ಗುರುವಾರ, ಜನವರಿ 21, 2010

ಕ್ಷಿತಿಜದಾಚೆ...


ಸಪ್ತಸಾಗರದಾಚೆ ನಿಂತಿಹುದು,
ಸುಪ್ತವಾಗಿ ನಡುಗುಡ್ಡವೊಂದು
ನೆಟ್ಟನಡುವೆ ಕುಳಿತಿಹೆ ನಾನಲ್ಲೇ,
ಬಟ್ಟಬಯಲೊಳಿಹ ಒಂಟಿ ಮರದಂತೆ
ನಿಲ್ಲದ ಸುಳಿಗಾಳಿ ಸುತ್ತಮುತ್ತೆಲ್ಲಾ,
ತೆರೆಗಳ ಭೋರ್ಗರೆತ ಕಿವಿಯ ತುಂಬೆಲ್ಲಾ
ತಲೆಯೆತ್ತಿದರೆ ಸಾಕು ಕಾರ್ಮೋಡದ ಸೂರು,
ನಾವೆಯೂ ಬಳಿಯಿಲ್ಲ, ಬದುಕಿಸುವರಾರು?!

ಉರಿಬಿಸಿಲ ತಾಪಕ್ಕೆ ಬಳಲಿ ಬೆಂಡಾದೆ,
ಉಪ್ಪಿನೊಳಗೇ ಸಿಹಿಯ ಹುಡುಕಿ ನಾ ಸೋತೆ
ದೇಹದೊಳಗಿಂದ ಪ್ರಾಣ ದೂರಾಗುತಿರಲು,
ಅಗೋ! ಅಲ್ಲಿ ಭುವಿ-ಬಾನು ಒಂದಾಗುತಿಹವು.

ಬುಧವಾರ, ಜನವರಿ 13, 2010

ಎಲ್ಲ ಎಲ್ಲೆಗಳನ್ನು ದಾಟಿ ನೋಡುವ "ದಾಟು"

{ಸಂಕ್ರಾತಿಯ ಎಳ್ಳು ಬೆಲ್ಲದ ಸವಿಯನ್ನು ಬೀರುತ್ತಾ ಮಾನಸ ಇಂದು ಮೂರನೆಯ ವರುಷಕ್ಕೆ ಕಾಲಿಡುತ್ತಿದೆ. ನಿಮ್ಮೆಲ್ಲರ ಪ್ರೀತಿ, ಆತ್ಮೀಯತೆ, ಸಹೃದಯತೆಯೇ ಈ ಮಾನಸದ ನಿಶ್ಚಲತೆಗೆ ಕಾರಣ. ನಿಮ್ಮ ಪ್ರೀತಿಗೆ ಅದರ ರೀತಿಗೆ ನನ್ನ ಬರಹವೇ ಕಾಣಿಕೆ.
ಭೈರಪ್ಪನವರ "ದಾಟು" ಕಾದಂಬರಿಯ ಪುಟ್ಟ ವಿಮರ್ಶೆಯ ಮೂಲಕ ಮಾನಸ ೨ ವರುಷಗಳು ತುಂಬಿದ ಹರುಷವನ್ನಾಚರಿಸುತ್ತಿದೆ.}

 ನಾ ಮೆಚ್ಚಿದ ಕೃತಿ : ಒಳಗೊಂದು ಕಿರುನೋಟ-೪ "ದಾಟು"


ಜಾತೀಯತೆ, ಮತೀಯ ಭಾವನೆ ಇವುಗಳನ್ನೆಲ್ಲಾ ಮೀರಿ ವಿಶ್ವಮಾನವರಾಗಬೇಕೆಂದು ನೀತಿ ಸಾರುವ ಅನೇಕ ಪುಸ್ತಕಗಳು ಬಂದಿವೆ. ಆದರೆ ಭೈರಪ್ಪನವರ "ದಾಟು" ಕೇವಲ ಶಬ್ದರೂಪದಲ್ಲಿ ಮಾತ್ರ ಸುಂದರವೆನಿಸುವ ಇಂತಹ ಸಂದೇಶವನ್ನು ಸಾರಿ ಸುಮ್ಮನಾಗುವುದಿಲ್ಲ. ವಿಶ್ವಮಾನವನಾಗಲು ಹೊರಟ ಮನುಷ್ಯನ ಮನಃಸ್ಥಿತಿ, ಅದಕ್ಕೆ ಬೇಕಾಗುವ ಸಂಯಮ, ಸಹನೆ, ದೃಢತೆ- ಹಾಗೆಯೇ ಇದಕ್ಕಾಗಿ ಆತ ನೀಡಬೇಕಾಗುವ ತ್ಯಾಗ, ಬಲಿದಾನ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ ‘ದಾಟು’. ಈ ಕಾದಂಬರಿಯನ್ನು ಓದುತ್ತಾ ಹೋದಂತೇ, ಕೊನೆಗೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಸಂದರ್ಭವೂ ಬರುತ್ತದೆ. ಇದು ಸರಿಯೇ? ಇದು ತಪ್ಪೇ? ಯಾವುದು (ಅ)ಧರ್ಮ, ಯಾವುದು ಸುಳ್ಳು? ಎಲ್ಲಿದೆ ಸತ್ಯ? ಜಾತಿಗಳ ನಡುವೆ, ಪಂಗಡಗಳ ನಡುವೆ ನಾವು ಬಯಸುವ ಸಮಾನತೆ, ವಿಶ್ವಮಾನವ ಎನ್ನುವ ಕಲ್ಪನೆ - ಇವೆಲ್ಲಾ ನಾವು ತಿಳಿದುಕೊಂಡಿರುವ ಪರಿಧಿಗಿಂತ ಎಷ್ಟು ಮೇಲ್‌ಸ್ತರದಲ್ಲಿವೆ!! ಎಷ್ಟೊಂದು ವಿಶಾಲವಾಗಿ, ನಮ್ಮ ಅರಿವಿಗೇ ಬಾರದಂತೆ ಸಮಾಜದೊಳಗೆ, ಜನರ ಮನಸಿನಾಳದೊಳಗೆ ಬೇರನ್ನೂರಿವೆ - ಇವೆಲ್ಲವುಗಳ ಅರಿವು ತುಸುವಾದರೂ ‘ದಾಟುವನ್ನು’ ದಾಟುವುದರ ಮೂಲಕ(ಓದುವುದರಿಂದ) ಉಂಟಾಗುವುದು.
೧೯೭೩ ರಲ್ಲಿ ಮೊದಲಬಾರಿ ಮುದ್ರಣಗೊಂಡ "ದಾಟು" ಪ್ರಮುಖವಾಗಿ ಅಂದಿನ ಕಾಲದ ಸಾಮಾಜಿಕ ಜನಜೀವನ, ಮನಃಸ್ಥಿತಿ, ಸಂಕುಚಿತತೆ, ವಿವಶತೆ, ಜಾತೀಯತೆಯೊಳಗಿನ ಅಸಹಾಯಕತೆ, ರಾಜಕೀಯತೆಯನ್ನು ತೆರೆದಿಡುತ್ತದೆ. ಆದರೆ ೪೧೨ ಪುಟಗಳಲ್ಲಿ ವಿವರವಾಗಿ (ಕೆಲವೊಂದು ವಿಷಯಗಳು ತುಸು ಸೂಕ್ಷ್ಮವಾಗಿ) ಪ್ರಸ್ತಾಪಗೊಂಡಿರುವ, ಬಣ್ಣಿಸಲ್ಪಟ್ಟ ಹಲವಾರು ವಿಷಯಗಳು, ಸಾಮಾಜಿಕ ಪಿಡುಗುಗಳು ಇಂದೂ ನಮ್ಮ ದೇಶದ ಅಸಂಖ್ಯಾತ ಹಳ್ಳಿಗಳಲ್ಲಿ ಇಂದೂ ಪ್ರಸ್ತುವಾಗಿವೆ. ಉತ್ತರದಿಂದ ದಕ್ಷಿಣದವರೆಗೂ ಹಳ್ಳಿಗರ ಜನಮಾನಸದಲ್ಲಿ ಜಾತೀಯತೆ, ಸ್ತ್ರೀ ಶೋಷಣೆ, ಮೇಲ್ಜಾತಿ, ಕೀಳ್ಜಾತಿಗಳೆಂಬ ತಾರತಮ್ಯ, ಜಾತೀಯತೆಯಿಂದ ಹೊರಹೊಮ್ಮುವ ದ್ವೇಷ, ತಾತ್ಸಾರ - ಇವೆಲ್ಲಾ ಒಂದು ಪಿಡುಗಂತೇ ಇಂದಿಗೂ ಪ್ರಚಲಿತಚಾಗಿವೆ. ಮನುಷ್ಯನನ್ನು ಮೊದಲು ಮನುಷ್ಯನನ್ನಾಗಿ ನೋಡಿ ನಂತರ ಜಾತೀಯತೆಯ ಮೂಲಕ ಅಳೆದರಾದರೂ ಮನುಷ್ಯತ್ವ ಉಳಿಯಬಹುದು. ಆದರೆ ಎಷ್ಟೋ ಕಡೆ ಮನುಷ್ಯನನ್ನು ಮನುಷ್ಯನೆಂದು ಗುರುತಿಸುವುದೇ ಜಾತೀಯತೆಯ ಆಧಾರದ ಮೇಲೆ ಎಂದರೆ ವಿಪರ್ಯಾಸವಾಗಲಾರದು. ಆ ಲೆಕ್ಕದಲ್ಲಿ ನೋಡಿದರೆ ಪಟ್ಟಣಿಗರೇ ತುಸು ವಾಸಿ. ತೀರ ಸಂಕುಚಿತತೆಯನ್ನು ಬಿಟ್ಟು ಸಮಾನತೆಯೆಡೆ ಮೊಗಮಾಡುತ್ತಿದ್ದಾರೆ.(!)
"ದಾಟು"ವಿನಲ್ಲಿ ನಾಯಕನಿಲ್ಲ. ಹಲವು ಉಪನಾಯಕರುಗಳಿಂದ ತುಂಬಿದೆ ಎಂದರೆ ತಪ್ಪಾಗದು. ಆದರೆ ನಾಯಕಿ ಓರ್ವಳೇ. ಅವಳೇ ಇಡೀ ಕಾದಂಬರಿಗೆ ಸೂತ್ರಧಾರಳು, ಕಥೆಗೆ ಕಾರಣಕರ್ತಳು. ಹೆಸರು ಸತ್ಯಭಾಮ ಎಂದಾಗಿದ್ದರೂ ಬುಡದಿಂದ ತುದಿಯವರೆಗೂ "ಸತ್ಯ" ಎಂದೇ ಸಂಬೋಧಿಸಲ್ಪಡುತ್ತಾಳೆ. ಹೆಸರಿಗೆ ತಕ್ಕಂತೇ ತನ್ನ ಆದರ್ಶಗಳನ್ನು ಎಂದೂ ಬಲಿಗೊಡದೇ, ತನ್ನ ಆತ್ಮಸಾಕ್ಷಿಗೆ ಓಗುಟ್ಟ ಬದುಕಿದವಳು. ಬ್ರಾಹ್ಮಣಳಾದ ಇವಳನ್ನು ಪ್ರೇಮಿಸುವ ಶ್ರೀನಿವಾಸ ಗೌಡ ಹೆತ್ತವರ ಒತ್ತಡಕ್ಕಿಂತ ಮೇಲ್ಜಾತಿಯವಳನ್ನು ಮದುವೆಯಾಗುವುದು ಪಾಪವೇನೋ ಎಂಬ ಪಾಪಪ್ರಜ್ಞೆಯಿಂದಲೇ ಆಕೆಗೆ ಕೈಕೊಡುತ್ತಾನೆ. ಇಲ್ಲಿಂದಲೇ ಅವಳ ಹೊಸ ಬದುಕಿನ ಅಧ್ಯಾಯ ಪ್ರಾರಂಭ. ವಿನೂತನ ದೃಷ್ಟಿಕೋನದತ್ತ ಆಕೆ ದಿಟ್ಟ ನಿಲುವು ಹಲವಾರು ಅಸಂಬಧಗಳ(ಅವಳ ಸುತ್ತಮುತ್ತಲಿನ ಜನರ ದೃಷ್ಟಿಯಲ್ಲಿ) ಸೃಷ್ಟಿಗೆ ಕಾರಣವಾಗುತ್ತದೆ. ಆದರೆ ಕೊನೆಗೆ ಕರಣಾಂತರಗಳಿಂದ ಶ್ರೀನಿವಾಸ ಗೌಡ ತನಗಿಂತ ಕೆಳಜಾತಿಯವಳಾದ ಮಾದಿಗರ ಮೀರಳನ್ನು ಕಾಮಿಸಿ, ಅದನ್ನೇ ಪ್ರೇಮವೆಂದು ಮೀರಳನ್ನೂ ಸ್ವತಃ ತನ್ನನ್ನೂ ವಂಚಿಸಿಕೊಂಡು, ಅಂತಿಮವಾಗಿ ಅವಳನ್ನೂ ತೊರೆಯುತ್ತಾನೆ. ಅದಕ್ಕೂ ಕಾರಣ ತನಗಿಂತ ಅಲ್ಪ ಜಾತಿಯವಳನ್ನು ವರಿಸಿ ಪಾಪ ಕಟ್ಟಿಕೊಳ್ಳುವ ಭಯದಿಂದಾಗಿ! ಮೇಲೇರಲೂ ಬಿಡದ, ಕೆಳಗಿಳಿಯಲೂ ಆಗದ ಒಂದು ಮಾನಸಿಕ ಅಸ್ಥಿರವನ್ನು ಅಂದಿನ ಜನರು ಮಾತ್ರವಲ್ಲ ಇಂದಿನವರೂ ಅನುಭವಿಸುತ್ತಿದ್ದಾರೆ ಎಂದೆನಿಸುತ್ತದೆ. ಕಾದಂಬರಿಯಲ್ಲಿ ಬರುವ ಇನ್ನಿತರ ಪಾತ್ರಗಳಾದ ವೆಂಕಟೇಶ, ಮೇಲಗಿರಿ ಗೌಡ, ದೊಡ್ಡ ಗೌಡ್ರು, ಹಳ್ಳಿಯ ಜನರು, ಮೋಹನದಾಸ, ಬೆಟ್ಟಯ್ಯ-ಇವರೆಲ್ಲಾ ನಮ್ಮ ಅಕ್ಕ ಪಕ್ಕದ ಮನುಷ್ಯರಲ್ಲೇ ಹಲವರನ್ನು ಹೋಲುವಂತಿದ್ದಾರೆ ಎಂದರೆ ತಪ್ಪಾಗದು.
ಕಾದಂಬರಿಯ ಪೂರ್ವಾರ್ಧವನ್ನು ಓದುತ್ತಿರುವಾಗ ಒಂದು ದೊಡ್ಡ ಸಂದೇಹ ಓದುಗನ್ನು ಕಾಡತೊಡಗುತ್ತದೆ. ಕೇವಲ ಈ ಜಾತೀಯತೆಯನ್ನು ಹೋಗಲಾಡಿಸಲು ಮದುವೆಯೆಂಬ ಸಂಪ್ರದಾಯವನ್ನು ಬಳಸುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು. ಪ್ರೀತಿ, ಸ್ನೇಹ, ವಿಶ್ವಾಸ ಹಾಗೂ ಸಮಾನತೆಯ ಭಾವಗಳಿಂದ ಬೆಸೆಯಲ್ಪಟ್ಟಿರುವ ಮದುವೆಯೆಂಬ ಬಂಧನಕ್ಕೆ ಯಾವ ಜಾತೀಯತೆಯೂ ತಡೆಯಾಗದು. ಆದರೆ ಕನಿಷ್ಟ ವಿಶ್ವಾಸವೂ ಇಲ್ಲದ ಮದುವೆಯಲ್ಲಿ ಏನು ಸುಖ ತಾನೇ ಸಿಕ್ಕೀತಿ? ಯಾವ ಸಾಧನೆ ಲಭಿಸೀತು? ಕೇವಲ ಯಾವುದೋ ಒಂದು ಆವೇಶದಿಂದ ವಿರುದ್ಧ ಜಾತಿಯವರೋ ಇಲ್ಲಾ ಒಂದು ಜಾತಿಯೊಳಗಿನ ಅಸಮಾನ ಪಂಗಡದವರೋ ಮದುವೆಯಾದ ತಕ್ಷಣ ಈ ಜಾತೀಯತೆಗೆ ಮೋಕ್ಷ ಸಿಗುವುದೇ? ಮದುವೆ ಎನ್ನುವ ಬಂಧನ ಮನಸಿಗೆ ಸಂಬಧಿಸಿದ್ದು. ಯಾವುದೋ ಆವೇಶ, ಆದರ್ಶಗಳ ಮೇಲೆ ಮಾತ್ರ ಇದರ ಬುನಾದಿ ನಿಂತಿಲ್ಲ. ಇದರೊಳಗೆ ಬೆಸೆದಿರುವ ಸುಂದರ, ಸೂಕ್ಷ್ಮ ಸಂವೇದನೆಗಳು, ಮೃದು ಭಾವನೆಗಳು ಮಾತ್ರ ಈ ಬಂಧವನ್ನು ಬಿಗಿಯಾಗಿಸಬಲ್ಲವು. ಜಾತಿ ಯಾವುದೇ ಆಗಿರಲಿ ಮನಃಸ್ಥಿತಿ ಸಮಾನವಾಗಿರಬೇಕು. ಆಚಾರ ವಿಚಾರದಲ್ಲಿ, ಅಭಿರುಚಿಗಳಲ್ಲಿ ತೀರಾ ವೈರುಧ್ಯವಿದ್ದರೆ ಒಂದೇ ಜಾತಿಯಾಗಿದ್ದರೂ ಮದುವೆ ನಿಲ್ಲದು. ಹಾಗಿರುವಾಗ, ಸಂಪ್ರದಾಯ, ವಿಚಾರ, ಆಚಾರ, ಊಟೋಪಚಾರ ಎಲ್ಲವೂ ತದ್ವಿರುದ್ಧವಾಗಿರುವ ಕಡೆ, ಕೇವಲ ಒಂದು ಆದರ್ಶವನ್ನು ಮೆರೆಸಲೋಸುಗ, ಸಮಾಜದ ಒಂದು ಕಟ್ಟಳೆಯನ್ನು ಮುರಿಯಲೋಸುಗ ಮದುವೆಯಂತಹ ಸೂಕ್ಷ್ಮ ಸಂಪ್ರದಾಯವನ್ನು ಬಳಸಿದರೆ ಅದು ಎಷ್ಟಕ್ಕೂ ನಿಲ್ಲದು ಎನ್ನುವ ಸತ್ಯವನ್ನು ಕಾದಂಬರಿಯ ಉತ್ತರಾರ್ಧದಲ್ಲಿ "ಸತ್ಯಳ" ಒಂದೆರಡು ದೊಡ್ಡ ತಪ್ಪು ನಿರ್ಣಯಗಳ ಮೂಲಕ ಸ್ಪಷ್ಟವಾಗಿ ಕಾಣಿಸಿದ್ದಾರೆ ಬೈರಪ್ಪನವರು.
ಆದರೆ "ದಾಟುವಿನಲ್ಲಿ" ಕೆಲವೊಂದು ವಿಷಯಗಳ ಬಗ್ಗೆ ನನಗೆ ಇನ್ನೂ ಸಂದೇಹವಿದೆ. ಕಾದಂಬರಿಯ ಉತ್ತರಾರ್ಧದವಿಡೀ ತುಂಬಿರುವ ಹೋಮ ಹವನಗಳ ಸಂಕೇತವೇನು? ವೆಂಕಟರಮಣಯ್ಯನವರು ಸತ್ಯಳಿಗೇಕೆ ಜನಿವಾರವನ್ನು ಹಾಕಿದರು?  ಜಾತೀಯತೆಯನ್ನು ಮೆಟ್ಟಿಹಾಕುವ ಭರದಲ್ಲಿ ಸ್ಥಿತಃಪ್ರಜ್ಞಳಂತಿದ್ದ ಸತ್ಯಳೇಕೆ ಅಷ್ಟೊಂದು ತಪ್ಪು ನಿರ್ಣಯಗಳನ್ನು ಕೈಗೊಂಡಳು? ಕೊನೆಯದಾಗಿ ಮಾದಿಗಳಾದ ಮೀರಳೇಕೆ ತನಗೆ ಸತ್ಯ ಹಾಕಿದ್ದ ಯಜ್ಞೋಪವೀತವನ್ನು ತೆಗೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳು? ಎಲ್ಲಕ್ಕಿಂತ ಕಾಡಿದ ಪ್ರಶ್ನೆ ಎಂದರೆ ಅಪ್ಪ ತನಗೆ ಹಾಕಿದ್ದ ಜನಿವಾರವನ್ನು ಬಹು ಅಕ್ಕರಾಸ್ಥೆಯಿಂದ ಕಾಪಾಡಿಕೊಂಡು ಬಂದ ಸತ್ಯಳೇಕೆ ಕಾದಂಬರಿಯ ಕೊನೆಯಲ್ಲಿ ತೆಗೆದು ಎಸೆದಳು?- ಈ ಪ್ರಶ್ನೆಗಳಿಗೆ, ಈ ಕಾದಂಬರಿಯನ್ನು ಮೊದಲೇ ಓದಿದ ಸಹಮಾನಸಿಗರು ಸೂಕ್ತ ಉತ್ತರಗಳನ್ನು ಕಂಡುಕೊಂಡಿದ್ದರೆ, ನನಗೂ ತಿಳಿಸಬೇಕಾಗಿ ವಿನಂತಿ.

ಕೊನೆಯದಾಗಿ : "ದಾಟುವನ್ನು" ಓದಿ ಮುಗಿಸಿದ ಮೇಲೆ ಇಂದಿಗೂ ನನ್ನ ಮನದಲ್ಲಿ ಮನೆಮಾಡಿರುವ, ನಿತ್ಯ ಸತ್ಯವಾಗಿರುವ ಸಂದೇಶವೆಂದರೆ ಸತ್ಯಳ ತಂದೆ ವೆಂಕಟರಮಣಯ್ಯನವರು ತಮ್ಮ ಅಯೋಮಯ ಮನಃಸ್ಥಿತಿಯಲ್ಲಾಡಿದ ಸ್ಪಷ್ಟ ಮಾತು-"ನೀರು ಶಾಂತವಾಗಿದ್ದರೆ ಬಿಂಬಗಳು. ಪ್ರಳಯಜಲದಲ್ಲಿ ಬಿಂಬವೂ ಇಲ್ಲ, ಬಿಂಬಿಯೂ ಇಲ್ಲ". ಈ ಒಂದು ಸುಂದರ ಹಾಗೂ ಅದ್ಭುತ ಮಾತನ್ನು ನಮ್ಮ ಮನಸಿಗೆ ಹೋಲಿಸಿದರೆ ಅಗಾಧ ಅರ್ಥವನ್ನು ಇದು ನೀಡುತ್ತದೆ. ಇಂತಹ ಜಲಪ್ರಳಯ ನಮ್ಮೆಲ್ಲರ ಮನದೊಳಗೂ ಆಗಬೇಕಿದೆ. ಆಗಲೇ ಹಲವಾರು ಕೊಳಕುಗಳು, ಪೈಶಾಚಿಕ ಆಲೋಚನೆಗಳು ತೊಳೆದುಹೋಗಿ ನಮ್ಮ ಮಾನಸ ಶುಭ್ರವಾಗಬಹುದು. ಸಮಾಜದೊಳಗಿನ ಪರಿಮಿತಿಗಳು, ಅವುಗಳ ಎಲ್ಲೆಯನ್ನು ಸರಿಯಾಗಿ ಅರಿಯದೇ ದಾಟಿದರಾಗುವ ಉತ್ತಮ/ಕೆಟ್ಟ ಪರಿಣಾಮಗಳನ್ನು ಅರಿಯಲು ಒಮ್ಮೆಯಾದರೂ ಭೈರಪ್ಪನವರ "ದಾಟುವನ್ನು" ದಾಟಿ ಬನ್ನಿ.

ಸೂಚನೆ: ಇವರ ಇನ್ನೊಂದು ಮನೋಜ್ಞ ಕಾದಂಬರಿಯಾದ "ಗ್ರಹಣ" ಕೂಡ ಓದಲೇ ಬೇಕಾದ ಪುಸ್ತಕ. ಇದು ನಮ್ಮೊಳಗಿನ ಡಾಂಭಿಕತೆ, ಅರ್ಥವಿಲ್ಲದ ಆಚರಣೆ, ಮೂಢನಂಬಿಕೆಗಳನ್ನು ಎತ್ತಿ ತೋರುವುದಲ್ಲದೇ, ಇವುಗಳನ್ನು ಕುರುಡಾಗಿ ನಂಬುವುದರಿಂದ ಉಂಟಾಗುವ ಸಾಮಾಜಿಕ ದುಷ್ಪರಿಣಾಮಗಳನ್ನು, ವಿಪ್ಲವಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ.

---***---

ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.