ಮಂಗಳವಾರ, ಆಗಸ್ಟ್ 3, 2010

ಈ ಸುದಿನ....ನನ್ನ ಪ್ರತಿಬಿಂಬವ ನಾ ಕಂಡ ದಿನ....

ಇಂದು ಬೆಳಗು ಎಂದಿನಂತಿಲ್ಲ ಎಂದೆನಿಸಿತು. ಅದೇ ಮೋಡ ಮುಸುಕಿದ ರವಿ... ಅದೇ ಚಿಟಿ ಚಿಟಿ ಮಳೆ... ಅದೇ ತಣ್ಣನೆ ಕೊರೆವ ಚಳಿ ಗಾಳಿ...ಅದೇ ಏರ ತೊಡಗಿದ ವಾಹನಗಳ ಗದ್ದಲ... ಎಲ್ಲವೂ ಅದೇ...ಆದರೂ ನನಗೆಲ್ಲದರಲ್ಲೂ ಏನೋ ಹೊಸತನ ಕಾಣತೊಡಗಿತ್ತು. ಕಾರಣ ಇಂದು ನನ್ನೊಳಗಿನ ನನ್ನ ನಾ ಪಡೆದ ದಿನ... ನನ್ನ ಪ್ರತಿಬಿಂಬವ ನಾ ಕಂಡ ದಿನ. ಈ ದಿನ ನನ್ನ ಅದಿತಿ ದಿನ. ನಮ್ಮಿಬ್ಬರ ಕನಸು, ಕಲ್ಪನೆಗಳು ಸಾಕಾರಗೊಂಡ ದಿನ... 

ಎಂದಿನಂತೇ ನಾನೆದ್ದು ಕಿಟಕಿಯ ಪರದೆ ಸರಿಸಿದಾಗ....ಸೂರ್ಯನ ಮಂದ ಕಿರಣ ಮೊದಲು ಬಿದ್ದು ಹೊಳೆದದ್ದು ಅವಳ ಮೊಗದ ಮೇಲೆ. ಇಂದಿನ ಸಂಭ್ರಮದ ಸವಿಗನಸ ಕಾಣುತ್ತಾ ಮಲಗಿದ್ದಕ್ಕೋ ಏನೋ ಅವಳ ಮುದ್ದು ಮುಖದ ಮೇಲೆ ಕಿರುನಗೆ ಹೌದೋ ಅಲ್ಲವೋ ಎಂಬಂತಿತ್ತು. ಮೃದು ಕೈಗಳು ಬೆಚ್ಚನೆ ಹೊದಕೆಯಿಂದ ಹೊರಬಂದದ್ದು ನೋಡಿ ಹಾಗೇ ಒಳಸರಿಸ ಹೋದರೆ ಪುಟ್ಟ ಅಂಗೈಯೊಳಗೆ ನನ್ನೆರಡು ಬೆರಳುಗಳು ಭದ್ರವಾಗಿ, ಏಳಲೇ ಮನಸಾಗಲಿಲ್ಲ. ವರುಷ ಅದಾಗಲೇ ಮೂರು ಕಳೆಯಿತಲ್ಲ ಇಂದಿಗೆ.... ನೋಡಿದರೆ ನಿನ್ನೆ ಮೊನ್ನೆಯಂತಿದೆ ಆ ದಿನದ ಸಂಭ್ರಮ, ರೋಮಾಂಚನ, ಅನಿರ್ವಚನೀಯ ಅನುಭೂತಿ. "ನಿಮ್ಗೆ ಹೆಣ್ಣು ಮಗು... ಚೆನ್ನಾಗಿದೆ..."ಎಂದು ಡಾಕ್ಟರ್ ಹೇಳಿದಾಗ ಮಂಪರು ಪೂರ್ತಿ ತಿಳಿದಿರಲೂ ಇಲ್ಲ... ಆಳದಿಂದೆಲ್ಲೋ ಕೇಳಿದಂತಿತ್ತು ಮಾತು. ಆದರೆ ಆ ವಿಸ್ಮೃತಿಯಲ್ಲೂ ಸುಪ್ತ ಮನಸು ನಲಿದಾಡಿತ್ತು. ಮೊದಲ ಸಲ ಕಂಡಾಗ ಜಗತ್ತಿನ ಬೆರಗೆಲ್ಲಾ ಪುಟ್ಟ ಜೀವದಲ್ಲೇ ಅಡಗಿರುವಂತೆ ಕಂಡಿತ್ತು. ಸದಾ ಕಣ್ಮುಚ್ಚಿಯೇ ಇರುತ್ತಿದ್ದವಳು ನನ್ನ ಬಳಿ ಬಂದ ಕೂಡಲೇ ಛಕ್ಕೆಂದು ಕಣ್ಬಿಟ್ಟು ಹೊರಳಿಸುವುದ ಕಂಡಾಗ ಕಾಣದ ಆತನ ಸೃಷ್ಟಿಯ ಚೆಲುವಿವೆ ಮಾರುಹೋಗಿದ್ದೆ. ನಂಬಿಕೆ ಮೊದಲಿಂದಲೂ ಇದ್ದರೂ ಆ ದಿನದಿಂದ ಮತ್ತೂ ಗಟ್ಟಿಯಾಗಿತ್ತು. "ನಂಬಿ ಕೆಟ್ಟವರಿಲ್ಲವೋ..."ಎಂದು ಅಮ್ಮ ಹಾಡುತ್ತಿದ್ದ ಭಜನೆ ಮತ್ತೆ ಮತ್ತೆ ರಿಂಗುಣಿಸುತಿತ್ತು. ಜನ್ಮ ಹೊಸ ಜೀವಕ್ಕಾಗಿದ್ದರೂ, ನಾನೂ ಪುನರ್ಜನ್ಮವನ್ನೇ ಪಡೆದಿದ್ದೆ.... ನಾನಂದು ಉಸಿರೆಳೆದು, ಉಸಿರು ಕೊಟ್ಟು, ಮತ್ತೆ ಉಸಿರು ಪಡೆದು ತಾಯಾಗಿದ್ದೆ. ಹಿಂದೊಮ್ಮೆ ಕನಸುಗಳಾಗಿದ್ದ ಅನುಭವಗಳೆಲ್ಲಾ ನನಸಾಗಿ... ಇಂದು ಬರೀ ನೆನಪುಗಳಾಗಿವೆ.....ಸದಾ ಹಸಿರಾಗಿರುವ... ಉಸಿರಾಗಿರುವ ಸವಿ ಸವಿ ನೆನಪುಗಳು.

"ಅಮ್ಮಾ...ರಾಶಿ ಪುಗ್ಗ ಹಾಕವು ಹಾಂ... ಮತ್ತೆ ಜಿಗಿ ಬಿಗಿ ಬಣ್ಣದ್ ಕಾಗ್ದ ಎಲ್ಲಾ ತರವು ಹಾಂ... ತಮ್ಮನ ಮನೆಯಲ್ಲಿ ಮಾಡಿದ್ವಲ್ಲೆ.. ಹಾಂಗೆ ನಮ್ಮನೇಲೂ ಮಾಡವು ಹಾಂ... ಕೇಕ್ ತರವು... ನಾನೂ ಕಟ್ ಮಾಡ್ತಿ ಹಾಂ.. ಅಪ್ಪಾ ನಂಗೆ ಓರೆಂಜ್ ಕಲರ್ ಅಂಗಿ ಬೇಕು.. ಅದ್ನ ಹಾಕ್ಕಂಡೇ ಎಪ್ಪಿ ಬರ್ಡೆ ತೂ ಯೂ ಹೇಳ್ತಿ ಹಾಂ.."ಎಂದು ಒಂದೇ ಸಮನೆ ಮುದ್ದು ಮುದ್ದಾಗಿ ಆಶೆಗಳನ್ನು ಮುಂದಿಟ್ಟಿದ್ದಳು ಪುಟ್ಟಿ ಕೆಲ ದಿನಗಳ ಹಿಂದೆ. ಅವೆಲ್ಲಾ ಇಂದು ನನಸಾಗುತ್ತಿವೆ...ನನಸಾಗುವ ಹಂತದಲ್ಲಿವೆ. ದೀಪ ಆರಿಸಿ ಕೇಕ್ ಕಟ್ ಮಾಡುವ ಪರಿಗೆ ನನ್ನದೆಂದೂ ವಿರೋಧವಿದೆ. ಆದರೆ ಎಲ್ಲೆಡೆ ಇದೇ ರೀತಿಯ ಸಂಭ್ರಮ! ಇಂಗ್ಲೀಷರ ಉದಾರ ಕೊಡುಗೆ. ಆದರೆ ಆರಿಸುವ ಬದಲು ದೀಪವನ್ನು ಹಚ್ಚಿ ಸಂಭ್ರಮಿಸುವುದರಲ್ಲೇ ಹೆಚ್ಚು ಅರ್ಥ ಕಂಡವರು ನಾವು.   ಜೀವ ಪಡೆದ ದಿನ...ಪ್ರತಿ ವರುಷ ಹೊಸ ಕನಸುಗಳಿಗೆ ಜೀವ ಕೊಡುವ ದಿನ ಬೆಳಗ ಬೇಕೇ ವಿನಃ ಆರಬಾರದು. ಹಾಗಾಗಿಯೇ ಪುಟ್ಟಿಯ ಮೊದಲ ವರುಷದಲ್ಲೂ ದೀಪ ಹಚ್ಚಿದ್ದೆ.....ಅದೇ ಹಿಂದಿನ ವರುಷಕ್ಕೂ ಮುಂದುವರಿದಿತ್ತು. ...ಅದೇ ಈ ವರುಷಕ್ಕೂ ಕೂಡ....ಇದೇ ರೀತಿ ಮುಂದುವರಿಯುವ ಸಂಕಲ್ಪ. ಕೆಲವೊಂದು ಪದ್ಧತಿಗಳಲ್ಲಿರುವ ಕೆಡುಕನ್ನು ತಿಳಿ ಹೇಳಿ ತಿದ್ದಲು ಇದು ತೀರಾ ಚಿಕ್ಕ ವಯಸ್ಸು. ಬೌದ್ಧಿಕವಾಗಿ ನನ್ನ ಮಾತುಗಳನ್ನು ಅರಿಯುವ ಸಮಯ ಬರುವವರೆಗೂ ಕಾಯದೇ ವಿಧಿಯಿಲ್ಲ. ಇಷ್ಟಕ್ಕೂ ಇದು ಅವಳ ದಿನ...ಅವಳಿಗಾಗಿರುವ ದಿನ... ಈ ದಿನ ಅವಳ ಮೊಗದಲ್ಲಿ ಮಿಂಚುವ ನಗುವಿಗಾಗಿ ಮೂರೇನು? ನೂರು ಕ್ಯಾಡಲ್ ಹಚ್ಚೇನು!(ಆರಿಸುವ ಬದಲು) ಒಂದು ದೊಡ್ಡ ನಂದಾದೀಪ ಹೇಗಿದ್ದರೂ ಭಗವಂತನ ಮುಂದೆ ಬೆಳಗುತ್ತಲೇ ಇರುತ್ತದೆ. ನೀಲಾಂಜನದ ಪ್ರಖರತೆಯೊಡನೆ ಬೆಳಗುವ ಆಕೆಯ ಮುಖದೊಳಗೇ ನನ್ನ ಮರು ಹುಟ್ಟೂ, ಆಕೆಯ ಹೊಸ ಹುಟ್ಟೂ ಬೆಸೆಯುವ ಸಂಬಂಧ ಪ್ರತಿ ದಿನ ಬೆಳೆಯುತ್ತಿದೆ.. ಬೆಳೆಯುತ್ತಲೇ ಇರುತ್ತದೆ. ಮಗುವಿಗಿಟ್ಟಿದ್ದ ಐದು ಹೆಸರಗಳಲ್ಲೇ ಒಂದಾದ "ಮಾನಸ" ಹುಟ್ಟಿದ್ದೂ ಅವಳಿಂದಾಗಿಯೇ... ಅವಳಿಗಾಗಿಯೇ. ಹಾಗೆ ನೋಡಿದರೆ.....ನನ್ನೊಳಗಿನ ಬರಹಗಾರ್ತಿಯ ಮರು ಹುಟ್ಟೂ ಅವಳಿಂದಾಗಿಯೇ ಆಗಿದ್ದು. ಇಷ್ಟೆಲ್ಲಾ ಅನುಭೂತಿಗಳನ್ನಿತ್ತ.....ಅಪೂರ್ವ ಉಡುಗೊರೆಗಳನ್ನಿತ್ತ ಈ ಪುಟ್ಟ ಜೀವಕೆ ನಾನು ಏನು ಉಡುಗೊರೆ ಕೊಟ್ಟರೂ ಕಡಿಮೆಯೇ. ಆದರೂ ಅಪ್ಪ ಹೇಳುತ್ತಿರುತ್ತಾರೆ..."ಆ ತಾಯಿಯ ಆಶೀರ್ವಾದ ಇದ್ರೆ ಎಲ್ಲಾ ಒಳ್ಳೇದಾಗ್ತು...." ಅದಂತೂ ನಿಜ. ನಾ ಪೂಜಿಸುವ ತಾಯಿಯ ಆಶೀರ್ವಾದದ ಜೊತೆ ನನ್ನ ಶುಭ ಹಾರೈಕೆಗಳು ಸದಾ ಪುಟ್ಟಿಯ ಜೊತೆಗಿರುವವು.

ಹೀಗೇ ಮಾನಸದಲ್ಲಿ ತೋಚಿದ ಭಾವಗಳಿಗೆ ಅಕ್ಷರರೂಪ ಕೊಡುತ್ತಿರುವಾಗಲೇ ಕಣ್ಬಿಟ್ಟಿತ್ತು ನನ್ನ ಬೆಳಕು. ಎಂದಿನಂತೇ ಅಮ್ಮ ಅಡುಗೆ ಮನೆಯಲ್ಲಿರದೇ ಆಕೆಯ ಪಕ್ಕದಲ್ಲೇ ಕೂತು ದಿಟ್ಟಿಸುತ್ತಿದ್ದುದನ್ನು ನೋಡಿದ್ದೇ ಅವಳ ಮೊಗದಲ್ಲಿ ದೊಡ್ಡ ನಗು...ಹಾಗೇ ತಲೆ ಎತ್ತಿ ನನ್ನ ಮಡಿಲೊಳಗೆ ಹುದುಗಿ ಹೇಳಿದ್ದು "ಎಪ್ಪಿ ಬರ್ತಡೆ ತೂ ಯೂ...". ಆಕೆಯ ಮುಗ್ಧ ಮಾತಿಗೆ ಜೋರಾಗಿ ನಗು ಬಂದರೂ ಮನಸು ನಿಜವೆಂದಿತು. ಹೌದು.. ಇಂದೇ ನನಗೂ ಹೊಸಜನ್ಮ ಸಿಕ್ಕಿದ್ದು....ಹೊಸ ಕನಸು ಹುಟ್ಟಿದ್ದು.....ಹೊಸ ಸೃಷ್ಟಿ ಹುಟ್ಟಿದ್ದು....ತಾಯ್ತನದ ಅನುಭೂತಿಯನ್ನು ಹೊಂದಿದ್ದು......


-ತೇಜಸ್ವಿನಿ.

28 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ತಾಯ್ತನದ ಅನುಭೂತಿ ಅನನ್ಯ. ಅದಿತಿ ಗೆ 3ನೇ ವರುಷದ ಹುಟ್ಟುಹಬ್ಬದ ಶುಭಾಶಯ. ನಿಮಗೂ ಕೂಡ. ಅದಿತಿಯ ಆಗಮನದಿ೦ದ ನಿಮ್ಮೊಳಗಿದ್ದ ಬರಹಗಾರ್ತಿ ಮರುಹುಟ್ಟು ಪಡೆದುದು ಸ೦ತೋಶದ ವಿಚಾರ. ಬರಹ ಆಪ್ತವಾಗಿದೆ. ಖುಷಿಆಯ್ತು.

ಚುಕ್ಕಿಚಿತ್ತಾರ ಹೇಳಿದರು...

ಆಹಾ...
”ಎಪ್ಪಿ ಬರ್ತಡೆ ತೂ ಯೂ..."ನನ್ನ ಕಡೆಯಿ೦ದ..ನಿಮ್ಮ ಬೆಳಕಿಗೆ...ಜೊತೆಗೆ ಕೆನ್ನೆಗೆರಡು, ಹಣೆ ಮೇಲೊ೦ದು ಪಪ್ಪಿ...

ಬರಹ ಕೂಡಾ ಆಹ್ಲಾದಕರವಾಗಿದೆ....

AntharangadaMaathugalu ಹೇಳಿದರು...

ತೇಜಸ್ವಿನಿ....
ಪುಟಾಣಿ ಪುಟ್ಟಿ, ತುಂಟಿಗೆ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..... ಆಗಲೇ ೩ ವರ್ಷದವಳಾದಳೇ....? ಎಷ್ಟು ಬೇಗ ದೊಡ್ಡವರಾಗಿ ಬಿಡುತ್ತಾರಲ್ವಾ..? ನಿಮ್ಮೊಳಗಿನ ಎಲ್ಲಾ ಸುಂದರ ಭಾವಗಳಿಗೂ, ಅನುಭೂತಿಗಳಿಗೂ ಅಕ್ಷರ ರೂಪ ಕೊಡಿಸುತ್ತಿರುವ ಆ ನಮ್ಮ ಚಿನ್ನಾರಿಗೆ, ನನ್ನ ಕಡೆಯಿಂದ ಪ್ರೀತಿ ಪೂರ್ವಕ, ತುಂಬು ಮನಸ್ಸಿನ ಹಾರೈಕೆಗಳು......

ಶ್ಯಾಮಲ

ಮನಸಿನ ಮಾತುಗಳು ಹೇಳಿದರು...

HYAPPEEE BURRRDEEEEEEEEEEYY ADITHI TO YOU PUTTI.... :-) MAY GOD BLESS YOU... :-) MY SWEET WISHES TO YOU PUTTI.... :-) :-)

Subrahmanya ಹೇಳಿದರು...

ಹೃದಯಸ್ಪರ್ಶಿ ಭಾವಸ್ಫುರಣ.
ಅದಿತಿಯ ಜೊತೆಗೆ ತಾಯಿಗೂ ಜನುಮದಿನದ ಶುಭಾಶಯಗಳು.
( ಮಕ್ಕಳನ್ನು ಹಡೆಯುವುದೆಂದರೆ ಪುನರ್ಜನ್ಮವೇ ಸರಿ !)

ಸಾಗರಿ.. ಹೇಳಿದರು...

ಎಪ್ಪಿ ಬರ್ತ ಡೆ ತೂ ಯೂ ಅದಿತಿ.. ತೇಜಸ್ವಿನಿ ಅವರೆ,, ನನಗೂ ಹಾಗೆ ಅನ್ನಿಸುತ್ತದೆ,, ವರ್ಷ ಕಳೆದದ್ದೇ ತಿಳೀತಾ ಇಲ್ಲ. ಹಲ್ಲಿಲ್ಲದ ಆ ಬೊಚ್ಚು ಬಾಯಿಯನ್ನ ನಾನು ತುಂಬಾ mis ಮಾಡ್ಕೊಳ್ತಿದ್ದೇನೆ. ಕಂದಮ್ಮಗಳು ಬೇಗ ಬೆಗ ದೊಡ್ಡಾದರೆ ಅಮ್ಮಂದಿರಿಗೆ ನೋವು.. ಕೈಲಿ ಎತ್ತಿಕೊಂಡು ಎಷ್ಟೇ ಮುದ್ದಾಡಿದರೂ ಮುದ್ದಾಡಿಸಿಕೊಳ್ಳುತ್ತಿದ್ದ ಪುಟಾಣಿಗಳು ಮಾತು ಬಂದ್ಮೇಲೆ ಸಾಕೂಊಊ,, ಬಿಡೂಊ ಅಂತ ಕೂಗಿದಾಗೆಲ್ಲ ಅಳುವೇ ಬಂದಂತೆ ಆಗುತ್ತದೆ.

ಪ್ರಗತಿ ಹೆಗಡೆ ಹೇಳಿದರು...

ಮಗುವಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು... ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ... ಬರಹ ಚೆನ್ನಾಗಿದೆ.. ವಂದನೆಗಳು...

ವಾಣಿಶ್ರೀ ಭಟ್ ಹೇಳಿದರು...

nimma magala huttida habbada jotege obba tayiya anandavannu heliddiri.. tumba chennagide..

aditige janmadinada shubhashayagalu..

ಸುಮ ಹೇಳಿದರು...

ತುಂಬ ಮನಮುಟ್ಟುವ ಬರಹ . ಒಂದು ಮಗುವಿನ ಜೊತೆಗೇ ತಾಯಿಯೂ ಹುಟ್ಟುತ್ತಾಳೆ . ಅದು ನಿಜಕ್ಕೂ ಎಲ್ಲಾ ಹೆಣ್ಣಿಗೂ ಮರುಹುಟ್ಟು . ಎಂತಹ ಗಾಡನಿದ್ರೆಯಲ್ಲಿದ್ದರೂ ಮಗ್ಗುಲಲ್ಲಿನ ಆ ಪುಟ್ಟ ಜೀವದ ಒಂದು ದೊಡ್ಡ ಉಸಿರಿಗೂ ಎಚ್ಚರಗೊಂಡು ಏನಾಯ್ತೆಂದು ನೋಡುವ ಪರಿ ... ನಮ್ಮೆಲ್ಲ ನೋವನ್ನು ಮರೆಸುವ ಆ ಕಂದನ ಎಳೆ ಸ್ಪರ್ಶ.. ಶಬ್ದಗಳಲ್ಲಿ ಹಿಡಿದಿಡಲಾಗದ ಆನಂದ ಅಲ್ಲವೆ?
ನಿಮ್ಮ ಪುಟಾಣಿಗೆ ಜನ್ಮದಿನದ ಶುಭಾಶಯಗಳು.

ವಿ.ರಾ.ಹೆ. ಹೇಳಿದರು...

ಎಪ್ಪಿ ಬರ್ತಡೆ ತೂ ಮುದ್ದು ಅದಿತಿ... :)

ಸೀತಾರಾಮ. ಕೆ. / SITARAM.K ಹೇಳಿದರು...

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸಂತಸದ ದಿನ ನೂರಾರಾಗಿ ಮರಳಲಿ

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

:-) Happy B'Day to Aditi :-)

ಮನಸು ಹೇಳಿದರು...

जन्मदिनमिदम् अयि प्रिय सखे

शन्तनोतु ते सर्वदा मुदम्॥१॥

प्रार्थयामहे भव शतायुषि

ईश्वरस्सदा त्वं च रक्षतु॥२।

पुन्य कर्मणा कीर्तिमर्जय

जीवनं तव भवतु सार्थकम्॥३॥
-ತೇಜೋಮಯ ಸ್ವಾಮಿಯವರ ಈ ಸಾಲುಗಳಿಂದ ನಿಮ್ಮ ಕೂಸಿಗೆ ನಮ್ಮ ಶುಭಾಶಯಗಳು.......

kanasu ಹೇಳಿದರು...

lekhana oduvaaga modalininda koneyavaregu nanna mukhadalli kiru nage tumbittu...aahladakaravaagide nimma baraha...

happy birthday to aditi putti! :)

ವನಿತಾ / Vanitha ಹೇಳಿದರು...

ಎಪ್ಪಿ ಬರ್ತಡೆ ತೂ ಯೂ ಅದಿತಿ :-)
nange chocolates beku..!!

Dr.D.T.Krishna Murthy. ಹೇಳಿದರು...

ನಿಮ್ಮ ಮಗು ಅದಿತಿಗೆ ಹುಟ್ಟು ಹಬ್ಬದ ಶುಭಾಶಯಗಳು.ನಿಮ್ಮ ಬರಹ ಹೃದಯ ಸ್ಪರ್ಶಿಯಾಗಿತ್ತು.ಮಗುವಿನ ಹುಟ್ಟು ತಾಯಿಗೂ ಮರುಹುಟ್ಟು ಇದ್ದ ಹಾಗೆಯೇ.ನಿಮ್ಮ ಕಂದಮ್ಮ ನೂರು ವರುಷ ಸುಖವಾಗಿ ಬಾಳಲಿ ಎಂಬುದು ನಮ್ಮೆಲ್ಲರ ಹಾರೈಕೆ.

sunaath ಹೇಳಿದರು...

ಮುದ್ದು ಅದಿತಿಗೆ ಹುಟ್ಟು ಹಬ್ಬದ ಶುಭಾಶಯಗಳು. ಮಗುವು ಎಂದರೆ ಹರುಷ ನೀಡುವ ಚಿಲುಮೆ. ನಿಮ್ಮ ಅನುಭವವನ್ನು ಚೆನ್ನಾಗಿ ಹೇಳಿದ್ದೀರಿ.

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಂ,
ತಾಯಿಯ ಪ್ರೀತಿ ತುಂಬಿ ಬಂದ ಲೇಖನ ತುಂಬಾ ಚೆನ್ನಾಗಿದೆ.... ತಾಯಿತನದ ಪೂರ್ತಿ ಅನುಭೂತಿ ಈ ಲೇಖನದಲ್ಲಿತ್ತು... ಅದಿತಿಯ ಪೂರ ಪ್ರೀತಿ ನಿಮಗೆ ಸಿಗಲಿ... ಅವಳ ಬಾಳು ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ.....

Harisha - ಹರೀಶ ಹೇಳಿದರು...

ಎಪ್ಪಿ ಬರ್ಡೆ ತೂ ಯೂ ಅದಿತಿ ಪುಟ್ಟಿ :-)

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಮುದ್ದು ಮುಖದ ಮೂರಕ್ಷರದ 'ಅದಿತಿ'ಗೆ ಪ್ರೀತಿತುಂಬಿದ ಹುಟ್ಟುಹಬ್ಬದ ಶುಭಾಶಯಗಳು.

ಸ್ನೇಹದಿಂದ,

ತೇಜಸ್ವಿನಿ ಹೆಗಡೆ ಹೇಳಿದರು...

ಪುಟ್ಟ ಅದಿತಿಗೆ ಶುಭಾಶಯಗಳನ್ನಿತ್ತು ಅಶೀರ್ವದಿಸಿದ ಎಲ್ಲರಿಗೂ ಅದಿತಿಯ ಹಾಗೂ ಅದಿಯಮ್ಮನ ಪರವಾಗಿ ತುಂಬಾ ತುಂಬಾ ಧನ್ಯವಾದಗಳು.

ಅವಳ ದಿನದಂದೇ ಅದಿತಿಯ ಆರೋಗ್ಯ ದಿಢೀರನೆ ಹದಗೆಟ್ಟಿತು. ಹಾಗಾಗಿ ಅವಳು ಕನಸಕಂಡಂತೇ ಹುಟ್ಟಿದ ಹಬ್ಬವನ್ನು ಆಚರಿಸಲೇ ಆಗಲಿಲ್ಲ...:( ಈ ನೋವೇ ನಮ್ಮಲ್ಲಿ ಉಳಿದಿರುವಾಗ ನಿಮ್ಮೆಲ್ಲರ ಶುಭಾಶಯಗಳು ಸ್ವಲ್ಪ ತಂಪು ತಂದಿವೆ. ಅದಕ್ಕಾಗಿ ಬಹು ಆಭಾರಿ.

ಧನ್ಯವಾದಗಳೊಂದಿಗೆ,
ತೇಜಸ್ವಿನಿ ಹಾಗೂ ಅದಿತಿ.

ಸಾಗರದಾಚೆಯ ಇಂಚರ ಹೇಳಿದರು...

ಅದಿತಿಗೆ ಹುಟ್ಟು ಹಬ್ಬದ ಶುಭಾಶಯಗಳು
ತಡವಾಗಿ ಬಂದಿದ್ದಕ್ಕೆ ಬಯ್ಯಡದೆ

ಮನೆ ಶಿಫ್ಟ್ ಮಾದದ್ರಲ್ಲಿ ಬ್ಯುಸಿ ಇದ್ದಿದ್ದಿ

ಒಳ್ಳೆ ಲೇಖನ

shivu.k ಹೇಳಿದರು...

ಅದಿತಿಗೆ ಹುಟ್ಟು ಹಬ್ಬದ ಶುಭಾಶಯಗಳು.

Jayalaxmi ಹೇಳಿದರು...

ಬಿಲೇತೆದ್ ಎಪ್ಪಿ ಎಪ್ಪಿ ಬರ್ತ್ ದೇ ತು ಅದಿತಿ!! :-)sorry ತೇಜು, ಇವತ್ತು ಆರ್ಟಿಕಲ್ ನೋಡಿದ್ದು ಹೀಗಾಗಿ ಪಟ್ಟಕ್ಕನಿಗೆ ತಡವಾಗಿ ವಿಶ್ ಮಾಡ್ತಿದೀನಿ. ಅಮ್ಮನ ಕಣ್ಮಣಿ ಜಗದ ಕಣ್ಮಣಿಯಾಗಲಿ.:) ಆರೋಗ್ಯ, ಆಯಸ್ಸು ದಂಡಿ ದಂಡಿಯಾಗಿ ದಯಪಾಲಿಸಲಿ ದೇವರು ಅದಿತಿಗೆ.:)

ಮನಸಿನಮನೆಯವನು ಹೇಳಿದರು...

ಈ ಸಂಭ್ರಮ ಚಿರಂತನವಾಗಿರಲಿ...
ದೇವರು "ಇಷ್ಟಾರ್ಥ ಪ್ರಾರ್ಥಿರಸ್ತು" ಎಂದು ಹರಸಲಿ..

ಚಿತ್ರಾ ಹೇಳಿದರು...

ತೇಜೂ
ಈಗಿತ್ಲಾಗಿ ಕೆಲಸ ಹೆಚ್ಚಾಜು . ಹಾಂಗಾಗಿ ಬ್ಲಾಗ್ ಕಡೆಗೆಲ್ಲ ಬರಲೇ ಆಗ್ತಾ ಇಲ್ಲೆ. ಪುತ್ತಕ್ಕಂಗೆ ನನ್ನಿನ್ನ್ದನೂ ಒಂದು " ಹ್ಯಾಪ್ಪಿ ಬತ್ ಡೇ.... ಜೊತೆಗೊಂದು ಮುತ್ತು ! " ತಡವಾಗಿಯೇ ಆದರೂ ಕೊಟ್ಟುಬಿಡು.
ಚಂದದ , ಮನಮುಟ್ಟುವ ಬರಹ !

V.R.BHAT ಹೇಳಿದರು...

ಅದಿತಿ ಎನ್ನುವ ಹೆಸರೇ ಅರ್ಥಪೂರ್ಣ, ಅವಳ ಬದುಕೂ ಅರ್ಥಪೂರ್ಣವಾಗಲಿ, ಅವಳು ದೊಡ್ಡವಳಾಗಿ ಇಂತಹ ನೂರಾರು ಜನ್ಮದಿನಗಳನ್ನು ಆಚರಿಸಿಕೊಳ್ಳಲಿ ಎಂದು ಶುಭಕಾಮನೆಗಳನ್ನು ಸಲ್ಲಿಸುತ್ತಿದ್ದೇನೆ, ಧನ್ಯವಾದಗಳು

ಸುಧೇಶ್ ಶೆಟ್ಟಿ ಹೇಳಿದರು...

ನಿಮ್ಮ ಆನ೦ದ ನಿಮ್ಮ ಬರಹದಲ್ಲಿ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ.

Belated happy wishes to Adhithi :)