರ ಸರಿದು ಕುಳಿತೆ.
ನನ್ನ ಈ ಪರಿಯನ್ನು ಕಂಡೋ ಏನೋ ಅವನು ಪಕ ಪಕನೆ ನಗುತ್ತಲೇ ಇದ್ದ....ಆಗೀಗ. ಆತನ ಅದೇ ಶುಭ್ರ ಬಿಳಿ ಹಾಲಿನಂತಹ ನಗುವ ಕಂಡಾಗಲೆಲ್ಲಾ ನನ್ನೊಳಗೆ ಸಂಚಲನ. ಸಾಕಿನ್ನು ಈ ಬಿಗುಮಾನ ಈಗಲೇ ಹೋಗಿ ಹಿಡಿಯಲೇ ಆ ನಗುವ ಎನ್ನುವಷ್ಟು ತವಕ. ಆತ ನನ್ನ ಸತಾಯಿಸುತ್ತಿರುವನೋ ಇಲ್ಲಾ ನಾನೇ ನನ್ನ ಸತಾಯಿಸುತ್ತಿರುವೇನೋ ಅರಿಯದ ಅಯೋಮಯ ಸ್ಥಿತಿಯಿಂದ ಅಸಹನೆ ಹೆಚ್ಚಾಗುತ್ತಿತ್ತು. ಬರುವುದಿದ್ದರೆ ಬಳಿ ಅವನೇ ಮೊದಲು ಬರಲೆಂಬ ನನ್ನ ಎಂದಿನ ಹಠಕ್ಕೇ ಮಣಿದಿರಬೇಕು... ಆತನೇ ಮೆಲ್ಲ ಮೆಲ್ಲನೆ ಅದೇ ನಗೆಯ ತುಳುಕಿಸುತ್ತಾ ಹತ್ತಿರ ಬರತೊಡಗಿದ. ಕಿರುಗಣ್ಣಿನಂದಲೇ ಅವನನ್ನು ನೋಡುತ್ತಾ, ತಡೆಯಲಾಗದೇ ಸೋತು....ಕಿರುನಗೆಯ ಮೂಲಕ ನಾನೂ ಸ್ವಾಗತಿಸಿದೆ. ಇದರಿಂದ ಹುಮ್ಮಸ್ಸು ಪಡೆದ ಆತ ತುಸುವೇ ನನ್ನ ಕಾಲ್ಬೆರಳುಗಳನ್ನು ಸೋಕಿ ಮತ್ತೆ ಹಿಂದೆ ಸರಿದು ಬಿಟ್ಟ. ಈಗ ನನ್ನೊಳಗೂ ಅವನದೇ ಹುಚ್ಚು ನಗು ತುಂಬಿತು. ಇಬ್ಬರೂ ಮನಸೋ ಇಚ್ಛೆ ನಕ್ಕುಬಿಟ್ಟೆವು. ಅಗೀಗೊಮ್ಮೆ ಕೇವಲ ಕಾಲ್ಬೆರುಗಳನ್ನಷ್ಟೇ ಸ್ಪರ್ಶಿಸಿ ದೂರ ಸರಿಯುತ್ತಿದ್ದ ಆತನ ಹೊಸ ಪರಿಯಿಂದ ನನ್ನ ಮನದ ತುಂಬೆಲ್ಲಾ ನೂರು ನವಿಲುಗಳ ನರ್ತನ!
"ಇವತ್ಯಾಕೆ ಇಷ್ಟೊಂದು ಮುನಿಸು ನನ್ಮೇಲೆ ತೇಜು?" ಮೌನ ಮುರಿದಿತ್ತು ಅವನ ಶಾಂತ ಗಂಭೀರ ವಾಣಿ.
"ಹೂಂ ಮತ್ತೆ... ಎಷ್ಟು ತಿಂಗ್ಳಾದ್ವು... ನಾವಿಬ್ರೂ ಹೀಗೆ ಸೇರದೇ...ನಿನ್ನ ನೋಡ್ದೇ ನಂಗೆ ತುಂಬಾ ಬೇಜಾರು ಬಂದಿತ್ತು ಗೊತ್ತಾ?" ನನಗೂ ಮೌನ ಸಾಕಾಗಿತ್ತು.
"ಆಹಾ.... ಇದಪ್ಪಾ ವರಸೆ.... ನಾನು ನೀನಿದ್ದಲ್ಲಿಗೇ ಬರೋಕೆ ಆಗೊತ್ತಾ? ಅದು ಅಸಾಧ್ಯ ಅಂತ ನಿಂಗೂ ಗೊತ್ತು. ನಾನೇನಾದ್ರೂ ಅಲ್ಲಿಗೆ ಬಂದ್ರೆ...ಗತಿ ಅಷ್ಟೇ! ಹಾಗಿದ್ಮೇಲೆ ನೀನೇ ತಾನೇ ಇಲ್ಲಿಗೆ ಬರೋದು? ನೀನು ಯಾವಾಗ್ಬೇಕಾದ್ರೂ ಬಾ....ನಾನಿಲ್ಲೇ ನಿನ್ನ ಸ್ವಾಗತಿಸ್ತೀನಿ ಅಂತ ಪ್ರಾಮಿಸ್ ಮಾಡಿದ್ದೆ ನೆನ್ಪಿದ್ಯಾ? ಹಾಗಿದ್ಮೇಲೆ ಯಾಕೆ ನೀನೂ ಬಂದಿಲ್ಲ? ಸಿಟ್ಟು ನಾನು ಮಾಡ್ಕೋಬೇಕು ನೋಡು ಈಗ.." ಬಾಣ ನನ್ನೆಡೆ ತಿರುಗಿದ್ದು ಕಂಡು ಸ್ವಲ್ಪ ಮೆತ್ತಗಾದೆ.
"ಹೌದಪ್ಪಾ.. ಎಲ್ಲಾ ನಂದೇ ತಪ್ಪು ಸರೀನಾ... ನೀನು ನನ್ನ ಹತ್ರ ಬರೋಕೆ ಆಗೊಲ್ಲಾ ಆಯ್ತು.... ಆದ್ರೆ ನಾನೂ ಮನ್ಸಾದಾಗೆಲ್ಲಾ ನಿನ್ನ ಹತ್ರ ಬರೋಕೆ ಆಗೊಲ್ಲ ಅನ್ನೋದೂ ನಿಂಗೆ ಗೊತ್ತಿರ್ಬೇಕು. ನನ್ನವರ, ಮನೆಯವರ ಕಣ್ತಪ್ಪಿಸಿ ಇಲ್ಲಿಗೆ ಬರೋದು ಅಂದ್ರೆ ಎಷ್ಟು ಕಷ್ಟ ಗೊತ್ತಾ? ಇವತ್ತಾದ್ರೂ ನಾನು ಎಷ್ಟು ಕಷ್ಟ ಪಟ್ಟು ಎಲ್ಲರಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿದ್ದೀನಿ... ನಾನೇನಾದ್ರೂ ಒಬ್ಳೇ ಇಲ್ಲಿಗೆ ಹೀಗೆ ನಿನ್ನ ನೋಡೋಕೆ ಬಂದಿದ್ದು ನನ್ನವ್ರಿಗೆ ಗೊತ್ತಾದ್ರೆ.... ಅಷ್ಟೇ! ನಿಂಗೇನೂ ಮಾಡೊಲ್ಲ... ಮಾಡೋಕೂ ಆಗೊಲ್ಲ ಬಿಡು... ಆದ್ರೆ ನನ್ಗತಿ? ಆದ್ರೂ ಬಂದಿದ್ದೀನಿ ನೋಡು..." ನನಗೇ ನನ್ನ ಸಾಹಸ ಕಂಡು ಹೆಮ್ಮೆ ಮೂಡಿತು.
"ತುಂಬಾ ಸಂತೋಷ ತೇಜು.... ಅದ್ಕೇ ನಂಗೆ ನೀನು ಅಂದ್ರೆ ಎಲ್ರಿಗಿಂತಲೂ ಪಂಚಪ್ರಾಣ. ನೀನು ಎಲ್ಲಿದ್ರೂ, ಹೇಗಿದ್ರೂ ನನ್ನ ಮರೆಯೊಲ್ಲ. ಬೇರೆಯೋರಿಗೆಲ್ಲಾ ನಾನು ಏನೂ ಅಂತ ಗೊತ್ತಿಲ್ಲ... ಆದ್ರೆ ನಿಂಗೆ ಮಾತ್ರ ನಾನಂದ್ರೆ ತುಂಬಾ ಮೆಚ್ಚು ಅಂತ ಚೆನ್ನಾಗಿ ಗೊತ್ತು..." ಅಭಿಮಾನ ಅವನ ಮೊಗದತುಂಬಾ ಬೆಳಗುತಿತ್ತು. ನನ್ನೊಳಗೇನೋ ಸಾರ್ಥಕತೆ.
"ಹ್ಮ್ಂ.... ಇಷ್ಟೆಲ್ಲಾ ಗೊತ್ತಿದ್ದೋನು.. ಅಪರೂಪಕ್ಕೆ ಬರ್ತೀನಿ ಅಂತ ಗೊತ್ತಿದ್ದೂ ಯಾಕೆ ಬರೀಕೈಲಿ ಬಂದೆ? ಇಲ್ಲೊಂದೇ ಅಲ್ದೇ ವಿದೇಶಗಳಿಗೂ ಮುತ್ತು, ಹವಳಗಳನ್ನ ಎಕ್ಸ್‌ಪೋರ್ಟ್ ಮಾಡ್ತೀಯಂತೆ.... ನಂಗೇ ಅಂತ ಅಟ್‌ಲೀಸ್ಟ್ ಒಂದು ಪರ್ಲ್ ಸೆಟ್ ತರೋಕೆ ಆಗ್ಲಿಲ್ವಾ? ಬರೀ ಕಂಜೂಸು ನೀನು" ನನ್ನ ಛೇಡಿಸುವಿಕೆ ಅವನಿಗೇನೂ ಹೊಸತಲ್ಲ.
"ಛೇ... ಏನು ಮಾತಾಡ್ತೀಯಮ್ಮಾ.... ಅಷ್ಟೊಂದು ದೊಡ್ಡ ಬಿಸ್ಸಿನೆಸ್ ಮ್ಯಾಗ್ನೆಟ್ ಆಗಿರೂ ನಾನೇ ನಿನ್ನೆದುರಿಗೆ ಸಲಾಮು ಹೊಡೀತಿದ್ದೀನಿ... ಹಾಗಿರೋವಾಗ ನೀನು ಯಕಃಶ್ಚಿತ್ ಪರ್ಲ್ ಸೆಟ್ ಕೇಳೋದಾ? ಇಡೀ ಮುತ್ತು, ಹವಳದ ಮೆನುಫ್ಯಾಕ್ಚರಿಂಗ್ ಫ್ಯಾಕ್ಟರಿಯೇ ನಿಂದು ಸರೀನಾ?" ಅವನ ನಾಟಕೀಯತೆಯೂ ನಂಗೆ ಹೊಸತಲ್ಲ.
"ಆಹಾ... ಇದಕ್ಕೇನೂ ಕಮ್ಮಿಯಿಲ್ಲ.... ಹೋಗ್ಲಿ ಬಿಡು. ನಾನು ಅವ್ರ ಹತ್ರ ಕೊಡ್ಸೋಕೆ ಹೇಳ್ತೀನಿ... ನೀನಿಲ್ದೇ ಹೋದ್ರೆ ನಂಗೆ ಅವ್ರಿಲ್ವಾ? ನಿಂದೇನು ಮಹಾ..."ಎಂದು ಧೈರ್ಯ ಮಾಡಿ ಕಟಕಿಯೇ ಬಿಟ್ಟೆ. ಇವನ ಹುಚ್ಚು ಕೋಪದ ಅರಿವು ನೋಡಿ ಬಲ್ಲೆ ನಾನು. ಆದರೂ ಇಂದು ಬಾಯಿ ತಪ್ಪಿ ಆಡಿಬಿಟ್ಟಿದ್ದೆ. ತುಸು ಅಧೈರ್ಯದಿಂದ ಅವನೆಡೆ ನೋಡಿದರೆ ಅವನೊಳಗೆ ಅದೇ ಶಾಂತ ಶುಭ್ರ ನಗು. ಅಬ್ಬಾ! ಬದುಕಿದೆ ಬಡಜೀವವೇ ಎಂದೆನಿಸಿತು.
"ಆಯ್ತಮ್ಮಾ.. ನೀನು ನಿನ್ನ ಆ ಅವರ ಹತ್ತಿರನೇ ತಗೋ.. ನಾನು ಕೊಟ್ರೂ ಅವ್ರು ಕೊಟ್ರೂ ಒಂದೇ. ಅವ್ರು ಕೊಡೋ ಮುತ್ತಿನ ಸೆಟ್‌ನಲ್ಲೂ ನನ್ನ ಫ್ಯಾಕ್ಟರೀ ಮುತ್ತುಗಳೇ ಇರೋದು ತಿಳ್ಕೋ..." ಅವನ ಈ ವರಸೆಗೆ ನಾನು ಸುಸ್ತು.
"ಹಂ....ಅಂತೂ ನೀನು ಕೊಡೊಲ್ಲ ಅಂತಾಯ್ತು. ಸರಿ.... ನಂಗೇನೂ ನಿನ್ನ ಆಸ್ತಿ ಬೇಡಪ್ಪಾ... ನನ್ನವ್ರು ನಂಗಾಗಿ ಏನು ಬೇಕಿದ್ರೂ ಕೊಡ್ತಾರೆ.." ಮೊದಲಿನ ಧೈರ್ಯದಿಂದಲೇ ಇರಿದಿದ್ದೆ.
"ಗೊತ್ತು... ನಿಂಗೆ ನನ್ನಷ್ಟೇ... ಅಲ್ಲಲ್ಲಾ... ನನಗಿಂತ ಒಂದು ಪಟ್ಟು ಹೆಚ್ಚು ನಿನ್ನ ಆ ಅವರು ನಿನಗಿಷ್ಟ ಎಂದು. ಅದ್ರ ಬಗ್ಗೆ ನಾನೆಂದೂ ಆಕ್ಷೇಪ ಎತ್ಲೇ ಇಲ್ಲ....ಆದ್ರೂ ನೀನು ನನ್ನ ಮರೀದೇ ನನಗಾಗಿ ಬರ್ತೀಯಲ್ಲಾ ಅದೇ ನಂಗೆ ಸಾಕು..." ಈ ಆತ್ಮೀಯತೆಯೇ, ನಿಸ್ವಾರ್ಥ ಪ್ರೀತಿಯೇ ಪ್ರತಿಸಲ ನನ್ನ ಇವನ ಕಡೆ ಸೆಳೆಯುವುದು.
"ಪ್ಲೀಸ್.. ನಂಗೋಸ್ಕರ.... ನನ್ನಿಷ್ಟದ ಆ ಹಾಡನ್ನು ಹಾಡ್ತೀಯಾ..?" ಏಕೋ ಆ ಭಾವಗೀತೆಯನ್ನು ಕೇಳಬೇಕೆನಿಸಿತು ಆ ಕ್ಷಣ.
"ನೀ ಕೇಳೊದು ಹೆಚ್ಚೋ..ನಾನು ಹಾಡೋದೋ... ಆದ್ರೆ ಪೂರ್ತಿ ಹಾಡು ಮರ್ತು ಹೋಗಿದೆ.... ಒಂದು ಚರಣ ನೆನ್ಪಿದೆ.... ಅಷ್ಟೇ ಹಾಡ್ತೀನಿ.. ಏನದು... ಹಾಂ..
ಸಾಗರನ ಹೃದಯದಲಿ ರತ್ನಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು.....
ಮಂದವಾಗಿದ್ದ ಗಾಳಿ ಈಗ ಸ್ವಲ್ಪ ಸ್ವಲ್ಪವಾಗಿ ವೇಗ ಪಡೆಯುತ್ತಿತ್ತು. ರವಿಗೂ ಶಶಿಗೂ ಬಾನಂಚಿನಲ್ಲಿ ಯುದ್ಧವಾಗುವ ಸಮಯ. ಹಗಲ ಸಾಮ್ರಾಜ್ಯವನ್ನು ಕೊನೆಗೊಳಿಸಿ, ಚಂದ್ರಮನಿಗೆ ಪಟ್ಟಾಭಿಷೇಕ ಮಾಡಿ, ತನ್ನ ರಾಜ್ಯ ಪ್ರತಿಷ್ಠಾಪನೆಗೆ ಇರುಳು ನಕ್ಷತ್ರಗಳ ಸೈನ್ಯದೊಂದಿಗೆ ಬರುವ ಹೊತ್ತು. ಇವನ ಸಾಮೀಪ್ಯ, ಈ ಹಾಡು, ನನ್ನ ಆ ಅವರ ನೆನಪು.... ನನ್ನೊಳಗೆ ಹೊಸ ಆಹ್ಲಾದತೆಯನ್ನು ತುಂಬಿತ್ತು. ಅದು ಹೇಗೋ ಮನದೊಳಗೇ ನಾನು ಗುನಗುನಿಸುತ್ತಿದ್ದ ನನ್ನಿಷ್ಟದ ಇನ್ನೊಂದು ಭಾವಗೀತೆ ತುಟಿಯ ದಾಟಿ ಹೊರ ಬರತೊಡಗಿತು...
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲನೆ ಒಂದು ದಿನ ಕಡಲನು
ಕೂಡಬಲ್ಲನೆ ಒಂದು ದಿನ
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ ಅಪಾರವಂತೆ
ಕಾಣಬಲ್ಲೆನೇ ಒಂದು ದಿನ
ಅದರೊಳು ಕರಗಲಾರನೇ ಒಂದು ದಿನ....
ಇನ್ನೂ ಹಾಡುತ್ತಿದ್ದೆನೋ ಏನೋ...ಪಕ್ಕದಲ್ಲಿದ್ದ ಅವನ ಸಿಟ್ಟಿನ ನಿಟ್ಟುಸಿರು ಕ್ರಮೇಣ ಬುಸುಗುಡ ತೊಡಗಿದ್ದು ನನ್ನ ಎಚ್ಚರಿಸಿತು. ಅವನೆಡೆ ನೋಡಿದರೆ ಮೊಗದ ಬಣ್ಣ ಕಡುಗಪ್ಪಾಗಿತ್ತು!
"ಏನಾಯ್ತು? ಯಾಕೋ ಸಿಟ್ಟು ಬಂದಹಾಗಿದೆ ತಮಗೆ!" ನನ್ನೊಳಗೇನೋ ತಳಮಳ.
"ಮತ್ತೆ.. ನೀನು ಹಾಡಿದ್ದು ಸರೀನಾ? ಯಾರೋ ಕಾಣದ ಕಡಲನ್ನು ಸೇರೋಕೆ.. ನೋಡೋಕೆ ನಿನ್ನ ಮನ ಇಷ್ಟ ಪಡೋದು ಅಂದ್ರೆ ಏನು? ನಿನ್ನೆದುರಿಗೇ ನಾನು ಕಾಣ್ತಿರೋವಾಗ... ಕಾಣದ ಕಡಲಿಗೆ ಹಂಬಲವಂತೆ... ಸುನೀಲವಂತೆ....ಗಂಭೀರವಂತೆ...ಕಾಣದೇನೇ ಅದು ಹೇಗೆ ಹೊಗಳ್ತಿದ್ದೀಯಾ ನೋಡು....ಶುದ್ಧ ತರ್ಲೆ....ನಿಂಗೆ ಮಾಡ್ತೀನಿರು ಇವತ್ತು..."ಎಂದವನೇ ಬೀಸಿ ನನ್ನ ಕೆನ್ನೆಗೆ ತನ್ನ ದೊಡ್ಡ ತೆರೆಯಿಂದ ಹೊಡೆದಾಕ್ಷಣ ಧಿಗ್ಗನೆದ್ದು ಕುಳಿತಿದ್ದೆ.
ವಾಸ್ತವಕ್ಕೆ ಮರಳಲು ಕೆಲನಿಮಿಷಗಳೇ ಬೇಕಾದವು. ನನ್ನ ಮೆಚ್ಚಿನ ಸಾಗರದ ಸವಿಗನಸಿನಿಂದ ನನ್ನೆಬ್ಬಿಸಿದ ಆ ಕಾಣದ ಕಡಲಿಗೆ ಹಿಡಿ ಶಾಪ ಹಾಕುತ್ತಿರುವಾಗಲೇ....ಪಕ್ಕದ ಮನೆಯಲ್ಲಿ ಯಾರೋ ಹಾಡೊಂದನ್ನು ಮತ್ತೆ ಮತ್ತೆ ಅರಚುತಿದ್ದರು.....
"ನೀರಿನ ಮೇಲೆ ಗುಳ್ಳೆ ಉಂಟು....ಬಾಳಿನ ಬಣ್ಣ ನೂರ ಎಂಟು...ನಮ್ಮದೇನಿದ್ರು ಬ್ಲಾಕ್ ಅಂಡ್ ವೈಟು...ಲೈಫು ಇಷ್ಟೇನೆ... ಲೈಫು ಇಷ್ಟೇನೆ..."
-ತೇಜಸ್ವಿನಿ ಹೆಗಡೆ.
-ತೇಜಸ್ವಿನಿ ಹೆಗಡೆ.