ಬುಧವಾರ, ನವೆಂಬರ್ 28, 2012

ಅಂತರ್ಮಹಲ್


ಪಾದಕ್ಕೆ ಹಚ್ಚಿದ್ದ ಗೊರಂಟಿ ಕೆಂಪು ಕಂಡೊಡನೆ
ಅವಳೊಡಲಾಳದಲ್ಲೆಲ್ಲೋ ನಾಭಿಯೆಂದೆದ್ದು ಬರುವ ಭೀತಿ....
Courtesy : http://trip4me.info
ಇಂದಿಗೆ ದಿವಸ ಇಪ್ಪತ್ತಾಯಿತು!
ಮತ್ತಿಪ್ಪತ್ತು ದಿನ ಸೇರಿ, ಹದಿನೈದು ಕೂಡಿದರೂ ಸಾಕು....
ಸವತಿ ಬರಳು ಮಹಾರಾಜರ ಪಕ್ಕದಲ್ಲಿ
ಆಡಬಹುದು ಹಸುಳೆಯೊಂದು ಮಡಿಲಲ್ಲಿ

ಅಂತಃಪುರದ ಮೂಲೆ ಮೂಲೆಯಲ್ಲೂ
ಮುಲುಗುವ ಭಾವಗಳು, ಜಟಿಲ ಸಿಕ್ಕುಗಳು!
ಒಡ್ಯಾಣ, ಕಾಲ್ಗೆಜ್ಜೆ, ಕಿವಿಯೋಲೆ,  ತೋಳ ಬಂಧಿ,
ಅಂಗಾಂಗಳಡೊನೆ ಮನವೂ ಬಂಧಿ ಅವನಾಜ್ಞೆಯೊಳಗೆ.

ಯಾಗ, ಹೋಮ, ನೇಮ, ನಿಯಮ, ಅವಮಾನವೆಲ್ಲ ಇವಳಿಗೇ
ದುಗುಡ ಮರೆಯಲು, ಪೌರುಷ ಮೆರೆಸಲು ಕಿರಿರಾಣಿ ಅವನಿಗೆ!
ಯಾವ ಮುನಿಯ ಶಾಪವೋ, ಯಾವ ಮನುವ ಶಾಸ್ತ್ರವೋ
ಮದರಂಗಿಯ ಕೆ(ಕ)ಂಪಿಗೂ ಕರಗುವ ಬೆದರಿಕೆ!

ಅದೊಂದು ಇಹುದಲ್ಲಿ, ಯಮುನೆಯ ತಟದಲ್ಲೇ
ಬಿಳಿಯೊಳು ಹದವಾಗಿ, ತುಸು ಹೆಚ್ಚಾಗೇ ಮಿಳಿತವಾಗಿಹ ಕೆಂಬಣ್ಣ,
ಸಾವಿರ ಕೈಗಳ ಮೇಲೆ ನಿಂತೂ ಪ್ರೇಮ ಸಂದೇಶ ನೀಡುವ ತಾಜಮಹಲ್
ಮುಮತಾಜ್‍ಳ ಗೋರಿಯ ಒಳಗೆಲ್ಲೋ ಆಳದಲ್ಲೇ ಉಸಿರಾಡುವ ನೂರ್‌ಜಹಾನ್

ಇದ್ದವಂದು.. ಇಹವಿಂದೂ... ಕಾಣದ, ಕಾಡುವ ಅಂತಃಪುರಗಳು
ಕೇಳುವ ಕಿವಿಗಳು, ನೋಡುವ ಕಣ್ಗಳು, ಆಡುವ ಮಾತುಗಳೆಲ್ಲಾ ಶೂನ್ಯವೆಂದೂ....

-ತೇಜಸ್ವಿನಿ ಹೆಗಡೆ

ಶುಕ್ರವಾರ, ನವೆಂಬರ್ 2, 2012

ನಿರಂತರ

ಎದೆಯೊಳಗೆ ನೆನಪುಗಳ ಘನ ಮೋಡಗಳ ಢೀಗೆ
ಆಗಾಗೀಗ ಕೋರೈಸುವ ಯಾತನೆಗಳ ಛಳಕು
ಕೇಳಲಾರರು ಯಾರೂ ಎದೆಯಲ್ಲಾಡಿಸುತಿಹ
ಸಿಡಿಲಿನಾ ಸದ್ದು....

ತುಂಬಿಹ ಕಣ್ಗಳೊಳಗೆ ಬಡಿದಾಡುವ-
ರೆಪ್ಪೆಗಳೇಳಿಸೋ ತರಂಗಗಳು....
ಹನಿಯುತಿವೆ ಹನಿ ಬಿಂದುಗಳ ಸದ್ದಿಲ್ಲದೇ,
ತೋಯುವ ಕೆನ್ನೆಗಳಿಗೆ ತಡೆಯೊಡ್ಡಿ ಚಿಮ್ಮಲು
ಒಲುಮೆಯ ಸ್ಪರ್ಶವಿರದೇ, ನೋಯುತಿದೆ ಮನಸು.

ರವಿಯ ಸ್ಪರ್ಶವಿಲ್ಲದೇ, ಹರಿವ ನೀರು ಕಟ್ಟಿ,
ಹಸಿರು, ಹೂವ ಹೊತ್ತು ಬಸಿರಾಗದು ಧರೆ!
ಅಂಬಿಗನಾಸರೆಯಿಂದಲೇ ದೋಣಿ,
ದಡ ಸೇರುವುದು ಮುಳುಗದೇ...
ಬರಿಯ ನೆನಪುಗಳ ಜೊತೆಗೂಡಿ,
ಬಾಳುವುದೆಂತು ಹೇಳೋ ನರ-ಹರಿಯೆ?

ದಿನಕರನ ಪ್ರಭೆಯಿಂದಲೇ
ಬೆಳ್ಳಿಯ ಕಿರಣ ಸೂಸುವ ಶಶಿ,
ಹಾಯಿ ಹೋಣಿಗಿದ್ದರೊಂದು ಹುಟ್ಟು
ಸೇರಬಲ್ಲೆವು ನಾವೆ ದೂರ ತೀರ!
ನಿನ್ನೆ-ನಾಳೆಗಳ ನಡುವಿರುವ ಇಂದು,
ಸಾಗಲೇ ಬೇಕಿದೆ ಭೂತಕ್ಕೆ ಬೆನ್ನಾಗಿ,
ಭವಿತವ್ಯಕೆ ಮೊಗಮಾಡಿ.

-ತೇಜಸ್ವಿನಿ ಹೆಗಡೆ