ಬುಧವಾರ, ಆಗಸ್ಟ್ 27, 2008

ನಾ ಮೆಚ್ಚಿದ ಕವಿತೆ-೧



ಕವಿ - ಜಿ.ಎಸ್.ಶಿವರುದ್ರಪ್ಪ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವೆ
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ



*** ಜಿ.ಎಸ್.ಶಿವರುದ್ರಪ್ಪನವರ ಈ ಕವನವೊಂದೇ ಸಾಕು ಅವರ ಮನದ ತಿಳಿಯನ್ನು ನಮಗೆ ತಿಳಿಸಲು. ತುಂಬಾ ಸುಂದರ ಕವನ ಅಷ್ಟೇ ಸುಶ್ರಾವ್ಯವಾಗಿ ಹಾಡಬಹುದಾಗಿದೆ. ಇದರೊಳಗಿನ ಅರ್ಥವನರಿತು ನಡೆದರೆ, ನಾಲ್ಕುದಿನದ ಈ ಬದುಕಿನಲ್ಲಿ ಹೊಂದಾಣಿಕೆ ಎಂಬುದು ಕಷ್ಟವೆನಿಸದು.***
-ತೇಜಸ್ವಿನಿ ಹೆಗಡೆ

ಭಾನುವಾರ, ಆಗಸ್ಟ್ 10, 2008

ನೀನಾರಿಗಾದೆಯೋ ಎಲೆ ಮಾನವ..?!!!


ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಹೋಗಲು ಸುಮಾರು ೮-೯ ತಾಸುಗಳೇ ಬೇಕು. ಬೆಳಿಗ್ಗೆ ೫-೫.೩೦ ಗಂಟೆಗೆ ಹೊರಟರೂ ಮಧ್ಯಾಹ್ನ ೨-೩ ಗಂಟೆಗೆ ತಲುಪುತ್ತೇವೆ. ಇದಕ್ಕಾಗಿ ಶಿರಾಡಿ ಘಾಟಿಯ ಸುಂದರ ಕುಳಿಗಳಿಗೆ, ಎಂದೂ ಮುಗಿಯದ ಕಾಂಕ್ರೀಟ್ ಕಾಮಗಾರಿಗೆ ಧನ್ಯವಾದಗಳನ್ನು ಹೇಳಲೇ ಬೇಕು.

ನೆಲಮಂಗಲದವರೆಗಿನ ಟ್ರಾಫಿಕ್ ತಪ್ಪಿಸಿಕೊಳ್ಳಲು ಚುಮು ಚುಮು ಬೆಳೆಗ್ಗೆಯೇ ಎದ್ದು ಹೊರಡುವಾಗ ಕಣ್ಣ ನಿದ್ದೆ ಇನ್ನೂ ಆರಿರದಿರುವುದರಿಂದ ಒಂದು ತರಹದ ಜಡತ್ವ, ಆಲಿಸಿತನ ಮೈಗೂಡಿರುತ್ತದೆ. ಆದರೆ ಅದೇನೋ ಏನೋ ನೆಲಮಂಗಲವನ್ನೊಮ್ಮೆ ದಾಟಿದ ಕೂಡಲೇ ಅದೆಲ್ಲಿಂದಲೋ ಒಂದು ಚುರುಕುತನ ಮೂಡುತ್ತದೆ. ಸೂರ್ಯೋದಯದ ರಂಗು ತುಂಬಿಕೊಂಡ ತಿಳಿ ಬಾನು ಕಣ್ಣಿಗೆ ಹಬ್ಬ ಕೊಡುವಂತಿದ್ದರೆ, ತಂಗಾಳಿಯ ಹಿತ ಸ್ಪರ್ಶ ಕಚಗುಳಿ ಇಡುತ್ತದೆ. ಭೀಮಸೇನ ಜೋಶಿಯವರ "ಕರುಣಾಕರ ನೀ ಎಂಬುವದ್ಯಾತಕೋ..." ಹಾಡು ಹೊಮ್ಮುವಾಗ ಅಳಿದುಳಿದ ಜಡತ್ವ ಮರೆಯಾಗುತ್ತದೆ.

ಆದರೆ ಇವೆಲ್ಲವುಗಳ ಜೊತೆಗೆ ಮನಸ್ಸಿಗೆ ಮುದ ನೀಡುತ್ತಿದ್ದ ದೃಶ್ಯವೆಂದರೆ ಹಾಸನದವರೆಗೂ ದಾರಿಯ ಇಕ್ಕೆಲಗಳಲ್ಲೂ ಹಬ್ಬಿ ತಂಪೆಳಲ ನೀಡುತ್ತಾ, ಹಕ್ಕಿಗಳ ಚಿಲಿಪಿಲಿ ಹಾಡ ಕೇಳಿಸುತ್ತಾ, ಬಿಸಿಲು ನೆರಳಿನಾಟವ ಕಾಣಿಸುತ್ತಾ, ಅಲ್ಲಲ್ಲಿ ದಾರಿಗಳುದ್ದಕ್ಕೂ ಹೂ ಚೆಲ್ಲಿ ಸ್ವಾಗತ ಕೋರುವಂತಿದ್ದ ಬೃಹತ್ ಮರಗಳು! ಇವುಗಳನ್ನು ನೋಡುತ್ತಾ ಸಾಗುವುದೇ ಒಂದು ಕಣ್ಣಿಗೆ ಹಬ್ಬ. ಆಲದ ಮರ, ಮಾವಿನ ಮರ, ಹಲಸಿನ ಮರ, ನುಗ್ಗೆ- ಹೀಗೆ ವಿವಿಧ ಜಾತಿಯ ಮರಗಳು. ಬಿದ್ದು ಹುಟ್ಟಿದ್ದೋ ಇಲ್ಲಾ ಯಾರೋ ಪುಣ್ಯಾತ್ಮರು ನೆಟ್ಟಿದ್ದೋ.. ಈ ಮರಗಳು ನನ್ನ ಪ್ರಯಾಣದ ಆಯಾಸವನ್ನಂತೂ ಕಡಿಮಾಡುತ್ತಿದ್ದವು.

ಆದರೆ ಈಗ...!!!

ಆರೇಳು ತಿಂಗಳುಗಳ ಕಳೆದು ಮತ್ತೆ ನಾನು ಅದೇ ದಾರಿಯಲ್ಲಿ ಪ್ರಯಾಣಿಸುವಾಗ ಕಂಡ ದೃಶ್ಯಗಳು ನನ್ನಲ್ಲಿ ಅತೀವ ನೋವು ಹಾಗೂ ವೇದನೆಯನ್ನು ತುಂಬಿದವು. ಸರಕಾರದ ಮಹಾನ್ ಚತುಷ್ಪಥ ಯೋಜನೆ ಎನ್ನುವುದು ಈ ಮರಗಳನ್ನೆಲ್ಲಾ ನೆಲಸಮ ಮಾಡಿದೆ.

ಕಾರಣ...??!!

ವಾಹನಗಳ ದಟ್ಟಣೆ ಹೆಚ್ಚಾಗಿರುವುದು, ಅಪಘಾತಗಳನ್ನು ತಡೆಯಲು, ತಾಸುಗಳ ಕಾಲ ವಾಹನಗಳ ನಿಲುಗಡೆಯನ್ನು ನಿಲ್ಲಿಸಲು ಈ ಕ್ರಮ. ಚತುಷ್ಪಥ ರಸ್ತೆಯಲ್ಲಿ ವೇಗವಾಗಿ ಸಾಗಿ ಬೇಗ ಗಮ್ಯ ತಲುಪಿ ಸಮಯ ಉಳಿಸಲು ಈ ಮರಗಳನ್ನು ಅಳಿಸಿದ್ದಾರೆ!

ಬೀಜವಾಗಿ ಮಣ್ಣಸೇರಿ ಸಸಿಯಾಗಿ, ಮರವಾಗಿ, ಬೃಹತ್ತಾಗಿ ಬೆಳೆದು ಹಬ್ಬಲು ಅದೆಷ್ಟೋ ವರುಷಗಳು ಬೇಕಾದವು. ಯಾರೂ ನೀರುಣಿಸಲಿಲ್ಲ, ಕಸಿ ಮಾಡಲಿಲ್ಲ, ಗೊಬ್ಬರ ಹಾಕಲಿಲ್ಲ. ಪ್ರಕೃತಿಯೇ ಮಮತೆಯಿಂದ ಬೆಳೆಸಿದ್ದ ನೂರಾರು ಮರಗಳು ಈಗಿಲ್ಲ! ಅದೆಷ್ಟೋ ವರುಷಗಳಿಂದ ಹಲವಾರು ಪಕ್ಷಿಗಳಿಗೆ ವಾಸಸ್ಥಾನವಾಗಿದ್ದ, ಅನೇಕ ಜೀವಜಂತುಗಳಿಗೆ ಆಶ್ರಯ ನೀಡಿದ್ದ, ಉರಿ ಬಿಸಿಲಾಗಿ ಬಸವಳಿದ ಮನುಷ್ಯರಿಗೆ ತಂಪೆಳಲ ನೀಡಿದ್ದ, ತನ್ನೊಳಗಿನ ಹೂವು, ಕಾಯಿ, ಹಣ್ಣು, ಟೊಂಗೆ, ಎಲೆ-ಎಲ್ಲವನ್ನೂ ನೀಡಿ ಧಾರೆಯೆರೆದ ನಿಃಸ್ವಾರ್ಥ ಮರಗಳನ್ನು ಕೆಲವೇ ದಿನಗಳಲ್ಲಿ ನೆಲಸಮ ಮಾಡಲಾಗಿದೆ!ಅದೇಕೋ ಏನೋ ಇತ್ತೀಚಿಗೆ ವಾಹಿನಿಯೊಂದರಲ್ಲಿ ಬರುತ್ತಿರುವ ಧಾರಾವಾಹಿಯೊಂದರ ಹಾಡಿನ ಸಾಲೊಂದು ನೆನಪಾಯಿತು..

"ಮಣ್ಣ ತಿಂದು ಸಿಹಿ ಹಣ್ಣನೀವ ಮರ
ನೀಡಿ ನೀಡಿ ಮುಕ್ತ..
ಬೇವ ಅಗಿವ ಸವಿಗಾನದ ಹಕ್ಕಿ
ಹಾರಿ ಹಾರಿ ಮುಕ್ತ..."

ಒಂದು ಕಾಲದಲ್ಲಿ ನಳನಳಿಸಿ ನಗುತ್ತಿದ್ದ ಹೆಮ್ಮೆಯಿಂದ ತೆಲೆಯೆತ್ತಿ ಬಾನಂಚ ಮುಟ್ಟುವಂತಿದ್ದ ಮರಗಳ ದುರ್ಗತಿ ಕಂಡು ತುಂಬಾ ಸಂಕಟವಾಯಿತು. ಆ ದೃಶ್ಯಗಳನ್ನೇ ಈ ಸಲ ಸೆರೆ ಹಿಡಿದು ನಿಮ್ಮ ಮುಂದೆ ಇಟ್ಟಿರುವೆ.



ಎಷ್ಟು ಸಿಕ್ಕರೂ ಇನ್ನಷ್ಟು ಬೇಕೆಂದು ಬೊಬ್ಬಿರಿವ ಬಕಾಸುರನಂತಾಗಿರುವ ಮನುಷ್ಯ. ಕೇವಲ ತನ್ನ ಸವಲತ್ತಿಗೋಸ್ಕರ ಅಸಂಖ್ಯಾತ ಜೀವ ಜಂತುಗಳನ್ನು ನಿರ್ಗತಿಕರನ್ನಾಗಿಸಲು ನಮಗೆ ಯಾವ ಹಕ್ಕಿದೆ? "ನೀವೂ ಜೀವಿಸಿ ನಮ್ಮನ್ನೂ ಜೀವಿಸಲು ಬಿಡಿ" ಎಂದು ದೈನ್ಯತೆಯಿಂದ ಕೇಳಿಕೊಳ್ಳುವಂತಿದೆ ಪ್ರಕೃತಿ. ಆದರೂ ನಾವು ಪದೇ ಪದೇ ಅದರ ಸಹನೆಯನ್ನು ಮಿತಿ ಮೀರಿ ಪರೀಕ್ಷಿಸುತ್ತಿದ್ದೇವೆ. ಇನ್ನೂ ನಮ್ಮ ಕ್ರೌರ್ಯ ನಿಲ್ಲದೇ ಹೋದರೆ ಪ್ರಕೃತಿಯೇ ಸಂಪೂರ್ಣ ತಿರುಗಿ ಬಿದ್ದೀತು. ಈಗಾಗಲೇ ನಮ್ಮ ಅಪರಾಧದಿಂದ ಸುನಾಮಿ, ಕಡಲ್ಗೊರೆತ, ಅತಿವೃಷ್ಟಿ, ಅನಾವೃಷ್ಟಿ - ಮುಂದಾದ ವೈಕೋಪಗಳನ್ನು ಅನುಭವಿಸಿದ್ದೇವೆ.. ಅನುಭವಿಸುತ್ತಲೂ ಇದ್ದೇವೆ. ಆದರೂ ನಾವು ಅದನ್ನು ನಿರ್ಲಕ್ಷಿಸುತ್ತಾ ಬಂದಿದ್ದೇವೆ.

ಪ್ರತಿ ವರ್ಷವೂ ಜೂನತಿಂಗಳಿನಲ್ಲಿ ಕಾಟಾಚಾರಕ್ಕೆ ಸರಕಾರ "ವನಮಹೋತ್ಸವವನ್ನು" ಆಚರಿಸುತ್ತದೆ. ಆದರೆ ಇನ್ನೊಂದೆಡೆ ಇಂತಹ ಯೋಜನೆಗಳ ಹೆಸರಿನಡಿಯಲ್ಲಿ "ವನದಹೋತ್ಸವವನ್ನೇ" ಜಾರಿಗೆ ತರುತ್ತದೆ! ನೂರಾರು ಮರಗಳ ನಾಶವಾಗುತ್ತಿರುವಾಗಲೂ ಈ ಕಡೆ ಯಾಕೆ ಯಾವ ಸಂಘಟನೆಯೂ ದೃಷ್ಟಿ ಹರಿಸಿಲ್ಲ? ಈ ಮರಗಳನ್ನು ಉಳಿಸಲು ಯಾರೂ ಯಾಕೆ ಅಪ್ಪಿಕೋ ಚಳುವಳಿ ನಡೆಸಿಲ್ಲ? ಇವುಗಳೆಲ್ಲಾ ನಾಡ ಮರಗಳೆಂದೇ?! ಕಾಡು ಮರಗಳಲ್ಲವೆಂದೇ?!
ಇದೇ ರೀತಿ ಮುಂದುವರಿದರೆ ಈ ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವ ಬೋಳು ಕಲ್ಲುಗುಡ್ಡೆಯೇ ಭೂಮಿಯ ತುಂಬೆಲ್ಲಾ ತುಂಬಿಕೊಂಡು, ಆ ಬುಡಕಡಿದು ಗೆದ್ದಲು ಹಿಡಿದ ಮರದ ತುಂಡಿನ ಸ್ಥಿತಿ ನಮ್ಮದಾಗುವುದು.



`ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು'-ಆದರೆ ಹಳೆಬೇರನ್ನೇ ನಾಶಮಾಡಿದರೆ ಹೊಸ ಚಿಗುರಿನ ಪ್ರಶ್ನೆಯೇ ಏಳದು. ಹೊಸ ಹೊಸ ಅನ್ವೇಷಣೆಗಳನ್ನು ಹೊರತರುತ್ತಾ, ಹಳೆಯ ತತ್ವಗಳ ಸತ್ವವನ್ನೇ ತೂರಿಬಿಟ್ಟರೆ ಅಧರ್ಮವೇ ಹೆಚ್ಚಾಗಿ ಜೀವನ ರಸವೇ ಬತ್ತಿಹೋಗುವುದು. ಬರಿಯ ಕಸವಾಗುವುದು ಈ ಮನುಕುಲ. ಋಷಿ ವಾಕ್ಯದೊಡನೆ ವಿಜ್ಞಾನವು ಕೂಡಿದರೆ ಮಾತ್ರ ಈ ಜಗತ್ತು ಉಳಿದೀತು ಬೆಳೆದೀತು.
---***---