ಮಂಗಳವಾರ, ಮಾರ್ಚ್ 4, 2008

ಪ್ರತಿಬಿಂಬ

ಪ್ರತಿಬಿಂಬ
---
ಕಲ್ಲಾಗಿದ್ದೆ ಹಲವಾರು ವರುಷ
ರಾಮನಿಗಾಗಿ ಕಾದು ಬೆಂಡಾದ
ಅಹಲ್ಯೆಯಂತೆ,
ನೀನಿತ್ತ ಈ ಸ್ಪರ್ಶಮಣಿಯಿಂದ
ನಿರ್ಜೀವ ಪಾದಗಳೂ ಹಾರುತಿವೆ,
ಬಾನಾಡಿಯಂತೆ.
---
ಕೇಳಲಿಲ್ಲ ನಾ ಸಾವಿರಾರು ನಕ್ಷತ್ರಗಳ
ತುಂಬಿದೆ ತಾರಾ ಕಾಂತಿಗಳ
ಈ ಜೋಡಿ ಕಣ್ಗಳೊಳಗೆ,
ಬೇಡಲಿಲ್ಲ ನಾ ಮುತ್ತು-ಹವಳಗಳ
ತುಂಬಿದೆ ಅವುಗಳಂದವ
ಈ ಪುಟ್ಟ ತುಟಿಗಳಿಗೆ
---
ಕಾರಿರುಳಿನಲೂ ಬೀರಿದೆ

ಹುಣ್ಣಿಮೆಯ ಹೊನಲು,
ಕಾರ್ಮುಗಿಲನು ಸೀಳಿತು
ರವಿಯ ಹೊಂಬೆಳಕು,
ಬಾಳ ಲತೆಯಲರಳಿದೆ
ಬ್ರಹ್ಮಕಮಲದ ಹೂವು.
---
ಅದಿತಿಯೋ, ಅಂತಃಶಕ್ತಿಯೋ!
ನಂದಿನಿ ನದಿಯ ನಡುವೆ
ನಿಂತ ಮೂರ್ತಿಯೋ!!
ಕಾಮಧೇನುವೋ, ಕಲ್ಪವೃಕ್ಷವೋ!
ಕನ್ನಡಿಯಿಂದೆದ್ದು ಬಂದ
ನನ್ನ ಪ್ರತಿಬಿಂಬವೋ!!
---
("ಪ್ರತಿಬಿಂಬ"ದಿಂದಾಯ್ದ ಕವನ..)

10 ಕಾಮೆಂಟ್‌ಗಳು:

ಮಧು ಹೇಳಿದರು...

ಆಹಾ! ಎಂಥಾ ಸಾಲುಗಳು...ಪುಟ್ಟ ಅಪ್ಸರೆ ಅದಿತಿಗೆ ನನ್ನದೊಂದಷ್ಟು ಪ್ರೀತಿ...ಪುಸ್ತಕ ಬಿಡುಗಡೆ ಸಮಾರಂಭದ ಉತ್ಸಾಹದಲ್ಲಿರುವ ನಿಮಗೂ ಹಾರ್ದಿಕ ಶುಭಾಶಯಗಳು.

Jayashankar ಹೇಳಿದರು...

ಕವನ ತುಂಬಾ ಚೆನ್ನಾಗಿದೆ...
ಏನನ್ನು ಕಮೆಂಟಿಸ ಬೇಕು ಅಂತ ಯೋಚನೆ ಮಾಡುತ್ತನೇ ಇದ್ದೀನಿ......

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

ನೀನಿತ್ತ ಈ ಸ್ಪರ್ಶಮಣಿಯಿಂದ
ನಿರ್ಜೀವ ಪಾದಗಳೂ ಹಾರುತಿವೆ,
ಬಾನಾಡಿಯಂತೆ.


BEAUTIFUL LINES THESE ARE...

kAVANA TUMBA CHENNAGIDE

ಶಾಂತಲಾ ಭಂಡಿ ಹೇಳಿದರು...

ತೇಜಸ್ವಿನಿ ಅವರೆ...
ಇದೇ ಲವಲವಿಕೆ ಸದಾ ನಿಮ್ಮದಾಗಲಿ.
ಪುಟಾಣಿ ಪಾದಗಳೆರಡು ನಿಮ್ಮ ರೆಕ್ಕೆಗಳಾಗಿ ಮೂಡಿ ಜೊತೆಯಾಗಿರಲಿ.
ನಿಮ್ಮ"ಪ್ರತಿಬಿಂಬ"ವು ನಿಮ್ಮ ಕಿರೀಟಕ್ಕಿನ್ನಷ್ಟು ಗರಿ ಮೂಡಿಸಲಿ.
ಶುಭಹಾರೈಕೆಗಳೊಂದಿಗೆ...

ಅಮರ ಹೇಳಿದರು...

ಪ್ರಿಯ ತೇಜಸ್ವಿನಿ ಹೆಗಡೆಯವರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಅಮರ

ಅರುಣ್ ಮಣಿಪಾಲ್ ಹೇಳಿದರು...

ತಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಾರ್ದಿಕ ಶುಭಾಶಯಗಳು..;-)..ಅಂತೆಯೆ ಬರಲಾಗದಿದ್ದಕ್ಕೆ ಕ್ಷಮಿಸಿ..ಕವನ ಚೆನ್ನಾಗಿದೆ..ಅದಿತಿಯೋ, ಅಂತಃಶಕ್ತಿಯೋ!
ನಂದಿನಿ ನದಿಯ ನಡುವೆ
ನಿಂತ ಮೂರ್ತಿಯೋ!!
ಕಾಮಧೇನುವೋ, ಕಲ್ಪವೃಕ್ಷವೋ!
ಕನ್ನಡಿಯಿಂದೆದ್ದು ಬಂದ
ನನ್ನ ಪ್ರತಿಬಿಂಬವೋ!!
ಸಾಲುಗಳು ತುಂಬಾ ಇಷ್ಟವಾಯಿತು...

ಮೃಗನಯನೀ ಹೇಳಿದರು...

ನನಗೆ ಕವನಗಳು ಅರ್ಥವಾಗೋದಿಲ್ಲ ಇಷ್ಟವಾಗುತ್ತವೆ. ನಿಮ್ಮ ಕವನವೂ ಸ್ವ್ಲ್ಪಸ್ವಲ್ಪ ಅರ್ಥವಾಯಿತು.. ನಮಗೆ ಸಿಕ್ಕಷ್ಟು ನಮ್ಮದಲ್ಲವ?? ಇಷ್ಟವಾಯಿತು....

sunaath ಹೇಳಿದರು...

ಬ್ರಹ್ಮಕಮಲವು ಅರಳುವದು ವರ್ಷದಲ್ಲಿ ಒಂದೇ ಸಲ,ಅಲ್ಲವೆ!
ಸೊಗಸಾದ ಕವನ.

ಪೂರ್ಣ ವಿ-ರಾಮ ಹೇಳಿದರು...

ನಿಮ್ಮ ಬ್ಲಾಗು ನಿಜವಾಗಿಯೂ "ಮಾನಸ" ಸರೋವರ
!


ನಿಮಗಷ್ಟೇ ಹೊಸಬ....
ಥ್ಯಾಂಕ್ಯೂ ಮೇಮ್

ತೇಜಸ್ವಿನಿ ಹೆಗಡೆ ಹೇಳಿದರು...

@ಜಯಶಂಕರ್, ಮಧು, ತಿಪ್ಪಾರರೆ,

ಓದಿ ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು...ಭೇಟಿಕೊಡುತ್ತಿರಿ.

@ಶಾಂತಲ,
ನಿಜ.. ಪುಟಾಣಿ ಪಾದಗಳಿಂದ ನನಗೀಗ ಮರುಜನ್ಮ ಸಿಕ್ಕಂತಾಗಿದೆ. ನನ್ನ ನಾನು ಮತ್ತೆ ಅವಳಲ್ಲಿ ಕಾಣಿತ್ತಿದ್ದೇನೆ. ತುಂಬಾ ಧನ್ಯವಾದಗಳು.

@ಅಮರ್,
ಆಹ್ವಾನಕ್ಕೆ ಧನ್ಯವಾದಗಳು..ಕಾರಣಾಂತರಗಳಿಂದ ಬರಲಾಗದಿದ್ದರೂ ಕಾರ್ಯಕ್ರಮದ ಯಶಸ್ಸಿಗೆ ನನ್ನ ಶುಭಹಾರೈಕೆಗಳು ಜೊತೆಗಿರುವವು.

@ಅರುಣ್,

ಧನ್ಯವಾದಗಳು. ಆ ಸಾಲುಗಳು ನನಗೂ ತುಂಬಾ ಇಷ್ಟವಾಗಿವೆ ;-) ಭೇಟಿಕೊಡುತ್ತಿರಿ.

@ಮೃಗನಯನಿ,
ಧನ್ಯವಾದಗಳು. ನಿಜ.. ನಮಗೆ ದಕ್ಕಿದ್ದಷ್ಟು ಮಾತ್ರ ನಮ್ಮದು! ಬರುತ್ತಿರಿ.

@ಸುನಾಥರೆ,
ಹೌದು ಬ್ರಹ್ಮಕಮಲ ವರ್ಷಕ್ಕೊಮ್ಮೆ ಮಾತ್ರ ಅರಳುವುದು.. ಇದೇ ಅದರ ವಿಶೇಷತೆ. ಅಂತಹ ವಿಶಿಷ್ಟ ಪುಷ್ಪ ನನ್ನೊಡಲ ಲತೆಯಲ್ಲಿ ನಿತ್ಯ ಅರಳಿ ನಳನಳಿಸುತಿದೆ ಎಂಬರ್ಥದಲ್ಲಿ ಬರೆದದ್ದು. ಮೆಚ್ಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. ಭೇಟಿಕೊಡುತ್ತಿರಿ.

@ಪೂರ್ಣ ವಿ-ರಾಮ,

ಧನ್ಯವಾದಗಳು. ನಿಮ್ಮ ಬ್ಲಾಗ್ ತುಂಬಾ ಸುಂದರವಾಗಿದೆ.. ಬರವಣಿಗೆಗಳಿಗೆ ಪೂರ್ಣ ವಿ-ರಾಮ ಹಾಕದಿರಿ ಮತ್ತೆ ;-) ಆಗಾಗ ಭೇಟಿ ನೀಡುತ್ತಿರಿ.