ಬುಧವಾರ, ಮೇ 25, 2011

ಒಲವು-ಚೆಲುವು

ತಿಳಿ ನೀಲಾಗಸದಿ ಚಂದಿರನು ಬಂದಾಗ,
ಹುಣ್ಣಿಮೆಯು ಸುರಿವಂತೆ ನಿನ್ನ ನೆನಪು..

ತಾರೆಗಳ ಗುಂಪಿಂದ ಅರುಂಧತಿ ನಕ್ಕಾಗ,
ಸಪ್ತಪದಿ ತುಳಿದಂತೆ ನಿನ್ನ ಕನಸು...

ಚುಮು ಚುಮು ಬೆಳಗಲಿ ಇಬ್ಬನಿ ಸೋಕಲು,
ಚಿಲಿ ಪಿಲಿ ಗಾನದೊಳು ನಿನ್ನ ಹೆಸರು..

ಸಾಗರದೊಳಗಿಂದ ಅಲೆಗಳು ಎದ್ದಾಗ,
ಉಕ್ಕುವ ನೊರೆಯೊಳು ನಿನ್ನ ನಗುವು...

ಮುಗಿಲನು ಮುಟ್ಟಿದ ಮರವನು ತಬ್ಬಿದ,
ಲತೆಯೊಳು ಬಿರಿದ ಹೂ ನಮ್ಮ ಒಲವು...


-ತೇಜಸ್ವಿನಿ ಹೆಗಡೆ

ಸೋಮವಾರ, ಮೇ 16, 2011

ಗ್ರೀಷ್ಮದ ಹೊಸ್ತಿಲಲ್ಲಿ...

ನೀಲ ಮುಗಿಲ ತುಂಬ ತುಂಬೆ
ದಟ್ಟ ಕಪ್ಪು ಮೋಡ
ಸುರಿಯತೊಡಗಿ ಮೈಯ ತುಂಬ
ಬೆವರಿನ ಹನಿ ನೋಡ

ಗಾಳಿಯೊಳಗು ಹಬೆಯ ಉರಿ
ಉರಿದುರಿದು ಬೆಂದ ಭುವಿ
ಬಾಯ್ತೆರೆದು ಕುಳಿತ ಕಪ್ಪೆ
ಚಿಪ್ಪಿಗೀಗ ಮುತ್ತ ಚಿಂತೆ

ಮಿಂಚು ಬಳಸಿ ಬಂದ ಗುಡುಗು
ಜೊತೆಗೆ ಬರಲು ಗಾಳಿ ಜೋರು
ಸ್ವೇದಬಿಂದುಗಳೆಲ್ಲಾ ಮಾಯ
ನೆಲದ ತುಂಬ ಮಳೆಯ ಮಾಲೆ

ಎಡ ಬಲ ಬಾಗುವ ಗಿಡಗಂಟೆ
ಜಾರಿ ತೂರಿ ಹಾರುವ ತರಗೆಲೆ
ನೀರಕುಡಿದು ತಂಪಾದ ಧರೆ
ವಸಂತ ಋತುವಿಗಿನ್ನು ತೆರೆ

ಮೊದಲ ಹನಿಯ ಸ್ಪರ್ಶದಿಂದ
ಮೈ ಮನಗಳಲ್ಲಿ ಮಿಡಿದ ಸ್ಪಂದ
ಕಣ್ಮುಚ್ಚಿ ಮೊಗವ ಮೇಲೆ ನೋಡೆ
ಮನದ ತುಂಬ ಸ್ವಾತಿ ಮುತ್ತು


- ತೇಜಸ್ವಿನಿ ಹೆಗಡೆ

ಬುಧವಾರ, ಮೇ 4, 2011

ತಿರುಗುಬಾಣ

"ಪದ್ದಕ್ಕ... ರೀ ಪದ್ದಕ್ಕ...ಎಲ್ಲಿದ್ದೀರಾ? ಬೇಗ ಬನ್ರೀ.." ಎಂದು ಕೂಗುತ್ತಾ ಬಾಗಿಲನ್ನು ಒಂದೇ ಸಮನೆ ಬಡಿಯುತ್ತಿದ್ದ ಶ್ಯಾಮಲಳ ಬೊಬ್ಬೆ ಕೇಳಿ ಅಚ್ಚರಿಗೊಂಡ ಪದ್ಮಜ ಲಗುಬಗನೆ ಬಾಗಿಲ ತೆರೆದರೆ ಕಂಡದ್ದು ರಾವು ಬಡಿದಂತಿದ್ದ ಶ್ಯಾಮಲಳ ಮುಖ. "ಏನಾಯ್ತೇ ಶ್ಯಾಮಲಾ? ಅದ್ಯಾಕೆ ಹೀಂಗೆ ಕೂಗ್ತಾ ಇದ್ದಿ? ಅಂಥದ್ದೇನಾಯ್ತು ಈಗ? ಮೊದ್ಲು ಒಳ್ಗೆ ಬಾ.. ಕೂತ್ಕೋ.. ತಡೀ ನೀರು ತರ್ತೀನಿ.." ಎಂದು ಹೇಳುತ್ತಾ, ಒಳ ಹೋಗಿ ಆಕೆ ತಂದ ನೀರನ್ನು ಒಂದೇ ಉಸುರಿಗೆ ಕುಡಿದ ಶ್ಯಾಮಲ ಅಲ್ಲೇ ಇದ್ದ ಆರಾಮ್ ಕುರ್ಚಿಯ ಮೇಲೆ ಕುಸಿದಳು.

ನಗರ ಸಂಪರ್ಕದಿಂದ ಸ್ವಲ್ಪ ದೂರವೇ ಉಳಿದ ಪಾಂಡವಪುರದ ಸುಬ್ಬಮ್ಮನ ವಠಾರದಲ್ಲಿರುವ ಹತ್ತು ಮನೆಗಳಲ್ಲಿ ವೆಂಕಟ ಜೋಯಿಸರದ್ದೂ ಒಂದು. ಅವರ ಧರ್ಮ ಪತ್ನಿಯೇ ಪದ್ಮಜ. ಜಾತಕ, ಅಂಜನ, ಹೋಮ, ಹವನ, ಪಾಪ ಪರಿಹಾರ, ನವಗ್ರಹ ಪೀಡೆ - ಎಲ್ಲವುದಕ್ಕೂ ಆ ವಠಾರದವರಿಗೆ ಜೋಯಿಸರೇ ಬೇಕು. ಹಾಗಾಗಿ ಸಹಜವಾಗಿಯೇ ಅವರ ಹಾಗೂ ಅವರ ಮನೆಯಾಕೆಗೆ ಸ್ವಲ್ಪ ಹೆಚ್ಚು ಗೌರವ ಸಿಗುತ್ತಿತ್ತು. ತಾವು ಕೈಗೊಂಡ ಶುಭ ಕಾರ್ಯದಲ್ಲಿ ಏನೇ ವಿಘ್ನ ಕಂಡು ಬಂದರೂ ಜೋಯಿಸರ ಸಲಹೆಯನ್ನು ಕೇಳದೇ ಮುಂದುವರಿಯುತ್ತಿರಲಿಲ್ಲ. ಇತ್ತೀಚಿಗಷ್ಟೇ ಜೋಯಿಸರು ಯಂತ್ರ-ತಂತ್ರಗಳನ್ನೂ ಅಭ್ಯಸಿಸಿ ಸಕಲ ವಿದ್ಯೆಗಳಲ್ಲೂ ಪಾರಂಗತ ಎಂದು ಸ್ವಯಂ ಘೋಷಿಸಿಕೊಂಡ ಮೇಲೆ ಚಿಕ್ಕ ಪುಟ್ಟ ಪ್ರೇತ ಚೇಷ್ಟೆಗಳಿಗೂ ಇವರೇ ಬೇಕೆನ್ನುವಂತಾಗಿದೆ. ಅಸಲಿಗೆ ವೆಂಕಟ ಜೋಯಿಸರು ತಮ್ಮ ಅಜ್ಜ ಸುಬ್ಬಾ ಜೋಯಿಸರಿಂದ ಕಲಿತದ್ದು ಅಲ್ಪ ಸಲ್ಪ ಜಾತಕವನ್ನೋದುವುದು ಹಾಗೂ ಸಣ್ಣ ಪುಟ್ಟ ಹೋಮ-ಹವನಗಳನ್ನು ನಡೆಸುವ ಕ್ರಮಗಳನ್ನಷ್ಟೇ. ಅವರು ತಮ್ಮ ಮೂಲ ಊರಾದ ಶಿವನಕೆರೆಯಿಂದ ಪಾಂಡವಪುರಕ್ಕೆ ಬಂದಿದ್ದು ವೈದಿಕಕ್ಕೇ ಆಗಿತ್ತು. ಹಾಗೆ ಬಂದವರು ಕ್ರಮೇಣ ಅಲ್ಲಿಯ ಹತ್ತಾರು ಮನೆಗಳಲ್ಲಿ ತಮ್ಮ ಇಲ್ಲದ ಪಾಂಡಿತ್ಯವನ್ನು ಮೆರೆಸುತ್ತಾ, ಅವರ ಅಜ್ಞಾನ ಹಾಗೂ ಮುಗ್ಧತೆಗಳನ್ನೇ ಬಂಡವಾಳ ಮಾಡೊಕೊಂಡು ತಮ್ಮ ಪ್ರವೃತ್ತಿಯನ್ನೇ ವೃತ್ತಿಯನ್ನಾಗಿಸಿಕೊಂಡರು. ಹೆಚ್ಚು ಕಲಿತಿರದ, ಕೂಪ ಮಂಡೂಕಗಳಂತಿದ್ದ ಅಲ್ಲಿಯ ಜನರಿಗೆ ಇವರೇ ಎಲ್ಲವುದಕ್ಕೂ ಸೈ ಅನ್ನಿಸಿದ್ದರಲ್ಲೇನೂ ವಿಷೇಶವೂ ಇರಲಿಲ್ಲ. ಕಾಗೆ ಕೂಗುವದಕ್ಕೂ ನೆಂಟ ಬರುವುದಕ್ಕೂ ಸಮವಾಯಿತೆಂದಂತೆ ಅವರು ಹೇಳಿದ ಒಂದೆರಡು ಭವಿಷ್ಯಗಳೂ ನಿಜವಾಗಿಬಿಟ್ಟವು. "ಮುಂದಿನ ಮಾಘ ಮಾಸದೊಳಗೆ ನಿಮ್ಮ ಮಗಳ ವಿವಾಹವಾಗುವುದು.." ಎಂದು ಹೇಳಿದ ಎರಡು ತಿಂಗಳಿಗೆ ಶಾರದಮ್ಮನ ಮೊದಲ ಮಗಳ ಮದುವೆ ನಡೆದು ಹೋದರೆ, ತಾನೇ ಮಂತ್ರಿಸಿದ್ದೇನೆಂದು ಹೇಳಿ ಕೊಟ್ಟಿದ್ದ ನಿಂಬೆಹಣ್ಣಿನಿಂದಾಗಿ ಸುಶೀಲಮ್ಮನ ಕಳೆದು ಹೋದ ದನ ಸಿಕ್ಕಿ ಬಿಟ್ಟಿತು. ಇಂತಹ ಅಲ್ಲೊಂದು ಇಲ್ಲೊಂದು ಚಮತ್ಕಾರಗಳ ನಂತರ ಜೋಯಿಸರ ಮಾತೇ ವೇದವಾಕ್ಯ ಎಂಬ ಭ್ರಮೆ ಕ್ರಮೇಣ ಅಲ್ಲಿದ್ದ ೬-೮ ಮನೆಗಳಲ್ಲಿ ಮನೆಮಾಡಿಬಿಟ್ಟಿತು. ಹಾಳೂರಿನಲ್ಲಿದ್ದವನೇ ಗೌಡ ಎನ್ನುವಂತೇ ಆ ವಠಾರಕ್ಕೆ ತಾವೇ ಮುಖಂಡರೆಂದು ಬೀಗುತ್ತಿದ್ದರು ಜೋಯಿಸ ದಂಪತಿಗಳು. ಅಂತೆಯೇ ಇಂದು ಕಂಡ ವಿಪತ್ತಿನ ಪರಿಹಾರಕ್ಕಾಗಿ ಶ್ಯಾಮಲಾಳೂ ಓಡೋಡಿ ಬಂದಿದ್ದು.

"ಅಯ್ಯೋ ಏನು ಹೇಳ್ಲಿ ಪದ್ದಕ್ಕ.. ನಾನು ಸುಶೀಲಕ್ಕಳ ಮನೆಯಿಂದ ಈಚೆ ಬಂದು ಹಾಗೇ ನಮ್ಮನೆ ಕಡೆಗೆ ಹೋಗ್ತಿದ್ನಾ, ನೋಡ್ತೀನಿ...ಕೂಡು ರಸ್ತೆಯ ಮೇಲೆ ಒಂದು ದೊಡ್ಡ ತೆಂಗಿನಕಾಯಿ..!!! ಅದ್ರ ಮೇಲೆ ಕುಂಕುಮ ಬೇರೆ!! ನನ್ನೆದೆ ಹಾಗೇ ಅಲ್ಲಾಡಿ ಹೋಯ್ತು. ಶಿವ ಶಿವ ಅಂದ್ಕೋತಾ ಕಣ್ಮುಚ್ಚಿ ಹೇಗೋ ಇಲ್ಲಿಗೆ ಓಡಿ ಬಂದೆ. ಮಟ ಮಧ್ಯಾಹ್ನದಲ್ಲಿ ಮಂತ್ರದ ಕಾಯಿ ನೋಡ್ಬಿಟ್ಟಿದ್ದೀನಿ. ಮೊದ್ಲೇ ಶನಿ ದೆಸೆ ಅಂತ ಜೋಯಿಸರು ಹೇಳಿದ್ದಾರೆ. ರಾಹು ಬೇರೆ ಎಂಟನೆಯ ಮನೆಯಲ್ಲಿದ್ದಾನಂತೆ. ಹೀಗಿರುವಾಗ ಹೀಂಗಾಗಿದೆ. ಇನ್ನೇನು ಕಾದಿದ್ಯೋ ಅಂತ ಹೆದ್ರಿಕೆ... ಸ್ವಲ್ಪ ನಿಮ್ಮವರಿಗೆ ಹೇಳಿ ತಾಯಿತ ಮಾಡ್ಸಿಕೊಡಿಯಕ್ಕ..." ಎಂದು ಗೋಗರೆಯುತ್ತಾ ಹಾಗೇ ಕಣ್ತುಂಬಿಕೊಂಡಳು ಶ್ಯಾಮಲ. ಇನ್ನೇನು ತನ್ನ ಜೀವನದ ಕೊನೆ ಹತ್ತಿರದಲ್ಲಿದ್ದಂತೆ ಭಾಸವಾಗಿತ್ತು ಆಕೆಗೆ. ಬಂದ ಗಂಡುಗಳೆಲ್ಲಾ ಶ್ಯಾಮಲಾಳ ಇದ್ದಿಲು ಮೊಗ ನೋಡಿ ಹೋದಮೇಲೆ ಆನಂದ ರಾಯರು ಮಗಳ ಜಾತಕವನ್ನು ವೆಂಕಟ ಜೋಯಿಸರಿಗೇ ತೋರಿಸಿದ್ದರು. ಅವರು ಹೇಳಿದ ಪರಿಹಾರದಂತೇ ಅವರ ಕೈಯಲ್ಲೇ ಶಾಂತಿ ಹೋಮವನ್ನು ಮಾಡಿಸಿ ಕೈತುಂಬ ದಕ್ಷಿಣೆಯನ್ನೂ ತುಂಬಿದ್ದಾಗಿತ್ತು. "ಸುಮ್ನೇ ಯಾಕೆ ಚಿಂತೆ ಮಾಡ್ತೀರಿ ರಾಯರೇ? ನಾನೇ ನಿಂತು ಪಾರ್ವತಿ ಸ್ವಯಂವರ ಪೂಜೆ ಮಾಡ್ಸಿದ್ದೀನಲ್ಲಾ.. ನೋಡ್ತಿರಿ.. ಇನ್ನೊಂದು ತಿಂಗಳಲ್ಲಿ ಎಲ್ಲಾ ಸರಿಯಾಗಿ ಯೋಗ್ಯವರ ಸಿಕ್ಕಿ ಥಟ್ ಅಂತ ಮದ್ವೆ ಆಗೇ ಹೋಗುತ್ತೆ...ಧೈರ್ಯದಿಂದಿರಿ" ಎಂದು ಅಭಯವಿತ್ತ ಅವರ ಪಾದಗಳಿಗೆ ಅಡ್ಡಬಿದ್ದೇ ಶಾಂತವಾಗಿದ್ದರು ರಾಯರು. ಈಗ ನೋಡಿದರೆ ನಾಲ್ಕು ಮನೆಗಳ ಮಧ್ಯೆ ಇರುವ ಕೂಡು ರಸ್ತೆಯಲ್ಲಿರುವ ಕುಂಕುಮಭರಿತ ತೆಂಗಿನ ಕಾಯಿ ಮೊದಲು ಶ್ಯಾಮಲಾಳಿಗೇ ಕಾಣಿಸಬೇಕೆ? ‘ಈ ರೀತಿ ತನ್ನ ಕಣ್ಣಿಗೇ ಬೀಳಲು, ಇದು ತನ್ನ ಕೇಡಿಗೇ ಸೈ’ ಎಂದು ಭ್ರಮಿಸಿ, ದಿಕ್ಕೆಟ್ಟು ಓಡಿಬಂದಿದ್ದಳು. ಮದುವೆಗೆ ತನ್ನೊಂದಿಗೆ ಪೈಪೋಟಿ ನಡೆಸುತ್ತಿರುವ ಶಾರದಮ್ಮನ ಕಿರಿ ಮಗಳಾದ ಶ್ವೇತಳೇ ಹೀಗೆ ಮಾಡಿಸಿರಬಹುದೆಂಬ ಗುಮಾನಿ ಬೇರೆ ತಲೆಯಲ್ಲಿ. ಆದರೆ ಪದ್ಮಜಳ ಚುರುಕು ಬುದ್ಧಿ ಮಾತ್ರ ಬೇರೆಯೇ ಒಂದು ಸ್ಕೆಚ್ ಹಾಕತೊಡಗಿತು.

ಮೊದಲೇ ಶ್ಯಾಮಲಾಳ ಬಾಯಿ ಜೋರು. ಅಂಥದ್ದರಲ್ಲಿ ಇವತ್ತು ಕಂಡ ವಿಪತ್ತಿನಿಂದ ಇದ್ದ ಶಕ್ತಿಯನ್ನೆಲ್ಲಾ ಹಾಕಿ ಬೊಬ್ಬಿರಿಯುತ್ತಾ ಬಂದಿದ್ದಳು. ಹಾಗಾಗಿ ಉಳಿದ ಮನೆಯ ಹೆಂಗಸರೂ ಅಷ್ಟರೊಳಗೆ ಪದ್ಮಜಳ ಮನೆಯನ್ನು ಸೇರಿಯಾಗಿತ್ತು. ಹಾಗೆ ಬಂದವರಲ್ಲಿ ಕೆಲವರು ತಾವೂ ಆ ತೆಂಗಿನ ಕಾಯನ್ನು ನೋಡಿ ಬರುತ್ತಿರುವುದಾಗಿ ಸ್ಪಷ್ಟಪಡಿಸಲು, ಸರ್ವರೂ ಸಮೂಹ ಸನ್ನಿಗೊಳಗಾದಂತೆ ತೆಂಗಿನ ಕಾಯಿಯೆಂಬ ಪೆಡಂಭೂತಕ್ಕೆ ಭಯಭೀತರಾದರು.
"ಅಲ್ರೀ ಶಾರದಮ್ಮ... ಯಾರು ಮಂತ್ರಿಸಿಟ್ಟಿರಬಹುದು? ಈ ವಠಾರಾನ ದೊಡ್ಡ ಬಿಲ್ಡಿಂಗ್ ಮಾಡ್ತೀನಿ ಅಂತಿದ್ನಲ್ಲಾ ಆ ಶೆಟ್ಟಿಗಾರು.. ಅವ್ನೇ ಏನಾದ್ರೂ ತಂದಿಟ್ಟಿರ್ಬಹುದಾ? ನಮ್ಮನ್ನೆಲ್ಲಾ ನಯಾ ಪೈಸೆ ಕರ್ಚು ಇಲ್ದೇ ಮೇಲೆ ಕಳ್ಸಿ ಎಲ್ಲಾನೂ ಗುಡ್ಸಿ ಗುಂಡಾಂತರ ಮಾಡೋ ಯೋಚ್ನೆ ಇರ್ಬೇಕು ನೋಡಿ.." ಎಂದು ಮೂರನೆಯ ಮನೆ ಸುಶೀಲ ಹೇಳಿದರೆ-
"ಇಲ್ಲಾರೀ.. ಆ ಶೆಟ್ಟಿಗಾರು ದೇಶಾಂತರ ಹೋಗಿದ್ದಾನಂತ....ನಮ್ಮೋರು ಮೊನ್ನೆ ಅವ್ನ ತಮ್ಮನ್ನ ಹೀಂಗೇ ಕೇಳಿದ್ದಾಗ, ಏನೋ ಲಫಡ ಮಾಡ್ಕೊಂಡು ಊರು ಬಿಟ್ಟಿದ್ದಾನೆಂದು ತಿಳೀತಂತೆ. ಅದೂ ಅಲ್ದೇ ಅವ್ನಿಗೆ ಎಲ್ಲಿಂದ ಅಷ್ಟೊಂದು ದೊಡ್ಡ ಜೋಯಿಸರ ಪರಿಚಯ ಆಗ್ಬೇಕು ಹೇಳಿ? ವೆಂಕಟ ಜೋಯಿಸರಂತಹ ತಿಳಿದೋರು ಹೀಂಗೆಲ್ಲಾ ಮಾಡೋರೆ ಅಲ್ಲಾ ಬಿಡಿ..." ಎಂದು ಒಗ್ಗರಣೆ ಹಾಕಿದಳು ಸಾವಿತ್ರಿ. ಅವಳ ಮಾತೊಳಗೆ ಜೋಯಿಸರ ವಿದ್ವತ್ತನ್ನು ಹೊಗಳುವುದಕ್ಕಿಂತ ಹೆಚ್ಚಾಗಿ ಅವರು ಈ ರೀತಿ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ತನಗೆ ತಾನೇ ಸ್ಪಷ್ಟಿಸಿಕೊಳ್ಳುವುದನ್ನೂ ಕಾಣಬಹುದಿತ್ತು. ಮೊದಲಿನಿಂದಲೂ ಆಕೆಗೆ ಜೋಯಿಸರ ಕುಟುಂಬದ ಮೇಲೆ ಏನೋ ಗುಮಾನಿ. ತನ್ನ ತಮ್ಮ ಶಂಭು ಭಟ್ಟನನ್ನು ಒಂದು ಹೋಮಕ್ಕೆ ಬರ ಹೇಳಬೇಕೆಂದು ಬಯಸಿದ್ದಳು ಆಕೆ. ಆದರೆ ಪದ್ಮಜ ದಂಪತಿಗಳ ಕಿತಾಪತಿಯಿಂದ ಆತ ಈ ವಠಾರಕ್ಕೇ ಬರದಂತಾಗಿತ್ತು. ಆ ಕೋಪ ಒಳಗೊಳಗೇ ಕುದಿಯುತ್ತಿದ್ದರೂ ಅವರ ಪ್ರಭಾವ ಬಹಳ ಇರುವುದರಿಂದ ತೆಪ್ಪಗಿದ್ದಳು. ಆದರೆ ಸಮಯಕ್ಕಾಗಿ ಸದಾ ಕಾಯುತ್ತಿರುವುದು ಪದ್ಮಜಳಿಗೂ ಗೊತ್ತಿತ್ತು.

"ಹೌದೇ ಸಾವಿತ್ರಿ... ನೀ ಹೇಳಿದ್ದು ಖರೇ ನೋಡು. ಇವ್ರಷ್ಟು ತಿಳ್ಕೊಂಡೋರು ಈಗ ಇಲ್ಲಿ ಯಾರಿದ್ದಾರೆ ಹೇಳು? ಈ ರೀತಿ ಕಾಯಿ ಮಂತ್ರಿಸಿ ತರೋಕೆ ಇವ್ರನ್ನು ಬಿಟ್ಟ್ರೆ ಕೇರಳಕ್ಕೇ ಹೋಗ್ಬೇಕಂತೆ. ಅಲ್ಲಿಗೆಲ್ಲಾ ಹೋಗಿ ಬರೋವಷ್ಟು ಆ ನಾಗಪ್ಪ ಚಾಲಾಕಿಲ್ಲ ಬಿಡು. ಇವ್ರೋ ಈ ವಠಾರಕ್ಕಾಗೇ ಇಲ್ಲಿದ್ದೋರು....ನಾನು ಅವ್ರಿಗೆ ಹೇಳ್ತಿನಿ. ಎಷ್ಟೇ ದೊಡ್ಡ ಪೂಜೆಯಾದ್ರೂ ಸರಿ.. ಶತಾಯುಗತಾಯು ಮಾಡ್ಬೇಕು... ಎಲ್ಲಾ ಕೆಲ್ಸನೂ ಬಿಟ್ಟು ಈ ಮಂತ್ರದ ಕಾಯನ್ನು ಮುಕ್ತ ಗೊಳಿಸ್ಬೇಕು ಅಂತೀನಿ. ನೀವೆಲ್ಲಾ ಹೆದ್ರಬೇಡಿ. ಒಂದ್ ಕೆಲ್ಸ ಮಾಡಿ ಇವ್ರು ಇನ್ನೊಂದೆರ್ಡು ತಾಸ್‌ನಲ್ಲಿ ಬರ್ತಾರೆ. ಬಂದಿದ್ದೇ ತಡ.. ಫಲಹಾರ ಕೊಟ್ಟು ಪೂಜೆಗೆ ಕೂರ್ಸಿ, ಎಲ್ಲರಿಗೂ ತಾಯಿತ ಮಾಡೋಕೆ ಹೇಳ್ತೀನಿ. ನೀವೆಲ್ಲಾ ಸಂಜೆ ಬಂದು ತಾಯಿತ ಕಟ್ಸ್‌ಕೊಂಡು ಹೋಗಿ. ಯಾರಿಗ್ಬೇಕು? ಯಾವ ಭೂತ ಹೊಕ್ಕಿದ್ಯೋ ಎಂತೋ.. ಏನೆಂದ್ರೂ ಒಂದೆರ್ಡು ದಿವ್ಸನೇ ಬೇಕಾಗ್ಬಹುದು ಉಚ್ಛಾಟನೆಗೆ..." ಎಂದು ಪದ್ಮಜ ಹೇಳಿದ್ದೇ ತಡ. ಎಲ್ಲರೂ ತಲೆ ಅಲ್ಲಾಡಿಸಿಯೇ ಬಿಟ್ಟರು. "ಹೌದು ಪದ್ದಕ್ಕ.. ನೀವು ಹೇಳಿದ್ದು ಸರಿನೇ... ನಾವೆಲ್ಲಾ ಸಂಜೆ ಬರ್ತೀವಿ. ತಾಯಿತ ರೆಡಿ ಮಾಡ್ಸಿಡಿ... ಯಾಕೋ ಏನೋ ನನ್ನ ಎಡಗಣ್ಣು ಬೇರೆ ಕುಣೀತಾ ಇದೆ..." ಎಂದ ಶ್ಯಾಮಲಳ ಮಾತಿಗೆ ಉಳಿದವರ ಸಮ್ಮತಿಯೂ ಸಿಕ್ಕಿತು. ಸಂಪೂರ್ಣ ಒಪ್ಪಿಗೆ ಇಲ್ಲದ ಸಾವಿತ್ರಿಯೂ ಒಪ್ಪಲೇ ಬೇಕಾಯಿತು. ಆದರೂ ಪಟ್ಟು ಬಿಡದಂತೆ......"ಅದೆಲ್ಲಾ ಸರಿ ಪದ್ಮ... ತಾಯಿತಕ್ಕೆ ಎಷ್ಟಾಗೊತ್ತೆ ಅಂತ ಗೊತ್ತಾದ್ರೆ... ತರೋಕೆ ಸುಲಭ ಆಗೊತ್ತೆ.." ಎಂದು ರಾಗವೆಳೆದಾಗ ತುಸು ಕಕ್ಕಾಬಿಕ್ಕಿ ಆದಳು ಪದ್ಮಜ. "ಅಯ್ಯೋ.. ನಿಮ್ಮಿಂದೆಲ್ಲಾ ತಗೋತೀವೆ? ಆದರೂ ತಾಯಿತಗಳನ್ನು ನಾವೂ ದುಡ್ಡುಕೊಟ್ಟೇ ತರೋದು ನೋಡಿ. ಅದಕ್ಕೆ ಬೇಕಾದ ಭಸ್ಮ, ಕುಂಕಮ ಅದೂ ಇದು ಅಂತ ಅಲ್ಪ ಖರ್ಚು ಇರುತ್ತೆ ಅಲ್ವೇ? ಇವ್ರ ಪೂಜೆಯ ದುಡ್ಡು ಖಂಡಿತ ಬೇಡಪ್ಪ.. ನೀವೂ ನಮ್ಮೋರೆ ಅಲ್ವೇ? ಒಂದ್ನೂರು ರೂಪಾಯಿ ಸಾಕಪ್ಪ. ಹಾಂಗೆ ನೋಡಿದ್ರೆ ಖರ್ಚು ಇನ್ನೂರಕ್ಕಿಂತ ಕಡ್ಮೆ ಆಗೊಲ್ಲ.. ಏನೋ ನಮ್ಮ ಜನ ಅಂತ ಹೇಳ್ತಿದ್ದೀನಿ ಅಷ್ಟೇ.." ಎಂದು ಉದಾರವಾಗಿ ಮಾತಾಡಿದಾಗ ತೆಪ್ಪಗೆ ಎಲ್ಲರೂ ಹೂಂ ಗುಟ್ಟುವುದೊಂದೇ ಮಾಡಲು ಆಗಿದ್ದು.

ಎಲ್ಲರನ್ನೂ ಸಾಗ ಹಾಕಿ, ಮನಸಿನೊಳಗೇ ಮಂಡಿಗೆ ತಿನ್ನುತ್ತಾ ಒಳ ಬಂದ ಪದ್ಮಳಿಗೆ ಕಂಡದ್ದು ಭಯಗ್ರಸ್ಥ ಮಗಳ ಮುಖ. "ಅಲ್ವೇ ಸುಮ ಅವ್ರೆಲ್ಲಾ ಬಂದಾಗ ಎಲ್ಲಿ ಹೋಗಿದ್ಯೆ ನೀನು? ಹೌದು ಯಾಕೆ ಹೀಂಗೆ ಹೆದ್ರಿದ್ದಿ? ಮಂಕೆ ಏನೂ ಆಗಲ್ಲ.... ಹೆದ್ರಬೇಡ. ಹೀಂಗೆ ಯಾರೇ ಮಾಡಿರ್ಲಿ ಅವ್ರನ್ನ ಅಪ್ಪಯ್ಯ ಬಿಡೋಲ್ಲ. ಸುಮ್ನೇ ನೀನು ಇದ್ಕೆಲ್ಲಾ ತಲೆ ಕೆಡಿಸ್ಕೋಬೇಡ.....ಓದ್ಕೋ..." ಎನ್ನುತಾ ಅಡುಗೆ ಕೆಲ್ಸಕ್ಕೆ ತೊಡಗಿದಳು. ಕೈಗಳು ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದರೂ ಮನಸೆಲ್ಲಾ ಪತಿಯಾಗಮನದ ಕಡೆಗೇ ಇತ್ತು. ತುಸು ಹೊತ್ತಿನಲ್ಲೇ ವೆಂಕಟ ಜೋಯಿಸರ ಆಗಮನವಾಗಲು ಆತುರಾತುರವಾಗಿ ಕೆಲಸಕಾರ್ಯಗಳನ್ನು ಮುಗಿಸಿ ಹೊರಬಂದಳು ಪದ್ಮಜ. 

ಪತ್ನಿಯಿಂದ ಎಲ್ಲಾ ಪ್ರವರವನ್ನು ಕೇಳಿದ ವೆಂಕಟ ಜೋಯಿಸರಲ್ಲಿ ಹೊಸ ಹುರುಪು ಮೂಡಿತು. "ಸರಿಯಾಗಿ ಮಾಡಿದ್ದಿ ಕಣೆ.. ಬರ್ಲಿ.. ಎಲ್ರಿಗೂ ತಾಯಿತ ಕಟ್ಟೇ ಬಿಡೋಣವಂತೆ... ಹಾಂಗೇ ನಾನೊಂದು ದೊಡ್ಡ ಯೋಜನೇನಾ ಹಾಕಿದ್ದೀನಿ. ಇದೇನಾದ್ರೂ ಕೈಗೂಡಿದ್ರೆ ಈ ಸಲ ನಿಂಗೆರಡು ಜೊತೆ ಬಳೆ ಗ್ಯಾರಂಟಿ..." ಎನ್ನಲ್ಲು ಮೊರದಗಲವಾಯಿತು ಪದ್ಮಜಳ ಮುಖ. ಆ ಖುಶಿಯಲ್ಲೇ ಪಾಯಸಕ್ಕೆಂದು ಶೇವಿಗೆ ಹುರಿಯ ತೊಡಗಿದರೆ, ಜೋಯಿಸರು ಪಂಚಾಗ ತೆಗೆದು ಕುಳಿತರು. ಅಲ್ಲೇ ಮೂಲೆಯಲ್ಲಿ ಕುಳಿತು ಅಪ್ಪ ಅಮ್ಮನ ಮಾತುಗಳನ್ನು ಕೇಳುತ್ತಿದ್ದ ಬಡಪಾಯಿ ಸುಮಳ ಬಾಡಿದ ಮುಖ, ತುಂಬಿದ ಕಣ್ಗಳು ಅವರಿಬ್ಬರಿಗೂ ಕಾಣಲೇ ಇಲ್ಲ!!

-೨-

"ಜೋಯಿಸ್ರೆ, ನಾವೆಲ್ಲಾ ನಿಮ್ಮನ್ನೇ ನಂಬಿದ್ದೀವಪ್ಪ... ನೀವೇ ಇದಕ್ಕೆಲ್ಲಾ ಏನಾದ್ರೂ ಏರ್ಪಾಡು ಮಾಡ್ಬೇಕು... ಈಗ ಆ ಕೂಡು ರಸ್ತೆಯ ಕಡೆಯಿಂದ ಬರೋಕು ಹೆದ್ರಿಕೆ. ಹಾಂಗಾಗಿ ಹಿಂದಿನ ಬಾಗಿಲನ್ನು ತೆಕ್ಕೊಂಡು ಹಿತ್ತಲ ಕಡೆಯಿಂದ ಬಂದೆವು. ಹಾಳಾದ್ ಆ ಕಾಯಿ ನಮ್ಮ ದಾರಿಯ ಮಧ್ಯದಲ್ಲೇ ಇದೆಯಲ್ಲಾ... ದಯವಿಟ್ಟು ಏನು ಪರಿಹಾರ ಅಂತ ಹೇಳಿಯಪ್ಪ..." ಎಂದು ಶಾರದಮ್ಮನ ಯಜಮಾನರಾದ ರಮಾನಂದ ಪೈಗಳು ಬಿನ್ನವಿಸಲು, ಪದ್ಮಜಳ ಮುಖದಲ್ಲಿ ಅಪೂರ್ವ ಬೆಳಕು ತುಂಬಿತು.

ಸಂಜೆಯಾಗುತ್ತಿದ್ದಂತೆ ವಠಾರದಲ್ಲಿದ್ದ ಹೆಂಗಸರು ಹಾಗೂ ಅವರವರ ಯಜಮಾನರು ವೆಂಕಟ ಜೋಯಿಸರ ಮನೆಗೆ ಬಂದಿದ್ದರು. ಅವರೆಲ್ಲರ ಆಗಮನವನ್ನು ಮೊದಲೇ ಅರಿತಿದ್ದಿ ಜೋಯಿಸರು ಎಲ್ಲರಿಗೂ ಕಾಣುವಂತೆ ಚಾಪೆಯನ್ನು ಹಾಕಿಕೊಂಡು ಢಾಳಾಗಿ ವಿಭೂತಿಯನ್ನು ಹಣೆಗೆ, ಕೈಗಳಿಗೆ ಬಳಿದುಕೊಂಡು ಎಡಬದಿಯಲ್ಲೊಂದು ದೀಪವನ್ನು ಹಚ್ಚಿ, ಪದ್ಮಾಸನ ಹಾಕಿ ಕುಳಿತಿದ್ದರು. ಜೋಯಿಸರ ವೇಷಭೂಷಕ್ಕೆ ಪ್ರಭಾವಿತರಾದ ಅವರೆಲ್ಲಾ ಭಕ್ತಿಪೂರ್ವಕವಾಗಿ ವಂದಿಸಿ ಅವರ ಮುಂದೆ ತಾವೂ ಕುಳಿತುಕೊಂಡರು. ಇದ್ದುದರಲ್ಲಿಯೇ ಸ್ವಲ್ಪ ಪುಕ್ಕಲು ಸ್ವಭಾವದ ಪೈಗಳು ಎಲ್ಲರ ಪರವಾಗಿ ಜೋಯಿಸರನ್ನು ವಿನಂತಿಸಿಕೊಳ್ಳಲು, ಇನ್ನು ತನ್ನ ಕೆಲಸ ಸುಗಮವೆಂದುಕೊಂಡರು ಜೋಯಿಸರು.

"ರಮಾನಂದ.. ನೀನ್ಯಾಕೆ ಅಷ್ಟು ತಲೆಬಿಸಿ ಮಾಡ್ಕೋತೀಯಪ್ಪ.. ನಾನಿದ್ದೀನಲ್ಲಾ.. ಸ್ವಲ್ಪ ಹೊತ್ತಿನ ಹಿಂದೆ ನಾನೂ ನೋಡಿ ಬಂದೆ. ಅದು ಮಾಟ-ಮಂತ್ರದ ಕಾಯಿಯೇ ಸರಿ. ಆದ್ರೆ ಯೋಚ್ನೆ ಮಾಡ್ಬೇಡಿ... ಅಲ್ಲಾ ನಿಮಗೆಲ್ಲಾ ಬಂದಿರೋ ಈ ವಿಪತ್ತು ನನ್ನ ಬಿಟ್ಟೀತೇ? ಈಗ ನಾನು ಆ ತೆಂಗಿನ ಕಾಯಿಯಿಂದ ಮಂತ್ರೋಚ್ಛಾಟನೆ ಮಾಡುವುದು ಅಷ್ಟು ಸುಲಭವಲ್ಲ. ಹಾಗೆ ಮಾಡಲು ಹೋದರೆ ಅದು ನನ್ನ ಬಿಟ್ಟೀತೇ? ಆದರೂ ನಾ ಬಿಡೆನಪ್ಪ... ಶತಾಯುಗತಾಯು ಅಲ್ಲಿಂದ ಅದನ್ನು ತೊಲಗಿಸಿಯೇ ತೀರುವೆ. ಈ ವಠಾರವನ್ನು ಮುಳುಗಿಸಲು ಸಂಚು ಹಾಕಿದವರನ್ನ ಹಾಗೇ ಬಿಡಲಾಗದು. ಹ್ಮಾಂ...ನಾಳೆಯಿಂದಲೇ ಕೆಲಸಕ್ಕೆ ಶುರು ಹಚ್ಚಿಕೊಳ್ಳೋಣ. ಅದು ಎಷ್ಟೇ ದೊಡ್ಡ ಮಾಟ-ಮಂತ್ರವಾಗಿರಲಿ.. ಯಾರೇ ಅಲ್ಲಿ ತಂದಿಟ್ಟಿರ್ಲಿ ಅವ್ರು ನನ್ನ ಪ್ರತಿತಂತ್ರದಿಂದ ತಪ್ಪಿಸ್ಕೊಂಡು ಹೋಗೋಕೇ ಆಗೋದಿಲ್ಲ... ರಕ್ತಕಾರಿ ನರಳ್ತಾರೆ... ಹಾಂಗೆ ಮಾಡ್ತೀನಿ..ನೀವೆಲ್ಲಾ ನೋಡ್ತಿರಿ ಈ ಜೋಯಿಸನ ಪಾಂಡಿತ್ಯಾನಾ. ಹಾಂ.. ಎಲ್ಲವುದಕ್ಕೂ ಮೊದಲು ಹೋಮ ಕುಂಡಕ್ಕೆ ಸಾಮಗ್ರಿಗಳ ಹೊಂದಾಣಿಗೆ ಅಗ್ಬೇಕು. ಅದಕ್ಕಾಗಿ ನಾನು ಬೆಳಗ್ಗಿನೇ ಪೇಟೆಗೆ ಹೋಗ್ಬೇಕು. ಎನೇನು ಬೇಕು ಅಂತ ಹೇಳಿದ್ರೂ ನಿಮಗೆಲ್ಲಾ ಅದು ತಿಳಿಯದು. ಆಮೇಲೆ ಒಂದಕ್ಕೊಂದು ಆದರೆ ಏನು ಗತಿ? ನೀವೆಲ್ಲಾ ನಿಮ್ಮ ನಿಮ್ಮ ವಂತಿಗೆ ಇಂತಿಷ್ಟು ಎಂದು ಕೊಟ್ಟು ಬಿಡಿ. ಅದಕ್ಕೆ ನನ್ನದೂ ಸೇರಿಸಿ ಎಲ್ಲಾ ಏರ್ಪಾಡು ಮಾಡುವೆ. ಮೊದಲು ಎಲ್ಲರೂ ತಾಯಿತ ಕಟ್ಟಿಸಿಕೊಂಡು ಹೋಗಿ.. ಆರಾಮವಾಗಿ ನಿದ್ರಿಸಿ. ನಿಮ್ಮೆಲ್ಲರ ಪರವಾಗಿ ನಾನು ನಿದ್ದೆಗೆಟ್ಟು ನಾಳೆಯ ತಯಾರಿ ನಡೆಸುವೆ.. ಸರೀ ತಾನೇ?" ಎಂದು ಅಭಯವಿತ್ತಿದ್ದೇ ತಡ ರಮಾನಂದ ದಂಪತಿಗಳು ಅವರ ಕಾಲಿಗೆ ಅಡ್ಡ ಬಿದ್ದರು. ಅವರ ಜೊತೆಗೆ ಉಳಿದವರೂ ನಮಸ್ಕರಿಸಿದರು. ಆದರೆ ಸಾವಿತ್ರಮ್ಮನ ತಲೆಯೊಳಗೆ ಮಾತ್ರ ಇನ್ನೂ ಹುಳ ಕೊರೆಯುತ್ತಲೇ ಇತ್ತು. 

"ಹೌದು ಜೋಯಿಸರೆ.. ನೀವು ಅಂದ್ದು ನಿಜ... ಎಲ್ಲಾ ಸಾಮಗ್ರಿಗಳನ್ನು ನೀವೇ ತನ್ನಿ... ಆದರೆ ಎಷ್ಟೆಷ್ಟು ವಂತಿಗೆ ನೀಡಬೇಕಾಗುತ್ತದೆಂದೂ ಈಗಲೇ ಹೇಳಿದ್ದರೆ ನಾಳೆ ಹೊಂದಿಸಲು ಸುಲಭವಾಗುತ್ತಿತ್ತು.."ಎಂದು ಹೇಳಲು ಪದ್ಮಜ ಒಳಗೊಳಗೇ ಉರಿದುಕೊಂಡಳು. ಆದರೆ ಈಗ ಜೋಯಿಸರೇ ಸಾವಿತ್ರಮ್ಮನಿಗೆ ಉತ್ತರಿಸಿದರು.

"ಸಾವಿತ್ರಮ್ಮ.. ಅದನ್ನು ಈಗಲೇ ಹೇಳಲಾಗದು.. ನಾನು ಲೆಕ್ಕ ಹಾಕಿ, ಆದಷ್ಟು ಭಾರ ನಿಮ್ಮಗಳ ಮೇಲೆ ಬೀಳದಂತೇ ನೋಡಿಕೊಂಡು ನಾಳೆ ಬೆಳಗ್ಗೆಯೇ ಹೇಳುವೆ. ಯಾವ ತಾಂತ್ರಿಕನೂ ನನ್ನಷ್ಟು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಮಾಡಲಾರ. ಬೇಕಿದ್ದರೆ ನಿಮ ತಮ್ಮನನ್ನೇ ಕೇಳಿಕೊಳ್ಳಿ.. ಆಮೇಲೆ ನನ್ನ ಬಳಿ ಏನೂ ದೂರದಿರಿ. ಅವರೇ ಎಲ್ಲಾ ನೋಡಿಕೊಳ್ಳುವುದಿದ್ದರೆ ನನ್ನ ಅಭ್ಯಂತರವಿಲ್ಲ.." ಎಂದು ಕೈ ಎಳೆದಂತೆ ಮಾಡಲು ಉಳಿದವರು ನೀವೇ ಸರಿ ಎಂದು ಸಮಾಧಾನಿಸಿ ಬಿಟ್ಟರು. ಮತ್ತೆ ನಿರುಪಾಯಳಾದ ಸಾವಿತ್ರಿ ಸುಮ್ಮನಾಗಬೇಕಾಯಿತು. ಹೊರಗೆ ಕತ್ತಲು ನಿಧಾನ ಸುರಿಯುತ್ತಿರುವುದನ್ನು ಕಂಡ ವಠಾರದವರು... ಹೆಚ್ಚು ಹೊತ್ತು ಹೊರಗಿರಲು ಇಚ್ಛಿಸದೇ ಹೊರಡಲನುವಾದರು. ಹೋಗುವ ಮೊದಲು ಮಾತಿನಂತೇ ನೂರುರೂಪಾಯಿ ತೆತ್ತು, ತಾಯಿತ ಕಟ್ಟಿಸಿಕೊಂಡು, ತೆಂಗಿನ ಕಾಯಿ ಇರುವ ಕೂಡು ದಾರಿ ಕಡೆ ಹೋಗದೆ, ಬಳಸು ದಾರಿ ಹಿಡಿದು ಮನೆಯಕಡೆ ಹೊರಟರು.

-೩-

"ಅಲ್ಲಾ ರೀ.. ತುಂಬಾ ಚೆನ್ನಾಗಿದೆ ನಿಮ್ಮ ತಲೆ...ಇದಕ್ಕೇನಾ ನೀವು ಹೇಳಿದ್ದು ನಂಗೆ ಬಳೆ ಗ್ಯಾರಂಟಿ ಅಂತ... ವ್ಹಾರೆವ್ಹಾ.. ಆ ಸಾವಿತ್ರಿ ಬಾಯನ್ನೂ ಮುಚ್ಚಿಸ್ಬಿಟ್ರಿ. ಯಾರೋ ಏನೋ ಅಪ್ಪಿ ತಪ್ಪಿ ಕಾಯಿ ಇಟ್ಟು ಹೇಗೋ ಕುಂಕುಮ ಬಿದ್ದಿರ್ಬೋದು.. ಮಂತ್ರದ್ದೇ ಆಗಿದ್ರೂ ನಮ್ಗೇನು. ಪ್ರಾಯಶ್ಚಿತ್ತ ಏನಾದ್ರೂ ಇದ್ದೇ ಇರೊತ್ತೆ. ನಮ್ಮೂರಿನ ಅರ್ಚಕರನ್ನು ಕೇಳಿ ಮಾಡ್ಕೊಂಡ್ರೆ ಆಯ್ತು. ಈ ಪೆದ್ದುಗಳಿಗೆ ತಲೆ ಇಲ್ಲಾ.... ಹೆದ್ರಿಕೊಂಡು ಬಂದ್ವು. ನಾವೇನೂ ಕರ್ಸಿದ್ದಲ್ವಲ್ಲಾ.. ಏಳಿ ಮೊದ್ಲು ನೀವು ನಾಳೆ ಯಾರಿಂದ ಎಷ್ಟು ತಗೋ ಬೇಕು ಲೆಕ್ಕಾ ಹಾಕಿ ಬೇಗ... ನಂಗೆ ನನ್ನ ಬಳೆಗೆ ಲೆಕ್ಕ ಹಾಕೋಕೆ ಸುಲಭವಾಗೊತ್ತೆ...."ಎಂದು ಗಂಡನಿಗೆ ಗಡಿಬಿಡಿ ಮಾಡಿದಳು. ಆಗತಾನೇ ಕೈತುಂಬಿದ ಲಕ್ಷ್ಮಿಯನ್ನೆಣಿಸುತ್ತಾ ಕಣ್ತುಂಬಿಕೊಳ್ಳುತ್ತಿದ್ದ ಜೋಯಿಸರು- "ಸ್ವಲ್ಪ ತಡಿಯೆ ಮಾರಾಯ್ತೀ.. ಆತುರಗಾರನಿಗೆ ಬುದ್ಧಿ ಮಟ್ಟ ಅಂತಾರೆ. ಅವಸರ ಮಾಡ್ಬೇಡ. ಈಗ ಕೂಡು ರಸ್ತೆ ಅಕ್ಕ ಪಕ್ಕ ಇರೋ ಶಾರದಮ್ಮ, ಸುಶೀಲ, ಸಾವಿತ್ರಿ, ಆನಂದ ರಾಯರ ಮನೆಗೆ ಸ್ವಲ್ಪ ಹೆಚ್ಚು ವಂತಿಗೆ ಹಾಕ್ತೀನಿ.. ಕಾರಣ ಕೇಳಿದ್ರ ತೆಂಗಿನ ಕಾಯಿಯ ಪ್ರಭಾವ ಅವ್ರ ಮನೆಗೆ ಜಾಸ್ತಿ ಇದೆ ಅಂತೀನಿ.. ಹೇಂಗೂ ನಾಲ್ಕು ಕೂಡು ರಸ್ತೆಯ ಅಕ್ಕ ಪಕ್ಕದಲ್ಲೇ ಇವರುಗಳ ಮನೆನೇ ಇದ್ಯಲ್ಲ.. ಆಮೇಲೆ ಉಳಿದವ್ರಿಗೆಲ್ಲಾ ಸ್ವಲ್ಪ ಕಡಿಮೆ ಹಾಕ್ತೀನಿ, ಆವಾಗ ಅವ್ರಿಗೆಲ್ಲಾ ನಂಬಿಕೆ ಬರೊತ್ತೆ.. ನಿಜ ಅನ್ಸೊತ್ತೆ.. ಏನಂತೀ? ಹಾಂ.. ಮೊದಲ  ನಾಲ್ಕು ಮನೆಗಳಿಗೆ ೧೦೦೦ ರೂ ಹಾಕಿದ್ರೆ ಉಳಿದ ೬ ಮನೆಗಳಿಗೆ ೫೦೦ ಹಾಕ್ತೀನಿ. ನಿನ್ನ ಹಳೇ ಪಳೇ ಮುರ್ದ ಚಿನ್ನ ಇದ್ರೆ ಅದ್ನೂ ಸೇರ್ಸಿ ಬಳೆ ಮಾಡಿಸ್ಕೋ.. ಆಮೇಲೆ ನನ್ನ ಜೀವ ತಿನ್ನೋದು ಬಿಡು. ಏನೂ ಮಾಡ್ಸಿಲ್ಲಾ ಅಂತಾ.. ಹಾಂ.. ಮಾಡ್ಸಿದ್ ಕೂಡ್ಲೇ ಎಲ್ರೀಗೂ ತೋರ್ಸಿ ಕುಣೀಬೇಡ. ಆ ಸಾವಿತ್ರಿಗೆ ಸಂಶಯ ಬರೊತ್ತೆ. ನಾಲ್ಕು ದಿನ ಕಳೀಲಿ. ಊರಿಗೆ ಹೋಗ್ಬಾ. ತವ್ರಿಂದ ಬಂದಿದ್ದು ಅಂತ ಹೇಳೋಕೆ ಆಗೊತ್ತೆ. ಏನು? ಅರ್ಥ ಆಯ್ತು ತಾನೇ?" ಎಂದು ಹೇಳಿದ ಜೋಯಿಸರ ಮಾತಿಗೆಲ್ಲಾ ಪದ್ಮಜ ನಗುತ್ತಾ ತಲೆತೂಗಿದಳು. ಪತಿಯ ಬುದ್ಧಿಮತ್ತೆ ಕಂಡು ಅವಳಿಗೆ ಹೆಮ್ಮೆ ಎನಿಸಿತು. ಚಿನ್ನದ ಬಳೆಗಳು ತುಂಬಿದ ಕೈಗಳನ್ನು ಆ ಸಾವಿತ್ರಿ ಮುಂದೆ ಹಿಡಿದಾಗ ಆಗುವ ಆತ್ಮ ತೃಪ್ತಿಯನ್ನು ನೆನೆಯುತ್ತಾ ಅವಳ ಮನ ಸಂಭ್ರಮಿಸಿತು. 

"ಅಮ್ಮಾ... ಅಪ್ಪಯ್ಯ... ಬೇಡಪ್ಪಯ್ಯಾ.. ಹೀಂಗೆಲ್ಲಾ ಮಾಡ್ಬೇಡಿ... ನಾ ಸಾಯೊಲ್ಲಾ... ಊ‌ಊ‌ಊಂ.." ಎಂದು ಒಂದೇ ಸಮನೆ ಅಳುತ್ತಾ ಬಳಿ ಬಂದ ಮಗಳ ರಂಪಾಟಕ್ಕೆ ಪದ್ಮಜ ಬೆಚ್ಚಿಬಿದ್ದಳು.
"ಏನೇ ರೋಗಬಂತೇ ನಿಂಗೆ.. ಸಾಯೋ ಅಂತದ್ದು ಏನಾಗಿದೆ ಈಗ? ನಾವಿಲ್ಲಿ ಭವಿಷ್ಯ ಯೋಚಿಸ್ತಾ ಇದ್ದ್ರೆ.. ನೀನು ಸಾಯೋ ಮಾತಾಡ್ತಿದ್ದೀಯ.. ಕತ್ತೆ... ಓದ್ಕೋ ಅಂದ್ರೆ ಇಲ್ಲದ ತಲಹರೆಟೆ ಮಾಡ್ತಾಳೆ. ವರ್ಷ ಹತ್ತಾಗಿದ್ರೂ ಬುದ್ಧಿ ಮಾತ್ರ ಐದಕ್ಕೇ ಸರಿ..." -ತನ್ನ ಸಂಭ್ರಮಕ್ಕುಂಟಾದ ಭಂಗಕ್ಕೆ ಮಗಳ ಮೇಲೆ ಕೋಪಗೊಂಡಳು ಪದ್ಮಜ.
"ಪಾಪ ಯಾಕೆ ಹಾಗೆ ಕೂಗಾಡ್ತೀಯಾ? ಏನೋ ಮಗು ಹೆದ್ರಿದೆ ಇದನ್ನೆಲ್ಲಾ ನೋಡಿ.. ನಾ ಕೇಳ್ತೀನಿ ಇರು.. ಬಾ ಪುಟ್ಟ.. ಏನಾಯ್ತು? ಯಾರಿಗೂ ಏನೂ ಆಗೊಲ್ಲಾಮ್ಮ. ನಾನೆಲ್ಲ ನೋಡ್ಕೋತೀನಿ.." ಎಂದು ಮುದ್ದುಕುವರಿಯನ್ನು ಹತ್ತಿರ ಎಳೆದುಕೊಂಡರು ಜೋಯಿಸರು.
"ಅಪ್ಪಯ್ಯ..ನೀ ರಮಾನಂದ ಅಂಕಲ್ ಹತ್ರ ಹೇಳ್ತಾ ಇದ್ದೆ.. ಪೂಜೆ ಮಾಡಿದ್ರೆ ಅಲ್ಲಿ ಆ ಕಾಯಿ ಇಟ್ಟವ್ರು ರಕ್ತ ಕಾರಿ ನರಳ್ತಾರೆ ಅಂತ.. ನಂಗೆ ಭಯ ಅಪ್ಪಯ್ಯ.. ಊ‌ಊಂ.."ಎಂದು ಮತ್ತೆ ಅಳಲು ಜೋಯಿಸ ದಂಪತಿಗಳಿಗೆ ತುಸು ಆತಂಕವಾಯಿತು.
"ಯಾಕಮ್ಮಾ? ನಿಂಗ್ಯಾಕೆ ಭಯ ಆಗ್ಬೇಕು? ಅದನ್ನು ಅಲ್ಲಿ ಇಟ್ಟವರಿಗೆ ಹಾಗೆ ಆಗೋದು.. ಹೆದ್ರಕೋಬೇಡ" ಎಂದು ಪದ್ಮಜಳೂ ಈಗ ಸಮಾಧಾನಿಸಿದಳು.
"ಇಲ್ಲಮ್ಮಾ.. ಅದೂ....ಅದೂ.. ಅದನ್ನ ನಾನೇ ಅಲ್ಲಿಟ್ಟಿದ್ದು.." ಎಂದು ಮೆಲ್ಲನೆ ಬಿಕ್ಕುತ್ತಾ ಸುಮ ಹೇಳಿದಾಗ ಅವರಿಬ್ಬರಿಗೂ ಆಕಾಶವೇ ಕಳಚಿಬಿದ್ದಂತಾಯಿತು.
"ಏನು ಹೇಳ್ತಾ ಇದ್ದೀಯೇ ಮಂಕೆ? ನೀನ್ಯಾಕೆ ಅಲ್ಲಿಡ್ಬೇಕು? ಹುಚ್ಚುಚ್ಚಾಗಿ ಆಡ್ಬೇಡ?"-ಎಂದು ಗದರಿಸಿದ ಪದ್ಮಜಳ ದನಿಯೊಳಗೆ ಸಣ್ಣ ಕಂಪನ.

"ಅದೂ... ಅದೂ.. ಅಮ್ಮಾ ಆವತ್ತು ಶೆಟ್ಟಿಗಾರು ತೋಟದ ಕಡೆಯಿಂದ ನಾವು ಬರ್ತಿರ್ಬೇಕಿದ್ರೆ ಒಂದು ತೆಂಗಿನ್ಕಾಯಿ ಬಿದ್ದಿದ್ದನ್ನ ಕಂಡು ಮೆಲ್ಲಗೆ ಎತ್ಕೊಂಡು ಬಾ ಅಂದಿದ್ಲು. ಆದ್ರೆ ನಾನು ತರೋಕೆ ಹೋದಾಗ ಯಾರಾದ್ರೂ ನೋಡಿದ್ರೆ ಅಂತ ಹೆದ್ರಿ ಹಾಂಗೇ ಬಂದ್ಬಿಟ್ಟಿದ್ದೆ. ಆಗ ಅಮ್ಮ ನಾನು ದಡ್ಡಿ, ಯಾವ್ದಕ್ಕೂ ಲಾಯಕ್ಕಲ್ದವ್ಳು ಅಂತೆಲ್ಲಾ ತುಂಬಾ ಬಯ್ದಿದ್ಲು. ಇವತ್ತು ಬೆಳ್ಗೆ ಅದೇ ದಾರಿಲಿ ಬರ್ತಿದ್ನಾ.. ಬೇಲಿ ಪಕ್ಕದಲ್ಲೇ ಮತ್ತೊಂದು ತೆಂಗಿನಕಾಯಿ ಕಂಡೆ. ತಗೊಂಡು ಬಂದ್ರೆ ಅಮ್ಮಂಗೆ ಖುಶಿ ಆಗೊತ್ತೆ ಅಂತ ದೈರ್ಯ ಮಾಡಿ ಎತ್ಕೊಂಡು ಹೊರ್ಟೆ....ಸ್ವಲ್ಪ ದೂರ ಹೋಗ್ಬೇಕಾದ್ರೆ ಸುಶೀಲಕ್ಕ ಕರೆದ್ರು..ದೇವಸ್ಥಾನದ ಪ್ರಸಾದ ಅಂತ ಕುಂಕುಮ ಕಟ್ಟಿ ಕೊಟ್ರು.. ಹಾಂಗೇ ಕೂಡು ರಸ್ತೆ ಹತ್ರ ಬರ್ತಿರ್ಬೇಕಾದ್ರೆ ದೂರದಲ್ಲಿ ಶೆಟ್ಟಿಗಾರು ತಮ್ಮ ಕಂಡ. ಅವ್ನಿಗೆ ನಾನು ಕಾಯಿ ಕದ್ದಿರೋದು ಗೊತ್ತಾದ್ರೆ ಅಂತ ಹೆದ್ರಿ ಅಲ್ಲೇ ಕಾಯಿ ಇಡೋವಾಗ ಕುಂಕಮಾನೂ ಬಿದ್ಬಿಡ್ತು. ಭಯದಿಂದ ಎತ್ಕೊಳ್ದೇ ಹಾಂಗೇ ಓಡಿ ಬಂದ್ಬಿಟ್ಟೆ.. ಊ‌ಊ‌ಊಂ... ನಂದೇನೂ ತಪ್ಪಿಲ್ಲಪ್ಪಯ್ಯ... ನೀವು ಆ ಪೂಜೆ ಮಾಡಿಸ್ಬೇಡಿ.." ಎಂದು ಜೋರಾಗಿ ಅಳತೊಡಗಿದಂತೇ ದಂಪತಿಗಳಿಗೆ ದಿಕ್ಕೇ ತೋಚದಂತಾಯ್ತು.

"ಅಯ್ಯೋ ಕತ್ತೆ... ಎಂತಾ ಕೆಲ್ಸ ಮಾಡ್ದ್ಯೇ? ಮಾಡೋದೇನೋ ಮಾಡ್ದೆ.. ಮೊದ್ಲೇ ಹೇಳೋಕೆ ಏನಾಗಿತ್ತು? ಈಗ ಇಷ್ಟೆಲ್ಲಾ ಅದ್ಮೇಲೆ ಹೀಂಗೆ ಹೇಳಿದ್ಯಲ್ಲಾ....ಈಗ ಬೊಬ್ಬೆ ಹಾಕಿ ಅಕ್ಕ ಪಕ್ಕದವ್ರಿಗೂ ಗೊತ್ತಗೋ ಹಾಗೆ ಮಾಡ್ಬೇದ... ಬಾಯಿ ಮುಚ್ಚು ಮೊದ್ಲು.." ಎಂದು ಕೂಗಾಡುತ್ತಾ ಮಗಳನ್ನು ತಾರಾಮಾರ ಹೊಡೆಯ ತೊಡಗಿದಳು ಪದ್ಮಜ.

ಮಗಳ ಹೆಡ್ಡುತನ ಕಂಡು ಜೋಯಿಸರಿಗೆ ಬೇಸರವಾದರೂ ಮುದ್ದು ಮಗಳು ಹೊಡೆತ ತಿನ್ನುವುದನ್ನು ನೋಡಲಾಗದೇ ತಪ್ಪಿಸಿ, ಹೇಗೋ ಸಮಾಧಾನ ಮಾಡಿ ಒಳ ಕಳುಹಿಸಿದರು. ಇತ್ತ ಅವರ ಧರ್ಮ ಪತ್ನಿ ತನ್ನ ಬಳೆಯ ಕನಸೆಲ್ಲಾ ಚೂರು ಚೂರಾದಂತೆ ಅನಿಸಿ ತಲೆ ಮೇಲೆ ಕೈ ಹೊತ್ತು ಕುಳಿತಳು.

"ಏನಾಗಿ ಹೋಯ್ತ್ರೀ? ಇವಳಿಂದಾಗಿ ಮರ್ಯಾದೆ ಹೋಗೋ ಹಾಂಗೆ ಕಾಣೊತ್ತೆ... ನಾಳೆ ದಿನ ಇವ್ಳು ಹೆದ್ರಿ ಬಾಯಿ ಬಿಟ್ರೆ ಏನು ಗತಿ? ಆ ಸಾವಿತ್ರಿ ಚಾಲಾಕಿ. ಅವ್ಳ ಮಗ್ಳ ಜೊತೆ ಇವ್ಳೇನಾದ್ರೂ ಭಯದಿಂದ ಬಾಯ್ಬಿಟ್ರೆ ಅಷ್ಟೇ. ನಾವು ಈ ಪೂಜೆ ಮಾಡ್ಸೋ ಹಾಂಗಿಲ್ಲಾ....ಹಾಗೇನಾದ್ರೂ ಮಾಡ್ಸಿದ್ರೆ ಇವ್ಳು ನಾವು ಮಾಡ್ತಿರೋದೆಲ್ಲಾ ನಿಜ ಅಂತ ನಂಬಿ ಅಲ್ಲೇ ಹೇಳಿದ್ರೂ ಹೇಳೋಳೇ.. ಹ್ಮ್ಂ.. ಎಲ್ಲಾ ಪಡ್ಕೊಂಡು ಬರ್ಬೇಕು... ಈಗೇನು ಮಾಡೋದು ಯೋಚ್ಸಿ.." ಎನ್ನುತ್ತಾ ನಿರಾಸೆಯಿಂದುಕ್ಕಿ ಬಂದ ಕಣ್ಣೀರನ್ನು ಸೆರಗಿನಿಂದ ಒತ್ತಿ ಹಿಡಿದಳು ಪದ್ಮಜ.

ಗಂಟೆ ಒಂದಾದರೂ ಮೂವರಿಗೂ ನಿದ್ದೆಯಿಲ್ಲ. ಅತ್ತ ಒಳಗೋಣೆಯಲ್ಲಿ- ‘ಅಪ್ಪಯ್ಯ ಏನಾದ್ರೂ ಪೂಜೆ-ಗೀಜೆ ಮಾಡ್ಸಿದ್ರೆ ಏನು ಮಾಡುವುದು?ನಾನು ರಕ್ತ ಕಾರೋವಂತಾದ್ರೆ ಏನು ಗತಿ?’ ಎಂದೆಲ್ಲಾ ಯೋಚಿಸುತ್ತಾ ಬೆಚ್ಚುತ್ತಿದ್ದ ಸುಮ ಸುಮ್ಮನೇ ಪಿಳಿ ಪಿಳಿ ಕಣ್ಣು ಬಿಡುತ್ತಾ ಮಲಗಿದ್ದರೆ, ಇತ್ತ ಎಷ್ಟು ಯೋಚಿಸಿದರೂ ಉಪಾಯಗಾಣದೇ ಜೋಯಿಸರು ಚಡಪಡಿಸುತ್ತಿದ್ದರು. ಸಮಯ ಹೀಗೇ ಕಳೆದುಹೋಗುತ್ತಿರಲು, ಪದ್ಮಜಳಿಗೆ ಏನೋ ಒಂದು ಹೊಳೆಯಿತು. ತನ್ನ ಬುದ್ಧಿವಂತಿಕೆ ತಾನೇ ಸಂತಸಪಡುತ್ತಾ ಅದನ್ನು ಪತಿಗೆ ಹೇಳಲು, ಅವರಿಗೂ ಅದು ಸಮ್ಮತವಾಯಿತು. ಅಬ್ಬಾ! ಅಂತೂ ಏನೋ ಒಂದು ಉಪಾಯ ಕಂಡು ಹಿಡಿದ ನಿರಾಳತೆಯೊಂದಿಗೆ ಅಳಿದುಳಿದ ರಾತ್ರಿಯನ್ನಾದರೂ ನಿದ್ದೆಯಲ್ಲಿ ಕಳೆಯಲು ಕೋಣೆಗೆ ಬಂದರು. ನೋಡಿದರೆ ಅಲ್ಲಿ ಪುಟ್ಟ ಸುಮ ಇನ್ನೂ ಮಲಗದೇ ಮಗ್ಗಲನ್ನು ಬದಲಾಯಿಸುತ್ತಿದ್ದಳು. ಸ್ವಲ್ಪ ಹೊತ್ತಿನ ಹಿಂದೆ ತಾನು ತಾರಾಮಾರ ಹೊಡೆದದ್ದು ನೆನಪಾಗಿ ಪದ್ಮಜಳಿಗೆ ತುಂಬಾ ಬೇಸರವಾಯಿತು. ತನ್ನಿಂದ ಈ ಹುಡುಗಿ ನೋವು ಪಡುವಂತಾಯಿತಲ್ಲ ಎಂದು ಮರುಗಿದ ತಾಯಿ ಹೃದಯ ಹಾಗೇ ಅವಳ ಮೈದಡವಲು, ಇದ್ದ ಬದ್ದ ದುಃಖವೂ ಉಕ್ಕಿ ಬಂದಿತು ಸುಮಳಿಗೆ.

"ಇಲ್ಲಮ್ಮಾ.. ನಾವು ಆ ಪೂಜೆ ಮಾಡ್ಸೊಲ್ಲ. ನೀ ಹೆದ್ರಬೇಡ. ಆ ತೆಂಗಿನ ಕಾಯಿಗೂ ವ್ಯವಸ್ಥೆ ಮಾಡ್ತೀವಿ. ನೋಡು ಸುಮ, ಆದ್ರೆ ನೀ ಮಾತ್ರ ಆಣೆ ಕೊಡು ನಮ್ಗೆ. ಯಾವುದೇ ಕಾರಣಕ್ಕೂ ಆ ಕಾಯಿ ಇಟ್ಟವ್ಳು ನೀನು ಅಂತ ಯಾರಿಗೂ ಹೇಳ್ಬಾರ್ದು. ಆಣೆ ಮಾಡಿದ್ದಮೇಲೂ ನೀನೇನಾದ್ರೂ ಹೇಳಿದ್ರೆ ನಾವು ರಕ್ತ ಕಾರ್ಕೋತೀವಿ ಅಷ್ಟೇ! ತಿಳೀತೋ ಹೇಂಗೇ? ಈಗ ನೀನು ಆರಾಮವಾಗಿ ಮಲ್ಕೋ. ನಾವು ನೋಡ್ಕೋತೀವಿ.." ಎಂದು ಜೋಯಿಸರು ಸಮಾಧಾನಿಸಲು ಸುಮಳಿಗೆ ಧೈರ್ಯ ಬಂತು. ಮಗಳಿಂದ ಆಣೆಯನ್ನು ತೆಗೆದುಕೊಂಡ ಮೇಲೆ ಜೋಯಿಸ ದಂಪತಿಗಳು ಮಲಗಹೊರಟರೆ, ಅಪ್ಪ ಅಮ್ಮನಿಂದ ತಾನು ಬಚಾವಾಗುವುದನ್ನು ಖಾತ್ರಿಮಾಡಿಕೊಂಡ ಸುಮಳೂ ನಿದ್ರಾ ದೇವಿಗೆ ಶರಣಾದಳು.

-೪-

"ನೋಡಿ ಆನಂದ ರಾಯರೇ.. ನಿನ್ನೆಯೆಲ್ಲಾ ನಿದ್ದೆಗೆಟ್ಟು ನಾನು ಮಾಟ-ಮಂತ್ರಕ್ಕೆ ಪರಿಹಾರವನ್ನು ಹೇಳಿರುವ ಗ್ರಂಥಗಳನ್ನೆಲ್ಲಾ ಜಾಲಾಡಿದೆ. ಅವುಗಳಲ್ಲಿ ಹೇಳಿರುವುದೆಲ್ಲಾ ಆಗು ಹೋಗುವಂಥದ್ದಲ್ಲ ಬಿಡಿ.. ಅದೂ ಅಲ್ಲದೇ ನನಗನ್ನಿಸಿದ್ದೇನೆಂದರೆ, ಏನೂ ತಪ್ಪು ಮಾಡದ ಈ ವಠಾರದವರಿಂದ ದುಡ್ಡು ವಸೂಲಿ ಸರಿಯಲ್ಲ ಎಂದು. ಹಾಗಾಗಿ ಬೆಳ್ಳಂಬೆಳಗ್ಗೆಯೇ ನನಗೆ ತುಂಬಾ ಪರಿಚಯ ಇರೋ ಪ್ರಸಿದ್ಧ ತಾಂತ್ರಿಕರಾದ ಶಂಭು ಭಟ್ಟರಿಗೆ ಫೋನಾಯಿಸಿದೆ. ಅವರು ಒಂದು ಸುಲಭ ಹಾಗೂ ನಯಾ ಪೈಸೆ ಖರ್ಚಿಲ್ಲದ ಪರಿಹಾರ ಹೇಳಿದ್ದಾರೆ. ಇವತ್ತು ಸಂಜೆ ನಾನು ಆ ಕಾಯಿಯ ಸುತ್ತ ಅರಿಶಿನ ಕುಂಕುಮದಿಂದ ಬಂಧ ಹಾಕಿಡುವೆ. ಮಂತ್ರದ ಪ್ರಭಾವದಿಂದ ಅದರೊಳಗಿನ ಶಕ್ತಿ ಹೊರ ಹೋಗದಂತಾಗುವುದು. ಈ ರಾತ್ರಿಯೇ ಸ್ವತಃ ಆ ಕಾಯನ್ನು ಅಲ್ಲಿಟ್ಟವರೇ ಬಂದು ಅದನ್ನು ಎತ್ತೊಯ್ಯುವಂತೆ ಮಾಡುವೆ ಎಂದು ಭಟ್ಟರೇ ಹೇಳಿದ್ದಾರೆ. ಅಲ್ಲಿಂದಲೇ ಇದನ್ನೆಲ್ಲಾ ಮಾಡುವಷ್ಟು ಶಕ್ತಿಯುಂಟು ಅವರಿಗೆ. ಬೆಳಗಾಗುವದರೊಳಗೆ ಆ ತೆಂಗಿನ ಕಾಯಿ ಅಲ್ಲಿ ನಿಮಗೆ ಕಂಡರೆ ಹೇಳಿ! ನನಗೆ ತುಂಬಾ ಬೇಕಾದವರಾದ್ದರಿಂದ ಈ ಸಲ ದುಡ್ಡು ಕಾಸು ಬೇಡ ಅಂದಿದ್ದಾರೆ. ಹಾಗೆ ನಾನು ಅವರನ್ನು ಒಪ್ಪಿಸಿದ್ದೇನೆ ಅನ್ನಿ... ಹಾಂ..ಆದ್ರೆ ಒಂದು ಮಾತು.. ಈ ರಾತ್ರಿ ಮಾತ್ರ ಯಾರೊಬ್ಬರೂ ತಪ್ಪಿಯೂ ತಮ್ಮ ತಲೆಯನ್ನು ಹೊರ ಹಾಕಬಾರದೆಂದು ಕಟ್ಟಪ್ಪಣೆ ಮಾಡಿದ್ದಾರೆ ಭಟ್ಟರು. ನೀವೆಲ್ಲ ಉಂಡು ಬೇಗ ಮಲಗಿಬಿಡಿ ಇವತ್ತು. ಹೆದರಬೇಡಿ.. ಎಲ್ಲಾ ಸರಿಯಾಗುವುದು.." ಎನ್ನಲು ಮಹದಾನಂದವಾಯಿತು ವಠಾರದ ಮಂದಿಗೆ. ಬೆಳಗ್ಗೆಯೇ ಜೋಯಿಸರ ಸುತ್ತ ಜಮಾಯಿಸಿದ್ದ ಅವರಿಗೆಲ್ಲಾ ಇನ್ನೆಷ್ಟು ದುಡ್ಡು ಖರ್ಚಾಗುವುದೋ ಎಂಬ ಆತಂಕವುಂಟಾಗಿತ್ತು. ಆದರೆ ಇಲ್ಲಿ ನೋಡಿದರೆ ಚಿತ್ರಣವೇ ಬೇರೆಯಾಗಿತ್ತು. ನಯಾ ಪೈಸೆಯ ಖರ್ಚಿಲ್ಲದೇ ಬಂದ ವಿಪತ್ತು ದೂರಾಗುತ್ತಿರುವುದು ಕಂಡು ಜೋಯಿಸರನ್ನು ಕೊಂಡಾಡುತ್ತ ಮನೆಗೆ ತೆರೆಳಿದರು. ‘ಅದು ಹೇಗೆ ಇಷ್ಟೊಂದು ಉದಾರ ಬುದ್ಧಿ ಬಂತಪ್ಪಾ ಇವರಿಗೆ ’ ಎಂಬ ಸಣ್ಣ   ಅನುಮಾನ ಸಾವಿತ್ರಮ್ಮನಿಗೆ ಬಂದರೂ, ಬಾಯ್ಬಿಟ್ಟರೆ ಎಲ್ಲಿ ಮತ್ತೆ ಖರ್ಚು ಬಾಬ್ತಿನ ಸುದ್ದಿ ಬರುವುದೋ ಎಂದು ಮರುಮಾತಾಡದೇ ತೋರಿಕೆಗೆ ಎರಡು ಒಳ್ಳೆಯ ಮಾತು ಆಡಿ ಹೊರಟಳು. ಈಗ ಜೋಯಿಸರ ಮೊಗದಲ್ಲಿ ಕೊಂಚ ನಿರುಮ್ಮಳತೆ ಕಂಡರೆ, ಪದ್ಮಜಳ ಮುಖ ಮಾತ್ರ ಸಂಪೂರ್ಣ ಬಾಡಿ ಹೋಗಿತ್ತು.

ಮುಸ್ಸಂಜೆಯಾಗುತ್ತಿದ್ದಂತೇ ಜೋಯಿಸರು ಬಟ್ಟಲಲ್ಲಿ ಅರಿಶಿನ ಕುಂಕುಮ ಹಾಕೂ ಅಕ್ಕಿ ಕಾಳುಗಳನ್ನು ತಂದು ಕಲಸಿ, ಒಳಬಾಯಿಯಲ್ಲಿಯೇ ಎನೋ ಮಂತ್ರವನ್ನು ಪಠಿಸುತ್ತಾ, ತೆಂಗಿನ ಕಾಯಿಯ ಸುತ್ತ ವೃತ್ತಾಕಾರದ ಬಂಧವನ್ನೆಳೆದರು. ಹಿಂತಿರುಗುವ ಮೊದಲು ಮತ್ತೊಮ್ಮೆ ಎಲ್ಲರನ್ನೂ ಆ ರಾತ್ರಿ ಹೊರಬರದಂತೇ ಎಚ್ಚರಿಸಲು ಮಾತ್ರ ಮರೆಯಲಿಲ್ಲ. ಅಂದು ವಠಾರದಲ್ಲಿ ಹೆಚ್ಚಿನವರಿಗೆ ನಿದ್ದೆ ಬರಲಿಲ್ಲ. ಮನೆಯವರೆಲ್ಲಾ ಹತ್ತು ಗಂಟೆಯೊಳಗೇ ತಮ್ಮ ಹೊರಗಿನ ಕೆಲಸಕಾರ್ಯಗಳನ್ನೆಲ್ಲಾ ಮುಗಿಸಿ ಕಿಟಕಿ ಬಾಗಿಲುಗಳನ್ನೆಲ್ಲಾ ಭದ್ರಪಡಿಸಿ ಮುಸುಕು ಬೀರಿ ಮಲಗಿದ್ದರೂ...ಹೊದಿಕೆಯೊಳಗಿಂದಲೇ ಹೊರಗೇನಾದರೂ ಸದ್ದಾಗುತ್ತಿದೆಯೋ ಎಂದು ಗ್ರಹಿಸುತ್ತಾ.. ಕೇಳಿದ ಹಾಗೂ ಕೇಳದ ಸದ್ದಿಗೆಲ್ಲಾ ಬೆವರುತ್ತಾ ಬೆಳಗಿಗಾಗಿ ಕಾಯತೊಡಗಿದರು.

ಸೂರ್ಯೋದಯಕ್ಕಾಗಿಯೇ ರಾತ್ರಿಯಿಡೀ ಕಾದಿದ್ದ ಜನ.. ಬಾನಂಚಿನಲ್ಲಿ ಕೆಂಬಣ್ಣ ಹೌದೋ ಅಲ್ಲವೋ ಎಂಬಂತೆ ಮೂಡಿದ್ದೇ ತಡ ಒಬ್ಬೊಬ್ಬರಾಗಿ ಮೆಲ್ಲನೆ ಹೊರ ಬಂದು ಒಟ್ಟುಗೂಡಿ ಕೂಡು ರಸ್ತೆಯ ಕಡೆಗೆ ನಡೆದರು. ನೋಡಿದರೆ.. ಕಾಯಿಯೂ ಇಲ್ಲಾ, ಹಿಂದಿನ ದಿನ ಸಂಜೆ ಜೋಯಿಸರು ಹಾಕಿಟ್ಟಿದ್ದ ಅರಿಶಿನ ಕುಂಕುಮದ ಬಂಧವೂ ಕಾಣೆ. ಎಲ್ಲರ ಮನದಲ್ಲೂ ನಿರಾಳತೆ ಮೂಡಿ, ಸಮಾಧಾನದ ನಿಟ್ಟುಸಿರುಗಳು ಹೊರಬಂದವು. ಒಟ್ಟಾಗಿ ಎಲ್ಲರೂ ಜೋಯಿಸರನ್ನು ಅಭಿನಂದಿಸಲು ಹೊರಟರೆ, ಅತ್ತ ಪದ್ಮಜ ಬೆಳಗಿನ ದೋಸೆಗೆ ನಂಜಿಕೊಳ್ಳಲು ಚಟ್ನಿಗಾಗಿ ತೆಂಗಿನ ಕಾಯಿ ರುಬ್ಬುತ್ತಿದ್ದಳು.

***ಕರ್ಮವೀರದಲ್ಲಿ ಪ್ರಕಟಿತ***

-ತೇಜಸ್ವಿನಿ ಹೆಗಡೆ.