ಅಂದು ಮಧ್ಯಾಹ್ನವೇ ‘ಕಲಾ ವಿಹಾರ’ದ ಗೋವಿಂದ ಮುಖರ್ಜಿಯವರು ಭೂಮಿಯನ್ನು ಕರೆದು ತಮ್ಮ ನಾಟಕದ ಸ್ಕ್ರಿಪ್ಟ್ ಕೊಟ್ಟು... “ಭೂಮಿ,
ವಿದರ್ಭ ನಾಟಕ ಮಂಡಳಿಯವರು ನಾಟಕೋತ್ಸವವನ್ನು ಏರ್ಪಡಿಸುತ್ತಿದ್ದಾರೆ. ಅಂದು ರಾಜ್ಯಮಟ್ಟದ ನಾಟಕ ಸ್ಪರ್ಧೆಯನ್ನೂ ಆಯೋಜಿಸುತ್ತಿದ್ದಾರಂತೆ. ಅದರಲ್ಲಿ ನಮ್ಮ ತಂಡವೂ ಭಾಗವಹಿಸುತ್ತಿದೆ, ಆದರೆ ಸಮಯ ಜಾಸ್ತಿ ಇಲ್ಲ,
ಅಬ್ಬಬ್ಬಾ ಅಂದರೆ ಇನ್ನೊಂದು ತಿಂಗಳಷ್ಟೇ! ಆದರೆ ನಾಟಕದ ಅವಧಿಯೇನೂ ಹೆಚ್ಚಿನದಲ್ಲ,
ಅರ್ಧಗಂಟೆಯಿಂದ ಒಂದು ತಾಸಿನೊಳಗೆ ಮುಗಿಸಬೇಕಂತೆ... ಏನೋ ಹೊಸ ಪ್ರಯೋಗವಂತಪ್ಪ... ಹೀಗಾಗಿ ನೋಡೋಣ ಅಂತಿದ್ದೇನೆ. ಹಾಂ,
ಈಗ ವಿಷಯ ಏನಂದ್ರೆ,
ನಾನು ಬರೆದಿರುವ ಈ ನಾಟಕದ ಮುಖ್ಯ ಪಾತ್ರಧಾರಿಯ ಪಾತ್ರವನ್ನು ನೀನೇ ಮಾಡ್ಬೇಕು ಎಂಬುದು ನಿನ್ನ ನಾಟಕದ ಗುರು ಹಾಗೂ ನನ್ನ ಮಿತ್ರರೂ ಆಗಿರುವ ಶಿವಶಂಕರರ ಅಭಿಪ್ರಾಯ. ಅವರ ಪ್ರಕಾರ ನೀನಿದಕ್ಕೆ ಚೆನ್ನಾಗಿ ಜೀವ ತುಂಬಬಲ್ಲೆ. ನೀನು ಯಾವುದಕ್ಕೂ ಸ್ಕ್ರಿಪ್ಟ್ ಓದಿ ನಾಳೆ ಸಂಜೆಯೊಳಗೆ ಹೇಳಿಬಿಡು” ಎಂದಾಗ ಅವಳಿಗೆ ನಂಬಲೇ ಆಗಿರಲಿಲ್ಲ! ಮುಖರ್ಜಿಯವರಿಂದ ಬಂದ ಅಂಥ ದೊಡ್ಡ ಆಫರ್ ನೋಡಿ ಸಂತೋಷದಿಂದ “ಸರ್,
ನೀವು ಹೇಳೋದು ಹೆಚ್ಚೋ,
ನಾನು ಮಾಡೋದೋ! ಪಾತ್ರ ಯಾವ್ದೇ ಆಗಿರ್ಲಿ,
ನಾನು ನನ್ನ ಸಂಪೂರ್ಣ ಎಫರ್ಟ್ ಹಾಕ್ತೀನಿ... ಖಂಡಿತ,
ನಾನು ಈ ಸ್ಕ್ರಿಪ್ಟನ್ನು ಇವತ್ತೇ ಓದ್ತೀನಿ,
ಬಟ್ ಈಗ್ಲೇ ನಾನು ನಿಮ್ಮ ಆಫರ್ ಒಪ್ಕೊಳ್ತಿದ್ದೀನಿ” ಎಂದು ಆಕ್ಷಣವೇ ಉತ್ತರಿಸಿಬಿಟ್ಟಿದ್ದಳು. ಆದರೆ ಅನುಭವಿಗಳಾಗಿದ್ದ ಮುಖರ್ಜಿಯವರು ಮುಗುಳ್ನಗುತ್ತಾ,
“ಯಾವುದಕ್ಕೂ ನೀನು ಓದಿದ ಮೇಲೆಯೇ ನಿರ್ಧರಿಸುವುದು ಒಳಿತು... ಆಮೇಲೆ ರಿಹರ್ಸಲ್ ನಡುವೆ ‘ಈ ಪಾತ್ರ ನನ್ನಿಂದಾಗದು...’ ಎಂದು ರಾಗವೆಳೆದರೆ ನಾನು ಒಪ್ಪೆನು! ಏನೇ ತಕರಾರಿದ್ದರೂ ಮೊದಲೇ ನಿವಾರಣೆಯಾಗಿಬಿಡಲಿ...” ಎಂದು ಒತ್ತಿ ಹೇಳಿ ಅಲ್ಲಿಂದೆದ್ದು ಹೋಗಿಬಿಟ್ಟಿದ್ದರು. ಆದರೆ ಭೂಮಿಗೋ ಕಾಲು ನೆಲದ ಮೇಲೇ ಇರಲಿಲ್ಲ. ಉಳಿದೆಲ್ಲಾ ಕೆಲಸಗಳನ್ನು ಬದಿಗೊತ್ತಿ,
ಮನೆಗೆ ಓಡಿ ಬಂದವಳೇ ಸೀದಾ ಫೈಲನ್ನು ತೆರೆದಿದ್ದಳು.
ನೀಲಿ ಬಣ್ಣದ ದಪ್ಪಕ್ಷರದಲ್ಲಿ ಬರೆದಿದ್ದ ‘ಜಬಾಲಿ’ – ಎಂಬ ನಾಟಕದ ಶೀರ್ಷಿಕೆಯನ್ನೋದುತ್ತಿರುವಂತೆಯೇ ಅವಳೊಳಗೇನೋ ಸೆಳೆತವುಂಟಾಗಿಬಿಟ್ಟಿತ್ತು! ಈ ಹೆಸರನ್ನೆಲ್ಲೋ ಕೇಳಿರುವಂತೆ,
ಕಾಲೇಜಿನಲ್ಲೆಲ್ಲೋ ಓದಿದ್ದಂತೆ ಅಸ್ಪಷ್ಟ ನೆನಪು. ಊಹೂಂ,
ಆದರೂ ಅವಳಿಗೇನೂ ಸರಿಯಾಗಿ ಹೊಳೆಯುತ್ತಿಲ್ಲ. ತಲೆಕೊಡವಿಕೊಂಡು ಓದಲು ಶುರುವಿಟ್ಟುಕೊಂಡಿದ್ದಳು. ಆದರೆ ಕೆಲವು ಪುಟಗಳನ್ನೋದುತ್ತಿರುವಂತೆಯೇ ಅವಳೊಳಗಿನ ಉತ್ಸಾಹವೆಲ್ಲಾ ಜರ್ರನೆ ಇಳಿದು ತಣ್ಣಗಾಗಿಬಿಟ್ಟಿತ್ತು! ಅದರಲ್ಲೂ-
“ತಾಯೇ, ನನ್ನ ಹುಟ್ಟಿಗೆ ಯಾರು ಕಾರಣರು?
ನನ್ನ ಗೋತ್ರ ಯಾವುದು?
ನನಗೇಕೆ ಉಳಿದ ವಟುಗಳಂತೇ ಮಂತ್ರೋಪದೇಶ ನೀಡಲಾಗದು?
ನನಗೆ ಪರಮಗುರು ಶ್ರೀಯುತ ಗೌತಮರು ವಿದ್ಯಾದಾನ ನೀಡುವರೇ?
ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವರೇ?” [ಸತ್ಯಕಾಮ ತನ್ನ ತಾಯಿ ಜಬಾಲಿಯ ಕಣ್ಣಲ್ಲಿ ಕಣ್ಣಿಟ್ಟು ನೇರವಾಗಿ ಸ್ಪಷ್ಟ ದ್ವನಿಯಲ್ಲಿ ವಿನಯದಿಂದ ಕೇಳುತ್ತಾನೆ] – ಈ ಸಂಭಾಷಣೆಯನ್ನೋದಿದ ಮೇಲಂತೂ ಒಳಗೆಲ್ಲೋ ಅದುಮಿಟ್ಟಿದ್ದ ಯಾತನೆಯ ಜ್ವಾಲೆಯು ಭಗ್ಗನೆ ಹೊತ್ತುರಿದು ನಿತ್ರಾಣ ಆವರಿಸಿಬಿಟ್ಟಿತ್ತು. ಒಂದಕ್ಷರವನ್ನೂ ಮುಂದೆ ಓದಲಾಗದೇ ಥಟ್ಟನೆ ಫೈಲನ್ನು ಮುಚ್ಚಿಬಿಟ್ಟಿದ್ದಳು. ಅದೇ ಹೊತ್ತಿಗೆ ಮನೆಯ ಬೆಲ್ ಹೊಡೆದುಕೊಳ್ಳಲು ಸಾವರಿಸಿಕೊಂಡು ಬಾಗಿಲು ತೆರೆದರೆ ಎದುರಿಗೆ ಐದು ವರುಷದ ಮಗ ಅಜೇಯ ನಿಂತಿದ್ದ! ನಗುವನ್ನು ತಂದುಕಂಡು ಅವನನ್ನಪ್ಪಿದ್ದಳು. ಅಜೇಯನ ಹಿಂದೆಯೇ ಬಂದ ಆತನ ಕೇರ್ ಟೇಕರ್ ಆತನನ್ನು ಭೂಮಿಗೆ ಒಪ್ಪಿಸಿ ಆದಿನದ ತನ್ನ ಕೆಲಸ ಮುಗಿಯಿತೆಂಬಂತೆ ಮನೆಗೆ ಹೊರಟು ಬಿಡಲು,
ಆ ಪುಟ್ಟ ಮನೆಯೊಳಗೆ ಅಮ್ಮ,
ಮಗನ ಗಲಗಲವೇ ತುಂಬಿಹೋಗಿತ್ತು. ಮಗನಿಗೆ ಊಟ ಮಾಡಿಸಿ,
ಮಲಗಿಸುವವರೆಗೂ ಅವಳ ಒಡಲೊಳಗಿನ ಬೆಂಕಿ ಹೊಗೆಯಾಡುತ್ತಾ ಮಗುಮ್ಮಾಗಿತ್ತು. ಪುಟ್ಟ ಅಜೇಯ ಶಾಂತವಾಗಿ ನಿದ್ರಿಸಿದ್ದೇ ಅದು ಬಿಸಿನೀರಾಗಿ ಜಿನುಗಿ,
ಕೆನ್ನೆಯನ್ನು ಸುಡತೊಡಗಿತ್ತು. ಒಳಗಿನ ಭಾರ ತಡೆಯಲಾಗದೇ ಅಳಬೇಕೆನಿಸುವಷ್ಟು ಹೊತ್ತೂ ಅತ್ತು,
ಆಮೇಲೆ ಸುಧಾರಿಸಿಕೊಂಡು ಪೂರ್ತಿ ನಾಟಕವನ್ನೋದಿ ಮುಗಿಸಿದ್ದಳು.
ಈಗ ಅವಳ ತಲೆಯ ತುಂಬಾ ನುರಾರು ಪ್ರಶ್ನೆಗಳು ಕುಣಿಯತೊಡಗಿದ್ದವು. ನಿದ್ದೆಬಾರದೇ ಬಾಲ್ಕನಿಯಲ್ಲಿ ಕುಳಿತಿದ್ದವಳಿಗೆ ಕಪ್ಪು ಆಗಸದಲ್ಲಿ ಮಿನುಗುವ ನಕ್ಷತ್ರಗಳೆಲ್ಲಾ ಹೊಳೆಹೊಳೆದು ತಿವಿದಂತಾಗಲು ಹಾಗೇ ಕಣ್ಮುಚ್ಚಿದ್ದಳು. ಥಟ್ಟನೆ ಏನೋ ಅನ್ನಿಸಲು,
ಮೊಬೈಲ್ ತೆಗೆದು ತನ್ನ ಮಾರ್ಗದರ್ಶಿಗಳು,
ಗುರುಗಳೂ ಆದ ಶಿವಶಂಕರ್ ಅವರಿಗೆ ತಾನು ಬೆಳಗ್ಗೆ ಒಂಭತ್ತು ಗಂಟೆಗೆ ಅವರಲ್ಲಿಗೆ ಬರುತ್ತಿರುವುದಾಗಿ ಸಂದೇಶ ಕಳುಹಿಸಿ ನಿಟ್ಟುಸಿರಿಟ್ಟಳು. ಅದೆಷ್ಟು ಹೊತ್ತಿಗೋ ಜೊಂಪು ಹತ್ತಿದವಳು ಬೆಳಗನ್ನೂ ಅಲ್ಲೇ ಹಾಯಿಸಿಬಿಟ್ಟಿದ್ದಳು.
~೨~
“ಗುರೂಜಿ, ನೀವ್ಯಾಕೆ ಗೋವಿಂದ ಮುಖರ್ಜಿಯವರಿಗೆ ಅವರ ‘ಜಬಾಲಿ’ ಪಾತ್ರಕ್ಕೆ ನನ್ನೇ ಆಯ್ಕೆ ಮಾಡಲು ಸೂಚ್ಚಿಸಿದ್ದೀರಿ ಎಂದು ಕೇಳಬಹುದೇ?
ನಾನೂ ಆಕೆಯಂತೆಯೇ ಸಿಂಗಲ್ ಪೇರೆಂಟ್ ಎಂದೇ?” ಎಷ್ಟು ಬೇಡವೆಂದರೂ ಅವಳ ಧ್ವನಿಯಲ್ಲಿ ಕಟುತ್ವ,
ಕಹಿ ಎದ್ದು ನಿಂತಿತ್ತು,
ನಡುಕ ತುಂಬಿತ್ತು. ಆದರೆ ಅವಳ ಪರಿಸ್ಥಿತಿ ಹಾಗೂ ಮನಸ್ಥಿತಿಯನ್ನು ಚೆನ್ನಾಗಿ ಅರಿತಿದ್ದ ಶಿವಶಂಕರ್ ಅವರಿಗೆ ಬೇಸರವಾಗಲಿಲ್ಲ. ಅವರು ತಮ್ಮ ಕಣ್ಣನ್ನು ಮೃದುವಾಗಿಸುತ್ತಾ,
“ಅಲ್ಲಮ್ಮಾ ಭೂಮಿ, ನೀನು ನನಗೆ ಎಷ್ಟು ವರುಷಗಳಿಂದ ಪರಿಚಯ ಹೇಳು?
ಸುಮಾರು ಏಳೆಂಟು ವರುಷಗಳಿಂದ ಬಲ್ಲೆ ನಿನ್ನನ್ನು. ಅಂಥದ್ದರಲ್ಲಿ ಇಂಥಾ ಆರೋಪವೇಕಮ್ಮಾ?
ನಾನು ನಿನ್ನ ಹೆಸರು ಸೂಚಿಸಿದ್ದು ನೀನು ಇಂಥಾ ಪರಿಸ್ಥಿಯನ್ನು ದಿಟ್ಟವಾಗಿ ಎದುರಿಸಿದ್ದಿ,
ಮುಂದೆಯೂ ಎದುರಿಸಬಲ್ಲೆ ಎಂಬ ಕಾರಣದಿಂದ! ಹೀಗಾಗಿಯೇ ಜಬಾಲಿಯ ಪಾತ್ರಕ್ಕೆ ಗಟ್ಟಿ ಜೀವವನ್ನು ನೀನು ತುಂಬಬಲ್ಲೆಯೆಂದು ಮುಖರ್ಜಿಯವರಿಗೆ ಸಜೆಸ್ಟ್ ಮಾಡಿದ್ದು ಅಷ್ಟೇ...” ಎಂದಿದ್ದೇ,
ಮಡಗಟ್ಟಿದ್ದ ಅವಳ ದುಃಖ ಮತ್ತೆ ನೀರಾಗಿ ಹರಿಯತೊಡಗಿತ್ತು. ಪಶ್ಚಾತ್ತಾಪದಲ್ಲಿ ಅವರ ಮುಂದೆ ಹಣೆಗೆ ಕೈಯೊತ್ತಿಕೊಂಡು ಬಿಕ್ಕಿಬಿಕ್ಕಿ ಅತ್ತುಬಿಟ್ಟಳು. ಅವರು ಮತ್ತೇನನ್ನೂ ಹೇಳದೇ,
ಮೆಲ್ಲನೆ ಅವಳ ತಲೆಯನ್ನು ನೇವರಿಸುತ್ತಾ ಮೌನವಾಗಿದ್ದುಬಿಟ್ಟರು. ಅವಳು ತುಸು ಸುಧಾರಿಸಿಕೊಂಡ ನಂತರ,
ತಾವೇ ಎದ್ದು ಒಳಗೆ ಹೋಗಿ ಎರಡು ಲೋಟ ಬಿಸಿಬಿಸಿ ಕಾಫಿ ತರಲು,
ಸ್ವಲ್ಪ ಹಗುರಾಗಿದ್ದ ಭೂಮಿ ನಿಧಾನಕ್ಕೆ ಹೀರತೊಡಗಿದಳು. ಅವಳೊಳಗಿನ ಬೇಗುದಿಗೆ ಇಳಿಯುತ್ತಿದ್ದ ಸುಡುವ ಕಾಫಿ ಸಾಂತ್ವನ ಹೇಳತೊಡಗಿತ್ತು.
ಶಿವಶಂಕರ ಅವರು ತಮ್ಮ ತುಂಬು ಬದುಕನ್ನೇ ಕಲೆಗಾಗಿ ಮುಡಿಪಿಟ್ಟವರು. ಹೀಗಾಗಿ ಒಬ್ಬಂಟಿಯಾಗಿದ್ದುಕೊಂಡೇ ಕಲಾ ಸೇವೆ ಮಾಡುತ್ತಿದ್ದ ತಪಸ್ವಿ. ಅವರ ಗರಡಿಯಲ್ಲೇ ಅದೆಷ್ಟೋ ಶಿಷ್ಯರು ನಾಟಕವನ್ನು ಕಲಿತು ಪಳಗಿ ವಿವಿಧ ಕಡೆಯಲ್ಲಿ ಬೇರೂರಿದ್ದರು. ಅವರಲ್ಲಿ ಭೂಮಿಯೂ ಓರ್ವಳು.
“ಗುರೂಜಿ, ದಯವಿಟ್ಟು ಕ್ಷಮಿಸಿ ಬಿಡಿ ನನ್ನ... ಏನೋ ಒಳಗಿನ ಉರಿ ಹೀಗೆಲ್ಲಾ ಕಹಿಯನ್ನು ಹೊರಹಾಕಿಸಿಬಿಟ್ಟಿತು. ನನಗೆ ಈ ಜಬಾಲಿ ಕಥೆ ಅಷ್ಟು ಸರಿಯಾಗಿ ಗೊತ್ತಿರಲಿಲ್ಲ. ಈಗ ಓದಿದ್ಮೇಲೆ... ಅದೂ ನಡುವೆ ಬಂದ ಆ ಸಂಭಾಷಣೆಯನ್ನೋದಿದ್ಮೇಲಿಂದ ಬೇರೇನೂ ತೋಚ್ತಿಲ್ಲ... ಇದು ಉಪನಿಷತ್ತಿನ ಕಥೆ ಎಂದು ಮಾಹಿತಿ ದೊರಕಿತು. ಗುರೂಜಿ,
ಈಗ ನನ್ನೊಳಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅಂದು ಆ ಜಬಾಲಿಗೂ ನನ್ನಂತೆ ಕಷ್ಟದ ಅನುಭವ ಆಗಿದ್ದರಬಹುದಲ್ಲವೇ? ಆಗಿನ ಸಮಾಜವೂ ಹೀಗೇ ಇತ್ತೇ?
ಹುಟ್ಟಿಗೆ ಕಾರಣನಾದವನ ಹೆಸರು ಅಷ್ಟು ಮುಖ್ಯವಾಗಿತ್ತೇ?
ಗುರೂಜಿ, ನಂಗ್ಯಾಕೋ ಅಜೇಯನಿಗೆ ಅವನ ಅಪ್ಪನ ಕುರಿತು ಹೇಳಲೇ ಮನಸಾಗುತ್ತಿಲ್ಲ! ನನ್ಜೊತೆ ಪ್ರೀತಿಯ ನಾಟಕವಾಡಿ,
ಮದ್ವೆಯಾಗಿ, ತಿಂಗಳೊಪ್ಪತ್ತಿಗೆ ಕೈಕೊಟ್ಟು ಓಡಿ ಹೋದ ಆ ವಂಚಕನ ಪೋಟೋ ತೋರಿಸಿ ‘ಪುಟ್ಟು,
ಇವನೇ ನಿನ್ನಪ್ಪ’ ಎಂದು ಹೇಗೆ ಹೇಳಲಿ?
ಅವನಿಗೆ ಅಂಥ ಅಪ್ಪನ ಹೆಸರು ಕೊಡ್ಬೇಕೆ?
ನಾನೇ ಹಠಮಾಡಿ ಮಾಡ್ಕೊಂಡಿದ್ದ ಮದುವೆಯೆಂದು ನನ್ನ ಅಪ್ಪ,
ಅಮ್ಮನೂ ಈ ಕಡೆಗೆ ಮುಖನೂ ಹಾಕ್ಲಿಲ್ಲ... ನಂದೇನಿದ್ರೂ ಏಕಾಂಗಿ ಹೋರಾಟ... ಇದೆಲ್ಲಾ ನಿಮ್ಗೂ ಚೆನ್ನಾಗಿಯೇ ಗೊತ್ತಲ್ಲ. ಆ ದಿನಗಳಲ್ಲಿ ನೀವು ಮತ್ತು ನನ್ನ ಕೆಲವು ಆಪ್ತ ಸ್ನೇಹಿತರ ಬೆಂಬಲವಿದೇ ಹೋಗಿದ್ದಿದ್ರೆ ನನ್ಗತಿ ಏನಾಗಿತ್ತೋ! ಆದ್ರೂ ನಾನು ಇವತ್ತು ನಿಮ್ಮನ್ನೂ ಅನುಮಾನಿಸಿ ನೋಯಿಸ್ಬಿಟ್ಟೆ...” ದುಗುಡದಲ್ಲಿ ಅವಳ ಗಂಟಲುಬ್ಬಿ ಬಂದಿತ್ತು. ಅವಳ ಹೋರಾಟದ ಬದುಕಿನ ಸಂಪೂರ್ಣ ಪರಿಚಯವಿದ್ದ ಶಿವಶಂಕರರು,
“ಅಮ್ಮಾ ಭೂಮಿ, ನಂಗೆಲ್ಲಾ ಗೊತ್ತಿಲ್ವೇನಮ್ಮಾ? ನೀನು ನನ್ನ ಮೆಚ್ಚಿನ ಶಿಷ್ಯೆ;
ಗುರುವಿಗೆ ಶಿಷ್ಯೆ ಮಗಳಂತೆಯೂ ಹೌದು ಅಲ್ವಾ?
ಭೂಮಿ, ನಾನು ಉಪನಿಷತ್ತನ್ನು ತುಂಬಾ ಆಳವಾಗೇನೂ ಅಭ್ಯಾಸ ಮಾಡಿಲ್ಲ... ಆದ್ರೆ ಇಷ್ಟು ಮಾತ್ರ ಹೇಳಬಲ್ಲೆ... ಆಗಿನ ಕಾಲದಲ್ಲಿ ಹೆಣ್ಣಿಗೆ ತನಗೆ ಬೇಕಾದ ಪುರುಷನ ಜೊತೆ ಸಂಬಂಧ ಬೆಳೆಸುವ,
ಮಗುವನ್ನು ಪಡೆಯುವ ಹಕ್ಕಿತ್ತು. ವಿವಾಹ ಬಂಧವೆಂಬುದು ಆಗ ಅನಿವಾರ್ಯವಾಗಿರಲಿಲ್ಲ. ಆದರೆ ಶಂಕರಾಚಾರ್ಯರ ಪ್ರಕಾರ ಜಬಾಲಿಗೆ ಬಾಲ್ಯದಲ್ಲೇ ವಿವಾಹವಾಗಿತ್ತು! ಎಳವೆಯಿಂದಲೂ ಆಶ್ರಮವಾಸಿಯಾಗಿದ್ದವಳು, ಪತಿಯಾರೆಂದು ತಿಳಿಯಲೂ ಆಗದ ವಯಸ್ಸಲ್ಲಿ ಮದುವೆಯಾಗಿ,
ಸಂಸಾರವನ್ನು ಅರಿಯುವ ಮುನ್ನವೇ ವಿಧವೆಯಾಗಿಬಿಟ್ಟಿದ್ದಳು. ಹೀಗಾಗಿ ಅವಳಿಗೂ ಎಲ್ಲವೂ ಅಸ್ಪಷ್ಟವಾಗಿತ್ತು. ಆದರೆ ಈಗಿನ ಕೆಲವು ಮೂರ್ಖರ ಅನಿಸಿಕೆಯಂತೇ ಆಕೆ ವೇಶ್ಯೆಯಾಗಿರಲಿಲ್ಲ! ಆಕೆಯ ಮಗನೇ ಸತ್ಯಕಾಮ. ಮುಂದೆ ಗುರು ಗೌತಮರ ಶಿಷ್ಯನಾಗಿ,
ಜಗತ್ಪ್ರಸಿದ್ಧ ಋಷಿಯಾಗಿ, ಬ್ರಹ್ಮಜ್ಞಾನಿಯಾಗುತ್ತಾನೆ! ಅಂದು, ಗುರುವಿನಲ್ಲಿ ಮಂತ್ರೋಪದೇಶವಾಗಬೇಕಿದ್ದಲ್ಲಿ ವಟು ತನ್ನ ಕುಲ,
ಗೋತ್ರದ ವಿವರಗಳನ್ನೆಲ್ಲಾ ನೀಡಬೇಕಾಗುತ್ತಿತ್ತು. ಹೀಗಾಗಿ ತಂದೆಯ ಹಿನ್ನಲೆ ಕೇಳುತ್ತಿದ್ದರು. ಅದೇ ಕಾಡಿದ್ದು ಎಂಟರ ಹರೆಯದ ಪುಟ್ಟ ಸತ್ಯಕಾಮನನ್ನೂ ಕೂಡ. ಆದರೆ ಮಗನ ಪ್ರಶ್ನೆಗೆ ತಾಯಿ ಜಬಾಲಿ ಅದೆಷ್ಟು ಅದ್ಭುತವಾಗಿ ಉತ್ತರಿಸುತ್ತಾಳಲ್ಲಾ...” ಎಂದು ಮತ್ತೇನೋ ಹೇಳುವಾಗಲೇ ಎತ್ತಲೋ ದಿಟ್ಟಿಸುತ್ತಿದ್ದ ಭೂಮಿ ಅವರ ಮಾತುಗಳನ್ನು ಮಧ್ಯದಲ್ಲೇ ತುಂಡರಿಸುತ್ತಾ,
“ಅಜೇಯನೂ ಮೊನ್ನೆ ‘ನನ್ನ ಅಪ್ಪ ಎಲ್ಲಿದ್ದಾನೆ?
ಅವನ ಹೆಸರೇನು?’ ಎಂದೆಲ್ಲಾ ಕೇಳ್ತಿದ್ದ ಗುರೂಜಿ. ಆಯ್ತಲ್ಲ ಅವನಿಗೂ ಐದು ವರುಷ! ಗರ್ಭ ಧರಿಸಿದ ದಿವಸದಿಂದ ಈ ಸಮಾಜ ನನ್ನನ್ನು ನೋಡಿದ ದೃಷ್ಟಿ ಯಾವ ಈಟಿ,
ಚೂರಿಯ ಇರಿತಕ್ಕೂ ಕಮ್ಮಿಯದ್ದಲ್ಲ ಬಿಡಿ. ನನ್ನ ಕಣ್ಕಟ್ಟಿ ಓಡಿಹೋದವನ ಅಪರಾಧಕ್ಕಿಂತ ಕಣ್ಮುಚ್ಚಿ ಅವನ ನಂಬಿದವಳ ದಡ್ಡತನವೇ ಮಹಾಪರಾಧವೆನ್ನಿಸಿಬಿಡುತ್ತದಲ್ಲಾ ಈ ಸಮಾಜಕ್ಕೆ! ಪುಣ್ಯಕ್ಕೆ ಈಗ ನಮ್ಮಲ್ಲಿ ಸ್ಕೂಲ್ ಫಾರ್ಮಿನಲ್ಲಿ ತಂದೆಯ ಹೆಸರು ಹಾಕೋದು ಕಡ್ಡಾಯವಲ್ಲ... ಆದರೂ ಆವತ್ತೊಂದು ದಿವ್ಸ ಶಾಲೆಯೊಂದಕ್ಕೆ ಅಜೇಯನ ಫಾರ್ಮ್ ಕೊಡೋಕೆ ಹೋಗಿದ್ನಾ,
ಅಲ್ಲಿ ಕೌಂಟರಿನಲ್ಲಿದ್ದವನು ಅಪ್ಪನ ಹೆಸರಿನ ಮುಂದೆ ದೊಡ್ಡ ಗೀಟು ಹಾಕಿದ್ದು ಕಂಡು ಯಾವರೀತಿ ನನ್ನನ್ನು ನೋಡಿದ್ದನೆಂದರೆ... ಥಟ್ಟನೆ ಫಾರ್ಮ್ ಕಿತ್ಕೊಂಡು ಬಂದ್ಬಿಟ್ಟಿದ್ದೆ. ಗುರೂಜಿ,
ಆಗ ಹೆಣ್ಣಿಗೆ ಆ ಸ್ವಾತಂತ್ಯ್ರವಿತ್ತು, ಸಮಾಜ ಒಪ್ಕೊಂಡಿತ್ತು ಅಂದ್ರಿ,
ಆದರೆ ಇಂದು? ನನ್ನ ಪಾಲಿಗೆ ಇದೊಂದು ನಿರಂತರ ಹೋರಾಟವೇ ಆಗಿಬಿಟ್ಟಿದೆ...” ಅವಳೊಳಗಿನ ಸಂಕಟ ನಿಟ್ಟುಸಿರುಗಳ ಮೂಲಕ ಹೊರಬಿದ್ದಿತು.
“ಭೂಮಿ, ಇಷ್ಟೊಂದು ಹತಾಶಳಾಗಬೇಡಮ್ಮಾ, ನೋಡು,
ನಿನ್ನ ನೀನು ಕುಗ್ಗಿಸಿಕೊಂಡಷ್ಟೂ ಕುಗ್ತಾನೇಹೋಗ್ತೀಯಾ... ನೀನು ಖಂಡಿತ ಅಸಹಾಯಕಿ ಅಲ್ಲಾ,
ಇದನ್ನ ಚೆನ್ನಾಗಿ ನೆನ್ಪಿಟ್ಕೋ! ನೀನು ಮಗನನ್ನ ಇಷ್ಟು ವರ್ಷ ಚೆನ್ನಾಗಿಯೇ ಬೆಳಿಸ್ತಿದ್ದೀಯಾ, ಮುಂದೆಯೂ ನಿನ್ನಿಂದ ಇದು ಖಂಡಿತ ಸಾಧ್ಯ. ಹೌದು,
ನೀನ್ಯಾಕೆ ಜಬಾಲಿಯಂತೆಯೇ ಆಲೋಚಿಸಬಾರದು? ಮತ್ತೊಮ್ಮೆ ಆ ಸ್ಕ್ರಿಪ್ಟನ್ನು ಸರಿಯಾಗಿ ಓದಿಕೋ,
ಆಗ ನಿನ್ನ ಪ್ರಶ್ನೆಗಳಿಗೂ ಉತ್ತರ ಸಿಗುವುದು” ಎನ್ನುತ್ತಾ ಕಾಫಿ ಲೋಟವನ್ನೆತ್ತಿಕೊಂಡು ಅವರು ಒಳಹೋಗಲು,
ಮತ್ತೊಮ್ಮೆ ಫೈಲ್ ತೆರೆದು ಅದರೊಳಗೆ ಕ್ರಮೇಣ ಮುಳುಗಿ ಹೋದಳು ಭೂಮಿ.
~೩~
ಅಂದು ವಿದರ್ಭ ನಾಟಕೋತ್ಸವದ ಕೊನೆಯ ದಿವಸ. ರಂಗದ ಮೇಲೆ ಗೋವಿಂದ ಮುಖರ್ಜಿಯವರ ನಾಟಕದ ಕೊನೆಯ ಘಟ್ಟಕ್ಕೆ ವೇದಿಕೆ ಸಜ್ಜಾಗಿ ನಿಂತಿದೆ. ‘ಜಬಾಲಿ’ಯಾಗಿ ಭೂಮಿ ವೇಷ ಧರಿಸಿದ್ದರೆ,
ಅವಳ ಮುಂದೆ ಸತ್ಯಕಾಮನಾಗಿ ಪುಟ್ಟ ಹುಡುಗನೋರ್ವ ನಿಂತು ತನ್ನ ತಂದೆಯ ಕುರಿತಾಗಿ ಕೆಲವು ಪ್ರಶ್ನೆಗಳನ್ನು ವಿನಮ್ರನಾಗಿ ಕೇಳುತ್ತಿದ್ದಾನೆ. ಆತನ ಮಾತು ಮುಗಿಯಲು,
ರಂಗದ ಮೇಲಣ ಬೆಳಕು ನಿಧಾನವಾಗಿ ಜಬಾಲಿ ಪಾತ್ರದ ಮೇಲೆಯೇ ಕೇಂದ್ರೀಕೃತವಾಗತೊಡಗಿತು. ಸಭಾಂಗಣದಲ್ಲಿದ್ದವರ ಗಮನವೆಲ್ಲಾ ಈಗ ಕುತೂಹಲದಿಂದ ಜಬಾಲಿಯ ಪಾತ್ರದ ಮೇಲೆಯೇ ನೆಟ್ಟಿದೆ! ಆದರೆ ಭೂಮಿಗೋ ಅಲ್ಲಿ ಆ ಕ್ಷಣಕ್ಕೆ ತಾನೇ ಜಬಾಲಿಯಾಗಿ ತನ್ನ ಮಗ ಅಜೇಯನೇ ಸತ್ಯಕಾಮನಾಗಿ ನಿಂತಿರುವಂತೇ ಅನ್ನಿಸಿಬಿಟ್ಟಿತ್ತು! ಅಂತೆಯೇ ದಿಟ್ಟ ಧ್ವನಿಯಲ್ಲಿ ದೃಢವಾಗಿ ತನ್ನ ಮುಂದಿದ್ದ ಸತ್ಯಕಾಮನಿಗೆ ಉತ್ತರಿಸತೊಡಗಿದಳು ಜಬಾಲಿ...
“ಸತ್ಯಕಾಮ, ಬಾಲ್ಯದಲ್ಲಿಯೇ ನನ್ನ ವಿವಾಹವೇರ್ಪಟ್ಟಿತ್ತು. ಹಗಲು ಪತಿಯ ಮುಖವನ್ನೂ ನೋಡುವಂತಿರಲಿಲ್ಲ. ಅವರ ನೆನಪು ಮನದೊಳು ಭದ್ರವಾಗುವುದರೊಳಗೇ ವೈಧವ್ಯ ಪ್ರಾಪ್ತವಾಗಿಬಿಟ್ಟಿತು. ನೀನಾಗ ನನ್ನೊಡಲೊಳಗಿದ್ದೆ... ಹೀಗಾಗಿ ನೀನು ನನ್ನ ಪುತ್ರ ಎನ್ನುವುದು ಸತ್ಯ. ಇದಕ್ಕಿಂತ ಹೆಚ್ಚಿನ ವಿವರಗಳನ್ನು ನಾನರಿಯೆನು ಕಂದ. ಮಹರ್ಷಿ ಗೌತಮರು ದಿವ್ಯದೃಷ್ಟಿಯುಳ್ಳವರು. ಸತ್ಯ ಹೇಳುವವರನ್ನಷ್ಟೇ ಶಿಷ್ಯರನ್ನಾಗಿಸಿ ಸ್ವೀಕರಿಸುವರಂತೆ. ನೀನು ನೇರವಾಗಿ ಅವರಲ್ಲಿಗೆ ಹೋಗಿ ನಿಸ್ಸಂಕೋಚವಾಗಿ ಹೀಗೆ ಹೇಳು... ‘ನನ್ನ ಹೆಸರು ಸತ್ಯಕಾಮ,
ತಾಯಿಯ ಹೆಸರು ಜಬಾಲಿ,
ತಂದೆ ಯಾರೆಂದು ಗೊತ್ತಿಲ್ಲ. ನಾನು ಜಬಾಲಿಯ ಮಗ ಜಾಬಾಲಿಯಾಗಿರುವೆನು. ನನ್ನ ಸಂಪೂರ್ಣ ಹೆಸರು ಸತ್ಯಕಾಮ ಜಾಬಾಲಿ’ ಎಂದು ಅವರ ಚರಣಗಳಿಗೆ ಶಿರಬಾಗಿ ಶರಣಾಗು. ಅವರು ನಿಸ್ಸಂದೇಹವಾಗಿ ನಿನ್ನನು ಶಿಷ್ಯನನ್ನಾಗಿ ಸ್ವೀಕರಿಸುವರು. ನನ್ನ ಆಶೀರ್ವಾದ ಸದಾ ನಿನ್ನೊಂದಿಗುರುವುದು ಮಗು...” ಎನ್ನುತ್ತಾ ವಾತ್ಸಲ್ಯದಿಂದ ಅವನ ತಲೆಯನ್ನು ಮೃದುವಾಗಿ ತನ್ನೆದೆಗೆ ಒರಗಿಸಿಕೊಂಡಳು. ಅಂಕದ ಪರದೆ ಮೆಲ್ಲನೆ ಕೆಳಗಿಳಿಯುತ್ತಿರುವಂತೆಯೇ ಕಣ್ಣೀರ ಹನಿಗಳು ಅವ್ಯಾಹತವಾಗಿ ಉರುಳಿ ಭೂಮಿಯ ಕೆನ್ನೆಯನ್ನು ತೋಯಿಸತೊಡಗಿದವು. ಅವಳ ಒದ್ದೆ ಕಣ್ಗಳಿಗೆ ಪರದೆಯ ಆಚೆಗಿದ್ದ ಸಭೆಯಿಂದ ಹೊರಹೊಮ್ಮಿದ ನಿಲ್ಲದ ಕರತಾಡನ ಕರವಸ್ತ್ರವಾಯಿತು.
(೨೦೧೯ರ ವಿಜಯ ಕರ್ನಾಟಕ ಪತ್ರಿಕೆಯ ಯುಗಾದಿ ಕಥಾ ಸ್ಪರ್ಧೆಯ ಟಾಪ್ ೨೫ ಕಥೆಗಳಲ್ಲಿ ಆಯ್ಕೆಯಾದ ಕಥೆ)
~ತೇಜಸ್ವಿನಿ ಹೆಗಡೆ
*****_____*****
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ