ಬುಧವಾರ, ಡಿಸೆಂಬರ್ 24, 2008

ನೀರಾಗಿ ಹರಿವ ನೀರೆ....ನೀನ್ಯಾರೆ?!


ಎಲ್ಲರಿಗೂ ಹೊಸವರುಷದ ಹಾರ್ದಿಕ ಶುಭಾಶಯಗಳು.

ಮಳೆಮಾಲೆ ಹುಡುಗಿ
ನಿನ್ನ ನೆನಪಲೇ
ಈ ಮನ
ತುಂತುರು ಹನಿಯಾಗಿದೆ...
.
ಪುಟ್ಟ ಹಣೆಯ ತುಂಬೆಲ್ಲಾ
ಪುಟವಿಟ್ಟಂತಿರುವ
ಸ್ವೇದಬಿಂದುಗಳ ಸಾಲು
ನಿನ್ನ ಕೊರಳಪ್ಪಿ ಬೀಗುತಿಹ
ಮುತ್ತಿನ ಹಾರವನೇ ಮಸುಕಾಗಿಸಿವೆ!
.
ಬೆನ್ನ ತುಂಬೆಲ್ಲ ಹರಡಿರುವ
ಕಡುಗಪ್ಪು ಕೂದಲಿನಿಂದಿಳಿವ
ನೀರ ಬಿಂದುಗಳೆಲ್ಲಾ ಸೇರಿ
ನಿನ್ನಿಂದಗಲಿದ ವಿರದದಲಿ
ನೀರಾಗಿ ಹರಿದು ಶೋಕಿಸುತಿವೆ!


ಆಗಸವನು ತೊರೆದು
ನಿನ್ನ ಸೇರಿದ ಕಾಮನ ಬಿಲ್ಲು
ನಿನ್ನ ಕಣ್ಗಳ ಹೊಡೆತಕ್ಕೆ ಸಿಲುಕಿ,
ಇಬ್ಭಾಗವಾಗಿ, ಬಿಲ್ಲಂತೆ ಬಾಗಿ,
ರೆಪ್ಪೆಗಳಾಟವನೇ ಇಣುಕಿ ನೋಡುತಿವೆ!


ಚುಂಬಕದಂತೇ ಕಣ್ಣಲ್ಲೇ ಸೆಳೆದು,
ಮಕರಂದದ ಸವಿಯ ಸುರಿದು,
ನನ್ನರಿವನೇ ಸೂರೆಗೈದ,
ಮಳೆಮಾಲೆ ಹುಡುಗಿ
ನಿನ್ನ ನೆನಪಲೇ
ಈ ಮನ
ತುಂತುರುಹನಿಯಾಗಿದೆ...

ಶನಿವಾರ, ಡಿಸೆಂಬರ್ 20, 2008

ನೀ ಮಾಯೆಯೋ ನಿನ್ನೊಳಗಿಂದ ನೀ ಮಾಯವೋ?!!

ಈ ಬರಹವನ್ನೋದುವ ಮೊದಲೇ ನಾನು ಸ್ಪಷ್ಟಪಡಿಸುತ್ತಿದ್ದೇನೆ. ನಾನು ಯಾವುದೇ ಸತ್ಯಾಸತ್ಯತೆಯ ಶೋಧನೆಗೋ ಸಂಶೋಧನೆಗೋ ಹೋಗುತ್ತಿಲ್ಲ. ಯಾರ ಭಾವನೆಯನ್ನೂ ಟೀಕಿಸುತ್ತಿಲ್ಲ. ಎಲ್ಲವನ್ನೂ ಅವರವರ ಭಾವಕ್ಕೆ ಬಿಡುತ್ತಿದ್ದೇನೆ. ಇದ್ದುದನ್ನು ಇದ್ದಹಾಗೇ, ನಡೆದದ್ದನ್ನು ನೇರವಾಗಿ ನಿಮ್ಮ ಮುಂದಿಡುತ್ತಿದ್ದೇನೆ. ಇದು ಕಾಲ್ಪನಿಕ ಘಟನೆಯಲ್ಲ. ಕಟ್ಟು ಕಥೆಯೂ ಅಲ್ಲ!
----------------------ನಿನ್ನೆ ಅಂದರೆ ಶುಕ್ರವಾರ ನಮ್ಮ ಫ್ಲಾಟ್‌ನಲ್ಲೊಬ್ಬರು ನನ್ನ ಮನೆಗೆ ಬಂದು "ಇವತ್ತು ಸಂಜೆ ಎಂಟುಗಂಟೆಗೆ ನಮ್ಮ ಮನೆಗೆ ಬರಬೇಕು....ಅರಿಶಿನ ಕುಂಕುಮಕ್ಕೆ. ಗಣಪತಿ ಪೂಜೆ ಮಾಡುತ್ತಿದ್ದೇನೆ. ಜೊತೆಗೆ ಮಗಳನ್ನೂ ಕರೆತನ್ನಿ ಎಂದರು." ಅವರು ಉತ್ತರಭಾರತದವರು. ಹಾಗಾಗಿ ನಮ್ಮ ಸಂಭಾಷಣೆಯೆಲ್ಲಾ ಹಿಂದಿಯಲ್ಲಾಗುತ್ತಿತ್ತು. ವಯಸ್ಸಿನಲ್ಲಿ ನನಗಿಂತ ಬಲು ದೊಡ್ಡವರಾಗಿದ್ದ ಕಾರಣ "ಆಂಟಿ ಇಲ್ಲವೇ ದಿದೀ" ಎಂದೇ ಕರೆಯುತ್ತಿದ್ದೆ. ಆದರೆ ಅವರ ಯಜಮಾನರು ಬೆಂಗಳೂರಿನವರೇ. ಕನ್ನಡಿಗರು. ಅವರಿಗೆ ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಅದಿತಿಯ ಜೊತೆ ಆಡಲು ಬರುತ್ತಿದ್ದರಿಂದ ನಮ್ಮಿಬ್ಬರ ಪರಿಚಯ ಗಾಢವಾಗಿತ್ತು. ಸ್ವಭಾವತಃ ಭಾವುಕರು, ಸೌಮ್ಯ ಸ್ವಭಾವದವರು ಹಾಗೂ ಒಂದು ರೀತಿಯ ಮುಗ್ಧತೆ ಅವರಲ್ಲಿದ್ದುದರಿಂದ ನನಗೂ ಅವರ ಒಡನಾಟ ಬಹು ಬೇಗ ಇಷ್ಟವಾಯಿತು.

ಸರಿ.. ಕುಂಕುಮಕ್ಕೆ ಹೇಳಿದ್ದಾರೆ.. ಹೋಗದಿದ್ದರೆ ಸರಿಯೆನಿಸದು ಎಂದು ಸುಮಾರು ೮ ಗಂಟೆಯ ಹತ್ತಿರ ಮಗಳ ಜೊತೆ ಹೋದೆ. ಅದಿತಿಯನ್ನು ಬಿಡಲು ನನ್ನ ಯಜಮಾನರೂ ನನ್ನೊಂದಿಗೆ ಬಂದರು. ಒಳಹೋದ ತಕ್ಷಣ ನಾನು ಇನ್ನೇನು ಅವರ ಪೂಜೆಯ ಕೋಣೆಯೆಡೆ ಹೋಗಬೆಕೆನ್ನುವಷ್ಟರಲ್ಲಿ ನನ್ನ ತಡೆದು ಪಕ್ಕದ ಕೋಣೆಗೆ ಕರೆದೊಯ್ದರು. "ನಾವು ಇಲ್ಲೇ ದೊಡ್ಡ ದೇವರನ್ನಿಡುವುದು.. ಈ ಕೋಣೆಯನ್ನು ಅದಕ್ಕಾಗಿಯೇ ಮೀಸಲಿಟ್ಟಿದ್ದೇವೆ. ಪೂಜಾರೂಂ ಸಣ್ಣದಿರುವುದರಿಂದ.." ಎನ್ನುತ್ತಾ ನನ್ನ ಒಳ ಕರೆದರು.

ಒಳ ಹೋದೊಡನೆಯೇ ತುಸು ದಂಗಾದೆ. ಆಳೆತ್ತರದ "ಕಲ್ಕಿ ಬಾಬಾ"ನ ಫೋಟೋ!! ಅದರ ಸುತ್ತ ಲೈಟನಿಂಗ್. ಫೋಟೋ ಕೆಳಗೆ ಕಲ್ಕಿ ಭಗವಾನ್ ಹಾಗೂ ಅವರ ಪತ್ನಿ.. ಕ್ಷಮಿಸಿ ಅಮ್ಮನವರ(ಅವರ ಪ್ರಕಾರ)ಫೋಟೋ. ಸುತ್ತಲೂ ತುಪ್ಪದ ದೀಪಗಳು, ವಿವಿಧ ಅಲಂಕಾರಗಳು. ಇನ್ನೂ ಕೆಳಗೆ ಮೂಲೆಯಲ್ಲೆಲ್ಲೋ ಸಣ್ಣ ಗಣಪತಿಯ ಮೂರ್ತಿ. ಕಲ್ಕಿ ದಂಪತಿಗಳ(ನನ್ನ ಪ್ರಕಾರ)ಫೋಟೋ ಕೆಳಗೆ ಬೆಳ್ಳಿಯ ದೊಡ್ಡ ಪಾದುಕೆಗಳು. ಅವುಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಇದೆಲ್ಲಾ ನನಗೆ ಹೊಸತು. ಈವರೆಗೆ ನೋಡಿರದ್ದು. ಕಲ್ಕಿ ದಂಪತಿಗಳ ಪೋಟೋ ಹಾಗೂ ಅವರ ಮಹಿಮೆಯ ಕುರಿತಾದ ಲೇಖನವನ್ನು ಒಂದೆರಡು ಬಾರಿ ತರಂಗದಲ್ಲಿ ನೋಡಿದ್ದೆನಷ್ಟೇ. ನೀವೂ ಓದಿರಬಹುದು. ಈಗಲೂ ಬರುತ್ತಿರುತ್ತದೆ. ಒಂದು ಪುಟ ಅವರಿಬ್ಬರಿಗೇ ಮೀಸಲು. ತದನಂತರದ ಸಂಭಾಷಣೆಯನ್ನು(ನಮ್ಮಿಬ್ಬರೊಳಗೆ ನಡೆದದ್ದು) ನಿಮ್ಮ ಮುಂದಿಡುತ್ತಿದ್ದೇನೆ.

(ಅವರೊಂದಿಗಿನ ನನ್ನ ಹಿಂದಿ ಸಂಭಾಷಣೆಯನ್ನು ಕನ್ನಡಕ್ಕೆ ಭಾಷಾಂತರಿಸಿ ಹಾಕಿದ್ದೇನೆ.)ನಾನು : ಆಂಟಿ ಇದೇನಿದು? ಯಾರ ಪಾದುಕೆಗಳಿವು? ಯಾರು ಈ ಬಾಬಾ?

ಅವರು : ಇವರು ಕಲ್ಕಿ ಭಗವಾನ್. ಕೇಳಿಲ್ವಾ? ತುಂಬಾ ಪ್ರಸಿದ್ಧರು. ಮಹಾನ್ ಶಕ್ತಿವಂತರು. ಕಲ್ಕಿ ಭಗವಾನ್ ಹಾಗೂ ಅವರ ಪತ್ನಿಯ ಭಾವ ಚಿತ್ರವದು. ನಾವೆಲ್ಲ ಅಮ್ಮಾಜಿ, ಪದ್ಮಾವತಮ್ಮ ಎಂದು ಕರೆಯುವುದು. ಇದು ಭಗವಾನ್‌ರ ಪಾದುಕೆ.

ನಾನು : ಓಹ್ ಹೌದಾ.. ನಾನೂ ಕೇಳಿದ್ದೇನಷ್ಟೇ. ಸರಿಯಾಗಿ ಗೊತ್ತಿಲ್ಲ. ನೀವು ಈ ಪಾದುಕೆಗಳನ್ನು ಪೂಜಿಸುವುದಾ? ಏನು ಇದರ ವಿಶೇಷ?

ಅವರು : ಈ ಪಾದುಕೆಗಳಿಗೆ ಅಪಾರ ಶಕ್ತಿಯಿದೆ. ಇದನ್ನು ಸ್ವತಃ ಕಲ್ಕಿ ಭಗವಾನ್ ಸ್ಪರ್ಶಿಸಿ ಕೊಟ್ಟದ್ದು.(ಆ ದಂಪತಿಗಳು) ಇದರ ಮೇಲೆ ಕೈಯಿಟ್ಟು ಭಕ್ತಿಯಿಂದ ನಿನಗಿಷ್ಟವಾದ ಶ್ಲೋಕವನ್ನೋ ದೇವರನ್ನೋ ನೆನೆಯುತ್ತಾ ಬೇಕಾದ್ದನ್ನು ಬೇಡಿದರೆ ಖಂಡಿತ ನೆರವೇರುವುದು. ಬಟ್ಟಲು ತನ್ನಿಂದತಾನೇ ಮುಂದೆ ಬರುವುದು. ಇಲ್ಲಾ ನಿನ್ನ ಕೈ, ಮೈಯೊಳಗೆಲ್ಲಾ "ವೈಬ್ರೇಷನ್" ಅಗುವುದು.

ನಾನು : (ತುಂಬಾ ಚಕಿತಳಾದೆ) ಹೌದಾ ಆಂಟಿ? ಯಾರೂ ಮುಟ್ಟ ಬಹುದಾ ಇವುಗಳನ್ನಾ? ನಾನೂ ಮುಟ್ಟಲಾ?

ಅವರು : ಖಂಡಿತ ಯಾರೂ ಮುಟ್ಟ ಬಹುದು. ಮೊದಲು ನಾನು ಹೇಗೆ ಮಾಡಬೇಕೆಂಡು ತೋರಿಸುವೆ. ನೀನೇ ನೋಡು. ಬಟ್ಟಲು ಮುಂದೆ ಬರುವುದನ್ನು.. ಎಂದು ಕೆಳಗೆ ಕುಳಿತು ಬೆಳ್ಳಿ ಪಾದುಕೆಗಳ ಮೇಲೆ ಕೈಗಳನ್ನಿಟ್ಟು ಕಣ್ಮುಚ್ಚಿದರು.
(ಇಷ್ಟೇಲ್ಲಾ ಆಗುವಾಗ ತಿರುಗಿ ಮನೆಗೆ ಹೊರಟಿದ್ದ ನನ್ನ ಯಜಮಾನರು ಕುತೂಹಲದಿಂದ ಅಲ್ಲೇ ನಿಂತರು. ಅವರ ಮುಖದ ತುಂಬೆಲ್ಲಾ ನಗು.. ನನಗೋ ಫಚೀತಿ. ಕಣ್ಸನ್ನೆ ಮಾಡಿದರೂ ತಿಳಿಯದಲ್ಲ ನನ್ನವರಿಗೆ!! ಅದಿತಿಯೋ ಆ ಪದುಕೆಗಳನ್ನು ಯಾವಾಗ ಎತ್ತುಕೊಂಡು ಓಡಲಿ ಎಂದೇ ಯೋಚಿಸುತ್ತಿದ್ದಳು ಪಕ್ಕದಲ್ಲೇ ಕುಳಿತು. ಅವಳಿಗೆ ಅದೊಂದು ಹೊಸ ಆಟಿಕೆಯಂತೆ ಕಂಡಿತ್ತೇನೋ ಬಹುಶಃ :) )
ಒಂದು ನಿಮಿಷವಾಗಿತ್ತಷ್ಟೇ. ಮೆಲ್ಲನೆ ಬಟ್ಟಲು ಜರುಗಿದಂತಾಯಿತು. ತುಸು ಭಾರವಾಗಿದ್ದ ಆಕೆಯ ಕೈ ಶಕ್ತಿಯಿಂದಾಗಿರಲೂ ಬಹುದು. ಇಲ್ಲಾ ಅಷ್ಟು ಹೊತ್ತಿನಿಂದ ಪಾದುಕೆಗಳನ್ನು ಒತ್ತಿ ಹಿಡಿದಿದ್ದರಿಂದಲೋ.. ಇಲ್ಲಾ ನಿಜವಾಗಿಯೂ ಇದು ಪವಾಡವೋ???!!.

ಅವರು: ನೋಡಿದಿರಾ? ಬಟ್ಟಲು ಮುಂದೆ ಬಂದದ್ದನ್ನು? ಈಗ ನೀವೂ ನನ್ನಂತೆಯೇ ಮಾಡಿ. ಜಾಸ್ತಿ ಒತ್ತಡವನ್ನು ಹಾಕಬೇಡಿ. ಕಣ್ಮುಚ್ಚಿ ನಿಮಗೆ ತೋಚಿದಂತೆ ಧ್ಯಾನಿಸಿ. ಒಮ್ಮೆಲೇ ಈ ರೀತಿ ಆಗದಿರಬಹುದು. ಇನ್ನೊಮ್ಮೆ ಮಾಡಿದಾಗ ಅನುಭವವಾಗುವುದು.ಎನ್ನಲು ನಾನೂ ಮುಂದಾದೆ.... ಮಾಡಿ ನೊಡಲೇನಡ್ಡಿ ಎಂದು. ಅಂತೆಯೇ ಕೆಳಗಿಳಿದು ಅದರ ಬಳಿ ಕುಳಿತು ಕೈ ಪಾದುಕೆಗಳ ಮೇಲಿಟ್ಟೆ. ಯಾವುದನ್ನೇ ಆಗಲಿ ಸರಿಯಾಗಿ ಪರೀಕ್ಷಿಸಬೇಕು ತಾನೆ? ಅಂತೆಯೇ ನನ್ನಿಷ್ಟ ದೇವರನ್ನು ನೆನೆದು ಕೈಯಿಟ್ಟೆ. ಊಹೂಂ ಎನೂ ಆಗಲಿಲ್ಲ.

ನಾನು : ಆಂಟಿ ಏನೂ ಅನಿಸಲೇ ಇಲ್ಲ.

ಅವರು : ಹೌದಾ? ನಾ ಹೇಳಿದೆನಲ್ಲಾ ಒಮ್ಮೆಲೇ ಆಗೊಲ್ಲ. ಇನ್ನೊಮ್ಮೆ ಪ್ರಯತ್ನಿಸು ಎಂದು ಒತ್ತಾಯಿಸಲು ಮತ್ತೆ ಕೈಯಿಟ್ಟು ಕಣ್ಮುಚ್ಚಿದೆ. ಒಂದು ನಿಮಿಷ ಬಿಟ್ಟು ಕಣ್ತೆರೆದೆ.
ಅವರು : ಈಗ?
ನಾನು : ಹೂಂ ಆಂಟಿ ಏನೋ ಮೈಯೊಳಗೆಲ್ಲಾ ಹರಿದ ಅನುಭವ.. ಬಹುಶಃ ನೀವೆಂದ "ವೈಬ್ರೇಷನ್" ಇರಬಹುದು! (ಮತ್ತೆ ಹಾಗೆ ಮಾಡಲು ಹೇಳದಿರಲೆಂದು ಮತ್ತೆ ಆಕೆಗೆ ಬೇಸರವಾಗದಿರಲೆಂದು ಹಾಗೆ ಹೇಳಿದ್ದು).
(ಆದರೆ ನನ್ನವರು ಮಾತ್ರ ನನ್ನ ಮಾತೊಳಗಿದ್ದ "ಪ್ರಾಮಾಣಿಕತೆಗೆ" ಉಕ್ಕಿ ಬರುತ್ತಿರುವ ನಗು ತಡೆಯಲು ಪಾದುಕೆಯ ಬಳಿ ಓಡಿ ಬರುತ್ತಿದ್ದ ಮಗಳನ್ನೆತ್ತಿಕೊಂಡು ಹೊರ ನಡೆದರು)

ಅವರು : ನಾ ಹೇಳಿಲ್ಲವೇ? ಇದು ತುಂಬಾ "ಪವರ್‌ಫುಲ್". ಇದನ್ನು ಸ್ವತಃ ಬಾಬಾನ ಸ್ಪರ್ಶಮಾಡಿಸಿ ತಂದಿದ್ದೇವೆ. ನಮ್ಮೆಲ್ಲಾ ಮನೋಕಾಮನೆಗಳು, ಮನೆ, ಬಿಸಿನೆಸ್ ಡೆವಲೆಪ್‌ಮೆಂಟ್ ಎಲ್ಲಾ ಇವರಿಂದಲೇ ಆಗಿದ್ದು. ಈ ಪಾದುಕೆಯ ಪೂಜೆಯಿಂದಲೇ ಸರ್ವವೂ ಸಿದ್ಧಿಯಾಗಿದ್ದು. ಬನ್ನಿ ನನ್ನ ಮನೆ ತೋರಿಸುವೆ ಎಂದು ಹೊರ ಕರೆದೊಯ್ದರು.

ಹೊರಬಂದು ಕೂರಲು, ನಾನು ಒಂದೊಂದೇ ಪ್ರಶ್ನೆಗಳನ್ನು ಅವರಿಗೆ ಕೇಳತೊಡಗಿದೆ.
ನಾನು : ಆಂಟಿ ಆ ಪಾದುಕೆಗಳೆಲ್ಲಿಂದ ತಂದಿರಿ? ಎಷ್ಟಾಯಿತು? ಬಲು ಚೆನ್ನಾಗಿದೆ. ತುಂಬಾ ದೊಡ್ಡದಿದೆ.

ಅವರು : ಅದನ್ನು ಚೆನ್ನೈನಲ್ಲಿರುವ ಭಗವಾನ್ ಆಶ್ರಮದಲ್ಲೇ ಮಾಡಿಸಿದ್ದು. ಅವರೇ ಮಾಡುತ್ತಾರೆ. ಬೆಳ್ಳಿಯದು. ನಿನಗೆ ಗೊತ್ತಾ ಅದಕ್ಕೆ ೨೦,೦೦೦ ಆಗಿದೆ. ನಂತರ ಅದನ್ನು ಭಗವಾನ್ ಹತ್ತಿರ ಕೊಂಡೊಯ್ದು ಅವರ ಹಸ್ತ ಮುಟ್ಟಿಸಿ ತಂದಿದ್ದೇವೆ. (ಏನೋ ಒಂದು ಭಕ್ತಿಯ ಪರವಶತೆ, ತನ್ಮಯತೆ, ಹೆಮ್ಮೆ ಅವರ ಮುಖದಲ್ಲೆದ್ದು ಕಾಣುತ್ತಿತ್ತು)

ನಾನು : ಓಹ್.. ಹೌದಾ. ಭಗವಾನ್ ಅವರ ಹಸ್ತ ಸ್ಪರ್ಶ ಸುಲಭದಲ್ಲಿ ದೊರಕುವುದಾ? ಪಾದುಕೆ ಕೊಂಡೊಯ್ದ ಕೂಡಲೇ?

ಅವರು : ಇಲ್ಲಮ್ಮಾ.. ಇಲ್ಲಾ ಅದಕ್ಕೂ ಬಲು ಕಷ್ಟ ಪಡಬೇಕು. ಅವರ ಅನುಚರರು.. ಅವರನ್ನು "ದಾಸಾಜಿ" ಎನ್ನುತ್ತೇವೆ ನಾವೆಲ್ಲಾ. ದಾಸಾಜಿಗಳನ್ನು ಬೇಡಿಕೊಂಡು ಸಮಯವನ್ನು ಪಡೆದು ಪಾದುಕೆಗಳಿಗೆ ಭಗವಾನ್ ಅವರ ಸ್ಪರ್ಶ ಪಡೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಸುಮಾರು ಒಂದು ಲಕ್ಷದ ಹತ್ತಿರ ಕೊಡಬೇಕಾಗುತ್ತದೆ. ಸುಲಭದ ಮಾತಲ್ಲ ಅದು. (ಮತ್ತದೇ ಭಾವ ಅವರ ಮುಖದಲ್ಲಿ...)

ನಾನು : ಅಬ್ಬಾ!! ಆಂಟಿ, ಅಂದರೆ ನೀವು ಒಂದು ಲಕ್ಷದ ಮೇಲೆ ಕೊಟ್ಟು ಈ ಪಾದುಕೆ ತಂದು ಪೂಜಿಸುತ್ತಿದ್ದಾರಾ? ಮತ್ತೆ ನೀವು ಚೆನ್ನೈನಲ್ಲಿರುವ ಅವರ ಆಶ್ರಮಕ್ಕೆ ಎಷ್ಟು ಸಲ ಭೇಟಿ ಕೊಡುತ್ತೀರಾ?

ಅವರು: ಹೂಂ.. ಸುಮಾರು ಅಷ್ಟೇ ಆಯಿತು. ಕಲ್ಕಿ ಭಗವಾನ್ ಅವರ ಪೂಜೆಯಿಂದಲೇ ನಾವು ಸ್ವಂತ ಮನೆ, ಬಿಸಿನೆಸ್, ಎಲ್ಲಾ ಪಡೆದದ್ದು. "ಬಹುತ್ ಮಾಂತೆಹೇ ಹಮ್ ಉನ್ಕೋ" ಎಂದು ಬಹಳ ಸಲ ಹೇಳಿದರು. (ಭಯ ಭಕ್ತಿಯಿಂದ). ನಾವು ವರ್ಷದಲ್ಲಿ ಒಂದು ಸಲ ಹೋಗುವೆವು. ಫ್ಯಾಮಿಲಿ ಪ್ಯಾಕೇಜ್‌ನಲ್ಲಿ.

ನಾನು : ಫ್ಯಾಮಿಲಿ ಪ್ಯಾಕೇಜ್?!! ಅಂದರೆ?

ಅವರು : ಭಗವಾನ್ ಹಾಗೂ ಅವರ ಪತ್ನಿ ಪದ್ಮಾವತಮ್ಮ.. ಅದೇ ಅಮ್ಮಾಜೀ ಬೇರೆ ಬೇರೆಯಾಗಿ ತಮ್ಮ ದರ್ಶನ ಕೊಡುವರು. ಅವರ ದರ್ಶನ ಸುಲಭವಲ್ಲ. ತುಂಬಾ ಕಾಯಬೇಕು. ದಾಸಾಜಿಯವರನ್ನು ವಿಚಾರಿಸಬೇಕು ಯಾವಾಗ, ಯಾವತ್ತು ಅವರ ದರ್ಶನವಾಗುವುದೆಂದು. ಆಮೇಲೆ ಒಬ್ಬರಿಗೆ ೨೦,೦೦೦ ಫೀಸ್ ಇದೆ ದರ್ಶನಕ್ಕೆ. ನಾವು ಅಂದರೆ ನಾನು, ಯಜಮಾನರು, ನನ್ನಿಬ್ಬರು ಮಕ್ಕಳಿಗೆ ಒಮ್ಮೆಗೆ ಒಂದು ಲಕ್ಷ ಫೀಸ್! ಅಲ್ಲದೇ ವರುಷದಲ್ಲೊಮ್ಮೆ ಎಲ್ಲರಿಗೂ ಫ್ರೀ ದರ್ಶನವಿರುತ್ತದೆ. ಆಗ ತಿರುಪತಿಯಲ್ಲಿ ಆಗುವಂತಹ ರಶ್ ಇರುತ್ತದೆ ಆಶ್ರಮದಲ್ಲಿ. ಹಾಗೆ ಫ್ರೀ ದರ್ಶನವಿರುವ ಮೊದಲು ಹೇಳುತ್ತಾರೆ. ದಾಸಾಜಿಗಳನ್ನು ವಿಚಾರಿಸುತ್ತಿರಬೇಕು. ನಾವು ವರುಷಕ್ಕೊಮ್ಮೆ ಒಂದು ಲಕ್ಷ ಕೊಟ್ಟು ಹೋಗುತ್ತೇವೆ. ನನ್ನೊಂದಿಗೆ ನನ್ನ ಯಜಮಾನರ ಅಕ್ಕ ಹಾಗೂ ಅವರ ಮನೆಯವರೆಲ್ಲಾ ಬರುತ್ತಾರೆ. ಅವರೂ ಕಲ್ಕಿ ಭಗಾವ್‌ರ ಭಕ್ತರು. ಅವರೇ ನಮಗೂ ಈ ದಾರಿ ತೋರಿಸಿದ್ದು.

ಅವರಿಷ್ಟೆಲ್ಲಾ ಹೇಳುವಾಗ ನನಗಂತೂ ತಲೆ ಬಿಸಿಯಾಗಿ ಹೋಗಿತ್ತು. ಆದರೂ ಮುಖದಲ್ಲೆಲ್ಲೂ ಭಾವನೆ ಪ್ರಕಟಿಸಿದಂತೆದ್ದೆ.
ನಾನು : ಓಹ್.. ಅಬ್ಬಾ!! ಇಷ್ಟೆಲ್ಲಾ ಖರ್ಚು ಇದೆಯಾ? ಇಷ್ಟೊಂದು ದುಡ್ಡನ್ನು ಏನು ಮಾಡ್ತಾರೆ?

ಅವರು : ಅವರು ಇದನ್ನೆಲ್ಲಾ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ ಖರ್ಚು ಮಾಡ್ತಾರಂತೆ. ಅದೂ ಅಲ್ಲದೇ ಅಲ್ಲೊಂದು ಈಗ ಮಾರ್ಬಲ್ ಹಾಗೂ ಗೋಲ್ಡನ್ ಆಶ್ರಮವಾಗಿದೆ. ನಾನು ಹೋಗಬೇಕು ಮತ್ತೆ. ಪೂರ್ತಿಯಾದಮೇಲೆ ನೊಡಿಲ್ಲ. ಅವರು ೩-೫ ದಿನದ ಕ್ಯಾಂಪ್‌ಗಳನ್ನೂ ಮಾಡುತ್ತಾರೆ. ಅದಕ್ಕೆ ಕಡಿಮೆ ಫೀಸ್. (ಎಷ್ಟೆಂದು ಕೇಳುವ ಧೈರ್ಯ ಮಾಡಲಿಲ್ಲ ನಾನು.)

ನಾನು : ಅವರಿಬ್ಬರೇ ಇರೋದಾ? ಅವರಿಗೆ ಮಕ್ಕಳಿಲ್ವಾ?

ಅವರು : ಸರಿಯಾಗಿ ಎಷ್ಟು ಮಕ್ಕಳೆಂದು ಗೊತ್ತಿಲ್ಲ. ಆದರೆ ಅವರಿಗೆ ಒಬ್ಬ ಮಗನಿರುವುದಂತೂ ನಿಜ. ಆದರೆ ಅವನು ಸಂಸಾರಸ್ಥ(!) ಆಶ್ರಮದಲ್ಲಿರುವುದಿಲ್ಲ. ಅವನೂ ಇತರ ಭಕ್ತರಂತೇ ಬಂದು ದರ್ಶನ ಪಡೆಯುತ್ತಾನೆ. ಆದಿತ್ಯವಾರ ಸಂಜೆ ೮ ಗಂಟೆಗೆ "ಆಸ್ಥಾ" ಟಿ.ವಿ. ಚಾನಲ್‌ನಲ್ಲಿ ಕಲ್ಕಿ ಭಗವಾನ್ ದಂಪತಿಗಳ, ಮಹಿಮೆ, ಪವಾಡ, ಭಕ್ತಿಯ ಕುರಿತು ದಾಸಾಜಿಗಳು ಉಪದೇಶಕೊಡುತ್ತಾರೆ. ತಪ್ಪದೇ ನೋಡಿ. ನೋಡುತ್ತಿದ್ದಂತೆ ನಾವು ನಮ್ಮನ್ನೇ ಮರೆಯುತ್ತೇವೆ. ಈ ದಾಸಾಜಿಗಳಿಗೆ ಸ್ವತಃ ಭಗವಾನ್ ದಂಪತಿಗಳೇ ಉಪದೇಶ ಕೊಡುತ್ತಾರೆ.

ಅಷ್ಟರಲ್ಲಿ ನನ್ನ ಯಜಮಾನರು ನನ್ನ ಕರೆಯಲು ಬಂದರು. ಮಗಳು ಹಠ ಹಿಡಿದಿದ್ದಳು.
ಅವರು : (ನನ್ನ ಯಜಮಾನರಲ್ಲಿ) ನೀವೂ ಬೇಕಿದ್ದರೆ ಪಾದುಕೆಗಳನ್ನು ಮುಟ್ಟಿ.

ನನ್ನವರು : ಬೇಡ. ಖಂಡಿತ ಇನ್ನೊಮ್ಮೆ ಬರ್ತೀನಿ. ಈಗ ನಾನು ಆಫೀಸ್ ಡ್ರೆಸ್ಸಿನಲ್ಲಿದ್ದೇನೆ ಎನ್ನಲು..

ಅವರು : ಓ..ಖಂಡಿತ ಈ ಪಾದುಕೆಗಳು ಇಲ್ಲೇ ಇರುತ್ತವೆ. ನಿಮಗೆ ಬೇಕಾದಾಗ ಮುಟ್ಟಿ ಕೇಳಿಕೊಳ್ಳಬಹುದು. ಬನ್ನಿ ಮತ್ತೆ ಎಂದು ಪ್ರೀತಿಯಿಂದ ಬೀಳ್ಕೊಡಲು ನಾವೂ ಖಂಡಿತ ಇನ್ನೊಮ್ಮೆ ದರ್ಶನಕ್ಕೆ ಬರುವೆವೆಂದು ಹೇಳುತ್ತಾ ಮನೆಗೆ ತೆರಳಿದೆವು.

ಈ ಘಟನೆಯ ನಂತರ ನನ್ನಲ್ಲಿ ಅದೆಷ್ಟೋ ಸಂದೇಹ, ಗೊಂದಲಗಳೆದ್ದಿವೆ. ನನ್ನ ನೆರೆಮನೆಯಾಕೆಯದು ಮುಗ್ಧತೆಯೋ ಇಲ್ಲಾ ಅಮಾಯಕತೆಯ ಪರಾಕಷ್ಠತೆಯೋ ತಿಳಿಯೇ. ಆದರೆ ಆಕೆಯಂತವರು, ಆಕೆಯ ಮನೆಯಂತವರು ಅಸಂಖ್ಯಾತರಿದ್ದಾರೆ ನಮ್ಮಲ್ಲಿ. ಇದರ ಸತ್ಯಾಸತ್ಯೆಯ ಗೋಜಿಗೆ ನಾ ಹೋಗುತ್ತಿಲ್ಲ. ಅವರನ್ನು(ನೆರೆಮನೆಯಾಕೆಯನ್ನು) ಟೀಕಿಸುವುದಾಗಲೀ, ಅವರ ಭಾವನೆಗಳನ್ನು ಅವಹೇಳನಗೊಳಿಸುವುದಕ್ಕಾಗಲೀ ಖಂಡಿತ ನಾನೀ ಬರಹವನ್ನು ಬರೆದಿಲ್ಲ. "ಬ್ರೈನ್‌ವಾಶ್ ಅಂದರೇನೂ ಅದೆಷ್ಟು ವ್ಯವಸ್ಥಿತವಾಗಿರುತ್ತದೆ"ಎಂದು ಅದೆಷ್ಟೋ ಘಟನೆಗಳನ್ನು ಸ್ವತಃ ನೋಡಿ ತಿಳಿದು ಬಲ್ಲೆ.

ನಿಮ್ಮಲ್ಲಿ ಯಾರಿಗಾದರೂ ಈ "ಕಲ್ಕಿ ಭಗವಾನ್‌"ಕುರಿತು ಮತ್ತಷ್ಟು ಮಾಹಿತಿಗಳಿದ್ದರೆ ದಯವಿಟ್ಟು ಹಂಚಿಕೊಳ್ಳಿ. ಆಗಲಾದರೂ ನನ್ನ ಸಂದೇಹಗಳು ಹಾಗೂ ಗೊಂದಲಗಳು ತುಸುವಾದರೂ ಪರಿಹಾರಗೊಳ್ಳಬಹುದೇನೋ!!!?

ಕಲ್ಕಿಭಗವಾನ್ ದಂಪತಿಗಳ ಛಾಯಾಚಿತ್ರಗಳಿಗೆ(ಈವರೆಗೂ ನೋಡದವರಿಗಾಗಿ) ಹಾಗೂ ಅವರ ಇತಿಹಾಸಗಳ ಅಧ್ಯಯನಕ್ಕೆ ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ಕಿಸಬಹುದು :) (ಈ ಘಟನೆ ನನ್ನೊಂದಿಗೆ ನಡೆದ ಮೇಲೆ ನಾನು ಹುಡುಕಿ ತೆಗೆದ ಲಿಂಕ್‌ಗಳಿವು)
http://www.golden-heart.net/amma-and-bhagavan.html
&
http://images.google.co.in/images?gbv=2&hl=en&q=Sri+Amma+%26+Bhagavan

ಕೊನೆಯ ಹನಿ : ಇದನ್ನೋದಿ ನನ್ನನ್ನು "ನಾಸ್ತಿಕಳೆಂದು" ತಿಳಿಯದಿರಿ. "ಎಲೆ, ಹಣ್ಣು, ಹೂವು ಇಲ್ಲಾ ಬರಿಯ ನೀರನ್ನೇ ಆಗಲಿ ಯಾವನು ಭಕ್ತಿಯಿಂದ ಅರ್ಪಿಸಿ ಮನದೊಳಗೇ ನನ್ನ ನೆನೆಯುತ್ತಾನೋ ಅಂತಹ ಭಕ್ತನು ನನಗೆ ಪ್ರೀತಿ ಪಾತ್ರನು ಎಂದು" ಹೇಳಿದ ಭಗವಂತನ ಆರಾಧಿಸುವ ಸಂಪೂರ್ಣ "ಆಸ್ತಿಕಳು"ನಾನು. :)

ಶುಕ್ರವಾರ, ಡಿಸೆಂಬರ್ 12, 2008

ಹೋರಾಟಕ್ಕೆ ಸ್ಫೂರ್ತಿ ತುಂಬಿದ "ಉದಯವಾಣಿ"

ಈ ಮೊದಲೇ ನನ್ನ ಬದುಕಿನ ಪಯಣ ಹೋರಾಟದ ಜೊತೆಗೆ.. ಲೇಖನದಲ್ಲಿ ನನ್ನೊಂದಿಗಾದ ಅನುಭವವನ್ನು ಎಲ್ಲಾ ಪ್ರಮುಖ ಪತ್ರಿಕೆಗಳಿಗೆ ಕಳುಹಿಸಿರುವೆ ಎಂದೂ, ಅವುಗಳಲ್ಲಿ ಒಂದಾದರೂ ಪತ್ರಿಕೆಯಲ್ಲಿ ವರದಿ ಬಂದರೂ ನಾನು ಆ ಪುಟವನ್ನು ಆ ವೈದ್ಯ ಮಹಾಶಯನಿಗೆ ಪೋಸ್ಟ್ ಮಾಡುವೆನೆಂದೂ ಹೇಳಿದ್ದೆ. ಆದರೆ ಮೈಲ್ ಕಳುಹಿಸಿ ಹದಿನೈದು ದಿನ ಕಳೆದರೂ ಯಾವ ಪೇಪರ್‌ನವರೂ ನನ್ನ ಈ ಸ್ವಾರಸ್ಯ ರಹಿತ ಸುದ್ದಿಯನ್ನು ಪ್ರಕಟಸಿದಿದ್ದುದನ್ನು ನೋಡಿ ಬಹುಶಃ Trash Folderಗೆ ಹಾಕಿದರೇನೋ ಎಂದು ಅನಿಸಿತು. ಇದನ್ನು ನಾನು ಮೊದಲೇ ನಿರೀಕ್ಷಿಸಿಯೂ ಇದ್ದೆ. ಕಾರಣ ಯಾವುದೇ ರೀತಿಯ ಅಪೇಕ್ಷೆಯಿಲ್ಲದೇ ಮೈಲ್ ಮಾಡಿದ್ದೆ.

ಆದರೆ ಉದಯವಾಣಿ ಪತ್ರಿಕೆಯಲ್ಲಿ ಮಾತ್ರ ಓರ್ವ ಸಹೃದಯ ಪತ್ರಕರ್ತನ ಸ್ಪಂದನದಿಂದಾಗಿ ನನ್ನ ಹೋರಾಟದ ದನಿಗೆ ಜನತಾವಾಣಿಯಲ್ಲಿ ಸ್ಥಾನ ದೊರಕಿದೆ. ಇವತ್ತಿನ ಉದಯವಾಣಿ ಪತ್ರಿಕೆಯಲ್ಲಿ ಸುದ್ದಿಬಂದುದು ತಿಳಿದು ಬಲು ಸಂತೋಷವಾಯಿತು. ಏನೋ ಧನ್ಯತಾಭಾವ.
ಇದು ನನ್ನೊಂದಿಗಾದ ಅನ್ಯಾಯಕ್ಕೆ ನಾನು ತೀರಿಸಿಕೊಂಡ ಸೇಡೆಂದು ಇಲ್ಲಾ ಸಿಟ್ಟೆಂದು ದಯವಿಟ್ಟು ಖಂಡಿತ ಭಾವಿಸದಿರಿ. ನನಗೆ ಆ ವೈದ್ಯರ ಮೇಲೆ ಯಾವ ಸಿಟ್ಟಿಲ್ಲ. ಆತನ್ನು ಶಿಕ್ಷಿಸುವುದೂ ನನ್ನ ಉದ್ದೇಶವಲ್ಲ. ಅದೆಷ್ಟೋ ಅಸಹಾಯಕರ, ಪ್ರತಿಭಟಿಸಲು ತಿಳಿಯದ, ತಿಳಿದರೂ ಧೈರ್ಯ ಸಾಲದ ಅಂಗವಿಕಲರ ಪ್ರತೀಕವಾಗಿ ನಾನು ಈ ಹೆಜ್ಜೆಯನ್ನಿಟ್ಟಿದ್ದು. ಈ ಘಟನೆ ನನ್ನೊಂದಿಗೆ ನಡೆಯದೇ ಬೇರಾವ ಅಂಗವಿಕಲನೊಂದಿಗೆ ನಡೆದಿದ್ದರೂ(ನನ್ನ ಕಣ್ಮುಂದೆಯೇ ಇಲ್ಲಾ ನನ್ನರಿವಿಗೆ ಬರುವಂತೆ), ನಾನೂ ಇದೇ ರೀತಿ ಮಾಡುತ್ತಿದ್ದೆ. ಇದು ಸತ್ಯ. ಇವತ್ತೇ ನಾನು ಉದಯವಾಣಿ ಪತ್ರಿಕೆಯ "ಜನತಾವಾಣಿ" ಪುಟವನ್ನು ಆ ವೈದ್ಯನಿಗೆ ಪೋಸ್ಟ್‌ಮಾಡುತ್ತಿರುವೆ. ಆತನಿಗೆ ಆತ್ಮಸಾಕ್ಷಿಯಿದ್ದರೆ, ತಾನೇ ಆ ರೀತಿ ವರ್ತಿಸಿದವನು ಎಂದು ತಿಳಿದು(ಆತನ ಹೆಸರನ್ನು ಹಾಕದಿದ್ದರೂ) ಮುಂದೆ ಈ ರೀತಿಯ ತಪ್ಪನ್ನು ಮಾಡದಿರಬಹುದು. ಇದರಿಂದಾಗಿ ಅದೆಷ್ಟೋ ರೋಗಿಗಳಿಗೆ/ಅಶಕ್ತರಿಗೆ ಸಹಾಯವಾಗಬಹುದು. ಅದೂ ಅಲ್ಲದೇ ಉದಯೋನ್ಮುಖ ಪತ್ರಕರ್ತರೂ ಕೂಡಾ ಈ ನಿಟ್ಟಿನಲ್ಲಿ ಚಿಂತಿಸಿ ಇಂತಹ ಘಟನೆಗಳಾದಾಗ ಬೇಕಿದ್ದರೆ ಸತ್ಯಾಸತ್ಯತೆಗಳನ್ನು ತಿಳಿದು ತಾವೂ ಜೊತೆಗೂಡಬಹುದಲ್ಲವೇ? ಹೆಚ್ಚೇನೂ ಬೇಡ ತಮ್ಮ ಪತ್ರಿಕೆಗಳಲ್ಲಿ ಇಂತಹ ಘಟನೆಗಳ ವರದಿಗಳನ್ನು ಹಾಕುವಂತೆ ಮಾಡಬಹುದಲ್ಲವೇ? ಇದರಿಂದಲಾದರೂ ಕ್ರಮೇಣ ಜನಜಾಗೃತಿಯಾಗಬಹುದು!(ಇಲ್ಲಿ ನನ್ನ ಘಟನೆಯನ್ನು ಮಾತ್ರ ದೃಷ್ಟಿಕೋನದಲ್ಲಿಟ್ಟುಕೊಂಡು ಖಂಡಿತ ಹೇಳುತ್ತಿಲ್ಲ) ಯಾವುದೇ ಒಂದು ಗುರಿ ಸಾಧನೆಗೆ ಧನಾತ್ಮಕ ಚಿಂತನೆ, ಯೋಜನೆ ಹಾಗೂ ಉದ್ದೇಶ ಬಹು ಮುಖ್ಯ ಅಲ್ಲವೇ?

ನನ್ನಂತವರಿಗೆ ಹಾಗೂ ಮುಂದೆ ಯಾರಿಗಾದರೂ ಒಂದೊಮ್ಮೆ ಈ ಸ್ಥಿತಿ ಬಂದರೆ (ಯಾರಿಗೂ ಬರದಿರಲಿ ಎಂದೇ ಪ್ರಾರ್ಥಿಸುವೆ) ಅವರ ಶ್ರೇಯಸ್ಸಿಗಾಗಿ ನಾನು ಮೊದಲ ಬಾರಿ ಹೋರಾಟದ ದಾರಿ ಹಿಡಿದಿರುವೆ. ಇದು ಇಲ್ಲಿಗೇ ನಿಲ್ಲದು. ಇದು ಪ್ರಾರಂಭವಷ್ಟೇ.. ನಡೆಯುವ ದಾರಿ ತುಂಬಾ ಮುಂದಿದೆ. ಸಾಗುವ ಪಥ ಕಠಿಣವಾಗಿದೆ ನಿಜ. ಆದರೆ ಗುರಿ ಸ್ಪಷ್ಟವಾಗಿದೆ. ನನ್ನ ಜೊತೆ ಸ್ಪಂದಿಸಿದ, ನನ್ನ ದನಿಗೆ ಮಾರ್ದನಿಯಾದ, ಪ್ರೋತ್ಸಾಹಿಸಿ ನಾವಿದ್ದೇವೆ ಎಂದು ಹುರಿದಿಂಬಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು. ನಿಮ್ಮ ಸಹಕಾರ ಸಲಹೆಗಳು ಸದಾ ನನ್ನೊಂದಿಗಿರಲಿ ಎಂದು ಹಾರೈಸುವೆ.

ಆತ್ಮೀಯರೇ ನಿಮ್ಮಲ್ಲಿ ನನ್ನದೊಂದು ಮನವಿ. ನಿಮ್ಮ ನಡುವೆ ಇರುವ ಅಂಗವಿಕಲರಿಗೆ ಈರೀತಿಯ ಇಲ್ಲಾ ಯಾವುದೇ ರೀತಿಯ ಅನ್ಯಾಯ/ಅಪಮಾನ/ಹಕ್ಕುಚ್ಯುತಿಗಳಾಗುತ್ತಿದ್ದರೆ ದಯವಿಟ್ಟು ಪ್ರತಿಭಟಿಸಿ. ಇಲ್ಲಾ ನನಗೆ ಮಾಹಿತಿಗಳನ್ನು ಕೊಡಿ ನಾನು ಈ ನಿಟ್ಟಿನಲ್ಲಿ ನನ್ನಿಂದಾಗುವ ಸಹಾಯಗಳನ್ನು ಮಾಡುವೆ.

ನನ್ನ ಹೋರಾಟಕ್ಕೆ ಸ್ಪಂದಿಸಿ, ಜನತಾವಾಣಿಯಲ್ಲಿ ಪ್ರಕಟಿಸಿ ಪ್ರೇರಣೆಯನ್ನಿತ್ತ ಉದಯವಾಣಿಗೆ ಹಾಗೂ ಸಹೃದಯ ಪತ್ರಕರ್ತನಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು.

-ತೇಜಸ್ವಿನಿ.

ಶುಕ್ರವಾರ, ಡಿಸೆಂಬರ್ 5, 2008

ಬದುಕಿನ ಪಯಣ ಹೋರಾಟದ ಜೊತೆಗೆ..

ನನ್ನ ಈ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ದಟ್ಸ್‌ಕನ್ನಡಕ್ಕೂ ಹಾಗೂ ಪ್ರತಿಕ್ರಿಯೆಗಳ ಮೂಲಕ ಪ್ರೇರೇಪಿಸಿದ ಎಲ್ಲಾ ದಟ್ಸ್‌ಕನ್ನಡ ಓದುಗರಿಗೂ ತುಂಬಾ ಧನ್ಯವಾದಗಳು.
-----------------------
ಭಾರತದಲ್ಲಿ ಅದೆಷ್ಟೋ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗಳಾಗಿವೆ, ಆಗುತ್ತಿವೆ. ಸಮಸ್ಯೆಗಳಿಗಳ ಪರಿಹಾರಕ್ಕಾಗಿ, ಹೋರಾಟಕ್ಕಾಗಿ ಅಸಂಖ್ಯಾತ ಸಂಘಟೆನೆಗಳು ಹುಟ್ಟಿಕೊಳ್ಳುತ್ತವೆ. ತಕ್ಕಮಟ್ಟಿಗೆ ಪರಿಹಾರವನ್ನೂ ಕಂಡುಕೊಂಡಿವೆ. ಮಂತಾತರದ ಬಗ್ಗೆ, ಭಯೋತ್ಪಾದನೆಯ ಬಗ್ಗೆ, ರಾಜಕಾರಣ/ರಾಜಕಾರಣಿಗಳ ಬಗ್ಗೆ, ಸನ್‌ಸೆಕ್ಸ್ ಇತ್ಯಾದಿಗಳ ಬಗ್ಗೆ ಬುದ್ಧಿಜೀವಿಗಳು, ವಿದ್ಯಾವಂತರು, ಬುದ್ಧಿವಂತರು ಎಲ್ಲರೂ ಗಂಟೆಗಟ್ಟೆಲೆ ಮಾತಾಡುತ್ತಾರೆ.. ಪುಟಗಟ್ಟಲೆ ಬರೆಯುತ್ತಾರೆ. (ಹಾಗೆ ಮಾಡುವುದು ತಪ್ಪೆಂದು ಖಂಡಿತ ನಾನು ಹೇಳುತ್ತಿಲ್ಲ) ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರುಷಗಳಾದರು ಯಾರೂ ದೈಹಿಕ/ಮಾನಸಿಕ ಅಂಗವೈಕಲ್ಯ ಹೊಂದಿದವರ ಕುರಿತು, ಅವರು ಹಾಗೂ ಅವರ ಮನೆಯವರು ಅನುಭವಿಸುವ ಕಷ್ಟ, ನೋವು, ಅವಮಾನ, ಹಿಂಸೆ, ಅನ್ಯಾಯಗಳ ಕುರಿತು ಸುದೀರ್ಘವಾಗಿ ಯೋಚಿಸಿ ಆ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ/ನೀಡುವ ರೀತಿಯಲ್ಲಿ ಈವರೆಗೂ ಯೋಚಿಸಲೇ ಇಲ್ಲ. ಇದೊಂದು ದೊಡ್ಡ ದುರಂತ.

ಇದು ಅವರ ಪ್ರಾರಾಬ್ಧ ಎಂದೋ, ಅಯ್ಯೋ ಪಾಪ ಎಂಬ ಅನುಕಂಪ ನೀಡಿಯೋ, ದೇವರಿದ್ದಾನೆ ಎಂಬ ಆಶಾಢಭೂತಿತನವನ್ನು ತೋರುವುದರಿಂದಲೋ ದೂರವೇ ಉಳಿಯುತ್ತಾರೆ. ವರುಷಕ್ಕೊಮ್ಮೆ ಅವರ ದಿನವನ್ನಾಚರಿಸಿ.. ವ್ಹೀಲ್‌ಚೇರ್ ನೀಡಿ ನೀವು ಇದರಲ್ಲಿ ಕುಳಿತಿರುವುದೇ ಲೇಸೆಂದು ಹಾರೈಸುತ್ತದೆ ಸರಕಾರ.

ಒಂದು ಅಂಕಿಯ ಪ್ರಕಾರ ಭಾರತದಲ್ಲಿ ಈಗ ೭೦ ಮಿಲಿಯನ್ ಅಂಗವಿರಲರಿದ್ದಾರೆ. ಅವರಲ್ಲಿ ಕೇವಲ ೨% ಅಂಗವಿಕಲರು ಮಾತ್ರ ವಿದ್ಯೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ೧% ಜನರು ಮಾತ್ರ ಉದ್ಯೋಗಿಗಳಾಗಿದ್ದಾರೆ!! ಭಾರತದ ಪ್ರಜೆ ೭೨,೦೦೦ ಕೋಟಿ ರೂಗಳನ್ನು ಅಂಗವಿಕಲರಿಗಾಗಿ ವಿನಿಯೋಗಿಸುತ್ತಿದ್ದಾನೆ. ಆದರೆ ಅದರಲ್ಲಿ ಅಂಗವಿಕಲರಿಗಾಗಿ ಸರಕಾರ ಕೊಡುತ್ತಿರುವುದು ಮಾತ್ರ ಅತ್ಯಲ್ಪ!!!

ದೈಹಿಕವಾಗಿ ಅಂಗನ್ಯೂನತೆ ಹೊಂದಿದವರು ನೈತಿಕ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯಿದ್ದರೂ ಯಾವರೀತಿಯ ಹೋರಾಟಗಳನ್ನೆಲ್ಲಾ ಮಾಡಬೇಕಾಗುತ್ತದೆ, ಎಷ್ಟೆಲ್ಲಾ ಮಾನಸಿಕ ಹಿಂಸೆ, ಅನ್ಯಾಯ, ಅಪಮಾನಗಳನ್ನು ಎದಿರುಸಿ, ಸಹಿಸಿ ಮುನ್ನೆಡಯಬೇಕಾಗುತ್ತದೆ ಅನ್ನುವುದಕ್ಕೆ ಸ್ವತಃ ನಾನೇ ಉದಾಹರಣೆ.

ಹುಟ್ಟಿನಿಂದಲೂ ನನ್ನೆರಡೂ ಕಾಲ್ಗಳಿಗೂ ಶಕ್ತಿಯಿಲ್ಲ. ಆದರೆ ವಿಕಲಚೇತನವಾಗಿರುವುದು ನನ್ನ ಅಂಗಗಳಿಗೆ ಆದರೆ ನನ್ನ ಬುದ್ಧಿಗಲ್ಲವೆಂದೇ ತಿಳಿದು ಮನಃಶಕ್ತಿಯಿಂದಲೇ ೨೯ ವರುಷಗಳನ್ನು ಸಾಮಾನ್ಯರಂತೆಯೇ ಕಳೆದವಳು. ಯಾವುದೇ ಅಂಗವಿಕಲ ಸೌಕರ್ಯವನ್ನೂ ಪಡೆಯದೇ ಮೇಲೆ ಬಂದವಳು. ಆದರೂ ಆಗಾಗ ಭಾರತದಲ್ಲಿ ವಿಕಲಚೇತನರ ಪ್ರತಿ ಇರುವ ಶುದ್ಧ ನಿರ್ಲಕ್ಯತನ, ಬೇಜಾವಾಬ್ದಾರಿತನ, ಅವರ ಪ್ರತಿ ತೊರುವ ತೋರಿಕೆಯ ಕಾಳಜಿ ಕಂಡು ತುಂಬಾ ನೋವು, ಸಿಟ್ಟು ಬರುತ್ತಲಿತ್ತು. ಬುದ್ಧಿ ಮತ್ತೆಯಿದ್ದರೂ ಆಸಕ್ತಿಯಿದ್ದರೂ, ಬೇಕಾದಷ್ಟು ಮಾರ್ಕ್ಸ್ ಗಳಿದ್ದರೂ ನನಗೆ ಪಿ.ಯು.ಸಿ ನಂತರ ಮೆಡಿಕಲ್ ಆಗಲೀ, ಬಿ.ಎಸ್ಸಿ. ನಂತರ ಮೈಕ್ರೋಬಯೋಲಾಜಿಯಾಗಲೀ ಮಾಡಲಾಗಲಿಲ್ಲ (ಸೀಟ್ ಸಿಕ್ಕಿದ್ದರೂ). ಕನ್ನಡ ಸಾಹಿತ್ಯದಲ್ಲಿ ಎಂ.ಎ.ಯನ್ನು ಕೂಡ ನಾನು "ಮೈಸೂರು ಮುಕ್ತ ವಿಶ್ವವಿದ್ಯಾಲಯದ" ಮೂಲಕ ಮಾಡಬೇಕಾಗಿ ಬಂತು. ಕಾರಣ ಇಲ್ಲಿ ೯೯% ಕಟ್ಟಡಗಳಿರುವುದೂ ಫ್ಲೋರ್‍ಗಳಲ್ಲಿ ಅದೂ ವಿದೌಟ್ ಲಿಫ್ಟ್!!! ನೈತಿಕ, ಆರ್ಥಿಕ ಬೆಂಬಲಗಳಿದ್ದರೂ ನನಗೆ ಅದೆಷ್ಟೋ ಕನಸುಗಳನ್ನು ಸಾಕಾರಿಸಿಕೊಳ್ಳಲಾಗಲಿಲ್ಲ. ಕಾರಣ ನನ್ನ ದೈಹಿಕ ವಿಕಲಚೈತನ್ಯ. ಇನ್ನು ಏನೂ ಇಲ್ಲದ, ಯಾರ ಬೆಂಬಲವೂ ಸಿಗದ ಆದರೆ ಅಪಾರ ಬುದ್ಧಿಮತ್ತೆ ಇರುವ ಇತರ ವಿಕಲಚೇತನರ ಗತಿ ಎಣಿಸಿದರೆ ತುಂಬಾ ನೋವಾಗುವುದು.

ಇಲ್ಲಿಯ ದುರವಸ್ಥೆಕಂಡು ನಾನು ಅದೆಷ್ಟೋ ಸಲ ಯೋಚಿಸಿದ್ದಿದೆ. ಬೇರೆ ದೇಶಗಳಲ್ಲಿಯೂ ಇವರ ಸ್ಥಿತಿ ಹೀಗೇಯೇ ಎಂದು. ಆಗ ಹೊರದೇಶಗಳಲ್ಲಿರುವ ನನ್ನ ಆತ್ಮೀಯರನ್ನು ವಿಚಾರಿಸಿದೆ. ಅಲ್ಲಿ ಅವರನ್ನು ಯಾವ ರೀತಿ ಗೌರ್ವಯುತವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದೇ ಇದೆ. ಅಮೇರಿಕಾ, ಇಂಗ್ಲೇಡ್, ನ್ಯೂಜಿಲೇಂಡ್ ಮುಂತಾದ ಪಾಶ್ಚಿಮಾತ್ಯ ದೇಶಗಳಲ್ಲಿ ಅಂಗವಿಕಲರನ್ನು ತುಂಬಾ ಗೌರವಯುತವಾಗಿ ನಡೆಸಿಕೊಳ್ಳುವರೆ. ಕೇವಲ ಅನುಕಂಪ ತೋರದೇ ಅವರಿಗೆ ಸಲ್ಲಬೇಕಾದ ಹಕ್ಕು ಸೌಲಭ್ಯ, ಸಹಕಾರ ಮೊದಲು ಸಿಗುವುದು. ಯಾವುದೇ ಅಂಗಡಿ ಮುಂಗಟ್ಟುಗಳಿರಲಿ ಅಲ್ಲಿಗೆ ಅಂಗವಿಕಲರೂ ಸುಲಭವಾಗಿ ಹೋಗುವ ಎಲ್ಲಾ ಸೌಕರ್ಯಗಳಿವೆ. ಆಸ್ಪತ್ರೆಗಳಲ್ಲಿ ಡಾಕ್ಟರ್‌ಗಳು ಮೊದಲು ಅವರ ತಪಾಸಣೆ ಮಾಡಬೇಕು. ಅವರನ್ನು ನೋಡೆನೆಂದ ಡಾಕ್ಟರ್ ತಕ್ಷಣ ಕೆಲಸ ಕಳೆದುಕೊಳ್ಳುವನು.

ಆದರೆ ಇಲ್ಲಿ ಮಾತ್ರ ಓರ್ವ ಡಾಕ್ಟರ್ ಕ್ಲಿನಿಕ್ ಕೂಡಾ ಕನಿಷ್ಠ ಪಕ್ಷ ೪-೫ ಮೆಟ್ಟಿಲುಗಳನ್ನೊಳಗೊಂಡಿರುತ್ತದೆ!!!! ಕೆಲವು ಡಾಕ್ಟರ್‌ಗಳಂತೂ ತಮ್ಮ ವೃಧ್ಧಿ ಧರ್ಮವನ್ನೇ ಮರೆತು ಅಮಾನವೀಯತೆಯ ಪರಾಕಷ್ಠೆಯನ್ನು ಮುಟ್ಟುತ್ತಾರೆ. ಮೊನ್ನೆ ಸ್ವತಃ ನನ್ನೊಂದಿಗೆ ನಡೆದ ಅಮಾನವೀಯ ಘಟನೆಯನ್ನೇ ಹೇಳುವೆ. ಇದನ್ನು ಹೇಳುವ ಮೊದಲೇ ನಾನು ಸ್ಪಷ್ಟ ಪಡಿಸುವೆ. ನನಗೆ ಆ ಡಾಕ್ಟರ್ ಮೇಲೆ ಯಾವ ಪೂರ್ವಾಗ್ರಹವಾಗಲೀ, ದ್ವೇಷವಾಗಲೀ ಖಂಡಿತ ಇಲ್ಲ. ಅವನ ವರ್ತನೆಗೆ, ಯೋಚನೆಗೆ ಮಾತ್ರ ತೀವ್ರ ಖಂಡನೆ ಹಾಗೂ ನೋವಿದೆ ಅಷ್ಟೇ.

ಹಲವು ದಿನಗಳಿಂದ ಜ್ವರದಲ್ಲಿ ಬಳುತ್ತಿದ್ದ ನಾನು ನಿನ್ನೆ ರಾಜರಾಜೇಶ್ವರಿ ನಗರದಲ್ಲಿರುವ ಓರ್ವ ಡಕ್ಟರ್ ಕ್ಲಿನಿಕ್‌ಗೆ ಹೋದೆ. ನಮಗೆ ಪರಿಚಯ ಇದ್ದ ಡಾಕ್ಟರ್ ಊರಲ್ಲಿರದಿದ್ದ ಕಾರಣ ನನ್ನ ಯಜಮಾನರ ಫ್ರೆಂಡ್ ಓರ್ವ ಹೇಳಿದ ಈ ಕ್ಲಿನಿಕ್‌ಗೇ ಹೋಗಬೇಕಾಯಿತು. ನನ್ನ ಹೆಲ್ಪರ್‌ಗೂ ಸೌಖ್ಯವಿರದಿದ್ದ ಕಾರಣ ಅವಳನ್ನು ಕರೆದುಕೊಂಡು ಹೋಗಿದ್ದೆ.ಕ್ಲಿನಿಕ್ಕಿಗೆ ಹೋಗಲೂ ೬-೭ ಮೆಟ್ಟಿಲುಗಳನ್ನು ಇಳಿಯಬೇಕಿತ್ತು (ಭಾರತದ ಎಲ್ಲಾ ಕ್ಲಿನಿಕ್‌ಗಳ ದುರವಸ್ಥೆ ಇದು.. ಆಸ್ಪತ್ರೆಗಳನ್ನು ಬಿಟ್ಟು). ಹಾಗಾಗಿ ಹೆಲ್ಪರ್ ಹಾಗೂ ನನ್ನವರು ಒಳಗೆ ಹೋದರು. ನಾನು ಕಾರಿನಲ್ಲೇ ಕುಳಿತಿದ್ದೆ. ಕ್ಲಿನಿಕ್ ಕೇವಲ ೫-೧೦ ಹೆಜ್ಜೆ ದೂರವಷ್ಟೇ ಇತ್ತು. ಇವರು ಡಾಕ್ಟರ್ ಬಳಿ "ನಾನು "Physically Challenged ಎಂದು ಹೇಳಿ ಕೇವಲ ಜ್ವರವಿದೆ ಕಾರ್ ಬಳಿ ಬಂದು ನೋಡುವಿರಾ "ಎನ್ನಲು ಮೊದಲು ಆಯಿತೆಂದರು. ನನ್ನ ಹೆಲ್ಪರ್ ಚೆಕ್‌ಅಪ್ ಮಾಡಿ ಬಿಲ್ ಪಡೆದ ನಂತರ ನಾನು ಕಾರ್ ಬಳಿ ಬರುವುದಿಲ್ಲ.. "I feel very Odd to test" ಏನೇ ಆದರೂ ಅವರೇ ಇಲ್ಲಿಗೆ ಬರಬೇಕು. ಇಲ್ಲಾ ಬೇರೆ ಕಡೆ ಹೋಗಿ" ಅಂದು ಬಿಟ್ಟ. ನಂತರ ನಾವು ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಕ್ಲಿನಿಕ್‌ಗೆ ಹೋದೆವು. ಆ ಡಾಕ್ಟರ್ ಕಾರ್ ಬಳಿಯೇ ಬಂದು ನೋಡಿ ಮೆಡಿಸಿನ್ ಕೊಟ್ಟರು.
ಇಂತಹ ಅಮಾನವೀಯತೆ ಕಂಡು ತುಂಬಾ ನೋವಾಯಿತು. ಇಲ್ಲಿ ನನ್ನ ಭಾವನೆ ಅಪ್ರಸ್ತುತ. ನನ್ನ ಬಳಿ ಕಾರಿತ್ತು.. ಎಲ್ಲಾ ಸೌಕರ್ಯವಿತ್ತು.. ಹಾಗಾಗಿ ತುರ್ತಾಗಿ ಬೇರೆಡೆ ಹೋದೆ. ಆದರೆ ಏನೂ ಇಲ್ಲದ.. ದುಡ್ಡು ಚೆಲ್ಲಿ ಆಟೊದಲ್ಲೋ ಇಲ್ಲಾ ಬಸ್ಸಿನಲ್ಲೋ ಬಂದ ಬಡ ಅಂಗವಿಕಲರು ಏನು ಮಾಡಬೇಕು? ಮೆಟ್ಟಿಲುಗಳನ್ನು ಇಳಿಯಲಾಗದೇ ಇದ್ದರೆ ಎಲ್ಲಿ ಹೋಗಬೇಕು? ಅವರನ್ನು ನೋಡೆನು ಎನ್ನುವ ಇಂತಹ ಡಾಕ್ಟರ್ ಗಳನ್ನು ಸುಮ್ಮನೇ ಸಹಿಸಬೇಕೆ?
ಅದಕ್ಕಾಗಿಯೇ ನಂತರ ಚೆನ್ನಾಗಿ ಯೋಚಿಸಿ ಪೇಪರ್‌ಗಳಲ್ಲಿ ಇಂತಹವರ ಕುರಿತು ಹಾಕಬೇಕೆಂದಿರುವೆ. ಇಷ್ಟು ವರುಷ ನನ್ನೊಂದಿಗಾದ, ನನ್ನಂತಹವರೊಂದಿಗಾದ ಅದೆಷ್ಟೋ ಅನ್ಯಾಯಗಳನ್ನು ನಾನು ಸಹಿಸಿ ನಾನೇ ತಪ್ಪು ಮಾಡಿರುವೆ. ಅದರೆ ಈಗ ಈ ಘಟನೆಯನ್ನು ಹೊರತಂದರೆ ನಾಳೆ ಆತ ಬೇರೆ ಯಾರಿಗೂ ಹೀಗೆ ಮಾಡದಿರಲಿ..ಆತನ ಹೆಸರು ಬಯಲಾಗದಿದ್ದರೂ, ಪೇಪರಿನಲಿ ಬಂದರೆ, ಆತನಿಗೂ ಆ ಪೇಪರ್ ಒಂದನ್ನು ಪೋಸ್ಟ್ ಮಾಡುವ ಮೂಲಕ ಎಚ್ಚರಿಕೆ ಕೊಡುವೆ. ಅದೂ ಅಲ್ಲದೇ ಈ ಘಟನೆಯನ್ನೋದುವ ಮೂಲಕ ಇನ್ನೋರ್ವ ಡಾಕ್ಟರ್ ಇಂತಹ ಯೋಚನೆಯಿದ್ದರೆ ಕೈಬಿಟ್ಟು, ಆತ್ಮಸಾಕ್ಷಿಗೆ ಓಗುಟ್ಟರೆ, ನನ್ನಂತಹ ಅದೆಷ್ಟೋ ನೊಂದವರಿಗೆ ಮುಂದೆ ಸಹಾಯವಾಗುವುದು.
ಹಾಗಾಗಿಯೇ ವಿಜಯಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಪತ್ರಿಕೆಗಳಿಗೆಲ್ಲಾ ಈ ಘಟನೆಯನ್ನು ಕಳುಹಿಸಿರುವೆ. ಹಾಕುವುದು ಬಿಡುವುದು ಅವರಿಚ್ಚೆ. ಒಂದು ವೇಳೆ ಯಾವುದಾದರೂ ಒಂದು ಪೇಪರಿನಲ್ಲಾದರೂ ಬಂದರೆ ಆ ಪೇಪರ್ ಪ್ರತಿಯೊಂದನ್ನು ಆ ಡಕ್ಟರ್‌ಗೂ ಪೋಸ್ಟ ಮಾಡಬೇಕೆಂದಿರುವೆ.

ಭಾರತದಲ್ಲಿ ಎಲ್ಲೇ ಆಗಲೀ, ಯಾವುದೇ ಮಾಲ್‍ಗಳಾಗಿರಲಿ(ಬಿಗ್‍ಬಜಾರ್ ಬಿಟ್ಟು), ಅಂಗಡಿಗಳಾಗಿರಲಿ, ಸಿನಿಮಾ ಥಿಯೇಟರ್‌ಗಳಾಗಿರಲೀ, ಬಿಡಿ.. ಸಣ್ಣ ಕ್ಲಿನಿಕ್‌ಗಳು ಕೂಡಾ ಮೆಟ್ಟುಲುಗಳಿಲ್ಲದೇ ಇಲ್ಲ!! ಕಲಿಯುವ ವಿದ್ಯಾಕೇಂದ್ರಗಳಲ್ಲೂ ಅಂಗವಿಕಲರಿಗಾಗಿ ಬೇರೆ ಸುಲಭ ಮಾರ್ಗವಿಲ್ಲ. ಇನ್ನು ವ್ಹೀಲ್‌ಚೇರ್ ಮೇಲೆ ಹೋಗುವ ಮಾತು ಬಲು ದೂರ. ಬೇಕಿದ್ದರೆ ಅವರು ಅವರಿಗಾಗಿಯೇ ಇರುವ ಸ್ಮೆಷಲ್ ಸ್ಕೂಲ್‌ಗಳಿಗೆ ಹೋಗಲಿ ಎಂಬ ಭಂಡತನದ ಮತುಗಳನ್ನು ನಾನೇ ಕೇಳಿ ಅನುಭವಿಸಿದ್ದೇನೆ.... ಎದುರಿಸಿದ್ದೇನೆ. "ನಿನಗೇಕೆ ಬೇಕು ಸೈನ್ಸ್ ಓದು? ನಿನ್ನಿಂದಾಗದು ಈ ಪ್ರಾಕ್ಟಿಕಲ್ ಎಲ್ಲಾ... ಸುಮ್ಮನೆ ಬಿ.ಎ. ಮಾಡು" ಎಂದು ನನಗೆ ದೊಡ್ಡ ಉಪದೇಶ ಕೊಟ್ಟವರೇ ಬಹಳಷ್ಟು ಜನ. ಆದರೆ ದೇವರ ದಯೆ ಹಾಗೂ ನನ್ನ ಹೆತ್ತವರ ಸಂಪೂರ್ಣ ಸಹಕಾರ, ಮನೋಧೈರ್ಯದಿಂದ ಎಲ್ಲ ವಿದ್ಯಾರ್ಥಿಗಳಂತೆಯೇ ಕಾಲೇಜಿಗೆ ಹೋಗಿ ಪ್ರಾಕ್ಟಿಕಲ್ ಕೂಡಾ ಮಾಡಿ ಉತ್ತಮ ಅಂಕಗಳನ್ನು ಪಡೆದು ಪಾಸಾದೆ. ಆದರೆ ಮನೆಯವರ ಅಸಹಕಾರವಿರುವ, ಆರ್ಥಿಕ ಬೆಂಬಲ ಇರದ ಬುದ್ಧಿವಂತ ಅಂಗವಿಕಲರು ಏನು ಮಾಡಬೇಕು? ಎಲ್ಲಿಗೆ ಹೋಗ ಬೇಕು. ಸಾಮಾನ್ಯರಂತೇ ಕಾಲೇಜಿನಲ್ಲಿ ಓದುವ ಹಕ್ಕು ಅವರಿಗೇಕಿಲ್ಲ?

ಹಾಗಿದ್ದರೆ ಅಂಗವಿಕಲರಾದವರು ಸ್ವಂತ ವ್ಹೀಲ್‌ಚೇರ್ ಮೇಲಾದರೂ ತಮಗಿಷ್ಟ ಬಂದ ಕಡೆ ಸುಲಭವಾಗಿ ಹೋಗಿ ತಮ್ಮ ಕೆಲಸ ಕರ್ಯಗಳನ್ನು ತಾವೇ ಸ್ವತಃ ಮಡಿಕೊಳ್ಳುವ ಕಾಲ ಭಾರತದಲ್ಲಿ ಬರದೇ? ಅವರಲ್ಲಿ ಸ್ವಾಭಿಮಾನ, ಆತ್ಮಶಕ್ತಿಯನ್ನು ವೃದ್ಧಿಸುವ ಕಾರ್ಯಗಳನ್ನು ಸರಕಾರ ಮಾಡದಿದ್ದರೆ ಸರಿ.. ಜನ ಸಾಮಾನ್ಯರಾದರೂ ಎಚ್ಚೆತ್ತು ಕೊಳ್ಳಬಾರದೇ? ಸುತ್ತಮುತ್ತಲಿರುವ ಅಂಗವಿಕಲರು ಪಡುತ್ತಿರುವ ಪಾಡು, ಕಷ್ಟಗಳನ್ನು ನೋಡಿಯಾದರೂ ಸಮಾಜ ತನ್ನೊಳಗಿನ ವ್ಯವಸ್ಥೆಗಳಲ್ಲಿ ಬದಲಾವಣೆ ತರಬಾರದೇಕೆ? ಅವರಿಗೂ ಎಲ್ಲರಂತೇ ಜೀವಿಸುವ, ಓದುವ, ದುಡಿಯುವ, ಎಲ್ಲಾ ಕಡೆಯೂ ಹೋಗುವ ಹಕ್ಕಿದ, ಸ್ವಾತಂತ್ರ್ಯವಿದೆ. ಇವರಿಗಾಗಿ ಜನಜಾಗೃತಿಯಾಗುವುದು ಯಾವತ್ತು?!! ಅಂಗವಿಕಲರ ಸಮಸ್ಯೆಗಳು ಅಷ್ಟೊಂದು ದೊಡ್ಡ ಸಮಸ್ಯೆಯೇ? ಪರಿಹರಿಸಲಾರದಷ್ಟು?

ಎಲ್ಲಾ ಸಮಸ್ಯೆಗಳಿಗೂ ಖಂಡಿತ ಪರಿಹಾವಿದೆ ಎಂದು ನಂಬಿರುವವಳು ನಾನು. ಹಾಗಾಗಿ ಕೇವಲ ಸಮಸ್ಯೆಗಳನ್ನಲ್ಲದೇ. ಅದಕ್ಕೆ ತಕ್ಕುದಾದ ನನ್ನದೇ ರೀತಿಯ ಪರಿಹಾರಗಳನ್ನೂ ಮುಂದಿಟ್ಟಿರುವ. ಈ ಪರಿಹಾರಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಹೇಳುತ್ತಿಲ್ಲ. ಆದರೆ ಈ ನಿಟ್ಟಿನಲ್ಲಿ ಇನ್ನಾದರೂ ಜನಜಾಗೃತಿಯಾಗಬೇಕಿದೆ. ಈ ಪರಿಹಾರಗಳು ಓದುಗರಾದ ತಮಗೆ ಸರಿಯೆನಿಸಿದರೆ ದಯವಿಟ್ಟು ಜಾರಿಗೆ ತರುವನಿಟ್ಟಿನಲ್ಲಿ ನಿಮ್ಮದೇ ಕೊಡುಗೆ ನೀಡಿ ಎಂದು ವಿನಂತಿಸುವೆ.
ಪರಿಹಾರಕ್ರಮಗಳು:
೧.ಮೊದಲಿಗೆ ಅವರ ದಿನಾಚರಣೆಯ ಕ್ರಮವೇ ಸರಿಯಲ್ಲ. ಅಂಗವಿಕಲರು ವಿಶೇಷರಲ್ಲ. ಅವರೂ ಸಾಮಾನ್ಯರಂತೆ, ಆದರೆ ಅಂಗದಲ್ಲಿ ವಿಶೇಷ ಊನವಾಗಿರುವವರು ಅಷ್ಟೇ ಎಂದು ತಿಳಿಯಬೇಕು. ಅವರ ಪ್ರತಿ ಸ್ನೇಹವಿರಲಿ. ಅತಿಯಾದ ಅನುಕಂಪ ಆತ್ಮಸ್ಥೈರ್ಯ ಕೊಡದು. ತಿರಸ್ಕಾರ ಬೇಡ. ಸಮಾನತೆಯೊಂದೇ ದಾರಿ.
೨. ಮಾನೋವಿಕಲರನ್ನು ಬಿಟ್ಟು ಕೇವಲ ದೈಹಿಕ ನ್ಯೂನತೆಯಾದವರಿಗೆ ಎಲ್ಲರಂತೆ ಓದಲು, ಉದ್ಯೋಗ ಮಾಡಲು ಅವಕಾಶಗಳನ್ನು ನೀಡಬೇಕು. ಇದು ಕೇವಲ ಇಂತಿಷ್ಟು %ಗಳಲ್ಲಿಡುವುದರಿಂದ ಪರಿಹಾರವಾಗದು. ಎಲ್ಲಾ ವಿದ್ಯಾಕೇಂದ್ರಗಳನ್ನು, ಕಚೇರಿಗಳನ್ನು, ಅಂಗಡಿಗಳನ್ನು, ಮಾಲ್‌ಗಳನ್ನು ವ್ಹೀಲ್‌ಚೇರ್ ಹೋಗುವಂತೆ ವಿನ್ಯಾಸಗೊಳಿಸಬೇಕು.
೩. ಬಹುಮಡಿ ಕಟ್ಟಡಗಳಲ್ಲಿ, ಬಹು ಅಂಕಣಗಳಿರುವ ಮನೆಗಳನ್ನು ಕಟ್ಟುವಾಗ ಲಿಫ್ಟ್ ಸೌಲಭ್ಯವಿರುವಂತೆ ನೊಡಬೇಕು.
೪.ಕ್ಲಿನಿಕ್‌ಗಳು ಎಷ್ಟೇ ಸಣ್ಣವಾಗಿರಲಿ ಕಡ್ಡಾಯವಾಗಿ ರೋಗಿಗಳು ಸುಲಭವಾಗಿ ಒಳಹೋಗುವಂತೆ ಮಾಡಬೇಕು. ಮೆಟ್ಟುಲುಗಳನ್ನಿಡಲೇ ಬಾರದು. ಇಟ್ಟರೆ ಲಿಫ್ಟ್ ಸೌಲಭ್ಯವಿರಲೇಬೇಕು.
೫. ಅವರಿಂದ ಈ ಕಲಿಕೆ/ಕೆಲಸವಾಗದು ಎಂದು ಇತರರು ನಿರ್ಧರಿಸಬಾರದು. ಅಂತಿಮ ನಿರ್ಧಾರ ಆತನದಾಗಿರಬೇಕು.
೬. ಅಂಗವೈಕಲ್ಯ ಪ್ರಾರಾಬ್ಧ ಕರ್ಮ, ಒಂದು ಶಾಪ ಅನುಭವಿಸಲೇ ಬೇಕಾದ್ದು ಎಂಬ ಮುಢತೆಯನ್ನು ತೊರೆಯಬೇಕು. ಕೇವಲ ಅನುಕಂಪ, ಕರುಣೆ ತೋರದೇ. ಅವರಿಂದಲೂ ಸಾಧಿಸಲು ಸಾಧ್ಯ ಎನ್ನುವ ಮಾನಸಿಕ ಬೆಂಬಲ ನೀಡಬೇಕು. ಸಹಕಾರವಿರಲಿ.
೭. ಎಲ್ಲಕ್ಕಿಂತ ಮುಖ್ಯವಾಗಿ ವಿಕಲಚೇತನರು ತಮ್ಮನ್ನು ತಾವು ಹಳಿದುಕೊಳ್ಳುವುದು, ಕುಗ್ಗಿಸಿಕೊಳ್ಳುವುದು, ತಾವು ಅಸಮರ್ಥರೆಂಡು ಕೊರಗುವುದನ್ನು ಬಿಡಬೇಕು. "ನಮ್ಮನ್ನು ನಾವೇ ಉದ್ಧಾರಮಾಡಿಕೊಳ್ಳಬೇಕು. ಯಾರೋ ಬಂದು ನಮ್ಮನ್ನು ಮೇಲೆತ್ತರು. ನಾವು ಮನೋಬಲ ಹೊಂದಿದಾಗ ಸಮಾಜವೂ ನಮ್ಮೊಂದಿಗೆ ಒಂದಲ್ಲಾ ಒಂದು ದಿನ ಬರುವುದು ಎನ್ನುವದನ್ನು ಮನಗೊಳ್ಳಬೇಕು."

ಕೊನೆಯದಾಗಿ : ಸಾವಿರಾರು ಮಾತುಗಳನ್ನು ಒಂದು ಕವನವು ಹೇಳುವುದು.

ಆಶಾಜ್ಯೋತಿ

ನೂರು ಕನಸ ಕಣ್ಣೊಳಿಟ್ಟು,
ಜಗವ ಪಡೆವ ಕೆಚ್ಚುಹೊತ್ತು
ಸದಾ ನಗುವ ತುಟಿಯೊಳಿಟ್ಟು
ಹತಾಶೆಯ ಕೊರಗು ಬಿಟ್ಟು,
ಹೋರಾಟವು ನಮ್ಮ ಬದುಕು,
ಮುಂದಿದೆ ಬಾಳ ಬೆಳಕು;

ಸಮಾನತೆಯು ಇರೆ ಜೊತೆಗೆ
ಏರುವೆವು ಪರ್ವತವನೇ
ಕರುಣೆ ಇರದೆ ಸ್ನೇಹ ನೀಡೆ
ದಾಟುವೆವು ಸಾಗರವನೇ

ತಳ್ಳಲಾರರು ಯಾರೂ
ಬಗ್ಗದ ಮರ ನಾವು,
ಒಡೆಯಲಾರರು ಮನವ
ಇದು ಬಂಡೆ ಕಲ್ಲು.

ಹೂವಂಥ ಮನದೊಳು
ವಜ್ರದ ಬಲವಿರಲು
ಹೊಸಕಲಾರರು ಯಾರೂ
ಇದು ಬಾಡದ ಹೂವು.

ನೀಡುತಿರೆ ನೀವು ಸದಾ
ವಿಶ್ವಾಸ ಪ್ರೀತಿ,
ಬೆಳಗಬಲ್ಲೆವು ನಾವು
ಹೊಸ ಆಶಾಜ್ಯೋತಿ.

"ಬದಲಾವಣೆ ಒಂದು ದಿನದಲ್ಲಾಗದು..ಒಂದು ಬರಹದಲ್ಲಾಗದು.. ಆದರೆ ಬದಲಾವಣೆಯ ಪ್ರಾರಂಭ ಒಂದು ಬರಹದಿಂದಲಾದರೂ ಆದರೆ ಅಷ್ಟೇ ಸಾಕು"

-ತೇಜಸ್ವಿನಿ ಹೆಗಡೆ.

ಸೋಮವಾರ, ನವೆಂಬರ್ 17, 2008

ಆರೋಗ್ಯಕರ ಹಾಗೂ ರುಚಿಕರ ಅತ್ತಿ (Fig)

ದಟ್ಸ್‌ಕನ್ನಡದಲ್ಲಿ ಪ್ರಕಟವಾಗುತ್ತಿರುವ ನನ್ನ ಅಂಕಣವಾದ "ಶಿರಸಿ ಭವನದ"ಲ್ಲಿ ಬಂದ ಈ ವಾರದ ಪಾಕ ವಿಧಾನ
-------------------------------------
ಹಾದಿಬೀದಿಗಳಲಿ ಸಿಗುವ ಅತ್ತಿ ಗಿಡದ ಚಿಗುರೆಲೆಗಳನ್ನು ಆಯ್ದು ತಂದು ಶ್ರದ್ಧೆಯಿಂದ ಅಡುಗೆ ಮಾಡಿ ಸವಿದು ಆರೋಗ್ಯ ವೃದ್ಧಿಸಿಕೊಳ್ಳುವವರಿಗೆ ಪರಿಣತರು ಹೇಳುವ ಕಿವಿಮಾತುಗಳಿವು. ಅನೇಕ ರೋಗಗಳಿಗೆ ಏಕೈಕ ರಾಮಬಾಣ ಅತ್ತಿ ತಂಬುಳಿ.
ಅತ್ತಿ ಮರದ ಉಪಯೋಗಗಳು ಹಲವಾರು. ಹಾಗಾಗಿ ಮೊದಲಿಗೆ ಅತ್ತಿ ಮರದ ಕಿರು ಪರಿಚಯ ಮಾಡಿಕೊಳ್ಳೋಣ : 10ರಿಂದ 15 ಮೀಟರ್ ಎತ್ತರ ಬೆಳೆಯುವ, ನಿತ್ಯ ಹರಿದ್ವರ್ಣ ಮರ ಎಂದೇ ಪರಿಚಿತವಾಗಿರುವ ಸಸ್ಯಪ್ರಬೇಧ ಅತ್ತಿಮರ. ಸಂಸ್ಕೃತದಲ್ಲಿ ಉದುಂಬರ(ಔದುಂಬರ**), ಹಿಂದಿಯಲ್ಲಿ ಗುಲೇರ್, ಇಂಗ್ಲೀಷಿನಲ್ಲಿ Fig, ತೆಲುಗಿನಲ್ಲಿ ಅತ್ತಿ ಮಾನು ಹಾಗೂ ತಮಿಳಿನಲ್ಲಿ ಅತ್ತಿ ಮರಂ ಎನ್ನುತ್ತಾರೆ. ಅತ್ತಿ ಮರದ ಎಲೆಗಳನ್ನು ವಿಶೇಷವಾಗಿ ಹೋಮ ಹವನಗಳಲ್ಲಿ ಸಮಿತ್ತಾಗಿಯೂ ಉಪಯೋಗಿಸುತ್ತಾರೆ.ವೈದ್ಯ ಎ.ಅರ್.ಎಂ.ಸಾಹೇಬ್ ಅವರ 'ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು' ಎಂಬ ಪುಸ್ತಕದಲ್ಲಿ ಯಾವ ರೀತಿ ಈ ಅತ್ತಿ ಮರದ ಎಲೆ, ಕಾಯಿ, ಹಣ್ಣು, ತೊಗಟೆ, ಹಣ್ಣಿನಿಂದೊಸರುವ ಬಿಳಿ ಹಾಲು ಎಲ್ಲವೂ ಸರಳ ಚಿಕಿತ್ಸೆಗಳಿಗೆ, ಕಾಯಿಲೆಗಳಿಗೆ ಮದ್ದು ಎಂಬುದನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಉರಿಮೂತ್ರ, ವಿಪರೀತ ಬಾಯಾರಿಕೆ, ಬಾವು, ಸಕ್ಕರೆ ಕಾಯಿಲೆ ಮುಂತಾದ ರೋಗಗಳ ಉಪಶಮನಕ್ಕೆ ಅತ್ತಿ ಮರದ ವಿವಿಧ ಭಾಗಗಳಿಂದ ತಯಾರಿಸಿದ ಮನೆಮದ್ದುಗಳು ತುಂಬಾ ಪರಿಣಾಮಕಾರಿ.ಅತ್ತಿ ಮರ ಸಸ್ಯಪ್ರಬೇಧದ ಕೆಲವು ವಿವರಣೆಗಳು ಇಂತಿವೆ:-

Kingdom: Plantae
Division: Magnoliophyta
Class: Magnoliopsida
Order: Rosales
Family: Moraceae
Genus: Ficus
Species: F. racemosa


ಹೆಚ್ಚಿನ ವಿವರಣೆಗಳಲ್ಲಿ ಆಸಕ್ತಿ ಇರುವವರು ಈ ಕೆಳಗಿನ ಲಿಂಕ್‌ಗಳಿಂದ ಬಡೆಯಬಹುದಾಗಿದೆ.
http://en.wikipedia.org/wiki/Ficus_racemosa
http://www.exoticnatural.com/ficus.htm

ಅತ್ತಿ ಮರದ ಚಿಗುರೆಲೆಗಳಿಂದ ತಯಾರಿಸುವ ಈ ತಂಬುಳಿ ದೇಹಕ್ಕೆ ತುಂಬಾ ತಂಪು. ಅತ್ತಿ ಮರ ತುಂಬಾ ಎತ್ತರವಿರುವುದರಿಂದ ಚಿಗುರು(ಕುಡಿ)ಗಳನ್ನು ತೆಗೆಯಲು ತುಸು ಕಷ್ಟವಾಗಬಹುದು. ಆದರೆ ಎಲ್ಲೆಂದರಲ್ಲಿ, ದಾರಿಯಂಚಿನಲ್ಲೆಲ್ಲಾ ಬೆಳೆಯುವ ಈ ಮರದ ಸಣ್ಣ ಸಣ್ಣ ಗಿಡಗಳಿಂದ ಕುಡಿಗಳನ್ನು ಧಾರಾಳವಾಗಿ ಹೆಕ್ಕಬಹುದು.ಉತ್ತರ ಕನ್ನಡದ ಕಡೆ ವಿಶೇಷವಾಗಿ ತಯಾರಿಸುವ ಈ ಅತ್ತಿ ಕುಡಿ ತಂಬುಳಿ ಉಷ್ಣದೇಹದ ಪ್ರಕೃತಿಯವರಿಗೆ, ಬಾಯಿ ಹುಣ್ಣಿನಿಂದ ಬಳಲುತ್ತಿರುವವರೆ ತುಂಬಾ ಉಪಯುಕ್ತ. ತಯಾರಿಸಲೂ ಬಹು ಸುಲಭ ಹಾಗೂ ಸರಳ. ಕೇವಲ 15 ನಿಮಿಷಗಳ ಒಳಗೆ ತಯಾರಿಸಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
* ಅತ್ತಿ ಕುಡಿಯ ಹಸಿರಾದ ಚಿಗುರೆಲೆಗಳು, ಬಲಿತ ದೊಡ್ಡ ಎಲೆಗಳಲ್ಲ. 10-15
* ಜೀರಿಗೆ - 1/4 ಚಮಚ
* ಬಿಳೇ ಎಳ್ಳು - 1/2 ಚಮಚ
* ಚಿಟಿಕೆ ಇಂಗು
* ಕಡೆದ ಮಜ್ಜಿಗೆ - 1 ಲೋಟ
* ಹುರಿಯಲು ತುಪ್ಪ - 2 ಚಮಚ
* ತೆಂಗಿನ ತುರಿ - 1/4 ಭಾಗ
* ಬೆಲ್ಲ - ರುಚಿಗೆ ತಕ್ಕಷ್ಟು (ಬೆಲ್ಲ ಹಾಕಲು ಇಷ್ಟಪಡದವರು ಸಿಹಿ ಹಾಕದೆಯೂ ತಯಾರಿಸಬಹುದು)
* ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:
ಮೊದಲಿಗೆ ಅತ್ತಿ ಕುಡಿಗಳನ್ನು ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಬೇಕು.
ಬಾಣಲೆಗೆ 2 ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಜೀರಿಗೆ, ಇಂಗು ಹಾಗೂ ಬಿಳೇ ಎಳ್ಳುಗಳನ್ನು ಹಾಕಿ ಹುರಿಯಬೇಕು.
ಜೀರಿಗೆ ಹಾಗೂ ಎಳ್ಳುಗಳು ಚಟಗುಡಲು ಹೆಚ್ಚಿಟ್ಟಿರುವ ಅತ್ತಿ ಕುಡಿಗಳನ್ನು ಹಾಕಿ ಸಣ್ಣ ಉರಿಯಲ್ಲೇ ಹುರಿಯಬೇಕು.10 ನಿಮಿಷದೊಳಗೇ ಕುಡಿಗಳೆಲ್ಲಾ ಹುರಿದು ಗರಿಗರಿಯಾಗುತ್ತವೆ.
ಹುರಿದಿಟ್ಟ ಪದಾರ್ಥಗಳು ಚೆನ್ನಾಗಿ ತಣಿದ ನಂತರ ಕಾಯಿತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಬೇಕು.
ರುಬ್ಬಿದ ಪದಾರ್ಥಕ್ಕೆ ಕಡೆದ ಮಜ್ಜಿಗೆಯನ್ನೂ, ರುಚಿಗೆ ತಕ್ಕಷ್ಟು ಉಪ್ಪನ್ನೂ, ಬೆಲ್ಲವನ್ನೂ ಹಾಕಿ ಕಲಕಿದರೆ ರುಚಿಯಾದ ಆರೋಗ್ಯಕರ ತಂಬುಳಿ ಸಿದ್ಧ. ಅತ್ತಿಕುಡಿ ತಂಬುಳಿಯನ್ನು ಅನ್ನಕ್ಕೆ ಕಲಸಿಕೊಂಡೋ ಇಲ್ಲಾ ಹಾಗೇ ಕುಡಿಯಲೂಬಹುದು.

** ಔದುಂಬರ : ತಮ್ಮ ಜೀವನದ ಒಂದು ಭಾಗವೇ ಎಂಬಂತಿದ್ದ ಅತ್ತಿ ಮರ ಅಥವಾ ಔದುಂಬರ ಮರದ ಕುರಿತು ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು 'ಔದುಂಬರ ಗಾಥೆ' ಎಂಬ ಕವನವನ್ನು ಬರೆದಿದ್ದಾರೆ. ಇದರ ಬಗ್ಗೆ ಬಲ್ಲವರು ಇನ್ನಷ್ಟು ಬೆಳಕು ಚೆಲ್ಲಬೇಕಾಗಿ ವಿನಂತಿ.

ಗುರುವಾರ, ನವೆಂಬರ್ 6, 2008

ಜನಮಾನಸದೊಳಗೆ ತನ್ನ ಛಾಪನ್ನು ಗಾಢವಾಗಿ ಮೂಡಿಸುವ "ಬಾಲಿಕಾ ವಧು"

ಸಾಮಾಜಿಕ ಸಮಸ್ಯೆಗಳನ್ನು, ವ್ಯವಸ್ಥೆಯೊಳಗಿನ ಅವ್ಯವಸ್ಥೆಗಳನ್ನು, ಡಾಂಭಿಕತೆ, ಮೂಢನಂಬಿಕೆಗಳನ್ನು ಕಾಣಿಸುವ ಧಾರಾವಾಹಿ ಬಾಲಿಕಾ ವಧು.


ಈ ಧಾರಾವಾಹಿಯ ಕುರಿತು ಮೊದಲೇ ಬರೆಯಬೇಕೆಂದಿದ್ದೆ. ಆದರೆ ಸಮಯಾವಕಾಶವಾಗಲಿಲ್ಲ. ಚಂದ್ರಕಾಂತ ಎಸ್. ಅವರ "ಬತ್ತದ ತೊರೆ" ಬ್ಲಾಗಿನಲ್ಲಿ ಈ ಧಾರಾವಹಿಯ ಕುರಿತಾದ ಕಿರು ಬರಹವನ್ನೋದಿ ತುಂಬಾ ಸಂತಸವಾಯಿತು.

ಕೇವಲ ಅಸಂಬದ್ಧ ಪ್ರೀತಿ, ಮದುವೆ, ಡೈವೊರ್ಸ್, ಅತ್ತೆ-ಸೊಸೆ ಜಗಳ, ಷಂಡ್ಯಂತ್ರಗಳಂತಹ ಜಾಳು ಜಾಳಾದ ಕಥೆಗಳನ್ನೊಳಗೊಂಡ, ವಾಸ್ತವಿಕತೆಯ ಗಂಧಗಾಳಿಯೂ ಇಲ್ಲದಂತಹ ಧಾರಾವಾಹಿಗಳ ನಡುವೆ "Colors" ಚಾನೆಲ್‌ನಲ್ಲಿ ಬರುತ್ತಿರುವ "ಬಾಲಿಕಾ ವಧು" ಧಾರಾವಾಹಿ ತುಂಬಾ ಭಿನ್ನವಾಗಿ ನಿಲ್ಲಿತ್ತದೆ ಎಂದರೆ ಖಂಡಿತ ತಪ್ಪಾಗಲಾರದು. ಬಾಲಿಕಾ ವಧುವಾಗಿರುವ "ಆನಂದಿ" ಹಾಗೂ ವರನಾಗಿರುವ "ಜಗದೀಶ"ನ ಅಭಿನಯ ಯಾರನ್ನೂ ಬೆರಗುಗೊಳಿಸುತ್ತದೆ. ಈ ಧಾರಾವಾಹಿಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ "ಬತ್ತದ ತೊರೆ" ಬ್ಲಾಗ್‌ಗೆ ಭೇಟಿಕೊಡಬಹುದು.


-ತೇಜಸ್ವಿನಿ ಹೆಗಡೆ.

ಮಂಗಳವಾರ, ನವೆಂಬರ್ 4, 2008

ನಾ ಮೆಚ್ಚಿದ ಕವಿತೆ - ೩

ಕವಿ : ಡಾ ದ.ರಾ.ಬೇಂದ್ರೆ (ಅಂಬಿಕಾತನಯದತ್ತ)


ನಾನು ಬಡವಿ ಆತ ಬಡವ

ಒಲವೇ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದುಕು ಇದುಕು ಎದುಕು.

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣುಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ.

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರುಬಟ್ಟೆ.

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು.


**ಬೇಂದ್ರೆಯವರ ಈ ಕವನ ನನ್ನ ಅಚ್ಚುಮೆಚ್ಚಿನ ಕವನಗಳಲ್ಲೊಂದಾಗಿದೆ. ಪ್ರೀತಿಯ ಸಾರ್ಥಕತೆ, ಅದರ ಸರಳತೆ, ಪರಿಪಕ್ವತೆಯನ್ನು ತುಂಬಾ ಸರಳವಾಗಿ, ಸುಂದರವಾಗಿ ಸದಾ ಮನಸಿನಲ್ಲಿ ಹಸಿರಾಗಿರುವಂತೆ ಚಿತ್ರಿಸಿದ್ದಾರೆ ಈ ಕವನದಲ್ಲಿ. ಪ್ರೀತಿಯನ್ನು ಕೊಡುವುದರಲ್ಲಿ, ಪಡೆಯುವುದರಲ್ಲಿ ಇರಬೇಕಾದದ್ದು ಮನಸಿನೊಳಗಿನ ಶ್ರೀಮಂತಿಕೆಯೇ ವಿನಃ ಲೌಕಿಕ ಸಿರಿತನವಲ್ಲ ಎನ್ನುವುದನ್ನು ಅದೆಷ್ಟು ಸ್ಪಷ್ಟವಾಗಿ, ಕಾವ್ಯಮಯವಾಗಿ ಹೇಳಿದ್ದಾರೆ ಅಲ್ಲವೇ? ಈ ಕವನದ ಸುಮಧುರ ಹಾಡೂ ಲಭ್ಯವಿದೆ.**

ಸೋಮವಾರ, ಅಕ್ಟೋಬರ್ 20, 2008

ಮರೆಯಲಾಗದ ನೆನಪು - ೨

***ನನ್ನ ಮನದೊಳಗೆ ಸದಾ ಹಸಿರಾಗಿರುವ ಈ ಘಟನೆಗೆ ಸಂಬಂಧ ಪಡುವವರ ಹೆಸರುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣಗಳೆರಡು. ಮೊದಲನೆಯದಾಗಿ ನಾನು ಅವರುಗಳ ಒಪ್ಪಿಗೆಯನ್ನು ಪಡೆದುಕೊಂಡಿಲ್ಲವಾದ್ದರಿಂದ. ಎರಡನೆಯದಾಗಿ ಇಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ವ್ಯಕ್ತಿಯೋರ್ವರು ಬ್ಲಾಗ್ ಮಂಡಲದಲ್ಲಿ ಸುಪರಿಚಿತರು. ಹೆಸರುವಾಸಿ. ತಮಗೆಲ್ಲಾ ಗೊತ್ತಿರುವವರೇ! ಹಾಗಾಗಿ ನಾನು ಅವರುಗಳ ಹೆಸರನ್ನಾಗಲೀ, ಆ ಪ್ರದೇಶನ ಪರಿಚಯವನ್ನಾಗಲೀ ನೀಡುತ್ತಿಲ್ಲ. ಒಂದೊಮ್ಮೆ ಈ ಬರಹವನ್ನೋದಿದ ಅವರು ಒಪ್ಪಿಗೆಯನ್ನಿತ್ತರೆ ಹೆಸರು ಹಾಗೂ ಊರನ್ನು ಪರಿಚಯಿಸುವೆ.***
-----------------------------------------------------------------------
ಈ ಘಟನೆ ನಡೆದದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ. ನಮ್ಮ ಮದುವೆಯಾದ ಹೊಸತರಲ್ಲಿ. ಆಗಷ್ಟೇ ಯಜಮಾನರ ಇಷ್ಟಮಿತ್ರ, ಬಂಧು-ಬಳಗದವರ ಪರಿಚಯವಾಗತೊಡಗಿತ್ತು. ಅವರ ಸ್ನೇಹಿತರಲ್ಲನೇಕರನ್ನು, ಕೆಲ ಆಪ್ತರನ್ನು ಮದುವೆಯ ದಿನವೇ ನೋಡಿದ್ದೆ. ಹಾಗೆ ಬಂದವರಲ್ಲಿ ಅವರ ಆತ್ಮೀಯ ಗುರುಗಳೊಬ್ಬರೂ ಆಗಿದ್ದರು. ಅವರು ಯಜಮಾನರಿಗೆ ಪಿ.ಯು.ಸಿಯಲ್ಲಿ ಕನ್ನಡ ಕಲಿಸಿದ್ದರು. ಗುರು-ಶಿಷ್ಯರ ಸಂಬಂಧ ಕೇವಲ ಕ್ಲಾಸ್‌ರೂಂಗಷ್ಟೇ ಸೀಮಿತವಾಗದೆ, ಇಬ್ಬರೊಳಗೂ ಒಂದು ಗಾಢವಾದ ಆಪ್ತತೆಯನ್ನು ಬೆಳೆಸಿತ್ತು. ಕ್ರಮೇಣ ನನ್ನವರು ಅವರ ಮನೆಯಲ್ಲೋರ್ವ ಸದಸ್ಯರಂತಾಗಿಬಿಟ್ಟಿದ್ದರು. ಇದನ್ನೆಲ್ಲಾ ಯಜಮಾನರು ಮೊದಲೇ ನನಗೆ ಸಾಕಷ್ಟು ಸಲ ಹೇಳಿದ್ದರಿಂದ ಅವರ ಗುರುಗಳನ್ನು ನೋಡಿದಾಗ ಅಷ್ಟೊಂದು ಅಪರಿಚಿತರೆಂದೆನಿಸಿರಲೇ ಇಲ್ಲ. ಹಾಗಾಗಿಯೋ ಏನೋ ಒಂದು ದಿನ ನನ್ನವರು ತಮ್ಮ ಗುರುಗಳ ಮನೆಗೆ ಹೋಗಿ ಬರೋಣ ಎಂದಾಕ್ಷಣ ಕೂಡಲೇ ತಯಾರಾದೆ. ಅದೂ ಅಲ್ಲದೇ ನಂದೂ ಒಂದು ಸಣ್ಣ ಸ್ವಾರ್ಥವಿತ್ತೆನ್ನಿ. ಇವರ ಗುರುಗಳಿಗೆ ಕನ್ನಡ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವಿದೆಯೆಂದು ಸಾಕಷ್ಟು ಸಲ ಕೇಳಿದ್ದೆ. ಹಾಗಾಗಿ ಮತ್ತೂ ಉತ್ಸುಕಳಾಗಿ ಹೊರಟೆ.

ಮಂಗಳೂರಿನಿಂದ ಅವರ ಮನೆ ಸುಮಾರು ೨೫-೩೦ ಕಿ.ಮೀ. ದೂರವಿತ್ತು. ಹಾಗಾಗಿ ಆದಷ್ಟು ಬೇಗ ಮನೆಯಿಂದ ಹೊರಡಬೇಕೆಂದು ಗಡಬಡಿಸಿದರೂ, ಹೊರಡುವಾಗಲೇ ಗಂಟೆ ೨ ದಾಟಿತ್ತು! "ನಿಂಗವು ರಾಶಿ ಲೇಟ್ ಮಾಡ್ಕಳಡಿ.. ಮಳೆಗಾಲ ಬೇರೆ. ದಾರಿ ಬೇರೆ ತಿರುವು ಮುರುವಿದ್ದು. ನಂಗೆ ಟೆನ್ಷನ್ ಆಗ್ತು" - ಎಂಬ ಅಮ್ಮನ ಈ ಎಚ್ಚರಿಕೆಯ ಮತುಗಳೊಂದಿಗೆಯೇ ನಾವು ಕಾರನ್ನೇರಿದೆವು. ಹೊರಟ ಮೇಲೆ ನಮ್ಮ ಪ್ರಯಾಣದಲ್ಲಿ ತುಸು ಬದಲಾವಣೆಯಾಗಿ ದಾರಿಯಲ್ಲೇ ಸಿಗುವ ಇವರ ಇನ್ನೋರ್ವ ಆತ್ಮೀಯರ ಮೆನೆಯನ್ನೂ ಹೊಕ್ಕು ಗುರುಗಳ ಮನೆ ಸೇರುವಾಗ ಸುಮಾರು ಐದುಗಂಟೇಯೇ ಆಗಿತ್ತು.

ಮದುವೆಗೆ ಗುರುಗಳು ಮಾತ್ರ ಬಂದಿದ್ದರು. ಕಾರಣಾಂತರಗಳಿಂದ ಅವರ ಪತ್ನಿಯಾಗಲೀ, ಮಗನಾಗಲೀ ಹಾಗೂ ಮಗಳಾಗಲೀ ಬಂದಿರಲಿಲ್ಲವಾದ್ದರಿಂದ ಇವರುಗಳೆಲ್ಲರನ್ನು ನಾನು ಮೊದಸಲ ಭೇಟಿಯಾಗಿದ್ದೆ....ಮನೆಯವರೆಲ್ಲರೊಡನೆ ಬೆರೆತು ಮಾತಾನಾಡುತ್ತಾ, ರಾಜೋಪಚಾರಗಳನ್ನು ಪಡೆಯುತ್ತಾ ಇದ್ದ ನಮಗೆ ಸಮಯದ ಅರಿವೇ ಆಗಲಿಲ್ಲ. ಅಲ್ಪ ಸಮಯದಲ್ಲೇ ನನಗಲ್ಲಿ ತುಂಬಾ ಆತ್ಮೀಯತೆ ದೊರಕಿತ್ತು. ಗುರುಗಳ ಪತ್ನಿ ನಮ್ಮೂರಿನವರೇ ಆಗಿದ್ದರಿಂದಲೋ ಏನೋ ನನಗರಿವಿಲ್ಲದಂತೇಯೇ ನಾನವರನ್ನು "ಅತ್ತೇ" ಎಂದು ಸಂಭೋಧಿಸತೊಡಗಿದ್ದೆ.

"ರಾಮು ಇಲ್ಲೇ ಹತ್ರದಲ್ಲಿ ಎಳ್ಳತ್ತೂರು ದೇವಸ್ಥಾನವಿದ್ದು. ಈಗಲ್ಲಿ ಬ್ರಹ್ಮಕಲಶದ ತಯಾರಿ ನಡೀತಾ ಇದ್ದು. ರಾಶಿ ಪ್ರಸಿದ್ಧ ದೇವಸ್ಥಾನ. ಸುಮಾರು ಜನ ನಡ್ಕ್ಯತ್ತ ಅದ್ಕೆ. ನಿಂಗವು ಅಲ್ಲಿಗೆ ಹೋಗಿ ನಿಮ್ಮ ಹತ್ರಾದಷ್ಟು ಸೇವೆ ಕೊಟ್ಟು ಮನೆಗೆ ಹೋಗಿ.. ಹೋಗ್ದೆ ಇರಡಿ. ಜಾಗ ಗೊತ್ತಗ್ದೇ ಹೋಕು ನಾನು ಮಗ್ಳ ಕಳಸ್ತೆ ಜೊತೆಗೆ..." ಎಂದು ಅತ್ತೆ ಹೇಳಿದಾಗಲೇ ನಾನು ಸಮಯ ನೋಡಿದ್ದು.. ಗಂಟೆ ಏಳಾಗಿ ಹೋಗಿತ್ತು. ಹೊರಗೆ ಕತ್ತಲು ತುಂಬಿತ್ತು.. ದೂರದಲ್ಲೇನೋ ಗುಡುಗಿದ ಸದ್ದು ಮಳೆಯಾರ್ಭಟಕ್ಕೆ ಮುನ್ನಚ್ಚರಿಕೆ ನೀಡುವಂತಿತ್ತು. ನನಗೋ ಮೊದಲೇ ಗುಡುಗು ಮಿಂಚು ಎಂದರೆ ಅವ್ಯಕ್ತ ಭಯ. ಜೊತೆಗೆ ಅಷ್ಟು ದೂರ ಹೋಗಬೇಕು. ರಸ್ತೆ ತುಂಬಾ ತಿರುವುಗಳಿಂದ ಬೇರೆ ಕೊಂಡಿತ್ತು. ಅಮ್ಮನನ ಎಚ್ಚರಿಕೆಯ ಮಾತುಗಳೂ ತಲೆಕೊರೆಯುತ್ತಿದ್ದವು.. ಆದರೂ ಅವರು ಹೇಳಿದ ಮೇಲೆ ದೇವಸ್ಥಾನಕ್ಕೆ ಹೋಗದಿರುವುದೂ ಸಲ್ಲ, ಹೋಗಿ ಒಂದು ಹಣ್ಣು-ಕಾಯಿಯನ್ನಾದರೂ ಮಾಡಿಸಿಕೊಂಡು ಬರುವ ಎಂದೆನಿಸಿದರೂ ಕಾಲದ ಪರಿಮಿತಿ ಕಟ್ಟಿಹಾಕಿತು. ತೀರಾ ಆಗದೆನ್ನಲಾಗದೇ ದಾಕ್ಷಿಣ್ಯದಿಂದ ಸುಮ್ಮನಾದೆ. ನನ್ನ ಮೌನವನ್ನೇ ಒಪ್ಪಿಗೆಯೆಂದರಿತೋ ಏನೋ ನನ್ನವರೂ ಸುಮ್ಮನಿದ್ದರು. ತಾಯಿಯ ಆಜ್ಞೆಯಂತೆ ಅವರ ಮಗಳು ನಮ್ಮೊಂದಿಗೆ ಬರಲು ಹೊರಟಳು. ಈಗ ನಾವು ದೇವಸ್ಥಾನಕ್ಕೆ ಹೋಗದೇ ಹಾಗೇ ಮರಳಲು ಸಾಧ್ಯವೇ ಇಲ್ಲದಂತಾಯಿತು. ಆಗ ಮುಂದೆ ಬಂದ ಅವರ ಮಗ "ನಾ ನಿಂಗ್ಳ ಜೊತೆ ಬತ್ತೆ.. ರಾಶೀ ಕತ್ಲಾಜು. ನನ್ನಾದ್ರೆ ಮನೆ ಹತ್ರನೇ ಬಿಡವು ಹೇಳಿಲ್ಲೆ..." ಎಂದು ಹೇಳುತ್ತಾ ತಂಗಿಯನ್ನು ತಡೆದು ತಾನೇ ಕಾರನ್ನೇರಿ ಬಿಟ್ಟ.......ಕಳೆಯುತ್ತಿದ್ದ ಸಮಯ ಹಾಗೂ ಹೆಚ್ಚುತ್ತಿದ್ದ ಗುಡುಗಿನ ಸದ್ದು ನನ್ನೊಳಗೆ ಕಳವಳವನ್ನುಂಟುಮಾಡಿದವು. ಎಲ್ಲವನ್ನೂ ಎಳ್ಳತ್ತೂರು ದೇವರಿಗೆ ಬಿಡುತ್ತೇನೆಂದುಕೊಂಡು, ನಾವು ಬರುವುದು ಹೊತ್ತಾಗುವುದೆಂದು ಅಮ್ಮನಿಗೆ ತಿಳಿಸೋಣವೆಂದು ಮೊಬೈಲ್ ತೆಗೆದರೆ NO SIGNAL!! ಇವರ ಗುರುಗಳ ಮನೆ ತುಸು ಹಳ್ಳಿಯಾದ್ದರಿಂದ ಸುಮಾರು ದೂರದವರೆಗೂ ಸಿಗ್ನಲ್ ಸಿಗುವಂತೆಯೂ ಇರಲಿಲ್ಲ!!

ಸುಮಾರು ಅರ್ಧ ಕಿಲೋಮೀಟರ್ ಬಂದೊಡನೆ ಎರಡು ರಸ್ತೆಗಳ ಕೂಡು ಸಿಕ್ಕಿತು. ಒಂದು ದೇವಸ್ಥಾನಕ್ಕೆ ಹೋಗುವುದು, ಇನ್ನೊಂದು ಮಂಗಳೂರಿನ ಕಡೆಗೆ ಹೋಗುವುದು. ತತ್‌ಕ್ಷಣ ಹಿಂದಿನ ಸೀಟಿನಲ್ಲಿದ್ದ ಗುರುಗಳ ಮಗ "ರಾಮಣ್ಣ ಇಲ್ಲೇ ನಿಲ್ಸು.." ಎಂದು ಹೇಳುತ್ತಾ ನಿಲ್ಲಿಸಿದ ಕೂಡಲೇ ಕಾರಿನಿಂದಿಳಿದು ಬಿಟ್ಟ. "ಅತ್ಗೆ ನಿಂಗವು ಮಂಗ್ಳೂರಿಗೆ ಹೊರಡಿ.. ರಾಶಿ ಲೇಟಾಜು. ಅವ್ಳು ಬಂದ್ರೆ ತಪ್ಪಿಸ್ಕಂಬ್ಲೆ ಆಗ್ತಿಲ್ಲೆ ಹೇಳೆ ನಾ ಬಂದೆ.. ನಾ ಇಲ್ಲೇ ಒಂದರ್ಧ ಗಂಟೆ ತಿರ್ಗಾಡಿ ಮನೆಗೆ ಹೋಗ್ತೆ ಗೊತ್ತಾಗಲ್ಲೆ.. ಸರಿ.. ರೈಟೋ....."ಎಂದು ಬಡಬಡನೆ ಮಾತಾಡಿ ದಡದಡನೆ ಕತ್ತಲೆಲ್ಲೋ ಮರೆಯಾಗಿಯೇ ಬಿಟ್ಟ. ಬಿಟ್ಟ ಕಣ್ಣುಗಳಿಂದ ಆಶ್ಚರ್ಯಚಕಿತಳಾಗಿ ಇವರನ್ನು ನೋಡಿದರೆ ಇವನ ಈ ಸ್ವಭಾವ ನನಗೆ ಮೊದಲೇ ಗೊತ್ತಿದೆ ಎನ್ನುವಂತೆ ಮುಗಳ್ನಗುತ್ತಿದ್ದರು! ನಮ್ಮ ಸಂದಿಗ್ಧತೆಯನ್ನರಿತೋ ಇಲ್ಲಾ ಕತ್ತಲಾವರಿಸಿದ್ದನ್ನು ನೋಡಿಯೋ ನಮ್ಮನ್ನು ದೇವಸ್ಥಾನಕ್ಕೆ ಕರೆದೊಯ್ಯದೇ ಮಂಗಳೂರಿಗೆ ಕಳುಹಿಸಿಬಿಟ್ಟ.

ಆದರೆ ಆ ಕ್ಷಣಕ್ಕೆ ನನಗೆ ಅವನು ಮಾಡಿದ್ದು ದೊಡ್ಡ ಉಪಕಾರವೆಂದೆನಿಸಿತಾದರೂ ಕ್ರಮೇಣ ಪಾಪಪ್ರಜ್ಞೆ ಮನಸ್ಸನ್ನಾವರಿಸಿಕೊಳ್ಳತೊಡಗಿತು. "ಛೆ! ನಾವು ತುಸು ಮೊದಲೇ ಮನೆಯಿಂದ ಹೊರಡಬೇಕಿತ್ತು.. ಇಲ್ಲಾ ನೇರ ಇಲ್ಲಿಗೇ ಬರಬೇಕಾಗಿತ್ತು.. ಮೊದಲೇ ಹೇಳಿದ್ದರೆ ಬೇಗ ಹೊರಟು ದೇವಸ್ಥಾನವನ್ನು ಹೊಕ್ಕಿಯೇ ಹೊಗಬಹುದಾಗಿತ್ತು.. ಛೇ.. ನಮ್ಮ ಒಳಿತಿಗಾಗಿ ಸಲಹೆಯನ್ನಿತ್ತ ಅತ್ತೆಗೆ ನಾವು ವಂಚನೆ ಮಾಡಿದೆವೇನೋ.."ಎಂದೆಲ್ಲಾ ಕೊರಗುತ್ತಲೇ....ನನ್ನವರ ತಲೆಯನ್ನು ಕೊರೆಯುತ್ತಲೇ ಮನೆಗೆ ಬಂದೆ.

ಇದಾದ ಅದೆಷ್ಟೋ ದಿನಗಳವರೆಗೂ ದೇವಸ್ಥಾನವನ್ನು ಭೇಟಿನೀಡದೇ ಬಂದೆವಲ್ಲಾ....ಹಿರಿಯರ ಉಪದೇಶವನ್ನು ಕಡೆಗಣಿಸಿದೆವಲ್ಲಾ.. ತಿಳಿಯದಂತೆ ಮೋಸಮಾಡಿದೆವಲ್ಲಾ.. ಎಂಬ ಭಯ, ಆತಂಕಗಳು ನನ್ನನ್ನು ಕಾಡುತ್ತಲೇ ಇತ್ತು. ಆಗೆಲ್ಲಾ ಮನಸ್ಸು.. ಹಾಗೆ ಮಾಡುವುದು ಅನಿವಾರ್ಯವಾಗಿತ್ತು.. ಸಂದಿಗ್ಧತೆ ಇತ್ತು. ಹಾಗಾಗಿ ಆ ರೀತಿ ಮಾಡಬೇಕಾಯಿತು.. ತಪ್ಪೇನಿಲ್ಲ ಎಂದೆಲ್ಲಾ ಸಮಜಾಯಿಷಿ, ಸಮಾಧಾನಗಳನ್ನು ನೀಡುತ್ತಿತ್ತು. ಆದರೂ ಪಾಪಪ್ರಜ್ಞೆ ಮಾತ್ರ ಮರೆಯಾಗಲೇ ಇಲ್ಲ. "ಆಗ ಆ ರೀತಿ ನಮ್ಮನ್ನು ಹೋಗಲು ಅವರ ಮಗ ಬಿಡದೇ ಹೋಗಿದ್ದರೆ ದೇವಸ್ಥಾನಕ್ಕೆ ಹೋಗಿಯೇ ಮರುಳುತ್ತಿದ್ದೆವು.. ಈ ರೀತಿಯ ಭಯ.. ಪಶ್ಚಾತ್ತಾಪಗಳಿಗೆ ಆಸ್ಪದವೇ ಇರುತ್ತಿರಲಿಲ್ಲ.. ಯಾಕಾದರೂ ನಮ್ಮನ್ನು ಹೋಗಗೊಟ್ಟನೋ ಎಂದು.. ನಮಗೆ ಸಹಾಯ ಮಾಡಿದ ಇವರ ಗುರುಗಳ ಮಗನನ್ನೂ ಬೈದುಕೊಂಡದ್ದಿದೆ. ಆದರೆ ಆ ರೀತಿ ಮಾಡಿದ್ದು ನಮ್ಮ ಮನಸ್ಥಿತಿಯನ್ನರಿತೇ ಎನ್ನುವುದೂ ತಿಳಿದಿತ್ತು. ಆ ನಂತರ ಎಷ್ಟೋ ಸಲ ಅತ್ತೆಗೇ ಕಾಲ್ ಮಾಡಿ ಸುಳ್ಳನ್ನು ಹೇಳಬೇಕೆಂದುಕೊಂಡೆ. ಆದರೆ ಹಾಗೆ ಮಾಡಲು ಏನೋ ಅಳುಕು.. ಅದೂ ಅಲ್ಲದೆ ಅವರ ಮಗನನ್ನೂ ಸಿಕ್ಕಿಸಿಹಾಕಿದಂತಾಗುವುದೆಂದು ಸುಮ್ಮನಿದ್ದುಬಿಟ್ಟೆ.(ಆದರೆ ನಮ್ಮೀ ತಪ್ಪಿನಲ್ಲಿ ಸಹಭಾಗಿಯಾಗಿರುವ ಅವರ ಮಗನಿಗೆ ಈ ಘಟನೆ ನೆನಪಿದೆಯೋ ಇಲ್ಲವೋ ತಿಳಿಯದು :) )

ಕಾಲನ ಮಹಿಮೆಯಿಂದ ಈ ಘಟನೆ ಮನದ ಮೂಲೆಯಲ್ಲೆಲ್ಲೋ ಅಡಗಿಕೊಂಡರೂ ಆಗಾಗ ಹಸಿರಾಗಿ ಉಸಿರಾಡುತ್ತಲೇ ಇರುತ್ತದೆ. ಆಗೆಲ್ಲಾ ಪಾಪಪ್ರಜ್ಞೆಯೂ ಕಾಡುತ್ತದೆ. ಅದಕ್ಕಾಗಿಯೇ ಈಗ ಈ ಬರಹದ ಮೂಲಕ ಪ್ರಾಮಾಣಿಕವಾಗಿ ನಮ್ಮೆಲ್ಲಾ ತಪ್ಪನ್ನು ಮುಂದಿಟ್ಟು ಹಗುರಾಗುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ. ಪ್ರಾಮಾಣಿಕತೆಯಿಂದ ಪಶ್ಚಾತ್ತಾಪ ಪಟ್ಟರೆ ಕ್ಷಮಾದಾನ ಸಿಕ್ಕಿದಂತೇ ಎಂದು ಕೇಳಿರುವೆ. ಆದರೂ ನೇರವಾಗಿಯಲ್ಲದಿದ್ದರೂ ಈ ರೀತಿ ಬಹಿರಂಗವಾಗಿ ಅಂದು ನಮ್ಮಿಂದಾದ ತಪ್ಪಿಗೆ ಅತ್ತೆಯಲ್ಲಿ ಮನಃಪೂರ್ವಕವಾಗಿ ಕ್ಷಮೆಕೋರುತ್ತಿದ್ದೇವೆ. ಸಾಧ್ಯವಾದರೆ ಆದಷ್ಟು ಬೇಗ ಪುಟ್ಟಿಯ ಸಮೇತ ಎಳ್ಳತ್ತೂರಿಗೆ ಹೋಗಿ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂಬ ಆಲೋಚನೆಯೂ ಇದೆ...(ತಪ್ಪು)ಕಾಣಿಕೆ ಹಾಕಿಬರಲು.

-ತೇಜಸ್ವಿನಿ ರಾಮಕೃಷ್ಣ ಹೆಗಡೆ.

ಗುರುವಾರ, ಅಕ್ಟೋಬರ್ 16, 2008

ಅರ್ಪಣೆ


ಭಾವಪೂರ್ಣ (ಕವ)ನಮನ


ಬಲು ಸುಂದರ, ಸುಭದ್ರ ಈ ಜಗತ್ತು
ತಾಯ ಅಪ್ಪುಗೆಯಲ್ಲಿರುವಷ್ಟು ಹೊತ್ತು
ನಾಳೆಯ ಹಂಗಿಲ್ಲ, ಇಂದಿನ ಪರಿವಿಲ್ಲ,
ಇರುವುದೊಂದೇ ಅರಿವು ಆ ಹೊತ್ತು
ಅಮ್ಮನ ಮಡಿಲೊಳಗಡಗಿಹುದು ಜಗತ್ತು.

ತನ್ನೊಳಗಿನ ಕಸುವನ್ನೆಲ್ಲಾ ಹಿಂಡಿ
ಪ್ರೇಮ ಸುಧೆಯ ಎದೆಯೊಳನಿಟ್ಟು
ಹನಿ ಹನಿಯಾಗಿ ಹಣಿಸಿ, ತಣಿಸಿ
ತಬ್ಬಿ ಸಿಹಿ ಮುತ್ತುಗಳನಿಟ್ಟು
ನೀನಿರುವೆ ಎನ್ನುಸಿರೊಳಗೆ ಕಂದಾ....
ನಿನ್ನಿಂದ ಈ ಬಾಳು ಪೂರ್ಣವೆಂದ,
ತಾಯ ಒಲುಮೆ ಪಡೆವಷ್ಟು ಹೊತ್ತು
ಬಲು ಸುಂದರ, ಸುಭದ್ರ ಈ ಜಗತ್ತು.

ಚಳಿಗೆ, ಮಳೆಗೆ ತನ್ನ ಮೈಯನೂಡ್ಡಿ,
ತಾ ಹಸಿದು, ಕುಡಿಗೆ ತುತ್ತನಿತ್ತು
ಅತ್ತಾಗ ಲಾಲಿಹಾಡು ಹಾಡಿ,
ಚಂದಿರನ ಕಥೆಯ ಹೇಳಿ ರಮಿಸಿ,
ಸವಿಗನಸ ಚಿತ್ತಾರವ ಬರೆದು,
ಅಂತಃಶಕ್ತಿಯನು ತುಂಬಿ ಕಾಯ್ವ,
ಜನನಿ ಬಳಿಯಲಿರುವಷ್ಟು ಹೊತ್ತು
ಅದೆಷ್ಟು ಸುಂದರ, ಸುಭದ್ರ ಈ ಜಗತ್ತು !!!

**nostalgia ಬ್ಲಾಗ್‌ನಲ್ಲಿದ್ದ Mother ಎನ್ನುವ ಫೋಟೋವನ್ನು ನೋಡಿದಾಗ ಮೂಡಿದ ಕವನ.**




ಶನಿವಾರ, ಅಕ್ಟೋಬರ್ 4, 2008

ಕಥೆ

ಈ ಕಥೆಯನ್ನು ಇಲ್ಲಿಯೂ ನೋಡಬಹುದು. ಪ್ರಕಟಿಸಿದ ದಟ್ಸ್‌ಕನ್ನಡಕ್ಕೆ ಧನ್ಯವಾದಗಳು.
ಇರುವುದೆಲ್ಲವ ಬಿಟ್ಟು..
ಒಂದರ ಬೆನ್ನಹಿಂದೆ ಇನ್ನೊಂದು....ಶಿಸ್ತಿನ ಸಿಪಾಯಿಯಂತೆ ಅತ್ತಿತ್ತ ನೋಡದೆ, ಯಾವುದೇ ಸದ್ದಿಗೂ ವಿಚಲಿತವಾಗದೆ ಮರದ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದಾತುದಿಗೆ ಸಾಲುಗಟ್ಟಿ ಹೋಗುತ್ತಿದ್ದ ಇರುವೆಗಳನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಂತೆ ಪೂರ್ಣಳ ತಲೆಯೊಳಗೊಂದು ಯೋಚನೆ ಬಂತು. ತಕ್ಷಣ ಇರುವೆಯ ಒಂದು ಸಾಲಿನ ನಡುವೆ ತನ್ನ ತೋರುಬೆರಳನ್ನಿಟ್ಟು ಅವುಗಳ ಪಯಣಕ್ಕೆ ತಡೆಹಾಕಿ ಕುತೂಹಲದಿಂದ ನೋಡತೊಡಗಿದಳು. ತಮ್ಮ ಕೆಲಸಕಾರ್ಯದಲ್ಲಿ ಇದೆಂತಹ ಅಡ್ಡಿ ಬಂತಪ್ಪ ಎಂದು ತುಸು ತಡಬಡಸಿ ಚೆಲ್ಲಾಪಿಲ್ಲಿಯಾದ ಇರುವೆಗಳು ಕ್ಷಣದಲ್ಲೇ ಸಾವರಿಸಿಕೊಂಡು, ಹೆದರದೆ ಮತ್ತೆ ಅದೇ ರೀತಿ ಸಾಲುಗಟ್ಟಿ, ಒಗ್ಗಟ್ಟಿನಲ್ಲಿ ಶಿಸ್ತಿನಿಂದ ಆಕೆಯ ಬೆರಳನ್ನೇರಿ ದಾಟಿ ಹೋಗತೊಡಗಿದವು.
‘ನಮ್ಮ ಮನಸ್ಸೂ ಈ ಇರುವೆಗಳಂತಾಗಿದ್ದರೆ ಎಷ್ಟು ಚೆನ್ನಾಗಿತ್ತು!! ಬಂದ ಕಷ್ಟಗಳನ್ನೆಲ್ಲಾ ಎಡರು-ತೊಡರುಗಳನ್ನೆಲ್ಲಾ ಹೀಗೇ ಇಷ್ಟೇ ಕ್ಷಿಪ್ರವಾಗಿ ದಾಟಿ, ನಿರಾಳವಾಗಿ ಮುಂದುವರಿಯುವಂತಾಗಿದ್ದರೆ... ಇಷ್ಟು ಸಣ್ಣ ಜೀವಿಯಲ್ಲಿರುವ ಧೃಢತೆ ನಮ್ಮಲ್ಲೇಕೆ ಕಾಣದೋ..?’ "ಪೂರ್ಣತ್ತೆ.. ನಾ ಒಂದು ಒಗ್ಟು ಕೇಳ್ತಿ ನೀ ಹೇಳು ನೋಡನಾ.. ಹೇಳ್ದ್ರೆ ನೀ ಗೆದ್ದೆ.. ಇಲ್ದೆ ಹೋದ್ರೆ ನೀ ಸೋತೆ ಅಕಾ?" ಅಲ್ಲೇ ಪೇರಳೆ ಹಣ್ಣಿನ ಮರವನ್ನೇರಿ ಕಾಯಿ ಕೀಳುತ್ತಿದ್ದ ಸುಜಾತಳ ಮಾತುಗಳು ಇರುವೆಯ ಸಾಲನ್ನೇನೂ ತುಂಡರಿಸದಿದ್ದರೂ ಪೂರ್ಣಳ ವಿಚಾರ ಸರಣಿಗೆ ತಡೆ ಹಾಕಿದವು."ಪುಟ್ಟಿ ಮೊದ್ಲು ನೀ ಮರದಿಂದ ಕೆಳ್ಗೆ ಇಳಿ.. ಅಣ್ಣಯ್ಯ ಏನಾರೂ ನೋಡಿರೆ ನಂಗೆ ಬೈತ. ನೀ ಕೆಳ್ಗೆ ಬಂದು ಒಗ್ಟ ಹೇಳು.. ನೋಡನ ಯಾರು ಗೆಲ್ತ ಹೇಳಿ" ಅತ್ತೆಯ ಮಾತಿನಿಂದ ಉತ್ತೇಜಿತಳಾದ ಪೋರಿ ಛಂಗನೆ ಒಂದೇ ನೆಗೆತದಲ್ಲಿ ಹಾರಿ ಅವಳ ಬಳಿ ಬಂದಳು."ಅಯ್ಯೋ ಪೂರ್ಣತ್ತೆ ಅಪ್ಪಯ್ಯ ಪೇಟಿಗೆ ಹೋಜ್ನಲೆ..ಅದೇ ನಿನ್ನ ಗೆಳತಿ ಧೃತಿಯಕ್ಕನ ಕರ್ಕ ಬಪ್ಪಲೆ.. ಅದ್ಕೇಯಾ ನಾ ಹತ್ತಿದ್ದು ಗೊತ್ತಾತಾ? ಸರಿ ಬಿಡು ಈಗ ಒಗ್ಟ ಕೇಳು..
ಮರದೊಳಗೆ ಮರ ಹುಟ್ಟಿ
ಮರ ಚಕ್ರ ಕಾಯಾಗಿ
ತಿನ್ನಲಾಗದ ಹಣ್ಣು ಬಲು ರುಚಿ- ಇದ್ರ ಬಿಡ್ಸು ನೋಡನಾ." ಎಂದು ಉತ್ತರಕ್ಕಾಗಿ ಪೂರ್ಣಳನ್ನೇ ನೋಡತೊಡಗಿದಳು ಸುಜಾತ. ಊಹೂಂ..ಎಷ್ಟೇ ತೆಲೆ ಓಡಿಸಿದರೂ ಪೂರ್ಣಳಿಗೆ ಹೊಳೆಯಲಿಲ್ಲ.. ಹೆಚ್ಚು ಯೋಚಿಸಲು ಮನಸ್ಸು ನಿರುಮ್ಮಳವೂ ಆಗಿರಲಿಲ್ಲ. ಹೆಚ್ಚು ಪ್ರಯತ್ನಿಸದೇ ಸೋಲೊಪ್ಪಿಕೊಂಡು ಅವಳಲ್ಲೇ ಉತ್ತರ ಕೇಳಿದಳು. ಆದರೆ ಬಡಪಟ್ಟಿಗೆ ಉತ್ತರ ಹೇಳಲೊಪ್ಪದ ಸುಜಾತ "ಅತ್ತೆ ಸೋತೆ ಕುಂಯ್ಯ ಹೇಳು.. ಹೇಳ್ತಿ" ಎನ್ನಲು ಮುಕ್ತವಾಗಿ ನಕ್ಕು ಬಿಟ್ಟಳು ಪೂರ್ಣ. "ಆತು ಮಹಾತಾಯಿ ನಾ ಸೋತೆ ಕುಂಯ್ಯಿ.. ಸಮಾಧಾನಾನ ಈಗ? ಸರಿ ಉತ್ತರ ಹೇಳು" ಎನ್ನಲು ಸುಜಾತ ತನ್ನ ಗೆಲುವಿನ ಪರಮಾನಂದದಲಿ ತಪ್ಪಾಳೆ ತಟ್ಟಿ ಕುಣಿಯುತ್ತಾ" ಅಯ್ಯೋ ಪದ್ದತ್ತೆ ಅಷ್ಟೂ ಗೊತ್ತಾಜಿಲ್ಯ ನಿಂಗೆ.. ಈ ಒಗ್ಟಿನರ್ಥ ‘ಮಗು’...ಹ್ಹೇ ಹ್ಹೇ..ಕೀಹಲಾಲೋ.. ನೀ ಸೋತೆ.. ಹೇ ಪಾರು ಪೂರ್ಣತ್ತೆ ಸೋತೋತು. ಪೂರ್ಣತ್ತೆ ಸೋತೋತು" ಎಂದು ಕೂಗುತ್ತಾ ಪಕ್ಕದ ಭಟ್ಟರ ಮನೆಯ ಪಾರ್ವತಿಯ ಜೊತೆ ಆಡಲು ಓಡಿದಳು. ದಣಪೆ ಹಾರಿ ಜಿಗಿಯುತ್ತಾ ಓಡಿತ್ತಿದ್ದ ಅವಳನ್ನೇ ಸ್ತಬ್ಧಳಾಗಿ ನೋಡಿದಳು ಪೂರ್ಣ. ಎದೆಯೊಳಗೆಲ್ಲೋ ಚೂರಿಯಿಂದ ತಿವಿದಂತಹ ಅನುಭವ...ಕಿವಿಯೊಳಗೆಲ್ಲಾ "ಪೂರ್ಣತ್ತೆ ಸೋತೋತು.. ಪೂರ್ಣತ್ತೆ ಸೋತೋತು" ಎಂಬ ಕೂಗಿನದೇ ಅನುರಣನ.
- 2 -
ದಣಪೆಯ ಮುಂದೆ ಬಂದು ನಿಂತ ಕಾರಿನಿಂದಿಳಿದ ಆತ್ಮೀಯ ಗೆಳತಿ ಧೃತಿಯನ್ನು ಕಂಡು ಪೂರ್ಣಳ ಮುಖ ಪೂರ್ಣ ಚಂದಿರನಂತಾಯಿತು. ಅರೆಕ್ಷಣ ಇಬ್ಬರೂ ಒಬ್ಬರನ್ನೊಬ್ಬರನ್ನು ನೋಡುತ್ತಾ ನಿಂತು ಬಿಟ್ಟರು. ಸುಮಾರು ೪ ವರ್ಷಗಳೇ ಕಳೆದುಹೋದವು ಒಬ್ಬರನ್ನೊಬ್ಬರು ನೋಡದೆ.. ಆಗಾಗ ಈ-ಮೈಲ್, ಫೋನ್ ಗಳ ಮೂಲಕ ಮಾತ್ರ ಕುಶಲೋಪರಿ ನಡೆಯುತ್ತಿತ್ತಷ್ಟೇ!
ಧೃತಿ ಹಾಗೂ ಪೂರ್ಣ ಮೈಕ್ರೋ ಬಯಾಲಜಿ ಮಾಡಿದ್ದು ಒಟ್ಟಿಗೇಯೇ. ಮೊದಲ ವರ್ಷದಲ್ಲೇ ಅಂಕುರಿಸಿದ ಇವರ ಸ್ನೇಹ ಓದು ಮುಗಿಯುವುದರೊಳಗೆ ತುಂಬಾ ನಿಕಟವಾಗಿಸಿತ್ತು. ಸ್ವಭಾವತಃ ಮೃದು, ಭಾವಜೀವಿ, ಸೂಕ್ಷ್ಮ ಸ್ವಭಾವದವಳಾಗಿದ್ದ ಪೂರ್ಣ ಅವಳಿಗೆ ವಿರುದ್ಧ ಸ್ವಭಾವದ, ತೀರಾ ವಾಸ್ತವವಾದಿಯಾಗಿದ್ದ ಧೃತಿಯೆಡೆಗೆ ಆಕರ್ಷಿತಳಾಗಿದ್ದು ಆಶ್ಚರ್ಯವೇ. ಪೊಸಿಟಿವ್ ಆಂಡ್ ನೆಗೆಟಿವ್ ಅಟ್ರೇಕ್ಟ್ಸ್ ಅನ್ನುವುದು ಇದಕ್ಕೇನೋ. ಕೋರ್ಸ್ ಮುಗಿದ ನಂತರ ಒಂದು ವರ್ಷ ಇಬ್ಬರೂ ಒಂದೇ ಫರ್ಮ್‌ನಲ್ಲಿ ಕೆಲಸವನ್ನೂ ಮಾಡಿದ್ದರು. ತದನಂತರ ಇನ್ನೂ ಹೆಚ್ಚಿನ ಕಲಿಕೆಗೋಸ್ಕರ ಧೃತಿ ಮುಂಬಯಿಗೆ ಹೋದರೆ ಪೂರ್ಣ ತನ್ನ ಸಹೋದ್ಯೋಗಿ ಸಂದೀಪನನ್ನು ಮೆಚ್ಚಿ ಮದವೆಯಾಗಿ ಬೆಂಗಳೂರಿನಲ್ಲೇ ನೆಲೆಸಿದಳು. ಸುಮಾರು ೪ ವರ್ಷಗಳ ಹಿಂದೆ ಪೂರ್ಣಳ ಮದುವೆಯಲ್ಲಿ ಆಕೆಯನ್ನು ನೋಡಿದ್ದ ಧೃತಿ ಈಗಲೇ ಮತ್ತೆ ಅವಳನ್ನು ಕಾಣುತ್ತಿರುವುದು. ಅದೂ ಪೂರ್ಣಳೇ ಆಕೆಯನ್ನು ಒತ್ತಾಯಮಾಡಿ ಕರೆಸಿಕೊಂಡಿದ್ದರಿಂದ!
"ಪ್ಲೀಸ್ ಧೃತಿ ನೀ ಬರ್ದೆ ಹೋದ್ರೆ ನಾ ನನ್ನನ್ನೇ ಕಳ್ಕೊಂಡು ಬಿಡ್ತೀನಿ ಕಣೆ. ಇನ್ಯಾವತ್ತೂ ನಿನ್ನಲ್ಲಿ ಏನನ್ನೂ ಕೇಳೊಲ್ಲ... ಇದೊಂದ್ಸಲ ನಂಗೋಸ್ಕರ ಬಾ ಪ್ಲೀಸ್. ನಿನ್ನ ಬರುವಿಕೆನೇ ಪ್ರತಿಕ್ಷಣ ಕಾಯ್ತಾ ಇರ್ತೀತಿ. ಈಗ್ಲೇ ನನ್ನ ಏನೂ ಕೇಳ್ಬೇಡ. ಫೋನ್‌ನಲ್ಲಿ ಎಲ್ಲಾ ಹೇಳೊಕಾಗೊಲ್ಲ.. ಹೇಳೋ ಸ್ಥಿತಿಲೂ ನಾನಿಲ್ಲ. ನೀ ಆದಷ್ಟು ಬೇಗ ಬಾ ಅಷ್ಟೇ. ಬೇಡ ಬೆಂಗಳೂರಿಗೆ ಬೇಡವೇ ಬೇಡ. ಶಿರಸಿಗೇ ಬಾ. ನಾ ನಾಳೆನೇ ಭೈರುಂಬೆಗೆ ಹೊರ್ಟಿದ್ದೀನಿ. ನೀನೂ ಸೀದಾ ಅಲ್ಲೇ ಬಾ..ಮತ್ತೆ ದಯಮಾಡಿ ಸಂದೀಪ್‌ಗೆ ಫೋನ್‌ ಮಾಡಿ ಏನನ್ನೂ ಕೇಳ್ಬೇಡ. ಬರ್ತೀಯಾ ತಾನೆ??" ಎಂದು ತುಂಬಾ ಗೋಗರೆದು ಫೋನ್ ಇಟ್ಟುಬಿಟ್ಟಿದ್ದಳು ಪೂರ್ಣ. ಅವಳ ಮಾತೊಳಗಿದ್ದ ಆತಂಕ, ನೋವು, ಅಸಹಾಯಕತೆಯ ಕಂಡು ತುಂಬಾ ಆಶ್ಚರ್ಯ, ಆತಂಕಗಳಾಗಿದ್ದು ಸುಳ್ಳಲ್ಲ. ಒಂದು ಕ್ಷಣ ಸಂದೀಪನನ್ನೇ ಕೇಳೋಣ ಎಂದೂ ಯೋಚಿಸಿದ್ದಳು. ಆದರೆ ಆಕೆಯ ಎಚ್ಚರಿಗೆ ಅವಳನ್ನು ತಡೆಯಿತು. ಹೆಚ್ಚು ಯೋಚಿಸದೇ ಶಿರಸಿಗೆ ಟಿಕೆಟ್ ಬುಕ್ ಮಾಡಿದ್ದಳು.
"ಎಂತ ಕೂಸೆ ಇದು?.. ಆವಾಗಿಂದ ಅದ್ರನ್ನ ಇಲ್ಲೇ ನಿಲ್ಸಕಂಡು ಸುಮ್ನೆ ನೋಡ್ತಾ ಇದ್ದೆ.. ಒಳ್ಗಾರೂ ಕರ್ಕ ಹೋಗು ಅಮೇಲೆ ನೋಡ್ಕ್ಯತ್ತಾನೇ ಇರ್ಲಕ್ಕಿ ಒಬ್ರನ್ನೊಬ್ರು" ಎಂದು ಛೇಡಿಸಿದ ದಿವಾಕರಣ್ಣನ ಮಾತಿಗೆ ನಾಚಿದ ಪೂರ್ಣ ಧೃತಿಯನ್ನಪ್ಪಿ ಅವಳಿಗಾತುಕೊಂಡೇ ಒಳನಡೆದಳು.
"ಏನೇ ಧೃತಿ, ಮುಂಬಯಿ ಗಾಳಿ ತುಂಬಾ ಚೆನ್ನಾಗಿ ತಾಗಿದ ಹಾಂಗಿದೆ. ಒಳ್ಳೆ ಮೈಕೈ ತುಂಬಿಕೊಂಡಿದೀಯ ನೋಡು.. ನಾವೆಲ್ಲಾ ಮರ್ತೇ ಹೋದೆವು ನಿಂಗೆ.." ಶಾರದತ್ತಿಗೆಯ ತಮಾಷೆಗೆ ನಕ್ಕು ಬಿಟ್ಟಳು ಧೃತಿ. "ಅತ್ಗೆ.. ಅದ್ಕೇ ನೋಡಿ ಇನ್ನೂ ಸ್ವಲ್ಪ ದಪ್ಪ ಅಗೋಣಾ ಅಂತ ನೆನಪು ಮಾಡಿಕೊಂಡು ಬಂದೆ.. ಎಲ್ಲಿ ನನ್ನ ಇಷ್ಟದ ತೆಳ್ಳೇವು ಕಾಯಿ ಚಟ್ನಿ?" ಎಂದು ಒಲೆಯ ಮುಂದೇಯೇ ಕೂರಲು ಪೂರ್ಣಳೂ ಜೊತೆ ಸೇರಿದಳು. ನಗು, ಹರಟೆ, ಕುಶಲೋಪರಿಯಲ್ಲಿ ತಿಂಡಿ ಮುಗಿಸಿದ್ದಾಯಿತು. ತಿನ್ನುತ್ತ, ಮಾತಾಡುತ್ತಲೇ ಧೃತಿ ಗೆಳತಿಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಎಲ್ಲೂ ಎನೂ ಎದ್ದು ಕಾಣುವ ಸಮಸ್ಯೆ ಕಾಣುತ್ತಿಲ್ಲ! ಆದರೆ ಎಂದಿನ ಕಳೆಯಾಗಲೀ, ನಿರಾಳತೆಯಾಗಲೀ ಪೂರ್ಣಳ ಮುಖದಲ್ಲಿ ಕಾಣಲು ಸಿಗಲಿಲ್ಲ. ಕಣ್ಣೊಳಗೇನೋ ನೋವು.
ಜಗುಲಿಯಲ್ಲಿ ಫೋನ್ ಸದ್ದಾಗಲು ಧೃತಿಯನ್ನಾತು ಕುಳಿತಿದ್ದ ಪೂರ್ಣ ನೇರವಾದಳು. ಅವಳ ಮುಖದಲ್ಲುಂಟಾದ ಹಠಾತ್ ಬದಲಾವಣೆ ಕಂಡು ಧೃತಿಗೆ ಆಶ್ಚರ್ಯವಾಯಿತು. ಶಾರದತ್ತಿಗೆಯಲ್ಲೂ ಎನೋ ಕಳವಳ...ಕೆಲ ನಿಮಿಷಗಳಲ್ಲೇ ಒಳ ಬಂದ ದಿವಾಕರಣ್ಣನ ಮುಖವೂ ಇಳಿದಂತೆ ಕಂಡಿತು ಧೃತಿಗೆ. "ಪೂರ್ಣ ಸಂದೀಪ್ ಫೋನ್ ಮಾಡಿದ್ದ. ಲೈನ್‌ನಲ್ಲೇ ಇದ್ದ.. ಮಾತಾಡ್ತ್ಯ?" ಅಣ್ಣನ ಮಾತಿಗೆ ತಲೆ ತಗ್ಗಿಸಿದ ಪೂರ್ಣ "ನಾ ಕಡಿಗೆ ಮಾಡ್ತಿ ಹೇಳು" ಎಂದಷ್ಟೇ ಉತ್ತರಿಸಿ ಬಟ್ಟಲು, ಲೋಟ ತೊಳೆಯುವ ನೆಪಮಾಡಿ ಬಚ್ಚಲಿಗೆ ನಡೆದಳು. ಅಷ್ಟೊತ್ತೂ ನಗುವಿನಿಂದ ನಿರಾಳತೆಯಿಂದ ಕೂಡಿದ್ದ ವಾತಾವರಣದಲ್ಲೀಗ ಬರಿಯ ಮೌನ ತುಂಬಿತ್ತು.
ಪೂರ್ಣಳ ಕೆಂಪಡರಿದ್ದ ಕಣ್ಣುಗಳು, ಕಳಾಹೀನ ಮುಖ ನಿಜ ಕತೆ ಸಾರುತ್ತಿದ್ದರೂ "ಒಂದು ಪ್ಲೇಟು, ಲೋಟ ತೊಳೆಯಲು ನಿಂಗೆ ಅರ್ಧಗಂಟೆ ಬೇಕೇನೇ ಹುಡ್ಗಿ? ಅದ್ಯಾವಾಗಿಂದ ಇಷ್ಟು ಸ್ಲೋ ಆದೆ ನೀನು" ಎಂದು ತುಸು ನಗಿಸಲೆತ್ನಿಸಿದಳು ಧೃತಿ. "ನೀ ಬೇಗ ಫ್ರೆಶ್ ಆಗಿ ರೆಡಿ ಆಗು ಧೃತಿ.. ನಾವು ತೋಟದ ತೋಡಿನ ಹತ್ರ ಸ್ವಲ್ಪ ಹೊತ್ತು ಹೋಗಿಬರೋಣ" ಎಂದು ಮೌನವಾಗಿ ಒಳಕೋಣೆಗೆ ಹೋದ ಪೂರ್ಣಳನ್ನು ಕಂಡು ಅವಳ ಕುತೂಹಲ ಮತ್ತೂ ಹೆಚ್ಚಿತು."ಅತ್ಗೆ ಊಟಕ್ಕೆ ಯಂಗಳ ಕಾಯಾಡಿ ಹೊತ್ತಾಗ್ಲಕ್ಕು. ಅಣ್ಣಂಗೂ ಹೇಳ್ಬುಡು..." ಎಂದು ಆಕೆಯ ಪ್ರತ್ಯುತ್ತರಕ್ಕೂ ಕಾಯದೇ ಒಂದು ರೀತಿ ಧೃತಿಯನ್ನು ದಬ್ಬಿಕೊಂಡೇ ಮೆಟ್ಟಿಲು ಇಳಿಯುತ್ತಿದ್ದ ನಾದಿನಿಯನ್ನೇ ದಿಟ್ಟಿಸಿದಳು ಶಾರದೆ. ಆಕೆಯ ಕೈಯೊಳಗಿದ್ದ ಗುಲಾಬಿ ಫೈಲ್ ನೋಡಿ ಎಲ್ಲವೂ ಅರ್ಥವಾಗಿ ನಿಟ್ಟುಸಿರು ಹೊರಬಂತು. ಹಿಂತಿರುಗಿದರೆ ಪತಿಯ ಕಣ್ಗಳೂ ಅವರನ್ನೇ ದಿಟ್ಟಿಸುತ್ತಿದ್ದವು. ಅದರೊಳಗೆ ತುಂಬಿದ ನೀರು ಕ್ರಮೇಣ ಶಾರದೆಯ ಕಣ್ಗಳನ್ನೂ ತುಂಬ ತೊಡಗಿದವು.
-3-
ಪೂರ್ಣಳ ತುಂಬಾ ಒತ್ತಾಯದ ಮೇರೆಗೆ ಮೈಕ್ರೋ ಬಯಾಲಜಿಯ ಕೊನೆಯ ವರ್ಷದ ರಜೆಯಲ್ಲಿ ಇಲ್ಲಿಗೆ ಬಂದಿದ್ದಳು ಧೃತಿ. ಅಡಿಕೆ ತೋಟ, ಎಲೆ ಬಳ್ಳಿ, ಏಲಕ್ಕಿ ಗಿಡಗಳ ಪರಿಮಳ, ಕರಿಮೆಣಸಿನ ಬಳ್ಳಿ, ತೋಟದ ತುದಿಯಲ್ಲಿದ್ದ ತೋಡು, ಮಾಳ, ತೋಡಿನಾಚೆಯ ಭಟ್ಟರ ಮನೆಯ ತೊಡೆದೇವ... ಅವರ ಟ್ರಾನ್ಸಿಸ್ಟರ್ ಹುಚ್ಚಿನ ಪ್ರಸಂಗ ಎಲ್ಲವೂ ಒಂದು ಸಿಹಿ ಕನಸಿನಂತೆ, ಸದಾ ನೆನಪಿಡಲು ಬಯಸುವ ಒಂದು ಅಪೂರ್ವ ಘಳಿಗೆಯಂತೆ ಅವಳ ಸ್ಮೃತಿಪಟಲದಲ್ಲಿ ಅಚ್ಚೊತ್ತಿದ್ದವು. ಎಂತಹ ಸುದಿನಗಳಾಗಿದ್ದವು! ಹಗಲು ಬೇಣ, ಗುಡ್ಡ ತೋಟಗಳನ್ನು ಸುತ್ತುವುದು.. ರಾತ್ರಿ ಅಟ್ಟದಮೇಲೆ ಮುಚ್ಚಿ ಮಲಗಿ ಪಿಸು, ಪಿಸು ಮಾತುಗಳನ್ನಾಡುತ್ತಾ ಯಾವುದೋ ಜಾವದಲ್ಲಿ ನಿದ್ರೆಗೆ ಜಾರುವುದು. ನಾಳಿನ ಹಂಗೇ ನಮಗಿಲ್ಲ ಎನ್ನುವಂತೆ ಕುಣಿದಾಡಿದ್ದರು. ತಿಂಗಳ ರಜೆ ದಿನದಲ್ಲೇ ಕರಗಿದಂತಹ ಅನುಭವವಾಗಿತ್ತು. ಹಿಂದಿನ ಮಧುರ ನೆನಪುಗಳನ್ನೆಲ್ಲಾ ನೆನೆದು ತುಸು ಗೆಲುವೆನಿಸಿ ಪೂರ್ಣಳ ಕಡೆ ತಿರುಗಿ ನೋಡಿದರೆ.. ಅವಳು ಮಾತ್ರ ಅವಳದೇ ಗುಂಗಿನಲ್ಲಿದ್ದಂತೆ ಕಂಡಳು. ನೋಟ ಕೆಳಗೆ ನೆಟ್ಟಿದ್ದರೂ ಮನಸ್ಸು ಏನೋ ಗಂಭೀರ ಯೋಚನೆಯಲ್ಲಿದ್ದಂತಿತ್ತು. ಹೊರಡುವಾಗ ಎದೆಗವಚಿಕೊಂಡಿದ್ದ ಗುಲಾಬಿ ಫೈಲ್ ಕಂಡು ತುಂಬಾ ಕುತೂಹಲವಾಗಿದ್ದರೂ ಏನನ್ನೂ ಕೇಳದೇ ಅವಳ ಜೊತೆ ಬಂದಿದ್ದಳು.
ದಣಪೆ ದಾಟಿ ತೋಟವನ್ನಿಳಿದು ಹತ್ತು ನಿಮಿಷ ನಡೆದರೆ ಆ ತುದಿಯಲ್ಲಿಯೇ ಕಾಣುವುದು ಹಳ್ಳ. ದಾರಿಯುದ್ದಕ್ಕೂ ಅವರಿಬ್ಬರನ್ನು ಮೌನ ಮಾತಾಡಿಸುತ್ತಾ ಬಂದಿತು. ಇವಳ ಜೊತೆ ಹಳೆಯ ಮಧುರ ನೆನಪುಗಳಿದ್ದರೆ, ಅವಳ ಜೊತೆ ಮುಂದಿನ ದಿನಗಳ ನೆನೆದರೇ ಉಂಟಾಗುವ ಅಧೀರತೆ.ಹಳ್ಳದ ಪಕ್ಕದಲ್ಲೇ ಇದ್ದ ಕಲ್ಲು ಹಾಸಿನ ಮೇಲೆ ಕುಳಿತರು. ಮೌನ ಮತ್ತೂ ಅಸಹನೀಯ ವೆನಿಸಿತು ಧೃತಿಗೆ. ಆಗ ತೋಡಿನಾಚೆಯ ಭಟ್ಟರ ಮೆನೆಯಿಂದ ತೇಲಿ ಬಂದ ಹಾಡಿನ ತುಣುಕನ್ನು ಕೇಳಿ ಬರಲು ಚುರುಕಾದಳು
ಬಾನಿನಲ್ಲಿ ಒಂಟಿ ತಾರೆ
ಸೋನೆಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತೂ ಮುಳುಗಿ
ಬಿಕ್ಕುತಿಹಳು ಯಾರೋ ನೀರೆ..

"ಹೇ ಪೂರ್ಣ ಕೇಳಿದ್ಯಾ ಇದು ನಿನ್ನ ಫೇವರೇಟ್ ಎನ್.ಎಸ್. ಅವರ "ಎಲ್ಲಿ ಜಾರಿತೋ ಮನವು.." ಹಾಡಲ್ಲವೇನೇ? ಮರ್ತು ಬಿಟ್ಯಾ? ನಾವು ಮೊದ್ಲು ಕೆಲ್ಸ ಮಾಡ್ತಿದ್ದ ಫರ್ಮನ ಫಂಕ್ಷನ್‌ನಲ್ಲಿ ನೀ ಇದೇ ಹಾಡನ್ನಲ್ವಾ ಹಾಡಿದ್ದು? ಎಷ್ಟು ಚೆನ್ನಾಗಿ ಹಾಡಿದ್ದೆ. ಇದೇ ಹಾಡಿಗೆ ಅಲ್ವಾ ನಮ್ಮ ಸಂದೀಪ ನಿಂಗೆ ಕ್ಲೀನ್ ಬೌಲ್ಡ್ ಆಗಿದ್ದು... ಹಂ ನಿಜ್ವಾಗ್ಲೂ ತುಂಬಾ ಸುಂದರ ಹಾಡು.. ಈಗ್ಲೂ ಒಮ್ಮೆ ಹಾಡು ನೋಡೋಣ.. ಅವ್ನಿಲ್ದೇ ಇದ್ರೆ ಏನಂತೆ ನಾನಿದ್ದೀನಲ್ಲಾ..ಆವಾಗಿನಿಂದ ಮುಖ ಕೆಳಗೆ ಹಾಕಿಕೊಂಡು ಅದೇನು ನೋಡ್ತಿದ್ದೀಯೋ ಏನೋ.." ಎಂದು ಛೇಡಿಸುತ್ತಾ ಅವಳ ಮುಖವನ್ನೆತ್ತಿ ನೋಡಿದರೆ ಕಣ್ಣು ಕೋಡಿ ಹರಿಸಿತ್ತು. ಥಟ್ಟನೆ ಅವಳ ಮಡಿಲಲಿ ಹುದುಗಿ ಬಿಕ್ಕಿ ಬಿಕ್ಕಿ ಅಳಹತ್ತಿದಳು ಪೂರ್ಣ.
ಒಂದೇ ಸಮನೆ ಅಳುತ್ತಿದ್ದ ಅವಳನ್ನು ಹೇಗೆ ಸಂತೈಸಬೇಕೆಂದೇ ತಿಳಿಯದಾಯಿತು ಧೃತಿಗೆ. ವಿಷಯ ಬೇರೆ ಗೊತ್ತಿರಲಿಲ್ಲ. ಕೊನೆಗೆ ಅವಳು ಅತ್ತು ಸಮಾಧಾನಿಸಿಕೊಂಡು ಮಾತಾಡಲಿ ಎಂದು ಅವಳನ್ನು ಸುಮ್ಮನೆ ಅಳಲು ಬಿಟ್ಟುಬಿಟ್ಟಳು. ಕೈ ಪೂರ್ಣಳ ತಲೆ ನೇವರಿಸುತ್ತಿತ್ತು. ಬೆಳಗ್ಗಿನಿಂದ ಕಟ್ಟಿದ ಮೋಡ ಮಧ್ಯರಾತ್ರಿ ಸುರಿದು ಬರಿದಾಗುವಂತೆ ಮನದೊಳಗಿನ ಭಾರವನ್ನೆಲ್ಲಾ ಹೊರಹಾಕಿ ತುಸು ಸುಧಾರಿಸಿಕೊಂಡ ಪೂರ್ಣ ತೋಡಿನ ನೀರಿನಲ್ಲಿ ಮುಖ ತೊಳೆದುಕೊಂಡು ಕುಳಿತಳು. ಪಕ್ಕದಲ್ಲೇ ಇಟ್ಟಿದ್ದ ಫೈಲ್ ಅನ್ನು ಧೃತಿಗೆ ಕೊಡಲು, ಮರು ಪ್ರಶ್ನಿಸದೇ ಅದನ್ನೆತ್ತಿ ಕೊಂಡು ಓದತೊಡಗಿದಳು ಧೃತಿ. ಹೆಚ್ಚು ಸಮಯವೇನೂ ಬೇಕಾಗಲಿಲ್ಲ ಅವಳಿಗೆ ಪೂರ್ಣಳ ಸಮಸ್ಯೆ ಅರಿಯಲು. ಇಷ್ಟೊತ್ತೂ ಅವಳ ತೆಲೆಯೊಳಗಿದ್ದ ಕುತೂಹಲಕ್ಕೆ, ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದರೂ ಅದರ ಜಾಗದಲ್ಲೀಗ ಹೊಸ ಸಂಶಯ, ಪ್ರಶ್ನೆಗಳು ಆಕ್ರಮಿಸಿಕೊಂಡವು.
"ಏನೇ ಪೂರ್ಣ ಇದು.. ಈ ವಿಷಯಕ್ಕೇನಾ ನೀ ಇಷ್ಟೊಂದು ಅಪ್‌ಸೆಟ್ ಆಗಿದ್ದು?! ನಂಗೆ ಅರ್ಥ ಆಗೊತ್ತೆ.. ನೀನೀಗ ಯಾವ ಸ್ಥಿತಿಯಲ್ಲಿದ್ದೀಯಾ ಅಂತ. ಅದ್ರೆ ಸಮಸ್ಯೆ ಹಾಗೂ ಪರಿಹಾರ ಎರಡೂ ನಿನ್ನ ಕೈಲೇ ಇದ್ಯಲ್ಲೇ? ಯೂ ಹ್ಯಾವ್ ಪ್ರಾಬ್ಲೆಮ್ಸ್ ವಿದ್ ಸೊಲ್ಯೂಷನ್ಸ್ ಡಿಯರ್.. ನೀನೇ ಹೇಳು ನಿನ್ನ ಮನಸಿನೊಳ್ಗೆ ಏನಿದೆ ಅಂತ... ಮುಕ್ತವಾಗಿ ಎಲ್ಲವನ್ನೂ ಹೊರ ಹಾಕು ಒಮ್ಮೆ.. ಆಗ ಎಷ್ಟೋ ಸಮಸ್ಯೆಗಳು ಗೊತ್ತಿಲ್ಲದೇ ಇಲ್ಲವಾಗುತ್ತ್ವೆ.." ಎನ್ನುತ್ತಾ ಮೆಲ್ಲನೆ ಪೂರ್ಣಳ ಕೈ ಅದುಮಿದಳು.
"ಧೃತಿ ಸಮಸ್ಯೆ ಈ ಫೈಲ್‌ನೊಳಗಿದ್ದಷ್ಟೇ ಆಗಿದಿದ್ದರೆ ನಾನೂ ಅಷ್ಟೊಂದು ಅಪ್‌ಸೆಟ್ ಆಗ್ತಿರ್ಲಿಲ್ವೇನೋ!! ನಾನು ತಾಯಾಗೋದು ಕಷ್ಟ ಅನ್ನೋ ಕಟು ವಾಸ್ತವದ ಜೊತೆ ಇನ್ನೊಂದು ಕಟು ಸತ್ಯನ ಎದುರಿಸಬೇಕಾಗಿದೆ.. ಈ ಸಮಸ್ಯೆಯ ಹೆಸರು "ಸಂದೀಪ". ಧೃತಿ ನಿಂಗೇ ಗೊತ್ತಲ್ಲ ಮೊದ್ಲಿಂದ್ಲೂ ನಂಗೆ, ಸಂದೀಪಂಗೆ ಮಕ್ಳು ಅಂದ್ರೆ ಪ್ರಾಣ. ನಮ್ಮದೇ ಅಂಶ ಪಡ್ದು ನಮ್ಮ ಪ್ರೀತಿಗೆ ಪ್ರತೀಕವಾಗಿರೋ ಮಗುವನ್ನು ಪಡೀಬೇಕು ಅಂತ ನಾವಿಬ್ರೂ ತುಂಬಾ ಕನಸು ಕಟ್ಟಿದ್ವಿ. ನನ್ನ ಮಗು ಹಾಗೂ ಸಂದೀಪನ ಜೊತೆ ಇರುವಾಗ ಎಷ್ಟೇ ಕಷ್ಟ ಬಂದ್ರೂ ಯಾವ ನೋವು ಬಂದ್ರೂ ಎದುರಿಸ್ತೀನಿ ಅನ್ನೋ ಆಶಾವಾದ, ಭರವಸೆಲಿ ನಾನಿದ್ದೆ. ಆದ್ರೆ ಈ ವಿಶ್ವಾಸಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು ಸುಮಾರು ಆರು ತಿಂಗಳ ಹಿಂದೆ.
ಮದ್ವೆಯಾದ ಮೊದ್ಲೆರ್ಡು ವರ್ಷ ಕೆಲ್ಸ, ಪ್ರೊಜೆಕ್ಟ ಅಂತೆಲ್ಲಾ ಜವಾಬ್ದಾರೀಲಿ ಅನಿವಾರ್ಯವಾಗಿ ಮಗುವಿನ ಯೋಚನೆ ಕೈ ಬಿಡ್ಬೇಕಾಯ್ತು. ಆಮೇಲೆ ಒಂದ್ವರ್ಷ ಕಾದ್ರೂ ನಾನು ತಾಯಾಗುವ ಲಕ್ಷಣಾನೇ ಕಾಣ್ಲಿಲ್ಲ ಕಣೆ. ಪ್ರತಿ ತಿಂಗಳೂ ಹೊಸ ಆಸೆ, ಕುತೂಹಲ, ನಿರೀಕ್ಷೆ.. ಅದ್ರ ಬೆನ್ನಿಗೇ ನಿರಾಸೆ, ಆತಂಕ, ಭಯ. ಕೊನೆಗೆ ಪರಿಚಯದ ಗೈನೋಕಾಲಜಿಸ್ಟ್ ಹತ್ರ ಹೋದ್ವಿ. ಸುಮಾರು ಟೆಸ್ಟ್‌ಗಳಾದ್ವು. ಆಗ ತಿಳ್ದಿದ್ದು ಮಗು ಪಡೆಯೋ ಸಾಮರ್ಥ್ಯ ನನ್ನೊಳಗೇ ಇಲ್ಲ ಅಂತ. ಆ ಆಘಾತಾನ ಅರಗಿಸಿಕೊಳ್ಳೋಕೇ ನಂಗೆ ನಾಲ್ಕು ತಿಂಗ್ಳು ಬೇಕಾಯ್ತು... ಸಂದೀಪ ಅಂತೂ ಫುಲ್ ಡಲ್ ಆಗೋಗಿದ್ದ. ಆದ್ರೂ ಅವ್ನಲ್ಲಿ ಅದೇನೋ ಆಶಾವಾದ. ಸೈನ್ಸ್ ಇಷ್ಟೊಂದು ಡೆವಲಪ್ ಆಗಿದೆ. ನಾವು ವಿಚಾರಿಸೋಣ. ಧೈರ್ಯವಾಗಿರು ಅಂತೆಲ್ಲಾ ಹೇಳಿ ಸಮಾಧಾನಿಸೋನು. ಈಗ್ಗೆ ಆರು ತಿಂಗಳಿನ ಹಿಂದೆ ಮತ್ತೆ ನಾವು ಡಾಕ್ಟರ್ ಭೇಟಿ ಆದ್ವಿ. ಆಗ ಅವ್ರು ಹೇಳಿದ ಪರಿಹಾರ ನನ್ನ ಪೂರ್ತಿ ಮುಗ್ಸಿ ಬಿಟ್ಟಿತು. ನನ್ನ ತಾಯ್ತನದ ಕನಸನ್ನೊಂದೇ ಚೂರು ಮಾಡ್ಲಿಲ್ಲ..ಸಂದೀಪನ ಮೇಲೆ ನಾ ಇಟ್ಟಿದ್ದ ಪ್ರೀತಿ, ವಿಶ್ವಾಸ, ಭರವಸೆ ಎಲ್ಲವನ್ನೂ ಕೊಂದು ಬಿಟ್ಟಿತ್ತು ಧೃತಿ.. ನನ್ನ ಸಂದೀಪನ್ನೇ ನಾನು ಕಳ್ದು ಕೊಂಡು ಬಿಟ್ಟೆ. ಈಗ ನನ್ನ ಹತ್ರ ಏನೂ ಇಲ್ಲ. ಯಾರೂ ಇಲ್ಲ...ನಾನೇ ಕಳ್ದು ಹೋಗಿದ್ದೀನಿ.. " ಮತ್ತೆ ಕಣ್ಣೀರು ಧಾರಾಕಾರವಾಗಿ ಸುರಿಯತೊಡಗಿತು. ಹಾಗೇ ಅವಳನ್ನಪ್ಪಿ ಸಂತೈಸತೊಡಗಿದಳು ಧೃತಿ.
"ಏನೇ ಇದು ಪೂರ್ಣ.. ಪೂರ್ತಿ ವಿಷ್ಯನಾದ್ರೂ ಹೇಳು.. ಅಲ್ಲಾ ಎಲ್ಲಾ ವಿಷ್ಯಕ್ಕೂ ಈ ರೀತಿ ಅಳೋದೇ ಪರಿಹಾರನಾ.. ಇಷ್ಟೊಂದು ಸೆನ್ಸಿಟಿವಿಟಿ ಒಳ್ಳೆದಲ್ಲಾ.. ಸಮಾಧಾನ ಮಾಡ್ಕೋ.. ಡಾಕ್ಟ್ರು ಏನಂದ್ರು? ಏನಂತೆ ಪರಿಹಾರ? ಸಂದೀಪ ಏನಾದ್ರೂ ಬೇಜಾರು ಮಾಡಿದ್ನ ನಿನ್ನ?.. ನೀ ಹೀಗೇ ಒಗ್ಟಾಗಿ ಮಾತಾಡಿದ್ರೆ ನಂಗೇನು ಅರ್ಥಾ ಆಗ್ಬೇಕು ಹೇಳು? ಪ್ಲೀಸ್ ಬಿ ಬ್ರೇವ್." ಎಂದು ಸಮಾಧಾನಿಸಿದ ಧೃತಿಯ ಸಾಂತ್ವನದಲ್ಲಿ ತುಸು ಚೇತರಿಸಿಕೊಂಡಳು ಪೂರ್ಣ.
"ಧೃತಿ ಡಾಕ್ಟ್ರು ನಿಮ್ಮ ಸಮಸ್ಯೆಗೆ ಪರಿಹಾರ ಇದೆ ಅಂದಾಗ ನಾನು ಪಟ್ಟ ಸಂತೋಷ ಅಷ್ಟಿಷ್ಟಲ್ಲ. ಅದೇ ಅವ್ರು ಹೇಳಿದ ಟ್ರೀಟಮೆಂಟ್ ಕೇಳಿದ ಮೇಲೆ ಮಾತ್ರ ನಂಗೆ ಎಲ್ಲಾ ಶೂನ್ಯ ಅನ್ನಿಸಿ ಬಿಡ್ತು. ನನ್ನ ಯುಟಿರಸ್ ಚೆನ್ನಾಗೇ ಇದೆ. ನಾನು ಮಗುವನ್ನು ಹೊರಲು, ಹೆರಲು ಏನೂ ಪ್ರಾಬ್ಲೆಮ್ ಇಲ್ಲಾ. ಆದ್ರೆ ಭ್ರೂಣ ಹುಟ್ಟಲು ಬೇಕಾದ ಎಗ್ ಪ್ರೊಡಕ್ಷನ್ ನನ್ನಲ್ಲಿ ಆಗುತ್ತಿಲ್ಲ...ಹಾಗೆ ಆಗುವ ಸಂಭವವೂ ಇಲ್ಲ..ಬಿಕೋಸ್ ಮೈ ಬೋತ್ ಓವರೀಸ್ ಆರ್ ನೋಟ್ ವೆಲ್ ಡೆವಲಪ್ಡ್... ಯಾವ್ದೇ ಮೆಡಿಸಿನ್‌ನಿಂದಾನೂ ಎಗ್ ಪ್ರೊಡಕ್ಷನ್ ಮಾಡ್ಸೋಕೆ ಆಗೊಲ್ಲಾ ಅಂದ್ಬಿಟ್ರು. ಆದ್ರೆ "ಎಗ್ ಡೊನೇಷನ್" ಅಥವಾ "ಓವಮ್ ಡೊನೇಷನ್" ಥೆರಪಿ ಮಾಡಿ "ಐ.ವಿ.ಎಫ್" ಮೂಲಕ ಎಂಬ್ರಿಯೋನ ನನ್ನ ಯುಟಿರಸ್ ಒಳ್ಗೆ ಇನ್ಸರ್ಟ್ ಮಾಡೋದ್ರಿಂದ ನಾನು ತಾಯಾಗ್ಬಹುದು... ಅಂದ್ರೆ ಇಲ್ಲಿ ಸೀಮನ್ ಸಂದೀಪಂದಾಗಿದ್ರೆ ಎಗ್ ಮಾತ್ರ ಬೇರೆ ಹೆಣ್ಣಿಂದಾಗಿರೊತ್ತೆ. "ಇನ್ವಿಟ್ರೋ ಫರ್ಟಿಲೈಸೇಷನ್" ಮೂಲಕ ಜೈಗೋಟ್ ನನ್ನೊಳ್ಗೆ ಹಾಕ್ತಾರೆ.. ಆಮೇಲೆ ಎಲ್ಲಾ ನೋರ್ಮಲ್ ಭ್ರೂಣದ ರೀತೇನೆ ಮಗು ಬೆಳೆದು ನಾರ್ಮಲ್ ಡೆಲಿವೆರಿ ಆಗೊತ್ತೆ ಅಂದ್ರು. ಇದ್ನ ಕೇಳಿ ನಾನು ಪೂರ್ತಿ ಶಾಕ್ ಆಗ್ಬಿಟ್ಟೆ.. ಆದ್ರೆ ಸಂದೀಪನ ಮುಖ ಮಾತ್ರ ಖುಶಿಯಿಂದ ಅರಳಿಬಿಟ್ಟಿತ್ತು.
"ಪೂರ್ಣ ಎಷ್ಟೇ ಖರ್ಚಾದ್ರೂ ಸರಿ.. ನೀ ಹೆದರ್ಬೇಡ. ನಾನಿದ್ದೀನಿ...ಈಗಾಗ್ಲೇ ಎಲ್ಲಾ ವಿಚಾರ್ಸಿದ್ದೀನಿ... ಈ ಎಗ್ ಡೊನೇಷನ್ ಟ್ರೀಟ್ಮೆಂಟ್ ೭೦-೮೦% ಸಕ್ಸೆಸ್ ಆಗೊತ್ತೆ ಅಂತ ಹೇಳಿದ್ದಾರೆ ಡಾಕ್ಟರ್... ಅದೂ ಅಲ್ದೆ ಎಗ್ ಡೊನೇಟ್ ಮಾಡೋರ ಹೆಸ್ರು, ವಿಳಾಸ ಎಲ್ಲಾ ಗುಪ್ತವಾಗಿ ಇಡ್ತಾರೆಂತೆ.. ಸೋ ಡೋಂಟ್ ವರಿ.. ಮುಂದಿನ ತಿಂಗ್ಳೇ ನಾವು ಈ ಟ್ರೀಟ್ಮೆಂಟ್ ತೊಗೋಳೋಣ... ನಾ ನಾಳೇನೇ ಡಾಕ್ಟರ್ ಹತ್ರ ಮಾತಾಡಿ ಫಿಕ್ಸ್‌ಮಾಡಿ ಬರ್ತೀನಿ..." ಹೀಗೇ ಒಂದೇ ಸಮ್ನೆ ಬಡ ಬಡಿಸ್ತಾ ಎಗ್ಸೈಟ್ ಆಗ್ತಾ ಇದ್ದ ಸಂದೀಪನಲ್ಲಿ ನಾ ನನ್ನ ಸಂದೀಪನ ಹುಡ್ಕಿ ಸೋತೋದೇ ಕಣೆ. ಆಗ ನಂಗೆ ನಾನು ತಾಯಾಗಲಾರೆ ಎಂಬ ಸತ್ಯಕ್ಕಿಂತಲೂ ದೊಡ್ಡ ಆಘಾತವಾಗಿತ್ತು.. ‘ಪೂರ್ಣ ನಿಂಗೂ ಒಪ್ಗೇನಾ.. ನೀನೇನು ಹೇಳ್ತೀಯಾ?’ ಎಂದು ಒಮ್ಮೆಯೂ ಕೇಳುವ ಸೌಜನ್ಯವೂ ಇಲ್ಲವೇ ಎಂದೆನಿಸಿ ತುಂಬಾ ಸಂಕ್ಟ ಆಯ್ತು.
ನೀನೇ ಹೇಳು ಧೃತಿ ಒಂದ್ವೇಳೆ ಪ್ರಾಬ್ಲಮ್ ನನ್ನಲ್ಲೇನೂ ಇಲ್ದೇ ಹೋಗಿ, ಅವನಲ್ಲೇ ಇದ್ದಿದ್ರೆ..?! ಅವ್ನಲ್ಲಿ ಸೀಮನ್ ಕೌಂಟ್ ಇಲ್ಲಾ ಅಂತ ಹೇಳಿದಿದ್ರೆ, ಅವ್ನು "ಆರ್ಟಿಫಿಶಿಯಲ್ ಇನ್ಸೆಮಿನೇಷನ್"ಗೆ ಥಟ್ಟಂತ ಒಪ್ತಿದ್ನ? ಬೇರೊಬ್ಬನ ಸೀಮನ್ ನನ್ನೊಳ್ಗೆ ಇಂಜೆಕ್ಟ್ ಮಾಡೊಕೇ ನಿರಾಳವಾಗಿ ಒಪ್ಪಿಗೆ ಕೊಡ್ತಿದ್ನ? ದೇವರಾಣೆ ಹೇಳ್ತಿನಿ ಕಣೆ ಒಂದ್ವೇಳೆ ಅಂವ ಒಪ್ಪಿದಿದ್ರೂ ನಾ ಖಂಡಿತ ಒಪ್ತಿರ್ಲಿಲ್ಲ. ನನ್ನ ಪ್ರಕಾರ ಮಗು ಅಂದ್ರೆ ಇಬ್ಬರ ಪ್ರೇಮದ ಸಂಕೇತ. ಅದು ಇಬ್ರ ಜೀನ್ಸ್ ಅನ್ನೂ ಹೊತ್ತೇ ಹುಟ್ಬೇಕು. ಇಲ್ಲಾ ನಾವು ದತ್ತು ತಗೋ ಬಹುದು. ಇಲ್ಲಿ ಅವ್ನ ಜೀನ್ಸ್ ಎನೋ ಇರುತ್ತೆ ಆದ್ರೆ ನನ್ನ ಅಂಶನೇ ಇರೊಲ್ಲ. ಬೇರೊಂದು ಹೆಂಗಸಿನ ಎಗ್ ಜೊತೆ ಅವ್ನ ಅಂಶ ಹೊತ್ತಿರೋ ಭ್ರೂಣಾನ ನಾನು ಹೇಗೆ ಸರಾಗವಾಗಿ ನನ್ನೊಳ್ಗೆ ಇಟ್ಕೊಳ್ಲಿ? ಇಟ್ಸ್ ಜಸ್ಟ್ ಲೈಕ್ ಸರೋಗೇಟ್ ಮದರ್ ಟೈಪ್. ಇಲ್ಲಿ ನಾನು ನನ್ದೇ ಮಗುವಿಗೆ ಸರೋಗೇಟ್ ತಾಯಿ. ಅವ್ನ ಅಂಶ ಮಾತ್ರ ಇರೋ ಮಗುವಿಗೆ ನನ್ನ ಗರ್ಭಕೋಶ ಒಂಥರ ಬಾಡಿಗೆ ಕೊಟ್ಟಾಂಗೆ ಅಲ್ವಾ? ನಾನು ಈ ರೀತಿ ಟ್ರೀಟ್ಮೆಂಟ್ ವಿರೋಧಿ ಅಲ್ಲ. ಅಥವಾ ಈ ಟ್ರೀಟ್ಮೆಂಟ್ ಪಡೆಯೋರು, ಪಡಿದಿರೋರು ಎಲ್ಲಾ ಮೂರ್ಖರು ಅನ್ತಾ ಇಲ್ಲಾ. ಅದು ಅವರವರ ಭಾವಕ್ಕೆ, ಪರಿಸ್ಥಿತಿಗೆ, ಸಂತೋಷಕ್ಕೆ ಬಿಟ್ಟ ವಿಷ್ಯ. ಇಲ್ಲಿ ನಾ ಹೇಳ್ತಿರೋದು ನನ್ನ ವೈಯಕ್ತಿಕ ನಿಲುವು ಮಾತ್ರ. ಇದ್ರಲ್ಲಿ ನನ್ನ ಒಪ್ಗೆ, ಸಂತೋಷ ಮುಖ್ಯ ಅನ್ಸೊಲ್ವಾ? ಧೃತಿ ಯಾಕೋ ಏನೋ ಇದಕ್ಕೆ ನನ್ನ ದೇಹ ಮನಸ್ಸು ಎರ್ಡೂ ಒಪ್ತಾನೇ ಇಲ್ಲ. ಹಾಗಿರೋವಾಗ ಹೇಗೆ ನಾ ಆ ಮಗುನ ನನ್ನೊಳ್ಗೆ ಒಂಭತ್ತು ತಿಂಗ್ಳು ಇಟ್ಕೊಳ್ಳಲಿ? ಹೇಗೆ ಪ್ರೀತಿಸಲಿ? ಏನ್ ಮಾಡ್ಲಿ ನೀನೇ ಹೇಳು.." ಒಂದು ನಿಡಿದಾದ ಉಸಿರಿನೊಂದಿಗೆ ಅಲ್ಲೇ ಇದ್ದ ಅಡಿಕೆ ಮರಕ್ಕೊರೆಗಿ ಕಣ್ಮುಚ್ಚಿದಳು. ಮಾತಿನ ಭಾರಕ್ಕೋ ಇಲ್ಲ ಮನದೊಳಗಿನ ಭಾರಕ್ಕೋ ಆಯಾಸ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಪೂರ್ಣಳ ಮಾತುಗಳನ್ನರಗಿಸಿಕೊಳ್ಳಲು ತುಸು ಹೊತ್ತೇ ಬೇಕಾಯಿತು ಧೃತಿಗೆ. ಕ್ರಮೇಣ ವಸ್ತುಸ್ಥಿತಿ, ಅವಳ ಮನಸ್ಥಿತಿಯ ಅರಿವಾಗತೊಡಗಿತು."ಪೂರ್ಣ ನೀನು ಈ ಎಲ್ಲಾ ನಿನ್ನ ಭಾವನೆಗಳನ್ನು ವಿವರವಾಗಿ, ಶಾಂತಳಾಗಿ ಬಿಡಿಸಿ ಸಂದೀಪನ ಜೊತೆ ಮಾತಾಡಿದ್ದೀಯಾ? ಅವನಿಗೂ ನಿನ್ನ ಈ ಅಭಿಪ್ರಾಯದ ಕುರಿತು ಯೋಚಿಸಲು, ಚಿಂತಿಸಲು ಸಮಯ ಕೊಟ್ಟಿದ್ದೀಯಾ? ನೀವಿಬ್ಬರೂ ಇದರ ಪರಿಣಾಮಗಳನ್ನು ಚರ್ಚಿಸಿದ್ದೀರಾ?" ಎಂದು ಮೆಲ್ಲನೆ ಕೇಳಲು, ಪಕ ಪಕನೆ ಹುಚ್ಚಿಯ ಹಾಗೆ ನಕ್ಕು ಬಿಟ್ಟಳು ಪೂರ್ಣ.
"ಅಯ್ಯೋ ಹುಚ್ಚಿ.. ಇದನ್ನೆಲ್ಲಾ ನಿನ್ನ ಹತ್ರ ಹೇಳೊ ಮೊದ್ಲು ಅವನ್ಹತ್ರ ಹೇಳಿಕೊಂಡಿರೊಲ್ಲಾ ಅಂತಾನಾ? ನನ್ನ ನಾ ಹೇಗೋ ಸಾವರಿಸಿಕೊಡು ಎಲ್ಲವನ್ನೂ ಸಾವಕಾಶವಾಗಿ ಹೇಳಿದೆ..ದತ್ತು ಬೇಕಾದ್ರೆ ತಗೋಳೋನಾ ಅಂತನೂ ಹೇಳ್ದೆ. ಕೆಲದಿನ ಸುಮ್ಮನಾದ. ಪೂರ್ತಿ ಮೌನಿಯಾಗಿ ನನ್ನ ಕಾಡಿದ. ಆದ್ರೂ ಸಮಯ ಸರಿದಂತೆ ಎಲ್ಲಾ ಸರಿ ಆಗಬಹುದೆಂದು ನನ್ನ ನಾನೇ ಸಮಾಧಾನಿಸಿಕೊಂಡೆ ಕೂಡಾ. ಆದ್ರೆ ಒಂದು ತಿಂಗ್ಳ ಹಿಂದೆ ಒಂದಿನ ನನ್ನ ಬಳಿ ಬಂದು ಹೇಳಿಯೇ ಬಿಟ್ಟ.. "ಪೂರ್ಣ ಐ ವಾಂಟ್ ಮೈ ಬೇಬಿ. ನಂಗೆ ನನ್ನ ಮಗೂನೇ ಬೇಕು. ದತ್ತು ಬೇಡ್ವೇ ಬೇಡ. ಹಾಗಂತ ನಿನ್ನ ಬಿಟ್ಟು ಬೇರೆ ಮದ್ವೆ ಆಗ್ಲಾರೆ. ನಾಳೆ ಜನ ನಿಂಗೆ ಮಕ್ಳು ಆಗೋದಿಲ್ಲ ಅಂತ ನಾ ಬೇರೆ ಆದೆ ಅಂತೆಲ್ಲ ಹೇಳಿಕೊಂಡು ನನ್ನೇ ಆಡ್ಕೊಳ್ತಾರೆ. ನೀ ಸ್ವಲ್ಪ ಸಮಯ ತಗೋ.. ಯೋಚ್ಸು. ಸುಮ್ನೆ ಕೆಲಸಕ್ಕೆ ಬಾರದ ಯೋಚ್ನೆ ತಲೆಗೆ ಹಾಕ್ಕೊಬೇಡ..ನಿನ್ನ ದೃಷ್ಟಿ ಸ್ವಲ್ಪ ವಿಶಾಲ ಮಾಡ್ಕೋ ಎಲ್ಲಾ ಸರಿ ಆಗೊತ್ತೆ.." ಅಂದ್ಬಿಟ್ಟ. ಆ ದಿನ ಮಾತ್ರ ನಾ ನನ್ನ ಬಗ್ಗೇ ತುಂಬಾ ಅಸಹ್ಯ ಪಟ್ಟೆ ಕಣೆ. ಇವನನ್ನೇ ನಾ ಮೆಚ್ಚಿ ಮದ್ವೆ ಆಗಿದ್ದು..?!! ನನ್ನ ತನು-ಮನವನ್ನು ಅರ್ಪಿಸಿ ಕೃತಾರ್ಥಳಾಗಿದ್ದು? ಅಂತ ತುಂಬಾ ಹಿಂಸೆ ಪಟ್ಟೆ. ಮರು ದಿನವೇ ಅಲ್ಲಿಂದ ಹೊರ್ಟು ಇಲ್ಲಿಗೆ ಬಂದ್ಬಿಟ್ಟೆ ಕಣೆ. ಹಾಗೇ ಬರೋ ಮುಂಚೆನೇ ನಿಂಗೆ ಫೋನ್ ಮಾಡಿದ್ದು. ಇದನ್ನು ಆದಷ್ಟು ಬೇಗ ನಿನ್ಜೊತೆ ಹಂಚಿಕೊಂಡ್ರೆ ಮಾತ್ರ ನಾ ಬದ್ಕಿ ಉಳೀಬಹುದೇನೋ ಅಂತ..ಆದ್ರೆ ಇಲ್ಲಿ ಬಂದ ಮೇಲೂ ಸುಖ ಇಲ್ಲ.. ಆಗಾಗ ಫೋನ್ ಮಾಡಿ "ಎನು ಯೋಚ್ನೆ ಮಾಡ್ದೆ.." ಎಂತ ಕೇಳ್ತಾನೆ ಇದ್ದಾನೆ... ಅದ್ಕೇ ಈಗ ಪೋನ್ ರಿಸೀವ್ ಮಾಡ್ತಾನೇ ಇಲ್ಲ.. ಸುಮ್ನೆ ಹಿಂಸೆ ನೋಡು.. ಏನೋ ಭಯ ಕೂಡ.."ಎಂದು ಮಾತುಗಳ ಭಾರದಿಂಡ ಬಾಯೊಣಗಿದಂತಾಗಿ ಉಗುಳು ನುಂಗಿ ತುಸು ಹೊತ್ತು ಮೌನವಾದಳು.
"ಧೃತಿ ಅಂವ ಹೇಳಿದ್ದು ನಂಗೆ ‘ನನ್ನ ಮಗು’ ಬೇಕು ಅಂತ.. ‘ನಮ್ಮ ಮಗು’ ಅಂತಲ್ಲಾ. ಅಂದ್ರೆ ಈಗಾಗ್ಲೇ ಆತ ಹುಟ್ದೇ ಇರೋ ಮಗುವಿನಿಂದ ನನ್ನ ಬೇರ್ಪಡಿಸಿದ್ದ.. ಹಾಗಿರುವಾಗ ನಾಳೆ ನನ್ನ ಗತಿ ಎನಾಗಬಹುದು ಹೇಳು? ನನ್ನ ಬಿಟ್ಟು ಬೇರೆ ಮದ್ವೆ ಬೇಕಿದ್ರೆ ಆಗು ಅಂದ್ರೆ ಅವನಿಗೆ ಸಮಾಜದ ಭಯ....ಹ್ಹ.. ನನ್ನ ಮದ್ವೆ ಆಗ್ಬೇಕಾದ್ರೆ, ಹಿಂದೆ ಬಿದ್ದು ಪ್ರೀತಿಸ್ಬೇಕಾದ್ರೆ ಬೇಡ್ವಾಗಿದ್ದ ಸಮಾಜ ಈಗ ಬೇಕಾಗಿದೆ ನೋಡು. ಮೊದ್ಲೆಲ್ಲಾ"ಚಿನ್ನು.. ನಿನ್ನ ಹೆಸ್ರನ್ನ ನನ್ನ ಮೊದಲ ಹೆಸ್ರಿನ ನಂತ್ರ ಹಾಕ್ಕೊಂಡ್ರೆ ನಾನೂ ನನ್ನ ಬದಕು ಎರಡೂ ಸಂಪೂರ್ಣ..ಅಲ್ಲಾ.. "ಸಂಪೂರ್ಣದೀಪ" ಅಂತೆಲ್ಲಾ ಮುದ್ದಾಡೋನು. ಆದ್ರೆ ನಮ್ಮ ಮಗುವಿನ ವಿಷ್ಯ ಬಂದಾಗ ನನ್ನ ನೋವಿನ ಜೊತೆ ಬಿಟ್ಟು.. ಸಂಪೂರ್ಣ ಮರೆತೇ ಬಿಟ್ಟ. ಈ ಪೂರ್ಣಳನ್ನು ನೀ ಅಪೂರ್ಣ ಅಂತ ತೋರಿಸ್ಬಿಟ್ಟ.
ನಿಂಗೆ ನೆನ್ಪಿದ್ಯಾ..ಮದ್ವೆ ಮೊದ್ಲು ನಂಗೆ ಎನ್.ಎಸ್ ರ ಕವನಗಳೆಂದರೆ ತುಂಬಾ ಇಷ್ಟ ಅಂತ ಗೊತ್ತಾದಾಗ ಅವರ ಒಂದು ಕವಿತೆಯನ್ನ ನಂಗೆ ಮೈಲ್ ಮಾಡಿದ್ದ.. ನಿಂಗೂ ತೋರ್ಸಿದ್ನಲ್ಲ....

ನೀ ಸಿಗದೆ ನಾನೆಂತು ಅರಿವೆನೇ ನನ್ನ.
ನೀ ಸಿಗದೆ ನಾನೆಂತು ಅರಿವೆನೇ ನನ್ನ
ಸಾಣೆ ಗೆರೆ ಮಿಂಚದೆ ತಿಳಿವರೇ ಹೊನ್ನ ?

ಇದೇ ಕವಿತೆ ಅಲ್ವಾ ನನ್ನ ಅವನ ಕಡೆ ಮತ್ತಷ್ಟೂ ಸೆಳೆದಿದ್ದು?! ಈ ಕವಿತೆಯನ್ನ ನಾ ನನ್ನ ಬೆಡ್ರೂಂನಲ್ಲೂ ಹಾಕಿಟ್ಟಿದ್ದೆ. ಆದ್ರೆ ಈಗ...! ಹ್ಹ... ಅವನ್ನ ಪೂರ್ತಿ ಪಡೆದ ಮೇಲೆನೇ ನಾ ಅವ್ನ ನಿಜ್ವಾಗ್ಲೂ ಅರಿತಿದ್ದು. ಆದ್ರೆ ಅವನು ನನ್ನ ಮಾತ್ರ ಅರಿಯಲೇ ಇಲ್ಲ ಕಣೆ ಎಂಥ ವಿಪರ್ಯಾಸ ಅಲ್ವಾ?
ಸೋತೋದೆ ಕಣೆ...ಸಂಪೂರ್ಣ ಸೋತೋದೆ.. ಇನ್ನು ಸಾಧ್ಯವೇ ಇಲ್ಲಾ ಅನ್ಸಿಬಿಟ್ಟಿದೆ. ತಾಯಿ ಆಗ್ಲಾರೆ. ಗಂಡನ ಮೇಲೆ ಪ್ರೀತಿ, ವಿಶ್ವಾಸ, ಭರವಸೆ ಉಳಿದಿಲ್ಲ. ಒಂದೇ ಸಲ ಎಲ್ಲಾನೂ ಕಳ್ದು ಕೊಂಡು ನಿಂತಿದ್ದೀನಿ. ಪುಣ್ಯಕ್ಕೆ ಅಮ್ಮಾ, ಅಪ್ಪ ಮೊದ್ಲೇ ಹೋಗಿ ಬಿಟ್ರು. ಇಲ್ದೇ ಹೋಗಿದ್ರೆ ನನ್ನ ದುಃಖ ನೋಡಿ ಖಂಡಿತ ಸಹಿಸಿಕೊಳ್ಳುತ್ತಿರಲಿಲ್ಲ. ಇನ್ನು ಅಣ್ಣ, ಅತ್ಗೆ... ಅವ್ರಿಗೆ ಪಾಪ ಇದೆಲ್ಲಾ ಸೂಕ್ಷ್ಮತೆ ಅರ್ಥನೇ ಆಗೊಲ್ಲಾ.. ವಿವರಿಸಿ ಪ್ರಯೋಜನ ಇಲ್ಲ. ನಿನ್ನಿಷ್ಟ ಅಂದ್ಬಿಟ್ಟಿದ್ದಾರೆ. ಆದ್ರೆ ಅವ್ರಿಗೂ ತುಂಬಾ ದುಃಖ ಆಗಿರೋದು ಮಾತ್ರ ಸತ್ಯ. ಈಗ ನೀನೇ ಹೇಳು ನನ್ನ ನಾ ಹೇಗೆ ಉಳಿಸಿಕೊಳ್ಲಿ? ಯಾವ ದಾರಿ ಇದೆ ನಂಗೆ? ನಿನ್ನಷ್ಟು ಪ್ರಾಕ್ಟಿಕಲ್ ಅಲ್ಲ ನಾ. ಸಂದೀಪನ ವರ್ತನೆ, ಮಾತುಗಳ ಹಿಂಸೆ ಒಂದೆಡೆ, ನನ್ನೊಳಗಿನ ಕೊರತೆಯ ಕೊರಗು ಇನ್ನೊಂದೆಡೆ. ತಾಯಾಗಲಾರೆ ಎಂಬ ಕುಂದು ನನ್ನ ಗಂಡನನ್ನೂ ನನ್ನಿಂದ ಕಸಿಯಿತು ಧೃತಿ.. ಎನೂ ಇಲ್ಲಾ ಈಗ ನನ್ನಲ್ಲಿ.. ಎನೂ ಇಲ್ಲ.."ಎನ್ನುತ್ತಾ ತನ್ನ ಮಂಡಿಯೊಳಗೆ ಮುಖ ಹುದುಗಿಸಿ ಕುಳಿತು ಬಿಟ್ಟಳು.ಸೂರ್ಯ ಯಾವಾಗಲೋ ತನ್ನ ಪ್ರಖರತೆಯನ್ನು ಕಳೆದುಕೊಂಡು ಪಡುವಣದ ದಾರಿಯನ್ನು ಹಿಡಿಯುವಂತಿದ್ದ. ಇಬ್ಬರೊಳಗೂ ಹಸಿವಿನ ಅರಿವಿಲ್ಲ. ಹೊತ್ತಿನ ಪರಿವೆಯಿಲ್ಲ. ತುಸು ಹೊತ್ತಿನ ನಂತರ ಧೃತಿ ಪೂರ್ಣಳನ್ನೆಬ್ಬಿಸಿ ಕೊಂಡು ತೋಡಿನ ಬಳಿ ಬಂದಳು.
-4-
"ಪೂರ್ಣ..ಈ ಹಳ್ಳವನ್ನು ನೋಡಿದ್ಯಾ? ಎಷ್ಟು ನಿರಾಳವಾಗಿ ಶಾಂತವಾಗಿ ಹರೀತಿದೆ. ಹಾಂಗಂತ ಇದ್ರೊಳ್ಗೂ ಕಸ, ಕಡ್ಡಿ, ಮಣ್ಣು ಎಲ್ಲಾ ಇರುತ್ವೆ. ಆದ್ರೆ ಹೊಸ ನೀರು ಬಂದ ಹಾಗೇ ಅವು ನೀರೊಳ್ಗೆ ತೇಲಿ ಹೋಗಿ ಬಿಡುತ್ವೆ. .. ಇಲ್ಲಾ ಬದಿಗೆ ಅಂಟಿಕೊಡು ಗುಂಪಿನಲ್ಲಿ ಗೋವಿಂದ ಆಗಿಬಿಡುತ್ವೆ. ನಮ್ಮ ಮನಸ್ಸೂ ಹೀಗೇ ಇದ್ರೆ ನಮಗೇ ಒಳ್ಳೇದು ಪೂರ್ಣ. ಎನೇ ಕಷ್ಟ, ದುಃಖ, ನೋವು ಮನಸ್ಸೊಳ್ಗೆ ಹೊಕ್ಕಿದ್ರೂ ಹೊಸ ಹೊಸ ಯೋಚನೆಗಳನ್ನು ಆಗಾಗ ಹರಿಯ ಬಿಡುವುದರಿಂದ ಇವುಗಳನ್ನೆಲ್ಲಾ ತೊಳೆದುಬಿಡಬಹುದು. ಹಾಗೆ ಮರೆಯಲೇ ಸಾಧ್ಯವಾಗದಂತಹವುಗಳನ್ನು ಮನದ ಯಾವುದೋ ಮೂಲೆಯಲ್ಲಿರಿಸಿ ಮುಚ್ಚು ಬಿಟ್ಟು ಆ ಕಡೆ ತಿರುಗಿಯೂ ನೋಡದಂತಿರಬೇಕು. ತುಂಬಾ ಕಷ್ಟ ಇದು.. ಒಪ್ಪುವೆ. ಆದ್ರೆ ಅಸಾಧ್ಯವೇನಲ್ಲಾ. ನಂಗೊತ್ತು ನೀ ಅಂದ್ಕೋಬಹುದು..ಇವಳಿಗೇನು ಗೊತ್ತು ನನ್ನ ಕಷ್ಟ.. ಹೇಳೋದು ಸುಲಭ ಅಂತ... ಯಾಕಂದ್ರೆ ನಿನ್ನ ನೋವಿನ ತೀವ್ರತೆಯನ್ನು ನಾನು ಅನುಭವಿಸಿಲ್ಲ.. ಅನುಭವಿಸಲು ಸಾಧ್ಯವೂ ಇಲ್ಲ. ಸಮಸ್ಯೆಗಳನ್ನು ಸ್ವತಃ ಅನುಭವಿಸದೇ ಅದಕ್ಕೆ ಪರಿಹಾರ ಕೊಡೋದು ತುಂಬಾ ಕಷ್ಟ. ಆದ್ರೆ ನನ್ನ ಪ್ರಕಾರ ಯಾವುದೇ ಸಮಸ್ಯೆಗೆ ಪರಿಹಾರ ಇಲ್ಲ ಅಂದುಕೊಳ್ಳೋದೇ ಒಂದು ದೊಡ್ಡ ಸಮಸ್ಯೆ.
ಮೊದ್ಲು ನಿನ್ನ ನೀನು ಈ ರೀತಿ ಕುಗ್ಗಿಸ್ಕೊಳ್ಳೋದ್ನ ನಿಲ್ಲಿಸ್ಬಿಡು ಪೂರ್ಣ .. ಹೆಣ್ಣು ಪೂರ್ಣಳಾಗೋದು ತಾಯಾಗೊದ್ರಿಂದ ಅಲ್ಲ, ತಾಯ್ತನವ ಅನುಭವಿಸೋದ್ರಿಂದ. ನೀನ್ಯಾಕೆ ನಿನ್ನ ಸ್ವಂತ ಮಗು ಆದ್ರೆ ಮಾತ್ರ ನೀನು ಪೂರ್ಣಳು ಅಂದ್ಕೋತೀಯಾ?!! ನಿಂಗಿಷ್ಟ ಇದ್ದ್ರೆ.. ಮನಸ್ಸೊಪ್ಪಿದ್ರೆ ಈ ಟ್ರೀಟ್ ಮೆಂಟ್ ತಗೋಬಹುದು.. ಇಲ್ಲಾ ದತ್ತು ಪಡೆಯಬಹುದು. ದತ್ತು ಪಡೆಯಲು ಸಂದೀಪನ ಒಪ್ಗೆ ಇಲ್ಲಾ ಅಂದ್ರೂ ಅವ್ನಿಂದ ಬೇರೆಯಾಗಿ ನೀನೊಬ್ಬಳೇ ಸಾಕಲೂ ಬಹುದು.. ಇನ್ನು ಇದ್ಯಾವ್ದೂ ಬೇಡ ಅಂದ್ರೆ ಯಾವ್ದಾದ್ರೂ ಸಂಸ್ಥೆಗೆ ನಿನ್ನ ಸೇವೆಕೊಡೋದ್ರ ಮೂಲಕನೂ ನೆಮ್ಮದಿ ಪಡೀಬಹುದು. ತಾಯ್ತನ ಅಂದ್ರೆ ಕೇವಲ ಸ್ವಂತ ಮಗುವಿಗೆ ನಿನ್ನ ಮಮತೆ ಕೊಡೋದು ಮಾತ್ರ ಅಲ್ಲ ತಾನೆ? ಪೂರ್ಣ ನೀನು ಏನು ಕಳ್ಕೊಂಡೀ ಅಂತ ಎಣಿಸ್ಬೇಡ್ವೇ.. ಏನನ್ನ ಪಡ್ಕೊಂಡಿದ್ದೀ ಅಂತ ಯೋಚ್ಸು.. ಆಗಾ ನಿಂಗೇ ಎಲ್ಲಾ ಅರ್ಥ ಆಗೊತ್ತೆ. ಹಾಗೆ ನೋಡಿದ್ರೆ ಎಷ್ಟೋ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರವೇ ಕಾಣ್ದೇ ಒದ್ದಾಡ್ತಾರೆ.. ಅದ್ರೆ ಇಲ್ಲಿ ನೀನು ಲಕ್ಕಿ.. ಸಮಸ್ಯೆಗಳ ಜೊತೆ ಪರಿಹಾರಗಳೂ ನಿನ್ನ ಮುಂದಿವೆ. ಯಾವ್ದ ಬೇಕಿದ್ರೂ ಆರಿಸ್ಕೋಬಹುದು ನೀನು.
ಒಂದ್ಸಲ ಯೋಚ್ಸು ನಿನ್ನ ಹತ್ರ ಏನಿಲ್ಲ?!.. ವೆಲ್ ಎಡ್ಜ್ಯುಕೇಟಿವ್, ಒಳ್ಳೆ ಜೋಬ್ ಇದೆ, ಪ್ರೀತಿಸೋ ಅಣ್ಣ ಅತ್ಗೆ, ಸ್ನೇಹಿತರು ಎಲ್ಲಾ ಇದ್ದಾರೆ. ಸ್ವಂತ, ಪರಕೀಯ ಅನ್ನೋದು ಹೊರಗೆಲ್ಲೋ ಇಲ್ವೆ.. ನಮ್ಮೊಳ್ಗೇ ಇರೋದು. ನಿಂಗೆ ಸಂದೀಪನ ಮೇಲೆ ಪ್ರೀತಿ ವಿಶ್ವಾಸ ಇನ್ನೂ ಉಳ್ದಿದ್ರೆ ಅವನ ಇನ್ನೊಮ್ಮೆ ಮಾತಾಡ್ಸು.. ಕನ್ವಿನ್ಸ್ ಮಾಡ್ಸು. ಅವನಿಗೆ ಪಶ್ಚಾತ್ತಾಪ ಆಗ್ಲೂ ಬಹುದು.. ಇಲ್ಲಾ ಅಂದ್ರೆ ಅವನ ಪಾಡಿಗೆ ಅವನ ಬಿಟ್ಟು ನಿನ್ನ ಜೀವನ ನೀನೇ ರೂಪಿಸ್ಕೋ. ಬದುಕು ನಮ್ಮಷ್ಟು ಸೆನ್ಸಿಟಿವ್ ಅಲ್ಲ ಪೂರ್ಣ. ಅದು ನಾವು ಹೇಳಿದಂತಿರೊಲ್ಲ.. ನಾವು ಬದುಕಿನ ಜೊತೆ ಹೊಂದಿಕೊಂಡು ಬಾಳ್ಬೇಕಷ್ಟೇ! ನಾನು ಹೇಳ್ತಿರೋದು ಈಗ ನಿಂಗೆ ಪಥ್ಯ ಆಗ್ದೇ ಇರ್ಬಹುದು.. ಆದ್ರೆ ಶಾಂತಳಾಗಿ ಯೋಚಿಸಿದ್ರೆ ನಿಂಗೇ ಅರ್ಥ ಆಗೊತ್ತೆ.
ಪೂರ್ಣ ನೀನು ಯಾವಾಗ್ಲೂ ನನ್ನ ತುಂಬಾ ಪ್ರಾಕ್ಟಿಕಲ್ ಅಂತೀಯ.. ನಿಜ.... ಅಪ್ಪ, ಅಮ್ಮ, ಸಂಬಂಧಿಕರು ಯಾರೂ ಇಲ್ಲ್ದೇ ಅನಾಥಾಶ್ರಮದಲ್ಲಿ ಬೆಳ್ದ ನಂಗೆ ಬದುಕು ಕಲಿಸಿದ ಪಾಠ ಇದು. ಅದ್ಕೇ ನಾನು ನಿಂಗೆ ಹೀಗೆ ಹೇಳಬಲ್ಲೆ..ಇನ್ನು ನಾ ಹೆಚ್ಚೇನು ಹೇಳೊಲ್ಲ. ಈಗ ನಾ ಹೆಚ್ಚು ಹೇಳಿದ್ರೂ ನಿಂಗರ್ಥ ಆಗೊಲ್ಲ. ಆದ್ರೆ ಪ್ಲೀಸ್...ನೀನು ನಿನ್ನ ಸಮಸ್ಯೆಯಿಂದಾಗ್ಲೀ ಸಂದೀಪನ ಫೋನ್ ಕಾಲ್ ನಿಂದಾಗ್ಲೀ ಎಸ್ಕೇಪ್ ಆಗ್ಬೇಡ. ಅದು ಮತ್ತಷ್ಟೂ ನಿನ್ನ ಹಿಂಸೆ ಮಾಡುತ್ತೆ. ಭಯ ಕೊಡುತ್ತೆ. ಜಸ್ಟ್ ಟಾಕ್ ಟು ಹಿಮ್. ಆದಷ್ಟು ನಾರ್ಮಲ್ ಆಗಿ ಮಾತಾಡು. ಬಟ್ ಸ್ಪಷ್ಟತೆ ಇರ್ಲಿ. ಆಗ ನೋಡು ನೀನು ಅದೆಷ್ಟೋ ನಿರಾಳವಾಗ್ತಿಯ. ಎಲ್ಲಕ್ಕಿಂತ ಮೊದ್ಲು ನೀನು ಈ ರೀತಿ ಒಂಟಿಯಾಗಿ ಕೂತ್ಕೊಂಡು ಚಿಂತಿಸೋದ್ನ ನಿಲ್ಸು. ನಾಳೆಯ ಬಗ್ಗೆ ಚಿಂತನೆ ಮಾತ್ರ ಇರ್ಲಿ ಓಕೆ?. ಹ್ಹಾಂ ನಾಡಿದ್ದೇ ಮುಂಬಯಿಗೆ ಟಿಕೆಟ್ ಬುಕ್ ಮಾಡ್ತೀನಿ. ನೀನೂ ನನ್ನ ಜೊತೆ ಬರ್ತಾ ಇದ್ದೀಯಾ.. ಹೊಸ ವಾತಾವರಣ, ಜನರ ಸಂಪರ್ಕ ನಿಂಗೇ ಒಂದು ಹೊಸತನ ತರಬಹುದು. ಅವನಿಗೂ ಹೇಳೇ ಹೋಗೋಣ. ಸರಿ ಸರಿ..ಇನ್ನು ಏಳು ಮೇಲೆ ತುಂಬಾ ಹೊತ್ತಾಯ್ತು.. ಗಂಟೆ ನಾಲ್ಕು ಗೊತ್ತಾ? ಅಣ್ಣ ಅತ್ಗೆ ಗಾಬ್ರಿ ಆಗಿರ್ಬಹುದು.." ಎಂದು ಧೃತಿ ಅವಸರಿಸಲು ಮೌನವಾಗಿ ಅವಳನ್ನು ಹಿಂಬಾಲಿಸಿದಳು.
ತನ್ನ ಭರವಸೆಯ ಮಾತಿಗೋ ಇಲ್ಲಾ ಭಾರವನ್ನು ಹಂಚಿಕೊಂಡು ತುಸು ಹಗುರಾದ ಭಾವಕ್ಕೋ ಪೂರ್ಣ ತುಂಬಾ ಸಮಾಧಾನಗೊಂಡಿರುವಂತೆ ಕಂಡಳು ಧೃತಿಗೆ. ಮೊಗದಲ್ಲಿ ಮಂಕುತನವಿನ್ನೂ ಕವಿದಿದ್ದರೂ ನೋವಿನ ತೀವ್ರತೆ ಮೊದಲಿನಷ್ಟು ಕಂಡುಬರಲಿಲ್ಲ.
ಇತ್ತ ಅವರು ಹೊರಡುವುದಕ್ಕೂ.. ತೋಟದ ಕಡೆಯಿಂದ ಸುಜಾತ ಬರುವುದಕ್ಕೂ ಸಮನಾಯಿತು. "ಏನೇ ಪುಟ್ಟಿ ಈ ಕಡೆ ಬಂದೆ? ಊಟ ಆಯ್ತಾ ನಿಂದು?" ಎಂದು ಕೆನ್ನೆ ಹಿಂಡಿದ ದೃತಿಯ ಕಡೆ ತುಸು ವಿಚಿತ್ರ ನೋಟ ಬೀರಿದಳು ಸುಜಾತ. "ಅಯ್ಯೋ ಅಕ್ಕ.. ಗಂಟೆ ನಾಲ್ಕಾಯ್ತು ಗೊತ್ತಾ? ಎಷ್ಟು ಮಾತಾಡ್ತೀರಾ ನೀವು.. ನಿಮ್ಗೆ ಹಶ್ವಾಗೊಲ್ವಾ? ಅಪ್ಪ ನಿಮ್ಮ ನೋಡ್ಕೊಂಡು ಬಾ ಹೇಳಿದ್ರು.. ಅದ್ಕೇ ಬಂದೆ. ಪೂರ್ಣತ್ತೆ ನೀ ಎಂತಕ್ಕೆ ಬೇಜಾರಲ್ಲಿದ್ದೆ? ಧೃತಿಯಕ್ಕ ನಾಡಿದ್ದು ಹೋಪದಲ್ದ?" ಎಂದು ಆಕಯ ಕೈ ಹಿಡಿಯಲು ಪೂರ್ಣ ಮುಗುಳ್ನಕ್ಕಳು."ಹೇ ಪೂರ್ಣತ್ತೆ ನಾ ಮತ್ತೆ ಒಂದು ಒಗ್ಟು ಕೇಳ್ತಿ.. ಉತ್ರ ಹೇಳು ನೋಡಾನ. ಇವಾಗಷ್ಟೇ ಓದ್ಕ ಬಂದಿ..ಪ್ಲೀಸ್ ಪ್ಲೀಸ್ ನೀ ಈಗ ಬೇಡ ಹೇಳಡಾ ಮತ್ತೆ.. ಕೇಳ್ಲಾ?"ಎಂದು ಗೋಗರೆದಾಗ ಬೇಡವೆನ್ನಲಾಗಲಿಲ್ಲ ಪೂರ್ಣಳಿಗೆ.
"ಸರಿ ಮಾರಾಯ್ತಿ.. ಒಳ್ಳೆ ಒಗ್ಟಿನ ಮಳ್ಳಾಗೋಜೆ ಈಗ ನೀನು.. ಕೇಳು ಗೊತ್ತಿದ್ದ್ರೆ ಹೇಳ್ತಿ.." ಎಂದು ಹೇಳಿದ್ದೇ ತಡ ಅತ್ಯುತ್ಸಾಹದಲ್ಲಿ ಸುಜಾತ ತಯಾರದಳು.
"ಒಗಟಿನೊಳಗೊಂದು ಒಗಟು
ಮುಟ್ಟಹೋದಷ್ಟೂ ಜಿಗುಟು
ಬಿಚ್ಚಹೋದಷ್ಟೂ ಗಂಟು
ಬಿಡಿಸಬಲ್ಲನು ಅವನು
ಇದಕುತ್ತರವೇನು? " - ಗೆಲುವು ತನ್ನದೇ ಎಂಬ ವಿಶ್ವಾಸದಲ್ಲಿ "ಎಂತು ಹೇಳು ನೊಡಾನ" ಎಂದು ಅವಳನ್ನೇ ನೋಡಿದಳು ಸುಜಾತ.
"ಕೂಸೆ ಇದು ಅಣ್ಣಯ್ಯ ನಿನ್ನೆ ತಂದ ಪೇಪರಿನಲ್ಲಿತ್ತು ಅಲ್ದಾ? ನಾ ಮೊದ್ಲೇ ಓದಿದ್ದಿ.. ಉತ್ತರ "ಬದುಕು" ಅಲ್ದ? ಆದ್ರೆ ದಯಮಾಡಿ ಇನ್ನು ಈ ಉತ್ತ್ರ ಹೇಂಗಾಗ್ತು ಹೇಳಿ ಮಾತ್ರ ಕೇಳಡ.. ಆದ್ರೆ ಸರಿ ಉತ್ರ ಅಂತೂ ನಾ ಕೊಟ್ಟಿದ್ದಿ ಹಾಂಗಾಗಿ ಯಾನೇ ಗೆದ್ದಿ ನೋಡು." ಎಂದು ಅವಳ ಗಲ್ಲಕ್ಕೊಂದು ಮುತ್ತು ಕೊಡಲು.. ತಾನು ಸೋತ ಬಗ್ಗೆ ಇನಿತೂ ಬೇಸರಸಿದೆ.."ಹೋಹೋ.. ಪೂರ್ಣತ್ತೆ ಗೆತ್ತು.. ಪೂರ್ಣತ್ತೆ ಗೆತ್ತು.." ಎಂದು ಕೂಗುತ್ತಾ ಮುಂದೆ ಓಡಿದಳು ಸುಜಾತ.
---***---




ಮಂಗಳವಾರ, ಸೆಪ್ಟೆಂಬರ್ 23, 2008

ನಾ ಮೆಚ್ಚಿದ ಕವಿತೆ-೨


ಕವಿ : ಜಿ. ಎಸ್. ಶಿವರುದ್ರಪ್ಪ

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
**ಇಲ್ಲಿ ಕವಿ ಪ್ರಕೃತಿಯಲ್ಲೇ ಸ್ತ್ರೀತ್ವವನ್ನು ಕಾಣುತ್ತಾ, ಹೆಣ್ಣು ಹಾಗೂ ಪ್ರಕೃತಿಯೊಳಗಿನ ಅವಿನಾಭಾವ ಸಂಬಂಧವನ್ನು ಕಾಣಿಸಿದ್ದಾರೆ. ತನ್ನ ಸೃಷ್ಟಿಯನ್ನು ಮಮತೆಯಿಂದ ಪೋಷಿಸುವ, ತುತ್ತನಿತ್ತು ಬೆಳೆಸುವ, ತಂಗಾಳಿಯ ಬೀಸಿ ಆಶ್ರಯ ನೀಡುವ, ವಾತ್ಸಲ್ಯ ಮಯಿ, ಜನನಿಯಾದ ಪ್ರಕೃತಿಯೇ ಒಂದು ಸ್ತ್ರೀ. ಇಂತಹ ಸ್ತ್ರೀಗೆ ಬೇರೆ ಹೆಸರು ಬೇಕೇ? ಸ್ತ್ರೀ ಅಂದರೆ ಅಷ್ಟೇ ಸಾಕೆ?**
ಈ ಕವಿತೆಯನ್ನು ಸಿ.ಅಶ್ವಥ್ ಅವರು ತುಂಬಾ ಸುಂದರವಾಗಿ ಹಾಗೂ ಭಾವಪೂರ್ಣವಾಗಿ ಹಾಡಿದ್ದಾರೆ.
ವಿ.ಸೂ : ಈ ಕವಿತೆಯನ್ನು ಬರೆದದ್ದು ಬಿ.ಆರ್.ಲಕ್ಷ್ಮಣ ರಾವ್ ಅಂತ ತಿಳಿದಿದ್ದೆ. ಒಂದಿಬ್ಬರನ್ನು ವಿಚಾರಿಸದಾಗ ಅವರೂ ಇದನ್ನೇ ಪುಷ್ಟೀಕರಿಸಿದ್ದರು. ಆದರೆ "ಬಾಲವನ" ಬ್ಲಾಗ್ ಅವರು ಜಿ.ಎಸ್.ಶಿವರುದ್ರಪ್ಪ ಎಂದು ಹೇಳಿದಾಗ ಪುನರ್‌ ಪರಿಶೀಲಿಸಲು, ನನ್ನ ತಪ್ಪಿನ ಅರಿವಾಯಿತು. ಆದ ತಪ್ಪನ್ನು ಸರಿಪಡಿಸಿಕೊಂಡು ಹಾಕಿರುವೆ.
-ತೇಜಸ್ವಿನಿ ಹೆಗಡೆ

ಭಾನುವಾರ, ಸೆಪ್ಟೆಂಬರ್ 7, 2008

ಸ್ವಗತ

ಯಾರು ಸಾಟಿ ಎನಗೆ?!

ಹೊರಗಿನ ಬೆಳಕಿನೊಡನೆ
ಒಳಗಿನ ಬೆಳಕಿನಾಟ
ಒಳಗೆ ಹೊರಗೆಲ್ಲಾ
ಬೆಡಗು-ಬೆಳಕಿನ ಚೆಲ್ಲಾಟ
ಜೊತೆಗೆ ಸೇರಿದೆ ನನ್ನ ತುಂಟಾಟ.

ತುಂಬಿ ಹೊರ ಚೆಲ್ಲಲ್ಲು
ಅಣಿಯಾಗಿ ನಿಂತಿಹ
ನನ್ನ ನಗೆ ಬುಗ್ಗೆಗಳು,
ಒಳಗಿಂದ ಹೊರಬರಲು
ಹೊರ ಬೆಳಕೇ ಮಬ್ಬು-ಮಂಕು,
ಒಳಗೆಲ್ಲಾ ತಂಪು-ಸೊಂಪು.

ಬಿಳಿ ಮೋಡಗಳೊಳಗಿಂದ
ಕರಿ ಚಂದ್ರರು ಇಣುಕುತಿಹರೋ,
ಕಪ್ಪು ಗೋಲಿಗಳೊಳಗಿಂದ
ಚುಕ್ಕಿ ತಾರೆಗಳು ಮಿನುಗುತಿಹವೋ!!
ರವಿಯೇ ಕಣ್ಣ ಬಿಂಬವಾಗಿ
ಎಳೆಯ ಕಿರಣ ಬೀರುತಿಹನೋ!!

ನನ್ನೊಳಗೆ ಆತ್ಮತೇಜ,
ನಿನ್ನೊಳಗೆ ಕ್ಷಣದ ಬೆಳಕು
ನನ್ನ ಜೊತೆ ಪೈಪೋಟಿಯೇ?!
ನಿನ್ನ ಬದುಕು ನನ್ನ ಕೈಲಿ
ನೀನು ಎನಗೆ ಸಾಟಿಯೇ?!

ಒಂದೇ ಕ್ಷಣ ಸಾಕು ನನಗೆ,
ನಿನ್ನ ಕೆಡವಿ ಹಾಕಲು,
ನೂಕಿ ನಿನ್ನ ಒಡೆಯಲು,
ಮೆಟ್ಟಿ ಕುಣಿದಾಡಲು,
ಬಿಡೆನು ನಿನ್ನ ಬೆಳಗಲು.

- ಅದಿತಿ ತೇಜಸ್ವಿನಿ ಹೆಗಡೆ :)
(ಫೋಟೋ ಮೇಲೆ ಕ್ಲಿಕ್ಕಿಸಿದರೆ ಚಿತ್ರ ದೊಡ್ಡದಾಗಿ ಕಾಣುವುದು)

ಮಂಗಳವಾರ, ಸೆಪ್ಟೆಂಬರ್ 2, 2008

ಮರೆಯಲಾಗದ ನೆನಪು - ೧

ನಮ್ಮ ಬಾಲ್ಯದಲ್ಲಿ ಘಟಿಸುವ ಕೆಲವೊಂದು ಘಟೆನೆಗಳು ಆಗ ಅಷ್ಟೊಂದು ಪ್ರಮುಖವೆನಿಸದಿದ್ದರೂ, ನಾವು ಬೆಳೆದಂತೆ(ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕೂಡಾ) ಆ ಘಟನೆಗಳು ಹತ್ತು ಹಲವು ಆಕಾರಗಳನ್ನು, ಕಲ್ಪನೆಗಳನ್ನು, ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ನನ್ನ ಸುಪ್ತ ಮನದೊಳಗೆಲ್ಲೋ ಅಡಗಿ ಅಚ್ಚಳಿಯಿದೇ ಉಳಿದ ಇಂತಹ ಮರೆಯಲಾಗದ ನೆನಪುಗಳನ್ನು ಆಗಾಗ ಮಾನಸದಲ್ಲಿ ಕಾಣಿಸುವ ಪುಟ್ಟ ಪ್ರಯತ್ನಕ್ಕೆ ನಾಂದಿ ಹಾಡುತ್ತಿದ್ದೇನೆ. ಇಲ್ಲಿ ನೀವು ನಿಮ್ಮ ಮರೆಯಲಾಗದ ನೆನಪುಗಳನ್ನೂ ಮುಕ್ತವಾಗಿ ಹಂಚಿಕೊಳ್ಳಬಹುದು.
----------------------------------------
ಆಗ ನನಗೆ ಸುಮಾರು ೬-೭ ವರ್ಷಗಳಷ್ಟೇ! ನಾವಾಗ ಮಂಗಳೂರಿನ ಮಣ್ಣಗುಡ್ದೆಯಲ್ಲಿರುವ ಮಠದಗಣಿಯಲ್ಲಿರುವ ವಠಾರದಲ್ಲಿ ವಾಸಿಸುತ್ತಿದ್ದೆವು. ನಮ್ಮ ಮನೆಯ ಪಕ್ಕದಲ್ಲೊಂದು ಮನೆಯಿದ್ದರೆ, ಮನೆಯ ಮುಂದೆ ನಂದಿ ಬಟ್ಟಲು ಗಿಡದ ಹಿಂಡೊಂದಿತ್ತು. ಅದರ ಪಕ್ಕದಲ್ಲೇ ಕೇದಿಗೆ ಮರವೊಂದು ಹಬ್ಬಿತ್ತು. ಅದರಾಚೆ ಒಂದು ಕುಡಿಯುವ ಬಾವಿ. ಅದರ ನಂತರ ಒಂದು ಮಣ್ಣಿನ ಧರೆ ಇದ್ದರೆ, ಮೇಲೆ ಮತ್ತೆ ೩-೪ ಮನೆಗಳಿದ್ದವು.(ಈಗ ಆ ಪ್ರದೇಶದ ಸ್ವರೂಪವೇ ಬದಲಾಗಿದೆ ಬಿಡಿ).
ಮಳೆಗಾಲವಾಗಿದ್ದರಿಂದ ಆ ಸಮಯದಲ್ಲಿ ಬಾವಿಯ ತುಂಬಾ ನೀರು ತುಂಬಿತ್ತು. ಆ ದಿನ ನನ್ನ ಪ್ರೀತಿಯ ಸೋದರಮಾವ ಮನೆಗೆ ಬಂದಿದ್ದರು. ರಾತ್ರಿ ಸುಮಾರು ಒಂಭತ್ತು ಗಂಟೆಯ ಸಮಯ. ಅಪ್ಪನ ಬರುವಿಕೆಗಾಗಿ ಕಾಯುತ್ತಾ ನಾನು ಮನೆಯ ಮುಂದಿನ ಮೆಟ್ಟಿಲ ಮೇಲೆ ಕೂತಿದ್ದೆ. ಅಮ್ಮ, ಮಾವ ಒಳಗಡೆ ಏನೋ ಮಾತಾಡುತ್ತಿದ್ದರು. ಪಕ್ಕದ ಮನೆಯವರೂ ಊರಲ್ಲಿರಲಿಲ್ಲ. ಇದಕ್ಕಿದ್ದಂತೆ ಕರೆಂಟ್ ಹೋಯಿತು. ಆಕಾಶದಲ್ಲಿ ಆಗಾಗ ಮೂಡುತ್ತಿದ್ದ ಮಿಂಚಿನ ಬೆಳಕು ಮಾತ್ರವಿತ್ತು. ಒಳಗಿನಿಂದ ಅಮ್ಮ ನನ್ನ ಕರೆಯತೊಡಗಲು, ಇನ್ನೇನೂ ಹೋಗಬೇಕೆನ್ನುವಷ್ಟರಲ್ಲಿ.. ಬಿಳಿ ಬಟ್ಟೆಯನ್ನುಟ್ಟ(ಬಹುಶಃ ಬಿಳಿ ಬಣ್ಣದ ಲುಂಗಿ ಸುತ್ತಿತ್ತು) ವ್ಯಕ್ತಿಯೋರ್ವ ಬಾವಿಯಕಡೆ ಬರಲು ಕುತೂಹಲದಿಂದ ನೋಡತೊಡಗಿದೆ. ಕತ್ತಲು ತುಂಬಿದ್ದರಿಂದ ಮುಖದ ಪರಿಚಯವಾಗಲಿಲ್ಲ. ನೋಡುತ್ತಿದ್ದಂತೆ ನಿಮಿಷ ಮಾತ್ರದಲ್ಲಿ ಆತ ಬಾವಿಗೆ ಹಾರಿಬಿಟ್ಟ! ಆತ್ಮಹತ್ಯೆ ಎಂದರೇನು.. ಅದರಿಂದೇನಾಗುವುದೆಂದೂ ತಿಳಿಯದ ವಯಸ್ಸು. ಆದರೂ ಏನೋ ಆಗಬಾರದ್ದು ಆಯಿತೆಂದು ಮಾತ್ರ ತಿಳಿದೆ. ಒಳ ಓಡಿ ಅಮ್ಮನಿಗೆ ಹೇಳಿದರೆ ಆಕೆ ಮೊದಲು ನಂಬಲೇ ಇಲ್ಲ. ಯಾವಾಗ ಬಾವಿಯೊಳಗಿಂಬ ಬೊಬ್ಬೆ ಕೇಳಿತೋ ಅಮ್ಮ ಹಾಗೂ ಮಾವ ಬಾವಿಯ ಬಳಿಗೆ ಓಡಿದರು. ತಡಮಾಡದೇ ಮಾವ ಮೇಲಿನ ಮನೆಯವರನ್ನೆಲ್ಲಾ ಕೂಗಿ ಕರೆದರು. ಅಂಬ್ಯುಲೆನ್ಸ್ ಹಾಗೂ ಪೋಲಿಸರಿಗೂ ಕರೆಕೊಟ್ಟಾಯಿತು. ಕೆಲವೇ ತಾಸುಗಳಲ್ಲಿ ಕ್ರೇನ್ ತರಿಸಿ ಆ ವ್ಯಕ್ತಿಯ ಶವವನ್ನು ತೆಗೆಯಲಾಯಿತು.

ಆಗ ನಾವೆಷ್ಟು ಹೆದರಿದ್ದೆವೆಂದರೆ ರತ್ರೋ ರಾತ್ರಿ ಆಟೋ ಮಾಡಿಸಿ ಕೊಂಡು ಮಾವನ ಮನೆಯಾದ ಕೊಣಾಜೆಗೆ ಹೋಗಿಬಿಟ್ಟೆವು. ೨-೩ ದಿವನಸಗಳ ನಂತರ ಮನೆಗೆ ಬರುವಷ್ಟರಲ್ಲಿ ಸುದ್ದಿ ತಣ್ಣಗಾಗಿತ್ತು. ಪಕ್ಕದ ಮನೆಯವರಲ್ಲಿ ಆತನ ಕುರಿತು ಹಾಗೂ ಆತನ ಸಾವಿನ ಕುರಿತು ವಿಚಾರಿಸಿದಾಗ ತಿಳಿದುಬಂದದ್ದಿಷ್ಟು---

ಆ ವ್ಯಕ್ತಿ ಶಟ್ಟರ ಚಿನ್ನದ ಅಂಗಡಿಯಲ್ಲಿ ಕೆಲಸಮಾಡಿತ್ತಿದ್ದವನಂತೆ. ದೂರದ ಊರಿನವನಾಗಿದ್ದರಿಂದ ಅವರ ಮೆನೆಯಲ್ಲೇ ಉಳಿಸಿಕೊಳ್ಳಲಾಗಿತ್ತು. ಆತನ ವಯಸ್ಸು ಕೇವಲ ೧೯ ಮಾತ್ರ! ಕಲದಿನಗಳಿಂದ ಶೆಟ್ಟರಿಗೆ ಆತನ ಮೇಲೆ ಗುಮಾನಿಯಿತ್ತಂತೆ. ಚಿನ್ನವನ್ನು ಕಳುತ್ತಿದ್ದಾನೆಂದು. ಆವತ್ತು ಅವನನ್ನು ವಿಚಾರಿಸಲು, ಆತ ಅವಮಾನದಿಂದಲೋ ಇಲ್ಲಾ ಹೆದರಿಯೋ ಎಸಿಡ್ ಕುಡಿದು ಬಿಟ್ಟನಂತೆ. ಅದರ ಉರಿಯನ್ನು ತಾಳಲಾಗದೇ ಬಾವಿಗೆ ಹಾರಿಕೊಂಡುಬಿಟ್ಟ.
ಮಾವನ ಮನೆಯಿಂದ ಬಂದ ಮೇಲೂ ನಾನು ಬಹಳಷ್ಟು ದಿನ ಹೆದರಿಕೊಂಡಿದ್ದೆನಂತೆ. ಆದರೆ ಸಮಯ ಕಳೆದಂತೆ ಭಯದ ಜಾಗದಲ್ಲಿ ಹಲವಾರು ಕುತೂಹಲಗಳು, ಕಲ್ಪನೆಗಳು, ಉತ್ತರವಿಲ್ಲದ ಪ್ರಶ್ನೆಗಳು ತುಂಬಿಕೊಳ್ಳ ತೊಡಗಿದವು. ಈಗಲೂ ಇವೆಲ್ಲಾ ನನ್ನ ಮಾನಸದ ಮೂಲೆಯಲ್ಲೆಲ್ಲೋ ಬೆಚ್ಚಗೆ ಕುಳಿತಿವೆ. ಆಗಾಗ ಧುತ್ತೆಂದು ಪ್ರಶ್ನೆಗಳು ಕಾಡುತ್ತಿರುತ್ತವೆ.. ಮುಗಿಯದ ಕಲ್ಪನೆಗಳು ಹಾರುತ್ತಿರುತ್ತವೆ...


ಅಲ್ಲೇ ಸಮೀಪ ಕುಳಿತಿದ್ದ ನನ್ನನ್ನು ಆತ ಬಾವಿಗೆ ಹಾರುವ ಮೊದಲೇನಾದರೂ ನೋಡಿದ್ದನೇ? ಆಗ ಅವನ ಮನಃಸ್ಥಿತಿ ಹೇಗಿದ್ದಿರಬಹುದು? ನನ್ನ ನೋಡಿದ್ದರೆ ಆ ಕ್ಷಣ ಅವನಿಗೇನನಿಸಿರಬಹುದು? ಅಷ್ಟು ಎಳೆವೆಯಲ್ಲೇ ಈ ರೀತಿ ದುರಂತ ಮರಣ ಕಾಣುವಂತಹ ಸ್ಥಿತಿ ನಿಜಕ್ಕೂ ಏನಾಗಿರಬಹುದು?ಅವರ ಆಪಾದನೆಯಿಂದ ಮಾತ್ರ ಆತ ಸತ್ತನೇ? ಅವನ ಶವವನ್ನೊಯ್ಯಲು ಆತನ ಮನೆಯವರಾರೂ ಯಾಕೆ ಬರಲಿಲ್ಲ? ಶೆಟ್ಟರೇಕೆ ವರ್ಷ ಕಳೆಯುವುದೊರಳಗೆ ಅಂಗಡಿ, ಮನೆ ಎಲ್ಲಾ ಮಾರಿ ಅದೃಶ್ಯರಾದರು?... ಇತ್ಯಾದಿ...ಇತ್ಯಾದಿ.

ಕಲ್ಪನೆಗಳಿಗೆ ಕೊನೆಯಿಲ್ಲ.. ಆದರೆ ನಂಬಿದರೆ ನಂಬಿ ಬಿಟ್ಟರೆ ಬಿಡಿ.. ಇದು ಕಲ್ಪನೆಯಲ್ಲ.. ನನ್ನೊಡನೆ ನಡೆದ ಬಾಲ್ಯದಲ್ಲಿ ನಾ ಕಂಡ ಸತ್ಯಘಟೆನೆ!!

ಬುಧವಾರ, ಆಗಸ್ಟ್ 27, 2008

ನಾ ಮೆಚ್ಚಿದ ಕವಿತೆ-೧



ಕವಿ - ಜಿ.ಎಸ್.ಶಿವರುದ್ರಪ್ಪ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವೆ
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ



*** ಜಿ.ಎಸ್.ಶಿವರುದ್ರಪ್ಪನವರ ಈ ಕವನವೊಂದೇ ಸಾಕು ಅವರ ಮನದ ತಿಳಿಯನ್ನು ನಮಗೆ ತಿಳಿಸಲು. ತುಂಬಾ ಸುಂದರ ಕವನ ಅಷ್ಟೇ ಸುಶ್ರಾವ್ಯವಾಗಿ ಹಾಡಬಹುದಾಗಿದೆ. ಇದರೊಳಗಿನ ಅರ್ಥವನರಿತು ನಡೆದರೆ, ನಾಲ್ಕುದಿನದ ಈ ಬದುಕಿನಲ್ಲಿ ಹೊಂದಾಣಿಕೆ ಎಂಬುದು ಕಷ್ಟವೆನಿಸದು.***
-ತೇಜಸ್ವಿನಿ ಹೆಗಡೆ

ಭಾನುವಾರ, ಆಗಸ್ಟ್ 10, 2008

ನೀನಾರಿಗಾದೆಯೋ ಎಲೆ ಮಾನವ..?!!!


ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಹೋಗಲು ಸುಮಾರು ೮-೯ ತಾಸುಗಳೇ ಬೇಕು. ಬೆಳಿಗ್ಗೆ ೫-೫.೩೦ ಗಂಟೆಗೆ ಹೊರಟರೂ ಮಧ್ಯಾಹ್ನ ೨-೩ ಗಂಟೆಗೆ ತಲುಪುತ್ತೇವೆ. ಇದಕ್ಕಾಗಿ ಶಿರಾಡಿ ಘಾಟಿಯ ಸುಂದರ ಕುಳಿಗಳಿಗೆ, ಎಂದೂ ಮುಗಿಯದ ಕಾಂಕ್ರೀಟ್ ಕಾಮಗಾರಿಗೆ ಧನ್ಯವಾದಗಳನ್ನು ಹೇಳಲೇ ಬೇಕು.

ನೆಲಮಂಗಲದವರೆಗಿನ ಟ್ರಾಫಿಕ್ ತಪ್ಪಿಸಿಕೊಳ್ಳಲು ಚುಮು ಚುಮು ಬೆಳೆಗ್ಗೆಯೇ ಎದ್ದು ಹೊರಡುವಾಗ ಕಣ್ಣ ನಿದ್ದೆ ಇನ್ನೂ ಆರಿರದಿರುವುದರಿಂದ ಒಂದು ತರಹದ ಜಡತ್ವ, ಆಲಿಸಿತನ ಮೈಗೂಡಿರುತ್ತದೆ. ಆದರೆ ಅದೇನೋ ಏನೋ ನೆಲಮಂಗಲವನ್ನೊಮ್ಮೆ ದಾಟಿದ ಕೂಡಲೇ ಅದೆಲ್ಲಿಂದಲೋ ಒಂದು ಚುರುಕುತನ ಮೂಡುತ್ತದೆ. ಸೂರ್ಯೋದಯದ ರಂಗು ತುಂಬಿಕೊಂಡ ತಿಳಿ ಬಾನು ಕಣ್ಣಿಗೆ ಹಬ್ಬ ಕೊಡುವಂತಿದ್ದರೆ, ತಂಗಾಳಿಯ ಹಿತ ಸ್ಪರ್ಶ ಕಚಗುಳಿ ಇಡುತ್ತದೆ. ಭೀಮಸೇನ ಜೋಶಿಯವರ "ಕರುಣಾಕರ ನೀ ಎಂಬುವದ್ಯಾತಕೋ..." ಹಾಡು ಹೊಮ್ಮುವಾಗ ಅಳಿದುಳಿದ ಜಡತ್ವ ಮರೆಯಾಗುತ್ತದೆ.

ಆದರೆ ಇವೆಲ್ಲವುಗಳ ಜೊತೆಗೆ ಮನಸ್ಸಿಗೆ ಮುದ ನೀಡುತ್ತಿದ್ದ ದೃಶ್ಯವೆಂದರೆ ಹಾಸನದವರೆಗೂ ದಾರಿಯ ಇಕ್ಕೆಲಗಳಲ್ಲೂ ಹಬ್ಬಿ ತಂಪೆಳಲ ನೀಡುತ್ತಾ, ಹಕ್ಕಿಗಳ ಚಿಲಿಪಿಲಿ ಹಾಡ ಕೇಳಿಸುತ್ತಾ, ಬಿಸಿಲು ನೆರಳಿನಾಟವ ಕಾಣಿಸುತ್ತಾ, ಅಲ್ಲಲ್ಲಿ ದಾರಿಗಳುದ್ದಕ್ಕೂ ಹೂ ಚೆಲ್ಲಿ ಸ್ವಾಗತ ಕೋರುವಂತಿದ್ದ ಬೃಹತ್ ಮರಗಳು! ಇವುಗಳನ್ನು ನೋಡುತ್ತಾ ಸಾಗುವುದೇ ಒಂದು ಕಣ್ಣಿಗೆ ಹಬ್ಬ. ಆಲದ ಮರ, ಮಾವಿನ ಮರ, ಹಲಸಿನ ಮರ, ನುಗ್ಗೆ- ಹೀಗೆ ವಿವಿಧ ಜಾತಿಯ ಮರಗಳು. ಬಿದ್ದು ಹುಟ್ಟಿದ್ದೋ ಇಲ್ಲಾ ಯಾರೋ ಪುಣ್ಯಾತ್ಮರು ನೆಟ್ಟಿದ್ದೋ.. ಈ ಮರಗಳು ನನ್ನ ಪ್ರಯಾಣದ ಆಯಾಸವನ್ನಂತೂ ಕಡಿಮಾಡುತ್ತಿದ್ದವು.

ಆದರೆ ಈಗ...!!!

ಆರೇಳು ತಿಂಗಳುಗಳ ಕಳೆದು ಮತ್ತೆ ನಾನು ಅದೇ ದಾರಿಯಲ್ಲಿ ಪ್ರಯಾಣಿಸುವಾಗ ಕಂಡ ದೃಶ್ಯಗಳು ನನ್ನಲ್ಲಿ ಅತೀವ ನೋವು ಹಾಗೂ ವೇದನೆಯನ್ನು ತುಂಬಿದವು. ಸರಕಾರದ ಮಹಾನ್ ಚತುಷ್ಪಥ ಯೋಜನೆ ಎನ್ನುವುದು ಈ ಮರಗಳನ್ನೆಲ್ಲಾ ನೆಲಸಮ ಮಾಡಿದೆ.

ಕಾರಣ...??!!

ವಾಹನಗಳ ದಟ್ಟಣೆ ಹೆಚ್ಚಾಗಿರುವುದು, ಅಪಘಾತಗಳನ್ನು ತಡೆಯಲು, ತಾಸುಗಳ ಕಾಲ ವಾಹನಗಳ ನಿಲುಗಡೆಯನ್ನು ನಿಲ್ಲಿಸಲು ಈ ಕ್ರಮ. ಚತುಷ್ಪಥ ರಸ್ತೆಯಲ್ಲಿ ವೇಗವಾಗಿ ಸಾಗಿ ಬೇಗ ಗಮ್ಯ ತಲುಪಿ ಸಮಯ ಉಳಿಸಲು ಈ ಮರಗಳನ್ನು ಅಳಿಸಿದ್ದಾರೆ!

ಬೀಜವಾಗಿ ಮಣ್ಣಸೇರಿ ಸಸಿಯಾಗಿ, ಮರವಾಗಿ, ಬೃಹತ್ತಾಗಿ ಬೆಳೆದು ಹಬ್ಬಲು ಅದೆಷ್ಟೋ ವರುಷಗಳು ಬೇಕಾದವು. ಯಾರೂ ನೀರುಣಿಸಲಿಲ್ಲ, ಕಸಿ ಮಾಡಲಿಲ್ಲ, ಗೊಬ್ಬರ ಹಾಕಲಿಲ್ಲ. ಪ್ರಕೃತಿಯೇ ಮಮತೆಯಿಂದ ಬೆಳೆಸಿದ್ದ ನೂರಾರು ಮರಗಳು ಈಗಿಲ್ಲ! ಅದೆಷ್ಟೋ ವರುಷಗಳಿಂದ ಹಲವಾರು ಪಕ್ಷಿಗಳಿಗೆ ವಾಸಸ್ಥಾನವಾಗಿದ್ದ, ಅನೇಕ ಜೀವಜಂತುಗಳಿಗೆ ಆಶ್ರಯ ನೀಡಿದ್ದ, ಉರಿ ಬಿಸಿಲಾಗಿ ಬಸವಳಿದ ಮನುಷ್ಯರಿಗೆ ತಂಪೆಳಲ ನೀಡಿದ್ದ, ತನ್ನೊಳಗಿನ ಹೂವು, ಕಾಯಿ, ಹಣ್ಣು, ಟೊಂಗೆ, ಎಲೆ-ಎಲ್ಲವನ್ನೂ ನೀಡಿ ಧಾರೆಯೆರೆದ ನಿಃಸ್ವಾರ್ಥ ಮರಗಳನ್ನು ಕೆಲವೇ ದಿನಗಳಲ್ಲಿ ನೆಲಸಮ ಮಾಡಲಾಗಿದೆ!ಅದೇಕೋ ಏನೋ ಇತ್ತೀಚಿಗೆ ವಾಹಿನಿಯೊಂದರಲ್ಲಿ ಬರುತ್ತಿರುವ ಧಾರಾವಾಹಿಯೊಂದರ ಹಾಡಿನ ಸಾಲೊಂದು ನೆನಪಾಯಿತು..

"ಮಣ್ಣ ತಿಂದು ಸಿಹಿ ಹಣ್ಣನೀವ ಮರ
ನೀಡಿ ನೀಡಿ ಮುಕ್ತ..
ಬೇವ ಅಗಿವ ಸವಿಗಾನದ ಹಕ್ಕಿ
ಹಾರಿ ಹಾರಿ ಮುಕ್ತ..."

ಒಂದು ಕಾಲದಲ್ಲಿ ನಳನಳಿಸಿ ನಗುತ್ತಿದ್ದ ಹೆಮ್ಮೆಯಿಂದ ತೆಲೆಯೆತ್ತಿ ಬಾನಂಚ ಮುಟ್ಟುವಂತಿದ್ದ ಮರಗಳ ದುರ್ಗತಿ ಕಂಡು ತುಂಬಾ ಸಂಕಟವಾಯಿತು. ಆ ದೃಶ್ಯಗಳನ್ನೇ ಈ ಸಲ ಸೆರೆ ಹಿಡಿದು ನಿಮ್ಮ ಮುಂದೆ ಇಟ್ಟಿರುವೆ.



ಎಷ್ಟು ಸಿಕ್ಕರೂ ಇನ್ನಷ್ಟು ಬೇಕೆಂದು ಬೊಬ್ಬಿರಿವ ಬಕಾಸುರನಂತಾಗಿರುವ ಮನುಷ್ಯ. ಕೇವಲ ತನ್ನ ಸವಲತ್ತಿಗೋಸ್ಕರ ಅಸಂಖ್ಯಾತ ಜೀವ ಜಂತುಗಳನ್ನು ನಿರ್ಗತಿಕರನ್ನಾಗಿಸಲು ನಮಗೆ ಯಾವ ಹಕ್ಕಿದೆ? "ನೀವೂ ಜೀವಿಸಿ ನಮ್ಮನ್ನೂ ಜೀವಿಸಲು ಬಿಡಿ" ಎಂದು ದೈನ್ಯತೆಯಿಂದ ಕೇಳಿಕೊಳ್ಳುವಂತಿದೆ ಪ್ರಕೃತಿ. ಆದರೂ ನಾವು ಪದೇ ಪದೇ ಅದರ ಸಹನೆಯನ್ನು ಮಿತಿ ಮೀರಿ ಪರೀಕ್ಷಿಸುತ್ತಿದ್ದೇವೆ. ಇನ್ನೂ ನಮ್ಮ ಕ್ರೌರ್ಯ ನಿಲ್ಲದೇ ಹೋದರೆ ಪ್ರಕೃತಿಯೇ ಸಂಪೂರ್ಣ ತಿರುಗಿ ಬಿದ್ದೀತು. ಈಗಾಗಲೇ ನಮ್ಮ ಅಪರಾಧದಿಂದ ಸುನಾಮಿ, ಕಡಲ್ಗೊರೆತ, ಅತಿವೃಷ್ಟಿ, ಅನಾವೃಷ್ಟಿ - ಮುಂದಾದ ವೈಕೋಪಗಳನ್ನು ಅನುಭವಿಸಿದ್ದೇವೆ.. ಅನುಭವಿಸುತ್ತಲೂ ಇದ್ದೇವೆ. ಆದರೂ ನಾವು ಅದನ್ನು ನಿರ್ಲಕ್ಷಿಸುತ್ತಾ ಬಂದಿದ್ದೇವೆ.

ಪ್ರತಿ ವರ್ಷವೂ ಜೂನತಿಂಗಳಿನಲ್ಲಿ ಕಾಟಾಚಾರಕ್ಕೆ ಸರಕಾರ "ವನಮಹೋತ್ಸವವನ್ನು" ಆಚರಿಸುತ್ತದೆ. ಆದರೆ ಇನ್ನೊಂದೆಡೆ ಇಂತಹ ಯೋಜನೆಗಳ ಹೆಸರಿನಡಿಯಲ್ಲಿ "ವನದಹೋತ್ಸವವನ್ನೇ" ಜಾರಿಗೆ ತರುತ್ತದೆ! ನೂರಾರು ಮರಗಳ ನಾಶವಾಗುತ್ತಿರುವಾಗಲೂ ಈ ಕಡೆ ಯಾಕೆ ಯಾವ ಸಂಘಟನೆಯೂ ದೃಷ್ಟಿ ಹರಿಸಿಲ್ಲ? ಈ ಮರಗಳನ್ನು ಉಳಿಸಲು ಯಾರೂ ಯಾಕೆ ಅಪ್ಪಿಕೋ ಚಳುವಳಿ ನಡೆಸಿಲ್ಲ? ಇವುಗಳೆಲ್ಲಾ ನಾಡ ಮರಗಳೆಂದೇ?! ಕಾಡು ಮರಗಳಲ್ಲವೆಂದೇ?!
ಇದೇ ರೀತಿ ಮುಂದುವರಿದರೆ ಈ ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವ ಬೋಳು ಕಲ್ಲುಗುಡ್ಡೆಯೇ ಭೂಮಿಯ ತುಂಬೆಲ್ಲಾ ತುಂಬಿಕೊಂಡು, ಆ ಬುಡಕಡಿದು ಗೆದ್ದಲು ಹಿಡಿದ ಮರದ ತುಂಡಿನ ಸ್ಥಿತಿ ನಮ್ಮದಾಗುವುದು.



`ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು'-ಆದರೆ ಹಳೆಬೇರನ್ನೇ ನಾಶಮಾಡಿದರೆ ಹೊಸ ಚಿಗುರಿನ ಪ್ರಶ್ನೆಯೇ ಏಳದು. ಹೊಸ ಹೊಸ ಅನ್ವೇಷಣೆಗಳನ್ನು ಹೊರತರುತ್ತಾ, ಹಳೆಯ ತತ್ವಗಳ ಸತ್ವವನ್ನೇ ತೂರಿಬಿಟ್ಟರೆ ಅಧರ್ಮವೇ ಹೆಚ್ಚಾಗಿ ಜೀವನ ರಸವೇ ಬತ್ತಿಹೋಗುವುದು. ಬರಿಯ ಕಸವಾಗುವುದು ಈ ಮನುಕುಲ. ಋಷಿ ವಾಕ್ಯದೊಡನೆ ವಿಜ್ಞಾನವು ಕೂಡಿದರೆ ಮಾತ್ರ ಈ ಜಗತ್ತು ಉಳಿದೀತು ಬೆಳೆದೀತು.
---***---

ಭಾನುವಾರ, ಜುಲೈ 27, 2008

ಆಡುಂಬ ಬಾಲೆಗೆ ತೊಟ್ಟಿಲೇ ತಾಯಮ್ಮ...


‘ತಾವರೆದಳ ನಿನ್ನ ಕಣ್ಣು,
ಕೆನ್ನೆ ಮಾವಿನ ಹಣ್ಣು
ಕಣ್ಣ ತುಟಿಯ ಅಂದ,
ಬಣ್ಣದ ಚಿಗುರಿಗೂ ಚಂದ
ನಿದ್ದೆ ಮರುಳಲ್ಲಿ ನಗಲು,
ಮಂಕಾಯ್ತು ಉರಿಯುವ ಹಗಲು
ಮಲಗೂ ಮಲಗೆನ್ನ ಮರಿಯೇ
ಬಣ್ಣದ ನವಿಲಿನ ಗರಿಯೇ
ಎಲ್ಲಿಂದ ಬಂದೆ ಈ ಮನೆಗೆ,
ನಂದನ ಇಳಿದಂತೆ ಭುವಿಗೆ
ಜೋss ಜೋ ಜೋ ಜೋss....’
----
ಲಾಲಿ ಕೇಳುತ್ತಾ ಮಡಿಲೊಳಗೆ ಹಾಯಾಗಿ ಮಲಗಿದ್ದ ಪುಟ್ಟಿಯ ಕಡೆ ನೋಡಿದೆ. ಹಾಡಿನ ಮೋಡಿಗೋ ಇಲ್ಲಾ ಹಾಲಿನ ಸವಿಗನಸಕಂಡೋ ತುಸುವೆ ತುಟಿ ಬಿರಿದುಕೊಂಡು ನಗುತ್ತಿದ್ದಳು. ಆ ನಗುವನ್ನೇ ನೋಡುತ್ತಾ ಮೈಮರೆತೆವಳನ್ನು ಎಚ್ಚರಿಸಿದ್ದು ಲಕ್ಷ್ಮಿಯ ಮಾತುಗಳು.

"ಅಕ್ಕಾ, ಪಾಪು ಮಲಗಿದೆ. ಹಾಸಿಗೆಗೆ ಹಾಕಿ ಬನ್ನಿ. ಮೊದ್ಲು ನೀವು ಊಟ ಮಾಡಿಬಿಡಿ. ಎದ್ರೆ ನಾನಿಲ್ಲೆ ಇರ್ತೀನಿ. ಗಂಟೆ ಆಗ್ಲೇ ಒಂದಾಯ್ತು.. ಏಳಿ" ಎಂದು ಅವಸರಿಸಿಸಲು ಅರೆಮನಸ್ಸಿನಿಂದಲೇ ಎದ್ದು ಊಟಕ್ಕೆ ಹೋದೆ.

ನನ್ನ ಚಿಕ್ಕಮ್ಮನ ಊರಾದ ಬೆಳ್ತಂಗಡಿಯ ಕಡೆಯ ಈ ಲಕ್ಷ್ಮಿಗೆ ಸುಮಾರು30ವರ್ಷಗಳಾಗಿರಬಹುದು. ಹಲವಾರು ಕಡೆ ಕೆಲಸಮಾಡಿ ನುರಿತವಳು. ಮಕ್ಕಳ ಲಾಲನೆ-ಪಾಲನೆಯಲ್ಲೂ ಪಳಗಿದ ಅನುಭವಸ್ಥೆ ಎಂಬೆಲ್ಲ ಶಿಫಾರಸ್ ಗಳನ್ನು ಹೊತ್ತೇ ಬಂದವಳು. ಕಾರಣಾಂತರಗಳಿಂದ ನನಗೊಬ್ಬಳಿಗೇ ಪುಟ್ಟಿಯನ್ನು ನೋಡಿಕೊಳ್ಳುವುದು ಅಸಾಧ್ಯವಾಗಿದ್ದರಿಂದ ಇಂತಹ ಓರ್ವ ಅನುಭವಸ್ಥೆಯ ಸಹಾಯವೂ ನನಗೆ ಅತ್ಯಗತ್ಯವಾಗಿತ್ತು. ಮಗು ಹುಟ್ಟುವ ಮೊದಲೇ ಬಂದ ಲಕ್ಷ್ಮಿ ಈಗ ಮನೆಯವಳಂತೆಯೇ ಆಗಿದ್ದಳು. 10 ತಿಂಗಳ ಪುಟ್ಟಿಯೂ ಕೂಡಾ ಆಕೆಯನ್ನು ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಳು.

ಹತ್ತುನಿಮಿಷದಲ್ಲೇ ಊಟ ಮುಗಿಸಿ ಲಕ್ಷ್ಮಿಯನ್ನು ಊಟಕ್ಕೆ ಕಳುಹಿಸಬೇಕೆಂದುಕೊಂಡು ಕೋಣೆಗೆ ಬಂದರೆ ಆಕೆ ಅದ್ಯಾವುದೋ ಗಂಭೀರ ಯೋಚನೆಯಲ್ಲಿ ಮುಳುಗಿದಂತೆ ಕಂಡು ಬಂದಳು. ದೃಷ್ಟಿ ಪುಟ್ಟಿಯನ್ನೇ ತದೇಕವಾಗಿ ನೋಡುತ್ತಿದ್ದರೂ ಅದ್ರೊಳಗಿನ ನೋಟದಲ್ಲು ಶೂನ್ಯತೆ ಕಾಣಿಸುತ್ತಿತ್ತು.

"ಏನೇ ಲಕ್ಷ್ಮೀ ಪಾಪುನ ಹಾಂಗೆ ನೋಡ್ತಾ ಇದ್ದೀಯಾ..ನಾ ನೋಡಿದ್ರೆ ಅಕ್ಕಾ ಹಾಗೆ ನೋಡ್ಬೇಡಿ ದೃಷ್ಟಿಯಾಗುತ್ತೆ ಅನ್ನೋಳು ಈಗ ದೃಷ್ಟಿಯಾಗೋದಿಲ್ವಾ?" ಎಂದು ಹಾಸ್ಯ ಮಾಡಿದೆ. ಊಹೂಂ ಆದರೂ ಆಕೆಯ ಮುಖದಲ್ಲಿ ನಸುನಗುವೂ ಮೂಡಲಿಲ್ಲ. ಈಗ ನನಗೆ ಸಂಶಯವಾಯಿತು ನನ್ನಿಂದೇನಾದರೂ ಬೇಸರವಾಯಿತೇ ಎಂದು.. ಯೋಚಿಸಿದರೆ ನಾನೇನೂ ಬೇಸರ ತರಿಸುವ ರೀತಿ ನಡೆದುಕೊಂಡ ನೆನಪಾಗಲಿಲ್ಲ. ಆಕೆಯನ್ನೇ ನೇರವಾಗಿ ಕೇಳಿದೆ.
"ಏನಾಯ್ತೇ ಲಕ್ಷ್ಮಿ? ತುಂಬಾ ಯೋಚ್ನೆ ಮಾಡ್ತಾ ಇದ್ದೀಯಾ.. ಮನೆ ನೆನಪಾಗ್ತಾ ಇದೆಯಾ? ಹಾಗಿದ್ರೆ ಹೇಳು ಮನೆಗೆ ಫೋನ್ ಮಾಡುವಿಯಂತೆ" ಎಂದು ಕೇಳಿದೆ.

"ಹಾಗೇನಿಲ್ಲಕ್ಕ, ಹಾಗೇ ಸುಮ್ನೇ ಯೋಚ್ನೆ ಮಾಡ್ತಾ ಇದ್ದೆ. ಪಾಪು ನೋಡ್ತಾ ಏನೋ ನೆನಪಾಯ್ತು" ಎಂದು ನಿಟ್ಟುಸಿರು ಚೆಲ್ಲಿದಳು. "ಪುಟ್ಟಿ ನೋಡಿ ಎಂತ ಯೋಚ್ನೆ ಬಂತೆ ನಿನಗೆ? ಅಂಥದೇನು ನೆನ್ಪಾಯ್ತು" ಎಂದು ಅಲ್ಲೇ ಹಾಸಿಗೆಯಲ್ಲಿ ಕುಳಿತೆ. ಕೈ ಅಪ್ರಯತ್ನವಾಗಿ ಪುಟ್ಟಿಯ ತಲೆ ಸವರತೊಡಗಿತು.

"ಅಕ್ಕಾ, ನೀವು ಅಣ್ಣಾ ಎಲ್ಲಾ ಪಾಪುನ ಎಷ್ಟು ಪ್ರೀತಿಸುತ್ತೀರಲ್ಲಾ.. ಅದ್ಕೆ ಉಂಚೂರು ನೋವಾದ್ರೂ ನೀವೂ ಅಳ್ತೀರಾ, ಅತ್ತ್ ಕೂಡ್ಲೇ ಮುದ್ದಿಸ್ತೀರಾ, ಹಸಿವಾಗಿ ಅತ್ರೆ, ಊಟಾನೂ ಮಾಡ್ದೆ ಹಾಲು ಕೊಡ್ತೀರಾ, ಆದ್ರೆ ಆ ಪಾಪುಗಳಿಗೆ ಇದ್ಯಾವುದೂ ಸಿಗೊಲ್ಲ.. ಅತ್ರೆ ತಕ್ಷಣ ಹಾಲು ಕೊಡೋರಿಲ್ಲ, ಎತ್ಕೊಂಡ್ ಮುದ್ದು ಮಾಡೋರೂ ಇಲ್ಲಾ.. ಇದ್ನೆಲ್ಲಾ ಯೋಚಿಸಿ ಬೇಜಾರಾಯ್ತು ಅಷ್ಟೆ" ಎಂದು ಹೇಳಿದವಳೇ ನನ್ನ ಪ್ರತಿಕ್ರಿಯೆಗೂ ಕಾಯದೇ ಊಟಕ್ಕೆ ಹೋದಳು.

ನನ್ನ ತಲೆಯೆಲ್ಲಾ ಗೋಜಲಾಗಿ ಹೋಯಿತು. ಅವಳ ಒಗಟಾದ ಮಾತುಗಳು ನನ್ನೊಳಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದವು. ಆದರೂ ತಡೆದುಕೊಂಡೆ, ಅವಳ ಊಟ ಸಾಂಗವಾಗಿ ಸಾಗಲೆಂದು. ಅದೂ ಅಲ್ಲದೇ ಅಲ್ಲೇ ಮಾತಿಗೆ ತೊಡಗಿದರೆ ಎಲ್ಲಿ ಪುಟ್ಟಿ ನಿದ್ದೆಯಿಂದೇಳುವಳೋ ಎಂಬ ಸಣ್ಣ ಭಯವೂ ಇತ್ತು.

ಊಟಮುಗಿಸಿ, ಒಳಗಿನ ಕೆಲಸಗಳನ್ನೆಲ್ಲಾ ಮುಗಿಸಿದ ಲಕ್ಷ್ಮಿ, ಹಾಲಿಗೆ ಬರುವುದನ್ನೇ ಕಾದಿದ್ದ ನಾನು -"ಲಕ್ಷ್ಮಿ ಅದೇನೋ ಆಗ ಹೇಳ್ತಾ ಇದ್ಯಲ್ಲೆ.. ಅದನ್ನೇ ಸರಿಯಾಗಿ ಹೇಳೆ.. ನಂಗೇನೂ ಅರ್ಥನೇ ಆಗ್ಲಿಲ್ಲ ನೊಡು" ಎಂದು ಅವಳುತ್ತರಕ್ಕೆ ಕಾಯುತ್ತಾ ಅಲ್ಲೇ ಕುಳಿತೆ. ಒಮ್ಮೆ ನಿಡಿದಾದ ಉಸಿರು ಬಿಟ್ಟು ಆಕೆ ನನ್ನಡೆ ತಿರುಗಿ ಕುಳಿತಳು.

"ಅಕ್ಕಾ, ನಿಮಗೂ ಗೊತ್ತಲ್ಲ, ಇಲ್ಲಿಗೆ ಬರುವ ಮೊದಲು ನಾನು ಹಲವು ಕಡೆ ಕೆಲಸ ಮಾಡಿಬಂದವಳು ಎಂದು. ಈ ಮೊದಲು ಅಂದರೆ ಇಲ್ಲಿಗೆ ಬರುವ ಮೊದಲು ನಾನು ಬೆಂಗಳೂರಿನಲ್ಲೇ ಆಶ್ರಮವೊಂದರಲ್ಲಿ ಕೆಲಸಕ್ಕಿದ್ದೆ. ನನ್ನ ದೂರದ ಚಿಕ್ಕಮ್ಮ ಒಬ್ಬರು ಅಲ್ಲೇ ಕೆಲ್ಸ ಮಾಡ್ತಿದ್ರು. ಅವ್ರೇ ನನ್ನೂ ಅಲ್ಲಿಗೆ ಕರಕೊಂಡು ಹೋಗಿದ್ದು. ಅಕ್ಕಾ ಅದು ಶಿಶುಗಳ, 2-3 ವರ್ಷಗಳಷ್ಟು ದೊಡ್ಡ ಮಕ್ಕಳ ಅನಾಥಾಶ್ರಮ. ಬೇಡದ ಮಗುವನ್ನು ತೊಟ್ಟಿಯಲ್ಲಿ ಬಿಸಾಡಿ ಹೋಗ್ತಾರಲ್ಲ.. ಅಂತಹ ಶಿಶುಗಳನ್ನು ಯಾರಾದ್ರೂ ಹೇಳಿದ್ರೆ ತಂದು ಸಾಕ್ತಾರೆ. ಹೆಚ್ಚಿನವೆಲ್ಲಾ ಆಗ ಮಾತ್ರ ಹುಟ್ಟಿದವೋ, ಇಲ್ಲಾ 4 - 6 ತಿಂಗಳಿನಷ್ಟು ಸಣ್ಣವೇ. ಅಂತಹ ಮಕ್ಕಳನ್ನು ನಾವು ಅಂದ್ರೆ 6 - 7 ಹುಡುಗಿಯರು ನೋಡ್ಕೋ ಬೇಕಿತ್ತು. ಒಬ್ಬೊಬ್ರಿಗೆ 3 - 4 ತೊಟ್ಟಿಲು ಕೊಡ್ತಿದ್ರು. ಅಂದ್ರೆ ನಾವು ಒಬ್ಬೊಬ್ರು 3 - 4 ಶಿಶುಗಳನ್ನು ನೋಡ್ಕೋ ಬೇಕಿತ್ತು. ನನಗೆ 3 ತೊಟ್ಲು ಸಿಕ್ಕಿತ್ತಕ್ಕ. ಎಷ್ಟು ಚೆಂದ ಇದ್ವು ಪಾಪುಗಳು. ಆದ್ರೆ ಪಾಪ ಹಾಲಿಗಾಗಿ ಯಾವಾಗ್ ನೋಡಿದ್ರೂ ಅಳ್ತಿದ್ವು. ಬಾಟ್ಲಿ ಕೊಟ್ರೂ ಅಳು ನಿಲ್ತಿರ್ಲಿಲ್ಲ. ಪಾಪ ಅನಿಸ್ತಿತ್ತು. ಅಮ್ಮನ ಹಾಲಿಗಾಗಿ ಅವು ಅಳೋವಾಗ ನಂಗೂ ಎಷ್ಟೋ ಸಲ ಅಳು ಬರೋದಕ್ಕ. ನಾನು ನನ್ನ ಹೊಗಳಿಕೊಳ್ಳೋದಲ್ಲ. ಕೆಲ್ವೊಂದು ಹುಡ್ಗೀರು, ಅವ್ರಿಗೆ ತಾಳ್ಮೆ ಕಡ್ಮೆ. ಜಾಸ್ತಿ ಅತ್ರೆ, ಬೋರಲಾಗಿ ಮಲ್ಗ್ಸಿ ಬಿಡೋರು... ಇಲ್ಲಾ ಬಾಟಲಿ ತುರ್ಕಿ ಸುಮ್ಮನಾಗೋರು.. ರಾತ್ರಿ ಎಲ್ಲ ಅತ್ರೆ ಮತ್ತೇನ್ ಮಾಡಿಯಾರು ಬಿಡಿ. ಅವ್ರಿಗೂ ನಿದ್ದೆಗಣ್ಣು ನೋಡಿ... ಆದ್ರೂ ನಂಗೆ ಇದ್ನೆಲ್ಲಾ ನೋಡೋಕೆ ಆಗೋವಲ್ದು. ಹೆಡ್ ಮೇಡಮ್ ಓಳ್ಳೇರು ಗೊತ್ತಾದ್ರೆ ತೆಗ್ದೇ ಹಾಕೋರು. ಬೈಯ್ಯೋರು. ಆದ್ರೆ ದೂರು ಹೇಳೋರು ಯಾರು? ಸುಮ್ನೆ ಯಾಕೆ ದ್ವೇಷ ಕಟ್ಟಿಕೊಳ್ಳೋದು ಎಂದು ಹೆದ್ರಿ ಇರೋದು. ಆದ್ರೆ ಆ ಪಾಪುಗಳ ಗೋಳು ನೋಡ್ಕೊಂದು ಸಹಿಸೋಕೂ ಆಗ್ದೆ, ಅವ್ರಿಗೆ ಬುದ್ಧಿ ಹೇಳೋಕೂ ಆಗ್ದೆ ಹಿಂಸೆ ಆಗ್ತಿತ್ತಕ್ಕಾ, ಅದ್ಕೆ ನಾಲ್ಕೇ ತಿಂಗ್ಳಲ್ಲಿ ಕೆಲ್ಸ ಬಿಟ್ಟು ಮನೆಗೆ ಬಂದ್ಬಿಟ್ಟೆ. ಆಮೇಲೆ ಒಂದ್ವರ್ಷ ಎಲ್ಲೂ ಹೋಗಿಲ್ಲ. ಇಲ್ಲಿಗೇ ಬಂದಿದ್ದು ಅದೂ ಪಾಪು ಇದೆ ಅಂತ.. " ಎಂದು ಮೌನ ತಾಳಿದಳು.

ಒಂದು ಕ್ಷಣ್ ನನಗೂ ಮಾತು ಹೊಳೆಯದಂತಾಯಿತು. ಎದೆಯೊಳಗೆ ಏನೋ ಚುಚ್ಚಿದಂತಹ ಅನುಭವ. ಒಡಲಾಳದೊಳಗೆ ಬೆಂಕಿಹೊತ್ತಿಯುರಿದಂತಾಯಿತು. ಅರಿವಿಲ್ಲದಂತೆಯೇ ಕಣ್ಣೀರು ಧಾರೆಯಾಗಿ ತುಟಿಯಸೋಕಿದಾಗಲೇ ಎಚ್ಚರ ನನಗೆ. ಲಕ್ಷ್ಮಿಯಿಂದ ನನ್ನ ವೇದನೆಯನ್ನು ಮುಚ್ಚಿಕೊಳ್ಳಲು ರೂಮಿನ ಕಡೆ ನಡೆದೆ. ಮಗು ಪ್ರಶಾಂತವಾಗಿ ಮಲಗಿತ್ತು. ಎದೆಹಾಲ ಕನಸಕಂಡೋ ಏನೋ ಬಾಯಿ ಚೀಪಿದಂತೆ ಮಾಡಿ ನಿದ್ದೆ ಮರುಳಲ್ಲಿ ನಗಲು, ತುಸು ಹಾಯೆನಿಸಿತು. ಮತ್ತೆ ಅವಳ ಬಳಿ ಬಂದು ಕುಳಿತೆ. ಏನನ್ನೂ ಕೇಳದೇ ಆಕೆಯೇ ಮತ್ತೆ ಶುರು ಮಾಡಿದಳು.

"ಅಕ್ಕಾ, ಯಾರಿಗೂ ಹೇಳ್ಬೇಡಿ ಮತ್ತೆ .. ಆ ಆಶ್ರಮದಲ್ಲಿ ಈ ಪಾಪದ ಮಗುವನ್ನು ಹೊತ್ತ ಹೆಂಗಸ್ರು ಬಂದು ಹೆರಿಗೆ ಮಾಡಿಸಿಕೊಂಡು ಆಮೇಲೆ ಪಾಪುನ ಅಲ್ಲೇ ಬೆಳೆಯಲು ಬಿಟ್ಟು ಹೋಗ್ತಿದ್ರು. ನಮ್ಗೆ ಅವ್ರು ಹಾಗೆ ಬಿಟ್ಟೂ ಹೋಗೋವಾಗ ತುಂಬಾ ನೋವಾಗೋದು. ಪಾಪ ಹೆಸರಿಡೋರು ಇಲ್ಲಾ. ನಾವೇ ನಮ್ಗೆ ಕೊಟ್ಟ ಶಿಶುಗಳಿಗೆ ನಮ್ಗೆ ಇಷ್ಟವಾದ ಹೆಸ್ರಿಟ್ಟು ಕರೆಯೋದು. ಸುಮಾರು 4 - 5 ತಿಂಗಳಾಗೋವಾಗ ಕೆಲವ್ರು ದತ್ತು ತಗೋಳೋಕೆ ಬರೋರು. ಯಾವ ಪಾಪು ಅವ್ರನ್ನ ನೋಡಿ ಆತ ಮಾಡ್ತೊ, ನಕ್ಕಿತೋ ಅದ್ನ ಆರಿಸೋರು. ಪಾಪು ಹೋಗೋವಾಗನೂ ತುಂಬಾ ಬೇಜಾರಾಗೋದು ಗೊತ್ತಾ? ಪ್ಚ..ಪಾಪ, ಪುಟ್ಟಿ ಭಾಗ್ಯ ಅವುಗಳಿಗಿಲ್ಲಕ್ಕ. ಏನೇ ಹೇಳಿ ನೀವು, ಪಾಪುಗಳಿಗೆ ಅಮ್ಮ ಬೇಕೇ ಬೇಕು ಅಲ್ವಾ?" ಎಂದು ಕೇಳಿದರೆ ಉತ್ತರಿಸಲು ಗಂಟಲೊಳಗೇನೋ ಸಿಕ್ಕಿದಂತೆ......ಮಾತುಗಳೆಲ್ಲಾ ಮೌನರೂಪ ತಾಳಿ ಮನದೊಳು ಹೊಕ್ಕಿ ಅಲ್ಲೇ ಹಲವಾರು ವಿಪ್ಲವಗಳನ್ನೆಬ್ಬಿಸಿದ್ದವು.

‘ಹೇಗೆ ತಾನೆ ತಾಯೊಬ್ಬಳು ಮಗುವನ್ನು ಬಿಟ್ಟು ಹಾಗೆ ಹೋಗಲು ಸಾಧ್ಯ? ಪಾಪದ ಮಗುವೆಂದರೆ ಏನರ್ಥ? ಯಾವ ಮಗು ತಾನೇ ತಾನು ಒಡಲೊಳಗೆ ಮೂಡುವಾಗ ಪಾಪದ ಹಣೆಪಟ್ಟಿಯನ್ನು ಹೊತ್ತಿರುತ್ತದೆ? ಹುಟ್ಟಿದ ಮೇಲೆ ತಾನೆ ಅದರ ಕರ್ಮಾನುಸಾರ ಪಾಪ-ಪುಣ್ಯಗಳ ಲೆಕ್ಕಾಚಾರವಾಗುವುದು? ಯಾರೋ ಮಾಡಿದ ಪಾಪಕ್ಕೆ ಕುಡಿ ಜೀವದ ಬಲಿ! ಇದೆಂತಹ ಪಾಪಕಾರ್ಯ? ಜಗತ್ತೇಕೆ ಹೀಗಿದೆ? ಆ ಕಂದಮ್ಮಗಳೂ ಪುಟ್ಟಿಯಂತೆಯೇ ತಾನೇ? ತನ್ನ ಸೃಷ್ಟಿಯಜೊತೆ ಇರಲೆಂದೇ ಆ ದೇವ ತಾಯರೂಪ ಧರಿಸಿದ ಎಂದು ಹೇಳುತ್ತಾರೆ... ಹಾಗೆ ಮಾಡುವಾಗ ಈ ಶಿಶುಗಳನ್ನೇಕೆ ಮರೆತ? ಅಮ್ಮನ ಹಾಲು, ಜೋಗುಳ, ಪ್ರೀತಿಯ ಅಮೃತಧಾರೆಯನ್ನು ಹಂಚುವಾಗ ಈ ರೀತಿಯ ತಾರತಮ್ಯ ಮಾಡುತ್ತಾನೆ? --ಇಂತಹ ಉತ್ತರಗಳೇ ಇಲ್ಲದ ಮುಗಿಯದ ಪ್ರಶ್ನೆಗಳ ಭಾರದಿಂದ ತಲೆಸಿಡಿಯತೊಡಗಿತು. ಅದೇಕೋ ಏನೋ ಪುಟ್ಟಿಗೆ ಅಮ್ಮ ಹೇಳುತ್ತಿದ್ದ ಹಾಡೊಂದು ಥಟ್ಟೆಂದು ನೆನೆಪಿಗೆ ಬಂತು..

`ಆಡುಂಬ ಬಾಲೆಗೆ ತೊಟ್ಟಿಲೇ ತಾಯಮ್ಮ...
ಆಡಿ ನಲಿವ ನವಿಲನ್ನ
ನಮ್ಮ್ ತಂಗ್ಯಮ್ಮನ ಕೈಗೆ ತಾರಮ್ಮ..

ಆಡುಂಬ ಬಾಲೆಗೆ ತೊಟ್ಟಿಲೇ ತಾಯಮ್ಮ...
ಮಾವಿನ ಮರದ ಗಿಳಿಯನ್ನ
ನಮ್ಮ್ ತಂಗ್ಯಮ್ಮನ ಕೈಗೆ ತಾರಮ್ಮ....’

ಊ..ಹೂಂ... ಮುಂದಿನ ಸೊಲ್ಲುಗಳಾವವೂ ನೆನೆಪಿಗೆ ಬರುತ್ತಿಲ್ಲ. ನಿಜ.. ಆ ಆಶ್ರಮದ ಪುಟಾಣಿಗಳಿಗೆ ತೊಟ್ಟಿಲೇ ತಾಯಿ. ಆಡಿ ನಲಿವ ನವಿಲನ್ನಾಗಲೀ, ಮಾವಿನ ಮರದ ಗಿಳಿಯನ್ನಾಗಲೀ ತಂದುಕೊಡಬಹುದೇನೋ.. ಆದ್ರೆ ತಾಯಿಯನ್ನು ಎಲ್ಲಿಂದ ತರಲು ಸಾಧ್ಯ? ಅಬ್ಬಾ! ತಲೆ ಸಿಡಿದೇ ಹೋದಂತಹ ಅನುಭವ.

"ಸಾಕು ಲಕ್ಷ್ಮಿ. ಇನ್ನು ಕೇಳಲಾಗದು ಮಾರಾಯ್ತಿ. ತುಂಬಾ ನೋವಾಗುತ್ತೆ. ನಿನ್ನ ಕೈಲಾದದ್ದು ನೀ ಮಾಡಿದ್ದೀಯಲ್ಲಾ. ಅದ್ಕೆ ಸಂತೋಷ ಪಡು. ದೇವರು ಒಳ್ಳೆಯವರನ್ನ ಕೈ ಬಿಡೋದಿಲ್ಲ. ಏನೂ ಪಾಪ ಮಾಡದಿರೋ ಆ ಕಂದಮ್ಮಗಳನ್ನ ಆ ದೇವರೇ ಕಾಪಾಡ್ತಾನೆ" ಎಂದು ನನಗೇ ಇಲ್ಲದ ಭರವಸೆಯನ್ನು ಆಕೆಗೆ ನೀಡಿ ಹಾಸಿಗೆಗೆ ಬಂದು ಮಲಗಿ ಬಿಟ್ಟೆ. ಊಹೂಂ.. ನಿದ್ದೆ ಬರಲೊಲ್ಲದು. ತಲೆಬಿಸಿ ಏರತೊಡಗಿತು.

ಸಂಜೆಯಾಗುತ್ತಿದ್ದಂತೇ ತಲೆನೋವು ಜಾಸ್ತಿಯಾಗತೊಡಗಿತು. ಹವೆ ತಿನ್ನಲು ಬಾಲ್ಕನಿಗೆ ಬಂದರೆ ಮೋಡಗಟ್ಟಿದ ಬಾನು ಮತ್ತಷ್ಟು ಬೇಸರ ತಂದಿತು. ರಾತ್ರಿಯವೇಳೆಗೆಲ್ಲಾ ನೋವು ಮುಖದಲ್ಲೂ ಕಾಣಿಸುವಷ್ಟಾಗಿತ್ತು. ಆಫೀಸಿನಿಂದ ಬಂದ ನನ್ನವರಿಗೆ ನನ್ನೊಳಗಿನ ಬದಲಾವಣೆ ಕಂಡು ಮಲಗುವಾಗ ಕೇಳಿಯೂ ಬಿಟ್ಟರು. ಲಕ್ಷ್ಮಿ ಹೇಳಿದ ಕಥೆಯನ್ನೆಲ್ಲಾ ಅರುಹಿ ತುಸು ಹಗುರಾಗಲು ಯತ್ನಿಸಿದೆ. ಅವರಿಗೂ ತುಂಬಾ ಕೆಡುಕೆನಿಸಿತು. ಮೌನವಾದರು.

ದೀಪವಾರಿಸಿದರೂ ನಿದ್ದೆಯ ಸುಳಿವಿಲ್ಲ. ಮಗ್ಗುಲಲಿದ್ದ ಮಗು ಹಾಯಾಗಿ ಮಲಗಿತ್ತು. ಕಣ್ಮುಚ್ಚಿದರೂ ಕಾಣದ ಆ ಕಂದಮ್ಮಗಳ ಅಳುವಿನ ಚಿತ್ರಣವೇ ಬರುತ್ತಿದೆ. ತಿರುಗಿ ನೋಡಿದರೆ ಇವರೂ ಕಣ್ಬಿಟ್ಟೆ ಮಲಗಿದ್ದರು. ತುಸು ಗಳಿಗೆಯ ನಂತರ ಏನೋ ಹೊಳೆಯಲು ಅವರ ಕಡೆ ತಿರುಗಿದೆ.

"ರೀ...ನಾವು ಹೀಗ್ ಮಾಡ್ಬಹುದು.. ಹೇಗಿದ್ರೂ ಇನ್ನೊಂದು ತಿಂಗ್ಳಿಗೆ ಪುಟ್ಟಿಗೆ ಒಂದ್ವರ್ಷವಾಗೊತ್ತೆ. ಅವ್ಳ ಹುಟ್ಟಿದ ದಿನದ ನೆನಪಿಗಾಗಿ ಈ ವರ್ಷದಿಂದ ಪ್ರತಿ ವರ್ಷ ಶಕ್ತಾನುಸಾರ ಸ್ವಲ್ಪ ಹಣ, ಲ್ಯಾಕ್ಟೋಜಿನ್ ಡಬ್ಬ, ಪುಟ್ಟಿಯ ಹಳೆ ಬಟ್ಟೆ ಹಾಗೂ ಆಟಿಗೆಸಾಮಾನುಗಳನ್ನೆಲ್ಲಾ ಇಂತಹ ಆಶ್ರಮಗಳಿಗೆ ಕೊಡೋಣ್ವಾ? ಹಾಗೆ ಕೊಡೋ ಮೊದ್ಲು ಸರಿಯಾಗಿ ಆಶ್ರಮದ ಕೆಲಸ ಕಾರ್ಯಗಳ ಬಗ್ಗೆ ವಿಚಾರಿಸೋಣ. ನಾವು ನೀಡಿದ್ದು ಆ ಶಿಶುಗಳಿಗೇ ಸೇರಬೇಕು ನೋಡಿ... ನಮ್ಮ ಈ ಅಲ್ಪ ಕಾಣ್ಕೆಯಿಂದ ಒಂದು ಶಿಶುವಿನ ಹಸಿವು ನೀಗಿದ್ರೂ ಸಾಕು, ನಾವು ಕೊಡೋ ಬಟ್ಟೆಯಿಂದ ಅದ್ರ ಮೈ ಬೆಚ್ಚಗಾದ್ರೂ ಸಾಕು, ಪುಟ್ಟಿಯ ಆಟಿಕೆಯಿಂದ ತುಸು ನಗು ಮೂಡಿದ್ರೂ ಸಾಕು..ಆ ನಗುವೇ ನಮ್ಮ ಪುಟ್ಟಿಯ ನಗುವಿಗೆ ಜೊತೆಯಾಗುತ್ತೆ ಅಂತ ಅಷ್ಟೇ.." ಎನ್ನುತ್ತಾ ಅವರ ಮುಖ ನೋಡಿದರೆ ಅಲ್ಲಿ ಅವರ ಮೊಗದಲ್ಲರಳಿದ್ದ ಒಪ್ಪಿಗೆಯ ಮುಗುಳ್ನಗೆ ನನ್ನನ್ನೇ ನೋಡುತ್ತಿತ್ತು. ಅದೇ ನಗುವನ್ನೇ ನನ್ನೊಳಗೂ ತುಂಬಿಕೊಳ್ಳುತ್ತಾ ಮಗ್ಗುಲಲ್ಲಿದ್ದ ‘ಅದಿತಿ’ಯನ್ನಪ್ಪಿ ಕಣ್ಮುಚ್ಚಿದೆ.

---***---

ಗುರುವಾರ, ಜುಲೈ 10, 2008

ಹುಚ್ಚು ಮನಸಿನ ಹಲವು ಭಾವಗಳು...

**ನನ್ನ-ನಿನ್ನ ನಡುವೆ**

ಒಲುಮೆಯ ಸಾಗರವಿದೆ
ನೋವ-ನಲಿವ ಅಲೆಗಳಿವೆ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!
----------------------------
**ವಿಶ್ವಾಸ**

ನಳ್ಳಿಯಿಂದ ಬಿಂದಿಗೆಗೆ
ಹನಿ ಹನಿಯಾಗಿ ನೀರ ತುಂಬಿದ ನೀರೆ
ತನ್ನ ಕಟಿಯಲ್ಲಿಟ್ಟು
ನಾಜೂಕಾಗಿ ನಡೆವಾಗ..
ಕಲ್ಲೆಡವಿ ಬಿದ್ದು
ಬಿಂದಿಗೆಯ ನೀರೆಲ್ಲಾ ಸೋರಿ
ಮಣ್ಣುಪಾಲು!
----------------------------
**ಪ್ರೀತಿ**

ದೇವಿಗಾಗಿ ಗರ್ಭಗುಡಿಯ
ಬಾಗಿಲ ಬಳಿ ಕಾದು
ಸುಸ್ತಾದ ಭಕ್ತ, ಕೊನೆಗೆ
ನಂದಾದೀಪದ ಬೆಳಕಿಗೆ
ಕೈ ಮುಗಿದು ಹೊರಟ
--------------------------
**ಕಾಲ**

ಪುಟ್ಟ ಮಗುವಿನ
ಕಪಿಮುಷ್ಠಿಯೊಳಡಗಿ ಭದ್ರವಾಗಿದ್ದ
ಮಂಜುಗಡ್ಡೆಯೊಂದು
ಕರಗಿ ಹನಿಯಾಗಿ
ನೀರಾಗಿ ಹರಿಯಿತು.